ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೋಹ, ದಾನಿಯೇಲ, ಯೋಬನಂತೆ ನೀವೂ ಯೆಹೋವನನ್ನು ತಿಳಿದುಕೊಂಡಿದ್ದೀರಾ?

ನೋಹ, ದಾನಿಯೇಲ, ಯೋಬನಂತೆ ನೀವೂ ಯೆಹೋವನನ್ನು ತಿಳಿದುಕೊಂಡಿದ್ದೀರಾ?

“ಕೆಡುಕರು ನ್ಯಾಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ಆದರೆ ಯೆಹೋವನನ್ನು ಹುಡುಕುವ ಜನರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ.”—ಜ್ಞಾನೋ. 28:5, ನೂತನ ಲೋಕ ಭಾಷಾಂತರ.

ಗೀತೆಗಳು: 43, 133

1-3. (ಎ) ಈ ಕಡೇ ದಿವಸಗಳಲ್ಲಿ ದೇವರಿಗೆ ನಂಬಿಗಸ್ತರಾಗಿರಲು ಯಾವುದು ನಮಗೆ ಸಹಾಯ ಮಾಡುತ್ತದೆ? (ಬಿ) ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?

ನಾವಿಂದು ಕಡೇ ದಿವಸಗಳ ಕೊನೇ ಗಳಿಗೆಯಲ್ಲಿ ಜೀವಿಸುತ್ತಿದ್ದೇವೆ. ಎಲ್ಲಿ ನೋಡಿದರೂ ದುಷ್ಟ ಜನರೇ ಇದ್ದಾರೆ. ಅವರು ಎಲ್ಲ ಕಡೆ ‘ಹುಲ್ಲಿನಂತೆ ಬೆಳೆದಿದ್ದಾರೆ.’ (ಕೀರ್ತ. 92:7) ಹಾಗಾಗಿ ದೇವರು ಯಾವುದನ್ನು ಸರಿ ಅನ್ನುತ್ತಾನೋ ಅದನ್ನು ಹೆಚ್ಚಿನವರು ತಿರಸ್ಕರಿಸುವುದನ್ನು ನೋಡಿ ನಮಗೆ ಆಶ್ಚರ್ಯವಾಗುವುದಿಲ್ಲ. ಇಂಥ ಸನ್ನಿವೇಶದಲ್ಲಿ ನಾವೇನು ಮಾಡಬೇಕೆಂದು ಪೌಲನು ಹೇಳಿದ್ದಾನೆ: ‘ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿರಿ. ಆದರೆ ತಿಳಿವಳಿಕೆಯ ಸಾಮರ್ಥ್ಯದಲ್ಲಿ ಪೂರ್ಣ ಬೆಳೆದವರಾಗಿರಿ.’ (1 ಕೊರಿಂ. 14:20) ನಾವು ಈ ಸಾಮರ್ಥ್ಯವನ್ನು ಹೇಗೆ ಬೆಳೆಸಿಕೊಳ್ಳಬಹುದು?

2 ಇದಕ್ಕೆ ಉತ್ತರ ಲೇಖನದ ಮುಖ್ಯ ವಚನದಲ್ಲಿದೆ. ಅದು ಹೇಳುವುದು: “ಯೆಹೋವನನ್ನು ಹುಡುಕುವ ಜನರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ.” (ಜ್ಞಾನೋ. 28:5) ಅಂದರೆ ಏನು ಮಾಡಿದರೆ ಯೆಹೋವನಿಗೆ ಸಂತೋಷವಾಗುತ್ತದೆ ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ. ಸರಿಯಾದದ್ದನ್ನು ಮಾಡುವವರಿಗೆ ಯೆಹೋವನು ವಿವೇಕವನ್ನೂ ಕೊಡುತ್ತಾನೆಂದು ಜ್ಞಾನೋಕ್ತಿ 2:7, 9 ತಿಳಿಸುತ್ತದೆ. ಈ ದೈವಿಕ ವಿವೇಕದಿಂದ ಅವರು ‘ನೀತಿನ್ಯಾಯಗಳನ್ನೂ ಧರ್ಮವನ್ನೂ ಅಂದರೆ ಸಕಲ ಸನ್ಮಾರ್ಗವನ್ನು ತಿಳಿದುಕೊಳ್ಳುವರು.’

3 ನೋಹ, ದಾನಿಯೇಲ ಮತ್ತು ಯೋಬನಲ್ಲಿ ಈ ದೈವಿಕ ವಿವೇಕವಿತ್ತು. (ಯೆಹೆ. 14:14) ಇಂದಿರುವ ಯೆಹೋವನ ಜನರಲ್ಲೂ ಇದೆ. ನಿಮ್ಮ ಬಗ್ಗೆ ಏನು? ಈ ದೈವಿಕ ವಿವೇಕ ನಿಮ್ಮಲ್ಲೂ ಇದೆಯಾ? ಯೆಹೋವನನ್ನು ಮೆಚ್ಚಿಸಲು ಏನು ಮಾಡಬೇಕೆಂಬುದರ ಬಗ್ಗೆ ನೀವು ‘ಎಲ್ಲವನ್ನೂ ಅರ್ಥಮಾಡಿಕೊಳ್ಳಬೇಕಾದರೆ’ ಯೆಹೋವನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ಇದಕ್ಕಾಗಿ ಈ ಪ್ರಶ್ನೆಗಳನ್ನು ಪರಿಗಣಿಸೋಣ: (1) ನೋಹ, ದಾನಿಯೇಲ ಮತ್ತು ಯೋಬ ದೇವರ ಬಗ್ಗೆ ಹೇಗೆ ತಿಳಿದುಕೊಂಡರು? (2) ದೇವರ ಬಗ್ಗೆ ತಿಳಿದುಕೊಂಡಿದ್ದರಿಂದ ಅವರಿಗೆ ಯಾವ ಪ್ರಯೋಜನ ಸಿಕ್ಕಿತು? (3) ಅವರ ನಂಬಿಕೆಯನ್ನು ನಾವು ಹೇಗೆ ಅನುಕರಿಸಬಹುದು?

ದುಷ್ಟರ ಮಧ್ಯೆಯೂ ದೇವರೊಂದಿಗೆ ನಡೆದ ನೋಹ!

4. (ಎ) ನೋಹ ಯೆಹೋವನ ಬಗ್ಗೆ ಹೇಗೆ ತಿಳಿದುಕೊಂಡನು? (ಬಿ) ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರಿಂದ ಅವನಿಗೆ ಹೇಗೆ ಸಹಾಯವಾಯಿತು?

