ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿನ್ನ ಹರಕೆಯನ್ನು ಒಪ್ಪಿಸು”

“ನಿನ್ನ ಹರಕೆಯನ್ನು ಒಪ್ಪಿಸು”

“ನೀನು ಯೆಹೋವನಿಗೆ ಮಾಡಿಕೊಂಡ ಹರಕೆಗಳನ್ನು ಸಲ್ಲಿಸಬೇಕು.”—ಮತ್ತಾ. 5:33.

ಗೀತೆಗಳು: 63, 59

1. (ಎ) ಯೆಪ್ತಾಹ ಮತ್ತು ಹನ್ನಳಲ್ಲಿ ಯಾವ ವಿಷಯ ಸಾಮಾನ್ಯವಾಗಿತ್ತು? (ಲೇಖನದ ಆರಂಭದ ಚಿತ್ರಗಳನ್ನು ನೋಡಿ.) (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

ಯೆಪ್ತಾಹ ಒಬ್ಬ ಧೀರ ನಾಯಕ, ಶೂರ ಸೈನಿಕ. ಹನ್ನಳು ತನ್ನ ಮನೆ ಮತ್ತು ಗಂಡನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ದೀನ ಪತ್ನಿ. ಇವರಿಬ್ಬರೂ ಯೆಹೋವನ ಆರಾಧಕರಾಗಿದ್ದರು. ಇವರಲ್ಲಿ ಇನ್ನೊಂದು ಸಾಮಾನ್ಯ ವಿಷಯವೂ ಇತ್ತು. ಇಬ್ಬರೂ ಯೆಹೋವನಿಗೆ ಹರಕೆ ಹೊತ್ತು ಅದನ್ನು ತಪ್ಪದೆ ತೀರಿಸಿದರು. ಇಂದು ಕೂಡ ಅನೇಕರು ಯೆಹೋವನಿಗೆ ಮಾತುಕೊಡುತ್ತಾರೆ, ಪ್ರತಿಜ್ಞೆ ಮಾಡುತ್ತಾರೆ. ಅಂಥವರಿಗೆಲ್ಲ ಯೆಪ್ತಾಹ ಮತ್ತು ಹನ್ನ ಒಳ್ಳೇ ಮಾದರಿ. ಈ ಲೇಖನದಲ್ಲಿ ಮುಂದಿನ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ: ಪ್ರತಿಜ್ಞೆ ಅಂದರೇನು? ದೇವರಿಗೆ ಮಾತು ಕೊಡುವುದು ಎಷ್ಟು ಗಂಭೀರವಾದ ವಿಷಯ? ಯೆಪ್ತಾಹ ಮತ್ತು ಹನ್ನಳಿಂದ ನಾವೇನು ಕಲಿಯಬಹುದು?

2, 3. (ಎ) ಹರಕೆ ಎಂದರೇನು? (ಬಿ) ದೇವರಿಗೆ ಹರಕೆ ಹೊತ್ತ ಮೇಲೆ ಏನು ಮಾಡಬೇಕೆಂದು ಬೈಬಲ್‌ ಹೇಳುತ್ತದೆ?

2 ಹರಕೆ ಹೊರುವುದನ್ನು ಬೈಬಲ್‌ ತುಂಬ ಗಂಭೀರ ವಿಷಯವಾಗಿ ಪರಿಗಣಿಸುತ್ತದೆ. ಹರಕೆ ಅಂದರೆ ದೇವರಿಗೆ ಮಾತು ಕೊಡುವುದು. ಉದಾಹರಣೆಗೆ, ಒಂದು ವಿಷಯವನ್ನು ಮಾಡುತ್ತೇನೆ, ಏನನ್ನೋ ಕೊಡುತ್ತೇನೆ, ಸೇವೆ ಮಾಡುತ್ತೇನೆ ಅಥವಾ ಕೆಲವು ವಿಷಯಗಳನ್ನು ಮಾಡುವುದಿಲ್ಲ ಅಂತ ಯೆಹೋವನಿಗೆ ಮಾತು ಕೊಡುವುದು. ಹರಕೆ ಹೊರುವಂತೆ ಯಾರೂ ಯಾರನ್ನೂ ಒತ್ತಾಯಿಸುವಂತಿಲ್ಲ. ಸ್ವಇಷ್ಟದಿಂದ, ತಮ್ಮ ಇಚ್ಛಾಸ್ವಾತಂತ್ರ್ಯ ಬಳಸಿ ದೇವರಿಗೆ ಮಾತು ಕೊಡಬೇಕು. ಆದರೆ ಮಾತುಕೊಟ್ಟ ಮೇಲೆ ಅದರಂತೆ ನಡೆಯಬೇಕು ಎಂದು ಯೆಹೋವನು ಹೇಳುತ್ತಾನೆ. ಬೈಬಲು ಹರಕೆಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಪ್ರಮಾಣ ಮಾಡುವುದಕ್ಕೂ ಕೊಡುತ್ತದೆ. ಒಬ್ಬ ವ್ಯಕ್ತಿ ಇದನ್ನು ಮಾಡುತ್ತೇನೆ ಅಥವಾ ಇದನ್ನು ಮಾಡುವುದಿಲ್ಲ ಎಂದು ಆಣೆ ಇಡುವುದನ್ನು ಪ್ರಮಾಣ ಎನ್ನುತ್ತಾರೆ. (ಆದಿ. 14:22, 23; ಇಬ್ರಿ. 6:16, 17) ನಾವು ದೇವರಿಗೆ ಕೊಡುವ ಮಾತನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಬೈಬಲ್‌ ಹೇಳುತ್ತದೆ?

3 ಮೋಶೆಯ ಧರ್ಮಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿ ಯೆಹೋವನಿಗೆ ಮಾತು ಕೊಟ್ಟರೆ “ತನ್ನ ಮಾತನ್ನು ಮೀರದೆ ಹೇಳಿದಂತೆಯೇ ನೆರವೇರಿಸಬೇಕು.” (ಅರ. 30:2) ಸೊಲೊಮೋನ ಹೇಳಿದ್ದು: “ನೀನು ದೇವರಿಗೆ ಹರಕೆಯನ್ನು ಕಟ್ಟಿದರೆ ಅದನ್ನು ತೀರಿಸಲು ತಡಮಾಡಬೇಡ; ಆತನು ಮೂಢರಿಗೆ ಒಲಿಯನು; ನಿನ್ನ ಹರಕೆಯನ್ನು ಒಪ್ಪಿಸು.” (ಪ್ರಸಂ. 5:4) ಯೇಸು ಹೇಳಿದ್ದು: “‘ನೀನು ಸುಳ್ಳಾಣೆಯಿಡಬಾರದು; ನೀನು ಯೆಹೋವನಿಗೆ ಮಾಡಿಕೊಂಡ ಹರಕೆಗಳನ್ನು ಸಲ್ಲಿಸಬೇಕು’ ಎಂದು ಪೂರ್ವಕಾಲದವರಿಗೆ ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ.” ಹೀಗೆ ಯೇಸು ಕೂಡ ಹರಕೆ ಹೊರುವುದು ತುಂಬ ಗಂಭೀರವಾದ ವಿಷಯ ಎಂದು ಹೇಳಿದನು.—ಮತ್ತಾ. 5:33.

4. (ಎ) ದೇವರಿಗೆ ಮಾತು ಕೊಡುವುದು ಎಷ್ಟು ಗಂಭೀರವಾದ ವಿಷಯ? (ಬಿ) ಯೆಪ್ತಾಹ ಮತ್ತು ಹನ್ನಳ ಬಗ್ಗೆ ನಾವು ಏನು ಕಲಿಯಲಿದ್ದೇವೆ?

