ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಥಗಳು ಮತ್ತು ಕಿರೀಟ ನಿಮ್ಮನ್ನು ಸಂರಕ್ಷಿಸುತ್ತವೆ

ರಥಗಳು ಮತ್ತು ಕಿರೀಟ ನಿಮ್ಮನ್ನು ಸಂರಕ್ಷಿಸುತ್ತವೆ

“ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಮನಃಪೂರ್ವಕವಾಗಿ ಕೇಳಿದರೆ ಇದೆಲ್ಲಾ ನೆರವೇರುವದು.”—ಜೆಕ. 6:15.

ಗೀತೆಗಳು: 17, 136

1, 2. ಜೆಕರ್ಯನು ಏಳನೇ ದರ್ಶನವನ್ನು ನೋಡಿದ ನಂತರವೂ ಯೆಹೂದ್ಯರ ಪರಿಸ್ಥಿತಿ ಹೇಗಿತ್ತು?

ಜೆಕರ್ಯನು ಏಳನೇ ದರ್ಶನವನ್ನು ನೋಡಿದ ನಂತರ ಅವನು ಯೆಹೂದ್ಯರ ಪರಿಸ್ಥಿತಿಯ ಬಗ್ಗೆ ಯೋಚಿಸಿದ್ದಿರಬೇಕು. ಅಪ್ರಾಮಾಣಿಕ ಜನರನ್ನು ದಂಡಿಸುವುದರ ಬಗ್ಗೆ ಯೆಹೋವನು ಕೊಟ್ಟ ಮಾತಿನಿಂದ ಅವನಿಗೆ ಸಾಂತ್ವನ ಸಿಕ್ಕಿರಬೇಕು. ಆದರೆ ಅವನ ಸುತ್ತಲೂ ಇದ್ದ ಪರಿಸ್ಥಿತಿ ಇನ್ನೂ ಬದಲಾಗಿರಲಿಲ್ಲ. ಅಪ್ರಾಮಾಣಿಕತೆ ಮತ್ತು ಕೆಟ್ಟತನ ದೇಶದಲ್ಲೆಲ್ಲಾ ತುಂಬಿಕೊಂಡಿತ್ತು ಮತ್ತು ಯೆರೂಸಲೇಮಿನಲ್ಲಿ ದೇವಾಲಯವನ್ನು ಕಟ್ಟುವ ಕೆಲಸ ನಿಂತುಹೋಗಿತ್ತು. ಯೆಹೋವನು ತಮಗೆ ಕೊಟ್ಟ ಕೆಲಸವನ್ನು ಯೆಹೂದ್ಯರು ಯಾಕೆ ಅಷ್ಟು ಬೇಗ ನಿಲ್ಲಿಸಿಬಿಟ್ಟರು? ಅವರು ಯೆರೂಸಲೇಮಿಗೆ ಬಂದದ್ದು ತಮ್ಮ ಜೀವನವನ್ನು ಸುಧಾರಿಸಿಕೊಳ್ಳಲಿಕ್ಕಾ?

2 ಯೆರೂಸಲೇಮಿಗೆ ಹಿಂದಿರುಗಿ ಬಂದ ಯೆಹೂದ್ಯರೆಲ್ಲರೂ ಯೆಹೋವನ ಆರಾಧಕರಾಗಿದ್ದರು ಎಂದು ಜೆಕರ್ಯನಿಗೆ ತಿಳಿದಿತ್ತು. ಇವರೆಲ್ಲರೂ ‘ದೇವರ ಪ್ರೇರಣೆಗೆ ಒಳಗಾಗಿ’ ಬಾಬೆಲ್‌ನಲ್ಲಿದ್ದ ತಮ್ಮ ಮನೆ-ವ್ಯಾಪಾರ ಎಲ್ಲ ಬಿಟ್ಟು ಯೆರೂಸಲೇಮಿಗೆ ಬಂದಿದ್ದರು. (ಎಜ್ರ 1:2, 3, 5) ತಮಗೆ ಚಿರಪರಿಚಿತವಾಗಿದ್ದ ದೇಶವನ್ನು ಬಿಟ್ಟು ಅವರಲ್ಲಿ ಹೆಚ್ಚಿನವರು ಹಿಂದೆಂದೂ ನೋಡಿರದ ದೇಶಕ್ಕೆ ಬಂದಿದ್ದರು. ಯೆಹೋವನ ಆಲಯವನ್ನು ಪುನಃ ಕಟ್ಟುವ ಕೆಲಸ ಈ ಯೆಹೂದ್ಯರಿಗೆ ಎಷ್ಟು ಪ್ರಾಮುಖ್ಯವಾಗಿತ್ತೆಂದರೆ, ಅವರು ಗುಡ್ಡಗಾಡು ಪ್ರದೇಶದಲ್ಲಿ 1,600 ಕಿ.ಮೀ. ದೂರದ ಅಪಾಯಕರ ಪ್ರಯಾಣ ಮಾಡಿ ಯೆರೂಸಲೇಮಿಗೆ ಬಂದರು.

3, 4. ಬಾಬೆಲಿನಿಂದ ಯೆರೂಸಲೇಮಿಗೆ ಬಂದ ಯೆಹೂದ್ಯರು ಎದುರಿಸಿದ ಸವಾಲುಗಳು ಏನು?

