ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧ್ಯಾತ್ಮಿಕವಾಗಿ ಬೆಳೆಯುತ್ತಾ ಇರಿ

ಆಧ್ಯಾತ್ಮಿಕವಾಗಿ ಬೆಳೆಯುತ್ತಾ ಇರಿ

“ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ ಇರಿ.”—ಗಲಾ. 5:16.

ಗೀತೆಗಳು: 136, 10

1, 2. (ಎ) ಒಬ್ಬ ಸಹೋದರನಿಗೆ ತನ್ನ ಆಧ್ಯಾತ್ಮಿಕತೆಯ ಬಗ್ಗೆ ಏನು ಗೊತ್ತಾಯಿತು? (ಬಿ) ಆಗ ಅವರು ಏನು ಮಾಡಿದರು?

ರಾಬರ್ಟ್‌ ಅವರು ಹದಿನೈದು ವರ್ಷ ಇದ್ದಾಗ ದೀಕ್ಷಾಸ್ನಾನ ಪಡೆದುಕೊಂಡರು. ಆದರೆ ಅವರು ಸತ್ಯದಲ್ಲಿ ಅಷ್ಟೇನು ದೃಢವಾಗಿ ಇರಲಿಲ್ಲ. ಅವರು ಹೇಳುವುದು: “ನಾನೇನು ತಪ್ಪು ಮಾಡುತ್ತಾ ಇರಲಿಲ್ಲ. ಆದರೆ ಎಲ್ಲವನ್ನೂ ಕಾಟಾಚಾರಕ್ಕೆ ಮಾಡುತ್ತಾ ಇದ್ದೆ. ಕೂಟಗಳಿಗೆ ತಪ್ಪದೇ ಹೋಗುತ್ತಿದ್ದೆ ಮತ್ತು ವರ್ಷದಲ್ಲಿ ಕೆಲವು ತಿಂಗಳು ಸಹಾಯಕ ಪಯನೀಯರ್‌ ಸೇವೆನೂ ಮಾಡುತ್ತಿದ್ದೆ. ಹೀಗೆ ಮೇಲ್ನೋಟಕ್ಕೆ ಆಧ್ಯಾತ್ಮಿಕವಾಗಿ ಬಲವಾಗಿದ್ದೇನೆ ಅನ್ನೋ ರೀತಿ ಇದ್ದೆ. ಆದರೆ ನಿಜವಾಗಲೂ ನಾನು ಆಧ್ಯಾತ್ಮಿಕ ವ್ಯಕ್ತಿಯಾಗಿರಲಿಲ್ಲ.”

2 ರಾಬರ್ಟ್‌ ಅವರಿಗೆ ಈ ವಿಷಯ ಮದುವೆಯಾಗುವ ತನಕ ಅರ್ಥ ಆಗಲಿಲ್ಲ. ಅವರು ಮತ್ತು ಅವರ ಹೆಂಡತಿ ಕೆಲವು ಸಲ ಬೈಬಲ್‌ಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಒಬ್ಬರಿಗೊಬ್ಬರು ಕೇಳುತ್ತಾ ಆಟದ ತರ ಆಡುತ್ತಿದ್ದರು. ಅವರ ಹೆಂಡತಿಗೆ ಬೈಬಲ್‌ ವಿಷಯಗಳು ಚೆನ್ನಾಗಿ ಗೊತ್ತಿದ್ದರಿಂದ ಕೇಳಿದ ಪ್ರಶ್ನೆಗಳಿಗೆಲ್ಲ ಪಟಪಟ ಅಂತ ಉತ್ತರ ಕೊಡುತ್ತಿದ್ದರು. ಆದರೆ ರಾಬರ್ಟ್‌ ಅವರಿಗೆ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ಗೊತ್ತಿರಲಿಲ್ಲ. ಆಗ ಅವರಿಗೆ ತುಂಬ ಮುಜುಗರ ಆಗುತ್ತಿತ್ತು. ಅವರು ಹೇಳುವುದು: “ನನಗೇನೂ ಗೊತ್ತೇ ಇಲ್ವೇನೋ ಅಂತ ಅನಿಸುತ್ತಿತ್ತು. ‘ನಾನೊಬ್ಬ ಆಧ್ಯಾತ್ಮಿಕ ಗಂಡನಾಗಬೇಕೆಂದರೆ ಕೆಲವೊಂದು ವಿಷಯಗಳನ್ನು ಮಾಡಲೇಬೇಕು’ ಅಂತ ಯೋಚಿಸಿದೆ.” ಅವರು ಯೋಚಿಸಿದಂತೆ ಮಾಡಿದರು. “ನಾನು ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದೆ, ಅದನ್ನು ಮಾಡುತ್ತಾ ಮಾಡುತ್ತಾ ಹೋದೆ. ಓದಿದ ವಿಷಯಗಳನ್ನು ಒಂದಕ್ಕೊಂದು ಜೋಡಿಸುತ್ತಾ ಹೋದೆ. ಆಗ ವಿಷಯಗಳು ನನಗೆ ಅರ್ಥವಾಯಿತು. ಅದಕ್ಕಿಂತ ಮುಖ್ಯವಾಗಿ ಯೆಹೋವನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಂಡೆ” ಎಂದು ಅವರು ಹೇಳುತ್ತಾರೆ.

3. (ಎ) ರಾಬರ್ಟ್‌ ಅವರ ಅನುಭವದಿಂದ ನಾವು ಯಾವ ಪಾಠಗಳನ್ನು ಕಲಿಯಬಹುದು? (ಬಿ) ನಾವು ಯಾವ ಪ್ರಾಮುಖ್ಯ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

