ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪರದೇಶದವರ” ಮಕ್ಕಳಿಗೆ ಸಹಾಯಮಾಡಿ

“ಪರದೇಶದವರ” ಮಕ್ಕಳಿಗೆ ಸಹಾಯಮಾಡಿ

“ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವುದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.”—3 ಯೋಹಾ. 4, ಪವಿತ್ರ ಗ್ರಂಥ ಭಾಷಾಂತರ.

ಗೀತೆಗಳು: 88, 41

1, 2. (ಎ) ವಲಸೆಬಂದಿರುವ ಮಕ್ಕಳಿಗೆ ಹೆಚ್ಚಾಗಿ ಯಾವ ಸಮಸ್ಯೆ ಎದುರಾಗುತ್ತದೆ? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಚರ್ಚಿಸಲಾಗುವುದು?

“ನನ್ನ ಹೆತ್ತವರು ಬೇರೆ ದೇಶದಿಂದ ವಲಸೆಬಂದವರು. ಚಿಕ್ಕವಯಸ್ಸಿನಿಂದ ಅವರ ಭಾಷೆಯನ್ನೇ ಮನೆಯಲ್ಲಿ ಮಾತಾಡುತ್ತಿದ್ದೆ. ಅದೇ ಭಾಷೆಯ ಸಭೆಗೂ ಹೋಗುತ್ತಿದ್ದೆ. ಆದರೆ ಶಾಲೆಗೆ ಹೋಗಲು ಆರಂಭಿಸಿದಾಗ ಸ್ಥಳೀಯ ಭಾಷೆ ಮಾತಾಡಲು ಆರಂಭಿಸಿದೆ, ಅದೇ ಇಷ್ಟವಾಯಿತು. ಕೆಲವು ವರ್ಷಗಳಾದ ಮೇಲೆ ಆ ಭಾಷೆಯನ್ನು ಮಾತ್ರ ಮಾತಾಡುತ್ತಿದ್ದೆ. ಹಾಗಾಗಿ ಕೂಟಗಳಲ್ಲಿ ಹೇಳುತ್ತಿದ್ದ ವಿಷಯ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ನನ್ನ ಹೆತ್ತವರ ಸಂಸ್ಕೃತಿಗೂ ನನಗೂ ಏನೂ ಸಂಬಂಧ ಇಲ್ಲ ಅನಿಸಿತು.” ಇದು ಜೋಶುವ ಎಂಬ ಸಹೋದರನು ಹೇಳಿದ ಮಾತು. ಇದೇ ರೀತಿ ಅನೇಕರಿಗೆ ಅನಿಸಿದೆ.

2 ಇಂದು 24 ಕೋಟಿಗಿಂತಲೂ ಹೆಚ್ಚು ಜನರು ತಾವು ಹುಟ್ಟಿದ ದೇಶ ಬಿಟ್ಟು ಬೇರೆ ಕಡೆ ವಾಸವಾಗಿದ್ದಾರೆ. ನೀವು ವಲಸೆಬಂದಿರುವ ಹೆತ್ತವರಾಗಿರುವಲ್ಲಿ ನಿಮ್ಮ ಮಕ್ಕಳು ಯೆಹೋವನನ್ನು ಪ್ರೀತಿಸಲು, ‘ಸತ್ಯವನ್ನು ಅನುಸರಿಸಿ ನಡೆಯಲು’ ಹೇಗೆ ಅತ್ಯುತ್ತಮ ಸಹಾಯ ಕೊಡಬಹುದು? (3 ಯೋಹಾ. 4) ಸಭೆಯವರು ಹೇಗೆ ಸಹಾಯ ಮಾಡಬಹುದು?

ಹೆತ್ತವರೇ, ಒಳ್ಳೇ ಮಾದರಿಯಾಗಿರಿ

3, 4. (ಎ) ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಒಳ್ಳೇ ಮಾದರಿಯಾಗಿರಬಹುದು? (ಬಿ) ಹೆತ್ತವರು ಮಕ್ಕಳಿಂದ ಏನನ್ನು ಅಪೇಕ್ಷಿಸಬಾರದು?

3 ಹೆತ್ತವರೇ, ನಿಮ್ಮ ಮಕ್ಕಳಿಗೆ ಯೆಹೋವನ ಜೊತೆ ಒಂದು ವೈಯಕ್ತಿಕ ಸಂಬಂಧ ಇರಬೇಕಾದರೆ ಮತ್ತು ಅವರು ಸದಾಕಾಲ ಜೀವಿಸಬೇಕಾದರೆ ನಿಮ್ಮ ಮಾದರಿ ತುಂಬ ಮುಖ್ಯ. ನೀವು ‘ಮೊದಲು ರಾಜ್ಯವನ್ನು ಹುಡುಕುವುದನ್ನು’ ನಿಮ್ಮ ಮಕ್ಕಳು ನೋಡುವಾಗ, ಅವರು ಕೂಡ ತಮ್ಮ ದೈನಂದಿನ ಅಗತ್ಯಗಳಿಗಾಗಿ ಯೆಹೋವನ ಮೇಲೆ ಹೊಂದಿಕೊಳ್ಳಲು ಕಲಿಯುತ್ತಾರೆ. (ಮತ್ತಾ. 6:33, 34) ಭೌತಿಕ ವಸ್ತುಗಳನ್ನು ಶೇಖರಿಸಲು ಪ್ರಯತ್ನಿಸುವ ಬದಲು ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡಿ. ಹಿತಮಿತವಾಗಿ ಖರ್ಚು ಮಾಡಿ, ಸಾಲ ಮಾಡಲು ಹೋಗಬೇಡಿ. ‘ಸ್ವರ್ಗದಲ್ಲಿ ಸಂಪತ್ತು’ ಶೇಖರಿಸಲು ಅಂದರೆ ಯೆಹೋವನ ಮೆಚ್ಚುಗೆ ಗಳಿಸಲು ಮಹತ್ವ ಕೊಡಿ. ಹಣದ ಹಿಂದೆ ಹೋಗಬೇಡಿ ಅಥವಾ “ಮನುಷ್ಯರ ಮಹಿಮೆಯನ್ನು” ಪಡೆಯಲು ಶ್ರಮಿಸಬೇಡಿ.—ಮಾರ್ಕ 10:21, 22 ಓದಿ; ಯೋಹಾ. 12:43.

