ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಾಳ್ಮೆ—ಒಂದು ಉದ್ದೇಶದಿಂದ ಸಹಿಸಿಕೊಳ್ಳುವುದು

ತಾಳ್ಮೆ—ಒಂದು ಉದ್ದೇಶದಿಂದ ಸಹಿಸಿಕೊಳ್ಳುವುದು

“ಕಡೇ ದಿವಸಗಳಲ್ಲಿ” ಜೀವನ ತುಂಬ ಕಷ್ಟ ಆಗಿರುವುದರಿಂದ ನಮಗೆ ಹೆಚ್ಚು ತಾಳ್ಮೆ ಬೇಕು. (2 ತಿಮೊ. 3:1-5) ನಮ್ಮ ಸುತ್ತಮುತ್ತ ಇರುವ ಹೆಚ್ಚಿನ ಜನರಿಗೆ ತಾಳ್ಮೆ ಅಂದರೆ ಏನು ಅಂತಾನೇ ಗೊತ್ತಿಲ್ಲ. ಅವರು ಸ್ವಾರ್ಥಿಗಳಾಗಿದ್ದಾರೆ, ಮಾತೆತ್ತಿದರೆ ವಾದಕ್ಕಿಳಿಯುತ್ತಾರೆ ಮತ್ತು ಸ್ವನಿಯಂತ್ರಣ ಅನ್ನೋದೇ ಇಲ್ಲ. ಆದ್ದರಿಂದ ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ನಾನೂ ಈ ಜನರ ತರ ಆಗುತ್ತಾ ಇದ್ದೇನಾ? ತಾಳ್ಮೆಯಿಂದ ಇರುವುದು ಅಂದರೆ ನಿಜವಾಗಲೂ ಏನು? ಈ ಗುಣವನ್ನು ನನ್ನ ವ್ಯಕ್ತಿತ್ವದ ಭಾಗವಾಗಿ ಮಾಡಿಕೊಳ್ಳುವುದು ಹೇಗೆ?’

ತಾಳ್ಮೆ ಅಂದರೇನು?

ಬೈಬಲಲ್ಲಿ ಹೇಳಿರುವ “ತಾಳ್ಮೆ” ಎನ್ನುವ ಪದದ ಅರ್ಥ ಏನು? ಈ ಪದದ ಅರ್ಥ ಒಂದು ಸಮಸ್ಯೆಯನ್ನು ಸುಮ್ಮನೆ ಸಹಿಸಿಕೊಂಡು ಹೋಗುವುದು ಎಂದಲ್ಲ. ಬದಲಿಗೆ ಒಂದು ಉದ್ದೇಶದಿಂದ ಸಹಿಸಿಕೊಳ್ಳುವುದು ಅಂದರೆ ಮುಂದೆ ಎಲ್ಲ ಸರಿಹೋಗುತ್ತದೆ ಎನ್ನುವ ನಿರೀಕ್ಷೆಯಿಂದ ಇರುವುದು ಎಂದಾಗಿದೆ. ತಾಳ್ಮೆ ಇರುವ ವ್ಯಕ್ತಿ ತನ್ನ ಬಗ್ಗೆ ಮಾತ್ರ ಯೋಚಿಸಲ್ಲ. ಬದಲಿಗೆ ಬೇರೆಯವರ ಭಾವನೆಗಳಿಗೂ ಬೆಲೆ ಕೊಡುತ್ತಾನೆ. ಬೇರೆಯವರು ತನಗೆ ಕಿರಿಕಿರಿ ಮಾಡಿದಾಗಲೂ, ತನ್ನ ಜೊತೆ ಅನ್ಯಾಯವಾಗಿ ನಡಕೊಂಡಾಗಲೂ ಇದನ್ನೇ ಮಾಡುತ್ತಾನೆ. ಅವರ ಜೊತೆ ತನಗಿರುವ ಸಂಬಂಧ ಮುಂದಕ್ಕೆ ಖಂಡಿತವಾಗಿಯೂ ಸರಿಯಾಗುತ್ತದೆ ಎನ್ನುವ ಆಶಾಭಾವನೆ ಇಟ್ಟುಕೊಳ್ಳುತ್ತಾನೆ. ಆದ್ದರಿಂದಲೇ “ತಾಳ್ಮೆ” [ಕನ್ನಡ ಬೈಬಲಿನಲ್ಲಿ ಕೆಲವು ಕಡೆ “ದೀರ್ಘ ಸಹನೆ” ಎಂದು ಕೊಡಲಾಗಿದೆ] ಪ್ರೀತಿಯಿಂದ * ಹುಟ್ಟುವ ಗುಣ ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂ. 13:4) ತಾಳ್ಮೆ ‘ಪವಿತ್ರಾತ್ಮದಿಂದ ಉಂಟಾಗುವ ಫಲದ’ ಅಂಶ ಕೂಡ ಆಗಿದೆ. (ಗಲಾ. 5:22, 23) ಹಾಗಾದರೆ ನಾವು ಇಂಥ ತಾಳ್ಮೆಯನ್ನು ಬೆಳೆಸಿಕೊಳ್ಳಲು ಏನು ಮಾಡಬೇಕು?

