ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಪರೀಕ್ಷೆಗಳನ್ನು ತಾಳಿಕೊಂಡರೆ ಆಶೀರ್ವಾದ ಸಿಗುತ್ತದೆ

ಪರೀಕ್ಷೆಗಳನ್ನು ತಾಳಿಕೊಂಡರೆ ಆಶೀರ್ವಾದ ಸಿಗುತ್ತದೆ

“ಎಂಥ ತಂದೆನೋ ನೀನು? ಬಸುರಿ ಹೆಂಡ್ತಿನಾ, ಪುಟ್ಟ ಮಗಳನ್ನಾ ಬಿಟ್ಟು ಬಂದಿದ್ದೀಯಾ? ಅವರನ್ನು ಯಾರು ನೋಡ್ಕೊಳ್ತಾರೆ? ನೀನೇನು ಮಾಡುತ್ತಿದ್ದೀಯೋ ಅದನ್ನು ಬಿಟ್ಹಾಕಿ ಮನೆಗೆ ಹೋಗಿ ಸೇರು” ಎಂದು ಗುಪ್ತದಳದ (ಕೆ.ಜಿ.ಬಿ.) ಅಧಿಕಾರಿ ನನ್ನ ಮೇಲೆ ಕೂಗಾಡಿದನು. ಅದಕ್ಕೆ, “ನಾನು ನನ್ನ ಕುಟುಂಬನಾ ಬಿಟ್ಟು ಬಂದಿಲ್ಲ. ನೀವು ನನ್ನನ್ನು ಹಿಡುಕೊಂಡು ಬಂದಿರೋದು. ನಾನೇನು ತಪ್ಪು ಮಾಡಿದೆ?” ಎಂದು ಕೇಳಿದೆ. “ನೀನು ಸಾಕ್ಷಿಯಾಗಿರುವುದಕ್ಕಿಂತ ದೊಡ್ಡ ತಪ್ಪು ಬೇರೆ ಯಾವುದೂ ಇಲ್ಲ!” ಎಂದ ಆ ಅಧಿಕಾರಿ.

1959ರಲ್ಲಿ ರಷ್ಯದ ಇರ್ಕೂಟ್ಸ್‌ಕ್‌ ನಗರದಲ್ಲಿದ್ದ ಸೆರೆಮನೆಯಲ್ಲಿ ಈ ಮಾತಿನ ಚಕಮಕಿ ನಡೆಯಿತು. ನಾನು ಮತ್ತು ನನ್ನ ಪತ್ನಿ ಮರೀಯ “ನೀತಿಯ ನಿಮಿತ್ತ ಕಷ್ಟವನ್ನು ಅನುಭವಿಸಬೇಕಾದ” ಸನ್ನಿವೇಶ ಹೇಗೆ ಎದುರಾಯಿತು ಮತ್ತು ನಂಬಿಗಸ್ತರಾಗಿ ಉಳಿದಿದ್ದರಿಂದ ಯಾವ ಆಶೀರ್ವಾದ ಸಿಕ್ಕಿತೆಂದು ಹೇಳಲು ಬಯಸುತ್ತೇನೆ.—1 ಪೇತ್ರ 3:13, 14.

ನಾನು ಯುಕ್ರೇನ್‌ನ ಜಲಟ್ನಿಕೀ ಎಂಬ ಹಳ್ಳಿಯಲ್ಲಿ 1933ರಲ್ಲಿ ಹುಟ್ಟಿದೆ. ಸಾಕ್ಷಿಗಳಾಗಿದ್ದ ನನ್ನ ಚಿಕ್ಕಮ್ಮ, ಚಿಕ್ಕಪ್ಪ 1937ರಲ್ಲಿ ಫ್ರಾನ್ಸ್‌ನಿಂದ ಬಂದು ನಮ್ಮನ್ನು ಭೇಟಿಮಾಡಿದರು. ಸರಕಾರ ಮತ್ತು ಬಿಡುಗಡೆ * ಎಂಬ ಪುಸ್ತಕಗಳನ್ನು ಕೊಟ್ಟು ಹೋದರು. ಈ ಪುಸ್ತಕಗಳು ದೇವರ ಮೇಲೆ ನನ್ನ ತಂದೆಗಿದ್ದ ನಂಬಿಕೆಯನ್ನು ಬಡಿದೆಬ್ಬಿಸಿದವು. ಆದರೆ 1939ರಲ್ಲಿ ಅವರು ಕಾಯಿಲೆ ಬಿದ್ದರು. ಸಾಯುವ ಮುಂಚೆ ಅವರು ನನ್ನ ತಾಯಿಗೆ “ಇದೇ ಸತ್ಯ. ಇದನ್ನು ಮಕ್ಕಳಿಗೆ ಕಲಿಸು” ಅಂತ ಹೇಳಿದರು.

ಸೈಬೀರಿಯ—ಸಾರಲು ಹೊಸ ಕ್ಷೇತ್ರ

1951ರ ಏಪ್ರಿಲ್‌ನಲ್ಲಿ ಅಧಿಕಾರಿಗಳು ಯು.ಎಸ್‌.ಎಸ್‌.ಆರ್‌.ನ ಪಶ್ಚಿಮ ಭಾಗದಲ್ಲಿದ್ದ ಸಾಕ್ಷಿಗಳನ್ನು ಸೈಬೀರಿಯಕ್ಕೆ ಗಡೀಪಾರು ಮಾಡಲು ಆರಂಭಿಸಿದರು. ನನ್ನನ್ನು, ಅಮ್ಮನನ್ನು, ತಮ್ಮ ಗ್ರಿಗೊರೀಯನ್ನು ಪಶ್ಚಿಮ ಯುಕ್ರೇನ್‌ನಿಂದ ಗಡೀಪಾರು ಮಾಡಲಾಯಿತು. ರೈಲಿನಲ್ಲಿ 6,000 ಕಿ.ಮೀ. ಪ್ರಯಾಣ ಮಾಡಿದ ಮೇಲೆ ನಾವು ಸೈಬೀರಿಯದಲ್ಲಿದ್ದ ಟೂಲೂನ್‌ ಪಟ್ಟಣಕ್ಕೆ ಬಂದು ತಲಪಿದೆವು. ಎರಡು ವಾರಗಳ ನಂತರ ನನ್ನ ಅಣ್ಣ ಬೊಗ್ಡಾನ್‌ ಟೂಲೂನ್‌ಗೆ ಹತ್ತಿರದಲ್ಲಿದ್ದ ಅಂಗರ್ಸ್ಕ್‌ ಪಟ್ಟಣದಲ್ಲಿದ್ದ ಶಿಬಿರಕ್ಕೆ ಬಂದ. ಅವನಿಗೆ 25 ವರ್ಷಗಳ ಕಠಿಣ ಕೆಲಸದ ಶಿಕ್ಷೆ ಆಗಿತ್ತು.