3 ರಾಬರ್ಟ್‌ ಅವರ ಅನುಭವದಿಂದ ನಾವು ಪ್ರಾಮುಖ್ಯ ಪಾಠಗಳನ್ನು ಕಲಿಯಬಹುದು. ನಮಗೂ ಸ್ವಲ್ಪ ಬೈಬಲ್‌ ಜ್ಞಾನ ಇರಬಹುದು, ಕೂಟಗಳಿಗೆ, ಸೇವೆಗೆ ತಪ್ಪದೇ ಹೋಗುತ್ತಿರಬಹುದು. ಆದರೆ ಇಷ್ಟು ಮಾಡಿದರೆ ನಾವು ಆಧ್ಯಾತ್ಮಿಕ ವ್ಯಕ್ತಿಯಾಗಿ ಬಿಡುವುದಿಲ್ಲ. ನಾವು ಆಧ್ಯಾತ್ಮಿಕತೆ ಬೆಳೆಸಿಕೊಳ್ಳಲು ಪ್ರಯತ್ನಿಸಿರಲೂಬಹುದು. ಆದರೆ ನಮ್ಮನ್ನೇ ಪರೀಕ್ಷಿಸಿಕೊಂಡರೆ ನಾವಿನ್ನೂ ಕೆಲವೊಂದು ವಿಷಯಗಳಲ್ಲಿ ಪ್ರಗತಿ ಮಾಡಲಿಕ್ಕಿದೆ ಎಂದು ಗೊತ್ತಾಗುತ್ತದೆ. (ಫಿಲಿ. 3:16) ನಾವು ಆಧ್ಯಾತ್ಮಿಕವಾಗಿ ಬೆಳೆಯುತ್ತಾ ಇರಲು ಏನು ಮಾಡಬೇಕೆಂದು ಈ ಲೇಖನದಲ್ಲಿ ಕಲಿಯಲಿದ್ದೇವೆ. ಇದಕ್ಕಾಗಿ ಈ ಮೂರು ಪ್ರಾಮುಖ್ಯ ಪ್ರಶ್ನೆಗಳನ್ನು ಚರ್ಚಿಸೋಣ. (1) ನಮ್ಮಲ್ಲಿ ಆಧ್ಯಾತ್ಮಿಕತೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಲು ಯಾವುದು ಸಹಾಯ ಮಾಡುತ್ತದೆ? (2) ನಾವು ಆಧ್ಯಾತ್ಮಿಕವಾಗಿ ಬಲವಾಗಿರಲು ಏನು ಮಾಡಬೇಕು? (3) ನಾವು ಆಧ್ಯಾತ್ಮಿಕವಾಗಿ ಬಲವಾಗಿದ್ದರೆ ದಿನನಿತ್ಯದ ಜೀವನದಲ್ಲಿ ಹೇಗೆ ನಡಕೊಳ್ಳುತ್ತೇವೆ?

ಸ್ವಪರೀಕ್ಷೆ ಮಾಡಿಕೊಳ್ಳಿ

4. ಎಫೆಸ 4:23, 24​ರಲ್ಲಿರುವ ಬುದ್ಧಿವಾದ ಯಾರಿಗೆ ಅನ್ವಯವಾಗುತ್ತದೆ?

4 ನಾವು ಯೆಹೋವನನ್ನು ಆರಾಧಿಸಲು ಆರಂಭಿಸಿದಾಗ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿರುತ್ತೇವೆ. ಆ ಬದಲಾವಣೆಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿರಬಹುದು. ಆದರೆ ದೀಕ್ಷಾಸ್ನಾನ ಆದ ಮೇಲೆ ‘ಇನ್ನೇನು ಬದಲಾವಣೆ ಮಾಡಿಕೊಳ್ಳಲು ಉಳಿದಿಲ್ಲ’ ಅಂತ ನೆನಸಬಾರದು. ಬೈಬಲ್‌ ಹೀಗೆ ಹೇಳುತ್ತದೆ: “ನೀವು ನಿಮ್ಮ ಮನಸ್ಸನ್ನು ಪ್ರಚೋದಿಸುವಂಥ ಶಕ್ತಿಯಲ್ಲಿ ನವೀಕರಿಸಲ್ಪಡಬೇಕು.” (ಎಫೆ. 4:23, 24) ಇಲ್ಲಿರುವ “ನವೀಕರಿಸಲ್ಪಡಬೇಕು” ಎಂದು ಭಾಷಾಂತರವಾಗಿರುವ ಗ್ರೀಕ್‌ ಪದದಲ್ಲಿ ಒಂದು ವಿಷಯವನ್ನು ಮಾಡುತ್ತಾ ಇರಬೇಕು ಅನ್ನುವ ಅರ್ಥವಿದೆ. ಆದ್ದರಿಂದ, ನಮ್ಮ ಮನಸ್ಸನ್ನು ಪ್ರಚೋದಿಸುವಂಥ ಶಕ್ತಿಯಲ್ಲಿ ‘ನವೀಕರಿಸಲ್ಪಡುತ್ತಾ ಇರಬೇಕು.’ ನಾವು ಅಪರಿಪೂರ್ಣರು ಆಗಿರುವುದರಿಂದ ಬದಲಾವಣೆ ಮಾಡಿಕೊಳ್ಳುತ್ತಾ ಇರಬೇಕು. ತುಂಬ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿದ್ದರೂ, ಆತನೊಂದಿಗಿನ ನಮ್ಮ ಸಂಬಂಧವನ್ನು ಇನ್ನೂ ಹೆಚ್ಚು ಬಲಪಡಿಸಿಕೊಳ್ಳಬೇಕು.—ಫಿಲಿ. 3:12, 13.

5. ನಮ್ಮಲ್ಲಿ ಆಧ್ಯಾತ್ಮಿಕತೆ ಎಷ್ಟಿದೆ ಎಂದು ತಿಳಿದುಕೊಳ್ಳಲು ಯಾವ ಪ್ರಶ್ನೆಗಳು ಸಹಾಯ ಮಾಡುತ್ತವೆ?

5 ಚಿಕ್ಕವರಿರಲಿ, ದೊಡ್ಡವರಿರಲಿ ನಾವೆಲ್ಲರೂ ಪ್ರಾಮಾಣಿಕವಾಗಿ ಸ್ವಪರೀಕ್ಷೆ ಮಾಡಿಕೊಳ್ಳಬೇಕು. ನಮ್ಮನ್ನು ನಾವು ಹೀಗೆ ಕೇಳಿಕೊಳ್ಳೋಣ: ‘ನಾನು ಆಧ್ಯಾತ್ಮಿಕವಾಗಿ ಬೆಳೆಯುತ್ತಾ ಇದ್ದೀನಿ ಅನ್ನೋ ಲಕ್ಷಣಗಳು ನನ್ನಲ್ಲಿ ಕಾಣ್ತಾ ಇವೆಯಾ? ನಾನು ಕ್ರಿಸ್ತನಂತೆ ಆಗುತ್ತಿದ್ದೇನಾ? ಕೂಟಕ್ಕೆ ಹೋದಾಗ ನಾನು ನಡಕೊಳ್ಳುವ ವಿಧ ನನ್ನ ಬಗ್ಗೆ ಏನು ತೋರಿಸಿಕೊಡುತ್ತೆ? ನನಗೆ ಜೀವನದಲ್ಲಿ ಯಾವುದು ಮುಖ್ಯ ಅಂತ ನನ್ನ ಮಾತುಕತೆ ತೋರಿಸುತ್ತೆ? ನನ್ನ ಅಧ್ಯಯನ ರೂಢಿ ಹೇಗಿದೆ? ನಾನು ಹಾಕುವ ಬಟ್ಟೆ, ಮಾಡಿಕೊಳ್ಳುವ ಅಲಂಕಾರ ನನ್ನ ಬಗ್ಗೆ ಏನು ತಿಳಿಸುತ್ತೆ? ಯಾರಾದರೂ ನನಗೆ ಸಲಹೆ ಕೊಟ್ಟಾಗ ನಾನು ಹೇಗೆ ಪ್ರತಿಕ್ರಿಯಿಸುತ್ತೇನೆ? ತಪ್ಪು ಮಾಡುವ ಒತ್ತಡ ಬಂದಾಗ ಏನು ಮಾಡುತ್ತೇನೆ? ನಾನು ಪ್ರೌಢ ಕ್ರೈಸ್ತನಾಗಿದ್ದೇನಾ?’ (ಎಫೆ. 4:13) ಈ ಪ್ರಶ್ನೆಗಳು ನಮ್ಮಲ್ಲಿ ಆಧ್ಯಾತ್ಮಿಕತೆ ಎಷ್ಟಿದೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ.

