ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರೇ, ‘ರಕ್ಷಣೆಗಾಗಿ ವಿವೇಕಿಗಳಾಗಲು’ ನಿಮ್ಮ ಮಕ್ಕಳಿಗೆ ಸಹಾಯಮಾಡಿ

ಹೆತ್ತವರೇ, ‘ರಕ್ಷಣೆಗಾಗಿ ವಿವೇಕಿಗಳಾಗಲು’ ನಿಮ್ಮ ಮಕ್ಕಳಿಗೆ ಸಹಾಯಮಾಡಿ

“ಶೈಶವದಿಂದಲೇ ನೀನು ಪವಿತ್ರ ಬರಹಗಳನ್ನು ತಿಳಿದುಕೊಂಡಿದ್ದೀ; ಇವು ನಿನ್ನನ್ನು . . . ರಕ್ಷಣೆಗಾಗಿ ವಿವೇಕಿಯನ್ನಾಗಿ ಮಾಡಬಲ್ಲವು.” —2 ತಿಮೊ. 3:15.

ಗೀತೆಗಳು: 130, 88

1, 2. ಮಕ್ಕಳು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯಲು ಮುಂದೆ ಬರುವಾಗ ಹೆತ್ತವರಿಗೆ ಯಾಕೆ ಚಿಂತೆ ಆಗಬಹುದು?

ಸಾವಿರಾರು ಬೈಬಲ್‌ ವಿದ್ಯಾರ್ಥಿಗಳು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ, ಹೆತ್ತವರಿಂದ ಸತ್ಯ ಕಲಿತು ಅತ್ಯುತ್ತಮ ಜೀವನವನ್ನು ಆರಿಸಿಕೊಂಡ ಎಷ್ಟೋ ಯುವ ಜನರೂ ಇದ್ದಾರೆ. (ಕೀರ್ತ. 1:1-3) ನೀವೊಬ್ಬ ಕ್ರೈಸ್ತ ಹೆತ್ತವರಾಗಿರುವಲ್ಲಿ, ನಿಮ್ಮ ಮಗ ಅಥವಾ ಮಗಳ ದೀಕ್ಷಾಸ್ನಾನವನ್ನು ನೋಡಲು ಕಾತರದಿಂದ ಕಾಯುತ್ತಿರಬಹುದು.—3 ಯೋಹಾನ 4 ಹೋಲಿಸಿ.

2 ಇನ್ನೊಂದು ಕಡೆ ನಿಮಗೆ ಚಿಂತೆನೂ ಆಗುತ್ತಿರಬಹುದು. ಯಾಕೆಂದರೆ ಕೆಲವು ಮಕ್ಕಳು ದೀಕ್ಷಾಸ್ನಾನ ಆಗಿ ಸ್ವಲ್ಪ ಸಮಯದ ನಂತರ ದೇವರ ಮಟ್ಟಗಳಿಗೆ ತಕ್ಕಂತೆ ಜೀವಿಸುವುದರಿಂದ ನಿಜವಾಗಲೂ ಪ್ರಯೋಜನ ಇದೆಯಾ ಎಂದು ಸಂಶಯಪಡುವುದನ್ನು ನೀವು ನೋಡಿರಬಹುದು. ಕೆಲವು ಮಕ್ಕಳಂತೂ ಸತ್ಯವನ್ನೇ ಬಿಟ್ಟುಹೋಗಿರಬಹುದು. ಹಾಗಾಗಿ ನಿಮ್ಮ ಮಗ ಅಥವಾ ಮಗಳು ಯೆಹೋವನನ್ನು ಆರಾಧಿಸಲು ಆರಂಭಿಸಿದರೂ ಮುಂದೆ ಸತ್ಯದ ಮೇಲಿರುವ ಪ್ರೀತಿಯನ್ನು ಕಳೆದುಕೊಳ್ಳಬಹುದೇನೋ ಎಂಬ ಚಿಂತೆ ನಿಮಗಿರಬಹುದು. ನಿಮ್ಮ ಮಕ್ಕಳು ಒಂದನೇ ಶತಮಾನದಲ್ಲಿದ್ದ ಎಫೆಸ ಸಭೆಯ ಕೆಲವು ಕ್ರೈಸ್ತರಂತೆ ಆಗಿಬಿಡುವ ಸಾಧ್ಯತೆಯಿದೆ. ಆ ಕ್ರೈಸ್ತರಿಗೆ ಯೇಸು ಹೇಳಿದ್ದು: ‘ಮೊದಲು ನಿಮಗಿದ್ದ ಪ್ರೀತಿಯನ್ನು ನೀವು ಬಿಟ್ಟುಬಿಟ್ಟಿದ್ದೀರಿ.’ (ಪ್ರಕ. 2:4) ಮಕ್ಕಳು ಸತ್ಯದ ಮೇಲಿರುವ ಪ್ರೀತಿಯನ್ನು ಬಲವಾಗಿ ಇಟ್ಟುಕೊಳ್ಳಲು ಮತ್ತು ‘ಬೆಳೆದು ರಕ್ಷಣೆಯನ್ನು ಹೊಂದಲು’ ನೀವು ಹೇಗೆ ಸಹಾಯ ಮಾಡಬಲ್ಲಿರಿ? (1 ಪೇತ್ರ 2:2) ತಿಮೊಥೆಯನ ಮಾದರಿಯಿಂದ ನಮಗೆ ಉತ್ತರ ಸಿಗಲಿದೆ.

“ನೀನು ಪವಿತ್ರ ಬರಹಗಳನ್ನು ತಿಳಿದುಕೊಂಡಿದ್ದೀ”

3. (ಎ) ತಿಮೊಥೆಯನು ಹೇಗೆ ಕ್ರೈಸ್ತನಾದನು ಮತ್ತು ತಾನು ಕಲಿತದ್ದನ್ನು ಹೇಗೆ ಅನ್ವಯಿಸಿಕೊಂಡನು? (ಬಿ) ಕಲಿಯುವುದರಲ್ಲಿ ಯಾವ ಮೂರು ಅಂಶ ಮುಖ್ಯ ಎಂದು ಪೌಲನ ಮಾತಿನಿಂದ ಗೊತ್ತಾಗುತ್ತದೆ?

