ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಬ್ಬರನ್ನೊಬ್ಬರು “ಇನ್ನಷ್ಟು ಹೆಚ್ಚು” ಪ್ರೋತ್ಸಾಹಿಸಿರಿ

ಒಬ್ಬರನ್ನೊಬ್ಬರು “ಇನ್ನಷ್ಟು ಹೆಚ್ಚು” ಪ್ರೋತ್ಸಾಹಿಸಿರಿ

“ನಾವು ಪರಸ್ಪರ ಹಿತಚಿಂತಕರಾಗಿದ್ದು . . . ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ. ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೀವು ನೋಡುವಾಗ ಇದನ್ನು ಇನ್ನಷ್ಟು ಹೆಚ್ಚು ಮಾಡಿರಿ.”—ಇಬ್ರಿ. 10:24, 25.

ಗೀತೆಗಳು: 121, 119

1. ಒಬ್ಬರನ್ನೊಬ್ಬರು “ಇನ್ನಷ್ಟು ಹೆಚ್ಚು” ಪ್ರೋತ್ಸಾಹಿಸುವಂತೆ ಇಬ್ರಿಯ ಕ್ರೈಸ್ತರಿಗೆ ಪೌಲನು ಯಾಕೆ ಉತ್ತೇಜಿಸಿದನು?

ಮೊದಲನೇ ಶತಮಾನದಲ್ಲಿ, ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರಿಗೆ ಈ ಸಲಹೆ ಕೊಟ್ಟನು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ; ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ. ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೀವು ನೋಡುವಾಗ ಇದನ್ನು ಇನ್ನಷ್ಟು ಹೆಚ್ಚು ಮಾಡಿರಿ.” (ಇಬ್ರಿ. 10:24, 25) ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವುದನ್ನು ಇನ್ನಷ್ಟು ಹೆಚ್ಚು ಮಾಡಬೇಕೆಂದು ಪೌಲನು ಯಾಕೆ ಹೇಳುತ್ತಿದ್ದಾನೆಂದು ಆಗಿನ ಸಹೋದರರು ಯೋಚಿಸಿರಬಹುದು. ಆದರೆ ಕೇವಲ ಐದು ವರ್ಷಗಳ ನಂತರ ಅದಕ್ಕಿದ್ದ ಒಂದು ಕಾರಣ ಅವರಿಗೆ ಸ್ಪಷ್ಟವಾಯಿತು. ಯೆರೂಸಲೇಮಿನ ಮೇಲೆ ಯೆಹೋವನ ನ್ಯಾಯತೀರ್ಪಿನ ದಿನ ಹತ್ತಿರವಾಗಿದೆ ಅನ್ನುವುದನ್ನು ಅವರು ನೋಡಲು ಸಾಧ್ಯವಾಯಿತು. ಯೇಸು ಮೊದಲೇ ತಿಳಿಸಿದಂತೆ ಆ ಪಟ್ಟಣವನ್ನು ಅವರು ಬಿಟ್ಟುಹೋಗಬೇಕೆಂದು ಅರ್ಥಮಾಡಿಕೊಂಡರು. (ಲೂಕ 21:20-22; ಅ. ಕಾ. 2:19, 20) ಆ ನ್ಯಾಯತೀರ್ಪಿನ ದಿನ ಕ್ರಿ.ಶ. 70​ರಲ್ಲಿ ಬಂತು. ಆ ವರ್ಷದಲ್ಲಿ ರೋಮನ್ನರು ಬಂದು ಯೆರೂಸಲೇಮನ್ನು ನಾಶಮಾಡಿಬಿಟ್ಟರು.

2. ಇಂದು ನಾವು ಯಾಕೆ ಒಬ್ಬರನ್ನೊಬ್ಬರು ಇನ್ನಷ್ಟು ಹೆಚ್ಚು ಪ್ರೋತ್ಸಾಹಿಸಬೇಕು?

2 ಇಂದು ನಾವು ಸಹ ಅಂಥದ್ದೇ ಪರಿಸ್ಥಿತಿಯಲ್ಲಿದ್ದೇವೆ. “ಮಹತ್ತರವೂ ಅತಿಭಯಂಕರವೂ” ಆದ ಯೆಹೋವನ ದಿನ ಹತ್ತಿರವಾಗಿದೆ. (ಯೋವೇ. 2:11) ಪ್ರವಾದಿ ಚೆಫನ್ಯ ಹೇಳಿದ್ದು ನಮ್ಮ ಸಮಯಕ್ಕೂ ಅನ್ವಯವಾಗುತ್ತದೆ: “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.” (ಚೆಫ. 1:14) ಹಾಗಾಗಿ ‘ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಾ ಇರಬೇಕು ಮತ್ತು ಸತ್ಕಾರ್ಯಮಾಡಬೇಕು.’ (ಇಬ್ರಿ. 10:24) ನಮ್ಮ ಸಹೋದರರ ಮೇಲೆ ಹೆಚ್ಚು ಆಸಕ್ತಿ ಇರಬೇಕು. ಆಗ ಅಗತ್ಯವಿರುವ ಸಮಯದಲ್ಲೆಲ್ಲ ಪ್ರೋತ್ಸಾಹ ನೀಡುತ್ತೇವೆ.

ಯಾರಿಗೆ ಪ್ರೋತ್ಸಾಹದ ಅಗತ್ಯವಿದೆ?