6. ನಮ್ಮಲ್ಲಿ ಆಧ್ಯಾತ್ಮಿಕತೆ ಎಷ್ಟಿದೆ ಎಂದು ತಿಳಿದುಕೊಳ್ಳಲು ಇನ್ನೂ ಯಾವ ಸಹಾಯ ಇದೆ?

6 ನಮ್ಮಲ್ಲಿ ಆಧ್ಯಾತ್ಮಿಕತೆ ಎಷ್ಟಿದೆ ಎಂದು ತಿಳಿದುಕೊಳ್ಳಲು ಕೆಲವೊಮ್ಮೆ ನಮಗೆ ಇತರರ ಸಹಾಯವೂ ಬೇಕಾಗುತ್ತದೆ. ಅಪೊಸ್ತಲ ಪೌಲನು ಹೇಳುವಂತೆ, ಭೌತಿಕ ವ್ಯಕ್ತಿಗೆ ತನ್ನ ಜೀವನ ರೀತಿ ಯೆಹೋವನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಇಲ್ಲ ಅನ್ನುವ ಪ್ರಜ್ಞೆಯೇ ಇರುವುದಿಲ್ಲ. ಆದರೆ ಒಬ್ಬ ಆಧ್ಯಾತ್ಮಿಕ ವ್ಯಕ್ತಿಗೆ ಪ್ರತಿಯೊಂದು ವಿಷಯದ ಬಗ್ಗೆ ದೇವರ ದೃಷ್ಟಿಕೋನ ಏನೆಂದು ತಿಳಿದಿರುತ್ತದೆ. ಜೊತೆಗೆ, ಭೌತಿಕ ಮನುಷ್ಯನ ಜೀವನ ರೀತಿಯನ್ನು ದೇವರು ಮೆಚ್ಚಲ್ಲ ಎಂದು ಅವನು ಅರ್ಥಮಾಡಿಕೊಳ್ಳುತ್ತಾನೆ. (1 ಕೊರಿಂ. 2:14-16; 3:1-3) ಸಭೆಯಲ್ಲಿ ಕ್ರಿಸ್ತನ ಮನಸ್ಸನ್ನು ಹೊಂದಿರುವ ಹಿರಿಯರು ಒಬ್ಬ ಸಹೋದರನು ಭೌತಿಕ ಮನುಷ್ಯನಂತೆ ನಡಕೊಳ್ಳುತ್ತಿದ್ದರೆ ಅದನ್ನು ತಕ್ಷಣ ಗುರುತಿಸಿ ಅವನಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಹಿರಿಯರು ನಮಗೆ ಸಹಾಯ ಮಾಡಲು ಬಂದಾಗ ನಾವು ಅದನ್ನು ಸ್ವೀಕರಿಸಿ, ಬದಲಾವಣೆ ಮಾಡಿಕೊಳ್ಳುತ್ತೇವಾ? ನಾವು ಅವರು ಹೇಳಿದ ಹಾಗೆ ಮಾಡಿದರೆ, ಆಧ್ಯಾತ್ಮಿಕವಾಗಿ ಬೆಳೆಯಲು ನಮಗೆ ನಿಜವಾಗಲೂ ಮನಸ್ಸಿದೆ ಎಂದು ತೋರಿಸಿಕೊಡುತ್ತೇವೆ.—ಪ್ರಸಂ. 7:5, 9.

ಆಧ್ಯಾತ್ಮಿಕವಾಗಿ ಬಲವಾಗಿರಿ

7. ನಾವು ಆಧ್ಯಾತ್ಮಿಕ ವ್ಯಕ್ತಿಯಾಗಲು ಬೈಬಲ್‌ ಜ್ಞಾನ ಇದ್ದರೆ ಮಾತ್ರ ಸಾಲದು ಎಂದು ಹೇಗೆ ಹೇಳಬಹುದು?

7 ನಾವು ಆಧ್ಯಾತ್ಮಿಕ ವ್ಯಕ್ತಿಯಾಗಲು ಬೈಬಲ್‌ ಜ್ಞಾನ ಇದ್ದರೆ ಮಾತ್ರ ಸಾಲದು. ಉದಾಹರಣೆಗೆ ರಾಜ ಸೊಲೊಮೋನ ಯೆಹೋವನ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದನು. ಅಷ್ಟೇಕೆ, ಅವನ ಕೆಲವೊಂದು ವಿವೇಕಯುತ ಮಾತುಗಳು ಬೈಬಲಿನ ಭಾಗವಾದವು. ಆದರೆ ಸಮಯ ಹೋದಂತೆ ಅವನು ಯೆಹೋವನೊಂದಿಗಿನ ತನ್ನ ಸಂಬಂಧವನ್ನು ಕಾಪಾಡಿಕೊಳ್ಳಲಿಲ್ಲ. ಕೊನೆಗೆ ದೇವರ ದೃಷ್ಟಿಯಲ್ಲಿ ನಂಬಿಕೆ ದ್ರೋಹಿಯಾದ. (1 ಅರ. 4:29, 30; 11:4-6) ಹಾಗಾದರೆ, ಬೈಬಲ್‌ ಜ್ಞಾನ ಇರುವುದರ ಜೊತೆಗೆ ನಾವು ಇನ್ನೂ ಏನು ಮಾಡಬೇಕು? ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುತ್ತಾ ಇರಬೇಕು. (ಕೊಲೊ. 2:6, 7) ಇದನ್ನು ನಾವು ಹೇಗೆ ಮಾಡಬಹುದು?

