ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 8

ಮೆಚ್ಚುಗೆ ಮನಸ್ಸಲ್ಲಿದ್ದರೆ ಸಾಲದು, ತೋರಿಸಬೇಕು

ಮೆಚ್ಚುಗೆ ಮನಸ್ಸಲ್ಲಿದ್ದರೆ ಸಾಲದು, ತೋರಿಸಬೇಕು

“ನೀವು ಕೃತಜ್ಞತಾಭಾವದವರೆಂದು ತೋರಿಸಿ.”ಕೊಲೊ. 3:15.

ಗೀತೆ 2 ಯೆಹೋವನೇ, ನಿನಗೆ ಕೃತಜ್ಞರು

ಕಿರುನೋಟ *

1. ಯೇಸು ವಾಸಿಮಾಡಿದ ಒಬ್ಬ ಸಮಾರ್ಯದವನು ಹೇಗೆ ಕೃತಜ್ಞತೆ ತೋರಿಸಿದನು?

ಹತ್ತು ಕುಷ್ಠರೋಗಿಗಳು. ಅವರ ಪರಿಸ್ಥಿತಿ ತುಂಬ ಹೀನಾಯವಾಗಿತ್ತು. ಭವಿಷ್ಯ ಕರಾಳವಾಗಿತ್ತು. ಆದರೆ ಒಂದು ದಿನ ಸ್ವಲ್ಪ ದೂರದಲ್ಲಿ ಮಹಾ ಬೋಧಕ ಎಂದು ಹೆಸರುವಾಸಿಯಾಗಿದ್ದ ಯೇಸು ಬರುತ್ತಾ ಇರುವುದನ್ನು ನೋಡಿದರು. ಯೇಸು ಎಲ್ಲಾ ರೀತಿಯ ರೋಗಗಳನ್ನು ವಾಸಿಮಾಡುತ್ತಾನೆ ಎಂದು ಅವರು ಬೇರೆಯವರಿಂದ ಕೇಳಿಸಿಕೊಂಡಿದ್ದರು. ಅದೇ ರೀತಿ ತಮ್ಮನ್ನೂ ವಾಸಿಮಾಡುತ್ತಾನೆ ಎಂದು ನಂಬಿದರು. ಆದ್ದರಿಂದ ಅವರು “ಯೇಸುವೇ, ಉಪದೇಶಕನೇ, ನಮಗೆ ಕರುಣೆ ತೋರಿಸು” ಎಂದು ಕೂಗಿ ಹೇಳಿದರು. ಯೇಸು ಹತ್ತು ಮಂದಿಯನ್ನೂ ಸಂಪೂರ್ಣವಾಗಿ ವಾಸಿಮಾಡಿದನು. ಯೇಸು ತೋರಿಸಿದ ದಯೆಯಿಂದಾಗಿ ತಾವು ವಾಸಿಯಾಗಿದ್ದೇವೆ, ಹಾಗಾಗಿ ಆತನಿಗೆ ಧನ್ಯವಾದ ಹೇಳಬೇಕೆಂದು ಅವರೆಲ್ಲರಿಗೂ ಖಂಡಿತ ಅನಿಸಿರಬೇಕು. ಆದರೆ ಅವರಲ್ಲಿ ಒಬ್ಬನು ಮಾತ್ರ ಧನ್ಯವಾದ ಹೇಳಲು ಯೇಸುವನ್ನು ಹುಡುಕಿಕೊಂಡು ಬಂದು ತನ್ನ ಮೆಚ್ಚುಗೆಯನ್ನು * ತೋರಿಸಿದನು. ಅವನು ಸಮಾರ್ಯದವನಾಗಿದ್ದನು. ದೇವರನ್ನು “ಗಟ್ಟಿಯಾದ ಸ್ವರದಿಂದ” ಮಹಿಮೆಪಡಿಸಿದನು.—ಲೂಕ 17:12-19.

2-3. (ಎ) ನಾವು ಕೃತಜ್ಞತೆ ಹೇಳಲು ಯಾವಾಗ ಮರೆತುಹೋಗಬಹುದು? (ಬಿ) ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

2 ಆ ಸಮಾರ್ಯದವನಂತೆ ನಾವು ಕೂಡ ನಮಗೆ ದಯೆ ತೋರಿಸುವವರಿಗೆ ಕೃತಜ್ಞತೆ ಹೇಳಲು ಬಯಸುತ್ತೇವೆ. ಆದರೆ ಕೆಲವೊಮ್ಮೆ ನಮಗೆ ದಯೆ ತೋರಿಸಿದವರಿಗೆ ಧನ್ಯವಾದ ಹೇಳಲು ಮರೆತುಹೋಗುತ್ತೇವೆ.

3 ಈ ಲೇಖನದಲ್ಲಿ, ನಾವು ನಮ್ಮ ಮಾತು ಮತ್ತು ಕ್ರಿಯೆಯಲ್ಲಿ ಮೆಚ್ಚುಗೆಯನ್ನು ಹೇಗೆ ತೋರಿಸಬಹುದು ಎಂದು ಚರ್ಚಿಸೋಣ. ಕೃತಜ್ಞತೆ ತೋರಿಸಿದ ಮತ್ತು ತೋರಿಸದ ಕೆಲವು ವ್ಯಕ್ತಿಗಳ ಬಗ್ಗೆ ಬೈಬಲಿಂದ ತಿಳುಕೊಳ್ಳೋಣ. ಆಮೇಲೆ ನಾವು ಹೇಗೆ ಮೆಚ್ಚುಗೆ ತೋರಿಸಬಹುದು ಎಂದು ಚರ್ಚೆ ಮಾಡೋಣ.

ನಾವು ಯಾಕೆ ಮೆಚ್ಚುಗೆ ತೋರಿಸಬೇಕು?

4-5. ನಾವು ಯಾಕೆ ಮೆಚ್ಚುಗೆ ತೋರಿಸಬೇಕು?

4 ಮೆಚ್ಚುಗೆ ತೋರಿಸುವುದರಲ್ಲಿ ಯೆಹೋವನದೇ ಎತ್ತಿದ ಕೈ. ಆತನ ಮನಸ್ಸಿಗೆ ಸಂತೋಷವಾಗುವ ರೀತಿಯಲ್ಲಿ ನಡಕೊಳ್ಳುವವರನ್ನು ಆಶೀರ್ವದಿಸುವ ಮೂಲಕ ತನ್ನ ಮೆಚ್ಚುಗೆಯನ್ನು ತೋರಿಸುತ್ತಾನೆ. (2 ಸಮು. 22:21; ಕೀರ್ತ. 13:6; ಮತ್ತಾ. 10:40, 41) ನಾವು ‘ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸಬೇಕೆಂದು’ ಬೈಬಲ್‌ ಹೇಳುತ್ತದೆ. (ಎಫೆ. 5:1) ಆದ್ದರಿಂದ ನಾವು ಮೆಚ್ಚುಗೆ ತೋರಿಸುವ ವಿಷಯದಲ್ಲಿ ಯೆಹೋವನನ್ನು ಅನುಕರಿಸಬೇಕು. ಮೆಚ್ಚುಗೆ ತೋರಿಸಲು ಇದು ಒಂದು ಪ್ರಾಮುಖ್ಯ ಕಾರಣ.

