ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಖರವಾದ ಭವಿಷ್ಯನುಡಿಗೆ ಮೌನ ಸಾಕ್ಷಿ

ನಿಖರವಾದ ಭವಿಷ್ಯನುಡಿಗೆ ಮೌನ ಸಾಕ್ಷಿ

ಇಟಲಿಯ ಮಧ್ಯ ರೋಮ್‌ನ ಒಂದು ವಿಜಯಸೂಚಕ ಕಮಾನು ಇಡೀ ಜಗತ್ತಿನಿಂದ ಸಂದರ್ಶಕರನ್ನು ಆಕರ್ಷಿಸುತ್ತದೆ. ಇದನ್ನು ರೋಮ್‌ನ ಅಚ್ಚುಮೆಚ್ಚಿನ ಚಕ್ರವರ್ತಿಗಳಲ್ಲಿ ಒಬ್ಬನಾದ ಟೈಟಸ್‌ನ ಗೌರವಾರ್ಥವಾಗಿ ಕಟ್ಟಲಾಗಿತ್ತು.

‘ಆರ್ಚ್‌ ಆಫ್‌ ಟೈಟಸ್‌’ ಎಂಬ ಹೆಸರಿನ ಈ ಕಮಾನಿನಲ್ಲಿ ಎರಡು ದೊಡ್ಡ ಅರೆಯುಬ್ಬು ಕೆತ್ತನೆಗಳಿವೆ. ಇವು ಒಂದು ಪ್ರಸಿದ್ಧ ಐತಿಹಾಸಿಕ ಘಟನೆಯನ್ನು ಚಿತ್ರಿಸುತ್ತವೆ. ಆದರೆ ಅಷ್ಟೇನೂ ಪ್ರಸಿದ್ಧವಲ್ಲದ ಒಂದು ವಿಷಯವೇನೆಂದರೆ ಈ ಕಮಾನಿಗೂ ಬೈಬಲಿಗೂ ಆಸಕ್ತಿಕರವಾದ ಒಂದು ನಂಟು ಇದೆ. ಈ ಕಮಾನು ಬೈಬಲಿನ ಭವಿಷ್ಯನುಡಿಯ ಗಮನಾರ್ಹ ನಿಖರತೆಗೆ ಮೌನ ಸಾಕ್ಷಿಯಾಗಿ ನಿಂತಿದೆ.

ದಂಡನೆಗೆ ಗುರಿಯಾದ ನಗರ

ಕ್ರಿ.ಶ. ಒಂದನೇ ಶತಮಾನದ ಆರಂಭದಲ್ಲಿ ರೋಮನ್‌ ಸಾಮ್ರಾಜ್ಯವು ಬ್ರಿಟನ್‌ ಮತ್ತು ಗಾಲ್‌ನಿಂದ (ಈಗ ಫ್ರಾನ್ಸ್‌) ಈಜಿಪ್ಟ್‌ ವರೆಗೆ ಹರಡಿತ್ತು. ಆ ಪ್ರದೇಶದಲ್ಲೆಲ್ಲ ಹಿಂದೆಂದೂ ಇಲ್ಲದಿದ್ದ ಸ್ಥಿರತೆ ಮತ್ತು ಸಮೃದ್ಧಿ ಇತ್ತು. ಆದರೆ ಆ ಸಾಮ್ರಾಜ್ಯಕ್ಕೆ ಸೇರಿದ ದೂರದ ಒಂದು ಪ್ರದೇಶವು ರೋಮ್‌ಗೆ ಮುಳ್ಳಿನ ಹಾಗೆ ಚುಚ್ಚುತ್ತಾ ಇತ್ತು. ಅದು ಗಲಭೆಗ್ರಸ್ತ ಯೂದಾಯ ಪ್ರಾಂತವಾಗಿತ್ತು.

