ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿನ್ನ ಬುದ್ಧಿ ಸ್ತೋತ್ರಾರ್ಹವೇ ಸರಿ’

‘ನಿನ್ನ ಬುದ್ಧಿ ಸ್ತೋತ್ರಾರ್ಹವೇ ಸರಿ’

ಇದನ್ನು ಹೇಳಿದ್ದು ಪುರಾತನ ಇಸ್ರಾಯೇಲಿನಲ್ಲಿದ್ದ ದಾವೀದ. ಅವನಿಗೆ ಭೇಟಿಯಾದ ಒಬ್ಬ ಮಹಿಳೆಯನ್ನು ಹೊಗಳುತ್ತಾ ಆಡಿದ ಮಾತುಗಳಿವು. ಆಕೆಯ ಹೆಸರು ಅಬೀಗೈಲ್‌. ದಾವೀದ ಆಕೆಯನ್ನು ಹೊಗಳಿದ್ದೇಕೆ? ಆಕೆಯಿಂದ ನಾವೇನು ಕಲಿಯಬಹುದು?

ಈ ಮಹಿಳೆ ದಾವೀದನಿಗೆ ಎದುರಾದದ್ದು ಅವನು ರಾಜ ಸೌಲನಿಂದ ಓಡಿಹೋಗುತ್ತಿದ್ದ ಸಮಯದಲ್ಲಿ. ಧನಿಕನಾಗಿದ್ದ ಆಕೆಯ ಗಂಡ ನಾಬಾಲನಿಗೆ ಆಡುಕುರಿಗಳ ದೊಡ್ಡ ಹಿಂಡುಗಳಿದ್ದವು. ಅವನ ಸೇವಕರು ಅವನ್ನು ಯೆಹೂದದ ದಕ್ಷಿಣ ಭಾಗದಲ್ಲಿದ್ದ ಗುಡ್ಡಪ್ರದೇಶದಲ್ಲಿ ಮೇಯಿಸುತ್ತಿದ್ದರು. ದಾವೀದ ಮತ್ತು ಅವನೊಟ್ಟಿಗಿದ್ದ ಪುರುಷರು ನಾಬಾಲನ ಕುರುಬರಿಗೆ, ಮಂದೆಗಳಿಗೆ “ಕಾವಲುಗೋಡೆಯಂತಿದ್ದರು.” ಒಂದು ದಿನ ದಾವೀದನು ನಾಬಾಲನ ಬಳಿ ಕೆಲವು ದೂತರನ್ನು ಕಳುಹಿಸಿ, “ನಿನಗಿರುವದರಲ್ಲಿ” ಅಂದರೆ ಅವನ ಹತ್ತಿರ ಇದ್ದ ಆಹಾರದಲ್ಲಿ ಸ್ವಲ್ಪವನ್ನು ಕೊಡುವಂತೆ ಕೇಳಿಕೊಂಡನು. (1 ಸಮು. 25:8, 15, 16) ಅವನ ಈ ಬೇಡಿಕೆ ನ್ಯಾಯವಾಗಿತ್ತು. ಎಷ್ಟೆಂದರೂ ದಾವೀದನು ಮತ್ತು ಅವನ ಜೊತೆಗಿದ್ದವರು ನಾಬಾಲನ ಕುರುಬರಿಗೆ ಹಾಗೂ ಮಂದೆಗೆ ಸಂರಕ್ಷಣೆ ಕೊಟ್ಟಿದ್ದರಲ್ವಾ?

ಆದರೆ ನಾಬಾಲ ತನ್ನ ಹೆಸರಿಗೆ ತಕ್ಕಂತೆ ನಡೆದುಕೊಂಡ. ಅವನ ಹೆಸರಿನ ಅರ್ಥ “ಬುದ್ಧಿಹೀನ” ಅಥವಾ “ಮೂರ್ಖ.” ಅವನು ದಾವೀದನ ಬೇಡಿಕೆಯನ್ನು ತಳ್ಳಿಹಾಕುತ್ತಾ, ಅವಮಾನಿಸಿ ತುಂಬ ಕಠೋರವಾಗಿ ಉತ್ತರಕೊಟ್ಟ. ನಾಬಾಲ ತನಗೆ ಮಾಡಿದ ಅನ್ಯಾಯಕ್ಕೆ ತಕ್ಕ ಶಾಸ್ತಿಕೊಡಲು ದಾವೀದ ತಯಾರಾದ. ನಾಬಾಲನ ಮೂರ್ಖತನಕ್ಕೆ ಅವನು ಮಾತ್ರವಲ್ಲ ಅವನ ಮನೆಯಲ್ಲಿದ್ದವರೆಲ್ಲರೂ ಶಿಕ್ಷೆ ಅನುಭವಿಸಲಿದ್ದರು.—1 ಸಮು. 25:2-13, 21, 22.