4 ಮಕ್ಕಳೊಟ್ಟಿಗೆ ಸಮಯ ಕಳೆಯಲು ಆಗದಿರುವಷ್ಟರ ಮಟ್ಟಿಗೆ ಕೆಲಸದಲ್ಲಿ ಮುಳುಗಿಹೋಗಬೇಡಿ. ಮಕ್ಕಳು ತಮಗಾಗಲಿ ನಿಮಗಾಗಲಿ ಹಣ-ಹೆಸರು ಮಾಡುವುದರ ಹಿಂದೆ ಹೋಗದೆ ಯೆಹೋವನಿಗೆ ಮೊದಲ ಸ್ಥಾನ ಕೊಟ್ಟರೆ ನಿಮಗೆ ಹೆಮ್ಮೆ ಆಗುವುದೆಂದು ಹೇಳಿ. ಹೆತ್ತವರು ತುಂಬ ಸುಖವಾಗಿ ಜೀವನ ನಡೆಸಲು ಬೇಕಾದದ್ದೆಲ್ಲವನ್ನು ಮಾಡುವುದು ಮಕ್ಕಳ ಕರ್ತವ್ಯ ಎಂಬ ತಪ್ಪಾದ ಅಭಿಪ್ರಾಯವನ್ನು ಮನಸ್ಸಿನಿಂದ ತೆಗೆದುಹಾಕಿ. ನೆನಪಿಡಿ, “ಮಕ್ಕಳು ಹೆತ್ತವರಿಗಾಗಿ ಶೇಖರಿಸಿಡಬೇಕಾಗಿರುವುದಿಲ್ಲ, ಹೆತ್ತವರು ತಮ್ಮ ಮಕ್ಕಳಿಗಾಗಿ ಶೇಖರಿಸಿಡಬೇಕು.”—2 ಕೊರಿಂ. 12:14.

ಹೆತ್ತವರೇ, ಭಾಷೆಯ ಸಮಸ್ಯೆ ಜಯಿಸಲು ಪ್ರಯತ್ನಮಾಡಿ

5. ಹೆತ್ತವರು ಮಕ್ಕಳ ಜೊತೆ ಯೆಹೋವನ ಬಗ್ಗೆ ಮಾತಾಡುತ್ತಾ ಇರಬೇಕು ಏಕೆ?

5 “ವಿವಿಧಭಾಷೆಗಳ” ಜನರು ಯೆಹೋವನ ಸಂಘಟನೆಗೆ ಬಂದು ಸೇರುವರೆಂದು ಮುಂತಿಳಿಸಲಾಗಿತ್ತು ಮತ್ತು ಇಂದು ಹಾಗೆಯೇ ಆಗುತ್ತಿದೆ. (ಜೆಕ. 8:23) ಆದರೆ ಮಕ್ಕಳಿಗೆ ನಿಮ್ಮ ಭಾಷೆ ಸರಿಯಾಗಿ ಅರ್ಥ ಆಗದಿದ್ದರೆ ಅವರಿಗೆ ಸತ್ಯ ಕಲಿಸಲು ನಿಮಗೆ ಕಷ್ಟವಾಗಬಹುದು. ನಿಮಗಿರುವ ಬೈಬಲ್‌ ವಿದ್ಯಾರ್ಥಿಗಳಲ್ಲಿ ನಿಮ್ಮ ಮಕ್ಕಳೇ ಅತಿ ಮುಖ್ಯ ವಿದ್ಯಾರ್ಥಿಗಳು. ಯೆಹೋವನ ಬಗ್ಗೆ ತಿಳಿದುಕೊಂಡರೆ ಅವರಿಗೆ ನಿತ್ಯಜೀವ ಸಿಗುವ ಅವಕಾಶವಿದೆ. (ಯೋಹಾ. 17:3) ಅವರು ಯೆಹೋವನ ಬೋಧನೆಗಳನ್ನು ಕಲಿಯಬೇಕಾದರೆ ನೀವು ಅವರೊಟ್ಟಿಗೆ ಸೂಕ್ತವಾದ ಪ್ರತಿಯೊಂದು ಸಂದರ್ಭದಲ್ಲಿ “ಇವುಗಳ ವಿಷಯದಲ್ಲಿ ಮಾತಾಡಬೇಕು.”—ಧರ್ಮೋಪದೇಶಕಾಂಡ 6:6, 7 ಓದಿ.

6. ಹೆತ್ತವರ ಭಾಷೆ ಕಲಿತರೆ ಮಕ್ಕಳಿಗೆ ಹೇಗೆ ಪ್ರಯೋಜನವಾಗುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.)

6 ಸ್ಥಳೀಯ ಭಾಷೆಯನ್ನು ಮಕ್ಕಳು ಶಾಲೆಯಲ್ಲೊ ಬೇರೆಯವರಿಂದಲೊ ಖಂಡಿತ ಕಲಿಯುತ್ತಾರೆ. ಆದರೆ ನಿಮ್ಮ ಭಾಷೆಯನ್ನು ಅವರು ಕಲಿಯಲಿಕ್ಕಾಗುವುದು ನೀವು ಅವರೊಟ್ಟಿಗೆ ಆ ಭಾಷೆಯಲ್ಲಿ ದಿನಾಲೂ ಮಾತಾಡಿದರೆ ಮಾತ್ರ. ಮಕ್ಕಳು ನಿಮ್ಮ ಭಾಷೆ ಕಲಿತರೆ ನಿಮ್ಮ ಜೊತೆ ಮಾತಾಡಲು, ಅವರ ಮನಸ್ಸಿನಲ್ಲೇನಿದೆ ಎಂದು ಹೇಳಲು ಸುಲಭವಾಗುತ್ತದೆ. ಒಂದಕ್ಕಿಂತ ಜಾಸ್ತಿ ಭಾಷೆ ಮಾತಾಡುವುದರಿಂದ ಬೇರೆ ಪ್ರಯೋಜನಗಳೂ ಇವೆ. ಮಕ್ಕಳ ಯೋಚನಾ ಸಾಮರ್ಥ್ಯ ಉತ್ತಮಗೊಳ್ಳುತ್ತದೆ. ಬೇರೆಯವರ ದೃಷ್ಟಿಕೋನ, ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲೂ ಸಹಾಯವಾಗುತ್ತದೆ. ಸೇವೆಯಲ್ಲೂ ಹೆಚ್ಚನ್ನು ಮಾಡಲು ಅವರಿಗೆ ಅವಕಾಶಗಳು ಸಿಗುತ್ತವೆ. ಕ್ಯಾರೊಲಿನಾಳ ಹೆತ್ತವರು ಬೇರೆ ದೇಶದಿಂದ ವಲಸೆಬಂದವರು. ಅವಳನ್ನುವುದು: “ಬೇರೊಂದು ಭಾಷೆಯ ಸಭೆಯಲ್ಲಿರುವುದು ಚೆನ್ನಾಗಿದೆ. ಇಲ್ಲಿ ಪ್ರಚಾರಕರ ಅಗತ್ಯ ಇರುವುದರಿಂದ ನಮ್ಮಿಂದ ಹೆಚ್ಚು ಸೇವೆ ಮಾಡಲಿಕ್ಕಾಗುತ್ತದೆ. ತುಂಬ ಖುಷಿಯಾಗುತ್ತಿದೆ.”

7. ನಿಮ್ಮ ಕುಟುಂಬದಲ್ಲಿ ಭಾಷೆಯ ಸಮಸ್ಯೆ ಇದ್ದರೆ ನೀವೇನು ಮಾಡಬಹುದು?

