ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ”

“ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ”

‘ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ ನಿಮ್ಮ ಹೃದಯಗಳನ್ನು ಕಾಯುವುದು.’—ಫಿಲಿ. 4:7.

ಗೀತೆಗಳು: 76, 141

1, 2. ಪೌಲಸೀಲರಿಗೆ ಫಿಲಿಪ್ಪಿಯಲ್ಲಿ ಏನಾಯಿತು? (ಲೇಖನದ ಆರಂಭದ ಚಿತ್ರ ನೋಡಿ.)

ಮಧ್ಯರಾತ್ರಿ ಆಗುತ್ತಾ ಬಂದಿದೆ. ಮಿಷನರಿಗಳಾಗಿದ್ದ ಪೌಲ ಮತ್ತು ಸೀಲರನ್ನು ಫಿಲಿಪ್ಪಿ ಪಟ್ಟಣದ ಸೆರೆಮನೆಯಲ್ಲಿ ತುಂಬ ಒಳಗಿನ, ಕತ್ತಲೆ ತುಂಬಿದ ಕೋಣೆಯಲ್ಲಿ ಕೂಡಿಹಾಕಲಾಗಿದೆ. ಅವರಿಗೆ ಕಾಲ್ಕೊರಡುಗಳನ್ನು ತೊಡಿಸಲಾಗಿದೆ. ಅವರಿಗೆ ಆಕಡೆ ಈಕಡೆ ತಿರುಗಲೂ ಆಗುತ್ತಿಲ್ಲ. ಜೊತೆಗೆ ಅವರಿಗೆ ಬಿದ್ದ ಹೊಡೆತಗಳಿಂದ ಬೆನ್ನು ತುಂಬ ನೋಯುತ್ತಿದೆ. (ಅ. ಕಾ. 16:23, 24, ಪಾದಟಿಪ್ಪಣಿ) ಇದೆಲ್ಲ ಹೇಗಾಯಿತು? ಅಂದು ಹಗಲಲ್ಲಿ ಪೌಲಸೀಲರನ್ನು ಇದ್ದಕ್ಕಿದ್ದಂತೆ ಜನರ ಗುಂಪೊಂದು ಸಾರ್ವಜನಿಕ ಸಭಾಸ್ಥಾನದ ಅಧಿಪತಿಗಳ ಬಳಿಗೆ ಎಳೆದುಕೊಂಡು ಹೋಯಿತು. ಅವಸರ ಅವಸರದಿಂದ ಏನೊ ಒಂದು ವಿಚಾರಣೆ ನಡೆಸಲಾಯಿತು. ನಂತರ ಆ ಜನರು ಪೌಲಸೀಲರ ಬಟ್ಟೆಗಳನ್ನು ಹರಿದು ಕೋಲುಗಳಿಂದ ಸಿಕ್ಕಾಪಟ್ಟೆ ಹೊಡೆದರು. (ಅ. ಕಾ. 16:16-22) ಇದು ದೊಡ್ಡ ಅನ್ಯಾಯ! ಯಾಕೆಂದರೆ ಪೌಲ ರೋಮಿನ ಪ್ರಜೆಯಾಗಿದ್ದನು. ಅವನಿಗೆ ನ್ಯಾಯವಾದ ರೀತಿಯಲ್ಲಿ ವಿಚಾರಣೆ ನಡೆಯಬೇಕಾಗಿತ್ತು. *

2 ಸೆರೆಮನೆಯಲ್ಲಿದ್ದ ಪೌಲ ಆ ದಿನ ನಡೆದದ್ದನ್ನೆಲ್ಲ ಯೋಚಿಸಿರಬಹುದು. ಫಿಲಿಪ್ಪಿ ಪಟ್ಟಣದ ಜನರ ಬಗ್ಗೆಯೂ ಯೋಚಿಸಿರಬಹುದು. ಅವನು ಭೇಟಿಮಾಡಿದ ಬೇರೆ ಎಷ್ಟೋ ಪಟ್ಟಣಗಳಲ್ಲಿ ಸಭಾಮಂದಿರಗಳಿದ್ದವು. ಆದರೆ ಈ ಪಟ್ಟಣದಲ್ಲಿ ಒಂದೇ ಒಂದು ಸಭಾಮಂದಿರವೂ ಇರಲಿಲ್ಲ. ಹಾಗಾಗಿ ಅಲ್ಲಿದ್ದ ಯೆಹೂದ್ಯರು ಊರಬಾಗಿಲಿನ ಹೊರಗೆ ನದೀತೀರಕ್ಕೆ ಹೋಗಿ ಸಭೆಸೇರಿ ಆರಾಧನೆ ಮಾಡುತ್ತಿದ್ದರು. (ಅ. ಕಾ. 16:13, 14) ಅಲ್ಲಿ ಯಾಕೆ ಸಭಾಮಂದಿರ ಇರಲಿಲ್ಲ? ಯಾಕೆಂದರೆ ಒಂದು ಊರಲ್ಲಿ ಒಂದು ಸಭಾಮಂದಿರ ಇರಬೇಕಾದರೆ ಅಲ್ಲಿ ಕಡಿಮೆಪಕ್ಷ ಹತ್ತು ಮಂದಿ ಯೆಹೂದಿ ಗಂಡಸರಾದರೂ ಇರಬೇಕಿತ್ತು. ಬಹುಶಃ ಆ ಪಟ್ಟಣದಲ್ಲಿ ಅಷ್ಟು ಯೆಹೂದಿ ಗಂಡಸರೂ ಇರಲಿಲ್ಲ. ಫಿಲಿಪ್ಪಿಯ ಜನರಿಗೆ ತಾವು ರೋಮನ್‌ ಪ್ರಜೆಗಳು ಎಂದು ತುಂಬ ಹೆಮ್ಮೆ ಇತ್ತು. (ಅ. ಕಾ. 16:21) ಯೆಹೂದ್ಯರಾಗಿದ್ದ ಪೌಲಸೀಲರು ರೋಮಿನ ಪ್ರಜೆಗಳಾಗಿರುವ ಸಾಧ್ಯತೆ ಇದೆಯೆಂದು ಆ ಜನರು ಯೋಚಿಸಿಯೇ ಇರಲಿಕ್ಕಿಲ್ಲ. ವಿಷಯ ಏನೇ ಇರಲಿ, ಪೌಲಸೀಲರನ್ನು ಸೆರೆಮನೆಗೆ ಹಾಕಿದ್ದಂತೂ ಅನ್ಯಾಯವಾಗಿತ್ತು.

