ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯ ಏನೆಂದು ನಿಮಗೆ ಗೊತ್ತಾ?

ಸತ್ಯ ಏನೆಂದು ನಿಮಗೆ ಗೊತ್ತಾ?

“ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.”—ಜ್ಞಾನೋ. 18:13.

ಗೀತೆಗಳು: 43, 116

1, 2. (ಎ) ಯಾವ ಸಾಮರ್ಥ್ಯವನ್ನು ನಾವು ತುಂಬ ಮುಖ್ಯವಾಗಿ ಬೆಳೆಸಿಕೊಳ್ಳಬೇಕು ಮತ್ತು ಯಾಕೆ? (ಬಿ) ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

ಸತ್ಯ ಕ್ರೈಸ್ತರಾದ ನಾವೆಲ್ಲರೂ ಒಂದು ಮಾಹಿತಿ ಸತ್ಯನಾ ಸುಳ್ಳಾ ಎಂದು ಪರೀಕ್ಷಿಸಿ ತಿಳಿದುಕೊಳ್ಳಲು ಮತ್ತು ಸರಿಯಾದ ತೀರ್ಮಾನಕ್ಕೆ ಬರಲು ಕಲಿಯಬೇಕು. (ಜ್ಞಾನೋ. 3:21-23; 8:4, 5) ಇಲ್ಲದೇ ಹೋದರೆ ಸೈತಾನ ಮತ್ತು ಅವನ ಲೋಕ ನಮ್ಮ ಯೋಚನೆಯನ್ನು ಸುಲಭವಾಗಿ ಹಾಳುಮಾಡಿ ಬಿಡಬಹುದು. (ಎಫೆ. 5:6; ಕೊಲೊ. 2:8) ಹಾಗಾಗಿ ಯಾವುದೇ ವಿಷಯದಲ್ಲಿ ನಾವು ಸರಿಯಾದ ತೀರ್ಮಾನಕ್ಕೆ ಬರಬೇಕಾದರೆ ನಿಜಾಂಶಗಳನ್ನು ತಿಳಿದುಕೊಂಡಿರಬೇಕು. “ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು” ಎಂದು ಜ್ಞಾನೋಕ್ತಿ 18:13 ಹೇಳುತ್ತದೆ.

2 ಸತ್ಯ ಏನೆಂದು ತಿಳಿದುಕೊಳ್ಳಲು ಮತ್ತು ಸರಿಯಾದ ತೀರ್ಮಾನಕ್ಕೆ ಬರಲು ನಮಗೆ ಯಾಕೆ ಕಷ್ಟ ಆಗಬಹುದು ಎಂದು ಈ ಲೇಖನದಲ್ಲಿ ನೋಡಲಿದ್ದೇವೆ. ಒಂದು ಮಾಹಿತಿ ಸತ್ಯನಾ ಸುಳ್ಳಾ ಎಂದು ತಿಳಿದುಕೊಳ್ಳಲು ಸಹಾಯ ಮಾಡುವ ಬೈಬಲ್‌ ತತ್ವಗಳು ಮತ್ತು ಉದಾಹರಣೆಗಳ ಬಗ್ಗೆ ಸಹ ಕಲಿಯಲಿದ್ದೇವೆ.

ಎಲ್ಲವನ್ನೂ ಕಣ್ಮುಚ್ಚಿಕೊಂಡು ನಂಬಬೇಡಿ

3. ಜ್ಞಾನೋಕ್ತಿ 14:15​ರಲ್ಲಿರುವ ತತ್ವವನ್ನು ನಾವು ಯಾಕೆ ಅನ್ವಯಿಸಿಕೊಳ್ಳಬೇಕು? (ಲೇಖನದ ಆರಂಭದ ಚಿತ್ರ ನೋಡಿ.)

3 ಇವತ್ತು ನಮ್ಮ ಮೇಲೆ ಮಾಹಿತಿಯ ಸುರಿಮಳೆನೇ ಸುರಿಯುತ್ತಾ ಇದೆ. ಇದು ಇಂಟರ್‌ನೆಟ್‌, ಟಿವಿ ಮತ್ತು ಬೇರೆ ಮಾಧ್ಯಮಗಳ ಮೂಲಕ ಬರುತ್ತದೆ. ನಮ್ಮ ಸ್ನೇಹಿತರು ಮತ್ತು ಪರಿಚಯಸ್ಥರಿಂದಲೂ ಇ-ಮೇಲ್‌, ಮೆಸೆಜ್‌ ಮತ್ತು ಏನೇನೋ ಕಥೆಗಳು ಬರುತ್ತವೆ. ನಮ್ಮ ಸ್ನೇಹಿತರು ಒಳ್ಳೇ ಉದ್ದೇಶದಿಂದಲೇ ಅಂಥ ಸುದ್ದಿಗಳನ್ನು ನಮಗೆ ಕಳುಹಿಸಬಹುದು. ಆದರೆ ಬೇರೆ ಕೆಲವರು ಬೇಕುಬೇಕಂತನೇ ತಪ್ಪಾದ ಸುದ್ದಿಗಳನ್ನು ಹಬ್ಬಿಸುತ್ತಾರೆ ಅಥವಾ ನಿಜಾಂಶಗಳನ್ನು ತಿರುಚುತ್ತಾರೆ. ಆದ್ದರಿಂದ ನಾವು ಜಾಗ್ರತೆ ವಹಿಸಬೇಕು. ನಮಗೆ ಸಿಕ್ಕಿರುವಂಥ ಸುದ್ದಿ ಸರಿಯಾಗಿದೆಯಾ ಎಂದು ಪರೀಕ್ಷಿಸಲು ಯಾವ ಬೈಬಲ್‌ ತತ್ವ ಸಹಾಯ ಮಾಡುತ್ತದೆ? ಜ್ಞಾನೋಕ್ತಿ 14:15 ಸಹಾಯ ಮಾಡುತ್ತದೆ. ಅದು ಹೀಗೆ ಹೇಳುತ್ತದೆ: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.”

4. (ಎ) ನಾವು ಯಾವ ಸುದ್ದಿಯನ್ನು ಓದಬಹುದು ಎಂದು ತೀರ್ಮಾನಿಸಲು ಫಿಲಿಪ್ಪಿ 4:8, 9 ಹೇಗೆ ಸಹಾಯ ಮಾಡುತ್ತದೆ? (ಬಿ) ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಯಾಕೆ ತುಂಬ ಪ್ರಾಮುಖ್ಯ? (“ನಿಜಾಂಶಗಳು ಸಿಗುವ ಕೆಲವು ಮೂಲಗಳು” ಎಂಬ ಚೌಕ ನೋಡಿ.)

