ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ನಾಯಕನಾದ ಯೇಸುವಿನಲ್ಲಿ ಭರವಸೆ ಇಡಿ

ನಮ್ಮ ನಾಯಕನಾದ ಯೇಸುವಿನಲ್ಲಿ ಭರವಸೆ ಇಡಿ

“ಕ್ರಿಸ್ತನೊಬ್ಬನೇ ನಿಮ್ಮ ನಾಯಕನು.”—ಮತ್ತಾ. 23:10.

ಗೀತೆಗಳು: 108, 99

1, 2. ಮೋಶೆ ತೀರಿಹೋದ ಮೇಲೆ ಯೆಹೋಶುವನಿಗೆ ಯೆಹೋವನು ಯಾವ ಜವಾಬ್ದಾರಿ ಕೊಟ್ಟನು?

ಯೆಹೋವನು ಯೆಹೋಶುವನಿಗೆ, “ನನ್ನ ಸೇವಕನಾದ ಮೋಶೆ ಸತ್ತನು; ನೀನು ಈಗ ಎದ್ದು ಸಮಸ್ತ ಪ್ರಜಾಸಹಿತವಾಗಿ ಈ ಯೊರ್ದನ್‌ ಹೊಳೆಯನ್ನು ದಾಟಿ ನಾನು ಇಸ್ರಾಯೇಲ್ಯರಿಗೆ ಕೊಡುವ ದೇಶಕ್ಕೆ ಹೋಗು” ಎಂದನು. (ಯೆಹೋ. 1:1, 2) ಸುಮಾರು 40 ವರ್ಷಗಳಿಂದ ಮೋಶೆಯ ಸಹಾಯಕನಾಗಿದ್ದ ಯೆಹೋಶುವನಿಗೆ ಇದು ಎಂಥ ದೊಡ್ಡ ಬದಲಾವಣೆಯಾಗಿತ್ತು!

2 ಮೋಶೆ ತುಂಬ ವರ್ಷಗಳು ಇಸ್ರಾಯೇಲ್ಯರ ನಾಯಕನಾಗಿದ್ದನು. ಆದರೆ ಈಗ ಯೆಹೋಶುವ ಅವರನ್ನು ನಾಯಕನಾಗಿ ನಡೆಸಬೇಕಿತ್ತು. ‘ಜನ ನನ್ನನ್ನು ತಮ್ಮ ನಾಯಕನಾಗಿ ಸ್ವೀಕರಿಸುತ್ತಾರಾ?’ ಎಂದು ಯೆಹೋಶುವ ಯೋಚಿಸಿರುತ್ತಾನೆ. (ಧರ್ಮೋ. 34:8, 10-12) ಯೆಹೋಶುವ 1:1, 2​ಕ್ಕೆ ಸೂಚಿಸುತ್ತಾ ಬೈಬಲಿನ ಒಂದು ಪರಾಮರ್ಶನ ಪುಸ್ತಕ ಹೀಗೆ ಹೇಳುತ್ತದೆ: “ನಾಯಕತ್ವ ಬದಲಾದಾಗ ದೇಶದಲ್ಲಿ ಶಾಂತಿ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿಬಿಡುತ್ತದೆ. ಈ ಮಾತು ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಅನ್ವಯ.”

3, 4. (ಎ) ಯೆಹೋವನು ತನ್ನಲ್ಲಿ ಭರವಸೆ ಇಟ್ಟ ಯೆಹೋಶುವನ ಕೈಬಿಡಲಿಲ್ಲ ಎಂದು ಹೇಗೆ ಹೇಳಬಹುದು? (ಬಿ) ನಮಗೆ ಯಾವ ಪ್ರಶ್ನೆ ಬರಬಹುದು?

3 ಯೆಹೋಶುವನ ಮನಸ್ಸಲ್ಲಿ ಕೆಲವು ಚಿಂತೆಗಳು ಇದ್ದಿರಬಹುದು. ಆದರೆ ಅವನು ಯೆಹೋವನಲ್ಲಿ ಭರವಸೆ ಇಟ್ಟನು. ದೇವರಿಂದ ಯಾವುದೇ ಸಲಹೆ-ಸೂಚನೆಗಳು ಬಂದರೂ ಅದನ್ನು ತಕ್ಷಣ ಪಾಲಿಸಿದನು. (ಯೆಹೋ. 1:9-11) ಯೆಹೋವನು ತನ್ನಲ್ಲಿ ಭರವಸೆ ಇಟ್ಟ ಯೆಹೋಶುವನ ಕೈಬಿಡಲಿಲ್ಲ. ಅವನನ್ನು ಮತ್ತು ಇಸ್ರಾಯೇಲ್ಯರನ್ನು ಮುನ್ನಡೆಸಲು ಒಬ್ಬ ದೇವದೂತನನ್ನು ಕಳುಹಿಸಿದನು. ಈ ದೇವದೂತನು ವಾಕ್ಯ ಎಂದು ಕರೆಯಲ್ಪಡುವ ದೇವರ ಜ್ಯೇಷ್ಠ ಪುತ್ರನಾಗಿದ್ದನು ಎಂಬುದರಲ್ಲಿ ಸಂದೇಹವಿಲ್ಲ.—ವಿಮೋ. 23:20-23; ಯೋಹಾ. 1:1.

4 ಯೆಹೋಶುವ ನಾಯಕನಾದ ಮೇಲೆ ಆದ ಬದಲಾವಣೆಗಳಿಗೆ ಚೆನ್ನಾಗಿ ಹೊಂದಿಕೊಳ್ಳಲು ಯೆಹೋವನು ಇಸ್ರಾಯೇಲ್ಯರಿಗೆ ಸಹಾಯ ಮಾಡಿದನು. ನಮ್ಮ ದಿನಗಳಲ್ಲೂ ಅನೇಕ ದೊಡ್ಡ ಬದಲಾವಣೆಗಳು ಆಗುತ್ತಾ ಇವೆ. ಆದ್ದರಿಂದ ‘ದೇವರ ಸಂಘಟನೆ ಬೆಳೆಯುತ್ತಾ ಇರುವಾಗ, ನಾಯಕನಾಗಿ ನೇಮಿಸಲ್ಪಟ್ಟಿರುವ ಯೇಸುವಿನಲ್ಲಿ ನಾವು ಭರವಸೆ ಇಡಲು ಒಳ್ಳೇ ಕಾರಣಗಳಿವೆಯಾ?’ ಎಂಬ ಪ್ರಶ್ನೆ ನಮಗೆ ಬರಬಹುದು. (ಮತ್ತಾಯ 23:10 ಓದಿ.) ಹಿಂದಿನ ಕಾಲದಲ್ಲಿ ಬದಲಾವಣೆಗಳು ಆದಾಗ ಯೆಹೋವನು ತನ್ನ ಜನರಿಗೆ ಹೇಗೆ ಸಹಾಯ ಮಾಡಿದನು ಎಂದು ತಿಳುಕೊಂಡರೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.