3. (ಎ) ಪೌಲನನ್ನು ಸೆರೆಮನೆಗೆ ಹಾಕಲಾದಾಗ ಯಾವ ವಿಷಯದಿಂದ ಅವನಿಗೆ ಗೊಂದಲ ಆಗಿರಬಹುದು? (ಬಿ) ಆದರೂ ಅವನಲ್ಲಿ ಯಾವ ಮನೋಭಾವ ಇತ್ತು?

3 ಪೌಲ ತಾನು ಫಿಲಿಪ್ಪಿಗೆ ಬಂದು ತಲಪಿದ್ದು ಹೇಗೆ ಎಂದು ಕೂಡ ಯೋಚಿಸಿರಬಹುದು. ಕೆಲವು ತಿಂಗಳ ಹಿಂದೆ ಅವನು ಏಷ್ಯಾ ಮೈನರ್‌ನಲ್ಲಿ ಈಜಿಯನ್‌ ಸಮುದ್ರದ ಇನ್ನೊಂದು ತೀರದಲ್ಲಿದ್ದನು. ಅಲ್ಲಿದ್ದಾಗ ಪವಿತ್ರಾತ್ಮ ಅವನನ್ನು ಕೆಲವು ಪ್ರದೇಶಗಳಲ್ಲಿ ಸಾರದಂತೆ ತಡೆದಿತ್ತು. ಅದು ಅವನನ್ನು ಬೇರೆಲ್ಲಿಗೋ ಹೋಗಿ ಸಾರಲು ತಳ್ಳುತ್ತಿದ್ದಂತಿತ್ತು. (ಅ. ಕಾ. 16:6, 7) ಎಲ್ಲಿಗೆ? ಅವನು ತ್ರೋವದಲ್ಲಿದ್ದಾಗ ಒಂದು ದರ್ಶನದಲ್ಲಿ “ಮಕೆದೋನ್ಯಕ್ಕೆ ಬಂದು ನಮಗೆ ಸಹಾಯಮಾಡು” ಎಂದು ಹೇಳಲಾಯಿತು. ಹೀಗೆ ಯೆಹೋವನ ಚಿತ್ತವೇನೆಂದು ಪೌಲನಿಗೆ ಸ್ಪಷ್ಟವಾಗಿತ್ತು. ಅವನು ಕೂಡಲೇ ಮಕೆದೋನ್ಯಕ್ಕೆ ಹೋದನು. (ಅ. ಕಾರ್ಯಗಳು 16:8-10 ಓದಿ.) ಅಲ್ಲಿ ಹೋದ ಮೇಲೆ ಏನಾಯಿತು? ಹೋದ ಸ್ವಲ್ಪ ಸಮಯದಲ್ಲೇ ಅವನನ್ನು ಸೆರೆಮನೆಯಲ್ಲಿ ಕೂಡಿಹಾಕಲಾಯಿತು! ಅವನಿಗೆ ಹೀಗಾಗುವಂತೆ ಯೆಹೋವನು ಯಾಕೆ ಅನುಮತಿಸಿದನು? ಅವನು ಎಷ್ಟು ಸಮಯ ಸೆರೆಮನೆಯಲ್ಲಿ ಇರಲಿದ್ದನು? ಈ ಪ್ರಶ್ನೆಗಳು ಪೌಲನ ಮನಸ್ಸಿನಲ್ಲಿ ಎದ್ದಿರಬಹುದು. ಆದರೂ ಅವನ ನಂಬಿಕೆ ಬಲವಾಗಿತ್ತು ಮತ್ತು ತನ್ನ ಸಂತೋಷವನ್ನು ಕಾಪಾಡಿಕೊಂಡನು. ಪೌಲ ಮತ್ತು ಸೀಲ ಇಬ್ಬರೂ “ಪ್ರಾರ್ಥನೆ ಮಾಡುತ್ತಾ ಗೀತೆಯನ್ನು ಹಾಡುವ ಮೂಲಕ ದೇವರನ್ನು ಸ್ತುತಿಸುತ್ತಾ” ಇದ್ದರು. (ಅ. ಕಾ. 16:25) ದೇವಶಾಂತಿ ಅವರ ಹೃದಮನಗಳಿಗೆ ಸಾಂತ್ವನ ನೀಡಿತು.

4, 5. (ಎ) ನಮ್ಮ ಸನ್ನಿವೇಶಕ್ಕೂ ಪೌಲನ ಸನ್ನಿವೇಶಕ್ಕೂ ಯಾವ ಹೋಲಿಕೆ ಇರಬಹುದು? (ಬಿ) ಪೌಲನ ಸನ್ನಿವೇಶ ಹೇಗೆ ಅವನು ನೆನಸದ ರೀತಿಯಲ್ಲಿ ಬದಲಾಯಿತು?

4 ಪೌಲನಂತೆ ಬಹುಶಃ ನಿಮಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಸನ್ನಿವೇಶ ಎದುರಾದಾಗ ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸಿದಿರಿ. ನಂತರ ಪವಿತ್ರಾತ್ಮದ ಮಾರ್ಗದರ್ಶನಕ್ಕೆ ಅನುಸಾರವೇ ನಡೆಯುತ್ತಿದ್ದೀರೆಂದೂ ನಿಮಗೆ ಅನಿಸಿತು. ಆದರೆ ಆಮೇಲೆ ನಿಮಗೆ ತುಂಬ ಸಮಸ್ಯೆಗಳು ಬಂದವು ಅಥವಾ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬೇಕಾಗಿ ಬಂತು. (ಪ್ರಸಂ. 9:11) ಈಗ ನೀವು ಅದನ್ನೆಲ್ಲ ನೆನಪಿಸಿಕೊಳ್ಳುವಾಗ ದೇವರು ಯಾಕೆ ಆ ಸಮಸ್ಯೆಗಳನ್ನು ಅನುಮತಿಸಿದನು ಎಂಬ ಯೋಚನೆ ಬರಬಹುದು. ಹೀಗಿದ್ದರೂ ತಾಳಿಕೊಂಡು, ಯೆಹೋವನ ಮೇಲೆ ಪೂರ್ಣ ಭರವಸೆ ಇಡುವುದನ್ನು ಮುಂದುವರಿಸಲು ನಿಮಗೆ ಯಾವುದು ಸಹಾಯ ಮಾಡುತ್ತದೆ? ಇದಕ್ಕೆ ಉತ್ತರ ಪೌಲಸೀಲರಿಗೆ ಮುಂದೆ ಏನಾಯಿತೋ ಅದರಿಂದ ಸಿಗುತ್ತದೆ.