4 ಒಳ್ಳೆಯ ತೀರ್ಮಾನಗಳನ್ನು ತಗೊಳ್ಳಬೇಕೆಂದರೆ ವಿಶ್ವಾಸಾರ್ಹ ಮಾಹಿತಿ ನಮಗೆ ಬೇಕು. ಹಾಗಾಗಿ ನಮಗೆ ಯಾವುದಾದರೂ ಮಾಹಿತಿ ಸಿಕ್ಕಿದಾಗ ಅದನ್ನು ಓದಬೇಕಾ ಬೇಡವಾ ಅಂತ ಚೆನ್ನಾಗಿ ಯೋಚಿಸಬೇಕು. (ಫಿಲಿಪ್ಪಿ 4:8, 9 ಓದಿ.) ಸುಳ್ಳು ಸುದ್ದಿಯನ್ನು ಕೊಡುವ ಇಂಟರ್‌ನೆಟ್‌ ನ್ಯೂಸ್‌ ಸೈಟ್‌ಗಳನ್ನು ನೋಡುವುದರಲ್ಲಿ ಅಥವಾ ಗಾಳಿಸುದ್ದಿಯನ್ನು ಹಬ್ಬಿಸುವಂಥ ಇ-ಮೇಲ್‌ಗಳನ್ನು ಮತ್ತು ಮೆಸೆಜ್‌ಗಳನ್ನು ಓದುವುದರಲ್ಲಿ ನಮ್ಮ ಸಮಯವನ್ನು ಹಾಳುಮಾಡಬಾರದು. ಅದರಲ್ಲೂ ಧರ್ಮಭ್ರಷ್ಟರು ತಮ್ಮ ವಿಚಾರಗಳನ್ನು ಪ್ರಚಾರಮಾಡಲು ಬಳಸುವ ವೆಬ್‌ಸೈಟ್‌ಗಳಿಂದ ನಾವು ಖಂಡಿತ ದೂರ ಇರಬೇಕು. ಅವರು ದೇವಜನರ ನಂಬಿಕೆಯನ್ನು ದುರ್ಬಲಗೊಳಿಸಲು ಮತ್ತು ಸತ್ಯವನ್ನು ತಿರುಚಲು ಬಯಸುತ್ತಾರೆ. ಸುಳ್ಳು ಸುದ್ದಿಗಳನ್ನು ನಂಬಿ ನಾವು ತಪ್ಪಾದ ತೀರ್ಮಾನಗಳನ್ನು ಮಾಡಿಬಿಡುತ್ತೇವೆ. ತಪ್ಪಾದ ಸುದ್ದಿಗಳು ನಿಮ್ಮ ಮೇಲೆ ಪ್ರಭಾವ ಬೀರಲ್ಲ ಎಂದು ನೆನಸಬೇಡಿ.—1 ತಿಮೊ. 6:20, 21.

5. (ಎ) ಯಾವ ಕಟ್ಟುಕಥೆಯನ್ನು ಇಸ್ರಾಯೇಲ್ಯರು ಕೇಳಿಸಿಕೊಂಡರು? (ಬಿ) ಅದು ಅವರ ಮೇಲೆ ಯಾವ ಪ್ರಭಾವ ಬೀರಿತು?

5 ತಪ್ಪಾದ ವರದಿಗಳನ್ನು ನಂಬಿದರೆ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮೋಶೆಯ ಸಮಯದಲ್ಲಿ 12 ಗೂಢಚಾರರು ವಾಗ್ದತ್ತ ದೇಶಕ್ಕೆ ಹೋಗಿ ಬಂದ ಮೇಲೆ ಏನಾಯಿತೆಂದು ನೋಡಿ. ಅವರಲ್ಲಿ 10 ಗೂಢಚಾರರು ನಕಾರಾತ್ಮಕ ವರದಿಯನ್ನು ತಂದರು. (ಅರ. 13:25-33) ಅವರು ಅಲ್ಲಿ ಏನು ನೋಡಿದರೋ ಅದಕ್ಕೆ ರೆಕ್ಕೆಪುಕ್ಕ ಸೇರಿಸಿ ಹೇಳಿದ್ದರಿಂದ ಯೆಹೋವನ ಜನರು ಹೆದರಿದರು ಮತ್ತು ನಿರುತ್ತೇಜನಗೊಂಡರು. (ಅರ. 14:1-4) ಜನರು ಯಾಕೆ ಈ ರೀತಿ ಪ್ರತಿಕ್ರಿಯಿಸಿದರು? ಯಾಕೆಂದರೆ ಗೂಢಚಾರರಲ್ಲಿ ಹೆಚ್ಚಿನವರು ಒಂದೇ ರೀತಿ ಹೇಳಿದ್ದರಿಂದ ಅವರು ಆ ಕಥೆಯನ್ನು ನಿಜವೆಂದು ನಂಬಿದರು. ವಾಗ್ದತ್ತ ದೇಶದ ಬಗ್ಗೆ ಉಳಿದ ಇಬ್ಬರು ಗೂಢಚಾರರು ಒಳ್ಳೆಯ ವರದಿ ಕೊಟ್ಟರೂ ಆ ಜನರು ಅದನ್ನು ನಂಬುವುದಕ್ಕೆ ತಯಾರಿರಲಿಲ್ಲ. (ಅರ. 14:6-10) ಸತ್ಯ ಏನೆಂದು ತಿಳಿದುಕೊಳ್ಳುವ ಬದಲು ಮತ್ತು ಯೆಹೋವನ ಮೇಲೆ ಭರವಸೆ ಇಡುವ ಬದಲು ಆ ಜನರು ಸುಳ್ಳು ಕಥೆಯನ್ನು ಕೇಳಿಸಿಕೊಳ್ಳುವ ಮೂಲಕ ತಮ್ಮ ಮೂರ್ಖತನ ತೋರಿಸಿದರು.

6. ಯೆಹೋವನ ಜನರ ಬಗ್ಗೆ ಇಲ್ಲಸಲ್ಲದ ಕಥೆಗಳನ್ನು ಕೇಳಿಸಿಕೊಂಡಾಗ ನಮಗೆ ಯಾಕೆ ಆಘಾತ ಆಗಬಾರದು?