ತಾಳ್ಮೆ ಬೆಳೆಸಿಕೊಳ್ಳಲು ಏನು ಮಾಡಬೇಕು?

ತಾಳ್ಮೆ ಬೆಳೆಸಿಕೊಳ್ಳಲು ನಾವು ಪವಿತ್ರಾತ್ಮದ ಸಹಾಯಕ್ಕಾಗಿ ಬೇಡಿಕೊಳ್ಳಬೇಕು. ತನ್ನಲ್ಲಿ ನಂಬಿಕೆ ಇಡುವವರಿಗೆ ಯೆಹೋವನು ಈ ಪವಿತ್ರಾತ್ಮವನ್ನು ಕೊಟ್ಟೇ ಕೊಡುತ್ತಾನೆ. (ಲೂಕ 11:13) ಪವಿತ್ರಾತ್ಮಕ್ಕೆ ತುಂಬ ಶಕ್ತಿ ಇದೆ ನಿಜ, ಆದರೆ ಮಾಡಿದ ಪ್ರಾರ್ಥನೆಗೆ ತಕ್ಕ ಹಾಗೆ ನಡೆಯಲು ನಾವೂ ಪ್ರಯತ್ನಿಸಬೇಕು. (ಕೀರ್ತ. 86:10, 11) ಅಂದರೆ ಯಾವುದೇ ಸನ್ನಿವೇಶದಲ್ಲಿ ತಾಳ್ಮೆ ಕಳಕೊಳ್ಳದಿರಲು ನಾವು ನಮ್ಮಿಂದಾದ ಪ್ರಯತ್ನ ಮಾಡಬೇಕು. ಈ ತಾಳ್ಮೆ ನಮ್ಮ ವ್ಯಕ್ತಿತ್ವದ ಭಾಗವಾಗಲು ಬಿಡಬೇಕು. ಆದರೆ ಕೆಲವೊಮ್ಮೆ ನಾವು ತಾಳ್ಮೆ ಕಳಕೊಳ್ಳುವ ಸಾಧ್ಯತೆ ಇದೆ. ಆಗ ಏನು ಮಾಡಬೇಕು?

ಯೇಸುವಿನ ಪರಿಪೂರ್ಣ ಮಾದರಿಯ ಬಗ್ಗೆ ತಿಳುಕೊಂಡು ಅದರಂತೆ ನಡೆಯಲು ಪ್ರಯತ್ನಿಸಬೇಕು. ತಾಳ್ಮೆ ‘ನೂತನ ವ್ಯಕ್ತಿತ್ವದ’ ಭಾಗವಾಗಿದೆ ಎಂದು ಹೇಳಿದ ಮೇಲೆ ಅಪೊಸ್ತಲ ಪೌಲನು “ಕ್ರಿಸ್ತನ ಶಾಂತಿಯು ನಿಮ್ಮ ಹೃದಯಗಳಲ್ಲಿ ಆಳಲಿ” ಎಂದನು. (ಕೊಲೊ. 3:10, 12, 15) ಇದು ನಡೆಯಬೇಕಾದರೆ ನಾವು ಯೇಸುವಿನ ಮಾದರಿಯನ್ನು ಅನುಕರಿಸಬೇಕು. ದೇವರು ಸರಿಯಾದ ಸಮಯಕ್ಕೆ ವಿಷಯಗಳನ್ನು ಸರಿಮಾಡುತ್ತಾನೆ ಎಂದು ನಂಬಬೇಕು. ನಮಗೆ ಈ ಭರವಸೆ ಇದ್ದರೆ ನಮ್ಮ ಸುತ್ತ ಅದೇನೇ ಆಗುತ್ತಿರಲಿ ನಾವು ತಾಳ್ಮೆ ಕಳಕೊಳ್ಳಲ್ಲ.—ಯೋಹಾ. 14:27; 16:33.

