ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಯಾಕೆ “ಬಹಳ ಫಲವನ್ನು ಕೊಡುತ್ತಾ” ಇರಬೇಕು?

ನಾವು ಯಾಕೆ “ಬಹಳ ಫಲವನ್ನು ಕೊಡುತ್ತಾ” ಇರಬೇಕು?

“ನೀವು ಬಹಳ ಫಲವನ್ನು ಕೊಡುತ್ತಾ ನನ್ನ ಶಿಷ್ಯರೆಂಬುದನ್ನು ರುಜುಪಡಿಸುತ್ತಾ ಇರುವಲ್ಲಿ, ನನ್ನ ತಂದೆಯು ಮಹಿಮೆಗೊಳಿಸಲ್ಪಡುತ್ತಾನೆ.”—ಯೋಹಾ. 15:8.

ಗೀತೆಗಳು: 145, 144

1, 2. (ಎ) ಯೇಸು ತಾನು ಸಾಯುವ ಹಿಂದಿನ ರಾತ್ರಿ ತನ್ನ ಶಿಷ್ಯರೊಂದಿಗೆ ಯಾವುದರ ಕುರಿತು ಚರ್ಚಿಸಿದನು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ನಾವು ಯಾಕೆ ಸಾರಬೇಕೆಂದು ಮನಸ್ಸಲ್ಲಿಟ್ಟುಕೊಳ್ಳುವುದು ಪ್ರಾಮುಖ್ಯವೇಕೆ? (ಸಿ) ನಾವು ಏನನ್ನು ಚರ್ಚಿಸಲಿದ್ದೇವೆ?

ಯೇಸು ತಾನು ಸಾಯುವ ಹಿಂದಿನ ರಾತ್ರಿ ತನ್ನ ಅಪೊಸ್ತಲರೊಂದಿಗೆ ಬಹಳ ಹೊತ್ತು ಮಾತಾಡಿದನು. ತಾನು ಅವರನ್ನು ತುಂಬ ಪ್ರೀತಿಸುತ್ತೇನೆಂದು ಆಶ್ವಾಸನೆ ಕೊಟ್ಟನು. ನಾವು ಹಿಂದಿನ ಲೇಖನದಲ್ಲಿ ಚರ್ಚಿಸಿದ ದ್ರಾಕ್ಷಿ ಬಳ್ಳಿಯ ದೃಷ್ಟಾಂತವನ್ನು ಸಹ ಅವರಿಗೆ ತಿಳಿಸಿದನು. ತನ್ನ ಶಿಷ್ಯರು “ಬಹಳ ಫಲವನ್ನು ಕೊಡುತ್ತಾ” ಇರಲು ಅಂದರೆ ರಾಜ್ಯದ ಸಂದೇಶವನ್ನು ಸಾರುತ್ತಾ ಇರಲು ಯೇಸು ಈ ದೃಷ್ಟಾಂತದ ಮೂಲಕ ಪ್ರೋತ್ಸಾಹಿಸಿದನು.—ಯೋಹಾ. 15:8.

2 ಶಿಷ್ಯರು ಸಾರುತ್ತಾ ಇರಲು ಏನು ಮಾಡಬೇಕು ಎಂದು ಯೇಸು ಹೇಳಿದ್ದಲ್ಲದೆ ಯಾಕೆ ಇದನ್ನು ಮಾಡಬೇಕು ಎಂದು ಸಹ ತಿಳಿಸಿದನು. ಸಾರುತ್ತಾ ಇರಲು ತನ್ನ ಶಿಷ್ಯರಿಗೆ ಕಾರಣಗಳನ್ನು ಕೊಟ್ಟನು. ನಾವು ಸಹ ಸಾರುವ ಕೆಲಸವನ್ನು ಯಾಕೆ ಮಾಡುತ್ತಾ ಇರಬೇಕೆಂದು ಮನಸ್ಸಲ್ಲಿಟ್ಟುಕೊಳ್ಳುವುದು ಪ್ರಾಮುಖ್ಯವಾಗಿದೆ. ಇದನ್ನು ಮನಸ್ಸಲ್ಲಿಟ್ಟುಕೊಂಡರೆ “ಎಲ್ಲ ಜನಾಂಗಗಳಿಗೆ ಸಾಕ್ಷಿ” ಕೊಡುತ್ತಾ ಇರಲು ನಮಗೆ ಬೇಕಾದ ಪ್ರಚೋದನೆ ಸಿಗುತ್ತದೆ. (ಮತ್ತಾ. 24:13, 14) ಈ ಲೇಖನದಲ್ಲಿ ನಾವು ಯಾಕೆ ಸಾರಬೇಕು ಎನ್ನುವುದಕ್ಕೆ ಬೈಬಲಿನಿಂದ ನಾಲ್ಕು ಕಾರಣಗಳನ್ನು ನೋಡಲಿದ್ದೇವೆ. ನಾವು ಫಲವನ್ನು ಕೊಡುತ್ತಾ ಇರಲು ಯೆಹೋವನಿಂದ ಸಿಗುವ ನಾಲ್ಕು ಉಡುಗೊರೆಗಳು ಸಹಾಯ ಮಾಡುತ್ತವೆ. ಅವುಗಳ ಬಗ್ಗೆಯೂ ಚರ್ಚಿಸಲಿದ್ದೇವೆ.

ಯೆಹೋವನನ್ನು ಮಹಿಮೆಪಡಿಸುತ್ತೇವೆ

3. (ಎ) ಯೋಹಾನ 15:8ಕ್ಕನುಸಾರ ನಾವು ಸಾರಲು ಅತಿ ಪ್ರಾಮುಖ್ಯ ಕಾರಣವೇನು? (ಬಿ) ಯೇಸು ಹೇಳಿದ ದೃಷ್ಟಾಂತದಲ್ಲಿ ದ್ರಾಕ್ಷಿ ಹಣ್ಣು ಏನನ್ನು ಸೂಚಿಸುತ್ತದೆ ಮತ್ತು ಈ ಹೋಲಿಕೆ ಯಾಕೆ ಸೂಕ್ತವಾಗಿದೆ?