4 ನೋಹನು ಯೆಹೋವನ ಬಗ್ಗೆ ಹೇಗೆ ತಿಳಿದುಕೊಂಡನು? ಮಾನವ ಇತಿಹಾಸದ ಆರಂಭದಿಂದ ನಂಬಿಗಸ್ತ ಸ್ತ್ರೀ-ಪುರುಷರು ಯೆಹೋವನ ಬಗ್ಗೆ ಮುಖ್ಯವಾಗಿ ಈ ಮೂರು ವಿಧಗಳಲ್ಲಿ ಕಲಿತುಕೊಂಡಿದ್ದಾರೆ. ಅವರು ಸೃಷ್ಟಿಯನ್ನು ಗಮನಿಸಿದರು, ಬೇರೆ ನಂಬಿಗಸ್ತ ಸೇವಕರಿಂದ ದೇವರ ಬಗ್ಗೆ ಕೇಳಿಸಿಕೊಂಡರು, ದೇವರ ನೀತಿಯ ಮಟ್ಟಗಳಿಗೆ ಅನುಸಾರ ಜೀವಿಸುವಾಗ ಸಿಕ್ಕಿದ ಆಶೀರ್ವಾದಗಳಿಂದಲೂ ಆತನ ಬಗ್ಗೆ ತಿಳಿದುಕೊಂಡರು. (ಯೆಶಾ. 48:18) ನೋಹನು ಸಹ ಸೃಷ್ಟಿಯನ್ನು ಗಮನಿಸಿ ಯೆಹೋವನ ಅಸ್ತಿತ್ವದ ಬಗ್ಗೆ ಮತ್ತು ಆತನ ಗುಣಗಳ ಬಗ್ಗೆ ತಿಳಿದುಕೊಂಡಿರಬಹುದು. ಈ ರೀತಿ ತಿಳಿದುಕೊಂಡಿದ್ದರಿಂದ ಯೆಹೋವನು ಶಕ್ತಿಶಾಲಿ ಮತ್ತು ಆತನೊಬ್ಬನೇ ಸತ್ಯ ದೇವರೆಂದು ಅವನು ಅರ್ಥಮಾಡಿಕೊಂಡನು. (ರೋಮ. 1:20) ಹೀಗೆ ನೋಹ, ದೇವರು ಅಂತ ಒಬ್ಬನಿದ್ದಾನೆ ಎಂದು ನಂಬಿದ್ದಷ್ಟೇ ಅಲ್ಲ ಆತನಲ್ಲಿ ಬಲವಾದ ನಂಬಿಕೆಯನ್ನೂ ಬೆಳೆಸಿಕೊಂಡನು.

5. ಮನುಷ್ಯರ ವಿಷಯದಲ್ಲಿ ದೇವರ ಉದ್ದೇಶ ಏನಾಗಿತ್ತೆಂದು ನೋಹ ಹೇಗೆ ಕಲಿತನು?

5 “ಕೇಳಿಸಿಕೊಂಡ ವಿಷಯದಿಂದ ನಂಬಿಕೆ ಬರುತ್ತದೆ” ಎಂದು ಬೈಬಲ್‌ ಹೇಳುತ್ತದೆ. (ರೋಮ. 10:17) ನೋಹ ತನ್ನ ಸಂಬಂಧಿಕರಿಂದ ಯೆಹೋವನ ಬಗ್ಗೆ ಕೇಳಿಸಿಕೊಂಡಿರಬಹುದು. ಅವನ ತಂದೆ ಲೆಮೆಕನಿಗೆ ದೇವರಲ್ಲಿ ನಂಬಿಕೆ ಇತ್ತು. ಲೆಮೆಕನು ಆದಾಮ ಸಾಯುವುದಕ್ಕೆ ಮುಂಚೆಯೇ ಹುಟ್ಟಿದ್ದನು. (ಲೇಖನದ ಆರಂಭದ ಚಿತ್ರ ನೋಡಿ.) ಅಷ್ಟೇ ಅಲ್ಲದೇ ನೋಹನ ಅಜ್ಜನಾದ ಮೆತೂಷಾಯೇಲ ಮತ್ತು ಮೆತೂಷಾಯೇಲನ ಅಜ್ಜನಾದ ಯೆರೆದನಿಂದ ಸಹ ಕಲಿತಿರಬಹುದು. ಯೆರೆದನು ನೋಹ ಹುಟ್ಟಿ 366 ವರ್ಷ ಬದುಕಿದ್ದನು. * (ಲೂಕ 3:36, 37) ಇವರೆಲ್ಲರೂ ಮತ್ತು ಇವರ ಹೆಂಡತಿಯರು ಯೆಹೋವನೇ ಮಾನವರನ್ನು ಸೃಷ್ಟಿಸಿದ್ದು ಎಂದು ಕಲಿಸಿರಬೇಕು. ಅಷ್ಟೇ ಅಲ್ಲ, ಮಾನವರು ಮಕ್ಕಳನ್ನು ಪಡೆದು ಭೂಮಿಯನ್ನು ತುಂಬಿಕೊಳ್ಳಬೇಕು ಮತ್ತು ಆತನನ್ನು ಆರಾಧಿಸಬೇಕೆಂದು ಬಯಸುತ್ತಾನೆ ಎಂದವರು ನೋಹನಿಗೆ ಕಲಿಸಿರಬೇಕು. ಆದಾಮ-ಹವ್ವ ಯೆಹೋವನಿಗೆ ಅವಿಧೇಯರಾದರು ಎಂದು ಸಹ ನೋಹ ತಿಳಿದುಕೊಂಡಿರಬೇಕು ಮತ್ತು ಅವರ ಅವಿಧೇಯತೆಯ ಕೆಟ್ಟ ಪರಿಣಾಮಗಳನ್ನು ಅವನು ಕಣ್ಣಾರೆ ಕಂಡನು. (ಆದಿ. 1:28; 3:16-19, 24) ನೋಹನಿಗೆ ತಾನು ಕಲಿಯುತ್ತಿದ್ದ ವಿಷಯಗಳು ಇಷ್ಟವಾಯಿತು, ಅದು ಯೆಹೋವನನ್ನು ಆರಾಧಿಸುವಂತೆ ಅವನನ್ನು ಪ್ರಚೋದಿಸಿತು.—ಆದಿ. 6:9.

6, 7. ನಿರೀಕ್ಷೆ ನೋಹನ ನಂಬಿಕೆಯನ್ನು ಹೇಗೆ ಬಲಪಡಿಸಿತು?