ದಿ ಎನ್‌ಸೈಕ್ಲಪೀಡಿಯ ಆಫ್‌ ಏನ್‌ಷ್ಯಂಟ್‌ ರೋಮ್‌ ಹೀಗನ್ನುತ್ತದೆ: “ರೋಮಿನ ನಿಯಂತ್ರಣದ ಕೆಳಗೆ ಇಷ್ಟೊಂದು ಹಗೆ ಇದ್ದ ಕ್ಷೇತ್ರಗಳು ತೀರ ಕಡಿಮೆ. ಯೂದಾಯದ ವಿಷಯದಲ್ಲಂತು ಎರಡೂ ಕಡೆಯಿಂದ ಹಗೆ ಇತ್ತು. ಅಂದರೆ, ತಮ್ಮ ಪರಂಪರೆಯ ಬಗ್ಗೆ ಸ್ವಲ್ಪವೂ ಗೌರವವಿಲ್ಲದ ಈ ಪರದೇಶೀಯ ಧಣಿಗಳನ್ನು ಯೆಹೂದ್ಯರು ದ್ವೇಷಿಸುತ್ತಿದ್ದರು ಮತ್ತು ಯೆಹೂದ್ಯರು ಹಠಮಾರಿಗಳಾಗಿದ್ದರಿಂದ ರೋಮನ್ನರು ಅವರ ಮೇಲೆ ತುಂಬ ದೌರ್ಜನ್ಯ-ದಬ್ಬಾಳಿಕೆ ನಡೆಸುತ್ತಿದ್ದರು.” ತಾವು ದ್ವೇಷಿಸುತ್ತಿದ್ದ ಈ ರೋಮನ್ನರನ್ನು ಹೊರಗಟ್ಟಿ, ಇಸ್ರಾಯೇಲಿನಲ್ಲಿ ಸುವರ್ಣ ಯುಗವನ್ನು ಮತ್ತೆ ಸ್ಥಾಪಿಸುವ ರಾಜಕೀಯ ಮೆಸ್ಸೀಯ (ಉದ್ಧಾರಕ) ಬರುವನೆಂದು ಯೆಹೂದ್ಯರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಯೆರೂಸಲೇಮಿನ ಮೇಲೆ ದೊಡ್ಡ ಆಪತ್ತು ಬರಲಿದೆಯೆಂದು ಕ್ರಿ.ಶ. 33​ರಲ್ಲಿ ಯೇಸು ಕ್ರಿಸ್ತನು ಘೋಷಿಸಿದನು.

ಯೇಸು ಹೀಗಂದನು: “ನಿನ್ನ ವೈರಿಗಳು ನಿನ್ನ ಸುತ್ತಲೂ ಚೂಪಾದ ಕಂಬಗಳ ಕೋಟೆಯನ್ನು ಕಟ್ಟುವ ಮತ್ತು ನಿನಗೆ ಮುತ್ತಿಗೆಹಾಕಿ ಎಲ್ಲ ಕಡೆಗಳಿಂದ ನಿನ್ನನ್ನು ಪೀಡಿಸುವ ದಿನಗಳು ಬರುವವು. ಅವರು ನಿನ್ನನ್ನೂ ನಿನ್ನಲ್ಲಿರುವ ನಿನ್ನ ಮಕ್ಕಳನ್ನೂ ನೆಲಕ್ಕೆ ಅಪ್ಪಳಿಸುವರು ಮತ್ತು ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದಂತೆ ಮಾಡುವರು.ಲೂಕ 19:43, 44.

