ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಏನು ಮಾಡಿದ್ದಾನೆ?

ದೇವರು ಏನು ಮಾಡಿದ್ದಾನೆ?

ಒಬ್ಬನನ್ನು ಒಳ್ಳೇ ಪರಿಚಯ ಮಾಡಿಕೊಳ್ಳಲು, ಅವನು ಏನೆಲ್ಲಾ ಸಾಧಿಸಿದ್ದಾನೆ ಮತ್ತು ಯಾವೆಲ್ಲಾ ಕಷ್ಟಗಳನ್ನು ಜಯಿಸಿದ್ದಾನೆ ಎಂದು ತಿಳಿಯಬೇಕು. ಹಾಗೆಯೇ ದೇವರನ್ನು ಚೆನ್ನಾಗಿ ತಿಳಿಯಬೇಕೆಂದರೆ ಆತನು ಏನೆಲ್ಲಾ ಮಾಡಿದ್ದಾನೆಂದು ತಿಳಿದುಕೊಳ್ಳಬೇಕು. ಆತನು ಈಗಾಗಲೇ ತುಂಬ ವಿಷಯಗಳನ್ನು ಮಾಡಿದ್ದಾನೆ. ಅವುಗಳಿಂದ ನಮಗೆ ಈಗ ಪ್ರಯೋಜನವಾಗುತ್ತಿದೆ ಮತ್ತು ಮುಂದೆ ಸಂತೋಷಕರ ಭವಿಷ್ಯ ಸಿಗಸಾಧ್ಯವಿದೆ.

ದೇವರು ಎಲ್ಲವನ್ನು ನಮ್ಮ ಒಳಿತಿಗಾಗಿ ಸೃಷ್ಟಿಸಿದ್ದಾನೆ

ಯೆಹೋವ ದೇವರು ಮಹಾ ಸೃಷ್ಟಿಕರ್ತನು. ‘ಆತನ ಅದೃಶ್ಯ ಗುಣಗಳು ಲೋಕವು ಸೃಷ್ಟಿಯಾದಂದಿನಿಂದ ಸ್ಪಷ್ಟವಾಗಿ ಕಂಡುಬರುತ್ತವೆ. ಏಕೆಂದರೆ ಸೃಷ್ಟಿಮಾಡಲ್ಪಟ್ಟವುಗಳಿಂದ ಅವುಗಳನ್ನು ಗ್ರಹಿಸಲಾಗುತ್ತದೆ.’ (ರೋಮನ್ನರಿಗೆ 1:20) “ಆತನು ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ ತನ್ನ ವಿವೇಕದಿಂದ ಆಕಾಶಮಂಡಲವನ್ನು ಹರಡಿದ್ದಾನೆ.” (ಯೆರೆಮೀಯ 10:12) ದೇವರ ಸೃಷ್ಟಿಯಲ್ಲಿರುವ ಅದ್ಭುತಗಳಿಂದ ಆತನಿಗೆ ನಮ್ಮ ಮೇಲಿರುವ ಆಸಕ್ತಿ ಗೊತ್ತಾಗುತ್ತದೆ.

ಉದಾಹರಣೆಗೆ, ಯೆಹೋವನು ನಮ್ಮ ಜೀವನ ಬೇರೆಲ್ಲದ್ದಕ್ಕಿಂತ ವಿಶೇಷವಾಗಿರುವಂತೆ ಮಾಡಿದ್ದಾನೆ. ನಮ್ಮನ್ನು ಆತನ “ಸ್ವರೂಪದಲ್ಲಿ” ಸೃಷ್ಟಿಸಿದ್ದಾನೆ. (ಆದಿಕಾಂಡ 1:27) ಅಂದರೆ ಆತನ ವಿಶೇಷ ಗುಣಗಳನ್ನು ತೋರಿಸುವ ಸಾಮರ್ಥ್ಯದೊಂದಿಗೆ ನಮ್ಮನ್ನು ಸೃಷ್ಟಿಸಿದ್ದಾನೆ. ಆತನನ್ನು ಆರಾಧಿಸುವ, ಆತನ ಯೋಚನೆಗಳನ್ನು ಮತ್ತು ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ನಮಗೆ ಕೊಟ್ಟಿದ್ದಾನೆ. ನಾವು ಇದಕ್ಕನುಸಾರ ಜೀವಿಸುವಾಗ ಸಂತೋಷವನ್ನು ಮತ್ತು ಜೀವನಕ್ಕೆ ಅರ್ಥವನ್ನು ಕಂಡುಕೊಳ್ಳಬಹುದು. ಅದೆಲ್ಲದಕ್ಕಿಂತ ಹೆಚ್ಚಾಗಿ, ನಮ್ಮನ್ನು ಆತನೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಸೃಷ್ಟಿಸಿದ್ದಾನೆ.

