ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಕಣ್ಣುಗಳು ಯೆಹೋವನ ಕಡೆಗೆ ನೋಡುತ್ತಿವೆಯಾ?

ನಿಮ್ಮ ಕಣ್ಣುಗಳು ಯೆಹೋವನ ಕಡೆಗೆ ನೋಡುತ್ತಿವೆಯಾ?

“ಪರಲೋಕದಲ್ಲಿ ಆಸೀನನಾಗಿರುವಾತನೇ, ನನ್ನ ಕಣ್ಣುಗಳನ್ನು ನಿನ್ನ ಕಡೆಗೆ ಎತ್ತಿದ್ದೇನೆ.”—ಕೀರ್ತ. 123:1.

ಗೀತೆಗಳು: 128, 63

1, 2. ಯೆಹೋವನ ಕಡೆಗೆ ನೋಡುವುದು ಅಂದರೇನು?

‘ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳಲ್ಲಿ’ ನಾವು ಜೀವಿಸುತ್ತಿದ್ದೇವೆ. (2 ತಿಮೊ. 3:1) ಮುಂದಕ್ಕೆ ಕಷ್ಟಗಳು ಇನ್ನೂ ಹೆಚ್ಚಾಗುತ್ತವೆ. ಯೆಹೋವನು ಕೆಟ್ಟವರನ್ನು ನಾಶಮಾಡಿ ಭೂಮಿಯಲ್ಲಿ ನಿಜವಾದ ಶಾಂತಿಯನ್ನು ತರುವ ತನಕ ಇಂಥ ಪರಿಸ್ಥಿತಿಯಲ್ಲೇ ನಾವು ಜೀವಿಸಬೇಕು. ಆದ್ದರಿಂದ ನಾವು ನಮ್ಮನ್ನೇ ಈ ಪ್ರಶ್ನೆ ಕೇಳಿಕೊಳ್ಳಬೇಕು: ‘ಸಹಾಯಕ್ಕಾಗಿ, ಮಾರ್ಗದರ್ಶನಕ್ಕಾಗಿ ನಾನು ಯಾರ ಕಡೆಗೆ ನೋಡಬೇಕು?’ “ಯೆಹೋವನ ಕಡೆಗೆ” ಎಂದು ನಾವು ತಕ್ಷಣ ಉತ್ತರ ಕೊಡಬಹುದು. ಹೌದು ನಾವೆಲ್ಲರೂ ಯೆಹೋವನ ಕಡೆಗೇ ನೋಡಬೇಕು.

2 ಯೆಹೋವನ ಕಡೆಗೆ ನೋಡುವುದು ಅಂದರೇನು? ಸಮಸ್ಯೆಗಳು ಬಂದಾಗಲೂ ನಾವು ಯೆಹೋವನ ಕಡೆಗೇ ನೋಡುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ? ಸಹಾಯ ಬೇಕಾದಾಗ ನಾವು ಎಷ್ಟರ ಮಟ್ಟಿಗೆ ಯೆಹೋವನ ಕಡೆಗೆ ನೋಡಬೇಕು ಎನ್ನುವುದನ್ನು ನೂರಾರು ವರ್ಷಗಳ ಹಿಂದೆ ಒಬ್ಬ ಕೀರ್ತನೆಗಾರ ವಿವರಿಸಿದ್ದಾನೆ. (ಕೀರ್ತನೆ 123:1-4 ಓದಿ.) ನಾವು ಯೆಹೋವನ ಕಡೆಗೆ ನೋಡುವುದು ಒಬ್ಬ ಆಳು ತನ್ನ ಯಜಮಾನನ ಕಡೆಗೆ ನೋಡುವ ಹಾಗಿರುತ್ತದೆ ಎಂದು ಆತನು ಹೇಳಿದನು. ಹೇಗೆ? ಆಳು ಊಟಕ್ಕಾಗಿ ಸಂರಕ್ಷಣೆಗಾಗಿ ಯಜಮಾನನ ಕಡೆಗೆ ನೋಡುತ್ತಾನೆ ಅಂದರೆ ಅವನ ಮೇಲೆ ಅವಲಂಬಿಸಿರುತ್ತಾನೆ. ಇದಿಷ್ಟೇ ಅಲ್ಲ, ಯಜಮಾನನು ತನ್ನಿಂದ ಏನು ಬಯಸುತ್ತಾನೆ ಎಂದು ತಿಳಿದುಕೊಳ್ಳಲು ಮತ್ತು ಅದನ್ನು ತಕ್ಷಣ ಮಾಡಲು ಸಹ ಅವನು ಯಜಮಾನನನ್ನು ನೋಡುತ್ತಾ ಇರಬೇಕು. ಅದೇ ರೀತಿ ನಾವು ದೇವರ ವಾಕ್ಯವನ್ನು ಪ್ರತಿದಿನ ತುಂಬ ಗಮನ ಕೊಟ್ಟು ಓದಿ ನಾವೇನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ ಎಂದು ಅರ್ಥಮಾಡಿಕೊಂಡು ಅದನ್ನು ಮಾಡಬೇಕು. ಹಾಗೆ ಮಾಡಿದರೆ ನಮಗೆ ಸಹಾಯ ಬೇಕಾದಾಗ ಯೆಹೋವನು ಸಹಾಯ ಮಾಡುತ್ತಾನೆ.—ಎಫೆ. 5:17.

3. ನಮ್ಮ ಗಮನ ಯಾವಾಗ ಯೆಹೋವನ ಕಡೆಯಿಂದ ಬೇರೆ ಕಡೆಗೆ ಹೋಗಬಹುದು?