4 ನಾವು ಯೆಹೋವನಿಗೆ ಕೊಡುವ ಯಾವ ಮಾತನ್ನೂ ಹಗುರವಾಗಿ ನೆನಸಬಾರದು ಎಂದು ಇದರಿಂದ ಗೊತ್ತಾಗುತ್ತದೆ. ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳದಿದ್ದರೆ ಅದು ಆತನೊಂದಿಗೆ ನಮಗಿರುವ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಇದು ದಾವೀದನ ಮಾತುಗಳಿಂದ ಸ್ಪಷ್ಟವಾಗುತ್ತದೆ. “ಯೆಹೋವನ ಪರ್ವತವನ್ನು ಹತ್ತತಕ್ಕವನು ಯಾರು? ಆತನ ಪವಿತ್ರಸ್ಥಾನದಲ್ಲಿ ನಿಲ್ಲುವದಕ್ಕೆ ಎಂಥವನು ಯೋಗ್ಯನು? ಯಾವನು . . . ಮೋಸ ಪ್ರಮಾಣಮಾಡದೆ” ಇರುತ್ತಾನೋ ಅಂಥವನಿಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಇರುತ್ತದೆ. (ಕೀರ್ತ. 24:3, 4) ಯೆಪ್ತಾಹನು ಯೆಹೋವನಿಗೆ ಯಾವ ಮಾತು ಕೊಟ್ಟನು? ಹನ್ನಳು ಏನೆಂದು ಹರಕೆ ಹೊತ್ತಳು? ಅದನ್ನು ತೀರಿಸಲು ಇಬ್ಬರೂ ಮಾಡಿದ ತ್ಯಾಗಗಳೇನು?

ಮಾತಿಗೆ ತಪ್ಪದೆ ಮಾದರಿ ಇಟ್ಟರು

5. (ಎ) ಯೆಪ್ತಾಹ ಯೆಹೋವನಿಗೆ ಯಾವ ಮಾತು ಕೊಟ್ಟನು? (ಬಿ) ಮುಂದೆ ಏನಾಯಿತು?

5 ಯೆಪ್ತಾಹ ಅಮ್ಮೋನಿಯರ ವಿರುದ್ಧ ಯುದ್ಧಕ್ಕೆ ಹೋಗುವ ಮುಂಚೆ ಯೆಹೋವನಿಗೆ ಒಂದು ಮಾತು ಕೊಟ್ಟನು. ಅಮ್ಮೋನಿಯರು ದೇವಜನರ ವೈರಿಗಳಾಗಿದ್ದರು. (ನ್ಯಾಯ. 10:7-9) ಅವರ ವಿರುದ್ಧ ಮಾಡುವ ಯುದ್ಧದಲ್ಲಿ ಜಯ ಕೊಡಬೇಕೆಂದು ಯೆಪ್ತಾಹ ಯೆಹೋವನನ್ನು ಬೇಡಿಕೊಂಡನು. ‘ನೀನು ಅಮ್ಮೋನಿಯರನ್ನು ನನ್ನ ಕೈಗೆ ಒಪ್ಪಿಸುವದಾದರೆ ನಾನು ಸುರಕ್ಷಿತನಾಗಿ ಮನೆಗೆ ಮುಟ್ಟಿದಾಗ ನನ್ನನ್ನು ಎದುರುಗೊಳ್ಳುವದಕ್ಕಾಗಿ ನನ್ನ ಮನೆಯ ಬಾಗಲಿನಿಂದ ಮೊದಲು ಬರುವಂಥ ವ್ಯಕ್ತಿಯನ್ನು ನಿನಗೇ ಕೊಡುತ್ತೇನೆ ಎಂದು ಹರಕೆಮಾಡಿದನು.’ ಮುಂದೆ ಏನಾಯಿತು? ಯೆಪ್ತಾಹನ ಪ್ರಾರ್ಥನೆಯನ್ನು ಯೆಹೋವನು ಆಲಿಸಿ ಯುದ್ಧದಲ್ಲಿ ಜಯ ಸಿಗುವಂತೆ ಮಾಡಿದನು. ಅವನು ಯುದ್ಧ ಮುಗಿಸಿ ಮನೆಗೆ ಬಂದಾಗ ಅವನ ಮುದ್ದಿನ ಮಗಳು ಅವನನ್ನು ನೋಡಲು ಓಡೋಡಿ ಬಂದಳು. ಯೆಪ್ತಾಹ ಕೊಟ್ಟ ಮಾತಿನ ಪ್ರಕಾರ ಮಗಳನ್ನು ಯೆಹೋವನ ಸೇವೆಗೆ ಕೊಡಬೇಕಾಯಿತು. (ನ್ಯಾಯ. 11:30-34, ನೂತನ ಲೋಕ ಭಾಷಾಂತರ) ಅಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಮಗಳು ಯಾವ ತ್ಯಾಗಮಾಡಬೇಕಿತ್ತು?

6. (ಎ) ಯೆಪ್ತಾಹ ದೇವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅವನಿಗೆ ಮತ್ತು ಅವನ ಮಗಳಿಗೆ ಸುಲಭವಾಗಿತ್ತಾ? (ಬಿ) ನಾವು ಯೆಹೋವನಿಗೆ ಕೊಡುವ ಮಾತಿನ ಬಗ್ಗೆ ಧರ್ಮೋಪದೇಶಕಾಂಡ 23:21, 23 ಮತ್ತು ಕೀರ್ತನೆ 15:4 ರಿಂದ ಏನು ಕಲಿಯುತ್ತೇವೆ?