ಹೊಸ ಲೋಕ ಬೇಗ ಬರಬೇಕೆಂದು ನಾವೆಲ್ಲರೂ ಆಸೆಪಡುತ್ತೇವೆ ನಿಜ. ಆದರೆ ಯೆಹೋವನು ನಮ್ಮ ವಿಷಯದಲ್ಲಿ ಎಷ್ಟು ತಾಳ್ಮೆ ತೋರಿಸಿದ್ದಾನೆ ಎಂದು ಯೋಚಿಸುವಾಗ ನಾವೂ ತಾಳ್ಮೆ ತೋರಿಸೋಣ ಎಂದು ಅನಿಸುತ್ತದೆ. ಬೈಬಲ್‌ ನಮಗೆ ಈ ಆಶ್ವಾಸನೆ ನೀಡುತ್ತದೆ: “ತಡಮಾಡುವ ವಿಷಯದಲ್ಲಿ ಕೆಲವರು ನೆನಸುವ ಪ್ರಕಾರ ತನ್ನ ವಾಗ್ದಾನದ ವಿಷಯದಲ್ಲಿ ಯೆಹೋವನು ತಡಮಾಡುವವನಲ್ಲ, ಬದಲಾಗಿ ಯಾವನಾದರೂ ನಾಶವಾಗುವುದನ್ನು ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪವನ್ನು ಹೊಂದುವುದನ್ನು ಬಯಸುವಾತನಾಗಿರುವುದರಿಂದ ನಿಮ್ಮ ವಿಷಯದಲ್ಲಿ ತಾಳ್ಮೆಯಿಂದಿದ್ದಾನೆ.” (2 ಪೇತ್ರ 3:9) ಇದರ ಬಗ್ಗೆ ಯೋಚಿಸುವಾಗ ನಾವು ಸಹ ಬೇರೆಯವರಿಗೆ ಹೆಚ್ಚು ತಾಳ್ಮೆ ತೋರಿಸಲು ಮನಸ್ಸಾಗುವುದಿಲ್ಲವೇ? (ರೋಮ. 2:4) ನಾವು ಯಾವ ಸನ್ನಿವೇಶಗಳಲ್ಲಿ ಹೆಚ್ಚು ತಾಳ್ಮೆ ತೋರಿಸಬೇಕಾಗುತ್ತದೆ?

ಯಾವ ಸನ್ನಿವೇಶಗಳಲ್ಲಿ?

ನಾವು ತಾಳ್ಮೆಯಿಂದ ಇರಬೇಕಾದ ಹತ್ತಾರು ಸನ್ನಿವೇಶಗಳು ಪ್ರತಿ ದಿನ ಎದುರಾಗುತ್ತವೆ. ಉದಾಹರಣೆಗೆ, ಬೇರೆಯವರು ಮಾತಾಡುತ್ತಿರುವಾಗ ನಿಮಗೇನೋ ಮುಖ್ಯವಾದ ವಿಷಯ ಹೇಳಬೇಕೆಂದು ಅನಿಸಿದರೆ ಅದನ್ನು ಹೇಳದೆ ಸುಮ್ಮನಿರಲು ತಾಳ್ಮೆ ಬೇಕಾಗುತ್ತದೆ. (ಯಾಕೋ. 1:19) ಬೇರೆಯವರು ನಮಗೆ ಕೋಪ ಬರುವ ತರ ನಡಕೊಂಡಾಗಲೂ ನಾವು ತಾಳ್ಮೆಯಿಂದ ಇರಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ತಾಳ್ಮೆ ಕಳಕೊಂಡು ಪ್ರತಿಕ್ರಿಯಿಸುವ ಬದಲು ಯೆಹೋವ ಮತ್ತು ಯೇಸು ನಮ್ಮ ಕುಂದುಕೊರತೆಗಳನ್ನು ನೋಡಿ ಹೇಗೆ ಪ್ರತಿಕ್ರಿಯಿಸಿದ್ದಾರೆ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ನಾವು ಮಾಡುವ ಎಷ್ಟೋ ಚಿಕ್ಕಪುಟ್ಟ ತಪ್ಪುಗಳನ್ನು ಅವರು ಸುಮ್ಮನೆ ಬಿಟ್ಟುಬಿಡುತ್ತಾರೆ. ನಮ್ಮಲ್ಲಿರುವ ಒಳ್ಳೇ ಗುಣಗಳಿಗೆ ಗಮನ ಕೊಡುತ್ತಾರೆ. ನಾವು ಸುಧಾರಣೆ ಮಾಡಿಕೊಳ್ಳಲು ಸಮಯ ಕೊಟ್ಟು ಕಾಯುತ್ತಾರೆ.—1 ತಿಮೊ. 1:16; 1 ಪೇತ್ರ 3:12.