3 ಕ್ರಿ.ಶ. 47​ರಲ್ಲಿ ಪೌಲನು ಲುಸ್ತ್ರಕ್ಕೆ ಮೊದಲ ಸಾರಿ ಭೇಟಿ ನೀಡಿದಾಗ ತಿಮೊಥೆಯನಿಗೆ ಯೇಸುವಿನ ಬೋಧನೆಗಳ ಪರಿಚಯವಾಗಿದ್ದಿರಬೇಕು. ಆಗ ತಿಮೊಥೆಯನು ಬಹುಶಃ ಹದಿಪ್ರಾಯದ ಹುಡುಗನಾಗಿದ್ದರೂ ಕಲಿತ ವಿಷಯಗಳನ್ನು ಅನ್ವಯಿಸಿಕೊಂಡಿರಬೇಕು. ಅವನು ಎಷ್ಟು ಚೆನ್ನಾಗಿ ಅನ್ವಯಿಸಿಕೊಂಡನೆಂದರೆ, ಎರಡು ವರ್ಷದಲ್ಲಿ ಪೌಲನ ಸಂಚರಣ ಸಂಗಡಿಗನಾದನು. ಸುಮಾರು 16 ವರ್ಷಗಳ ನಂತರ ಪೌಲನು ತಿಮೊಥೆಯನಿಗೆ ಹೀಗೆ ಬರೆದನು: “ನೀನಾದರೋ ಕಲಿತ ವಿಷಯಗಳಲ್ಲಿಯೂ ನಂಬುವಂತೆ ಒಡಂಬಡಿಸಲ್ಪಟ್ಟ ವಿಷಯಗಳಲ್ಲಿಯೂ ಮುಂದುವರಿಯುತ್ತಾ ಇರು; ಇವುಗಳನ್ನು ಕಲಿಸಿಕೊಟ್ಟವರು ಯಾರೆಂಬುದು ನಿನಗೆ ತಿಳಿದಿದೆ. ಶೈಶವದಿಂದಲೇ ನೀನು ಪವಿತ್ರ ಬರಹಗಳನ್ನು [ಹೀಬ್ರು ಶಾಸ್ತ್ರಗ್ರಂಥವನ್ನು] ತಿಳಿದುಕೊಂಡಿದ್ದೀ; ಇವು ನಿನ್ನನ್ನು ಕ್ರಿಸ್ತ ಯೇಸುವಿನ ಸಂಬಂಧದಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಗಾಗಿ ವಿವೇಕಿಯನ್ನಾಗಿ ಮಾಡಬಲ್ಲವು.” (2 ತಿಮೊ. 3:14, 15) ಪೌಲ ಹೇಳಿದ್ದನ್ನು ಗಮನಿಸಿ: ತಿಮೊಥೆಯನು (1) ಪವಿತ್ರ ಬರಹಗಳನ್ನು ತಿಳಿದುಕೊಂಡಿದ್ದನು, (2) ಕಲಿತ ವಿಷಯಗಳನ್ನು ನಂಬುವಂತೆ ಒಡಂಬಡಿಸಲ್ಪಟ್ಟಿದ್ದನು, (3) ಕ್ರಿಸ್ತ ಯೇಸುವಿನ ಸಂಬಂಧದಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಗಾಗಿ ವಿವೇಕಿಯಾಗಿದ್ದನು.

4. ನಿಮ್ಮ ಮಕ್ಕಳಿಗೆ ಕಲಿಸಲು ಯಾವ ಪ್ರಕಾಶನವನ್ನು ನೀವು ಬಳಸುತ್ತೀರಿ? (ಲೇಖನದ ಆರಂಭದ ಚಿತ್ರ ನೋಡಿ.)

4 ನಿಮ್ಮ ಮಗ ಅಥವಾ ಮಗಳು ಪವಿತ್ರ ಬರಹಗಳನ್ನು ಅಂದರೆ ಇಂದಿರುವ ಹೀಬ್ರು ಶಾಸ್ತ್ರಗ್ರಂಥ ಮತ್ತು ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥವನ್ನು ಕಲಿಯಬೇಕು ಎಂದು ನೀವು ಬಯಸುತ್ತೀರಿ. ಪುಟಾಣಿ ಮಕ್ಕಳು ಸಹ ಅವರಿಗಿರುವ ಸಾಮರ್ಥ್ಯಕ್ಕನುಸಾರ ಬೈಬಲಲ್ಲಿ ತಿಳಿಸಲಾಗಿರುವ ಜನರ ಬಗ್ಗೆ, ಘಟನೆಗಳ ಬಗ್ಗೆ ಕಲಿಯಸಾಧ್ಯವಿದೆ. ಇದಕ್ಕಾಗಿ ಯೆಹೋವನ ಸಂಘಟನೆ ಅನೇಕ ಪುಸ್ತಕ, ಕಿರುಹೊತ್ತಗೆ, ವಿಡಿಯೋಗಳನ್ನು ಕೊಟ್ಟಿದೆ. ಮಕ್ಕಳಿಗೆ ಸಹಾಯಮಾಡಲು ಹೆತ್ತವರು ಅವನ್ನು ಬಳಸಬಹುದು. ಇಂಥ ಯಾವ ಪ್ರಕಾಶನ ನಿಮ್ಮ ಭಾಷೆಯಲ್ಲಿದೆ? ನಿಮ್ಮ ಮಕ್ಕಳು ಯೆಹೋವನ ಜೊತೆ ಬಲವಾದ ಸಂಬಂಧವನ್ನು ಬೆಳೆಸಿಕೊಳ್ಳಬೇಕಾದರೆ ಬೈಬಲಲ್ಲಿ ಏನಿದೆ ಎಂದು ತಿಳಿದುಕೊಳ್ಳಲೇಬೇಕು.

‘ನಂಬುವಂತೆ ಒಡಂಬಡಿಸಲ್ಪಟ್ಟಿದ್ದನು’

5. (ಎ) ‘ನಂಬುವಂತೆ ಒಡಂಬಡಿಸಲ್ಪಡುವುದು’ ಅಂದರೇನು? (ಬಿ) ಯೇಸುವಿನ ಕುರಿತ ಸುವಾರ್ತೆಯನ್ನು ತಿಮೊಥೆಯನು ನಂಬುವಂತೆ ಒಡಂಬಡಿಸಲ್ಪಟ್ಟನೆಂದು ಹೇಗೆ ಹೇಳಬಹುದು?