3 ಬಾಬೆಲಿನಿಂದ ಯೆರೂಸಲೇಮಿಗೆ ಮಾಡಿದ ಆ ದೂರದ ಪ್ರಯಾಣ ಹೇಗಿದ್ದಿರಬಹುದೆಂದು ಊಹಿಸಿ. ಒಂದೊಂದೇ ಹೆಜ್ಜೆಯಿಟ್ಟು ನಡೆಯುತ್ತಿದ್ದ ಜನ ತಮ್ಮ ಹೊಸ ಸ್ಥಳ ಹೇಗಿರಬಹುದು, ಅಲ್ಲಿ ಏನೆಲ್ಲಾ ಮಾಡಬಹುದು ಎಂದು ಮಾತಾಡಿಕೊಂಡಿರಬಹುದು. ಯೆರೂಸಲೇಮನ್ನು ಸಕಲ ವೈಭವದಿಂದ ನೋಡಿದ್ದ ವೃದ್ಧರು ಆ ಕಾಲದಲ್ಲಿ ಯೆರೂಸಲೇಮ್‌ ಮತ್ತು ದೇವಾಲಯ ಎಷ್ಟು ಚೆನ್ನಾಗಿತ್ತು ಎಂದು ಹೇಳಿರಬಹುದು. (ಎಜ್ರ 3:12) ಈ ಸುದೀರ್ಘ ಪ್ರಯಾಣದಲ್ಲಿ ನೀವೂ ಅವರೊಂದಿಗೆ ಹೆಜ್ಜೆಹಾಕುತ್ತಿದ್ದೀರೆಂದು ನೆನಸಿ. ಯೆರೂಸಲೇಮಿಗೆ ಬಂದು ಮುಟ್ಟಿದ್ದೇ ನಿಮಗೆ ಎಂಥ ದೃಶ್ಯ ಕಾಣುತ್ತದೆ? ಎಲ್ಲೆಲ್ಲೂ ಪಾಳುಬಿದ್ದಿರುವ ಮತ್ತು ಮುಳ್ಳುಕಳ್ಳಿಗಳಿಂದ ತುಂಬಿರುವ ಕಟ್ಟಡಗಳು. ಪಟ್ಟಣದ ಗೋಡೆಗಳೂ ಮುರಿದುಬಿದ್ದಿರುವುದು ಮತ್ತು ಬಾಗಿಲು, ಬುರುಜುಗಳು ಇದ್ದ ಕಡೆ ದೊಡ್ಡ ದೊಡ್ಡ ರಂಧ್ರಗಳೇ ಆಗಿವೆ! ಇದನ್ನು ನೋಡಿ ನಿಮಗೆ ತುಂಬ ದುಃಖ ಆಗುತ್ತದೆ. ಬಾಬೆಲಿನ ಆ ಭವ್ಯವಾದ ಗೋಡೆಗಳೆಲ್ಲಿ, ಧ್ವಂಸಗೊಂಡಿರುವ ಈ ಗೋಡೆಗಳೆಲ್ಲಿ ಎಂಬ ಯೋಚನೆ ನಿಮಗೆ ಬರುತ್ತದೆ. ಆದರೆ ಇಂಥ ಶೋಚನೀಯ ಸ್ಥಿತಿಯಲ್ಲಿದ್ದ ಪಟ್ಟಣವನ್ನು ನೋಡಿದ ಯೆಹೂದ್ಯರು ನಿರುತ್ಸಾಹಗೊಳ್ಳಲಿಲ್ಲ. ಯಾಕೆ? ಯಾಕೆಂದರೆ ಅವರು ಬಾಬೆಲಿನಿಂದ ಮಾಡಿದ ದೀರ್ಘ ಪ್ರಯಾಣದ ಸಮಯದಲ್ಲಿ ಯೆಹೋವನು ಅವರನ್ನು ಸಂರಕ್ಷಿಸಿದ್ದನು. ಅವರು ಯೆರೂಸಲೇಮಿಗೆ ಬಂದ ಕೂಡಲೆ ಹಿಂದೆ ದೇವಾಲಯ ಇದ್ದ ಸ್ಥಳದಲ್ಲಿ ಯಜ್ಞವೇದಿಯನ್ನು ಕಟ್ಟಿ, ಯೆಹೋವನಿಗೆ ಪ್ರತಿ ದಿನ ಯಜ್ಞಗಳನ್ನು ಅರ್ಪಿಸಲು ಆರಂಭಿಸಿದರು. (ಎಜ್ರ 3:1, 2) ಅವರಲ್ಲಿ ತುಂಬ ಹುರುಪಿತ್ತು. ಕೆಲಸಕ್ಕೆ ಕೈಹಾಕಲು ಸಿದ್ಧರಿದ್ದರು. ಅವರು ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಲ್ಲ ಎಂದು ಅನಿಸಿತು.

4 ದೇವಾಲಯವನ್ನು ಕಟ್ಟುವುದರ ಜೊತೆಗೆ ಆ ಯೆಹೂದ್ಯರು ತಮ್ಮ ಪಟ್ಟಣಗಳನ್ನೂ ಮನೆಗಳನ್ನೂ ಕಟ್ಟಿಕೊಳ್ಳಬೇಕಿತ್ತು. ತಮ್ಮ ಮನೆಮಂದಿಗೆ ಆಹಾರವನ್ನು ಒದಗಿಸಲು ಹೊಲಗದ್ದೆಗಳನ್ನು ಸಿದ್ಧಮಾಡಬೇಕಿತ್ತು. (ಎಜ್ರ 2:70) ಅವರ ಮುಂದೆ ಬೆಟ್ಟದಷ್ಟು ಕೆಲಸ ಇದ್ದಂತೆ ತೋರಿತು. ಸ್ವಲ್ಪ ಸಮಯದಲ್ಲೇ ಅವರ ವೈರಿಗಳು ಬಂದು ಅವರ ಕೆಲಸವನ್ನು ನಿಲ್ಲಿಸಲು ಪ್ರಯತ್ನಿಸಿದರು. 15 ವರ್ಷ ಅವರು ವಿರೋಧವನ್ನು ಎದುರಿಸಬೇಕಾಯಿತು. ಮೆಲ್ಲಮೆಲ್ಲನೆ ಅವರ ಹುರುಪು ಕುಂದಿಹೋಯಿತು. (ಎಜ್ರ 4:1-4) ಕ್ರಿ.ಪೂ. 522​ರಲ್ಲಿ ಮತ್ತೊಂದು ಸವಾಲು ಎದುರಾಯಿತು. ಯೆರೂಸಲೇಮಿನಲ್ಲಿ ನಡೆಯುತ್ತಿದ್ದ ಎಲ್ಲಾ ನಿರ್ಮಾಣ ಕೆಲಸವನ್ನು ನಿಲ್ಲಿಸುವಂತೆ ಪರ್ಷಿಯದ ರಾಜ ಆಜ್ಞೆ ಹೊರಡಿಸಿದನು. ಯೆರೂಸಲೇಮನ್ನು ಕಟ್ಟಿ ಮುಗಿಸಲು ಆಗುವುದೇ ಇಲ್ಲವೇನೋ ಎಂದು ಅನಿಸಿತು.—ಎಜ್ರ 4:21-24.

5. ಯೆಹೋವನು ತನ್ನ ಜನರಿಗೆ ಹೇಗೆ ಸಹಾಯ ಮಾಡಿದನು?