ನಾವು ಹೇಳಿದ ಅಥವಾ ಮಾಡಿದ ವಿಷಯ ತಪ್ಪು ಎಂದು ಯಾರಾದರೂ ಹೇಳಿದಾಗಲೂ ನಮಗೆ ತಾಳ್ಮೆ ಬೇಕು. ಯಾರಾದರೂ ಏನಾದರೂ ಹೇಳಿದರೆ ನಮಗೆ ತಕ್ಷಣ ನೋವಾಗಬಹುದು, ಕೋಪ ಬರಬಹುದು ಅಥವಾ ನಾವು ಸಮರ್ಥಿಸಿಕೊಳ್ಳಲೂ ಪ್ರಯತ್ನಿಸಬಹುದು. ಆದರೆ ದೇವರ ವಾಕ್ಯ ನಾವು ಬೇರೆ ಒಂದು ವಿಷಯವನ್ನು ಮಾಡಬೇಕು ಎಂದು ಹೇಳುತ್ತದೆ. ಬೈಬಲ್‌ ಹೇಳುವುದು: ಗರ್ವಿಷ್ಠನಿಗಿಂತ “ತಾಳ್ಮೆಯುಳ್ಳವನು ಉತ್ತಮ. ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ.” (ಪ್ರಸಂ. 7:8, 9) ನಮ್ಮ ಮೇಲೆ ಯಾರಾದರೂ ಹಾಕಿರುವ ಆರೋಪ ಪೂರ್ತಿ ಸುಳ್ಳಾಗಿದ್ದರೂ ನಾವು ತಾಳ್ಮೆಯಿಂದ ಇರಬೇಕು ಮತ್ತು ಪ್ರತಿಕ್ರಿಯಿಸುವ ಮುಂಚೆ ಚೆನ್ನಾಗಿ ಯೋಚನೆ ಮಾಡಬೇಕು. ಯೇಸುವಿನ ಮೇಲೆ ಬೇರೆಯವರು ಸುಳ್ಳಾರೋಪ ಹಾಕಿದಾಗ ಅವನು ಇದನ್ನೇ ಮಾಡಿದನು.—ಮತ್ತಾ. 11:19.