6 ನಿರೀಕ್ಷೆ ನಂಬಿಕೆಯನ್ನು ಬಲಪಡಿಸುತ್ತದೆ. ತನ್ನ ಹೆಸರಿನ ಅರ್ಥದಲ್ಲಿ ನಿರೀಕ್ಷೆಯೂ ಸೇರಿದೆ ಎಂದು ನೋಹನಿಗೆ ಗೊತ್ತಾದಾಗ ಆತನ ನಂಬಿಕೆ ಎಷ್ಟು ಬಲವಾಗಿರಬೇಕು ಯೋಚಿಸಿ. ನೋಹ ಎಂಬ ಹೆಸರಿನ ಅರ್ಥ “ವಿಶ್ರಾಂತಿ” ಅಥವಾ “ಸಮಾಧಾನ” ಎಂದಾಗಿತ್ತು. (ಆದಿ. 5:29) ಅದಕ್ಕಾಗಿಯೇ ಲೆಮೆಕನು ದೇವಪ್ರೇರಿತನಾಗಿ ತನ್ನ ಮಗನಾದ ನೋಹನ ಬಗ್ಗೆ ಹೀಗಂದನು: “ಯೆಹೋವನು ಶಪಿಸಿದ ಭೂಮಿಯಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಶ್ರಮೆಯಲ್ಲಿಯೂ ಈ ಮಗನು ನಮ್ಮನ್ನು ಉಪಶಮನಗೊಳಿಸುವನು.” ಆದ್ದರಿಂದ ಯೆಹೋವನು ಎಲ್ಲವನ್ನು ಸರಿಮಾಡುವನೆಂಬ ನಿರೀಕ್ಷೆ ನೋಹನಿಗಿತ್ತು. ವಾಗ್ದತ್ತ “ಸಂತಾನವು” ಸರ್ಪದ ತಲೆಯನ್ನು ಜಜ್ಜುವುದು ಎಂಬ ನಿರೀಕ್ಷೆ ಹೇಬೆಲ ಮತ್ತು ಹನೋಕರಂತೆ ನೋಹನಿಗೂ ಇತ್ತು.—ಆದಿ. 3:15.

7 ಆದಿಕಾಂಡ 3:15​ರಲ್ಲಿರುವ ದೇವರ ವಾಗ್ದಾನ ನೋಹನಿಗೆ ಸಂಪೂರ್ಣವಾಗಿ ಅರ್ಥವಾಗಲಿಲ್ಲ ನಿಜ. ಆದರೆ ಅದು ಭವಿಷ್ಯದ ಬಗ್ಗೆ ನಿರೀಕ್ಷೆಯನ್ನು ಕೊಡುತ್ತದೆ ಎಂದು ಅವನು ಅರ್ಥಮಾಡಿಕೊಂಡನು. ಹನೋಕನು ಸಹ ಆದಿಕಾಂಡ 3:15​ರಲ್ಲಿರುವಂಥದ್ದೇ ಸಂದೇಶವನ್ನು ಸಾರಿದನು. ದುಷ್ಟರನ್ನು ಯೆಹೋವನು ನಾಶಮಾಡುವನೆಂದು ತಿಳಿಸಿದನು. (ಯೂದ 14, 15) ಹನೋಕನ ಈ ಮಾತುಗಳು ಸಂಪೂರ್ಣವಾಗಿ ನೆರವೇರುವುದು ಅರ್ಮಗೆದೋನಿನಲ್ಲೇ. ಆದರೂ ಅವನ ಮಾತುಗಳು ನೋಹನ ನಂಬಿಕೆ ಮತ್ತು ನಿರೀಕ್ಷೆಯನ್ನು ಬಲಪಡಿಸಿರಬೇಕು!

8. ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರಿಂದ ನೋಹನಿಗೆ ಯಾವ ಪ್ರಯೋಜನ ಸಿಕ್ಕಿತು?

8 ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರಿಂದ ನೋಹನಿಗೆ ಯಾವ ಪ್ರಯೋಜನ ಸಿಕ್ಕಿತು? ಅವನು ನಂಬಿಕೆ ಮತ್ತು ದೈವಿಕ ವಿವೇಕವನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು. ಇದರಿಂದ ಅವನು ಯೆಹೋವನಿಗೆ ನೋವು ತರುವಂಥ ವಿಷಯಗಳಿಂದ ದೂರವಿದ್ದನು. ಇದನ್ನು ಹೇಗೆ ಹೇಳಬಹುದು? ನೋಹನು ದೇವರ ಸ್ನೇಹಿತನಾಗಲು ಬಯಸಿದ್ದರಿಂದ ಯೆಹೋವನಲ್ಲಿ ನಂಬಿಕೆ ಇಲ್ಲದ, ಆತನನ್ನು ತಿರಸ್ಕರಿಸುವ ಜನರ ಸ್ನೇಹ ಮಾಡಲಿಲ್ಲ. ನೋಹನ ಸುತ್ತಲಿದ್ದವರು ಭೂಮಿಗೆ ಬಂದಿದ್ದ ದುಷ್ಟ ದೇವದೂತರನ್ನು ನಂಬಿ ಅವರ ಶಕ್ತಿಗೆ ಮರುಳಾಗಿ ಅವರನ್ನು ಆರಾಧಿಸಿರಲೂಬಹುದು. ಆದರೆ ನೋಹ ಆ ದುಷ್ಟ ದೂತರ ಹತ್ತಿರನೂ ಸುಳಿಯಲಿಲ್ಲ. (ಆದಿ. 6:1-4, 9) ಮಕ್ಕಳನ್ನು ಪಡೆದು ಭೂಮಿಯನ್ನು ತುಂಬಿಕೊಳ್ಳಬೇಕು ಎಂದು ಯೆಹೋವನು ಮನುಷ್ಯರಿಗೆ ಹೇಳಿದನು ಎಂದು ಸಹ ನೋಹನಿಗೆ ಚೆನ್ನಾಗಿ ಗೊತ್ತಿತ್ತು. (ಆದಿ. 1:27, 28) ದುಷ್ಟ ದೂತರು ಮಾನವ ಪುತ್ರಿಯರನ್ನು ಮದುವೆ ಮಾಡಿಕೊಂಡು ಮಕ್ಕಳನ್ನು ಪಡೆದದ್ದು ದೊಡ್ಡ ತಪ್ಪು ಎಂದು ನೋಹ ಗ್ರಹಿಸಿದನು. ಅವರಿಗೆ ಹುಟ್ಟಿದ ಮಕ್ಕಳು ದೊಡ್ಡವರಾಗಿ ದೈತ್ಯರಾದಾಗ ಇದು ಇನ್ನಷ್ಟು ಸ್ಪಷ್ಟವಾಯಿತು. ನಂತರ ಯೆಹೋವನು ಎಲ್ಲ ದುಷ್ಟ ಜನರನ್ನು ಜಲಪ್ರಳಯದಿಂದ ನಾಶಮಾಡುವೆನೆಂದು ನೋಹನಿಗೆ ಹೇಳಿದನು. ನೋಹನಿಗೆ ಯೆಹೋವನ ಮಾತಿನ ಮೇಲೆ ನಂಬಿಕೆ ಇದ್ದದರಿಂದ ಅವನು ನಾವೆಯನ್ನು ಕಟ್ಟಿದನು. ಹೀಗೆ ಅವನು ಮತ್ತು ಅವನ ಕುಟುಂಬ ಜಲಪ್ರಳಯದಿಂದ ಪಾರಾಯಿತು.—ಇಬ್ರಿ. 11:7.

