ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 9

ಆ ಕಾಲದ ಇಸ್ರಾಯೇಲಿನಲ್ಲಿ ಪ್ರೀತಿ ಮತ್ತು ನ್ಯಾಯ

ಆ ಕಾಲದ ಇಸ್ರಾಯೇಲಿನಲ್ಲಿ ಪ್ರೀತಿ ಮತ್ತು ನ್ಯಾಯ

“ಆತನು ನೀತಿಯನ್ನೂ ನ್ಯಾಯವನ್ನೂ ಪ್ರೀತಿ ಮಾಡುತ್ತಾನೆ; ಭೂಲೋಕವೆಲ್ಲಾ ಯೆಹೋವನ ಕುಂದದ ಪ್ರೀತಿಯಿಂದ ತುಂಬಿದೆ.”ಕೀರ್ತ. 33:5, ಪವಿತ್ರ ಗ್ರಂಥ ಭಾಷಾಂತರ.

ಗೀತೆ 152 ಯೆಹೋವ ನೀನೇ ಆಶ್ರಯ

ಕಿರುನೋಟ *

1-2. (ಎ) ನಮ್ಮೆಲ್ಲರಿಗೂ ಏನು ಬೇಕು? (ಬಿ) ನಾವು ಏನನ್ನು ನಂಬಬೇಕು?

ಬೇರೆಯವರು ನಮ್ಮನ್ನು ಪ್ರೀತಿಸಬೇಕು, ನಮ್ಮ ಜೊತೆ ನ್ಯಾಯವಾಗಿ ನಡಕೊಳ್ಳಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಆದರೆ ಪ್ರೀತಿ, ನ್ಯಾಯ ಸಿಗದೆ ಹೋದಾಗ ನಮಗೇನೂ ಬೆಲೆನೇ ಇಲ್ಲವೇನೋ ಎಂದು ಅನಿಸಿಬಿಡುತ್ತದೆ, ಬದುಕು ಬರಡಾಗಿಬಿಡುತ್ತದೆ.

2 ನಮಗೆ ಪ್ರೀತಿ ಬೇಕು, ನ್ಯಾಯ ಸಿಗಬೇಕೆಂದು ಯೆಹೋವನಿಗೆ ಗೊತ್ತು. (ಕೀರ್ತ. 33:5) ಆ ಪ್ರೀತಿಯನ್ನು ಯೆಹೋವನು ನಮಗೆ ಕೊಡುತ್ತಾನೆ ಮತ್ತು ನಮಗೆ ನ್ಯಾಯ ಸಿಗಲು ಏನು ಬೇಕೋ ಅದನ್ನು ಮಾಡುತ್ತಾನೆ ಎಂದು ಖಂಡಿತ ನಂಬಬೇಕು. ಇದನ್ನು ಹೇಗೆ ನಂಬಬಹುದು? ಇಸ್ರಾಯೇಲ್ಯರಿಗೆ ಮೋಶೆಯ ಮೂಲಕ ಯೆಹೋವನು ಕೊಟ್ಟ ಧರ್ಮಶಾಸ್ತ್ರವನ್ನು ನೋಡಿದರೆ ಈ ನಂಬಿಕೆ ಬರುತ್ತದೆ. ನಿಮ್ಮ ಹೃದಯ ಪ್ರೀತಿಗಾಗಿ ಹಾತೊರೆಯುತ್ತಿದೆಯಾ? ನಿಮ್ಮ ಮನಸ್ಸು ನ್ಯಾಯಕ್ಕಾಗಿ ಬೇಡಿಕೊಳ್ಳುತ್ತಿದೆಯಾ? ಹಾಗಾದರೆ ಯೆಹೋವನು ಮೋಶೆಯ ಧರ್ಮಶಾಸ್ತ್ರದ * ಮೂಲಕ ತನ್ನ ಜನರಿಗೆ ತೋರಿಸಿದ ಕಾಳಜಿಯ ಕುರಿತು ಮುಂದೆ ಓದಿ.