ಹೆತ್ತವರು ಮುಖ್ಯವಾಗಿ ಯಾವಾಗ ತಾಳ್ಮೆ ತೋರಿಸಬೇಕಾಗಬಹುದು? ಅವರ ಮಕ್ಕಳಲ್ಲಿ ತಪ್ಪಾದ ಮನೋಭಾವ, ತಪ್ಪಾದ ಆಸೆ ಕಾಣಿಸಿಕೊಂಡರೆ ಅವರನ್ನು ತಿದ್ದಲು ತಾಳ್ಮೆ ಬೇಕಾಗುತ್ತದೆ. ಸ್ಕಾಂಡಿನೇವಿಯಾದ ಬೆತೆಲಿನಲ್ಲಿ ಸೇವೆ ಮಾಡುತ್ತಿರುವ ಮಾಟೀಯಾಸ್‌ ಎಂಬ ಸಹೋದರನ ಅನುಭವ ನೋಡಿ. ಅವನು ಶಾಲೆಗೆ ಹೋಗುತ್ತಿದ್ದಾಗ ಅವನ ಧಾರ್ಮಿಕ ನಂಬಿಕೆಗಳ ಬಗ್ಗೆ ಸಹಪಾಠಿಗಳು ಗೇಲಿಮಾಡುತ್ತಿದ್ದರು. ಇದರ ಬಗ್ಗೆ ಅವನ ಹೆತ್ತವರಿಗೆ ಮೊದಮೊದಲು ಗೊತ್ತಿರಲಿಲ್ಲ. ಆದರೆ ದಿನ ಹೋಗುತ್ತಾ ಇದ್ದಹಾಗೆ ಮಾಟೀಯಾಸ್‌ ದೇವರ ಬಗ್ಗೆ, ಬೈಬಲ್‌ ಬಗ್ಗೆ ಸಂಶಯಗಳನ್ನು ವ್ಯಕ್ತಪಡಿಸುತ್ತಿರುವುದು ಹೆತ್ತವರ ಗಮನಕ್ಕೆ ಬಂತು. ಆಗ ತುಂಬ ತಾಳ್ಮೆಯಿಂದ ಇರಬೇಕಾಗಿತ್ತು ಎಂದು ಮಾಟೀಯಾಸ್‌ನ ತಂದೆ ಯಿಲ್ಲಿಸ್‌ ಹೇಳುತ್ತಾರೆ. ಮಾಟೀಯಾಸ್‌ ತನ್ನ ಹೆತ್ತವರಿಗೆ, “ದೇವರು ಯಾರು? ಬೈಬಲ್‌ ದೇವರ ವಾಕ್ಯ ಅಂತ ಹೇಗೆ ಹೇಳ್ತೀರಾ? ಹೀಗೆ ಮಾಡಬೇಕು ಅಥವಾ ಹೀಗೆ ಮಾಡಬಾರದು ಅಂತ ದೇವರೇ ಹೇಳುತ್ತಿದ್ದಾನೆ ಅಂತ ಹೇಗೆ ಹೇಳಕ್ಕಾಗುತ್ತೆ?” ಎಂದು ಕೇಳುತ್ತಿದ್ದ. “ನೀವು ನಂಬುವುದನ್ನೇ ನಾನು ನಂಬದಿದ್ದಾಗ ನೀವ್ಯಾಕೆ ನನ್ನನ್ನು ತಿದ್ದಕ್ಕೆ ಬರ್ತೀರಾ?” ಎಂದು ಕೂಡ ತನ್ನ ತಂದೆಯನ್ನು ಕೇಳುತ್ತಿದ್ದ.