ದೇವಜನರನ್ನು ಕಾನಾನಿಗೆ ಕರಕೊಂಡು ಹೋದನು

5. ಯೆರಿಕೋ ಪಟ್ಟಣದ ಹತ್ತಿರ ಯೆಹೋಶುವನಿಗೆ ಯಾವ ಅನುಭವ ಆಯಿತು? (ಲೇಖನದ ಆರಂಭದ ಚಿತ್ರ ನೋಡಿ.)

5 ಇಸ್ರಾಯೇಲ್ಯರು ಯೊರ್ದನ್‌ ನದಿಯನ್ನು ದಾಟಿದ ಸ್ವಲ್ಪ ಸಮಯದಲ್ಲೇ ಯೆಹೋಶುವನಿಗೆ ಅಸಾಮಾನ್ಯವಾದ ಒಂದು ಅನುಭವ ಆಯಿತು. ಯೆರಿಕೋ ಪಟ್ಟಣದ ಹತ್ತಿರ ಅವನಿಗೆ ಒಬ್ಬ ವ್ಯಕ್ತಿ ಸಿಕ್ಕಿದನು. ಆ ವ್ಯಕ್ತಿಯ ಕೈಯಲ್ಲಿ ಕತ್ತಿ ಇತ್ತು. ಯೆಹೋಶುವ ಆ ವ್ಯಕ್ತಿಗೆ, “ನೀನು ನಮ್ಮವನೋ ಅಥವಾ ಶತ್ರುಪಕ್ಷದವನೋ” ಎಂದು ಕೇಳಿದನು. ತಾನು “ಯೆಹೋವನ ಸೇನಾಪತಿ” ಎಂದು ಆ ವ್ಯಕ್ತಿ ಹೇಳಿದಾಗ ಯೆಹೋಶುವನಿಗೆ ತುಂಬ ಆಶ್ಚರ್ಯ ಆಯಿತು. ಈ ದೇವದೂತನು ದೇವರ ಜನರನ್ನು ಕಾಪಾಡಲಿದ್ದನು. (ಯೆಹೋಶುವ 5:13-15 ಓದಿ.) ಈ ವೃತ್ತಾಂತದ ಬಗ್ಗೆ ಇರುವ ಬೈಬಲಿನ ಮುಂದಿನ ಅಧ್ಯಾಯಗಳಲ್ಲಿ ಯೆಹೋವನೇ ಯೆಹೋಶುವನ ಹತ್ತಿರ ಮಾತಾಡುತ್ತಿರುವಂತೆ ಇದೆ. ಆದರೆ ಇಲ್ಲಿ ಯೆಹೋವನು ತನ್ನ ಪರವಾಗಿ ಮಾತಾಡಲು ಒಬ್ಬ ದೇವದೂತನನ್ನು ಕಳುಹಿಸಿರಬೇಕು. ಇದೇ ರೀತಿ ಆತನು ಹಿಂದೆನೂ ಮಾಡಿದ್ದನು.—ವಿಮೋ. 3:2-4; ಯೆಹೋ. 4:1, 15; 5:2, 9; ಅ. ಕಾ. 7:38; ಗಲಾ. 3:19.

6-8. (ಎ) ದೇವದೂತನು ಕೊಟ್ಟ ಕೆಲವು ಸಲಹೆಗಳು ವಿಚಿತ್ರವಾಗಿ ಇದ್ದಿರಬಹುದು ಯಾಕೆ? (ಬಿ) ಅವನು ಕೊಟ್ಟ ಸಲಹೆ ಸರಿಯಾಗಿತ್ತು ಮತ್ತು ಸರಿಯಾದ ಸಮಯಕ್ಕೆ ಕೊಟ್ಟನು ಎಂದು ನಮಗೆ ಹೇಗೆ ಗೊತ್ತು? (ಪಾದಟಿಪ್ಪಣಿ ಸಹ ನೋಡಿ.)

6 ಯೆರಿಕೋವನ್ನು ವಶಕ್ಕೆ ತೆಗೆದುಕೊಳ್ಳಲು ನಿರ್ದಿಷ್ಟವಾಗಿ ಏನು ಮಾಡಬೇಕೆಂದು ದೇವದೂತನು ಯೆಹೋಶುವನಿಗೆ ತಿಳಿಸಿದನು. ಆರಂಭದಲ್ಲಿ ಅವನು ಕೊಟ್ಟ ನಿರ್ದೇಶನಗಳು ವಿಚಿತ್ರವಾಗಿದೆ ಎಂದು ಅನಿಸಿರಬಹುದು. ಉದಾಹರಣೆಗೆ, ಸೈನಿಕರೆಲ್ಲರಿಗೆ ಸುನ್ನತಿ ಮಾಡಿಸುವಂತೆ ದೇವದೂತನು ಹೇಳಿದನು. ಸುನ್ನತಿ ಮಾಡಿಸಿದ ಮೇಲೆ ಅವರು ಕೆಲವು ದಿನ ಯುದ್ಧ ಮಾಡಲು ಆಗಲ್ಲ. ಇದು ಸುನ್ನತಿ ಮಾಡಿಸಲು ಸರಿಯಾದ ಸಮಯ ಅಲ್ಲ ಎಂದು ತೋರಿರಬಹುದು.—ಆದಿ. 34:24, 25; ಯೆಹೋ. 5:2, 8.