3. (ಎ) ರೋಮನ್ನರಿಗೆ 13:8-10 ರಲ್ಲಿ ವಿವರಿಸಿರುವ ಪ್ರಕಾರ, ಮೋಶೆಯ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡುವಾಗ ನಮಗೇನು ಗೊತ್ತಾಗುತ್ತದೆ? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ?

3 ಮೋಶೆಯ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡುವಾಗ ನಮ್ಮ ಪ್ರೀತಿಯ ದೇವರಾದ ಯೆಹೋವನಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಎಂದು ಗೊತ್ತಾಗುತ್ತದೆ. (ರೋಮನ್ನರಿಗೆ 13:8-10 ಓದಿ.) ಈ ಲೇಖನದಲ್ಲಿ, ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ಕೆಲವು ನಿಯಮಗಳ ಬಗ್ಗೆ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ: ಧರ್ಮಶಾಸ್ತ್ರ ಪ್ರೀತಿಯ ಮೇಲೆ ಆಧರಿಸಿತ್ತು ಎಂದು ಹೇಗೆ ಹೇಳಬಹುದು? ಜನರು ನ್ಯಾಯವನ್ನು ಎತ್ತಿಹಿಡಿಯುವಂತೆ ಧರ್ಮಶಾಸ್ತ್ರ ಹೇಗೆ ಪ್ರೋತ್ಸಾಹಿಸಿತು? ಅಧಿಕಾರದ ಸ್ಥಾನದಲ್ಲಿದ್ದವರು ಧರ್ಮಶಾಸ್ತ್ರದಲ್ಲಿ ಏನಿದೆಯೋ ಅದನ್ನು ಹೇಗೆ ಅನ್ವಯಿಸಬೇಕಿತ್ತು? ಧರ್ಮಶಾಸ್ತ್ರದಿಂದ ಮುಖ್ಯವಾಗಿ ಯಾರಿಗೆ ಸಂರಕ್ಷಣೆ ಸಿಕ್ಕಿತು? ಈ ಪ್ರಶ್ನೆಗಳಿಗೆ ಉತ್ತರ ತಿಳುಕೊಂಡಾಗ ನಮಗೆ ಸಾಂತ್ವನ ಸಿಗುತ್ತದೆ, ನಿರೀಕ್ಷೆ ಸಿಗುತ್ತದೆ, ನಮ್ಮ ಪ್ರೀತಿಯ ಸ್ವರ್ಗೀಯ ತಂದೆಗೆ ನಾವು ಹತ್ತಿರ ಆಗುತ್ತೇವೆ.—ಅ. ಕಾ. 17:27; ರೋಮ. 15:4.

ಪ್ರೀತಿಯ ಮೇಲೆ ಆಧರಿಸಿದ್ದ ಧರ್ಮಶಾಸ್ತ್ರ

4. (ಎ) ಮೋಶೆಯ ಧರ್ಮಶಾಸ್ತ್ರ ಪ್ರೀತಿಯ ಮೇಲೆ ಆಧರಿಸಿತ್ತು ಎಂದು ಹೇಗೆ ಹೇಳಬಹುದು? (ಬಿ) ಮತ್ತಾಯ 22:36-40 ರಲ್ಲಿ ಯೇಸು ಯಾವ ಆಜ್ಞೆಗಳ ಬಗ್ಗೆ ಮಾತಾಡಿದನು?