8, 9. (ಎ) ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಯಾವುದು ಸಹಾಯ ಮಾಡುತ್ತದೆ? (ಬಿ) ನಾವು ಅಧ್ಯಯನ ಮಾಡಿ, ಧ್ಯಾನಿಸುವ ಉದ್ದೇಶ ಏನಾಗಿರಬೇಕು? (ಲೇಖನದ ಆರಂಭದ ಚಿತ್ರ ನೋಡಿ.)

8 ಮೊದಲನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಪೌಲನು ‘ಪ್ರೌಢತೆಯ ಕಡೆಗೆ ಮುಂದೊತ್ತಿರಿ’ ಎಂದು ಉತ್ತೇಜಿಸಿದನು. (ಇಬ್ರಿ. 6:1) ಇಂದು ನಾವು ಈ ಸಲಹೆಯನ್ನು ಹೇಗೆ ಅನ್ವಯಿಸಬಹುದು? “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕವನ್ನು ಅಧ್ಯಯನ ಮಾಡಬೇಕು. ನಮ್ಮ ಜೀವನದಲ್ಲಿ ಬೈಬಲ್‌ ತತ್ವಗಳನ್ನು ಹೇಗೆ ಅನ್ವಯಿಸಿಕೊಳ್ಳಬಹುದೆಂದು ಈ ಪುಸ್ತಕದಿಂದ ಕಲಿಯುತ್ತೇವೆ. ಈಗಾಗಲೇ ಈ ಪುಸ್ತಕವನ್ನು ನೀವು ಅಧ್ಯಯನ ಮಾಡಿರುವಲ್ಲಿ, ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಸಹಾಯ ಮಾಡುವ ಇನ್ನೂ ಅನೇಕ ಪ್ರಕಾಶನಗಳಿವೆ. ಅವನ್ನು ಅಧ್ಯಯನ ಮಾಡಿ. (ಕೊಲೊ. 1:23) ಜೊತೆಗೆ, ಕಲಿತದ್ದರ ಬಗ್ಗೆ ಧ್ಯಾನಿಸಿ ಮತ್ತು ಅದನ್ನು ಹೇಗೆ ಅನ್ವಯಿಸಿಕೊಳ್ಳಬೇಕೆಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುವಂತೆ ಯೆಹೋವನಿಗೆ ಪ್ರಾರ್ಥಿಸಿ.

9 ನಾವು ಅಧ್ಯಯನ ಮಾಡಿ, ಧ್ಯಾನಿಸುವ ಉದ್ದೇಶ ಏನಾಗಿರಬೇಕು? ಯೆಹೋವನಿಗೆ ಮೆಚ್ಚಿಗೆಯಾಗುವುದನ್ನು ಮಾಡುವ ಬಯಕೆಯನ್ನು ಬೆಳೆಸಿಕೊಳ್ಳುವುದು ಮತ್ತು ಆತನಿಗೆ ವಿಧೇಯರಾಗುವುದೇ ನಮ್ಮ ಉದ್ದೇಶ ಆಗಿರಬೇಕು. (ಕೀರ್ತ. 40:8; 119:97) ನಮ್ಮ ಆಧ್ಯಾತ್ಮಿಕ ಬೆಳವಣಿಗೆಗೆ ಅಡ್ಡಿ ಮಾಡುವಂಥ ವಿಷಯಗಳಿಂದಲೂ ನಾವು ದೂರವಿರಬೇಕು.—ತೀತ 2:11, 12.

10. ಆಧ್ಯಾತ್ಮಿಕವಾಗಿ ಬಲವಾಗಿರಲು ಯುವ ಪ್ರಾಯದವರು ಏನು ಮಾಡಬೇಕು?

10 ನೀವೊಬ್ಬ ಯುವ ವ್ಯಕ್ತಿಯಾಗಿದ್ದರೆ, ನೀವು ಯಾವ ಆಧ್ಯಾತ್ಮಿಕ ಗುರಿಗಳನ್ನು ಇಟ್ಟಿದ್ದೀರಿ? ಬೆತೆಲ್‌ನಲ್ಲಿ ಸೇವೆ ಮಾಡುತ್ತಿರುವ ಒಬ್ಬ ಸಹೋದರ ಅನೇಕವೇಳೆ ಸರ್ಕಿಟ್‌ ಸಮ್ಮೇಳನಗಳಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಲಿರುವ ಯುವ ಜನರ ಹತ್ತಿರ ಹೋಗಿ ಮಾತಾಡುತ್ತಾರೆ, ಅವರ ಆಧ್ಯಾತ್ಮಿಕ ಗುರಿಗಳ ಬಗ್ಗೆ ಕೇಳುತ್ತಾರೆ. ಅವರಲ್ಲಿ ಅನೇಕರು ಯೆಹೋವನ ಸೇವೆ ಮಾಡುವುದರ ಬಗ್ಗೆ ಚೆನ್ನಾಗಿ ಯೋಜನೆ ಮಾಡಿರುತ್ತಾರೆ. ಅಂದರೆ, ಯೆಹೋವನಿಗೆ ಪೂರ್ಣ ಸಮಯದ ಸೇವೆ ಅಥವಾ ಹೆಚ್ಚು ಪ್ರಚಾರಕರ ಅಗತ್ಯವಿರುವ ಸ್ಥಳಕ್ಕೆ ಹೋಗಿ ಸೇವೆ ಮಾಡುವ ಯೋಜನೆ ಮಾಡಿರುತ್ತಾರೆ. ಆದರೆ ಇನ್ನು ಕೆಲವರಿಗೆ ಆ ಸಹೋದರ ಕೇಳಿದ ಪ್ರಶ್ನೆಗೆ ಏನು ಉತ್ತರ ಕೊಡಬೇಕೆಂದೇ ಗೊತ್ತಿರುವುದಿಲ್ಲ. ತಾವು ಆಧ್ಯಾತ್ಮಿಕ ಗುರಿಗಳನ್ನು ಇಡಬೇಕು ಎಂದು ಅವರಿನ್ನೂ ಯೋಚನೆಯೇ ಮಾಡಿಲ್ಲವೆಂದು ಇದು ಸೂಚಿಸುತ್ತಿರಬಹುದಾ? ನೀವೊಬ್ಬ ಯುವ ವ್ಯಕ್ತಿಯಾಗಿದ್ದರೆ ಹೀಗೆ ಕೇಳಿಕೊಳ್ಳಿ: ‘ನನ್ನ ಹೆತ್ತವರ ಬಲವಂತಕ್ಕೆ ಮಾತ್ರ ನಾನು ಕೂಟಗಳಿಗೆ, ಸೇವೆಗೆ ಹೋಗುತ್ತಿದ್ದೇನಾ? ಅಥವಾ ದೇವರ ಮೇಲಿನ ಪ್ರೀತಿಯಿಂದ ಹೋಗುತ್ತಿದ್ದೇನಾ?’ ನಾವು ಚಿಕ್ಕವರಾಗಿರಲಿ, ದೊಡ್ಡವರಾಗಿರಲಿ ನಮ್ಮೆಲ್ಲರಿಗೂ ಆಧ್ಯಾತ್ಮಿಕ ಗುರಿಗಳಿರಬೇಕು. ಈ ಗುರಿಗಳು ನಾವು ಆಧ್ಯಾತ್ಮಿಕವಾಗಿ ಬಲವಾಗಿರಲು ಸಹಾಯ ಮಾಡುತ್ತವೆ.—ಪ್ರಸಂ. 12:1, 13.