3 ಯಾವಾಗಲೂ ಯೆಹೋವನನ್ನೇ ನೋಡಬೇಕು ಎಂದು ನಮಗೆ ಗೊತ್ತಿದ್ದರೂ ಕೆಲವೊಮ್ಮೆ ನಮ್ಮ ಗಮನ ಬೇರೆ ಕಡೆ ಹೋಗಿಬಿಡುತ್ತದೆ. ಯೇಸುವಿನ ಒಬ್ಬ ಒಳ್ಳೇ ಸ್ನೇಹಿತೆಯಾದ ಮಾರ್ಥಳಿಗೆ ಒಮ್ಮೆ ಹೀಗೇ ಆಯಿತು. ಆಕೆ “ಅನೇಕ ಕೆಲಸಗಳನ್ನು ಮಾಡುತ್ತಾ ಅಪಕರ್ಷಿತಳಾಗಿದ್ದಳು.” (ಲೂಕ 10:40-42) ನಂಬಿಗಸ್ತೆಯಾಗಿದ್ದ ಮಾರ್ಥಳು ಯೇಸು ಕಣ್ಮುಂದೆ ಇದ್ದಾಗಲೇ ಅಪರ್ಕಷಿತಳಾದಳು. ಹಾಗಿರುವಾಗ ನಮ್ಮ ಕಥೆ ಏನು? ನಮ್ಮ ಗಮನ ಯಾವಾಗ ಯೆಹೋವನ ಕಡೆಯಿಂದ ಬೇರೆ ಕಡೆಗೆ ಹೋಗಬಹುದು? ಈ ಲೇಖನದಲ್ಲಿ, ನಾವು ಬೇರೆಯವರನ್ನು ನೋಡಿ ಹೇಗೆ ಅಪಕರ್ಷಿತರಾಗುತ್ತೇವೆ ಎಂದು ಚರ್ಚಿಸಲಿದ್ದೇವೆ. ಯೆಹೋವನ ಕಡೆಗೆ ನೋಡುತ್ತಾ ಇರುವುದು ಹೇಗೆ ಎಂದೂ ಕಲಿಯಲಿದ್ದೇವೆ.

ಒಬ್ಬ ನಂಬಿಗಸ್ತ ವ್ಯಕ್ತಿ ಸದವಕಾಶ ಕಳಕೊಂಡನು

4. ಮೋಶೆ ವಾಗ್ದತ್ತ ದೇಶಕ್ಕೆ ಹೋಗುವ ಅವಕಾಶವನ್ನು ಕಳಕೊಂಡನು ಎಂದು ಓದುವಾಗ ನಮಗೆ ಯಾಕೆ ಆಶ್ಚರ್ಯ ಆಗಬಹುದು?

4 ಮೋಶೆ ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ನೋಡುತ್ತಿದ್ದನು. “ಅದೃಶ್ಯನಾಗಿರುವಾತನನ್ನು ನೋಡುವವನೋ ಎಂಬಂತೆ ಅವನು ಸ್ಥಿರಚಿತ್ತನಾಗಿ ಮುಂದುವರಿದನು” ಎಂದು ಬೈಬಲ್‌ ಹೇಳುತ್ತದೆ. (ಇಬ್ರಿಯ 11:24-27 ಓದಿ.) “ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಬಳಿಕೆಯಾಗಿದ್ದನು” ಅಥವಾ ಪರಿಚಯವಾಗಿದ್ದನು ಮತ್ತು ಮೋಶೆಗೆ “ಸಮಾನನಾದ ಮತ್ತೊಬ್ಬ ಪ್ರವಾದಿ . . . ಇಸ್ರಾಯೇಲ್ಯರಲ್ಲಿ ಹುಟ್ಟಲೇ ಇಲ್ಲ” ಎಂದೂ ಬೈಬಲ್‌ ಹೇಳುತ್ತದೆ. (ಧರ್ಮೋ. 34:10, 12) ಮೋಶೆ ಯೆಹೋವನ ಆಪ್ತ ಸ್ನೇಹಿತನಾಗಿದ್ದರೂ ವಾಗ್ದತ್ತ ದೇಶಕ್ಕೆ ಹೋಗುವ ಅವಕಾಶವನ್ನು ಕಳಕೊಂಡನು. (ಅರ. 20:12) ಯಾಕೆ?

5-7. (ಎ) ಇಸ್ರಾಯೇಲ್ಯರು ಐಗುಪ್ತದಿಂದ ಹೊರಟುಬಂದ ಸ್ವಲ್ಪ ಸಮಯದಲ್ಲೇ ಏನಾಯಿತು? (ಬಿ) ಆಗ ಮೋಶೆ ಏನು ಮಾಡಿದನು?

5 ಇಸ್ರಾಯೇಲ್ಯರು ಐಗುಪ್ತದಿಂದ ಹೊರಟು ಎರಡು ತಿಂಗಳು ಕೂಡ ಆಗಿರಲಿಲ್ಲ, ಸೀನಾಯಿ ಬೆಟ್ಟದ ಹತ್ತಿರಕ್ಕೂ ಬಂದಿರಲಿಲ್ಲ. ಅಷ್ಟರಲ್ಲಿ ಒಂದು ದೊಡ್ಡ ಸಮಸ್ಯೆ ಎದುರಾಯಿತು. ನೀರಿಲ್ಲ ಎಂದು ಜನರು ದೂರಲು ಆರಂಭಿಸಿದರು. ಮೋಶೆ ಮೇಲೆ ಕೋಪಗೊಂಡು ಆತನ ವಿರುದ್ಧ ಗುಣುಗುಟ್ಟಲು ಆರಂಭಿಸಿದರು. ಆಗ ಮೋಶೆ “ಈ ಜನರಿಗೋಸ್ಕರ ನಾನೇನು ಮಾಡಲಿ? ಅವರು ನನ್ನನ್ನು ಕಲ್ಲೆಸೆದು ಕೊಲ್ಲುವ ಹಾಗಿದ್ದಾರಲ್ಲಾ” ಎಂದು ಯೆಹೋವನಿಗೆ ಮೊರೆಯಿಟ್ಟನು. (ವಿಮೋ. 17:4) ಆಗ ಯೆಹೋವನು ಮೋಶೆಗೆ ಸ್ಪಷ್ಟವಾದ ನಿರ್ದೇಶನಗಳನ್ನು ಕೊಟ್ಟನು. ಹೋರೇಬಿನಲ್ಲಿರುವ ಒಂದು ಬಂಡೆಯನ್ನು ಆತನ ಕೋಲಿನಿಂದ ಹೊಡೆಯಲು ಹೇಳಿದನು. “ಮೋಶೆ ಇಸ್ರಾಯೇಲ್ಯರ ಹಿರಿಯರ ಎದುರಿನಲ್ಲಿ ಹಾಗೆಯೇ ಮಾಡಿದನು.” ಆಗ ಬಂಡೆಯಿಂದ ನೀರು ಬಂತು, ಇಸ್ರಾಯೇಲ್ಯರಿಗೆ ಕುಡಿಯಲು ಸಾಕಷ್ಟು ನೀರು ಸಿಕ್ಕಿತು. ಹೀಗೆ ಆ ಸಮಸ್ಯೆ ಬಗೆಹರಿಯಿತು.—ವಿಮೋ. 17:5, 6.