6 ತನ್ನ ತಂದೆಯ ಹರಕೆಯನ್ನು ತೀರಿಸಬೇಕಾದರೆ ಯೆಪ್ತಾಹನ ಮಗಳು ಪೂರ್ಣಸಮಯ ಯೆಹೋವನ ಗುಡಾರದಲ್ಲಿ ಸೇವೆ ಮಾಡಬೇಕಿತ್ತು. ಇದನ್ನೆಲ್ಲಾ ಯೋಚನೆ ಮಾಡದೇ ಯೆಪ್ತಾಹ ಮಾತು ಕೊಟ್ಟನಾ? ಇಲ್ಲ. ತಾನು ರಣರಂಗದಿಂದ ಬರುವಾಗ ಮನೆಯಿಂದ ತನ್ನ ಮಗಳೇ ಮೊದಲು ಹೊರಗೆ ಬರುತ್ತಾಳೆ ಎಂದು ಅವನಿಗೆ ಗೊತ್ತಿದ್ದಿರಬಹುದು. ಇದು ಅವನಿಗೆ ಗೊತ್ತಿರಲಿ, ಇಲ್ಲದಿರಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಯೆಪ್ತಾಹನಿಗೂ ಅವನ ಮಗಳಿಗೂ ಸುಲಭವಾಗಿರಲಿಲ್ಲ. ಅವಳನ್ನು ನೋಡಿದ ತಕ್ಷಣ ಯೆಪ್ತಾಹನ ಎದೆ ಒಡೆದುಹೋಯಿತು. ಅವನ ಮಗಳು ತನ್ನ ‘ಕನ್ಯಾವಸ್ಥೆಗೋಸ್ಕರ ಗೋಳಾಡಿದಳು.’ ಯಾಕೆ? ಯೆಪ್ತಾಹನಿಗೆ ಗಂಡು ಮಕ್ಕಳಿರಲಿಲ್ಲ. ಇದ್ದದ್ದು ಒಬ್ಬಳೇ ಮಗಳು. ಅವಳು ಅಪ್ಪನ ಹರಕೆಯನ್ನು ತೀರಿಸಬೇಕಾದರೆ ಮದುವೆ ಆಗಬಾರದಿತ್ತು ಮತ್ತು ಮಕ್ಕಳನ್ನು ಮಾಡಿಕೊಳ್ಳಬಾರದಿತ್ತು. ಇದರಿಂದ ಯೆಪ್ತಾಹನ ವಂಶವೃಕ್ಷಕ್ಕೇ ಕೊಡಲಿ ಬೀಳಲಿತ್ತು. ಆದರೆ ಯೆಪ್ತಾಹ ಮತ್ತು ಅವನ ಮಗಳಿಗೆ ತಮ್ಮ ಭಾವನೆಗಳು ಮುಖ್ಯವಾಗಿರಲಿಲ್ಲ. ಯೆಹೋವನಿಗೆ ಕೊಟ್ಟ ಮಾತೇ ಮುಖ್ಯವಾಗಿತ್ತು. ಆದ್ದರಿಂದ ಯೆಪ್ತಾಹ “ನಾನು ಬಾಯ್ದೆರೆದು ಯೆಹೋವನಿಗೆ ಹರಕೆಮಾಡಿದ್ದೇನೆ; ಅದಕ್ಕೆ ಹಿಂದೆಗೆಯಲಾರೆ” ಎಂದನು. ಅದಕ್ಕೆ ಮಗಳು “ನಿನ್ನ ಬಾಯಿಂದ ಹೊರಟದ್ದನ್ನೇ ನೆರವೇರಿಸು” ಎಂದಳು. (ನ್ಯಾಯ. 11:35-39) ಇಬ್ಬರೂ ಯೆಹೋವನಿಗೆ ನಿಷ್ಠೆ ತೋರಿಸುವ ವ್ಯಕ್ತಿಗಳಾಗಿದ್ದರು. ಎಷ್ಟೇ ಕಷ್ಟವಾದರೂ ಕೊಟ್ಟ ಮಾತನ್ನು ಮುರಿಯುವ ಯೋಚನೆ ಅವರ ಕನಸು ಮನಸ್ಸಲ್ಲೂ ಬರಲಿಲ್ಲ.ಧರ್ಮೋಪದೇಶಕಾಂಡ 23:21, 23; ಕೀರ್ತನೆ 15:4 ಓದಿ.

7. (ಎ) ಹನ್ನ ದೇವರಿಗೆ ಏನೆಂದು ಮಾತು ಕೊಟ್ಟಳು? ಯಾಕೆ? ಆಮೇಲೆ ಏನಾಯಿತು? (ಬಿ) ಹನ್ನ ದೇವರಿಗೆ ಹರಕೆ ಹೊತ್ತದ್ದರಿಂದ ಸಮುವೇಲನ ಜೀವನ ಹೇಗಿರಬೇಕಿತ್ತು? (ಪಾದಟಿಪ್ಪಣಿ ನೋಡಿ.)

7 ಹನ್ನಳು ಕೂಡ ಜೀವನದಲ್ಲಿ ತುಂಬ ಒತ್ತಡ ತುಂಬಿದ್ದ ಸಮಯದಲ್ಲಿ ಯೆಹೋವನಿಗೆ ಒಂದು ಮಾತು ಕೊಟ್ಟಳು. ಅವಳಿಗೆ ಮಕ್ಕಳಿರಲಿಲ್ಲ. ಆ ನೋವು ಅವಳನ್ನು ಕಿತ್ತು ತಿನ್ನುತ್ತಿತ್ತು. ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿದ್ದಳು. (1 ಸಮು. 1:4-7, 10, 16) ಆಗ ಅವಳು ತನ್ನ ನೋವನ್ನು ಯೆಹೋವನ ಹತ್ತಿರ ತೋಡಿಕೊಂಡಳು. “ಸೇನಾಧೀಶ್ವರನಾದ ಯೆಹೋವನೇ, ನಿನ್ನ ದಾಸಿಯ ದುಃಖವನ್ನು ಪರಾಂಬರಿಸು; ನನ್ನನ್ನು ತಿರಸ್ಕರಿಸದೆ ಕನಿಕರವಿಟ್ಟು ನನಗೊಬ್ಬ ಮಗನನ್ನು ಕೊಡಬೇಕು; ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ನಿನಗೆ ಪ್ರತಿಷ್ಠಿಸಿ ಕೊಡುವೆನು; ಅವನ ತಲೆಯ ಮೇಲೆ ಕ್ಷೌರ ಕತ್ತಿಯನ್ನು ಬರಗೊಡುವದಿಲ್ಲ ಎಂದು ಪ್ರಾರ್ಥಿಸಿ ಹರಕೆಮಾಡಿದಳು.” * (1 ಸಮು. 1:11) ಆ ಪ್ರಾರ್ಥನೆಯನ್ನು ಯೆಹೋವನು ಕೇಳಿದನು. ಮುಂದಿನ ವರ್ಷವೇ ಅವಳಿಗೆ ಮುದ್ದಾದ ಮಗ ಹುಟ್ಟಿದ. ಆಗ ಅವಳ ಸಂತೋಷಕ್ಕೆ ಎಲ್ಲೆನೇ ಇರಲಿಲ್ಲ! “ಯೆಹೋವನನ್ನು ಬೇಡಿ ಪಡಕೊಂಡೆನೆಂದು” ಹೇಳಿ ಮಗುವಿಗೆ ಸಮುವೇಲ ಎಂದು ಹೆಸರಿಟ್ಟಳು. (1 ಸಮು. 1:20) ಮಗ ಹುಟ್ಟಿದ ಮೇಲೆ ಅವಳು ದೇವರಿಗೆ ಕೊಟ್ಟ ಮಾತನ್ನು ಮರೆಯಲಿಲ್ಲ.

8. (ಎ) ಹನ್ನಳಿಗೆ ತನ್ನ ಮಾತಿನಂತೆ ನಡೆಯುವುದು ಸುಲಭವಾಗಿತ್ತಾ? (ಬಿ) 61ನೇ ಕೀರ್ತನೆಯಲ್ಲಿರುವ ದಾವೀದನ ಮಾತುಗಳು ಹೇಗೆ ಹನ್ನಳ ಉತ್ತಮ ಮಾದರಿಯನ್ನು ನೆನಪಿಗೆ ತರುತ್ತವೆ?

