ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವಜನರೇ, ಸಂತೋಷ ತುಂಬಿದ ಜೀವನ ನಡೆಸಲು ಏನು ಮಾಡಬೇಕು?

ಯುವಜನರೇ, ಸಂತೋಷ ತುಂಬಿದ ಜೀವನ ನಡೆಸಲು ಏನು ಮಾಡಬೇಕು?

“ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ.”—ಕೀರ್ತ. 16:11.

ಗೀತೆಗಳು: 41, 120

1, 2. ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯ ಎಂದು ಟೋನಿಯ ಅನುಭವದಿಂದ ಹೇಗೆ ಗೊತ್ತಾಗುತ್ತದೆ?

ಟೋನಿಗೆ ತಂದೆ ಇರಲಿಲ್ಲ. ಅವನು ಪ್ರೌಢ ಶಾಲೆಯಲ್ಲಿ ಓದುತ್ತಿದ್ದ, ಆದರೆ ಓದಿನ ಕಡೆ ಗಮನ ಇರಲಿಲ್ಲ. ವಿದ್ಯಾಭ್ಯಾಸವನ್ನು ಪೂರ್ತಿ ಮುಗಿಸಬೇಕು ಎಂಬ ಯೋಚನೆಯೂ ಇರಲಿಲ್ಲ. ವಾರಾಂತ್ಯದಲ್ಲಿ ಸಿನಿಮಾಗೆ ಹೋಗುತ್ತಿದ್ದ ಅಥವಾ ಸ್ನೇಹಿತರ ಜೊತೆ ತಿರುಗಾಡುತ್ತಿದ್ದ. ಅವನು ಯಾರ ಜೊತೆನೂ ಜಗಳ ಮಾಡುತ್ತಿರಲಿಲ್ಲ, ಡ್ರಗ್ಸ್‌ ತಗೊಳ್ಳುತ್ತಿರಲಿಲ್ಲ. ಆದರೆ ಜೀವನದಲ್ಲಿ ಉದ್ದೇಶ ಇರಲಿಲ್ಲ. ದೇವರಿದ್ದಾನಾ ಇಲ್ವಾ ಅಂತಾನೂ ಗೊತ್ತಿರಲಿಲ್ಲ. ಒಂದಿನ ಇಬ್ಬರು ಯೆಹೋವನ ಸಾಕ್ಷಿಗಳು ಅವನಿಗೆ ಸಿಕ್ಕಿದರು. ಆಗ ಅವನು ದೇವರ ಬಗ್ಗೆ ತನಗಿದ್ದ ಸಂಶಯಗಳ ಬಗ್ಗೆ ಅವರ ಜೊತೆ ಮಾತಾಡಿದನು. ಅವರು ಅವನಿಗೆ ಜೀವವು ಸೃಷ್ಟಿಸಲ್ಪಟ್ಟಿತೋ? ಮತ್ತು ಜೀವದ ಉಗಮ—ಪರಿಗಣಿಸಬೇಕಾದ ಐದು ಪ್ರಶ್ನೆಗಳು ಎಂಬ ಎರಡು ಕಿರುಹೊತ್ತಗೆ ಕೊಟ್ಟರು. *

2 ಅವರು ಟೋನಿಯನ್ನು ಪುನಃ ಭೇಟಿ ಮಾಡಿದಾಗ ಅವನ ಮನೋಭಾವ ಪೂರ್ತಿ ಬದಲಾಗಿತ್ತು. ಅವನು ಆ ಕಿರುಹೊತ್ತಗೆಗಳನ್ನು ಎಷ್ಟು ಓದಿದ್ದನೆಂದರೆ ಅವು ಮುದುರಿ ಮುದ್ದೆಯಾಗಿದ್ದವು. ಅವನು ಸಾಕ್ಷಿಗಳಿಗೆ, “ದೇವರು ಅಂತ ಒಬ್ಬನು ಇರಲೇಬೇಕು” ಎಂದ. ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದ. ಜೀವನದ ಬಗ್ಗೆ ಅವನಿಗಿದ್ದ ದೃಷ್ಟಿಕೋನ ಸ್ವಲ್ಪಸ್ವಲ್ಪವಾಗಿ ಬದಲಾಯಿತು. ಬೈಬಲ್‌ ಅಧ್ಯಯನ ಮಾಡುವ ಮುಂಚೆ ಅವನು ಶಾಲೆಯಲ್ಲಿ ಒಳ್ಳೇ ವಿದ್ಯಾರ್ಥಿ ಆಗಿರಲಿಲ್ಲ. ಆದರೆ ಅಧ್ಯಯನ ಆರಂಭಿಸಿದ ಮೇಲೆ ಅವನು ತುಂಬ ಒಳ್ಳೇ ವಿದ್ಯಾರ್ಥಿಯಾದ. ಶಾಲೆಯ ಪ್ರಿನ್ಸಿಪಲ್‌ಗೂ ಆಶ್ಚರ್ಯ ಆಯಿತು. ಅವರು ಟೋನಿಗೆ, “ನಿನ್ನ ಮನೋಭಾವ ತುಂಬ ಬದಲಾಗಿದೆ, ಚೆನ್ನಾಗಿ ಓದ್ತಿದ್ದೀಯ. ನೀನು ಯೆಹೋವನ ಸಾಕ್ಷಿಗಳ ಜೊತೆ ಸಹವಾಸ ಮಾಡುವುದರಿಂದ ಈ ಬದಲಾವಣೆ ಆಯಿತಾ?” ಎಂದು ಕೇಳಿದರು. ಟೋನಿ ಅದಕ್ಕೆ ‘ಹೌದು’ ಎಂದ ಮತ್ತು ತಾನೇನು ಕಲೀತಿದ್ದನೋ ಅದನ್ನು ಪ್ರಿನ್ಸಿಪಲ್‌ ಜೊತೆ ಹಂಚಿಕೊಂಡ. ಅವನು ವಿದ್ಯಾಭ್ಯಾಸ ಮುಗಿಸಿ ಈಗ ಪಯನೀಯರಾಗಿ ಮತ್ತು ಸಹಾಯಕ ಸೇವಕನಾಗಿ ಸೇವೆ ಮಾಡುತ್ತಿದ್ದಾನೆ. ಅವನಿಗೆ ಈಗ ಒಬ್ಬ ಪ್ರೀತಿಯ ತಂದೆ, ಯೆಹೋವನು ಸಿಕ್ಕಿರುವುದರಿಂದ ತುಂಬ ಖುಷಿಯಾಗಿದ್ದಾನೆ.—ಕೀರ್ತ. 68:5.

ಯೆಹೋವನ ಮಾತು ಕೇಳಿದರೆ ಜೀವನ ಚೆನ್ನಾಗಿರುತ್ತದೆ

3. ಯೆಹೋವನು ಯುವಜನರಿಗೆ ಯಾವ ಸಲಹೆ ಕೊಡುತ್ತಾನೆ?