ದೇವರು ಭೂಮಿಯನ್ನು ಸೃಷ್ಟಿಸಿದ ರೀತಿಯಿಂದ ಆತನಿಗೆ ನಮ್ಮ ಬಗ್ಗೆ ಎಂಥ ಭಾವನೆ ಇದೆ ಎಂದು ಗೊತ್ತಾಗುತ್ತದೆ. ಅಪೊಸ್ತಲ ಪೌಲನು ಹೇಳಿದ್ದು, ದೇವರು “ತನ್ನ ಕುರಿತು ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ಅನುಗ್ರಹಿಸಿ, ಹೇರಳವಾಗಿ ಆಹಾರವನ್ನು ಕೊಟ್ಟು ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುವ ಮೂಲಕ ಆತನು ಒಳ್ಳೇದನ್ನು ಮಾಡಿದನು.” (ಅಪೊಸ್ತಲರ ಕಾರ್ಯಗಳು 14:17) ದೇವರು, ನಾವು ಜೀವದಿಂದಿರಲು ಬೇಕಿರುವುದನ್ನು ಮಾತ್ರವಲ್ಲ, ಜೀವನವನ್ನು ಆನಂದಿಸಲು ಎಷ್ಟೋ ವಿಷಯಗಳನ್ನು ಯಥೇಚ್ಛವಾಗಿ ಕೊಟ್ಟಿದ್ದಾನೆ. ಇವು, ನಮಗೋಸ್ಕರ ದೇವರು ಏನೆಲ್ಲಾ ಮಾಡಲು ಇಷ್ಟಪಡುತ್ತಾನೆಂದು ತಿಳಿಯಲು ಸಹಾಯಮಾಡುವ ಕೆಲವೇ ಕೆಲವು ವಿಷಯಗಳು.

ಮಾನವರು ಸಾವಿಲ್ಲದೆ ಜೀವಿಸಬೇಕೆಂದು ಯೆಹೋವನು ಭೂಮಿಯನ್ನು ಸೃಷ್ಟಿಸಿದನು. ದೇವರು “ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ,” ಅದನ್ನು “ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು” ಎನ್ನುತ್ತದೆ ಬೈಬಲ್‌. (ಕೀರ್ತನೆ 115:16; ಯೆಶಾಯ 45:18) ಅದನ್ನು ಯಾರ ನಿವಾಸಕ್ಕಾಗಿ ಮತ್ತು ಎಷ್ಟು ಕಾಲಕ್ಕಾಗಿ ರೂಪಿಸಿದನು? “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎನ್ನುತ್ತದೆ ಬೈಬಲ್‌.— ಕೀರ್ತನೆ 37:29.

