ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಎಲ್ಲ ಕಷ್ಟಗಳನ್ನು ಬೇಗನೆ ಕೊನೆಗೊಳಿಸಲಿದ್ದಾನೆ!

ದೇವರು ಎಲ್ಲ ಕಷ್ಟಗಳನ್ನು ಬೇಗನೆ ಕೊನೆಗೊಳಿಸಲಿದ್ದಾನೆ!

“ಯೆಹೋವನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ? ಹಿಂಸೆ ಹಿಂಸೆ ಎಂದು ನಿನ್ನನ್ನು ಕೂಗಿಕೊಂಡರೂ ರಕ್ಷಿಸದೆ ಇರುವಿ”? (ಹಬಕ್ಕೂಕ 1:2, 3) ಈ ಮಾತುಗಳನ್ನು ಹೇಳಿದವನು ಹಬಕ್ಕೂಕನು. ಇವನೊಬ್ಬ ಒಳ್ಳೇ ವ್ಯಕ್ತಿಯಾಗಿದ್ದ. ದೇವರ ಕೃಪೆ ಅವನ ಮೇಲಿತ್ತು. ಆದರೆ ಅವನ ಆ ಮಾತುಗಳು ದೇವರಲ್ಲಿ ಅವನಿಗೆ ನಂಬಿಕೆ ಕಡಿಮೆಯಾಗಿತ್ತೆಂದು ಸೂಚಿಸಿದವಾ? ಖಂಡಿತ ಇಲ್ಲ. ಕಷ್ಟಗಳಿಗೆ ಕೊನೆ ತರಲು ತನ್ನ ಒಂದು ನೇಮಿತ ಸಮಯ ಇದೆಯೆಂದು ದೇವರು ಹಬಕ್ಕೂಕನಿಗೆ ಆಶ್ವಾಸನೆ ಕೊಟ್ಟನು.—ಹಬಕ್ಕೂಕ 2:2, 3.

ನೀವು ಅಥವಾ ನಿಮ್ಮ ಆತ್ಮೀಯರೊಬ್ಬರು ಕಷ್ಟದಲ್ಲಿರುವಾಗ, ದೇವರು ತುಂಬ ತಡಮಾಡುತ್ತಿದ್ದಾನೆ, ಇಷ್ಟರೊಳಗೆ ಏನಾದರೂ ಕ್ರಮ ಕೈಗೊಳ್ಳಬೇಕಿತ್ತೆಂದು ಅನಿಸಬಹುದು. ಆದರೆ ಬೈಬಲ್‌ ನಮಗೆ ಹೀಗೆ ಧೈರ್ಯತುಂಬಿಸುತ್ತದೆ: “ಕೆಲವರು ನೆನಸುವ ಪ್ರಕಾರ ತನ್ನ ವಾಗ್ದಾನದ ವಿಷಯದಲ್ಲಿ ಯೆಹೋವನು ತಡಮಾಡುವವನಲ್ಲ, ಬದಲಾಗಿ ಯಾವನಾದರೂ ನಾಶವಾಗುವುದನ್ನು ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪವನ್ನು ಹೊಂದುವುದನ್ನು ಬಯಸುವಾತನಾಗಿರುವುದರಿಂದ ನಿಮ್ಮ ವಿಷಯದಲ್ಲಿ ತಾಳ್ಮೆಯಿಂದಿದ್ದಾನೆ.”—2 ಪೇತ್ರ 3:9.

ದೇವರು ಯಾವಾಗ ಕ್ರಮ ಕೈಗೊಳ್ಳುವನು?

ತುಂಬ ಬೇಗ ಕೈಗೊಳ್ಳಲಿದ್ದಾನೆ! “ವಿಷಯಗಳ ವ್ಯವಸ್ಥೆಯ” ಅಥವಾ ಈ ಲೋಕದ ಕಡೇ ದಿವಸಗಳನ್ನು ಗುರುತಿಸುವಂಥ ವಿಭಿನ್ನ ಪರಿಸ್ಥಿತಿಗಳನ್ನು ಒಂದು ನಿರ್ದಿಷ್ಟ ಸಂತತಿಯವರು ನೋಡಲಿದ್ದಾರೆಂದು ಯೇಸು ಪ್ರಕಟಿಸಿದ್ದನು. (ಮತ್ತಾಯ 24:3-42) ಆತನ ಆ ಪ್ರವಾದನೆ ನಮ್ಮ ದಿನದಲ್ಲಿ ನೆರವೇರುತ್ತಿದೆ. ಹಾಗಾಗಿ ಮಾನವ ವ್ಯವಹಾರಗಳಲ್ಲಿ ದೇವರು ಮಧ್ಯಪ್ರವೇಶಿಸುವ ಸಮಯ ತುಂಬ ಹತ್ತಿರವಿದೆಯೆಂದು ಗೊತ್ತಾಗುತ್ತದೆ. *