6 ಯೆಹೋವನ ಜನರ ಬಗ್ಗೆ ತಪ್ಪಾದ ವರದಿಗಳನ್ನು ನಾವು ಕೇಳಿಸಿಕೊಂಡಾಗ ಜಾಗ್ರತೆ ವಹಿಸಬೇಕು. ಯಾಕೆಂದರೆ ಸೈತಾನನನ್ನು “ನಮ್ಮ ಸಹೋದರರ . . . ಆಪಾದಕನು” ಎಂದು ಕರೆಯಲಾಗುತ್ತದೆ ಎನ್ನುವುದನ್ನು ನೆನಪಿಡಿ. (ಪ್ರಕ. 12:10) ನಮ್ಮನ್ನು ವಿರೋಧಿಸುವವರು ನಮ್ಮ ವಿರುದ್ಧ ‘ಪ್ರತಿಯೊಂದು ರೀತಿಯ ಕೆಟ್ಟ ವಿಷಯವನ್ನು ಸುಳ್ಳಾಗಿ ಹೇಳುವರು’ ಎಂದು ಯೇಸು ಎಚ್ಚರಿಸಿದ್ದಾನೆ. (ಮತ್ತಾ. 5:11) ಈ ಎಚ್ಚರಿಕೆಯನ್ನು ನಾವು ಗಂಭೀರವಾಗಿ ತಗೊಂಡರೆ ಯೆಹೋವನ ಜನರ ಬಗ್ಗೆ ಇಲ್ಲಸಲ್ಲದ ಕಥೆಗಳನ್ನು ಕೇಳಿಸಿಕೊಂಡಾಗ ನಮಗೆ ಆಘಾತ ಆಗುವುದಿಲ್ಲ.

7. ನಾವು ಇ-ಮೇಲ್‌ ಅಥವಾ ಮೆಸೆಜ್‌ ಕಳುಹಿಸುವ ಮುಂಚೆ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

7 ನಿಮ್ಮ ಸ್ನೇಹಿತರಿಗೆ ಇ-ಮೇಲ್‌ಗಳನ್ನು, ಮೆಸೆಜ್‌ಗಳನ್ನು ಕಳುಹಿಸುವುದಕ್ಕೆ ನಿಮಗೆ ಇಷ್ಟನಾ? ನ್ಯೂಸ್‌ನಲ್ಲಿ ಯಾವುದಾದರೂ ಆಸಕ್ತಿಕರ ಸುದ್ದಿ ಬಂದರೆ ಅಥವಾ ಯಾವತ್ತಿಗೂ ಕೇಳಿರದಂಥ ಅನುಭವವನ್ನು ಕೇಳಿಸಿಕೊಂಡರೆ ಅದನ್ನು ಒಬ್ಬ ವರದಿಗಾರನಂತೆ ಬೇರೆಯವರಿಗೆ ತಕ್ಷಣ ತಿಳಿಸಲು ನಿಮಗೆ ಮನಸ್ಸಾಗುತ್ತದಾ? ಒಂದು ಇ-ಮೇಲ್‌ ಅಥವಾ ಮೆಸೆಜ್‌ ಕಳುಹಿಸುವ ಮುಂಚೆ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಈ ಸುದ್ದಿ ಸತ್ಯನಾ? ಇದು ನಿಜ ಅಂತ ಹೇಳುವುದಕ್ಕೆ ನನ್ನ ಹತ್ತಿರ ಸರಿಯಾದ ಆಧಾರ ಇದೆಯಾ?’ ನಿಮಗೆ ಖಚಿತವಾಗಿ ಗೊತ್ತಿಲ್ಲದಿದ್ದರೆ ನೀವು ಸುಳ್ಳನ್ನು ಹಬ್ಬಿಸುತ್ತಿದ್ದೀರಿ ಎಂದಾಗುತ್ತದೆ. ಹಾಗಾಗಿ ಸರಿಯಾದ ಆಧಾರ ಇಲ್ಲದಿರುವ ಯಾವುದೇ ವಿಷಯವನ್ನು ದಯವಿಟ್ಟು ಕಳುಹಿಸಬೇಡಿ. ಅದನ್ನು ಡಿಲೀಟ್‌ ಮಾಡಿ!

8. (ಎ) ಕೆಲವು ದೇಶಗಳಲ್ಲಿ ವಿರೋಧಿಗಳು ಏನು ಮಾಡಿದ್ದಾರೆ? (ಬಿ) ನಮಗೇ ಗೊತ್ತಿಲ್ಲದೆ ನಾವು ಹೇಗೆ ವಿರೋಧಿಗಳಿಗೆ ಸಹಾಯ ಮಾಡಿಬಿಡಬಹುದು?

8 ನಿಮಗೆ ಬಂದ ಇ-ಮೇಲ್‌ಗಳನ್ನು ಅಥವಾ ಮೆಸೆಜ್‌ಗಳನ್ನು ಹಿಂದೆ ಮುಂದೆ ಯೋಚಿಸದೆ ಬೇರೆಯವರಿಗೆ ಕಳುಹಿಸುವುದು ಯಾಕೆ ಅಪಾಯ ಅನ್ನುವುದಕ್ಕೆ ಇನ್ನೊಂದು ಕಾರಣ ಇದೆ. ಕೆಲವು ದೇಶಗಳಲ್ಲಿ ನಮ್ಮ ಕೆಲಸಕ್ಕೆ ನಿರ್ಬಂಧ ಹಾಕಲಾಗಿದೆ ಅಥವಾ ನಿಷೇಧವನ್ನೂ ಮಾಡಲಾಗಿದೆ. ಇಂಥ ದೇಶಗಳಲ್ಲಿ ನಮ್ಮನ್ನು ವಿರೋಧಿಸುವವರು ಉದ್ದೇಶಪೂರ್ವಕವಾಗಿ ನಮ್ಮನ್ನು ಹೆದರಿಸುವಂಥ ಅಥವಾ ಒಬ್ಬರ ಮೇಲೊಬ್ಬರಿಗೆ ಅನುಮಾನ ಬರುವಂಥ ಕಟ್ಟುಕಥೆಗಳನ್ನು ಹಬ್ಬಿಸಬಹುದು. ಹಿಂದೆ ಇದ್ದ ಸೋವಿಯತ್‌ ಒಕ್ಕೂಟದಲ್ಲಿ ಏನಾಯಿತೆಂದು ನೋಡಿ. ಅಲ್ಲಿನ ಗುಪ್ತದಳದಲ್ಲಿದ್ದವರು (ಕೆ.ಜಿ.ಬಿ.) ಯೆಹೋವನ ಜನರಿಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲವು ಸಹೋದರರು ಮೋಸ ಮಾಡಿದ್ದಾರೆ ಎನ್ನುವ ವದಂತಿಯನ್ನು ಹಬ್ಬಿಸಿದರು. * ದುಃಖಕರವಾಗಿ ಅನೇಕ ಸಹೋದರರು ಈ ವದಂತಿಯನ್ನು ನಂಬಿ ಯೆಹೋವನ ಸಂಘಟನೆಯನ್ನು ಬಿಟ್ಟುಹೋದರು. ಅವರಲ್ಲಿ ಅನೇಕರು ನಂತರ ಪುನಃ ಬಂದರು, ಆದರೆ ಕೆಲವರು ವಾಪಸ್‌ ಬರಲೇ ಇಲ್ಲ. ಈ ವದಂತಿಯನ್ನು ನಂಬಿ ತಮ್ಮ ನಂಬಿಕೆಯನ್ನು ಕಳಕೊಂಡರು. (1 ತಿಮೊ. 1:19) ನಾವು ಇಂಥ ಅಪಾಯದಿಂದ ಹೇಗೆ ದೂರ ಇರಬಹುದು? ತಪ್ಪಾದ ಅಥವಾ ಖಚಿತವಾಗಿ ಗೊತ್ತಿಲ್ಲದ ಕಥೆಗಳನ್ನು ಹಬ್ಬಿಸಲೇಬಾರದು. ನಾವು ಕೇಳಿಸಿಕೊಳ್ಳುವ ವಿಷಯಗಳನ್ನೆಲ್ಲಾ ನಂಬಬಾರದು. ಬದಲಿಗೆ ಅದಕ್ಕೆ ಆಧಾರ ಹುಡುಕಬೇಕು.