4 ಮೋಶೆಯ ಧರ್ಮಶಾಸ್ತ್ರ ಪ್ರೀತಿಯ ಮೇಲೆ ಆಧರಿಸಿತ್ತು ಎಂದು ನಾವು ಹೇಳಬಹುದು. ಯಾಕೆಂದರೆ ಯೆಹೋವನು ಏನೇ ಮಾಡಿದರೂ ಅದನ್ನು ಪ್ರೀತಿಯಿಂದ ಪ್ರಚೋದಿತನಾಗಿ ಮಾಡುತ್ತಾನೆ. (1 ಯೋಹಾ. 4:8) ಇಡೀ ಧರ್ಮಶಾಸ್ತ್ರವನ್ನು ಸಹ ಮುಖ್ಯವಾದ ಎರಡು ಆಜ್ಞೆಗಳ ಮೇಲಾಧರಿಸಿ ಮಾಡಿದ್ದಾನೆ. ಅದರಲ್ಲಿ ಒಂದು ದೇವರನ್ನು ಪ್ರೀತಿಸಬೇಕು, ಇನ್ನೊಂದು ನೆರೆಯವನನ್ನು ಪ್ರೀತಿಸಬೇಕು. (ಯಾಜ. 19:18; ಧರ್ಮೋ. 6:5; ಮತ್ತಾಯ 22:36-40 ಓದಿ.) ಆದ್ದರಿಂದ ಧರ್ಮಶಾಸ್ತ್ರದಲ್ಲಿರುವ ಪ್ರತಿಯೊಂದು ನಿಯಮದ ಹಿಂದೆ ಯೆಹೋವನ ಪ್ರೀತಿ ಇದೆ. ಇದಕ್ಕೆ ಸಂಬಂಧಿಸಿದ ಕೆಲವು ಉದಾಹರಣೆಗಳನ್ನು ನೋಡೋಣ.

5-6. (ಎ) ಗಂಡ-ಹೆಂಡತಿ ಹೇಗಿರಬೇಕೆಂದು ಯೆಹೋವನು ಬಯಸುತ್ತಾನೆ? (ಬಿ) ಯೆಹೋವನಿಗೆ ಯಾವುದು ಚೆನ್ನಾಗಿ ಗೊತ್ತು? ಒಂದು ಉದಾಹರಣೆ ಕೊಡಿ.

5 ನಿಮ್ಮ ವಿವಾಹ ಸಂಗಾತಿಗೆ ದ್ರೋಹ ಮಾಡಬೇಡಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಗಂಡ-ಹೆಂಡತಿ ಜೀವ ಇರುವ ತನಕ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಯೆಹೋವನು ಬಯಸುತ್ತಾನೆ. (ಆದಿ. 2:24; ಮತ್ತಾ. 19:3-6) ಹಾಗಾಗಿ ಯೆಹೋವನ ದೃಷ್ಟಿಯಲ್ಲಿ ವ್ಯಭಿಚಾರ ಒಂದು ಭಯಂಕರವಾದ ಅಪರಾಧವಾಗಿದೆ. ಆ ಕಾರಣದಿಂದಲೇ ವ್ಯಭಿಚಾರ ಮಾಡಬಾರದು ಎಂಬ ಆಜ್ಞೆಯನ್ನು ಆತನು ದಶಾಜ್ಞೆಗಳಲ್ಲಿ ಏಳನೇ ಆಜ್ಞೆಯಾಗಿ ಕೊಟ್ಟನು. (ಧರ್ಮೋ. 5:18) ವ್ಯಭಿಚಾರ “ದೇವರಿಗೆ ವಿರುದ್ಧವಾಗಿ” ಮಾಡುವ ಪಾಪವಾಗಿದೆ, ವಿವಾಹ ಸಂಗಾತಿಗೆ ಮಾರಕ ಹೊಡೆತ ಕೊಟ್ಟಂತೆ ಇರುತ್ತದೆ. (ಆದಿ. 39:7-9) ಈ ನಂಬಿಕೆದ್ರೋಹದ ಕೃತ್ಯದಿಂದ ಆಗುವ ನೋವು ತುಂಬ ವರ್ಷಗಳಾದರೂ ಹೋಗುವುದಿಲ್ಲ.

