ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ ದೂರ ಇಡುವುದು ಹೇಗೆ?

ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ ದೂರ ಇಡುವುದು ಹೇಗೆ?

“ಹಳೆಯ ವ್ಯಕ್ತಿತ್ವವನ್ನು ಅದರ ಅಭ್ಯಾಸಗಳೊಂದಿಗೆ ತೆಗೆದುಹಾಕಿರಿ.” —ಕೊಲೊ. 3:9.

ಗೀತೆಗಳು: 83, 129

1, 2. ಜನರು ಯೆಹೋವನ ಸಾಕ್ಷಿಗಳ ಬಗ್ಗೆ ಏನನ್ನು ಗಮನಿಸಿದ್ದಾರೆ?

ಯೆಹೋವನ ಸಾಕ್ಷಿಗಳಲ್ಲಿರುವ ಎದ್ದುಕಾಣುವ ಗುಣಗಳ ಬಗ್ಗೆ ಅನೇಕರು ಮಾತಾಡಿದ್ದಾರೆ. ಉದಾಹರಣೆಗೆ, ನಾಜಿ ಜರ್ಮನಿಯಲ್ಲಿದ್ದ ಸಾಕ್ಷಿಗಳ ಬಗ್ಗೆ ಆ್ಯಂಟಾನ್‌ ಗಿಲ್‌ ಎಂಬ ಲೇಖಕರು ಬರೆದದ್ದು: “ಯೆಹೋವನ ಸಾಕ್ಷಿಗಳು ನಾಜಿಗಳ ಕಡು ದ್ವೇಷಕ್ಕೆ ಗುರಿಯಾದರು. . . . 1939ರಷ್ಟಕ್ಕೆ ಅವರಲ್ಲಿ 6,000 ಮಂದಿ [ಸೆರೆಶಿಬಿರಗಳಲ್ಲಿ] ಇದ್ದರು.” ಸಾಕ್ಷಿಗಳು ಕ್ರೂರ ಹಿಂಸೆಯನ್ನು ಅನುಭವಿಸುತ್ತಿದ್ದಾಗಲೂ ತಮ್ಮಲ್ಲಿದ್ದ ಒಳ್ಳೇ ಗುಣಗಳನ್ನು ಕಳಕೊಳ್ಳಲಿಲ್ಲ. ಅವರನ್ನು ನಂಬಿ ಕೆಲಸಗಳನ್ನು ಒಪ್ಪಿಸಬಹುದಿತ್ತು. ಒತ್ತಡದ ಕೆಳಗೆ ತಾಳ್ಮೆಯಿಂದಿದ್ದರು. ತಮ್ಮ ದೇವರಿಗೆ ನಿಷ್ಠಾವಂತರಾಗಿದ್ದರು ಮತ್ತು ಐಕ್ಯರಾಗಿದ್ದರು. ಇದು ಎಲ್ಲರಿಗೂ ಗೊತ್ತಿತ್ತು ಎಂದು ಆ ಲೇಖಕರು ಹೇಳುತ್ತಾರೆ.

2 ಇತ್ತೀಚೆಗೆ ದಕ್ಷಿಣ ಆಫ್ರಿಕದಲ್ಲಿರುವ ಜನರು ಸಹ ಯೆಹೋವನ ಸಾಕ್ಷಿಗಳಲ್ಲಿರುವ ಉತ್ತಮ ಗುಣಗಳನ್ನು ಗಮನಿಸಿದರು. ಹಿಂದೆಲ್ಲಾ ಬೇರೆಬೇರೆ ವರ್ಣ ಅಥವಾ ಮೈಬಣ್ಣದ ಸಾಕ್ಷಿಗಳು ಒಟ್ಟಿಗೆ ಕೂಡಿಬರಲು ಅಲ್ಲಿ ಅನುಮತಿ ಇರಲಿಲ್ಲ. ಆದರೆ 2011 ಡಿಸೆಂಬರ್‌ 18ರ ಭಾನುವಾರದಂದು ದಕ್ಷಿಣ ಆಫ್ರಿಕ ಮತ್ತು ಹತ್ತಿರದ ದೇಶಗಳಿಂದ ಬೇರೆಬೇರೆ ಜನಾಂಗದ 78,000ಕ್ಕಿಂತ ಹೆಚ್ಚಿನ ಜನರು ಒಂದು ವಿಶೇಷ ಕಾರ್ಯಕ್ರಮಕ್ಕೆ ಜೊಹಾನಸ್‌ಬರ್ಗ್‌ನಲ್ಲಿರುವ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಸೇರಿಬಂದರು. ಕ್ರೀಡಾಂಗಣ ನಿರ್ವಾಹಕರೊಬ್ಬರು ಹೇಳಿದ್ದು: “ಇಷ್ಟು ಒಳ್ಳೇದಾಗಿ ನಡಕೊಳ್ಳುವ ಜನರ ಗುಂಪನ್ನು ಈ ಕ್ರೀಡಾಂಗಣದಲ್ಲಿ ನಾನು ಇದುವರೆಗೂ ನೋಡಿಲ್ಲ. ಎಲ್ಲರೂ ಹಾಕಿರುವ ಬಟ್ಟೆ ನೀಟಾಗಿದೆ. ಮತ್ತೆ ನೀವು ಕ್ರೀಡಾಂಗಣವನ್ನು ಎಷ್ಟು ಚೆನ್ನಾಗಿ ಶುಚಿಮಾಡಿದ್ದೀರಿ! ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮಲ್ಲಿ ಯಾವುದೇ ಜನಾಂಗೀಯ ಭೇದ ಇಲ್ಲ ಅನ್ನುವುದೇ ದೊಡ್ಡ ವಿಷಯ.”

3. ನಮ್ಮ ಸಹೋದರ ಸಹೋದರಿಯರು ಬೇರೆ ಜನರಿಗಿಂತ ಭಿನ್ನರಾಗಿರಲು ಕಾರಣವೇನು?