6 ಆ ಸ್ಥಳಕ್ಕೆ ಮೋಶೆ ಮಸ್ಸಾ ಮತ್ತು ಮೆರೀಬಾ ಎಂದು ಹೆಸರಿಟ್ಟನು ಎಂದು ಬೈಬಲ್‌ ಹೇಳುತ್ತದೆ. ಮಸ್ಸಾ ಅಂದರೆ “ಪರೀಕ್ಷಿಸುವುದು” ಮತ್ತು ಮೆರೀಬಾ ಅಂದರೆ “ವಿವಾದ ಮಾಡುವುದು” ಎಂದು ಅರ್ಥ. ಮೋಶೆ ಯಾಕೆ ಈ ಹೆಸರಿಟ್ಟನು? ಇಸ್ರಾಯೇಲ್ಯರು “ಯೆಹೋವನು ನಮ್ಮ ಮಧ್ಯದಲ್ಲಿ ಇದ್ದಾನೋ ಇಲ್ಲವೋ ಎಂದು ಯೆಹೋವನನ್ನು ಅಲ್ಲಿ ಪರೀಕ್ಷಿಸಿದ್ದರಿಂದ . . . ವಿವಾದ ಮಾಡಿದ್ದರಿಂದ” ಆ ಹೆಸರಿಟ್ಟನು.—ವಿಮೋ. 17:7.

7 ಮೆರೀಬಾದಲ್ಲಿ ನಡೆದ ಈ ಘಟನೆಯ ಬಗ್ಗೆ ಯೆಹೋವನಿಗೆ ಹೇಗನಿಸಿತು? ಇಸ್ರಾಯೇಲ್ಯರು ಮೋಶೆಯ ವಿರುದ್ಧ ಮಾತ್ರವಲ್ಲ ತನ್ನ ವಿರುದ್ಧ, ತನ್ನ ಅಧಿಕಾರದ ವಿರುದ್ಧ ದಂಗೆ ಎದ್ದರು ಎಂದು ಯೆಹೋವನು ನೆನಸಿದನು. (ಕೀರ್ತನೆ 95:8, 9 ಓದಿ.) ಇಸ್ರಾಯೇಲ್ಯರು ಮಾಡಿದ್ದು ದೊಡ್ಡ ತಪ್ಪಾಗಿತ್ತು. ಆದರೆ ಮೋಶೆ ಮಾಡಿದ್ದು ಸರಿಯಾಗಿತ್ತು. ಮೋಶೆ ಯೆಹೋವನ ಕಡೆಗೆ ನೋಡಿ ಆತನು ಕೊಟ್ಟ ನಿರ್ದೇಶನಗಳನ್ನು ತಪ್ಪದೇ ಪಾಲಿಸಿದನು.

8. ಇಸ್ರಾಯೇಲ್ಯರು ಅರಣ್ಯದಲ್ಲಿ ಸಂಚರಿಸುತ್ತಾ ವಾಗ್ದತ್ತ ದೇಶವನ್ನು ಪ್ರವೇಶಿಸುವ ಸಮಯ ಬಂದಾಗ ಏನಾಯಿತು?

8 ಆದರೆ ಸುಮಾರು 40 ವರ್ಷಗಳ ನಂತರ ಇದೇ ಸಮಸ್ಯೆ ಪುನಃ ಬಂತು. ಇಸ್ರಾಯೇಲ್ಯರು ಅರಣ್ಯದಲ್ಲಿ ಸಂಚರಿಸುತ್ತಾ ವಾಗ್ದತ್ತ ದೇಶವನ್ನು ಪ್ರವೇಶಿಸುವ ಸಮಯ ಬಂದಿತ್ತು. ವಾಗ್ದತ್ತ ದೇಶದ ಗಡಿಯ ಹತ್ತಿರವಿದ್ದ ಕಾದೇಶ್‌ ಎಂಬ ಸ್ಥಳಕ್ಕೆ ಅವರು ಬಂದು ಮುಟ್ಟಿದ್ದರು. ಈ ಸ್ಥಳವನ್ನೂ ಮೆರೀಬಾ ಎಂದು ಕರೆಯಲಾಯಿತು. * ಯಾಕೆ? ಯಾಕೆಂದರೆ ಇಸ್ರಾಯೇಲ್ಯರು ನೀರಿಲ್ಲ ಎಂದು ಇಲ್ಲಿ ಪುನಃ ದೂರಿದರು. (ಅರ. 20:1-5) ಆದರೆ ಈ ಸಾರಿ ಮೋಶೆ ಒಂದು ದೊಡ್ಡ ತಪ್ಪು ಮಾಡಿದನು.