7 ‘ಇಂಥ ಸಮಯದಲ್ಲಿ ವೈರಿಗಳು ನಮ್ಮ ಮೇಲೆ ದಾಳಿಮಾಡಿದರೆ ಏನು ಮಾಡುವುದು?’ ಎಂದು ಆ ಸೈನಿಕರು ಯೋಚಿಸಿರಬಹುದು. ಆದರೆ ಆಮೇಲೆ ಯಾರೂ ನೆನಸಿಲ್ಲದ ಒಂದು ವಿಷಯ ನಡೆಯಿತು. ಯೆರಿಕೋವಿನ ಜನರು ಇಸ್ರಾಯೇಲ್ಯರ ಮೇಲೆ ದಾಳಿಮಾಡುವ ಬದಲು ಗಾಬರಿಗೊಂಡರು. “ಯೆರಿಕೋವಿನವರು ಇಸ್ರಾಯೇಲ್ಯರಿಗೆ ಹೆದರಿ ತಮ್ಮ ಪಟ್ಟಣದ ಬಾಗಲುಗಳನ್ನು ಭದ್ರವಾಗಿ ಮುಚ್ಚಿಕೊಂಡರು. ಯಾರೂ ಒಳಗೆ ಹೋಗಲಿಲ್ಲ; ಹೊರಗೆ ಬರಲಿಲ್ಲ” ಎಂದು ಬೈಬಲ್‌ ಹೇಳುತ್ತದೆ. (ಯೆಹೋ. 6:1) ಇದರಿಂದ ದೇವರು ಏನೇ ಮಾರ್ಗದರ್ಶನ ಕೊಟ್ಟರೂ ಅದನ್ನು ಪೂರ್ತಿ ನಂಬಬಹುದು ಎಂದು ಇಸ್ರಾಯೇಲ್ಯರು ಅರ್ಥಮಾಡಿಕೊಂಡಿರಬೇಕು.

8 ಇಸ್ರಾಯೇಲ್ಯರು ಯೆರಿಕೋವಿನ ಮೇಲೆ ದಾಳಿ ಮಾಡಬಾರದು ಎಂದು ದೇವದೂತನು ಯೆಹೋಶುವನಿಗೆ ತಿಳಿಸಿದ್ದನು. ಅದರ ಬದಲು ಅವರು ಆರು ದಿನ ಪಟ್ಟಣವನ್ನು ಒಂದು ಸುತ್ತು ಹಾಕಬೇಕಿತ್ತು. ಏಳನೆಯ ದಿನ ಏಳು ಸಾರಿ ಸುತ್ತು ಹಾಕಬೇಕಿತ್ತು. ಸೈನಿಕರು ‘ಯಾಕೆ ಸುಮ್ಮನೆ ಸಮಯನಾ, ಶಕ್ತಿನಾ ಕಳಕೋಬೇಕು’ ಅಂತ ಯೋಚಿಸಿರಬಹುದು. ಆದರೆ ಅವರ ಕಣ್ಣಿಗೆ ಕಾಣಿಸದ ಅವರ ನಾಯಕನಿಗೆ ತಾನು ಏನು ಮಾಡುತ್ತಿದ್ದೇನೆ ಎಂದು ಚೆನ್ನಾಗಿ ಗೊತ್ತಿತ್ತು. ಆತನು ಕೊಟ್ಟ ನಿರ್ದೇಶನಗಳನ್ನು ಪಾಲಿಸಿದ್ದರಿಂದ ಇಸ್ರಾಯೇಲ್ಯರು ಯುದ್ಧಮಾಡದೆನೇ ಯೆರಿಕೋವನ್ನು ಗೆದ್ದರು. ಇದರಿಂದ ಅವರ ನಂಬಿಕೆ ಬಲವಾಯಿತು.—ಯೆಹೋ. 6:2-5; ಇಬ್ರಿ. 11:30. *

9. ದೇವರ ಸಂಘಟನೆ ಕೊಡುವ ಯಾವುದೇ ನಿರ್ದೇಶನವನ್ನು ನಾವು ಯಾಕೆ ಪಾಲಿಸಬೇಕು? ಒಂದು ಉದಾಹರಣೆ ಕೊಡಿ.

9 ಈ ವೃತ್ತಾಂತದಿಂದ ನಾವೇನು ಕಲಿಯಬಹುದು? ಯೆಹೋವನ ಸಂಘಟನೆ ಕೆಲವೊಮ್ಮೆ ಕೆಲವು ವಿಷಯಗಳನ್ನು ಹೊಸ ರೀತಿಯಲ್ಲಿ ಮಾಡುತ್ತದೆ. ನಮಗೆ ಅದರ ಹಿಂದಿರುವ ಕಾರಣ ಗೊತ್ತಾಗಲಿಕ್ಕಿಲ್ಲ. ಉದಾಹರಣೆಗೆ, ವೈಯಕ್ತಿಕ ಅಧ್ಯಯನ ಮಾಡುವಾಗ, ಸೇವೆಯಲ್ಲಿ ಮತ್ತು ಕೂಟಗಳಲ್ಲಿ ಇಲೆಕ್ಟ್ರಾನಿಕ್‌ ಸಾಧನಗಳನ್ನು ಉಪಯೋಗಿಸುವುದು ಅಷ್ಟು ಸರಿ ಕಾಣುವುದಿಲ್ಲ ಎಂದು ನಾವು ಆರಂಭದಲ್ಲಿ ನೆನಸಿರಬಹುದು. ಆದರೆ ಈಗ ನಮಗೆ ಅದರಿಂದ ಎಷ್ಟೊಂದು ಪ್ರಯೋಜನ ಇದೆ ಎಂದು ಅರ್ಥ ಆಗಿರಬಹುದು. ಇಂಥ ಬದಲಾವಣೆಗಳಿಂದ ಒಳ್ಳೇ ಫಲಿತಾಂಶಗಳು ಸಿಕ್ಕಿದಾಗ ನಮ್ಮ ನಂಬಿಕೆ ಬಲವಾಗುತ್ತದೆ ಮತ್ತು ನಾವು ನಮ್ಮ ಸಹೋದರ ಸಹೋದರಿಯರ ಜೊತೆ ಇನ್ನೂ ಐಕ್ಯವಾಗುತ್ತೇವೆ.