5 ತನ್ನ ಜನರಿಗೆ ಬಲ ಮತ್ತು ಧೈರ್ಯ ಬೇಕು ಎಂದು ಯೆಹೋವನಿಗೆ ಗೊತ್ತಿತ್ತು. ಆದ್ದರಿಂದ ಆತನು ಜೆಕರ್ಯನಿಗೆ ಒಂದು ಕೊನೆಯ ದರ್ಶನವನ್ನು ಕೊಟ್ಟು ತನ್ನ ಜನರನ್ನು ಪ್ರೀತಿಸುತ್ತೇನೆ ಮತ್ತು ತನಗಾಗಿ ಅವರು ಮಾಡುತ್ತಿರುವ ಸೇವೆಯನ್ನು ಗಣ್ಯಮಾಡುತ್ತೇನೆ ಎಂಬ ಆಶ್ವಾಸನೆ ನೀಡಿದನು. ತಾನು ಕೊಟ್ಟ ಕೆಲಸವನ್ನು ಪುನಃ ಆರಂಭಿಸುವುದಾದರೆ ಅವರನ್ನು ಸಂರಕ್ಷಿಸುತ್ತೇನೆ ಎಂದು ಯೆಹೋವನು ಮಾತು ಕೊಟ್ಟನು. “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಮನಃಪೂರ್ವಕವಾಗಿ ಕೇಳಿದರೆ ಇದೆಲ್ಲಾ ನೆರವೇರುವದು” ಅಂದರೆ ಆಲಯವನ್ನು ಪುನಃ ಕಟ್ಟಲಾಗುವುದು ಎಂದು ಯೆಹೋವನು ಹೇಳಿದನು.—ಜೆಕ. 6:15.

ದೇವದೂತ ಸೈನ್ಯ

6. (ಎ) ಜೆಕರ್ಯನು ನೋಡಿದ ಎಂಟನೆಯ ದರ್ಶನದ ಆರಂಭದ ದೃಶ್ಯವನ್ನು ವಿವರಿಸಿ. (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಕುದುರೆಗಳಿಗೆ ಬೇರೆ ಬೇರೆ ಬಣ್ಣ ಯಾಕೆ ಇತ್ತು?

6 ಜೆಕರ್ಯನು ನೋಡಿದ ಕೊನೆಯ ದರ್ಶನ ನಂಬಿಕೆಯನ್ನು ತುಂಬ ಬಲಪಡಿಸುತ್ತದೆ. (ಜೆಕರ್ಯ 6:1-3 ಓದಿ.) ಈ ಎಂಟನೆಯ ದರ್ಶನವನ್ನು ಚಿತ್ರಿಸಿಕೊಳ್ಳಿ: ತಾಮ್ರದ “ಎರಡು ಬೆಟ್ಟಗಳ ನಡುವೆಯಿಂದ” ನಾಲ್ಕು ರಥಗಳು ಬಂದವು. ಆ ರಥಗಳಿಗೆ ಕಟ್ಟಿದ್ದ ಕುದುರೆಗಳಿಗೆ ಬೇರೆ ಬೇರೆ ಬಣ್ಣ ಇತ್ತು. ಇದರಿಂದ ಅವುಗಳನ್ನು ಗುರುತಿಸುವುದು ಸುಲಭವಾಗಿತ್ತು. ಇದನ್ನು ನೋಡಿದಾಗ ಜೆಕರ್ಯನು, “ಇವುಗಳು ಏನು” ಎಂದು ಕೇಳಿದನು. (ಜೆಕ. 6:4) ನಮಗೂ ಇದೇನಿರಬಹುದು ಎಂಬ ಕುತೂಹಲ ಇದೆ. ಯಾಕೆಂದರೆ ಈ ದರ್ಶನ ನಮ್ಮ ಮೇಲೂ ಪರಿಣಾಮ ಬೀರುತ್ತದೆ.

ಯೆಹೋವನು ಈಗಲೂ ತನ್ನ ದೇವದೂತರ ಮೂಲಕ ತನ್ನ ಜನರನ್ನು ಸಂರಕ್ಷಿಸುತ್ತಾನೆ ಮತ್ತು ಬಲಪಡಿಸುತ್ತಾನೆ

7, 8. (ಎ) ದರ್ಶನದಲ್ಲಿ ಕಂಡ ಎರಡು ಬೆಟ್ಟಗಳು ಏನನ್ನು ಪ್ರತಿನಿಧಿಸುತ್ತವೆ? (ಬಿ) ಬೆಟ್ಟಗಳು ತಾಮ್ರದ್ದಾಗಿದ್ದವು ಯಾಕೆ?

7 ಬೈಬಲಿನಲ್ಲಿ ಬೆಟ್ಟಗಳು ರಾಜ್ಯಗಳನ್ನು ಅಥವಾ ಸರ್ಕಾರಗಳನ್ನು ಪ್ರತಿನಿಧಿಸುತ್ತವೆ. ಜೆಕರ್ಯನು ದರ್ಶನದಲ್ಲಿ ಕಂಡ ಬೆಟ್ಟಗಳು ದಾನಿಯೇಲನ ಪ್ರವಾದನೆಯಲ್ಲಿ ಕೊಡಲಾಗಿರುವ ಎರಡು ಬೆಟ್ಟಗಳಂತೆಯೇ ಇದೆ. ಈ ಬೆಟ್ಟಗಳಲ್ಲಿ ಒಂದು ಯೆಹೋವನ ಶಾಶ್ವತವಾದ ವಿಶ್ವವ್ಯಾಪಿ ಆಳ್ವಿಕೆಯನ್ನು ಪ್ರತಿನಿಧಿಸುತ್ತದೆ. ಮತ್ತೊಂದು ಬೆಟ್ಟ ಯೇಸು ರಾಜನಾಗಿರುವ ಮೆಸ್ಸೀಯನ ರಾಜ್ಯವನ್ನು ಪ್ರತಿನಿಧಿಸುತ್ತದೆ. (ದಾನಿ. 2:35, 45) ಯೇಸು 1914​ರಲ್ಲಿ ರಾಜನಾದ ಸಮಯದಿಂದ ಈ ಎರಡೂ ಬೆಟ್ಟಗಳು ಸೇರಿ ಭೂಮಿಗೆ ಸಂಬಂಧಪಟ್ಟ ದೇವರ ಉದ್ದೇಶವನ್ನು ಪೂರೈಸುವುದರಲ್ಲಿ ಮುಖ್ಯ ಪಾತ್ರ ವಹಿಸಿವೆ.