9. (ಎ) ಯೆಹೋವನು ಮೋಶೆಗೆ ಯಾವ ನಿರ್ದೇಶನ ಕೊಟ್ಟನು? (ಬಿ) ಆದರೆ ಮೋಶೆ ಏನು ಮಾಡಿದನು? (ಲೇಖನದ ಆರಂಭದ ಚಿತ್ರ ನೋಡಿ.)

9 ಜನರು ದಂಗೆ ಎದ್ದಾಗ ಮೋಶೆ ಏನು ಮಾಡಿದನು? ಆಗಲೂ ಆತನು ನಿರ್ದೇಶನಕ್ಕಾಗಿ ಯೆಹೋವನ ಕಡೆಗೆ ನೋಡಿದನು. ಆದರೆ ಈ ಸಾರಿ ಯೆಹೋವನು ಮೋಶೆಗೆ ಬಂಡೆಯನ್ನು ಹೊಡೆಯುವಂತೆ ಹೇಳಲಿಲ್ಲ. ಕೋಲನ್ನು ತೆಗೆದುಕೊಂಡು ಜನರನ್ನು ಬಂಡೆಯ ಹತ್ತಿರ ಕರಕೊಂಡು ಬಂದು ಬಂಡೆಯ ಜೊತೆ ಮಾತಾಡಲು ಹೇಳಿದನು. (ಅರ. 20:6-8) ಮೋಶೆ ಇದನ್ನೇ ಮಾಡಿದನಾ? ಇಲ್ಲ. ಆತನು ಜನರ ಮೇಲೆ ತುಂಬ ಕೋಪಗೊಂಡು “ದ್ರೋಹಿಗಳೇ, ಕೇಳಿರಿ; ನಾವು ಈ ಬಂಡೆಯೊಳಗಿಂದಲೇ ನಿಮಗೋಸ್ಕರ ನೀರನ್ನು ಬರಮಾಡಬೇಕೋ?” ಎಂದು ಹೇಳಿ ಬಂಡೆಗೆ ತನ್ನ ಕೋಲಿನಿಂದ ಹೊಡೆದನು. ಒಂದು ಸಾರಿ ಅಲ್ಲ, ಎರಡು ಸಾರಿ ಹೊಡೆದನು.—ಅರ. 20:10, 11.

10. ಮೋಶೆ ಮಾಡಿದ್ದನ್ನು ನೋಡಿ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?

10 ಮೋಶೆ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು. (ಧರ್ಮೋ. 1:37; 3:26) ಯಾಕೆ? ಯೆಹೋವನು ಕೊಟ್ಟ ಹೊಸ ನಿರ್ದೇಶನವನ್ನು ಮೋಶೆ ಪಾಲಿಸದೇ ಇದ್ದದ್ದು ಒಂದು ಕಾರಣವಾಗಿರಬಹುದು.

11. ಯೆಹೋವನು ಅದ್ಭುತ ಮಾಡಿ ನೀರು ಕೊಟ್ಟಿದ್ದಲ್ಲ ಎಂದು ಜನರು ನೆನಸಲು ಮೋಶೆ ಬಂಡೆಯನ್ನು ಹೊಡೆದಿದ್ದು ಹೇಗೆ ಕಾರಣವಾಗಿರಬಹುದು?

11 ಮೋಶೆ ಮೇಲೆ ಯೆಹೋವನಿಗೆ ಕೋಪ ಬಂದಿದ್ದಕ್ಕೆ ಇನ್ನೊಂದು ಕಾರಣವೂ ಇದ್ದಿರಬಹುದು. ಮೊದಲನೇ ಮೆರೀಬಾದಲ್ಲಿ ಇದ್ದ ದೊಡ್ಡ ಬಂಡೆ ಗಟ್ಟಿಯಾದ ಗ್ರ್ಯಾನೈಟ್‌ ಕಲ್ಲು. ಎಷ್ಟು ಜೋರಾಗಿ ಹೊಡೆದರೂ ಆ ಬಂಡೆಯಿಂದ ನೀರು ಬರಲ್ಲ. ಆದರೆ ಎರಡನೇ ಮೆರೀಬಾದಲ್ಲಿದ್ದ ಬಂಡೆ ಹಾಗಿರಲಿಲ್ಲ. ಅಲ್ಲಿದ್ದ ಹೆಚ್ಚಿನ ಬಂಡೆಗಳು ಸುಣ್ಣಕಲ್ಲುಗಳಾಗಿದ್ದವು. ಸುಣ್ಣಕಲ್ಲುಗಳು ಅಷ್ಟು ಗಟ್ಟಿಯಲ್ಲದ ಬಂಡೆಯಾಗಿರುವುದರಿಂದ ನೀರು ಅವುಗಳ ಒಳಗೆ ಇಳಿದುಹೋಗಿ ಸಂಗ್ರಹವಾಗಿರುತ್ತದೆ. ಜನರು ಬಂಡೆಯಲ್ಲಿ ತೂತು ಮಾಡಿ ನೀರು ತೆಗೆಯಬಹುದು. ಆದ್ದರಿಂದ ಮೋಶೆ ಆ ಬಂಡೆಯನ್ನು ಹೊಡೆದದ್ದರಿಂದ ನೀರು ಸಹಜವಾಗಿಯೇ ಬಂತು, ಯೆಹೋವನು ಅದ್ಭುತ ಮಾಡಿ ನೀರು ಕೊಟ್ಟಿದ್ದಲ್ಲ ಎಂದು ಇಸ್ರಾಯೇಲ್ಯರು ನೆನಸಿರಬಹುದಾ? * ಇದನ್ನು ನಾವು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ.

ಮೋಶೆ ಹೇಗೆ ದಂಗೆ ಎದ್ದನು?

12. ಮೋಶೆ ಮತ್ತು ಆರೋನನ ಮೇಲೆ ಯೆಹೋವನಿಗೆ ಕೋಪ ಬರಲು ಇನ್ನೊಂದು ಕಾರಣ ಏನಿರಬಹುದು?