3. ಪ್ರೋತ್ಸಾಹ ಕೊಡುವುದರ ಬಗ್ಗೆ ಅಪೊಸ್ತಲ ಪೌಲನು ಏನು ಹೇಳಿದ್ದಾನೆ? (ಲೇಖನದ ಆರಂಭದ ಚಿತ್ರ ನೋಡಿ.)

3 “ಕಳವಳವು ಮನಸ್ಸನ್ನು ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು.” (ಜ್ಞಾನೋ. 12:25) ನಮ್ಮೆಲ್ಲರಿಗೂ ಆಗ್ಗಿಂದಾಗ್ಗೆ ಪ್ರೋತ್ಸಾಹ ಬೇಕು. ಇತರರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಇರುವವರಿಗೂ ಪ್ರೋತ್ಸಾಹದ ಅಗತ್ಯವಿದೆ ಅನ್ನುವುದನ್ನು ಪೌಲನು ಸ್ಪಷ್ಟವಾಗಿ ತಿಳಿಸಿದನು. ಅವನು ರೋಮ್‌ನಲ್ಲಿದ್ದ ಸಹೋದರರಿಗೆ ಬರೆದದ್ದು: “ನಾನು ನಿಮ್ಮನ್ನು ನೋಡಲು ಹಂಬಲಿಸುತ್ತಿದ್ದೇನೆ, ಈ ಮೂಲಕ ನಿಮ್ಮನ್ನು ದೃಢಪಡಿಸಲಿಕ್ಕಾಗಿ ನಾನು ನಿಮಗೆ ಆಧ್ಯಾತ್ಮಿಕ ವರವನ್ನು ಕೊಡಲು ಸಾಧ್ಯವಾಗಬಹುದು; ಇಲ್ಲವೆ, ಇನ್ನೂ ಖಚಿತವಾಗಿ, ನಿಮ್ಮ ಮಧ್ಯೆ ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅಂದರೆ ನಿಮ್ಮ ನಂಬಿಕೆಯಿಂದ ನಾನು ಮತ್ತು ನನ್ನ ನಂಬಿಕೆಯಿಂದ ನೀವು ಉತ್ತೇಜಿಸಲ್ಪಡಲು ಸಾಧ್ಯವಾಗಬಹುದು.” (ರೋಮ. 1:11, 12) ಇದರಿಂದ ಪೌಲನಿಗೆ ಸಹ ಕೆಲವೊಮ್ಮೆ ಪ್ರೋತ್ಸಾಹದ ಅಗತ್ಯವಿತ್ತು ಎಂದು ಗೊತ್ತಾಗುತ್ತದೆ.—ರೋಮನ್ನರಿಗೆ 15:30-32 ಓದಿ.

4, 5. ಇಂದು ನಾವು ಯಾರನ್ನೆಲ್ಲ ಪ್ರೋತ್ಸಾಹಿಸಬೇಕು ಮತ್ತು ಯಾಕೆ?

4 ಇಂದು ಪೂರ್ಣಸಮಯದ ಸೇವೆ ಮಾಡುತ್ತಿರುವವರನ್ನು ನಾವು ಪ್ರೋತ್ಸಾಹಿಸಬೇಕು. ಉದಾಹರಣೆಗೆ, ನಂಬಿಗಸ್ತ ಪಯನೀಯರರನ್ನು ಪ್ರೋತ್ಸಾಹಿಸಬಹುದು. ಅವರಲ್ಲಿ ಅನೇಕರು ಪಯನೀಯರ್‌ ಸೇವೆ ಮಾಡಲಿಕ್ಕಾಗಿ ತಮಗಿಷ್ಟವಾದ ವಿಷಯಗಳನ್ನು ತ್ಯಾಗಮಾಡಿದ್ದಾರೆ. ಮಿಷನರಿಗಳು, ಬೆತೆಲಿನಲ್ಲಿ ಸೇವೆ ಮಾಡುವವರು, ಸಂಚರಣ ಮೇಲ್ವಿಚಾರಕರು ಮತ್ತವರ ಪತ್ನಿಯರು ಹಾಗೂ ಪ್ರಾದೇಶಿಕ ಭಾಷಾಂತರ ಕಚೇರಿಗಳಲ್ಲಿ ಕೆಲಸ ಮಾಡುವವರ ವಿಷಯದಲ್ಲೂ ಇದು ಸತ್ಯ. ಯೆಹೋವನ ಸೇವೆಯಲ್ಲಿ ಹೆಚ್ಚು ಸಮಯ ಕಳೆಯಲು ಇವರೆಲ್ಲರೂ ತ್ಯಾಗಗಳನ್ನು ಮಾಡಿದ್ದಾರೆ. ಹಾಗಾಗಿ ನಾವು ಇವರನ್ನು ಪ್ರೋತ್ಸಾಹಿಸಬೇಕು. ಈ ಹಿಂದೆ ಪೂರ್ಣಸಮಯದ ಸೇವೆಯನ್ನು ಮಾಡಿದವರೂ ಇದ್ದಾರೆ. ಅವರಿಗೆ ಈಗಲೂ ಆ ಸೇವೆಯನ್ನು ಮಾಡಲು ಮನಸ್ಸಿದೆ, ಆದರೆ ಕೆಲವು ಕಾರಣಗಳಿಂದ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಅಂಥವರನ್ನೂ ನಾವು ಪ್ರೋತ್ಸಾಹಿಸಿದಾಗ ಅವರಿಗೆ ಸಂತೋಷವಾಗುತ್ತದೆ.

