ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?”

“ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?”

“ಯೋಹಾನನ ಮಗನಾದ ಸೀಮೋನನೇ, ನೀನು ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?”—ಯೋಹಾ. 21:15.

ಗೀತೆಗಳು: 128, 45

1, 2. ಇಡೀ ರಾತ್ರಿ ಮೀನಿಗಾಗಿ ಬಲೆಬೀಸಿದ ನಂತರ ಪೇತ್ರ ಕಲಿತ ಪಾಠವೇನು?

ಯೇಸುವಿನ ಶಿಷ್ಯರಲ್ಲಿ ಏಳು ಮಂದಿ ಗಲಿಲಾಯ ಸಮುದ್ರದಲ್ಲಿ ರಾತ್ರಿಯಿಡೀ ಮೀನಿಗಾಗಿ ಬಲೆಬೀಸಿದರು. ಬೆಳಗಾದರೂ ಒಂದೇ ಒಂದು ಮೀನು ಸಿಗಲಿಲ್ಲ. ಪುನರುತ್ಥಾನ ಆಗಿದ್ದ ಯೇಸು ಇದನ್ನು ದಡದಲ್ಲಿ ನಿಂತು ನೋಡುತ್ತಿದ್ದನು. “ಅವನು ಅವರಿಗೆ ‘ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿ; ಆಗ ನಿಮಗೆ ಕೆಲವು ಮೀನುಗಳು ಸಿಗುವವು’ ಎಂದನು. ಅವರು ಬಲೆಯನ್ನು ಬೀಸಿದಾಗ ಅಸಂಖ್ಯಾತ ಮೀನುಗಳು ಸಿಕ್ಕಿದ್ದರಿಂದ ಅವರಿಗೆ ಬಲೆಯನ್ನು ಎಳೆಯಲು ಆಗದೇ ಹೋಯಿತು.”—ಯೋಹಾ. 21:1-6.

2 ಯೇಸು ತನ್ನ ಶಿಷ್ಯರಿಗೆ ಬೆಳಗ್ಗಿನ ಉಪಹಾರಕ್ಕಾಗಿ ರೊಟ್ಟಿ ಮತ್ತು ಮೀನು ಕೊಟ್ಟನು. ನಂತರ ಸೀಮೋನ ಪೇತ್ರನ ಕಡೆಗೆ ತಿರುಗಿ “ಯೋಹಾನನ ಮಗನಾದ ಸೀಮೋನನೇ, ನೀನು ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?” ಎಂದು ಕೇಳಿದನು. ಯೇಸು ಯಾವುದರ ಬಗ್ಗೆ ಮಾತಾಡುತ್ತಿದ್ದನು? ಪೇತ್ರನಿಗೆ ಮೀನು ಹಿಡಿಯುವ ಕೆಲಸ ತುಂಬ ಇಷ್ಟ ಎಂದು ಯೇಸುವಿಗೆ ಗೊತ್ತಿತ್ತು. ಆದ್ದರಿಂದ ಬಹುಶಃ ಯೇಸು, ‘ನೀನು ಮೀನುಗಾರಿಕೆಗಿಂತ ನನ್ನನ್ನು, ನಾನು ಕಲಿಸಿದ ವಿಷಯಗಳನ್ನು ಹೆಚ್ಚು ಪ್ರೀತಿಸುತ್ತೀಯಾ’ ಎಂದು ಕೇಳುವಂತಿತ್ತು. ಅದಕ್ಕೆ ಪೇತ್ರನು “ಕರ್ತನೇ, ನನಗೆ ನಿನ್ನ ಮೇಲೆ ಮಮತೆ ಇದೆ ಎಂಬುದನ್ನು ನೀನೇ ಬಲ್ಲೆ” ಎಂದನು. (ಯೋಹಾ. 21:15) ಪೇತ್ರನು ಒಂದು ಪಾಠ ಕಲಿತನು: ಅವನಿಗೆ ಬೇರೆಲ್ಲದಕ್ಕಿಂತ ಹೆಚ್ಚಾಗಿ ಕ್ರಿಸ್ತನ ಮೇಲಿರುವ ಪ್ರೀತಿ ಮುಖ್ಯವಾಗಿರಬೇಕು. ಅಂದಿನಿಂದ ಅವನು ತನ್ನ ಮಾತಿನಂತೆ ನಡೆದುಕೊಂಡನು. ಸಾರುವ ಕೆಲಸದಲ್ಲಿ ಮಗ್ನನಾಗಿರುವ ಮೂಲಕ ಕ್ರಿಸ್ತನ ಮೇಲಿರುವ ಪ್ರೀತಿಯನ್ನು ತೋರಿಸಿಕೊಟ್ಟನು. ಕ್ರೈಸ್ತ ಸಭೆಯಲ್ಲಿ ಒಬ್ಬ ಮುಖ್ಯ ಸದಸ್ಯನಾದನು.

3. ಕ್ರೈಸ್ತರು ಯಾವುದರ ಬಗ್ಗೆ ಜಾಗ್ರತೆ ವಹಿಸಬೇಕು?