12 ಮೋಶೆ ಮತ್ತು ಆರೋನನ ಮೇಲೆ ಯೆಹೋವನಿಗೆ ಕೋಪ ಬರಲು ಇನ್ನೊಂದು ಕಾರಣವೂ ಇರಬಹುದು. ಮೋಶೆ ಜನರಿಗೆ, “ನಾವು ಈ ಬಂಡೆಯೊಳಗಿಂದಲೇ ನಿಮಗೋಸ್ಕರ ನೀರನ್ನು ಬರಮಾಡಬೇಕೋ?” ಎಂದು ಕೇಳಿದನು. “ನಾವು” ಎಂದು ಮೋಶೆ ಹೇಳಿದಾಗ ಬಹುಶಃ ಅವನ ಮನಸ್ಸಲ್ಲಿ ಅವನು ಮತ್ತು ಆರೋನ ಇದ್ದಿರಬಹುದು. ಆ ಅದ್ಭುತ ಮಾಡಿದ ಯೆಹೋವನಿಗೆ ಮೋಶೆ ಎಲ್ಲ ಕೀರ್ತಿಯನ್ನು ಸಲ್ಲಿಸದೆ ಅಗೌರವ ತೋರಿಸಿದನು. ಕೀರ್ತನೆ 106:32, 33 ಹೀಗೆ ಹೇಳುತ್ತದೆ: “ಅವರು ಮೆರೀಬದ ನೀರಿನ ಹತ್ತಿರ ದೇವರನ್ನು ರೇಗಿಸಿದರು. ಇದರಿಂದ ಮೋಶೆಗೆ ತುಂಬ ತೊಂದರೆಯಾಯಿತು. ಅವರು ಮೋಶೆಗೆ ಕಿರಿಕಿರಿ ಮಾಡಿದ್ದರಿಂದ ಅವನು ದುಡುಕಿ ಮಾತಾಡಿದನು.” * (ನೂತನ ಲೋಕ ಭಾಷಾಂತರ) (ಅರ. 27:14) ಯೆಹೋವನಿಗೆ ಸಲ್ಲಬೇಕಾಗಿದ್ದ ಮಹಿಮೆಯನ್ನು ಮೋಶೆ ಸಲ್ಲಿಸಲಿಲ್ಲ. ಆದ್ದರಿಂದ ಯೆಹೋವನು ಮೋಶೆ ಮತ್ತು ಆರೋನನಿಗೆ ‘ನೀವಿಬ್ಬರೂ ನನ್ನ ಮಾತಿಗೆ ವಿರೋಧವಾಗಿ ತಿರುಗಿಬಿದ್ದಿರಿ’ ಎಂದು ಹೇಳಿದನು. (ಅರ. 20:24) ಇದು ನಿಜವಾಗಲೂ ತುಂಬ ದೊಡ್ಡ ಪಾಪವಾಗಿತ್ತು!

13. ಯೆಹೋವನು ಮೋಶೆಗೆ ನೀಡಿದ ಶಿಕ್ಷೆ ಯಾಕೆ ನ್ಯಾಯವಾಗಿತ್ತು?

13 ದೇವಜನರ ಮುಂದಾಳತ್ವ ವಹಿಸುತ್ತಿದ್ದ ಮೋಶೆ ಆರೋನರು ಹೆಚ್ಚು ಜವಾಬ್ದಾರಿಯಿಂದ ನಡಕೊಳ್ಳಬೇಕಿತ್ತು. (ಲೂಕ 12:48) ಈ ಮುಂಚೆ, ಇಸ್ರಾಯೇಲ್ಯರು ತನ್ನ ವಿರುದ್ಧ ದಂಗೆ ಎದ್ದ ಕಾರಣ ವಾಗ್ದತ್ತ ದೇಶಕ್ಕೆ ಹೋಗಲು ಇಡೀ ಜನಾಂಗಕ್ಕೆ ಯೆಹೋವನು ಅನುಮತಿ ನೀಡಲಿಲ್ಲ. (ಅರ. 14:26-30, 34) ಆದ್ದರಿಂದ ಮೋಶೆ ದಂಗೆ ಎದ್ದಾಗ ಯೆಹೋವನು ಅದೇ ಶಿಕ್ಷೆಯನ್ನು ಕೊಟ್ಟನು. ದಂಗೆ ಎದ್ದ ಇಸ್ರಾಯೇಲ್‌ ಜನರಂತೆ ಮೋಶೆಗೂ ಯೆಹೋವನು ವಾಗ್ದತ್ತ ದೇಶವನ್ನು ಪ್ರವೇಶಿಸುವ ಅವಕಾಶ ಕೊಡಲಿಲ್ಲ.

ಮೋಶೆ ಯಾಕೆ ದಂಗೆ ಎದ್ದನು?

14, 15. ಮೋಶೆ ಯೆಹೋವನ ವಿರುದ್ಧ ಯಾಕೆ ದಂಗೆ ಎದ್ದನು?

14 ಮೋಶೆ ಯೆಹೋವನ ವಿರುದ್ಧ ಯಾಕೆ ದಂಗೆ ಎದ್ದನು? ಕೀರ್ತನೆ 106:32, 33 ಏನು ಹೇಳುತ್ತದೆ ಎಂದು ಮತ್ತೊಮ್ಮೆ ನೋಡಿ: “ಅವರು ಮೆರೀಬದ ನೀರಿನ ಹತ್ತಿರ ದೇವರನ್ನು ರೇಗಿಸಿದರು. ಇದರಿಂದ ಮೋಶೆಗೆ ತುಂಬ ತೊಂದರೆಯಾಯಿತು. ಅವರು ಮೋಶೆಗೆ ಕಿರಿಕಿರಿ ಮಾಡಿದ್ದರಿಂದ ಅವನು ದುಡುಕಿ ಮಾತಾಡಿದನು.” (ನೂತನ ಲೋಕ ಭಾಷಾಂತರ) ಇಸ್ರಾಯೇಲ್ಯರು ದಂಗೆ ಎದ್ದದ್ದು ಯೆಹೋವನ ವಿರುದ್ಧ, ಆದರೆ ಕಿರಿಕಿರಿಯಾಗಿದ್ದು ಕೋಪ ಬಂದಿದ್ದು ಮೋಶೆಗೆ. ಆತನು ಸ್ವನಿಯಂತ್ರಣ ತೋರಿಸಲಿಲ್ಲ, ಪರಿಣಾಮದ ಬಗ್ಗೆ ಯೋಚಿಸದೆ ಮಾತಾಡಿಬಿಟ್ಟನು.