5 ಇನ್ನೂ ಯಾರನ್ನೆಲ್ಲ ನಾವು ಪ್ರೋತ್ಸಾಹಿಸಬಹುದು? ‘ಕರ್ತನಲ್ಲಿರುವವರನ್ನು ಮಾತ್ರ’ ಮದುವೆಯಾಗಬೇಕು ಎನ್ನುವ ಯೆಹೋವನ ಸಲಹೆಗೆ ವಿಧೇಯತೆ ತೋರಿಸಲು ಬಯಸುವುದರಿಂದ ಇನ್ನೂ ಮದುವೆಯಾಗದೆ ಉಳಿದಿರುವ ನಮ್ಮ ಸಹೋದರ ಸಹೋದರಿಯರನ್ನೂ ನಾವು ಪ್ರೋತ್ಸಾಹಿಸಬೇಕು. (1 ಕೊರಿಂ. 7:39) ಗಂಡಂದಿರು ಹೆಂಡತಿಯರಿಗೆ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಹೇಳುವ ಮೂಲಕ ಮತ್ತು ಅವರು ಮಾಡುವ ಎಲ್ಲ ವಿಷಯಗಳಿಗಾಗಿ ಗಣ್ಯತೆ ತೋರಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು. (ಜ್ಞಾನೋ. 31:28, 31) ಹಿಂಸೆಯನ್ನು, ಅನಾರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿರುವ ಕ್ರೈಸ್ತರನ್ನೂ ಪ್ರೋತ್ಸಾಹಿಸಬೇಕು. (2 ಥೆಸ. 1:3-5) ಈ ಎಲ್ಲ ನಂಬಿಗಸ್ತ ಸೇವಕರನ್ನು ಯೆಹೋವ ಮತ್ತು ಯೇಸು ಸಂತೈಸುತ್ತಾರೆ.—2 ಥೆಸಲೊನೀಕ 2:16, 17 ಓದಿ.

ಹಿರಿಯರು ಪ್ರೋತ್ಸಾಹಿಸುತ್ತಾರೆ

6. ಯೆಶಾಯ 32:1, 2​ರಲ್ಲಿ ತಿಳಿಸಿರುವಂತೆ ಹಿರಿಯರ ಪಾತ್ರದ ಬಗ್ಗೆ ನಮಗೇನು ಗೊತ್ತಾಗುತ್ತದೆ?

6 ಯೆಶಾಯ 32:1, 2 ಓದಿ. ನಾವಿಂದು ಕಷ್ಟಕರ ಸಮಯದಲ್ಲಿ ಜೀವಿಸುತ್ತಿದ್ದೇವೆ. ಹಾಗಾಗಿ ನಮಗೆ ದುಃಖ, ನಿರಾಶೆ ಆಗುವುದು ಸಹಜ. ನಮ್ಮನ್ನು ಪ್ರೋತ್ಸಾಹಿಸಲು ಯೇಸು ಕ್ರಿಸ್ತನು ತನ್ನ ಅಭಿಷಿಕ್ತ ಸಹೋದರರನ್ನು ಮತ್ತು ಬೇರೆ ಕುರಿಗಳಲ್ಲಿರುವ ನಂಬಿಗಸ್ತ ‘ಅಧಿಪತಿಗಳನ್ನು’ ಉಪಯೋಗಿಸುತ್ತಿದ್ದಾನೆ. ಈ ಅಧಿಪತಿಗಳು ಅಂದರೆ ಸಭಾ ಹಿರಿಯರು ನಮ್ಮ ನಂಬಿಕೆಯ ‘ಒಡೆಯರಾಗಿಲ್ಲ.’ ಬದಲಿಗೆ ನಮ್ಮ ಸಂತೋಷಕ್ಕಾಗಿ ನಮ್ಮ ‘ಜೊತೆ ಕೆಲಸದವರು’ ಆಗಿದ್ದಾರೆ. ನಾವು ಸಂತೋಷವಾಗಿರಬೇಕು, ನಂಬಿಗಸ್ತರಾಗಿ ಉಳಿಯಬೇಕೆಂದು ಅವರು ಬಯಸುತ್ತಾರೆ.—2 ಕೊರಿಂ. 1:24.

7, 8. ತಮ್ಮ ಮಾತಿನ ಮೂಲಕ ಮತ್ತು ಕ್ರಿಯೆಯ ಮೂಲಕ ಹಿರಿಯರು ಹೇಗೆ ಇತರರನ್ನು ಪ್ರೋತ್ಸಾಹಿಸಬಹುದು?

7 ಸಹೋದರರನ್ನು ಪ್ರೋತ್ಸಾಹಿಸಲು ಯಾವಾಗಲೂ ಪ್ರಯತ್ನಿಸುತ್ತಿದ್ದ ಅಪೊಸ್ತಲ ಪೌಲನನ್ನು ಹಿರಿಯರು ಅನುಕರಿಸಬಹುದು. ಹಿಂಸೆ ಅನುಭವಿಸುತ್ತಿದ್ದ ಥೆಸಲೊನೀಕದ ಕ್ರೈಸ್ತರಿಗೆ ಆತನು ಬರೆದದ್ದು: “ನೀವು ನಮಗೆ ಅತಿ ಪ್ರಿಯರಾದ ಕಾರಣ ನಿಮ್ಮ ವಿಷಯದಲ್ಲಿ ಕೋಮಲ ಮಮತೆಯುಳ್ಳವರಾಗಿದ್ದು ದೇವರ ಸುವಾರ್ತೆಯನ್ನು ಹೇಳುವುದಕ್ಕೆ ಮಾತ್ರವಲ್ಲದೆ ನಮ್ಮ ಸ್ವಂತ ಪ್ರಾಣಗಳನ್ನೇ ಕೊಡುವುದಕ್ಕೂ ಸಂತೋಷಿಸಿದೆವು.”—1 ಥೆಸ. 2:8.