ನಾನು, ಅಮ್ಮ, ಗ್ರಿಗೊರೀ ಟೂಲೂನ್‌ನ ಅಕ್ಕಪಕ್ಕದಲ್ಲಿದ್ದ ಊರುಗಳಲ್ಲಿ ಸಾರುತ್ತಿದ್ದೆವು. ಆದರೆ ನಾವು ಸಾರಲು ಹೊಸಹೊಸ ಉಪಾಯಗಳನ್ನು ಮಾಡಬೇಕಿತ್ತು. ಉದಾಹರಣೆಗೆ, “ಇಲ್ಲಿ ಯಾರಾದರೂ ಹಸು ಮಾರಲು ಬಯಸುತ್ತಾರಾ?” ಎಂದು ಕೇಳುತ್ತಿದ್ದೆವು. ಹಸು ಮಾರಲಿರುವವರು ಸಿಕ್ಕಿದರೆ ನಾವು ಅವರ ಹತ್ತಿರ ಹಸುಗಳನ್ನು ಎಷ್ಟು ಚೆನ್ನಾಗಿ ರೂಪಿಸಲಾಗಿದೆ ಎಂದು ಮಾತು ಆರಂಭಿಸುತ್ತಿದ್ದೆವು. ಹಾಗೆ ಮೆಲ್ಲಮೆಲ್ಲನೆ ನಾವು ಸೃಷ್ಟಿಕರ್ತನ ಬಗ್ಗೆ ಮಾತಾಡುತ್ತಿದ್ದೆವು. ಆ ಸಮಯದಲ್ಲಿ ಒಂದು ವಾರ್ತಾಪತ್ರಿಕೆ ಸಾಕ್ಷಿಗಳು ಹಸುಗಳ ಬಗ್ಗೆ ಕೇಳಿಕೊಂಡು ಬರುತ್ತಾರೆ ಎಂದು ವರದಿ ಮಾಡಿತು. ಆದರೆ ನಾವು ನಿಜವಾಗಿಯೂ ಹುಡುಕುತ್ತಿದ್ದದ್ದು ಕುರಿಗಳನ್ನು ಎಂದು ನಮಗೆ ಗೊತ್ತಿತ್ತು! ನಮಗೆ ಕುರಿಗಳಂಥ ನಮ್ರ ಜನರು ಸಿಕ್ಕಿದರು. ನೇಮಿಸಲ್ಪಟ್ಟಿರದ ಈ ಕ್ಷೇತ್ರದಲ್ಲಿ ಇಂಥ ಜನರೊಂದಿಗೆ ಬೈಬಲಿನ ಕುರಿತು ಅಧ್ಯಯನ ಮಾಡುವುದರಿಂದ ನಮಗೆ ತುಂಬ ಸಂತೋಷವಾಯಿತು. ಇವರು ನಮಗೆ ಅತಿಥಿಸತ್ಕಾರವನ್ನೂ ಮಾಡಿದರು. ಈಗ ಟೂಲೂನ್‌ನಲ್ಲಿ 100ಕ್ಕಿಂತ ಹೆಚ್ಚು ಪ್ರಚಾರಕರಿರುವ ಒಂದು ಸಭೆ ಇದೆ.

ಮರೀಯ ಎದುರಿಸಿದ ನಂಬಿಕೆಯ ಪರೀಕ್ಷೆ

ನನ್ನ ಪತ್ನಿ ಮರೀಯಗೆ ಎರಡನೇ ಲೋಕ ಯುದ್ಧ ನಡೆಯುತ್ತಿದ್ದ ಸಮಯದಲ್ಲಿ ಸತ್ಯ ಸಿಕ್ಕಿತು. ಆಗ ಅವಳು ಯುಕ್ರೇನ್‌ನಲ್ಲಿದ್ದಳು. ಅವಳಿಗೆ 18 ವರ್ಷ ಇದ್ದಾಗ ಗುಪ್ತದಳದ ಒಬ್ಬ ಅಧಿಕಾರಿ ಅವಳಿಗೆ ಕಿರುಕುಳ ಕೊಡಲು ಆರಂಭಿಸಿದ, ಅನೈತಿಕತೆ ನಡೆಸಲು ಒತ್ತಾಯಿಸಿದ. ಆದರೆ ಮರೀಯ ಅದಕ್ಕೆ ಒಪ್ಪಲೇ ಇಲ್ಲ. ಒಂದು ದಿನ ಮರೀಯ ಮನೆಗೆ ಬಂದು ನೋಡಿದರೆ ಆ ವ್ಯಕ್ತಿ ಅವಳ ಮಂಚದ ಮೇಲೆ ಮಲಗಿದ್ದ. ಮರೀಯ ಅಲ್ಲಿಂದ ಓಡಿಬಿಟ್ಟಳು. ಇದರಿಂದ ಅವನಿಗೆ ತುಂಬ ಕೋಪ ಬಂತು. ‘ನೀನೊಬ್ಬ ಸಾಕ್ಷಿ ಆಗಿರುವುದರಿಂದ ನಿನ್ನನ್ನ ಒಳಗೆ ಹಾಕಿಬಿಡುತ್ತೇನೆ’ ಅಂದ. ಮುಂದೆ ಅದೇ ಆಯಿತು. 1952ರಲ್ಲಿ ಮರೀಯಗೆ ಹತ್ತು ವರ್ಷಗಳ ಶಿಕ್ಷೆಯಾಯಿತು. ಸಮಗ್ರತೆ ತೋರಿಸಿದ್ದಕ್ಕೆ ಜೈಲು ಶಿಕ್ಷೆ ಅನುಭವಿಸಿದ ಯೋಸೇಫನಂತೆ ಅವಳಿಗೆ ಅನಿಸಿತು. (ಆದಿ. 39:12, 20) ನ್ಯಾಯಾಲಯದಿಂದ ಸೆರೆಮನೆಗೆ ಆಕೆಯನ್ನು ಕರೆದುಕೊಂಡು ಹೋದ ವಾಹನ ಚಾಲಕ ಅವಳಿಗೆ, “ಭಯಪಡಬೇಡ. ಜೈಲಿಗೆ ಹೋದ ಎಷ್ಟೋ ಜನ ತಮ್ಮ ಮಾನ ಉಳಿಸಿಕೊಂಡು ಹಿಂದೆ ಬಂದಿದ್ದಾರೆ” ಎಂದ. ಈ ಮಾತುಗಳಿಂದ ಮರೀಯಗೆ ಬಲ ಸಿಕ್ಕಿತು.