3 ಈ ಮಾತುಗಳು, ಇಡೀ ಲೋಕದಲ್ಲಿರುವ ನಮ್ಮ ಸಹೋದರ ಸಹೋದರಿಯರು ಭಿನ್ನರಾಗಿದ್ದಾರೆ ಎಂದು ಸಾಕ್ಷಿಗಳಲ್ಲದ ಜನರು ಸಹ ಗಮನಿಸಿದ್ದಾರೆಂದು ತೋರಿಸುತ್ತವೆ. (1 ಪೇತ್ರ 5:9) ನಾವು ಇಷ್ಟು ಭಿನ್ನರಾಗಿರಲು ಕಾರಣವೇನು? ಕಾರಣ ಏನೆಂದರೆ, ಬೈಬಲ್‌ ಮತ್ತು ಪವಿತ್ರಾತ್ಮದ ಸಹಾಯದಿಂದ ನಾವು ದೇವರಿಗೆ ಇಷ್ಟವಾಗದ ವಿಷಯಗಳನ್ನು ಬಿಟ್ಟುಬಿಡಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತೇವೆ. “ಹಳೆಯ ವ್ಯಕ್ತಿತ್ವವನ್ನು” ತೆಗೆದುಹಾಕಿ “ನೂತನ ವ್ಯಕ್ತಿತ್ವವನ್ನು” ಧರಿಸಿಕೊಳ್ಳುತ್ತೇವೆ.—ಕೊಲೊ. 3:9, 10.

4. ನಾವು ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ? ಯಾಕೆ?

4 ನಾವು ಹಳೇ ವ್ಯಕ್ತಿತ್ವವನ್ನು ತೆಗೆದುಹಾಕಿದ ಮೇಲೆ ಅದನ್ನು ದೂರ ಇಡಬೇಕು. ಈ ಲೇಖನದಲ್ಲಿ, ನಾವು ಹಳೇ ವ್ಯಕ್ತಿತ್ವವನ್ನು ಹೇಗೆ ತೆಗೆದುಹಾಕಬಹುದು ಮತ್ತು ಇದನ್ನು ಮಾಡುವುದು ಯಾಕೆ ಪ್ರಾಮುಖ್ಯ ಎಂದು ನೋಡಲಿದ್ದೇವೆ. ಒಬ್ಬ ವ್ಯಕ್ತಿ ಜೀವನದಲ್ಲಿ ಅದೆಂಥ ಕೆಟ್ಟ ಕೆಲಸಗಳನ್ನು ಮಾಡಿದ್ದರೂ ಬದಲಾಗಬಲ್ಲನು ಎಂದು ನೋಡಲಿದ್ದೇವೆ. ಸತ್ಯದಲ್ಲಿ ಅನೇಕ ವರ್ಷ ಇದ್ದವರು ಸಹ ಹಳೇ ವ್ಯಕ್ತಿತ್ವವನ್ನು ದೂರ ಇಡಲು ಏನು ಮಾಡಬೇಕೆಂದು ಚರ್ಚಿಸಲಿದ್ದೇವೆ. ನಾವು ಯಾಕೆ ಇದನ್ನು ಚರ್ಚಿಸಬೇಕು? ಯೆಹೋವನ ಸೇವೆ ಮಾಡುತ್ತಿದ್ದ ಕೆಲವರು ಜಾಗ್ರತೆ ವಹಿಸುವುದನ್ನು ಬಿಟ್ಟುಬಿಟ್ಟಿದ್ದಾರೆ. ಯೆಹೋವನ ಬಗ್ಗೆ ತಿಳಿದುಕೊಳ್ಳುವುದಕ್ಕೆ ಮುಂಚೆ ಇದ್ದ ತರ ಯೋಚಿಸಲು, ನಡೆಯಲು ಪುನಃ ಆರಂಭಿಸಿದ್ದಾರೆ. ನಾವೆಲ್ಲರೂ ಈ ಎಚ್ಚರಿಕೆಯನ್ನು ಎಂದೂ ಮರೆಯಬಾರದು: “ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರವಾಗಿರಲಿ.”—1 ಕೊರಿಂ. 10:12.

ಅನೈತಿಕ ಆಸೆಗಳಿದ್ದರೆ ತೆಗೆದುಹಾಕಿ

5. (ಎ) ನಾವು ಹಳೇ ವ್ಯಕ್ತಿತ್ವವನ್ನು ತಕ್ಷಣ ತೆಗೆದುಹಾಕಬೇಕು ಎಂಬುದಕ್ಕೆ ಒಂದು ಉದಾಹರಣೆ ಕೊಡಿ. (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಹಳೇ ವ್ಯಕ್ತಿತ್ವದ ಭಾಗವಾಗಿರುವ ಯಾವ ಅಭ್ಯಾಸಗಳ ಬಗ್ಗೆ ಕೊಲೊಸ್ಸೆ 3:5-9​ರಲ್ಲಿ ತಿಳಿಸಲಾಗಿದೆ?

5 ನೀವು ಹಾಕಿರುವ ಬಟ್ಟೆ ಕೊಳೆಯಾಗಿ ವಾಸನೆ ಬರುತ್ತಿದ್ದರೆ ಏನು ಮಾಡುತ್ತೀರಿ? ಆದಷ್ಟು ಬೇಗ ಅದನ್ನು ಬಿಚ್ಚಿಹಾಕುತ್ತೀರಿ. ಅದೇ ರೀತಿ, ನಾವು ಯೆಹೋವನು ಹಗೆಮಾಡುವಂಥ ವಿಷಯಗಳನ್ನು ಮಾಡುತ್ತಿದ್ದೇವೆ ಎಂದು ಗೊತ್ತಾದರೆ ಅದನ್ನು ತಕ್ಷಣ ಬಿಟ್ಟುಬಿಡಲು ಹೆಜ್ಜೆ ತೆಗೆದುಕೊಳ್ಳಬೇಕು, ತಡಮಾಡಬಾರದು. ಇಂಥ ದುರಭ್ಯಾಸಗಳ ಬಗ್ಗೆ ಮಾತಾಡುತ್ತಾ ಪೌಲನು “ಇವುಗಳೆಲ್ಲವನ್ನು ನಿಮ್ಮಿಂದ ತೊಲಗಿಸಿಬಿಡಿರಿ” ಎಂದಿದ್ದಾನೆ. ಈಗ ಇವುಗಳಲ್ಲಿ ಎರಡು ವಿಷಯಗಳ ಬಗ್ಗೆ ಚರ್ಚಿಸೋಣ: ಒಂದು ಲೈಂಗಿಕ ಅನೈತಿಕತೆ (ಜಾರತ್ವ), ಇನ್ನೊಂದು ಅಶುದ್ಧತೆ.—ಕೊಲೊಸ್ಸೆ 3:5-9 ಓದಿ.