3 ಯೆಹೋವನಿಗೆ ಯುವಜನರ ಮೇಲೆ ಚಿಂತೆ-ಕಾಳಜಿ ಇದೆ ಎಂದು ಟೋನಿಯ ಅನುಭವದಿಂದ ಗೊತ್ತಾಗುತ್ತದೆ. ನಿಮ್ಮ ಜೀವನ ಚೆನ್ನಾಗಿರಬೇಕೆಂದು ದೇವರು ಬಯಸುತ್ತಾನೆ. ಆದ್ದರಿಂದ “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಎಂಬ ಸಲಹೆ ಕೊಡುತ್ತಾನೆ. (ಪ್ರಸಂ. 12:1) ಇದು ಯಾವಾಗಲೂ ಸುಲಭ ಆಗಿರಲ್ಲ. ಆದರೆ ಅಸಾಧ್ಯನೂ ಅಲ್ಲ. ದೇವರ ಸಹಾಯದಿಂದ ನಿಮ್ಮ ಜೀವನ ಈಗ ಮಾತ್ರ ಅಲ್ಲ ಮುಂದಕ್ಕೂ ಚೆನ್ನಾಗಿರುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು ಈ ಎರಡು ಪ್ರಶ್ನೆಗಳಿಗೆ ಉತ್ತರ ನೋಡೋಣ. ವಾಗ್ದತ್ತ ದೇಶವನ್ನು ವಶಮಾಡಿಕೊಳ್ಳಲು ಇಸ್ರಾಯೇಲ್ಯರಿಗೆ ಯಾವುದು ಸಹಾಯ ಮಾಡಿತು? ದೈತ್ಯನಾಗಿದ್ದ ಗೊಲ್ಯಾತನನ್ನು ಹೊಡೆದುಹಾಕಲು ದಾವೀದನಿಗೆ ಯಾವುದು ಸಹಾಯ ಮಾಡಿತು?

4, 5. ಇಸ್ರಾಯೇಲ್ಯರಿಂದ ಮತ್ತು ದಾವೀದನಿಂದ ನಾವು ಯಾವ ಪಾಠ ಕಲಿಯಬಹುದು? (ಲೇಖನದ ಆರಂಭದ ಚಿತ್ರಗಳನ್ನು ನೋಡಿ.)

4 ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಲಿದ್ದಾಗ ಯೆಹೋವನು ಅವರಿಗೆ ಏನು ಹೇಳಿದನು? ಯುದ್ಧ ಮಾಡಲು ಬೇಕಾದ ಕೌಶಲ ಬೆಳೆಸಿಕೊಂಡು ಒಳ್ಳೇ ಸೈನಿಕರಾಗಲು ಹೇಳಿದನಾ? ಇಲ್ಲ! (ಧರ್ಮೋ. 28:1, 2) ತನ್ನಲ್ಲಿ ಭರವಸೆ ಇಟ್ಟು ತನ್ನ ಮಾತಿನಂತೆ ನಡೆಯಲು ಹೇಳಿದನು. (ಯೆಹೋ. 1:7-9) ಇದಕ್ಕೂ ಯುದ್ಧಕ್ಕೂ ಏನು ಸಂಬಂಧ ಎಂದು ಕೆಲವರು ಯೋಚಿಸಿರಬಹುದು. ಆದರೆ ಗೆಲ್ಲಬೇಕಾದರೆ ಈ ಸಲಹೆಯನ್ನು ಪಾಲಿಸುವುದೇ ಬುದ್ಧಿವಂತಿಕೆ ಆಗಿತ್ತು. ಇದರಿಂದ ಇಸ್ರಾಯೇಲ್ಯರಿಗೆ ಒಂದರ ಹಿಂದೆ ಒಂದು ಜಯ ಸಿಕ್ಕಿತು. (ಯೆಹೋ. 24:11-13) ದೇವರ ಮಾತಿನಂತೆ ನಡೆಯಲು ನಂಬಿಕೆ ಬೇಕು. ಇಂಥ ನಂಬಿಕೆ ಇದ್ದರೆ ಖಂಡಿತ ಯಶಸ್ಸು ಸಿಗುತ್ತದೆ. ಇದು ಆಗಲೂ ಸತ್ಯ ಆಯಿತು, ಈಗಲೂ ಸತ್ಯ ಆಗುತ್ತದೆ.

5 ಗೊಲ್ಯಾತ ಯುದ್ಧ ಶೂರನಾಗಿದ್ದ. 9.5 ಅಡಿ ಎತ್ತರ ಇದ್ದ. ಅವನ ಹತ್ತಿರ ಭಯಂಕರವಾದ ಆಯುಧಗಳೂ ಇದ್ದವು. (1 ಸಮು. 17:4-7) ಆದರೆ ದಾವೀದನ ಹತ್ತಿರ ಇದ್ದದ್ದು ಒಂದು ಕವಣೆ ಮತ್ತು ದೇವರಲ್ಲಿ ನಂಬಿಕೆ ಮಾತ್ರ. ದೇವರಲ್ಲಿ ನಂಬಿಕೆ ಇಲ್ಲದವರು ಇದನ್ನು ನೋಡಿದಾಗ ಗೊಲ್ಯಾತನ ವಿರುದ್ಧ ಹೋರಾಡಲು ಹೋದ ದಾವೀದನು ಮೂರ್ಖ ಎಂದು ಅನಿಸಿರಬಹುದು. ಆದರೆ ಇಲ್ಲಿ ಮೂರ್ಖನು ದಾವೀದ ಅಲ್ಲ, ಗೊಲ್ಯಾತ!—1 ಸಮು. 17:48-51.

6. ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?

6 ಹಿಂದಿನ ಲೇಖನದಲ್ಲಿ, ಜೀವನದಲ್ಲಿ ನಮಗೆ ಸಂತೋಷ ತರುವ ನಾಲ್ಕು ವಿಷಯಗಳ ಬಗ್ಗೆ ಮಾತಾಡಿದ್ವಿ. ನಾವು ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ನೋಡಿಕೊಳ್ಳಬೇಕು, ದೇವರನ್ನು ಪ್ರೀತಿಸುವ ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳಬೇಕು, ಒಳ್ಳೇ ಗುರಿಗಳನ್ನು ಇಡಬೇಕು ಮತ್ತು ದೇವರು ಕೊಡುವ ಸ್ವಾತಂತ್ರ್ಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಬೇಕು ಎಂದು ಕಲಿತ್ವಿ. ದೇವರು ನಮ್ಮ ಆನಂದಕ್ಕಾಗಿ ಕೊಟ್ಟಿರುವ ಈ ವಿಷಯಗಳನ್ನು ಮಾಡುವುದರಿಂದ ನಮಗೆ ಇನ್ನೂ ಯಾವ ವಿಧಗಳಲ್ಲಿ ಪ್ರಯೋಜನ ಸಿಗುತ್ತದೆ ಎಂದು ಈ ಲೇಖನದಲ್ಲಿ ಚರ್ಚಿಸೋಣ. ಇದನ್ನು ಮಾಡಲು, 16​ನೇ ಕೀರ್ತನೆಯಲ್ಲಿರುವ ಕೆಲವು ತತ್ವಗಳಿಗೆ ಗಮನ ಕೊಡೋಣ.

