ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯವು ‘ಶಾಂತಿಯನ್ನಲ್ಲ ಖಡ್ಗವನ್ನು ಹಾಕುತ್ತದೆ’

ಸತ್ಯವು ‘ಶಾಂತಿಯನ್ನಲ್ಲ ಖಡ್ಗವನ್ನು ಹಾಕುತ್ತದೆ’

“ನಾನು ಭೂಮಿಯ ಮೇಲೆ ಶಾಂತಿಯನ್ನು ಉಂಟುಮಾಡಲು ಬಂದೆನೆಂದು ನೆನಸಬೇಡಿರಿ; ನಾನು ಶಾಂತಿಯನ್ನಲ್ಲ ಖಡ್ಗವನ್ನು ಹಾಕಲು ಬಂದೆನು.”—ಮತ್ತಾ. 10:34.

ಗೀತೆಗಳು: 125, 135

1, 2. (ಎ) ನಾವು ಈಗ ಯಾವ ಶಾಂತಿಯನ್ನು ಪಡೆದುಕೊಳ್ಳಬಹುದು? (ಬಿ) ನಮಗೆ ಈಗ ಯಾಕೆ ಸಂಪೂರ್ಣ ಶಾಂತಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ? (ಲೇಖನದ ಆರಂಭದ ಚಿತ್ರ ನೋಡಿ.)

ನಮಗೆಲ್ಲರಿಗೂ ಜೀವನದಲ್ಲಿ ಶಾಂತಿ ಬೇಕು, ಚಿಂತೆ ಬೇಡ. ಆದ್ದರಿಂದ ಯೆಹೋವನು ನಮಗೆ “ದೇವಶಾಂತಿ” ಕೊಡುತ್ತಿರುವುದಕ್ಕಾಗಿ ಆತನಿಗೆ ಕೃತಜ್ಞರು. ಈ ದೇವಶಾಂತಿ ಮನಸ್ಸಿನ ಪ್ರಶಾಂತತೆ ಆಗಿದೆ. ಯೋಚನೆಗಳು, ಭಾವನೆಗಳು ನಮ್ಮ ನೆಮ್ಮದಿಗೆಡಿಸದಂತೆ ಈ ದೇವಶಾಂತಿ ಕಾಪಾಡುತ್ತದೆ. (ಫಿಲಿ. 4:6, 7) ಅಲ್ಲದೆ, ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಂಡದ್ದರಿಂದ ಆತನೊಂದಿಗೆ ಶಾಂತಿಯಿಂದ ಇದ್ದೇವೆ ಅಂದರೆ ನಮಗೆ ಒಳ್ಳೇ ಸಂಬಂಧ ಇದೆ.—ರೋಮ. 5:1.

2 ಆದರೆ ದೇವರು ಲೋಕಕ್ಕೆ ಸಂಪೂರ್ಣ ಶಾಂತಿ ತರುವ ಸಮಯ ಇನ್ನೂ ಬಂದಿಲ್ಲ. ನಾವೀಗ ಕಡೇ ದಿವಸಗಳಲ್ಲಿ ಜೀವಿಸುತ್ತಿರುವುದರಿಂದ ನಮಗೆ ಚಿಂತೆ ಹುಟ್ಟಿಸುವ ಅನೇಕ ಸಮಸ್ಯೆಗಳು ಇವೆ. ಅಷ್ಟೇ ಅಲ್ಲ, ನಮ್ಮ ಸುತ್ತಮುತ್ತ ಕ್ರೂರ ಜನರಿದ್ದಾರೆ. (2 ತಿಮೊ. 3:1-4) ಅಲ್ಲದೆ, ಸೈತಾನ ಮತ್ತು ಅವನು ಹಬ್ಬಿಸುತ್ತಿರುವ ಸುಳ್ಳು ಬೋಧನೆಗಳ ವಿರುದ್ಧ ನಾವು ಹೋರಾಡಬೇಕಿದೆ. (2 ಕೊರಿಂ. 10:4, 5) ಇದೆಲ್ಲಕ್ಕಿಂತ ಹೆಚ್ಚು ಚಿಂತೆ ಹುಟ್ಟಿಸುವ ಒಂದು ವಿಷಯ, ಯೆಹೋವನನ್ನು ಆರಾಧಿಸದ ನಮ್ಮ ಸಂಬಂಧಿಕರಿಂದ ಬರುವ ವಿರೋಧ. ಕೆಲವು ಸಂಬಂಧಿಕರು ನಮ್ಮ ನಂಬಿಕೆಗಳ ಬಗ್ಗೆ ತಮಾಷೆ ಮಾಡಬಹುದು ಅಥವಾ ಕುಟುಂಬ ಒಡೆಯುತ್ತಿದ್ದೇವೆ ಎಂದು ದೂರಬಹುದು. ಇನ್ನು ಕೆಲವು ಸಂಬಂಧಿಕರು, ‘ಯೆಹೋವನನ್ನು ಆರಾಧಿಸುವುದನ್ನು ಬಿಡದಿದ್ದರೆ ನಿನಗೂ ನಮಗೂ ಸಂಬಂಧವೇ ಇಲ್ಲ!’ ಎಂದು ಕಡ್ಡಿಮುರಿದಂತೆ ಹೇಳಬಹುದು. ಕುಟುಂಬದಿಂದ ಇಂಥ ವಿರೋಧ ಬಂದಾಗ ನಮ್ಮ ಮನೋಭಾವ ಹೇಗಿರಬೇಕು? ಇಂಥ ವಿರೋಧದಿಂದ ಬರುವ ಸವಾಲುಗಳನ್ನು ಹೇಗೆ ನಿಭಾಯಿಸಬಹುದು?

ಕುಟುಂಬದ ವಿರೋಧದ ಬಗ್ಗೆ ಇರಬೇಕಾದ ಮನೋಭಾವ

3, 4. (ಎ) ಯೇಸುವಿನ ಬೋಧನೆಗಳನ್ನು ಸ್ವೀಕರಿಸಿದರೆ ಯಾವ ಪರಿಣಾಮ ಎದುರಿಸಬೇಕಾಗುತ್ತದೆ? (ಬಿ) ಯೇಸುವನ್ನು ಹಿಂಬಾಲಿಸುವುದು ವಿಶೇಷವಾಗಿ ಯಾವಾಗ ಕಷ್ಟವಾಗುತ್ತದೆ?