6, 7. (ಎ) ಹಳೇ ವ್ಯಕ್ತಿತ್ವವನ್ನು ತೆಗೆದುಹಾಕಲು ತುಂಬ ಪ್ರಯತ್ನ ಹಾಕಬೇಕೆಂದು ಪೌಲನ ಮಾತುಗಳಿಂದ ಹೇಗೆ ಗೊತ್ತಾಗುತ್ತದೆ? (ಬಿ) ಸಕೂರಾಳ ಜೀವನ ರೀತಿ ಹೇಗಿತ್ತು? (ಸಿ) ಅವಳು ಬದಲಾಗಲು ಬೇಕಾದ ಬಲ ಯಾವುದರಿಂದ ಸಿಕ್ಕಿತು?

6 ಲೈಂಗಿಕ ಅನೈತಿಕತೆ. “ಲೈಂಗಿಕ ಅನೈತಿಕತೆ” ಎಂದು ಭಾಷಾಂತರವಾಗಿರುವ ಮೂಲ ಭಾಷೆಯ ಪದದ ಅರ್ಥದಲ್ಲಿ ಕಾನೂನುಬದ್ಧವಾಗಿ ಮದುವೆಯಾಗಿಲ್ಲದ ಗಂಡುಹೆಣ್ಣಿನ ನಡುವಿನ ಲೈಂಗಿಕ ಸಂಬಂಧ ಮತ್ತು ಸಲಿಂಗಕಾಮ ಸೇರಿದೆ. ಲೈಂಗಿಕ ಅನೈತಿಕತೆಯ ವಿಷಯದಲ್ಲಿ ಪೌಲ ಕ್ರೈಸ್ತರಿಗೆ ಹೇಳಿದ್ದು: “ನಿಮ್ಮ ದೈಹಿಕ ಅಂಗಗಳನ್ನು ಸಾಯಿಸಿರಿ.” ಇದರರ್ಥ ನಮ್ಮಲ್ಲಿ ಅಂಕುರಿಸಬಹುದಾದ ಯಾವುದೇ ತಪ್ಪಾದ ಆಸೆಗಳನ್ನು ತೆಗೆದುಹಾಕಲು ತುಂಬ ಪ್ರಯತ್ನ ಮಾಡಬೇಕು. ಇದು ಕಷ್ಟ ಆಗಿರಬಹುದು. ಆದರೆ ಅಂಥ ಆಸೆಗಳನ್ನು ಖಂಡಿತ ತೆಗೆದುಹಾಕಲು ಸಾಧ್ಯ.

7 ಇದನ್ನು ಜಪಾನ್‌ನಲ್ಲಿರುವ ಸಕೂರಾ ಎಂಬ ಸಹೋದರಿಯ ಉದಾಹರಣೆಯಿಂದ ನೋಡಬಹುದು. * ಸಕೂರಾ ದೊಡ್ಡವಳಾಗುತ್ತಾ ಇದ್ದಾಗ ಒಂಟಿತನ, ದುಃಖ ಕಾಡುತ್ತಿತ್ತು. ತನ್ನ ಒಂಟಿತನವನ್ನು ಓಡಿಸಲು 15 ವರ್ಷ ಪ್ರಾಯದಿಂದಲೇ ಲೈಂಗಿಕ ಸಂಬಂಧದಲ್ಲಿ ತೊಡಗಿದಳು. ಬೇರೆಬೇರೆ ವ್ಯಕ್ತಿಗಳೊಟ್ಟಿಗೆ ಇಂಥ ಸಂಪರ್ಕ ಇಟ್ಟಳು ಮತ್ತು ಮೂರು ಸಲ ಗರ್ಭಪಾತ ಮಾಡಿಸಿಕೊಳ್ಳಬೇಕಾಯಿತು. ಅವಳು ಹೇಳುವುದು: “ಮೊದಮೊದಲು, ಅನೈತಿಕ ಸಂಬಂಧದಲ್ಲಿ ತೊಡಗುವಾಗ ನನಗೂ ಯಾರೋ ಇದ್ದಾರೆ ಎಂದು ಅನಿಸುತ್ತಿತ್ತು. ಅವರಿಗೆ ನನ್ನ ಆವಶ್ಯಕತೆ ಇದೆ, ನನ್ನನ್ನು ಪ್ರೀತಿಸುತ್ತಾರೆ ಅಂತ ಅನಿಸಿತು. ಆದರೆ ಲೈಂಗಿಕ ಸಂಬಂಧದಲ್ಲಿ ಹೆಚ್ಚೆಚ್ಚು ತೊಡಗಿದಾಗ ನನಗೆ ಯಾರೂ ಇಲ್ಲ ಎಂಬ ಅನಿಸಿಕೆ ಕಾಡತೊಡಗಿತು.” ಅವಳಿಗೆ 23 ವರ್ಷ ಆಗುವವರೆಗೆ ಈ ರೀತಿಯ ಜೀವನ ನಡೆಸಿದಳು. ಆಮೇಲೆ ಅವಳು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದಳು. ಅವಳು ಕಲಿಯುತ್ತಿದ್ದ ವಿಷಯ ಅವಳಿಗೆ ಇಷ್ಟವಾಯಿತು. ಅನೈತಿಕ ಜೀವನ ಬಿಟ್ಟುಬಿಡಲು, ತನ್ನ ಬಗ್ಗೆಯೇ ಇದ್ದ ನಾಚಿಕೆ, ತಪ್ಪಿತಸ್ಥ ಭಾವನೆಯಿಂದ ಹೊರಬರಲು ಯೆಹೋವನು ಅವಳಿಗೆ ಸಹಾಯ ಮಾಡಿದನು. ಈಗ ಸಕೂರಾ ಪಯನೀಯರಳಾಗಿ ಸೇವೆ ಮಾಡುತ್ತಿದ್ದಾಳೆ. ಅವಳನ್ನು ಒಂಟಿತನ ಕಾಡುವುದಿಲ್ಲ. “ಹಗಲುರಾತ್ರಿ ನಾನು ಯೆಹೋವನ ಪ್ರೀತಿಯಲ್ಲಿ ಆನಂದಿಸುತ್ತಾ ತುಂಬ ಸಂತೋಷವಾಗಿದ್ದೇನೆ” ಎಂದು ಹೇಳುತ್ತಾಳೆ.