ಪೂರ್ತಿ ಮಾಹಿತಿ ಇರಲ್ಲ

9. ನಮಗೆ ಸರಿಯಾದ ಮಾಹಿತಿ ಸಿಗದಿರಲು ಇನ್ನೊಂದು ಕಾರಣ ಯಾವುದು?

9 ಕೆಲವೊಮ್ಮೆ ನಮ್ಮ ಕಿವಿಗೆ ಬೀಳುವ ಸುದ್ದಿಗಳಲ್ಲಿ ಪೂರ್ತಿ ಸತ್ಯ ಇರಲ್ಲ. ಇನ್ನೂ ಕೆಲವು ಸುದ್ದಿಗಳಿಗೆ ಪೂರ್ತಿ ಆಧಾರ ಇರಲ್ಲ. ಇದರಿಂದಾಗಿ ಸರಿಯಾದ ತೀರ್ಮಾನಕ್ಕೆ ಬರಲು ಕಷ್ಟವಾಗುತ್ತದೆ. ಒಂದು ಸುದ್ದಿಯಲ್ಲಿ ಸ್ವಲ್ಪವೇ ಸತ್ಯಾಂಶವಿದ್ದರೆ ಅದನ್ನು ನಂಬಬಾರದು! ಇಂಥ ಸುದ್ದಿಗಳಿಂದ ನಾವು ಮೋಸಹೋಗದಿರಲು ಏನು ಮಾಡಬೇಕು?—ಎಫೆ. 4:14.

10. (ಎ) ಕೆಲವು ಇಸ್ರಾಯೇಲ್ಯರು ತಮ್ಮ ಸಹೋದರರ ವಿರುದ್ಧ ಯುದ್ಧ ಮಾಡಲು ಯಾಕೆ ಸಿದ್ಧರಾದರು? (ಬಿ) ಆದರೆ ಅವರು ಯಾಕೆ ಯುದ್ಧ ಮಾಡಲಿಲ್ಲ?

10 ಯೆಹೋಶುವನ ಸಮಯದಲ್ಲಿ ಯೊರ್ದನ್‌ ಹೊಳೆಯ ಪಶ್ಚಿಮ ದಿಕ್ಕಿನಲ್ಲಿ ವಾಸಿಸುತ್ತಿದ್ದ ಇಸ್ರಾಯೇಲ್ಯರು ಏನು ಮಾಡಿದರೆಂದು ನೋಡಿ. (ಯೆಹೋ. 22:9-34) ಯೊರ್ದನ್‌ ಹೊಳೆಯ ಪೂರ್ವದಲ್ಲಿದ್ದ ಇಸ್ರಾಯೇಲ್ಯರು ಹೊಳೆಯ ಹತ್ತಿರ ಮಹಾವೇದಿಯನ್ನು ಕಟ್ಟಿದ್ದಾರೆ ಎನ್ನುವ ಸುದ್ದಿಯನ್ನು ಕೇಳಿಸಿಕೊಂಡರು. ಈ ಸುದ್ದಿ ಸರಿಯಾಗಿತ್ತು. ಇದನ್ನು ಕೇಳಿಸಿಕೊಂಡ ಅವರು ತಮ್ಮ ಸಹೋದರರು ಯೆಹೋವನ ವಿರುದ್ಧ ದಂಗೆ ಎದ್ದಿದ್ದಾರೆ ಎಂದು ನೆನಸಿ ಅವರ ಮೇಲೆ ಯುದ್ಧ ಮಾಡಲು ಒಟ್ಟಿಗೆ ಸೇರಿದರು. (ಯೆಹೋಶುವ 22:9-12 ಓದಿ.) ಆದರೆ ಯುದ್ಧ ಮಾಡುವ ಮುಂಚೆ ಸತ್ಯ ಏನೆಂದು ತಿಳಿದುಕೊಳ್ಳಲು ಕೆಲವು ಪುರುಷರನ್ನು ಅಲ್ಲಿಗೆ ಕಳುಹಿಸಿದರು. ಅಲ್ಲಿಗೆ ಹೋದಾಗ ಏನು ಗೊತ್ತಾಯಿತು? ಪೂರ್ವ ದಿಕ್ಕಿನಲ್ಲಿದ್ದ ಇಸ್ರಾಯೇಲ್ಯರು ಸುಳ್ಳುದೇವರುಗಳಿಗೆ ಯಜ್ಞಗಳನ್ನು ಅರ್ಪಿಸಲು ಆ ವೇದಿಯನ್ನು ಕಟ್ಟಿರಲಿಲ್ಲ. ಬದಲಿಗೆ ತಾವು ಯೆಹೋವನನ್ನು ಆರಾಧಿಸುತ್ತಿದ್ದೆವು ಎಂದು ಮುಂದೆ ಕೂಡ ಎಲ್ಲರಿಗೂ ಗೊತ್ತಾಗಬೇಕೆಂದು ಒಂದು ಸ್ಮಾರಕವಾಗಿ ಅದನ್ನು ಕಟ್ಟಿದ್ದರು. ತಮ್ಮ ಸಹೋದರರ ವಿರುದ್ಧ ಯುದ್ಧ ಮಾಡದೇ ಸತ್ಯಾಂಶವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದಕ್ಕೆ ಆ ಇಸ್ರಾಯೇಲ್ಯರಿಗೆ ಎಷ್ಟು ಸಂತೋಷವಾಗಿರಬಹುದು!