3 ನಾವು ಸಾರಲು ಅತಿ ಪ್ರಾಮುಖ್ಯ ಕಾರಣ ಯೆಹೋವನನ್ನು ಮಹಿಮೆಪಡಿಸಲು ಮತ್ತು ಆತನ ಹೆಸರನ್ನು ಪವಿತ್ರೀಕರಿಸಲು ಬಯಸುವುದೇ ಆಗಿದೆ. (ಯೋಹಾನ 15:1, 8 ಓದಿ.) ದ್ರಾಕ್ಷಿ ಬಳ್ಳಿಯ ದೃಷ್ಟಾಂತವನ್ನು ಯೇಸು ಹೇಳಿದಾಗ ಯೆಹೋವನನ್ನು ದ್ರಾಕ್ಷಿ ಬೆಳೆಯುತ್ತಿದ್ದ ವ್ಯವಸಾಯಗಾರನಿಗೆ ಅಥವಾ ತೋಟಗಾರನಿಗೆ ಹೋಲಿಸಿದನು. ತಾನು ದ್ರಾಕ್ಷಿಯ ಬಳ್ಳಿ ಅಥವಾ ಕಾಂಡ ಮತ್ತು ತನ್ನ ಹಿಂಬಾಲಕರು ಕೊಂಬೆಗಳಾಗಿದ್ದಾರೆ ಎಂದು ಹೇಳಿದನು. (ಯೋಹಾ. 15:5) ಆದ್ದರಿಂದ ಆ ಕೊಂಬೆಗಳಲ್ಲಿ ಬರುವ ದ್ರಾಕ್ಷಿ ಹಣ್ಣು ಯೇಸುವಿನ ಶಿಷ್ಯರು ಉತ್ಪಾದಿಸುವಂಥ ಫಲಕ್ಕೆ ಅಂದರೆ ಅವರು ಮಾಡುವ ಸಾರುವ ಕೆಲಸಕ್ಕೆ ಸೂಚಿಸುತ್ತದೆ. ಯೇಸು ತನ್ನ ಅಪೊಸ್ತಲರಿಗೆ, “ನೀವು ಬಹಳ ಫಲವನ್ನು ಕೊಡುತ್ತಾ . . . ಇರುವಲ್ಲಿ, ನನ್ನ ತಂದೆಯು ಮಹಿಮೆಗೊಳಿಸಲ್ಪಡುತ್ತಾನೆ” ಎಂದು ಹೇಳಿದನು. ದ್ರಾಕ್ಷಿಯ ಬಳ್ಳಿ ಒಳ್ಳೆಯ ಹಣ್ಣನ್ನು ಬಿಟ್ಟರೆ ವ್ಯವಸಾಯಗಾರನಿಗೆ ಒಳ್ಳೆಯ ಹೆಸರು ಬರುತ್ತದೆ. ಅದೇ ರೀತಿಯಲ್ಲಿ, ಸಾರುವ ಕೆಲಸವನ್ನು ನಮ್ಮಿಂದಾದ ಎಲ್ಲ ಪ್ರಯತ್ನ ಹಾಕಿ ಮಾಡಿದರೆ ಯೆಹೋವನಿಗೆ ಮಹಿಮೆ, ಗೌರವವನ್ನು ತರುತ್ತೇವೆ.—ಮತ್ತಾ. 25:20-23.

4. (ಎ) ನಾವು ಹೇಗೆ ದೇವರ ಹೆಸರನ್ನು ಪವಿತ್ರೀಕರಿಸುತ್ತೇವೆ? (ಬಿ) ದೇವರ ಹೆಸರನ್ನು ಪವಿತ್ರೀಕರಿಸಲು ನಿಮಗಿರುವ ಸುಯೋಗದ ಬಗ್ಗೆ ನಿಮಗೆ ಹೇಗನಿಸುತ್ತದೆ?

4 ದೇವರ ಹೆಸರು ಈಗಾಗಲೇ ಪವಿತ್ರವಾಗಿದೆ. ಅದನ್ನು ಇನ್ನೂ ಪವಿತ್ರವಾಗಿಸಲು ನಾವೇನೂ ಮಾಡಬೇಕಾಗಿಲ್ಲ. ಹಾಗಾದರೆ ನಾವು ಸಾರುವಾಗ ದೇವರ ಹೆಸರನ್ನು ಹೇಗೆ ಪವಿತ್ರೀಕರಿಸುತ್ತೇವೆ? ಪ್ರವಾದಿ ಯೆಶಾಯನು ಏನು ಹೇಳಿದನೆಂದು ಗಮನಿಸಿ: “ಸೇನಾಧೀಶ್ವರನಾದ ಯೆಹೋವನನ್ನೇ ಪ್ರತಿಷ್ಠೆಪಡಿಸಿರಿ” ಅಥವಾ ಪವಿತ್ರವೆಂದು ಎಣಿಸಿರಿ ಎಂದು ಹೇಳಿದನು. (ಯೆಶಾ. 8:13) ಎಲ್ಲ ಹೆಸರುಗಳಿಗಿಂತ ಯೆಹೋವನ ಹೆಸರು ಮಹತ್ತರವಾಗಿದೆ ಎಂದು ನಾವು ಪರಿಗಣಿಸುವಾಗ ಮತ್ತು ಆ ಹೆಸರು ಪವಿತ್ರವಾಗಿದೆ ಎಂದು ತಿಳಿದುಕೊಳ್ಳಲು ಬೇರೆಯವರಿಗೆ ಸಹಾಯ ಮಾಡುವಾಗ ಯೆಹೋವನ ಹೆಸರನ್ನು ಪವಿತ್ರೀಕರಿಸುತ್ತೇವೆ. (ಮತ್ತಾ. 6:9) ಉದಾಹರಣೆಗೆ, ನಾವು ಯೆಹೋವನ ಅದ್ಭುತ ಗುಣಗಳ ಬಗ್ಗೆ, ಪರದೈಸಿನಲ್ಲಿ ಮಾನವರು ಶಾಶ್ವತವಾಗಿ ಜೀವಿಸಬೇಕು ಎಂದು ಆತನಿಗಿರುವ ಉದ್ದೇಶದ ಬಗ್ಗೆ ಜನರಿಗೆ ಕಲಿಸುವಾಗ ಸೈತಾನನು ಯೆಹೋವನ ಬಗ್ಗೆ ಹೇಳಿರುವ ಎಲ್ಲ ಕೆಟ್ಟ ವಿಷಯಗಳು ಸುಳ್ಳಾಗಿವೆ ಎಂದು ಮನಗಾಣಿಸುತ್ತೇವೆ. (ಆದಿ. 3:1-5) “ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು” ಯೆಹೋವನು ಯೋಗ್ಯನಾಗಿದ್ದಾನೆ ಎಂದು ಜನರು ಅರ್ಥಮಾಡಿಕೊಳ್ಳಲು ನಾವು ಸಹಾಯ ಮಾಡುವ ಮೂಲಕವೂ ಆತನ ಹೆಸರನ್ನು ಪವಿತ್ರೀಕರಿಸುತ್ತೇವೆ. (ಪ್ರಕ. 4:11) 16 ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿರುವ ರೂನ ಎಂಬ ಸಹೋದರನು ಹೇಳುವುದು: “ಇಡೀ ವಿಶ್ವವನ್ನು ಸೃಷ್ಟಿಮಾಡಿರುವವನ ಬಗ್ಗೆ ಸಾಕ್ಷಿ ಕೊಡುವ ಅವಕಾಶ ನನಗಿದೆ ಅನ್ನೋದೇ ತುಂಬ ಸಂತೋಷ ಕೊಡುತ್ತದೆ. ಸಾರುತ್ತಾ ಇರಬೇಕೆಂಬ ಆಸೆಯನ್ನು ಇದು ನನ್ನಲ್ಲಿ ಹುಟ್ಟಿಸುತ್ತದೆ.”