5 ಸೆರೆಮನೆಯಲ್ಲಿದ್ದ ಪೌಲಸೀಲರು ಗೀತೆಗಳನ್ನು ಹಾಡುತ್ತಿದ್ದಾಗ ಅವರು ನೆನಸದಂಥ ಅನೇಕ ಘಟನೆಗಳು ನಡೆದವು. ಮೊದಲು ಒಂದು ದೊಡ್ಡ ಭೂಕಂಪ ಆಯಿತು. ಸೆರೆಮನೆಯ ಬಾಗಿಲುಗಳು ಇದ್ದಕ್ಕಿದ್ದಂತೆ ತೆರೆದವು. ಎಲ್ಲ ಕೈದಿಗಳ ಬೇಡಿಗಳು ಕಳಚಿಬಿದ್ದವು. ಈ ಕಾರಣಕ್ಕೆ ಸೆರೆಯ ಯಜಮಾನ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದನು. ಆಗ ಪೌಲ ಅವನನ್ನು ತಡೆದನು. ನಂತರ ಆ ಸೆರೆಯ ಯಜಮಾನ ಮತ್ತು ಅವನ ಕುಟುಂಬದವರು ದೀಕ್ಷಾಸ್ನಾನ ಪಡೆದುಕೊಂಡರು. ಮರುದಿನ ಮುಂಜಾನೆ ಪಟ್ಟಣದ ಅಧಿಕಾರಿಗಳು ಸೆರೆಮನೆಯಿಂದ ಪೌಲಸೀಲರನ್ನು ಬಿಡಿಸಲು ಜವಾನರನ್ನು ಕಳುಹಿಸಿದರು. ಸಮಾಧಾನದಿಂದ ಪೌಲಸೀಲರು ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಈ ಜವಾನರ ಮೂಲಕ ಹೇಳಿಕಳುಹಿಸಿದರು. ಪೌಲಸೀಲರು ರೋಮಿನ ಪ್ರಜೆಗಳು ಎಂದು ಆ ಅಧಿಕಾರಿಗಳಿಗೆ ಗೊತ್ತಾದಾಗ ತಾವೆಷ್ಟು ದೊಡ್ಡ ತಪ್ಪು ಮಾಡಿದ್ದೇವೆಂದು ಅವರಿಗೆ ಗೊತ್ತಾಯಿತು. ಹಾಗಾಗಿ ಅವರೇ ಬಂದು ಪೌಲಸೀಲರನ್ನು ಸೆರೆಮನೆಯಿಂದ ಹೊರಗೆ ತಂದರು. ಆದರೆ ಪೌಲಸೀಲರು ಪಟ್ಟಣವನ್ನು ಬಿಟ್ಟುಹೋಗುವ ಮುಂಚೆ ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡ ಲುದ್ಯಳನ್ನು ಕಂಡು ವಿದಾಯ ಹೇಳಬೇಕೆಂದು ತಿಳಿಸಿ ಅವಳನ್ನು ನೋಡಲು ಹೋದರು. ಈ ಅವಕಾಶವನ್ನು ಬಳಸಿಕೊಂಡು ಅವರು ಫಿಲಿಪ್ಪಿಯಲ್ಲಿದ್ದ ಇತರ ಸಹೋದರರನ್ನು ಬಲಪಡಿಸಿದರು. (ಅ. ಕಾ. 16:26-40) ಹೀಗೆ ಥಟ್ಟನೆ ಸನ್ನಿವೇಶ ಬದಲಾಯಿತು!

‘ಎಲ್ಲ ಗ್ರಹಿಕೆಯನ್ನು ಮೀರುತ್ತದೆ’

6. ನಾವೀಗ ಯಾವ್ಯಾವ ವಿಷಯಗಳನ್ನು ಚರ್ಚಿಸಲಿದ್ದೇವೆ?

6 ಈ ಘಟನೆಗಳಿಂದ ನಾವೇನು ಕಲಿಯಬಹುದು? ನಾವು ನೆನಸದ ರೀತಿಯಲ್ಲಿ ಯೆಹೋವನು ಸಹಾಯ ಮಾಡುತ್ತಾನೆ. ಆದ್ದರಿಂದ ಕಷ್ಟಗಳು ಬಂದಾಗ ನಾವು ವಿಪರೀತ ಚಿಂತೆ ಮಾಡಬಾರದು. ಈ ಪಾಠ ಪೌಲನ ಮನಸ್ಸಿನಲ್ಲಿ ಚೆನ್ನಾಗಿ ಅಚ್ಚೊತ್ತಲ್ಪಟ್ಟಿತು. ಸಮಯಾನಂತರ ಪೌಲನು ಫಿಲಿಪ್ಪಿಯಲ್ಲಿದ್ದ ಸಹೋದರರಿಗೆ ಚಿಂತೆಯ ಬಗ್ಗೆ, ದೇವಶಾಂತಿಯ ಬಗ್ಗೆ ಬರೆದ ಮಾತುಗಳಿಂದ ಇದು ಗೊತ್ತಾಗುತ್ತದೆ. ನಾವೀಗ ಫಿಲಿಪ್ಪಿ 4:6, 7​ರಲ್ಲಿ (ಓದಿ.) ಪೌಲ ಹೇಳಿದ ಆ ಮಾತುಗಳ ಬಗ್ಗೆ ಚರ್ಚಿಸಲಿದ್ದೇವೆ. ನಂತರ, ಯಾರೂ ನೆನಸದ ರೀತಿಯಲ್ಲಿ ಯೆಹೋವನು ಸಹಾಯ ಮಾಡಿದ ಇತರ ಬೈಬಲ್‌ ಘಟನೆಗಳ ಬಗ್ಗೆ ಚರ್ಚಿಸಲಿದ್ದೇವೆ. ಕೊನೆಯಲ್ಲಿ, ಯೆಹೋವನ ಮೇಲೆ ಪೂರ್ಣ ಭರವಸೆಯಿಟ್ಟು ಕಷ್ಟಗಳನ್ನು ತಾಳಿಕೊಳ್ಳಲು “ದೇವಶಾಂತಿ” ನಮಗೆ ಹೇಗೆ ಸಹಾಯ ಮಾಡುತ್ತದೆ ಎಂದು ಚರ್ಚಿಸಲಿದ್ದೇವೆ.