6 ಮನೆಯ ನಾಲ್ಕು ಗೋಡೆಯ ಮಧ್ಯೆ ಏನು ನಡೆಯುತ್ತೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಇಸ್ರಾಯೇಲಿನ ಗಂಡಸರು ತಮ್ಮ ಹೆಂಡತಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಧರ್ಮಶಾಸ್ತ್ರದ ಮೇಲೆ ಗೌರವ ಇದ್ದ ವ್ಯಕ್ತಿ ತನ್ನ ಹೆಂಡತಿಯನ್ನು ಪ್ರೀತಿಸಬೇಕಿತ್ತು, ಕ್ಷುಲ್ಲಕ ಕಾರಣಗಳಿಗೆ ವಿಚ್ಛೇದನ ಕೊಡಬಾರದಿತ್ತು. (ಧರ್ಮೋ. 24:1-4; ಮತ್ತಾ. 19:3, 8) ಆದರೆ ಏನೋ ಗಂಭೀರ ಸಮಸ್ಯೆ ಬಂದು ಆಕೆಗೆ ವಿಚ್ಛೇದನ ಕೊಡಬೇಕಾಗಿ ಬಂದರೆ ಆಕೆಗೆ ಅವನು ತ್ಯಾಗಪತ್ರ ಕೊಡಬೇಕಿತ್ತು. ಇದರಿಂದ ಮುಂದಕ್ಕೆ ಯಾರೂ ಆ ಸ್ತ್ರೀ ಮೇಲೆ ಅನೈತಿಕತೆಯ ಅಪವಾದವನ್ನು ಹೊರಿಸಲು ಸಾಧ್ಯವಿರಲಿಲ್ಲ. ಅಷ್ಟೇ ಅಲ್ಲ, ಆ ಸ್ತ್ರೀಯ ಗಂಡನು ಆಕೆಗೆ ತ್ಯಾಗಪತ್ರವನ್ನು ಕೊಡುವ ಮುಂಚೆ ಪಟ್ಟಣದ ಹಿರೀಪುರುಷರ ಹತ್ತಿರ ಮಾತಾಡಬೇಕಿತ್ತು ಎಂದು ತೋರುತ್ತದೆ. ಇದರಿಂದ ಆ ದಂಪತಿ ವಿಚ್ಛೇದನ ಪಡೆಯದೆ ಒಟ್ಟಿಗೆ ಜೀವನ ನಡೆಸಲು ಹಿರೀಪುರುಷರು ಅವರಿಗೆ ಸಹಾಯ ಮಾಡಲು ಅವಕಾಶ ಸಿಗುತ್ತಿತ್ತು. ಇಸ್ರಾಯೇಲ್ಯರು ಸ್ವಾರ್ಥ ಕಾರಣಗಳಿಂದಾಗಿ ತಮ್ಮ ಹೆಂಡತಿಯರಿಗೆ ವಿಚ್ಛೇದನ ಕೊಟ್ಟಾಗೆಲ್ಲ ಯೆಹೋವನು ಹಿರಿಯರನ್ನು ಅಥವಾ ಪ್ರವಾದಿಗಳನ್ನು ಬಳಸಿ ಅದನ್ನು ತಡೆದಿಲ್ಲ. ಆದರೆ ಆ ಹೆಂಡತಿಯರು ಸುರಿಸಿದ ಕಣ್ಣೀರನ್ನು ನೋಡಿದಾಗ ಆತನ ಮನಸ್ಸಿಗೆ ತುಂಬ ನೋವಾಗುತ್ತಿತ್ತು.—ಮಲಾ. 2:13-16.

ಮಕ್ಕಳು ಸುರಕ್ಷಿತವಾಗಿ, ಸಂತೋಷವಾಗಿ ಇರಬೇಕು ಅನ್ನುವುದು ಯೆಹೋವನ ಆಸೆ. ಅದಕ್ಕಾಗಿ ಹೆತ್ತವರು ಪ್ರೀತಿಯಿಂದ ತಮ್ಮ ಮಕ್ಕಳನ್ನು ಬೆಳೆಸಿ ಕಲಿಸಬೇಕು ಎಂದು ಆತನು ಬಯಸುತ್ತಾನೆ(ಪ್ಯಾರ 7-8 ನೋಡಿ) *

7-8. (ಎ) ಹೆತ್ತವರು ಏನು ಮಾಡಬೇಕೆಂದು ಯೆಹೋವನು ಹೇಳಿದನು? (ಮುಖಪುಟ ಚಿತ್ರ ನೋಡಿ.) (ಬಿ) ನಮಗಿರುವ ಪಾಠಗಳೇನು?