ಯೆಹೋವನನ್ನು ಮತ್ತು ಆತನ ಮಗನನ್ನು ಪ್ರೀತಿಸುತ್ತೇವೆ

5. (ಎ) ಯೋಹಾನ 15:9, 10​ರಲ್ಲಿ ಸಾರಲು ಯಾವ ಕಾರಣವನ್ನು ಕೊಡಲಾಗಿದೆ? (ಬಿ) ತಾಳಿಕೊಳ್ಳುವುದು ಪ್ರಾಮುಖ್ಯವೆಂದು ಅರ್ಥಮಾಡಿಕೊಳ್ಳಲು ತನ್ನ ಶಿಷ್ಯರಿಗೆ ಯೇಸು ಹೇಗೆ ಸಹಾಯ ಮಾಡಿದನು?

5 ಯೋಹಾನ 15:9, 10 ಓದಿ. ನಾವು ಸುವಾರ್ತೆ ಸಾರಲು ಎರಡನೆಯ ಕಾರಣ ಯೆಹೋವನನ್ನು ಮತ್ತು ಯೇಸುವನ್ನು ಪ್ರೀತಿಸುವುದೇ ಆಗಿದೆ. (ಮಾರ್ಕ 12:30; ಯೋಹಾ. 14:15) ಯೇಸು ಶಿಷ್ಯರಿಗೆ ‘ತನ್ನ ಪ್ರೀತಿಯಲ್ಲಿ ಉಳಿಯಬೇಕು’ ಎಂದು ಹೇಳಿದನು. ಯಾಕೆ ಹಾಗೆ ಹೇಳಿದನು? ಯಾಕೆಂದರೆ ನಿಜ ಕ್ರೈಸ್ತರಾಗಿ ಜೀವಿಸಲು ತನ್ನ ಹಿಂಬಾಲಕರು ಎಷ್ಟೋ ವಿಷಯಗಳನ್ನು ತಾಳಿಕೊಳ್ಳಬೇಕು ಎಂದು ಆತನಿಗೆ ಗೊತ್ತಿತ್ತು. ಆದ್ದರಿಂದ ತನ್ನ ಶಿಷ್ಯರು ತಾಳಿಕೊಳ್ಳುವುದು ಪ್ರಾಮುಖ್ಯವೆಂದು ಅರ್ಥಮಾಡಿಕೊಳ್ಳಲು “ಉಳಿಯಿರಿ” ಮತ್ತು “ನೆಲೆಗೊಂಡಿರಿ” ಎಂಬ ಪದಗಳನ್ನು ಯೋಹಾನ 15:4-10​ರಲ್ಲಿ ಯೇಸು ಅನೇಕ ಸಲ ಉಪಯೋಗಿಸಿದನು.

6. ಕ್ರಿಸ್ತನ ಪ್ರೀತಿಯಲ್ಲಿ ಉಳಿಯಲು ನಾವು ಬಯಸುತ್ತೇವೆಂದು ಹೇಗೆ ತೋರಿಸಬಹುದು?

6 ನಾವು ಕ್ರಿಸ್ತನ ಪ್ರೀತಿಯಲ್ಲಿ ಉಳಿಯಲು ಮತ್ತು ಆತನು ಮೆಚ್ಚುವಂಥ ರೀತಿಯಲ್ಲಿ ನಡೆಯಲು ಬಯಸುತ್ತೇವೆಂದು ಹೇಗೆ ತೋರಿಸಬಹುದು? ಆತನ ಆಜ್ಞೆಗಳಿಗೆ ವಿಧೇಯರಾಗಿರುವ ಮೂಲಕ ತೋರಿಸಬಹುದು. ಯೇಸು ಸಹ ಯೆಹೋವನಿಗೆ ವಿಧೇಯತೆ ತೋರಿಸಿದನು. ಆತನು ಹೇಳಿದ್ದು: ‘ನಾನು ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ಉಳಿದಿದ್ದೇನೆ.’ (ಯೋಹಾ. 15:10) ಆತನಂತೆಯೇ ನಾವೂ ವಿಧೇಯರಾಗಬೇಕೆಂದು ಹೇಳಿದನು. ಇದಕ್ಕೆ ಆತನೇ ಒಳ್ಳೇ ಮಾದರಿ ಇಟ್ಟನು.—ಯೋಹಾ. 13:15.

7. ಪ್ರೀತಿಗೂ ವಿಧೇಯತೆಗೂ ಇರುವ ಸಂಬಂಧವೇನು?

7 “ನನ್ನ ಆಜ್ಞೆಗಳನ್ನು ಹೊಂದಿದ್ದು ಅವುಗಳನ್ನು ಕೈಕೊಳ್ಳುವವನೇ ನನ್ನನ್ನು ಪ್ರೀತಿಸುವವನಾಗಿದ್ದಾನೆ” ಎಂದು ಹೇಳುವ ಮೂಲಕ ಯೇಸು ಪ್ರೀತಿಗೂ ವಿಧೇಯತೆಗೂ ಇರುವ ಸಂಬಂಧವನ್ನು ಸ್ಪಷ್ಟಪಡಿಸಿದನು. (ಯೋಹಾ. 14:21) ಯೇಸುವಿನ ಆಜ್ಞೆಗಳು ಆತನ ತಂದೆಯಿಂದ ಬಂದಂಥ ಆಜ್ಞೆಗಳಾಗಿವೆ. ಹಾಗಾಗಿ ಸಾರಬೇಕೆಂದು ಯೇಸು ಕೊಟ್ಟ ಆಜ್ಞೆಗೆ ವಿಧೇಯತೆ ತೋರಿಸುವಾಗ ನಾವು ಯೆಹೋವನ ಮೇಲಿರುವ ಪ್ರೀತಿಯನ್ನೂ ತೋರಿಸಿದಂತಾಗುತ್ತದೆ. (ಮತ್ತಾ. 17:5; ಯೋಹಾ. 8:28) ಈ ರೀತಿ ಅವರಿಬ್ಬರ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸಿದಾಗ ನಾವು ಅವರ ಪ್ರೀತಿಯಲ್ಲಿ ಉಳಿಯುತ್ತೇವೆ.