ಅಶುದ್ಧವಾದ ಅಭ್ಯಾಸಗಳನ್ನು ಬಿಟ್ಟುಬಿಡಿ

8. ನಮಗೆ ಯಾವ ಅಭ್ಯಾಸಗಳಿದ್ದರೆ ದೇವರ ದೃಷ್ಟಿಯಲ್ಲಿ ಅಶುದ್ಧರಾಗುತ್ತೇವೆ?

8 ಅಶುದ್ಧತೆ. ಬೈಬಲು “ಅಶುದ್ಧತೆ” ಬಗ್ಗೆ ಮಾತಾಡುವಾಗ ಅದು ಬರೀ ಲೈಂಗಿಕ ಅನೈತಿಕತೆಗೆ ಸೂಚಿಸಲಿಲ್ಲ. ಬೇರೆ ವಿಷಯಗಳೂ ಸೇರಿವೆ. ಧೂಮಪಾನ ಅಥವಾ ಅಶ್ಲೀಲವಾದ ಜೋಕ್‌ಗಳನ್ನು ಹೇಳುವುದು ಸಹ ಸೇರಿದೆ. (2 ಕೊರಿಂ. 7:1; ಎಫೆ. 5:3, 4) ಒಬ್ಬ ವ್ಯಕ್ತಿ ಒಬ್ಬನೇ ಇರುವಾಗ ಮಾಡುವ ಕೆಟ್ಟ ವಿಷಯಗಳನ್ನೂ ಇದು ಸೂಚಿಸಬಹುದು. ಲೈಂಗಿಕವಾಗಿ ಉದ್ರೇಕಗೊಳಿಸುವ ಪುಸ್ತಕಗಳನ್ನು ಓದುವುದು ಅಥವಾ ಅಶ್ಲೀಲ ಚಿತ್ರಗಳನ್ನು ನೋಡುವುದು ಇದರಲ್ಲಿ ಸೇರಿದೆ. ಇದು ಹಸ್ತಮೈಥುನಕ್ಕೆ ನಡೆಸಬಹುದು. ಇದೊಂದು ಅಶುದ್ಧ ಅಭ್ಯಾಸ.—ಕೊಲೊ. 3:5. *

9. ಒಬ್ಬ ವ್ಯಕ್ತಿ ನಿಯಂತ್ರಿಸಲಾಗದ “ಕಾಮಾಭಿಲಾಷೆ” ಬೆಳೆಸಿಕೊಂಡರೆ ಏನಾಗಬಹುದು?

9 ಅಶ್ಲೀಲ ಚಿತ್ರಗಳನ್ನು ಆಗಾಗ ನೋಡುತ್ತಾ ಇರುವ ಜನರಲ್ಲಿ ನಿಯಂತ್ರಿಸಲಾಗದ “ಕಾಮಾಭಿಲಾಷೆ” ಬೆಳೆಯುತ್ತದೆ. ಇದರಿಂದಾಗಿ ಅವರು ಸೆಕ್ಸ್‌ ವ್ಯಸನಿ ಆಗಿಬಿಡುವ ಸಾಧ್ಯತೆ ಇದೆ. ಅಶ್ಲೀಲ ಚಿತ್ರಗಳನ್ನು ನೋಡುವ ಚಟವು ಮದ್ಯ ಅಥವಾ ಅಮಲೌಷಧದ ಚಟದಂತೆ ಇದೆ ಎನ್ನುತ್ತಾರೆ ಸಂಶೋಧಕರು. ಹಾಗಾಗಿ ಅಶ್ಲೀಲ ಚಿತ್ರಗಳನ್ನು ನೋಡುವ ಚಟದಿಂದ ದುಷ್ಪರಿಣಾಮಗಳು ಖಂಡಿತ ಆಗುತ್ತವೆ. ಈ ಚಟ ಇರುವ ವ್ಯಕ್ತಿಗೆ ತನ್ನ ಬಗ್ಗೆಯೇ ತುಂಬ ನಾಚಿಕೆ ಆಗಬಹುದು, ಕೆಲಸವನ್ನು ಚೆನ್ನಾಗಿ ಮಾಡಲು ಆಗದೇ ಹೋಗಬಹುದು, ಅವನ ಕುಟುಂಬದಲ್ಲಿ ತೊಂದರೆ ಏಳಬಹುದು, ವಿವಾಹ ವಿಚ್ಛೇದನ, ಆತ್ಮಹತ್ಯೆಗೂ ನಡೆಸಬಹುದು. ಅಶ್ಲೀಲ ಚಿತ್ರಗಳನ್ನು ನೋಡುವ ಚಟವನ್ನು ಬಿಟ್ಟು ಒಂದು ವರ್ಷ ಆದ ಮೇಲೆ ಒಬ್ಬ ವ್ಯಕ್ತಿ, ಈಗ ಅವನಿಗೆ ತನ್ನ ಮೇಲೇ ಗೌರವ ಬಂದಿದೆ ಎಂದು ಹೇಳಿದನು.

10. ಅಶ್ಲೀಲ ಚಿತ್ರಗಳನ್ನು ನೋಡುವ ಚಟವನ್ನು ರಿಬೇರೋ ಬಿಟ್ಟುಬಿಡಲು ಯಾವುದು ಸಹಾಯ ಮಾಡಿತು?