5 ನಾವು ಬೇರೆಯವರನ್ನು ಯಾಕೆ ಮೆಚ್ಚಬೇಕು ಅನ್ನುವುದಕ್ಕೆ ಇನ್ನೊಂದು ಕಾರಣ ಏನೆಂದು ನೋಡಿ. ಮೆಚ್ಚುಗೆ ಅನ್ನುವುದು ಒಂದು ಒಳ್ಳೇ ಊಟದಂತೆ ಇದೆ. ಊಟವನ್ನು ಬೇರೆಯವರೊಟ್ಟಿಗೆ ಸೇರಿ ಹಂಚಿಕೊಂಡು ತಿಂದಾಗ ತುಂಬ ಖುಷಿಯಾಗುತ್ತದೆ. ಅದೇ ರೀತಿ ಮೆಚ್ಚುಗೆಯನ್ನು ಒಬ್ಬರಿಗೊಬ್ಬರು ತೋರಿಸಿದಾಗ ಖುಷಿಯಾಗುತ್ತದೆ. ಬೇರೆಯವರು ನಮಗೆ ಸಹಾಯ ಮಾಡಿದಾಗ ಅಥವಾ ನಮಗೆ ಬೇಕಾದದ್ದನ್ನು ಕೊಟ್ಟಾಗ ನಾವು ಕೃತಜ್ಞತೆ ತೋರಿಸಿದರೆ ತಾವು ಸಹಾಯ ಮಾಡಿದ್ದು ಸಾರ್ಥಕ ಆಯಿತು ಎಂದು ಅವರಿಗೆ ಅನಿಸುತ್ತದೆ. ಇದರಿಂದ ಸಹಾಯ ಮಾಡಿದವರು ಮತ್ತು ಸಹಾಯ ಪಡೆದವರು ಒಳ್ಳೇ ಸ್ನೇಹಿತರಾಗುತ್ತಾರೆ.

6. ಮೆಚ್ಚುಗೆಯ ಮಾತುಗಳು ಮತ್ತು ಬಂಗಾರದ ಹಣ್ಣುಗಳ ಮಧ್ಯೆ ಇರುವ ಕೆಲವು ಹೋಲಿಕೆಗಳು ಏನು?

6 ನಾವು ಮೆಚ್ಚುಗೆ ತೋರಿಸಲು ಹೇಳುವ ಮಾತುಗಳಿಗೆ ತುಂಬ ಬೆಲೆ ಇದೆ. “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 25:11) ಬೆಳ್ಳಿಯ ಕೆತ್ತನೆಯಲ್ಲಿ ಬಂಗಾರದ ಹಣ್ಣುಗಳನ್ನು ಸೇರಿಸಿದರೆ ಅದು ಎಷ್ಟು ಚೆನ್ನಾಗಿ ಕಾಣುತ್ತೆ ಅಂತ ಯೋಚಿಸಿ. ಅದರ ಬೆಲೆ ಎಷ್ಟಿರಬಹುದು! ನಿಮಗೆ ಯಾರಾದರೂ ಇಂಥ ಉಡುಗೊರೆ ಕೊಟ್ಟರೆ ನಿಮಗೆ ಹೇಗನಿಸುತ್ತದೆ? ನೀವು ಬೇರೆಯವರಿಗೆ ಹೇಳುವ ಮೆಚ್ಚುಗೆಯ ಮಾತುಗಳಿಗೆ ಅಷ್ಟೇ ಬೆಲೆ ಇದೆ. ಇನ್ನೊಂದು ಹೋಲಿಕೆನೂ ಇದೆ. ಬಂಗಾರದ ಹಣ್ಣುಗಳು ತುಂಬ ವರ್ಷ ಇರುತ್ತವೆ. ಅದೇ ರೀತಿ ನೀವು ಒಬ್ಬರಿಗೆ ಹೇಳಿದ ಮೆಚ್ಚುಗೆಯ ಮಾತುಗಳನ್ನು ಅವರು ಜೀವನಪೂರ್ತಿ ಮರೆಯಲಿಕ್ಕಿಲ್ಲ.

ಮೆಚ್ಚುಗೆ ತೋರಿಸಿದವರು

7. ಕೀರ್ತನೆ 27:4 ರಲ್ಲಿರುವ ಪ್ರಕಾರ, ದಾವೀದ ಮತ್ತು ಕೀರ್ತನೆಗಳನ್ನು ಬರೆದ ಬೇರೆ ಲೇಖಕರು ತಮ್ಮ ಮೆಚ್ಚುಗೆಯನ್ನು ಹೇಗೆ ವ್ಯಕ್ತಪಡಿಸಿದರು?

7 ಹಿಂದಿನ ಕಾಲದಲ್ಲಿದ್ದ ದೇವರ ಅನೇಕ ಸೇವಕರು ಮೆಚ್ಚುಗೆ ತೋರಿಸಿದರು. ಇವರಲ್ಲಿ ಒಬ್ಬನು ದಾವೀದ. (ಕೀರ್ತನೆ 27:4 ಓದಿ.) ಆತನಿಗೆ ಸತ್ಯಾರಾಧನೆ ಅಂದರೆ ಪಂಚಪ್ರಾಣ. ಅದರ ಕಡೆಗೆ ತನಗಿರುವ ಮೆಚ್ಚುಗೆಯನ್ನು ತೋರಿಸಲಿಕ್ಕಾಗಿ ಆತನು ತನ್ನ ಆಸ್ತಿಯಲ್ಲಿ ಸಿಂಹಪಾಲನ್ನು ದೇವಾಲಯದ ನಿರ್ಮಾಣಕ್ಕೆ ಕೊಟ್ಟನು. ಆಸಾಫನ ವಂಶದವರು ಕೀರ್ತನೆಗಳನ್ನು ಅಥವಾ ಸ್ತುತಿಗೀತೆಗಳನ್ನು ಬರೆಯುವ ಮೂಲಕ ತಮ್ಮ ಮೆಚ್ಚುಗೆಯನ್ನು ತೋರಿಸಿದರು. ಅವರು ಬರೆದ ಒಂದು ಗೀತೆಯಲ್ಲಿ ದೇವರಿಗೆ ಕೃತಜ್ಞತೆ ಹೇಳಿದರು ಮತ್ತು ಯೆಹೋವನ “ಮಹತ್ಕಾರ್ಯಗಳ” ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಬರೆದರು. (ಕೀರ್ತ. 75:1) ದಾವೀದ ಮತ್ತು ಆಸಾಫನ ವಂಶದವರು ಯೆಹೋವನಿಂದ ಪಡೆದ ಎಲ್ಲಾ ಆಶೀರ್ವಾದಗಳನ್ನು ತುಂಬ ಮೆಚ್ಚುತ್ತೇವೆ ಎಂದು ತೋರಿಸಲು ಬಯಸಿದರು ಎಂದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ನೀವು ಈ ಕೀರ್ತನೆಗಾರರನ್ನು ಹೇಗೆ ಅನುಕರಿಸಬಹುದು?