8 ಹಿರಿಯರು ತಮ್ಮ ಮಾತುಗಳಿಂದ ತುಂಬ ಪ್ರೋತ್ಸಾಹ ಕೊಡಬಹುದು. ಆದರೆ ಇದು ಸಾಕಾಗುತ್ತಾ? ಎಫೆಸ ಸಭೆಯ ಹಿರಿಯರಿಗೆ ಪೌಲನು ಹೀಗೆ ಹೇಳಿದನು: “ನೀವು ಬಲಹೀನರಿಗೆ ನೆರವು ನೀಡಬೇಕೆಂಬುದನ್ನು ನಾನು ಎಲ್ಲ ವಿಷಯಗಳಲ್ಲಿ ನಿಮಗೆ ತೋರಿಸಿಕೊಟ್ಟಿದ್ದೇನೆ; ‘ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ’ ಎಂದು ಕರ್ತನಾದ ಯೇಸುವೇ ಹೇಳಿದ ಮಾತುಗಳನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳಬೇಕು.” (ಅ. ಕಾ. 20:35) ಸಹೋದರರಿಗಾಗಿ ಪೌಲನು ‘ತನ್ನನ್ನು ಸಂಪೂರ್ಣವಾಗಿ ವಿನಿಯೋಗಿಸಿಕೊಳ್ಳಲು’ ಸಿದ್ಧನಿದ್ದನು. ಸಹೋದರರಿಗೋಸ್ಕರ ತನ್ನಿಂದಾದ ಎಲ್ಲವನ್ನೂ ಮಾಡಲು ಸಿದ್ಧನಿದ್ದೇನೆಂದು ತನ್ನ ಕ್ರಿಯೆಗಳಿಂದ ತೋರಿಸಿಕೊಟ್ಟನು. (2 ಕೊರಿಂ. 12:15) ಅದೇ ರೀತಿ, ಹಿರಿಯರು ಸಹ ಇತರರನ್ನು ತಮ್ಮ ಮಾತಿನ ಮೂಲಕ ಮಾತ್ರವಲ್ಲ ತಮ್ಮ ಕ್ರಿಯೆಗಳಿಂದಲೂ ಪ್ರೋತ್ಸಾಹಿಸಬೇಕು ಮತ್ತು ಸಂತೈಸಬೇಕು. ಹೀಗೆ ಮಾಡಿದಾಗ ಎಲ್ಲರ ಬಗ್ಗೆ ಅವರಿಗೆ ನಿಜವಾದ ಕಾಳಜಿ ಇದೆ ಎಂದು ಗೊತ್ತಾಗುತ್ತದೆ.—1 ಕೊರಿಂ. 14:3.

9. ಹಿರಿಯರು ಪ್ರೋತ್ಸಾಹಿಸುವ ವಿಧದಲ್ಲಿ ಹೇಗೆ ಬುದ್ಧಿವಾದ ಹೇಳಬಹುದು?

9 ಹಿರಿಯರು ಸಹೋದರರನ್ನು ಬಲಪಡಿಸಲು ಕೆಲವೊಮ್ಮೆ ಬುದ್ಧಿವಾದ ಹೇಳಬೇಕಾಗುತ್ತದೆ. ಇದನ್ನು ಪ್ರೋತ್ಸಾಹಿಸುವ ವಿಧದಲ್ಲಿ ಹೇಗೆ ಮಾಡಬಹುದೆಂದು ಅವರು ಬೈಬಲಿನಿಂದ ಕಲಿಯಬಹುದು. ಯೇಸು ಸತ್ತು ಪುನರುತ್ಥಾನವಾದ ನಂತರ ಏಷ್ಯಾ ಮೈನರ್‌ನಲ್ಲಿದ್ದ ಸಭೆಗಳಿಗೆ ಬುದ್ಧಿವಾದ ಹೇಳಿದನು. ಅವನು ಅದನ್ನು ಮಾಡಿದ ವಿಧ ಅತ್ಯುತ್ತಮ ವಿಧವಾಗಿದೆ. ಎಫೆಸ, ಪೆರ್ಗಮ ಮತ್ತು ಥುವತೈರ ಸಭೆಗಳಿಗೆ ಯೇಸು ಗಂಭೀರ ತಿದ್ದುಪಾಟನ್ನು ಕೊಡಬೇಕಿತ್ತು. ಆದರೆ ಅದನ್ನು ಕೊಡುವ ಮುಂಚೆ ಆತನು ಆ ಸಭೆಗಳು ಮಾಡುತ್ತಿದ್ದ ಒಳ್ಳೆಯ ವಿಷಯಗಳ ಕುರಿತು ಶ್ಲಾಘಿಸಿದನು. (ಪ್ರಕ. 2:1-5, 12, 13, 18, 19) ಲವೊದಿಕೀಯ ಸಭೆಗೆ ಯೇಸು ಹೀಗೆ ಹೇಳಿದನು: “ಯಾರ ಬಗ್ಗೆ ನನಗೆ ಮಮತೆಯಿದೆಯೋ ಅವರೆಲ್ಲರನ್ನು ನಾನು ಗದರಿಸುತ್ತೇನೆ ಮತ್ತು ಶಿಸ್ತುಗೊಳಿಸುತ್ತೇನೆ. ಆದುದರಿಂದ ಹುರುಪುಳ್ಳವನಾಗಿರು ಮತ್ತು ಪಶ್ಚಾತ್ತಾಪಪಡು.” (ಪ್ರಕ. 3:19) ನಮ್ಮ ಪ್ರೀತಿಯ ಹಿರಿಯರು ತಿದ್ದುಪಾಟು ನೀಡುವಾಗ ಕ್ರಿಸ್ತನನ್ನು ಅನುಕರಿಸಲು ಪ್ರಯತ್ನಿಸುತ್ತಾರೆ.