8 ಸಮುವೇಲನಿಗೆ ಸುಮಾರು ಮೂರು ವರ್ಷ ಆದಾಗ ಹನ್ನಳು ತನ್ನ ಮಾತಿನಂತೆ ನಡೆದಳು. ಶೀಲೋವಿನಲ್ಲಿದ್ದ ದೇವದರ್ಶನ ಗುಡಾರಕ್ಕೆ ಅವನನ್ನು ಕರೆದುಕೊಂಡು ಹೋಗಿ ಮಹಾ ಯಾಜಕನಾದ ಏಲಿಯ ಹತ್ತಿರ ಬಿಟ್ಟು ಹೀಗಂದಳು: ಯೆಹೋವನು “ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ; ನಾನು ಇವನನ್ನು ಯೆಹೋವನಿಗೇ ಒಪ್ಪಿಸಿಬಿಟ್ಟಿದ್ದೇನೆ; ಇವನು ಜೀವದಿಂದಿರುವ ತನಕ ಆತನಿಗೇ ಪ್ರತಿಷ್ಠಿತನಾಗಿರುವನು.” (1 ಸಮು. 1:24-28) ಅಂದಿನಿಂದ ಸಮುವೇಲ ಗುಡಾರದಲ್ಲೇ ಬೆಳೆದನು. “ಬಾಲಕನಾಗಿದ್ದ ಸಮುವೇಲನು ಯೆಹೋವನ ಸನ್ನಿಧಿಯಲ್ಲೇ ದೊಡ್ಡವನಾದನು” ಎಂದು ಬೈಬಲ್‌ ಹೇಳುತ್ತದೆ. (1 ಸಮು. 2:21) ಹನ್ನಳಿಗೆ ತನ್ನ ಮಾತಿನಂತೆ ನಡೆಯುವುದು ಸುಲಭವಾಗಿರಲಿಲ್ಲ. ತನ್ನ ಕರುಳಕುಡಿಯ ಜೊತೆ ದಿನ ಕಳೆಯುವ, ಅವನೊಟ್ಟಿಗೆ ಆಟವಾಡುವ, ಅವನನ್ನೆತ್ತಿ ಮುದ್ದಾಡುವ ಅವಕಾಶವನ್ನು ಬಿಟ್ಟುಕೊಡಬೇಕಾಯಿತು. ತನ್ನ ಕಂದ ಕಣ್ಮುಂದೆ ಬೆಳೆಯುವುದನ್ನು ನೋಡುವ ಅವಕಾಶ ಅವಳಿಗೆ ಇರಲಿಲ್ಲ. ಆದರೂ ಹನ್ನ ಯೆಹೋವನಿಗೆ ಕೊಟ್ಟ ಮಾತನ್ನು ಗಂಭೀರವಾಗಿ ನೆನಸಿದಳು. ಒಬ್ಬ ತಾಯಿಗೆ ಅತ್ಯಮೂಲ್ಯವಾಗಿದ್ದ ವಿಷಯಗಳನ್ನೇ ಬಿಟ್ಟುಕೊಟ್ಟಳು.—1 ಸಮು. 2:1, 2; ಕೀರ್ತನೆ 61:1, 5, 8 ಓದಿ.

ನೀವು ದೇವರಿಗೆ ಮಾತು ಕೊಟ್ಟಂತೆ ನಡಕೊಳ್ಳುತ್ತಿದ್ದೀರಾ?

9. ನಾವೀಗ ಏನನ್ನು ಚರ್ಚಿಸಲಿದ್ದೇವೆ?

9 ಇಲ್ಲಿವರೆಗೆ ನಾವು ಯೆಹೋವನಿಗೆ ಮಾತು ಕೊಡುವುದು ತುಂಬ ಗಂಭೀರವಾದ ವಿಷಯ ಎಂದು ಚರ್ಚಿಸಿದೆವು. ಇಂದು ನಾವು ಯೆಹೋವನಿಗೆ ಯಾವ ಪ್ರತಿಜ್ಞೆಗಳನ್ನು ಮಾಡುತ್ತೇವೆ? ಆ ಪ್ರತಿಜ್ಞೆಗಳಿಗೆ ತಕ್ಕ ಹಾಗೆ ನಡೆಯುವುದು ಎಷ್ಟು ಮುಖ್ಯ? ಎಂದು ಈಗ ನೋಡೋಣ.

ನಿಮ್ಮ ಸಮರ್ಪಣೆಯ ಪ್ರತಿಜ್ಞೆ

ಸಮರ್ಪಣೆಯ ಪ್ರತಿಜ್ಞೆ (ಪ್ಯಾರ 10 ನೋಡಿ)

10. (ಎ) ಒಬ್ಬ ಕ್ರೈಸ್ತನಿಗೆ ತನ್ನ ಜೀವನದಲ್ಲಿ ಯಾವ ಪ್ರತಿಜ್ಞೆ ಅತಿ ಮುಖ್ಯವಾಗಿದೆ? (ಬಿ) ಅದರ ಅರ್ಥವೇನು?

10 ಒಬ್ಬ ಕ್ರೈಸ್ತನು ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವುದು ಅವನು ಜೀವನದಲ್ಲಿ ಮಾಡುವ ಅತಿ ಮುಖ್ಯವಾದ ಪ್ರತಿಜ್ಞೆ. ‘ಏನೇ ಆದರೂ ನನ್ನ ಜೀವನದಲ್ಲಿ ಯಾವಾಗಲೂ ನಿನ್ನ ಸೇವೆ ಮಾಡುತ್ತೇನೆ’ ಎಂದು ವೈಯಕ್ತಿಕ ಪ್ರಾರ್ಥನೆಯಲ್ಲಿ ಯೆಹೋವನಿಗೆ ಮಾತು ಕೊಡುತ್ತಾನೆ. ಯೇಸು ಹೇಳಿದಂತೆ ನಾವು ‘ನಮ್ಮನ್ನೇ ನಿರಾಕರಿಸಿಕೊಳ್ಳಬೇಕು.’ ಅಂದರೆ ನಾವು ಜೀವನದಲ್ಲಿ ನಮಗಲ್ಲ ಯೆಹೋವನಿಗೆ ಮೊದಲ ಸ್ಥಾನ ಕೊಡಬೇಕು. (ಮತ್ತಾ. 16:24) ಅಂದಿನಿಂದ ‘ನಾವು ಯೆಹೋವನವರೇ.’ (ರೋಮ. 14:8) ಹಾಗಾಗಿ ನಾವು ನಮ್ಮ ಸಮರ್ಪಣೆಯನ್ನು ತುಂಬ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ? ಯೆಹೋವನಿಗೆ ಹೊತ್ತ ಹರಕೆಗಳನ್ನು ಆತನ ಎಲ್ಲಾ ಜನರ ಮುಂದೆಯೇ ಸಲ್ಲಿಸುವೆನು” ಎಂದು ಕೀರ್ತನೆಗಾರ ಹೇಳಿದಂತೆ ನಮಗೂ ಅನಿಸುತ್ತದೆ.—ಕೀರ್ತ. 116:12, 14.

11. ನೀವು ದೀಕ್ಷಾಸ್ನಾನ ಪಡೆದ ದಿನ ಏನಾಯಿತು?

11 ನಿಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡಿದ್ದೀರಾ ಮತ್ತು ನೀರಿನ ದೀಕ್ಷಾಸ್ನಾನ ಪಡೆಯುವ ಮೂಲಕ ಅದನ್ನು ತೋರಿಸಿದ್ದೀರಾ? ಹಾಗೆ ಮಾಡಿದ್ದರೆ ನಿಮ್ಮನ್ನು ಶ್ಲಾಘಿಸುತ್ತೇವೆ! ನಿಮ್ಮ ದೀಕ್ಷಾಸ್ನಾನದ ಭಾಷಣವನ್ನು ನೀಡಿದ ಸಹೋದರ ‘ನೀವು ದೇವರಿಗೆ ನಿಮ್ಮನ್ನು ಸಮರ್ಪಿಸಿಕೊಂಡಿದ್ದೀರಾ ಮತ್ತು “ನೀವು ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ಪಡೆದ ಮೇಲೆ ಒಬ್ಬ ಯೆಹೋವನ ಸಾಕ್ಷಿಯಾಗುತ್ತೀರಿ” ಎಂದು ಅರ್ಥಮಾಡಿಕೊಂಡಿದ್ದೀರಾ’ ಎಂದು ಕೇಳಿದ್ದು ನಿಮಗೆ ನೆನಪಿದೆಯಾ? ನೀವು ಹೌದು ಎಂದು ಉತ್ತರ ಕೊಟ್ಟಾಗ ನೀವು ಸಮರ್ಪಣೆ ಮಾಡಿದ್ದೀರಿ ಮತ್ತು ಈಗ ದೀಕ್ಷಾಸ್ನಾನ ಪಡೆಯಲು ಅರ್ಹರಾಗಿದ್ದೀರಿ ಎಂದು ಸಭಾಂಗಣದಲ್ಲಿ ಹಾಜರಿದ್ದ ಎಲ್ಲರಿಗೂ ಗೊತ್ತಾಯಿತು. ಇದರಿಂದ ನೀವು ಯೆಹೋವನ ಮನಸ್ಸನ್ನು ತುಂಬ ಸಂತೋಷಪಡಿಸಿದಿರಿ!