ಮೆಚ್ಚುಗೆ ತೋರಿಸುವುದರ ಬಗ್ಗೆ ಪೌಲನು ರೋಮನ್ನರಿಗೆ ಬರೆದ ಪತ್ರದಿಂದ ನಾವೇನು ಕಲಿಯಬಹುದು? (ಪ್ಯಾರ 8-9 ನೋಡಿ) *

8-9. (ಎ) ಪೌಲನು ತನ್ನ ಸಹೋದರ-ಸಹೋದರಿಯರಿಗೆ ಹೇಗೆ ಮೆಚ್ಚುಗೆಯನ್ನು ತೋರಿಸಿದನು? (ಬಿ) ಇದರಿಂದ ಅವರ ಮಧ್ಯೆ ಇದ್ದ ಸಂಬಂಧ ಏನಾಯಿತು?

8 ಅಪೊಸ್ತಲ ಪೌಲನು ಸಹೋದರ-ಸಹೋದರಿಯರನ್ನು ತುಂಬ ಮೆಚ್ಚಿದನು. ಇದು ಅವರ ಬಗ್ಗೆ ಆತನು ಮಾತಾಡಿದಾಗ ಗೊತ್ತಾಗುತ್ತಿತ್ತು. ಇಂಥ ಸ್ನೇಹಿತರನ್ನು ಕೊಟ್ಟಿದ್ದಕ್ಕೆ ತನ್ನ ವೈಯಕ್ತಿಕ ಪ್ರಾರ್ಥನೆಯಲ್ಲಿ ಆತನು ದೇವರಿಗೆ ಯಾವಾಗಲೂ ಧನ್ಯವಾದ ಹೇಳುತ್ತಿದ್ದನು. ಅವರಿಗೆ ಪತ್ರ ಬರೆದಾಗಲೂ ಅದರಲ್ಲಿ ತನ್ನ ಮೆಚ್ಚುಗೆಯ ಮಾತುಗಳನ್ನು ಸೇರಿಸುತ್ತಿದ್ದನು. ರೋಮನ್ನರಿಗೆ 16 ನೇ ಅಧ್ಯಾಯದ ಮೊದಲ 15 ವಚನಗಳಲ್ಲಿ ಆತನು 27 ಸಹೋದರ-ಸಹೋದರಿಯರ ಹೆಸರನ್ನು ಹೇಳಿದ್ದಾನೆ. ಬರೀ ಹೆಸರುಗಳನ್ನು ಹೇಳಿದ್ದಷ್ಟೇ ಅಲ್ಲ ಅವರಲ್ಲಿ ಕೆಲವರು ಮಾಡಿದ ಒಳ್ಳೇ ವಿಷಯಗಳ ಬಗ್ಗೆಯೂ ತಿಳಿಸಿದನು. ಉದಾಹರಣೆಗೆ, ಅಕ್ವಿಲ ಮತ್ತು ಪ್ರಿಸ್ಕ ಬಗ್ಗೆ ಬರೆಯುವಾಗ ಅವರು ಆತನ “ಪ್ರಾಣವನ್ನು ಉಳಿಸುವುದಕ್ಕಾಗಿ ತಮ್ಮನ್ನೇ ಅಪಾಯಕ್ಕೊಡ್ಡಿದರು” ಎಂದು ಹೇಳಿದನು. ಫೊಯಿಬೆ ಪೌಲನನ್ನು ಸೇರಿಸಿ ‘ಅನೇಕರಿಗೆ ಸಂರಕ್ಷಕಳಾಗಿ’ ಇದ್ದಳು ಎಂದು ಬರೆದನು. ಕಷ್ಟಪಟ್ಟು ದುಡಿಯುವ ಈ ಪ್ರೀತಿಯ ಸಹೋದರ-ಸಹೋದರಿಯರನ್ನು ಪೌಲ ಶ್ಲಾಘಿಸಿದನು.—ರೋಮ. 16:1-15.

9 ತನ್ನ ಸಹೋದರ-ಸಹೋದರಿಯರು ಅಪರಿಪೂರ್ಣರು ಎಂದು ಪೌಲನಿಗೆ ಗೊತ್ತಿತ್ತು. ಆದರೆ ರೋಮನ್ನರಿಗೆ ಬರೆದ ತನ್ನ ಪತ್ರದ ಕೊನೆಯಲ್ಲಿ ಆತನು ಅವರಲ್ಲಿದ್ದ ಒಳ್ಳೇ ಗುಣಗಳ ಕಡೆ ಗಮನ ಕೊಡಲು ಇಷ್ಟಪಟ್ಟನು. ಪೌಲನ ಪತ್ರವನ್ನು ಸಭೆಯ ಮುಂದೆ ಓದಿದಾಗ ಆ ಸಹೋದರ-ಸಹೋದರಿಯರಿಗೆ ಎಷ್ಟು ಸಂತೋಷವಾಗಿರಬೇಕೆಂದು ಸ್ವಲ್ಪ ಯೋಚಿಸಿ. ಇದರಿಂದ ಪೌಲನ ಜೊತೆ ಅವರಿಗಿದ್ದ ಸ್ನೇಹಸಂಬಂಧ ಬಲವಾಗಿರಬೇಕು. ನಿಮ್ಮ ಸಭೆಯಲ್ಲಿರುವವರು ಹೇಳುವ ಅಥವಾ ಮಾಡುವ ಒಳ್ಳೇ ವಿಷಯಗಳಿಗಾಗಿ ನೀವು ಅವರನ್ನು ಯಾವಾಗಲೂ ಶ್ಲಾಘಿಸುತ್ತೀರಾ?

10. ಯೇಸು ತನ್ನ ಹಿಂಬಾಲಕರಿಗೆ ಮೆಚ್ಚುಗೆ ತೋರಿಸಿದ್ದರಲ್ಲಿ ನಮಗೇನು ಪಾಠ?