5 ಮಕ್ಕಳಿಗೆ ಬೈಬಲಲ್ಲಿ ತಿಳಿಸಲಾಗಿರುವ ಜನರ ಬಗ್ಗೆ, ಘಟನೆಗಳ ಬಗ್ಗೆ ಕಲಿಸಿದರೆ ಸಾಕಾಗುವುದಿಲ್ಲ. ತಿಮೊಥೆಯನಂತೆ ಅವರು ಕಲಿತ ವಿಷಯಗಳನ್ನು ‘ನಂಬುವಂತೆ ಒಡಂಬಡಿಸಲ್ಪಡಬೇಕು.’ ಇಲ್ಲಿ ಪೌಲ ಬಳಸಿರುವ ಗ್ರೀಕ್‌ ಪದಗಳ ಅರ್ಥ “ಒಂದು ವಿಷಯ ಸತ್ಯ ಎಂದು ಮನವರಿಕೆ ಆಗಿರುವುದು, ದೃಢವಾದ ಭರವಸೆ ಇರುವುದು” ಅಥವಾ “ನಿಶ್ಚಯವಾಗಿ ತಿಳಿದಿರುವುದು.” ತಿಮೊಥೆಯನಿಗೆ “ಶೈಶವದಿಂದಲೇ” ಅಂದರೆ ತುಂಬ ಚಿಕ್ಕ ವಯಸ್ಸಿನಿಂದಲೇ ಹೀಬ್ರು ಶಾಸ್ತ್ರಗ್ರಂಥದಲ್ಲಿರುವ ವಿಷಯಗಳು ತಿಳಿದಿತ್ತು. ನಂತರ ಯೇಸುವೇ ಮೆಸ್ಸೀಯನೆಂದು ಅವನಿಗೆ ಪೂರ್ತಿ ಮನವರಿಕೆ ಆಯಿತು. ಯೇಸುವಿನ ಕುರಿತ ಸುವಾರ್ತೆಯಲ್ಲಿ ಅವನಿಗೆ ಎಷ್ಟು ನಂಬಿಕೆ ಬಂತೆಂದರೆ ಅವನು ದೀಕ್ಷಾಸ್ನಾನ ಪಡೆದುಕೊಂಡು ಪೌಲನ ಜೊತೆ ಮಿಷನರಿಯಾಗಿ ಕೆಲಸಮಾಡಿದನು.

6. ದೇವರ ವಾಕ್ಯದಲ್ಲಿ ನಂಬಿಕೆ ಬೆಳೆಸಿಕೊಳ್ಳಲು ನೀವು ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು?

6 ತಿಮೊಥೆಯನಂತೆ ನಿಮ್ಮ ಮಕ್ಕಳು ಸಹ ಕಲಿತ ವಿಷಯವನ್ನು ‘ನಂಬುವಂತೆ ಒಡಂಬಡಿಸಲ್ಪಡಲು’ ನೀವು ಹೇಗೆ ಸಹಾಯ ಮಾಡಬಲ್ಲಿರಿ? ಇದಕ್ಕೆ ಮೊದಲು ತಾಳ್ಮೆ ಬೇಕು. ಬಲವಾದ ನಂಬಿಕೆ ಬೆಳೆಸಿಕೊಳ್ಳಲು ಸಮಯ ಹಿಡಿಯುತ್ತದೆ. ಒಂದು ವಿಷಯವನ್ನು ನೀವು ನಂಬುತ್ತೀರಿ ಎಂದಮಾತ್ರಕ್ಕೆ ನಿಮ್ಮ ಮಕ್ಕಳೂ ಅದನ್ನು ನಂಬಿಬಿಡುತ್ತಾರೆ ಅಂತ ನೆನಸಬೇಡಿ. ಬೈಬಲಿನ ಮೇಲೆ ನಂಬಿಕೆ ಬೆಳೆಸಿಕೊಳ್ಳಲು ಪ್ರತಿ ಮಗು ತನ್ನ “ವಿವೇಚನಾಶಕ್ತಿ” ಬಳಸಬೇಕು. (ರೋಮನ್ನರಿಗೆ 12:1 ಓದಿ.) ನಿಮ್ಮ ಮಕ್ಕಳು ಬಲವಾದ ನಂಬಿಕೆ ಬೆಳೆಸಿಕೊಳ್ಳಲು ನೀವು ತುಂಬ ಸಹಾಯ ಮಾಡಬಹುದು. ಮುಖ್ಯವಾಗಿ ಅವರು ಪ್ರಶ್ನೆಗಳನ್ನು ಕೇಳುವಾಗ ಅವರ ನಂಬಿಕೆಯನ್ನು ಬಲಪಡಿಸಲು ಪ್ರಯತ್ನಿಸಿ. ಒಬ್ಬ ತಂದೆಯಾಗಿರುವ ಥಾಮಸ್‌ ಇದನ್ನೇ ಮಾಡುತ್ತಾರೆ.

7, 8. (ಎ) ಒಬ್ಬ ಕ್ರೈಸ್ತ ತಂದೆ ತನ್ನ ಮಗಳಿಗೆ ಕಲಿಸುವಾಗ ಹೇಗೆ ತಾಳ್ಮೆ ತೋರಿಸುತ್ತಾರೆ? (ಬಿ) ಇದೇ ರೀತಿ ನೀವು ಯಾವಾಗ ನಿಮ್ಮ ಮಗ ಅಥವಾ ಮಗಳೊಟ್ಟಿಗೆ ತಾಳ್ಮೆ ತೋರಿಸಬೇಕಾಗಿ ಬಂತು?

7 ಥಾಮಸ್‌ಗೆ 11 ವರ್ಷದ ಮಗಳಿದ್ದಾಳೆ. ಅವಳು ಕೆಲವೊಮ್ಮೆ, “ಭೂಮಿಯಲ್ಲಿ ಇರೋದನ್ನೆಲ್ಲಾ ಸೃಷ್ಟಿಮಾಡಲು ಯೆಹೋವ ದೇವರು ವಿಕಾಸವಾದ ಬಳಸಿರಬಹುದಾ? ಎಲ್ಲಾ ಜನ್ರಿಗೂ ಒಳ್ಳೇದಾಗಲಿಕ್ಕೋಸ್ಕರ ನಾವ್ಯಾಕೆ ವೋಟ್‌ ಹಾಕಿ ಒಳ್ಳೇ ನಾಯಕನನ್‌ ಆರಿಸಿಕೊಳ್ಳಬಾರದು?” ಎಂದು ಕೇಳುತ್ತಾಳೆ. ಆಗೆಲ್ಲ ಥಾಮಸ್‌ಗೆ ಯಾವುದು ಸರಿ, ಯಾವುದು ತಪ್ಪು ಎಂದು ನೇರವಾಗಿ ಹೇಳಿಬಿಡೋಣ ಅಂತ ಅನಿಸುತ್ತದೆ. ಆದರೆ ಅವರು ಹಾಗೆ ಮಾಡುವುದಿಲ್ಲ. ಯಾಕೆಂದರೆ ಒಂದು ವಿಷಯ ಸತ್ಯ ಎಂದು ಒಬ್ಬರನ್ನು ನಂಬಿಸಲು ಬೇಕಾಗಿರುವುದು ಒಂದು ದೊಡ್ಡ ಸತ್ಯಾಂಶ ಅಲ್ಲ, ಹಲವಾರು ಚಿಕ್ಕಚಿಕ್ಕ ಪುರಾವೆ ಎನ್ನುವುದು ಅವರಿಗೆ ಗೊತ್ತು.