ನಿಮ್ಮ ಆಧ್ಯಾತ್ಮಿಕ ಅಗತ್ಯ ನೋಡಿಕೊಳ್ಳಿ

7. (ಎ) ಯಾರನ್ನು ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಎಂದು ಕರೆಯಬಹುದು? (ಬಿ) ದಾವೀದನ ‘ಪಾಲು’ ಏನಾಗಿತ್ತು? (ಸಿ) ಇದರಿಂದ ಆತನಿಗೆ ಏನು ಸಿಕ್ಕಿತು?

7 ಒಬ್ಬ ಆಧ್ಯಾತ್ಮಿಕ ವ್ಯಕ್ತಿ ದೇವರಲ್ಲಿ ನಂಬಿಕೆ ಇಡುತ್ತಾನೆ ಮತ್ತು ವಿಷಯಗಳನ್ನು ಯೆಹೋವನ ದೃಷ್ಟಿಯಿಂದ ನೋಡಲು ಪ್ರಯತ್ನಿಸುತ್ತಾನೆ. ತನ್ನ ಜೀವನವನ್ನು ಯೆಹೋವನೇ ಮಾರ್ಗದರ್ಶಿಸುವಂತೆ ಬಿಡುತ್ತಾನೆ ಮತ್ತು ಏನೇ ಆದರೂ ದೇವರ ಮಾತಿಗೆ ತಕ್ಕಂತೆ ನಡಕೊಳ್ಳುತ್ತಾನೆ. (1 ಕೊರಿಂ. 2:12, 13) ಇಂಥ ಆಧ್ಯಾತ್ಮಿಕತೆ ಇದ್ದ ವ್ಯಕ್ತಿ ದಾವೀದ. ‘ಯೆಹೋವನೇ ನನ್ನ ಪಾಲು’ ಎಂದು ಆತನು ಹಾಡಿದನು. (ಕೀರ್ತ. 16:5) ಈ ‘ಪಾಲು’ ದೇವರೊಂದಿಗೆ ದಾವೀದನಿಗಿದ್ದ ಆಪ್ತ ಸಂಬಂಧವಾಗಿತ್ತು. ಆತನು ದೇವರಲ್ಲಿ ಆಶ್ರಯ ಪಡೆದಿದ್ದನು. (ಕೀರ್ತ. 16:1) ಇದರಿಂದಾಗಿ “ನನ್ನ ಮನವು ಉಲ್ಲಾಸಗೊಳ್ಳುತ್ತದೆ” ಎಂದನು. ಯೆಹೋವನೊಂದಿಗೆ ತನಗಿದ್ದ ಆಪ್ತ ಸ್ನೇಹಕ್ಕಿಂತ ದಾವೀದನಿಗೆ ಬೇರೆ ಯಾವ ವಿಷಯವೂ ಹೆಚ್ಚು ಸಂತೋಷ ಕೊಡಲಿಲ್ಲ.—ಕೀರ್ತನೆ 16:9, 11 ಓದಿ.

8. ಜೀವನದಲ್ಲಿ ನಿಜ ಸಂತೋಷ-ಸಂತೃಪ್ತಿ ಬೇಕಾದರೆ ಏನು ಮಾಡಬೇಕು?

8 ಯಾರು ದುಡ್ಡಿನ ಹಿಂದೆ ಬೀಳುತ್ತಾರೋ ಅಥವಾ ಜೀವನದಲ್ಲಿ ಮಜಾ ಮಾಡಲು ಬಯಸುತ್ತಾರೋ ಅವರು ದಾವೀದನಷ್ಟು ಸಂತೋಷವಾಗಿ ಇರುವುದಿಲ್ಲ. (1 ತಿಮೊ. 6:9, 10) ಕೆನಡದ ಒಬ್ಬ ಸಹೋದರ ಹೇಳುವುದು: “ನಾವು ಏನು ಪಡಕೊಳ್ಳುತ್ತೇವೋ ಅದರಿಂದ ನಿಜ ಸಂತೋಷ ಸಿಗುವುದಿಲ್ಲ. ಪ್ರತಿಯೊಂದು ಒಳ್ಳೇ ಉಡುಗೊರೆ ಕೊಡುವ ಯೆಹೋವ ದೇವರಿಗೆ ನಾವೇನು ಕೊಡುತ್ತೇವೋ ಅದರಿಂದ ಸಂತೋಷ ಸಿಗುತ್ತದೆ.” (ಯಾಕೋ. 1:17) ನೀವು ಯೆಹೋವನಲ್ಲಿ ನಂಬಿಕೆ ಇಟ್ಟು ಆತನ ಸೇವೆ ಮಾಡುವುದಾದರೆ ಜೀವನಕ್ಕೊಂದು ಉದ್ದೇಶ ಇರುತ್ತದೆ, ಸಂತೋಷ-ಸಂತೃಪ್ತಿ ಸಿಗುತ್ತದೆ. ಹಾಗಾದರೆ ನಿಮ್ಮ ನಂಬಿಕೆಯನ್ನು ಬಲಪಡಿಸಲು ಏನು ಮಾಡಬೇಕು? ಯೆಹೋವನ ಜೊತೆ ಹೆಚ್ಚು ಸಮಯ ಕಳೆಯಬೇಕು. ಅಂದರೆ ಆತನ ವಾಕ್ಯವನ್ನು ಓದಬೇಕು, ಆತನ ಸೃಷ್ಟಿಯನ್ನು ಆನಂದಿಸಬೇಕು, ಆತನ ಗುಣಗಳ ಬಗ್ಗೆ ಯೋಚಿಸಬೇಕು. ಆತನು ನಿಮ್ಮನ್ನು ಎಷ್ಟು ಪ್ರೀತಿಸುತ್ತಾನೆ ಎಂದು ಸಹ ಯೋಚಿಸಬೇಕು.—ರೋಮ. 1:20; 5:8.

9. ದಾವೀದನಂತೆ ಬೈಬಲ್‌ ನಿಮ್ಮನ್ನು ರೂಪಿಸಬೇಕೆಂದರೆ ಏನು ಮಾಡಬೇಕು?

