ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಾಯನು ಸಹೋದರರಿಗೆ ಕೊಟ್ಟ ಸಹಾಯ

ಗಾಯನು ಸಹೋದರರಿಗೆ ಕೊಟ್ಟ ಸಹಾಯ

ಒಂದನೇ ಶತಮಾನದ ಕೊನೆ ಭಾಗದಲ್ಲಿ ಜೀವಿಸುತ್ತಿದ್ದ ಗಾಯನು ಮತ್ತು ಇತರ ಕ್ರೈಸ್ತರು ಕೆಲವೊಂದು ಸವಾಲುಗಳನ್ನು ಎದುರಿಸುತ್ತಾ ಇದ್ದರು. ಸುಳ್ಳು ಬೋಧನೆಗಳನ್ನು ಹಬ್ಬಿಸುತ್ತಿದ್ದ ವ್ಯಕ್ತಿಗಳು ಆ ಕಾಲದ ಸಭೆಯಲ್ಲಿರುವ ಸಹೋದರರ ನಂಬಿಕೆಯನ್ನು ದುರ್ಬಲಗೊಳಿಸಿ ಒಡಕನ್ನು ಹುಟ್ಟಿಸಲು ಪ್ರಯತ್ನಿಸುತ್ತಾ ಇದ್ದರು. (1 ಯೋಹಾ. 2:18, 19; 2 ಯೋಹಾ. 7) ದಿಯೊತ್ರೇಫ ಎಂಬವನು ಅಪೊಸ್ತಲ ಯೋಹಾನ ಹಾಗೂ ಬೇರೆಯವರ ‘ವಿಷಯವಾಗಿ ಕೆಟ್ಟ ಮಾತುಗಳನ್ನು ಆಡುತ್ತಿದ್ದನು.’ ಸಂಚಾರ ಮಾಡುತ್ತಿದ್ದ ಕ್ರೈಸ್ತರಿಗೆ ಅವನೂ ಅತಿಥಿಸತ್ಕಾರ ಮಾಡುತ್ತಿರಲಿಲ್ಲ, ಬೇರೆಯವರೂ ಮಾಡುವಂತೆ ಬಿಡುತ್ತಿರಲಿಲ್ಲ. (3 ಯೋಹಾ. 9, 10) ಅಪೊಸ್ತಲ ಯೋಹಾನನು ಗಾಯನಿಗೆ ಪತ್ರ ಬರೆದಾಗ ಸನ್ನಿವೇಶ ಹೀಗಿತ್ತು. ಈ ಪತ್ರವನ್ನು ಅವನು ಬರೆದದ್ದು ಸುಮಾರು ಕ್ರಿ.ಶ. 98ರಷ್ಟಕ್ಕೆ. ಇದು ಈಗ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದಲ್ಲಿ “ಯೋಹಾನನು ಬರೆದ ಮೂರನೆಯ ಪತ್ರ” ಆಗಿದೆ.

ಹಲವಾರು ಸವಾಲುಗಳಿದ್ದರೂ ಗಾಯನು ಯೆಹೋವನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುವುದನ್ನು ನಿಲ್ಲಿಸಲಿಲ್ಲ. ಅವನು ನಂಬಿಗಸ್ತಿಕೆ ತೋರಿಸಿದ್ದು ಹೇಗೆ? ನಾವಿಂದು ಅವನ ಮಾದರಿಯನ್ನು ಯಾಕೆ ಅನುಕರಿಸಬೇಕು? ಈ ಮಾದರಿಯನ್ನು ಅನುಕರಿಸಲು ಯೋಹಾನನು ಬರೆದ ಪತ್ರ ನಮಗೆ ಹೇಗೆ ಸಹಾಯ ಮಾಡುತ್ತದೆ?