9, 10. ನೋಹನಲ್ಲಿ ಇದ್ದಂಥ ನಂಬಿಕೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು?

9 ನೋಹನಲ್ಲಿ ಇದ್ದಂಥ ನಂಬಿಕೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು? ನಾವು ದೇವರ ವಾಕ್ಯವನ್ನು ಚೆನ್ನಾಗಿ ಅಧ್ಯಯನ ಮಾಡಿ ಓದಿದ ವಿಷಯವನ್ನು ಧ್ಯಾನಿಸಬೇಕು. ನಂತರ ಕಲಿತದ್ದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು. (1 ಪೇತ್ರ 1:13-15) ಆಗ ನಂಬಿಕೆ ಮತ್ತು ದೈವಿಕ ವಿವೇಕವು ಸೈತಾನನ ಕುತಂತ್ರಗಳಿಂದ ಮತ್ತು ಈ ಲೋಕದ ದುಷ್ಟ ಪ್ರಭಾವದಿಂದ ನಮ್ಮನ್ನು ಸಂರಕ್ಷಿಸುತ್ತದೆ. (2 ಕೊರಿಂ. 2:11) ಈಗ ಲೋಕದಲ್ಲಿ ಅನೇಕರು ಹಿಂಸೆ ಮತ್ತು ಅನೈತಿಕತೆಯನ್ನು ಪ್ರೀತಿಸುತ್ತಾರೆ, ತಮಗೆ ಇಷ್ಟ ಬಂದಂತೆ ಜೀವಿಸುತ್ತಾರೆ. (1 ಯೋಹಾ. 2:15, 16) ಅವರೆಲ್ಲರೂ ಈ ದುಷ್ಟ ಲೋಕದ ಅಂತ್ಯ ಹತ್ತಿರವಾಗಿದೆ ಎಂಬ ಸತ್ಯವನ್ನು ಅಲಕ್ಷಿಸುತ್ತಾರೆ. ನಮ್ಮಲ್ಲಿ ಬಲವಾದ ನಂಬಿಕೆ ಇಲ್ಲದಿದ್ದರೆ ನಮ್ಮಲ್ಲೂ ಅಂಥ ಮನೋಭಾವ ಬರಬಹುದು. ಒಂದು ವಿಷಯವನ್ನು ನೆನಪಿನಲ್ಲಿಡಿ. ಯೇಸು ನಮ್ಮ ದಿನಗಳನ್ನು ನೋಹನ ದಿನಗಳಿಗೆ ಹೋಲಿಸಿ ಮಾತಾಡಿದಾಗ ಅವನು ಹಿಂಸೆ ಅಥವಾ ಅನೈತಿಕತೆಯ ಬಗ್ಗೆ ಹೇಳಲಿಲ್ಲ. ದೇವರ ಆರಾಧನೆಯಿಂದ ಅಪಕರ್ಷಿತರಾಗುವ ಅಪಾಯದ ಬಗ್ಗೆ ಮಾತಾಡಿದನು.—ಮತ್ತಾಯ 24:36-39 ಓದಿ.

10 ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನಾನು ನಿಜವಾಗಲೂ ಯೆಹೋವನನ್ನು ತಿಳಿದುಕೊಂಡಿದ್ದೇನೆ ಅಂತ ನನ್ನ ಜೀವನ ರೀತಿ ತೋರಿಸುತ್ತಾ? ಯೆಹೋವನು ಯಾವುದನ್ನು ಸರಿ ಅನ್ನುತ್ತಾನೋ ಅದನ್ನು ಮಾಡಲು ಮತ್ತು ಅದರ ಬಗ್ಗೆ ಬೇರೆಯವರಿಗೂ ತಿಳಿಸಲು ನನ್ನ ನಂಬಿಕೆ ನನ್ನನ್ನು ಪ್ರಚೋದಿಸುತ್ತದಾ?’ ಈ ಪ್ರಶ್ನೆಗಳು ನೋಹನಂತೆ ನೀವು ಕೂಡ ದೇವರೊಂದಿಗೆ ನಡೆಯುತ್ತಿದ್ದೀರಾ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ.

ಸುಳ್ಳಾರಾಧನೆಗೆ ಹೆಸರುವಾಸಿಯಾಗಿದ್ದ ಬಾಬೆಲಿನಲ್ಲಿ ದೈವಿಕ ವಿವೇಕ ತೋರಿಸಿದ ದಾನಿಯೇಲ!

11. (ಎ) ಯುವ ದಾನಿಯೇಲನಿಗೆ ದೇವರ ಮೇಲಿದ್ದ ಪ್ರೀತಿಯು ಅವನ ಹೆತ್ತವರ ಬಗ್ಗೆ ನಮಗೆ ಏನನ್ನು ಕಲಿಸುತ್ತದೆ? (ಬಿ) ದಾನಿಯೇಲನ ಯಾವ ಗುಣಗಳನ್ನು ನೀವು ಅನುಕರಿಸಬೇಕೆಂದಿದ್ದೀರಿ?

11 ದಾನಿಯೇಲನು ಯೆಹೋವನ ಬಗ್ಗೆ ಹೇಗೆ ತಿಳಿದುಕೊಂಡನು? ಯೆಹೋವನನ್ನು ಮತ್ತು ಆತನ ವಾಕ್ಯವನ್ನು ಪ್ರೀತಿಸಬೇಕೆಂದು ದಾನಿಯೇಲನಿಗೆ ಅವನ ಹೆತ್ತವರು ಹೇಳಿಕೊಟ್ಟಿರಬೇಕು. ದಾನಿಯೇಲ ತನ್ನ ಉಸಿರು ಇರುವವರೆಗೂ ಇದನ್ನು ಚಾಚೂತಪ್ಪದೆ ಪಾಲಿಸಿದನು. ಎಷ್ಟರ ಮಟ್ಟಿಗೆ ಅಂದರೆ ವೃದ್ಧನಾದಾಗಲೂ ಅವನು ದೇವರ ವಾಕ್ಯವನ್ನು ಶ್ರದ್ಧೆಯಿಂದ ಓದುತ್ತಿದ್ದನು. (ದಾನಿ. 9:1, 2) ಹೀಗೆ ದಾನಿಯೇಲನು ಯೆಹೋವನನ್ನು ತುಂಬಾ ಚೆನ್ನಾಗಿ ತಿಳಿದುಕೊಂಡನು. ಯೆಹೋವನು ಇಸ್ರಾಯೇಲ್ಯರಿಗೋಸ್ಕರ ಏನೆಲ್ಲಾ ಮಾಡಿದನೆಂಬ ವಿಷಯಗಳೂ ದಾನಿಯೇಲನಿಗೆ ಗೊತ್ತಿತ್ತು. ಇದನ್ನು ದಾನಿಯೇಲ 9:3-19​ರಲ್ಲಿ ಅವನು ಮಾಡಿದ ಮನದಾಳದ ಪ್ರಾರ್ಥನೆಯಲ್ಲಿ ಕಾಣಬಹುದು. ಈ ಪ್ರಾರ್ಥನೆಯನ್ನು ಓದಿ ಧ್ಯಾನಿಸಿ. ನಂತರ, ‘ಈ ಪ್ರಾರ್ಥನೆಯಿಂದ ದಾನಿಯೇಲನ ಬಗ್ಗೆ ನಾನು ಏನು ಕಲಿಯಬಹುದು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ.