1952ರಿಂದ 1956ರ ವರೆಗೆ ಮರೀಯ ರಷ್ಯದ ಗೊರ್‌ಕೀ (ಈಗ ನೀಜ್‌ನಿ ನೊವ್‌ಗರಡ್‌) ಪಟ್ಟಣದ ಹತ್ತಿರದಲ್ಲಿದ್ದ ಒಂದು ಕೆಲಸದ ಶಿಬಿರದಲ್ಲಿ ಇರಬೇಕಾಯಿತು. ಅವಳಿಗೆ ಮರಗಳನ್ನು ಬೇರುಸಮೇತ ಕಿತ್ತುಹಾಕುವ ಕೆಲಸ ಕೊಟ್ಟಿದ್ದರು. ಕೊರೆಯುವ ಚಳಿಯಲ್ಲೂ ಇದನ್ನು ಮಾಡಬೇಕಿತ್ತು. ಇದರಿಂದ ಅವಳ ಆರೋಗ್ಯ ಹಾಳಾಯಿತು. 1956ರಲ್ಲಿ ಅವಳಿಗೆ ಬಿಡುಗಡೆಯಾದಾಗ ಟೂಲೂನ್‌ಗೆ ಬಂದಳು.

ನಾನೆಲ್ಲೋ ನನ್ನ ಹೆಂಡತಿ ಮಕ್ಕಳು ಎಲ್ಲೋ

ಟೂಲೂನ್‌ನಲ್ಲಿದ್ದ ಒಬ್ಬ ಸಹೋದರ ನನಗೆ ‘ಒಬ್ಬ ಸಹೋದರಿ ಬರುತ್ತಿದ್ದಾರೆ, ನೀನು ಹೋಗಿ ಅವರನ್ನು ಕರಕೊಂಡು ಬಾ’ ಅಂದರು. ನಾನು ಆ ಸಹೋದರಿಯನ್ನು ಬರಮಾಡಿಕೊಂಡು ಅವರ ಲಗೇಜ್‌ ತರಲು ಸೈಕಲಲ್ಲಿ ಬಸ್‌ ನಿಲ್ದಾಣಕ್ಕೆ ಹೋದೆ. ನಾನು ಮರೀಯಳನ್ನು ನೋಡಿದ ಕೂಡಲೆ ಅವಳನ್ನು ಇಷ್ಟಪಟ್ಟೆ. ಅವಳ ಮನಸ್ಸು ಗೆಲ್ಲಲು ಸ್ವಲ್ಪ ಕಷ್ಟವಾಯಿತು, ಆದರೆ ನಾನು ಪ್ರಯತ್ನ ಬಿಡಲಿಲ್ಲ. 1957ರಲ್ಲಿ ನಮ್ಮ ಮದುವೆಯಾಯಿತು. ಒಂದು ವರ್ಷದ ನಂತರ ಮಗಳು ಐರೀನ ಹುಟ್ಟಿದಳು. ಆದರೆ ನನ್ನ ಕಂದನ ಜೊತೆ ನಾನು ಹೆಚ್ಚು ಸಮಯ ಕಳೆಯಲು ಆಗಲಿಲ್ಲ. ಬೈಬಲ್‌ ಸಾಹಿತ್ಯ ಮುದ್ರಿಸಿದ್ದಕ್ಕಾಗಿ ನನ್ನನ್ನು 1959ರಲ್ಲಿ ಬಂಧಿಸಲಾಯಿತು. ಆರು ತಿಂಗಳು ಕಾರಾಗೃಹದ ಒಂದು ಕೋಣೆಯಲ್ಲಿ ಒಬ್ಬನೇ ಇರಬೇಕಾಯಿತು. ಮನಶ್ಶಾಂತಿ ಕೆಡದಿರಲು ಯಾವಾಗಲೂ ಪ್ರಾರ್ಥಿಸುತ್ತಿದ್ದೆ, ರಾಜ್ಯ ಗೀತೆಗಳನ್ನು ಹಾಡುತ್ತಿದ್ದೆ, ಬಿಡುಗಡೆಯಾದರೆ ಸುವಾರ್ತೆಯನ್ನು ಹೇಗೆ ಸಾರುವೆ ಎಂದು ಕಲ್ಪಿಸಿಕೊಳ್ಳುತ್ತಿದ್ದೆ.