ದಾವೀದನು ದುಡುಕಿ ಮಾಡಲಿದ್ದ ಕೆಲಸದಿಂದ ಏನೆಲ್ಲಾ ಅನಾಹುತ ಆಗಲಿದೆ ಎಂದು ಯೋಚಿಸಿ ನೋಡಿದ ಅಬೀಗೈಲಳು ಧೈರ್ಯದಿಂದ ಹೆಜ್ಜೆ ತೆಗೆದುಕೊಂಡಳು. ದಾವೀದನನ್ನು ಭೇಟಿಯಾಗಿ, ಗೌರವದಿಂದ ಮಾತಾಡುತ್ತಾ ಯೆಹೋವನೊಟ್ಟಿಗಿನ ಅವನ ಸಂಬಂಧದ ಬಗ್ಗೆ ಯೋಚಿಸುವಂತೆ ಮಾಡಿದಳು. ಮುಂದೆ ಅರಸನಾಗಲಿದ್ದ ದಾವೀದನಿಗೆ ಮತ್ತು ಅವನ ಜೊತೆಗಿದ್ದ ಪುರುಷರಿಗೆ ಸಾಕಾಗುವಷ್ಟು ಆಹಾರ ಕೊಟ್ಟಳು. ಆಗ ದಾವೀದ, ತಾನು ಯೆಹೋವನ ದೃಷ್ಟಿಯಲ್ಲಿ ಅಪರಾಧಿಯಾಗುವುದನ್ನು ತಡೆಯಲು ಆತನೇ ಆಕೆಯನ್ನು ಕಳುಹಿಸಿದ್ದಾನೆಂದು ಒಪ್ಪಿಕೊಂಡನು. “ಸ್ವಹಸ್ತದಿಂದ ಮುಯ್ಯಿ ತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನೂ ನಿನ್ನ ಬುದ್ಧಿಯೂ ಸ್ತೋತ್ರಾರ್ಹವೇ ಸರಿ” ಎಂದು ಅವಳಿಗೆ ಹೇಳಿದನು.—1 ಸಮು. 25:18, 19, 23-35.

ಈ ಘಟನೆಯಿಂದ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ನಾವು ಯಾವತ್ತೂ ನಾಬಾಲನಂತೆ ಆಗಬಾರದು. ಅಂದರೆ ಬೇರೆಯವರು ನಮಗೆ ಮಾಡಿದ ಉಪಕಾರಕ್ಕೆ ನಾವು ಅಪಕಾರಿಗಳಾಗಬಾರದು. ನಾವು ಕಲಿಯುವ ಇನ್ನೊಂದು ವಿಷಯವೇನೆಂದರೆ, ಕೆಟ್ಟದ್ದೇನೋ ನಡೆಯಲಿದೆ ಎಂದು ನಮಗೆ ಗೊತ್ತಾದರೆ ಅದನ್ನು ತಡೆಯಲು ನಮ್ಮಿಂದಾದ ಪ್ರಯತ್ನ ಮಾಡಬೇಕು. ಕೀರ್ತನೆಗಾರನಂತೆ ನಾವೂ ದೇವರಿಗೆ, “ಉತ್ಕೃಷ್ಟವಾದ ಜ್ಞಾನವಿವೇಕಗಳನ್ನು ನನಗೆ ಹೇಳಿಕೊಡು” ಎಂದು ವಿನಂತಿಸಬಹುದು.—ಕೀರ್ತ. 119:66.

ನಾವು ತೆಗೆದುಕೊಂಡ ಹೆಜ್ಜೆಯಲ್ಲಿ ಎದ್ದುಕಾಣುವ ‘ವಿವೇಕ’ ಅಥವಾ ‘ಬುದ್ಧಿ’ ಇತರರ ಗಮನಕ್ಕೆ ಬರಬಹುದು. ಅವರು ಅದನ್ನು ನಮಗೆ ಮಾತುಗಳಲ್ಲಿ ಹೇಳಲಿ, ಹೇಳದಿರಲಿ ‘ನಿನ್ನ ಬುದ್ಧಿ ಸ್ತೋತ್ರಾರ್ಹವೇ ಸರಿ’ ಎಂದು ಹೇಳಿದ ದಾವೀದನಂತೆ ಅವರಿಗೆ ನಮ್ಮ ಬಗ್ಗೆ ಅನಿಸಬಹುದು.