10 ಅಶ್ಲೀಲ ಚಿತ್ರಗಳನ್ನು ನೋಡದೇ ಇರಲು ಅನೇಕರಿಗೆ ಒಳಗಿಂದೊಳಗೆ ದೊಡ್ಡ ಹೋರಾಟವೇ ನಡೆಯುತ್ತಿರುತ್ತದೆ. ಆದರೆ ಪ್ರಯತ್ನಪಟ್ಟರೆ ಗೆಲುವು ನಿಶ್ಚಯ. ಬ್ರಸಿಲ್‌ನಲ್ಲಿರುವ ರಿಬೇರೋ ಎಂಬ ವ್ಯಕ್ತಿಯ ಉದಾಹರಣೆ ನೋಡಿ. ಹದಿಪ್ರಾಯದಲ್ಲಿ ಅವನು ಮನೆ ಬಿಟ್ಟು ಹೋದ. ಕಾಗದವನ್ನು ಮರುಬಳಕೆಗಾಗಿ ತಯಾರಿಸುವ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ಅವನು ಅಶ್ಲೀಲ ಚಿತ್ರಗಳಿದ್ದ ಪತ್ರಿಕೆಗಳನ್ನು ನೋಡಿದ. ರಿಬೇರೋ ಹೇಳುವುದು: “ಮೆಲ್ಲಮೆಲ್ಲನೆ ನನಗೆ ಅದರ ಚಟ ಹಿಡಿಯಿತು. ಈ ಚಟ ಎಷ್ಟು ಬಲವಾಯಿತೆಂದರೆ, ನಾನು ಯಾರೊಂದಿಗೆ ಸೇರಿ ಸಹಬಾಳ್ವೆ ಮಾಡುತ್ತಿದ್ದೆನೋ ಆ ಸ್ತ್ರೀ ಯಾವಾಗಪ್ಪಾ ಮನೆಯಿಂದ ಹೊರಗೆ ಹೋಗುತ್ತಾಳೆ ಎಂದು ಕಾಯುತ್ತಾ ಇರುತ್ತಿದ್ದೆ. ಅವಳು ಹೋದ ಕೂಡಲೆ ಅಶ್ಲೀಲ ವಿಡಿಯೋಗಳನ್ನು ಹಾಕಿಕೊಂಡು ನೋಡುತ್ತಿದ್ದೆ.” ಒಂದು ದಿನ ಅವನು ಕೆಲಸ ಮಾಡುತ್ತಿರುವಾಗ, ಮರುಬಳಕೆಗೆಂದು ಬಂದಿದ್ದ ಪುಸ್ತಕಗಳ ರಾಶಿಯಲ್ಲಿ ಕುಟುಂಬ ಸಂತೋಷದ ರಹಸ್ಯ ಪುಸ್ತಕವನ್ನು ನೋಡಿದ. ಅದನ್ನು ತೆಗೆದು ಓದಿದ. ಅವನು ಓದಿದ ವಿಷಯ ಇಷ್ಟವಾಗಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಮಾಡಲು ಶುರುಮಾಡಿದ. ಆದರೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟವನ್ನು ಬಿಡಲು ರಿಬೇರೋಗೆ ತುಂಬ ಸಮಯ ಹಿಡಿಯಿತು. ಅದನ್ನು ಬಿಟ್ಟುಬಿಡಲು ಅವನಿಗೆ ಯಾವುದು ಸಹಾಯ ಮಾಡಿತು? ಅವನು ವಿವರಿಸುವುದು: “ಪ್ರಾರ್ಥನೆ, ಬೈಬಲ್‌ ಅಧ್ಯಯನ ಮತ್ತು ನಾನು ಕಲಿಯುತ್ತಿದ್ದ ವಿಷಯಗಳ ಬಗ್ಗೆ ಧ್ಯಾನ ಮಾಡಿದಾಗ ದೇವರ ಗುಣಗಳ ಕುರಿತ ನನ್ನ ತಿಳುವಳಿಕೆ ಹೆಚ್ಚಾಯಿತು. ಇದರಿಂದಾಗಿ ನನ್ನಲ್ಲಿ ಯೆಹೋವನ ಮೇಲೆ ಪ್ರೀತಿ ಜಾಸ್ತಿ ಆಯಿತು. ಈ ಪ್ರೀತಿ ಅಶ್ಲೀಲ ಚಿತ್ರಗಳನ್ನು ನೋಡುವ ನನ್ನ ಆಸೆಗಿಂತ ಹೆಚ್ಚು ಬಲವಾಯಿತು.” ಬೈಬಲು ಮತ್ತು ಪವಿತ್ರಾತ್ಮದ ಸಹಾಯದಿಂದ ರಿಬೇರೋ ತಪ್ಪು ದಾರಿಯಲ್ಲಿ ಹೋಗುವುದನ್ನು ಬಿಟ್ಟು ದೀಕ್ಷಾಸ್ನಾನ ಪಡೆದುಕೊಂಡ. ಈಗ ಒಬ್ಬ ಸಭಾ ಹಿರಿಯನಾಗಿ ಸೇವೆ ಮಾಡುತ್ತಿದ್ದಾನೆ.

11. ಅಶ್ಲೀಲ ಚಿತ್ರಗಳಿಂದ ದೂರ ಇರಲು ಯಾವುದು ಸಹಾಯ ಮಾಡುತ್ತದೆ?

11 ಅಶ್ಲೀಲ ಚಿತ್ರಗಳಿಂದ ದೂರ ಇರಲು ರಿಬೇರೋ ಬೈಬಲ್‌ ಅಧ್ಯಯನ ಮಾಡಿದ್ದು ಮಾತ್ರವಲ್ಲ ಇನ್ನೂ ಬೇರೆ ವಿಷಯಗಳನ್ನು ಮಾಡಿದನೆಂದು ಗಮನಿಸಿದಿರಾ? ಅವನು ಬೈಬಲಿನಲ್ಲಿ ಓದಿದ ವಿಷಯಗಳ ಬಗ್ಗೆ ಆಳವಾಗಿ ಯೋಚಿಸಿದನು, ಅದು ತನ್ನ ಹೃದಯದ ಮೇಲೆ ಪ್ರಭಾವ ಬೀರುವಂತೆ ಬಿಟ್ಟನು. ಯೆಹೋವನಿಗೆ ಪ್ರಾರ್ಥಿಸಿ ಆತನ ಸಹಾಯಕ್ಕಾಗಿ ಬೇಡಿಕೊಂಡನು. ಇದು ರಿಬೇರೋಗೆ ದೇವರ ಮೇಲೆ ಇದ್ದ ಪ್ರೀತಿಯನ್ನು ಜಾಸ್ತಿ ಮಾಡಿತು. ಈ ಪ್ರೀತಿ ಅಶ್ಲೀಲ ಚಿತ್ರಗಳನ್ನು ನೋಡುವ ಆಸೆಯನ್ನು ಜಯಿಸಿತು. ಅಶ್ಲೀಲ ಚಿತ್ರಗಳಿಂದ ದೂರ ಇರಲು ನಾವು ಸಹ ಯೆಹೋವನ ಮೇಲೆ ಬಲವಾದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಮತ್ತು ಕೆಟ್ಟದ್ದನ್ನು ಹಗೆಮಾಡಬೇಕು.—ಕೀರ್ತನೆ 97:10 ಓದಿ.