15 ಜನರು ಮಾಡಿದ್ದನ್ನು ನೋಡಿ ಮೋಶೆ ಅಪಕರ್ಷಿತನಾಗಿ ಯೆಹೋವನ ಕಡೆಯಿಂದ ತನ್ನ ದೃಷ್ಟಿಯನ್ನು ಬೇರೆ ಕಡೆಗೆ ತಿರುಗಿಸಿದನು. ಮೊದಲನೇ ಸಾರಿ ಜನರು ನೀರಿಲ್ಲ ಎಂದು ದೂರಿದಾಗ ಮೋಶೆ ಯಾವುದು ಸರಿಯೋ ಅದನ್ನು ಮಾಡಿದನು. (ವಿಮೋ. 7:6) ಆದರೆ ಇಸ್ರಾಯೇಲ್ಯರು ತುಂಬ ವರ್ಷಗಳಿಂದ ದಂಗೆ ಏಳುತ್ತಾ ಇದ್ದದರಿಂದ ಮೋಶೆಗೆ ಸಾಕಾಗಿ ಹೋಗಿರಬೇಕು, ಕೋಪ ಬಂದಿರಬೇಕು. ಹಾಗಾಗಿ ಎರಡನೇ ಸಲ ಜನರು ನೀರಿಗಾಗಿ ರಂಪ ಎಬ್ಬಿಸಿದಾಗ ಯೆಹೋವನನ್ನು ಹೇಗೆ ಮಹಿಮೆಪಡಿಸಬಹುದು ಎಂದು ಮೋಶೆ ಯೋಚಿಸದೆ ತನ್ನ ಭಾವನೆಗಳ ಬಗ್ಗೆ ಯೋಚಿಸಿರಬಹುದು.

16. ಮೋಶೆ ಮಾಡಿದ ತಪ್ಪಿನ ಬಗ್ಗೆ ನಾವು ಯಾಕೆ ಯೋಚಿಸಬೇಕು?

16 ನಂಬಿಗಸ್ತ ಪ್ರವಾದಿಯಾಗಿದ್ದ ಮೋಶೆನೇ ಅಪಕರ್ಷಿತನಾಗಿ ಪಾಪಮಾಡಿದನು. ಹೀಗಿರುವಾಗ ನಾವು ಸುಲಭವಾಗಿಯೇ ಅಪಕರ್ಷಿತರಾಗಬಹುದು. ಮೋಶೆ ಇನ್ನೇನು ವಾಗ್ದತ್ತ ದೇಶಕ್ಕೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ಪಾಪಮಾಡಿದನು. ಅದೇ ರೀತಿ ನಾವೂ ಹೊಸ ಲೋಕವನ್ನು ಇನ್ನೇನು ಪ್ರವೇಶಿಸಲಿದ್ದೇವೆ. (2 ಪೇತ್ರ 3:13) ಆ ವಿಶೇಷ ಅವಕಾಶವನ್ನು ಕಳಕೊಳ್ಳಲು ನಾವು ಇಷ್ಟಪಡುವುದಿಲ್ಲ. ಆದರೆ ಹೊಸ ಲೋಕಕ್ಕೆ ನಾವು ಹೋಗಬೇಕೆಂದರೆ ಯೆಹೋವನ ಕಡೆಗೆ ನೋಡುತ್ತಾ ಇರಬೇಕು ಮತ್ತು ಯಾವಾಗಲೂ ಆತನು ಹೇಳಿದಂತೆ ಮಾಡಬೇಕು. (1 ಯೋಹಾ. 2:17) ಮೋಶೆ ಮಾಡಿದ ತಪ್ಪಿನಿಂದ ನಾವು ಯಾವ ಪಾಠಗಳನ್ನು ಕಲಿಯುತ್ತೇವೆ?

ಬೇರೆಯವರು ಮಾಡುವುದನ್ನು ನೋಡಿ ಅಪಕರ್ಷಿತರಾಗಬೇಡಿ

17. ಕೋಪ ಬಂದಾಗ ಸ್ವನಿಯಂತ್ರಣ ಕಳಕೊಳ್ಳದಿರಲು ನಾವೇನು ಮಾಡಬೇಕು?