11. (ಎ) ಮೆಫೀಬೋಶೆತನಿಗೆ ಯಾವ ಅನ್ಯಾಯವಾಯಿತು? (ಬಿ) ದಾವೀದನು ಮೆಫೀಬೋಶೆತನ ಜೊತೆ ಹೇಗೆ ನ್ಯಾಯವಾಗಿ ನಡಕೊಳ್ಳಬಹುದಿತ್ತು?

11 ಜನರು ನಮ್ಮ ಬಗ್ಗೆ ಅರ್ಧಂಬರ್ಧ ಸತ್ಯ ತಿಳಿದು ಅದಕ್ಕೆ ಸ್ವಲ್ಪ ಕಥೆ ಕಟ್ಟಿ ಹಬ್ಬಿಸುವ ಸನ್ನಿವೇಶವೂ ಬರಬಹುದು. ಇದರಿಂದ ನಮಗೆ ತುಂಬ ಹಾನಿ ಆಗುತ್ತದೆ. ಮೆಫೀಬೋಶೆತನ ಉದಾಹರಣೆ ನೋಡಿ. ರಾಜ ದಾವೀದನು ಮೆಫೀಬೋಶೆತನಿಗೆ ಅವನ ಅಜ್ಜನಾದ ಸೌಲನಿಗೆ ಸೇರಿದ್ದ ಭೂಮಿಯನ್ನೆಲ್ಲ ಉದಾರವಾಗಿ ಕೊಟ್ಟನು. (2 ಸಮು. 9:6, 7) ಆದರೆ ನಂತರ ಚೀಬನು ಮೆಫೀಬೋಶೆತನ ಬಗ್ಗೆ ದಾವೀದನ ಹತ್ತಿರ ಸುಳ್ಳು ಹೇಳಿದನು. ಅದು ನಿಜನಾ ಎಂದು ದಾವೀದನು ಪರೀಕ್ಷಿಸಲಿಲ್ಲ. ಮೆಫೀಬೋಶೆತನಿಗೆ ಸೇರಿದ ಆಸ್ತಿಯನ್ನೆಲ್ಲಾ ಕಿತ್ತುಕೊಂಡುಬಿಟ್ಟನು. (2 ಸಮು. 16:1-4) ನಂತರ ಅವನು ಮೆಫೀಬೋಶೆತನ ಹತ್ತಿರ ಮಾತಾಡಿದಾಗ ತನ್ನ ತಪ್ಪಿನ ಅರಿವಾಯಿತು. ಆಗ ಅವನಿಂದ ತಗೊಂಡಿದ್ದ ಆಸ್ತಿಯಲ್ಲಿ ಸ್ವಲ್ಪವನ್ನು ಮಾತ್ರ ಹಿಂದೆ ಕೊಟ್ಟನು. (2 ಸಮು. 19:24-29) ಪೂರ್ತಿ ವಿಷಯ ತಿಳಿದುಕೊಳ್ಳದೆ ತಕ್ಷಣ ಪ್ರತಿಕ್ರಿಯಿಸುವ ಬದಲು ಸತ್ಯ ಏನೆಂದು ತಿಳಿದುಕೊಳ್ಳಲು ದಾವೀದನು ಪ್ರಯತ್ನಿಸಬೇಕಿತ್ತು. ಆಗ ಮೆಫೀಬೋಶೆತನು ಈ ಅನ್ಯಾಯವನ್ನು ಅನುಭವಿಸಬೇಕಾಗಿ ಬರುತ್ತಿರಲಿಲ್ಲ.

12, 13. (ಎ) ತನ್ನ ಬಗ್ಗೆ ಜನರು ಇಲ್ಲಸಲ್ಲದ ಸುದ್ದಿಯನ್ನು ಹಬ್ಬಿಸಿದಾಗ ಯೇಸು ಏನು ಮಾಡಿದನು? (ಬಿ) ನಮ್ಮ ಬಗ್ಗೆ ಯಾರಾದರೂ ಸುಳ್ಳು ಸುದ್ದಿ ಹಬ್ಬಿಸಿದರೆ ನಾವೇನು ಮಾಡಬೇಕು?

12 ನಿಮ್ಮ ಬಗ್ಗೆ ಯಾರಾದರೂ ಇಲ್ಲಸಲ್ಲದ ಸುದ್ದಿಯನ್ನು ಹಬ್ಬಿಸುತ್ತಿದ್ದರೆ ನೀವೇನು ಮಾಡಬಹುದು? ಇಂಥ ಸವಾಲು ಯೇಸು ಮತ್ತು ಸ್ನಾನಿಕನಾದ ಯೋಹಾನನಿಗೆ ಬಂತು. (ಮತ್ತಾಯ 11:18, 19 ಓದಿ.) ಆಗ ಯೇಸು ಏನು ಮಾಡಿದನು? ಆತನು ತನ್ನ ಸಮಯ, ಶಕ್ತಿಯನ್ನೆಲ್ಲ ಉಪಯೋಗಿಸಿ ತನ್ನ ಬಗ್ಗೆ ಹೇಳುತ್ತಿರುವುದೆಲ್ಲ ಸುಳ್ಳು ಎಂದು ಎಲ್ಲರ ಹತ್ತಿರ ಹೋಗಿ ಹೇಳಲಿಲ್ಲ. ಬದಲಿಗೆ ತನ್ನ ಬಗ್ಗೆ ಪೂರ್ತಿ ನಿಜಾಂಶ ತಿಳುಕೊಳ್ಳಿ ಎಂದು ಜನರನ್ನು ಪ್ರೋತ್ಸಾಹಿಸಿದನು. ತಾನು ಮಾಡುತ್ತಿದ್ದ ಮತ್ತು ಕಲಿಸುತ್ತಿದ್ದ ವಿಷಯಗಳ ಕಡೆಗೆ ಜನರು ಗಮನ ಕೊಡಬೇಕೆಂದು ಬಯಸಿದನು. “ವಿವೇಕವು ತನ್ನ ಕ್ರಿಯೆಗಳ ಮೂಲಕ . . . ಸಾಬೀತಾಗುತ್ತದೆ” ಎಂದು ಯೇಸು ಹೇಳಿದನು.