ಯೇಸುವಿನ ಆ ಮಾತುಗಳನ್ನು ಕೇಳಿ ಶಿಷ್ಯರು ತಬ್ಬಿಬ್ಬಾಗಿರಬಹುದು. ಎರಡು ದಿನಗಳ ನಂತರ ಯೆರೂಸಲೇಮಿನ ಆಲಯವನ್ನು ನೋಡುತ್ತಾ ಅವರಲ್ಲೊಬ್ಬನು, “ಬೋಧಕನೇ ನೋಡು! ಎಂತಹ ಕಲ್ಲುಗಳು! ಎಂತಹ ಕಟ್ಟಡಗಳು!” ಎಂದು ಉದ್ಗರಿಸಿದನು. ಆ ಆಲಯದ ಕೆಲವು ಕಲ್ಲುಗಳು 36 ಅಡಿ ಉದ್ದ, 16 ಅಡಿ ಅಗಲ, 10 ಅಡಿ ಎತ್ತರವಾಗಿದ್ದವು! ಆದರೆ ಯೇಸು ಅವರಿಗೆ ಈ ಉತ್ತರ ಕೊಟ್ಟನು: “ನೀವು ನೋಡುತ್ತಿರುವ ಇವೆಲ್ಲವೂ ಕೆಡವಲ್ಪಟ್ಟು ಕಲ್ಲಿನ ಮೇಲೆ ಕಲ್ಲು ಉಳಿಯದ ದಿನಗಳು ಬರುವವು.”ಮಾರ್ಕ 13:1; ಲೂಕ 21:6.

ಯೇಸು ಮುಂದುವರಿಸಿ ಹೇಳಿದ್ದು: “ಯೆರೂಸಲೇಮ್‌ ಪಟ್ಟಣವು ಶಿಬಿರ ಹೂಡಿರುವ ಸೈನ್ಯಗಳಿಂದ ಸುತ್ತುವರಿಯಲ್ಪಟ್ಟಿರುವುದನ್ನು ನೀವು ನೋಡುವಾಗ ಅದರ ಹಾಳುಗೆಡಹುವಿಕೆ ಸಮೀಪಿಸಿದೆ ಎಂದು ತಿಳಿದುಕೊಳ್ಳಿರಿ. ಆಗ ಯೂದಾಯ ದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗತೊಡಗಲಿ, ಯೆರೂಸಲೇಮ್‌ ಪಟ್ಟಣದೊಳಗಿರುವವರು ಅಲ್ಲಿಂದ ಹೊರಟುಹೋಗಲಿ ಮತ್ತು ಹಳ್ಳಿ ಪ್ರದೇಶಗಳಲ್ಲಿರುವ ವರು ಅದರೊಳಗೆ ಪ್ರವೇಶಿಸದಿರಲಿ.” (ಲೂಕ 21:20, 21) ಯೇಸು ಹೇಳಿದ ಈ ಮಾತುಗಳು ನಿಜವಾದವಾ?

ಒಂದು ನಗರದ ಅಳಿವು

ಯೇಸು ಈ ಮಾತು ಹೇಳಿ 33 ವರ್ಷ ಕಳೆದವು. ಯೂದಾಯವು ಇನ್ನೂ ರೋಮನ್‌ ಆಳ್ವಿಕೆಯನ್ನು ಹಗೆಮಾಡುತ್ತಿತ್ತು. ಆದರೆ ಯೂದಾಯಕ್ಕೆ ನೇಮಿಸಲ್ಪಟ್ಟಿದ್ದ ರೋಮನ್‌ ದಂಡಾಧಿಕಾರಿ ಗೆಸ್ಯಸ್‌ ಫ್ಲೊರಸ್‌ ಕ್ರಿ.ಶ. 66​ರಲ್ಲಿ ಆಲಯದ ಪವಿತ್ರ ಬೊಕ್ಕಸದಿಂದ ಹಣ ಕದ್ದಾಗ ಕ್ರೋಧಿತರಾದ ಯೆಹೂದ್ಯರಿಗೆ ಸುಮ್ಮನಿರಲಾಗಲಿಲ್ಲ. ಯೆಹೂದಿ ಹೋರಾಟಗಾರರು ಯೆರೂಸಲೇಮಿಗೆ ನುಗ್ಗಿ, ಅಲ್ಲಿ ನೇಮಿಸಲಾಗಿದ್ದ ರೋಮನ್‌ ರಕ್ಷಕದಳದವರನ್ನೆಲ್ಲ ಹತಿಸಿ, ತಾವು ರೋಮನ್‌ ಆಳ್ವಿಕೆಯಿಂದ ಸ್ವತಂತ್ರರೆಂದು ಘೋಷಿಸಿದರು.