9 ಕೆಲವೊಮ್ಮೆ ದೇವರು ಒಬ್ಬ ತಂದೆಯಂತೆ ನಮ್ಮನ್ನು ತಿದ್ದುವ ಮೂಲಕ ತನ್ನ ಪ್ರೀತಿಯನ್ನು ತೋರಿಸುತ್ತಾನೆ. ದೇವರು ಈ ರೀತಿ ತಿದ್ದುವುದು ದಾವೀದನಿಗೆ ತುಂಬ ಇಷ್ಟವಿತ್ತು. ಆದ್ದರಿಂದ ಆತನು, “ಯೆಹೋವನು ನನಗೆ ಆಲೋಚನೆಯನ್ನು ಹೇಳಿಕೊಡುತ್ತಾನೆ; ಆತನನ್ನು ಕೊಂಡಾಡುವೆನು. ರಾತ್ರಿಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ” ಅಥವಾ ತಿದ್ದುತ್ತದೆ ಎಂದನು. (ಕೀರ್ತ. 16:7) ದಾವೀದನು ದೇವರ ಆಲೋಚನೆಗಳ ಬಗ್ಗೆ ಯೋಚಿಸಿದನು ಮತ್ತು ದೇವರಂತೆ ಯೋಚಿಸಲು ಪ್ರಯತ್ನಿಸಿದನು. ಹೀಗೆ ದೇವರ ಆಲೋಚನೆಗಳು ತನ್ನನ್ನು ರೂಪಿಸುವಂತೆ ಬಿಟ್ಟನು. ಇದರಿಂದ ಆತನು ಒಬ್ಬ ಒಳ್ಳೇ ವ್ಯಕ್ತಿಯಾಗಲು ಸಹಾಯವಾಯಿತು. ನೀವು ಸಹ ಇದನ್ನೇ ಮಾಡಿದರೆ ದೇವರ ಮೇಲಿರುವ ನಿಮ್ಮ ಪ್ರೀತಿ ಜಾಸ್ತಿ ಆಗುತ್ತದೆ ಮತ್ತು ಆತನಿಗೆ ಇಷ್ಟವಾಗುವ ರೀತಿ ನಡಕೊಳ್ಳಬೇಕು ಎಂಬ ಆಸೆ ಜಾಸ್ತಿ ಆಗುತ್ತದೆ. ಇದರಿಂದ ನೀವೊಬ್ಬ ಪ್ರೌಢ ಕ್ರೈಸ್ತರಾಗುತ್ತೀರಿ. ಕ್ರಿಸ್ಟಿನ್‌ ಎಂಬ ಸಹೋದರಿ ಹೇಳುವುದು: “ನಾನು ಸಂಶೋಧನೆ ಮಾಡಿದ ಮೇಲೆ ಅದರ ಬಗ್ಗೆ ಧ್ಯಾನಿಸುತ್ತೇನೆ. ಆಗ ಯೆಹೋವನು ಆ ವಿಷಯವನ್ನು ನನಗೇ ಬರೆದಂತೆ ಇರುತ್ತದೆ.”

10. ಯೆಶಾಯ 26:3 ಹೇಳುವಂತೆ, ನೀವು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರೆ ಯಾವ ಪ್ರಯೋಜನ ಸಿಗುತ್ತದೆ?

10 ನೀವು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರೆ ಈ ಲೋಕವನ್ನು ಮತ್ತು ಅದರ ಭವಿಷ್ಯವನ್ನು ದೇವರ ದೃಷ್ಟಿಯಿಂದ ನೋಡುತ್ತೀರಿ. ಯೆಹೋವನು ನಿಮಗೆ ಈ ವಿಶೇಷವಾದ ಜ್ಞಾನ ಮತ್ತು ತಿಳುವಳಿಕೆಯನ್ನು ಕೊಡುತ್ತಾನೆ. ಯಾಕೆಂದರೆ ಜೀವನದಲ್ಲಿ ಯಾವುದು ಮುಖ್ಯ ಎಂದು ನೀವು ತಿಳುಕೊಳ್ಳಬೇಕು, ಒಳ್ಳೇ ತೀರ್ಮಾನಗಳನ್ನು ಮಾಡಬೇಕು ಮತ್ತು ಭವಿಷ್ಯದ ಬಗ್ಗೆ ಭಯಪಡದೆ ಇರಬೇಕೆಂದು ಆತನು ಬಯಸುತ್ತಾನೆ. (ಯೆಶಾಯ 26:3 ಓದಿ.) ಅಮೆರಿಕದ ಜಾಶುವ ಹೇಳುವ ಪ್ರಕಾರ, ನಾವು ಯೆಹೋವನಿಗೆ ಹತ್ತಿರವಾಗಿ ಉಳಿದರೆ ಜೀವನದಲ್ಲಿ ಯಾವುದು ಪ್ರಾಮುಖ್ಯ ಯಾವುದು ಪ್ರಾಮುಖ್ಯ ಅಲ್ಲ ಎಂದು ಗೊತ್ತಾಗುತ್ತದೆ.

ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳಿ

11. ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳುವ ವಿಷಯದಲ್ಲಿ ನಾವು ದಾವೀದನಿಂದ ಏನು ಕಲಿಯುತ್ತೇವೆ?

11 ಕೀರ್ತನೆ 16:3 ಓದಿ. ಒಳ್ಳೇ ಸ್ನೇಹಿತರನ್ನು ಹೇಗೆ ಕಂಡುಹಿಡಿಯಬೇಕೆಂದು ದಾವೀದನಿಗೆ ಗೊತ್ತಿತ್ತು. ಯೆಹೋವನನ್ನು ಪ್ರೀತಿಸುವವರನ್ನು ಮಾತ್ರ ಆತನು ಸ್ನೇಹಿತರಾಗಿ ಆರಿಸಿಕೊಂಡನು. “ಇವರೇ ನನಗೆ ಇಷ್ಟರಾದವರು” ಅನ್ನುವುದನ್ನು ನೂತನ ಲೋಕ ಭಾಷಾಂತರ “ಇವರೇ ನನಗೆ ತುಂಬ ಸಂತೋಷ ಕೊಡುತ್ತಾರೆ” ಎಂದು ಭಾಷಾಂತರಿಸುತ್ತದೆ. ತನ್ನ ಸ್ನೇಹಿತರನ್ನು ‘ದೇವಜನರು’ ಎಂದು ಕರೆದನು. ಯಾಕೆಂದರೆ ಅವರು ಯೆಹೋವನ ಉನ್ನತವಾದ ನೈತಿಕ ಮಟ್ಟಗಳನ್ನು ಪಾಲಿಸಿದರು. ಸ್ನೇಹಿತರನ್ನು ಆರಿಸಿಕೊಳ್ಳುವುದರ ಬಗ್ಗೆ ಇನ್ನೊಬ್ಬ ಕೀರ್ತನೆಗಾರನಿಗೂ ಇದೇ ತರ ಅನಿಸಿತು. “ನಿನ್ನ ನೇಮಗಳನ್ನು ಕೈಕೊಂಡು ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸಂಗಡಿಗನು” ಅಥವಾ ಸ್ನೇಹಿತನು ಎಂದು ಆತನು ಹೇಳಿದನು. (ಕೀರ್ತ. 119:63) ನಾವು ಹಿಂದಿನ ಲೇಖನದಲ್ಲಿ ಚರ್ಚಿಸಿದಂತೆ, ಯೆಹೋವನನ್ನು ಪ್ರೀತಿಸಿ ಆತನ ಮಾತಿನಂತೆ ನಡೆಯುವವರಲ್ಲಿ ನಿಮಗೆ ಎಷ್ಟೋ ಒಳ್ಳೇ ಸ್ನೇಹಿತರು ಸಿಗುತ್ತಾರೆ. ನಿಮ್ಮ ಸ್ನೇಹಿತರು ನಿಮ್ಮ ವಯಸ್ಸಿನವರೇ ಆಗಿರಬೇಕು ಅಂತ ಏನಿಲ್ಲ.