ಮೊದಲನೇ ಶತಮಾನದಲ್ಲಿ ಕ್ರಿಸ್ತನ ನಾಯಕತ್ವ

10. ಸುನ್ನತಿಯ ಬಗ್ಗೆ ಎದ್ದ ವಿವಾದವನ್ನು ಬಗೆಹರಿಸಲು ನಿಜಕ್ಕೂ ಏರ್ಪಾಡು ಮಾಡಿದ್ದು ಯಾರು?

10 ಕೊರ್ನೇಲ್ಯನೆಂಬ ಸುನ್ನತಿ ಮಾಡಿಸಿಕೊಂಡಿಲ್ಲದ ಅನ್ಯಜನಾಂಗದ ವ್ಯಕ್ತಿ ಕ್ರೈಸ್ತನಾಗಿ ಸುಮಾರು 13 ವರ್ಷ ಆಗಿತ್ತು. ಆದರೆ ಕೆಲವು ಯೆಹೂದಿ ಕ್ರೈಸ್ತರು ಸುನ್ನತಿ ಮಾಡಿಸಿಕೊಳ್ಳಲೇಬೇಕು ಎಂದು ಈಗಲೂ ಹೇಳುತ್ತಿದ್ದರು. (ಅ. ಕಾ. 15:1, 2) ಅಂತಿಯೋಕ್ಯದಲ್ಲಿದ್ದ ಸಹೋದರರು ಇದರ ಬಗ್ಗೆ ವಾದ ಮಾಡುತ್ತಾ ಇದ್ದರು. ಆದ್ದರಿಂದ ಅಲ್ಲಿನ ಹಿರಿಯರು ಯೆರೂಸಲೇಮಿನಲ್ಲಿರುವ ಆಡಳಿತ ಮಂಡಲಿಯ ನಿರ್ದೇಶನ ಪಡೆಯಲು ಪೌಲನನ್ನು ಕಳುಹಿಸಿದರು. ಆದರೆ ಅವನನ್ನು ನಿಜವಾಗಿಯೂ ಕಳುಹಿಸಿದ್ದು ಯಾರು? “ಒಂದು ಪ್ರಕಟನೆಯ ಪರಿಣಾಮವಾಗಿ ನಾನು ಅಲ್ಲಿಗೆ ಹೋದೆನು” ಎಂದು ಪೌಲನು ವಿವರಿಸುತ್ತಾನೆ. ಅಂದರೆ ಪೌಲನನ್ನು ಯೆರೂಸಲೇಮಿಗೆ ಕಳುಹಿಸುವಂತೆ ಆ ಹಿರಿಯರನ್ನು ಪವಿತ್ರಾತ್ಮ ಪ್ರೇರಿಸಿತು. ಹಾಗಾದರೆ ಆಡಳಿತ ಮಂಡಲಿಯ ಮೂಲಕ ಉತ್ತರ ಸಿಗುವಂತೆ ಕ್ರಿಸ್ತನೇ ಏರ್ಪಾಡು ಮಾಡಿದನು ಅನ್ನುವುದರಲ್ಲಿ ಸಂಶಯವಿಲ್ಲ.—ಗಲಾ. 2:1-3.

ಮೊದಲನೇ ಶತಮಾನದ ಕ್ರೈಸ್ತ ಸಭೆಗೆ ಯೇಸುವೇ ನಾಯಕನಾಗಿದ್ದನು (ಪ್ಯಾರ 10, 11 ನೋಡಿ)

11. (ಎ) ಯೆಹೂದಿಗಳಾಗಿದ್ದ ಕೆಲವರು ಕ್ರೈಸ್ತರಾದ ಮೇಲೂ ಸುನ್ನತಿಯ ವಿಷಯದಲ್ಲಿ ಏನು ಮಾಡುತ್ತಾ ಇದ್ದರು? (ಬಿ) ಪೌಲನು ಯೆರೂಸಲೇಮಿನಲ್ಲಿದ್ದ ಹಿರಿಯರಿಗೆ ಸಂಪೂರ್ಣ ಬೆಂಬಲ ಕೊಡುತ್ತೇನೆಂದು ಹೇಗೆ ತೋರಿಸಿದನು? (ಪಾದಟಿಪ್ಪಣಿ ಸಹ ನೋಡಿ.)