ಕೋಪ, ನಿಂದಾತ್ಮಕ ಮಾತು, ಸುಳ್ಳನ್ನು ಬಿಟ್ಟುಬಿಡಿ

12. ಕೋಪ ಮತ್ತು ನಿಂದಾತ್ಮಕ ಮಾತನ್ನು ಬಿಟ್ಟುಬಿಡಲು ಸ್ಟೀಫನ್‌ಗೆ ಯಾವುದು ಸಹಾಯ ಮಾಡಿತು?

12 ಕೆಲವರಿಗೆ ಮೂಗಿನ ಮೇಲೆ ಕೋಪ ಇರುತ್ತದೆ. ಸಿಟ್ಟು ಬಂದರೆ ಬಾಯಿಗೆ ಬಂದ ಹಾಗೆ, ನೋವಾಗುವ ರೀತಿ ಮಾತಾಡಿಬಿಡುತ್ತಾರೆ. ಇದರಿಂದ ಇಡೀ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಆಸ್ಟ್ರೇಲಿಯದಲ್ಲಿರುವ ಒಬ್ಬ ತಂದೆ ಸ್ಟೀಫನ್‌ ತುಂಬ ಕೆಟ್ಟ ಮಾತು ಆಡುತ್ತಿದ್ದರು. ಚಿಕ್ಕಪುಟ್ಟದ್ದಕ್ಕೆಲ್ಲ ಸಿಡಿಸಿಡಿ ಅನ್ನುತ್ತಿದ್ದರು. ಅವರು ಹೇಳುವುದು: “ನಾನು ಮತ್ತು ನನ್ನ ಪತ್ನಿ ಮೂರು ಸಲ ಬೇರೆ ಆಗಿದ್ವಿ. ವಿಚ್ಛೇದನ ಪಡೆಯಲು ಮುಂದಾಗಿದ್ವಿ.” ನಂತರ ಅವರು ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದರು. ಸ್ಟೀಫನ್‌ ಕಲಿಯುತ್ತಿರುವುದನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸಿದರು. ಯೆಹೋವನನ್ನು ತಿಳಿದುಕೊಳ್ಳುವ ಮುಂಚೆ ತನಗೆಷ್ಟು ಕೋಪ ಬರುತ್ತಿತ್ತೆಂದರೆ ಯಾವುದೇ ಕ್ಷಣದಲ್ಲಿ ಸಿಡಿಯಲಿಕ್ಕಿದ್ದ ಬಾಂಬ್‌ ತರ ಇದ್ದೆ ಎಂದು ಸ್ಟೀಫನ್‌ ಹೇಳುತ್ತಾರೆ. ಆದರೆ ಅವರು ಬೈಬಲಿನ ಸಲಹೆಯನ್ನು ಪಾಲಿಸಲು ಆರಂಭಿಸಿದಾಗ ಏನಾಯಿತು? ಅವರು ಹೇಳುವುದು: “ನಮ್ಮ ಕುಟುಂಬ ಜೀವನ ತುಂಬಾನೇ ಸುಧಾರಿಸಿತು. ಯೆಹೋವನ ಸಹಾಯದಿಂದ ಈಗ ನನ್ನಲ್ಲಿ ಒಂದು ಪ್ರಶಾಂತತೆ ಬಂದಿದೆ, ಶಾಂತಿ ಇದೆ.” ಈಗ ಸ್ಟೀಫನ್‌ ಒಬ್ಬ ಸಹಾಯಕ ಸೇವಕರಾಗಿ ಸೇವೆ ಮಾಡುತ್ತಿದ್ದಾರೆ ಮತ್ತು ಅವರ ಪತ್ನಿ ಹಲವಾರು ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿದ್ದಾರೆ. ಸ್ಟೀಫನ್‌ ಅವರ ಸಭೆಯಲ್ಲಿರುವ ಹಿರಿಯರು ಹೇಳಿದ್ದು: “ಸ್ಟೀಫನ್‌ ತುಂಬ ಶಾಂತ ವ್ಯಕ್ತಿ. ಶ್ರಮಜೀವಿ. ತುಂಬ ದೀನತೆ ತೋರಿಸುತ್ತಾರೆ.” ಅವರು ಕೋಪ ಮಾಡಿಕೊಂಡದ್ದನ್ನು ನಾವು ಇದುವರೆಗೂ ನೋಡಿಲ್ಲ ಎಂದು ಸಹ ಅವರು ಹೇಳಿದರು. ತನ್ನ ವ್ಯಕ್ತಿತ್ವದಲ್ಲಾದ ಈ ಬದಲಾವಣೆಗೆ ತನ್ನ ಪ್ರಯತ್ನವೇ ಕಾರಣ ಎಂದು ಸ್ಟೀಫನ್‌ ಹೇಳುವುದಿಲ್ಲ. “ನನ್ನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಲು ಯೆಹೋವನು ಕೊಟ್ಟ ಸಹಾಯವನ್ನು ನಾನು ಸ್ವೀಕರಿಸದೆ ಹೋಗಿದ್ದರೆ ನನ್ನ ಜೀವನದಲ್ಲಿ ಇಂಥ ಅದ್ಭುತ ಆಶೀರ್ವಾದಗಳು ಸಿಗುತ್ತಿರಲಿಲ್ಲ” ಎನ್ನುತ್ತಾರೆ ಸ್ಟೀಫನ್‌.

13. (ಎ) ಕೋಪ ಮಾಡಿಕೊಂಡರೆ ಏನಾಗಬಹುದು? (ಬಿ) ಬೈಬಲ್‌ ಯಾವ ಎಚ್ಚರಿಕೆ ಕೊಡುತ್ತದೆ?