7 ಆದರೆ ವಲಸೆಬಂದವರ ಮಕ್ಕಳು ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಕಲಿಯುತ್ತಾ ಹೋದಂತೆ ಕೆಲವರು ತಮ್ಮ ಹೆತ್ತವರ ಭಾಷೆಯನ್ನಾಡುವ ಆಸೆಯನ್ನು ಮತ್ತು ಸಾಮರ್ಥ್ಯವನ್ನೂ ಕಳಕೊಳ್ಳುತ್ತಾರೆ. ನಿಮ್ಮ ಮಕ್ಕಳಿಗೂ ಹೀಗೆ ಆಗುತ್ತಿದೆಯಾ? ಹಾಗಿದ್ದರೆ ಸ್ಥಳೀಯ ಭಾಷೆಯನ್ನು ಸ್ವಲ್ಪವಾದರೂ ಕಲಿಯಲು ಪ್ರಯತ್ನ ಮಾಡಿ. ಆಗ ನಿಮ್ಮ ಮಕ್ಕಳಿಗೆ ಕ್ರೈಸ್ತರಾಗಿ ಬೆಳೆಯಲು ಬೇಕಾದ ಸಹಾಯವನ್ನು ನೀವು ಕೊಡಲಿಕ್ಕಾಗುತ್ತದೆ. ಏಕೆಂದರೆ ನಿಮಗೆ ನಿಮ್ಮ ಮಕ್ಕಳ ಮಾತುಕತೆ ಹೇಗಿದೆ, ಮನೋರಂಜನೆಗೆಂದು ಅವರು ನೋಡುವ ಕೇಳುವ ವಿಷಯ ಯಾವುದು, ಶಾಲೆಯಲ್ಲಿ ಕೊಡಲಾಗುವ ಹೋಮ್‌ವರ್ಕ್‌ ಏನು ಇದೆಲ್ಲ ನಿಮಗೆ ಅರ್ಥವಾಗುತ್ತದೆ. ಅವರ ಶಿಕ್ಷಕರ ಜೊತೆ ನೀವೇ ಮಾತಾಡಲಿಕ್ಕೂ ಆಗುತ್ತದೆ. ಸ್ಥಳೀಯ ಭಾಷೆ ಕಲಿಯಲು ನೀವು ಸಮಯ ಕೊಡಬೇಕು, ಪ್ರಯತ್ನ ಪಡಬೇಕು ಮತ್ತು ನಿಮ್ಮಲ್ಲಿ ದೀನತೆಯೂ ಇರಬೇಕು. ಯಾವುದೊ ಕಾರಣಕ್ಕೆ ಮಗ/ಮಗಳು ಕಿವುಡರಾಗಿ ಬಿಟ್ಟರೆ, ಹೆತ್ತವರು ಅವರ ಜೊತೆ ಸಂವಾದ ಮಾಡಲು ಸನ್ನೆ ಭಾಷೆ ಕಲಿಯುವ ಪ್ರಯತ್ನ ಮಾಡುವುದಿಲ್ಲವಾ? ಹಾಗೆ ನಿಮ್ಮ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲಿ ಮನಬಿಚ್ಚಿ ಮಾತಾಡಲು ಆಗುತ್ತದಾದರೆ ನೀವು ಆ ಭಾಷೆ ಕಲಿಯುವುದು ಒಳ್ಳೇದಲ್ಲವಾ? ಏನಂತೀರಿ? *

8. ನಿಮಗೆ ಸ್ಥಳೀಯ ಭಾಷೆ ಚೆನ್ನಾಗಿ ಬರದಿದ್ದರೂ ನಿಮ್ಮ ಮಕ್ಕಳಿಗೆ ಹೇಗೆ ಆಧ್ಯಾತ್ಮಿಕ ಸಹಾಯ ಕೊಡಬಹುದು?

8 ಮಕ್ಕಳು ಕಲಿತಿರುವ ಹೊಸ ಭಾಷೆಯನ್ನು ಸರಾಗವಾಗಿ ಮಾತಾಡಲು, ಓದಲು ಹೆತ್ತವರಿಗೆ ತುಂಬ ಕಷ್ಟವಾಗಬಹುದು. ಇದರಿಂದಾಗಿ ಅವರು ಮಕ್ಕಳಿಗೆ “ಪವಿತ್ರ ಬರಹಗಳನ್ನು” ಅರ್ಥಮಾಡಿಸುವುದು ಕಷ್ಟವಾಗುತ್ತದೆ. (2 ತಿಮೊ. 3:15) ನಿಮ್ಮ ಪರಿಸ್ಥಿತಿ ಒಂದುವೇಳೆ ಹೀಗಿದ್ದರೂ ನಿಮ್ಮ ಮಕ್ಕಳು ಯೆಹೋವನನ್ನು ತಿಳಿದುಕೊಳ್ಳಲು, ಪ್ರೀತಿಸಲು ನೀವು ಖಂಡಿತ ಸಹಾಯಮಾಡಬಲ್ಲಿರಿ. ಶ್ಯಾನ್‌ ಎಂಬ ಹಿರಿಯ ಹೇಳುವುದು: “ನಮ್ಮನ್ನು ಅಮ್ಮ ಒಬ್ಬರೇ ಬೆಳೆಸಿದರು. ನಮಗೆ ಅರ್ಥವಾಗುವ ಭಾಷೆ ಅಮ್ಮನಿಗೆ ಅಷ್ಟೊಂದು ಬರುತ್ತಿರಲಿಲ್ಲ ಮತ್ತು ನನಗೆ, ಅಕ್ಕನಿಗೆ, ತಂಗಿಗೆ ಅವರ ಭಾಷೆ ಸರಿಯಾಗಿ ಬರುತ್ತಿರಲಿಲ್ಲ. ಆದರೆ ಅಮ್ಮ ಅಧ್ಯಯನ ಮಾಡುವುದು, ಪ್ರಾರ್ಥನೆ ಮಾಡುವುದು, ಪ್ರತಿ ವಾರ ಕುಟುಂಬ ಆರಾಧನೆ ನಡೆಸಲು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡುವುದನ್ನು ನೋಡುವಾಗ, ಯೆಹೋವನ ಬಗ್ಗೆ ತಿಳಿದುಕೊಳ್ಳುವುದು ಎಷ್ಟು ಪ್ರಾಮುಖ್ಯ ಅಂತ ನಮಗೆ ಗೊತ್ತಾಯಿತು.”

9. ಯೆಹೋವನ ಬಗ್ಗೆ ಎರಡೆರಡು ಭಾಷೆಗಳಲ್ಲಿ ಕಲಿಯಬೇಕಾದ ಮಕ್ಕಳಿಗೆ ಹೆತ್ತವರು ಹೇಗೆ ಸಹಾಯ ಮಾಡಬಹುದು?