3 ಪೇತ್ರನಿಗೆ ಯೇಸು ಹೇಳಿದ ಮಾತುಗಳಿಂದ ನಾವೇನು ಕಲಿಯಬಹುದು? ನಾವು ಯೇಸುವಿನ ಮೇಲೆ ಇಟ್ಟಿರುವ ಪ್ರೀತಿ ಕಡಿಮೆಯಾಗದಂತೆ ಜಾಗ್ರತೆ ವಹಿಸಬೇಕು. ಈ ಲೋಕದಲ್ಲಿ ಜೀವನ ಮಾಡುವಾಗ ತುಂಬ ಒತ್ತಡಗಳು, ಚಿಂತೆಗಳು, ಕಷ್ಟಗಳು ಇರುತ್ತವೆ ಎಂದು ಯೇಸುವಿಗೆ ಗೊತ್ತಿತ್ತು. ಬಿತ್ತುವವನ ದೃಷ್ಟಾಂತದಲ್ಲಿ, ಕೆಲವು ಜನರು “ರಾಜ್ಯದ ವಾಕ್ಯವನ್ನು” ಸ್ವೀಕರಿಸಿ ಮೊದಮೊದಲು ತುಂಬ ಹುರುಪು ತೋರಿಸುತ್ತಾರೆ ಎಂದು ಯೇಸು ಹೇಳಿದನು. ಆದರೆ ನಂತರ “ಈ ವಿಷಯಗಳ ವ್ಯವಸ್ಥೆಯ ಚಿಂತೆಯೂ ಐಶ್ವರ್ಯದ ಮೋಸಕರವಾದ ಪ್ರಭಾವವೂ” ಆ “ವಾಕ್ಯವನ್ನು ಅದುಮಿ” ಬಿಡುತ್ತದೆ ಮತ್ತು ಅವರು ಹುರುಪು ಕಳೆದುಕೊಳ್ಳುತ್ತಾರೆ ಎಂದೂ ಹೇಳಿದನು. (ಮತ್ತಾ. 13:19-22; ಮಾರ್ಕ 4:19) ನಾವು ಹುಷಾರಾಗಿಲ್ಲದಿದ್ದರೆ, ದಿನನಿತ್ಯ ಜೀವನದ ಚಿಂತೆಗಳು ಯೆಹೋವನ ಸೇವೆಯನ್ನು ನಾವು ಮಾಡದಂತೆ ತಡೆಯಲು ಸಾಧ್ಯವಿದೆ. ಹಾಗಾಗಿ ಯೇಸು ತನ್ನ ಶಿಷ್ಯರನ್ನು ಎಚ್ಚರಿಸಿದ್ದು: “ನಿಮ್ಮ ಹೃದಯಗಳು ಎಂದಿಗೂ ಅತಿಯಾದ ಭೋಜನ, ವಿಪರೀತವಾದ ಕುಡಿತ ಮತ್ತು ಜೀವನದ ಚಿಂತೆಗಳ ಭಾರದಿಂದ ಕುಗ್ಗಿಹೋಗದಂತೆ” ನೋಡಿಕೊಳ್ಳಿ.—ಲೂಕ 21:34.

4. ನಮಗೆ ಕ್ರಿಸ್ತನ ಮೇಲೆ ಗಾಢವಾದ ಪ್ರೀತಿ ಇದೆಯಾ ಎಂದು ಹೇಗೆ ತಿಳಿದುಕೊಳ್ಳಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

4 ಪೇತ್ರನಂತೆ ಕ್ರಿಸ್ತನ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸಲು ನಮ್ಮ ಜೀವನದಲ್ಲಿ ಸುವಾರ್ತೆ ಸಾರುವುದಕ್ಕೆ ಮೊದಲ ಸ್ಥಾನ ಕೊಡಬೇಕು. ಸುವಾರ್ತೆ ಸಾರುವ ಕೆಲಸವನ್ನು ಮೊದಲ ಸ್ಥಾನದಲ್ಲೇ ಇಡಲು ಏನು ಮಾಡಬೇಕು? ಈ ಪ್ರಶ್ನೆಗಳನ್ನು ಕೇಳಿಕೊಳ್ಳೋಣ: ‘ಜೀವನದಲ್ಲಿ ನಾನು ಯಾವುದನ್ನು ತುಂಬ ಪ್ರೀತಿಸುತ್ತೇನೆ? ನನಗೆ ಯಾವುದರಿಂದ ತುಂಬ ಸಂತೋಷ ಸಿಗುತ್ತದೆ? ಯೆಹೋವನ ಸೇವೆ ಮಾಡುವುದರಿಂದನಾ, ಬೇರೆ ಚಟುವಟಿಕೆಗಳಿಂದನಾ?’ ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಕ್ರಿಸ್ತನ ಮೇಲಿರುವ ಪ್ರೀತಿಯನ್ನು ಕಡಿಮೆ ಮಾಡಬಹುದಾದ ಮೂರು ವಿಷಯಗಳ ಬಗ್ಗೆ ನೋಡೋಣ. ಉದ್ಯೋಗ, ಆಟೋಟ-ಮನೋರಂಜನೆ, ಹಣ-ವಸ್ತುಗಳು.

ಉದ್ಯೋಗವನ್ನು ಅದರ ಸ್ಥಾನದಲ್ಲಿ ಇಡಿ

5. ಕುಟುಂಬದ ಶಿರಸ್ಸಿಗೆ ಯಾವ ಜವಾಬ್ದಾರಿ ಇದೆ?

5 ಪೇತ್ರನಿಗೆ ಮೀನು ಹಿಡಿಯುವ ಕೆಲಸ ಬರೀ ಅಚ್ಚುಮೆಚ್ಚಿನ ಕೆಲಸ ಮಾತ್ರ ಆಗಿರಲಿಲ್ಲ. ಅವನು ಆ ಕೆಲಸ ಮಾಡಿಯೇ ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಇಂದು ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಯೆಹೋವನು ಕುಟುಂಬದ ಶಿರಸ್ಸಿಗೆ ಕೊಟ್ಟಿದ್ದಾನೆ. (1 ತಿಮೊ. 5:8) ಆದ್ದರಿಂದ ಅವರು ಶ್ರಮಪಟ್ಟು ಕೆಲಸಮಾಡಬೇಕಾಗಿದೆ. ಆದರೆ ಈ ಕಡೇ ದಿವಸಗಳಲ್ಲಿ ಉದ್ಯೋಗವು ತುಂಬ ಒತ್ತಡ ಮತ್ತು ಚಿಂತೆಗೆ ಕಾರಣವಾಗಿದೆ.

6. ಈ ಲೋಕದಲ್ಲಿ ಉದ್ಯೋಗದಿಂದಾಗಿ ಜನರಿಗೆ ಒತ್ತಡ ಹೆಚ್ಚಾಗುತ್ತಿದೆ ಯಾಕೆ?

