ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾಕೋಬನು ಏಸಾವನ ಚೊಚ್ಚಲತನದ ಹಕ್ಕನ್ನು ಕೊಂಡುಕೊಂಡ ಕಾರಣ ಮೆಸ್ಸೀಯನ ಪೂರ್ವಜನಾದನಾ?

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಬೈಬಲ್‌ ಕಾಲದಲ್ಲಿ, ಮೆಸ್ಸೀಯನ ವಂಶಾವಳಿಯಲ್ಲಿರುವ ಪುರುಷರೆಲ್ಲರೂ ಚೊಚ್ಚಲತನದ ಹಕ್ಕು ಇದ್ದವರಾ?

ಈ ಹಿಂದೆ ನಮ್ಮ ಪ್ರಕಾಶನಗಳಲ್ಲಿ ಕೆಲವೊಮ್ಮೆ ಈ ಅರ್ಥ ಕೊಡುವಂಥ ಹೇಳಿಕೆಗಳನ್ನು ನಾವು ಮಾಡಿದ್ದೆವು. ಇಬ್ರಿಯ 12:16​ರ ಪ್ರಕಾರ ಇದು ಸರಿ ಎಂದು ಕಂಡಿತ್ತು. ಏಸಾವನು ‘ಪವಿತ್ರ ವಿಷಯಗಳನ್ನು ಗಣ್ಯಮಾಡಲಿಲ್ಲ’ ಮತ್ತು “ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲತನದ ಹಕ್ಕನ್ನೇ [ಯಾಕೋಬನಿಗೆ] ಕೊಟ್ಟುಬಿಟ್ಟ” ಎಂದು ಆ ವಚನ ಹೇಳುತ್ತದೆ. ಯಾಕೋಬನು ‘ಚೊಚ್ಚಲತನದ ಹಕ್ಕನ್ನು’ ಪಡೆದುಕೊಂಡದ್ದರಿಂದ ಅವನು ಮೆಸ್ಸೀಯನ ಪೂರ್ವಜನು ಆದನೆಂದು ಆ ವಚನ ಸೂಚಿಸುವಂತೆ ಕಂಡಿತ್ತು.—ಮತ್ತಾ. 1:2, 16; ಲೂಕ 3:23, 34.

ಆದರೆ ಬೈಬಲ್‌ ವೃತ್ತಾಂತಗಳನ್ನು ಪರಿಶೀಲಿಸಿದಾಗ ಮೆಸ್ಸೀಯನ ಪೂರ್ವಜನಾಗಲು ಒಬ್ಬನಿಗೆ ಚೊಚ್ಚಲತನದ ಹಕ್ಕು ಇರಲೇಬೇಕು ಎಂದೇನಿರಲಿಲ್ಲವೆಂದು ಗೊತ್ತಾಗುತ್ತದೆ. ಕೆಲವೊಂದು ಪುರಾವೆಗಳನ್ನು ಇಲ್ಲಿ ಕೊಡಲಾಗಿದೆ.

ಯಾಕೋಬನಿಗೆ (ಇಸ್ರಾಯೇಲನಿಗೆ) ಲೇಯಳಿಂದ ಹುಟ್ಟಿದ ಗಂಡುಮಕ್ಕಳಲ್ಲಿ ಚೊಚ್ಚಲ ಮಗ ರೂಬೇನ್‌. ನಂತರ, ಯಾಕೋಬನು ಹೆಚ್ಚು ಪ್ರೀತಿಸುತ್ತಿದ್ದ ಪತ್ನಿಯಾದ ರಾಹೇಲಳಿಂದ ಹುಟ್ಟಿದ ಚೊಚ್ಚಲ ಮಗ ಯೋಸೇಫ. ರೂಬೇನನ ಕೆಟ್ಟ ನಡತೆಯಿಂದಾಗಿ ಅವನ ಚೊಚ್ಚಲತನದ ಹಕ್ಕು ಯೋಸೇಫನಿಗೆ ಕೊಡಲ್ಪಟ್ಟಿತು. (ಆದಿ. 29:31-35; 30:22-25; 35:22-26; 49:22-26; 1 ಪೂರ್ವ. 5:1, 2) ಆದರೂ ಮೆಸ್ಸೀಯನು ಹುಟ್ಟಿದ್ದು ರೂಬೇನ್‌ ಅಥವಾ ಯೋಸೇಫನ ವಂಶದಲ್ಲಿ ಅಲ್ಲ. ಬದಲಾಗಿ ಲೇಯಳ ನಾಲ್ಕನೇ ಪುತ್ರನಾದ ಯೆಹೂದನ ವಂಶದಲ್ಲಿ.—ಆದಿ. 49:10.