12-14. (ಎ) ದಾನಿಯೇಲ ದೈವಿಕ ವಿವೇಕವನ್ನು ಹೇಗೆ ತೋರಿಸಿದನು? (ಬಿ) ಧೈರ್ಯ ಮತ್ತು ನಿಷ್ಠೆ ತೋರಿಸಿದ್ದಕ್ಕಾಗಿ ಯೆಹೋವನು ದಾನಿಯೇಲನನ್ನು ಹೇಗೆ ಆಶೀರ್ವದಿಸಿದನು?

12 ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರಿಂದ ದಾನಿಯೇಲನಿಗೆ ಯಾವ ಪ್ರಯೋಜನ ಸಿಕ್ಕಿತು? ಸುಳ್ಳಾರಾಧನೆಗೆ ಪ್ರಸಿದ್ಧವಾಗಿದ್ದ ಬಾಬೆಲಿನಲ್ಲಿ ನಂಬಿಗಸ್ತ ಯೆಹೂದ್ಯನೊಬ್ಬನಿಗೆ ಯೆಹೋವನನ್ನು ಆರಾಧಿಸುವುದು ಅಷ್ಟು ಸುಲಭ ಆಗಿರಲಿಲ್ಲ. ಉದಾಹರಣೆಗೆ ಯೆಹೋವನು ಯೆಹೂದ್ಯರಿಗೆ, “ನಾನು ಯಾವ ಪಟ್ಟಣಕ್ಕೆ ನಿಮ್ಮನ್ನು ಸಾಗಿಸಿದೆನೋ ಅದರ ಕ್ಷೇಮವನ್ನು ಹಾರೈಸಿ” ಎಂದು ಹೇಳಿದನು. (ಯೆರೆ. 29:7) ಅದೇ ಸಮಯದಲ್ಲಿ ತನ್ನನ್ನು ಮಾತ್ರ ಸಂಪೂರ್ಣ ಹೃದಯದಿಂದ ಆರಾಧಿಸಬೇಕು ಎಂಬ ಆಜ್ಞೆಯನ್ನೂ ಕೊಟ್ಟಿದ್ದನು. (ವಿಮೋ. 34:14) ಈ ಎರಡೂ ಆಜ್ಞೆಗಳಿಗೆ ದಾನಿಯೇಲ ಹೇಗೆ ವಿಧೇಯನಾದನು? ದೈವಿಕ ವಿವೇಕ ಅವನಿಗೆ ಸಹಾಯ ಮಾಡಿತು. ಮೊದಲು ಯೆಹೋವನಿಗೆ, ನಂತರ ಮಾನವ ಅಧಿಕಾರಿಗಳಿಗೆ ವಿಧೇಯನಾಗಬೇಕು ಎಂದು ಅವನು ತಿಳಿದುಕೊಂಡನು. ನೂರಾರು ವರ್ಷಗಳ ನಂತರ ಇದೇ ತತ್ವವನ್ನು ಯೇಸು ಕಲಿಸಿದನು.—ಲೂಕ 20:25.

13 ಮೂವತ್ತು ದಿನಗಳ ವರೆಗೆ ರಾಜನನ್ನು ಬಿಟ್ಟು ಬೇರೆ ದೇವರಿಗಾಗಲಿ ಮನುಷ್ಯನಿಗಾಗಲಿ ಪ್ರಾರ್ಥಿಸಬಾರದು ಎಂಬ ನಿಯಮ ಜಾರಿಗೆ ಬಂದಾಗ ದಾನಿಯೇಲ ಏನು ಮಾಡಿದ ಅಂತ ಸ್ವಲ್ಪ ಯೋಚಿಸಿ. (ದಾನಿಯೇಲ 6:7-10 ಓದಿ.) ‘ಬರೀ 30 ದಿನ ತಾನೆ ಪರವಾಗಿಲ್ಲ’ ಅಂತ ಅವನು ಪ್ರಾರ್ಥನೆ ಮಾಡದೇ ಇರಬಹುದಿತ್ತು. ಆದರೆ ಅವನು ಯೆಹೋವನ ಆರಾಧನೆಗೆ ಯಾವುದೇ ಮಾನವ ನಿಯಮ ಅಡ್ಡ ಬರದಂತೆ ನೋಡಿಕೊಂಡನು. ದಾನಿಯೇಲ ಯಾರಿಗೂ ಕಾಣದಂತೆ ಕೂಡ ಪ್ರಾರ್ಥನೆ ಮಾಡಬಹುದಿತ್ತು. ಆದರೆ ಅವನು ಹಾಗೆ ಮಾಡಲಿಲ್ಲ. ಯಾಕೆಂದರೆ ಅವನು ದಿನಾಲೂ ದೇವರಿಗೆ ಪ್ರಾರ್ಥಿಸುವುದು ಅನೇಕರಿಗೆ ತಿಳಿದ ವಿಷಯವಾಗಿತ್ತು. ಒಂದುವೇಳೆ ಯಾರಿಗೂ ಕಾಣದ ಹಾಗೆ ಪ್ರಾರ್ಥನೆ ಮಾಡಿರುತ್ತಿದ್ದರೆ ‘ದಾನಿಯೇಲ ದೇವರನ್ನು ಆರಾಧಿಸುವುದನ್ನು ಬಿಟ್ಟುಬಿಟ್ಟ’ ಅಂತ ಜನ ಅಂದುಕೊಳ್ಳುತ್ತಾರೆ ಎಂದು ಅವನಿಗೆ ಗೊತ್ತಿತ್ತು. ಹಾಗಾಗಿ ತನ್ನ ಜೀವಕ್ಕೆ ಅಪಾಯವಿದೆ ಎಂದು ಗೊತ್ತಿದ್ದರೂ ಅವನು ಯಥಾಪ್ರಕಾರ ಜನರಿಗೆ ಕಾಣುವಂತೆ ದೇವರಿಗೆ ಪ್ರಾರ್ಥಿಸುತ್ತಾ ಇದ್ದನು.