ಯೆಹೋವನು ಮೊದಲ ಮಾನವರಾದ ಆದಾಮ ಹವ್ವರನ್ನು ಸೃಷ್ಟಿಸಿ ಅವರಿಗಾಗಿ ಮಾಡಿದ ತೋಟವನ್ನು “ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ . . . ಇಟ್ಟನು.” (ಆದಿಕಾಂಡ 2:8, 15) ಅವರು ಎರಡು ವಿಷಯಗಳನ್ನು ಮಾಡುವಂತೆ ದೇವರು ತಿಳಿಸಿದನು. “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ” ಎಂದನು. (ಆದಿಕಾಂಡ 1:28) ಆದಾಮ ಹವ್ವರಿಗೆ ಭೂಮಿ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆ ಇತ್ತು. ಆದರೆ ಅವರು ದೇವರಿಗೆ ಅವಿಧೇಯರಾಗುವ ಆಯ್ಕೆ ಮಾಡಿದರು. ಇದರಿಂದ ಅವರು, ‘ನೀತಿವಂತರೊಂದಿಗೆ’ ‘ದೇಶವನ್ನು ಅನುಭವಿಸುವ’ ಅವಕಾಶವನ್ನು ಕಳೆದುಕೊಂಡರು. ಆದರೆ ನಾವು ಮುಂದೆ ನೋಡಲಿರುವಂತೆ, ಅವರ ನಡತೆಯಿಂದ ದೇವರು ಭೂಮಿಗಾಗಿ ಮತ್ತು ನಮಗಾಗಿ ಇಟ್ಟಿದ್ದ ಉದ್ದೇಶವನ್ನು ಬದಲಾಯಿಸಲಿಲ್ಲ. ಆದರೆ ಅದಕ್ಕೂ ಮುಂಚೆ ನಾವು, ದೇವರು ಮಾಡಿರುವ ಇನ್ನೊಂದು ವಿಷಯದ ಬಗ್ಗೆ ನೋಡೋಣ.

ದೇವರು ತನ್ನ ಲಿಖಿತ ವಾಕ್ಯವನ್ನು ಕೊಟ್ಟಿದ್ದಾನೆ

ಬೈಬಲನ್ನು ದೇವರ ವಾಕ್ಯವೆಂದೂ ಕರೆಯಲಾಗುತ್ತದೆ. ಯೆಹೋವನು ಬೈಬಲನ್ನು ನಮಗೇಕೆ ಕೊಟ್ಟಿದ್ದಾನೆ? ಮುಖ್ಯವಾಗಿ ನಾವಾತನ ಬಗ್ಗೆ ತಿಳಿದುಕೊಳ್ಳಲು. (ಜ್ಞಾನೋಕ್ತಿ 2:1-5) ಆದರೆ ದೇವರ ಕುರಿತು ನಮಗೆ ಬರಬಹುದಾದ ಎಲ್ಲಾ ಪ್ರಶ್ನೆಗಳಿಗೆ ಬೈಬಲಿನಲ್ಲಿ ಉತ್ತರವಿಲ್ಲ. ನಿಜವೇನೆಂದರೆ ಯಾವುದೇ ಪುಸ್ತಕದಲ್ಲಿ ಅವುಗಳೆಲ್ಲಕ್ಕೂ ಉತ್ತರವಿಲ್ಲ. (ಪ್ರಸಂಗಿ 3:11) ಆದರೂ ಬೈಬಲಿನಲ್ಲಿರುವ ಎಲ್ಲವೂ ನಾವು ಆತನ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಆತನು ಎಂಥವನು, ಎಂಥವರನ್ನು ಇಷ್ಟಪಡುತ್ತಾನೆ, ಎಂಥವರನ್ನು ಇಷ್ಟಪಡುವುದಿಲ್ಲ ಎಂದು ಆತನು ಜನರೊಂದಿಗೆ ನಡೆದುಕೊಂಡ ರೀತಿಯಿಂದ ತಿಳಿದುಕೊಳ್ಳುತ್ತೇವೆ. (ಕೀರ್ತನೆ 15:1-5) ಆರಾಧನೆ, ನೈತಿಕತೆ ಮತ್ತು ಭೌತಿಕ ವಸ್ತುಗಳ ಬಗ್ಗೆ ಆತನಿಗಿರುವ ಅಭಿಪ್ರಾಯವನ್ನು ಕಲಿಯುತ್ತೇವೆ. ಆತನ ಮಗನಾದ ಯೇಸು ಕ್ರಿಸ್ತನ ನಡೆ ಮತ್ತು ನುಡಿಯ ಕುರಿತು ಬೈಬಲಿನಲ್ಲಿರುವ ಮಾಹಿತಿಯಿಂದ ಯೆಹೋವ ದೇವರ ವ್ಯಕ್ತಿತ್ವದ ಬಗ್ಗೆ ಇನ್ನೂ ಹೆಚ್ಚನ್ನು ತಿಳಿದುಕೊಳ್ಳಬಹುದು.—ಯೋಹಾನ 14:9.