ಪ್ರಿಯ ಮಿತ್ರನಿಗೆ ಬರೆಯಲಾದ ಪತ್ರ

ಮೂರನೇ ಯೋಹಾನ ಪುಸ್ತಕ ಬರೆದ ವ್ಯಕ್ತಿ ತನ್ನನ್ನೇ “ಹಿರೀಪುರುಷ” ಎಂದು ಕರೆಯುತ್ತಾನೆ. ಈ ಮಾತಿನಿಂದ ಅಪೊಸ್ತಲ ಯೋಹಾನನೇ ಈ ಪತ್ರ ಬರೆದಿದ್ದಾನೆಂದು ಅವನ ಆಧ್ಯಾತ್ಮಿಕ ಮಗನಾದ ಪ್ರಿಯ ಗಾಯನು ಗುರುತು ಹಿಡಿದನು. ಅಪೊಸ್ತಲ ಯೋಹಾನನು ಗಾಯನನ್ನು “ನಾನು ನಿಜವಾಗಿಯೂ ಪ್ರೀತಿಸುವ ಪ್ರಿಯ ಗಾಯ” ಎಂದು ಸಂಬೋಧಿಸಿದನು. ನಂತರ, ಗಾಯನ ಶಾರೀರಿಕ ಆರೋಗ್ಯ ಅವನ ಆಧ್ಯಾತ್ಮಿಕ ಆರೋಗ್ಯದಷ್ಟೇ ಚೆನ್ನಾಗಿದೆ ಎಂದು ನಂಬುತ್ತೇನೆಂದು ಹೇಳಿದನು. ಗಾಯನ ಮೇಲೆ ಅವನಿಗೆ ಎಷ್ಟು ಪ್ರೀತಿ ಕಾಳಜಿ ಇತ್ತೆಂದು ಇದರಿಂದ ಗೊತ್ತಾಗುತ್ತದೆ.—3 ಯೋಹಾ. 1, 2, 4.

ಪತ್ರದಲ್ಲಿ ನಿರ್ದಿಷ್ಟವಾಗಿ ತಿಳಿಸಿಲ್ಲವಾದರೂ ಗಾಯನು ಬಹುಶಃ ಸಭೆಯಲ್ಲಿ ಒಬ್ಬ ಮೇಲ್ವಿಚಾರಕನಾಗಿದ್ದನು. ಅವನು ಸಭೆಗೆ ಬಂದಿದ್ದ ಸಹೋದರರಿಗೆ ಅತಿಥಿಸತ್ಕಾರ ತೋರಿಸಿದನು. ಅವರ ಪರಿಚಯ ಇಲ್ಲದಿದ್ದರೂ ಅವರನ್ನು ಚೆನ್ನಾಗಿ ನೋಡಿಕೊಂಡದ್ದಕ್ಕಾಗಿ ಯೋಹಾನನು ಅವನನ್ನು ಶ್ಲಾಘಿಸುತ್ತಾನೆ. ಇದು ಅವನ ನಂಬಿಗಸ್ತಿಕೆಗೆ ಒಂದು ರುಜುವಾತು ಎಂದು ಹೇಳುತ್ತಾನೆ. ಯಾಕೆಂದರೆ ಅತಿಥಿಸತ್ಕಾರ ಮಾಡುವುದು ದೇವರ ಸೇವಕರ ಒಂದು ವಿಶೇಷ ಲಕ್ಷಣ.—ಆದಿ. 18:1-8; 1 ತಿಮೊ. 3:2; 3 ಯೋಹಾ. 5.

ಗಾಯನು ಸಹೋದರರಿಗೆ ತೋರಿಸಿದ ಅತಿಥಿಸತ್ಕಾರಕ್ಕಾಗಿ ಯೋಹಾನನು ಬರೆದ ಕೃತಜ್ಞತೆಯ ಮಾತುಗಳಿಂದ ನಮಗೆ ಒಂದು ವಿಷಯ ತಿಳಿದುಬರುತ್ತದೆ. ಅದೇನೆಂದರೆ ಅಪೊಸ್ತಲ ಯೋಹಾನನು ಇದ್ದಲ್ಲಿಂದ ಕ್ರೈಸ್ತರು ಬೇರೆಬೇರೆ ಸಭೆಗಳಿಗೆ ಆಗಾಗ ಪ್ರಯಾಣಿಸಿ, ಅವರು ನೋಡಿದ್ದನ್ನು, ಕೇಳಿದ್ದನ್ನು ಬಂದು ಯೋಹಾನನಿಗೆ ತಿಳಿಸುತ್ತಿದ್ದಿರಬಹುದು. ಬಹುಶಃ ಹೀಗೆ ಯೋಹಾನನಿಗೆ ಈ ಸಭೆಗಳಲ್ಲಿ ಏನು ನಡೆಯುತ್ತಿತ್ತೆಂದು ಸುದ್ದಿ ಸಿಗುತ್ತಿತ್ತು.