1962ರಲ್ಲಿ ಒಂದು ಕೆಲಸದ ಶಿಬಿರದಲ್ಲಿದ್ದಾಗ

ಕಾರಾಗೃಹದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಒಬ್ಬ ಅಧಿಕಾರಿ ನನಗೆ “ಬೇಗ ನಿಮ್ಮನ್ನೆಲ್ಲಾ ಕಾಲ ಕೆಳಗೆ ಹಾಕಿ ಇಲಿ ತರ ತುಳಿದುಹಾಕುತ್ತೇವೆ” ಎಂದು ಕೂಗಾಡಿದರು. ಅದಕ್ಕೆ ನಾನು “ರಾಜ್ಯದ ಈ ಸುವಾರ್ತೆಯು ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು ಎಂದು ಯೇಸು ಹೇಳಿದ್ದಾನೆ. ಇದನ್ನು ಯಾರಿಂದಲೂ ನಿಲ್ಲಿಸಲಿಕ್ಕೆ ಆಗಲ್ಲ” ಅಂದೆ. ಆಗ ಆ ಅಧಿಕಾರಿ ಬೇರೆ ಉಪಾಯ ಮಾಡಿದ. ಪೀಠಿಕೆಯಲ್ಲಿ ನಾನು ಹೇಳಿದ ಮಾತುಕತೆ ಈ ಸಮಯದಲ್ಲೇ ನಡೆಯಿತು. ನನ್ನ ನಂಬಿಕೆಯನ್ನು ಬಿಟ್ಟುಕೊಡುವಂತೆ ಮಾಡಲು ಏನೇನೋ ವಿಧಾನ ಬಳಸಿದ. ಆದರೆ ಅವನು ಹಾಕಿದ ಬೆದರಿಕೆಯಾಗಲಿ ಪುಸಲಾಯಿಸುವಿಕೆಯಾಗಲಿ ನನ್ನ ಮೇಲೆ ಪರಿಣಾಮ ಬೀರಲಿಲ್ಲ. ನನಗೆ ಸರಾನ್ಸ್‌ಕ್‌ ಪಟ್ಟಣದ ಹತ್ತಿರದಲ್ಲಿದ್ದ ಶಿಬಿರದಲ್ಲಿ ಏಳು ವರ್ಷ ಕಷ್ಟದ ಕೆಲಸ ಮಾಡುವ ಶಿಕ್ಷೆಯಾಯಿತು. ನಾನು ಶಿಬಿರಕ್ಕೆ ಹೋಗುತ್ತಿರುವಾಗ, ನಮ್ಮ ಇನ್ನೊಬ್ಬ ಮಗಳು ಓಲ್ಗ ಹುಟ್ಟಿರುವ ಸುದ್ದಿ ಸಿಕ್ಕಿತು. ನಾನು ಹೆಂಡತಿ-ಮಕ್ಕಳಿಂದ ತುಂಬ ದೂರದಲ್ಲಿದ್ದರೂ ಮರೀಯ ಮತ್ತು ನಾನು ಯೆಹೋವನಿಗೆ ನಿಷ್ಠಾವಂತರಾಗಿ ಉಳಿದಿದ್ದೇವಲ್ಲಾ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದೆ.

1965ರಲ್ಲಿ ಮರೀಯ ಮತ್ತು ನಮ್ಮ ಮಕ್ಕಳಾದ ಓಲ್ಗ ಹಾಗೂ ಐರೀನ

ಪ್ರತಿ ವರ್ಷ ಮರೀಯ ನನ್ನನ್ನು ನೋಡಲು ಟೂಲೂನ್‌ನಿಂದ ಸರಾನ್ಸ್‌ಕ್‌ಗೆ ಬರುತ್ತಿದ್ದಳು. ಬಂದು ಹೋಗಲು ರೈಲಿನಲ್ಲಿ 12 ದಿನ ತಗಲುತ್ತಿತ್ತು, ಆದರೂ ಬರುತ್ತಿದ್ದಳು. ಪ್ರತಿ ವರ್ಷ ಹೊಸ ಬೂಟುಗಳನ್ನು ತಂದು ಕೊಡುತ್ತಿದ್ದಳು. ಆ ಬೂಟುಗಳ ಕೆಳಭಾಗದಲ್ಲಿ ಇತ್ತೀಚೆಗೆ ಬಂದ ಕಾವಲಿನಬುರುಜು ಪತ್ರಿಕೆಗಳನ್ನು ಬಚ್ಚಿಟ್ಟು ತರುತ್ತಿದ್ದಳು. ಹೀಗೆ ಒಂದು ಸಲ ಮರೀಯ ನನ್ನನ್ನು ಭೇಟಿಮಾಡಲು ಬಂದದ್ದು ತುಂಬ ವಿಶೇಷವಾಗಿತ್ತು. ಏಕೆಂದರೆ ಅವಳು ನಮ್ಮ ಮುದ್ದು ಮಕ್ಕಳನ್ನೂ ಕರೆದುಕೊಂಡು ಬಂದಿದ್ದಳು. ಅವರನ್ನು ನೋಡಿ ನನಗೆಷ್ಟು ಖುಷಿಯಾಯಿತು ಎಂದು ಮಾತುಗಳಲ್ಲಿ ಹೇಳಲಿಕ್ಕಾಗಲ್ಲ!

ಹೊಸ ಸ್ಥಳಗಳು, ಹೊಸ ಸವಾಲುಗಳು

1966ರಲ್ಲಿ ನನ್ನನ್ನು ಕೆಲಸದ ಶಿಬಿರದಿಂದ ಬಿಡುಗಡೆ ಮಾಡಲಾಯಿತು ಮತ್ತು ಕುಟುಂಬವಾಗಿ ನಾವು ಕಪ್ಪು ಸಮುದ್ರದ ಹತ್ತಿರದಲ್ಲಿದ್ದ ಆರ್ಮವೀರ್‌ ನಗರಕ್ಕೆ ಬಂದು ನೆಲೆಸಿದೆವು. ಇಲ್ಲಿ ನಮ್ಮ ಗಂಡುಮಕ್ಕಳಾದ ಯರಸ್ಲಾವ್‌ ಮತ್ತು ಪಾವೆಲ್‌ ಹುಟ್ಟಿದರು.

ಗುಪ್ತದಳದ ಅಧಿಕಾರಿಗಳು ತುಂಬ ಶೀಘ್ರದಲ್ಲೇ ನಮ್ಮ ಮನೆಯ ಮೇಲೆ ದಾಳಿ ನಡೆಸಿದರು. ಬೈಬಲ್‌ ಸಾಹಿತ್ಯ ಏನಾದರೂ ಇಟ್ಟಿದ್ದೇವಾ ಎಂದು ನೋಡಲು ಬಂದರು. ಎಲ್ಲಾ ಕಡೆ ಹುಡುಕಿದರು. ಹಸುಗಳಿಗೆ ಇಟ್ಟಿರುವ ಮೇವಿನಲ್ಲೂ ಕೈಹಾಕಿದರು. ಹೀಗೆ ಒಂದು ಸಲ ದಾಳಿ ಮಾಡಿದಾಗ, ಅಧಿಕಾರಿಗಳು ಸೆಕೆಯಿಂದ ಸುಸ್ತಾಗಿ ಹೋಗಿದ್ದರು. ಅವರ ಬಟ್ಟೆ ಧೂಳಿನಿಂದ ತುಂಬಿತ್ತು. ಮರೀಯಗೆ ಅವರನ್ನು ನೋಡಿ ಪಾಪ ಅನಿಸಿತು. ಏಕೆಂದರೆ ಅವರು ತಮಗೆ ಸಿಕ್ಕಿದ ಅಪ್ಪಣೆ ಪಾಲಿಸುತ್ತಿದ್ದರು ಅಷ್ಟೆ. ಅವಳು ಅವರಿಗೆ ಸ್ವಲ್ಪ ಜ್ಯೂಸ್‌ ಮಾಡಿಕೊಟ್ಟಳು. ಬಟ್ಟೆಯಿಂದ ಧೂಳು ತೆಗೆಯಲು ಬ್ರಷ್‌, ಮುಖ ತೊಳೆಯಲು ನೀರು ಮತ್ತು ಟವಲನ್ನು ಕೊಟ್ಟಳು. ನಂತರ ಅವರ ಮುಖ್ಯಾಧಿಕಾರಿ ಬಂದಾಗ ಆ ಅಧಿಕಾರಿಗಳು ತಮಗೆ ಸಿಕ್ಕಿದ ಸತ್ಕಾರದ ಬಗ್ಗೆ ತಿಳಿಸಿದರು. ಅವರು ಹೊರಟಾಗ ಮುಖ್ಯಾಧಿಕಾರಿ ಮುಗುಳ್ನಗೆ ಬೀರುತ್ತಾ ಕೈಬೀಸಿ ವಿದಾಯ ಹೇಳಿ ಹೋದರು. ‘ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರುವಾಗ’ ಸಿಗುವ ಒಳ್ಳೇ ಫಲಿತಾಂಶವನ್ನು ನಾವು ಕಣ್ಣಾರೆ ನೋಡಲು ಸಾಧ್ಯವಾಯಿತು.—ರೋಮ. 12:21.