ಯಿಲ್ಲಿಸ್‌ ಹೀಗೆ ವಿವರಿಸುತ್ತಾರೆ: “ಕೆಲವೊಮ್ಮೆ ನಮ್ಮ ಮಗ ಕೋಪದಿಂದಲೇ ಪ್ರಶ್ನೆ ಕೇಳುತ್ತಿದ್ದ. ಆದರೆ ನನ್ನ ಮೇಲೆ ಅಥವಾ ತನ್ನ ತಾಯಿ ಮೇಲೆ ಇರೋ ಕೋಪದಿಂದಲ್ಲ, ಸತ್ಯದ ಮೇಲಿದ್ದ ಕೋಪದಿಂದ ಹಾಗೆ ನಡಕೊಳ್ಳುತ್ತಿದ್ದ. ಯಾಕೆಂದರೆ ಅದರಿಂದಲೇ ತನಗೆ ತೊಂದರೆ ಆಗುತ್ತಿದೆ ಅಂತ ಅವನು ಅಂದುಕೊಂಡಿದ್ದ.” ಅವರು ತಮ್ಮ ಮಗನಿಗೆ ಹೇಗೆ ಸಹಾಯ ಮಾಡಿದರು? “ನಾನೂ ನನ್ನ ಮಗನೂ ಕೂತು ಗಂಟೆಗಟ್ಟಲೆ ಮಾತಾಡುತ್ತಿದ್ದೆವು” ಎನ್ನುತ್ತಾರೆ ಯಿಲ್ಲಿಸ್‌. ಹೆಚ್ಚಾಗಿ ಮಾಟೀಯಾಸ್‌ ಮಾತಾಡುತ್ತಿರುವಾಗ ಅವರು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದರು. ತಮ್ಮ ಮಗನ ಮನಸ್ಸಲ್ಲಿ ಏನಿದೆ, ಯಾವ ಅಭಿಪ್ರಾಯ ಇದೆ ಎಂದು ತಿಳಿದುಕೊಳ್ಳಲು ಪ್ರಶ್ನೆಗಳನ್ನು ಕೇಳುತ್ತಿದ್ದರು. ಕೆಲವೊಮ್ಮೆ ಅವರು ಒಂದು ವಿಷಯವನ್ನು ವಿವರಿಸಿದ ಮೇಲೆ ತಮ್ಮ ಮಗನಿಗೆ ಅದರ ಬಗ್ಗೆ ಯೋಚನೆ ಮಾಡಲು ಒಂದು ದಿನ ಸಮಯ ಕೊಡುತ್ತಿದ್ದರು. ಆಮೇಲೆ ಒಟ್ಟಿಗೆ ಕೂತು ಮತ್ತೆ ಅದರ ಬಗ್ಗೆ ಮಾತಾಡುತ್ತಿದ್ದರು. ಒಮ್ಮೊಮ್ಮೆ ತಮ್ಮ ಮಗ ಹೇಳಿದ ವಿಷಯದ ಬಗ್ಗೆ ಯೋಚನೆ ಮಾಡಲು ಕೆಲವು ದಿನಗಳು ಬೇಕೆಂದು ಅವರೇ ಸಮಯ ಕೇಳುತ್ತಿದ್ದರು. ಹೀಗೆ ಮಾತಾಡಿ-ಮಾತಾಡಿ ಮಾಟೀಯಾಸ್‌ ವಿಮೋಚನಾ ಮೌಲ್ಯದ ಅರ್ಥವನ್ನು ಗ್ರಹಿಸಲು ಸಾಧ್ಯವಾಯಿತು. ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ನಮ್ಮನ್ನು ಆಳಲು ಆತನಿಗೆ ಹಕ್ಕಿದೆ ಎಂದು ಅರ್ಥಮಾಡಿಕೊಂಡನು. ಯಿಲ್ಲಿಸ್‌ ಹೇಳುತ್ತಾರೆ: “ಇದಕ್ಕೆಲ್ಲ ಸಮಯ ಹಿಡಿಯಿತು. ಕೆಲವೊಮ್ಮೆ ತುಂಬ ಕಷ್ಟ ಆಗುತ್ತಿತ್ತು. ಆದರೆ ನಿಧಾನವಾಗಿ ಅವನು ಯೆಹೋವನನ್ನು ಪ್ರೀತಿಸಲು ಶುರುಮಾಡಿದನು. ನಾನೂ ನನ್ನ ಹೆಂಡತಿ ತಾಳ್ಮೆಯಿಂದ ನಮ್ಮ ಮಗನಿಗೆ ಸಹಾಯ ಮಾಡಿದ್ದು ಸಾರ್ಥಕವಾಯಿತು. ಅದನ್ನು ನೆನಸಿಕೊಂಡರೆ ಸಂತೋಷವಾಗುತ್ತದೆ.”

ಅವರು ತಮ್ಮ ಮಗನಿಗೆ ತಾಳ್ಮೆಯಿಂದ ಸಹಾಯ ಮಾಡುತ್ತಾ ಇದ್ದಾಗ ಯೆಹೋವನ ಮೇಲೆ ಭರವಸೆ ಇಟ್ಟಿದ್ದರು. ಈ ವಿಷಯದಲ್ಲಿ ಯೆಹೋವನ ಸಹಾಯ ಸಿಗುತ್ತದೆ ಎಂದು ನಂಬಿಕೆ ಇಟ್ಟರು. ಯಿಲ್ಲಿಸ್‌ ಹೇಳುವುದು: “ನಾವು ಮಾಟೀಯಾಸ್‌ಗೆ ಆಗಾಗ ಹೀಗೆ ಹೇಳುತ್ತಿದ್ದೆವು: ‘ನಮಗೆ ನಿನ್ನ ಮೇಲೆ ತುಂಬ ಪ್ರೀತಿ ಇದೆ. ಅದಕ್ಕೇ ವಿಷಯಗಳನ್ನು ಅರ್ಥಮಾಡಿಕೊಳ್ಳಲು ನಿನಗೆ ಸಹಾಯ ಮಾಡಲಿ ಅಂತ ನಾನು ಮತ್ತು ನಿನ್ನ ತಾಯಿ ಯೆಹೋವನಿಗೆ ಪ್ರಾರ್ಥನೆ ಮಾಡುತ್ತಾ ಇದ್ದೇವೆ.’” ಮಾಟೀಯಾಸ್‌ನ ಹೆತ್ತವರು ತಾಳ್ಮೆಯಿಂದ ಇದ್ದು ನಿರೀಕ್ಷೆ ಕಳಕೊಳ್ಳದೆ ತಮ್ಮ ಮಗನಿಗೆ ಸಹಾಯ ಮಾಡಿದ್ದಕ್ಕೆ ತುಂಬ ಸಂತೋಷಪಡುತ್ತಾರೆ.