ಈ ಬಂಡಾಯ ಅಡಗಿಸಲು ಸುಮಾರು ಮೂರು ತಿಂಗಳ ನಂತರ 30,000ಕ್ಕೂ ಹೆಚ್ಚು ರೋಮನ್‌ ಸೈನಿಕರು ಸೆಸ್ಟಿಯಸ್‌ ಗ್ಯಾಲಸನ ನೇತೃತ್ವದಲ್ಲಿ ಯೆರೂಸಲೇಮಿನ ಮೇಲೆ ದಾಳಿ ಮಾಡಿದರು. ಅವರು ಆ ನಗರವನ್ನು ಬೇಧಿಸಿ ಒಳಬರಲು ಹೆಚ್ಚು ಸಮಯ ಹಿಡಿಯಲಿಲ್ಲ. ಆಲಯದ ಕ್ಷೇತ್ರದ ಹೊರಗಣ ಗೋಡೆಯನ್ನು ತಳಭಾಗದಿಂದ ಕೊರೆದುಹಾಕಿದರು. ಆದರೆ, ಯಾರಿಗೂ ಗೊತ್ತಿಲ್ಲದ ಒಂದು ಕಾರಣಕ್ಕಾಗಿ ಥಟ್ಟನೆ ಎಲ್ಲವನ್ನು ಬಿಟ್ಟು ಅಲ್ಲಿಂದ ಹೊರಟರು. ಇದನ್ನು ನೋಡಿ ಹರ್ಷಿಸಿದ ಯೆಹೂದಿ ಬಂಡಾಯಗಾರರು ಆ ಸೈನಿಕರನ್ನು ಬೆನ್ನಟ್ಟಿಕೊಂಡು ಹೋದರು. ಹಾಗಾಗಿ ಆ ನಗರದಲ್ಲಿ ಆಗ ರೋಮನ್‌ ಸೈನಿಕರಿರಲಿಲ್ಲ, ಯೆಹೂದಿ ಬಂಡಾಯಗಾರರೂ ಇರಲಿಲ್ಲ. ಕ್ರೈಸ್ತರು ಆಗ ಯೇಸುವಿನ ಎಚ್ಚರಿಕೆ ಪಾಲಿಸಿ ಯೆರೂಸಲೇಮಿನಿಂದ ಯೊರ್ದನ್‌ ನದಿಯಾಚೆಗೆ ಇದ್ದ ಬೆಟ್ಟಗಳಿಗೆ ಓಡಿಹೋದರು.—ಮತ್ತಾಯ 24:15, 16.

ಮುಂದಿನ ವರ್ಷ ರೋಮ್‌ ಸರ್ಕಾರ ಯೂದಾಯದ ವಿರುದ್ಧ ಅದರ ದಂಡಯಾತ್ರೆಯನ್ನು ಪುನಃ ಶುರುಮಾಡಿತು. ಈ ಸಲ ಸೇನಾಪತಿ ವೆಸ್‌ಪೇಶ್ಯನ್‌ ಮತ್ತು ಅವನ ಮಗ ಟೈಟಸ್‌ ನೇತೃತ್ವ ವಹಿಸಿದರು. ಆದರೆ ಚಕ್ರವರ್ತಿ ನೀರೊ ಕ್ರಿ.ಶ. 68​ರಲ್ಲಿ ತೀರಿಹೋದನು. ಹಾಗಾಗಿ, ವೆಸ್‌ಪೇಶ್ಯನ್‌ ಯೂದಾಯದ ದಂಡಯಾತ್ರೆಯನ್ನು ತನ್ನ ಮಗ ಟೈಟಸ್‌ ಮತ್ತು 60,000 ಸೈನಿಕರಿಗೆ ಒಪ್ಪಿಸಿ ಚಕ್ರವರ್ತಿಯಾಗಲು ರೋಮ್‌ಗೆ ಹಿಂದಿರುಗಿದನು.