ದಾಳಿಗಳು ನಡೆಯುತ್ತಾ ಇದ್ದರೂ ನಾವು ಆರ್ಮವೀರ್‌ನಲ್ಲಿ ಸಾರುವುದನ್ನು ಮುಂದುವರಿಸಿದೆವು. ಹತ್ತಿರದ ಕೂರ್ಗಾನಿನ್ಸ್‌ಕ್‌ ಪಟ್ಟಣದಲ್ಲಿದ್ದ ಪ್ರಚಾರಕರ ಒಂದು ಸಣ್ಣ ಗುಂಪನ್ನು ಬೆಂಬಲಿಸಲು ನಮ್ಮಿಂದಾದ ಸಹಾಯ ಮಾಡಿದೆವು. ಈಗ ಆರ್ಮವೀರ್‌ನಲ್ಲಿ ಆರು ಸಭೆಗಳು ಮತ್ತು ಕೂರ್ಗಾನಿನ್ಸ್‌ಕ್‌ನಲ್ಲಿ ನಾಲ್ಕು ಸಭೆಗಳಿವೆ ಎಂದು ಹೇಳಲು ತುಂಬ ಸಂತೋಷವಾಗುತ್ತದೆ.

ಈ ಎಲ್ಲಾ ವರ್ಷಗಳಲ್ಲಿ ನಮ್ಮ ಆಧ್ಯಾತ್ಮಿಕತೆ ದುರ್ಬಲವಾದ ಸಮಯಗಳೂ ಇದ್ದವು. ಆದರೆ ಯೆಹೋವನು ನಮ್ಮನ್ನು ತಿದ್ದಿ ಆಧ್ಯಾತ್ಮಿಕವಾಗಿ ಬಲಪಡಿಸಲು ನಂಬಿಗಸ್ತ ಸಹೋದರರನ್ನು ಉಪಯೋಗಿಸಿದ್ದಕ್ಕಾಗಿ ನಾವಾತನಿಗೆ ಆಭಾರಿ. (ಕೀರ್ತ. 130:3) ಗುಪ್ತದಳದ ಅಧಿಕಾರಿಗಳು ನೇಮಿಸಿದ್ದ ಕೆಲವರು ಸಭೆಗೆ ಸೇರಿಕೊಂಡಿದ್ದರು. ಇವರು ಯಾರು ಅಂತ ಗೊತ್ತಿಲ್ಲದ್ದರಿಂದ ಇದೂ ಒಂದು ಗಂಭೀರ ಪರೀಕ್ಷೆಯಾಗಿತ್ತು. ಇಂಥವರಲ್ಲಿ ಹುರುಪಿತ್ತು, ಸೇವೆಯಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಕೆಲವರು ಸಂಘಟನೆಯಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನೂ ಪಡೆದುಕೊಂಡರು. ಆದರೆ ಹೋಗುತ್ತಾ ಹೋಗುತ್ತಾ ಅವರು ನಿಜವಾಗಿ ಯಾರು ಅಂತ ಗೊತ್ತಾಯಿತು.

1978ರಲ್ಲಿ ಮರೀಯಗೆ 45 ವಯಸ್ಸಾಗಿದ್ದಾಗ ಪುನಃ ಬಸುರಿಯಾದಳು. ಅವಳ ಹೃದಯದಲ್ಲಿ ಒಂದು ದೋಷ ಕಾಣಿಸಿಕೊಂಡಿತ್ತು. ಇದರಿಂದ ಅವಳ ಜೀವಕ್ಕೆ ಅಪಾಯ ಆಗಬಹುದು ಎಂದು ವೈದ್ಯರು ಹೆದರಿದರು, ಗರ್ಭಪಾತ ಮಾಡಿಕೊ ಎಂದು ಹೇಳುತ್ತಾ ಇದ್ದರು. ಆದರೆ ಮರೀಯ ಇದಕ್ಕೆ ಒಪ್ಪಲಿಲ್ಲ. ಇದರಿಂದ ಕೆಲವು ವೈದ್ಯರು ಒಂದು ಸೂಜಿಯನ್ನು ತೆಗೆದುಕೊಂಡು ಆಸ್ಪತ್ರೆಯಲ್ಲಿ ಅವಳು ಎಲ್ಲಿ ಹೋದರೂ ಅವಳ ಹಿಂದೆನೇ ಸುತ್ತುತ್ತಾ ಇದ್ದರು. ಈ ಸೂಜಿಮದ್ದು ಕೊಟ್ಟರೆ ಮಗು ಕಾಲಕ್ಕಿಂತ ಮುಂಚೆ ಹುಟ್ಟಿಬಿಡುತ್ತಿತ್ತು. ಹೊಟ್ಟೆಯಲ್ಲಿದ್ದ ಮಗುವನ್ನು ಕಾಪಾಡಲಿಕ್ಕಾಗಿ ಮರೀಯ ಆಸ್ಪತ್ರೆಯಿಂದ ಓಡಿಬಂದಳು.