ಆದರೆ ದೇವರು ಎಲ್ಲ ಕಷ್ಟಗಳನ್ನು ಹೇಗೆ ಕೊನೆಗೊಳಿಸುವನು? ಯೇಸು ಈ ಭೂಮಿಯಲ್ಲಿದ್ದಾಗ ಮಾನವರ ಕಷ್ಟಗಳನ್ನು ತೆಗೆದುಹಾಕಲು ದೇವರಿಗಿರುವ ಶಕ್ತಿಯನ್ನು ತೋರಿಸಿದನು. ಇದಕ್ಕೆ ಕೆಲವು ಉದಾಹರಣೆಗಳನ್ನು ನೋಡಿ:

ನೈಸರ್ಗಿಕ ವಿಪತ್ತುಗಳು: ಯೇಸು ಮತ್ತು ಅವನ ಅಪೊಸ್ತಲರು ಗಲಿಲಾಯ ಸಮುದ್ರದಲ್ಲಿ ದೋಣಿಯಲ್ಲಿ ಹೋಗುತ್ತಿದ್ದಾಗ ಭಯಂಕರವಾದ ಬಿರುಗಾಳಿಯಿಂದಾಗಿ ಅವರ ದೋಣಿ ಮುಳುಗಿಹೋಗುವ ಅಪಾಯದಲ್ಲಿತ್ತು. ಆಗ ಯೇಸು ತನಗೂ ತನ್ನ ತಂದೆಯಾದ ದೇವರಿಗೂ ನೈಸರ್ಗಿಕ ಶಕ್ತಿಗಳ ಮೇಲೆ ನಿಯಂತ್ರಣವಿದೆ ಎಂದು ತೋರಿಸಿದನು. (ಕೊಲೊಸ್ಸೆ 1:15, 16) ಯೇಸು “ಷ್‌! ಸುಮ್ಮನಿರು!” ಎಂದು ಹೇಳಿದನು ಅಷ್ಟೇ. ಪರಿಣಾಮ? “ಬಿರುಗಾಳಿಯು ನಿಂತು ಎಲ್ಲವೂ ಶಾಂತವಾಯಿತು.”—ಮಾರ್ಕ 4:35-39.

ಕಾಯಿಲೆಗಳು: ಯೇಸುವಿಗೆ ಕುರುಡರನ್ನು, ಕುಂಟರನ್ನು ಹಾಗೂ ಮೂರ್ಛೆರೋಗ, ಕುಷ್ಠರೋಗ ಮತ್ತು ಬೇರಾವುದೇ ಕಾಯಿಲೆ ಇರುವವರನ್ನು ವಾಸಿಮಾಡುವ ಶಕ್ತಿ ಇತ್ತೆಂದು ಎಲ್ಲರಿಗೆ ತಿಳಿದಿತ್ತು. ಆತನು “ಅಸ್ವಸ್ಥರಾಗಿದ್ದ ಎಲ್ಲರನ್ನೂ ವಾಸಿಮಾಡಿದನು.”—ಮತ್ತಾಯ 4:23, 24; 8:16; 11:2-5.

ಆಹಾರದ ಕೊರತೆ: ಸ್ವಲ್ಪವೇ ಇದ್ದ ಆಹಾರವನ್ನು ಹೆಚ್ಚಿಸಲು ಯೇಸು ತನ್ನ ತಂದೆ ಕೊಟ್ಟ ಶಕ್ತಿಯನ್ನು ಬಳಸಿದನು. ಅವನು ಭೂಮಿಯಲ್ಲಿದ್ದಾಗ ಎರಡು ಸಲ ಸಾವಿರಾರು ಜನರಿಗೆ ಆಹಾರ ಕೊಟ್ಟನೆಂದು ದಾಖಲಾಗಿದೆ.—ಮತ್ತಾಯ 14:14-21; 15:32-38.

ಮರಣ: ಯೆಹೋವನಿಗೆ ಮರಣದ ಮೇಲೆಯೂ ಶಕ್ತಿಯಿದೆಯೆಂದು, ಯೇಸು ನಡೆಸಿದ ಪುನರುತ್ಥಾನಗಳಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ಇವುಗಳಲ್ಲಿ ಮೂರನ್ನು ಬೈಬಲಿನಲ್ಲಿ ದಾಖಲಿಸಲಾಗಿದೆ. ಇವರಲ್ಲಿ ಒಬ್ಬ ವ್ಯಕ್ತಿಯನ್ನಂತೂ ಸತ್ತು ನಾಲ್ಕು ದಿನಗಳಾದ ಮೇಲೆ ಯೇಸು ಜೀವಂತಗೊಳಿಸಿದ್ದನು.—ಮಾರ್ಕ 5:35-42; ಲೂಕ 7:11-16; ಯೋಹಾನ 11:3-44.

^ ಪ್ಯಾರ. 5 ಕಡೇ ದಿವಸಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ 32ನೇ ಪಾಠ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. www.pr418.comನಲ್ಲಿ ಇದನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.