8 ತನ್ನ ಮಗಳಿಗೆ ತಾಳ್ಮೆಯಿಂದ ಕಲಿಸುವ ಅಗತ್ಯವಿದೆ ಎಂದು ಕೂಡ ಥಾಮಸ್‌ಗೆ ಗೊತ್ತು. ನಿಜ ಹೇಳಬೇಕೆಂದರೆ, ಎಲ್ಲ ಕ್ರೈಸ್ತರಿಗೂ ತಾಳ್ಮೆ ಅಥವಾ ದೀರ್ಘ ಸಹನೆ ಬೇಕು. (ಕೊಲೊ. 3:12) ತನ್ನ ಮಗಳು ಬಲವಾದ ನಂಬಿಕೆ ಬೆಳೆಸಿಕೊಳ್ಳಬೇಕಾದರೆ ಸಮಯ ಹಿಡಿಯುತ್ತದೆ ಎಂದು ಥಾಮಸ್‌ಗೆ ಅರ್ಥವಾಯಿತು. ಒಂದು ವಿಷಯದ ಬಗ್ಗೆ ಅವರು ಒಂದು ಸಾರಿ ಅಲ್ಲ ತುಂಬ ಸಲ ಕೂತು ಚರ್ಚೆ ಮಾಡಬೇಕಾಗುತ್ತದೆ. ಬೈಬಲಿನಿಂದ ಅವಳು ಕಲಿಯುತ್ತಿರುವ ವಿಷಯಗಳ ಬಗ್ಗೆ ಅವಳೊಟ್ಟಿಗೆ ತರ್ಕಬದ್ಧವಾಗಿ ಮಾತಾಡಬೇಕು. ಥಾಮಸ್‌ ಹೇಳುವುದು: “ಮುಖ್ಯವಾದ ವಿಷಯಗಳನ್ನು ಅವಳು ಕಲಿತಾಗ ಅದನ್ನು ನಿಜವಾಗಲೂ ನಂಬುತ್ತಾಳಾ, ಸರಿ ಎಂದು ಒಪ್ಪುತ್ತಾಳಾ ಅಂತ ನಾನೂ ನನ್ನ ಹೆಂಡತಿ ತಿಳಿದುಕೊಳ್ಳಲು ಇಷ್ಟಪಡುತ್ತೇವೆ. ಅವಳು ಅದರ ಬಗ್ಗೆ ಪ್ರಶ್ನೆ ಕೇಳಿದರೆ ನಮಗೆ ಸಮಾಧಾನ. ಏನೂ ಪ್ರಶ್ನೆ ಕೇಳದೆ ಸುಮ್ಮನೆ ಒಪ್ಪಿಕೊಂಡರೆ ನನಗೆ ಸಮಾಧಾನ ಆಗಲ್ಲ.”

9. ದೇವರ ವಾಕ್ಯದ ಮೇಲೆ ನಂಬಿಕೆ ಬೆಳೆಸಿಕೊಳ್ಳಲು ಮಕ್ಕಳಿಗೆ ನೀವು ಹೇಗೆ ಸಹಾಯ ಮಾಡಬಹುದು?

9 ಹೆತ್ತವರು ತಾಳ್ಮೆಯಿಂದ ಮಕ್ಕಳಿಗೆ ಕಲಿಸುವಾಗ, ಸಮಯ ಹೋಗುತ್ತಾ ಹೋಗುತ್ತಾ ತಮ್ಮ ನಂಬಿಕೆಯ “ಅಗಲ ಉದ್ದ ಎತ್ತರ ಮತ್ತು ಆಳ”ವನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. (ಎಫೆ. 3:18) ಮಕ್ಕಳ ವಯಸ್ಸು ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಎಷ್ಟಿದೆಯೋ ಅದಕ್ಕೆ ತಕ್ಕ ಹಾಗೆ ಕಲಿಸಬೇಕು. ಅವರು ಕಲಿಯುವ ವಿಷಯದ ಬಗ್ಗೆ ಅವರ ನಂಬಿಕೆ ಬಲವಾಗುತ್ತಾ ಹೋದ ಹಾಗೆ ಸತ್ಯದ ಬಗ್ಗೆ ಬೇರೆಯವರೊಂದಿಗೆ, ಶಾಲೆಯಲ್ಲಿರುವ ಮಕ್ಕಳೊಂದಿಗೆ ಮಾತಾಡಲು ಸುಲಭವಾಗುತ್ತದೆ. (1 ಪೇತ್ರ 3:15) ಉದಾಹರಣೆಗೆ, ಮನುಷ್ಯ ಸತ್ತ ನಂತರ ಏನಾಗುತ್ತದೆ ಎಂದು ಬೈಬಲನ್ನು ಬಳಸಿ ಉತ್ತರ ಕೊಡಲು ನಿಮ್ಮ ಮಕ್ಕಳಿಗೆ ಆಗುತ್ತದಾ? ಬೈಬಲ್‌ ಈ ವಿಷಯದ ಬಗ್ಗೆ ಕೊಡುವ ವಿವರಣೆ ಸರಿ ಎಂದು ಅವರಿಗೆ ಅನಿಸುತ್ತದಾ? * ದೇವರ ವಾಕ್ಯದ ಮೇಲೆ ನಂಬಿಕೆ ಬೆಳೆಸಿಕೊಳ್ಳಲು ನೀವು ಮಕ್ಕಳಿಗೆ ತಾಳ್ಮೆಯಿಂದ ಕಲಿಸಬೇಕಾಗುತ್ತದೆ ಎಂದು ನೆನಪಿಡಿ. ಈ ರೀತಿ ಮಾಡಿದರೆ ನಿಮ್ಮ ಪ್ರಯತ್ನ ಸಾರ್ಥಕವಾಗುತ್ತದೆ.—ಧರ್ಮೋ. 6:6, 7.

10. ನಿಮ್ಮ ಮಕ್ಕಳಿಗೆ ಕಲಿಸುವುದರಲ್ಲಿ ಯಾವುದು ಪ್ರಾಮುಖ್ಯ ಪಾತ್ರ ವಹಿಸುತ್ತದೆ?