11 ಯೆಹೂದಿಗಳಲ್ಲದ ಕ್ರೈಸ್ತರು ಸುನ್ನತಿ ಮಾಡಿಸಿಕೊಳ್ಳುವ ಆವಶ್ಯಕತೆಯಿಲ್ಲ ಎಂದು ಯೇಸು ಆಡಳಿತ ಮಂಡಲಿಯ ಮೂಲಕ ಸ್ಪಷ್ಟಪಡಿಸಿದನು. (ಅ. ಕಾ. 15:19, 20) ಇದಾಗಿ ವರ್ಷಗಳಾದ ಮೇಲೂ ಅನೇಕ ಯೆಹೂದಿ ಕ್ರೈಸ್ತರು ತಮ್ಮ ಗಂಡುಮಕ್ಕಳಿಗೆ ಸುನ್ನತಿ ಮಾಡಿಸುತ್ತಿದ್ದರು. ಯೆರೂಸಲೇಮಿನಲ್ಲಿದ್ದ ಹಿರಿಯರಿಗೆ ಪೌಲನು ಮೋಶೆಯ ಧರ್ಮಶಾಸ್ತ್ರವನ್ನು ಗೌರವಿಸುವುದಿಲ್ಲ ಎಂಬ ಗಾಳಿಸುದ್ದಿಯೊಂದು ಕಿವಿಗೆ ಬಿತ್ತು. ಇದು ಸುಳ್ಳು ಎಂದು ತೋರಿಸುವಂಥ ಒಂದು ವಿಷಯವನ್ನು ಮಾಡುವಂತೆ ಆ ಹಿರಿಯರು ಪೌಲನಿಗೆ ಹೇಳಿದರು. * (ಅ. ಕಾ. 21:20-26) ಪೌಲನು ನಾಲ್ಕು ಪುರುಷರನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ಒಂದು ಸಂಪ್ರದಾಯವನ್ನು ನೆರವೇರಿಸುವಂತೆ ಹೇಳಿದರು. ಅದಕ್ಕೆ ಪೌಲನು, ‘ಇದನ್ನು ಯಾಕೆ ಮಾಡಬೇಕು? ನನಗೆ ಇದು ಸರಿ ಕಾಣುತ್ತಿಲ್ಲ. ತಿದ್ದಿಕೊಳ್ಳಬೇಕಾಗಿರುವುದು ಸುನ್ನತಿಯ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲದ ಯೆಹೂದಿ ಕ್ರೈಸ್ತರು’ ಎಂದು ಹೇಳಬಹುದಿತ್ತು. ಆದರೆ ಎಲ್ಲ ಕ್ರೈಸ್ತರು ಐಕ್ಯವಾಗಿ ಇರಬೇಕೆಂದು ಹಿರಿಯರು ಬಯಸಿದರು ಎಂದು ಪೌಲ ಅರ್ಥಮಾಡಿಕೊಂಡನು. ಅವರು ಹೇಳಿದಂತೆಯೇ ಮಾಡಿದನು. ಆದರೆ ‘ಯೇಸು ತೀರಿಕೊಂಡಾಗಲೇ ಮೋಶೆಯ ಧರ್ಮಶಾಸ್ತ್ರವನ್ನು ತೆಗೆದುಹಾಕಲಾಯಿತು. ಹಾಗಿರುವಾಗ ಯೇಸು ಯಾಕೆ ಈ ಸುನ್ನತಿಯ ವಿವಾದ ಇಷ್ಟರ ತನಕ ಮುಂದುವರಿಯಲು ಬಿಟ್ಟನು?’ ಎಂಬ ಪ್ರಶ್ನೆ ನಮಗೆ ಬರಬಹುದು.—ಕೊಲೊ. 2:13, 14.

12. ಸುನ್ನತಿಯ ವಿವಾದ ಸಂಪೂರ್ಣವಾಗಿ ಇತ್ಯರ್ಥವಾಗಲು ಯೇಸು ಸ್ವಲ್ಪ ಸಮಯ ಹೋಗಲು ಬಿಟ್ಟಿರಬೇಕು ಯಾಕೆ?

12 ಒಂದು ಹೊಸ ಹೊಂದಾಣಿಕೆ ಬಂದಾಗ ಅದಕ್ಕೆ ಹೊಂದಿಕೊಳ್ಳಲು ಸಮಯ ಹಿಡಿಯುತ್ತದೆ. ಯೆಹೂದಿ ಕ್ರೈಸ್ತರಿಗೆ ತಾವೀಗ ಧರ್ಮಶಾಸ್ತ್ರದ ಕೆಳಗಿಲ್ಲ ಎಂದು ಒಪ್ಪಿಕೊಳ್ಳಲು ಸ್ವಲ್ಪ ಸಮಯ ಬೇಕಿತ್ತು. (ಯೋಹಾ. 16:12) ಸುನ್ನತಿ ದೇವರೊಂದಿಗೆ ತಮಗಿರುವ ವಿಶೇಷ ಸಂಬಂಧದ ಗುರುತು ಎಂದು ಅವರು ಚಿಕ್ಕ ವಯಸ್ಸಿಂದ ನಂಬಿದ್ದರು. (ಆದಿ. 17:9-12) ಸುನ್ನತಿ ಮಾಡಿಸಿಕೊಳ್ಳದಿದ್ದರೆ ಯೆಹೂದಿ ಜನ ತಮಗೆ ಹಿಂಸೆ ಕೊಡಬಹುದೆಂಬ ಭಯ ಕೆಲವರಿಗೆ ಇದ್ದಿರಬಹುದು. (ಗಲಾ. 6:12) ಆದರೆ ಸ್ವಲ್ಪ ಸಮಯ ಆದ ಮೇಲೆ ಯೇಸು ಅವರಿಗೆ ಪೌಲನ ಪತ್ರಗಳ ಮೂಲಕ ಹೆಚ್ಚಿನ ನಿರ್ದೇಶನ ಕೊಟ್ಟನು.—ರೋಮ. 2:28, 29; ಗಲಾ. 3:23-25.

ಯೇಸು ತನ್ನ ಸಭೆಯನ್ನು ಈಗಲೂ ನಡೆಸುತ್ತಿದ್ದಾನೆ

13. ಯೇಸು ಇಂದು ನಮ್ಮನ್ನು ನಡೆಸುತ್ತಿರುವ ವಿಧವನ್ನು ಬೆಂಬಲಿಸಲು ನಮಗೆ ಯಾವುದು ಸಹಾಯ ಮಾಡುತ್ತದೆ?

13 ಯೇಸು ಈಗಲೂ ಕ್ರೈಸ್ತ ಸಭೆಯ ನಾಯಕನಾಗಿದ್ದಾನೆ. ಆದ್ದರಿಂದ ಸಂಘಟನೆ ಏನಾದರೂ ಬದಲಾವಣೆ ಮಾಡುವಾಗ ನಿಮಗೆ ಅದು ಅರ್ಥವಾಗದಿದ್ದರೆ ಈ ಹಿಂದೆ ದೇವರ ಜನರನ್ನು ಯೇಸು ಹೇಗೆ ನಡೆಸಿದನು ಅನ್ನುವುದರ ಬಗ್ಗೆ ಯೋಚಿಸಿ. ಅದು ಯೆಹೋಶುವನ ದಿನಗಳಾಗಿರಲಿ, ಅಪೊಸ್ತಲರ ಸಮಯದಲ್ಲಾಗಿರಲಿ ಯೇಸು ಯಾವಾಗಲೂ ಒಳ್ಳೇ ನಿರ್ದೇಶನ ಕೊಟ್ಟಿದ್ದಾನೆ. ಇದರಿಂದ ದೇವರ ಜನರಿಗೆ ಸಂರಕ್ಷಣೆ ಸಿಕ್ಕಿದೆ, ಅವರ ನಂಬಿಕೆ ಬಲವಾಗಿದೆ, ಒಬ್ಬರಿಗೊಬ್ಬರು ಐಕ್ಯವಾಗಿರಲು ಸಹಾಯವಾಗಿದೆ.—ಇಬ್ರಿ. 13:8.