9 ಕೆಲವು ಮಕ್ಕಳು ಯೆಹೋವನ ಬಗ್ಗೆ ಎರಡೆರಡು ಭಾಷೆಗಳಲ್ಲಿ ಕಲಿಯಬೇಕಾಗಿ ಬರುತ್ತದೆ. ಯಾಕೆ? ಅವರಿಗೆ ಶಾಲೆಯಲ್ಲಿರುವ ಭಾಷೆ ಒಂದು, ಮನೆಯಲ್ಲಿ ಮಾತಾಡುವ ಭಾಷೆ ಇನ್ನೊಂದು. ಆದ್ದರಿಂದ ಕೆಲವು ಹೆತ್ತವರು ಆ ಎರಡೂ ಭಾಷೆಗಳಲ್ಲಿ ನಮ್ಮ ಸಾಹಿತ್ಯ, ಆಡಿಯೊ ರೆಕಾರ್ಡಿಂಗ್‌, ವಿಡಿಯೊಗಳನ್ನು ಬಳಸುತ್ತಾರೆ. ವಲಸೆಬಂದಿರುವ ಹೆತ್ತವರು ತಮ್ಮ ಮಕ್ಕಳಿಗೆ ಯೆಹೋವನ ಹತ್ತಿರ ಬರಲು ಸಹಾಯ ಮಾಡಲಿಕ್ಕಾಗಿ ಹೆಚ್ಚಿನ ಸಮಯ ಕೊಡಬೇಕಾಗುತ್ತದೆ, ಹೆಚ್ಚಿನ ಪ್ರಯತ್ನ ಮಾಡಬೇಕಾಗುತ್ತದೆ.

ನೀವು ಯಾವ ಭಾಷೆಯ ಸಭೆಗೆ ಹೋಗಬೇಕು?

10. (ಎ) ಕುಟುಂಬ ಯಾವ ಭಾಷೆಯ ಸಭೆಗೆ ಹೋಗಬೇಕೆಂದು ಯಾರು ತೀರ್ಮಾನಿಸಬೇಕು? (ಬಿ) ಈ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವ ಮುಂಚೆ ಕುಟುಂಬದ ಶಿರಸ್ಸು ಏನು ಮಾಡಬೇಕು?

10 “ಪರದೇಶದ” ಸಾಕ್ಷಿಗಳು ತಮ್ಮ ಭಾಷೆಯನ್ನಾಡುವ ಸಭೆಯಿಂದ ದೂರದಲ್ಲಿ ವಾಸಿಸುತ್ತಿರುವಾಗ, ಸ್ಥಳೀಯ ಭಾಷೆಯ ಸಭೆಗೆ ಹೋಗಬೇಕಾಗಿ ಬರುತ್ತದೆ. (ಕೀರ್ತ. 146:9) ಆದರೆ ತಮ್ಮ ಭಾಷೆಯ ಸಭೆಯು ಹತ್ತಿರದಲ್ಲಿದೆ, ಸ್ಥಳೀಯ ಭಾಷೆಯ ಸಭೆಯೂ ಹತ್ತಿರದಲ್ಲೇ ಇದೆಯೆಂದು ನೆನಸಿ. ಆಗ ಯಾವ ಸಭೆಗೆ ಹೋದರೆ ತನ್ನ ಕುಟುಂಬಕ್ಕೆ ಒಳ್ಳೇದೆಂದು ಕುಟುಂಬದ ಶಿರಸ್ಸು ತೀರ್ಮಾನಿಸಬೇಕು. ಆ ತೀರ್ಮಾನ ಮಾಡುವ ಮುಂಚೆ ಚೆನ್ನಾಗಿ ಯೋಚಿಸಬೇಕು, ಪ್ರಾರ್ಥಿಸಬೇಕು. ಹೆಂಡತಿ, ಮಕ್ಕಳ ಜೊತೆ ಇದರ ಬಗ್ಗೆ ಮಾತಾಡಬೇಕು. (1 ಕೊರಿಂ. 11:3) ಅವನು ಯಾವೆಲ್ಲ ಅಂಶಗಳ ಬಗ್ಗೆ ಯೋಚಿಸಬೇಕು? ಯಾವ ಬೈಬಲ್‌ ತತ್ವಗಳನ್ನು ಮನಸ್ಸಿನಲ್ಲಿಟ್ಟು ತೀರ್ಮಾನ ಮಾಡಬೇಕು?

11, 12. (ಎ) ಮಕ್ಕಳಿಗೆ ಕೂಟಗಳಿಂದ ಎಷ್ಟು ಪ್ರಯೋಜನವಾಗುತ್ತದೆ ಎನ್ನುವುದರ ಮೇಲೆ ಭಾಷೆ ಹೇಗೆ ಪ್ರಭಾವ ಬೀರುತ್ತದೆ? (ಬಿ) ಕೆಲವು ಮಕ್ಕಳಿಗೆ ಹೆತ್ತವರ ಭಾಷೆ ಕಲಿಯಲು ಮನಸ್ಸಿರುವುದಿಲ್ಲ ಏಕೆ?

11 ಮಕ್ಕಳಿಗೆ ನಿಜವಾಗಿ ಏನು ಅಗತ್ಯ ಎನ್ನುವುದನ್ನು ಹೆತ್ತವರು ಯೋಚಿಸಬೇಕು. ಬೈಬಲ್‌ ಸತ್ಯಗಳು ಮಕ್ಕಳ ಮನಸ್ಸಿಗೆ ನಾಟಬೇಕಾದರೆ ಪ್ರತಿ ವಾರ ಕೂಟಗಳಲ್ಲಿ ಸಿಗುವ ಕೆಲವು ತಾಸಿನ ಬೈಬಲ್‌ ಬೋಧನೆ ಸಾಕಾಗುವುದಿಲ್ಲ ನಿಜ. ಆದರೂ ಇದರ ಬಗ್ಗೆ ಸ್ವಲ್ಪ ಯೋಚಿಸಿ: ಮಕ್ಕಳಿಗೆ ಚೆನ್ನಾಗಿ ಗೊತ್ತಿರುವ ಭಾಷೆಯ ಕೂಟಗಳಿಗೆ ಹಾಜರಾದರೆ ಅವರಿಗೆ ಚೆನ್ನಾಗಿ ಅರ್ಥವಾಗುತ್ತದೆ. ಹೀಗೆ ಅಲ್ಲಿ ಉಪಸ್ಥಿತರಿರುವುದರಿಂದಲೇ ಅವರಿಗೆ ತುಂಬ ಪ್ರಯೋಜನ ಸಿಗುತ್ತದೆ. ಇದು ಬಹುಶಃ ಹೆತ್ತವರಿಗೇ ಗೊತ್ತಾಗಲಿಕ್ಕಿಲ್ಲ. ಒಂದುವೇಳೆ ಮಕ್ಕಳಿಗೆ ಭಾಷೆಯೇ ಸರಿಯಾಗಿ ಅರ್ಥ ಆಗದ್ದಿದರೆ ಆ ಸಭೆಯಲ್ಲಿದ್ದೂ ಪ್ರಯೋಜನ ಆಗಲಿಕ್ಕಿಲ್ಲ. (1 ಕೊರಿಂಥ 14:9, 11 ಓದಿ.) ಅಷ್ಟುಮಾತ್ರವಲ್ಲ ಮಕ್ಕಳು ದೊಡ್ಡವರಾಗುತ್ತಾ ಹೋದಂತೆ ಹೆತ್ತವರ ಭಾಷೆ ಮಕ್ಕಳ ಯೋಚನಾ ರೀತಿ ಮತ್ತು ಭಾವನೆಗಳ ಮೇಲೆ ಪ್ರಭಾವ ಬೀರಲಿಕ್ಕಿಲ್ಲ. ಕೆಲವು ಮಕ್ಕಳು ಹೆತ್ತವರ ಭಾಷೆಯಲ್ಲಿ ಉತ್ತರ ಕೊಡಲು, ಭಾಷಣ ಕೊಡಲು, ಸೇವೆಯಲ್ಲಿ ಮಾತಾಡಲು ಕಲಿಯಬಹುದು. ಆದರೆ ಅವರ ಮಾತುಗಳು, ವಿಚಾರಗಳು ಹೃದಯದಿಂದ ಬರಲಿಕ್ಕಿಲ್ಲ.