ಜನರನ್ನು ಎಚ್ಚರಿಸುತ್ತೇವೆ

8, 9. (ಎ) ನಾವು ಸಾರಲು ಮೂರನೇ ಕಾರಣ ಏನು? (ಬಿ) ಯೆಹೆಜ್ಕೇಲ 3:18, 19 ಮತ್ತು 18:23​ರಲ್ಲಿರುವ ಯೆಹೋವನ ಮಾತುಗಳು ನಾವು ಸಾರುತ್ತಾ ಇರಬೇಕೆಂದು ಹೇಗೆ ಪ್ರಚೋದಿಸುತ್ತವೆ?

8 ನಾವು ಸಾರಲು ಮೂರನೇ ಕಾರಣ, ಮುಂದೆ ಬರಲಿರುವ ಯೆಹೋವನ ದಿನದ ಬಗ್ಗೆ ಜನರಿಗೆ ಎಚ್ಚರಿಸಬೇಕೆಂದು ನಾವು ಬಯಸುವುದೇ ಆಗಿದೆ. ಬೈಬಲಿನಲ್ಲಿ ನೋಹನನ್ನು ‘ಸಾರುವವನು’ ಎಂದು ವರ್ಣಿಸಲಾಗಿದೆ. (2 ಪೇತ್ರ 2:5 ಓದಿ.) ಜಲಪ್ರಳಯ ಬರುವುದಕ್ಕಿಂತ ಮುಂಚೆ ನೋಹ ಜನರಿಗೆ ಸಾರುತ್ತಿದ್ದ ಸಂದೇಶದಲ್ಲಿ ಮುಂದೆ ಬರಲಿದ್ದ ನಾಶನದ ಕುರಿತ ಎಚ್ಚರಿಕೆಯೂ ಇದ್ದಿರಬಹುದು. ನಾವು ಯಾಕೆ ಹಾಗೆ ಹೇಳುತ್ತೇವೆ? ಯಾಕೆಂದರೆ “ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯೊಳಗೆ ಪ್ರವೇಶಿಸುವ ದಿನದ ವರೆಗೆ ಜನರು ಊಟಮಾಡುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಸ್ತ್ರೀಯರನ್ನು ಮದುವೆಮಾಡಿಕೊಡುತ್ತಾ ಇದ್ದರು. ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ. ಹಾಗೆಯೇ ಮನುಷ್ಯಕುಮಾರನ ಸಾನ್ನಿಧ್ಯವೂ ಇರುವುದು” ಎಂದು ಯೇಸು ಹೇಳಿದನು. (ಮತ್ತಾ. 24:38, 39) ನೋಹನಿಗೆ ಹೆಚ್ಚಿನವರು ಗಮನ ಕೊಡಲಿಲ್ಲವಾದರೂ ಯೆಹೋವನು ಕೊಟ್ಟಂಥ ಎಚ್ಚರಿಕೆಯ ಸಂದೇಶವನ್ನು ಅವನು ನಂಬಿಗಸ್ತಿಕೆಯಿಂದ ಸಾರುತ್ತಾ ಇದ್ದನು.

9 ಇಂದು ನಾವು ಸಹ ದೇವರ ರಾಜ್ಯದ ಸುವಾರ್ತೆ ಸಾರುತ್ತೇವೆ. ಇದರಿಂದ ಭವಿಷ್ಯದಲ್ಲಿ ಮನುಷ್ಯರಿಗಾಗಿ ದೇವರು ಯಾವ ಉದ್ದೇಶ ಇಟ್ಟಿದ್ದಾನೆ ಎಂದು ಕಲಿಯುವ ಅವಕಾಶ ಜನರಿಗೆ ಸಿಗುತ್ತದೆ. ಜನರು ಆ ಸಂದೇಶಕ್ಕೆ ಕಿವಿಗೊಡಬೇಕೆಂದು ಮತ್ತು ಸದಾಕಾಲ ‘ಬಾಳಬೇಕೆಂದು’ ಯೆಹೋವನು ಬಯಸುತ್ತಾನೆ, ನಾವೂ ಬಯಸುತ್ತೇವೆ. (ಯೆಹೆ. 18:23) ದೇವರ ರಾಜ್ಯ ಈ ದುಷ್ಟ ಲೋಕವನ್ನು ನಾಶ ಮಾಡುತ್ತದೆ ಎಂದು ನಾವು ಮನೆ-ಮನೆ ಸೇವೆ ಮಾಡುವಾಗ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಕ್ಷಿ ಕೊಡುವಾಗ ಆದಷ್ಟು ಹೆಚ್ಚು ಜನರಿಗೆ ಎಚ್ಚರಿಕೆ ನೀಡುತ್ತೇವೆ.—ಯೆಹೆ. 3:18, 19; ದಾನಿ. 2:44; ಪ್ರಕ. 14:6, 7.

ಜನರನ್ನು ಪ್ರೀತಿಸುತ್ತೇವೆ

10. (ಎ) ಮತ್ತಾಯ 22:39​ರಲ್ಲಿ ಸಾರಲು ಯಾವ ಕಾರಣವನ್ನು ಕೊಡಲಾಗಿದೆ? (ಬಿ) ಸೆರೆಮನೆಯ ಅಧಿಕಾರಿಗೆ ಪೌಲ ಮತ್ತು ಸೀಲ ಹೇಗೆ ಸಹಾಯ ಮಾಡಿದರು?