10 ಏಷ್ಯಾ ಮೈನರ್‌ನಲ್ಲಿದ್ದ ಕೆಲವು ಸಭೆಗಳಿಗೆ ತನ್ನ ಸಂದೇಶಗಳನ್ನು ತಿಳಿಸಿದಾಗ ಯೇಸು ತನ್ನ ಹಿಂಬಾಲಕರು ಮಾಡುತ್ತಿದ್ದ ಕೆಲಸಕ್ಕಾಗಿ ಅವರನ್ನು ಶ್ಲಾಘಿಸಿದನು. ಉದಾಹರಣೆಗೆ, ಥುವತೈರದಲ್ಲಿದ್ದ ಸಭೆಗೆ ತಿಳಿಸಿದ ಸಂದೇಶದ ಆರಂಭದಲ್ಲಿ ಹೀಗಿತ್ತು: “ನಾನು ನಿನ್ನ ಕ್ರಿಯೆಗಳನ್ನೂ ನಿನ್ನ ಪ್ರೀತಿಯನ್ನೂ ನಂಬಿಕೆಯನ್ನೂ ಶುಶ್ರೂಷೆಯನ್ನೂ ತಾಳ್ಮೆಯನ್ನೂ ಬಲ್ಲೆನು; ನಿನ್ನ ಇತ್ತೀಚಿಗಿನ ಕ್ರಿಯೆಗಳು ಹಿಂದಿನ ಕ್ರಿಯೆಗಳಿಗಿಂತ ಹೆಚ್ಚಾದವುಗಳಾಗಿವೆ.” (ಪ್ರಕ. 2:19) ಅವರು ತಮ್ಮ ಸೇವೆಯನ್ನು ಹೆಚ್ಚಿಸಿರುವುದರ ಬಗ್ಗೆ ಯೇಸು ಮಾತಾಡಿದ್ದು ಮಾತ್ರವಲ್ಲ ಇದನ್ನು ಮಾಡಲು ಅವರನ್ನು ಪ್ರಚೋದಿಸಿದ ಒಳ್ಳೇ ಗುಣಗಳನ್ನು ಸಹ ಮೆಚ್ಚಿದನು. ಥುವತೈರ ಸಭೆಯಲ್ಲಿದ್ದ ಕೆಲವರಿಗೆ ಬುದ್ಧಿವಾದ ಹೇಳಬೇಕಾಗಿದ್ದರೂ ಆತನು ತನ್ನ ಸಂದೇಶದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಪ್ರೋತ್ಸಾಹದ ಮಾತುಗಳನ್ನು ಸೇರಿಸಿದನು. (ಪ್ರಕ. 2:25-28) ಎಲ್ಲ ಸಭೆಗಳ ಶಿರಸ್ಸಾಗಿರುವ ಯೇಸುವಿಗೆ ಎಷ್ಟೊಂದು ಅಧಿಕಾರ ಇದೆ ಎಂದು ಯೋಚಿಸಿ. ನಾವು ಮಾಡುವ ಸೇವೆಗಾಗಿ ಆತನು ನಮಗೆ ಧನ್ಯವಾದ ಹೇಳಬೇಕಾಗಿಲ್ಲ. ಆದರೂ ಆತನು ತನ್ನ ಮೆಚ್ಚುಗೆಯನ್ನು ತೋರಿಸುತ್ತಾನೆ. ಹಿರಿಯರಿಗೆ ಆತನು ಎಂಥ ಉತ್ತಮ ಮಾದರಿ ಇಟ್ಟಿದ್ದಾನೆ!

ಮೆಚ್ಚುಗೆ ತೋರಿಸದವರು

11. ಇಬ್ರಿಯ 12:16 ತೋರಿಸುವಂತೆ, ಪವಿತ್ರ ವಿಷಯಗಳ ಬಗ್ಗೆ ಏಸಾವನಿಗೆ ಯಾವ ಮನೋಭಾವ ಇತ್ತು?

11 ದುಃಖಕರವಾಗಿ ಬೈಬಲಲ್ಲಿರುವ ಕೆಲವು ವ್ಯಕ್ತಿಗಳು ಮೆಚ್ಚುಗೆ ತೋರಿಸಲು ತಪ್ಪಿಹೋದರು. ಏಸಾವನ ಉದಾಹರಣೆ ನೋಡಿ. ಯೆಹೋವನ ಮೇಲೆ ಪ್ರೀತಿ-ಗೌರವ ಇದ್ದ ಇಸಾಕ ಮತ್ತು ರೆಬೆಕ್ಕ ಅವನನ್ನು ಬೆಳೆಸಿದ್ದರೂ ಏಸಾವನಿಗೆ ಪವಿತ್ರ ವಿಷಯಗಳ ಮೇಲೆ ಮೆಚ್ಚುಗೆ ಇರಲಿಲ್ಲ. (ಇಬ್ರಿಯ 12:16 ಓದಿ.) ಈ ವಿಷಯ ಹೇಗೆ ಬೆಳಕಿಗೆ ಬಂತು? ಬರೀ ಒಂದು ಹೊತ್ತು ಊಟಕ್ಕಾಗಿ ಅವನು ಚೊಚ್ಚಲತನದ ಹಕ್ಕನ್ನು ತನ್ನ ತಮ್ಮನಾದ ಯಾಕೋಬನಿಗೆ ಮಾರಿಬಿಟ್ಟನು. (ಆದಿ. 25:30-34) ಆಮೇಲೆ ಇದನ್ನು ನೆನಸಿ ಏಸಾವ ತುಂಬ ವಿಷಾದಪಟ್ಟನು. ಅದನ್ನು ಕೊಟ್ಟುಬಿಟ್ಟ ಮೇಲೆ ಅದರ ಬಗ್ಗೆ ವಿಷಾದಪಟ್ಟು ಪ್ರಯೋಜನ ಇರಲಿಲ್ಲ. ಯಾಕೆಂದರೆ ತನ್ನ ಹತ್ತಿರ ಏನಿತ್ತೋ ಅದರ ಮೌಲ್ಯ ಅವನಿಗೆ ಗೊತ್ತಿರಲಿಲ್ಲ.

12-13. (ಎ) ಇಸ್ರಾಯೇಲ್ಯರಲ್ಲಿ ಮೆಚ್ಚುಗೆಯ ಕೊರತೆ ಇತ್ತೆಂದು ಹೇಗೆ ಗೊತ್ತಾಗುತ್ತದೆ? (ಬಿ) ಅದರ ಪರಿಣಾಮ ಏನಾಯಿತು?

12 ಇಸ್ರಾಯೇಲ್ಯರ ವಿಷಯ ನೋಡೋಣ. ಕೃತಜ್ಞತೆ ತೋರಿಸಲು ಅವರಿಗೆ ಎಷ್ಟೋ ಕಾರಣಗಳಿತ್ತು. ಯೆಹೋವನು ಐಗುಪ್ತದ ಮೇಲೆ ಹತ್ತು ಬಾಧೆಗಳನ್ನು ತಂದ ಮೇಲೆ ಇಸ್ರಾಯೇಲ್ಯರು ದಾಸತ್ವದಿಂದ ಬಿಡುಗಡೆ ಪಡೆದರು. ನಂತರ ಯೆಹೋವನು ಕೆಂಪು ಸಮುದ್ರದಲ್ಲಿ ಐಗುಪ್ತದ ಸೈನ್ಯವನ್ನು ನಾಶಮಾಡುವ ಮೂಲಕ ಪುನಃ ಇಸ್ರಾಯೇಲ್ಯರನ್ನು ಗಂಡಾಂತರದಿಂದ ತಪ್ಪಿಸಿದನು. ಅವರ ಮನಸ್ಸಲ್ಲಿ ಯೆಹೋವನ ಮೇಲೆ ಎಷ್ಟೊಂದು ಕೃತಜ್ಞತೆ ಉಕ್ಕಿಬಂತೆಂದರೆ ಅವರು ಆತನನ್ನು ಸ್ತುತಿಸುತ್ತಾ ಒಂದು ವಿಜಯ ಗೀತೆಯನ್ನೇ ಹಾಡಿದರು. ಆದರೆ ಅವರಲ್ಲಿ ಈ ಕೃತಜ್ಞತಾಭಾವ ಹೀಗೇ ಉಳಿಯಿತಾ?