ಹಿರಿಯರು ಮಾತ್ರ ಪ್ರೋತ್ಸಾಹಿಸಬೇಕಾ?

ಹೆತ್ತವರೇ, ಬೇರೆಯವರನ್ನು ಪ್ರೋತ್ಸಾಹಿಸಲು ನಿಮ್ಮ ಮಕ್ಕಳಿಗೆ ತರಬೇತಿ ಕೊಡುತ್ತಿದ್ದೀರಾ? (ಪ್ಯಾರ 10 ನೋಡಿ)

10. ನಾವೆಲ್ಲರೂ ಒಬ್ಬರನ್ನೊಬ್ಬರು ಹೇಗೆ ಬಲಪಡಿಸಬಹುದು?

10 ಪ್ರೋತ್ಸಾಹಿಸುವ ಜವಾಬ್ದಾರಿ ಹಿರಿಯರಿಗೆ ಮಾತ್ರ ಇದೆ ಅಂತೇನಿಲ್ಲ. ಪೌಲನು ಎಲ್ಲ ಕ್ರೈಸ್ತರಿಗೆ ಈ ಸಲಹೆಯನ್ನು ಕೊಟ್ಟನು: “ಅಗತ್ಯಕ್ಕನುಸಾರ ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ; ಇದು ಕೇಳುವವರಿಗೆ ಪ್ರಯೋಜನವನ್ನು ಉಂಟುಮಾಡಬಹುದು.” (ಎಫೆ. 4:29) ಬೇರೆಯವರಿಗೆ ಏನು ಬೇಕು ಎಂದು ನಮಗೆ ಗೊತ್ತಿದ್ದರೆ ನಾವು ಸಹಾಯ ಮಾಡಲು ಮುಂದೆ ಬರುತ್ತೇವೆ. ಯೆಶಾಯನು ಹೇಳಿದ್ದು: “ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ.” (ಯೆಶಾ. 35:3; ಇಬ್ರಿ. 12:12, 13) ನಾವೆಲ್ಲರೂ, ಚಿಕ್ಕವರು ಸಹ ನಮ್ಮ ಮಾತಿನಿಂದ ಒಬ್ಬರನ್ನೊಬ್ಬರು ಬಲಪಡಿಸಬಹುದು ಮತ್ತು ಪ್ರೋತ್ಸಾಹಿಸಬಹುದು.

11. ಮಾರ್ಥ ಎಂಬ ಸಹೋದರಿಗೆ ಖಿನ್ನತೆಯ ಸಮಸ್ಯೆ ಇದ್ದಾಗ ಯಾವ ಸಹಾಯ ಸಿಕ್ಕಿತು?

11 ಮಾರ್ಥ * ಎಂಬ ಸಹೋದರಿಗೆ ಸ್ವಲ್ಪ ಸಮಯ ಖಿನ್ನತೆಯ ಸಮಸ್ಯೆ ಇತ್ತು. ಅವರು ಬರೆದದ್ದು: “ಒಂದು ದಿನ ಪ್ರೋತ್ಸಾಹ ಬೇಕೆಂದು ನಾನು ಪ್ರಾರ್ಥಿಸಿದೆ. ಅದೇ ದಿನ ಒಬ್ಬ ವೃದ್ಧ ಸಹೋದರಿ ನನಗೆ ಸಿಕ್ಕಿದರು ಮತ್ತು ತುಂಬ ಪ್ರೀತಿ, ಅನುಕಂಪ ತೋರಿಸಿದರು. ಆ ಸಮಯದಲ್ಲಿ ನನಗೆ ಅದರ ಅಗತ್ಯ ತುಂಬ ಇತ್ತು. ನಾನು ಎದುರಿಸುತ್ತಿದ್ದ ಪರೀಕ್ಷೆಯನ್ನು ಒಂದು ಸಮಯದಲ್ಲಿ ಅವರೂ ಎದುರಿಸಿದ್ದರು ಎಂದು ಹೇಳಿದರು. ಆಗ ನನಗೆ ಬಂದ ಕಷ್ಟ ಬೇರೆ ಯಾರಿಗೂ ಬಂದಿಲ್ಲ ಅನ್ನುವ ಭಾವನೆ ಕಡಿಮೆಯಾಯಿತು.” ಆ ವೃದ್ಧ ಸಹೋದರಿಗೆ ತಮ್ಮ ಮಾತುಗಳಿಂದ ಮಾರ್ಥಗೆ ಎಷ್ಟು ಸಹಾಯ ಆಗಿರಬಹುದೆಂಬ ಅಂದಾಜೂ ಇರಲಿಕ್ಕಿಲ್ಲ!

12, 13. ಫಿಲಿಪ್ಪಿ 2:1-4​ರಲ್ಲಿರುವ ಸಲಹೆಯನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು?