12. (ಎ) ನಮ್ಮನ್ನೇ ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು? (ಬಿ) ಯಾವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಪೇತ್ರ ನಮ್ಮನ್ನು ಉತ್ತೇಜಿಸಿದ್ದಾನೆ?

12 ನೀವು ದೀಕ್ಷಾಸ್ನಾನ ಪಡೆದಾಗ, ಜೀವನದಲ್ಲಿ ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಡುತ್ತೇನೆ ಮತ್ತು ಆತನ ಮಟ್ಟಗಳನ್ನು ಪಾಲಿಸಲು ಸಂಪೂರ್ಣ ಪ್ರಯತ್ನ ಮಾಡುತ್ತೇನೆ ಎಂದು ಮಾತು ಕೊಟ್ಟಿರಿ. ಆದರೆ ದೀಕ್ಷಾಸ್ನಾನ ಒಂದು ಆರಂಭ ಅಷ್ಟೆ. ಸಮಯ ಕಳೆದಂತೆ ನಾವು ಕೊಟ್ಟ ಮಾತನ್ನು ಪಾಲಿಸುತ್ತಿದ್ದೇವಾ ಎಂದು ಪರೀಕ್ಷಿಸಿಕೊಳ್ಳುತ್ತಾ ಇರಬೇಕು. ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ‘ನನ್ನ ದೀಕ್ಷಾಸ್ನಾನ ಆದ ದಿನದಿಂದ ಯೆಹೋವನ ಜೊತೆ ನನ್ನ ಸಂಬಂಧ ಬಲವಾಗುತ್ತಾ ಬಂದಿದೆಯಾ? ನಾನು ಈಗಲೂ ಸಂಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡುತ್ತಿದ್ದೇನಾ? (ಕೊಲೊ. 3:23) ದಿನದಲ್ಲಿ ಹಲವಾರು ಸಲ ಪ್ರಾರ್ಥನೆ ಮಾಡುತ್ತೇನಾ? ಪ್ರತಿದಿನ ಬೈಬಲ್‌ ಓದುತ್ತೇನಾ? ತಪ್ಪದೆ ಕೂಟಗಳಿಗೆ ಹೋಗುತ್ತೇನಾ? ಸಾಧ್ಯವಾದಷ್ಟು ಹೆಚ್ಚು ಸಲ ಸೇವೆಗೆ ಹೋಗುತ್ತೇನಾ? ಅಥವಾ ಇದರಲ್ಲೆಲ್ಲಾ ನನ್ನ ಉತ್ಸಾಹ ಕಡಿಮೆಯಾಗಿದೆಯಾ?’ ಯೆಹೋವನ ಸೇವೆಯಲ್ಲಿ ನಾವು ನಿಷ್ಕ್ರಿಯರಾಗುವ ಅಪಾಯ ಇದೆ ಎಂದು ಅಪೊಸ್ತಲ ಪೇತ್ರ ನಮಗೆ ಎಚ್ಚರಿಕೆ ಕೊಟ್ಟಿದ್ದಾನೆ. ನಾವು ನಂಬಿಕೆ, ಜ್ಞಾನ, ತಾಳ್ಮೆ, ದೇವಭಕ್ತಿಯನ್ನು ಬೆಳೆಸಿಕೊಳ್ಳುತ್ತಾ ಇದ್ದರೆ ಈ ಅಪಾಯದಿಂದ ತಪ್ಪಿಸಿಕೊಳ್ಳಬಹುದು.2 ಪೇತ್ರ 1:5-8 ಓದಿ.

13. ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ಪಡೆದ ಕ್ರೈಸ್ತರು ಯಾವುದನ್ನು ಮನಸ್ಸಲ್ಲಿಡಬೇಕು?

13 ನಿನ್ನ ಸೇವೆ ಮಾಡುತ್ತೇನೆ ಎಂದು ಯೆಹೋವನಿಗೆ ಮಾತು ಕೊಟ್ಟ ಮೇಲೆ ಅದನ್ನು ಹಿಂದೆ ತೆಗೆದುಕೊಳ್ಳಲು ಆಗುವುದಿಲ್ಲ ಎನ್ನುವುದನ್ನು ಮನಸ್ಸಲ್ಲಿಡಬೇಕು. ಒಬ್ಬ ವ್ಯಕ್ತಿಗೆ ಯೆಹೋವನ ಸೇವೆ ಮಾಡಿ ಸಾಕಾಯಿತು ಅಥವಾ ಬೈಬಲ್‌ ಮಟ್ಟಗಳಿಗೆ ತಕ್ಕಂತೆ ಜೀವನ ಮಾಡಲು ಇನ್ನು ಮುಂದೆ ಆಗುವುದಿಲ್ಲ ಎಂದು ಅನಿಸಬಹುದು. ಅದಕ್ಕೆ ಅವನು ಯೆಹೋವನಿಗೆ ಸಮರ್ಪಿಸಿಕೊಂಡೇ ಇಲ್ಲ ಅಥವಾ ತನ್ನ ದೀಕ್ಷಾಸ್ನಾನವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಹಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. * ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡ ನಂತರ ಒಬ್ಬ ವ್ಯಕ್ತಿ ಗಂಭೀರ ಪಾಪ ಮಾಡಿದರೆ ಅವನು ಯೆಹೋವನಿಗೂ ಸಭೆಗೂ ಲೆಕ್ಕ ಒಪ್ಪಿಸಬೇಕು. (ರೋಮ. 14:12) “ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀ” ಎಂದು ಯೇಸು ಹೇಳುವಂತೆ ನಾವು ಇರಬಾರದು. ಬದಲಿಗೆ “ನಾನು ನಿನ್ನ ಕ್ರಿಯೆಗಳನ್ನೂ ನಿನ್ನ ಪ್ರೀತಿಯನ್ನೂ ನಂಬಿಕೆಯನ್ನೂ ಶುಶ್ರೂಷೆಯನ್ನೂ ತಾಳ್ಮೆಯನ್ನೂ ಬಲ್ಲೆನು; ನಿನ್ನ ಇತ್ತೀಚಿಗಿನ ಕ್ರಿಯೆಗಳು ಹಿಂದಿನ ಕ್ರಿಯೆಗಳಿಗಿಂತ ಹೆಚ್ಚಾದವುಗಳಾಗಿವೆ ಎಂಬುದೂ ನನಗೆ ಗೊತ್ತು” ಎಂದು ಹೇಳುವಂತೆ ನಾವು ಇರಬೇಕು. (ಪ್ರಕ. 2:4, 19) ನಾವು ಸಮರ್ಪಣೆಯ ಸಮಯದಲ್ಲಿ ಕೊಟ್ಟ ಮಾತನ್ನು ಪಾಲಿಸುತ್ತಾ ಯೆಹೋವನ ಮನಸ್ಸನ್ನು ಸಂತೋಷಪಡಿಸಬೇಕು.