13 ಇಲ್ಲ. ಹೊಸ ಸವಾಲುಗಳು ಎದುರಾದಾಗ ಯೆಹೋವನು ಅವರಿಗಾಗಿ ಮಾಡಿದ್ದ ಎಲ್ಲಾ ಒಳ್ಳೇ ವಿಷಯಗಳನ್ನು ಅವರು ಬೇಗ ಮರೆತುಬಿಟ್ಟರು. ಇದು ಅವರಲ್ಲಿದ್ದ ಮೆಚ್ಚುಗೆಯ ಕೊರತೆಯನ್ನು ತೋರಿಸುತ್ತದೆ. (ಕೀರ್ತ. 106:7) ಹೇಗೆ? ‘ಇಸ್ರಾಯೇಲ್ಯರ ಸಮೂಹವೆಲ್ಲಾ ಮೋಶೆ ಆರೋನರ ಮೇಲೆ ಗುಣುಗುಟ್ಟಿದರು.’ ಇದು ಯೆಹೋವನ ವಿರುದ್ಧವೇ ಗುಣುಗುಟ್ಟಿದಂತೆ ಇತ್ತು. (ವಿಮೋ. 16:2, 3, 8) ತನ್ನ ಜನರಲ್ಲಿದ್ದ ಮೆಚ್ಚುಗೆಯ ಕೊರತೆಯನ್ನು ನೋಡಿ ಯೆಹೋವನು ನೊಂದುಕೊಂಡನು. ಯೆಹೋಶುವ ಮತ್ತು ಕಾಲೇಬ ಬಿಟ್ಟು ಐಗುಪ್ತದಿಂದ ಹೊರಟುಬಂದ ಅವರ ಸಮಕಾಲೀನರೆಲ್ಲಾ ಅರಣ್ಯದಲ್ಲೇ ಸತ್ತುಬೀಳುವರು ಎಂದು ನಂತರ ಪ್ರವಾದನೆ ಹೇಳಿದನು. (ಅರ. 14:22-24; 26:65) ನಾವು ಇವರ ತರ ಆಗದೆ ಮೆಚ್ಚುಗೆ ತೋರಿಸಿದವರ ಉದಾಹರಣೆಯನ್ನು ಹೇಗೆ ಅನುಕರಿಸೋಣ ಎಂದು ಈಗ ನೋಡೋಣ.

ನಾವು ಹೇಗೆ ಮೆಚ್ಚುಗೆ ತೋರಿಸಬಹುದು?

14-15. (ಎ) ಗಂಡ-ಹೆಂಡತಿ ತಾವು ಒಬ್ಬರನ್ನೊಬ್ಬರು ಮೆಚ್ಚುತ್ತೇವೆ ಎಂದು ಹೇಗೆ ತೋರಿಸಿಕೊಡಬಹುದು? (ಬಿ) ಮೆಚ್ಚುಗೆ ತೋರಿಸಲು ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಕಲಿಸಿಕೊಡಬಹುದು?

14 ಕುಟುಂಬದಲ್ಲಿ. ಕುಟುಂಬದಲ್ಲಿರುವ ಪ್ರತಿಯೊಬ್ಬರೂ ಮೆಚ್ಚುಗೆ ತೋರಿಸುವಾಗ ಇಡೀ ಕುಟುಂಬಕ್ಕೆ ಒಳ್ಳೇದಾಗುತ್ತದೆ. ಗಂಡ-ಹೆಂಡತಿ ಒಬ್ಬರಿಗೊಬ್ಬರು ಮೆಚ್ಚುಗೆ ತೋರಿಸುವಾಗ ಹತ್ತಿರ ಆಗುತ್ತಾರೆ. ಏನಾದರೂ ತಪ್ಪಾದರೂ ಒಬ್ಬರಿಗೊಬ್ಬರು ಕ್ಷಮಿಸಲು ಸುಲಭ ಆಗುತ್ತದೆ. ತನ್ನ ಹೆಂಡತಿಯನ್ನು ಮೆಚ್ಚುವ ಗಂಡನು ಅವಳಲ್ಲಿರುವ ಒಳ್ಳೇ ವಿಷಯಗಳನ್ನು ನೋಡುವುದಷ್ಟೇ ಅಲ್ಲ ‘ಆಕೆಯನ್ನು ಕೊಂಡಾಡುತ್ತಾನೆ.’ (ಜ್ಞಾನೋ. 31:10, 29) ಹೆಂಡತಿ ಸಹ ತನ್ನ ಗಂಡನಲ್ಲಿ ಅವಳಿಗೆ ಯಾವುದು ತುಂಬ ಇಷ್ಟ ಆಗುತ್ತದೆ ಎಂದು ಹೇಳಿ ಅದನ್ನು ಮೆಚ್ಚಿಕೊಳ್ಳುತ್ತಾಳೆ.