6 ಕೆಲಸಗಳು ಕಡಿಮೆಯಾಗಿವೆ. ಆದರೆ ಕೆಲಸ ಬೇಕಾಗಿರುವವರು ಜಾಸ್ತಿ ಇದ್ದಾರೆ. ಇದರಿಂದಾಗಿ ಪೈಪೋಟಿ ಹೆಚ್ಚಾಗಿದೆ. ಅನೇಕರು ಕಡಿಮೆ ಸಂಬಳ ಪಡೆದು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಮಾಲೀಕರು ಕಡಿಮೆ ಜನರನ್ನು ಬಳಸಿ ಹೆಚ್ಚು ಉತ್ಪಾದನೆ ಮಾಡಲು ಪ್ರಯತ್ನಿಸುತ್ತಾರೆ. ಇದರಿಂದ ಕೆಲಸಗಾರರ ಮೇಲೆ ಒತ್ತಡ ಹೆಚ್ಚಾಗುತ್ತಿದೆ, ಶಕ್ತಿಯೆಲ್ಲ ಬತ್ತಿಹೋಗುತ್ತಿದೆ. ಅಷ್ಟೇ ಅಲ್ಲ ಅನೇಕರ ಆರೋಗ್ಯನೂ ಕೆಡುತ್ತಿದೆ. ತಮ್ಮ ಧಣಿ ಹೇಳಿದಂತೆ ನಡೆಯದಿದ್ದರೆ ಎಲ್ಲಿ ತಮ್ಮ ಕೆಲಸ ಕಳಕೊಳ್ಳುತ್ತೇವೋ ಎಂಬ ಆತಂಕದಲ್ಲಿ ಜೀವಿಸುತ್ತಿದ್ದಾರೆ.

7, 8. (ಎ) ನಾವು ಯಾರಿಗೆ ಹೆಚ್ಚು ನಿಷ್ಠರಾಗಿ ಇರಬೇಕು? (ಬಿ) ಥಾಯ್‌ಲೆಂಡಿನಲ್ಲಿರುವ ಒಬ್ಬ ಸಹೋದರ ತನ್ನ ಕೆಲಸದ ವಿಷಯದಲ್ಲಿ ಏನು ತಿಳಿದುಕೊಂಡನು?

7 ಕ್ರೈಸ್ತರಾಗಿರುವ ನಾವು ನಮ್ಮ ಧಣಿಗೆ ನಿಷ್ಠೆ ತೋರಿಸುವುದಕ್ಕಿಂತ ಹೆಚ್ಚಾಗಿ ಯೆಹೋವನಿಗೆ ನಿಷ್ಠೆ ತೋರಿಸುತ್ತೇವೆ. (ಲೂಕ 10:27) ನಾವು ಕೆಲಸ ಮಾಡುತ್ತಿರುವುದು ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲು ಮತ್ತು ಸುವಾರ್ತೆ ಸಾರಲು ಬೇಕಾದ ಹಣ ಸಂಪಾದಿಸಲು. ಆದರೆ ನಾವು ಜಾಗ್ರತೆ ವಹಿಸದಿದ್ದರೆ ನಮ್ಮ ಉದ್ಯೋಗವೇ ನಮ್ಮ ಆಧ್ಯಾತ್ಮಿಕತೆಗೆ ಅಡ್ಡಿಯಾಗಿಬಿಡುತ್ತದೆ. ಇದನ್ನೇ ಥಾಯ್‌ಲೆಂಡಿನಲ್ಲಿರುವ ಒಬ್ಬ ಸಹೋದರನು ತಿಳಿದುಕೊಂಡನು. ಆ ಸಹೋದರ ಹೇಳುವುದು: “ನಾನು ಮಾಡುತ್ತಿದ್ದ ಕಂಪ್ಯೂಟರ್‌ ರಿಪೇರಿ ಕೆಲಸ ಚೆನ್ನಾಗಿತ್ತು. ಆ ಕೆಲಸ ನನಗೆ ತುಂಬ ಇಷ್ಟವಾಗಿತ್ತು. ಆದರೆ ಜಾಸ್ತಿ ಓವರ್‌ಟೈಮ್‌ ಮಾಡಬೇಕಾಗುತ್ತಿತ್ತು. ಇದರಿಂದ ಆಧ್ಯಾತ್ಮಿಕ ವಿಷಯಗಳಿಗೆ ಸಮಯನೇ ಸಿಗುತ್ತಿರಲಿಲ್ಲ. ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಬೇಕಾದರೆ ಕೆಲಸ ಬಿಡಬೇಕೆಂದು ನನಗೆ ಅರ್ಥವಾಯಿತು.” ಆ ಸಹೋದರ ಏನು ಮಾಡಿದನು?

8 ಅವನು ವಿವರಿಸಿದ್ದು: “ಏನು ಮಾಡಬೇಕು ಅಂತ ಯೋಚಿಸಿ, ಸುಮಾರು ಒಂದು ವರ್ಷ ಹಣ ಉಳಿಸಿದ ನಂತರ ಆ ಕೆಲಸ ಬಿಟ್ಟೆ. ತಳ್ಳುಬಂಡಿಯಲ್ಲಿ ಐಸ್‌ಕ್ರೀಮ್‌ ಮಾರುವ ಕೆಲಸ ಶುರುಮಾಡಿದೆ. ಮೊದಮೊದಲು ದುಡ್ಡಿಗಾಗಿ ಪರದಾಡಬೇಕಾಯಿತು, ಬೇಸತ್ತು ಹೋದೆ. ಹಿಂದೆ ನನ್ನೊಟ್ಟಿಗೆ ಕೆಲಸ ಮಾಡುತ್ತಿದ್ದವರು ಸಿಕ್ಕಿದರೆ ನನ್ನನ್ನು ನೋಡಿ ನಗುತ್ತಿದ್ದರು. ಏ.ಸಿ. ಕೋಣೆಯಲ್ಲಿ ಕೂತು ಕೆಲಸ ಮಾಡುವುದನ್ನು ಬಿಟ್ಟು ಈ ಐಸ್‌ಕ್ರೀಮ್‌ ಮಾರುವ ಕೆಲಸವನ್ನು ಯಾಕೆ ಆರಿಸಿಕೊಂಡೆ ಅಂತ ಕೇಳುತ್ತಿದ್ದರು. ಇದನ್ನೆಲ್ಲ ನಿಭಾಯಿಸಲು ಮತ್ತು ಆಧ್ಯಾತ್ಮಿಕ ವಿಷಯಗಳಿಗಾಗಿ ಸಮಯ ಮಾಡಿಕೊಳ್ಳಬೇಕು ಎಂಬ ನನ್ನ ಗುರಿಯನ್ನು ಮುಟ್ಟಲು ಸಹಾಯ ಮಾಡು ಅಂತ ಯೆಹೋವನನ್ನು ಬೇಡಿಕೊಂಡೆ. ಸ್ವಲ್ಪ ಸಮಯದಲ್ಲಿ ಪರಿಸ್ಥಿತಿ ಸುಧಾರಿಸಿತು. ನನ್ನ ಗ್ರಾಹಕರಿಗೆ ಯಾವ ರೀತಿಯ ಐಸ್‌ಕ್ರೀಮ್‌ ಇಷ್ಟವಾಗುತ್ತದೆ ಅಂತ ತಿಳಿದುಕೊಂಡೆ. ಹೀಗೆ ಐಸ್‌ಕ್ರೀಮ್‌ ತಯಾರಿಸುವುದರಲ್ಲಿ ಪರಿಣತನಾದೆ. ಇದರಿಂದಾಗಿ ನಾನು ತಯಾರಿಸುತ್ತಿದ್ದ ಐಸ್‌ಕ್ರೀಮನ್ನೆಲ್ಲಾ ಆಯಾ ದಿನವೇ ಮಾರಲು ಸಾಧ್ಯವಾಗುತ್ತಿತ್ತು. ಕಂಪ್ಯೂಟರ್‌ ಕೆಲಸ ಮಾಡುತ್ತಿದ್ದಾಗ ಸಿಗುತ್ತಿದ್ದ ಹಣಕ್ಕಿಂತ ನನಗೆ ಹೆಚ್ಚು ಹಣ ಸಿಗುತ್ತಿತ್ತು. ಆ ಕೆಲಸದಲ್ಲಿದ್ದ ಒತ್ತಡವಾಗಲಿ ಚಿಂತೆಯಾಗಲಿ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈಗ ನಾನು ಯೆಹೋವನಿಗೆ ಹೆಚ್ಚು ಆಪ್ತನಾಗಿದ್ದೇನೆ.”—ಮತ್ತಾಯ 5:3, 6 ಓದಿ.