3 ತನ್ನ ಬೋಧನೆಗಳನ್ನು ಎಲ್ಲರೂ ಸ್ವೀಕರಿಸಲ್ಲ ಎಂದು ಯೇಸುವಿಗೆ ಗೊತ್ತಿತ್ತು. ಅಷ್ಟೇ ಅಲ್ಲ, ತನ್ನ ಹಿಂಬಾಲಕರನ್ನು ಕೆಲವರು ವಿರೋಧಿಸುತ್ತಾರೆ, ಹಾಗಾಗಿ ಅವರು ಧೈರ್ಯವಾಗಿರಬೇಕು ಎಂದೂ ಅವನಿಗೆ ಗೊತ್ತಿತ್ತು. ಈ ವಿರೋಧ ಕುಟುಂಬದ ಶಾಂತಿಯನ್ನು ಕೆಡಿಸಲಿತ್ತು. ಯೇಸು ಹೇಳಿದ್ದು: “ನಾನು ಭೂಮಿಯ ಮೇಲೆ ಶಾಂತಿಯನ್ನು ಉಂಟುಮಾಡಲು ಬಂದೆನೆಂದು ನೆನಸಬೇಡಿರಿ; ನಾನು ಶಾಂತಿಯನ್ನಲ್ಲ ಖಡ್ಗವನ್ನು ಹಾಕಲು ಬಂದೆನು. ಮಗನಿಗೂ ಅವನ ತಂದೆಗೂ, ಮಗಳಿಗೂ ಅವಳ ತಾಯಿಗೂ, ಯುವ ಪತ್ನಿಗೂ ಅವಳ ಅತ್ತೆಗೂ ಒಡಕನ್ನು ಉಂಟುಮಾಡಲು ನಾನು ಬಂದೆನು. ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವುದು ನಿಶ್ಚಯ.”—ಮತ್ತಾ. 10:34-36.

4 “ನಾನು ಭೂಮಿಯ ಮೇಲೆ ಶಾಂತಿಯನ್ನು ಉಂಟುಮಾಡಲು ಬಂದೆನೆಂದು ನೆನಸಬೇಡಿರಿ” ಎಂದು ಯೇಸು ಹೇಳಿದ್ದರ ಅರ್ಥವೇನು? ತನ್ನ ಹಿಂಬಾಲಕರಾಗುವಾಗ ಕೆಲವು ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ ಎನ್ನುವುದನ್ನು ಜನರು ಅರ್ಥಮಾಡಿಕೊಳ್ಳಬೇಕೆಂದು ಯೇಸು ಬಯಸಿದನು. ಅವನ ಉದ್ದೇಶ ದೇವರ ಬಗ್ಗೆ ಸತ್ಯವನ್ನು ತಿಳಿಸಬೇಕೆನ್ನುವುದೇ ಆಗಿತ್ತು, ಕುಟುಂಬಗಳನ್ನು ಒಡೆಯುವುದಲ್ಲ. (ಯೋಹಾ. 18:37) ಆದರೆ ಅವನ ಹಿಂಬಾಲಕರು ಒಂದು ವಿಷಯವನ್ನು ತಿಳಿದುಕೊಳ್ಳಬೇಕಿತ್ತು. ಏನೆಂದರೆ, ತನ್ನನ್ನು ಹಿಂಬಾಲಿಸಿದರೆ ಕೆಲವೊಮ್ಮೆ ಕಷ್ಟಗಳು ಬರುತ್ತವೆ, ಅದರಲ್ಲೂ ಅವರ ಆಪ್ತ ಸ್ನೇಹಿತರು ಅಥವಾ ಕುಟುಂಬದ ಸದಸ್ಯರು ಸತ್ಯವನ್ನು ಸ್ವೀಕರಿಸದಿದ್ದರೆ ಅವರಿಗೆ ಸಮಸ್ಯೆಗಳು ಬರುತ್ತವೆ.

5. ಯೇಸುವಿನ ಹಿಂಬಾಲಕರು ಏನು ಎದುರಿಸಿದ್ದಾರೆ?

5 ತನ್ನ ಹಿಂಬಾಲಕರು ಅನೇಕ ಕಷ್ಟಗಳನ್ನು ಎದುರಿಸುತ್ತಾರೆ ಮತ್ತು ಅದನ್ನು ತಾಳಿಕೊಳ್ಳಲು ಅವರು ಸಿದ್ಧರಿರಬೇಕೆಂದು ಯೇಸು ಹೇಳಿದನು. (ಮತ್ತಾ. 10:38) ಈ ಕಷ್ಟಗಳಲ್ಲಿ ಕುಟುಂಬದಿಂದ ಬರುವ ವಿರೋಧ ಸಹ ಒಂದು. ಕುಟುಂಬದವರು ತಮಾಷೆ ಮಾಡಿದಾಗ ಅಥವಾ ತಮ್ಮನ್ನು ದೂರ ಮಾಡಿದಾಗ ಯೇಸುವಿನ ಹಿಂಬಾಲಕರು ಅವನನ್ನು ಮೆಚ್ಚಿಸಲಿಕ್ಕಾಗಿ ಅದನ್ನೆಲ್ಲ ಸಹಿಸಿಕೊಂಡಿದ್ದಾರೆ. ಆದರೆ ಅವರು ಏನೆಲ್ಲಾ ಕಳಕೊಂಡರೋ ಅದಕ್ಕಿಂತ ಎಷ್ಟೋ ಹೆಚ್ಚು ಪಡಕೊಂಡಿದ್ದಾರೆ.—ಮಾರ್ಕ 10:29, 30 ಓದಿ.

6. ಸಂಬಂಧಿಕರು ನಮ್ಮನ್ನು ವಿರೋಧಿಸುವಾಗ ಏನನ್ನು ನೆನಪಿಡಬೇಕು?

6 ಯೆಹೋವನನ್ನು ಆರಾಧಿಸುತ್ತೇವೆ ಎಂಬ ಕಾರಣಕ್ಕೆ ನಮ್ಮ ಸಂಬಂಧಿಕರು ವಿರೋಧಿಸಿದರೂ ಅವರನ್ನು ಪ್ರೀತಿಸುತ್ತೇವೆ. ಆದರೆ ನೆನಪಿಡಬೇಕಾದ ವಿಷಯವೇನೆಂದರೆ, ನಾವು ಬೇರೆ ಯಾರಿಗಿಂತಲೂ ಹೆಚ್ಚಾಗಿ ಯೆಹೋವ ಮತ್ತು ಯೇಸುವನ್ನು ಪ್ರೀತಿಸಬೇಕು. (ಮತ್ತಾ. 10:37) ಕುಟುಂಬದ ಮೇಲೆ ನಾವು ಇಟ್ಟಿರುವ ಪ್ರೀತಿಯನ್ನು ಸೈತಾನ ಬಳಸಿ ನಾವು ಯೆಹೋವನಿಗೆ ನಿಷ್ಠೆ ತೋರಿಸದಂತೆ ಮಾಡಿಬಿಡುವ ಸಾಧ್ಯತೆ ಇದೆ ಎನ್ನುವುದನ್ನೂ ಮರೆಯಬಾರದು. ನಾವೀಗ ಕೆಲವು ಸನ್ನಿವೇಶಗಳ ಬಗ್ಗೆ ಚರ್ಚಿಸಿ ಅದನ್ನು ಹೇಗೆ ತಾಳಿಕೊಳ್ಳಬಹುದು ಎಂದು ನೋಡೋಣ.