ಯೆಹೋವ ದೇವರು ತನ್ನ ವಾಕ್ಯವಾದ ಬೈಬಲನ್ನು ಕೊಡಲು ಇನ್ನೊಂದು ಕಾರಣವಿದೆ. ಅದು ನಾವು ಸಂತೋಷವಾಗಿ, ಅರ್ಥಭರಿತ ಜೀವನ ನಡೆಸುವುದು ಹೇಗೆಂದು ತಿಳಿದುಕೊಳ್ಳಬೇಕು ಎನ್ನುವುದೇ ಆಗಿದೆ. ನಾವು ಸಂತೋಷವಾದ ಕುಟುಂಬ ಜೀವನವನ್ನು ನಡೆಸುವುದು, ಜೀವನದಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳುವುದು, ಚಿಂತೆಗಳನ್ನು ನಿಭಾಯಿಸುವುದು ಹೇಗೆಂದು ಯೆಹೋವನು ಬೈಬಲಿನಿಂದ ಕಲಿಸುತ್ತಾನೆ. ಮುಂದೆ ಈ ಪತ್ರಿಕೆಯಲ್ಲಿ ವಿವರಿಸಿರುವಂತೆ, ಇಷ್ಟೊಂದು ಕಷ್ಟಗಳು ಏಕಿವೆ? ಭವಿಷ್ಯದಲ್ಲಿ ಏನಾಗುತ್ತದೆ? ಎಂಬಂಥ ಜೀವನದ ಅತೀ ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲ್‌ ಉತ್ತರ ನೀಡುತ್ತದೆ. ದೇವರು ತನ್ನ ಮೂಲ ಉದ್ದೇಶವನ್ನು ಪೂರೈಸಲಿಕ್ಕಾಗಿ ಏನೆಲ್ಲಾ ಮಾಡಿದ್ದಾನೆ ಎಂದೂ ಅದು ವಿವರಿಸುತ್ತದೆ.

ಬೈಬಲ್‌ ನಿಜವಾಗಿಯೂ ಅದ್ಭುತ ಪುಸ್ತಕ, ದೇವರ ಸಾಧನೆ ಎನ್ನಲು ಇನ್ನೂ ಅನೇಕ ಕಾರಣಗಳಿವೆ. ಬೈಬಲನ್ನು ಸುಮಾರು 40 ಮಂದಿ 1,600 ವರ್ಷದ ಸಮಯಾವಧಿಯಲ್ಲಿ ಬರೆದಿರುವುದಾದರೂ, ಅದರಲ್ಲಿರುವ ಮುಖ್ಯ ವಿಷಯವು ಒಂದೇ ಆಗಿದೆ. ಏಕೆಂದರೆ ಅದನ್ನು ಬರೆಯಿಸಿದವನು ದೇವರೇ. (2 ತಿಮೊಥೆಯ 3:16) ಬೇರಾವುದೇ ಹಳೆಯ ಪುಸ್ತಕಕ್ಕೆ ವ್ಯತಿರಿಕ್ತವಾಗಿ ಈ ಗ್ರಂಥವನ್ನು ಬರೆದು ಎಷ್ಟೋ ವರ್ಷಗಳಾಗಿದ್ದರೂ ಇಂದಿನವರೆಗೂ ಸಂರಕ್ಷಿಸಲ್ಪಟ್ಟಿದೆ. ಲಭ್ಯವಿರುವ ಸಾವಿರಾರು ಮೂಲ ಪ್ರತಿಗಳಿಗೆ ಹೋಲಿಸುವಾಗ ಅದರಲ್ಲಿರುವ ವಿಷಯಗಳು ಬದಲಾಗಿಲ್ಲ ಎಂದು ರುಜುವಾಗಿದೆ. ಬೈಬಲನ್ನು ಯಾರೂ ಭಾಷಾಂತರಿಸದಂತೆ, ವಿತರಿಸದಂತೆ ಮತ್ತು ಓದದಂತೆ ಅನೇಕ ಪ್ರಯತ್ನಗಳು ನಡೆದಿವೆ. ಆದರೂ ಅದು ಬೇರಾವುದೇ ಪುಸ್ತಕಕ್ಕಿಂತ ಅತಿ ಹೆಚ್ಚು ಸಂಖ್ಯೆಯಲ್ಲಿ ವಿತರಿಸಲ್ಪಟ್ಟಿದೆ ಮತ್ತು ಅತಿ ಹೆಚ್ಚು ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿದೆ. ಬೈಬಲ್‌ ಇಂದಿಗೂ ಉಳಿದಿರುವುದು ತಾನೇ “ನಮ್ಮ ದೇವರ ಮಾತೋ ಸದಾಕಾಲವೂ ಇರುವದು” ಎನ್ನುವುದಕ್ಕೆ ಪುರಾವೆಯಾಗಿದೆ.—ಯೆಶಾಯ 40:8.