7 ಮಕ್ಕಳು ಸಹ ಸಂತೋಷವಾಗಿರಬೇಕು, ಸುರಕ್ಷಿತವಾಗಿರಬೇಕೆಂದು ಯೆಹೋವನು ಬಯಸುತ್ತಾನೆ. ಆದ್ದರಿಂದ ಮಕ್ಕಳನ್ನು ಶಾರೀರಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಚೆನ್ನಾಗಿ ನೋಡಿಕೊಳ್ಳಬೇಕೆಂದು ಯೆಹೋವನು ಹೆತ್ತವರಿಗೆ ಆಜ್ಞೆ ಕೊಟ್ಟಿದ್ದನು. ದೇವರು ಕೊಟ್ಟಿದ್ದ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಂಡು ಅನ್ವಯಿಸಲು ಮತ್ತು ದೇವರ ಮೇಲೆ ಪ್ರೀತಿ ಬೆಳೆಸಿಕೊಳ್ಳಲು ಹೆತ್ತವರು ಮಕ್ಕಳಿಗೆ ಸಹಾಯ ಮಾಡಬೇಕಿತ್ತು. (ಧರ್ಮೋ. 6:6-9; 7:13) ಯೆಹೋವನು ಇಸ್ರಾಯೇಲ್ಯರನ್ನು ದಂಡಿಸಲು ಒಂದು ಕಾರಣ ಏನೆಂದರೆ, ಅವರು ತಮ್ಮ ಕೆಲವು ಮಕ್ಕಳಿಗೆ ಘೋರ ಹಿಂಸೆ ಕೊಟ್ಟರು. (ಯೆರೆ. 7:31, 33) ಹೆತ್ತವರು ತಮ್ಮ ಮಕ್ಕಳನ್ನು ಒಂದು ವಸ್ತು ತರ ನಿರ್ಲಕ್ಷ್ಯ ಮಾಡದೆ ಒಂದು ಆಸ್ತಿ ತರ, ದೇವರು ಕೊಟ್ಟ ಉಡುಗೊರೆ ತರ ನೋಡಿಕೊಳ್ಳಬೇಕಿತ್ತು.—ಕೀರ್ತ. 127:3.

8 ಪಾಠ: ಗಂಡ-ಹೆಂಡತಿ ಒಬ್ಬರೊಂದಿಗೆ ಒಬ್ಬರು ಹೇಗೆ ನಡಕೊಳ್ಳುತ್ತಾರೆ ಅಂತ ಯೆಹೋವನು ನೋಡುತ್ತಾ ಇರುತ್ತಾನೆ. ಹೆತ್ತವರು ಮಕ್ಕಳನ್ನು ಪ್ರೀತಿಸಬೇಕೆಂದು ಬಯಸುತ್ತಾನೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿಲ್ಲ ಅಂದರೆ ಯೆಹೋವನು ಸುಮ್ಮನೆ ಬಿಡಲ್ಲ.

9-11. ದುರಾಸೆಪಡಬಾರದು ಎಂಬ ನಿಯಮವನ್ನು ಯೆಹೋವನು ಯಾಕೆ ಕೊಟ್ಟಿದ್ದನು?