14-16. ಯೇಸು ‘ನಂಬಿಗಸ್ತ ಮತ್ತು ವಿವೇಚನೆಯುಳ್ಳ ಆಳಿನ’ ಮೂಲಕ ಕೊಡುತ್ತಿರುವ ನಿರ್ದೇಶನ ನಾವು ನಂಬಿಕೆಯಲ್ಲಿ ಬಲವಾಗಿರಲು ಸಹಾಯ ಮಾಡುತ್ತದೆ ಎಂದು ಹೇಗೆ ರುಜುವಾಗುತ್ತದೆ?

14 ಇಂದು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಸರಿಯಾದ ನಿರ್ದೇಶನವನ್ನು ಸರಿಯಾದ ಸಮಯಕ್ಕೆ ಕೊಡುತ್ತದೆ. (ಮತ್ತಾ. 24:45) ಇದರಿಂದ ಯೇಸು ನಮ್ಮ ಬಗ್ಗೆ ಚಿಂತಿಸುತ್ತಾನೆ ಎಂದು ಗೊತ್ತಾಗುತ್ತದೆ. ನಾಲ್ಕು ಮಕ್ಕಳ ತಂದೆಯಾದ ಮಾರ್ಕ್‌ ಏನು ಹೇಳುತ್ತಾರೆ ನೋಡಿ: “ಸೈತಾನನು ಕುಟುಂಬಗಳ ಮೇಲೆ ದಾಳಿಮಾಡುವ ಮೂಲಕ ಸಭೆಗಳನ್ನು ಒಡೆಯಲು ಪ್ರಯತ್ನಿಸುತ್ತಿದ್ದಾನೆ. ಈಗ ನಮಗೆ ಪ್ರತಿ ವಾರ ಕುಟುಂಬ ಆರಾಧನೆ ನಡೆಸಬೇಕೆಂಬ ಸಲಹೆ ಸಿಕ್ಕಿದೆ. ಇನ್ನೊಂದು ಅರ್ಥದಲ್ಲಿ ‘ಕುಟುಂಬ ತಲೆಗಳೇ, ನಿಮ್ಮ ಕುಟುಂಬವನ್ನು ಕಾಪಾಡಿ’ ಅನ್ನೋ ಎಚ್ಚರಿಕೆಯನ್ನು ಸಂಘಟನೆ ನಮಗೆ ಕೊಡುತ್ತಿದೆ.”

15 ಯೇಸು ನಮ್ಮನ್ನು ಹೇಗೆ ನಡೆಸುತ್ತಿದ್ದಾನೆ ಎಂದು ನೋಡುವಾಗ ಆತನು ನಮ್ಮ ನಂಬಿಕೆಯನ್ನು ಬಲವಾಗಿಡಲು ಸಹಾಯ ಮಾಡುತ್ತಿದ್ದಾನೆ ಎಂದು ಅರ್ಥವಾಗುತ್ತದೆ. ಪ್ಯಾಟ್ರಿಕ್‌ ಎಂಬ ಹಿರಿಯ ಹೇಳುವುದು: “ನಾವು ವಾರಾಂತ್ಯಗಳಲ್ಲಿ ಕ್ಷೇತ್ರ ಸೇವೆಗೆ ಚಿಕ್ಕಚಿಕ್ಕ ಗುಂಪುಗಳಾಗಿ ಸೇರಿ ಬರಬೇಕೆಂಬ ವಿಷಯ ಕೆಲವರಿಗೆ ಆರಂಭದಲ್ಲಿ ಇಷ್ಟವಾಗಲಿಲ್ಲ.” ಆದರೆ ಇದರ ಮೂಲಕ ಸಭೆಯಲ್ಲಿರುವ ಒಬ್ಬೊಬ್ಬರ ಬಗ್ಗೆಯೂ ಯೇಸು ಚಿಂತಿಸುತ್ತಾನೆ ಎಂದು ಗೊತ್ತಾಗುತ್ತದೆ ಎಂದು ಪ್ಯಾಟ್ರಿಕ್‌ ಹೇಳುತ್ತಾರೆ. ನಾಚಿಕೆ ಸ್ವಭಾವ ಇದ್ದ ಅಥವಾ ಸೇವೆಗೆ ಹೋಗದಿದ್ದ ಕೆಲವು ಸಹೋದರ-ಸಹೋದರಿಯರಿಗೆ ಈಗ ತಮ್ಮ ಸೇವೆ ಕೂಡ ಮುಖ್ಯ ಎಂದು ಅನಿಸಿದೆ. ಇದರಿಂದ ಅವರ ನಂಬಿಕೆ ಇನ್ನೂ ಬಲವಾಗಿದೆ.

16 ಯೇಸು ಸಾರುವ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಹ ಸಹಾಯ ಮಾಡುತ್ತಾನೆ. ಯಾಕೆಂದರೆ ಇಂದು ಭೂಮಿಯ ಮೇಲೆ ನಡೆಯುತ್ತಿರುವ ಅತಿ ಪ್ರಾಮುಖ್ಯ ಕೆಲಸ ಇದು. (ಮಾರ್ಕ 13:10 ಓದಿ.) ಇತ್ತೀಚೆಗೆ ಹಿರಿಯರಾಗಿ ನೇಮಕಗೊಂಡ ಆ್ಯಂದ್ರೆ ಯೆಹೋವನ ಸಂಘಟನೆಯಿಂದ ಯಾವ ಹೊಸ ನಿರ್ದೇಶನ ಬಂದರೂ ಅದನ್ನು ತಕ್ಷಣ ಪಾಲಿಸಲು ಪ್ರಯತ್ನಿಸುತ್ತಾರೆ. “ಶಾಖಾ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಸಹೋದರ-ಸಹೋದರಿಯರನ್ನು ಕಡಿಮೆ ಮಾಡುತ್ತಿರುವುದು ನಾವು ಜೀವಿಸುತ್ತಿರುವ ಸಮಯದ ತುರ್ತು ಪರಿಸ್ಥಿತಿಯನ್ನು ತೋರಿಸುತ್ತದೆ. ನಾವು ಸಾರುವ ಕೆಲಸಕ್ಕೆ ಹೆಚ್ಚು ಗಮನ ಕೊಡಬೇಕೆಂದು ಗೊತ್ತಾಗುತ್ತದೆ” ಎಂದು ಅವರು ಹೇಳುತ್ತಾರೆ.