11. (ಎ) ಆಧ್ಯಾತ್ಮಿಕವಾಗಿ ಪ್ರಗತಿ ಮಾಡಲು ನಾವು ಏನು ಮಾಡಬೇಕು? (ಬಿ) ಬೈಬಲಿನಲ್ಲಿರುವ ಯಾರ ಉದಾಹರಣೆಯನ್ನು ನಾವು ಅನುಕರಿಸಬಹುದು?

11 ನಾವು ಯಾವ ವಿಷಯಗಳಲ್ಲಿ ಇನ್ನೂ ಪ್ರಗತಿ ಮಾಡಬೇಕು ಎಂದು ತಿಳಿದುಕೊಂಡ ಮೇಲೆ ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಯಾಕೆಂದರೆ ಇದು ನಮ್ಮ ಜೀವದ ಪ್ರಶ್ನೆಯಾಗಿದೆ. (ರೋಮ. 8:6-8) ನಾವು ಎಲ್ಲಾ ವಿಷಯಗಳಲ್ಲಿ ಪರಿಪೂರ್ಣರಾಗಿರಬೇಕು ಎಂದು ಯೆಹೋವ ದೇವರು ನಿರೀಕ್ಷಿಸುವುದಿಲ್ಲ. ಅಲ್ಲದೇ ನಾವು ಪ್ರಗತಿ ಮಾಡಲು ಸಹಾಯವಾಗುವಂತೆ ಆತನೇ ನಮಗೆ ತನ್ನ ಪವಿತ್ರಾತ್ಮವನ್ನು ಕೊಡುತ್ತಾನೆ. ಆದರೆ ಈ ವಿಷಯದಲ್ಲಿ ನಮ್ಮ ಪ್ರಯತ್ನವೂ ಇರಬೇಕು. ಒಮ್ಮೆ ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಜಾನ್‌ ಬಾರ್‌ ಲೂಕ 13:24​ರ ಬಗ್ಗೆ ತಿಳಿಸುತ್ತಾ ಹೀಗೆ ಹೇಳಿದರು: “ಆಧ್ಯಾತ್ಮಿಕವಾಗಿ ಬಲಗೊಳ್ಳಲು ಹೆಚ್ಚು ಪ್ರಯತ್ನ ಮಾಡದೇ ಇದ್ದಿದ್ದರಿಂದ ಅನೇಕರಿಗೆ ಇಕ್ಕಟ್ಟಾದ ಬಾಗಿಲಿನಿಂದ ಹೋಗಲು ಸಾಧ್ಯವಾಗುತ್ತಿಲ್ಲ.” ನಾವು ಯಾಕೋಬನ ತರ ಇರಬೇಕು. ಅವನು ತನಗೆ ಆಶೀರ್ವಾದ ಸಿಗುವ ತನಕ ದೇವದೂತನೊಟ್ಟಿಗೆ ಹೋರಾಟ ಮಾಡುತ್ತಾ ಇದ್ದನು. (ಆದಿ. 32:26-28) ಯಾಕೋಬನನ್ನು ನಾವು ಹೇಗೆ ಅನುಕರಿಸಬಹುದು? ಬೈಬಲಲ್ಲಿ ನಮಗೆ ಸಹಾಯ ಮಾಡುವಂಥ ಅಮೂಲ್ಯ ಸತ್ಯಗಳಿವೆ. ಅವುಗಳನ್ನು ಹುಡುಕುವ ಪ್ರಯತ್ನ ಮಾಡಬೇಕು. ಬೈಬಲ್‌ ಅಧ್ಯಯನವನ್ನು ಆನಂದಿಸಬೇಕಂತ ಅದನ್ನು ಸುಮ್ಮನೆ ಒಂದು ಕಾದಂಬರಿ ತರ ಓದಬಾರದು.

12, 13. (ಎ) ರೋಮನ್ನರಿಗೆ 15:5​ನ್ನು ಅನ್ವಯಿಸಲು ನಮಗೆ ಯಾವುದು ಸಹಾಯ ಮಾಡುತ್ತದೆ? (ಬಿ) ಪೇತ್ರನ ಉದಾಹರಣೆ ಮತ್ತು ಸಲಹೆ ನಮಗೆ ಹೇಗೆ ಸಹಾಯ ಮಾಡುತ್ತದೆ? (ಸಿ) ಆಧ್ಯಾತ್ಮಿಕವಾಗಿ ಬಲವಾಗಿರಲು ನೀವೇನು ಮಾಡಬಹುದು? (“ಆಧ್ಯಾತ್ಮಿಕವಾಗಿ ಬೆಳೆಯಲು ಸಹಾಯ ಮಾಡುವ ಅಂಶಗಳು” ಎಂಬ ಚೌಕ ನೋಡಿ.)