8 ಬೆಟ್ಟಗಳು ತಾಮ್ರದ್ದಾಗಿದ್ದವು ಯಾಕೆ? ತಾಮ್ರ ತುಂಬ ಅಮೂಲ್ಯವಾದ ಹೊಳೆಯುವ ಲೋಹ. ಇಸ್ರಾಯೇಲ್ಯರು ದೇವದರ್ಶನ ಗುಡಾರ ಮತ್ತು ಯೆರೂಸಲೇಮ್‌ ದೇವಾಲಯವನ್ನು ಕಟ್ಟಿದಾಗ ತಾಮ್ರವನ್ನು ಬಳಸುವಂತೆ ಯೆಹೋವನು ಹೇಳಿದ್ದನು. (ವಿಮೋ. 27:1-3; 1 ಅರ. 7:13-16) ಇಡೀ ವಿಶ್ವದ ಮೇಲಿರುವ ಯೆಹೋವನ ಪರಮಾಧಿಕಾರ ಮತ್ತು ಮೆಸ್ಸೀಯನ ರಾಜ್ಯ ಒಳ್ಳೇ ಗುಣಮಟ್ಟದ್ದಾಗಿರುತ್ತದೆ ಎಂದು ಈ ತಾಮ್ರ ಸೂಚಿಸುತ್ತದೆ. ಈ ಆಡಳಿತದಲ್ಲಿ ಜನರಿಗೆ ಸುರಕ್ಷತೆ ಇರುತ್ತದೆ ಮತ್ತು ಅವರು ಅನೇಕ ಆಶೀರ್ವಾದಗಳಲ್ಲಿ ಆನಂದಿಸುವರು.

9. (ಎ) ರಥಗಳನ್ನು ಓಡಿಸುತ್ತಿರುವವರು ಯಾರು? (ಬಿ) ಅವರಿಗೆ ಯಾವ ನೇಮಕ ಕೊಡಲಾಗಿತ್ತು?

9 ಈಗ ರಥಗಳ ವಿಷಯಕ್ಕೆ ಬರೋಣ. ಈ ರಥಗಳು ಮತ್ತು ಅವುಗಳನ್ನು ಓಡಿಸುತ್ತಿರುವವರು ಯಾರನ್ನು ಪ್ರತಿನಿಧಿಸುತ್ತಾರೆ? ದೇವದೂತರನ್ನು. ಬಹುಶಃ ಈ ದೇವದೂತರನ್ನು ಬೇರೆ ಬೇರೆ ಗುಂಪುಗಳಾಗಿ ವಿಭಾಗಿಸಲಾಗಿದೆ. (ಜೆಕರ್ಯ 6:5-8 ಓದಿ.) ಇವರು ‘ಭೂಲೋಕದೊಡೆಯನ ಸನ್ನಿಧಾನದಿಂದ’ ಹೊರಡುತ್ತಾರೆ ಮತ್ತು ಇವರಿಗೆ ಒಂದು ವಿಶೇಷ ನೇಮಕ ಕೊಡಲಾಗಿದೆ. ದೇವಜನರನ್ನು ಸಂರಕ್ಷಿಸಲಿಕ್ಕಾಗಿ ಈ ದೇವದೂತರನ್ನು ನಿರ್ದಿಷ್ಟ ಸ್ಥಳಗಳಿಗೆ ಕಳುಹಿಸಲಾಗುತ್ತದೆ. ಮುಖ್ಯವಾಗಿ ‘ಉತ್ತರದೇಶವಾದ’ ಬಾಬೆಲ್‌ಗೆ ಕಳುಹಿಸಲಾಗುತ್ತದೆ. ತನ್ನ ಜನರು ಇನ್ನೆಂದೂ ಬಾಬೆಲಿಗೆ ಗುಲಾಮರಾಗಿರುವ ಪರಿಸ್ಥಿತಿ ಬರುವುದಿಲ್ಲ ಎಂದು ಯೆಹೋವನು ಈ ದರ್ಶನದ ಮೂಲಕ ತಿಳಿಸಿದನು. ಜೆಕರ್ಯನ ದಿನದಲ್ಲಿ ಆಲಯವನ್ನು ಕಟ್ಟುವ ಕೆಲಸದಲ್ಲಿ ತೊಡಗಿದ್ದ ಜನರಿಗೆ ಇದರಿಂದ ಎಷ್ಟೊಂದು ಸಾಂತ್ವನ ಸಿಕ್ಕಿರಬೇಕು! ಅವರ ವೈರಿಗಳು ಅಡ್ಡಗಾಲು ಹಾಕಲು ಎಷ್ಟೇ ಪ್ರಯತ್ನಿಸಿದರೂ ತಮ್ಮ ಕೆಲಸವನ್ನು ನಿಲ್ಲಿಸಲು ಆಗುವುದಿಲ್ಲ ಎಂದು ಯೆಹೂದ್ಯರಿಗೆ ಇದರಿಂದ ಗೊತ್ತಾಯಿತು.

10. ರಥಗಳು ಮತ್ತು ಅವುಗಳನ್ನು ಓಡಿಸುತ್ತಿರುವವರ ಕುರಿತ ಜೆಕರ್ಯನ ಪ್ರವಾದನೆಯಿಂದ ಇಂದು ನಮಗೆ ಹೇಗೆ ಸಹಾಯ ಸಿಗುತ್ತಿದೆ?

10 ಇಂದು ಸಹ ತನ್ನ ಜನರನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ಯೆಹೋವನು ದೇವದೂತರನ್ನು ಉಪಯೋಗಿಸುತ್ತಾನೆ. (ಮಲಾ. 3:6; ಇಬ್ರಿ. 1:7, 14) ಯೆಹೋವನ ಜನರು 1919​ರಲ್ಲಿ ಮಹಾ ಬಾಬೆಲಿನ ಸಾಂಕೇತಿಕ ಬಂಧನದಿಂದ ಬಿಡುಗಡೆಯಾದರು. ಆ ಸಮಯದಿಂದ ಸತ್ಯಾರಾಧನೆ ಹಬ್ಬದಂತೆ ಮಾಡಲು ವೈರಿಗಳು ತುಂಬ ಪ್ರಯತ್ನ ಮಾಡಿದ್ದಾರೆ. (ಪ್ರಕ. 18:4) ಆದರೆ ಅವರ ಪ್ರಯತ್ನವೆಲ್ಲಾ ನೀರುಪಾಲಾಗಿದೆ. ಏಕೆಂದರೆ ಯೆಹೋವನ ಸಂಘಟನೆಯನ್ನು ದೇವದೂತರು ಸಂರಕ್ಷಿಸುತ್ತಿದ್ದಾರೆ. ನಾವು ಪುನಃ ಸುಳ್ಳು ಧರ್ಮದ ಕೈಕೆಳಗೆ ಬರುತ್ತೇವೆ ಎಂದು ಹೆದರುವ ಆವಶ್ಯಕತೆ ಇಲ್ಲ. (ಕೀರ್ತ. 34:7) ಯೆಹೋವನ ಆರಾಧನೆಯನ್ನು ಸಂತೋಷದಿಂದ ಮಾಡುತ್ತಾ ಆತನ ಸೇವೆಯನ್ನು ಹೆಚ್ಚೆಚ್ಚು ಮಾಡುವೆವು. ಜೆಕರ್ಯನು ದರ್ಶನದಲ್ಲಿ ಕಂಡ ಆ ಎರಡು ಬೆಟ್ಟಗಳಿಂದಾಗಿ ನಾವು ಸುರಕ್ಷಿತರಾಗಿದ್ದೇವೆ ಎಂದು ಅರ್ಥಮಾಡಿಕೊಳ್ಳಲು ಈ ಪ್ರವಾದನೆ ಸಹಾಯ ಮಾಡುತ್ತದೆ.