13 ನಾವು ಯೇಸುವಿನಿಂದ ಅಮೂಲ್ಯ ಪಾಠವನ್ನು ಕಲಿಯಬಹುದು. ಕೆಲವೊಮ್ಮೆ ನಮ್ಮ ಬಗ್ಗೆ ಜನರು ಅನ್ಯಾಯವಾಗಿ ಅಥವಾ ನಕಾರಾತ್ಮಕವಾಗಿ ಮಾತಾಡಬಹುದು. ಇದರಿಂದಾಗಿ ನಮ್ಮ ಹೆಸರಿಗೆ ಕಳಂಕ ಬರಬಹುದೆಂಬ ಚಿಂತೆ ಆಗಬಹುದು. ಆದರೆ ನಾವು ಯಾವ ರೀತಿಯ ವ್ಯಕ್ತಿಗಳು ಎನ್ನುವುದನ್ನು ನಾವು ಜೀವಿಸುವ ವಿಧದಿಂದ ರುಜುಪಡಿಸಬೇಕು. ನಾವು ಯೇಸುವಿನ ಉದಾಹರಣೆಯಿಂದ ಕಲಿತಂತೆ, ಜನರು ನಮ್ಮ ಬಗ್ಗೆ ಅದೇನೇ ಹೇಳಲಿ ನಮ್ಮ ಒಳ್ಳೇ ನಡತೆಯಿಂದ ಅವೆಲ್ಲ ಸುಳ್ಳು ಎಂದು ತೋರಿಸಿಕೊಡಬೇಕು.

ನಿಮ್ಮ ಸ್ವಂತ ತಿಳುವಳಿಕೆಯ ಮೇಲೆ ಹೊಂದಿಕೊಂಡಿದ್ದೀರಾ?

14, 15. ನಮ್ಮ ಮೇಲೆ ನಾವೇ ಹೊಂದಿಕೊಳ್ಳುವುದು ಯಾಕೆ ಅಪಾಯಕಾರಿ?

14 ಸತ್ಯ ಏನೆಂದು ತಿಳಿದುಕೊಳ್ಳಲು ತುಂಬ ಕಷ್ಟ ಆಗುತ್ತೆ ಎಂದು ನೋಡಿದೆವು. ನಮ್ಮ ಸ್ವಂತ ಅಪರಿಪೂರ್ಣತೆಯೂ ನಮಗೆ ಒಂದು ಸವಾಲಾಗಿದೆ. ನಾವು ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರಬಹುದು ಮತ್ತು ಅನೇಕ ವಿಧಗಳಲ್ಲಿ ವಿವೇಕಿಗಳಾಗಿ ನಡಕೊಳ್ಳುತ್ತಿರಬಹುದು. ನಾವು ಸರಿಯಾದ ರೀತಿಯಲ್ಲಿ ಯೋಚಿಸುತ್ತೇವೆಂದು ಅನೇಕರು ನಮ್ಮನ್ನು ಗೌರವಿಸಬಹುದು. ಆದರೆ ಇದರಿಂದ ನಮಗೆ ಸಮಸ್ಯೆ ಬರುತ್ತಾ?

15 ಬರುತ್ತೆ. ನಾವು ನಮ್ಮ ಸ್ವಂತ ತಿಳುವಳಿಕೆಯ ಮೇಲೆ ಹೊಂದಿಕೊಳ್ಳಲು ಆರಂಭಿಸುತ್ತೇವೆ. ನಮ್ಮ ಯೋಚನೆಯನ್ನು ನಮ್ಮ ಭಾವನೆಗಳು ಮತ್ತು ನಮ್ಮ ಅಭಿಪ್ರಾಯಗಳು ನಿಯಂತ್ರಿಸುವುದಕ್ಕೆ ಬಿಟ್ಟುಕೊಡುತ್ತೇವೆ. ಒಂದು ಸನ್ನಿವೇಶದ ಬಗ್ಗೆ ಪೂರ್ತಿ ಸತ್ಯಾಂಶ ಸಿಗದೇ ಹೋದರೂ ಅದರ ಬಗ್ಗೆ ನಮಗೆ ಪೂರ್ತಿ ಗೊತ್ತು ಎಂದು ಯೋಚಿಸಲು ಶುರುಮಾಡುತ್ತೇವೆ. ಇದು ತುಂಬ ಅಪಾಯಕಾರಿ! ನಾವು ನಮ್ಮ ಸ್ವಂತ ತಿಳುವಳಿಕೆಯ ಮೇಲೆ ಹೊಂದಿಕೊಂಡಿರಬಾರದು ಎಂದು ಬೈಬಲ್‌ ಸ್ಪಷ್ಟವಾಗಿ ಎಚ್ಚರಿಸಿದೆ.—ಜ್ಞಾನೋ. 3:5, 6; 28:26.

16. (ಎ) ಈ ಕಾಲ್ಪನಿಕ ದೃಶ್ಯದಲ್ಲಿ ಹೋಟೆಲ್‌ನಲ್ಲಿ ಏನಾಯಿತು? (ಬಿ) ಥಾಮಸ್‌ ಏನು ಯೋಚಿಸಿದರು?