ನಿಮ್ಮ ವಿವಾಹದ ಪ್ರತಿಜ್ಞೆ

ವಿವಾಹದ ಪ್ರತಿಜ್ಞೆ (ಪ್ಯಾರ 14 ನೋಡಿ)

14. ಎರಡನೇ ಅತಿ ಮುಖ್ಯವಾದ ಪ್ರತಿಜ್ಞೆ ಯಾವುದು? ಯಾಕೆ?

14 ವಿವಾಹದ ಸಮಯದಲ್ಲಿ ಗಂಡುಹೆಣ್ಣು ಮಾಡುವ ಪ್ರತಿಜ್ಞೆ ಎರಡನೇ ಅತಿ ಮುಖ್ಯವಾದ ಪ್ರತಿಜ್ಞೆ. ಯಾಕೆಂದರೆ ವಿವಾಹ ಒಂದು ಪವಿತ್ರವಾದ ಬಂಧ. ವಿವಾಹ ಪ್ರತಿಜ್ಞೆಯನ್ನು ಯೆಹೋವನು ತುಂಬ ಗಂಭೀರವಾಗಿ ನೋಡುತ್ತಾನೆ. ವಧುವರ ಪ್ರತಿಜ್ಞೆ ಮಾಡುವಾಗ ಯೆಹೋವನ ಮುಂದೆ ಮತ್ತು ಮದುವೆಗೆ ಬಂದಿರುವವರ ಮುಂದೆ ಮಾತು ಕೊಡುತ್ತಾರೆ. ಭೂಮಿಯ ಮೇಲೆ ದೇವರ ವಿವಾಹದ ಏರ್ಪಾಡಿಗನುಸಾರ ಕೂಡಿ ಜೀವಿಸುವಷ್ಟು ಕಾಲ ತಾವು ಒಬ್ಬರನ್ನೊಬ್ಬರು ಪ್ರೀತಿಸಿ, ಪಾಲಿಸಿ, ಗೌರವಿಸುತ್ತೇವೆ ಎಂದು ಗಂಡುಹೆಣ್ಣು ಮಾತು ಕೊಡುತ್ತಾರೆ. ಬೇರೆ ಜನರು ಇದೇ ಪದಗಳನ್ನು ಬಳಸದಿದ್ದರೂ ಅವರೂ ದೇವರ ಮುಂದೆ ಮಾತು ಕೊಡುತ್ತಾರೆ. ಈ ರೀತಿ ಮಾತು ಕೊಟ್ಟ ಮೇಲೆ ಗಂಡುಹೆಣ್ಣು ಗಂಡಹೆಂಡತಿ ಆಗುತ್ತಾರೆ. ಮದುವೆಯ ಬಂಧ ಜೀವನಪರ್ಯಂತ ಬಾಳುವ ಭವ್ಯ ಬಾಂಧವ್ಯ. (ಆದಿ. 2:24; 1 ಕೊರಿಂ. 7:39) “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ” ಎಂದು ಯೇಸು ಹೇಳಿದನು. ಗಂಡಹೆಂಡತಿ ಮಧ್ಯೆ ಏನಾದರೂ ಸಮಸ್ಯೆಯಾದರೆ ಆ ಬಂಧವನ್ನು ಮುರಿಯಬಹುದು ಎಂದು ಅವರು ನೆನಸಬಾರದು.—ಮಾರ್ಕ 10:9.

15. ಮದುವೆಯ ಬಗ್ಗೆ ಲೋಕದ ಜನರಿಗೆ ಮತ್ತು ಕ್ರೈಸ್ತರಿಗಿರುವ ಮನೋಭಾವದಲ್ಲಿ ಏನು ವ್ಯತ್ಯಾಸ ಇದೆ?

15 ಪರಿಪೂರ್ಣ ಮನುಷ್ಯರು ಇಲ್ಲದ ಹಾಗೆ ಪರಿಪೂರ್ಣ ಮದುವೆಗಳೂ ಇಲ್ಲ ಎನ್ನುವುದು ಸತ್ಯ. ಆದ್ದರಿಂದಲೇ ಮದುವೆ ಆದವರಿಗೆಲ್ಲಾ ಕೆಲವೊಮ್ಮೆ “ತಮ್ಮ ಶರೀರದಲ್ಲಿ ಸಂಕಟವಿರುವುದು” ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂ. 7:28) ಇಂದು ಲೋಕದ ಜನರಲ್ಲಿ ಮದುವೆ ಬಗ್ಗೆ ಉಡಾಫೆ ಮನೋಭಾವ ಇದೆ. ಗಂಡ ಹೆಂಡತಿಯ ಮಧ್ಯೆ ಸಮಸ್ಯೆಯಾದರೆ ವಿವಾಹಬಂಧವನ್ನು ಸುಲಭವಾಗಿ ಮುರಿದುಬಿಡಬಹುದು ಎಂದು ನೆನಸುತ್ತಾರೆ. ಆದರೆ ಬೈಬಲ್‌ ಮಟ್ಟಗಳನ್ನು ಪಾಲಿಸುವ ದಂಪತಿಗಳು ಹಾಗೆ ನೆನಸುವುದಿಲ್ಲ. ತಮ್ಮ ಮದುವೆಯ ಸಮಯದಲ್ಲಿ ಅವರು ದೇವರ ಮುಂದೆ ಮಾತು ಕೊಟ್ಟಿದ್ದಾರೆ ಎನ್ನುವುದನ್ನು ಯಾವಾಗಲೂ ನೆನಪಿಡುತ್ತಾರೆ. ಆ ಮಾತನ್ನು ಮುರಿದರೆ ಅವರು ದೇವರಿಗೆ ಸುಳ್ಳು ಹೇಳಿದ ಹಾಗೆ ಆಗುತ್ತದೆ ಮತ್ತು ದೇವರು ಸುಳ್ಳುಗಾರರನ್ನು ದ್ವೇಷಿಸುತ್ತಾನೆ. (ಯಾಜ. 19:12; ಜ್ಞಾನೋ. 6:16-19) ಅವರು ಅಪೊಸ್ತಲ ಪೌಲನ ಮಾತನ್ನೂ ಮರೆಯುವುದಿಲ್ಲ. ಪೌಲ ಹೇಳಿದ್ದು: “ನೀನು ಹೆಂಡತಿಯ ಕಟ್ಟಿನೊಳಗಿದ್ದೀಯೊ? ಬಿಡುಗಡೆಯಾಗಲು ಪ್ರಯತ್ನಿಸುವುದನ್ನು ನಿಲ್ಲಿಸು.” (1 ಕೊರಿಂ. 7:27) ಮೋಸದಿಂದ ವಿಚ್ಛೇದನ ಪಡೆದುಕೊಳ್ಳುವುದನ್ನು ಅಥವಾ ವಿಚ್ಛೇದನ ಕೊಡುವುದನ್ನು ಯೆಹೋವನು ದ್ವೇಷಿಸುತ್ತಾನೆ ಎಂದು ಪೌಲನಿಗೆ ಗೊತ್ತಿದ್ದರಿಂದ ಈ ಮಾತನ್ನು ಹೇಳಿದನು.—ಮಲಾ. 2:13-16.