12 ಪೌಲ ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ ಹೀಗೆ ಬರೆದನು: “ಕ್ರಿಸ್ತನಲ್ಲಿ ಯಾವುದೇ ಉತ್ತೇಜನ ಇರುವಲ್ಲಿ, ಪ್ರೀತಿಯ ಸಂತೈಸುವಿಕೆ ಇರುವಲ್ಲಿ, ಪರಸ್ಪರ ಹಿತಚಿಂತನೆ ಇರುವಲ್ಲಿ, ಕೋಮಲ ಮಮತೆ ಮತ್ತು ಸಹಾನುಭೂತಿಗಳು ಇರುವಲ್ಲಿ, ನೀವು ಒಂದೇ ಮನಸ್ಸುಳ್ಳವರೂ ಒಂದೇ ಪ್ರೀತಿಯುಳ್ಳವರೂ ಅನ್ಯೋನ್ಯಭಾವವುಳ್ಳವರೂ ಮನಸ್ಸಿನಲ್ಲಿ ಒಂದೇ ಆಲೋಚನೆಯುಳ್ಳವರೂ ಆಗಿರುವ ಮೂಲಕ ನನ್ನ ಆನಂದವನ್ನು ಪೂರ್ಣಗೊಳಿಸಿರಿ. ಕಲಹಶೀಲ ಮನೋಭಾವದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ. ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ.”—ಫಿಲಿ. 2:1-4.

13 ಹಾಗಾಗಿ ನಾವು ಬೇರೆಯವರಿಗೆ ಸಹಾಯ ಮಾಡಲು ಅವಕಾಶಗಳಿಗಾಗಿ ಹುಡುಕಬೇಕು. ನಮ್ಮ ಸಹೋದರ ಸಹೋದರಿಯರನ್ನು ಪ್ರೋತ್ಸಾಹಿಸಲು ನಾವು ಅವರನ್ನು ‘ಪ್ರೀತಿಯಿಂದ ಸಂತೈಸಬಹುದು’ ಮತ್ತು ಅವರಿಗೆ “ಪರಸ್ಪರ ಹಿತಚಿಂತನೆ,” “ಕೋಮಲ ಮಮತೆ ಮತ್ತು ಸಹಾನುಭೂತಿ” ತೋರಿಸಬಹುದು.

ಹೇಗೆಲ್ಲ ಪ್ರೋತ್ಸಾಹಿಸಬಹುದು?

14. ನಾವು ಬೇರೆಯವರನ್ನು ಪ್ರೋತ್ಸಾಹಿಸುವ ಒಂದು ವಿಧ ಯಾವುದು?

14 ನಾವು ಹಿಂದೆ ಯಾರಿಗೆ ಸಹಾಯ ಮಾಡಿದೆವೋ ಆ ವ್ಯಕ್ತಿಗಳು ಈಗಲೂ ನಂಬಿಗಸ್ತರಾಗಿದ್ದಾರೆ ಅನ್ನುವುದನ್ನು ಕೇಳುವಾಗ ನಮಗೆ ತುಂಬ ಸಂತೋಷವಾಗುತ್ತದೆ. ಅಪೊಸ್ತಲ ಯೋಹಾನನು ಬರೆದದ್ದು: “ನನ್ನ ಮಕ್ಕಳು ಸತ್ಯದಲ್ಲಿ ನಡೆಯುತ್ತಾ ಇದ್ದಾರೆಂಬುದನ್ನು ಕೇಳಿಸಿಕೊಳ್ಳುವುದಕ್ಕಿಂತ ಕೃತಜ್ಞತೆಯನ್ನು ಸಲ್ಲಿಸಲು ಹೆಚ್ಚಿನ ಕಾರಣ ನನಗಿಲ್ಲ.” (3 ಯೋಹಾ. 4) ತುಂಬ ವರ್ಷಗಳ ಹಿಂದೆ ತಾವು ಯಾರಿಗೆ ಸತ್ಯ ಕಲಿಸಿದರೋ ಆ ಜನರು ಈಗಲೂ ಯೆಹೋವನಿಗೆ ನಂಬಿಗಸ್ತರಾಗಿದ್ದಾರೆ, ಕೆಲವರು ಪಯನೀಯರ್‌ ಸೇವೆಯನ್ನೂ ಮಾಡುತ್ತಿದ್ದಾರೆ ಎಂದು ಪಯನೀಯರ್‌ ಸಹೋದರ ಸಹೋದರಿಯರಿಗೆ ಗೊತ್ತಾದಾಗ ಎಷ್ಟು ಸಂತೋಷ ಆಗಬಹುದು! ಹಾಗಾಗಿ ಈ ಪಯನೀಯರರು ಏನೋ ಕಾರಣಕ್ಕೆ ನಿರುತ್ಸಾಹಗೊಂಡಿದ್ದಾರೆ ಎಂದು ನಮಗೆ ಗೊತ್ತಾದರೆ, ಅವರು ಬೇರೆಯವರಿಗೆ ಮಾಡಿದಂಥ ಒಳ್ಳೆಯ ವಿಷಯಗಳನ್ನು ಅವರಿಗೆ ನೆನಪಿಸಬೇಕು.

15. ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಿರುವವರನ್ನು ಪ್ರೋತ್ಸಾಹಿಸಲು ನಾವೇನು ಮಾಡಬಹುದು?