ಸತ್ಯದಲ್ಲಿಲ್ಲದ ಸಂಗಾತಿ

7. ನಿಮ್ಮ ಸಂಗಾತಿ ಯೆಹೋವನ ಆರಾಧಕರಲ್ಲದಿದ್ದರೂ ನಿಮ್ಮ ದೃಷ್ಟಿಕೋನ ಏನಾಗಿರಬೇಕು?

7 ಮದುವೆಯಾದ ದಂಪತಿಗಳಿಗೆಲ್ಲಾ “ಶರೀರದಲ್ಲಿ ಸಂಕಟವಿರುವುದು” ಅಂದರೆ ಸಮಸ್ಯೆಗಳಿರುವವು ಎಂದು ಬೈಬಲ್‌ ಎಚ್ಚರಿಸುತ್ತದೆ. (1 ಕೊರಿಂ. 7:28) ನಿಮ್ಮ ಸಂಗಾತಿ ಯೆಹೋವನ ಆರಾಧಕರಲ್ಲದಿದ್ದರೆ ಅದರಿಂದ ಒತ್ತಡ, ಚಿಂತೆ ಇನ್ನೂ ಹೆಚ್ಚುತ್ತದೆ. ಆದರೆ ನಿಮ್ಮ ಪರಿಸ್ಥಿತಿಯ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವನ್ನೇ ನೀವೂ ಇಟ್ಟುಕೊಳ್ಳುವುದು ಮುಖ್ಯ. ಅದೇನೆಂದರೆ, ಸಂಗಾತಿ ಯೆಹೋವನನ್ನು ಆರಾಧಿಸುತ್ತಿಲ್ಲ ಎಂಬ ಕಾರಣಕ್ಕೆ ಅವರಿಂದ ಪ್ರತ್ಯೇಕವಾಗಿ ವಾಸಮಾಡಬಾರದು ಅಥವಾ ವಿಚ್ಛೇದನ ನೀಡಬಾರದು. (1 ಕೊರಿಂ. 7:12-16) ಯೆಹೋವನ ಆರಾಧಕನಲ್ಲದ ನಿಮ್ಮ ಗಂಡ ಸತ್ಯಾರಾಧನೆಯ ವಿಷಯಗಳಲ್ಲಿ ಮುಂದಾಳತ್ವ ವಹಿಸದಿದ್ದರೂ ಅವರನ್ನು ನಿಮ್ಮ ಕುಟುಂಬದ ತಲೆ ಎಂದು ಗೌರವ ಕೊಡಬೇಕು. ಅಥವಾ ನಿಮ್ಮ ಹೆಂಡತಿ ಸತ್ಯದಲ್ಲಿ ಇಲ್ಲವಾದರೂ ನೀವು ಅವಳನ್ನು ಪ್ರೀತಿಸಬೇಕು ಮತ್ತು ಕಾಳಜಿ ವಹಿಸಬೇಕು.—ಎಫೆ. 5:22, 23, 28, 29.

8. ನಿಮ್ಮ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಮಿತಿ ಹಾಕಲು ಸಂಗಾತಿ ಪ್ರಯತ್ನಿಸಿದರೆ ನೀವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

8 ನಿಮ್ಮ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಮಿತಿ ಹಾಕಲು ನಿಮ್ಮ ಸಂಗಾತಿ ಪ್ರಯತ್ನಿಸಿದರೆ ಏನು ಮಾಡಬೇಕು? ಒಬ್ಬ ಸಹೋದರಿಗೆ ಅವಳ ಗಂಡ ವಾರದಲ್ಲಿ ಇಂತಿಂಥ ದಿನ ಮಾತ್ರ ಸೇವೆಗೆ ಹೋಗಬೇಕು ಎಂದು ಹೇಳಿದನು. ನೀವು ಇಂಥ ಸನ್ನಿವೇಶದಲ್ಲಿದ್ದರೆ, ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ: ‘ಯೆಹೋವನ ಆರಾಧನೆಯನ್ನು ಸಂಪೂರ್ಣವಾಗಿ ಬಿಟ್ಟುಬಿಡು ಅಂತ ನನ್ನ ಗಂಡ/ಹೆಂಡತಿ ಹೇಳುತ್ತಿದ್ದಾರಾ? ಹಾಗೆ ಹೇಳುತ್ತಿಲ್ಲವಾದರೆ, ಅವರು ಹೇಳಿದಂತೆ ಮಾಡಬಹುದಾ?’ ನೀವು ನ್ಯಾಯಸಮ್ಮತತೆ ತೋರಿಸಿದರೆ ಅಂದರೆ ಸ್ವಲ್ಪ ಮಣಿಯುವುದಾದರೆ ನಿಮ್ಮ ಮದುವೆ ಜೀವನದಲ್ಲಿ ಸಮಸ್ಯೆಗಳು ಕಡಿಮೆ ಇರುತ್ತವೆ.—ಫಿಲಿ. 4:5.

9. ಸತ್ಯದಲ್ಲಿಲ್ಲದ ತಂದೆ ಅಥವಾ ತಾಯಿಗೆ ಗೌರವ ಕೊಡಲು ಮಕ್ಕಳಿಗೆ ಹೇಗೆ ಕಲಿಸಬಹುದು?