11. ದೇವಜನರ ಮೇಲೆ ಆಗಲಿಕ್ಕಿರುವ ದಾಳಿಯನ್ನು ನೆನಸಿ ನಾವು ಯಾಕೆ ಹೆದರಬೇಕಾಗಿಲ್ಲ?

11 ಬಲು ಬೇಗನೆ ಸೈತಾನನ ಲೋಕದ ಭಾಗವಾಗಿರುವ ರಾಜಕೀಯ ಶಕ್ತಿಗಳು ಒಟ್ಟಿಗೆ ಸೇರಿಕೊಂಡು ದೇವಜನರನ್ನು ನಾಶಮಾಡಲು ಬರುತ್ತವೆ. (ಯೆಹೆ. 38:2, 10-12; ದಾನಿ. 11:40, 44, 45; ಪ್ರಕ. 19:19) ಈ ಶಕ್ತಿಗಳು ಕಾರ್ಮೋಡದಂತೆ ಭೂಮಿಯನ್ನು ಆವರಿಸುವವು ಎಂದು ಯೆಹೆಜ್ಕೇಲನ ಪ್ರವಾದನೆ ತೋರಿಸುತ್ತದೆ. ಅವು ದೇವಜನರನ್ನು ಮುಗಿಸಿಬಿಡಬೇಕೆಂದು ಪಣತೊಟ್ಟು ಕುದುರೆಗಳ ಮೇಲೆ ಬರುತ್ತವೆ. (ಯೆಹೆ. 38:15, 16) * ನಾವು ಹೆದರಬೇಕಾ? ಇಲ್ಲ! ಯೆಹೋವನ ಸೈನ್ಯ ನಮಗೆ ಬೆಂಬಲವಾಗಿ ನಿಂತಿದೆ. ಮಹಾ ಸಂಕಟದ ಸಮಯದಲ್ಲಿ ಯೆಹೋವನ ಜನರನ್ನು ದೇವದೂತರು ಸಂರಕ್ಷಿಸುವರು ಮತ್ತು ಯೆಹೋವನ ಆಳ್ವಿಕೆಯನ್ನು ತಳ್ಳಿಹಾಕುವವರನ್ನು ನಾಶಮಾಡುವರು. (2 ಥೆಸ. 1:7, 8) ಅದು ಎಂಥ ದಿನ ಆಗಿರುವುದು ಅಲ್ವಾ? ಆದರೆ ಯೆಹೋವನ ಸ್ವರ್ಗೀಯ ಸೈನ್ಯವನ್ನು ಯಾರು ಮುನ್ನಡೆಸುತ್ತಾರೆ?

ಯಾಜಕನಿಗೆ ಯೆಹೋವನು ರಾಜನ ಕಿರೀಟ ತೊಡಿಸುತ್ತಾನೆ

12, 13. (ಎ) ಜೆಕರ್ಯನು ಏನು ಮಾಡಬೇಕೆಂದು ಯೆಹೋವನು ಹೇಳಿದನು? (ಬಿ) ‘ಮೊಳಿಕೆ’ ಅಥವಾ ‘ತಳಿರು’ ಎಂದು ಕರೆಯಲ್ಪಡುವ ವ್ಯಕ್ತಿ ಯೇಸು ಕ್ರಿಸ್ತನೇ ಎಂದು ನಮಗೆ ಹೇಗೆ ಗೊತ್ತು?

12 ಯೆಹೋವನು ಕೊಟ್ಟ ಎಂಟು ದರ್ಶನಗಳನ್ನು ಜೆಕರ್ಯನು ಮಾತ್ರ ನೋಡಿದನು. ಆದರೆ ಮುಂದೆ ಅವನು ಮಾಡಿದ ವಿಷಯ ಎಲ್ಲರ ಗಮನ ಸೆಳೆಯಿತು ಮತ್ತು ದೇವಾಲಯವನ್ನು ಕಟ್ಟುತ್ತಿದ್ದವರಿಗೆ ಬೇಕಾದ ಪ್ರೋತ್ಸಾಹ ಸಿಕ್ಕಿತು. (ಜೆಕರ್ಯ 6:9-12 ಓದಿ.) ಬಾಬೆಲಿನಿಂದ ಹೆಲ್ದಾಯ, ತೋಬೀಯ, ಯೆದಾಯ ಎಂಬವರು ಬಂದರು. ಈ ಪುರುಷರಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಒಂದು “ಕಿರೀಟವನ್ನು” ಮಾಡುವಂತೆ ಯೆಹೋವನು ಜೆಕರ್ಯನಿಗೆ ಹೇಳಿದನು. (ಜೆಕ. 6:11) ಈ ಕಿರೀಟವನ್ನು ಯೆಹೂದ ಕುಲಕ್ಕೆ ಸೇರಿದ್ದ ಮತ್ತು ದಾವೀದನ ವಂಶಸ್ಥನಾಗಿದ್ದ ರಾಜ್ಯಪಾಲ ಜೆರುಬ್ಬಾಬೆಲನಿಗೆ ತೊಡಿಸುವಂತೆ ಯೆಹೋವನು ಹೇಳಿದನಾ? ಇಲ್ಲ. ಕಿರೀಟವನ್ನು ಮಹಾಯಾಜಕನಾದ ಯೆಹೋಶುವನ ತಲೆಯ ಮೇಲೆ ಇಡುವಂತೆ ಜೆಕರ್ಯನಿಗೆ ಹೇಳಿದನು. ಇದನ್ನು ನೋಡಿದವರಿಗೆಲ್ಲ ಆಶ್ಚರ್ಯ ಆಗಿರಬೇಕು.