ಕ್ರಿ.ಶ. 70​ರ ಜೂನ್‌ ತಿಂಗಳಿನಲ್ಲಿ ಟೈಟಸನು ತನ್ನ ಸೈನಿಕರಿಗೆ ಯೂದಾಯದ ಗ್ರಾಮಾಂತರ ಪ್ರದೇಶದಲ್ಲಿದ್ದ ಮರಗಳನ್ನು ಕಡಿದುಹಾಕಲು ಅಪ್ಪಣೆಕೊಟ್ಟನು. ಇವುಗಳನ್ನು ಬಳಸಿ ಅವರು ಯೆರೂಸಲೇಮಿನ ಸುತ್ತ ಚೂಪಾದ ಕಂಬಗಳ 7 ಕಿ.ಮೀ. ಉದ್ದದ ಗೋಡೆ ಕಟ್ಟಿದರು. ಸುಮಾರು ಮೂರು ತಿಂಗಳ ನಂತರ ರೋಮನ್‌ ಸೈನಿಕರು ಆ ನಗರ ಮತ್ತು ಅದರಲ್ಲಿದ್ದ ಆಲಯವನ್ನು ಕೊಳ್ಳೆಹೊಡೆದು ಸುಟ್ಟುಹಾಕಿದರು. ಮಾತ್ರವಲ್ಲ ಅವುಗಳನ್ನು ಕೆಡವಿ ಒಂದೊಂದು ಕಲ್ಲನ್ನೂ ಉರುಳಿಸಿಹಾಕಿದರು. ಇದು ಯೇಸು ಮುಂಚೆಯೇ ತಿಳಿಸಿದಂತೆ ಆಯಿತು. (ಲೂಕ 19:43, 44) ತುಂಬ ಜಾಗ್ರತೆಯಿಂದ ಮಾಡಲಾದ ಒಂದು ಅಂದಾಜಿಗನುಸಾರ, “ಯೆರೂಸಲೇಮ್‌ ಮತ್ತು ಆ ಪ್ರದೇಶದ ಉಳಿದ ಭಾಗದಲ್ಲಿ ಕಾಲು ಮಿಲಿಯದಿಂದ ಅರ್ಧ ಮಿಲಿಯದಷ್ಟು ಜನರು ನಾಶವಾದರು” ಅಂದರೆ ಸತ್ತುಹೋದವರ ಸಂಖ್ಯೆ 2.5 ಲಕ್ಷದಿಂದ 5 ಲಕ್ಷದಷ್ಟಿತ್ತು.

ಚಕ್ರಾಧಿಪತ್ಯದ ವಿಜಯ

ಕ್ರಿ.ಶ. 71​ರಲ್ಲಿ ಆ ದಂಡಯಾತ್ರೆ ಮುಗಿಸಿ ಇಟಲಿಗೆ ಹಿಂದಿರುಗಿದ ಟೈಟಸನಿಗೆ ರೋಮಿನ ಪ್ರಜೆಗಳು ಅಮೋಘ ಸ್ವಾಗತ ಕೊಟ್ಟರು. ಅಲ್ಲಿವರೆಗೆ ಆ ರಾಜಧಾನಿಯಲ್ಲಿ ನಡೆದ ವಿಜಯೋತ್ಸವ ಮೆರವಣಿಗೆಗಳಲ್ಲಿ ಇದೇ ಅತಿ ದೊಡ್ಡದ್ದಾಗಿತ್ತು. ಈ ಆಚರಣೆಗಾಗಿ ಇಡೀ ನಗರವೇ ಸೇರಿಬಂದಿತ್ತು.