9 ಸಂಗಾತಿ ಯೆಹೋವನ ಆರಾಧಕರಲ್ಲದಿದ್ದರೆ ನಿಮ್ಮ ಮಕ್ಕಳಿಗೆ ತರಬೇತಿ ಕೊಡುವುದು ಕಷ್ಟವಾಗಬಹುದು. ಉದಾಹರಣೆಗೆ, ‘ತಂದೆತಾಯಿಯನ್ನು ಸನ್ಮಾನಿಸಬೇಕು’ ಅಂದರೆ ಗೌರವಿಸಬೇಕು ಎಂಬ ಬೈಬಲ್‌ ಆಜ್ಞೆಯನ್ನು ನೀವು ನಿಮ್ಮ ಮಕ್ಕಳಿಗೆ ಕಲಿಸಬೇಕಾಗುತ್ತದೆ. (ಎಫೆ. 6:1-3) ಆದರೆ ನಿಮ್ಮ ಸಂಗಾತಿ ಬೈಬಲ್‌ ಮಟ್ಟಗಳನ್ನು ಪಾಲಿಸುತ್ತಿಲ್ಲವಾದರೆ ಏನು ಮಾಡಬೇಕು? ಸಂಗಾತಿಯನ್ನು ಗೌರವಿಸುವ ಮೂಲಕ ನಿಮ್ಮ ಮಕ್ಕಳಿಗೆ ಒಳ್ಳೇ ಮಾದರಿಯಿಡಿ. ಸಂಗಾತಿಯ ಒಳ್ಳೇ ಗುಣಗಳ ಬಗ್ಗೆ ಯೋಚಿಸಿ. ಆ ಗುಣಗಳನ್ನು ಮತ್ತು ಅವರು ಮಾಡುವ ಒಳ್ಳೇ ವಿಷಯಗಳನ್ನು ನೀವು ಮೆಚ್ಚುತ್ತೀರಿ ಎಂದು ಹೇಳಿ ಶ್ಲಾಘಿಸಿ. ಮಕ್ಕಳ ಮುಂದೆ ಸಂಗಾತಿಯ ಬಗ್ಗೆ ಕೆಟ್ಟದ್ದೇನೂ ಹೇಳಬೇಡಿ. ಬದಲಿಗೆ ಪ್ರತಿಯೊಬ್ಬರೂ ಯೆಹೋವನನ್ನು ಆರಾಧಿಸುವ ಆಯ್ಕೆಯನ್ನು ಮಾಡಬೇಕು ಎನ್ನುವುದನ್ನು ಮಕ್ಕಳಿಗೆ ವಿವರಿಸಿ. ಹೀಗೆ ಸತ್ಯದಲ್ಲಿಲ್ಲದ ತಮ್ಮ ತಂದೆ ಅಥವಾ ತಾಯಿಗೆ ಗೌರವ ಕೊಡಲು ನೀವು ಮಕ್ಕಳಿಗೆ ತರಬೇತಿ ಕೊಡಬಹುದು. ಆಗ ಮಕ್ಕಳ ಒಳ್ಳೇ ನಡತೆ ನೋಡಿ ನಿಮ್ಮ ಸಂಗಾತಿ ಯೆಹೋವನ ಬಗ್ಗೆ ಕಲಿಯಲು ಮನಸ್ಸು ಮಾಡಬಹುದು.

ಸಾಧ್ಯವಾದಾಗೆಲ್ಲ ಬೈಬಲ್‌ ಬಗ್ಗೆ ನಿಮ್ಮ ಮಕ್ಕಳಿಗೆ ಕಲಿಸಿ (ಪ್ಯಾರ 10 ನೋಡಿ)

10. ಮಕ್ಕಳು ಯೆಹೋವನನ್ನು ಪ್ರೀತಿಸಲು ಸತ್ಯದಲ್ಲಿರುವ ತಂದೆ ಅಥವಾ ತಾಯಿ ಹೇಗೆ ಕಲಿಸಬಹುದು?

10 ತಮ್ಮ ಮಕ್ಕಳು ಧಾರ್ಮಿಕ ಹಬ್ಬಗಳನ್ನು ಆಚರಿಸಬೇಕು ಅಥವಾ ಸುಳ್ಳು ಧರ್ಮದ ಬೋಧನೆಗಳನ್ನು ಕಲಿಯಬೇಕೆಂದು ಸತ್ಯದಲ್ಲಿಲ್ಲದ ಸಂಗಾತಿ ಬಯಸಬಹುದು. ಕೆಲವು ಗಂಡಂದಿರಂತೂ ಮಕ್ಕಳಿಗೆ ಬೈಬಲ್‌ ಬಗ್ಗೆ ಕಲಿಸಲೇಬಾರದು ಎಂದು ಹೆಂಡತಿಯರಿಗೆ ಹೇಳಬಹುದು. ಇಂಥ ಸನ್ನಿವೇಶದಲ್ಲೂ ಹೆಂಡತಿಯರು ಮಕ್ಕಳಿಗೆ ಸತ್ಯ ಕಲಿಸಲು ತಮ್ಮಿಂದಾದ ಪ್ರಯತ್ನ ಮಾಡಬಹುದು. (ಅ. ಕಾ. 16:1; 2 ತಿಮೊ. 3:14, 15) ಉದಾಹರಣೆಗೆ, ಮಕ್ಕಳಿಗೆ ಬೈಬಲ್‌ ಅಧ್ಯಯನ ಮಾಡಬಾರದು, ಕೂಟಕ್ಕೆ ಕರೆದುಕೊಂಡು ಹೋಗಬಾರದು ಎಂದು ಸತ್ಯದಲ್ಲಿಲ್ಲದ ಗಂಡ ಹೇಳಿದರೆ ಹೆಂಡತಿ ಏನು ಮಾಡಬೇಕು? ತನ್ನ ಗಂಡನ ಮಾತಿಗೆ ಗೌರವ ಕೊಡಬೇಕು. ಅದೇ ಸಮಯದಲ್ಲಿ ಸಾಧ್ಯವಾದಾಗೆಲ್ಲ ತನ್ನ ನಂಬಿಕೆಗಳ ಬಗ್ಗೆ ಮಕ್ಕಳ ಹತ್ತಿರ ಮಾತಾಡಬಹುದು. ಹೀಗೆ ಮಕ್ಕಳು ಯೆಹೋವನ ಬಗ್ಗೆ, ಆತನು ಇಟ್ಟಿರುವ ಸರಿತಪ್ಪಿನ ಮಟ್ಟಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. (ಅ. ಕಾ. 4:19, 20) ಮುಂದೆ, ಯೆಹೋವನನ್ನು ಆರಾಧಿಸಬೇಕಾ ಬೇಡವಾ ಎನ್ನುವುದರ ಬಗ್ಗೆ ಮಕ್ಕಳೇ ನಿರ್ಣಯ ಮಾಡುತ್ತಾರೆ. *ಧರ್ಮೋ. 30:19, 20.

ಸತ್ಯಾರಾಧನೆಯನ್ನು ವಿರೋಧಿಸುವ ಸಂಬಂಧಿಕರು

11. ಸತ್ಯದಲ್ಲಿಲ್ಲದ ಸಂಬಂಧಿಕರ ಮತ್ತು ನಮ್ಮ ಮಧ್ಯೆ ಯಾವಾಗ ಸಮಸ್ಯೆ ಏಳಬಹುದು?