14 ದಾನಿಯೇಲನು ತೋರಿಸಿದ ಧೈರ್ಯ ಮತ್ತು ನಿಷ್ಠೆಯನ್ನು ಮೆಚ್ಚಿ ಯೆಹೋವನು ಅವನನ್ನು ಆಶೀರ್ವದಿಸಿದನು. ಸಿಂಹಗಳ ಬಾಯಿಂದ ಅವನನ್ನು ಅದ್ಭುತವಾಗಿ ಕಾಪಾಡಿದನು. ಇದರ ಪರಿಣಾಮವಾಗಿ ಮೇದ್ಯ-ಪಾರಸಿಯ ಸಾಮ್ರಾಜ್ಯದಲ್ಲಿದ್ದ ಜನರೆಲ್ಲರೂ ಯೆಹೋವನ ಬಗ್ಗೆ ತಿಳಿದುಕೊಂಡರು!—ದಾನಿ. 6:25-27.

15. ದಾನಿಯೇಲನಲ್ಲಿ ಇದ್ದಂಥ ನಂಬಿಕೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು?

15 ದಾನಿಯೇಲನಲ್ಲಿ ಇದ್ದಂಥ ನಂಬಿಕೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು? ಬಲವಾದ ನಂಬಿಕೆ ಬೆಳೆಸಿಕೊಳ್ಳಲು ಬೈಬಲನ್ನು ಓದಿದರಷ್ಟೇ ಸಾಲದು. ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. (ಮತ್ತಾ. 13:23) ಒಂದು ವಿಷಯದ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ ಅಂತ ತಿಳಿದುಕೊಳ್ಳಲು ನಾವು ಏನು ಓದುತ್ತೇವೋ ಅದರ ಬಗ್ಗೆ ಆಳವಾಗಿ ಯೋಚಿಸಬೇಕು. ಕ್ರಮವಾಗಿ ಪ್ರಾರ್ಥನೆ ಮಾಡುವುದು ಕೂಡ ಪ್ರಾಮುಖ್ಯ. ವಿಶೇಷವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಪ್ರಾರ್ಥನೆ ಮಾಡಲು ಹಿಂಜರಿಯಬಾರದು. ನಾವು ಬಲ ಮತ್ತು ವಿವೇಕಕ್ಕಾಗಿ ಪ್ರಾರ್ಥಿಸುವಾಗ ಯೆಹೋವನು ಅದನ್ನು ಉದಾರವಾಗಿ ಕೊಡುವನೆಂಬ ನಂಬಿಕೆ ನಮಗಿರಬೇಕು.—ಯಾಕೋ. 1:5.

ಕಷ್ಟದಲ್ಲೂ ಸುಖದಲ್ಲೂ ದೈವಿಕ ತತ್ವಗಳನ್ನು ಅನ್ವಯಿಸಿದ ಯೋಬ!

16, 17. ಯೋಬನು ಯೆಹೋವನ ಬಗ್ಗೆ ಹೇಗೆ ತಿಳಿದುಕೊಂಡನು?

16 ಯೋಬ ಯೆಹೋವನ ಬಗ್ಗೆ ಹೇಗೆ ತಿಳಿದುಕೊಂಡನು? ಯೋಬ ಒಬ್ಬ ಇಸ್ರಾಯೇಲ್ಯನಾಗಿರಲಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ. ಅಬ್ರಹಾಮ, ಇಸಾಕ ಮತ್ತು ಯಾಕೋಬ ಯೋಬನ ದೂರದ ಸಂಬಂಧಿಕರಾಗಿದ್ದರು. ಯೆಹೋವನು ಇವರಿಗೆ ತನ್ನ ಬಗ್ಗೆ ಮತ್ತು ಮಾನವರ ಕಡೆಗಿನ ತನ್ನ ಉದ್ದೇಶದ ಬಗ್ಗೆ ತಿಳಿಸಿದ್ದನು. ಇಂಥ ಅಮೂಲ್ಯ ಸತ್ಯಗಳನ್ನು ಯೋಬನು ಹೇಗೆ ತಿಳಿದುಕೊಂಡನು ಎಂದು ನಮಗೆ ಗೊತ್ತಿಲ್ಲ. (ಯೋಬ 23:12) ಆದರೆ “ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು” ಎಂದು ಯೋಬನೇ ಹೇಳಿದ್ದಾನೆ. (ಯೋಬ 42:5) ಅವನು ತಿಳಿದುಕೊಂಡ ವಿಷಯಗಳನ್ನು ಬೇರೆಯವರಿಗೂ ಹೇಳಿದ ಎಂದು ಯೆಹೋವನೇ ತಿಳಿಸಿದ್ದಾನೆ.—ಯೋಬ 42:7, 8.

ನಾವು ಸೃಷ್ಟಿಯನ್ನು ನೋಡಿ ಯೆಹೋವನ ಗುಣಗಳ ಬಗ್ಗೆ ಹೆಚ್ಚನ್ನು ಕಲಿಯುವಾಗ ನಮ್ಮ ನಂಬಿಕೆ ಬಲವಾಗುತ್ತದೆ (ಪ್ಯಾರ 17 ನೋಡಿ)

17 ಯೋಬ ಸೃಷ್ಟಿಯನ್ನು ನೋಡಿ ಸಹ ಯೆಹೋವನ ಗುಣಗಳ ಬಗ್ಗೆ ತಿಳಿದುಕೊಂಡನು. (ಯೋಬ 12:7-9, 13) ದೇವರಿಗೆ ಹೋಲಿಸುವಾಗ ಮಾನವರು ತೀರ ಅಲ್ಪರು ಎಂದು ಯೋಬನಿಗೆ ಮನಗಾಣಿಸಲು ಎಲೀಹು ಮತ್ತು ಯೆಹೋವ ಇಬ್ಬರೂ ಸೃಷ್ಟಿಯನ್ನು ಉಪಯೋಗಿಸಿದರು. (ಯೋಬ 37:14; 38:1-4) ಯೆಹೋವನ ಮಾತು ಯೋಬನ ಮನಮುಟ್ಟಿತು. ಆದ್ದರಿಂದ ಅವನು ದೀನತೆಯಿಂದ ಹೀಗಂದನು: “ನೀನು ಸಕಲ ಕಾರ್ಯಗಳನ್ನು ನಡಿಸಬಲ್ಲಿಯೆಂತಲೂ ಯಾವ ಸಂಕಲ್ಪವೂ ನಿನಗೆ ಅಸಾಧ್ಯವಲ್ಲವೆಂತಲೂ ತಿಳಿದುಕೊಂಡೇ ಇದ್ದೇನೆ.” ಅಲ್ಲದೇ, “[ನಾನು ಆಡಿದ್ದನ್ನು] ತಿರಸ್ಕರಿಸಿ ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ” ಅಂದನು.—ಯೋಬ 42:2, 6.

18, 19. ತಾನು ಯೆಹೋವನ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇನೆಂದು ಯೋಬನು ಹೇಗೆ ತೋರಿಸಿದನು?