9. ನಮ್ಮ ಉದ್ಯೋಗವನ್ನು ಸರಿಯಾದ ಸ್ಥಾನದಲ್ಲಿಡುವುದು ಹೇಗೆ?

9 ನಾವು ಶ್ರಮಪಟ್ಟು ಕೆಲಸಮಾಡುವುದನ್ನು ಯೆಹೋವನು ಮೆಚ್ಚುತ್ತಾನೆ. ಕಷ್ಟಪಟ್ಟು ಕೆಲಸ ಮಾಡಿದಾಗ ಪ್ರತಿಫಲವಾಗಿ ತೃಪ್ತಿ ಸಿಗುತ್ತದೆ. (ಜ್ಞಾನೋ. 12:14) ಆದರೆ ಯೆಹೋವನ ಸೇವೆಗಿಂತ ನಮ್ಮ ಉದ್ಯೋಗವೇ ನಮಗೆ ಮುಖ್ಯವಾಗದಂತೆ ಜಾಗ್ರತೆ ವಹಿಸಬೇಕು. ನಮ್ಮ ಮೂಲಭೂತ ಅಗತ್ಯಗಳ ಬಗ್ಗೆ ಮಾತಾಡುತ್ತಾ ಯೇಸು ಹೇಳಿದ್ದು: “ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ; ಆಗ ಈ ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು.” (ಮತ್ತಾ. 6:33) ಆದರೆ ನಮ್ಮ ಉದ್ಯೋಗವನ್ನು ಸರಿಯಾದ ಸ್ಥಾನದಲ್ಲಿಟ್ಟಿದ್ದೇವಾ ಎಂದು ತಿಳಿದುಕೊಳ್ಳುವುದು ಹೇಗೆ? ಅದನ್ನು ತಿಳಿದುಕೊಳ್ಳಲು ಮುಂದಿನ ಪ್ರಶ್ನೆ ಸಹಾಯ ಮಾಡುತ್ತದೆ. ‘ನನ್ನ ಕೆಲಸ ನನಗೆ ತುಂಬ ಖುಶಿ ಕೊಟ್ಟು, ದೇವರ ಸೇವೆ ತುಂಬ ಬೋರು ಅಂತ ಅನಿಸುತ್ತದಾ?’ ಈ ಪ್ರಶ್ನೆಯನ್ನು ನಮಗೇ ನಾವು ಕೇಳಿಕೊಂಡರೆ ನಾವು ಯಾವುದನ್ನು ನಿಜವಾಗಲೂ ಪ್ರೀತಿಸುತ್ತೇವೆಂದು ಗೊತ್ತಾಗುತ್ತದೆ.

10. ಯೇಸು ಯಾವ ಪ್ರಾಮುಖ್ಯ ಪಾಠ ಕಲಿಸಿದನು?

10 ನಮ್ಮ ಜೀವನದಲ್ಲಿ ಯಾವುದಕ್ಕೆ ಮೊದಲ ಸ್ಥಾನ ಕೊಡಬೇಕು ಎಂದು ಯೇಸು ಕಲಿಸಿದ್ದಾನೆ. ಅವನು ಒಮ್ಮೆ ಮರಿಯ ಮತ್ತು ಮಾರ್ಥ ಎಂಬ ಅಕ್ಕತಂಗಿಯರ ಮನೆಗೆ ಹೋದನು. ಕೂಡಲೇ ಮಾರ್ಥ ಅವನಿಗಾಗಿ ಅಡುಗೆ ಮಾಡಲು ಆರಂಭಿಸಿದಳು. ಆದರೆ ಮರಿಯ ಯೇಸುವಿನ ಹತ್ತಿರ ಕೂತು ಅವನು ಹೇಳುತ್ತಿದ್ದ ವಿಷಯಗಳಿಗೆ ಗಮನಕೊಟ್ಟಳು. ಆಗ ಮಾರ್ಥ ಯೇಸುವಿನ ಹತ್ತಿರ ಮರಿಯ ತನಗೆ ಸಹಾಯ ಮಾಡುತ್ತಿಲ್ಲ ಎಂದು ದೂರಿದಳು. ಅದಕ್ಕೆ ಅವನು ಮಾರ್ಥಳಿಗೆ, “ಮರಿಯಳಾದರೋ ಒಳ್ಳೆಯ ಭಾಗವನ್ನು ಆರಿಸಿಕೊಂಡಳು ಮತ್ತು ಅದು ಅವಳಿಂದ ತೆಗೆಯಲ್ಪಡುವುದಿಲ್ಲ” ಎಂದನು. (ಲೂಕ 10:38-42) ಈ ಮಾತುಗಳನ್ನು ಹೇಳುವ ಮೂಲಕ ಯೇಸು ಒಂದು ಪ್ರಾಮುಖ್ಯ ಪಾಠ ಕಲಿಸಿದನು. ನಾವು ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದರಲ್ಲಿ ಮುಳುಗಿ ಅಪಕರ್ಷಿತರಾಗಬಾರದು. ಕ್ರಿಸ್ತನ ಮೇಲಿರುವ ಪ್ರೀತಿಯನ್ನು ತೋರಿಸಲು ನಾವು ಮರಿಯಳಂತೆ ‘ಒಳ್ಳೇ ಭಾಗವನ್ನು’ ಆರಿಸಿಕೊಳ್ಳಬೇಕು. ಇದರರ್ಥ, ನಮ್ಮ ಜೀವನದಲ್ಲಿ ಯೆಹೋವನ ಜೊತೆ ನಮಗಿರುವ ಸಂಬಂಧವೇ ಎಲ್ಲಕ್ಕಿಂತ ಮುಖ್ಯವಾಗಿರಬೇಕು.