16. ವಿಚ್ಛೇದನ ಮತ್ತು ಪ್ರತ್ಯೇಕವಾಸದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

16 ಗಂಡ ಅಥವಾ ಹೆಂಡತಿ ವ್ಯಭಿಚಾರ ಮಾಡಿದರೆ ಮಾತ್ರ ಒಬ್ಬ ವ್ಯಕ್ತಿ ವಿಚ್ಛೇದನ ಕೊಡಬಹುದು ಎಂದು ಬೈಬಲ್‌ ಹೇಳುತ್ತದೆ. ಆ ಸಂಗಾತಿಯನ್ನು ಕ್ಷಮಿಸಿದರೆ ವಿಚ್ಛೇದನ ಕೊಡಬೇಕೆಂದಿಲ್ಲ. (ಮತ್ತಾ. 19:9; ಇಬ್ರಿ. 13:4) ಆದರೆ ಪ್ರತ್ಯೇಕವಾಸದ ಬಗ್ಗೆ ಬೈಬಲ್‌ ಏನು ಹೇಳುತ್ತದೆ? ಇದರ ಬಗ್ಗೆ ಸಹ ಸ್ಪಷ್ಟ ನಿರ್ದೇಶನಗಳನ್ನು ಕೊಡುತ್ತದೆ. (1 ಕೊರಿಂಥ 7:10, 11 ಓದಿ.) ಗಂಡ ಹೆಂಡತಿ ಬೇರೆ ಬೇರೆಯಾಗಿ ವಾಸಿಸುವ ಹಾಗಿಲ್ಲ ಎಂದು ಹೇಳುತ್ತದೆ. ಆದರೆ, ಕೆಲವೊಂದು ಅನಿವಾರ್ಯ ಪರಿಸ್ಥಿತಿಗಳಿಂದಾಗಿ ಕೆಲವು ಕ್ರೈಸ್ತರು ತಮ್ಮ ಸಂಗಾತಿಯನ್ನು ಬಿಟ್ಟು ಬೇರೆ ವಾಸಿಸುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ, ಸಂಗಾತಿ ತುಂಬ ದೌರ್ಜನ್ಯ ನಡೆಸುತ್ತಿರುವುದರಿಂದ ಜೀವಕ್ಕೇ ಅಪಾಯ ಇರಬಹುದು. ಅಥವಾ ಸಂಗಾತಿಯಲ್ಲಿ ಒಬ್ಬರು ಧರ್ಮಭ್ರಷ್ಟರಾಗಿರುವುದರಿಂದ ಇನ್ನೊಬ್ಬ ಸಂಗಾತಿಯ ಆಧ್ಯಾತ್ಮಿಕತೆ ಅಪಾಯದಲ್ಲಿರಬಹುದು. *

17. ಗಂಡಹೆಂಡತಿ ತಮ್ಮ ಸಂಬಂಧವನ್ನು ಬಲಪಡಿಸಲು ಏನು ಮಾಡಬಹುದು?

17 ಒಬ್ಬ ದಂಪತಿ ತಮ್ಮ ಮಧ್ಯೆ ಏನಾದರೂ ಸಮಸ್ಯೆ ಆದಾಗ ಸಭಾ ಹಿರಿಯರ ಹತ್ತಿರ ಸಲಹೆ ಕೇಳಲು ಹೋದರೆ, ಹಿರಿಯರು ಅವರಿಗೆ ನಿಜ ಪ್ರೀತಿ ಅಂದರೇನು? (ಇಂಗ್ಲಿಷ್‌) ಎಂಬ ವಿಡಿಯೋ ಇತ್ತೀಚಿಗೆ ನೋಡಿದಿರಾ ಮತ್ತು ಸುಖೀ ಸಂಸಾರ ಸಾಧ್ಯ! ಎಂಬ ಕಿರುಹೊತ್ತಗೆ ಅಧ್ಯಯನ ಮಾಡಿದಿರಾ ಎಂದು ಕೇಳಬಹುದು. ಈ ಪ್ರಕಾಶನಗಳಲ್ಲಿ ವಿವಾಹ ಬಂಧವನ್ನು ಬಲಪಡಿಸುವ ಅನೇಕ ಬೈಬಲ್‌ ತತ್ವಗಳು ಇವೆ. ಒಬ್ಬ ದಂಪತಿ ಹೇಳುತ್ತಾರೆ: “ಈ ಕಿರುಹೊತ್ತಗೆಯನ್ನು ಅಧ್ಯಯನ ಮಾಡಲು ಆರಂಭಿಸಿದಾಗಿಂದ ನಮ್ಮ ಮಧ್ಯೆ ಪ್ರೀತಿ ಹೆಚ್ಚಾಗಿದೆ.” 22 ವರ್ಷಗಳ ವೈವಾಹಿಕ ಜೀವನ ನಡೆಸಿರುವ ಸಹೋದರಿಯೊಬ್ಬರ ವಿವಾಹಬಂಧ ಇನ್ನೇನು ಮುರಿದುಹೋಗಲಿಕ್ಕಿತ್ತು. ಆಗ ಅವರು ಈ ವಿಡಿಯೋ ನೋಡಿದರು. ನಂತರ ಅವರು ಹೇಳಿದ್ದು: “ನಮ್ಮಿಬ್ಬರಿಗೂ ದೀಕ್ಷಾಸ್ನಾನ ಆಗಿತ್ತು. ಆದರೆ ಭಾವನಾತ್ಮಕವಾಗಿ ಅವರು ಒಂದು ತರ, ನಾನು ಒಂದು ತರ. ಈ ವಿಡಿಯೋ ಸರಿಯಾದ ಸಮಯಕ್ಕೆ ಬಂತು! ಈಗ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ.” ಬೈಬಲ್‌ ತತ್ವಗಳನ್ನು ಗಂಡಹೆಂಡತಿ ಪಾಲಿಸಿದರೆ ಅವರ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ ಮತ್ತು ಸಂತೋಷ ಹೆಚ್ಚಾಗುತ್ತದೆ ಎಂದು ಈ ಅನುಭವಗಳಿಂದ ತಿಳಿದುಬರುತ್ತದೆ.

ವಿಶೇಷ ಪೂರ್ಣಸಮಯದ ಸೇವಕರು ಮಾಡುವ ಪ್ರತಿಜ್ಞೆ

18, 19. (ಎ) ಅನೇಕ ಕ್ರೈಸ್ತ ಹೆತ್ತವರು ಏನು ಮಾಡಿದ್ದಾರೆ? (ಬಿ) ವಿಶೇಷ ಪೂರ್ಣಸಮಯದ ಸೇವೆಯಲ್ಲಿರುವವರ ಬಗ್ಗೆ ಹೇಳಿ.