7. (ಎ) ಫಿಲಿಪ್ಪಿಯ ಸಹೋದರರಿಗೆ ಬರೆದ ಪತ್ರದಲ್ಲಿ ಪೌಲ ಯಾವ ಪಾಠ ಕಲಿಸಿದನು? (ಬಿ) ಅದರಿಂದ ನಾವೇನು ಕಲಿಯಬಹುದು?

7 ಪೌಲ ತಮಗೆ ಬರೆದ ಪತ್ರವನ್ನು ಓದಿದಾಗ ಫಿಲಿಪ್ಪಿಯಲ್ಲಿದ್ದ ಸಹೋದರರಿಗೆ ಏನು ನೆನಪಾಗಿರಬಹುದು? ಪೌಲಸೀಲರು ಆ ಪಟ್ಟಣಕ್ಕೆ ಹೋಗಿದ್ದಾಗ ಅವರಿಗೆ ಬಂದ ಕಷ್ಟಗಳನ್ನು ಮತ್ತು ಯಾರೂ ನೆನಸದ ರೀತಿಯಲ್ಲಿ ಯೆಹೋವನು ಅವರಿಗೆ ಸಹಾಯ ಮಾಡಿದ್ದನ್ನು ಅನೇಕರು ನೆನಪಿಸಿಕೊಂಡಿರಬಹುದು. ಪತ್ರದ ಮೂಲಕ ಪೌಲ ಯಾವ ಪಾಠ ಕಲಿಸಿದನು? ಚಿಂತೆಮಾಡಬೇಡಿ, ದೇವರಿಗೆ ಪ್ರಾರ್ಥಿಸಿ, ಆಗ “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ” ಪಡೆದುಕೊಳ್ಳುವಿರಿ ಎಂಬ ಪಾಠ ಕಲಿಸಿದನು. ಅದರ ಅರ್ಥವೇನು? ಈ ಅಭಿವ್ಯಕ್ತಿಯನ್ನು ಬೇರೆ ಕೆಲವು ಬೈಬಲ್‌ ಭಾಷಾಂತರಗಳಲ್ಲಿ, “ನಮ್ಮ ಎಲ್ಲ ಕನಸುಗಳನ್ನು ಮೀರುತ್ತದೆ” ಅಥವಾ “ಮಾನವನು ಮಾಡುವ ಯಾವುದೇ ಯೋಜನೆಗಿಂತ ದೊಡ್ಡದಾಗಿದೆ” ಎಂದು ಕೊಡಲಾಗಿದೆ. ಅಂದರೆ ‘ದೇವಶಾಂತಿ’ ನಾವು ಕಲ್ಪಿಸಲಿಕ್ಕೂ ಆಗದಷ್ಟು ಅದ್ಭುತವಾಗಿದೆ ಎಂದು ಪೌಲನು ಹೇಳುತ್ತಿದ್ದನು. ಕೆಲವೊಮ್ಮೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಏನೆಂದು ನಮಗೇ ಗೊತ್ತಿರುವುದಿಲ್ಲ. ಆದರೆ ಯೆಹೋವನಿಗೆ ಗೊತ್ತಿರುತ್ತದೆ. ಅಷ್ಟೇ ಅಲ್ಲ ನಾವು ನೆನಸದ ರೀತಿಯಲ್ಲಿ ಆತನು ನಮಗೆ ಸಹಾಯ ಮಾಡುತ್ತಾನೆ.—2 ಪೇತ್ರ 2:9 ಓದಿ.

8, 9. (ಎ) ಫಿಲಿಪ್ಪಿಯಲ್ಲಿ ಪೌಲ ಅನ್ಯಾಯವನ್ನು ಅನುಭವಿಸಬೇಕಾಗಿ ಬಂದರೂ ಅದರಿಂದ ಯಾವ ಒಳ್ಳೇ ಫಲಿತಾಂಶಗಳು ಸಿಕ್ಕಿದವು? (ಬಿ) ಪೌಲನ ಮಾತುಗಳ ಮೇಲೆ ಫಿಲಿಪ್ಪಿಯ ಸಹೋದರರಿಗೆ ಯಾಕೆ ಪೂರ್ಣ ಭರವಸೆ ಇತ್ತು?

8 ಪೌಲನ ಪತ್ರವನ್ನು ಓದಿದಾಗ ಫಿಲಿಪ್ಪಿಯ ಸಹೋದರರು ಯೆಹೋವನು ತಮಗೆ ಕಳೆದ ಹತ್ತು ವರ್ಷಗಳಲ್ಲಿ ಹೇಗೆಲ್ಲ ಸಹಾಯ ಮಾಡಿದನು ಎನ್ನುವುದರ ಬಗ್ಗೆ ಯೋಚಿಸಿ ಬಲ ಪಡೆದುಕೊಂಡಿರಬೇಕು. ಪೌಲಸೀಲರು ಅಲ್ಲಿ ಅನ್ಯಾಯವನ್ನು ಅನುಭವಿಸಬೇಕಾಗಿ ಬಂದರೂ ಆ ಘಟನೆಗಳಿಂದಾಗಿ ‘ಸುವಾರ್ತೆಯನ್ನು ಸಮರ್ಥಿಸಿ ಅದನ್ನು ಕಾನೂನುಬದ್ಧವಾಗಿ ಸ್ಥಾಪಿಸಲು’ ಸಾಧ್ಯವಾಯಿತು. (ಫಿಲಿ. 1:7) ಅದರ ನಂತರ ಫಿಲಿಪ್ಪಿ ಪಟ್ಟಣದ ಅಧಿಕಾರಿಗಳು ಅಲ್ಲಿನ ಹೊಸ ಕ್ರೈಸ್ತ ಸಭೆಯನ್ನು ಹಿಂಸಿಸಲು ಧೈರ್ಯ ಮಾಡಲಿಲ್ಲ. ಪೌಲ ಮತ್ತು ಸೀಲ ಅಲ್ಲಿಂದ ಹೋದ ಮೇಲೆ ಲೂಕ ಬಹುಶಃ ಅಲ್ಲೇ ಇರಲು ಸಾಧ್ಯವಾಗಿದ್ದು ಪೌಲ ತಾನು ರೋಮಿನ ಪ್ರಜೆ ಎಂದು ಹೇಳಿದ್ದರಿಂದ ಇರಬಹುದು. ಹೀಗೆ ಫಿಲಿಪ್ಪಿಯಲ್ಲಿ ಹೊಸದಾಗಿ ಕ್ರೈಸ್ತರಾದವರಿಗೆ ಹೆಚ್ಚಿನ ಸಹಾಯ ನೀಡಲು ಲೂಕನಿಗೆ ಸಾಧ್ಯವಾಗಿರಬೇಕು.