ತುಂಬ ಸಮಯದಿಂದ ಒಂದು ಕಾಯಿಲೆಯಿಂದ ಕಷ್ಟಪಡುತ್ತಿರುವ ನಮ್ಮ ಕುಟುಂಬ ಸದಸ್ಯರನ್ನು ಅಥವಾ ಸ್ನೇಹಿತರನ್ನು ನೋಡಿಕೊಳ್ಳಬೇಕಾಗಿ ಬಂದಾಗಲೂ ನಮಗೆ ತಾಳ್ಮೆ ಬೇಕು. ಹೆಲನ್‌ * ಅವರ ಅನುಭವ ನೋಡಿ. ಇವರೂ ಸ್ಕಾಂಡಿನೇವಿಯಾದಲ್ಲಿದ್ದಾರೆ.

ಸುಮಾರು ಎಂಟು ವರ್ಷಗಳ ಹಿಂದೆ ಹೆಲನ್‌ರವರ ಗಂಡನಿಗೆ ಎರಡು ಸಾರಿ ಲಕ್ವ ಹೊಡೆದು ಅವರ ಮೆದುಳಿಗೆ ಹಾನಿ ಆಯಿತು. ಇದರಿಂದಾಗಿ ಅವರ ಗಂಡನಿಗೆ ಸಂತೋಷ, ದುಃಖ, ಕರುಣೆ ಇದ್ಯಾವ ಭಾವನೆನೂ ಇಲ್ಲದೆ ಕಲ್ಲಿನಂತಿರುತ್ತಾರೆ. ಇದನ್ನು ನೋಡಿದಾಗ ಹೆಲನ್‌ಗೆ ಕರುಳು ಕಿತ್ತುಬರುತ್ತದೆ. ಅವರು ಹೇಳುವುದು: “ನಾನು ತುಂಬ ತುಂಬ ತಾಳ್ಮೆ ತೋರಿಸುತ್ತಾ ಇದ್ದೇನೆ. ಪ್ರಾರ್ಥನೆ ಮಾಡುತ್ತಿರೋದಕ್ಕೆ ಲೆಕ್ಕನೇ ಇಲ್ಲ.” “ನನಗೆ ಸಾಂತ್ವನ ಕೊಟ್ಟಿರೋ ವಚನ ಫಿಲಿಪ್ಪಿ 4:13. ನನಗೆ ತುಂಬ ಇಷ್ಟವಾದ ವಚನ ಅದು. ಅದು ಹೇಳುತ್ತೆ ‘ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.’” ಯೆಹೋವನು ಕೊಡುತ್ತಿರುವ ಶಕ್ತಿ ಮತ್ತು ಬೆಂಬಲದಿಂದ ಹೆಲನ್‌ ತಮ್ಮ ಸನ್ನಿವೇಶವನ್ನು ತಾಳ್ಮೆಯಿಂದ ನಿಭಾಯಿಸುತ್ತಿದ್ದಾರೆ.—ಕೀರ್ತ. 62:5, 6.