ಕ್ರಿಸ್ತನ ನಿರ್ದೇಶನಕ್ಕೆ ಸಂಪೂರ್ಣ ಬೆಂಬಲ

17, 18. ಬದಲಾವಣೆಗಳಿಗೆ ಹೊಂದಿಕೊಳ್ಳುವುದರಿಂದ ಪ್ರಯೋಜನಗಳು ಸಿಗುತ್ತವೆ ಅನ್ನುವುದನ್ನು ಯಾಕೆ ನೆನಪಲ್ಲಿಡಬೇಕು?

17 ನಮ್ಮ ರಾಜನಾದ ಯೇಸು ಕ್ರಿಸ್ತನು ಕೊಡುವ ನಿರ್ದೇಶನದಿಂದ ನಮಗೆ ಈಗಲೂ ಮುಂದಕ್ಕೂ ಪ್ರಯೋಜನ ಸಿಗುತ್ತದೆ. ಇತ್ತೀಚೆಗೆ ಬಂದ ಬದಲಾವಣೆಗಳಿಗೆ ನೀವು ಹೊಂದಿಕೊಂಡದ್ದರಿಂದ ನಿಮಗೆ ಸಿಕ್ಕಿರುವ ಪ್ರಯೋಜನಗಳ ಬಗ್ಗೆ ಯೋಚಿಸಿ. ಕೂಟದಲ್ಲಾದ ಅಥವಾ ಸೇವೆಯಲ್ಲಾದ ಬದಲಾವಣೆಯಿಂದ ನಿಮ್ಮ ಕುಟುಂಬಕ್ಕೆ ಹೇಗೆ ಸಹಾಯವಾಗಿದೆ ಎಂದು ನಿಮ್ಮ ಕುಟುಂಬ ಆರಾಧನೆಯಲ್ಲಿ ಚರ್ಚಿಸಿ.

ಯೆಹೋವನ ಸಂಘಟನೆಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಳ್ಳಲು ನೀವು ನಿಮ್ಮ ಕುಟುಂಬದವರಿಗೆ ಮತ್ತು ಬೇರೆಯವರಿಗೆ ಸಹಾಯ ಮಾಡುತ್ತಿದ್ದೀರಾ? (ಪ್ಯಾರ 17, 18 ನೋಡಿ)

18 ಹೊಸ ನಿರ್ದೇಶನಗಳನ್ನು ಪಾಲಿಸುವುದರಿಂದ ಪ್ರಯೋಜನಗಳು ಸಿಗುತ್ತವೆ ಅನ್ನುವುದನ್ನು ಜ್ಞಾಪಕದಲ್ಲಿಟ್ಟರೆ ಯಾವುದೇ ನಿರ್ದೇಶನವನ್ನು ಸಂತೋಷದಿಂದ ಪಾಲಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ, ನಾವು ಈಗ ಹೆಚ್ಚು ಪ್ರಕಾಶನಗಳನ್ನು ಮುದ್ರಿಸುತ್ತಿಲ್ಲ. ಇದರಿಂದ ಹಣ ಉಳಿಸಲಿಕ್ಕೆ ಆಗುತ್ತಿದೆ. ಜೊತೆಗೆ ನಾವು ಹೊಸ ತಂತ್ರಜ್ಞಾನಗಳನ್ನು ಬಳಸುತ್ತಿರುವುದರಿಂದ ತುಂಬ ಜನರಿಗೆ ಸುವಾರ್ತೆಯನ್ನು ತಲಪಿಸಲು ಆಗುತ್ತಿದೆ. ನೀವು ಪ್ರಕಾಶನಗಳನ್ನು ಮತ್ತು ವಿಡಿಯೋಗಳನ್ನು ಹೆಚ್ಚಾಗಿ ಡೌನ್‌ಲೋಡ್‌ ಮಾಡಿ ಉಪಯೋಗಿಸಲು ಸಾಧ್ಯನಾ? ಇದು ಕೂಡ ಕ್ರಿಸ್ತನನ್ನು ಬೆಂಬಲಿಸುವ ಒಂದು ವಿಧವಾಗಿದೆ. ಆತನು ಸಂಘಟನೆಗೆ ಸಿಗುತ್ತಿರುವ ಕಾಣಿಕೆಗಳನ್ನು ವಿವೇಚನೆಯಿಂದ ಉಪಯೋಗಿಸುವಂತೆ ನಿರ್ದೇಶಿಸುತ್ತಿದ್ದಾನೆ.

19. ನಾವು ಕ್ರಿಸ್ತನ ನಿರ್ದೇಶನವನ್ನು ಯಾಕೆ ಬೆಂಬಲಿಸಬೇಕು?