9 ಫಿಲಿಪ್ಪಿಯ ಸಹೋದರರು ಪೌಲನ ಪತ್ರವನ್ನು ಓದಿದಾಗ ಅದು ಅವನು ಎಲ್ಲೋ ಒಂದು ಕಡೆ ಆರಾಮವಾಗಿ ಕೂತು ಬರೆದ ಮಾತುಗಳಲ್ಲ, ಅನುಭವದ ಮಾತುಗಳು ಎಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಯಾಕೆಂದರೆ ಫಿಲಿಪ್ಪಿಯಲ್ಲಿ ಅವನಿಗೆ ತುಂಬ ಕಷ್ಟಗಳು ಬಂದಿದ್ದವು. ಈ ಪತ್ರ ಬರೆಯುವಾಗಲೂ ರೋಮಿನಲ್ಲಿ ಗೃಹಬಂಧನದಲ್ಲಿದ್ದನು. ಆದರೂ ತಾನು “ದೇವಶಾಂತಿ” ಪಡೆದಿದ್ದೇನೆಂದು ಅವನು ತೋರಿಸಿಕೊಟ್ಟನು.—ಫಿಲಿ. 1:12-14; 4:7, 11, 22.

“ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ”

10, 11. (ಎ) ಒಂದು ಸಮಸ್ಯೆ ನಮ್ಮನ್ನು ಚಿಂತೆಯಲ್ಲಿ ಮುಳುಗಿಸುವಾಗ ಏನು ಮಾಡಬೇಕು? (ಬಿ) ನಾವೇನು ನಿರೀಕ್ಷಿಸಬಹುದು?

10 ನಾವು ‘ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡುವ’ ಬದಲಿಗೆ “ದೇವಶಾಂತಿ” ಪಡೆದು ಸಮಾಧಾನದಿಂದಿರಲು ಯಾವುದು ಸಹಾಯ ಮಾಡುತ್ತದೆ? ಒಂದು ಸಮಸ್ಯೆಯಿಂದಾಗಿ ನಮಗೆ ತುಂಬ ಚಿಂತೆ ಇರುವಾಗ ಆ ಚಿಂತೆಗೆ ಪರಿಹಾರ ಪ್ರಾರ್ಥನೆ ಎಂದು ಪೌಲ ಫಿಲಿಪ್ಪಿಯವರಿಗೆ ಬರೆದ ಮಾತುಗಳು ತಿಳಿಸುತ್ತವೆ. ಆದ್ದರಿಂದ ವಿಪರೀತ ಚಿಂತೆ ನಮ್ಮನ್ನು ಸುತ್ತಿಕೊಂಡಾಗ ಅದನ್ನು ಯೆಹೋವನ ಹತ್ತಿರ ಹೇಳಿಕೊಳ್ಳಬೇಕು. (1 ಪೇತ್ರ 5:6, 7 ಓದಿ.) ಹೀಗೆ ಪ್ರಾರ್ಥಿಸುವಾಗ ಯೆಹೋವನಿಗೆ ನಿಮ್ಮ ಮೇಲೆ ಕಾಳಜಿ ಇದೆ ಎಂದು ಸಂಪೂರ್ಣ ಭರವಸೆ ಇಡಿ. ಜೊತೆಗೆ, ನಿಮಗೆ ಸಿಕ್ಕಿರುವ ಪ್ರತಿಯೊಂದು ಆಶೀರ್ವಾದಕ್ಕಾಗಿ ಆತನಿಗೆ ಧನ್ಯವಾದ ಹೇಳಿ. ಅಷ್ಟೇ ಅಲ್ಲ ಯೆಹೋವನು “ನಾವು ಬೇಡುವುದಕ್ಕಿಂತಲೂ . . . ಎಷ್ಟೋ ಮಿಗಿಲಾದದ್ದನ್ನು ಅತ್ಯಧಿಕವಾಗಿ ಮಾಡಶಕ್ತ” ಎನ್ನುವುದನ್ನು ಯಾವತ್ತೂ ಮರೆಯಬೇಡಿ.—ಎಫೆ. 3:20.

11 ಪೌಲಸೀಲರಂತೆ ನಾವು ಕೂಡ ಯೆಹೋವನು ನಮಗೆ ಸಹಾಯ ಮಾಡಿದ ರೀತಿಯನ್ನು ನೋಡಿ ಆಶ್ಚರ್ಯಪಡಬಹುದು. ಅದೇನೂ ದೊಡ್ಡ ಚಮತ್ಕಾರ ಆಗಿರಲಿಕ್ಕಿಲ್ಲ. ಆದರೆ ನಮಗೆ ಬೇಕಾದ ಸಹಾಯವನ್ನೇ ಯೆಹೋವನು ಕೊಡುತ್ತಾನೆ. (1 ಕೊರಿಂ. 10:13) ಹಾಗಂತ ನಾವು ಸುಮ್ಮನೆ ಕೂತು ಯೆಹೋವನೇ ಸನ್ನಿವೇಶವನ್ನು ಅಥವಾ ಸಮಸ್ಯೆಯನ್ನು ಸರಿಮಾಡಲಿ ಎಂದು ಕಾಯುತ್ತಾ ಇರಬೇಕೆಂದಲ್ಲ. ನಾವು ಮಾಡಿದ ಪ್ರಾರ್ಥನೆಗಳಿಗೆ ತಕ್ಕಂತೆ ನಮ್ಮಿಂದ ಆಗುವುದನ್ನು ಮಾಡಬೇಕು. (ರೋಮ. 12:11) ಹೀಗೆ ಮಾಡಿದಾಗ ನಮ್ಮ ಪ್ರಾರ್ಥನೆ ಯಥಾರ್ಥವಾಗಿದೆ ಎಂದು ಯೆಹೋವನು ನೋಡಿ ನಮ್ಮ ಆ ಪ್ರಯತ್ನವನ್ನು ಆಶೀರ್ವದಿಸುವನು ಎಂದು ನಾವು ನಿರೀಕ್ಷಿಸಬಹುದು. ಆತನು ನಾವು ಕೇಳಿದ್ದಕ್ಕಿಂತಲೂ ಅಥವಾ ನೆನಸಿದ್ದಕ್ಕಿಂತಲೂ ತುಂಬ ಹೆಚ್ಚಾಗಿ ಸಹಾಯ ಮಾಡುತ್ತಾನೆ ಎನ್ನುವುದನ್ನು ನಾವು ಎಂದೂ ಮರೆಯಬಾರದು. ಕೆಲವೊಮ್ಮೆ ಯಾರೂ ನೆನಸದಂಥ ರೀತಿಯಲ್ಲಿ ಸಹಾಯ ಮಾಡಿ ನಾವು ಆಶ್ಚರ್ಯಪಡುವಂತೆ ಮಾಡುತ್ತಾನೆ. ಇದಕ್ಕೆ ಇನ್ನೂ ಕೆಲವು ಉದಾಹರಣೆಗಳನ್ನು ನಾವೀಗ ನೋಡೋಣ. ಇವು ನಾವು ನೆನಸದ ರೀತಿಯಲ್ಲಿ ಸಹಾಯ ಮಾಡುವ ಸಾಮರ್ಥ್ಯ ಆತನಿಗಿದೆ ಎಂದು ನಮಗಿರುವ ಭರವಸೆಯನ್ನು ಹೆಚ್ಚಿಸಬಲ್ಲದು.