ಆರ್ಮವೀರ್‌ ನಗರವನ್ನು ಬಿಟ್ಟುಹೋಗುವಂತೆ ಗುಪ್ತದಳದ ಅಧಿಕಾರಿಗಳು ನಮಗೆ ಅಪ್ಪಣೆ ಕೊಟ್ಟರು. ನಾವು ಎಸ್ಟೋನಿಯದಲ್ಲಿರುವ ಟಾಲಿನ್‌ ಎಂಬ ನಗರದ ಹತ್ತಿರದಲ್ಲಿದ್ದ ಹಳ್ಳಿಗೆ ಬಂದು ನೆಲೆಸಿದೆವು. ಆಗ ಎಸ್ಟೋನಿಯ ಸೋವಿಯಟ್‌ ಒಕ್ಕೂಟದ ಭಾಗವಾಗಿತ್ತು. ಟಾಲಿನ್‌ನಲ್ಲಿ ಮರೀಯ ಒಬ್ಬ ಆರೋಗ್ಯವಂತ ಗಂಡುಮಗುವನ್ನು ಹೆತ್ತಳು. ವೈದ್ಯರು ಹೇಳಿದ ಹಾಗೆ ಏನೂ ಆಗಲಿಲ್ಲ. ನಾವು ಆ ಮಗನಿಗೆ ವಿಟಾಲೀ ಎಂದು ಹೆಸರಿಟ್ಟೆವು.

ನಂತರ ನಾವು ಎಸ್ಟೋನಿಯದಿಂದ ಹೊರಟು ರಷ್ಯದ ದಕ್ಷಿಣ ಭಾಗದಲ್ಲಿದ್ದ ನ್ಯೆಸ್ಲೋಬ್‌ನಯ ಎಂಬ ಸ್ಥಳಕ್ಕೆ ಬಂದೆವು. ಈ ಸ್ಥಳದ ಹತ್ತಿರದಲ್ಲಿದ್ದ ಪಟ್ಟಣಗಳಿಗೆ ದೇಶದ ಬೇರೆ ಬೇರೆ ಕಡೆಯಿಂದ ಜನರು ಪ್ರವಾಸಕ್ಕಾಗಿ ಬರುತ್ತಿದ್ದರು. ಒಳ್ಳೇ ಆರೋಗ್ಯವನ್ನು ಅರಸಿ ಅಲ್ಲಿಗೆ ಬರುತ್ತಿದ್ದರು, ಆದರೆ ಅವರಲ್ಲಿ ಕೆಲವರು ನಿತ್ಯಜೀವದ ನಿರೀಕ್ಷೆಯನ್ನು ಪಡೆದು ಹಿಂದೆ ಹೋದರು!

ಯೆಹೋವನನ್ನು ಪ್ರೀತಿಸಲು ನಮ್ಮ ಮಕ್ಕಳಿಗೆ ಕಲಿಸಿದೆವು

ನಾವು ನಮ್ಮ ಮಕ್ಕಳಲ್ಲಿ ಯೆಹೋವನ ಮೇಲೆ ಪ್ರೀತಿ ಬೆಳೆಸಲು ಮತ್ತು ಆತನ ಸೇವೆ ಮಾಡುವ ಬಯಕೆ ಹುಟ್ಟಿಸಲು ಪ್ರಯತ್ನಿಸಿದೆವು. ನಮ್ಮ ಮಕ್ಕಳ ಮೇಲೆ ಒಳ್ಳೇ ಪ್ರಭಾವ ಬೀರುತ್ತಿದ್ದವರನ್ನು ಆಗಾಗ ಮನೆಗೆ ಕರೆಯುತ್ತಿದ್ದೆವು. ನನ್ನ ತಮ್ಮ ಗ್ರಿಗೊರೀ ಆಗಾಗ ನಮ್ಮ ಮನೆಗೆ ಬರುತ್ತಿದ್ದ. ಅವನು 1970ರಿಂದ 1995ರ ತನಕ ಸಂಚರಣ ಮೇಲ್ವಿಚಾರಕನಾಗಿ ಸೇವೆ ಮಾಡಿದ. ಅವನು ಬಂದಾಗೆಲ್ಲಾ ನನ್ನ ಕುಟುಂಬದವರು ತುಂಬ ಆನಂದಿಸುತ್ತಿದ್ದರು. ಯಾಕೆಂದರೆ ಅವನು ಯಾವಾಗಲೂ ನಗುನಗುತ್ತಾ ಇರುತ್ತಿದ್ದ, ಬೇರೆಯವರನ್ನೂ ನಗಿಸುತ್ತಿದ್ದ. ಮನೆಗೆ ಅತಿಥಿಗಳು ಬಂದಾಗ ನಾವು ಅನೇಕ ಸಲ ಬೈಬಲ್‌ ಆಟಗಳನ್ನು ಆಡಿದ್ದೇವೆ. ಇದರಿಂದ ನಮ್ಮ ಮಕ್ಕಳಿಗೆ ಬೈಬಲಿನಲ್ಲಿರುವ ಐತಿಹಾಸಿಕ ದಾಖಲೆಗಳೆಂದರೆ ತುಂಬ ಇಷ್ಟ ಆಗುತ್ತಿತ್ತು.

ನಮ್ಮ ಗಂಡುಮಕ್ಕಳು ಮತ್ತು ಅವರ ಪತ್ನಿಯರು. ಎಡದಿಂದ, ಹಿಂದಿನ ಸಾಲು: ಯರಸ್ಲಾವ್‌, ಜೂನಿಯರ್‌ ಪಾವೆಲ್‌, ವಿಟಾಲೀ ಮುಂದಿನ ಸಾಲು: ಆಲ್ಯೋನ, ರಾಯ, ಸ್ವೆಟ್ಲಾನ