12. ದಾವೀದ ಮತ್ತು ಯೋನಾತಾನ ಒಳ್ಳೇ ಸ್ನೇಹಿತರಾಗಲು ಕಾರಣವೇನು?

12 ದಾವೀದನು ತನ್ನ ವಯಸ್ಸಿನವರನ್ನೇ ತನ್ನ ಸ್ನೇಹಿತರಾಗಿ ಮಾಡಿಕೊಳ್ಳಲಿಲ್ಲ. ‘ದಾವೀದನ ಆಪ್ತ ಮಿತ್ರ ಯಾರು ಹೇಳಿ’ ಅಂದ ಕೂಡಲೆ ನಮಗೆ ಯಾರ ಹೆಸರು ನೆನಪಿಗೆ ಬರುತ್ತದೆ? ಯೋನಾತಾನ ಅಲ್ವಾ? ಬೈಬಲಿನಲ್ಲಿ ಇವರಿಬ್ಬರ ಸ್ನೇಹದ ಬಗ್ಗೆ ತುಂಬ ಸುಂದರವಾಗಿ ವರ್ಣಿಸಲಾಗಿದೆ. ಆದರೆ ಯೋನಾತಾನ ದಾವೀದನಿಗಿಂತ 30 ವರ್ಷ ದೊಡ್ಡವನಾಗಿದ್ದ ಅಂತ ನಿಮಗೆ ಗೊತ್ತಾ? ಇಷ್ಟು ವಯಸ್ಸು ವ್ಯತ್ಯಾಸ ಇದ್ದರೂ ಇವರು ಇಷ್ಟು ಆಪ್ತ ಸ್ನೇಹಿತರಾಗಲು ಹೇಗೆ ಸಾಧ್ಯವಾಯಿತು? ಅವರ ಸ್ನೇಹ ದೇವರ ಮೇಲಿರುವ ನಂಬಿಕೆಯ ಮೇಲೆ ಆಧರಿಸಿತ್ತು. ಅವರಿಗೆ ಒಬ್ಬರ ಮೇಲೊಬ್ಬರಿಗೆ ಗೌರವ ಇತ್ತು. ಇಬ್ಬರಲ್ಲೂ ಒಳ್ಳೇ ಗುಣಗಳಿದ್ದವು, ಇದನ್ನು ಒಬ್ಬರಿಗೊಬ್ಬರು ಮೆಚ್ಚಿದರು. ದೇವರ ವೈರಿಗಳನ್ನು ಧೂಳಿಪಟ ಮಾಡುವುದೆಂದರೆ ಇವರಿಬ್ಬರಿಗೂ ತುಂಬ ಇಷ್ಟ.—1 ಸಮು. 13:3; 14:13; 17:48-50; 18:1.

13. ನೀವು ಹೇಗೆ ಹೆಚ್ಚು ಸ್ನೇಹಿತರನ್ನು ಮಾಡಿಕೊಳ್ಳಬಹುದು? ಒಂದು ಉದಾಹರಣೆ ಕೊಡಿ.

13 ದಾವೀದ ಮತ್ತು ಯೋನಾತಾನನ ತರ, ಯೆಹೋವನ ಮೇಲೆ ಪ್ರೀತಿ, ನಂಬಿಕೆ ಇರುವ ವ್ಯಕ್ತಿಗಳನ್ನು ನಾವು ಸ್ನೇಹಿತರಾಗಿ ಮಾಡಿಕೊಂಡರೆ ಅವರಿಂದ ನಮಗೆ “ತುಂಬ ಸಂತೋಷ” ಸಿಗುತ್ತದೆ. ತುಂಬ ವರ್ಷಗಳಿಂದ ಯೆಹೋವನ ಸೇವೆ ಮಾಡಿರುವ ಕೀರಾ ಎಂಬ ಸಹೋದರಿ ಹೇಳುವುದು: “ಲೋಕದ ಬೇರೆ ಬೇರೆ ಕಡೆ ನನಗೆ ಸ್ನೇಹಿತರಿದ್ದಾರೆ. ಅವರ ಹಿನ್ನೆಲೆ ಮತ್ತು ಸಂಸ್ಕೃತಿ ಬೇರೆ ಆಗಿದ್ದರೂ ನಾವು ಸ್ನೇಹಿತರಾಗಿದ್ದೇವೆ.” ನೀವು ಸಹ ಇವರ ತರ ಹೆಚ್ಚು ಸಹೋದರ-ಸಹೋದರಿಯರನ್ನು ಸ್ನೇಹಿತರಾಗಿ ಮಾಡಿಕೊಂಡರೆ, ಬೈಬಲ್‌ ಮತ್ತು ಪವಿತ್ರಾತ್ಮ ನಮ್ಮೆಲ್ಲರನ್ನೂ ಒಂದು ಲೋಕವ್ಯಾಪಕ ಆರಾಧಕರ ಕುಟುಂಬವಾಗಿ ಹೇಗೆ ಐಕ್ಯಗೊಳಿಸುತ್ತದೆ ಎಂದು ಸ್ವತಃ ನೋಡಲು ಸಿಗುತ್ತದೆ.

ಒಳ್ಳೇ ಗುರಿಗಳನ್ನು ಇಡಿ

14. (ಎ) ಜೀವನದಲ್ಲಿ ನೀವು ಹೇಗೆ ಒಳ್ಳೇ ಗುರಿಗಳನ್ನು ಇಡಬಹುದು? (ಬಿ) ಕೆಲವು ಯುವಜನರು ತಮ್ಮ ಗುರಿಗಳ ಬಗ್ಗೆ ಏನು ಹೇಳುತ್ತಾರೆ?