16 ಇದು ಹೇಗೆ ಆಗಬಹುದು ಎನ್ನುವುದಕ್ಕೆ ಇಲ್ಲೊಂದು ಕಾಲ್ಪನಿಕ ದೃಶ್ಯ ಇದೆ. ಒಂದು ಸಂಜೆ ಅನುಭವಸ್ಥ ಹಿರಿಯರಾಗಿರುವ ಥಾಮಸ್‌ ಒಂದು ಹೋಟೆಲ್‌ಗೆ ಹೋಗುತ್ತಾರೆ. ಅಲ್ಲಿ ಅವರು ಇನ್ನೊಬ್ಬ ಹಿರಿಯರಾಗಿರುವ ಜಾನ್‌ ಒಬ್ಬ ಸ್ತ್ರೀ ಜೊತೆ ಕೂತಿರುವುದನ್ನು ನೋಡುತ್ತಾರೆ. ಆ ಸ್ತ್ರೀ ಅವರ ಪತ್ನಿಯಲ್ಲ. ಅವರಿಬ್ಬರೂ ನಗುನಗುತ್ತಾ ಮಾತಾಡುತ್ತಾ ಇರುತ್ತಾರೆ. ಅಲ್ಲಿಂದ ಹೊರಡುವಾಗ ಇಬ್ಬರೂ ಅಪ್ಪಿಕೊಳ್ಳುತ್ತಾರೆ. ಇದನ್ನು ನೋಡಿ ಥಾಮಸ್‌ಗೆ ತುಂಬ ಚಿಂತೆ ಆಗುತ್ತೆ. ‘ಜಾನ್‌ ಏನಾದರೂ ಅವರ ಹೆಂಡತಿನಾ ಬಿಟ್ಟುಬಿಡುತ್ತಾರಾ? ಇನ್ನೊಂದು ಮದುವೆ ಆಗುತ್ತಾರಾ? ಅವರ ಮಕ್ಕಳ ಕಥೆ ಏನು?’ ಎಂದೆಲ್ಲ ಯೋಚಿಸುತ್ತಾರೆ. ಈ ರೀತಿ ಬೇರೆ ಸಂಸಾರಗಳು ಒಡೆದುಹೋಗಿರುವುದನ್ನು ಈ ಮುಂಚೆ ಥಾಮಸ್‌ ನೋಡಿದ್ದಾರೆ. ನೀವು ಥಾಮಸ್‌ ಜಾಗದಲ್ಲಿ ಇದ್ದಿದ್ದರೆ ಹೇಗೆ ಯೋಚಿಸುತ್ತಿದ್ದಿರಿ?

17. (ಎ) ಥಾಮಸ್‌ಗೆ ನಂತರ ಏನು ಗೊತ್ತಾಯಿತು? (ಬಿ) ಇದರಿಂದ ನಾವೇನು ಕಲಿಯಬಹುದು?

17 ಜಾನ್‌ ತಮ್ಮ ಪತ್ನಿಗೆ ದ್ರೋಹ ಮಾಡುತ್ತಿದ್ದಾರೆಂದು ಥಾಮಸ್‌ ಅಂದುಕೊಂಡರು. ಆದರೆ ಅವರು ಆ ರೀತಿ ಯೋಚಿಸಲು ಸರಿಯಾದ ಆಧಾರ ಇರಲಿಲ್ಲ. ಥಾಮಸ್‌ ಅದೇ ಸಂಜೆ ಜಾನ್‌ಗೆ ಫೋನ್‌ ಮಾಡಿದರು. ಆಗ ಜಾನ್‌ ಜೊತೆ ಇದ್ದ ಸ್ತ್ರೀ ಅವರ ತಂಗಿ ಎಂದು ಗೊತ್ತಾಯಿತು. ಅವಳು ತುಂಬ ದೂರದಿಂದ ಬಂದಿದ್ದಳು. ತುಂಬ ವರ್ಷಗಳಿಂದ ಅವರಿಬ್ಬರೂ ಭೇಟಿಯಾಗಿರಲಿಲ್ಲ. ಅವಳಿಗೆ ಹೆಚ್ಚು ಸಮಯ ಇಲ್ಲದ ಕಾರಣ ಜಾನ್‌ ಜೊತೆ ಹೋಟೆಲ್‌ನಲ್ಲಿ ಊಟ ಮಾಡುವುದಕ್ಕೆ ಮಾತ್ರ ಸಾಧ್ಯವಾಯಿತು. ಆದರೆ ಜಾನ್‌ರ ಪತ್ನಿಗೆ ಬರಲು ಆಗಲಿಲ್ಲ. ತಾನು ಯೋಚಿಸಿದ್ದನ್ನು ಯಾರ ಹತ್ತಿರನೂ ಹೇಳದೇ ಇದ್ದದ್ದು ಒಳ್ಳೇದಾಯಿತು ಎಂದು ಥಾಮಸ್‌ಗೆ ಅನಿಸಿತು. ಇದರಿಂದ ನಾವೇನು ಕಲಿಯಬಹುದು? ನಾವೆಷ್ಟೇ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರಲಿ ಪೂರ್ತಿ ಸತ್ಯ ತಿಳಿದುಕೊಳ್ಳುವ ವರೆಗೂ ಒಂದು ನಿರ್ಧಾರಕ್ಕೆ ಬರಬಾರದು.

18. ನಮ್ಮ ಸಹೋದರನ ಬಗ್ಗೆ ತಪ್ಪಾದ ತೀರ್ಮಾನಕ್ಕೆ ಬರಲು ಯಾವುದು ಕಾರಣವಾಗುತ್ತದೆ?

18 ನಮಗೆ ಒಬ್ಬ ಸಹೋದರನ ಮೇಲೆ ಮನಸ್ತಾಪ ಇದ್ದಾಗಲೂ ಅವರ ಬಗ್ಗೆ ಏನಾದರೂ ವಿಷಯ ಕಿವಿಗೆ ಬಿದ್ದರೆ ಅದು ಸರಿನಾ ತಪ್ಪಾ ಎಂದು ಯೋಚಿಸಲು ಕಷ್ಟವಾಗುತ್ತದೆ. ನಮ್ಮಿಬ್ಬರ ಮಧ್ಯೆ ಇರುವ ಮನಸ್ತಾಪದ ಬಗ್ಗೆ ನಾವು ಯೋಚಿಸುತ್ತಾ ಇರುವುದಾದರೆ ನಮ್ಮ ಸಹೋದರನ ಮೇಲೆ ಅನುಮಾನಪಡಲು ಆರಂಭಿಸುತ್ತೇವೆ. ಅವರ ಬಗ್ಗೆ ನಾವು ಏನಾದರೂ ತಪ್ಪಾದ ವಿಷಯ ಕೇಳಿಸಿಕೊಂಡರೆ ಅದಕ್ಕೆ ಆಧಾರ ಇಲ್ಲದಿದ್ದರೂ ಕಣ್ಣುಮುಚ್ಚಿ ನಂಬಿಬಿಡುತ್ತೇವೆ. ಇದರಿಂದ ನಮಗೇನು ಪಾಠ? ನಮ್ಮ ಸಹೋದರರ ಬಗ್ಗೆ ನಕಾರಾತ್ಮಕವಾಗಿ ಯಾವಾಗಲೂ ಯೋಚಿಸುತ್ತಾ ಇರುವುದಾದರೆ ಯಾವ ಆಧಾರ ಇಲ್ಲದಿದ್ದರೂ ತಪ್ಪಾದ ತೀರ್ಮಾನಕ್ಕೆ ಬಂದುಬಿಡುತ್ತೇವೆ. (1 ತಿಮೊ. 6:4, 5) ಹಾಗಾಗಿ ನಮ್ಮ ಹೃದಯದಲ್ಲಿ ಅಸೂಯೆ ಮತ್ತು ಹೊಟ್ಟೆಕಿಚ್ಚಿನಂಥ ನಕಾರಾತ್ಮಕ ಭಾವನೆಗಳು ಮನೆಮಾಡಲು ಬಿಡಬಾರದು. ನಮ್ಮ ಸಹೋದರರನ್ನು ಪ್ರೀತಿಸಬೇಕು ಮತ್ತು ಅವರನ್ನು ಮನಸಾರೆ ಕ್ಷಮಿಸಬೇಕು ಎಂದು ಯೆಹೋವನು ಬಯಸುತ್ತಾನೆ ಅನ್ನುವುದನ್ನು ಮರೆಯಬಾರದು.—ಕೊಲೊಸ್ಸೆ 3:12-14 ಓದಿ.