ಲೂಕ 3:32​ರಲ್ಲಿ ದಾಖಲಾಗಿರುವ ಮೆಸ್ಸೀಯನ ವಂಶಾವಳಿಯಲ್ಲಿರುವ ಐದು ಪುರುಷರ ಬಗ್ಗೆ ನೋಡಿ. ಆ ಐದು ಪುರುಷರೂ ಚೊಚ್ಚಲ ಮಕ್ಕಳಂತೆ ತೋರುತ್ತದೆ. ಉದಾಹರಣೆಗೆ, ಬೋವಜ ಮತ್ತು ಅವನ ಮಗ ಓಬೇದ ಹಾಗೂ ಓಬೇದನ ಮಗ ಇಷಯ ಚೊಚ್ಚಲ ಮಕ್ಕಳಾಗಿದ್ದರು.—ರೂತ. 4:17, 20-22; 1 ಪೂರ್ವ. 2:10-12.

ಆದರೆ ಇಷಯನ ಮಗನಾದ ದಾವೀದ ಚೊಚ್ಚಲ ಮಗನಾಗಿರಲಿಲ್ಲ. ಇವನು ಇಷಯನ ಎಂಟು ಪುತ್ರರಲ್ಲಿ ಕೊನೇ ಮಗನಾಗಿದ್ದನು. ಹಾಗಿದ್ದರೂ ಮೆಸ್ಸೀಯನು ದಾವೀದನ ವಂಶದಲ್ಲಿ ಹುಟ್ಟಿದನು. (1 ಸಮು. 16:10, 11; 17:12; ಮತ್ತಾ. 1:5, 6) ಅದೇ ರೀತಿ, ಮೆಸ್ಸೀಯನ ವಂಶಾವಳಿಯಲ್ಲಿ ದಾವೀದನ ನಂತರ ಇರುವ ಸೊಲೊಮೋನನು ಕೂಡ ದಾವೀದನ ಚೊಚ್ಚಲ ಮಗನಾಗಿರಲಿಲ್ಲ.—2 ಸಮು. 3:2-5.

ಇದನ್ನೆಲ್ಲ ಪರಿಗಣಿಸಿ ಚೊಚ್ಚಲತನಕ್ಕೆ ಬೆಲೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಚೊಚ್ಚಲ ಮಗನಿಗೆ ಗೌರವಯುತ ಸ್ಥಾನವಿತ್ತು ಮತ್ತು ತಂದೆಯ ನಂತರ ಹೆಚ್ಚಾಗಿ ಅವನೇ ಕುಟುಂಬದ ಯಜಮಾನನಾಗುತ್ತಿದ್ದ. ಅಷ್ಟೇ ಅಲ್ಲ, ಆಸ್ತಿಯಲ್ಲಿ ಎರಡು ಭಾಗ ಚೊಚ್ಚಲ ಮಗನಿಗೆ ಸಿಗುತ್ತಿತ್ತು.—ಆದಿ. 43:33; ಧರ್ಮೋ. 21:17; ಯೆಹೋ. 17:1.

ಚೊಚ್ಚಲತನದ ಹಕ್ಕನ್ನು ಬೇರೆಯವರಿಗೆ ದಾಟಿಸಬಹುದಿತ್ತು. ಅಬ್ರಹಾಮನು ಇಷ್ಮಾಯೇಲನನ್ನು ಕಳುಹಿಸಿಬಿಟ್ಟಿದ್ದರಿಂದ ಅವನ ಚೊಚ್ಚಲತನದ ಹಕ್ಕು ಇಸಾಕನಿಗೆ ಬಂತು. (ಆದಿ. 21:14-21; 22:2) ಈಗಾಗಲೇ ನೋಡಿದಂತೆ, ರೂಬೇನನ ಚೊಚ್ಚಲತನದ ಹಕ್ಕು ಯೋಸೇಫನಿಗೆ ಸಿಕ್ಕಿತು.

ಈಗ ನಾವು ಪುನಃ ಇಬ್ರಿಯ 12:16​ಕ್ಕೆ ಬರೋಣ. ಅದು ಹೇಳುವುದು: “ಯಾವ ಜಾರನಾಗಲಿ, ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲತನದ ಹಕ್ಕನ್ನೇ ಕೊಟ್ಟುಬಿಟ್ಟ ಏಸಾವನಂತೆ ಪವಿತ್ರ ವಿಷಯಗಳನ್ನು ಗಣ್ಯಮಾಡದವನಾಗಲಿ ನಿಮ್ಮಲ್ಲಿ ಇರದಂತೆ ಜಾಗ್ರತೆಯಿಂದ ನೋಡಿಕೊಳ್ಳಿರಿ.” ಈ ವಚನ ಏನು ತಿಳಿಸುತ್ತಾ ಇದೆ?

ಅಪೊಸ್ತಲ ಪೌಲನು ಮೆಸ್ಸೀಯನ ಪೂರ್ವಜರ ಬಗ್ಗೆ ಚರ್ಚಿಸುತ್ತಿರಲಿಲ್ಲ. ಅವನು ಹಿಂದಿನ ವಚನಗಳಲ್ಲಿ ಕ್ರೈಸ್ತರಿಗೆ ತಮ್ಮ ‘ಪಾದಗಳಿಗೆ ನೇರವಾದ ದಾರಿಗಳನ್ನು ಮಾಡಲು’ ಪ್ರೋತ್ಸಾಹಿಸಿದ್ದನು. ಯಾಕೆಂದರೆ ಅವರು ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿದರೆ “ದೇವರ ಅಪಾತ್ರ ದಯೆಯನ್ನು ಹೊಂದಲು” ತಪ್ಪಿಹೋಗುತ್ತಿದ್ದರು. (ಇಬ್ರಿ. 12:12-16) ಹೀಗೆ ಪಾಪ ಮಾಡಿದರೆ ಅವರು ಏಸಾವನಂತೆ ಆಗುತ್ತಿದ್ದರು. ಅವನು “ಪವಿತ್ರ ವಿಷಯಗಳನ್ನು ಗಣ್ಯಮಾಡ”ಲಿಲ್ಲ.