17 ನಿಮಗೆ ಕಿರಿಕಿರಿಯಾಗಿರುವಾಗ ಸ್ವನಿಯಂತ್ರಣ ಕಳಕೊಳ್ಳಬೇಡಿ. ಕೆಲವೊಮ್ಮೆ ನಮಗೆ ಒಂದೇ ರೀತಿಯ ಸಮಸ್ಯೆ ಪುನಃ ಪುನಃ ಬರಬಹುದು. ಆಗ “ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರೋಣ; ನಾವು ದಣಿಯದಿದ್ದರೆ ತಕ್ಕ ಸಮಯದಲ್ಲಿ ಫಲವನ್ನು ಕೊಯ್ಯುವೆವು.” (ಗಲಾ. 6:9; 2 ಥೆಸ. 3:13) ಯಾವುದಾದರೂ ಒಂದು ವಿಷಯದಿಂದ ಅಥವಾ ಯಾರಾದರೊಬ್ಬರಿಂದ ನಮಗೆ ಪುನಃ ಪುನಃ ಕಿರಿಕಿರಿ ಆಗುತ್ತಿದ್ದರೆ ನಾವು ಮಾತಾಡುವ ಮುಂಚೆ ಯೋಚಿಸುತ್ತೇವಾ? ನಮ್ಮ ಕೋಪವನ್ನು ನಿಯಂತ್ರಿಸುತ್ತೇವಾ? (ಜ್ಞಾನೋ. 10:19; 17:27; ಮತ್ತಾ. 5:22) ನಮಗೆ ಕೋಪ ಬರುವ ತರ ಬೇರೆಯವರು ನಡಕೊಂಡರೆ ‘ದೇವರ ಕ್ರೋಧಕ್ಕೆ ಎಡೆಮಾಡಿಕೊಡಲು’ ಕಲಿಯಬೇಕು. (ರೋಮನ್ನರಿಗೆ 12:17-21 ಓದಿ.) ಇದರ ಅರ್ಥವೇನು? ನಾವು ಕೋಪ ಮಾಡಿಕೊಳ್ಳುವ ಬದಲು, ನಮ್ಮ ಸಮಸ್ಯೆಯನ್ನು ಯಾವಾಗ ಸರಿ ಮಾಡಬೇಕು ಎಂದು ಯೆಹೋವನಿಗೆ ಅನಿಸುತ್ತದೋ ಆ ಸಮಯ ಬರುವ ತನಕ ತಾಳ್ಮೆಯಿಂದ ಕಾಯಬೇಕು. ಯೆಹೋವನ ಕಡೆಗೆ ನೋಡುವುದನ್ನು ಬಿಟ್ಟು ಸೇಡು ತೀರಿಸಲು ನಾವೇ ಮುಂದಾದರೆ ಆತನಿಗೆ ಅಗೌರವ ತೋರಿಸಿದಂತಾಗುತ್ತದೆ.

18. ನಿರ್ದೇಶನಗಳನ್ನು ಪಾಲಿಸುವ ವಿಷಯದಲ್ಲಿ ನಾವು ಯಾವುದನ್ನು ಮನಸ್ಸಲ್ಲಿಡಬೇಕು?

18 ಹೊಸ ನಿರ್ದೇಶನಗಳಿಗೆ ಗಮನಕೊಟ್ಟು ಪಾಲಿಸಿ. ಯೆಹೋವನು ನಮಗೆ ಕೊಡುವ ಹೊಸ ನಿರ್ದೇಶನಗಳನ್ನು ತಪ್ಪದೇ ಪಾಲಿಸುತ್ತೇವಾ? ನಾವು ಮುಂಚೆ ವಿಷಯಗಳನ್ನು ಮಾಡುತ್ತಾ ಇದ್ದ ಹಾಗೆಯೇ ಈಗಲೂ ಮಾಡುತ್ತಾ ಇರಬಾರದು. ಯೆಹೋವನು ತನ್ನ ಸಂಘಟನೆಯ ಮೂಲಕ ಒಂದು ಹೊಸ ನಿರ್ದೇಶನ ಕೊಟ್ಟರೆ ಅದನ್ನು ಕೂಡಲೇ ಪಾಲಿಸಬೇಕು. (ಇಬ್ರಿ. 13:17) ಅಷ್ಟೇ ಅಲ್ಲ, ‘ಬರೆದಿರುವ ಸಂಗತಿಗಳನ್ನು ಮೀರಿಹೋಗದಂತೆಯೂ’ ಎಚ್ಚರ ವಹಿಸಬೇಕು. (1 ಕೊರಿಂ. 4:6) ಯೆಹೋವನ ನಿರ್ದೇಶನಗಳಿಗೆ ಗಮನಕೊಟ್ಟು ಪಾಲಿಸುತ್ತಾ ಹೋದರೆ ನಾವು ಯೆಹೋವನ ಕಡೆಗೆ ನೋಡುತ್ತಾ ಇದ್ದೇವೆ ಎಂದರ್ಥ.

ಬೇರೆಯವರು ತಪ್ಪುಮಾಡಿದಾಗ ಮೋಶೆ ಪ್ರತಿಕ್ರಿಯಿಸಿದ ವಿಧದಿಂದ ನಾವು ಯಾವ ಪಾಠ ಕಲಿಯುತ್ತೇವೆ? (ಪ್ಯಾರ 19 ನೋಡಿ)

19. ಬೇರೆಯವರ ತಪ್ಪನ್ನು ನೋಡಿ ಯೆಹೋವನ ಸ್ನೇಹವನ್ನು ಹಾಳುಮಾಡಿಕೊಳ್ಳದೆ ಇರಲು ನಾವೇನು ಮಾಡಬೇಕು?