ದೇವರು ತನ್ನ ಉದ್ದೇಶ ನೆರವೇರಿಸುತ್ತೇನೆಂದು ಆಶ್ವಾಸನೆ ಕೊಟ್ಟಿದ್ದಾನೆ

ತನ್ನ ಉದ್ದೇಶವನ್ನು ಪೂರೈಸುತ್ತೇನೆಂದು ಆಶ್ವಾಸನೆ ನೀಡಲು ಆತನು ಒಂದು ವಿಶೇಷ ಕೊಡುಗೆಯನ್ನು ಕೊಟ್ಟಿದ್ದಾನೆ. ಇದೇ ದೇವರು ಮಾಡಿರುವ ಇನ್ನೊಂದು ಸಾಧನೆ. ಈ ಮುಂಚೆ ನಾವು ತಿಳಿದುಕೊಂಡಂತೆ, ಮಾನವರು ಭೂಮಿಯಲ್ಲಿ ಸಾವಿಲ್ಲದೆ ಜೀವಿಸಬೇಕೆನ್ನುವುದು ದೇವರ ಆಸೆಯಾಗಿತ್ತು. ಆದರೆ ಆದಾಮನು ದೇವರ ಮಾತನ್ನು ಮೀರಿ ಪಾಪಮಾಡಿದಾಗ ಆ ಅವಕಾಶವನ್ನು ಕಳೆದುಕೊಂಡನು ಮಾತ್ರವಲ್ಲ ತನ್ನ ಮಕ್ಕಳಿಗೂ ಸಿಗದಂತೆ ಮಾಡಿದನು. “ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮನ್ನರಿಗೆ 5:12) ಮನುಷ್ಯನ ಅವಿಧೇಯತೆಯಿಂದಾಗಿ ದೇವರ ಉದ್ದೇಶವು ನಡೆಯುವುದೋ ಇಲ್ಲವೋ ಎಂಬ ಪ್ರಶ್ನೆ ಎದ್ದಿತು. ಆಗ ಯೆಹೋವನು ಏನು ಮಾಡಿದನು?

ಯೆಹೋವನು ಪ್ರತಿಕ್ರಿಯಿಸಿದ ವಿಧದಲ್ಲಿ ಆತನ ಗುಣಗಳು ಎದ್ದುಕಾಣುತ್ತವೆ. ಆತನು ನ್ಯಾಯವಾಗಿಯೇ ಆದಾಮ ಹವ್ವ ಮಾಡಿದ ಕೆಲಸಕ್ಕೆ ಶಿಕ್ಷೆಯನ್ನು ವಿಧಿಸಿದನು. ಆದರೆ ಪ್ರೀತಿಯಿಂದ ಅವರಿಗೆ ಹುಟ್ಟುವ ಮಕ್ಕಳಿಗೆ ಬೇರೆ ಏರ್ಪಾಡನ್ನು ಮಾಡಿದನು. ಆತನು ವಿವೇಕದಿಂದ, ಆ ಕಷ್ಟಕರ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ನಿರ್ಧರಿಸಿ ತಕ್ಷಣ ಪರಿಹಾರವನ್ನು ಪ್ರಕಟಿಸಿದನು. (ಆದಿಕಾಂಡ 3:15) ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ಪಾಪ ಮತ್ತು ಮರಣದಿಂದ ಬಿಡುಗಡೆ ಮಾಡುವ ಏರ್ಪಾಡುಮಾಡಿದನು. ಇದರಲ್ಲಿ ಏನೆಲ್ಲಾ ಒಳಗೂಡಿತ್ತು?