ಕುಟುಂಬದ ಯಜಮಾನರು ತಮ್ಮ ಕುಟುಂಬದವರಿಗಾಗಿ ಯಾಜಕರಾಗಿ ಸೇವೆಸಲ್ಲಿಸುತ್ತಿದ್ದ ಸಮಯದಲ್ಲಿ ಏಸಾವನು ಜೀವಿಸಿದ್ದನು. ಹಾಗಾಗಿ ಏಸಾವನಿಗೂ ತನ್ನ ಕುಟುಂಬಕ್ಕಾಗಿ ಆಗೊಮ್ಮೆ ಈಗೊಮ್ಮೆ ಯಜ್ಞಗಳನ್ನು ಅರ್ಪಿಸುವ ಸುಯೋಗ ಸಿಕ್ಕಿರಬಹುದು. (ಆದಿ. 8:20, 21; 12:7, 8; ಯೋಬ 1:4, 5) ಆದರೆ ಶಾರೀರಿಕ ಆಸೆಗಳನ್ನು ತೀರಿಸಿಕೊಳ್ಳುವ ಪ್ರವೃತ್ತಿಯಿದ್ದ ಅವನು ಒಬ್ಬ ಚೊಚ್ಚಲಮಗನಿಗಿದ್ದ ಎಲ್ಲ ಸುಯೋಗಗಳನ್ನು ಒಂದು ಬಟ್ಟಲು ಅಲಸಂದಿಗುಗ್ಗರಿಗಾಗಿ ಕೊಟ್ಟುಬಿಟ್ಟನು. ಅವನು ಅಬ್ರಹಾಮನ ಸಂತತಿಗೆ ಬರಲಿದೆಯೆಂದು ಮುಂತಿಳಿಸಲಾಗಿದ್ದ ಕಷ್ಟದಿಂದ ತಪ್ಪಿಸಿಕೊಳ್ಳಲು ಬಹುಶಃ ಹೀಗೆ ಮಾಡಿದನು. (ಆದಿ. 15:13) ತನಗೆ ಪವಿತ್ರ ವಿಷಯಗಳ ಕಡೆಗೆ ಗಣ್ಯತೆ ಇಲ್ಲ ಎನ್ನುವುದನ್ನೂ ಅವನು ತೋರಿಸಿಕೊಟ್ಟನು. ಹೇಗೆ? ಸುಳ್ಳು ದೇವರ ಆರಾಧಕರಾದ ಇಬ್ಬರು ಹೆಂಗಸರನ್ನು ಮದುವೆ ಮಾಡಿಕೊಳ್ಳುವ ಮೂಲಕ. ಇದರಿಂದ ಅವನ ಹೆತ್ತವರು ದುಃಖಿಸುವಂತಾಯಿತು. (ಆದಿ. 26:34, 35) ಸತ್ಯಾರಾಧಕಳನ್ನೇ ಮದುವೆಯಾಗಲು ಪ್ರಯಾಸಪಟ್ಟ ಯಾಕೋಬನಿಗೂ ಏಸಾವನಿಗೂ ಎಷ್ಟೊಂದು ವ್ಯತ್ಯಾಸ!—ಆದಿ. 28:6, 7; 29:10-12, 18.

ಕೊನೆಗೆ, ಮೆಸ್ಸೀಯನಾದ ಯೇಸುವಿನ ವಂಶಾವಳಿಯ ಬಗ್ಗೆ ಯಾವ ತೀರ್ಮಾನಕ್ಕೆ ಬರಬಹುದು? ಆ ವಂಶಾವಳಿಯಲ್ಲಿದ್ದ ಪುರುಷರಲ್ಲಿ ಕೆಲವರು ಚೊಚ್ಚಲ ಗಂಡುಮಕ್ಕಳಾಗಿದ್ದರು, ಆದರೆ ಎಲ್ಲರೂ ಅಲ್ಲ. ಇದನ್ನು ಯೆಹೂದ್ಯರು ಅರ್ಥಮಾಡಿಕೊಂಡರು ಮತ್ತು ಸ್ವೀಕರಿಸಿದರು. ಆದ್ದರಿಂದಲೇ ಕ್ರಿಸ್ತನು ಇಷಯನ ಕೊನೆ ಮಗನಾದ ದಾವೀದನ ವಂಶದಲ್ಲಿ ಬರುವನೆಂದು ಒಪ್ಪಿಕೊಂಡರು.—ಮತ್ತಾ. 22:42.