ಸಂಚಾರ ಮಾಡುತ್ತಿದ್ದ ಈ ಕ್ರೈಸ್ತರು ಜೊತೆ ಕ್ರೈಸ್ತರೊಂದಿಗೆ ತಂಗಲು ಇಷ್ಟಪಡುತ್ತಿದ್ದರು. ಏಕೆಂದರೆ ಪ್ರವಾಸಿಗೃಹಗಳಲ್ಲಿ ಒಳ್ಳೇ ಸೌಕರ್ಯಗಳಿರಲಿಲ್ಲ, ಅವುಗಳಿಗೆ ಒಳ್ಳೇ ಹೆಸರೂ ಇರಲಿಲ್ಲ. ಅಲ್ಲಿ ರಹಸ್ಯವಾಗಿ ಅನೈತಿಕ ಕೆಲಸಗಳು ನಡೆಯುತ್ತಿದ್ದವು. ಹಾಗಾಗಿ ಜಾಣರಾಗಿದ್ದ ಪ್ರಯಾಣಿಕರು ಸಾಧ್ಯವಿರುವಾಗೆಲ್ಲ ಸ್ನೇಹಿತರ ಮನೆಗಳಲ್ಲಿ ತಂಗುತ್ತಿದ್ದರು. ಸಂಚಾರ ಮಾಡುತ್ತಿದ್ದ ಕ್ರೈಸ್ತರು ಜೊತೆ ವಿಶ್ವಾಸಿಗಳ ಮನೆಗಳಲ್ಲಿ ತಂಗುತ್ತಿದ್ದರು.

“ಅವರು ದೇವರ ಹೆಸರಿನ ನಿಮಿತ್ತ ಹೊರಟುಹೋದರು”

ಪುನಃ ಅತಿಥಿಸತ್ಕಾರ ಮಾಡುವಂತೆ ಯೋಹಾನನು ಗಾಯನಿಗೆ ಉತ್ತೇಜಿಸಿದನು. ಪ್ರಯಾಣಿಕರನ್ನು “ದೇವರಿಗೆ ಯೋಗ್ಯವಾದ ರೀತಿಯಲ್ಲಿ ನೀನು ಸಾಗಕಳುಹಿಸು” ಎಂದು ಹೇಳಿದನು. ಇಲ್ಲಿ ಸಾಗಕಳುಹಿಸು ಎನ್ನುವುದರ ಅರ್ಥ, ಅತಿಥಿಗಳಿಗೆ ಮುಂದಿನ ಪ್ರಯಾಣಕ್ಕಾಗಿ ಅಂದರೆ ಅವರು ಮುಂದಿನ ಸ್ಥಳಕ್ಕೆ ತಲಪುವ ತನಕ ಏನೆಲ್ಲ ಬೇಕೊ ಅದನ್ನು ಕೊಡುವುದು ಎಂದಾಗಿತ್ತು. ಈ ಹಿಂದೆ ಬಂದಿದ್ದ ಅತಿಥಿಗಳಿಗೆ ಗಾಯನು ಹೀಗೆಯೇ ಮಾಡಿದ್ದನೆಂದು ತೋರುತ್ತದೆ. ಆದ್ದರಿಂದಲೇ ಅವರು ಯೋಹಾನನ ಬಳಿ ಹಿಂದಿರುಗಿದಾಗ ತಮ್ಮ ಆತಿಥೇಯನಾದ ಗಾಯನು ತೋರಿಸಿದ ಪ್ರೀತಿ ಮತ್ತು ನಂಬಿಕೆಯ ಬಗ್ಗೆ ಅವನಿಗೆ ತಿಳಿಸಿದ್ದರು.—3 ಯೋಹಾ. 3, 6.