ಆದಾಮನ ಅವಿಧೇಯತೆಯ ಪರಿಣಾಮಗಳಿಂದ ಮಾನವರನ್ನು ಬಿಡಿಸಲಿಕ್ಕಾಗಿ ಯೆಹೋವನು ಯೇಸುವನ್ನು ಭೂಮಿಗೆ ಕಳುಹಿಸಿದನು. ಯೇಸು ಮಾನವರಿಗೆ, ಜೀವವನ್ನು ಕಾಪಾಡಿಕೊಳ್ಳುವ ಮಾರ್ಗವನ್ನು ಕಲಿಸಲಿಕ್ಕೂ “ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೂ ಬಂದನು.” a (ಮತ್ತಾಯ 20:28; ಯೋಹಾನ 14:6) ಯೇಸು ಆದಾಮನಂತೆ ಪರಿಪೂರ್ಣನಾಗಿದ್ದುದರಿಂದ ನಮ್ಮನ್ನು ವಿಮೋಚಿಸಲು ಸಾಧ್ಯವಾಯಿತು. ಆದರೆ ಯೇಸು ಆದಾಮನಂತಿರದೆ ಯಾವಾಗಲೂ ಅಂದರೆ ಸಾಯುವ ತನಕವೂ ಪೂರ್ಣ ವಿಧೇಯತೆ ತೋರಿಸಿದನು. ಯೇಸು ಮರಣಕ್ಕೆ ಅರ್ಹನಾಗಿರಲಿಲ್ಲ. ಆದ್ದರಿಂದ ಯೆಹೋವನು ಅವನನ್ನು ಸ್ವರ್ಗದಲ್ಲಿ ಜೀವಿಸಲಿಕ್ಕಾಗಿ ಎಬ್ಬಿಸಿದನು. ಹೀಗೆ, ಆದಾಮನು ಮಾಡಲು ತಪ್ಪಿಹೋದದ್ದನ್ನು ಯೇಸು ಮಾಡಿದನು. ಅಂದರೆ ವಿಧೇಯ ಮಾನವರಿಗೆ ಶಾಶ್ವತವಾಗಿ ಬದುಕುವ ನಿರೀಕ್ಷೆಯನ್ನು ನೀಡಿದನು. “ಒಬ್ಬ ಮನುಷ್ಯನ ಅವಿಧೇಯತೆಯಿಂದ ಅನೇಕರು ಪಾಪಿಗಳಾಗಿ ಪರಿಗಣಿಸಲ್ಪಟ್ಟಂತೆಯೇ ಒಬ್ಬ ವ್ಯಕ್ತಿಯ ವಿಧೇಯತೆಯಿಂದ ಅನೇಕರು ನೀತಿವಂತರಾಗಿ ಪರಿಗಣಿಸಲ್ಪಡುವರು.” (ರೋಮನ್ನರಿಗೆ 5:19) ಮಾನವಕುಲ ಶಾಶ್ವತವಾಗಿ ಬದುಕುತ್ತದೆ ಎಂಬ ತನ್ನ ಮಾತನ್ನು ದೇವರು, ಯೇಸು ಕೊಟ್ಟ ವಿಮೋಚನಾ ಮೌಲ್ಯದ ಆಧಾರದಲ್ಲಿ ನೆರವೇರಿಸುತ್ತಾನೆ.