10 ಮಕ್ಕಳು ನಂಬಿಕೆಯನ್ನು ಬೆಳೆಸಿಕೊಳ್ಳಲು ನಿಮ್ಮ ಒಳ್ಳೇ ಮಾದರಿ ಕೂಡ ಪ್ರಾಮುಖ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೂರು ಹೆಣ್ಣು ಮಕ್ಕಳ ತಾಯಿಯಾದ ಸ್ಟೆಫನೀ ಹೇಳುವುದು: “ನನ್ನ ಮಕ್ಕಳು ತುಂಬ ಚಿಕ್ಕವರಿದ್ದಾಗಿಂದ ನಾನು ನನ್ನನ್ನೇ ಹೀಗೆ ಕೇಳಿಕೊಳ್ಳುತ್ತಿದ್ದೆ: ‘ಯೆಹೋವನಿದ್ದಾನೆ, ಆತನು ಪ್ರೀತಿ ತೋರಿಸುತ್ತಾನೆ, ಆತನು ಮಾಡುವುದೆಲ್ಲ ನ್ಯಾಯ ಅಂತ ನನಗೆ ಯಾಕೆ ಮನವರಿಕೆ ಆಗಿದೆ ಎಂದು ಮಕ್ಕಳಿಗೆ ಹೇಳುತ್ತೇನಾ? ಯೆಹೋವನನ್ನು ನಾನು ನಿಜವಾಗಲೂ ಪ್ರೀತಿಸುತ್ತೇನೆ ಅಂತ ನನ್ನ ಮಕ್ಕಳಿಗೆ ಗೊತ್ತಾಗುತ್ತಿದೆಯಾ?’ ಈ ಎಲ್ಲ ವಿಷಯಗಳಲ್ಲಿ ನಾನು ಒಡಂಬಡಿಸಲ್ಪಟ್ಟಿದ್ದರೆ ಮಾತ್ರ ನನ್ನ ಮಕ್ಕಳೂ ಒಡಂಬಡಿಸಲ್ಪಡಲು ಸಾಧ್ಯ.”

“ರಕ್ಷಣೆಗಾಗಿ ವಿವೇಕಿಯನ್ನಾಗಿ ಮಾಡಬಲ್ಲವು”

11, 12. (ಎ) ವಿವೇಕ ಅಂದರೇನು? (ಬಿ) ಅದು ಒಬ್ಬನ ವಯಸ್ಸಿನ ಮೇಲೆ ಹೊಂದಿಕೊಂಡಿಲ್ಲ ಎಂದು ಹೇಗೆ ಹೇಳಬಹುದು?

11 ತಿಮೊಥೆಯನಿಗೆ (1) ಶಾಸ್ತ್ರಗ್ರಂಥದ ಜ್ಞಾನವಿತ್ತು ಮತ್ತು (2) ತನ್ನ ನಂಬಿಕೆಗಳ ಬಗ್ಗೆ ಮನವರಿಕೆ ಆಗಿತ್ತು ಎಂದು ಕಲಿತೆವು. ಆದರೆ ಪವಿತ್ರ ಬರಹಗಳು ತಿಮೊಥೆಯನನ್ನು “ರಕ್ಷಣೆಗಾಗಿ ವಿವೇಕಿಯನ್ನಾಗಿ ಮಾಡಬಲ್ಲವು” ಎಂದು ಪೌಲನು ಹೇಳಿದರ ಅರ್ಥವೇನು?

12 ಬೈಬಲಿನಲ್ಲಿ ತಿಳಿಸಲಾಗಿರುವ ವಿವೇಕ ಎಂಬ ಪದಕ್ಕೆ ಶಾಸ್ತ್ರವಚನಗಳ ಒಳನೋಟ, ಸಂಪುಟ 2 (ಇಂಗ್ಲಿಷ್‌) ಈ ವಿವರಣೆ ಕೊಡುತ್ತದೆ: “ಸಮಸ್ಯೆಗಳನ್ನು ಬಗೆಹರಿಸಲು, ಅಪಾಯಗಳಿಂದ ತಪ್ಪಿಸಿಕೊಳ್ಳಲು, ಕೆಲವೊಂದು ಗುರಿಗಳನ್ನು ಮುಟ್ಟಲು ಅಥವಾ ಅದನ್ನು ಮಾಡುವಂತೆ ಬೇರೆಯವರಿಗೆ ಬುದ್ಧಿವಾದ ಕೊಡಲು ನಮ್ಮಲ್ಲಿರುವ ಜ್ಞಾನ ಮತ್ತು ತಿಳುವಳಿಕೆಯನ್ನು ಯಶಸ್ವಿಕರವಾಗಿ ಬಳಸುವ ಸಾಮರ್ಥ್ಯ. ಇದು ಮೂರ್ಖತನಕ್ಕೆ ವಿರುದ್ಧವಾಗಿದೆ.” ಬೈಬಲು “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ” ಎನ್ನುತ್ತದೆ. (ಜ್ಞಾನೋ. 22:15) ವಿವೇಕವು ಮೂರ್ಖತನಕ್ಕೆ ವಿರುದ್ಧವಾಗಿರುವುದರಿಂದ ಅದು ಪ್ರೌಢತೆಯ ಒಂದು ಲಕ್ಷಣ. ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ಪ್ರೌಢತೆಯನ್ನು ಅವನ ವಯಸ್ಸಿನಿಂದ ಅಳೆಯಲಾಗುವುದಿಲ್ಲ. ಅವನಲ್ಲಿರುವ ದೇವಭಯ ಮತ್ತು ದೇವರ ಮಾತನ್ನು ಕೇಳಿ ಅದರಂತೆ ನಡೆಯಬೇಕೆಂದು ಅವನಿಗಿರುವ ಸಿದ್ಧಮನಸ್ಸಿನಿಂದ ಅಳೆಯಲಾಗುತ್ತದೆ.—ಕೀರ್ತನೆ 111:10 ಓದಿ.

13. ಮಕ್ಕಳು ರಕ್ಷಣೆ ಪಡೆದುಕೊಳ್ಳಲು ವಿವೇಕಿಗಳಾಗಿದ್ದಾರೆ ಎಂದು ಅವರು ಹೇಗೆ ತೋರಿಸಿಕೊಡಬಹುದು?