13 ಕೋಪ ಮಾಡಿಕೊಳ್ಳಬಾರದು, ಕಠೋರವಾಗಿ ಮಾತಾಡಬಾರದು, ಕಿರಿಚಾಡಬಾರದು ಎಂದು ಬೈಬಲ್‌ ಎಚ್ಚರಿಸುತ್ತದೆ. (ಎಫೆ. 4:31) ಇದೆಲ್ಲ ಹಿಂಸಾಕೃತ್ಯಗಳಿಗೆ ನಡೆಸುತ್ತದೆ. ಇಂದು ಲೋಕದಲ್ಲಿರುವ ಅನೇಕರು ಕೋಪ ತೋರಿಸುವುದು, ಹೊಡೆದಾಡೋದು ಸಾಮಾನ್ಯ, ತಪ್ಪೇನಿಲ್ಲ ಅಂದುಕೊಂಡಿದ್ದಾರೆ. ಆದರೆ ಇಂಥ ನಡತೆ ನಮ್ಮ ಸೃಷ್ಟಿಕರ್ತನನ್ನು ಅಗೌರವಿಸುತ್ತದೆ. ನಮ್ಮ ಸಹೋದರರಲ್ಲಿ ಅನೇಕರು ತಮ್ಮ ಈ ನಡತೆ ಬದಲಾಯಿಸಿಕೊಂಡು, ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡಿದ್ದಾರೆ.—ಕೀರ್ತನೆ 37:8-11 ಓದಿ.

14. ಒಬ್ಬ ಹಿಂಸಾತ್ಮಕ ವ್ಯಕ್ತಿ ಸಾಧುಸ್ವಭಾವದವನಾಗಲು ಸಾಧ್ಯನಾ?

14 ಆಸ್ಟ್ರಿಯದಲ್ಲಿ ಹಿರಿಯನಾಗಿ ಸೇವೆ ಮಾಡುತ್ತಿರುವ ಹಾನ್ಸ್‌ ಎಂಬ ಸಹೋದರನ ಉದಾಹರಣೆ ನೋಡಿ. ಅವರ ಸಭೆಯಲ್ಲಿರುವ ಹಿರಿಯ ಮಂಡಲಿಯ ಸಂಯೋಜಕ ಹೇಳಿದ್ದು: “ಅವರು ತುಂಬ ಸಾಧುಸ್ವಭಾವದವರು. ಇಷ್ಟು ಸಾಧುಸ್ವಭಾವದವರನ್ನು ನೀವು ಭೇಟಿ ಆಗಿರಲಿಕ್ಕಿಲ್ಲ.” ಆದರೆ ಹಾನ್ಸ್‌ ಹಿಂದೆ ಹೀಗಿರಲಿಲ್ಲ. ಹದಿವಯಸ್ಸಿನಲ್ಲಿ ಅವರು ತುಂಬ ಕುಡಿಯಲು ಆರಂಭಿಸಿದರು ಮತ್ತು ಹಿಂಸಾತ್ಮಕ ವ್ಯಕ್ತಿಯಾದರು. ಒಂದು ದಿನ ಅವರು ಕುಡಿದಿದ್ದಾಗ ಅವರಿಗೆ ಎಷ್ಟು ಸಿಟ್ಟು ಬಂತೆಂದರೆ ತನ್ನ ಪ್ರೇಯಸಿಯನ್ನೇ ಕೊಂದುಹಾಕಿದರು. ಹಾನ್ಸ್‌ಗೆ 20 ವರ್ಷಗಳ ಜೈಲು ಶಿಕ್ಷೆಯಾಯಿತು. ಆದರೆ ಜೈಲುವಾಸ ಅವರ ವ್ಯಕ್ತಿತ್ವವನ್ನು ಬದಲಾಯಿಸಲಿಲ್ಲ. ನಂತರ ಹಾನ್ಸ್‌ ಅನ್ನು ಭೇಟಿಮಾಡುವಂತೆ ಅವರ ತಾಯಿ ಒಬ್ಬ ಹಿರಿಯನನ್ನು ಕೇಳಿಕೊಂಡರು. ಹಾನ್ಸ್‌ ಜೊತೆ ಒಂದು ಬೈಬಲ್‌ ಅಧ್ಯಯನ ಆರಂಭಿಸಲಾಯಿತು. ಅವರು ಹೇಳುವುದು: “ನನಗೆ ನನ್ನ ಹಳೇ ವ್ಯಕ್ತಿತ್ವವನ್ನು ತೆಗೆದುಹಾಕಲು ತುಂಬ ಕಷ್ಟ ಆಯಿತು. ನನಗೆ ಈ ವಚನಗಳಿಂದ ತುಂಬ ಪ್ರೋತ್ಸಾಹ ಸಿಕ್ಕಿತು. ಯೆಶಾಯ 55:7 ‘ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ’ ಮತ್ತು 1 ಕೊರಿಂಥ 6:11 ತಪ್ಪು ದಾರಿಯನ್ನು ಬಿಟ್ಟುಬಂದವರ ಬಗ್ಗೆ ‘ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ’ ಎಂದು ಹೇಳುತ್ತದೆ. ನಾನು ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಅನೇಕ ವರ್ಷ ತಾಳ್ಮೆಯಿಂದ ಸಹಾಯ ಮಾಡಿದನು.” ಜೈಲಿನಲ್ಲಿದ್ದಾಗಲೇ ಹಾನ್ಸ್‌ಗೆ ದೀಕ್ಷಾಸ್ನಾನ ಆಯಿತು. ಜೈಲಿನಲ್ಲಿ 171/2 ವರ್ಷ ಇದ್ದ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. “ಯೆಹೋವನು ನನಗೆ ಅಪಾರವಾದ ಕರುಣೆ ತೋರಿಸಿದ್ದಕ್ಕಾಗಿ ಮತ್ತು ಉದಾರವಾಗಿ ಕ್ಷಮಿಸಿದ್ದಕ್ಕಾಗಿ ನಾನು ತುಂಬ ಆಭಾರಿ” ಎನ್ನುತ್ತಾರೆ ಹಾನ್ಸ್‌.

15. (ಎ) ಯಾವುದು ಸಹ ಹಳೇ ವ್ಯಕ್ತಿತ್ವದ ಭಾಗವಾಗಿದೆ? (ಬಿ) ಬೈಬಲ್‌ ಅದರ ಬಗ್ಗೆ ಏನು ಹೇಳುತ್ತದೆ?