9 ದುರಾಸೆ ಬೇಡ. ದುರಾಸೆಪಡಬಾರದು ಎಂಬ ಆಜ್ಞೆ ದಶಾಜ್ಞೆಗಳಲ್ಲಿ ಕೊನೇ ಆಜ್ಞೆ ಆಗಿದೆ. ದುರಾಸೆ ಅಂದರೆ ಇನ್ನೊಬ್ಬರಿಗೆ ಸೇರಿದ ವಸ್ತುವನ್ನು ನಾವು ಆಸೆಪಡುವುದೇ ಆಗಿದೆ. (ಧರ್ಮೋ. 5:21; ರೋಮ. 7:7) ಒಂದು ಪ್ರಾಮುಖ್ಯ ಪಾಠವನ್ನು ಕಲಿಸಲಿಕ್ಕಾಗಿ ಯೆಹೋವನು ಈ ನಿಯಮವನ್ನು ಕೊಟ್ಟನು. ತನ್ನ ಜನರು ತಮ್ಮ ಹೃದಯವನ್ನು ಕಾಪಾಡಿಕೊಳ್ಳಬೇಕಿತ್ತು ಅಂದರೆ ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ನಿಯಂತ್ರಿಸಬೇಕಿತ್ತು. ಯಾಕೆಂದರೆ ಕೆಟ್ಟ ಯೋಚನೆಗಳಿಂದ ಮತ್ತು ಭಾವನೆಗಳಿಂದ ಕೆಟ್ಟ ಕ್ರಿಯೆಗಳು ಶುರು ಆಗುತ್ತವೆ ಎಂದು ಆತನಿಗೆ ಗೊತ್ತಿತ್ತು. (ಜ್ಞಾನೋ. 4:23) ಒಬ್ಬ ಇಸ್ರಾಯೇಲ್ಯನು ತನ್ನ ಹೃದಯದಲ್ಲಿ ಕೆಟ್ಟ ಯೋಚನೆಗಳು ಬೆಳೆಯುವಂತೆ ಬಿಟ್ಟರೆ ಆತನು ಬೇರೆಯವರ ಜೊತೆ ಪ್ರೀತಿಯಿಂದ ನಡಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ರಾಜ ದಾವೀದನ ವಿಷಯದಲ್ಲಿ ಹೀಗೇ ಆಯಿತು. ಆತನೊಬ್ಬ ಒಳ್ಳೇ ವ್ಯಕ್ತಿನೇ. ಆದರೆ ಒಂದು ಸಂದರ್ಭದಲ್ಲಿ ಆತನಿಗೆ ಬೇರೊಬ್ಬನ ಹೆಂಡತಿಯ ಮೇಲೆ ಆಸೆ ಬಂತು. ಆ ಆಸೆ ಪಾಪಕ್ಕೆ ನಡೆಸಿತು. (ಯಾಕೋ. 1:14, 15) ದಾವೀದ ವ್ಯಭಿಚಾರ ಮಾಡಿದ, ತಾನು ವ್ಯಭಿಚಾರ ಮಾಡಿದ ಸ್ತ್ರೀಯ ಗಂಡನನ್ನು ಏಮಾರಿಸಲು ಪ್ರಯತ್ನಿಸಿದ, ನಂತರ ಅವನನ್ನು ಕೊಲ್ಲಿಸಿದ.—2 ಸಮು. 11:2-4; 12:7-11.

10 ಒಬ್ಬ ಇಸ್ರಾಯೇಲ್ಯನು ದುರಾಸೆ ಬೆಳೆಸಿಕೊಂಡರೆ ಅದು ಯೆಹೋವನಿಗೆ ಗೊತ್ತಾಗುತ್ತಿತ್ತು. ಯಾಕೆಂದರೆ ಆತನಿಗೆ ಹೃದಯದಲ್ಲೇನಿದೆ ಅಂತ ನೋಡುವ ಸಾಮರ್ಥ್ಯ ಇದೆ. (1 ಪೂರ್ವ. 28:9) ಆದ್ದರಿಂದ ದುರಾಸೆಪಡಬಾರದು ಎಂಬ ನಿಯಮವನ್ನು ಕೊಟ್ಟನು. ಇದರಿಂದ ತಪ್ಪು ಮಾಡುವುದಕ್ಕೆ ನಡೆಸುವ ಯೋಚನೆಗಳನ್ನು ಬಿಟ್ಟುಬಿಡಬೇಕೆಂದು ಜನರಿಗೆ ಅರ್ಥವಾಯಿತು. ಆತನಲ್ಲಿ ಎಷ್ಟೊಂದು ವಿವೇಕ ಮತ್ತು ಪ್ರೀತಿ ಇದೆ ಎಂದು ಇದರಿಂದ ಗೊತ್ತಾಗುತ್ತದೆ.