15 ಅನೇಕ ಸಂಚರಣ ಮೇಲ್ವಿಚಾರಕರು ಮತ್ತವರ ಪತ್ನಿಯರು ಹೇಳುವಂತೆ, ಅವರು ಸಭೆಗಳನ್ನು ಭೇಟಿ ಮಾಡಿದ ಮೇಲೆ ಯಾರಾದರೂ ಥ್ಯಾಂಕ್‌-ಯೂ ಕಾರ್ಡ್‌ ಕಳುಹಿಸಿದರೆ ಅವರಿಗೆ ತುಂಬ ಪ್ರೋತ್ಸಾಹ ಸಿಗುತ್ತದೆ. ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಿರುವ ಹಿರಿಯರು, ಮಿಷನರಿಗಳು, ಪಯನೀಯರರು ಮತ್ತು ಬೆತೆಲ್‌ನಲ್ಲಿ ಸೇವೆ ಮಾಡುವವರ ವಿಷಯದಲ್ಲೂ ಇದು ಸತ್ಯ. ನಾವು ಅವರಿಗೆ ಕೃತಜ್ಞತೆ ಹೇಳಿದರೆ, ನಾವು ಅಂದುಕೊಳ್ಳುವುದಕ್ಕಿಂತ ಹೆಚ್ಚು ಪ್ರೋತ್ಸಾಹ ಕೊಟ್ಟಿರುತ್ತೇವೆ.

ನಾವೆಲ್ಲರೂ ಹೇಗೆ ಪ್ರೋತ್ಸಾಹ ಪಡಕೊಳ್ಳಬಹುದು?

16. ನಾವು ಮಾಡುವ ಯಾವ ಚಿಕ್ಕ ವಿಷಯ ಸಹ ಒಬ್ಬರನ್ನು ಪ್ರೋತ್ಸಾಹಿಸಬಹುದು?

16 ‘ನಾನಷ್ಟು ಮಾತಾಡುವ ವ್ಯಕ್ತಿಯಲ್ಲ, ಆದ್ದರಿಂದ ನನಗೆ ಬೇರೆಯವರನ್ನು ಪ್ರೋತ್ಸಾಹಿಸಲು ಬರುವುದಿಲ್ಲ’ ಅಂತ ನಮಗನಿಸಿದರೆ ಅದು ನಮ್ಮ ತಪ್ಪು ಕಲ್ಪನೆ. ಯಾಕೆಂದರೆ, ಇತರರನ್ನು ಪ್ರೋತ್ಸಾಹಿಸುವುದು ಅಷ್ಟೇನು ಕಷ್ಟವಲ್ಲ. ಒಂದು ಮುಗುಳ್ನಗೆ ಬೀರಿದರೂ ಸಾಕು. ಅವರು ಪ್ರತಿಯಾಗಿ ನಗಲಿಲ್ಲ ಅಂದರೆ ಅವರಿಗೆ ಯಾವುದೋ ಚಿಂತೆ ಇರಬಹುದು, ಯಾರ ಹತ್ತಿರವಾದರೂ ಮಾತಾಡಬೇಕು ಎಂದು ಅನಿಸುತ್ತಿರಬಹುದು ಎಂದರ್ಥ. ಅವರು ಮಾತಾಡುವಾಗ ಕೇಳಿಸಿಕೊಳ್ಳುವ ಮೂಲಕ ಅವರಿಗೆ ನೀವು ಸಾಂತ್ವನ ಕೊಡಬಹುದು.—ಯಾಕೋ. 1:19.

17. ಒಬ್ಬ ಯುವ ಸಹೋದರನಿಗೆ ಹೇಗೆ ಪ್ರೋತ್ಸಾಹ ಸಿಕ್ಕಿತು?

17 ಹೆನ್ರಿ ಎಂಬ ಯುವ ಸಹೋದರನಿಗೆ ತನ್ನ ಆಪ್ತ ಸಂಬಂಧಿಕರಲ್ಲಿ ಅನೇಕರು ಯೆಹೋವನ ಸೇವೆ ಮಾಡುವುದನ್ನು ನಿಲ್ಲಿಸಿದಾಗ ತುಂಬ ದುಃಖವಾಯಿತು. ಅವರಲ್ಲಿ ಹಿರಿಯರಾಗಿ ಸೇವೆ ಮಾಡುತ್ತಿದ್ದ ಅವನ ತಂದೆಯೂ ಒಬ್ಬರು. ಒಬ್ಬ ಸಂಚರಣ ಮೇಲ್ವಿಚಾರಕರು ಹೆನ್ರಿ ಬೇಜಾರಾಗಿರುವುದನ್ನು ಗಮನಿಸಿ ಅವನನ್ನು ಕಾಫಿಗೆ ಕರೆದುಕೊಂಡು ಹೋದರು. ಹೆನ್ರಿ ತನ್ನ ಭಾವನೆಗಳನ್ನು ಹೇಳಿಕೊಳ್ಳುವಾಗ ಆ ಸಹೋದರ ಗಮನಕೊಟ್ಟು ಕೇಳಿದರು. ಆ ಸಂಭಾಷಣೆಯ ನಂತರ, ತನ್ನ ಕುಟುಂಬ ಸತ್ಯಕ್ಕೆ ವಾಪಸ್‌ ಬರಲು ತಾನು ಸಹಾಯ ಮಾಡಬಹುದಾದ ಒಂದೇ ವಿಧ ತಾನು ನಂಬಿಗಸ್ತಿಕೆಯಿಂದ ಇರುವುದೇ ಎಂದು ಹೆನ್ರಿ ಅರ್ಥಮಾಡಿಕೊಂಡನು. ಕೀರ್ತನೆ 46, ಚೆಫನ್ಯ 3:17 ಮತ್ತು ಮಾರ್ಕ 10:29, 30​ನ್ನು ಓದುವ ಮೂಲಕವೂ ಸಾಂತ್ವನ ಪಡೆದನು.