12 ನಾವು ಆಧ್ಯಾತ್ಮಿಕವಾಗಿ ಬೆಳೆಯಲು ಪ್ರಯತ್ನಿಸುವಾಗ ನಮ್ಮ ಯೋಚನಾ ರೀತಿಯನ್ನು ಬದಲಾಯಿಸಿಕೊಳ್ಳಲು ಪವಿತ್ರಾತ್ಮ ಸಹಾಯ ಮಾಡುತ್ತದೆ. ಹೀಗೆ ನಾವು ಕ್ರಿಸ್ತನಂತೆ ಯೋಚಿಸಲು ಸ್ವಲ್ಪಸ್ವಲ್ಪವಾಗಿ ಕಲಿಯುತ್ತೇವೆ. (ರೋಮ. 15:5) ನಮ್ಮಲ್ಲಿ ಬರುವ ತಪ್ಪಾದ ಆಸೆಗಳನ್ನು ಬೇರುಸಮೇತ ಕಿತ್ತೆಸೆಯಲು ಮತ್ತು ಯೆಹೋವನಿಗೆ ಮೆಚ್ಚಿಗೆಯಾಗುವಂಥ ಗುಣಗಳನ್ನು ಬೆಳೆಸಿಕೊಳ್ಳಲು ಪವಿತ್ರಾತ್ಮ ಸಹಾಯ ಮಾಡುತ್ತದೆ. (ಗಲಾ. 5:16, 22, 23) ನಮ್ಮ ಮನಸ್ಸು ಪ್ರಾಪಂಚಿಕತೆ ಅಥವಾ ಶಾರೀರಿಕ ಇಚ್ಛೆಗಳ ಕಡೆ ವಾಲುತ್ತಿದ್ದರೆ ನಾವು ಅವುಗಳಿಂದ ದೂರಬರಲು ಬಿಡದೇ ಪ್ರಯತ್ನಿಸಬೇಕು. ಒಳ್ಳೇ ವಿಷಯಗಳ ಕಡೆಗೆ ನಮ್ಮ ಗಮನ ಹೋಗುವಂತೆ ಪವಿತ್ರಾತ್ಮದ ಸಹಾಯಕ್ಕಾಗಿ ಬೇಡಿಕೊಳ್ಳುತ್ತಾ ಇರಬೇಕು. (ಲೂಕ 11:13) ಪೇತ್ರನ ಉದಾಹರಣೆ ತೆಗೆದುಕೊಳ್ಳಿ. ಅವನು ಕೆಲವೊಮ್ಮೆ ಕ್ರಿಸ್ತನಂತೆ ಯೋಚಿಸಲಿಲ್ಲ. (ಮತ್ತಾ. 16:22, 23; ಲೂಕ 22:34, 54-62; ಗಲಾ. 2:11-14) ಆದರೆ ಅವನು ಪ್ರಯತ್ನ ಬಿಡಲಿಲ್ಲ. ಯೆಹೋವ ದೇವರು ಸಹ ಅವನಿಗೆ ಸಹಾಯ ಮಾಡಿದನು. ಸ್ವಲ್ಪಸ್ವಲ್ಪವಾಗಿ ಅವನು ಕ್ರಿಸ್ತನಂತೆ ಯೋಚಿಸಲು ಕಲಿತನು. ಇದು ನಮ್ಮಿಂದಲೂ ಸಾಧ್ಯ!

13 ಈ ವಿಷಯದಲ್ಲಿ ನಮಗೆ ಸಹಾಯ ಮಾಡುವಂಥ ಕೆಲವೊಂದು ನಿರ್ದಿಷ್ಟ ಗುಣಗಳ ಬಗ್ಗೆ ಪೇತ್ರನು ತನ್ನ ಪತ್ರದಲ್ಲಿ ತಿಳಿಸಿದ್ದಾನೆ. (2 ಪೇತ್ರ 1:5-8 ಓದಿ.) ಸ್ವನಿಯಂತ್ರಣ, ತಾಳ್ಮೆ, ಸಹೋದರ ಮಮತೆ ಮತ್ತು ಇನ್ನಿತರ ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳಲು ನಾವು ಶತಪ್ರಯತ್ನ ಮಾಡಬೇಕು. ‘ನಾನು ಆಧ್ಯಾತ್ಮಿಕವಾಗಿ ಬಲವಾಗಿರಲಿಕ್ಕೆ ಇವತ್ತು ಯಾವ ಗುಣವನ್ನು ತೋರಿಸಲು ಪ್ರಯತ್ನ ಮಾಡಲಿ?’ ಎಂದು ನಾವು ಪ್ರತಿದಿನ ನಮ್ಮನ್ನೇ ಕೇಳಿಕೊಳ್ಳಬೇಕು.

ದಿನನಿತ್ಯದ ಜೀವನದಲ್ಲಿ ಬೈಬಲ್‌ ತತ್ವಗಳನ್ನು ಅನ್ವಯಿಸಿ

14. ನಾವು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರೆ ನಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ನಡಕೊಳ್ಳುತ್ತೇವೆ?

14 ನಾವು ಕ್ರಿಸ್ತನಂತೆ ಯೋಚಿಸಿದರೆ ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ ನಾವು ನಡೆದುಕೊಳ್ಳುವ ವಿಧ, ಮಾತಾಡುವ ವಿಧ ಚೆನ್ನಾಗಿರುತ್ತದೆ. ಪ್ರತಿದಿನ ನಾವು ಒಳ್ಳೇ ನಿರ್ಧಾರಗಳನ್ನು ಮಾಡುತ್ತೇವೆ. ನಮ್ಮ ನಿರ್ಧಾರಗಳು ನಾವು ಕ್ರಿಸ್ತನನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತೋರಿಸುತ್ತವೆ. ನಾವು ಆಧ್ಯಾತ್ಮಿಕ ವ್ಯಕ್ತಿಯಾಗಿರುವಾಗ ಯೆಹೋವನೊಟ್ಟಿಗಿರುವ ನಮ್ಮ ಸಂಬಂಧವನ್ನು ಹಾಳುಮಾಡುವಂಥ ಯಾವುದೇ ವಿಷಯವನ್ನು ಮಾಡಲು ಇಷ್ಟಪಡುವುದಿಲ್ಲ. ತಪ್ಪುಮಾಡುವ ಒತ್ತಡ ಬಂದಾಗ ಅದರಿಂದ ಹೊರಬರಲು ನಮ್ಮ ಆಧ್ಯಾತ್ಮಿಕತೆ ಸಹಾಯ ಮಾಡುತ್ತದೆ. ನಾವು ಒಂದು ನಿರ್ಧಾರ ಮಾಡುವ ಮುಂಚೆ ನಮ್ಮನ್ನು ನಾವೇ ಹೀಗೆ ಕೇಳಿಕೊಳ್ಳೋಣ: ‘ಈ ವಿಷಯದಲ್ಲಿ ಯಾವ ಬೈಬಲ್‌ ತತ್ವಗಳು ನನಗೆ ಸಹಾಯ ಮಾಡುತ್ತವೆ? ಕ್ರಿಸ್ತನು ಈ ಸನ್ನಿವೇಶದಲ್ಲಿ ಏನು ಮಾಡಿರುತ್ತಿದ್ದ? ಯೆಹೋವ ದೇವರಿಗೆ ಯಾವುದು ಇಷ್ಟ ಆಗುತ್ತೆ?’ ಈ ರೀತಿ ಪ್ರಶ್ನಿಸಿಕೊಳ್ಳುವುದನ್ನು ನಾವು ರೂಢಿ ಮಾಡಿಕೊಳ್ಳಬೇಕು. ನಮಗೆ ಎದುರಾಗಬಹುದಾದ ಕೆಲವು ಸನ್ನಿವೇಶಗಳ ಬಗ್ಗೆ ಈಗ ಚರ್ಚಿಸೋಣ. ಪ್ರತಿಯೊಂದು ಸನ್ನಿವೇಶದಲ್ಲೂ ನಾವು ಸರಿಯಾದ ನಿರ್ಧಾರ ಮಾಡಲು ಯಾವ ಬೈಬಲ್‌ ತತ್ವಗಳು ಸಹಾಯ ಮಾಡುತ್ತವೆಂದು ನೋಡೋಣ.