1987ರಲ್ಲಿ ನಮ್ಮ ಮಗನಾದ ಯರಸ್ಲಾವ್‌ ಲಾಟ್ವಿಯದಲ್ಲಿರುವ ರಿಗಾ ನಗರಕ್ಕೆ ಹೋದ. ಅಲ್ಲಿ ಸ್ವತಂತ್ರವಾಗಿ ಸುವಾರ್ತೆ ಸಾರಬಹುದಿತ್ತು. ಆದರೆ ಅವನು ಮಿಲಿಟರಿಗೆ ಸೇರಲು ನಿರಾಕರಿಸಿದಾಗ ಅವನಿಗೆ ಒಂದೂವರೆ ವರ್ಷದ ಜೈಲು ಶಿಕ್ಷೆ ಆಯಿತು. ಅವನನ್ನು ಒಂಬತ್ತು ಸೆರೆಮನೆಗಳಲ್ಲಿ ಇಟ್ಟಿದ್ದರು. ನಾನು ಸೆರೆಮನೆಯಲ್ಲಿದ್ದಾಗ ನನ್ನ ಅನುಭವ ಹೇಗಿತ್ತು ಎಂದವನಿಗೆ ಹೇಳಿದ್ದೆ. ಇದು ಅವನಿಗೆ ತಾಳಿಕೊಳ್ಳಲು ಸಹಾಯ ಮಾಡಿತು. ಬಿಡುಗಡೆಯಾದ ನಂತರ ಅವನು ಪಯನೀಯರ್‌ ಸೇವೆ ಆರಂಭಿಸಿದ. 1990ರಲ್ಲಿ ನಮ್ಮ ಮಗನಾದ ಪಾವೆಲ್‌ ಜಪಾನ್‌ನ ಉತ್ತರ ದಿಕ್ಕಿನಲ್ಲಿದ್ದ ಒಂದು ದ್ವೀಪವಾದ ಸಾಖಲೀನ್‌ನಲ್ಲಿ ಪಯನೀಯರ್‌ ಸೇವೆ ಮಾಡಲು ಆಸೆಪಟ್ಟ. ಆಗ ಅವನಿಗೆ 19 ವರ್ಷ. ಆ ದ್ವೀಪದಲ್ಲಿ ಆಗ ಬರೀ 20 ಪ್ರಚಾರಕರಿದ್ದರು ಮತ್ತು ನಾವು ಆ ದ್ವೀಪದಿಂದ 9,000 ಕಿ.ಮೀ. ದೂರದಲ್ಲಿದ್ದೆವು. ಹಾಗಾಗಿ ಅವನನ್ನು ಕಳುಹಿಸಲು ನಮಗೆ ಮನಸ್ಸಿರಲಿಲ್ಲ. ಆದರೆ ನಂತರ ಹೋಗಲು ಬಿಟ್ಟೆವು. ಇದು ಒಳ್ಳೇ ತೀರ್ಮಾನವಾಗಿತ್ತು. ಅಲ್ಲಿದ್ದ ಜನರು ರಾಜ್ಯದ ಸುವಾರ್ತೆಗೆ ಸ್ಪಂದಿಸಿದರು. ಕೆಲವೇ ವರ್ಷಗಳಲ್ಲಿ ಅಲ್ಲಿ ಎಂಟು ಸಭೆಗಳಾದವು. ಪಾವೆಲ್‌ ಸಾಖಲೀನ್‌ನಲ್ಲಿ 1995ರ ತನಕ ಸೇವೆ ಮಾಡಿದ. ಇಷ್ಟು ಸಮಯ, ಚಿಕ್ಕವನು ಅಂದರೆ ವಿಟಾಲೀ ಮಾತ್ರ ನಮ್ಮೊಟ್ಟಿಗೆ ಮನೆಯಲ್ಲಿದ್ದ. ಚಿಕ್ಕ ವಯಸ್ಸಿನಿಂದ ಅವನಿಗೆ ಬೈಬಲ್‌ ಓದುವುದೆಂದರೆ ತುಂಬ ಇಷ್ಟ. 14ರ ಪ್ರಾಯದಲ್ಲಿ ಅವನು ಪಯನೀಯರ್‌ ಸೇವೆ ಆರಂಭಿಸಿದ. ನಾನು ಅವನೊಂದಿಗೆ ಎರಡು ವರ್ಷ ಪಯನೀಯರ್‌ ಸೇವೆ ಮಾಡಿದೆ. ನಾವಿಬ್ಬರೂ ತುಂಬ ಆನಂದಿಸಿದೆವು. 19 ವಯಸ್ಸಾದಾಗ ವಿಟಾಲೀ ವಿಶೇಷ ಪಯನೀಯರನಾಗಿ ಬೇರೆ ಕಡೆ ಸೇವೆ ಮಾಡಲು ಹೋದ.

ಹಿಂದೆ 1952ರಲ್ಲಿ ಗುಪ್ತದಳದ ಒಬ್ಬ ಅಧಿಕಾರಿ ಮರೀಯಗೆ, “ನಿನ್ನ ಧರ್ಮ ಬಿಟ್ಟುಬಿಡು, ಇಲ್ಲಾ ಅಂದರೆ ಹತ್ತು ವರ್ಷ ಸೆರೆಯಲ್ಲಿ ಕೊಳೆಯಬೇಕಾಗುತ್ತದೆ. ನೀನು ಹೊರಗೆ ಹೋಗುವಷ್ಟರಲ್ಲಿ ಮುದುಕಿ ಆಗಿರುತ್ತೀಯಾ, ನಿನಗೇ ಅಂತ ಯಾರೂ ಇರಲ್ಲ” ಎಂದಿದ್ದ. ಆದರೆ ನಡೆದದ್ದೇ ಬೇರೆ. ನಮಗೆ ನಮ್ಮ ನಿಷ್ಠಾವಂತ ದೇವರಾದ ಯೆಹೋವನ, ನಮ್ಮ ಮಕ್ಕಳ ಮತ್ತು ನಾವು ಯಾರಿಗೆಲ್ಲಾ ಸತ್ಯವನ್ನು ಕಂಡುಕೊಳ್ಳಲು ಸಹಾಯ ಮಾಡಿದೆವೋ ಅವರ ಪ್ರೀತಿ ಸಿಕ್ಕಿದೆ. ನಮ್ಮ ಮಕ್ಕಳು ಸೇವೆ ಮಾಡುತ್ತಿದ್ದ ಸ್ಥಳಗಳಿಗೆ ಹೋಗಿ ಬರುವ ಅವಕಾಶ ನನಗೂ ಮರೀಯಗೂ ಸಿಕ್ಕಿತು. ಯೆಹೋವನ ಬಗ್ಗೆ ಕಲಿಯಲು ನಮ್ಮ ಮಕ್ಕಳು ಯಾರಿಗೆ ಸಹಾಯ ಮಾಡಿದ್ದರೋ ಅವರಲ್ಲಿದ್ದ ಕೃತಜ್ಞತಾಭಾವವನ್ನು ನಾವು ನೋಡಲು ಸಾಧ್ಯವಾಯಿತು.