14 ಕೀರ್ತನೆ 16:8 ಓದಿ. ದಾವೀದನಿಗೆ ದೇವರ ಸೇವೆ ಮಾಡುವುದೇ ಜೀವನದಲ್ಲಿ ತುಂಬ ಮುಖ್ಯವಾಗಿತ್ತು. ನೀವೇನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ ಎಂದು ಯಾವಾಗಲೂ ಯೋಚಿಸಿ ದಾವೀದನಂತೆ ಗುರಿ ಇಡುವುದಾದರೆ ನಿಮ್ಮ ಜೀವನ ಸಂತೋಷ-ಸಂತೃಪ್ತಿಯಿಂದ ತುಂಬಿರುತ್ತದೆ. ಸ್ಟೀವನ್‌ ಎಂಬ ಸಹೋದರ ಹೇಳುವುದು: “ಒಂದು ಗುರಿ ಇಟ್ಟು ಅದನ್ನು ಮುಟ್ಟಿದ ಮೇಲೆ ನಾನು ಮಾಡಿರುವ ಪ್ರಗತಿಯನ್ನು ನೋಡುವಾಗ ನನಗೆ ತುಂಬ ಸಂತೋಷವಾಗುತ್ತದೆ.” ಜರ್ಮನಿಯಿಂದ ಬೇರೆ ದೇಶಕ್ಕೆ ಹೋಗಿ ಸೇವೆ ಮಾಡುತ್ತಿರುವ ಒಬ್ಬ ಯುವ ಸಹೋದರ ಹೇಳುವುದು: “ನನಗೆ ವಯಸ್ಸಾದ ಮೇಲೆ, ನನ್ನ ಜೀವನವನ್ನು ಹೇಗೆ ಕಳೆದೆ ಎಂದು ಹಿಂದೆ ತಿರುಗಿ ನೋಡುವಾಗ ನಾನು ಬರೀ ನನಗಾಗಿಯೇ ಜೀವಿಸಿದ್ದೇನೆ ಅಂತ ಗೊತ್ತಾದರೆ ಅದು ನನಗೆ ಇಷ್ಟವಾಗಲ್ಲ.” ನಿಮಗೂ ಇದೇ ತರ ಅನಿಸುತ್ತದಾ? ಹಾಗಾದರೆ ನಿಮ್ಮ ಶಕ್ತಿ-ಸಾಮರ್ಥ್ಯಗಳನ್ನು ಯೆಹೋವನಿಗೆ ಘನತೆ ತರಲು ಮತ್ತು ಬೇರೆಯವರಿಗೆ ಸಹಾಯ ಮಾಡಲು ಉಪಯೋಗಿಸಿ. (ಗಲಾ. 6:10) ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡುವ ಗುರಿಗಳನ್ನು ಇಡಿ ಮತ್ತು ಆ ಗುರಿಗಳನ್ನು ಮುಟ್ಟಲು ಯೆಹೋವನ ಸಹಾಯ ಕೇಳಿ. ಯೆಹೋವನು ಇಂಥ ಪ್ರಾರ್ಥನೆಗೆ ಖಂಡಿತ ಉತ್ತರ ಕೊಡುತ್ತಾನೆ.—1 ಯೋಹಾ. 3:22; 5:14, 15.

15. ನೀವು ಯಾವ ಗುರಿಗಳನ್ನು ಇಡಬಹುದು? ( “ಈ ಗುರಿಗಳನ್ನು ಇಡಬಹುದಲ್ವಾ?” ಎಂಬ ಚೌಕ ನೋಡಿ.)

15 ನೀವು ಯಾವ ಗುರಿಗಳನ್ನು ಇಡಬಹುದು? ಕೂಟಗಳಲ್ಲಿ ಸ್ವಂತ ಮಾತಲ್ಲಿ ಉತ್ತರ ಕೊಡುವ ಗುರಿ ಇಡಬಹುದು. ಪಯನೀಯರ್‌ ಸೇವೆ ಮಾಡುವ ಅಥವಾ ಬೆತೆಲ್‌ನಲ್ಲಿ ಸೇವೆ ಮಾಡುವ ಗುರಿ ಇಡಬಹುದು. ಹೊಸ ಭಾಷೆಯನ್ನು ಕಲಿಯುವ ಗುರಿಯನ್ನೂ ಇಡಬಹುದು. ಇದರಿಂದ ಹೆಚ್ಚಿನ ಜನರಿಗೆ ಸುವಾರ್ತೆ ಸಾರಲು ಸಾಧ್ಯವಾಗುತ್ತದೆ. ಪೂರ್ಣ ಸಮಯದ ಸೇವೆ ಮಾಡುತ್ತಿರುವ ಬೇರಕ್‌ ಎಂಬ ಯುವ ಸಹೋದರ ಹೇಳುವುದು: “ಪ್ರತಿ ದಿನ ಬೆಳಗ್ಗೆ ಎದ್ದಾಗ ‘ಇವತ್ತು ನಾನು ನನ್ನ ಶಕ್ತಿಯನ್ನೆಲ್ಲಾ ಯೆಹೋವನಿಗಾಗಿ ಕೊಡುತ್ತೇನೆ’ ಅಂತ ಯೋಚಿಸುವುದೇ ತುಂಬ ಖುಷಿ ಕೊಡುತ್ತೆ. ಬೇರೆ ಯಾವುದೇ ಕೆಲಸ ಮಾಡಿದರೂ ಇಂಥ ಸಂತೋಷ ಸಿಗಲ್ಲ.”

ದೇವರು ಕೊಡುವ ಸ್ವಾತಂತ್ರ್ಯವನ್ನು ಮಾನ್ಯಮಾಡಿ

16. ಯೆಹೋವನ ನಿಯಮಗಳು ಮತ್ತು ತತ್ವಗಳ ಬಗ್ಗೆ ದಾವೀದನಿಗೆ ಹೇಗನಿಸಿತು ಮತ್ತು ಯಾಕೆ?

16 ಕೀರ್ತನೆ 16:2, 4 ಓದಿ. ನಾವು ಹಿಂದಿನ ಲೇಖನದಲ್ಲಿ ಕಲಿತಂತೆ, ಯೆಹೋವ ದೇವರ ನಿಯಮಗಳು ಮತ್ತು ತತ್ವಗಳಿಗೆ ಅನುಸಾರ ಜೀವಿಸುವಾಗ ನಮಗೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಒಳ್ಳೇದನ್ನು ಪ್ರೀತಿಸಿ ಕೆಟ್ಟದ್ದನ್ನು ದ್ವೇಷಿಸಲು ಕಲಿಯುತ್ತೇವೆ. (ಆಮೋ. 5:15) ಕೀರ್ತನೆ 16:2​ನ್ನು ನೂತನ ಲೋಕ ಭಾಷಾಂತರ ಹೀಗೆ ತರ್ಜುಮೆ ಮಾಡಿದೆ: “ನೀನು ಯೆಹೋವನು, ಒಳ್ಳೇತನದ ಮೂಲನು.” ಒಳ್ಳೇತನ ಅಂದರೆ ನೈತಿಕ ಶುದ್ಧತೆ ಅಥವಾ ಒಳ್ಳೇ ನಡತೆ. ಯೆಹೋವನು ಏನೇ ಮಾಡಿದರೂ ಅದು ಒಳ್ಳೇದಾಗಿರುತ್ತೆ ಮತ್ತು ನಮ್ಮ ಹತ್ತಿರ ಒಳ್ಳೇದೇನೇ ಇದ್ದರೂ ಅದು ಯೆಹೋವನಿಂದ ಬಂದದ್ದೇ. ದಾವೀದನು ಯೆಹೋವನಿಗೆ ಇಷ್ಟವಾದ ವಿಷಯಗಳನ್ನು ತಾನೂ ಇಷ್ಟಪಡಲು ಮತ್ತು ದೇವರನ್ನು ಅನುಕರಿಸಲು ತುಂಬ ಶ್ರಮ ಹಾಕಿದನು. ಅಷ್ಟೇ ಅಲ್ಲ, ದೇವರಿಗೆ ಇಷ್ಟವಾಗದ ವಿಷಯಗಳನ್ನು ದ್ವೇಷಿಸಲು ಕಲಿತನು. ಇದರಲ್ಲಿ ಮೂರ್ತಿಪೂಜೆಯೂ ಸೇರಿದೆ. ಯೆಹೋವನನ್ನು ಬಿಟ್ಟು ಬೇರೆ ಯಾರನ್ನೇ ಆಗಲಿ, ಯಾವುದನ್ನೇ ಆಗಲಿ ಆರಾಧಿಸಿದರೆ ಅದು ಮೂರ್ತಿಪೂಜೆ ಆಗುತ್ತದೆ. ಮೂರ್ತಿಪೂಜೆ ಮಾಡಿದರೆ ಮನುಷ್ಯರು ತಮ್ಮ ಮಾನವನ್ನು ತಾವೇ ಕಳಕೊಂಡಂತೆ ಆಗುತ್ತದೆ ಮತ್ತು ಯೆಹೋವನಿಗೆ ಕೊಡಬೇಕಾದ ಗೌರವವನ್ನು ಬೇರೆ ಯಾರಿಗೋ ಅಥವಾ ಯಾವುದಕ್ಕೋ ಕೊಟ್ಟಂತೆ ಆಗುತ್ತದೆ.—ಯೆಶಾ. 2:8, 9; ಪ್ರಕ. 4:11.