13 ಮಹಾಯಾಜಕನಾದ ಯೆಹೋಶುವನಿಗೆ ಕಿರೀಟ ತೊಡಿಸಿದಾಗ ಅವನು ರಾಜನಾದನಾ? ಇಲ್ಲ. ಯೆಹೋಶುವ ದಾವೀದನ ವಂಶಸ್ಥನಾಗಿರಲಿಲ್ಲ. ಆದ್ದರಿಂದ ಅವನು ರಾಜನಾಗಲು ಸಾಧ್ಯವಿಲ್ಲ. ಯೆಹೋಶುವನಿಗೆ ಕಿರೀಟ ತೊಡಿಸಿದ್ದು ಮುಂದೆ ಅನಂತಕಾಲದ ರಾಜ ಮತ್ತು ಯಾಜಕನಾಗಲಿದ್ದ ಒಬ್ಬ ವ್ಯಕ್ತಿಗೆ ಸೂಚಿಸಿತು. ಅವನನ್ನು ‘ಮೊಳಿಕೆ’ ಅಥವಾ ‘ತಳಿರು’ ಎಂದು ಕರೆಯಲಾಗಿದೆ. ಇದು ಯೇಸು ಕ್ರಿಸ್ತನೇ ಎಂದು ಬೈಬಲು ತೋರಿಸಿಕೊಡುತ್ತದೆ.—ಯೆಶಾ. 11:1; ಮತ್ತಾ. 2:23. *

14. ರಾಜ ಮತ್ತು ಮಹಾಯಾಜಕನಾಗಿ ಯೇಸು ಯಾವ ಕೆಲಸ ಮಾಡುತ್ತಾನೆ?

14 ಯೇಸು ರಾಜನೂ ಮಹಾಯಾಜಕನೂ ಆಗಿದ್ದಾನೆ. ಈತನು ಯೆಹೋವನ ಸೈನ್ಯವನ್ನು ಮುನ್ನಡೆಸುತ್ತಾನೆ. ಈ ಹಿಂಸಾತ್ಮಕ ಲೋಕದಲ್ಲಿ ದೇವಜನರು ಸುರಕ್ಷಿತವಾಗಿರುವಂತೆ ಮಾಡುತ್ತಾನೆ. (ಯೆರೆ. 23:5, 6) ತುಂಬ ಬೇಗನೆ, ಕ್ರಿಸ್ತನು ದೇವರ ಪರಮಾಧಿಕಾರವನ್ನು ಬೆಂಬಲಿಸುತ್ತಾ ಯೆಹೋವನ ಜನರನ್ನು ಕಾಪಾಡುವನು ಮತ್ತು ಎಲ್ಲಾ ಜನಾಂಗಗಳನ್ನು ವಶಮಾಡಿಕೊಳ್ಳುವನು. (ಪ್ರಕ. 17:12-14; 19:11, 14, 15) ಆದರೆ ಇದಕ್ಕೆ ಮುಂಚೆ, ‘ಮೊಳಿಕೆ’ ಎಂದು ಕರೆಯಲ್ಪಡುವ ಯೇಸು ಒಂದು ದೊಡ್ಡ ಕೆಲಸವನ್ನು ಮಾಡಲಿಕ್ಕಿದೆ.

ಅವನು ಆಲಯವನ್ನು ಕಟ್ಟುವನು

15, 16. (ಎ) ನಮ್ಮ ಸಮಯದಲ್ಲಿ ದೇವಜನರನ್ನು ಹೇಗೆ ಪುನಃಸ್ಥಾಪಿಸಲಾಗಿದೆ ಮತ್ತು ಪರಿಷ್ಕರಿಸಲಾಗುತ್ತಿದೆ? (ಬಿ) ಈ ಕೆಲಸವನ್ನು ಮಾಡುತ್ತಿರುವುದು ಯಾರು? (ಸಿ) ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ ಭೂಮಿ ಹೇಗಿರುವುದು?

15 ರಾಜನೂ ಮಹಾಯಾಜಕನೂ ಆದ ಯೇಸುವಿಗೆ ‘ಯೆಹೋವನ ಆಲಯವನ್ನು ಕಟ್ಟುವ’ ಕೆಲಸವನ್ನು ಸಹ ಕೊಡಲಾಯಿತು. (ಜೆಕರ್ಯ 6:13ನ್ನು ಪಾದಟಿಪ್ಪಣಿಯಿಂದ ಓದಿ.) * 1919​ರಲ್ಲಿ ಯೇಸು ದೇವಜನರನ್ನು ಮಹಾ ಬಾಬೆಲಿನ ಹಿಡಿತದಿಂದ ಬಿಡಿಸಿ ಕ್ರೈಸ್ತ ಸಭೆಯನ್ನು ಪುನಃಸ್ಥಾಪಿಸುವ ಮೂಲಕ ಈ ಆಲಯ ಕಟ್ಟುವ ಕೆಲಸವನ್ನು ಮಾಡಿದನು. ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ಕೂಡ ನೇಮಿಸಿದನು. ಅಭಿಷಿಕ್ತ ಸಹೋದರರ ಈ ಗುಂಪು ಮಹಾ ಆಧ್ಯಾತ್ಮಿಕ ಆಲಯದ ಭೂಭಾಗದಲ್ಲಿ ನಡೆಯುತ್ತಿರುವ ಪ್ರಾಮುಖ್ಯ ಕೆಲಸವನ್ನು ನಿರ್ದೇಶಿಸುತ್ತದೆ. (ಮತ್ತಾ. 24:45) ಯೇಸು ದೇವಜನರನ್ನು ಪರಿಷ್ಕರಿಸುವ ಕೆಲಸದಲ್ಲೂ ತಲ್ಲೀನನಾಗಿದ್ದಾನೆ ಮತ್ತು ಅವರು ಯೆಹೋವನಿಗೆ ಮೆಚ್ಚಿಕೆಯಾಗುವಂಥ ವಿಧದಲ್ಲಿ ಆತನ ಸೇವೆಮಾಡಲು ಸಹಾಯಮಾಡುತ್ತಿದ್ದಾನೆ.—ಮಲಾ. 3:1-3.