ಆಟೋಟ-ಮನೋರಂಜನೆ ಕುರಿತ ಸರಿಯಾದ ನೋಟ

11. ವಿರಾಮ, ವಿಶ್ರಾಂತಿ ಪಡೆದುಕೊಳ್ಳುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

11 ನಾವು ಜೀವನದಲ್ಲಿ ತುಂಬ ಕಾರ್ಯಮಗ್ನರಾಗಿರುತ್ತೇವೆ. ಹಾಗಾಗಿ ಕೆಲವೊಮ್ಮೆ ವಿರಾಮ, ವಿಶ್ರಾಂತಿ ಪಡೆಯಬೇಕಾಗುತ್ತದೆ. ಬೈಬಲ್‌ ಹೇಳುವುದು: “ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ.” (ಪ್ರಸಂ. 2:24) ತನ್ನ ಶಿಷ್ಯರಿಗೂ ವಿರಾಮದ ಅಗತ್ಯವಿದೆ ಎಂದು ಯೇಸುವಿಗೆ ಗೊತ್ತಿತ್ತು. ಒಂದು ಸಂದರ್ಭದಲ್ಲಿ ಶಿಷ್ಯರು ಸುವಾರ್ತೆ ಸಾರಿ ಸುಸ್ತಾಗಿ ಬಂದಾಗ ಯೇಸು ಅವರಿಗೆ “ನೀವು ಏಕಾಂತವಾದ ಸ್ಥಳಕ್ಕೆ ಬಂದು ತುಸು ದಣಿವಾರಿಸಿಕೊಳ್ಳಿರಿ” ಎಂದು ಹೇಳಿದನು.—ಮಾರ್ಕ 6:31, 32.

12. ಆಟೋಟ ಮತ್ತು ಮನೋರಂಜನೆಯ ವಿಷಯದಲ್ಲಿ ನಾವು ಯಾಕೆ ಜಾಗ್ರತೆ ವಹಿಸಬೇಕು? ಒಂದು ಉದಾಹರಣೆ ಕೊಡಿ.

12 ಮನೋರಂಜನೆ ಮತ್ತು ಆಟೋಟ ನಮ್ಮ ಮೈಮನವನ್ನು ಹಗುರ ಮಾಡುತ್ತದೆ. ಆದರೆ ಈ ವಿಷಯಗಳೇ ನಮ್ಮ ಜೀವನದಲ್ಲಿ ತುಂಬ ಮುಖ್ಯವಾಗದಂತೆ ಜಾಗ್ರತೆ ವಹಿಸಬೇಕು. ಒಂದನೇ ಶತಮಾನದಲ್ಲಿ ಅನೇಕರು “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲ” ಎಂದು ನೆನಸುತ್ತಿದ್ದರು. (1 ಕೊರಿಂ. 15:32) ಇದೇ ಮನೋಭಾವ ಇಂದು ಕೂಡ ಜನರಲ್ಲಿ ಸಾಮಾನ್ಯವಾಗಿದೆ. ಪಶ್ಚಿಮ ಯೂರೋಪಿನಲ್ಲಿನ ಒಬ್ಬ ಯುವಕನ ಉದಾಹರಣೆ ನೋಡಿ. ಅವನು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಆರಂಭಿಸಿದ. ಆದರೆ ಅವನು ಮನೋರಂಜನೆಯಲ್ಲಿ ಎಷ್ಟು ಸಮಯ ಕಳೆಯುತ್ತಿದ್ದನೆಂದರೆ ಯೆಹೋವನ ಸಾಕ್ಷಿಗಳೊಂದಿಗಿನ ಒಡನಾಟವನ್ನೇ ನಿಲ್ಲಿಸಿಬಿಟ್ಟ. ಅವನು ಮನೋರಂಜನೆಯಲ್ಲಿ ಮುಳುಗಿದ್ದದ್ದೇ ಅವನ ಅನೇಕ ಸಮಸ್ಯೆಗಳಿಗೆ ಕಾರಣವೆಂದು ಅವನಿಗೆ ಆಮೇಲೆ ಅರ್ಥವಾಯಿತು. ಪುನಃ ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದ. ನಂತರ ಸುವಾರ್ತೆ ಸಾರಲು ಶುರುಮಾಡಿದ. ದೀಕ್ಷಾಸ್ನಾನ ಪಡೆದ. ಅವನು ಹೇಳುವುದು: “ಮನೋರಂಜನೆಯಲ್ಲೇ ತುಂಬ ಸಮಯ ಹಾಳುಮಾಡಿದೆನಲ್ಲಾ ಅಂತ ಈಗ ದುಃಖವಾಗುತ್ತಿದೆ. ಈ ಲೋಕ ಕೊಡುವ ಮನೋರಂಜನೆಗಿಂತ ಯೆಹೋವನ ಸೇವೆ ಮಾಡುವುದೇ ಹೆಚ್ಚು ಸಂತೋಷ ಕೊಡುತ್ತದೆ.”