17, 18. (ಎ) ಸುಳ್ಳಾರಾಧನೆ ಮಾಡುವುದರಿಂದ ಏನಾಗುತ್ತದೆ ಎಂದು ದಾವೀದನು ಹೇಳಿದನು? (ಬಿ) ಜನ ಇಂದು ‘ಬಹಳ ಕಷ್ಟನಷ್ಟಗಳನ್ನು’ ಅನುಭವಿಸಲು ಕಾರಣವೇನು?

17 ಬೈಬಲ್‌ ಕಾಲಗಳಲ್ಲಿ ಲೈಂಗಿಕ ಅನೈತಿಕತೆ ಸುಳ್ಳಾರಾಧನೆಯ ಭಾಗವಾಗಿತ್ತು. (ಹೋಶೇ. 4:13, 14) ಅನೇಕ ಜನರಿಗೆ ಸುಳ್ಳಾರಾಧನೆ ಇಷ್ಟ ಆಯಿತು, ಯಾಕೆಂದರೆ ಅವರು ಅನೈತಿಕ ದುರ್ನಡತೆಯಲ್ಲಿ ಆನಂದಿಸಬಹುದಿತ್ತು. ಆದರೆ ಇಂಥ ಆರಾಧನೆಯಿಂದ ಅವರಿಗೆ ನಿಜವಾದ ಸಂತೋಷ ಸಿಕ್ಕಿತಾ? ಖಂಡಿತ ಇಲ್ಲ. ಸುಳ್ಳು ದೇವರುಗಳನ್ನು ಆರಾಧಿಸುವವರಿಗೆ “ಬಹಳ ಕಷ್ಟನಷ್ಟಗಳು ಉಂಟಾಗುವವು” ಎಂದು ದಾವೀದ ಹೇಳಿದನು. ಇಂಥ ಜನ ಸುಳ್ಳು ದೇವರುಗಳಿಗೆ ತಮ್ಮ ಮಕ್ಕಳನ್ನೂ ಬಲಿ ಕೊಟ್ಟರು. (ಯೆಶಾ. 57:5) ಇಂಥ ಕ್ರೂರತನವನ್ನು ಯೆಹೋವನು ದ್ವೇಷಿಸಿದನು. (ಯೆರೆ. 7:31) ನೀವು ಆ ಕಾಲದಲ್ಲಿ ಜೀವಿಸಿದ್ದರೆ ಮತ್ತು ನಿಮ್ಮ ಹೆತ್ತವರು ಯೆಹೋವನ ಆರಾಧಕರಾಗಿ ಇದ್ದಿದ್ದರೆ ಅದಕ್ಕೆ ಸಂತೋಷಪಡುತ್ತಿದ್ದಿರಿ ಅಲ್ವಾ?

18 ಇಂದು ಅನೇಕ ಸುಳ್ಳು ಧರ್ಮಗಳಲ್ಲಿ ಲೈಂಗಿಕ ಅನೈತಿಕತೆಯನ್ನು ಮತ್ತು ಸಲಿಂಗಕಾಮವನ್ನು ಅನುಮತಿಸಲಾಗುತ್ತದೆ. ಅನೈತಿಕವಾಗಿ ಜೀವಿಸುವ ಜನರಿಗೆ ತಾವು ಸ್ವತಂತ್ರ ಹಕ್ಕಿಗಳಂತೆ ಇದ್ದೇವೆ ಎಂದು ಅನಿಸಬಹುದು. ಆದರೆ ನಿಜ ಏನೆಂದರೆ, ಅವರು ತಮ್ಮ ಮೇಲೆ ‘ಬಹಳ ಕಷ್ಟನಷ್ಟಗಳನ್ನು’ ತಂದುಕೊಳ್ಳುತ್ತಿದ್ದಾರೆ. (1 ಕೊರಿಂ. 6:18, 19) ನೀವಿದನ್ನು ಗಮನಿಸಿದ್ದೀರಾ? ಆದ್ದರಿಂದ ಯುವಜನರೇ, ನಿಮ್ಮ ಸ್ವರ್ಗೀಯ ತಂದೆಯಾದ ಯೆಹೋವನ ಮಾತು ಕೇಳಿ. ದೇವರ ಮಾತು ಕೇಳಿ ನಡೆಯುವುದರಿಂದ ನಿಮಗೇ ಒಳ್ಳೇದಾಗುತ್ತದೆ ಎಂಬ ದೃಢನಿಶ್ಚಯ ನಿಮಗಿರಲಿ. ಅನೈತಿಕತೆಯಿಂದ ಏನೆಲ್ಲಾ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ ಎಂದು ಯೋಚಿಸಿ ನೋಡಿ. ಸ್ವಲ್ಪ ಹೊತ್ತಿನ ಸುಖಕ್ಕಾಗಿ ಜೀವನಪೂರ್ತಿ ಕಷ್ಟಪಡುವುದರಿಂದ ಏನು ಪ್ರಯೋಜನ? (ಗಲಾ. 6:8) ನಾವು ಮುಂಚೆ ತಿಳಿಸಿದ ಜಾಶುವ ಹೀಗೆ ಹೇಳುತ್ತಾರೆ: “ನಮಗಿರುವ ಸ್ವಾತಂತ್ರ್ಯವನ್ನು ನಾವು ಹೇಗೆ ಬೇಕಾದರೂ ಉಪಯೋಗಿಸಬಹುದು. ಆದರೆ ಅದನ್ನು ದುರುಪಯೋಗಿಸುವುದರಿಂದ ಸಂತೋಷ ಸಿಗಲ್ಲ.”