11 ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಅಧ್ಯಯನ ಮಾಡಲು ಶುರುಮಾಡಿದಾಗ ನಾವು ನಮ್ಮ ಕುಟುಂಬ ಸದಸ್ಯರಿಗೆ ಅದರ ಬಗ್ಗೆ ಹೇಳಿರಲಿಕ್ಕಿಲ್ಲ. ಆದರೆ ನಮ್ಮ ನಂಬಿಕೆ ಹೆಚ್ಚುತ್ತಾ ಹೋದಂತೆ ಯೆಹೋವನನ್ನು ಆರಾಧಿಸುವ ನಮ್ಮ ಆಸೆಯ ಬಗ್ಗೆ ಅವರಿಗೆ ಹೇಳಬೇಕಾಗುತ್ತದೆ. (ಮಾರ್ಕ 8:38) ನೀವು ಯೆಹೋವನಿಗೆ ನಿಷ್ಠೆ ತೋರಿಸುವುದರಿಂದ ನಿಮ್ಮ ಮತ್ತು ಕುಟುಂಬದವರ ಮಧ್ಯೆ ಸಮಸ್ಯೆ ಎದ್ದಿರಬಹುದು. ಹೀಗಾಗುವಾಗೆಲ್ಲ ಶಾಂತಿಯನ್ನು ಕಾಪಾಡಿಕೊಳ್ಳುತ್ತಾ ಯೆಹೋವನಿಗೆ ನಂಬಿಗಸ್ತರಾಗಿ ಇರಲು ಏನೇನು ಮಾಡಬಹುದು ಎಂದು ನಾವೀಗ ಚರ್ಚಿಸೋಣ.

12. (ಎ) ಸಂಬಂಧಿಕರು ನಮ್ಮನ್ನು ಯಾಕೆ ವಿರೋಧಿಸಬಹುದು? (ಬಿ) ಅವರ ಚಿಂತೆಯನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬಹುದು?

12 ಸತ್ಯದಲ್ಲಿಲ್ಲದ ನಿಮ್ಮ ಸಂಬಂಧಿಕರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಬೈಬಲಿನಿಂದ ಸತ್ಯ ಕಲಿತಿದ್ದೇವೆ ಎಂದು ನಮಗೆ ತುಂಬ ಸಂತೋಷವಾಗುತ್ತದೆ. ಆದರೆ ನಮ್ಮ ಸಂಬಂಧಿಕರು, ನಾವು ವಿಚಿತ್ರವಾದ ಧಾರ್ಮಿಕ ಪಂಗಡಕ್ಕೆ ಸೇರಿಕೊಂಡಿದ್ದೇವೆ ಅಥವಾ ಮೋಸಹೋಗಿದ್ದೇವೆ ಎಂದು ನೆನಸಬಹುದು. ಅವರ ಜೊತೆ ಹಬ್ಬಗಳನ್ನು ಆಚರಿಸದೇ ಇರುವುದರಿಂದ ನಾವು ಅವರನ್ನು ಪ್ರೀತಿಸುತ್ತಿಲ್ಲ ಎಂದು ಅವರು ನೆನಸಬಹುದು. ನಾವು ತೀರಿಹೋದ ಮೇಲೆ ದೇವರು ನಮಗೆ ಶಿಕ್ಷೆ ಕೊಡುತ್ತಾನೆ ಎಂಬ ಭಯ ಅವರಿಗೆ ಇರಬಹುದು. ಆದ್ದರಿಂದ ಅವರ ಮನಸ್ಸಲ್ಲೇನಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದರೆ ಮತ್ತು ಅವರು ಮಾತಾಡುವಾಗ ಚೆನ್ನಾಗಿ ಕೇಳಿಸಿಕೊಂಡರೆ ನಮ್ಮ ಬಗ್ಗೆ ಅವರಿಗಿರುವ ಚಿಂತೆಯನ್ನು ಅರ್ಥಮಾಡಿಕೊಳ್ಳಲು ಆಗುತ್ತದೆ. (ಜ್ಞಾನೋ. 20:5) ಅಪೊಸ್ತಲ ಪೌಲನು ‘ಎಲ್ಲ ರೀತಿಯ ಜನರನ್ನು’ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದರಿಂದ ಸುವಾರ್ತೆ ಸಾರಲು ಅವನಿಗೆ ಸಹಾಯವಾಯಿತು. ಅದೇ ರೀತಿ ನಾವು ನಮ್ಮ ಕುಟುಂಬ ಸದಸ್ಯರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಅವರಿಗೆ ಸತ್ಯ ಕಲಿಸಲು ಸಹಾಯವಾಗುತ್ತದೆ.—1 ಕೊರಿಂ. 9:19-23.

13. ಸತ್ಯದಲ್ಲಿಲ್ಲದ ಸಂಬಂಧಿಕರ ಹತ್ತಿರ ನಾವು ಹೇಗೆ ಮಾತಾಡಬೇಕು?

13 ಸೌಮ್ಯವಾಗಿ ಮಾತಾಡಿ. ಬೈಬಲ್‌ ಹೇಳುವಂತೆ ನಮ್ಮ “ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿ” ಇರಬೇಕು. (ಕೊಲೊ. 4:6) ಹೀಗೆ ಮಾತಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ಸಂಬಂಧಿಕರ ಹತ್ತಿರ ಸೌಮ್ಯಭಾವದಿಂದ, ದಯೆಯಿಂದ ಮಾತಾಡಲು ಪವಿತ್ರಾತ್ಮ ಕೊಟ್ಟು ನಮಗೆ ಸಹಾಯ ಮಾಡುವಂತೆ ಯೆಹೋವನನ್ನು ಕೇಳಿಕೊಳ್ಳಬೇಕು. ಅವರ ಎಲ್ಲ ಸುಳ್ಳು ನಂಬಿಕೆಗಳ ಬಗ್ಗೆ ನಾವು ವಾದಕ್ಕಿಳಿಯಬಾರದು. ಅವರು ಹೇಳುವ ಅಥವಾ ಮಾಡುವ ವಿಷಯದಿಂದ ನಮಗೆ ನೋವಾದರೆ ಅಪೊಸ್ತಲರನ್ನು ಅನುಕರಿಸಬೇಕು. ಪೌಲನು ಹೀಗಂದಿದ್ದಾನೆ: “ಬೈಸಿಕೊಳ್ಳುತ್ತಿರುವಾಗಲೂ ಆಶೀರ್ವದಿಸುತ್ತೇವೆ; ಹಿಂಸಿಸಲ್ಪಡುವಾಗಲೂ ಸಹಿಸಿಕೊಳ್ಳುತ್ತೇವೆ; ನಾವು ಅಪಕೀರ್ತಿ ಹೊಂದುತ್ತಿರುವಾಗಲೂ ಬೇಡಿಕೊಳ್ಳುತ್ತೇವೆ” ಅಥವಾ ಸೌಮ್ಯವಾಗಿ ಉತ್ತರಿಸುತ್ತೇವೆ.—1 ಕೊರಿಂ. 4:12, 13.