13. (ಎ) ಅತಿಯಾದ ಆಟೋಟ ಮತ್ತು ಮನೋರಂಜನೆ ಒಳ್ಳೇದಲ್ಲ ಎನ್ನುವುದಕ್ಕೆ ಒಂದು ದೃಷ್ಟಾಂತ ಕೊಡಿ. (ಬಿ) ನಮ್ಮ ಆಟೋಟ, ಮನೋರಂಜನೆ ಅತಿಯಾಗಿದೆಯಾ ಎಂದು ತಿಳಿದುಕೊಳ್ಳಲು ಯಾವುದು ಸಹಾಯ ಮಾಡುತ್ತದೆ?

13 ಹೊಸ ಚೈತನ್ಯ ಪಡೆಯಲು, ಮೈಮನವನ್ನು ಹಗುರಮಾಡಲು ಆಟೋಟ, ಮನೋರಂಜನೆ ನಮಗೆ ಸಹಾಯ ಮಾಡಬೇಕು. ಅದರಲ್ಲಿ ನಾವು ಎಷ್ಟು ಸಮಯ ಕಳೆಯಬಹುದು? ಉತ್ತರಕ್ಕಾಗಿ ಸ್ವಲ್ಪ ಈ ದೃಷ್ಟಾಂತ ಗಮನಿಸಿ. ಅನೇಕರಿಗೆ ಕೇಕ್‌, ಸಿಹಿತಿಂಡಿಗಳೆಂದರೆ ಇಷ್ಟ. ಆದರೆ ಅದನ್ನೇ ಮೂರು ಹೊತ್ತೂ ತಿಂದರೆ ಆರೋಗ್ಯ ಹಾಳಾಗುತ್ತದೆ ಎಂದು ನಮ್ಮೆಲ್ಲರಿಗೂ ಗೊತ್ತು. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರವನ್ನು ತಿನ್ನಲೇಬೇಕು. ಅದೇ ರೀತಿ ನಾವು ಆಟೋಟ, ಮನೋರಂಜನೆಯಲ್ಲೇ ಹೆಚ್ಚಿನ ಸಮಯ ಕಳೆದರೆ ಯೆಹೋವನ ಜೊತೆ ನಮಗಿರುವ ಸಂಬಂಧದ ಮೇಲೆ ಅದು ಪರಿಣಾಮ ಬೀರುತ್ತದೆ. ನಮ್ಮ ಆಟೋಟ, ಮನೋರಂಜನೆ ಅತಿಯಾಗಿದೆಯಾ ಎಂದು ತಿಳಿದುಕೊಳ್ಳುವುದು ಹೇಗೆ? ಒಂದು ವಿಧಾನ ಏನೆಂದರೆ, ನಾವು ಒಂದು ವಾರವನ್ನು ಆಯ್ಕೆ ಮಾಡಿ, ಆ ವಾರದಲ್ಲಿ ಯೆಹೋವನ ಸೇವೆಗಾಗಿ ಎಷ್ಟು ಸಮಯ ವ್ಯಯಿಸಿದೆವು ಎಂದು ಬರೆಯುವುದು. ಉದಾಹರಣೆಗೆ ಕೂಟಗಳು, ಸುವಾರ್ತೆ ಸಾರುವುದು, ವೈಯಕ್ತಿಕ ಅಧ್ಯಯನ, ಕುಟುಂಬ ಆರಾಧನೆ ಇದಕ್ಕೆಲ್ಲ ಎಷ್ಟು ತಾಸು ಕಳೆದೆವು ಎಂದು ಬರೆಯಬೇಕು. ಅದೇ ವಾರದಲ್ಲಿ ಆಟೋಟ, ಮನೋರಂಜನೆಗಾಗಿ ಉದಾಹರಣೆಗೆ ಕ್ರೀಡೆ, ವಿಡಿಯೋ ಗೇಮ್ಸ್‌, ಹವ್ಯಾಸಗಳು, ಟಿವಿ ನೋಡುವುದು ಇದಕ್ಕೆಲ್ಲ ಎಷ್ಟು ತಾಸು ಕಳೆದೆವೆಂದು ಬರೆಯಬೇಕು. ಇವೆರಡನ್ನೂ ಹೋಲಿಸಿ ನೋಡಬೇಕು. ಆಗ ನಮಗೆ ಎಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ಗೊತ್ತಾಗುತ್ತದೆ.—ಎಫೆಸ 5:15, 16 ಓದಿ.

14. ಒಳ್ಳೇ ಆಟೋಟ ಮತ್ತು ಮನೋರಂಜನೆಯನ್ನು ಆಯ್ಕೆಮಾಡಲು ನಮಗೆ ಯಾವುದು ಸಹಾಯ ಮಾಡುತ್ತದೆ?

14 ಯಾವ ಮನೋರಂಜನೆ, ಆಟೋಟ ಆರಿಸಿಕೊಳ್ಳಬೇಕು ಎಂಬ ಸ್ವಾತಂತ್ರ್ಯವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. ಕುಟುಂಬ ಏನು ಮಾಡಬಹುದೆಂದು ಕುಟುಂಬದ ಶಿರಸ್ಸು ತೀರ್ಮಾನ ಮಾಡಬಹುದು. ಯೆಹೋವನ ದೃಷ್ಟಿಕೋನ ಏನೆಂದು ತಿಳಿಸುವ ಬೈಬಲ್‌ ತತ್ವಗಳ ಆಧಾರದ ಮೇಲೆ ನಾವು ಮನೋರಂಜನೆಯ ವಿಷಯದಲ್ಲಿ ಸರಿಯಾದ ನಿರ್ಣಯಗಳನ್ನು ಮಾಡಲಿಕ್ಕಾಗುತ್ತದೆ. * ಹಿತಮಿತವಾದ ಆಟೋಟ ಮತ್ತು ಮನೋರಂಜನೆ “ದೇವರ ಅನುಗ್ರಹ” ಆಗಿದೆ. (ಪ್ರಸಂ. 3:12, 13) ಬೇರೆಬೇರೆ ಜನರು ಬೇರೆಬೇರೆ ಮನೋರಂಜನೆಯನ್ನು ಇಷ್ಟಪಡುತ್ತಾರೆ ನಿಜ. (ಗಲಾ. 6:4, 5) ನಾವು ಯಾವ ಮನೋರಂಜನೆಯನ್ನು ಆರಿಸಿಕೊಂಡರೂ ಜಾಗ್ರತೆ ವಹಿಸಬೇಕು. “ನಿನ್ನ ಸಂಪತ್ತು ಇರುವಲ್ಲಿಯೇ ನಿನ್ನ ಹೃದಯವು ಸಹ ಇರುವುದು” ಎಂದು ಯೇಸು ಹೇಳಿದನು. (ಮತ್ತಾ. 6:21) ದೇವರ ರಾಜ್ಯವೇ ಎಲ್ಲಕ್ಕಿಂತಲೂ ಮುಖ್ಯ ಎಂದು ನಮ್ಮ ಯೋಚನೆ, ಮಾತು, ಕ್ರಿಯೆಯಲ್ಲಿ ತೋರಿಸಲು ನಮ್ಮ ರಾಜನಾದ ಯೇಸುವಿನ ಮೇಲಿರುವ ಪ್ರೀತಿ ನಮ್ಮನ್ನು ಪ್ರೇರಿಸಬೇಕು.—ಫಿಲಿ. 1:9, 10.