16 ಯೇಸು ಮತ್ತು 1,44,000 ಮಂದಿ ರಾಜರಾಗಿ, ಯಾಜಕರಾಗಿ ಸಾವಿರ ವರ್ಷ ಆಳುವರು. ಈ ಸಮಯದಲ್ಲಿ ಅವರು ನಂಬಿಗಸ್ತ ಮಾನವರು ಪರಿಪೂರ್ಣರಾಗಲು ಸಹಾಯ ಮಾಡುವರು. ರಾಜರೂ ಯಾಜಕರೂ ಆದ ಈ ವ್ಯಕ್ತಿಗಳು ತಮ್ಮ ಕೆಲಸವನ್ನು ಮುಗಿಸಿದ ನಂತರ ಭೂಮಿಯ ಮೇಲೆ ಯೆಹೋವನ ಸತ್ಯಾರಾಧಕರು ಮಾತ್ರ ಇರುವರು. ಆಗ ಸತ್ಯಾರಾಧನೆ ಪೂರ್ಣವಾಗಿ ಪುನಃಸ್ಥಾಪನೆ ಆಗಿರುವುದು!

ಕಟ್ಟುವ ಕೆಲಸದಲ್ಲಿ ಭಾಗವಹಿಸಿ

17. (ಎ) ಯೆಹೋವನು ಯೆಹೂದ್ಯರಿಗೆ ಯಾವ ಆಶ್ವಾಸನೆ ಕೊಟ್ಟನು? (ಬಿ) ಈ ಸಂದೇಶ ಅವರ ಮೇಲೆ ಯಾವ ಪರಿಣಾಮ ಬೀರಿತು?

17 ಜೆಕರ್ಯನು ಕೊಟ್ಟ ಸಂದೇಶ ಆಗಿನ ಯೆಹೂದ್ಯರ ಮೇಲೆ ಯಾವ ಪರಿಣಾಮ ಬೀರಿತು? ದೇವಾಲಯವನ್ನು ಕಟ್ಟಿ ಮುಗಿಸಲು ಅವರಿಗೆ ಬೇಕಾದ ಸಹಾಯ ಮತ್ತು ಸಂರಕ್ಷಣೆಯನ್ನು ಕೊಡುತ್ತೇನೆಂದು ಯೆಹೋವನು ಮಾತು ಕೊಟ್ಟನು. ಇದರಿಂದ ಅವರಿಗೆ ಆಶ್ವಾಸನೆ ಸಿಕ್ಕಿತು. ಸ್ವಲ್ಪವೇ ಜನ ಇಷ್ಟೊಂದು ಕೆಲಸವನ್ನು ಮಾಡಿ ಮುಗಿಸುವುದು ಹೇಗೆ ಎಂದು ಅವರು ಯೋಚಿಸಿರಬಹುದು. ಅವರಲ್ಲಿದ್ದ ಭಯ ಮತ್ತು ಸಂಶಯವನ್ನು ನೀಗಿಸುವಂಥ ಒಂದು ವಿಷಯವನ್ನು ಜೆಕರ್ಯನು ಹೇಳಿದನು. ಅವರಿಗೆ ಸಹಾಯ ಮಾಡಲು ಬಂದಿದ್ದ ಹೆಲ್ದಾಯ, ತೋಬೀಯ, ಯೆದಾಯ ಮಾತ್ರವಲ್ಲದೆ ಇನ್ನು ಅನೇಕರು “ಬಂದು ಯೆಹೋವನ ಆಲಯವನ್ನು ಕಟ್ಟುವದಕ್ಕೆ ಕೈಹಾಕುವರು” ಎಂದು ಯೆಹೋವನು ಹೇಳಿದನು. (ಜೆಕರ್ಯ 6:15 ಓದಿ.) ತಾವು ಕೈಹಾಕಲಿರುವ ಕೆಲಸವನ್ನು ಖಂಡಿತ ಯೆಹೋವನು ಆಶೀರ್ವದಿಸುವನು ಎಂಬ ಭರವಸೆ ಯೆಹೂದ್ಯರಿಗಿತ್ತು. ಪರ್ಷಿಯದ ರಾಜನು ಆಲಯ ಕಟ್ಟುವ ಕೆಲಸದ ಮೇಲೆ ನಿರ್ಬಂಧ ಹಾಕಿದ್ದರೂ ಅವರು ಧೈರ್ಯದಿಂದ ಕೆಲಸವನ್ನು ಪುನಃ ಆರಂಭಿಸಿದರು. ಈ ನಿರ್ಬಂಧ ಒಂದು ದೊಡ್ಡ ಬೆಟ್ಟದಂತೆ ಇತ್ತು, ಆದರೆ ಯೆಹೋವನು ಅದನ್ನು ಬೇಗನೆ ತೆಗೆದುಹಾಕಿದನು. ಕೊನೆಗೆ, ಕ್ರಿ.ಪೂ. 515​ರಲ್ಲಿ ಆಲಯವನ್ನು ಕಟ್ಟಿ ಮುಗಿಸಲಾಯಿತು. (ಎಜ್ರ 6:22; ಜೆಕ. 4:6, 7) ಯೆಹೋವನ ಮಾತುಗಳು ಇಂದು ನಡೆಯುತ್ತಿರುವ ಮತ್ತೊಂದು ಮಹತ್ತರವಾದ ವಿಷಯವನ್ನೂ ವರ್ಣಿಸುತ್ತವೆ.

ಯೆಹೋವನಿಗೆ ನಾವು ತೋರಿಸುವ ಪ್ರೀತಿಯನ್ನು ಆತನು ಎಂದೂ ಮರೆಯಲ್ಲ! (ಪ್ಯಾರ 18, 19 ನೋಡಿ)

18. ಜೆಕರ್ಯ 6:15 ಇಂದು ಹೇಗೆ ನೆರವೇರುತ್ತಿದೆ?