14. ಒಳ್ಳೇ ನಡತೆಯಿಂದ ಸಿಗುವ ಫಲಿತಾಂಶಗಳೇನು?

14 ಒಳ್ಳೇ ನಡತೆ ಕಾಪಾಡಿಕೊಳ್ಳಿ. ಇದು ಯಾಕೆ ಅಷ್ಟು ಮುಖ್ಯ? ನಮ್ಮ ಸಂಬಂಧಿಕರ ಜೊತೆ ಶಾಂತಿ ಕಾಪಾಡಿಕೊಳ್ಳಲು ನಮ್ಮ ಸೌಮ್ಯ ಮಾತು ಸಹಾಯ ಮಾಡುತ್ತದೆ ನಿಜ. ಅದಕ್ಕಿಂತಲೂ ಹೆಚ್ಚು ಸಹಾಯ ಮಾಡುವುದು ನಮ್ಮ ಒಳ್ಳೇ ನಡತೆ. (1 ಪೇತ್ರ 3:1, 2, 16 ಓದಿ.) ಯೆಹೋವನ ಸಾಕ್ಷಿಗಳಲ್ಲಿ ಗಂಡಹೆಂಡತಿ ಚೆನ್ನಾಗಿರುತ್ತಾರೆ, ಅವರು ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಬೈಬಲ್‌ ಮಟ್ಟಗಳಿಗೆ ತಕ್ಕಂತೆ ಜೀವಿಸುತ್ತಾರೆ, ಅರ್ಥಭರಿತ ಜೀವನ ನಡೆಸುತ್ತಾರೆ ಎನ್ನುವುದನ್ನು ನಿಮ್ಮ ಸಂಬಂಧಿಕರು ನಿಮ್ಮನ್ನು ನೋಡಿ ತಿಳಿದುಕೊಳ್ಳಲಿ. ಅವರು ಒಂದುವೇಳೆ ಸತ್ಯಕ್ಕೆ ಬರದಿದ್ದರೂ ನಮ್ಮ ಒಳ್ಳೇ ನಡತೆ ನೋಡಿ ಯೆಹೋವನಿಗೆ ಸಂತೋಷವಾಗುತ್ತದೆ ಎಂಬ ತೃಪ್ತಿ ನಮಗಿರುತ್ತದೆ.

15. ಸಂಬಂಧಿಕರ ಜೊತೆ ವಾದ ನಡೆಯದಿರಲು ನಾವು ಮೊದಲೇ ಏನನ್ನು ಯೋಚಿಸಿಡಬೇಕು?

15 ಮೊದಲೇ ಯೋಚಿಸಿಡಿ. ನಿಮ್ಮ ಸಂಬಂಧಿಕರ ಜೊತೆ ವಾದವಿವಾದ ಆಗಬಹುದಾದ ಸನ್ನಿವೇಶಗಳ ಬಗ್ಗೆ ಮೊದಲೇ ಯೋಚಿಸಿ. ಅಂಥ ಸನ್ನಿವೇಶದಲ್ಲಿ ನೀವೇನು ಮಾಡುತ್ತೀರಿ ಎಂದೂ ಮುಂಚೆಯೇ ನಿರ್ಧರಿಸಿ. (ಜ್ಞಾನೋ. 12:16, 23) ಇದನ್ನೇ ಆಸ್ಟ್ರೇಲಿಯದಲ್ಲಿರುವ ಒಬ್ಬ ಸಹೋದರಿ ಮಾಡಿದರು. ಅವಳ ಮಾವ ಸತ್ಯವನ್ನು ತುಂಬ ವಿರೋಧಿಸುತ್ತಿದ್ದರು. ಕೆಲವೊಮ್ಮೆ ಕೋಪನೂ ಮಾಡಿಕೊಳ್ಳುತ್ತಿದ್ದರು. ಹಾಗಾಗಿ ಅವರ ಹತ್ತಿರ ಫೋನಲ್ಲಿ ಮಾತಾಡುವ ಮುಂಚೆ ಈ ಸಹೋದರಿ ಮತ್ತು ಅವರ ಗಂಡ ಯೆಹೋವನಿಗೆ ಪ್ರಾರ್ಥಿಸಿ ತಾವು ಕೋಪದಿಂದ ಪ್ರತ್ಯುತ್ತರ ನೀಡದಿರಲು ಸಹಾಯ ಮಾಡುವಂತೆ ಬೇಡಿಕೊಳ್ಳುತ್ತಿದ್ದರು. ಯಾವ ಒಳ್ಳೇ ವಿಷಯಗಳ ಬಗ್ಗೆ ಮಾತಾಡಬಹುದು ಎಂದು ಯೋಚಿಸುತ್ತಿದ್ದರು. ಮಾತಾಡುತ್ತಾ ಮಾತಾಡುತ್ತಾ ಧರ್ಮದ ಬಗ್ಗೆ ಮಾತು ಆರಂಭವಾಗಿ ಅದು ಮುಂದೆ ವಾದವಿವಾದಕ್ಕೆ ತಿರುಗಬಾರದು ಎಂಬ ಕಾರಣಕ್ಕೆ ಫೋನಿನಲ್ಲಿ ಅವರ ಜೊತೆ ಇಂತಿಷ್ಟೇ ಸಮಯ ಮಾತಾಡಬೇಕೆಂದು ನಿಗದಿ ಮಾಡುತ್ತಿದ್ದರು.

16. ಸಂಬಂಧಿಕರನ್ನು ಮೆಚ್ಚಿಸಲು ಆಗಲಿಲ್ಲ ಅಂತ ನಿಮ್ಮ ಮನಸ್ಸು ಕೊರೆಯುವಾಗ ನೀವೇನು ಮಾಡಬಹುದು?