15 ಸುಳ್ಳು ಹೇಳುವುದು ಸಹ ಹಳೇ ವ್ಯಕ್ತಿತ್ವದ ಭಾಗವಾಗಿದೆ. ಅನೇಕರು ತೆರಿಗೆ ಕಟ್ಟುವುದನ್ನು ತಪ್ಪಿಸಲಿಕ್ಕಾಗಿ ಅಥವಾ ತಾವು ಮಾಡಿದ ತಪ್ಪಿನಿಂದ ನುಣುಚಿಕೊಳ್ಳಲಿಕ್ಕಾಗಿ ಸುಳ್ಳು ಹೇಳುತ್ತಾರೆ. ಯೆಹೋವನು ‘ಸತ್ಯದ ದೇವರು.’ (ಕೀರ್ತ. 31:5, ಪವಿತ್ರ ಗ್ರಂಥ ಭಾಷಾಂತರ) ತನ್ನ ಆರಾಧಕರು ಸಹ ‘ಸತ್ಯವನ್ನೇ ಆಡಬೇಕು’ ‘ಸುಳ್ಳಾಡಬಾರದು’ ಎಂದು ಹೇಳಿದ್ದಾನೆ. (ಎಫೆ. 4:25; ಕೊಲೊ. 3:9) ನಮಗೆ ಮುಜುಗರವಾದರೂ ಕಷ್ಟವಾದರೂ ಸತ್ಯವನ್ನೇ ಹೇಳಬೇಕು ಅನ್ನುವುದು ಸ್ಪಷ್ಟ.—ಜ್ಞಾನೋ. 6:16-19.

ಹೇಗೆ ಗೆಲುವು ಸಾಧಿಸಿದರು?

16. ಹಳೇ ವ್ಯಕ್ತಿತ್ವವನ್ನು ತೆಗೆದುಹಾಕಲು ಯಾವುದು ಸಹಾಯ ಮಾಡುತ್ತದೆ?

16 ನಾವು ನಮ್ಮ ಸ್ವಂತ ಶಕ್ತಿಯಿಂದ ಹಳೇ ವ್ಯಕ್ತಿತ್ವವನ್ನು ತೆಗೆದುಹಾಕಲು ಸಾಧ್ಯವಿಲ್ಲ. ಸಕೂರಾ, ರಿಬೇರೋ, ಸ್ಟೀಫನ್‌ ಮತ್ತು ಹಾನ್ಸ್‌ ತಮ್ಮ ಹಳೇ ಜೀವನ ರೀತಿಯನ್ನು ಬಿಡಲು ತುಂಬ ಹೋರಾಡಬೇಕಾಯಿತು. ಈ ಹೋರಾಟದಲ್ಲಿ ಅವರಿಗೆ ಸಹಾಯ ಮಾಡಿದ್ದು, ದೇವರ ವಾಕ್ಯ ಮತ್ತು ಪವಿತ್ರಾತ್ಮ ಕೊಟ್ಟ ಶಕ್ತಿಯೇ. (ಲೂಕ 11:13; ಇಬ್ರಿ. 4:12) ಈ ಶಕ್ತಿಯನ್ನು ನಾವು ಪಡೆಯಲಿಕ್ಕಾಗಿ ಬೈಬಲನ್ನು ದಿನಾಲೂ ಓದಬೇಕು, ಅದರ ಬಗ್ಗೆ ಧ್ಯಾನಿಸಬೇಕು, ಕಲಿತದ್ದನ್ನು ಅನ್ವಯಿಸಿಕೊಳ್ಳಲು ಬೇಕಾದ ವಿವೇಕ ಮತ್ತು ಬಲವನ್ನು ಕೊಡುವಂತೆ ಸದಾ ಪ್ರಾರ್ಥಿಸಬೇಕು. (ಯೆಹೋ. 1:8; ಕೀರ್ತ. 119:97; 1 ಥೆಸ. 5:17) ನಾವು ಸಭಾ ಕೂಟಗಳಿಗೆ ತಯಾರಿ ಮಾಡಿ ಹಾಜರಾಗುವಾಗ ಸಹ ದೇವರ ವಾಕ್ಯ ಮತ್ತು ಪವಿತ್ರಾತ್ಮದಿಂದ ನಮಗೆ ಬೇಕಾದ ಶಕ್ತಿ ಸಿಗುತ್ತದೆ. (ಇಬ್ರಿ. 10:24, 25) ಜೊತೆಗೆ, ಯೆಹೋವನ ಸಂಘಟನೆ ಮಾಡಿರುವ ಬೇರೆ ಏರ್ಪಾಡುಗಳನ್ನು, ಉದಾಹರಣೆಗೆ ಪತ್ರಿಕೆಗಳು, JW ಪ್ರಸಾರ, JW ಲೈಬ್ರರಿ ಮತ್ತು jw.org ವೆಬ್‌ಸೈಟನ್ನು ಸಹ ಉಪಯೋಗಿಸಬೇಕು.—ಲೂಕ 12:42.

ಹಳೇ ವ್ಯಕ್ತಿತ್ವವನ್ನು ತೆಗೆದುಹಾಕಲು ನಾವು ಏನು ಮಾಡಬೇಕು? (ಪ್ಯಾರ 16 ನೋಡಿ)

17. ಮುಂದಿನ ಲೇಖನದಲ್ಲಿ ನಾವು ಏನು ಚರ್ಚಿಸಲಿದ್ದೇವೆ?

17 ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ಕ್ರೈಸ್ತರು ತೆಗೆದುಹಾಕಿ ದೂರ ಇಡಬೇಕಾದ ಅನೇಕ ಕೆಟ್ಟ ಅಭ್ಯಾಸಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಿದೆವು. ಇಷ್ಟಕ್ಕೆ ಎಲ್ಲಾ ಮುಗಿಯಿತು ಅಂತಲ್ಲ. ನಾವು ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು ಮತ್ತು ಸದಾಕಾಲಕ್ಕೂ ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಉಳಿಯಬೇಕು. ಇದನ್ನು ಹೇಗೆ ಮಾಡುವುದೆಂದು ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ.

^ ಪ್ಯಾರ. 7 ಈ ಲೇಖನದಲ್ಲಿರುವ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 8 “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ 249-251ರಲ್ಲಿರುವ ಪರಿಶಿಷ್ಟವನ್ನು ನೋಡಿ. ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಸಂಪುಟ 1ರ (ಇಂಗ್ಲಿಷ್‌) ಅಧ್ಯಾಯ 25 ಸಹ ನೋಡಿ.