ನಾವೆಲ್ಲರೂ ಒಬ್ಬರನ್ನೊಬ್ಬರು ಬಲಪಡಿಸಬಹುದು, ಪ್ರೋತ್ಸಾಹಿಸಬಹುದು (ಪ್ಯಾರ 18 ನೋಡಿ)

18. (ಎ) ಪ್ರೋತ್ಸಾಹದ ಬಗ್ಗೆ ರಾಜ ಸೊಲೊಮೋನನು ಏನು ಬರೆದಿದ್ದಾನೆ? (ಬಿ) ಅಪೊಸ್ತಲ ಪೌಲನು ಯಾವ ಸಲಹೆ ಕೊಟ್ಟಿದ್ದಾನೆ?

18 ಮಾರ್ಥ ಮತ್ತು ಹೆನ್ರಿಯ ಅನುಭವಗಳಿಂದ ನಾವೇನು ಕಲಿಯಬಹುದು? ಸಾಂತ್ವನದ ಅಗತ್ಯವಿರುವ ಸಹೋದರ ಅಥವಾ ಸಹೋದರಿಯರಿಗೆ ನಮ್ಮಲ್ಲಿ ಯಾರು ಬೇಕಾದರೂ ಪ್ರೋತ್ಸಾಹ ಕೊಡಬಹುದು. ರಾಜ ಸೊಲೊಮೋನನು ಹೀಗೆ ಬರೆದನು: “ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯ! [ನಗುಮುಖವು] ಹೃದಯಕ್ಕೆ ಆನಂದ; ಕಿವಿಗೆ ಬಿದ್ದ ಒಳ್ಳೇ ಸುದ್ದಿ ಎಲುಬಿಗೆ ಪುಷ್ಟಿ.” (ಜ್ಞಾನೋ. 15:23, 30) ನಿಮಗೆ ಗೊತ್ತಿರುವ ಯಾರಾದರೂ ನಿರುತ್ಸಾಹಗೊಂಡಿರುವುದು ಅಥವಾ ದುಃಖದಲ್ಲಿರುವುದು ನೆನಪಾಗುತ್ತಾ? ನೀವು ಅವರ ಹತ್ತಿರ ಹೋಗಿ ಕಾವಲಿನಬುರುಜು ಪತ್ರಿಕೆಯಿಂದ ಅಥವಾ ನಮ್ಮ ವೆಬ್‌ಸೈಟ್‌ನಿಂದ ಏನಾದರೂ ಓದಿದರೆ ಸಾಕು ಅವರಿಗೆ ಉತ್ತೇಜನ ಸಿಗುತ್ತದೆ. ಜೊತೆಗೆ, ಅವರೊಟ್ಟಿಗೆ ಸೇರಿ ರಾಜ್ಯ ಗೀತೆಗಳನ್ನು ಹಾಡುವುದರಿಂದಲೂ ಎಷ್ಟೋ ಸಮಾಧಾನ ಸಿಗುತ್ತದೆ. ಇದರ ಕುರಿತು ಪೌಲನು ಬರೆದದ್ದು: “ಕೀರ್ತನೆಗಳಿಂದಲೂ ದೇವರ ಸ್ತುತಿಗೀತೆಗಳಿಂದಲೂ ಸೌಜನ್ಯಭರಿತವಾದ ಆಧ್ಯಾತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಬೋಧಿಸುತ್ತಾ ಬುದ್ಧಿಹೇಳುತ್ತಾ ನಿಮ್ಮ ಹೃದಯಗಳಲ್ಲಿ ಯೆಹೋವನಿಗೆ ಗಾನಮಾಡಿರಿ.”—ಕೊಲೊ. 3:16; ಅ. ಕಾ. 16:25.

19. (ಎ) ಪ್ರೋತ್ಸಾಹ ಕೊಡುವುದು ಯಾಕೆ ತುಂಬ ಪ್ರಾಮುಖ್ಯವಾಗಿದೆ? (ಬಿ) ನಾವೇನು ಮಾಡಬೇಕು?

19 ಯೆಹೋವನ ದಿನ ಹತ್ತಿರವಾಗುತ್ತಿರುವುದರಿಂದ ನಾವು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವುದು ತುಂಬ ಪ್ರಾಮುಖ್ಯವಾಗಿದೆ. (ಇಬ್ರಿ. 10:25) “ನೀವು ಈಗಾಗಲೇ ಮಾಡುತ್ತಿರುವಂತೆ ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ ಇರಿ” ಎಂದು ಪೌಲನು ತನ್ನ ಕಾಲದಲ್ಲಿದ್ದ ಕ್ರೈಸ್ತರಿಗೆ ಕೊಟ್ಟ ಸಲಹೆಯನ್ನು ನಾವು ಪಾಲಿಸಿದರೆ ಸಂತೋಷವಾಗಿರುತ್ತೇವೆ.—1 ಥೆಸ. 5:11.

^ ಪ್ಯಾರ. 11 ಹೆಸರುಗಳನ್ನು ಬದಲಾಯಿಸಲಾಗಿದೆ.