10 ನಾವು ಯಾಕೆ ಸಾರುತ್ತಾ ಇರಬೇಕು ಎನ್ನುವುದಕ್ಕಿರುವ ನಾಲ್ಕನೇ ಕಾರಣ ನಾವು ಜನರನ್ನು ಪ್ರೀತಿಸುವುದೇ ಆಗಿದೆ. (ಮತ್ತಾ. 22:39) ನಾವು ಸಾರುತ್ತಾ ಇರಲು ಈ ಪ್ರೀತಿ ನಮ್ಮನ್ನು ಪ್ರಚೋದಿಸುತ್ತದೆ. ಯಾಕೆಂದರೆ ಜನರ ಸನ್ನಿವೇಶಗಳು ಬದಲಾದಾಗ ಅವರ ಮನೋಭಾವವೂ ಬದಲಾಗುತ್ತದೆ ಎಂದು ನಮಗೆ ಗೊತ್ತು. ಉದಾಹರಣೆಗೆ, ಫಿಲಿಪ್ಪಿ ಪಟ್ಟಣದಲ್ಲಿ ಪೌಲ ಮತ್ತು ಸೀಲನನ್ನು ವಿರೋಧಿಗಳು ಸೆರೆಮನೆಗೆ ಹಾಕಿದರು. ಆದರೆ ಮಧ್ಯರಾತ್ರಿಯಷ್ಟಕ್ಕೆ ಭೂಕಂಪವಾಗಿ ಸೆರೆಮನೆಯ ಅಸ್ತಿವಾರಗಳು ಕದಲಿದವು ಮತ್ತು ಅದರ ಬಾಗಿಲುಗಳು ತೆರೆದವು. ಕೈದಿಗಳು ಸೆರೆಮನೆಯಿಂದ ತಪ್ಪಿಸಿಕೊಂಡರೆಂದು ನೆನಸಿ ಸೆರೆಮನೆಯ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದನು. ಆದರೆ ಪೌಲನು “ನಿನಗೇನೂ ಹಾನಿಮಾಡಿಕೊಳ್ಳಬೇಡ” ಎಂದು ಕೂಗಿ ಹೇಳಿ ಅವನನ್ನು ತಡೆದನು. ಆ ಅಧಿಕಾರಿ “ನಾನು ರಕ್ಷಣೆಯನ್ನು ಹೊಂದಲು ಏನು ಮಾಡಬೇಕು?” ಎಂದು ಕೇಳಿದನು. ಪೌಲ ಮತ್ತು ಸೀಲ ಅವನಿಗೆ, “ಕರ್ತನಾದ ಯೇಸುವಿನಲ್ಲಿ ನಂಬಿಕೆಯಿಡು; . . . ರಕ್ಷಣೆಹೊಂದುವಿ” ಎಂದು ಹೇಳಿದರು.—ಅ. ಕಾ. 16:25-34.

ಯೆಹೋವನ ಮೇಲೆ, ಯೇಸುವಿನ ಮೇಲೆ ಮತ್ತು ಜನರ ಮೇಲೆ ಪ್ರೀತಿ ಇರುವುದರಿಂದ ನಾವು ಸಾರುತ್ತೇವೆ (ಪ್ಯಾರ 5, 10 ನೋಡಿ)

11, 12. (ಎ) ಸೆರೆಮನೆ ಅಧಿಕಾರಿಯ ವೃತ್ತಾಂತದಿಂದ ನಾವೇನು ಕಲಿಯಬಹುದು? (ಬಿ) ನಾವು ಯಾಕೆ ಸಾರುವ ಕೆಲಸವನ್ನು ಮಾಡುತ್ತಾ ಇರಬೇಕು?

11 ಸೆರೆಮನೆ ಅಧಿಕಾರಿಯ ವೃತ್ತಾಂತದಿಂದ ಸಾರುವ ಕೆಲಸದ ಬಗ್ಗೆ ನಾವೇನು ಕಲಿಯಬಹುದು? ಭೂಕಂಪವಾದ ನಂತರವೇ ಸೆರೆಮನೆ ಅಧಿಕಾರಿಯು ತನ್ನ ಮನೋಭಾವವನ್ನು ಬದಲಾಯಿಸಿಕೊಂಡನು ಮತ್ತು ಸತ್ಯ ಕಲಿಯಲು ಮುಂದೆ ಬಂದನು ಅನ್ನುವುದನ್ನು ಗಮನಿಸಿ. ಅದೇರೀತಿ ಬೈಬಲಿನ ಸಂದೇಶಕ್ಕೆ ಕಿವಿಗೊಡದಿದ್ದ ಜನರ ಜೀವನದಲ್ಲಿ ಯಾವುದಾದರೂ ದುರಂತ ನಡೆದಾಗ ಅವರು ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬಹುದು ಮತ್ತು ಸಾಂತ್ವನ-ನಿರೀಕ್ಷೆಗಾಗಿ ಹುಡುಕಬಹುದು. ಉದಾಹರಣೆಗೆ, ಕೆಲವರು ಕೆಲಸ ಕಳಕೊಂಡಿರುವುದರಿಂದ ಅಥವಾ ವಿಚ್ಛೇದನ ಆಗಿರುವುದರಿಂದ ಆಘಾತದಲ್ಲಿರಬಹುದು. ಇನ್ನೂ ಕೆಲವರಿಗೆ ತಮಗೆ ಗಂಭೀರ ಕಾಯಿಲೆ ಇದೆ ಎಂದು ತಿಳಿದು ತುಂಬ ದುಃಖದಲ್ಲಿರಬಹುದು ಅಥವಾ ಅವರು ತುಂಬ ಪ್ರೀತಿಸುವವರೊಬ್ಬರು ತೀರಿಹೋಗಿರಬಹುದು. ಇಂಥ ವಿಷಯಗಳು ನಡೆದಾಗ ಜನರು ಜೀವನದ ಬಗ್ಗೆ, ಈ ಮುಂಚೆ ನೆನಸಿರದ ಪ್ರಶ್ನೆಗಳ ಬಗ್ಗೆ ಯೋಚಿಸಲು ಆರಂಭಿಸಬಹುದು. ‘ನಾನು ರಕ್ಷಣೆಯನ್ನು ಹೊಂದಲು ಏನು ಮಾಡಬೇಕು?’ ಎಂದು ಸಹ ಅವರು ಆ ಅಧಿಕಾರಿ ತರ ಯೋಚಿಸಬಹುದು. ನಾವು ಹೇಳುವ ನಿರೀಕ್ಷೆಯ ಸಂದೇಶವನ್ನು ತಮ್ಮ ಜೀವನದಲ್ಲಿ ಮೊದಲ ಬಾರಿ ಕೇಳಿಸಿಕೊಳ್ಳಲು ಅವರು ಬಯಸಬಹುದು.

12 ಜನರ ಜೀವನದಲ್ಲಿ ಯಾವಾಗ ಏನಾಗುತ್ತದೆ ಮತ್ತು ಅವರು ಯಾವಾಗ ನಮ್ಮ ಸಂದೇಶಕ್ಕೆ ಕಿವಿಗೊಡಬಹುದು ಎಂದು ನಮಗೆ ಗೊತ್ತಿಲ್ಲದ ಕಾರಣ ನಾವು ನಂಬಿಗಸ್ತಿಕೆಯಿಂದ ಸಾರುತ್ತಾ ಇರಬೇಕು. (ಯೆಶಾ. 61:1) 38 ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿರುವ ಶಾರ್ಲೋಟ್‌ ಹೇಳುವುದು: “ಜನರಿಗೆ ಇವತ್ತು ದಿಕ್ಕೇ ಕಾಣುತ್ತಿಲ್ಲ. ಅವರಿಗೆ ಸುವಾರ್ತೆಯನ್ನು ಕೇಳಿಸಿಕೊಳ್ಳುವ ಅವಕಾಶ ಸಿಗಬೇಕು.” 34 ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿರುವ ಏವೋರ್‌ ಹೇಳುವುದು: “ಮೊದಲಿಗಿಂತ ಈಗ ಜನರು ಭಾವನಾತ್ಮಕವಾಗಿ ಕುಂದಿಹೋಗಿದ್ದಾರೆ. ಹೇಗಾದರೂ ಮಾಡಿ ಅವರಿಗೆ ಸುವಾರ್ತೆ ಮುಟ್ಟಿಸಬೇಕೆಂದು ನಾನು ತುಂಬ ಪ್ರಯತ್ನಿಸುತ್ತೇನೆ.” ಹಾಗಾಗಿ ಜನರ ಮೇಲಿರುವ ಪ್ರೀತಿಯೇ ಸಾರುತ್ತಾ ಇರಲು ನಮಗಿರುವ ಅದ್ಭುತವಾದ ಕಾರಣ ಎಂದು ಸ್ಪಷ್ಟವಾಗಿ ಹೇಳಬಹುದು.