19 ನಾವು ಕ್ರಿಸ್ತನ ನಿರ್ದೇಶನವನ್ನು ಬೆಂಬಲಿಸುವಾಗ ಸಹೋದರ-ಸಹೋದರಿಯರ ನಂಬಿಕೆಯನ್ನು ಬಲಪಡಿಸುತ್ತೇವೆ ಮತ್ತು ಐಕ್ಯವಾಗಿರಲು ಸಹಾಯ ಮಾಡುತ್ತೇವೆ. ಲೋಕವ್ಯಾಪಕವಾಗಿ ಬೆತೆಲ್‌ ಕುಟುಂಬದ ಸದಸ್ಯರನ್ನು ಇತ್ತೀಚೆಗೆ ಕಡಿಮೆ ಮಾಡಿರುವುದರ ಬಗ್ಗೆ ಆ್ಯಂದ್ರೆ ಹೇಳುತ್ತಾರೆ: “ಬೆತೆಲ್‌ನಲ್ಲಿ ಸೇವೆ ಮಾಡುತ್ತಿದ್ದವರು ಹೊಸ ಹೊಂದಾಣಿಕೆಗಳಿಗೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಅವರು ಯೆಹೋವನ ರಥದೊಂದಿಗೆ ಸೇರಿ ಓಡಲು ಬಯಸುತ್ತಾರೆ. ಅವರಿಗೆ ಯಾವ ನೇಮಕ ಕೊಟ್ಟರೂ ಅದನ್ನು ಸಂತೋಷದಿಂದ ಮಾಡುತ್ತಿದ್ದಾರೆ. ಇದನ್ನು ನೋಡಿ ನನಗೆ ಯೇಸುವಿನ ನಾಯಕತ್ವದ ಮೇಲೆ ಭರವಸೆ ಮತ್ತು ಯೇಸುವಿಗೆ ಸಹಕಾರ ನೀಡುತ್ತಿರುವ ಆ ಸಹೋದರರ ಮೇಲೆ ಗೌರವ ಹೆಚ್ಚಾಗಿದೆ.”

ನಮ್ಮ ನಾಯಕನನ್ನು ನಂಬಿ

20, 21. (ಎ) ನಾವು ನಮ್ಮ ನಾಯಕನಾದ ಯೇಸುವನ್ನು ನಂಬಲು ಯಾವ ಕಾರಣ ಇದೆ? (ಬಿ) ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಯನ್ನು ಚರ್ಚಿಸಲಿದ್ದೇವೆ?

20 ತುಂಬ ಬೇಗ ನಮ್ಮ ನಾಯಕನಾದ ಯೇಸು ಕ್ರಿಸ್ತ ‘ತನ್ನ ವಿಜಯವನ್ನು ಪೂರ್ಣಗೊಳಿಸುವನು’ ಮತ್ತು ‘ಸತ್ಯತೆದೈನ್ಯನೀತಿಗಳನ್ನು ಸ್ಥಾಪಿಸುವನು.’ (ಪ್ರಕ. 6:2; ಕೀರ್ತ. 45:4) ಈಗಲೂ ಆತನು ನಮ್ಮನ್ನು ಹೊಸ ಲೋಕಕ್ಕಾಗಿ ತಯಾರು ಮಾಡುತ್ತಿದ್ದಾನೆ. ಹೊಸ ಲೋಕದಲ್ಲಿ ನಾವು ಪುನರುತ್ಥಾನ ಆಗಿ ಬರುವವರಿಗೆ ಕಲಿಸುತ್ತೇವೆ, ಈ ಭೂಮಿಯನ್ನು ಪರದೈಸ್‌ ಮಾಡುವುದರಲ್ಲಿ ಕೈಜೋಡಿಸುತ್ತೇವೆ.

21 ಅದೇನೇ ಆದರೂ ನಾವು ನಮ್ಮ ನಾಯಕ ಮತ್ತು ರಾಜನಾದ ಕ್ರಿಸ್ತನಲ್ಲಿ ನಂಬಿಕೆ ಇಟ್ಟರೆ ಆತನು ನಮ್ಮನ್ನು ಹೊಸ ಲೋಕಕ್ಕೆ ಖಂಡಿತ ಕರಕೊಂಡು ಹೋಗುತ್ತಾನೆ. (ಕೀರ್ತನೆ 46:1-3 ಓದಿ.) ಇಂದು ಜೀವನದಲ್ಲಿ ನಾವು ನೆನಸಿರದ ಒಂದು ವಿಷಯ ನಡೆದಾಗ ಅದಕ್ಕೆ ಹೊಂದಿಕೊಳ್ಳಲು ನಮಗೆ ಕಷ್ಟವಾಗಬಹುದು. ಆಗ ನಾವು ಹೇಗೆ ನಮ್ಮ ಮನಶ್ಶಾಂತಿಯನ್ನು ಕಾಪಾಡಿಕೊಂಡು ಯೆಹೋವನ ಮೇಲೆ ಬಲವಾದ ನಂಬಿಕೆ ಇಡಬಹುದು? ಈ ಪ್ರಶ್ನೆಯನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.

^ ಪ್ಯಾರ. 8 ಶೇಖರಿಸಿಡಲಾಗಿರುವ ರಾಶಿರಾಶಿ ಧಾನ್ಯಗಳನ್ನು ಯೆರಿಕೋವಿನ ಅವಶೇಷಗಳಲ್ಲಿ ಪುರಾತತ್ವಶಾಸ್ತ್ರಜ್ಞರು ಕಂಡುಹಿಡಿದರು. ಇದರಿಂದ ಪಟ್ಟಣವನ್ನು ತುಂಬ ಸಮಯದ ವರೆಗೆ ಮುತ್ತಿಗೆ ಹಾಕಿರಲಿಲ್ಲ, ಹಾಗಾಗಿ ದವಸಧಾನ್ಯಗಳು ಖಾಲಿಯಾಗಲಿಲ್ಲ ಎಂದು ಗೊತ್ತಾಗುತ್ತದೆ. ಅದು ಸುಗ್ಗಿಯ ಕಾಲವಾಗಿದ್ದರಿಂದ ಇಸ್ರಾಯೇಲ್ಯರು ದೇಶವನ್ನು ವಶಕ್ಕೆ ತೆಗೆದುಕೊಳ್ಳಲು ಸರಿಯಾದ ಸಮಯವಾಗಿತ್ತು. ಹೊಲದಲ್ಲಿ ಬೇಕಾದಷ್ಟು ಬೆಳೆ ಬೆಳೆದು ನಿಂತಿತ್ತು.—ಯೆಹೋ. 5:10-12.

^ ಪ್ಯಾರ. 11 ಮಾರ್ಚ್‌ 15, 2003​ರ ಕಾವಲಿನಬುರುಜುವಿನ ಪುಟ 24​ರಲ್ಲಿರುವ “ಪೌಲನು ಒಂದು ಪರೀಕ್ಷೆಯನ್ನು ಎದುರಿಸುತ್ತಾನೆ” ಎಂಬ ಚೌಕ ನೋಡಿ.