19 ಬೇರೆಯವರ ತಪ್ಪನ್ನು ನೋಡಿ ಯೆಹೋವನ ಜೊತೆ ನಿಮಗಿರುವ ಸ್ನೇಹವನ್ನು ಹಾಳುಮಾಡಿಕೊಳ್ಳಬೇಡಿ. ನಾವು ಯೆಹೋವನ ಕಡೆಗೆ ನೋಡುವುದನ್ನು ಮುಂದುವರಿಸಿದರೆ ಯೆಹೋವನ ಜೊತೆ ನಮಗಿರುವ ಸ್ನೇಹವನ್ನು ಹಾಳುಮಾಡಿಕೊಳ್ಳಲ್ಲ ಅಥವಾ ಬೇರೆಯವರು ಮಾಡುವ ತಪ್ಪನ್ನು ನೋಡಿ ಕೋಪಮಾಡಿಕೊಳ್ಳಲ್ಲ. ಇದನ್ನು ಇಂದು ದೇವರ ಸಂಘಟನೆಯಲ್ಲಿ ಮೋಶೆಯಂತೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಮನಸ್ಸಲ್ಲಿಡುತ್ತಾರೆ. ಅವರು ಮಾತ್ರವಲ್ಲ ನಾವೆಲ್ಲರೂ ರಕ್ಷಣೆ ಪಡೆಯಲು ಶ್ರಮಿಸಬೇಕು ಮತ್ತು ಯೆಹೋವನ ಮಾತನ್ನು ಕೇಳಬೇಕು. (ಫಿಲಿ. 2:12) ಆದರೆ ಯೆಹೋವನು ಯಾರಿಗೆ ಹೆಚ್ಚು ಜವಾಬ್ದಾರಿ ಕೊಟ್ಟಿದ್ದಾನೋ ಅವರಿಂದ ಹೆಚ್ಚನ್ನು ನಿರೀಕ್ಷಿಸುತ್ತಾನೆ. (ಲೂಕ 12:48) ನಾವು ಯೆಹೋವನನ್ನು ನಿಜವಾಗಿಯೂ ಪ್ರೀತಿಸುವುದಾದರೆ ಯಾವುದರಿಂದಲೂ ಎಡವುವುದಿಲ್ಲ, ಆತನ ಪ್ರೀತಿಯಿಂದ ಯಾವುದೂ ನಮ್ಮನ್ನು ಅಗಲಿಸುವುದಿಲ್ಲ.—ಕೀರ್ತ. 119:165; ರೋಮ. 8:37-39.

20. ನಾವು ಯಾವ ದೃಢಮನಸ್ಸು ಮಾಡಬೇಕು?

20 ಸಮಸ್ಯೆ, ಸವಾಲುಗಳು ತುಂಬಿರುವ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ಆದ್ದರಿಂದ ನಾವೇನು ಮಾಡಬೇಕು ಎಂದು ಯೆಹೋವನು ಬಯಸುತ್ತಾನೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ‘ಪರಲೋಕದಲ್ಲಿ ಆಸೀನನಾಗಿರುವ’ ಯೆಹೋವನ ಕಡೆಗೆ ನಾವು ನೋಡುತ್ತಾ ಇರುವುದು ತುಂಬ ಮುಖ್ಯ. ಬೇರೆಯವರು ಮಾಡುವ ವಿಷಯಗಳನ್ನು ನೋಡಿ ಯೆಹೋವನ ಜೊತೆ ನಮಗಿರುವ ಸ್ನೇಹವನ್ನು ಯಾವತ್ತೂ ಹಾಳುಮಾಡಿಕೊಳ್ಳಬಾರದು. ಈ ಪ್ರಾಮುಖ್ಯ ಪಾಠವನ್ನು ಮೋಶೆಯಿಂದ ಕಲಿಯುತ್ತೇವೆ. ಬೇರೆಯವರು ತಪ್ಪು ಮಾಡಿದಾಗ ಅತಿಯಾಗಿ ಪ್ರತಿಕ್ರಿಯಿಸದಿರೋಣ. ಯೆಹೋವನ ಅನುಗ್ರಹ ಸಿಗುವ ತನಕ ಆತನ ಕಡೆಗೆ ನೋಡುತ್ತಾ ಇರಲು ದೃಢಮನಸ್ಸು ಮಾಡೋಣ.—ಕೀರ್ತ. 123:1, 2.

^ ಪ್ಯಾರ. 8 ಈ ಮೆರೀಬಾ ಬೇರೆ ಮತ್ತು ಮಸ್ಸಾ ಎಂಬ ಹೆಸರಿನಿಂದಲೂ ಕರೆಯಲಾದ ರೆಫೀದೀಮ್‌ನ ಹತ್ತಿರವಿದ್ದ ಮೆರೀಬಾ ಬೇರೆ. ಆದರೂ ಇಸ್ರಾಯೇಲ್ಯರು ಈ ಸ್ಥಳಗಳಲ್ಲಿ ವಿವಾದ ಮಾಡಿದ್ದರಿಂದ ಅಥವಾ ದೂರಿದ್ದರಿಂದ ಇವೆರಡಕ್ಕೂ ಮೆರೀಬಾ ಎಂಬ ಹೆಸರು ಬಂತು.—ಬೈಬಲಿನ ಅಧ್ಯಯನ ಕೈಪಿಡಿಯ ವಿಭಾಗ 7​ರಲ್ಲಿರುವ ನಕ್ಷೆ ನೋಡಿ.

^ ಪ್ಯಾರ. 11 ಒಬ್ಬ ಬೈಬಲ್‌ ವಿದ್ವಾಂಸ ಹೇಳುವುದು: ‘ಯೆಹೂದಿಗಳ ನಂಬಿಕೆಯೇನೆಂದರೆ ಆ ಬಂಡೆಯಲ್ಲಿ ನೀರು ಇದೆ ಎಂದು ಮೋಶೆಗೆ ಗೊತ್ತಿದ್ದರಿಂದ ಅದು ಅದ್ಭುತವಲ್ಲ ಎಂದು ದಂಗೆ ಎದ್ದ ಜನರು ಹೇಳಿದರು. ಆದ್ದರಿಂದ ಇನ್ನೊಂದು ಬಂಡೆಯನ್ನು ಹೊಡೆದು ನೀರು ಬರಿಸಿ ಅದ್ಭುತ ಮಾಡುವಂತೆ ಅವರು ಮೋಶೆಗೆ ಹೇಳಿದರು.’ ಆದರೆ ಇದು ಜನರು ಒಬ್ಬರಿಂದ ಒಬ್ಬರು ಹೇಳಿಕೊಂಡು ಬಂದಿರುವ ಕಥೆಯಷ್ಟೇ.

^ ಪ್ಯಾರ. 12 ಅಕ್ಟೋಬರ್‌ 15, 1987​ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯಲ್ಲಿ ಬಂದ “ವಾಚಕರಿಂದ ಪ್ರಶ್ನೆಗಳು” ನೋಡಿ.