ತಾಳಿಕೊಳ್ಳಲು ಸಹಾಯ ಮಾಡುವ ಉಡುಗೊರೆಗಳು

13, 14. (ಎ) ಯೋಹಾನ 15:11​ರಲ್ಲಿ ಯಾವ ಉಡುಗೊರೆ ಬಗ್ಗೆ ತಿಳಿಸಲಾಗಿದೆ? (ಬಿ) ಯೇಸುವಿಗಿದ್ದಂಥ ಆನಂದವನ್ನು ನಾವು ಹೇಗೆ ಪಡಕೊಳ್ಳಬಹುದು? (ಸಿ) ನಾವು ಸೇವೆ ಮಾಡುತ್ತಾ ಇರಲು ಆನಂದ ಹೇಗೆ ಸಹಾಯ ಮಾಡುತ್ತದೆ?

13 ಯೇಸು ಸಾಯುವ ಹಿಂದಿನ ರಾತ್ರಿ, ಫಲವನ್ನು ಕೊಡುತ್ತಾ ಇರಲು ತನ್ನ ಶಿಷ್ಯರಿಗೆ ಸಹಾಯ ಮಾಡುವ ಉಡುಗೊರೆಗಳ ಬಗ್ಗೆಯೂ ತಿಳಿಸಿದನು. ಆ ಉಡುಗೊರೆಗಳು ಯಾವುದಾಗಿವೆ ಮತ್ತು ಅವು ಇಂದು ನಮಗೆ ಹೇಗೆ ಸಹಾಯ ಮಾಡುತ್ತವೆ?

14 ಮೊದಲನೇ ಉಡುಗೊರೆ ಆನಂದ. ಸಾರುವ ಕೆಲಸ ಮಾಡುವುದು ಒಂದು ಹೊರೆನಾ? ಖಂಡಿತ ಇಲ್ಲ. ದ್ರಾಕ್ಷಿ ಬಳ್ಳಿಯ ದೃಷ್ಟಾಂತ ಹೇಳಿದ ನಂತರ ಯೇಸು ನಾವು ಸಾರಿದಾಗ ಆತನ ಆನಂದವನ್ನು ಪಡೆದುಕೊಳ್ಳುತ್ತೇವೆ ಎಂದು ಹೇಳಿದನು. (ಯೋಹಾನ 15:11 ಓದಿ.) ಅದು ಹೇಗೆ ಸಾಧ್ಯ? ದೃಷ್ಟಾಂತದಲ್ಲಿ ಯೇಸು ತನ್ನನ್ನೇ ದ್ರಾಕ್ಷಿ ಬಳ್ಳಿಗೆ ಮತ್ತು ತನ್ನ ಶಿಷ್ಯರನ್ನು ಕೊಂಬೆಗಳಿಗೆ ಹೋಲಿಸಿದನು. ಕೊಂಬೆಗಳು ಬಳ್ಳಿಯಲ್ಲಿರುವಷ್ಟು ಸಮಯ ಅವುಗಳಿಗೆ ಬೇಕಾದ ನೀರು ಮತ್ತು ಪೋಷಕಾಂಶ ಸಿಗುತ್ತದೆ. ಅದೇ ರೀತಿ ನಾವು ಯೇಸುವಿನೊಂದಿಗೆ ಐಕ್ಯವಾಗಿದ್ದು ಆತನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಿದರೆ ಆತನಂತೆ ಆನಂದವಾಗಿರುತ್ತೇವೆ. ದೇವರ ಚಿತ್ತವನ್ನು ಮಾಡುವ ಮೂಲಕ ಯೇಸು ಆ ಆನಂದವನ್ನು ಪಡಕೊಂಡನು. (ಯೋಹಾ. 4:34; 17:13; 1 ಪೇತ್ರ 2:21) ಹ್ಯಾನೆ ಎಂಬ ಸಹೋದರಿ 40 ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿದ್ದಾರೆ. ಅವರು ಹೇಳುವುದು: “ನಾನು ಸೇವೆಗೆ ಹೋಗಿ ಬಂದ ಮೇಲೆ ನನಗೆ ತುಂಬ ಸಂತೋಷ ಆಗುತ್ತದೆ. ಈ ಸಂತೋಷ ಇನ್ನೂ ಹೆಚ್ಚು ಸೇವೆ ಮಾಡಲು ನನ್ನನ್ನು ಉತ್ತೇಜಿಸುತ್ತದೆ.” ಹೆಚ್ಚಿನ ಜನರು ಸುವಾರ್ತೆಗೆ ಕಿವಿಗೊಡದಿದ್ದರೂ ನಮ್ಮಲ್ಲಿರುವ ಆನಂದ ಸಾರುತ್ತಾ ಇರಲು ಬಲ ಕೊಡುತ್ತದೆ.—ಮತ್ತಾ. 5:10-12.

15. (ಎ) ಯೋಹಾನ 14:27​ರಲ್ಲಿ ಯಾವ ಉಡುಗೊರೆ ಬಗ್ಗೆ ತಿಳಿಸಲಾಗಿದೆ? (ಬಿ) ಫಲ ಕೊಡುತ್ತಾ ಇರಲು ಶಾಂತಿ ನಮಗೆ ಹೇಗೆ ಸಹಾಯ ಮಾಡುತ್ತದೆ?