12 ಮಕ್ಕಳ ವ್ಯಕ್ತಿತ್ವ, ಅಭಿಪ್ರಾಯಗಳ ಮೇಲೆ ಭಾಷೆ ಮಾತ್ರವಲ್ಲ ಬೇರೆ ವಿಷಯಗಳೂ ಪ್ರಭಾವ ಬೀರುತ್ತವೆ. ಈ ಹಿಂದೆ ತಿಳಿಸಲಾದ ಜೋಶುವ ಎಂಬವನ ವಿಷಯದಲ್ಲಿ ಇದು ಸತ್ಯವಾಗಿತ್ತು. ಅದನ್ನೇ ಅವನ ಅಕ್ಕ ಎಸ್ತರ್‌ ಹೇಳಿದ್ದು: “ಎಳೆಯ ಮಕ್ಕಳಿಗೆ ಹೆತ್ತವರ ಭಾಷೆಯ ಜೊತೆಗೆ ಅವರ ಸಂಸ್ಕೃತಿ, ಧರ್ಮವೂ ಪ್ರಭಾವ ಬೀರುತ್ತದೆ.” ಆದ್ದರಿಂದ ಒಂದುವೇಳೆ ಮಕ್ಕಳಿಗೆ ತಮ್ಮ ಹೆತ್ತವರ ಸಂಸ್ಕೃತಿಗೂ ತಮಗೂ ಸಂಬಂಧ ಇಲ್ಲ ಎಂಬ ಭಾವನೆ ಇದ್ದರೆ ಅವರಿಗೆ ಹೆತ್ತವರ ಭಾಷೆ ಮತ್ತು ಧರ್ಮದ ಬಗ್ಗೆ ಕಲಿಯಲು ಇಷ್ಟವಾಗುವುದಿಲ್ಲ. ವಲಸೆಬಂದಿರುವ ಹೆತ್ತವರು ಇಂಥ ಸನ್ನಿವೇಶದಲ್ಲಿ ಏನು ಮಾಡಬಹುದು?

13, 14. (ಎ) ವಲಸೆಹೋದ ಒಂದು ದಂಪತಿ ತಮ್ಮ ಮಕ್ಕಳ ಜೊತೆ ಸ್ಥಳೀಯ ಭಾಷೆಯ ಸಭೆಗೆ ಹೋಗಲಾರಂಭಿಸಿದ್ದು ಏಕೆ? (ಬಿ) ಆ ಹೆತ್ತವರು ತಮ್ಮ ಸ್ವಂತ ಆಧ್ಯಾತ್ಮಿಕತೆಯನ್ನು ಬಲವಾಗಿರಿಸಲು ಏನು ಮಾಡಿದರು?

13 ಕ್ರೈಸ್ತ ಹೆತ್ತವರು ತಮಗೇನು ಇಷ್ಟ, ಏನು ಸುಲಭ ಎನ್ನುವುದಕ್ಕಿಂತ ತಮ್ಮ ಮಕ್ಕಳಿಗೆ ಏನು ಅಗತ್ಯ ಎಂಬದಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. (1 ಕೊರಿಂ. 10:24) ಜೋಶುವ ಮತ್ತು ಎಸ್ತರಳ ತಂದೆ ಸ್ಯಾಮುವೆಲ್‌ ಹೇಳುವುದು: “ಆಧ್ಯಾತ್ಮಿಕವಾಗಿ ಬೆಳೆಯಲು ನಮ್ಮ ಮಕ್ಕಳಿಗೆ ಯಾವ ಭಾಷೆ ಹೆಚ್ಚು ಸಹಾಯ ಮಾಡುತ್ತದೆಂದು ಗಮನಿಸಿದೆವು. ತೀರ್ಮಾನ ಮಾಡಲು ವಿವೇಕ ಕೊಡುವಂತೆ ಪ್ರಾರ್ಥಿಸಿದೆವು. ಇದಕ್ಕೆ ಸಿಕ್ಕಿದ ಉತ್ತರ ಹೆತ್ತವರಾದ ನಮಗೆ ಅನುಕೂಲ ಆಗಿರಲಿಲ್ಲ. ಆದರೆ ನಮ್ಮ ಭಾಷೆಯ ಕೂಟಗಳಿಂದ ಮಕ್ಕಳಿಗೆ ಪ್ರಯೋಜನ ಸಿಗುತ್ತಿಲ್ಲವೆಂದು ನೋಡಿದಾಗ, ನಾವು ಸ್ಥಳೀಯ ಭಾಷೆಯ ಸಭೆಗೆ ಹೋಗಲು ತೀರ್ಮಾನಿಸಿದೆವು. ನಾವು ತಪ್ಪದೇ ಒಟ್ಟಿಗೆ ಕೂಟಗಳಿಗೆ, ಸೇವೆಗೆ ಹೋದೆವು. ಸ್ಥಳೀಯ ಸಭೆಯವರನ್ನು ನಮ್ಮ ಮನೆಗೆ ಊಟಕ್ಕೆ ಕರೆದೆವು, ಅವರ ಜೊತೆ ಪ್ರವಾಸಗಳಿಗೆ ಹೋದೆವು. ಹೀಗೆ ನಮ್ಮ ಮಕ್ಕಳಿಗೆ ಸಹೋದರರ ಪರಿಚಯವಾಯಿತು. ಜೊತೆಗೆ ಅವರು ಯೆಹೋವನನ್ನು ತಮ್ಮ ದೇವರಾಗಿ ಮಾತ್ರವಲ್ಲ ತಮ್ಮ ತಂದೆ ಮತ್ತು ಸ್ನೇಹಿತನಾಗಿಯೂ ಮಾಡಿಕೊಳ್ಳಲು ಸಹಾಯವಾಯಿತು. ಅವರು ನಮ್ಮ ಭಾಷೆಯನ್ನು ಚೆನ್ನಾಗಿ ಕಲಿಯುವುದಕ್ಕಿಂತ ಇದೇ ಹೆಚ್ಚು ಮುಖ್ಯ ಎಂದು ನಮಗನಿಸಿತು.”