15 ಹೆತ್ತವರೇ, ಮೆಚ್ಚುಗೆ ತೋರಿಸಲು ನಿಮ್ಮ ಮಕ್ಕಳಿಗೆ ನೀವು ಹೇಗೆ ಕಲಿಸಿಕೊಡುತ್ತೀರಾ? ನೀವೇನು ಹೇಳುತ್ತೀರೋ ಮಾಡುತ್ತೀರೋ ಅದನ್ನು ನಿಮ್ಮ ಮಕ್ಕಳು ಸಹ ನೋಡಿ ಅದೇ ತರ ಮಾಡುತ್ತಾರೆ ಅನ್ನುವುದನ್ನು ನೆನಪಲ್ಲಿಡಿ. ಆದ್ದರಿಂದ ನಿಮ್ಮ ಮಕ್ಕಳು ನಿಮಗಾಗಿ ಏನಾದರೂ ಮಾಡಿದರೆ ಧನ್ಯವಾದ ಹೇಳುವ ಮೂಲಕ ಒಳ್ಳೇ ಮಾದರಿ ಇಡಿ. ಅದೇ ರೀತಿ ಬೇರೆಯವರು ನಿಮ್ಮ ಮಕ್ಕಳಿಗಾಗಿ ಏನಾದರೂ ಒಳ್ಳೇದು ಮಾಡಿದರೆ ಅದಕ್ಕೆ ಧನ್ಯವಾದ ಹೇಳಬೇಕೆಂದು ಅವರಿಗೆ ಕಲಿಸಿ. ಕೃತಜ್ಞತೆ ಹೇಳುವುದು ಹೃದಯದಿಂದ ಬರುತ್ತದೆ ಮತ್ತು ಅವರು ಹೇಳುವ ಮಾತುಗಳಿಂದ ತುಂಬ ಒಳ್ಳೇದಾಗುತ್ತದೆ ಎಂದು ನಿಮ್ಮ ಮಕ್ಕಳಿಗೆ ಅರ್ಥಮಾಡಿಸಿ. ಕ್ಲಾಡೀ ಎಂಬ ಯುವ ಸ್ತ್ರೀ ಹೇಳುವುದನ್ನು ಕೇಳಿ. “ನಾವು ಮೂರು ಜನ ಮಕ್ಕಳು. ಅಮ್ಮಂಗೆ 32 ವರ್ಷ ಆದಾಗ ನಮ್ಮನ್ನು ಒಬ್ಬರೇ ಬೆಳೆಸಬೇಕಾದ ಪರಿಸ್ಥಿತಿ ಬಂತು. ನನಗೆ 32 ವರ್ಷ ಆದಾಗ, ಅಮ್ಮಂಗೆ ಇದೇ ವಯಸ್ಸಲ್ಲಿ ಎಷ್ಟು ಕಷ್ಟ ಆಗಿರಬೇಕೆಂದು ಅರ್ಥ ಆಯಿತು. ನಮ್ಮನ್ನು ಬೆಳೆಸಲು ಅಮ್ಮ ಏನೆಲ್ಲಾ ತ್ಯಾಗಮಾಡಿದರೋ ಅದನ್ನು ನಾನು ತುಂಬ ಮೆಚ್ಚುತ್ತೇನೆ ಎಂದು ಅವರಿಗೆ ಹೇಳಿದೆ. ನಾನು ಹೇಳಿದ ಮಾತುಗಳು ಅಮ್ಮಂಗೆ ತುಂಬ ಇಷ್ಟ ಆಯಿತೆಂದು ಅವರು ಇತ್ತೀಚೆಗೆ ಹೇಳಿದರು. ಅವರು ನಾನು ಹೇಳಿದ್ದನ್ನು ಆಗಾಗ ನೆನಪಿಸಿಕೊಳ್ಳುತ್ತಾರೆ ಎಂದವರು ಹೇಳಿದರು. ಇದರಿಂದ ಅವರಿಗೆ ತುಂಬ ಸಂತೋಷ ಆಗುತ್ತದೆ ಅಂತೆ.”

ಮೆಚ್ಚುಗೆ ತೋರಿಸಲು ನಿಮ್ಮ ಮಕ್ಕಳಿಗೆ ಕಲಿಸಿ

(ಪ್ಯಾರ 15 ನೋಡಿ) *

16. ಮೆಚ್ಚುಗೆ ತೋರಿಸಿದಾಗ ಪ್ರೋತ್ಸಾಹ ಸಿಗುತ್ತದೆ ಅನ್ನುವುದಕ್ಕೆ ಒಂದು ಉದಾಹರಣೆ ಕೊಡಿ.

16 ಸಭೆಯಲ್ಲಿ. ನಾವು ನಮ್ಮ ಸಹೋದರ-ಸಹೋದರಿಯರಿಗೆ ಮೆಚ್ಚುಗೆ ತೋರಿಸುವಾಗ ಅವರಿಗೆ ತುಂಬ ಪ್ರೋತ್ಸಾಹ ಸಿಗುತ್ತದೆ. ಹಾರ್‌ಹೇ ಎಂಬ 28 ವರ್ಷದ ಹಿರಿಯನ ಉದಾಹರಣೆ ನೋಡಿ. ಅವರಿಗೆ ಗಂಭೀರ ಕಾಯಿಲೆ ಬಂತು. ಒಂದು ತಿಂಗಳ ವರೆಗೆ ಕೂಟಗಳಿಗೆ ಹೋಗಲು ಆಗಲಿಲ್ಲ. ಆಮೇಲೆ ಕೂಟಗಳಿಗೆ ಹೋದಾಗಲೂ ಯಾವುದೇ ಭಾಗವನ್ನು ನಿರ್ವಹಿಸಲು ಆಗಲಿಲ್ಲ. ಅವರು ಹೇಳುವುದು: “ನನ್ನಿಂದ ಏನೂ ಮಾಡಕ್ಕಾಗಲಿಲ್ಲ. ಸಭೆಯ ಜವಾಬ್ದಾರಿಗಳನ್ನೂ ಮಾಡಕ್ಕಾಗಿಲ್ಲ. ನಾನು ಕೆಲ್ಸಕ್ಕೆ ಬಾರದವನು ಅನ್ನೋ ಭಾವನೆ ಬಂತು. ಆದರೆ ಒಂದಿನ ಕೂಟ ಆದ ಮೇಲೆ ಒಬ್ಬ ಸಹೋದರ ನನ್ನ ಹತ್ತಿರ ಬಂದು ‘ನೀವು ನನ್ನ ಕುಟುಂಬಕ್ಕೆ ಒಳ್ಳೇ ಮಾದರಿ ಇಟ್ಟಿದ್ದೀರಿ. ಕಳೆದ ಕೆಲವು ವರ್ಷಗಳಿಂದ ನಾವು ನಿಮ್ಮ ಭಾಷಣಗಳಿಂದ ತುಂಬ ಪ್ರಯೋಜನ ಪಡೆದಿದ್ದೇವೆ. ಅದರಿಂದ ನಮ್ಮ ನಂಬಿಕೆ ಬಲವಾಗಿದೆ. ತುಂಬ ಧನ್ಯವಾದ’ ಎಂದು ಹೇಳಿದಾಗ ನನ್ನ ಭಾವನೆಗಳನ್ನು ತಡಿಯಕ್ಕಾಗದೆ ಅತ್ತುಬಿಟ್ಟೆ. ಅವರ ಮಾತುಗಳಿಂದ ನನಗೆ ತುಂಬ ಪ್ರೋತ್ಸಾಹ ಸಿಕ್ಕಿತು.”

17. ಕೊಲೊಸ್ಸೆ 3:15 ರಲ್ಲಿ ತಿಳಿಸಿರುವಂತೆ, ಯೆಹೋವನ ಉದಾರತೆಗೆ ನಾವು ಹೇಗೆ ಮೆಚ್ಚುಗೆ ತೋರಿಸಬಹುದು?