15 ಎರಡನೇ ಉಡುಗೊರೆ ಶಾಂತಿ. (ಯೋಹಾನ 14:27 ಓದಿ.) ಯೇಸು ಸಾಯುವ ಹಿಂದಿನ ರಾತ್ರಿಯಂದು ತನ್ನ ಅಪೊಸ್ತಲರಿಗೆ “ನನ್ನ ಶಾಂತಿಯನ್ನು ನಿಮಗೆ ಕೊಡುತ್ತೇನೆ” ಎಂದು ಸಹ ಹೇಳಿದನು. ನಾವು ಸಾರುತ್ತಾ ಇರಲು ಯೇಸು ಕೊಡುವ ಶಾಂತಿ ಹೇಗೆ ಸಹಾಯ ಮಾಡುತ್ತದೆ? ನಾವು ಸಾರುವ ಕೆಲಸ ಮಾಡುವಾಗ, ಯೆಹೋವನಿಗೆ ಮತ್ತು ಯೇಸುವಿಗೆ ಸಂತೋಷ ಆಗುತ್ತದೆ ಎಂದು ತಿಳಿದು ನಮಗೆ ಶಾಂತಿ, ನೆಮ್ಮದಿ ಇರುತ್ತದೆ. (ಕೀರ್ತ. 149:4; ರೋಮ. 5:3, 4; ಕೊಲೊ. 3:15) 45 ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿರುವ ಉಲ್ಫ್‌ ಎಂಬ ಸಹೋದರ ಹೇಳುವುದು: “ಸೇವೆ ಮಾಡಿ ಬಂದಾಗ ನನಗೆ ಸುಸ್ತಾಗಿರುತ್ತೆ. ಆದರೂ ತೃಪ್ತಿ ಇರುತ್ತೆ, ಜೀವನಕ್ಕೊಂದು ಅರ್ಥ ಇದೆ ಎಂದು ಅನಿಸುತ್ತೆ.” ಶಾಶ್ವತವಾದ ಶಾಂತಿ ಸಿಕ್ಕಿರುವುದಕ್ಕೆ ನಾವು ಆಭಾರಿಗಳು!

16. (ಎ) ಯೋಹಾನ 15:15​ರಲ್ಲಿ ಯಾವ ಉಡುಗೊರೆಯ ಬಗ್ಗೆ ತಿಳಿಸಲಾಗಿದೆ? (ಬಿ) ಶಿಷ್ಯರು ಯೇಸುವಿನ ಸ್ನೇಹಿತರಾಗಿ ಉಳಿಯಲು ಏನು ಮಾಡಬೇಕಿತ್ತು?

16 ಮೂರನೇ ಉಡುಗೊರೆ ಸ್ನೇಹ. ತನ್ನ ಶಿಷ್ಯರು ಸಂತೋಷವಾಗಿರಬೇಕೆಂದು ತಾನು ಬಯಸುತ್ತೇನೆ ಎಂದು ಯೇಸು ಹೇಳಿದ ಮೇಲೆ ನಿಸ್ವಾರ್ಥವಾಗಿ ಪ್ರೀತಿ ತೋರಿಸುವುದು ಯಾಕೆ ಪ್ರಾಮುಖ್ಯ ಎಂದು ವಿವರಿಸಿದನು. (ಯೋಹಾ. 15:11-13) ನಂತರ, “ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ” ಎಂದು ಹೇಳಿದನು. ಯೇಸುವಿನ ಸ್ನೇಹಿತರಾಗಿರುವುದು ಎಂಥ ದೊಡ್ಡ ಉಡುಗೊರೆ! ಆದರೆ ಅಪೊಸ್ತಲರು ಅವನ ಸ್ನೇಹಿತರಾಗಿ ಉಳಿಯಲು ಏನು ಮಾಡಬೇಕಿತ್ತು? ಅವರು ‘ಹೊರಟುಹೋಗಿ ಫಲವನ್ನು ಕೊಡುತ್ತಾ ಇರಬೇಕಿತ್ತು.’ (ಯೋಹಾನ 15:14-16 ಓದಿ.) ಇನ್ನೊಂದು ಮಾತಲ್ಲಿ ಹೇಳುವುದಾದರೆ ಅವರು ಸಾರುತ್ತಾ ಇರಬೇಕಿತ್ತು. ಎರಡು ವರ್ಷಗಳ ಹಿಂದೆ ಯೇಸು ತನ್ನ ಅಪೊಸ್ತಲರನ್ನು ಸಾರಲು ಕಳುಹಿಸಿದಾಗ “ನೀವು ಹೋಗುವಾಗ, ‘ಸ್ವರ್ಗದ ರಾಜ್ಯವು ಸಮೀಪಿಸಿದೆ’ ಎಂದು ಸಾರಿಹೇಳಿರಿ” ಎಂದು ಹೇಳಿದ್ದನು. (ಮತ್ತಾ. 10:7) ಆದ್ದರಿಂದಲೇ, ಕಡೇ ವರೆಗೆ ಸಾರುತ್ತಾ ಇರಬೇಕೆಂದು ಯೇಸು ತಾನು ಸಾಯುವ ಹಿಂದಿನ ರಾತ್ರಿ ಶಿಷ್ಯರನ್ನು ಪ್ರೋತ್ಸಾಹಿಸಿದನು. (ಮತ್ತಾ. 24:13; ಮಾರ್ಕ 3:14) ಸಾರುವುದು ಅಷ್ಟು ಸುಲಭವಲ್ಲ ಎಂದು ಯೇಸುವಿಗೂ ಗೊತ್ತಿತ್ತು. ಆದರೂ ಅವರು ಅದನ್ನು ಮಾಡುತ್ತಾ ಆತನ ಸ್ನೇಹಿತರಾಗಿ ಉಳಿಯಬಹುದಿತ್ತು. ಹೇಗೆ? ಇನ್ನೊಂದು ಉಡುಗೊರೆಯ ಸಹಾಯದಿಂದ.

17, 18. (ಎ) ಯೋಹಾನ 15:16​ರಲ್ಲಿ ಯಾವ ಉಡುಗೊರೆಯ ಬಗ್ಗೆ ತಿಳಿಸಲಾಗಿದೆ? (ಬಿ) ಆ ಉಡುಗೊರೆ ಯೇಸುವಿನ ಶಿಷ್ಯರಿಗೆ ಹೇಗೆ ಸಹಾಯ ಮಾಡಿತು? (ಸಿ) ಇಂದು ನಮಗೆ ಯಾವ ಉಡುಗೊರೆಗಳು ಬಲ ಕೊಡುತ್ತವೆ?