ಈ ಅತಿಥಿಗಳು ಯಾರಾಗಿದ್ದರು? ಮಿಷನರಿಗಳು, ಯೋಹಾನನ ಪ್ರತಿನಿಧಿಗಳು ಇಲ್ಲವೇ ಸಂಚರಣ ಮೇಲ್ವಿಚಾರಕರು ಆಗಿರಬಹುದು. ಇವರೆಲ್ಲರೂ ಸುವಾರ್ತೆಯ ನಿಮಿತ್ತ ಪ್ರಯಾಣಿಸುತ್ತಿದ್ದರು. “ಅವರು ದೇವರ ಹೆಸರಿನ ನಿಮಿತ್ತ ಹೊರಟುಹೋದರು” ಎನ್ನುತ್ತಾನೆ ಯೋಹಾನ. (3 ಯೋಹಾ. 7) ಅವರು ಕ್ರೈಸ್ತ ಸಭೆಯ ಭಾಗವಾಗಿದ್ದರು, ಆದ್ದರಿಂದ ಅವರಿಗೆ ಆದರದಿಂದ ಸ್ವಾಗತಿಸುವುದು ಯೋಗ್ಯವಾಗಿತ್ತು. ಯೋಹಾನನು ಬರೆದಂತೆ, “ನಾವು ಸತ್ಯದಲ್ಲಿ ಜೊತೆ ಕೆಲಸಗಾರರಾಗುವಂತೆ ಅಂಥವರನ್ನು ಸತ್ಕಾರಭಾವದಿಂದ ಸೇರಿಸಿಕೊಳ್ಳುವ ಹಂಗಿನಲ್ಲಿದ್ದೇವೆ.”—3 ಯೋಹಾ. 8.

ಕಷ್ಟಕರ ಸನ್ನಿವೇಶ ನಿಭಾಯಿಸಲು ಸಹಾಯ

ಯೋಹಾನನು ಗಾಯನಿಗೆ ಪತ್ರ ಬರೆದದ್ದು ಬರೀ ಧನ್ಯವಾದ ಹೇಳಲಿಕ್ಕಲ್ಲ. ಒಂದು ಗಂಭೀರ ಸಮಸ್ಯೆ ನಿಭಾಯಿಸಲು ಬೇಕಾದ ಸಹಾಯವನ್ನೂ ಕೊಡಲು ಇಚ್ಛಿಸಿದನು. ಕ್ರೈಸ್ತ ಸಭೆಯ ಸದಸ್ಯನಾಗಿದ್ದ ದಿಯೊತ್ರೇಫನು ಸಂಚಾರ ಮಾಡುತ್ತಿದ್ದ ಕ್ರೈಸ್ತರಿಗೆ ಯಾವುದೊ ಕಾರಣಕ್ಕೆ ಅತಿಥಿಸತ್ಕಾರ ತೋರಿಸಲು ಸಿದ್ಧನಿರಲಿಲ್ಲ. ಬೇರೆಯವರನ್ನೂ ತಡೆಯುತ್ತಿದ್ದ.—3 ಯೋಹಾ. 9, 10.