ಯೆಹೋವನಂತೆ ತಾಳ್ಮೆಯಿಂದ ಇರಿ

ತಾಳ್ಮೆ ತೋರಿಸುವುದರಲ್ಲಿ ಯೆಹೋವನಿಗಿಂತ ಉತ್ತಮ ಮಾದರಿ ಬೇರೆ ಯಾರೂ ಇಲ್ಲ. (2 ಪೇತ್ರ 3:15) ಆತನು ಎಷ್ಟು ತಾಳ್ಮೆ ತೋರಿಸಿದ್ದಾನೆ ಎಂದು ನಾವು ಬೈಬಲಲ್ಲಿ ಆಗಾಗ ಓದುತ್ತೇವೆ. (ನೆಹೆ. 9:30; ಯೆಶಾ. 30:18) ಒಂದು ಸಂದರ್ಭದಲ್ಲಿ ಯೆಹೋವನು ಅಬ್ರಹಾಮನ ಜೊತೆ ಎಷ್ಟು ತಾಳ್ಮೆಯಿಂದ ನಡಕೊಂಡನು ಎಂದು ನಿಮಗೆ ನೆನಪಿದೆಯಾ? ತಾನು ಸೋದೋಮನ್ನು ನಾಶಮಾಡುತ್ತೇನೆ ಎಂದು ಹೇಳಿದಾಗ ಅಬ್ರಹಾಮ ಒಂದರ ನಂತರ ಒಂದು ಪ್ರಶ್ನೆ ಕೇಳಿದನು. ಅವನು ಮಾತಾಡುವಾಗ ಯೆಹೋವನು ಮಧ್ಯೆ ಮಾತಾಡಲಿಲ್ಲ. ಅವನು ಒಂದೊಂದು ಪ್ರಶ್ನೆಯನ್ನು ಕೇಳಿದಾಗಲೂ ತನ್ನ ಚಿಂತೆಯನ್ನು ಹೇಳಿಕೊಂಡಾಗಲೂ ತಾಳ್ಮೆಯಿಂದ ಕೇಳಿಸಿಕೊಂಡನು. ಆಮೇಲೆ ಯೆಹೋವನು ಅಬ್ರಹಾಮನ ಚಿಂತೆಯನ್ನೆಲ್ಲ ಕೇಳಿಸಿಕೊಂಡಿದ್ದೇನೆ ಎಂದು ತೋರಿಸಿದನು ಮತ್ತು ಸೋದೋಮಲ್ಲಿ 10 ಜನ ಒಳ್ಳೆಯವರು ಸಿಕ್ಕಿದರೂ ಆ ಪಟ್ಟಣವನ್ನು ನಾಶಮಾಡಲ್ಲ ಎಂಬ ಭರವಸೆ ಕೊಟ್ಟನು. (ಆದಿ. 18:22-33) ಯೆಹೋವನು ಯಾವಾಗಲೂ ಬೇರೆಯವರು ಮಾತಾಡುವಾಗ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾನೆ ಮತ್ತು ಎಂದೂ ಅತಿಯಾಗಿ ಪ್ರತಿಕ್ರಿಯಿಸಲ್ಲ.

ತಾಳ್ಮೆ ಎನ್ನುವ ಗುಣ ಹೊಸ ವ್ಯಕ್ತಿತ್ವದ ಪ್ರಾಮುಖ್ಯವಾದ ಭಾಗ. ಅದು ಎಲ್ಲ ಕ್ರೈಸ್ತರಲ್ಲೂ ಇರಲೇಬೇಕಾದ ಗುಣ. ತಾಳ್ಮೆಯಿಂದ ಇರಲು ನಾವು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡುವುದಾದರೆ ಪ್ರೀತಿ ಮತ್ತು ತಾಳ್ಮೆ ತೋರಿಸುವ ನಮ್ಮ ದೇವರಾದ ಯೆಹೋವನನ್ನು ಮಹಿಮೆಪಡಿಸುತ್ತೇವೆ. “ನಂಬಿಕೆ ಮತ್ತು ತಾಳ್ಮೆಯ ಮೂಲಕ ವಾಗ್ದಾನಗಳನ್ನು ಬಾಧ್ಯತೆಯಾಗಿ” ಪಡೆಯುವ ಜನರಲ್ಲಿ ನಾವೂ ಇರುತ್ತೇವೆ.—ಇಬ್ರಿ. 6:10-12.

^ ಪ್ಯಾರ. 4 ಪವಿತ್ರಾತ್ಮದ ಫಲದ ಒಂದೊಂದು ಅಂಶವನ್ನು ಚರ್ಚಿಸುವ ಒಂಬತ್ತು ಲೇಖನಗಳಲ್ಲಿ ಪ್ರೀತಿಯ ಬಗ್ಗೆ ಮೊದಲನೇ ಲೇಖನದಲ್ಲಿ ಚರ್ಚಿಸಲಾಗಿದೆ.

^ ಪ್ಯಾರ. 15 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.