16 ಸತ್ಯದಲ್ಲಿಲ್ಲದ ಸಂಬಂಧಿಕರಿಗೆ ಮತ್ತು ನಿಮಗೆ ಎಲ್ಲ ವಿಷಯಗಳಲ್ಲಿ ಒಂದೇ ಅಭಿಪ್ರಾಯ ಇರುವುದಿಲ್ಲ. ಒಮ್ಮೊಮ್ಮೆ ಭಿನ್ನಾಭಿಪ್ರಾಯ ಬರುತ್ತದೆ. ಹೀಗಾದಾಗ, ‘ಅವರನ್ನು ನೋಯಿಸಿಬಿಟ್ಟೆನಲ್ಲಾ’ ಎಂದು ಮನಸ್ಸು ಕೊರೆಯುತ್ತಿರಬಹುದು. ಏಕೆಂದರೆ ಸಂಬಂಧಿಕರ ಮೇಲೆ ನಿಮಗೆ ಪ್ರೀತಿಯಿದೆ ಮತ್ತು ಅವರನ್ನು ಮೆಚ್ಚಿಸಬೇಕೆಂಬ ಆಸೆ ನಿಮಗಿದೆ. ಆದರೆ ಯೆಹೋವನಿಗೆ ನೀವು ತೋರಿಸುವ ನಿಷ್ಠೆ ನಿಮ್ಮ ಕುಟುಂಬದ ಮೇಲಿರುವ ಪ್ರೀತಿಗಿಂತ ಹೆಚ್ಚಾಗಿರಬೇಕು ಎನ್ನುವುದನ್ನು ನೆನಪಿಡಬೇಕು. ಇದನ್ನು ನಿಮ್ಮ ಸಂಬಂಧಿಕರು ಅರ್ಥಮಾಡಿಕೊಂಡಾಗ ಯೆಹೋವನನ್ನು ಆರಾಧಿಸುವುದು ಎಷ್ಟು ಪ್ರಾಮುಖ್ಯ ಎಂದು ಅವರಿಗೆ ಗೊತ್ತಾಗುತ್ತದೆ. ನೀವು ಯಾರಿಗೂ ಸತ್ಯವನ್ನು ಸ್ವೀಕರಿಸುವಂತೆ ಒತ್ತಾಯ ಮಾಡಬಾರದು. ಆದರೆ ಯೆಹೋವನು ಹೇಳಿದಂತೆ ಮಾಡುವುದರಿಂದ ನಿಮಗೆ ಹೇಗೆ ಸಹಾಯವಾಗಿದೆ ಎನ್ನುವುದನ್ನು ಅವರೇ ಕಣ್ಣಾರೆ ನೋಡಲಿ. ಯೆಹೋವನು ನಿಮಗೆ ಆತನನ್ನು ಆರಾಧಿಸಲು ಆಯ್ಕೆಮಾಡುವ ಅವಕಾಶ ಕೊಟ್ಟಿರುವಂತೆಯೇ ಅವರಿಗೂ ಅವಕಾಶ ಕೊಟ್ಟಿದ್ದಾನೆ.—ಯೆಶಾ. 48:17, 18.

ಕುಟುಂಬ ಸದಸ್ಯರೊಬ್ಬರು ಯೆಹೋವನನ್ನು ಬಿಟ್ಟುಹೋದಾಗ

17, 18. ಕುಟುಂಬ ಸದಸ್ಯರೊಬ್ಬರು ಯೆಹೋವನನ್ನು ಬಿಟ್ಟುಹೋದಾಗ ನಿಮಗೆ ಯಾವುದು ಸಹಾಯ ಮಾಡುತ್ತದೆ?

17 ನಮ್ಮ ಕುಟುಂಬ ಸದಸ್ಯರೊಬ್ಬರು ಬಹಿಷ್ಕಾರ ಆದಾಗ ಅಥವಾ ಅವರು ಸಭೆಯನ್ನು ಬಿಟ್ಟುಹೋದಾಗ ನಮಗೆ ತುಂಬ ತುಂಬ ನೋವಾಗುತ್ತದೆ. ನಮ್ಮನ್ನು ಯಾರೋ ಖಡ್ಗದಿಂದ ಇರಿದಷ್ಟು ನೋವಾಗಬಹುದು. ಇದನ್ನು ಹೇಗೆ ತಾಳಿಕೊಳ್ಳಬಹುದು?

18 ಮುಂಚಿನಂತೆಯೇ ಯೆಹೋವನ ಸೇವೆಗೆ ಪೂರ್ಣ ಗಮನಕೊಡಿ. ನೀವು ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಬೇಕು. ಅದಕ್ಕಾಗಿ ಬೈಬಲನ್ನು ತಪ್ಪದೆ ಓದಬೇಕು, ಕೂಟಗಳಿಗೆ ತಯಾರಿಸಿ ಹಾಜರಾಗಬೇಕು, ಸೇವೆಗೆ ಹೋಗಬೇಕು ಮತ್ತು ತಾಳಿಕೊಳ್ಳಲು ಶಕ್ತಿ ಕೊಡುವಂತೆ ಯೆಹೋವನಿಗೆ ಪ್ರಾರ್ಥಿಸಬೇಕು. (ಯೂದ 20, 21) ಇಷ್ಟೆಲ್ಲ ಮಾಡಿದ ಮೇಲೂ ನಿಮ್ಮ ನೋವು ಕಡಿಮೆಯಾಗದಿದ್ದರೆ ಏನು ಮಾಡಬಹುದು? ಸೋತುಹೋಗಬೇಡಿ! ಮುಂಚಿನಂತೆಯೇ ಯೆಹೋವನ ಸೇವೆಗೆ ಪೂರ್ಣ ಗಮನ ಕೊಡಿ. ಸಮಯ ಕಳೆದಂತೆ ಇದು ನಿಮ್ಮ ಯೋಚನೆ, ಭಾವನೆಗಳನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಕೀರ್ತನೆ 73​ನ್ನು ಬರೆದವನಿಗೆ ಇದೇ ಆಯಿತು. ತನ್ನ ಯೋಚನೆ, ಭಾವನೆಗಳನ್ನು ಹತೋಟಿಯಲ್ಲಿಡಲು ಕಷ್ಟವಾದ ಒಂದು ಸಮಯವನ್ನು ಅವನು ತನ್ನ ಜೀವನದಲ್ಲಿ ಎದುರಿಸಬೇಕಾಗಿತ್ತು. ಆಗ ಪುನಃ ಸರಿಯಾದ ದೃಷ್ಟಿಕೋನವನ್ನು ಪಡೆದುಕೊಳ್ಳಲು ಅವನಿಗೆ ಯೆಹೋವನ ಆರಾಧನೆಯೇ ಸಹಾಯ ಮಾಡಿತು. (ಕೀರ್ತ. 73:16, 17) ಇದು ನಿಮಗೂ ಸಹಾಯ ಮಾಡುತ್ತದೆ.

19. ಯೆಹೋವನು ಕೊಡುವ ಶಿಸ್ತಿಗೆ ಬೆಲೆಕೊಡುತ್ತೀರೆಂದು ಹೇಗೆ ತೋರಿಸಬಹುದು?