11 ಪಾಠ: ಯೆಹೋವನು ಒಬ್ಬ ವ್ಯಕ್ತಿಯ ಹೊರತೋರಿಕೆಯನ್ನು ಮಾತ್ರ ನೋಡದೆ ಆ ವ್ಯಕ್ತಿಯ ಹೃದಯದಲ್ಲಿ ಏನಿದೆ ಅಂತ ನೋಡುತ್ತಾನೆ. (1 ಸಮು. 16:7) ಯಾವುದೇ ಯೋಚನೆ, ಭಾವನೆ ಅಥವಾ ಕ್ರಿಯೆಯನ್ನು ನಾವು ಯೆಹೋವನಿಂದ ಬಚ್ಚಿಡಲು ಸಾಧ್ಯವಿಲ್ಲ. ನಮ್ಮಲ್ಲಿ ಒಳ್ಳೇದೇನಿದೆ ಅಂತ ನೋಡುತ್ತಾನೆ ಮತ್ತು ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುತ್ತಾನೆ. ನಮ್ಮಲ್ಲಿ ಏನಾದರೂ ಕೆಟ್ಟ ಯೋಚನೆಗಳಿದ್ದರೆ ಅದನ್ನು ಗುರುತಿಸಿ ಸರಿಪಡಿಸಿಕೊಳ್ಳಬೇಕೆಂದು ಹೇಳುತ್ತಾನೆ. ಇಲ್ಲ ಅಂದರೆ ನಾವು ಖಂಡಿತ ಜೀವನದಲ್ಲಿ ಏನಾದರೂ ಎಡವಟ್ಟು ಮಾಡಿಕೊಳ್ಳುತ್ತೇವೆ.—2 ಪೂರ್ವ. 16:9; ಮತ್ತಾ. 5:27-30.

ನ್ಯಾಯವನ್ನು ಎತ್ತಿಹಿಡಿದ ಧರ್ಮಶಾಸ್ತ್ರ

12. ಮೋಶೆಯ ಧರ್ಮಶಾಸ್ತ್ರದಿಂದ ನಮಗೆ ಇನ್ನೇನು ಗೊತ್ತಾಗುತ್ತದೆ?

12 ನ್ಯಾಯವಾಗಿ ನಡಕೊಳ್ಳುವುದು ಸಹ ಯೆಹೋವನಿಗೆ ತುಂಬ ಇಷ್ಟ ಎಂದು ಮೋಶೆಯ ಧರ್ಮಶಾಸ್ತ್ರದಿಂದ ಗೊತ್ತಾಗುತ್ತದೆ. (ಕೀರ್ತ. 37:28; ಯೆಶಾ. 61:8) ಬೇರೆಯವರ ಜೊತೆ ನ್ಯಾಯವಾಗಿ ನಡಕೊಳ್ಳುವುದರಲ್ಲಿ ಆತನು ಅತ್ಯುತ್ತಮ ಮಾದರಿ ಇಟ್ಟಿದ್ದಾನೆ. ಇಸ್ರಾಯೇಲ್ಯರು ಯೆಹೋವನು ಕೊಟ್ಟ ನಿಯಮಗಳನ್ನು ಪಾಲಿಸಿದಾಗ ಆತನು ಅವರನ್ನು ಆಶೀರ್ವದಿಸಿದನು. ಆದರೆ ಆತನು ಕೊಟ್ಟ ನೀತಿಯುತ ಮಟ್ಟಗಳನ್ನು ಅವರು ತಿರಸ್ಕರಿಸಿದಾಗ ಕಷ್ಟಪಟ್ಟರು. ದಶಾಜ್ಞೆಗಳ ಭಾಗವಾಗಿದ್ದ ಇನ್ನೆರಡು ನಿಯಮಗಳ ಬಗ್ಗೆ ಈಗ ನೋಡೋಣ.