ಇನ್ನಷ್ಟು ಉದಾಹರಣೆಗಳು

12. (ಎ) ಸನ್ಹೇರೀಬ ಆಕ್ರಮಣ ಮಾಡಲು ಬಂದಾಗ ರಾಜ ಹಿಜ್ಕೀಯ ಏನು ಮಾಡಿದನು? (ಬಿ) ಯೆಹೋವನು ಈ ಸಮಸ್ಯೆಯನ್ನು ಬಗೆಹರಿಸಿದ ರೀತಿಯಿಂದ ನಾವೇನು ಕಲಿಯಬಹುದು?

12 ಯಾರೂ ನೆನಸದ ರೀತಿಯಲ್ಲಿ ಯೆಹೋವನು ಸಹಾಯ ಮಾಡುತ್ತಾನೆ ಎನ್ನುವುದಕ್ಕೆ ಬೈಬಲಿನಲ್ಲಿ ಇನ್ನೂ ಅನೇಕ ಉದಾಹರಣೆಗಳಿವೆ. ಹಿಜ್ಕೀಯನು ಯೆಹೂದದ ರಾಜನಾಗಿದ್ದಾಗ ಅಶ್ಶೂರದ ಅರಸನಾದ ಸನ್ಹೇರೀಬ ಯೆಹೂದದ ಮೇಲೆ ದಾಳಿ ಮಾಡಿ ಅಲ್ಲಿನ ಎಲ್ಲ ಪಟ್ಟಣಗಳನ್ನು ವಶಪಡಿಸಿಕೊಂಡನು. ಯೆರೂಸಲೇಮ್‌ ಮಾತ್ರ ಉಳಿದಿತ್ತು. (2 ಅರ. 18:1-3, 13) ನಂತರ ಅವನು ಯೆರೂಸಲೇಮಿನ ಮೇಲೂ ಆಕ್ರಮಣ ಮಾಡಲು ಬಂದನು. ಆಗ ರಾಜ ಹಿಜ್ಕೀಯ ಏನು ಮಾಡಿದನು? ಮೊದಲು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದನು ಮತ್ತು ಪ್ರವಾದಿಯಾದ ಯೆಶಾಯನ ಸಲಹೆ ಪಡೆದುಕೊಂಡನು. (2 ಅರ. 19:5, 15-20) ನಂತರ, ಸನ್ಹೇರೀಬನು ವಿಧಿಸಿದ ದಂಡವನ್ನು ಕೊಟ್ಟು ಹಿಜ್ಕೀಯ ವಿವೇಕ ತೋರಿಸಿದನು. (2 ಅರ. 18:14-16) ಕೊನೆಗೆ, ಪಟ್ಟಣದಲ್ಲಿರುವವರನ್ನು ರಕ್ಷಿಸಲು ಬೇಕಾದ ಸಿದ್ಧತೆಗಳನ್ನೂ ಮಾಡಿದನು. ಯಾಕೆಂದರೆ ಸನ್ಹೇರೀಬನು ಬಂದು, ತುಂಬ ಸಮಯದ ವರೆಗೆ ಮುತ್ತಿಗೆ ಹಾಕುವ ಅಪಾಯವಿತ್ತು. (2 ಪೂರ್ವ. 32:2-4) ಈ ಸಮಸ್ಯೆ ಹೇಗೆ ಕೊನೆಗೊಂಡಿತು? ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಿ ಸನ್ಹೇರೀಬನ 1,85,000 ಸೈನಿಕರನ್ನು ಒಂದೇ ರಾತ್ರಿಯಲ್ಲಿ ಹತಿಸಿಬಿಟ್ಟನು. ಹೀಗಾಗುತ್ತದೆ ಎಂದು ಹಿಜ್ಕೀಯನೂ ನೆನಸಿರಲಿಲ್ಲ!—2 ಅರ. 19:35.

ಯೋಸೇಫನಿಂದ ನಾವೇನು ಕಲಿಯಬಹುದು?—ಆದಿ. 41:42 (ಪ್ಯಾರ 13 ನೋಡಿ)

13. (ಎ) ಯೋಸೇಫನಿಂದ ನಾವೇನು ಕಲಿಯಬಹುದು? (ಬಿ) ಸಾರಳು ನೆನಸಿರದಂಥ ಯಾವ ವಿಷಯ ನಡೆಯಿತು?