13 ತಕ್ಕಷ್ಟು ಮಟ್ಟಿಗೆ ಆಧ್ಯಾತ್ಮಿಕ ಪ್ರೌಢತೆ ಇರುವ ಮಕ್ಕಳು ತಮ್ಮ ಆಸೆಗಳಿಂದ ಅಥವಾ ಬೇರೆ ಮಕ್ಕಳ ಪ್ರಭಾವದಿಂದ ‘ಅಲೆಗಳಿಂದಲೋ ಎಂಬಂತೆ ಅತ್ತಿತ್ತ ಹೊಯ್ದಾಡಲ್ಪಡುವುದಿಲ್ಲ.’ (ಎಫೆ. 4:14) ಬದಲಿಗೆ ಅವರು ಎದುರಿಸುವ ಪ್ರತಿಯೊಂದು ಸನ್ನಿವೇಶದಲ್ಲಿ ‘ಸರಿ ಮತ್ತು ತಪ್ಪಿನ ಭೇದವನ್ನು ತಿಳಿದುಕೊಂಡು ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿಕೊಳ್ಳುತ್ತಾರೆ.’ (ಇಬ್ರಿ. 5:14) ಆದ್ದರಿಂದ ತಮ್ಮನ್ನು ಹೆತ್ತವರು ಅಥವಾ ದೊಡ್ಡವರು ನೋಡದಿದ್ದಾಗಲೂ ವಿವೇಕಯುತವಾದ ತೀರ್ಮಾನಗಳನ್ನು ಮಾಡುತ್ತಾರೆ. (ಫಿಲಿ. 2:12) ರಕ್ಷಣೆ ಪಡೆಯಬೇಕಾದರೆ ಇಂಥ ಜ್ಞಾನ ಅಥವಾ ವಿವೇಕ ಆವಶ್ಯಕ. (ಜ್ಞಾನೋಕ್ತಿ 24:14 ಓದಿ.) ನಿಮ್ಮ ಮಕ್ಕಳು ಇಂಥ ವಿವೇಕವನ್ನು ಬೆಳೆಸಿಕೊಳ್ಳಲು ನೀವು ಹೇಗೆ ಸಹಾಯ ಮಾಡಬಹುದು? ಇದಕ್ಕಾಗಿ ಮೊದಲು, ನೀವು ಯಾವ ಮಟ್ಟಗಳನ್ನು ಪಾಲಿಸುತ್ತೀರಿ ಎಂದು ನಿಮ್ಮ ಮಕ್ಕಳಿಗೆ ಸ್ಪಷ್ಟವಾಗಿ ತಿಳಿಸಿ. ನೀವು ಆ ಬೈಬಲ್‌ ಮಟ್ಟಗಳಿಗೆ ತಕ್ಕಂತೆ ಜೀವಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ನಿಮ್ಮ ನಡೆನುಡಿಯಿಂದ ಮಕ್ಕಳಿಗೆ ಗೊತ್ತಾಗಬೇಕು.—ರೋಮ. 2:21-23.

ಮಕ್ಕಳನ್ನು ಬೆಳೆಸುವುದರಲ್ಲಿ ಹೆತ್ತವರ ಸತತ ಪ್ರಯತ್ನ ಯಾಕೆ ಮುಖ್ಯ? (ಪ್ಯಾರ 14-18 ನೋಡಿ)

14, 15. (ಎ) ದೀಕ್ಷಾಸ್ನಾನ ಪಡೆಯಲು ಇಷ್ಟಪಡುವ ಮಕ್ಕಳು ಯಾವುದರ ಬಗ್ಗೆ ಯೋಚಿಸಬೇಕು? (ಬಿ) ದೇವರ ನಿಯಮಗಳಿಗೆ ವಿಧೇಯರಾಗುವುದರಿಂದ ಸಿಗುವ ಆಶೀರ್ವಾದಗಳ ಬಗ್ಗೆ ಮಕ್ಕಳು ಧ್ಯಾನಿಸಲು ನೀವು ಹೇಗೆ ಸಹಾಯ ಮಾಡಬಹುದು?

14 ಆದರೆ, ಮಕ್ಕಳು ನಂಬಿಕೆಯನ್ನು ಬೆಳೆಸಿಕೊಳ್ಳಲಿಕ್ಕಾಗಿ ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಬರೀ ಹೇಳಿದರೆ ಸಾಕಾಗುವುದಿಲ್ಲ. ಈ ಕೆಳಗಿನ ಪ್ರಶ್ನೆಗಳ ಬಗ್ಗೆಯೂ ಯೋಚಿಸಲು ಸಹಾಯ ಮಾಡಬೇಕು: ‘ನಮಗೆ ಹಿಡಿಸಬಹುದಾದ ಕೆಲವು ವಿಷಯಗಳನ್ನು ಮಾಡಬಾರದೆಂದು ಬೈಬಲ್‌ ಯಾಕೆ ಹೇಳುತ್ತದೆ? ಬೈಬಲ್‌ ಮಟ್ಟಗಳನ್ನು ಪಾಲಿಸುವುದರಿಂದ ನನಗೆ ಯಾವಾಗಲೂ ಒಳ್ಳೇದೇ ಆಗುತ್ತದೆ ಎಂದು ನಾನು ಹೇಗೆ ನಂಬಬಹುದು?’—ಯೆಶಾ. 48:17, 18.

15 ನಿಮ್ಮ ಮಗ ಅಥವಾ ಮಗಳು ದೀಕ್ಷಾಸ್ನಾನ ಪಡೆಯಲು ಬಯಸುವಲ್ಲಿ, ದೀಕ್ಷಾಸ್ನಾನ ಪಡೆದುಕೊಳ್ಳುವುದರಿಂದ ಯಾವೆಲ್ಲ ಜವಾಬ್ದಾರಿಗಳು ಬರುತ್ತವೆ ಎನ್ನುವುದರ ಬಗ್ಗೆಯೂ ಗಂಭೀರವಾಗಿ ಯೋಚಿಸಲು ಸಹಾಯ ಮಾಡಿ. ಆ ಜವಾಬ್ದಾರಿಗಳ ಬಗ್ಗೆ ಅವನಿಗೆ ಏನನಿಸುತ್ತದೆ? ಅದರಿಂದ ಸಿಗುವ ಪ್ರಯೋಜನಗಳೇನು? ಯಾವ ಕಷ್ಟಗಳು ಎದುರಾಗಬಹುದು? ಆ ಕಷ್ಟಗಳಿಗಿಂತ ಪ್ರಯೋಜನಗಳೇ ಹೆಚ್ಚು ಯಾಕೆ? (ಮಾರ್ಕ 10:29, 30) ದೀಕ್ಷಾಸ್ನಾನ ಪಡೆಯುವ ಮುಂಚೆ ಈ ವಿಷಯಗಳ ಬಗ್ಗೆ ಚೆನ್ನಾಗಿ ಯೋಚಿಸುವುದು ತುಂಬ ಪ್ರಾಮುಖ್ಯ. ವಿಧೇಯತೆ ತೋರಿಸುವುದರಿಂದ ಸಿಗುವ ಆಶೀರ್ವಾದಗಳ ಬಗ್ಗೆ ಮತ್ತು ಅವಿಧೇಯತೆ ತೋರಿಸುವುದರಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಧ್ಯಾನಿಸಲು ಸಹಾಯ ಮಾಡಿ. ಆಗ ನಿಮ್ಮ ಮಕ್ಕಳು ಬೈಬಲ್‌ ಮಟ್ಟಗಳನ್ನು ಪಾಲಿಸುವುದರಿಂದ ತಮಗೆ ಯಾವಾಗಲೂ ಪ್ರಯೋಜನ ಇದೆ ಎಂದು ನಂಬುವ ಸಾಧ್ಯತೆ ಹೆಚ್ಚು.—ಧರ್ಮೋ. 30:19, 20.