ಪ್ರಾಪಂಚಿಕತೆಯ ವಿರುದ್ಧ ಹೋರಾಡಿ

15, 16. (ಎ) ಪ್ರಾಪಂಚಿಕತೆ ನಮಗೆ ಉರುಲಾಗಬಹುದು ಹೇಗೆ? (ಬಿ) ಯೇಸು ಯಾವ ಬುದ್ಧಿವಾದ ಕೊಟ್ಟಿದ್ದಾನೆ?

15 ಇಂದು ಅನೇಕರು ಹೊಸಹೊಸ ಬಟ್ಟೆ, ಫೋನು, ಕಂಪ್ಯೂಟರು ಮಾರುಕಟ್ಟೆಗೆ ಬಂದ ಕೂಡಲೇ ಖರೀದಿಸಬೇಕು ಎಂದು ನೆನಸುತ್ತಾರೆ. ಇದಕ್ಕೆ ಕಾರಣ ಪ್ರಾಪಂಚಿಕತೆ. ಪ್ರಾಪಂಚಿಕತೆ ಅಂದರೆ ಜೀವನದಲ್ಲಿ ವಸ್ತು ಮತ್ತು ಹಣವೇ ಬೇರೆ ಎಲ್ಲಕ್ಕಿಂತ ಮುಖ್ಯ ಅನ್ನುವ ಭಾವನೆ. ಕ್ರೈಸ್ತರಾಗಿರುವ ನಿಮಗೆ ಜೀವನದಲ್ಲಿ ಯಾವುದು ಮುಖ್ಯ? ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನಾನು ಸಭಾ ಕೂಟಗಳಿಗೆ ತಯಾರಿಸಲು ಕಳೆಯುವ ಸಮಯಕ್ಕಿಂತ ಹೊಸಹೊಸ ಕಾರು, ಫ್ಯಾಶನ್ನಿನ ಬಗ್ಗೆ ಯೋಚಿಸುವುದರಲ್ಲಿ ಹೆಚ್ಚು ಸಮಯ ಕಳೆಯುತ್ತೇನಾ? ದಿನನಿತ್ಯದ ಕೆಲಸಗಳಲ್ಲಿ ಮುಳುಗಿಹೋಗಿರುವುದರಿಂದ ಪ್ರಾರ್ಥನೆ ಮಾಡಲು ಅಥವಾ ಬೈಬಲ್‌ ಓದಲು ಹೆಚ್ಚು ಸಮಯ ಕೊಡಲು ಆಗುತ್ತಿಲ್ವಾ?’ ನಾವು ಈ ವಿಷಯದಲ್ಲಿ ಜಾಗ್ರತೆ ವಹಿಸದಿದ್ದರೆ ಕ್ರಿಸ್ತನಿಗಿಂತ ವಸ್ತುಗಳನ್ನು ಹೆಚ್ಚು ಪ್ರೀತಿಸಲು ಆರಂಭಿಸಬಹುದು. “ದುರಾಶೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ” ಎಂಬ ಯೇಸುವಿನ ಮಾತುಗಳಿಗೆ ನಾವು ಗಮನಕೊಡಬೇಕು. (ಲೂಕ 12:15) ಈ ಮಾತನ್ನು ಯೇಸು ಯಾಕೆ ಹೇಳಿದನು?

16 ಯಾಕೆಂದರೆ “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು” ಅಂದರೆ ‘ದೇವರನ್ನೂ ಐಶ್ವರ್ಯವನ್ನೂ ಸೇವಿಸಲಾರನು.’ ಹಣ, ವಸ್ತುಗಳ ಮೇಲೆಯೇ ಮನಸ್ಸಿಟ್ಟು, ಯೆಹೋವನ ಸೇವೆಯನ್ನೂ ಹೆಚ್ಚು ಮಾಡಲು ಸಾಧ್ಯವಿಲ್ಲ. ಎರಡನ್ನೂ ಒಟ್ಟೊಟ್ಟಿಗೆ ಮಾಡಲು ಸಾಧ್ಯವೇ ಇಲ್ಲ. ಯೇಸು ಕೂಡ ಹೇಳಿದ್ದೇನೆಂದರೆ ನಾವು ‘ಒಬ್ಬನನ್ನು ದ್ವೇಷಿಸಿ, ಇನ್ನೊಬ್ಬನನ್ನು ಪ್ರೀತಿಸುವೆವು ಅಥವಾ ಒಬ್ಬನಿಗೆ ಅಂಟಿಕೊಂಡು ಇನ್ನೊಬ್ಬನನ್ನು ಕಡೆಗಣಿಸುವೆವು.’ (ಮತ್ತಾ. 6:24) ನಾವೆಲ್ಲರೂ ಅಪರಿಪೂರ್ಣರು. ಹಾಗಾಗಿ ಪ್ರಾಪಂಚಿಕತೆಯಂಥ “ಶರೀರಭಾವದ ಇಚ್ಛೆಗಳಿಗೆ” ವಿರುದ್ಧವಾಗಿ ಹೋರಾಡುತ್ತಾ ಇರಬೇಕು.—ಎಫೆ. 2:3.