ದಿಯೊತ್ರೇಫನ ಮನೆಯಲ್ಲಿ ತಂಗಲು ಅವಕಾಶವಿದ್ದರೂ ನಂಬಿಗಸ್ತ ಕ್ರೈಸ್ತರಿಗೆ ಅಲ್ಲಿರಲು ಖಂಡಿತ ಮನಸ್ಸಿರಲಿಲ್ಲ. ಏಕೆಂದರೆ ಅವನು ಸಭೆಯಲ್ಲಿ ಪ್ರಥಮ ಸ್ಥಾನ ಹೊಂದಲು ಇಷ್ಟಪಡುತ್ತಿದ್ದನು ಮತ್ತು ಅಪೊಸ್ತಲ ಯೋಹಾನನಿಂದ ಏನನ್ನೂ ಗೌರವಭಾವದಿಂದ ಸ್ವೀಕರಿಸುತ್ತಿರಲಿಲ್ಲ. ಅಷ್ಟುಮಾತ್ರವಲ್ಲ ಆ ಅಪೊಸ್ತಲ ಹಾಗೂ ಇತರರ ವಿಷಯವಾಗಿ ಕೆಟ್ಟಕೆಟ್ಟದಾಗಿ ಮಾತಾಡುತ್ತಿದ್ದ. ಯೋಹಾನನು ಅವನನ್ನು ಒಬ್ಬ ಸುಳ್ಳು ಬೋಧಕನೆಂದು ಕರೆಯಲಿಲ್ಲವಾದರೂ ಅವನು ಆ ಅಪೊಸ್ತಲನ ಅಧಿಕಾರವನ್ನು ವಿರೋಧಿಸುತ್ತಿದ್ದದ್ದಂತೂ ನಿಜ. ಪ್ರಖ್ಯಾತನಾಗಿರಬೇಕೆಂಬ ಆಸೆ ಮತ್ತು ಅಕ್ರೈಸ್ತ ಮನೋಭಾವವನ್ನು ತೋರಿಸುತ್ತಿದ್ದ ಕಾರಣ ಅವನು ನಿಷ್ಠೆಯುಳ್ಳವನು ಎಂದು ಹೇಳಲು ಸಾಧ್ಯವಿಲ್ಲ. ಸಭೆಯಲ್ಲಿ ಅಧಿಕಾರಕ್ಕಾಗಿ ಆಸೆಪಡುತ್ತಿರುವ, ಅಹಂಕಾರವುಳ್ಳ ವ್ಯಕ್ತಿಗಳಿದ್ದರೆ ಅವರು ಸಹೋದರರ ಮಧ್ಯೆ ಒಡಕನ್ನು ಹುಟ್ಟಿಸಬಲ್ಲರೆಂದು ದಿಯೊತ್ರೇಫನ ಉದಾಹರಣೆ ತೋರಿಸುತ್ತದೆ. ಆದ್ದರಿಂದಲೇ ಯೋಹಾನನು ಗಾಯನಿಗೆ ‘ಕೆಟ್ಟದ್ದನ್ನು ಅನುಕರಿಸಬೇಡ’ ಎಂದು ಹೇಳಿದನು. ಈ ಮಾತು ನಮಗೂ ಅನ್ವಯಿಸುತ್ತದೆ.—3 ಯೋಹಾ. 11.

ಒಳ್ಳೇದನ್ನು ಮಾಡಲು ಅತ್ಯುತ್ತಮ ಕಾರಣ

ದೇಮೇತ್ರಿಯ ಎಂಬ ಇನ್ನೊಬ್ಬ ಕ್ರೈಸ್ತನಿದ್ದ. ಅವನು ದಿಯೊತ್ರೇಫನಂತಿರಲಿಲ್ಲ. ಅವನು ಒಬ್ಬ ಒಳ್ಳೇ ಮಾದರಿ ಆಗಿದ್ದಾನೆಂದು ಯೋಹಾನನು ಪತ್ರದಲ್ಲಿ ತಿಳಿಸುತ್ತಾನೆ. “ದೇಮೇತ್ರಿಯನ ಕುರಿತು ಎಲ್ಲರೂ ಸಾಕ್ಷಿನೀಡಿದ್ದಾರೆ” ಅಥವಾ ಒಳ್ಳೇ ವರದಿ ಕೊಟ್ಟಿದ್ದಾರೆ ಎಂದು ಯೋಹಾನನು ಬರೆದನು. “ವಾಸ್ತವದಲ್ಲಿ ನಾವು ಸಹ ಸಾಕ್ಷಿನೀಡುತ್ತಿದ್ದೇವೆ ಮತ್ತು ನಾವು ಕೊಡುವ ಸಾಕ್ಷಿ ಸತ್ಯವಾದದ್ದೆಂದು ನಿನಗೆ ತಿಳಿದಿದೆ” ಎಂದನು. (3 ಯೋಹಾ. 12) ಬಹುಶಃ ದೇಮೇತ್ರಿಯನಿಗೆ ಗಾಯನ ಸಹಾಯ ಬೇಕಿತ್ತು. ಮೂರನೇ ಯೋಹಾನ ಪುಸ್ತಕವು ಒಂದು ರೀತಿಯಲ್ಲಿ ಯೋಹಾನನು ದೇಮೇತ್ರಿಯನ ಬಗ್ಗೆ ಬರೆದ ಪರಿಚಯ ಪತ್ರ, ಶಿಫಾರಸ್ಸು ಪತ್ರವೂ ಆಗಿರಬಹುದು. ದೇಮೇತ್ರಿಯನೇ ಆ ಪತ್ರವನ್ನು ಗಾಯನಿಗೆ ತಲಪಿಸಿರಬಹುದು. ಯೋಹಾನನ ಪ್ರತಿನಿಧಿಯಾಗಿದ್ದ ಅಥವಾ ಸಂಚರಣ ಮೇಲ್ವಿಚಾರಕ ಆಗಿದ್ದಿರಬಹುದಾದ ದೇಮೇತ್ರಿಯನು ಯೋಹಾನನು ಪತ್ರದಲ್ಲಿ ಬರೆದಿದ್ದ ಮಾತನ್ನು ದೃಢೀಕರಿಸಿರಬೇಕು.