15, 16. ನಾವು ಕ್ರಿಸ್ತನಂತೆ ಯೋಚಿಸಿದರೆ (ಎ) ವಿವಾಹ ಸಂಗಾತಿಯ ಆಯ್ಕೆ ಮತ್ತು (ಬಿ) ಸ್ನೇಹಿತರ ಆಯ್ಕೆಯ ವಿಷಯದಲ್ಲಿ ಒಳ್ಳೇ ನಿರ್ಧಾರ ಮಾಡಲು ಹೇಗೆ ಸಹಾಯವಾಗುತ್ತದೆ?

15 ವಿವಾಹ ಸಂಗಾತಿಯ ಆಯ್ಕೆ. ಇದನ್ನು ಮಾಡಲು 2 ಕೊರಿಂಥ 6:14, 15​ರಲ್ಲಿರುವ ತತ್ವ ಸಹಾಯ ಮಾಡುತ್ತದೆ. (ಓದಿ.) ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಭೌತಿಕ ವ್ಯಕ್ತಿಗಿಂತ ತುಂಬ ಭಿನ್ನವಾಗಿರುತ್ತಾನೆ ಎಂದು ಪೌಲನು ಆ ವಚನಗಳಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾನೆ. ಇವರಿಬ್ಬರ ದೃಷ್ಟಿಕೋನ ಬೇರೆ ಬೇರೆಯಾಗಿರುತ್ತದೆ. ವಿವಾಹ ಸಂಗಾತಿಯನ್ನು ಆಯ್ಕೆ ಮಾಡಲು ಈ ತತ್ವ ನಿಮಗೆ ಹೇಗೆ ಸಹಾಯ ಮಾಡಬಹುದು?

16 ಸ್ನೇಹಿತರ ಆಯ್ಕೆ. ಇದನ್ನು ಮಾಡಲು 1 ಕೊರಿಂಥ 15:33​ರಲ್ಲಿರುವ ತತ್ವ ಸಹಾಯ ಮಾಡುತ್ತದೆ. (ಓದಿ.) ಒಬ್ಬ ಆಧ್ಯಾತ್ಮಿಕ ವ್ಯಕ್ತಿ ತನ್ನ ಆಧ್ಯಾತ್ಮಿಕತೆಯನ್ನು ಹಾಳುಮಾಡುವಂಥ ಜನರ ಸ್ನೇಹ ಮಾಡಲ್ಲ. ವಚನದಲ್ಲಿರುವ ತತ್ವವನ್ನು ಬೇರೆ ಯಾವುದಕ್ಕೆಲ್ಲಾ ಅನ್ವಯಿಸಿಕೊಳ್ಳಬಹುದು? ಉದಾಹರಣೆಗೆ, ಸೋಷಿಯಲ್‌ ನೆಟ್‌ವರ್ಕ್‌ ವಿಷಯಕ್ಕೆ ಬಂದಾಗ ಈ ತತ್ವವನ್ನು ಹೇಗೆ ಅನ್ವಯಿಸಿಕೊಳ್ಳಬಹುದು? ಅಪರಿಚಿತರೊಟ್ಟಿಗೆ ಆನ್‌ಲೈನ್‌ ಗೇಮ್‌ ಆಡುವ ವಿಷಯಕ್ಕೆ ಇದನ್ನು ಹೇಗೆ ಅನ್ವಯಿಸುವಿರಿ?

ನಾನು ಆಧ್ಯಾತ್ಮಿಕ ವ್ಯಕ್ತಿಯಾಗಿ ಬೆಳೆಯಲು ನನ್ನ ನಿರ್ಧಾರಗಳು ಸಹಾಯ ಮಾಡುತ್ತವಾ? (ಪ್ಯಾರ 17 ನೋಡಿ)

17-19. ನಾವು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರೆ (ಎ) ಯಾವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲ್ಲ? (ಬಿ) ಯಾವ ಗುರಿಗಳನ್ನು ಇಡುತ್ತೇವೆ? (ಸಿ) ಭಿನ್ನಾಭಿಪ್ರಾಯಗಳನ್ನು ಹೇಗೆ ಬಗೆಹರಿಸುತ್ತೇವೆ?

17 ನಮ್ಮ ಆಧ್ಯಾತ್ಮಿಕತೆಯನ್ನು ಹಾಳುಮಾಡುವಂಥ ಚಟುವಟಿಕೆಗಳು. ಈ ವಿಷಯದಲ್ಲಿ ನಮಗೊಂದು ಎಚ್ಚರಿಕೆಯನ್ನು ಇಬ್ರಿಯ 6:1​ರಲ್ಲಿ ಕೊಡಲಾಗಿದೆ. (ಓದಿ.) ಯಾವ “ನಿರ್ಜೀವ ಕ್ರಿಯೆಗಳಿಂದ” ನಾವು ದೂರವಿರಬೇಕು? ನಾವು ಆಧ್ಯಾತ್ಮಿಕವಾಗಿ ಬೆಳೆಯಲು ಸಹಾಯ ಮಾಡದಂಥ ನಿಷ್ಪ್ರಯೋಜಕ ಕ್ರಿಯೆಗಳಿಂದ ದೂರವಿರಬೇಕು. ಈ ಎಚ್ಚರಿಕೆಯು ಮುಂದೆ ಕೊಡಲಾಗಿರುವಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯ ಮಾಡುತ್ತದೆ: ‘ನಾನು ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಏನಾದರೂ ಪ್ರಯೋಜನ ಇದೆಯಾ? ನಾನು ಈ ವ್ಯಾಪಾರ-ವ್ಯವಹಾರಕ್ಕೆ ಕೈಹಾಕಬಹುದಾ? ಈ ಲೋಕವನ್ನು ಸುಧಾರಿಸುತ್ತೇವೆಂದು ಹೇಳಿಕೊಳ್ಳುವ ಗುಂಪುಗಳಿಗೆ ನಾನು ಯಾಕೆ ಸೇರಬಾರದು?’