ದೀಕ್ಷಾಸ್ನಾನ ಪಡೆದ ಮಕ್ಕಳಿಗೆ ತಮ್ಮ ನಂಬಿಕೆಯ ಬಗ್ಗೆ ಸವಾಲೆದ್ದಾಗ

16. ದೀಕ್ಷಾಸ್ನಾನವಾದ ಮಕ್ಕಳ ನಂಬಿಕೆ ಕಡಿಮೆಯಾಗುತ್ತಾ ಇದ್ದರೆ ಹೆತ್ತವರು ಏನು ಮಾಡಬೇಕು?

16 ನಿಮ್ಮ ಮಗ ಅಥವಾ ಮಗಳು ದೀಕ್ಷಾಸ್ನಾನ ಪಡೆದ ಮೇಲೆ ಸತ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಲು ಆರಂಭಿಸಿದರೆ ಏನು ಮಾಡುತ್ತೀರಿ? ಉದಾಹರಣೆಗೆ, ಅವರು ಲೋಕದಲ್ಲಿರುವ ವಿಷಯಗಳ ಕಡೆಗೆ ಆಕರ್ಷಿತರಾಗಬಹುದು ಅಥವಾ ಬೈಬಲ್‌ ಹೇಳುವ ಪ್ರಕಾರ ಜೀವಿಸಿದರೆ ನಿಜವಾಗಲೂ ಪ್ರಯೋಜನ ಇದೆಯಾ ಎಂದು ಸಂಶಯಪಡಬಹುದು. (ಕೀರ್ತ. 73:1-3, 12, 13) ಇಂಥ ಸಮಯದಲ್ಲಿ ನೀವು ಅವರ ಜೊತೆ ಹೇಗೆ ನಡಕೊಳ್ಳುತ್ತೀರಿ ಅನ್ನುವುದರ ಮೇಲೆ ಅವರು ಯೆಹೋವನನ್ನು ಆರಾಧಿಸುವುದನ್ನು ಮುಂದುವರಿಸುತ್ತಾರೋ ಇಲ್ಲವೋ ಅನ್ನುವುದು ಹೊಂದಿಕೊಂಡಿದೆ. ಅವರು ತುಂಬ ಚಿಕ್ಕವರಾಗಿರಲಿ ಅಥವಾ ಹದಿವಯಸ್ಸಿಗೆ ಬಂದಿರಲಿ ಅವರ ಜೊತೆ ಈ ವಿಷಯದ ಬಗ್ಗೆ ಜಗಳಕ್ಕಿಳಿಯಬೇಡಿ. ಬದಲಿಗೆ, ನೀವು ಅವರನ್ನು ಪ್ರೀತಿಸುತ್ತೀರಿ ಮತ್ತು ಅವರಿಗೆ ಸಹಾಯ ಮಾಡಲು ಬಯಸುತ್ತೀರಿ ಎನ್ನುವುದು ಅವರಿಗೆ ಅರ್ಥವಾಗುವಂಥ ರೀತಿಯಲ್ಲಿ ನಡಕೊಳ್ಳಿ.

17, 18. ಮಕ್ಕಳಿಗೆ ಸಂಶಯಗಳು ಇರುವುದಾದರೆ ಹೆತ್ತವರು ಹೇಗೆ ಸಹಾಯ ಮಾಡಬಹುದು?

17 ದೀಕ್ಷಾಸ್ನಾನ ಪಡೆದುಕೊಂಡಿರುವ ಮಕ್ಕಳು ಯೆಹೋವನಿಗೆ ಸಮರ್ಪಣೆ ಮಾಡಿಕೊಂಡಿರುತ್ತಾರೆ. ಏನೇ ಆದರೂ ಯೆಹೋವನನ್ನು ಪ್ರೀತಿಸುತ್ತೇನೆ, ಆತನ ಸೇವೆ ಮಾಡುತ್ತೇನೆ ಎಂದು ಮಾತು ಕೊಡುವುದೇ ಸಮರ್ಪಣೆ ಆಗಿದೆ. (ಮಾರ್ಕ 12:30 ಓದಿ.) ಈ ಮಾತನ್ನು ಯೆಹೋವನು ತುಂಬ ಗಂಭೀರವಾಗಿ ತೆಗೆದುಕೊಳ್ಳುತ್ತಾನೆ. ನಾವೂ ಅದೇ ರೀತಿ ತೆಗೆದುಕೊಳ್ಳಬೇಕು. (ಪ್ರಸಂ. 5:4, 5) ಇದನ್ನು ನಿಮ್ಮ ಮಕ್ಕಳಿಗೆ ನೆನಪಿಸಿ. ಅದಕ್ಕಿಂತ ಮೊದಲು, ಹೆತ್ತವರಿಗೋಸ್ಕರ ಯೆಹೋವನ ಸಂಘಟನೆ ಕೊಟ್ಟಿರುವ ಮಾಹಿತಿಯನ್ನು ನೀವು ಓದಿ ಅಧ್ಯಯನ ಮಾಡಿ. ಆಮೇಲೆ ಪ್ರೀತಿಯಿಂದ ಸೂಕ್ತವಾದ ಸಮಯದಲ್ಲಿ ನಿಮ್ಮ ಮಕ್ಕಳ ಹತ್ತಿರ ಮಾತಾಡಿ. ಅವರು ಯೆಹೋವನಿಗೆ ಮಾಡಿರುವ ಸಮರ್ಪಣೆ ಮತ್ತು ದೀಕ್ಷಾಸ್ನಾನ ತುಂಬ ಗಂಭೀರವಾದ ವಿಷಯವಾಗಿದೆ, ಆದರೆ ಅದರಿಂದ ತುಂಬ ಆಶೀರ್ವಾದಗಳು ಸಿಗುತ್ತವೆ ಎಂದು ಹೇಳಿ.