ಬೈಬಲ್‌ ತತ್ವಗಳು ನಮ್ಮನ್ನು ಕಾಪಾಡುತ್ತವೆ

19, 20. (ಎ) ಒಂದು ಮಾಹಿತಿ ಸತ್ಯನಾ ಸುಳ್ಳಾ ಎಂದು ಪರೀಕ್ಷಿಸಲು ಯಾವ ಬೈಬಲ್‌ ತತ್ವಗಳು ಸಹಾಯ ಮಾಡುತ್ತವೆ? (ಬಿ) ಮುಂದಿನ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

19 ಇಂದು ನಿಜಾಂಶಗಳನ್ನು ಕಂಡುಕೊಳ್ಳುವುದು ಮತ್ತು ಅದು ಸತ್ಯನಾ ಸುಳ್ಳಾ ಎಂದು ತಿಳುಕೊಳ್ಳುವುದು ತುಂಬನೇ ಕಷ್ಟ. ಯಾಕೆ? ಯಾಕೆಂದರೆ ನಮಗೆ ಹೆಚ್ಚಾಗಿ ಪೂರ್ತಿ ಮಾಹಿತಿ ಸಿಗುವುದಿಲ್ಲ ಅಥವಾ ಅದರಲ್ಲಿ ಅರ್ಧ ಮಾತ್ರ ಸತ್ಯವಾಗಿರುತ್ತದೆ. ಜೊತೆಗೆ ನಾವು ಅಪರಿಪೂರ್ಣರು. ಹಾಗಾದರೆ ನಾವು ಈ ಸವಾಲನ್ನು ಎದುರಿಸಲು ನಮಗೆ ಯಾವುದು ಸಹಾಯ ಮಾಡುತ್ತದೆ? ದೇವರ ವಾಕ್ಯದಲ್ಲಿರುವ ತತ್ವಗಳು ಸಹಾಯ ಮಾಡುತ್ತವೆ! ಉದಾಹರಣೆಗೆ, ಸತ್ಯಾಂಶವನ್ನು ತಿಳುಕೊಳ್ಳದೆ ಉತ್ತರ ಕೊಡುವುದು ಮೂರ್ಖತನವಾಗಿದೆ ಎಂದು ಒಂದು ತತ್ವ ಹೇಳುತ್ತದೆ. (ಜ್ಞಾನೋ. 18:13) ಒಂದು ಸುದ್ದಿ ನಮ್ಮ ಕಿವಿಗೆ ಬಿದ್ದರೆ ಹಿಂದೆ ಮುಂದೆ ಯೋಚಿಸದೆ ಅದನ್ನು ನಂಬಿಬಿಡಬಾರದು ಎಂದು ಇನ್ನೊಂದು ತತ್ವ ಹೇಳುತ್ತದೆ. (ಜ್ಞಾನೋ. 14:15) ನಾವು ತುಂಬಾ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರುವುದಾದರೂ ನಮ್ಮ ಸ್ವಂತ ತಿಳುವಳಿಕೆ ಮೇಲೆ ಹೊಂದಿಕೊಳ್ಳಬಾರದು ಎಂದು ಮತ್ತೊಂದು ತತ್ವ ಹೇಳುತ್ತದೆ. (ಜ್ಞಾನೋ. 3:5, 6) ನಾವು ಮೊದಲು ನಿಜಾಂಶಗಳನ್ನು ತಿಳಿದುಕೊಂಡರೆ ಸರಿಯಾದ ತೀರ್ಮಾನಗಳನ್ನು ಮಾಡುತ್ತೇವೆ. ಇದನ್ನೇ ಮಾಡುವಂತೆ ಬೈಬಲ್‌ ತತ್ವಗಳು ನಮ್ಮನ್ನು ಪ್ರೇರಿಸುತ್ತವೆ.

20 ಆದರೆ ನಮಗೆ ಇನ್ನೊಂದು ಸವಾಲು ಸಹ ಇದೆ. ಮನುಷ್ಯರಾಗಿ ನಮ್ಮ ಪ್ರವೃತ್ತಿ ಏನೆಂದರೆ, ನಮ್ಮ ಕಣ್ಣಿಗೆ ಕಾಣಿಸುವುದೇ ಸರಿ ಎಂದು ತೀರ್ಪು ಮಾಡಿಬಿಡುತ್ತೇವೆ. ಇಂಥ ತಪ್ಪನ್ನು ನಾವು ಯಾವಾಗೆಲ್ಲ ಮಾಡಿಬಿಡುತ್ತೇವೆ ಮತ್ತು ಅದರಿಂದ ನಾವು ಹೇಗೆ ದೂರ ಇರಬಹುದು ಎಂದು ಮುಂದಿನ ಲೇಖನದಲ್ಲಿ ಚರ್ಚಿಸೋಣ.

^ ಪ್ಯಾರ. 8 2004​ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕದ ಪುಟ 111-112​ನ್ನು ಮತ್ತು 2008​ರ ವರ್ಷಪುಸ್ತಕದ ಪುಟ 133-135​ನ್ನು ನೋಡಿ. ಈ ಪುಸ್ತಕಗಳು ಕನ್ನಡದಲ್ಲಿ ಲಭ್ಯವಿಲ್ಲ.