18 ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರಿಂದ ಯೋಬನಿಗೆ ಯಾವ ಪ್ರಯೋಜನ ಸಿಕ್ಕಿತು? ಯೋಬನು ದೈವಿಕ ತತ್ವಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡನು. ಅವನಿಗೆ ಯೆಹೋವನ ಬಗ್ಗೆ ಚೆನ್ನಾಗಿ ಗೊತ್ತಿದ್ದರಿಂದ ಯೆಹೋವನಿಗೆ ಮೆಚ್ಚಿಗೆ ಆಗುವಂಥ ರೀತಿಯಲ್ಲಿ ನಡಕೊಂಡನು. ಉದಾಹರಣೆಗೆ, ಒಂದು ಕಡೆ ತಾನು ಯೆಹೋವನನ್ನು ಪ್ರೀತಿಸುತ್ತೇನೆಂದು ಹೇಳಿ ಇನ್ನೊಂದು ಕಡೆ ಬೇರೆಯವರೊಟ್ಟಿಗೆ ನಿರ್ದಯವಾಗಿ ನಡೆದುಕೊಂಡರೆ ಯೆಹೋವನು ಅದನ್ನು ಮೆಚ್ಚುವುದಿಲ್ಲ ಎಂದು ಯೋಬನಿಗೆ ಗೊತ್ತಿತ್ತು. (ಯೋಬ 6:14) ಇತರರಿಗಿಂತ ತಾನು ಶ್ರೇಷ್ಠ ಅಂತ ಯೋಬ ಯಾವತ್ತೂ ನೆನಸಲಿಲ್ಲ. ಬದಲಿಗೆ ಬಡವ-ಶ್ರೀಮಂತ ಎಂದು ತಾರತಮ್ಯ ಮಾಡದೆ ಪ್ರತಿಯೊಬ್ಬರನ್ನೂ ತನ್ನ ಕುಟುಂಬದವರಂತೆ ನೋಡಿಕೊಂಡನು. ಅದಕ್ಕಾಗಿಯೇ ಯೋಬ ಹೀಗಂದನು: “ನನ್ನನ್ನು ಗರ್ಭದಲ್ಲಿ ನಿರ್ಮಿಸಿದಾತನೇ ಅವನನ್ನೂ ನಿರ್ಮಿಸಲಿಲ್ಲವೋ?” (ಯೋಬ 31:13-22) ಸಾಮಾನ್ಯವಾಗಿ ಐಶ್ವರ್ಯ ಅಂತಸ್ತು ಇರುವಾಗ ಜನರು ಅಹಂಕಾರಪಡುತ್ತಾರೆ. ಆದರೆ ಯೋಬ ಹಾಗೆ ಇರಲಿಲ್ಲ. ಬೇರೆಯವರನ್ನು ಕೀಳಾಗಿ ನೋಡಲಿಲ್ಲ. ಯೋಬನಿಗೂ ಇಂದಿರುವ ಐಶ್ವರ್ಯವಂತರು ಮತ್ತು ಅಧಿಕಾರಿಗಳಿಗೂ ಎಂಥಾ ವ್ಯತ್ಯಾಸ!

19 ಯೋಬನ ಜೀವನದಲ್ಲಿ ಯೆಹೋವನೇ ಪ್ರಾಮುಖ್ಯನಾಗಿದ್ದನು. ಹಣ-ಅಂತಸ್ತು ತಮ್ಮಿಬ್ಬರ ಮಧ್ಯೆ ಬರುವಂತೆ ಯೋಬನು ಬಿಡಲಿಲ್ಲ. ಒಂದುವೇಳೆ ಬಿಡುವುದಾದರೆ ತಾನು ‘ಮೇಲಣ ಲೋಕದ ದೇವರನ್ನು’ ತಿರಸ್ಕರಿಸಿದಂತಾಗುತ್ತದೆ ಎಂದು ಅವನಿಗೆ ಗೊತ್ತಿತ್ತು. (ಯೋಬ 31:24-28 ಓದಿ.) ಜೊತೆಗೆ, ಯೋಬ ವಿವಾಹವನ್ನು ಗಂಡ-ಹೆಂಡತಿಯ ನಡುವಿನ ಪವಿತ್ರ ಬಂಧವಾಗಿ ವೀಕ್ಷಿಸಿದನು. ಆದ್ದರಿಂದ ಪರಸ್ತ್ರೀಯನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದೆಂದು ತನ್ನಲ್ಲೇ ನಿಬಂಧನೆ ಮಾಡಿಕೊಂಡನು. (ಯೋಬ 31:1) ಇದು ನಿಜವಾಗಲೂ ಮೆಚ್ಚತಕ್ಕ ವಿಷಯ. ಏಕೆಂದರೆ ಯೋಬನ ಸಮಯದಲ್ಲಿ ಪುರುಷರು ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳಲು ಯೆಹೋವನು ಅನುಮತಿಸಿದ್ದನು. ಯೋಬ ಕೂಡ ಇನ್ನೊಂದು ಮದುವೆ ಮಾಡಿಕೊಳ್ಳಬಹುದಿತ್ತು. ಆದರೆ ಅವನು ಹಾಗೆ ಮಾಡಲಿಲ್ಲ. ಏದೆನ್‌ ತೋಟದಲ್ಲಿ ಯೆಹೋವನು ಏರ್ಪಡಿಸಿದ ಮೊದಲ ವಿವಾಹ ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯ ನಡುವೆ ನಡೆಯಿತು ಎಂದು ಯೋಬನಿಗೆ ತಿಳಿದಿತ್ತು. ತಾನೂ ಅದೇ ರೀತಿ ಜೀವಿಸಬೇಕು ಅಂತ ಯೋಬ ಬಯಸಿದ. * (ಆದಿ. 2:18, 24) ಸುಮಾರು 1,600 ವರ್ಷಗಳ ನಂತರ, ವಿವಾಹ ಮತ್ತು ಲೈಂಗಿಕತೆಯ ವಿಷಯದಲ್ಲಿ ಯೇಸು ಸಹ ಇದೇ ತತ್ವವನ್ನು ಒತ್ತಿ ಹೇಳಿದನು.—ಮತ್ತಾ. 5:28; 19:4, 5.

20. ಯೆಹೋವನ ಬಗ್ಗೆ, ಆತನ ಮಟ್ಟಗಳ ಬಗ್ಗೆ ನಾವು ಚೆನ್ನಾಗಿ ತಿಳಿದುಕೊಂಡರೆ ಎಂಥ ಸ್ನೇಹಿತರನ್ನು ಮತ್ತು ಮನೋರಂಜನೆಯನ್ನು ಆಯ್ಕೆ ಮಾಡುತ್ತೇವೆ?