19, 20. ಯೆಹೋವನಲ್ಲಿ ನಂಬಿಕೆ ಇಟ್ಟು ಆತನ ಮಾತಿನಂತೆ ನಡೆಯುವ ಯುವಜನರಿಗೆ ಯಾವ ಆಶೀರ್ವಾದಗಳು ಸಿಗುತ್ತವೆ?

19 ಯೇಸು ಹೇಳಿದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” (ಯೋಹಾ. 8:31, 32) ಇದರಿಂದಾಗಿ ನಾವು ಸುಳ್ಳು ಧರ್ಮ, ಅಜ್ಞಾನ ಮತ್ತು ಮೂಢನಂಬಿಕೆಯಿಂದ ಬಿಡುಗಡೆ ಪಡೆದಿದ್ದೇವೆ. ಮುಂದೆ ನಮಗೆ “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯ” ಸಿಗಲಿದೆ. (ರೋಮ. 8:21) ಕ್ರಿಸ್ತನ ಬೋಧನೆಗಳನ್ನು ಪಾಲಿಸುವುದಾದರೆ ಆ ಸ್ವಾತಂತ್ರ್ಯವನ್ನು ಈಗಲೇ ಸ್ವಲ್ಪಮಟ್ಟಿಗೆ ಆನಂದಿಸಬಹುದು. ಹೀಗೆ ನೀವು ಸತ್ಯದ ಕುರಿತು ಕಲಿಯುವ ಮೂಲಕ ಮಾತ್ರ ಅಲ್ಲ ಅದರ ಪ್ರಕಾರ ಜೀವಿಸುವ ಮೂಲಕವೂ “ಸತ್ಯವನ್ನು ತಿಳಿದುಕೊಳ್ಳುವಿರಿ.”

20 ಯುವಜನರೇ, ಯೆಹೋವ ದೇವರು ನಿಮಗೆ ಕೊಡುವ ಸ್ವಾತಂತ್ರ್ಯವನ್ನು ಮಾನ್ಯಮಾಡಿ. ಅದನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿ. ಇದು ನಿಮಗೆ ಒಳ್ಳೇ ತೀರ್ಮಾನಗಳನ್ನು ಮಾಡಲು ಈಗ ಸಹಾಯ ಮಾಡುತ್ತದೆ. ಒಳ್ಳೇ ತೀರ್ಮಾನಗಳನ್ನು ಮಾಡಿದರೆ ನಿಮ್ಮ ಜೀವನ ಚೆನ್ನಾಗಿರುತ್ತದೆ. ಒಬ್ಬ ಯುವ ಸಹೋದರನು ಹೇಳಿದ್ದು: “ಯುವ ಪ್ರಾಯದಲ್ಲಿ ಸ್ವಾತಂತ್ರ್ಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಲು ಕಲಿತರೆ ಜೀವನದಲ್ಲಿ ಮುಂದೆ ಬರುವ ದೊಡ್ಡ ವಿಷಯಗಳಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಸಹಾಯವಾಗುತ್ತದೆ. ದೊಡ್ಡ ವಿಷಯಗಳು ಅಂದರೆ ಸರಿಯಾದ ಕೆಲಸ ಕಂಡುಕೊಳ್ಳಲು ಇದರಿಂದ ಸಹಾಯವಾಗುತ್ತದೆ. ಮದುವೆ ಆಗಬೇಕಾ ಅಥವಾ ಸ್ವಲ್ಪ ಸಮಯ ಮದುವೆಯಾಗದೆ ಇರಬೇಕಾ ಎಂಬ ತೀರ್ಮಾನವನ್ನು ಮಾಡುವುದಕ್ಕೂ ಇದು ಸಹಾಯ ಮಾಡುತ್ತದೆ.”

 21. “ವಾಸ್ತವವಾದ ಜೀವನವನ್ನು” ಹೇಗೆ ಪಡಕೊಳ್ಳಬಹುದು?

21 ಈ ಹಳೇ ಲೋಕದಲ್ಲಿ, ಜನ ಯಾವುದನ್ನು ಐಷಾರಾಮದ ಬದುಕು ಎಂದು ಕರೆಯುತ್ತಾರೋ ಅದು ಕೂಡ ಬೇಗ ಮುಗಿದುಹೋಗುತ್ತದೆ. ನಾಳೆ ಏನಾಗುತ್ತದೆ ಅಂತ ಯಾವೊಬ್ಬ ಮಾನವನಿಗೂ ಗೊತ್ತಿಲ್ಲ. (ಯಾಕೋ. 4:13, 14) ಆದ್ದರಿಂದ “ವಾಸ್ತವವಾದ ಜೀವನವನ್ನು” ಅಂದರೆ ಹೊಸ ಲೋಕದಲ್ಲಿ ದೇವರು ಕೊಡುವ ಅನಂತ ಜೀವನವನ್ನು ಪಡೆಯಲು ಸಹಾಯ ಮಾಡುವಂಥ ಆಯ್ಕೆಗಳನ್ನು ಮಾಡುವುದೇ ಉತ್ತಮ. (1 ತಿಮೊ. 6:19) ತನ್ನ ಸೇವೆ ಮಾಡುವಂತೆ ದೇವರು ಯಾರನ್ನೂ ಒತ್ತಾಯಿಸುವುದಿಲ್ಲ. ಹಾಗಾಗಿ ಯೆಹೋವನಿಗೆ ಹತ್ತಿರವಾಗಲು ಪ್ರತಿ ದಿನ ಪ್ರಯತ್ನಿಸುವ ಮೂಲಕ ಯೆಹೋವನನ್ನು ನಿಮ್ಮ ‘ಪಾಲು’ ಮಾಡಿಕೊಳ್ಳಿ. ಆತನು ನಿಮಗೆ ಕೊಟ್ಟಿರುವ “ಎಲ್ಲವನ್ನೂ” ಮಾನ್ಯಮಾಡಿ. (1 ತಿಮೊ. 6:17) ಯೆಹೋವನು ನಿಮಗೆ ಅಪಾರ ಸಂತೋಷ ಮತ್ತು ಸಂತೃಪ್ತಿಯನ್ನು ಸದಾಕಾಲಕ್ಕೂ ಕೊಡುವನು ಅನ್ನುವುದನ್ನು ಮರೆಯದಿರಿ.—ಕೀರ್ತ. 16:11.

[ಪಾದಟಿಪ್ಪಣಿ]

^ ಪ್ಯಾರ. 1 ಈ ಕಿರುಹೊತ್ತಗೆಗಳು ಇಂಗ್ಲಿಷ್‌ ಭಾಷೆಯಲ್ಲಿವೆ.