14 ಸ್ಯಾಮುವೆಲ್‌ ಮುಂದುವರಿಸಿ ಹೇಳಿದ್ದು: “ನಮ್ಮ ಆಧ್ಯಾತ್ಮಿಕತೆಯನ್ನು ಬಲವಾಗಿರಿಸಲು ನಾನು ಮತ್ತು ನನ್ನ ಹೆಂಡತಿ ನಮ್ಮ ಭಾಷೆಯ ಕೂಟಗಳಿಗೆ ಕೂಡ ಹಾಜರಾದೆವು. ಇದರಿಂದ ನಾವು ತುಂಬ ಕಾರ್ಯಮಗ್ನರಾಗಿದ್ದೆವು. ತುಂಬ ಸುಸ್ತು ಸಹ ಆಗುತ್ತಿತ್ತು. ಆದರೆ ನಮ್ಮ ಪ್ರಯತ್ನಗಳನ್ನು ಮತ್ತು ತ್ಯಾಗಗಳನ್ನು ಯೆಹೋವನು ಆಶೀರ್ವದಿಸಿದ್ದಕ್ಕಾಗಿ ಆತನಿಗೆ ಧನ್ಯವಾದ ಹೇಳುತ್ತೇವೆ. ಈಗ ನಮ್ಮ ಮೂವರೂ ಮಕ್ಕಳು ಪೂರ್ಣ ಸಮಯ ಯೆಹೋವನ ಸೇವೆ ಮಾಡುತ್ತಿದ್ದಾರೆ.”

ಯುವ ಜನರು ಏನು ಮಾಡಬಹುದು?

15. ಕ್ರಿಸ್ಟಿನಾ ಎಂಬ ಸಹೋದರಿಗೆ ಸ್ಥಳೀಯ ಭಾಷೆಯ ಸಭೆಗೆ ಹೋದರೆ ಯೆಹೋವನ ಸೇವೆಯನ್ನು ಚೆನ್ನಾಗಿ ಮಾಡಬಹುದೆಂದು ಏಕೆ ಅನಿಸಿತು?

15 ಚೆನ್ನಾಗಿ ಅರ್ಥವಾಗುವ ಭಾಷೆಯ ಸಭೆಗೆ ಹೋದರೆ ಯೆಹೋವನ ಸೇವೆಯನ್ನು ಉತ್ತಮವಾಗಿ ಮಾಡಬಹುದೆಂದು ದೊಡ್ಡವರಾದ ಮೇಲೆ ಮಕ್ಕಳಿಗೆ ಅನಿಸಬಹುದು. ಒಂದುವೇಳೆ ಅವರು ಹಾಗೆ ಹೋದರೆ, ‘ನಮ್ಮ ಮಕ್ಕಳು ನಮ್ಮನ್ನು ಬಿಟ್ಟುಹೋಗುತ್ತಿದ್ದಾರೆ’ ಎಂಬ ಭಾವನೆ ಹೆತ್ತವರಿಗೆ ಬರಬಾರದು. ಕ್ರಿಸ್ಟಿನಾ ಎಂಬಾಕೆ ಹೇಳುವುದು: “ನನ್ನ ಹೆತ್ತವರ ಭಾಷೆ ನನಗೆ ಅಲ್ಪಸ್ವಲ್ಪ ಬರುತ್ತಿತ್ತು. ಆದರೆ ಅವರ ಸಭೆಯ ಕೂಟಗಳಲ್ಲಿ ಬಳಸಲಾಗುತ್ತಿದ್ದ ಭಾಷೆ ನನಗೆ ತುಂಬ ಕಷ್ಟ ಆಗುತ್ತಿತ್ತು! 12 ವರ್ಷದವಳಾಗಿದ್ದಾಗ ನಾನು ಶಾಲೆಯಲ್ಲಿ ಕಲಿಯುತ್ತಿದ್ದ ಭಾಷೆಯಲ್ಲಿ ನಡೆದ ಒಂದು ಅಧಿವೇಶನಕ್ಕೆ ಹಾಜರಾದೆ. ನಾನು ಕೇಳುತ್ತಿರುವ ವಿಷಯಗಳು ಸತ್ಯ ಎಂದು ನನಗೆ ಮೊದಲ ಬಾರಿ ಗೊತ್ತಾದದ್ದು ಆಗಲೇ! ನನ್ನ ಬದುಕಿನ ಇನ್ನೊಂದು ಮಹತ್ವದ ಘಟ್ಟ ಯಾವುದೆಂದರೆ, ನಾನು ಶಾಲೆಯಲ್ಲಿ ಕಲಿಯುತ್ತಿದ್ದ ಭಾಷೆಯಲ್ಲಿ ಪ್ರಾರ್ಥನೆ ಮಾಡಲಾರಂಭಿಸಿದ್ದೇ. ಆ ಭಾಷೆಯಲ್ಲಿ ನಾನು ಯೆಹೋವನೊಟ್ಟಿಗೆ ಮನಬಿಚ್ಚಿ ಮಾತಾಡಲು ಆಗುತ್ತಿತ್ತು.” (ಅ. ಕಾ. 2:11, 41) ಕ್ರಿಸ್ಟಿನಾಗೆ 18 ವರ್ಷ ಆದಾಗ ತನ್ನ ತಂದೆತಾಯಿ ಜೊತೆ ಮಾತಾಡಿ, ಸ್ಥಳೀಯ ಭಾಷೆಯ ಸಭೆಗೆ ಹೋಗುವ ತೀರ್ಮಾನ ಮಾಡಿದಳು. “ನನ್ನ ಶಾಲೆಯ ಭಾಷೆಯಲ್ಲಿ ಯೆಹೋವನ ಬಗ್ಗೆ ಕಲಿತಾಗ ನಾನು ಕಲಿತದ್ದನ್ನು ಕಾರ್ಯರೂಪಕ್ಕೆ ಹಾಕುವ ಪ್ರೇರಣೆ ಸಿಕ್ಕಿತು.” ಸ್ವಲ್ಪ ಸಮಯದಲ್ಲೇ ಅವಳು ಪಯನೀಯರ್‌ ಆದಳು. ಈಗ ತುಂಬ ಸಂತೋಷವಾಗಿದ್ದಾಳೆ.

16. ನಾಡಿಯ ಎಂಬ ಸಹೋದರಿ ತನ್ನ ಹೆತ್ತವರ ಭಾಷೆಯ ಸಭೆಯಲ್ಲೇ ಉಳಿದದ್ದಕ್ಕೆ ಯಾಕೆ ಸಂತೋಷಪಡುತ್ತಾಳೆ?