18 ಉದಾಹರಣೆಗೆ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಸಂಪುಟ 1​ರ (ಇಂಗ್ಲಿಷ್‌) ಕೊನೆಭಾಗದಲ್ಲಿರುವ “ಹೆತ್ತವರು ಕೇಳುವ ಪ್ರಶ್ನೆಗಳು” ಎಂಬ ಪರಿಶಿಷ್ಟದಲ್ಲಿ ಒಳ್ಳೇ ಸಲಹೆಗಳನ್ನು ಕೊಡಲಾಗಿದೆ. ಅದರಲ್ಲಿ ಒಂದು ಸಲಹೆ ಏನೆಂದರೆ, ತಮ್ಮ ಹದಿವಯಸ್ಸಿನ ಮಗ ಅಥವಾ ಮಗಳಿಗೆ ಕೆಲವು ಸಂಶಯ, ಪ್ರಶ್ನೆಗಳು ಬಂದಿರುವುದರಿಂದ ಅವರು ಸತ್ಯವನ್ನೇ ಬಿಟ್ಟುಹೋಗುತ್ತಿದ್ದಾರೆ ಎಂದು ನೆನಸಬೇಡಿ. ಬದಲಿಗೆ ಅದರ ಹಿಂದಿರುವ ನಿಜವಾದ ಕಾರಣ ಏನಿರಬಹುದೆಂದು ಕಂಡುಹಿಡಿಯಿರಿ. ಬಹುಶಃ ನಿಮ್ಮ ಮಕ್ಕಳು ಸಮಾನಸ್ಥರ ಒತ್ತಡಕ್ಕೆ ಒಳಗಾಗಿರಬಹುದು, ಒಂಟಿತನ ಅವರನ್ನು ಕಾಡುತ್ತಿರಬಹುದು ಅಥವಾ ಸಭೆಯಲ್ಲಿರುವ ಬೇರೆ ಮಕ್ಕಳು ಯೆಹೋವನ ಸೇವೆಯನ್ನು ತನಗಿಂತ ಚೆನ್ನಾಗಿ ಮಾಡುತ್ತಿದ್ದಾರೆ ಎಂಬ ಅನಿಸಿಕೆ ಅವರಿಗಿರಬಹುದು. ಅದೇನೇ ಕಾರಣ ಇರಲಿ, ಅದರರ್ಥ ನಿಮ್ಮ ಮಕ್ಕಳು ನಿಮ್ಮ ಧಾರ್ಮಿಕ ನಂಬಿಕೆಗಳನ್ನು ಒಪ್ಪುತ್ತಿಲ್ಲ ಎಂದು ನೆನಸಬೇಡಿ ಎಂದು ಸಹ ಆ ಪರಿಶಿಷ್ಟ ವಿವರಿಸುತ್ತದೆ. ಬದಲಿಗೆ ಬೇರೇನೋ ಕಷ್ಟ ಆಗುತ್ತಿರುವುದರಿಂದ ಅವರಿಗೆ ಹಾಗನಿಸುತ್ತಿರಬಹುದು. ಇದೆಲ್ಲವನ್ನು ಹೇಳಿದ ಬಳಿಕ, ಸತ್ಯದ ಬಗ್ಗೆ ಸಂಶಯಗಳಿರುವ ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು ಎನ್ನುವುದರ ಬಗ್ಗೆ ಆ ಪರಿಶಿಷ್ಟ ಹೆಚ್ಚಿನ ಸಲಹೆಗಳನ್ನು ಕೊಡುತ್ತದೆ.

19. ತಮ್ಮ ಮಕ್ಕಳು ‘ರಕ್ಷಣೆಗಾಗಿ ವಿವೇಕಿಗಳಾಗಲು’ ಹೆತ್ತವರು ಹೇಗೆ ಸಹಾಯ ಮಾಡಬಹುದು?

19 ನಿಮ್ಮ ಮಕ್ಕಳನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ಬೆಳೆಸುವ ಜವಾಬ್ದಾರಿ ಮತ್ತು ಸುಯೋಗ ಹೆತ್ತವರಾದ ನಿಮಗಿದೆ. (ಎಫೆ. 6:4) ಇದರರ್ಥ ಏನೆಂದು ನಾವು ಈಗಾಗಲೇ ಕಲಿತಿದ್ದೇವೆ. ಅಂದರೆ ಬೈಬಲಲ್ಲಿ ಏನಿದೆ ಎಂದು ನೀವು ಮಕ್ಕಳಿಗೆ ಕಲಿಸಬೇಕು ಮತ್ತು ಅವರು ಕಲಿಯುವ ವಿಷಯವನ್ನು ನಂಬಲು ಸಹಾಯ ಮಾಡಬೇಕು. ಅವರ ನಂಬಿಕೆ ಬಲವಾದಾಗ ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳಲು ಮತ್ತು ಆತನಿಗೆ ತಮ್ಮ ಅತ್ಯುತ್ತಮ ಸೇವೆ ಸಲ್ಲಿಸಲು ಮುಂದೆ ಬರುತ್ತಾರೆ. ಯೆಹೋವನ ವಾಕ್ಯ, ಆತನ ಪವಿತ್ರಾತ್ಮ ಮತ್ತು ನಿಮ್ಮ ಪ್ರಯತ್ನಗಳು ‘ರಕ್ಷಣೆಗಾಗಿ ವಿವೇಕಿಗಳಾಗಲು’ ನಿಮ್ಮ ಮಕ್ಕಳಿಗೆ ಸಹಾಯ ಮಾಡಲಿ.

^ ಪ್ಯಾರ. 9 “ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?” ಪುಸ್ತಕದ ಸ್ಟಡಿ ಗೈಡ್ಸ್‌ ಎಂಬ ಸಾಧನ ಚಿಕ್ಕವರಿಗೂ ದೊಡ್ಡವರಿಗೂ ಬೈಬಲ್‌ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಬೇರೆಯವರಿಗೆ ವಿವರಿಸಲು ತುಂಬ ಸಹಾಯ ಮಾಡುತ್ತದೆ. ಇದು jw.org ವೆಬ್‌ಸೈಟಿನಲ್ಲಿ ಅನೇಕ ಭಾಷೆಗಳಲ್ಲಿ ಲಭ್ಯವಿದೆ. BIBLE TEACHINGS > BIBLE STUDY TOOLS ವಿಭಾಗ ನೋಡಿ.