ಆದಾಮನ ಅವಿಧೇಯತೆಯಿಂದ ಸಮಸ್ಯೆಗಳಾದಾಗ ಯೆಹೋವನು ನಡೆದುಕೊಂಡ ರೀತಿಯಿಂದ ನಾವು ಆತನ ಬಗ್ಗೆ ಅನೇಕ ವಿಷಯಗಳನ್ನು ಕಲಿಯಬಹುದು. ಯೆಹೋವನು ಕೈಗೆತ್ತಿಕೊಂಡ ಕೆಲಸವನ್ನು ಅದೇನೇ ಆದರೂ ಮಾಡಿ ಮುಗಿಸುತ್ತಾನೆ. ಆತನ ಮಾತು ಖಂಡಿತ ‘ಕೈಗೂಡುತ್ತದೆ.’ (ಯೆಶಾಯ 55:11) ಯೆಹೋವನು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆಂದು ಸಹ ಇದರಿಂದ ಕಲಿಯಬಹುದು. “ನಾವು ದೇವರ ಏಕೈಕಜಾತ ಪುತ್ರನ ಮೂಲಕ ಜೀವವನ್ನು ಪಡೆದುಕೊಳ್ಳಸಾಧ್ಯವಾಗುವಂತೆ ಆತನು ಅವನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಿಂದ ದೇವರ ಪ್ರೀತಿಯು ನಮ್ಮ ವಿಷಯದಲ್ಲಿ ಪ್ರಕಟವಾಯಿತು. ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಆತನು ನಮ್ಮನ್ನು ಪ್ರೀತಿಸಿ ತನ್ನ ಮಗನನ್ನು ನಮ್ಮ ಪಾಪಗಳಿಗಾಗಿ ಪಾಪನಿವಾರಣಾರ್ಥಕ ಯಜ್ಞವಾಗಿ ಕಳುಹಿಸಿಕೊಟ್ಟದ್ದರಲ್ಲಿ ಪ್ರೀತಿ ಏನೆಂಬುದು ತೋರಿಬಂತು.”—1 ಯೋಹಾನ 4:9, 10.

ದೇವರು ‘ಸ್ವಂತ ಮಗನನ್ನೇ ಉಳಿಸಿಕೊಳ್ಳದೆ ಅವನನ್ನು ನಮಗೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನು.’ ಆದ್ದರಿಂದ ಆತನು ನಮಗೆ ಕೊಡುತ್ತೇನೆಂದ ‘ಎಲ್ಲ ವಿಷಯಗಳನ್ನು ದಯಪಾಲಿಸುತ್ತಾನೆ’ ಎಂದು ನಾವು ಭರವಸೆ ಇಡಬಲ್ಲೆವು. (ರೋಮನ್ನರಿಗೆ 8:32) ದೇವರು ನಮಗಾಗಿ ಏನು ಮಾಡುತ್ತೇನೆಂದು ಹೇಳಿದ್ದಾನೆ? ಇದನ್ನು ತಿಳಿಯಲು ಮುಂದೆ ಓದಿ.

ದೇವರು ಏನು ಮಾಡಿದ್ದಾನೆ? ದೇವರು ಮಾನವರನ್ನು ಭೂಮಿಯಲ್ಲಿ ಶಾಶ್ವತವಾಗಿ ಬದುಕಬೇಕೆಂದು ಸೃಷ್ಟಿಸಿದನು. ನಾವು ಆತನ ಬಗ್ಗೆ ಕಲಿಯಬೇಕೆಂದು ಬೈಬಲ್‌ ಕೊಟ್ಟನು. ತನ್ನ ಮೂಲ ಉದ್ದೇಶವನ್ನು ಪೂರೈಸಲಿಕ್ಕಾಗಿ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ಪಾಪ ಮತ್ತು ಮರಣದಿಂದ ವಿಮೋಚಿಸಿದನು.

a ವಿಮೋಚನಾ ಮೌಲ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ ಪಾಠ 27 ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. www.pr418.com.ನಲೂ ಲಭ್ಯ.