16 ಯುವ ಜನರೇ, ಸ್ಥಳೀಯ ಭಾಷೆಯ ಸಭೆಗೆ ಸೇರಬೇಕೆಂದು ನಿಮಗನಿಸುತ್ತಿದೆಯಾ? ಹಾಗೆ ಅನಿಸಿದರೆ, ಯಾಕೆ ಸೇರಲು ಇಷ್ಟಪಡುತ್ತೀರೆಂದು ನಿಮ್ಮನ್ನೇ ಕೇಳಿಕೊಳ್ಳಿ. ಯೆಹೋವನಿಗೆ ಹೆಚ್ಚು ಆಪ್ತರಾಗಲು ನಿಮಗೆ ಸಹಾಯವಾಗುತ್ತದೆ ಎಂಬ ಕಾರಣಕ್ಕಾ? (ಯಾಕೋ. 4:8) ಅಥವಾ ನಿಮ್ಮ ಹೆತ್ತವರು ಯಾವಾಗಲೂ ನಿಮ್ಮ ಮೇಲೆ ಕಣ್ಣಿಡುತ್ತಾರೆ, ಅವರಿಂದ ತಪ್ಪಿಸಿಕೊಳ್ಳಬೇಕು ಎಂಬ ಕಾರಣಕ್ಕಾ? ಅಥವಾ ಇನ್ನೊಂದು ಭಾಷೆ ಕಲಿಯಲು ಕಷ್ಟಪಡುವುದು ಬೇಡ ಎಂಬ ಕಾರಣಕ್ಕಾ? ಈಗ ಬೆತೆಲಿನಲ್ಲಿ ಸೇವೆಮಾಡುತ್ತಿರುವ ನಾಡಿಯ ಎಂಬಾಕೆ ಹೇಳುವುದು: “ನಾನೂ ನನ್ನ ಒಡಹುಟ್ಟಿದವರು ಹದಿಹರೆಯಕ್ಕೆ ಕಾಲಿಟ್ಟಾಗ, ಸ್ಥಳೀಯ ಭಾಷೆಯ ಸಭೆಗೆ ಹೋಗಬೇಕು ಅಂದುಕೊಂಡೆವು.” ಆದರೆ ಅವಳ ಹೆತ್ತವರಿಗೆ ಇದರಿಂದ ತಮ್ಮ ಮಕ್ಕಳ ಆಧ್ಯಾತ್ಮಿಕತೆಗೆ ಪೆಟ್ಟುಬೀಳಬಹುದು ಎಂದನಿಸಿತು. “ಅಪ್ಪಅಮ್ಮ ನಮಗೆ ತಮ್ಮ ಭಾಷೆಯನ್ನು ಕಲಿಸಲು ಶ್ರಮಪಟ್ಟಿದ್ದು ಮತ್ತು ನಮ್ಮನ್ನು ಆ ಭಾಷೆಯ ಸಭೆಯಲ್ಲೇ ಇಟ್ಟದ್ದು ಒಳ್ಳೇದಾಯಿತೆಂದು ನಮಗೆ ಈಗ ಅನಿಸುತ್ತದೆ. ಇದರಿಂದಾಗಿ ನಮ್ಮ ಜೀವನ ಹೆಚ್ಚು ಅರ್ಥಭರಿತವಾಯಿತು. ಯೆಹೋವನನ್ನು ತಿಳಿದುಕೊಳ್ಳುವಂತೆ ಇತರರಿಗೆ ಸಹಾಯಮಾಡಲು ಹೆಚ್ಚಿನ ಅವಕಾಶಗಳೂ ಸಿಕ್ಕಿದವು.”

ಸಭೆಯವರು ಹೇಗೆ ಸಹಾಯ ಮಾಡಬಹುದು?

17. (ಎ) ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಯೆಹೋವನು ಯಾರಿಗೆ ಕೊಟ್ಟಿದ್ದಾನೆ? (ಬಿ) ಮಕ್ಕಳಿಗೆ ಸತ್ಯ ಕಲಿಸಲು ಹೆತ್ತವರು ಹೇಗೆ ಸಹಾಯ ಪಡೆದುಕೊಳ್ಳಬಹುದು?

17 ಮಕ್ಕಳಿಗೆ ಸತ್ಯವನ್ನು ಕಲಿಸುವ ಜವಾಬ್ದಾರಿಯನ್ನು ಯೆಹೋವನು ಹೆತ್ತವರಿಗೆ ಕೊಟ್ಟಿದ್ದಾನೆ, ಅಜ್ಜಅಜ್ಜಿಗೆ ಅಥವಾ ಬೇರೆಯವರಿಗಲ್ಲ. (ಜ್ಞಾನೋಕ್ತಿ 1:8; 31:10, 27, 28 ಓದಿ.) ಹಾಗಿದ್ದರೂ ಸ್ಥಳೀಯ ಭಾಷೆ ಗೊತ್ತಿಲ್ಲದ ಹೆತ್ತವರಿಗೆ ತಮ್ಮ ಮಕ್ಕಳ ಹೃದಯಕ್ಕೆ ನಾಟುವಂಥ ವಿಧದಲ್ಲಿ ಕಲಿಸಲು ಬೇರೆಯವರ ಸಹಾಯ ಬೇಕಾಗುತ್ತದೆ. ಉದಾಹರಣೆಗೆ ಕುಟುಂಬ ಆರಾಧನೆ ನಡೆಸಲಿಕ್ಕಾಗಿ ಸಲಹೆಗಳನ್ನು ಕೊಡುವಂತೆ ಅಥವಾ ತಮ್ಮ ಮಕ್ಕಳಿಗೆ ಒಳ್ಳೇ ಸ್ನೇಹಿತರನ್ನು ಕಂಡುಕೊಳ್ಳಲು ಸಹಾಯಮಾಡುವಂತೆ ಹೆತ್ತವರು ಸಭಾ ಹಿರಿಯರನ್ನು ಕೇಳಬಹುದು. ಅವರು ಹೀಗೆ ಸಹಾಯ ಕೇಳುವಾಗ, ಮಕ್ಕಳನ್ನು ಬೆಳೆಸುವ ಜವಾಬ್ದಾರಿಯಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂದು ಅರ್ಥವಲ್ಲ. ಬದಲಾಗಿ ಹೆತ್ತವರು ಮಕ್ಕಳನ್ನು ‘ಯೆಹೋವನ ಶಿಸ್ತಿನಲ್ಲಿ ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಸಲು’ ಬಯಸುತ್ತಿದ್ದಾರೆ ಎಂದರ್ಥ.—ಎಫೆ. 6:4.

ಸಭೆಯವರೊಂದಿಗೆ ಸಹವಾಸ ಮಾಡುವುದರಿಂದ ಮಕ್ಕಳಿಗೂ ಹೆತ್ತವರಿಗೂ ಪ್ರಯೋಜನವಾಗುತ್ತದೆ (ಪ್ಯಾರ 18, 19 ನೋಡಿ)

18, 19. (ಎ) ಮಕ್ಕಳಿಗೆ ಬೇರೆ ಕ್ರೈಸ್ತರು ಹೇಗೆ ಸಹಾಯ ಮಾಡಬಹುದು? (ಬಿ) ಹೆತ್ತವರ ಜವಾಬ್ದಾರಿ ಏನು?