ನಾನು ಆಧ್ಯಾತ್ಮಿಕ ಗುರಿಗಳನ್ನಿಡಲು ನನ್ನ ನಿರ್ಧಾರಗಳು ಸಹಾಯ ಮಾಡುತ್ತವಾ? (ಪ್ಯಾರ 18 ನೋಡಿ)

18 ಆಧ್ಯಾತ್ಮಿಕ ಗುರಿಗಳು. ನಾವು ಯಾವ ಗುರಿಯಿಡಬೇಕು ಎನ್ನುವುದರ ಬಗ್ಗೆ ಯೇಸು ಪರ್ವತ ಪ್ರಸಂಗದಲ್ಲಿ ಒಳ್ಳೇ ಸಲಹೆ ಕೊಟ್ಟನು. (ಮತ್ತಾ. 6:33) ಒಬ್ಬ ಆಧ್ಯಾತ್ಮಿಕ ವ್ಯಕ್ತಿ ತನ್ನ ಜೀವನದಲ್ಲಿ ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡುತ್ತಾನೆ. ಈ ತತ್ವವು ‘ಮೂಲಭೂತ ಶಿಕ್ಷಣ ಮುಗಿದ ಮೇಲೆ ನಾನು ಉನ್ನತ ಶಿಕ್ಷಣ ಪಡೆಯಬೇಕಾ? ನಾನು ಈ ಕೆಲಸವನ್ನು ಮಾಡಬಹುದಾ ಮಾಡಬಾರದಾ?’ ಎಂಬಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯ ಮಾಡುತ್ತದೆ.

ನಾನು ಇತರರೊಂದಿಗೆ ಶಾಂತಿಯಿಂದಿರಲು ನನ್ನ ನಿರ್ಧಾರಗಳು ಸಹಾಯ ಮಾಡುತ್ತವಾ? (ಪ್ಯಾರ 19 ನೋಡಿ)

19 ಭಿನ್ನಾಭಿಪ್ರಾಯಗಳು. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪೌಲನು ಕೊಟ್ಟ ಸಲಹೆ ಸಹಾಯ ಮಾಡುತ್ತದೆ. (ರೋಮ. 12:18) ನಾವು ಕ್ರಿಸ್ತನನ್ನು ಅನುಕರಿಸುವುದರಿಂದ ‘ಎಲ್ಲರೊಂದಿಗೆ ಶಾಂತಿಶೀಲರಾಗಿರಲು’ ಪ್ರಯತ್ನಿಸುತ್ತೇವೆ. ನಮಗೆ ಯಾರ ಜೊತೆಯಾದರೂ ಭಿನ್ನಾಭಿಪ್ರಾಯ ಉಂಟಾದರೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಇನ್ನೊಬ್ಬರ ಅಭಿಪ್ರಾಯವನ್ನು ಸ್ವೀಕರಿಸಲು ನಮಗೆ ಕಷ್ಟ ಆಗುತ್ತದಾ ಅಥವಾ ಎಲ್ಲರೊಟ್ಟಿಗೆ ಶಾಂತಿಯಿಂದ ಇರಲು ಬಯಸುವ ವ್ಯಕ್ತಿ ಎಂದು ಜನ ನಮ್ಮನ್ನು ಗುರುತಿಸುತ್ತಾರಾ?—ಯಾಕೋ. 3:18.

20. ಆಧ್ಯಾತ್ಮಿಕವಾಗಿ ಬೆಳೆಯಲು ನೀವು ಯಾಕೆ ಬಯಸುತ್ತೀರಿ?

20 ನಮ್ಮ ಜೀವನದಲ್ಲಿ ಬೈಬಲ್‌ ತತ್ವಗಳನ್ನು ಅನ್ವಯಿಸಿಕೊಂಡರೆ ನಾವು ಹೇಗೆ ಒಳ್ಳೆಯ ನಿರ್ಧಾರ ಮಾಡಬಹುದು ಎನ್ನುವುದನ್ನು ಈ ಉದಾಹರಣೆಗಳು ತೋರಿಸುತ್ತವೆ. ಇಂಥ ತತ್ವಗಳನ್ನು ನಾವು ಅನ್ವಯಿಸಿಕೊಂಡಾಗ ಪವಿತ್ರಾತ್ಮ ನಮ್ಮನ್ನು ಮಾರ್ಗದರ್ಶಿಸುತ್ತಿದೆ ಎಂದು ರುಜುಪಡಿಸುತ್ತೇವೆ. ನಾವು ಆಧ್ಯಾತ್ಮಿಕ ವ್ಯಕ್ತಿಯಾದರೆ ಜೀವನದಲ್ಲಿ ಸಂತೋಷ, ನೆಮ್ಮದಿ ಇರುತ್ತದೆ. ಆರಂಭದಲ್ಲಿ ತಿಳಿಸಲಾದ ರಾಬರ್ಟ್‌ ಹೀಗೆ ಹೇಳುತ್ತಾರೆ: “ಯೆಹೋವನೊಂದಿಗೆ ನಾನು ಆಪ್ತ ಸಂಬಂಧ ಬೆಳೆಸಿಕೊಂಡ ಮೇಲೆ ನಾನೊಬ್ಬ ಒಳ್ಳೇ ಗಂಡ ಮತ್ತು ಒಳ್ಳೇ ತಂದೆಯಾಗಲು ಸಾಧ್ಯವಾಯಿತು. ಸಂತೋಷ-ಸಂತೃಪ್ತಿ ಪಡೆದುಕೊಂಡೆ.” ನಾವು ಸಹ ಆಧ್ಯಾತ್ಮಿಕವಾಗಿ ಬೆಳೆಯಲು ಪ್ರಯತ್ನಿಸಿದರೆ ನಮಗೂ ಅನೇಕ ಪ್ರಯೋಜನಗಳು ಸಿಗುತ್ತವೆ. ಈಗ ನಮ್ಮ ಜೀವನದಲ್ಲಿ ಸಂತೋಷ ಇರುತ್ತದೆ ಮತ್ತು ಭವಿಷ್ಯದಲ್ಲಿ “ವಾಸ್ತವವಾದ ಜೀವನವನ್ನು” ಆನಂದಿಸುತ್ತೇವೆ.—1 ತಿಮೊ. 6:19.