17 ನಾಲ್ಕನೇ ಉಡುಗೊರೆ ನಮ್ಮ ಪ್ರಾರ್ಥನೆಗಳಿಗೆ ಸಿಗುವ ಉತ್ತರ. “ನೀವು ನನ್ನ ಹೆಸರಿನಲ್ಲಿ ತಂದೆಯ ಬಳಿ ಏನನ್ನೇ ಬೇಡಿಕೊಂಡರೂ ಆತನು ಅದನ್ನು ನಿಮಗೆ ಕೊಡುವನು” ಎಂದು ಯೇಸು ಹೇಳಿದನು. (ಯೋಹಾ. 15:16) ಯೇಸು ಕೊಟ್ಟ ಈ ಮಾತು ಅಪೊಸ್ತಲರಿಗೆ ಖಂಡಿತ ಬಲ ಕೊಟ್ಟಿರಬೇಕು! * ಯೇಸು ಬೇಗ ತೀರಿಹೋಗುತ್ತಾನೆಂದು ಅಪೊಸ್ತಲರು ಸರಿಯಾಗಿ ಅರ್ಥಮಾಡಿಕೊಂಡಿರಲಿಲ್ಲ. ಆದ್ದರಿಂದ ಆತನು ತೀರಿಹೋದಾಗ ತಮಗ್ಯಾರೂ ಇಲ್ಲ ಎಂದು ಅವರಿಗೆ ಅನಿಸಿರಬಹುದು. ಆದರೆ ಅವರಿಗೆ ಯೆಹೋವನ ಸಹಾಯ ಇತ್ತು. ಅವರ ಪ್ರಾರ್ಥನೆಗಳಿಗೆ ಉತ್ತರ ಕೊಡುವ ಮೂಲಕ ಅವರು ಸಾರುವುದಕ್ಕೆ ಸಹಾಯ ಮಾಡಲು ಯೆಹೋವನು ಸಿದ್ಧನಾಗಿದ್ದನು. ಯೇಸು ತೀರಿಹೋದ ಸ್ವಲ್ಪದರಲ್ಲೇ ಅಪೊಸ್ತಲರು ಧೈರ್ಯಕ್ಕಾಗಿ ಯೆಹೋವನಲ್ಲಿ ಬೇಡಿಕೊಂಡರು. ಯೆಹೋವನು ಅವರ ಪ್ರಾರ್ಥನೆಗಳಿಗೆ ಉತ್ತರ ಕೊಟ್ಟನು.—ಅ. ಕಾ. 4:29, 31.

ಸಹಾಯ ಕೊಡಪ್ಪಾ ಎಂದು ಬೇಡಿಕೊಂಡರೆ ಯೆಹೋವನು ಖಂಡಿತ ನಮ್ಮ ಪ್ರಾರ್ಥನೆಗೆ ಉತ್ತರ ಕೊಡುತ್ತಾನೆ (ಪ್ಯಾರ 18 ನೋಡಿ)

18 ಇವತ್ತಿಗೂ ಇದು ಸತ್ಯ. ನಾವು ಕಡೇ ತನಕ ಸಾರುತ್ತಾ ಇರುವುದಾದರೆ ಯೇಸುವಿನ ಸ್ನೇಹಿತರಾಗಿ ಉಳಿಯುತ್ತೇವೆ. ಸಾರಲು ನಮಗೆ ಕಷ್ಟ ಆದಾಗ ಯೆಹೋವನಿಗೆ ಪ್ರಾರ್ಥನೆ ಮಾಡಿದರೆ ಆತನು ನಮಗೆ ಖಂಡಿತ ಸಹಾಯ ಮಾಡುತ್ತಾನೆ. (ಫಿಲಿ. 4:13) ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಿರುವುದಕ್ಕೆ ಮತ್ತು ಯೇಸು ನಮ್ಮ ಸ್ನೇಹಿತನಾಗಿರುವುದಕ್ಕೆ ನಾವು ಆಭಾರಿಗಳು. ಯೆಹೋವನಿಂದ ಸಿಗುವಂಥ ಈ ಉಡುಗೊರೆಗಳು ಫಲ ಕೊಡುತ್ತಾ ಇರಲು ಬೇಕಾದ ಬಲವನ್ನು ಕೊಡುತ್ತವೆ.—ಯಾಕೋ. 1:17.

19. (ಎ) ನಾವು ಯಾಕೆ ಸಾರುತ್ತಾ ಇರಬೇಕು? (ಬಿ) ದೇವರು ಕೊಟ್ಟಿರುವ ಕೆಲಸವನ್ನು ಮಾಡಿ ಮುಗಿಸಲು ನಮಗೆ ಯಾವುದು ಸಹಾಯ ಮಾಡುತ್ತದೆ?

19 ಈ ಲೇಖನದಲ್ಲಿ ನಾವು ಯಾಕೆ ಸಾರುತ್ತಾ ಇರಬೇಕೆಂಬುದಕ್ಕೆ ನಾಲ್ಕು ಕಾರಣಗಳನ್ನು ಕಲಿತೆವು. (1) ನಾವು ಯೆಹೋವನನ್ನು ಮತ್ತು ಆತನ ಹೆಸರನ್ನು ಪವಿತ್ರೀಕರಿಸಲು ಬಯಸುತ್ತೇವೆ. (2) ಯೆಹೋವನ ಮೇಲೆ ಮತ್ತು ಯೇಸುವಿನ ಮೇಲೆ ನಮಗೆ ಪ್ರೀತಿ ಇದೆ. (3) ಜನರನ್ನು ಎಚ್ಚರಿಸಲು ಬಯಸುತ್ತೇವೆ. (4) ಜನರ ಮೇಲೆ ನಮಗೆ ಪ್ರೀತಿ ಇದೆ. ನಾಲ್ಕು ಉಡುಗೊರೆಗಳ ಬಗ್ಗೆಯೂ ಕಲಿತೆವು. ಆನಂದ, ಶಾಂತಿ, ಸ್ನೇಹ ಮತ್ತು ನಮ್ಮ ಪ್ರಾರ್ಥನೆಗಳಿಗೆ ಸಿಗುವ ಉತ್ತರ. ಈ ಉಡುಗೊರೆಗಳು ಯೆಹೋವನು ನಮಗೆ ಕೊಟ್ಟಿರುವ ಕೆಲಸವನ್ನು ಮಾಡಿ ಮುಗಿಸಲು ಬಲ ಕೊಡುತ್ತವೆ. “ಬಹಳ ಫಲವನ್ನು ಕೊಡುತ್ತಾ” ಇರಲು ನಾವು ಪ್ರಯತ್ನಿಸುತ್ತಿರುವುದನ್ನು ನೋಡಿ ಯೆಹೋವನಿಗೆ ತುಂಬ ಸಂತೋಷ ಆಗುತ್ತದೆ!

^ ಪ್ಯಾರ. 17 ಯೇಸು ಅಪೊಸ್ತಲರೊಟ್ಟಿಗೆ ಮಾತಾಡುತ್ತಿದ್ದಾಗ ಯೆಹೋವನು ಅವರ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಾನೆಂದು ಪುನಃ ಪುನಃ ಜ್ಞಾಪಿಸಿದನು.—ಯೋಹಾ. 14:13; 15:7, 16; 16:23.