ಆ ಮೆರವಣಿಗೆಯಲ್ಲಿ ರೋಮಿನ ಬೀದಿಗಳಲ್ಲೆಲ್ಲ ಧನಐಶ್ವರ್ಯದ ಭಾರೀ ಪ್ರದರ್ಶನವಿತ್ತು. ಜನಸಮೂಹಗಳು ಬೆರಗಿನಿಂದ ಕಣ್‌ಕಣ್‌ ಬಿಟ್ಟು ನೋಡುತ್ತಾ ಇದ್ದವು. ಈ ಮೆರವಣಿಗೆಯಲ್ಲಿದ್ದ ಯುದ್ಧ ದೃಶ್ಯಗಳ ದೊಡ್ಡದೊಡ್ಡ ಸ್ತಬ್ಧಚಿತ್ರಗಳು, ವಶಪಡಿಸಿ ತರಲಾಗಿದ್ದ ನೌಕೆಗಳು ಮತ್ತು ಯೆರೂಸಲೇಮಿನ ಆಲಯದಿಂದ ಕೊಳ್ಳೆಹೊಡೆಯಲಾಗಿದ್ದ ವಸ್ತುಗಳು ಜನರ ಕಣ್ಣಿಗೆ ಹಬ್ಬದಂತಿದ್ದವು.

ಟೈಟಸನು ತನ್ನ ತಂದೆ ವೆಸ್‌ಪೇಶ್ಯನ್‌ನ ನಂತರ ಕ್ರಿ.ಶ. 79​ರಲ್ಲಿ ಚಕ್ರವರ್ತಿಯಾದನು. ಆದರೆ ಎರಡೇ ವರ್ಷಗಳ ನಂತರ ಅನಿರೀಕ್ಷಿತವಾಗಿ ಸಾವನ್ನಪ್ಪಿದನು. ಅವನ ಸಹೋದರ ಡೊಮಿಶನ್‌ ಪಟ್ಟಕ್ಕೇರಿ ಸ್ವಲ್ಪದರಲ್ಲೇ ಟೈಟಸನ ಗೌರವಾರ್ಥ ವಿಜಯೋತ್ಸಾಹದ ಒಂದು ಕಮಾನನ್ನು ಕಟ್ಟಿಸಿದನು.

ಇಂದು ಆ ಕಮಾನು

ಇಂದು ರೋಮ್‌ನಲ್ಲಿರುವ ‘ಆರ್ಚ್‌ ಆಫ್‌ ಟೈಟಸ್‌’

ರೋಮ್‌ ನಗರವನ್ನು ಪ್ರತಿ ವರ್ಷ ಸಂದರ್ಶಿಸುವ ಸಾವಿರಾರು ಮಂದಿ ಈ ‘ಆರ್ಚ್‌ ಆಫ್‌ ಟೈಟಸ್‌’ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕೆಲವರು ಇದನ್ನು ಭವ್ಯ ಕಲಾಕೃತಿ ಎಂದು ಮೆಚ್ಚುತ್ತಾರೆ. ಇನ್ನು ಕೆಲವರು ಇದನ್ನು ರೋಮನ್‌ ಚಕ್ರಾಧಿಪತ್ಯಕ್ಕೆ ಸಲ್ಲಿಸಲಾಗಿರುವ ಗೌರವ ಎಂದೆಣಿಸುತ್ತಾರೆ. ಮತ್ತಿತರರು ಇದನ್ನು ಪತನವಾದ ಯೆರೂಸಲೇಮ್‌ ಮತ್ತು ಅದರ ಆಲಯದ ‘ಸಮಾಧಿಲೇಖವಾಗಿ’ ನೋಡುತ್ತಾರೆ.

ಬೈಬಲನ್ನು ಶ್ರದ್ಧೆಯಿಂದ ಓದುವವರಂತೂ ಈ ‘ಆರ್ಚ್‌ ಆಫ್‌ ಟೈಟಸ್‌’ ಅನ್ನು ಇನ್ನೂ ಹೆಚ್ಚು ಮಹತ್ವವುಳ್ಳದ್ದಾಗಿ ಎಣಿಸುತ್ತಾರೆ. ಅದು, ಬೈಬಲಿನಲ್ಲಿರುವ ಭವಿಷ್ಯನುಡಿಗಳು ವಿಶ್ವಾಸಾರ್ಹ, ನಿಖರ ಮತ್ತು ದೇವರಿಂದ ಪ್ರೇರಿತ ಎಂದು ದೃಢೀಕರಿಸುವ ಮೌನ ಸಾಕ್ಷಿಯಾಗಿದೆ. —2 ಪೇತ್ರ 1:19-21.