ಗಾಯನು ಈಗಾಗಲೇ ಅತಿಥಿಸತ್ಕಾರ ಮಾಡುವ ವ್ಯಕ್ತಿಯಾಗಿದ್ದರೆ ಅದನ್ನು ಮಾಡುತ್ತಾ ಇರಲು ಯೋಹಾನನು ಉತ್ತೇಜಿಸಿದ್ದೇಕೆ? ಗಾಯನಲ್ಲಿ ಇನ್ನೂ ಹೆಚ್ಚು ಧೈರ್ಯ ತುಂಬಿಸಲಿಕ್ಕಾ? ಅತಿಥಿಸತ್ಕಾರ ಮಾಡುತ್ತಿರುವ ಕ್ರೈಸ್ತರನ್ನು ದಿಯೊತ್ರೇಫನು ಸಭೆಯಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದದರಿಂದ ಗಾಯನು ಸ್ವಲ್ಪ ಹಿಂಜರಿಯಬಹುದು ಎಂಬ ಚಿಂತೆಯಿಂದಲಾ? ವಿಷಯ ಏನೇ ಇರಲಿ, ಯೋಹಾನನು ಗಾಯನಿಗೆ “ಒಳ್ಳೇದನ್ನು ಮಾಡುವವನು ದೇವರಿಂದ ಹುಟ್ಟಿದವನಾಗಿದ್ದಾನೆ” ಎಂದು ಹೇಳುವ ಮೂಲಕ ಧೈರ್ಯ ತುಂಬಿಸಿದನು. (3 ಯೋಹಾ. 11) ಯೋಹಾನನು ಹೇಳಿದ ಆ ವಿಷಯ ಒಳ್ಳೇದನ್ನು ಮಾಡುತ್ತಾ ಇರಲು ಒಂದು ಅತ್ಯುತ್ತಮ ಕಾರಣ.

ಯೋಹಾನನು ಬರೆದ ಆ ಪತ್ರ ಅತಿಥಿಸತ್ಕಾರ ಮಾಡುತ್ತಾ ಇರಲು ಗಾಯನನ್ನು ಪ್ರೇರಿಸಿತಾ? ಹೌದೆಂದು ತೋರುತ್ತದೆ. ಆದ್ದರಿಂದಲೇ ಯೋಹಾನನ ಮೂರನೇ ಪತ್ರವನ್ನು ಬೈಬಲಿನಲ್ಲಿ ಸೇರಿಸಲಾಗಿದೆ. ಹೀಗೆ ಬೇರೆಯವರೂ “ಒಳ್ಳೇದನ್ನು ಅನುಕರಿಸು”ವಂತೆ ಪ್ರೋತ್ಸಾಹ ಪಡೆಯುತ್ತಾರೆ.

ಮೂರನೆಯ ಯೋಹಾನ ಪುಸ್ತಕದಿಂದ ಪಾಠಗಳು

ಹಿಂದಿನ ಕಾಲದ ನಮ್ಮ ಪ್ರಿಯ ಸಹೋದರನಾದ ಗಾಯನ ಬಗ್ಗೆ ಇಷ್ಟು ಬಿಟ್ಟರೆ ಬೇರೇನೂ ತಿಳಿದಿಲ್ಲ. ಆದರೂ ಅವನ ಜೀವನದ ಬಗ್ಗೆ ಈ ಕಿರುನೋಟ ನಮಗೆ ಹಲವಾರು ಪಾಠಗಳನ್ನು ಕಲಿಸುತ್ತದೆ.