13 ಇನ್ನೊಂದು ಉದಾಹರಣೆ ಯೋಸೇಫನದ್ದು. ಅವನು ಯುವಕನಾಗಿದ್ದಾಗ ಏನಾಯಿತೆಂದು ನೋಡೋಣ. ಈಜಿಪ್ಟಿನ ಸೆರೆಮನೆಯಲ್ಲಿ ಬಿದ್ದುಕೊಂಡಿರುವ ತಾನು ಮುಂದೆ ಈಜಿಪ್ಟಿನ ರಾಜನ ನಂತರದ ಸ್ಥಾನಕ್ಕೆ ಬರುತ್ತೇನೆ ಎಂದಾಗಲಿ ತನ್ನ ಕುಟುಂಬವನ್ನು ಬರಗಾಲದಿಂದ ಕಾಪಾಡಲು ತನ್ನನ್ನು ಯೆಹೋವನು ಬಳಸುತ್ತಾನೆ ಎಂದಾಗಲಿ ಅವನು ಯೋಚಿಸಿರಲಿಕ್ಕಿಲ್ಲ. (ಆದಿ. 40:15; 41:39-43; 50:20) ಯೋಸೇಫನ ಎಲ್ಲ ನಿರೀಕ್ಷೆಗಳನ್ನು ಮೀರಿಸಿ ಯೆಹೋವನು ಅವನಿಗೆ ಸಹಾಯ ಮಾಡಿದ್ದನು ಎನ್ನುವುದರಲ್ಲಿ ಸಂಶಯವೇ ಇಲ್ಲ. ಯೋಸೇಫನ ಮುತ್ತಜ್ಜಿಯಾದ ಸಾರಳ ಉದಾಹರಣೆಯನ್ನೂ ನೋಡಿ. ತನ್ನ ದಾಸಿಯ ಮೂಲಕ ಒಬ್ಬ ಮಗನನ್ನು ಕೊಟ್ಟು ಸುಮ್ಮನಾಗುವ ಬದಲು, ವೃದ್ಧೆಯಾಗಿದ್ದ ತಾನೇ ಒಬ್ಬ ಮಗನನ್ನು ಹೆರುವಂತೆ ಯೆಹೋವನು ಮಾಡುವನೆಂದು ಆಕೆ ನೆನಸಿದ್ದಳಾ? ಇಸಾಕನ ಜನ್ಮ ಸಾರಳ ಕಲ್ಪನೆಯನ್ನೇ ಮೀರಿಸಿತ್ತು.—ಆದಿ. 21:1-3, 6, 7.

14. ಯೆಹೋವನ ಮೇಲೆ ನಾವು ಯಾವ ಭರವಸೆ ಇಡಬಹುದು?

14 ಹೊಸ ಲೋಕ ಬರುವ ಮುಂಚೆಯೇ ಯೆಹೋವನು ನಮ್ಮ ಸಮಸ್ಯೆಗಳನ್ನೆಲ್ಲ ಅದ್ಭುತವಾಗಿ ಬಗೆಹರಿಸಿಬಿಡುತ್ತಾನೆ ಎಂದು ನಾವು ನೆನಸುವುದಿಲ್ಲ. ದೊಡ್ಡ ಚಮತ್ಕಾರ ಮಾಡಿ ನಮಗೆ ಸಹಾಯ ಮಾಡಬೇಕೆಂದೂ ನಾವು ಆತನ ಹತ್ತಿರ ಹೇಳುವುದಿಲ್ಲ. ಹಿಂದಿನ ಕಾಲದಲ್ಲಿ ಯೆಹೋವನು ಅಚ್ಚರಿಹುಟ್ಟಿಸುವ ವಿಧಗಳಲ್ಲಿ ತನ್ನ ಸೇವಕರಿಗೆ ಸಹಾಯ ಮಾಡಿದ್ದಾನೆ. ಆತನು ಬದಲಾಗಿಲ್ಲ, ಇಂದೂ ಹಾಗೇ ಇದ್ದಾನೆ. (ಮಲಾಕಿಯ 3:6 ಓದಿ.) ಇದು ನಮಗೆ ಆತನ ಮೇಲೆ ಭರವಸೆ ಮೂಡಿಸುತ್ತದೆ. ಆತನ ಚಿತ್ತ ಮಾಡಲು ನಮಗೆ ಬೇಕಾದ ಬಲವನ್ನು ಖಂಡಿತ ಕೊಟ್ಟೇ ಕೊಡುತ್ತಾನೆ. (2 ಕೊರಿಂ. 4:7-9) ಹಿಜ್ಕೀಯ, ಯೋಸೇಫ, ಸಾರ ಇವರಿಂದ ನಾವೇನು ಕಲಿಯಬಹುದು? ತುಂಬ ಕಷ್ಟದ ಪರಿಸ್ಥಿತಿಯಲ್ಲೂ ನಾವು ಯೆಹೋವನಿಗೆ ನಂಬಿಗಸ್ತರಾಗಿದ್ದರೆ ಆತನು ನಮಗೆ ಸಹಾಯ ಮಾಡುತ್ತಾನೆ.

ತುಂಬ ಕಷ್ಟದ ಪರಿಸ್ಥಿತಿಯಲ್ಲೂ ನಾವು ಯೆಹೋವನಿಗೆ ನಂಬಿಗಸ್ತರಾಗಿದ್ದರೆ ಆತನು ನಮಗೆ ಸಹಾಯ ಮಾಡುತ್ತಾನೆ

15. ಸಮಸ್ಯೆಗಳಿದ್ದರೂ “ದೇವಶಾಂತಿ” ಕಳೆದುಕೊಳ್ಳದಿರಲು ನಾವೇನು ಮಾಡಬೇಕು? ವಿವರಿಸಿ.

15 ಸಮಸ್ಯೆಗಳಿದ್ದರೂ “ದೇವಶಾಂತಿ” ಕಳೆದುಕೊಳ್ಳದಿರಲು ನಾವೇನು ಮಾಡಬೇಕು? ಯೆಹೋವನ ಜೊತೆ ಇರುವ ನಮ್ಮ ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ಇಂಥ ಸಂಬಂಧ ಇಟ್ಟುಕೊಳ್ಳಲು ಸಾಧ್ಯವಾಗುವುದು ಕ್ರಿಸ್ತ ಯೇಸು ಕೊಟ್ಟ ವಿಮೋಚನಾ ಯಜ್ಞದಿಂದಲೇ. ಈ ವಿಮೋಚನಾ ಮೌಲ್ಯ ಯೆಹೋವನ ವಿಸ್ಮಯಕಾರಿ ಕೆಲಸಗಳಲ್ಲಿ ಒಂದಾಗಿದೆ. ಇದರಿಂದಾಗಿ ನಮಗೆ ಪಾಪಗಳ ಕ್ಷಮೆ ಸಿಗುತ್ತದೆ, ಶುದ್ಧ ಮನಸ್ಸಾಕ್ಷಿ ಇರುತ್ತದೆ ಮತ್ತು ಯೆಹೋವನಿಗೆ ಆಪ್ತರಾಗುತ್ತೇವೆ.—ಯೋಹಾ. 14:6; ಯಾಕೋ. 4:8; 1 ಪೇತ್ರ 3:21.