18 ಇಂದು ಲಕ್ಷಾಂತರ ಮಂದಿ ಯೆಹೋವನನ್ನು ಆರಾಧಿಸುತ್ತಾರೆ. ಅವರು ತಮ್ಮ ‘ಆದಾಯವನ್ನು’ ಅಂದರೆ ತಮ್ಮ ಸಮಯ, ಶಕ್ತಿ, ಸಂಪತ್ತನ್ನು ಯೆಹೋವನ ಸೇವೆಗಾಗಿ ಕೊಡಲು ಸಿದ್ಧರಿದ್ದಾರೆ. ಈ ರೀತಿ ಅವರು ಯೆಹೋವನ ಮಹಾ ಆಧ್ಯಾತ್ಮಿಕ ಆಲಯಕ್ಕೆ ಬೆಂಬಲ ಕೊಡುತ್ತಿದ್ದಾರೆ. (ಜ್ಞಾನೋ. 3:9) ನಾವು ನಿಷ್ಠೆಯಿಂದ ಕೊಡುವ ಬೆಂಬಲವನ್ನು ಯೆಹೋವನು ತುಂಬ ಮಾನ್ಯಮಾಡುತ್ತಾನೆ. ಹೆಲ್ದಾಯ, ತೋಬೀಯ, ಯೆದಾಯ ತಂದಿದ್ದ ಬೆಳ್ಳಿಬಂಗಾರದಿಂದ ಜೆಕರ್ಯನು ಕಿರೀಟವನ್ನು ಮಾಡಿದನು ಎಂಬುದನ್ನು ನೆನಪಿಸಿಕೊಳ್ಳಿ. ಆ ಕಿರೀಟ ಅವರು ಸತ್ಯಾರಾಧನೆಗೆಂದು ಕೊಟ್ಟ ಕಾಣಿಕೆಯ “ಜ್ಞಾಪಕಾರ್ಥವಾಗಿ” ಇತ್ತು ಅಂದರೆ ಅವರ ಬೆಂಬಲವನ್ನು ನೆನಪಿಸುತ್ತಿತ್ತು. (ಜೆಕ. 6:14) ನಾವು ಮಾಡುವ ಸೇವೆಯನ್ನು ಮತ್ತು ಯೆಹೋವನಿಗೆ ನಾವು ತೋರಿಸುವ ಪ್ರೀತಿಯನ್ನು ಆತನು ಎಂದೂ ಮರೆಯಲ್ಲ.—ಇಬ್ರಿ. 6:10.

19. ಜೆಕರ್ಯನ ಪ್ರವಾದನೆಗಳು ನಮ್ಮ ಮೇಲೆ ಯಾವ ಪರಿಣಾಮ ಬೀರಬೇಕು?

19 ಈ ಕಡೇ ದಿವಸಗಳಲ್ಲಿ ಯೆಹೋವನ ಜನರು ಮಹತ್ತರವಾದ ಕೆಲಸವನ್ನು ಮಾಡುತ್ತಿದ್ದಾರೆ. ಯೆಹೋವನ ಆಶೀರ್ವಾದ ಮತ್ತು ಕ್ರಿಸ್ತನ ನಾಯಕತ್ವ ಇರುವುದರಿಂದ ಇದನ್ನು ಮಾಡಲು ಸಾಧ್ಯವಾಗಿದೆ. ಸ್ಥಿರವಾದ, ಸುಭದ್ರವಾದ, ಶಾಶ್ವತವಾದ ಸಂಘಟನೆಯ ಭಾಗವಾಗಿರಲು ನಾವು ತುಂಬ ಸಂತೋಷಿಸುತ್ತೇವೆ. ಶುದ್ಧಾರಾಧನೆಯ ವಿಷಯದಲ್ಲಿ ಯೆಹೋವನು ಉದ್ದೇಶಿಸಿರುವ ವಿಷಯ ಖಂಡಿತ ನೆರವೇರುವುದು. ಹಾಗಾಗಿ ಯೆಹೋವನ ಜನರ ಮಧ್ಯೆ ನಿಮಗಿರುವ ಸ್ಥಾನವನ್ನು ಮಾನ್ಯಮಾಡಿ ಮತ್ತು “ನಿಮ್ಮ ದೇವರಾದ ಯೆಹೋವನ ಮಾತನ್ನು ಮನಃಪೂರ್ವಕವಾಗಿ ಕೇಳಿ.” ಆಗ ನಮ್ಮ ರಾಜ ಮತ್ತು ಮಹಾಯಾಜಕನ ಸಂರಕ್ಷಣೆ ನಿಮಗೆ ಸಿಗುವುದು. ದೇವದೂತರ ಸಂರಕ್ಷಣೆಯೂ ಇರುವುದು. ಸತ್ಯಾರಾಧನೆಯನ್ನು ಬೆಂಬಲಿಸಲು ನಿಮ್ಮಿಂದಾದ ಎಲ್ಲವನ್ನೂ ಮಾಡಿ. ಸೈತಾನನ ಈ ಲೋಕ ಅಸ್ತಿತ್ವದಲ್ಲಿರುವ ವರೆಗೂ ಮತ್ತು ಶಾಶ್ವತಕ್ಕೂ ಯೆಹೋವನು ನಿಮ್ಮನ್ನು ಸುರಕ್ಷಿತವಾಗಿ ಇಟ್ಟಿರುವನು.

^ ಪ್ಯಾರ. 11 ಹೆಚ್ಚಿನ ಮಾಹಿತಿಗಾಗಿ 2015, ಮೇ 15​ರ ಕಾವಲಿನಬುರುಜುವಿನ ಪುಟ 29-30​ರಲ್ಲಿರುವ “ವಾಚಕರಿಂದ ಪ್ರಶ್ನೆಗಳು” ನೋಡಿ.

^ ಪ್ಯಾರ. 13 “ನಜರೇತಿನವನು” ಎಂಬ ಪದ ‘ಮೊಳಿಕೆ’ ಅಥವಾ ‘ತಳಿರು’ ಎಂಬದಕ್ಕಿರುವ ಹೀಬ್ರು ಪದದಿಂದ ಬಂದಿದೆ.

^ ಪ್ಯಾರ. 15 ಜೆಕರ್ಯ 6:13 (ನೂತನ ಲೋಕ ಭಾಷಾಂತರ): “ಅವನೇ ಯೆಹೋವನ ಆಲಯವನ್ನು ಕಟ್ಟುವನು ಮತ್ತು ರಾಜವೈಭವವನ್ನು ಪಡೆಯುವನು. ಅವನು ತನ್ನ ಸಿಂಹಾಸನದಲ್ಲಿ ಕುಳಿತು ಆಳುವನು ಮತ್ತು ತನ್ನ ಸಿಂಹಾಸನದಲ್ಲಿ ಯಾಜಕನಾಗಿಯೂ ಇರುವನು. ಇವೆರಡರ ಮಧ್ಯೆ ಶಾಂತಿಭರಿತ ಒಪ್ಪಂದವಿರುವುದು.”