18 ತಮ್ಮ ಮಕ್ಕಳಿಗೆ ಸಹಾಯ ಮಾಡಲು ಹೆತ್ತವರು ಬೇರೆ ಕುಟುಂಬಗಳನ್ನು ತಮ್ಮ ಕುಟುಂಬ ಆರಾಧನೆಗೆ ಆಗಾಗ ಆಮಂತ್ರಿಸಬಹುದು. ಅನೇಕ ಯುವ ಜನರು ಬೇರೆ ಕ್ರೈಸ್ತರ ಜೊತೆ ಸೇವೆಗೆ ಹೋಗುವ ಮತ್ತು ಬೇರೆ ಚಟುವಟಿಕೆಯಲ್ಲಿ ಆನಂದಿಸುವ ಮೂಲಕವೂ ಅವರಿಂದ ಅನೇಕ ವಿಷಯಗಳನ್ನು ಕಲಿಯುತ್ತಾರೆ. (ಜ್ಞಾನೋ. 27:17) ಈ ಹಿಂದೆ ತಿಳಿಸಲಾದ ಶ್ಯಾನ್‌ ಹೇಳುವುದು: “ನನಗೆ ವೈಯಕ್ತಿಕ ಗಮನ, ಸಹಾಯ ಕೊಟ್ಟ ಸಹೋದರರು ನನಗಿನ್ನೂ ನೆನಪಿದ್ದಾರೆ. ಕೂಟದಲ್ಲಿ ವಿದ್ಯಾರ್ಥಿ ಭಾಷಣದ ನೇಮಕಗಳಿಗೆ ಅವರು ಸಹಾಯ ಕೊಡುತ್ತಿದ್ದಾಗ ನಾನು ಹೆಚ್ಚು ಕಲಿಯಲಿಕ್ಕಾಗುತ್ತಿತ್ತು. ನಾವೆಲ್ಲರೂ ಒಂದು ಗುಂಪಾಗಿ ವಿನೋದವಿಹಾರದಲ್ಲಿ ಆನಂದಿಸುತ್ತಿದ್ದೆವು.”

19 ತಮ್ಮ ಮಕ್ಕಳಿಗೆ ಸಹಾಯ ಮಾಡಲು ಹೆತ್ತವರು ಆರಿಸಿಕೊಳ್ಳುವ ಬೇರೆ ಕ್ರೈಸ್ತರು ಏನು ಮಾಡಬೇಕು? ಆ ಮಕ್ಕಳು ಹೆತ್ತವರಿಗೆ ಗೌರವ ಕೊಡುವಂತೆ ಪ್ರೋತ್ಸಾಹಿಸಬೇಕು. ಹೆತ್ತವರ ಬಗ್ಗೆ ಒಳ್ಳೇ ಮಾತುಗಳನ್ನಾಡಬೇಕು. ಮಕ್ಕಳನ್ನು ಬೆಳೆಸಲು ಹೆತ್ತವರಿಗಿರುವ ಜವಾಬ್ದಾರಿಯನ್ನು ಇವರು ವಹಿಸಿಕೊಳ್ಳಬಾರದು. ಅಲ್ಲದೆ, ಸಭೆಯವರಾಗಲಿ ಸಭೆಯ ಹೊರಗಿನವರಾಗಲಿ ನೈತಿಕವಾಗಿ ತಪ್ಪೆಂದು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಇವರು ನಡಕೊಳ್ಳಬಾರದು. (1 ಪೇತ್ರ 2:12) ಹೆತ್ತವರು ಬೇರೆಯವರ ಸಹಾಯ ಕೇಳಬಹುದಾದರೂ, ಮಕ್ಕಳಿಗೆ ಸತ್ಯವನ್ನು ಕಲಿಸುವ ಜವಾಬ್ದಾರಿ ಅವರದ್ದು. ಬೇರೆ ಕ್ರೈಸ್ತರು ಯಾವ ಸಹಾಯ, ಹೇಗೆ ಸಹಾಯ ಕೊಡುತ್ತಿದ್ದಾರೆ ಎಂಬ ವಿಷಯದಲ್ಲಿ ನಿಗಾ ವಹಿಸಬೇಕು.

20. ಮಕ್ಕಳು ಯೆಹೋವನ ನಂಬಿಗಸ್ತ ಸೇವಕರಾಗಲು ಹೆತ್ತವರು ಹೇಗೆ ಸಹಾಯ ಮಾಡಬಹುದು?

20 ಹೆತ್ತವರೇ, ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿ. ನಿಮ್ಮಿಂದಾಗುವ ಎಲ್ಲ ಪ್ರಯತ್ನವನ್ನೂ ಮಾಡಿ. (2 ಪೂರ್ವಕಾಲವೃತ್ತಾಂತ 15:7 ಓದಿ.) ನಿಮ್ಮ ಇಷ್ಟಕ್ಕಿಂತ ಯೆಹೋವನ ಜೊತೆ ನಿಮ್ಮ ಮಕ್ಕಳು ಬೆಳೆಸಿಕೊಳ್ಳಬೇಕಾದ ಸ್ನೇಹಕ್ಕೆ ಹೆಚ್ಚು ಮಹತ್ವ ಕೊಡಿ. ದೇವರ ವಾಕ್ಯವನ್ನು ಅವರ ಹೃದಯಕ್ಕೆ ನಾಟಿಸಲು ಸಾಧ್ಯವಿರುವುದನ್ನೆಲ್ಲ ಮಾಡಿ. ಅವರು ಯೆಹೋವನ ಸೇವಕರಾಗುತ್ತಾರೆಂಬ ನಂಬಿಕೆ ನಿಮಗೆ ಯಾವಾಗಲೂ ಇರಲಿ. ಅವರು ದೇವರ ವಾಕ್ಯವನ್ನೂ ನಿಮ್ಮ ಒಳ್ಳೇ ಮಾದರಿಯನ್ನೂ ಅನುಸರಿಸುವಾಗ ನಿಮಗೂ ಅಪೊಸ್ತಲ ಯೋಹಾನನಿಗೆ ಅನಿಸಿದಂತೆಯೇ ಅನಿಸುವುದು. ಅವನು ತನ್ನ ಆಧ್ಯಾತ್ಮಿಕ ಮಕ್ಕಳ ಬಗ್ಗೆ ಹೇಳಿದ್ದು: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವುದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.”—3 ಯೋಹಾ. 4, ಪವಿತ್ರ ಗ್ರಂಥ ಭಾಷಾಂತರ.

^ ಪ್ಯಾರ. 7 ಏಪ್ರಿಲ್‌-ಜೂನ್‌ 2007ರ ಎಚ್ಚರ! ಪತ್ರಿಕೆಯ ಪುಟ 10-12ರಲ್ಲಿ “ಹೊಸ ಭಾಷೆಯನ್ನು ಕಲಿಯಲು ನಿಮಗೆ ಸಾಧ್ಯ!” ಎಂಬ ಲೇಖನ ನೋಡಿ.