17 ಉದಾರಿಯಾದ ನಮ್ಮ ದೇವರಿಗೆ. ಯೆಹೋವನು ನಮಗೆ ತುಂಬ ಆಧ್ಯಾತ್ಮಿಕ ಆಹಾರ ಕೊಟ್ಟಿದ್ದಾನೆ. ನಮ್ಮ ಕೂಟಗಳು, ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ನಾವು ಒಳ್ಳೇ ಸಲಹೆ-ಸೂಚನೆಗಳನ್ನು ಪಡಕೊಳ್ಳುತ್ತೇವೆ. ನೀವು ಒಂದು ಭಾಷಣ ಕೇಳಿಸಿಕೊಂಡ ಮೇಲೆ, ಒಂದು ಲೇಖನವನ್ನು ಓದಿದ ಮೇಲೆ ಅಥವಾ JW ಪ್ರಸಾರದಲ್ಲಿ ಒಂದು ಕಾರ್ಯಕ್ರಮವನ್ನು ನೋಡಿದ ಮೇಲೆ ‘ನಾನು ಈ ಸಲಹೆಗಾಗಿಯೇ ಕಾಯುತ್ತಿದ್ದೆ’ ಎಂದು ಹೇಳಿದ್ದೀರಾ? ಈ ವಿಷಯಗಳಿಗಾಗಿ ನಾವು ಯೆಹೋವನಿಗೆ ಹೇಗೆ ಕೃತಜ್ಞತೆ ತೋರಿಸಬಹುದು? (ಕೊಲೊಸ್ಸೆ 3:15 ಓದಿ.) ಈ ಒಳ್ಳೇ ಉಡುಗೊರೆಗಳನ್ನು ಕೊಟ್ಟದ್ದಕ್ಕಾಗಿ ನಾವು ಯಾವಾಗಲೂ ಯೆಹೋವನಿಗೆ ಪ್ರಾರ್ಥನೆಯಲ್ಲಿ ಕೃತಜ್ಞತೆ ಹೇಳಬಹುದು.—ಯಾಕೋ. 1:17.

18. ನಾವು ನಮ್ಮ ರಾಜ್ಯ ಸಭಾಗೃಹವನ್ನು ಮಾನ್ಯ ಮಾಡುತ್ತೇವೆ ಎಂದು ಹೇಗೆ ತೋರಿಸಬಹುದು?

18 ನಾವು ಆರಾಧನೆಗಾಗಿ ಉಪಯೋಗಿಸುವ ಸ್ಥಳವನ್ನು ಶುದ್ಧವಾಗಿಯೂ ನೀಟಾಗಿಯೂ ಇಟ್ಟುಕೊಳ್ಳುವಾಗ ಸಹ ಯೆಹೋವನಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ರಾಜ್ಯ ಸಭಾಗೃಹವನ್ನು ನಾವು ಶುಚಿಮಾಡಲು ಮತ್ತು ಸುಸ್ಥಿತಿಯಲ್ಲಿಡಲು ಯಾವಾಗಲೂ ಕೈಜೋಡಿಸುತ್ತೇವೆ. ಆಡಿಯೋ ಮತ್ತು ವಿಡಿಯೋ ಉಪಕರಣಗಳನ್ನು ನಿರ್ವಹಿಸುವವರು ಅದನ್ನು ಜೋಪಾನವಾಗಿ ಉಪಯೋಗಿಸುತ್ತಾರೆ. ನಾವು ನಮ್ಮ ರಾಜ್ಯ ಸಭಾಗೃಹವನ್ನು ಚೆನ್ನಾಗಿ ಇಟ್ಟುಕೊಳ್ಳುವಾಗ ಅದು ತುಂಬ ದಿನ ಒಳ್ಳೇ ಸ್ಥಿತಿಯಲ್ಲಿರುತ್ತದೆ ಮತ್ತು ದೊಡ್ಡ ರಿಪೇರಿಗಳು ಹೆಚ್ಚಾಗಿ ಬರುವುದಿಲ್ಲ. ಆಗ ಲೋಕದ ಬೇರೆ ಕಡೆ ರಾಜ್ಯ ಸಭಾಗೃಹಗಳನ್ನು ಕಟ್ಟಲು ಮತ್ತು ನವೀಕರಿಸಲು ನಾವು ಹೆಚ್ಚು ಕಾಣಿಕೆ ಕೊಡಲು ಸಾಧ್ಯವಾಗುತ್ತದೆ.

19. ಒಬ್ಬ ಸಂಚರಣ ಮೇಲ್ವಿಚಾರಕನ ಅನುಭವದಿಂದ ನೀವೇನು ಕಲಿತಿರಿ?

19 ನಮಗಾಗಿ ಕಷ್ಟಪಟ್ಟು ಸೇವೆಮಾಡುವವರಿಗೆ. ಎಲ್ಲರಿಗೂ ಜೀವನದಲ್ಲಿ ಸವಾಲುಗಳು ಬರುತ್ತವೆ. ಆದರೆ ನಾವು ಮೆಚ್ಚುಗೆ ತೋರಿಸುವಾಗ ಆ ಸವಾಲುಗಳನ್ನು ನಿಭಾಯಿಸಲು ಅವರಿಗೆ ಹೊಸ ಬಲ ಸಿಕ್ಕಿಬಿಡುತ್ತದೆ. ಒಬ್ಬ ಸಂಚರಣ ಮೇಲ್ವಿಚಾರಕ ಮತ್ತು ಅವರ ಪತ್ನಿಯ ಅನುಭವ ನೋಡಿ. ಒಂದು ಸಲ ಇಡೀ ದಿನ ಚಳಿಯಲ್ಲಿ ಸೇವೆ ಮಾಡಿದ ಮೇಲೆ ತುಂಬ ಸುಸ್ತಾಗಿ ವಾಪಸ್‌ ಬಂದರು. ಸಹೋದರಿಗೆ ಎಷ್ಟು ಚಳಿ ಅನಿಸುತ್ತಿತ್ತೆಂದರೆ ಅವರು ಹಾಕಿದ್ದ ಕೋಟನ್ನು ತೆಗೆಯದೆ ಹಾಗೇ ಮಲಗಿಬಿಟ್ಟರು. ಬೆಳಗ್ಗೆ ಎದ್ದಾಗ, ‘ಈ ಸಂಚರಣ ಕೆಲ್ಸ ಮಾಡಲು ನನ್ನ ಕೈಯಲ್ಲಿ ಆಗಲ್ಲ’ ಎಂದು ತನ್ನ ಗಂಡನಿಗೆ ಹೇಳಿದರು. ಅದನ್ನು ಅವರು ಹೇಳಿ ಕೆಲವು ತಾಸಲ್ಲೇ ಶಾಖಾ ಕಚೇರಿಯಿಂದ ಆ ಸಹೋದರಿಗೆಂದೇ ಒಂದು ಪತ್ರ ಬಂತು. ಆ ಸಹೋದರಿ ಮಾಡುತ್ತಿರುವ ಸೇವೆ ಮತ್ತು ತೋರಿಸುತ್ತಿರುವ ತಾಳ್ಮೆಗಾಗಿ ಅವರನ್ನು ಮೆಚ್ಚಿ ಆ ಪತ್ರವನ್ನು ಬರೆಯಲಾಗಿತ್ತು. ಪ್ರತಿ ವಾರ ಒಂದೊಂದು ಕಡೆ ಹೋಗಿ ಸೇವೆ ಮಾಡುವುದು ಎಷ್ಟು ಕಷ್ಟ ಇರುತ್ತದೆ ಅನ್ನುವುದು ನಮಗೆ ಅರ್ಥ ಆಗುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಗಂಡ ಹೇಳುವುದು: “ಆ ಪ್ರೋತ್ಸಾಹದ ಮಾತುಗಳು ನನ್ನ ಪತ್ನಿಯ ಮನಮುಟ್ಟಿತು. ಆಮೇಲೆ ಅವಳು ಸಂಚರಣ ಕೆಲಸವನ್ನು ಬಿಡುವುದರ ಬಗ್ಗೆ ಮಾತೇ ಎತ್ತಲಿಲ್ಲ. ನಿಜ ಹೇಳಬೇಕೆಂದರೆ, ಸಂಚರಣ ಕೆಲ್ಸ ನಿಲ್ಲಿಸೋಣ ಅಂತ ನನಗೆ ಕೆಲವೊಮ್ಮೆ ಅನಿಸಿದಾಗ ಅದನ್ನು ಬಿಡದಿರಲು ಅವಳು ನನ್ನನ್ನು ಪ್ರೋತ್ಸಾಹಿಸಿದ್ದಾಳೆ.” ಈ ದಂಪತಿ ಸಂಚರಣ ಕೆಲಸವನ್ನು ಸುಮಾರು 40 ವರ್ಷ ಮಾಡಿದರು.