19 ಯೆಹೋವನ ಶಿಸ್ತಿಗೆ ಬೆಲೆಕೊಡಿ. ತಪ್ಪುಮಾಡಿದ ವ್ಯಕ್ತಿಯನ್ನು ಬಹಿಷ್ಕಾರ ಮಾಡುವುದರಿಂದ ಅವನಿಗೂ ಬೇರೆಲ್ಲರಿಗೂ ಪ್ರಯೋಜನ ಆಗುತ್ತದೆಂದು ದೇವರಿಗೆ ತಿಳಿದಿದೆ. ನಾವು ಪ್ರೀತಿಸುವ ವ್ಯಕ್ತಿಗೆ ಶಿಸ್ತು ಸಿಕ್ಕಿದಾಗ ನಮಗೆ ತುಂಬ ನೋವಾಗುತ್ತದೆ. ಆದರೆ ಈ ಶಿಸ್ತು ಆ ವ್ಯಕ್ತಿ ಪುನಃ ಯೆಹೋವನ ಬಳಿ ಬರಲು ಸಹಾಯ ಮಾಡುತ್ತದೆ. (ಇಬ್ರಿಯ 12:11 ಓದಿ.) ಅಲ್ಲಿಯ ತನಕ, ಬಹಿಷ್ಕಾರ ಆದವರ “ಸಹವಾಸವನ್ನು ಬಿಟ್ಟುಬಿಡಿರಿ” ಎಂದು ಯೆಹೋವನು ಕೊಡುವ ನಿರ್ದೇಶನವನ್ನು ನಾವು ಪಾಲಿಸಲೇಬೇಕು. (1 ಕೊರಿಂ. 5:11-13) ಇದು ಅಷ್ಟು ಸುಲಭವಲ್ಲ. ಹಾಗಿದ್ದರೂ ಫೋನ್‌, ಮೆಸೆಜ್‌, ಪತ್ರ, ಇ-ಮೇಲ್‌, ಸಾಮಾಜಿಕ ಮಾಧ್ಯಮಗಳ ಮೂಲಕವೂ ಅವರ ಜೊತೆ ಸಂಪರ್ಕ ಇಟ್ಟುಕೊಳ್ಳಬಾರದು.

20. ನಾವು ಯಾವ ನಿರೀಕ್ಷೆ ಇಟ್ಟುಕೊಳ್ಳಬೇಕು?

20 ನಿರೀಕ್ಷೆ ಕಳಕೊಳ್ಳಬೇಡಿ. ಪ್ರೀತಿ “ಎಲ್ಲವನ್ನೂ ನಿರೀಕ್ಷಿಸುತ್ತದೆ.” (1 ಕೊರಿಂ. 13:7) ಆದ್ದರಿಂದ ಯೆಹೋವನನ್ನು ಬಿಟ್ಟುಹೋಗಿರುವ ಸ್ವಂತ ಕುಟುಂಬದವರು ವಾಪಸ್ಸು ಬರುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಳ್ಳಿ. ಅವರ ಮನೋಭಾವದಲ್ಲಿ ಏನಾದರೂ ಬದಲಾವಣೆ ಆಗುವುದನ್ನು ನೀವು ಗಮನಿಸಿದರೆ, ಅವರು ಬೈಬಲಿನಿಂದ ಬಲ ಪಡೆದುಕೊಂಡು, “ನನ್ನ ಕಡೆಗೆ ತಿರುಗಿಕೋ” ಎಂದು ಯೆಹೋವನು ಕೊಡುತ್ತಿರುವ ಆಮಂತ್ರಣವನ್ನು ಸ್ವೀಕರಿಸಲಿ ಎಂದು ಪ್ರಾರ್ಥಿಸಿ.—ಯೆಶಾ. 44:22.   

21. ಯೇಸುವನ್ನು ಹಿಂಬಾಲಿಸುತ್ತಿರುವುದರಿಂದ ನಿಮ್ಮನ್ನು ಕುಟುಂಬ ಸದಸ್ಯರು ವಿರೋಧಿಸಿದರೆ ನೀವೇನು ಮಾಡಬೇಕು?

21 ಯಾವ ಮಾನವನಿಗಿಂತಲೂ ತನ್ನನ್ನು ಹೆಚ್ಚು ಪ್ರೀತಿಸಬೇಕು ಎಂದು ಯೇಸು ಹೇಳಿದನು. ತನ್ನ ಹಿಂಬಾಲಕರಿಗೆ ಕುಟುಂಬದ ವಿರೋಧ ಇದ್ದರೂ ತನಗೆ ನಿಷ್ಠೆ ತೋರಿಸುವಷ್ಟು ಧೈರ್ಯ ಅವರಿಗಿರುತ್ತದೆ ಎಂದು ಯೇಸುವಿಗೆ ಪೂರ್ಣ ಭರವಸೆ ಇತ್ತು. ನೀವು ಯೇಸುವಿನ ಹಿಂಬಾಲಕರಾಗಿದ್ದೀರಿ ಎಂಬ ಕಾರಣಕ್ಕೆ ನಿಮ್ಮನ್ನು ಕುಟುಂಬ ಸದಸ್ಯರು ವಿರೋಧಿಸಿದರೆ ಯೆಹೋವನ ಮೇಲೆ ಅವಲಂಬಿಸಿ. ವಿರೋಧವನ್ನು ತಾಳಿಕೊಳ್ಳಲು ಸಹಾಯ ಮಾಡುವಂತೆ ಆತನನ್ನು ಬೇಡಿಕೊಳ್ಳಿ. (ಯೆಶಾ. 41:10, 13) ಯೆಹೋವನು ಮತ್ತು ಯೇಸು ನಿಮ್ಮನ್ನು ಮೆಚ್ಚಿದ್ದಾರೆ ಮತ್ತು ನಿಮ್ಮ ನಂಬಿಗಸ್ತಿಕೆಗೆ ಪ್ರತಿಫಲ ಕೊಡುತ್ತಾರೆ ಎಂದು ತಿಳಿದು ಸಂತೋಷವಾಗಿರಿ.

^ ಪ್ಯಾರ. 10 ತಂದೆ ಅಥವಾ ತಾಯಿ ಮಾತ್ರ ಸತ್ಯದಲ್ಲಿರುವ ಕುಟುಂಬಗಳಲ್ಲಿ ಮಕ್ಕಳಿಗೆ ಹೇಗೆ ತರಬೇತಿ ನೀಡುವುದು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 2002​ರ ಕಾವಲಿನಬುರುಜು, ಆಗಸ್ಟ್‌ 15​ರ ಸಂಚಿಕೆಯಲ್ಲಿ ಮೂಡಿಬಂದ “ವಾಚಕರಿಂದ ಪ್ರಶ್ನೆಗಳು” ಲೇಖನ ನೋಡಿ.