ಹೃದಮನಗಳನ್ನು ಕಾಯುವುದು

16. ನಾವು “ದೇವಶಾಂತಿ” ಪಡೆದುಕೊಂಡಾಗ ಏನಾಗುತ್ತದೆ? ಉದಾಹರಣೆ ಕೊಡಿ.

16 “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ”ಯನ್ನು ನಾವು ಪಡೆದುಕೊಂಡಾಗ ಏನಾಗುತ್ತದೆ? ಅದು ನಮ್ಮ ಹೃದಮನಗಳನ್ನು ‘ಕಾಯುತ್ತದೆ’ ಎಂದು ಬೈಬಲ್‌ ಹೇಳುತ್ತದೆ. (ಫಿಲಿ. 4:7) “ಕಾಯು” ಎನ್ನುವುದಕ್ಕಿರುವ ಮೂಲಭಾಷೆಯ ಪದ ಸೈನ್ಯಕ್ಕೆ ಸಂಬಂಧಿಸಿದ ಪದ. ಸೈನಿಕರ ಗುಂಪು ಒಂದು ಪಟ್ಟಣವನ್ನು ಕಾಯುವುದನ್ನು ಅದು ಸೂಚಿಸುತ್ತದೆ. ಫಿಲಿಪ್ಪಿ ಪಟ್ಟಣದಲ್ಲಿದ್ದ ಜನರನ್ನು ಇಂಥ ಸೈನಿಕರ ಒಂದು ಗುಂಪು ಕಾಯುತ್ತಿತ್ತು. ತಮ್ಮ ಪಟ್ಟಣ ಭದ್ರವಾಗಿದೆ ಅಂತ ಅಲ್ಲಿನ ಜನರು ನಿಶ್ಚಿಂತೆಯಿಂದ ನಿದ್ದೆಮಾಡಬಹುದಿತ್ತು. ಅದೇ ರೀತಿ ನಮಗೆ “ದೇವಶಾಂತಿ” ಇದ್ದಾಗ ಹೆಚ್ಚು ಚಿಂತೆ ಮಾಡದೇ, ನಮ್ಮ ಹೃದಮನಗಳು ಪ್ರಶಾಂತವಾಗಿರುತ್ತವೆ. ಯೆಹೋವನು ನಮ್ಮ ಕಾಳಜಿವಹಿಸುತ್ತಾನೆ ಮತ್ತು ನಮ್ಮ ಸಂತೋಷ ಬಯಸುತ್ತಾನೆ ಎಂದು ನಮಗೆ ಗೊತ್ತು. (1 ಪೇತ್ರ 5:10) ಈ ಭರವಸೆ ನಾವು ಚಿಂತೆಯಲ್ಲಿ ಮುಳುಗಿಹೋಗದಂತೆ, ನಿರುತ್ಸಾಹದಿಂದ ಕುಗ್ಗಿಹೋಗದಂತೆ ಕಾಪಾಡುತ್ತದೆ.

17. ಮಹಾ ಸಂಕಟದಲ್ಲಿ ಯೆಹೋವನ ಮೇಲೆ ಭರವಸೆ ಇಡಲು ಯಾವುದು ನಮಗೆ ಸಹಾಯ ಮಾಡುತ್ತದೆ?

17 ಅತಿ ಬೇಗನೆ ಇಡೀ ಮಾನವಕುಲದ ಮೇಲೆ ಮಹಾ ಸಂಕಟ ಬರಲಿದೆ. (ಮತ್ತಾ. 24:21, 22) ಆಗ ನಮ್ಮಲ್ಲಿ ಒಬ್ಬೊಬ್ಬರಿಗೂ ಏನಾಗಲಿದೆ ಎಂದು ಈಗ ಯಾರಿಗೂ ಗೊತ್ತಿಲ್ಲ. ಹೀಗಿದ್ದರೂ ಆ ಸಮಯದ ಬಗ್ಗೆ ನಾವು ಈಗ ಅತಿಯಾಗಿ ಚಿಂತೆ ಮಾಡಬೇಕಾಗಿಲ್ಲ. ಯೆಹೋವನು ಮಾಡಲಿರುವ ಪ್ರತಿಯೊಂದು ವಿಷಯವೂ ನಮಗೆ ಗೊತ್ತಿಲ್ಲ ನಿಜ. ಆದರೆ ನಮ್ಮ ದೇವರ ಬಗ್ಗೆ ನಮಗೆ ಗೊತ್ತಿದೆ. ಆತನು ಹಿಂದೆ ತನ್ನ ಸೇವಕರಿಗೆ ಹೇಗೆಲ್ಲ ಸಹಾಯ ಮಾಡಿದ್ದಾನೆ ಎಂದು ನಾವು ತಿಳಿದುಕೊಂಡಿದ್ದೇವೆ. ಏನೇ ಅಡ್ಡಿತಡೆ ಬಂದರೂ ತನ್ನ ಉದ್ದೇಶವನ್ನು ಹೇಗೆ ನೆರವೇರಿಸುತ್ತಾನೆ ಎಂದು ನೋಡಿದ್ದೇವೆ. ಕೆಲವೊಮ್ಮೆ ಅದನ್ನು ಯಾರೂ ನೆನಸದಂಥ ರೀತಿಯಲ್ಲೂ ಮಾಡಿದ್ದಾನೆ! ಹೀಗೆ ಯೆಹೋವನು ನಮಗೆ ಏನಾದರೂ ಸಹಾಯ ಮಾಡುವ ಪ್ರತಿ ಸಲವೂ “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ”ಯನ್ನು ಒಂದು ಹೊಸ ವಿಧದಲ್ಲಿ ಅನುಭವಿಸುತ್ತೇವೆ!

^ ಪ್ಯಾರ. 1 ಸೀಲನು ಕೂಡ ರೋಮಿನ ಪ್ರಜೆ ಆಗಿದ್ದಿರಬಹುದು.—ಅ. ಕಾ. 16:37.