18 ಯೆಪ್ತಾಹ ಮತ್ತು ಹನ್ನ ಮಾಡಿದ ಹರಕೆಯ ಬಗ್ಗೆ ಲೇಖನದ ಆರಂಭದಲ್ಲಿ ಓದಿದೆವು. ಅವರು ಮಾಡಿದ ಹರಕೆಯಿಂದಾಗಿ ಯೆಪ್ತಾಹನ ಮಗಳು ಮತ್ತು ಹನ್ನಳ ಮಗ ಜೀವನಪೂರ್ತಿ ಯೆಹೋವನಿಗೆ ವಿಶೇಷವಾದ ರೀತಿಯಲ್ಲಿ ಸೇವೆಸಲ್ಲಿಸಿದರು. ಇಂದು ಅನೇಕ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಪೂರ್ಣಸಮಯದ ಸೇವೆ ಮಾಡುವಂತೆ, ತಮ್ಮ ಜೀವನವನ್ನು ದೇವರ ಸೇವೆಯಲ್ಲಿ ಕಳೆಯುವಂತೆ ಪ್ರೋತ್ಸಾಹಿಸಿದ್ದಾರೆ. ಈ ಯುವ ಜನರು ತಮ್ಮ ಸೇವೆಯನ್ನು ಮುಂದುವರಿಸುವಂತೆ ನಾವೆಲ್ಲರೂ ಪ್ರೋತ್ಸಾಹಿಸೋಣ.—ನ್ಯಾಯ. 11:40; ಕೀರ್ತ. 110:3.

ವಿಶೇಷ ಪೂರ್ಣಸಮಯ ಸೇವೆಯ ಪ್ರತಿಜ್ಞೆ (ಪ್ಯಾರ 19 ನೋಡಿ)

19 ಇಂದು ವರ್ಲ್ಡ್‌ವೈಡ್‌ ಆರ್ಡರ್‌ ಆಫ್‌ ಸ್ಪೆಷಲ್‌ ಫುಲ್‌-ಟೈಮ್‌ ಸರ್ವೆಂಟ್ಸ್‌ ಆಫ್‌ ಜೆಹೋವಾಸ್‌ ವಿಟ್ನೆಸಸ್‌ ಎಂಬ ಏರ್ಪಾಡಿನ ಅಡಿಯಲ್ಲಿ 67,000 ಮಂದಿ ವಿಶೇಷ ಪೂರ್ಣಸಮಯದ ಸೇವಕರಿದ್ದಾರೆ. ಇವರಲ್ಲಿ ಕೆಲವರು ಬೆತೆಲಿನಲ್ಲಿ, ಕೆಲವರು ನಿರ್ಮಾಣಕಾರ್ಯದಲ್ಲಿ, ಇನ್ನು ಕೆಲವರು ಸಂಚರಣ ಕೆಲಸದಲ್ಲಿದ್ದಾರೆ. ಇನ್ನು ಕೆಲವರು ಸಂಘಟನೆ ಬೇರೆಬೇರೆ ಕಡೆ ಏರ್ಪಡಿಸುವ ಶಾಲೆಗಳ ಶಿಕ್ಷಕರಾಗಿ, ವಿಶೇಷ ಪಯನೀಯರ್‌ ಆಗಿ, ಮಿಷನರಿಗಳಾಗಿ ಸೇವೆ ಮಾಡುತ್ತಿದ್ದಾರೆ. ಕೆಲವರು ಸಮ್ಮೇಳನ ಸಭಾಂಗಣ ಅಥವಾ ಬೈಬಲ್‌ ಶಾಲೆಗಳು ನಡೆಯುವ ಕಟ್ಟಡಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇವರಲ್ಲಿ ಪ್ರತಿಯೊಬ್ಬರೂ “ವಿಧೇಯತೆ ಮತ್ತು ಬಡತನದ ಪ್ರತಿಜ್ಞೆ” ತೆಗೆದುಕೊಂಡಿದ್ದಾರೆ. ಈ ಪ್ರತಿಜ್ಞೆಗನುಸಾರ ಇವರು, ಯೆಹೋವನ ಸೇವೆಯಲ್ಲಿ ಯಾವುದೇ ನೇಮಕ ಸಿಕ್ಕಿದರೂ ಮಾಡುತ್ತೇವೆ, ಸರಳ ಜೀವನ ಮಾಡುತ್ತೇವೆ ಮತ್ತು ಅನುಮತಿ ಪಡೆಯದೆ ಐಹಿಕ ಕೆಲಸ ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದಾರೆ. ಅವರು ತಮ್ಮನ್ನಲ್ಲ, ತಮ್ಮ ಸೇವೆಯನ್ನು ವಿಶೇಷವೆಂದು ಪರಿಗಣಿಸುತ್ತಾರೆ. ತಾವು ಪೂರ್ಣಸಮಯದ ಸೇವೆಯಲ್ಲಿ ಇರುವ ತನಕ ಕೊಟ್ಟ ಮಾತನ್ನು ದೀನತೆಯಿಂದ ಪಾಲಿಸಲು ದೃಢತೀರ್ಮಾನ ಮಾಡಿದ್ದಾರೆ.

20. ನಾವು ದೇವರಿಗೆ ಮಾತು ಕೊಟ್ಟ ಮೇಲೆ ಏನು ಮಾಡಬೇಕು? ಯಾಕೆ?

20 ಈ ಲೇಖನದಲ್ಲಿ ಚರ್ಚಿಸಿದ ಯಾವ್ಯಾವ ಪ್ರತಿಜ್ಞೆಯನ್ನು ನೀವು ಮಾಡಿದ್ದೀರಿ? ಮಾತು ಕೊಟ್ಟ ಮೇಲೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಮತ್ತು ಅದನ್ನು ಪಾಲಿಸಲು ಸರ್ವಪ್ರಯತ್ನ ಮಾಡಬೇಕು ಎಂದು ಅರ್ಥಮಾಡಿಕೊಂಡೆವು. (ಜ್ಞಾನೋ. 20:25) ನಾವು ಯೆಹೋವನಿಗೆ ಮಾತು ಕೊಟ್ಟಂತೆ ನಡಕೊಳ್ಳದಿದ್ದರೆ ಅದರ ಪರಿಣಾಮವನ್ನು ನಾವೇ ಅನುಭವಿಸಬೇಕಾಗುತ್ತದೆ. (ಪ್ರಸಂ. 5:6) ಹಾಗಾಗಿ ನಾವು ‘ಪ್ರತಿದಿನವೂ ನಮ್ಮ ಹರಕೆಗಳನ್ನು ಸಲ್ಲಿಸುತ್ತಾ ಯೆಹೋವನ ನಾಮವನ್ನು ಸದಾ ಸ್ಮರಿಸಿ ಕೀರ್ತಿಸುತ್ತಿರೋಣ.’—ಕೀರ್ತ. 61:8.

^ ಪ್ಯಾರ. 7 ತನಗೆ ಒಬ್ಬ ಮಗ ಹುಟ್ಟಿದರೆ ಅವನು ಜೀವನಪೂರ್ತಿ ನಾಜೀರನಾಗಿ ಇರುತ್ತಾನೆಂದು ಹನ್ನ ಯೆಹೋವನಿಗೆ ಮಾತು ಕೊಟ್ಟಳು. ಇದರರ್ಥ ಅವನು ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ತನ್ನ ಜೀವನವನ್ನು ಆತನ ಸೇವೆಗಾಗಿ ಮುಡಿಪಾಗಿಡಬೇಕಿತ್ತು.—ಅರ. 6:2, 5, 8.

^ ಪ್ಯಾರ. 13 ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡೆಯಲು ಅರ್ಹನಾ ಇಲ್ವಾ ಎಂದು ಪರಿಶೀಲಿಸುವಾಗ ಹಿರಿಯರು ಅನೇಕ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಹಾಗಾಗಿ ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡೆದ ಮೇಲೆ ಅವನ ದೀಕ್ಷಾಸ್ನಾನ ಅನಂಗೀಕೃತವಾಗುವುದು ತುಂಬ ಅಪರೂಪ.

^ ಪ್ಯಾರ. 16 “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ ಪುಟ 251-253 ನೋಡಿ.