ನಾವು ಯಾವ ವಿಧಗಳಲ್ಲಿ ‘ಅತಿಥಿಸತ್ಕಾರದ ಪಥವನ್ನು ಅನುಸರಿಸಬಹುದು?’

ಮೊದಲ ಪಾಠ: ಪ್ರಯಾಣಮಾಡಲು ಸಿದ್ಧರಿದ್ದ ನಂಬಿಗಸ್ತ ಕ್ರೈಸ್ತರಿಂದಾಗಿ ನಮ್ಮಲ್ಲಿ ಹೆಚ್ಚಿನವರಿಗೆ ಸತ್ಯದ ಜ್ಞಾನ ಸಿಕ್ಕಿದೆ. ಇಂದಿನ ಕ್ರೈಸ್ತ ಸಭೆಯಲ್ಲಿರುವ ಎಲ್ಲರೂ ಸುವಾರ್ತೆಯ ನಿಮಿತ್ತ ದೂರದೂರ ಪ್ರಯಾಣ ಮಾಡುವುದಿಲ್ಲ ನಿಜ. ಆದರೆ ಯಾರು ಪ್ರಯಾಣಮಾಡುತ್ತಾರೊ, ಉದಾಹರಣೆಗೆ ಸಂಚರಣ ಮೇಲ್ವಿಚಾರಕ ಮತ್ತು ಅವರ ಪತ್ನಿಯನ್ನು ಯಾವುದಾದರೊಂದು ವಿಧದಲ್ಲಿ ನಾವು ಗಾಯನಂತೆ ಬೆಂಬಲಿಸಬಹುದು, ಉತ್ತೇಜಿಸಬಹುದು. ಅಥವಾ ನಮ್ಮ ದೇಶದೊಳಗೇ ಇಲ್ಲವೇ ಬೇರೊಂದು ದೇಶದಲ್ಲಿ ಹೆಚ್ಚಿನ ರಾಜ್ಯ ಪ್ರಚಾರಕರ ಅಗತ್ಯವಿರುವ ಸ್ಥಳಕ್ಕೆ ಹೋಗುವವರಿಗೆ ನಾವು ಪ್ರಾಯೋಗಿಕ ಸಹಾಯ ಕೊಡಬಹುದು. ಹೀಗೆ “ಅತಿಥಿಸತ್ಕಾರದ ಪಥವನ್ನು ಅನುಸರಿ”ಸೋಣ.—ರೋಮ. 12:13; 1 ತಿಮೊ. 5:9, 10.