20 ಯೋಬನಲ್ಲಿ ಇದ್ದಂಥ ನಂಬಿಕೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು? ಈಗಾಗಲೇ ಚರ್ಚಿಸಿದಂತೆ ನಾವು ಯೆಹೋವನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ಆತನಿಗೆ ಇಷ್ಟ ಆಗುವಂತೆ ನಡಕೊಳ್ಳಬೇಕು. ಉದಾಹರಣೆಗೆ, ಯೆಹೋವನು “ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ” ಎಂದು ಬೈಬಲ್‌ ಹೇಳುತ್ತದೆ. ಅಲ್ಲದೇ ಸತ್ಯವನ್ನು ಮರೆಮಾಡುವವರ ಜೊತೆ ಸಮಯ ಕಳೆಯಬಾರದೆಂದೂ ಹೇಳುತ್ತದೆ. (ಕೀರ್ತನೆ 11:5; 26:4 ಓದಿ.) ಈ ವಚನಗಳ ಪ್ರಕಾರ ಯೆಹೋವನಿಗೆ ಯಾವುದು ಇಷ್ಟ ಆಗಲ್ಲ? ಇದನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡರೆ ಜೀವನದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತೇವೆ? ಇಂಟರ್‌ನೆಟ್‌ ಬಳಸುವಾಗ, ಸ್ನೇಹಿತರನ್ನು ಮತ್ತು ಮನೋರಂಜನೆಯನ್ನು ಆರಿಸಿಕೊಳ್ಳುವಾಗ ಯಾವ ಜಾಗ್ರತೆ ವಹಿಸುತ್ತೇವೆ? ಈ ಪ್ರಶ್ನೆಗಳಿಗಿರುವ ಉತ್ತರಗಳು ಯೆಹೋವನನ್ನು ನೀವು ಎಷ್ಟು ಚೆನ್ನಾಗಿ ತಿಳಿದುಕೊಂಡಿದ್ದೀರಿ ಎಂದು ತೋರಿಸಿಕೊಡುತ್ತವೆ. ಈ ದುಷ್ಟ ಲೋಕ ನಮ್ಮ ಮೇಲೆ ಪ್ರಭಾವ ಬೀರಬಾರದಾದರೆ ನಮ್ಮ ‘ಗ್ರಹಣ ಶಕ್ತಿಗೆ’ ತರಬೇತಿ ಕೊಡಬೇಕು. ಇದರರ್ಥ ಯಾವುದು ಸರಿ-ತಪ್ಪು, ಯಾವುದು ವಿವೇಕತನ-ಅವಿವೇಕತನ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಕಲಿಯಬೇಕು.—ಇಬ್ರಿ. 5:14; ಎಫೆ. 5:15.

21. ಯೆಹೋವನನ್ನು ಮೆಚ್ಚಿಸಲು ಏನನ್ನು ಮಾಡಬೇಕೋ ‘ಅದೆಲ್ಲವನ್ನು ಅರ್ಥಮಾಡಿಕೊಳ್ಳಲು’ ನಮಗೆ ಯಾವುದು ಸಹಾಯ ಮಾಡುತ್ತದೆ?

21 ಯೆಹೋವನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೋಹ, ದಾನಿಯೇಲ ಮತ್ತು ಯೋಬ ತಮ್ಮಿಂದಾದ ಎಲ್ಲವನ್ನೂ ಮಾಡಿದರು. ಅವರ ಆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿತು. ತನ್ನನ್ನು ಮೆಚ್ಚಿಸಲು ಏನೆಲ್ಲ ಮಾಡಬೇಕೋ ‘ಅದೆಲ್ಲವನ್ನೂ ಅರ್ಥಮಾಡಿಕೊಳ್ಳಲು’ ಯೆಹೋವನು ಅವರಿಗೆ ಸಹಾಯ ಮಾಡಿದನು. ಯೆಹೋವನು ಬಯಸುವಂಥ ರೀತಿಯಲ್ಲಿ ನಾವು ನಡೆಯುವುದಾದರೆ ಜೀವನದಲ್ಲಿ ಸಂತೋಷ ಸಿಗುತ್ತೆ ಎಂದು ಅವರ ಉದಾಹರಣೆಗಳು ರುಜುಪಡಿಸುತ್ತವೆ. (ಕೀರ್ತ. 1:1-3) ಅಂಥ ಸಂತೋಷ ನಿಮಗೂ ಸಿಗಬೇಕಾದರೆ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನೋಹ, ದಾನಿಯೇಲ ಮತ್ತು ಯೋಬನಂತೆ ನಾನೂ ಯೆಹೋವನ ಬಗ್ಗೆ ತಿಳಿದುಕೊಂಡಿದ್ದೇನಾ?’ ಆ ನಂಬಿಗಸ್ತ ಪುರುಷರಿಗಿಂತ ಇಂದು ನಾವು ಯೆಹೋವನ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬಹುದು. ಏಕೆಂದರೆ ತನ್ನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಸ್ವತಃ ಯೆಹೋವನೇ ನಮಗೆ ಕೊಟ್ಟಿದ್ದಾನೆ. (ಜ್ಞಾನೋ. 4:18) ಹಾಗಾಗಿ, ಬೈಬಲನ್ನು ಶ್ರದ್ಧೆಯಿಂದ ಓದಿ. ಓದಿದ ವಿಷಯಗಳ ಬಗ್ಗೆ ಆಳವಾಗಿ ಧ್ಯಾನಿಸಿ. ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ. ಆಗ ನಿಮ್ಮ ಪ್ರೀತಿಯ ಸ್ವರ್ಗೀಯ ತಂದೆಗೆ ಇನ್ನಷ್ಟು ಹತ್ತಿರವಾಗುವಿರಿ. ಜೊತೆಗೆ, ಈ ದುಷ್ಟ ಲೋಕದಲ್ಲೂ ವಿವೇಕದಿಂದ ನಡೆದುಕೊಳ್ಳುವಿರಿ.—ಜ್ಞಾನೋ. 2:4-7.

^ ಪ್ಯಾರ. 5 ನೋಹನ ಮುತ್ತಜ್ಜ ಹನೋಕ ಸಹ ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆದನು.’ ಆದರೆ ನೋಹ ಹುಟ್ಟುವುದಕ್ಕಿಂತ 69 ವರ್ಷ ಮುಂಚೆಯೇ ತೀರಿಹೋದನು.—ಆದಿ. 5:23, 24.

^ ಪ್ಯಾರ. 19 ನೋಹ ಕೂಡ ಇನ್ನೊಂದು ಮದುವೆ ಮಾಡಿಕೊಳ್ಳಲಿಲ್ಲ. ಆದಾಮ-ಹವ್ವ ದೇವರಿಗೆ ಅವಿಧೇಯರಾದ ನಂತರ ಪುರುಷರು ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳಲು ಆರಂಭಿಸಿದರು.—ಆದಿ. 4:19.