20. ನಾವು ಪ್ರತಿ ದಿನ ಏನು ಮಾಡಲು ಪ್ರಯತ್ನಿಸಬೇಕು?ಯಾಕೆ?

20 ನಾವು ಪ್ರತಿ ದಿನ ಮೆಚ್ಚುಗೆ ತೋರಿಸಲು ಪ್ರಯತ್ನಿಸೋಣ. ಇದನ್ನು ನಮ್ಮ ಮಾತು ಮತ್ತು ಕ್ರಿಯೆಯಲ್ಲಿ ತೋರಿಸೋಣ. ನಾವು ಹೃತ್ಪೂರ್ವಕವಾಗಿ ಹೇಳುವ ಅಥವಾ ಮಾಡುವ ವಿಷಯಗಳು ಸವಾಲುಗಳನ್ನು ನಿಭಾಯಿಸಲು ಯಾರಿಗಾದರೂ ಸಹಾಯ ಮಾಡಬಹುದು. ಯಾವುದೇ ಮೆಚ್ಚುಗೆ ತೋರಿಸದ ಈ ಹಾಳು ಲೋಕದಲ್ಲಿ ಇಂಥ ಮೆಚ್ಚುಗೆಗೆ ತುಂಬ ಬೆಲೆ ಇದೆ. ನಾವು ಮೆಚ್ಚುಗೆ ತೋರಿಸಿದಾಗ ಒಳ್ಳೇ ಸ್ನೇಹಿತರು ಸಿಗುತ್ತಾರೆ. ಅಂಥ ಸ್ನೇಹ ಸದಾಕಾಲ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಮೆಚ್ಚುಗೆ ತೋರಿಸುವಾಗ ಉದಾರಿಯೂ ಹೃದಯದಾಳದಿಂದ ಮೆಚ್ಚುಗೆ ತೋರಿಸುವವನೂ ಆದ ನಮ್ಮ ಸ್ವರ್ಗೀಯ ತಂದೆ ಯೆಹೋವನನ್ನು ನಾವು ಅನುಕರಿಸುತ್ತೇವೆ.

ಗೀತೆ 148 ಕೊಟ್ಟೆ ನೀ ಮಗನ

^ ಪ್ಯಾರ. 5 ಮೆಚ್ಚುಗೆಯನ್ನು ತೋರಿಸುವುದರ ಬಗ್ಗೆ ಯೆಹೋವ, ಯೇಸು ಮತ್ತು ಸಮಾರ್ಯದ ಕುಷ್ಠರೋಗಿಯಿಂದ ಏನು ಕಲಿಯಬಹುದು? ಈ ಲೇಖನದಲ್ಲಿ ಇವರ ಮತ್ತು ಬೇರೆಯವರ ಉದಾಹರಣೆಗಳನ್ನು ನೋಡಲಿದ್ದೇವೆ. ಕೃತಜ್ಞತೆ ತೋರಿಸುವುದು ಯಾಕೆ ಅಷ್ಟು ಮುಖ್ಯ ಮತ್ತು ಇದನ್ನು ಹೇಗೆಲ್ಲ ತೋರಿಸಬಹುದೆಂದು ಚರ್ಚಿಸಲಿದ್ದೇವೆ.

^ ಪ್ಯಾರ. 1 ಪದ ವಿವರಣೆ: ಒಬ್ಬ ವ್ಯಕ್ತಿಯನ್ನು ಮೆಚ್ಚುವುದು ಅಂದರೆ ಅವರನ್ನು ಮಾನ್ಯ ಮಾಡಬೇಕು, ಶ್ಲಾಘಿಸಬೇಕು ಎಂಬ ಅರ್ಥ ಬರುತ್ತದೆ. ಇದರಲ್ಲಿ ಹೃದಯದಾಳದಿಂದ ಕೃತಜ್ಞತೆ ತೋರಿಸುವುದೂ ಸೇರಿದೆ. ಒಂದು ವಿಷಯವನ್ನು ಮೆಚ್ಚುವಾಗ ನಾವದನ್ನು ಮಾನ್ಯ ಮಾಡುತ್ತೇವೆ ಎಂಬ ಅರ್ಥ ಬರುತ್ತದೆ.

[ಪಾದಟಿಪ್ಪಣಿಗಳು]

^ ಪ್ಯಾರ. 55 ಚಿತ್ರ ವಿವರಣೆ: ಪೌಲನ ಪತ್ರವನ್ನು ರೋಮಿನಲ್ಲಿರುವ ಸಭೆಗೆ ಓದಲಾಗುತ್ತಿದೆ; ಅಕ್ವಿಲ, ಪ್ರಿಸ್ಕಿಲ್ಲ, ಫೊಯಿಬೆ ಮತ್ತು ಬೇರೆಯವರು ತಮ್ಮ ಹೆಸರು ಅದರಲ್ಲಿರುವುದನ್ನು ಕೇಳಿಸಿಕೊಂಡಾಗ ಸಂತೋಷಪಡುತ್ತಿದ್ದಾರೆ.

^ ಪ್ಯಾರ. 58 ಚಿತ್ರ ವಿವರಣೆ: ವಯಸ್ಸಾಗಿರುವ ಒಬ್ಬ ಸಹೋದರಿಯ ಮಾದರಿಯನ್ನು ಮೆಚ್ಚಲು ಒಬ್ಬ ತಾಯಿ ತನ್ನ ಮಗಳಿಗೆ ಸಹಾಯ ಮಾಡುತ್ತಿದ್ದಾಳೆ.