ಎರಡನೇ ಪಾಠ: ಇಂದು ಸಭೆಗಳಲ್ಲಿ ಅಪರೂಪಕ್ಕೊಮ್ಮೆ ಕೆಲವರು ಅಧಿಕಾರದ ವಿರುದ್ಧ ಸವಾಲೆಬ್ಬಿಸಬಹುದು. ಆಗ ನಮಗೆ ಆಶ್ಚರ್ಯವಾಗಬಾರದು. ಏಕೆಂದರೆ ಅಪೊಸ್ತಲ ಯೋಹಾನ ಮತ್ತು ಅಪೊಸ್ತಲ ಪೌಲನ ಅಧಿಕಾರವನ್ನೂ ಪ್ರಶ್ನಿಸಲಾಯಿತು. (2 ಕೊರಿಂ. 10:7-12; 12:11-13) ಇಂಥ ತೊಂದರೆಗಳು ಸಭೆಯವರಿಂದ ಬಂದಾಗ ನಮ್ಮ ಪ್ರತಿಕ್ರಿಯೆ ಏನಾಗಿರಬೇಕು? ಪೌಲನು ತಿಮೊಥೆಯನಿಗೆ ಈ ಸಲಹೆ ಕೊಟ್ಟನು: “ಕರ್ತನ ದಾಸನು ಜಗಳವಾಡದೆ ಎಲ್ಲರೊಂದಿಗೆ ಕೋಮಲಭಾವದಿಂದಿರಬೇಕು; ಅವನು ಬೋಧಿಸಲು ಅರ್ಹನೂ ಕೇಡನ್ನು ಅನುಭವಿಸುತ್ತಿರುವಾಗ ತಾಳಿಕೊಳ್ಳುವವನೂ ಎದುರಿಸುವವರನ್ನು ಸೌಮ್ಯಭಾವದಿಂದ ಉಪದೇಶಿಸುವವನೂ ಆಗಿರಬೇಕು.” ಸಭೆಯಲ್ಲಿ ಟೀಕಿಸುವ ಸ್ವಭಾವದವರು ನಮ್ಮನ್ನು ಕೆರಳಿಸಲು ಪ್ರಯತ್ನಿಸಿದಾಗ ನಾವು ಸೌಮ್ಯಭಾವ ತೋರಿಸಿದರೆ ಅವರಲ್ಲಿ ಕೆಲವರಾದರೂ ನಿಧಾನವಾಗಿ ತಮ್ಮ ಸ್ವಭಾವವನ್ನು ಬದಲಾಯಿಸಬಹುದು. ಆಗ ಯೆಹೋವನು “ಅವರಿಗೆ ಸತ್ಯದ ನಿಷ್ಕೃಷ್ಟ ಜ್ಞಾನಕ್ಕೆ ನಡೆಸುವ ಪಶ್ಚಾತ್ತಾಪವನ್ನು ಕೊಡಬಹುದು.”—2 ತಿಮೊ. 2:24, 25.

ಮೂರನೇ ಪಾಠ: ವಿರೋಧವಿದ್ದರೂ ನಿಷ್ಠೆಯಿಂದ ಯೆಹೋವನ ಸೇವೆಮಾಡುತ್ತಿರುವ ಜೊತೆ ಕ್ರೈಸ್ತರಿಗೆ ಗಮನಕೊಟ್ಟು, ಅವರ ನಂಬಿಗಸ್ತ ಜೀವನಕ್ರಮಕ್ಕಾಗಿ ಪ್ರೀತಿಯಿಂದ ಶ್ಲಾಘಿಸಬೇಕು. ಅಪೊಸ್ತಲ ಯೋಹಾನನ ಈ ಪತ್ರದ ಮೂಲಕ ಗಾಯನಿಗೆ ಪ್ರೋತ್ಸಾಹ ಸಿಕ್ಕಿರಬೇಕು ಮತ್ತು ಅವನು ಮಾಡುತ್ತಿರುವ ಕೆಲಸ ಸರಿಯೆಂದು ಭರವಸೆ ಮೂಡಿರಬೇಕು. ಅದೇ ರೀತಿ ಹಿರಿಯರು ಇಂದು ಯೋಹಾನನ ಮಾದರಿಯನ್ನು ಅನುಕರಿಸುತ್ತಾ ಸಹೋದರ ಸಹೋದರಿಯರನ್ನು ಪ್ರೋತ್ಸಾಹಿಸಬೇಕು. ಇದರಿಂದ ಅವರಿಗೆ ‘ದಣಿಯದೆ’ ನಂಬಿಗಸ್ತರಾಗಿರಲು ಸಹಾಯವಾಗುತ್ತದೆ.—ಯೆಶಾ. 40:31; 1 ಥೆಸ. 5:11.

ಅಪೊಸ್ತಲ ಯೋಹಾನನು ಗಾಯನಿಗೆ ಬರೆದ ಈ ಪತ್ರವನ್ನು ಗ್ರೀಕ್‌ ಭಾಷೆಯಲ್ಲಿ ನೋಡಿದರೆ ಇದರಲ್ಲಿ ಬರೀ 219 ಪದಗಳಿವೆ. ಆದ್ದರಿಂದ ಇದು ಬೈಬಲಿನ ಪುಸ್ತಕಗಳಲ್ಲೇ ಅತಿ ಚಿಕ್ಕದು. ಹಾಗಿದ್ದರೂ ಇಂದಿನ ಕ್ರೈಸ್ತರಿಗೆ ಅದು ತುಂಬ ಮಹತ್ವಪೂರ್ಣವಾದ ಪುಸ್ತಕ ಆಗಿದೆ.