17. (ಎ) ಹಣ, ವಸ್ತುಗಳ ಬಗ್ಗೆ ಹಿತಮಿತವಾದ ನೋಟವಿಡಲು ಕೆಲವರಿಗೆ ಯಾಕೆ ಕಷ್ಟವಾಗುತ್ತದೆ? (ಬಿ) ಪ್ರಾಪಂಚಿಕತೆಯ ವಿರುದ್ಧ ಹೋರಾಡಲು ನಮಗೆ ಯಾವುದು ಸಹಾಯ ಮಾಡುತ್ತದೆ?

17 ತಮ್ಮನ್ನು ಸಂತೋಷಪಡಿಸುವುದರಲ್ಲೇ ಮುಳುಗಿರುವವರಿಗೆ ಹಣ, ವಸ್ತುಗಳ ಬಗ್ಗೆ ಹಿತಮಿತವಾದ ನೋಟವಿಡಲು ಕಷ್ಟವಾಗುತ್ತದೆ. (1 ಕೊರಿಂಥ 2:14 ಓದಿ.) ಅವರ ಯೋಚನಾರೀತಿ ಸರಿ ಇಲ್ಲದ ಕಾರಣ ಸರಿತಪ್ಪಿನ ಮಧ್ಯೆ ಇರುವ ವ್ಯತ್ಯಾಸ ಗೊತ್ತಾಗಲಿಕ್ಕಿಲ್ಲ. (ಇಬ್ರಿ. 5:11-14) ಹಣ, ವಸ್ತುಗಳಿಗಾಗಿ ಅವರ ಬಯಕೆ ದಿನೇ ದಿನೇ ಬೆಳೆಯುತ್ತಾ ಹೋಗುತ್ತದೆ. ಸಿಕ್ಕಿದ್ದು ಸಾಕಾಗಲ್ಲ, ಇನ್ನೂ ಬೇಕು ಎಂಬ ಭಾವನೆ ಬಂದುಬಿಡುತ್ತದೆ. (ಪ್ರಸಂ. 5:10) ಆದರೆ ಪ್ರಾಪಂಚಿಕತೆಯ ಇಂಥ ಭಾವನೆಯ ವಿರುದ್ಧ ನಮ್ಮಿಂದ ಹೋರಾಡಲಿಕ್ಕಾಗುತ್ತದೆ. ಆ ಬಲವನ್ನು ಪಡೆಯಲು ನಾವು ದಿನಾಲೂ ಬೈಬಲ್‌ ಓದಬೇಕು. (1 ಪೇತ್ರ 2:2) ಯೆಹೋವನ ವಿವೇಕದ ಬಗ್ಗೆ ಯೇಸು ಧ್ಯಾನಿಸಿದರಿಂದಲೇ ಪಿಶಾಚನ ಪ್ರಲೋಭನೆಗಳನ್ನು ಎದುರಿಸಲು ಅವನಿಗೆ ಸಹಾಯವಾಯಿತು. (ಮತ್ತಾ. 4:8-10) ಅದೇ ರೀತಿ ನಾವು ಕೂಡ ಪ್ರಾಪಂಚಿಕತೆಯ ವಿರುದ್ಧ ಹೋರಾಡಬೇಕಾದರೆ ಬೈಬಲಲ್ಲಿರುವ ತತ್ವಗಳನ್ನು ಅನ್ವಯಿಸಿಕೊಳ್ಳಬೇಕು. ಆಗ ನಾವು ಹಣ, ವಸ್ತುಗಳಿಗಿಂತ ಯೇಸುವನ್ನೇ ಹೆಚ್ಚು ಪ್ರೀತಿಸುತ್ತೇವೆ ಎಂದು ತೋರಿಸಿಕೊಡುತ್ತೇವೆ.

ನಿಮಗೆ ಜೀವನದಲ್ಲಿ ಯಾವುದು ಹೆಚ್ಚು ಮುಖ್ಯ? (ಪ್ಯಾರ 18 ನೋಡಿ)

18. ನೀವು ಏನು ಮಾಡಲು ತೀರ್ಮಾನಿಸಿದ್ದೀರಿ?

18 “ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?” ಎಂದು ಯೇಸು ಪೇತ್ರನಿಗೆ ಕೇಳಿದಾಗ ಒಂದು ಪ್ರಾಮುಖ್ಯ ಪಾಠವನ್ನು ಕಲಿಸಿದನು. ಜೀವನದಲ್ಲಿ ಯೆಹೋವನ ಸೇವೆಗೆ ಹೆಚ್ಚು ಗಮನಕೊಡಬೇಕು ಎಂದು ಕಲಿಸಿದನು. ಪೇತ್ರನ ಹೆಸರಿನ ಅರ್ಥ “ಬಂಡೆ.” ಅವನ ಒಳ್ಳೇ ಗುಣಗಳನ್ನು ಬಂಡೆಗೆ ಹೋಲಿಸಬಹುದು. (ಅ. ಕಾ. 4:5-20) ಇಂದು ನಮಗೂ ಯೇಸುವಿನ ಮೇಲಿರುವ ಪ್ರೀತಿ ಬಲವಾಗಿರಬೇಕು. ಅದಕ್ಕಾಗಿ ನಾವು ಉದ್ಯೋಗ, ಆಟೋಟ-ಮನೋರಂಜನೆ, ಹಣ-ವಸ್ತುಗಳಿಗೆ ನಮ್ಮ ಜೀವನದಲ್ಲಿ ಸರಿಯಾದ ಸ್ಥಾನವನ್ನು ಕೊಡಬೇಕು. ಆಗ ನಾವು ಕೂಡ ಯೇಸುವಿಗೆ “ಕರ್ತನೇ, ನನಗೆ ನಿನ್ನ ಮೇಲೆ ಮಮತೆ ಇದೆ ಎಂಬುದನ್ನು ನೀನೇ ಬಲ್ಲೆ” ಎಂದು ಪೇತ್ರನಂತೆ ಹೇಳಿದಂತಾಗುತ್ತದೆ.

^ ಪ್ಯಾರ. 14 ಅಕ್ಟೋಬರ್‌ 15, 2011​ರ ಕಾವಲಿನಬುರುಜುವಿನಲ್ಲಿರುವ “ಮನರಂಜನೆ—ಪರೀಕ್ಷಿಸಿ ಆಯ್ಕೆ ಮಾಡಿ” ಎಂಬ ಲೇಖನದ ಪುಟ 9-12, ಪ್ಯಾರ 6-15 ನೋಡಿ.