ಯೆಹೋವನು ತೋರಿಸಿದ ಒಳ್ಳೇತನಕ್ಕೆ ಕೃತಜ್ಞರು

1991ರಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಗೆ ಕಾನೂನಿನ ಮನ್ನಣೆ ಸಿಕ್ಕಿತು. ಈ ತೀರ್ಮಾನ ಸಾರುವ ಕೆಲಸವನ್ನು ಹೊಸ ಹುಮ್ಮಸ್ಸಿನಿಂದ ಮಾಡಲು ಸಹಾಯ ಮಾಡಿತು. ಪ್ರತಿ ವಾರಾಂತ್ಯ ಹತ್ತಿರದಲ್ಲಿದ್ದ ಹಳ್ಳಿಗಳಿಗೆ ಪಟ್ಟಣಗಳಿಗೆ ಹೋಗಿ ಸೇವೆ ಮಾಡಲು ಸಾಧ್ಯವಾಗಲಿಕ್ಕಾಗಿ ನಮ್ಮ ಸಭೆ ಒಂದು ಬಸ್‌ ಅನ್ನೇ ಖರೀದಿಸಿತು.

2011ರಲ್ಲಿ ನನ್ನ ಪತ್ನಿಯೊಂದಿಗೆ

ಯರಸ್ಲಾವ್‌ ಮತ್ತವನ ಪತ್ನಿ ಆಲ್ಯೋನ ಹಾಗೂ ಪಾವೆಲ್‌ ಮತ್ತವನ ಪತ್ನಿ ರಾಯ ಬೆತೆಲಿನಲ್ಲಿ ಸೇವೆ ಮಾಡುತ್ತಾರೆ, ವಿಟಾಲೀ ಮತ್ತವನ ಪತ್ನಿ ಸ್ವೆಟ್ಲಾನ ಸಂಚರಣ ಕೆಲಸದಲ್ಲಿದ್ದಾರೆ ಎಂದು ಹೇಳಲು ನಾನು ಸಂತೋಷಪಡುತ್ತೇನೆ. ನಮ್ಮ ದೊಡ್ಡ ಮಗಳು ಐರೀನ ಮತ್ತವಳ ಕುಟುಂಬ ಜರ್ಮನಿಯಲ್ಲಿದ್ದಾರೆ. ಅವಳ ಗಂಡ ವ್ಲಾಡೀಮಿರ್‌ ಮತ್ತು ಅವರ ಮೂವರು ಗಂಡುಮಕ್ಕಳೂ ಹಿರಿಯರಾಗಿ ಸೇವೆ ಮಾಡುತ್ತಾರೆ. ನಮ್ಮ ಇನ್ನೊಬ್ಬ ಮಗಳು ಓಲ್ಗ ಎಸ್ಟೋನಿಯದಲ್ಲಿದ್ದಾಳೆ ಮತ್ತು ನನಗೆ ಆಗಾಗ ಫೋನ್‌ ಮಾಡಿ ಮಾತಾಡಿಸುತ್ತಾಳೆ. ನನ್ನ ಪ್ರಿಯ ಪತ್ನಿ ಮರೀಯ 2014ರಲ್ಲಿ ತೀರಿಕೊಂಡಳು. ಅವಳು ಪುನರುತ್ಥಾನ ಆಗಿ ಬರುವ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇನೆ! ನಾನೀಗ ಬೆಲ್‌ಗೊರಡ್‌ ನಗರದಲ್ಲಿ ಇದ್ದೇನೆ. ಇಲ್ಲಿರುವ ಸಹೋದರರು ನನಗೆ ತುಂಬ ಸಹಾಯ ಮಾಡುತ್ತಾರೆ.

ಈ ಎಲ್ಲಾ ವರ್ಷಗಳಲ್ಲಿ ನಾನು ಯೆಹೋವನಿಗೆ ಮಾಡಿದ ಸೇವೆಯಿಂದ ಕಲಿತ ಪಾಠ ಏನೆಂದರೆ, ಸಮಗ್ರತೆಯ ಮಾರ್ಗದಲ್ಲಿ ನಡೆಯುವಾಗ ಕೆಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಆದರೆ ಅದಕ್ಕೆ ಬದಲಾಗಿ ಯೆಹೋವನು ಕೊಡುವ ಮನಶ್ಶಾಂತಿ ತುಂಬ ಅಮೂಲ್ಯ, ಅದನ್ನು ಬೇರೆ ಯಾವುದಕ್ಕೂ ಹೋಲಿಸಲಿಕ್ಕಾಗಲ್ಲ. ನಾವು ನಂಬಿಕೆಯಲ್ಲಿ ದೃಢವಾಗಿ ನಿಂತರೆ ಇಷ್ಟೊಂದು ಆಶೀರ್ವಾದಗಳು ಸಿಗುತ್ತವೆ ಎಂದು ನಾನು ನೆನಸಿರಲಿಲ್ಲ. 1991ರಲ್ಲಿ ಸೋವಿಯಟ್‌ ಒಕ್ಕೂಟ ಪತನವಾಗುವ ವರೆಗೆ ಅದರ ಭಾಗವಾಗಿದ್ದ ಪ್ರದೇಶಗಳಲ್ಲಿ ಕೇವಲ 40,000 ಪ್ರಚಾರಕರಿದ್ದರು. ಆದರೆ ಈಗ ಇಲ್ಲಿ 4,00,000 ಪ್ರಚಾರಕರಿದ್ದಾರೆ! ನನಗೀಗ 83 ವರ್ಷ. ಇನ್ನೂ ಹಿರಿಯನಾಗಿ ಸೇವೆ ಮಾಡುತ್ತಿದ್ದೇನೆ. ಯೆಹೋವನು ಕೊಟ್ಟ ಬೆಂಬಲದಿಂದಲೇ ನಾನು ಎಲ್ಲ ಕಷ್ಟಗಳನ್ನು ತಾಳಿಕೊಳ್ಳಲು ಸಾಧ್ಯವಾಯಿತು. ಹೌದು, ಯೆಹೋವನು ನನ್ನನ್ನು ಅಪಾರವಾಗಿ ಆಶೀರ್ವದಿಸಿದ್ದಾನೆ!—ಕೀರ್ತ. 13:5, 6.

^ ಪ್ಯಾರ. 6 ಇವೆರಡೂ ವಾಚ್‌ ಟವರ್‌ ಸೊಸೈಟಿಯ ಪ್ರಕಾಶನಗಳು, ಕನ್ನಡದಲ್ಲಿಲ್ಲ.