13-14. (ಎ) ದಶಾಜ್ಞೆಗಳ ಭಾಗವಾಗಿದ್ದ ಮೊದಲ ಎರಡು ಆಜ್ಞೆಗಳು ಏನಾಗಿದ್ದವು? (ಬಿ) ಆ ಆಜ್ಞೆಗಳನ್ನು ಪಾಲಿಸುವುದರಿಂದ ಇಸ್ರಾಯೇಲ್ಯರಿಗೆ ಹೇಗೆ ಪ್ರಯೋಜನವಾಯಿತು?

13 ಯೆಹೋವನನ್ನು ಮಾತ್ರ ಆರಾಧಿಸಬೇಕು. ದಶಾಜ್ಞೆಗಳ ಭಾಗವಾಗಿದ್ದ ಮೊದಲ ಎರಡು ಆಜ್ಞೆಗಳು ಯೆಹೋವನನ್ನು ಮಾತ್ರ ಆರಾಧಿಸಬೇಕೆಂದು ಇಸ್ರಾಯೇಲ್ಯರಿಗೆ ಕಲಿಸಿತು ಮತ್ತು ವಿಗ್ರಹಗಳನ್ನು ಆರಾಧಿಸಬಾರದು ಎಂದು ಎಚ್ಚರಿಸಿತು. (ವಿಮೋ. 20:3-6) ಯೆಹೋವನು ಈ ಆಜ್ಞೆಗಳನ್ನು ತನ್ನ ಪ್ರಯೋಜನಕ್ಕಲ್ಲ, ತನ್ನ ಜನರ ಪ್ರಯೋಜನಕ್ಕಾಗಿ ಕೊಟ್ಟನು. ಯೆಹೋವನ ಜನರು ಆತನಿಗೆ ನಿಷ್ಠೆ ತೋರಿಸಿದಾಗ ಜೀವನ ಚೆನ್ನಾಗಿತ್ತು. ಬೇರೆ ದೇಶಗಳ ದೇವರುಗಳನ್ನು ಆರಾಧಿಸಿದಾಗ ಜೀವನ ಹಾಳಾಗಿ ಹೋಯಿತು.

14 ಕಾನಾನ್ಯರ ಬಗ್ಗೆ ಯೋಚಿಸಿ. ಅವರು ಜೀವವುಳ್ಳ ಸತ್ಯದೇವರನ್ನು ಆರಾಧಿಸದೆ ಜೀವ ಇಲ್ಲದ ವಿಗ್ರಹಗಳನ್ನು ಆರಾಧಿಸಿದರು. ಇದರಿಂದ ತಮ್ಮನ್ನು ತಾವೇ ತುಚ್ಛ ಮಾಡಿಕೊಂಡರು. (ಕೀರ್ತ. 115:4-8) ಅವರ ಆರಾಧನೆಯಲ್ಲಿ ಅಸಹ್ಯವಾದ ಲೈಂಗಿಕ ಚಟುವಟಿಕೆಗಳು ಒಳಗೂಡಿದ್ದವು ಮತ್ತು ಅವರು ಮಕ್ಕಳನ್ನು ಬಲಿ ಕೊಡುತ್ತಿದ್ದರು. ಇದೇ ರೀತಿ ಇಸ್ರಾಯೇಲ್ಯರು ಯೆಹೋವನನ್ನು ಬಿಟ್ಟು ಬೇರೆ ದೇವರುಗಳನ್ನು ಆರಾಧಿಸಲು ಹೋದಾಗ ಅವರು ತಮ್ಮನ್ನೇ ತುಚ್ಛ ಮಾಡಿಕೊಂಡು ತಮ್ಮ ಕುಟುಂಬಗಳು ನೋವಿನಲ್ಲಿ ನರಳುವಂತೆ ಮಾಡಿದರು. (2 ಪೂರ್ವ. 28:1-4) ಅಧಿಕಾರದ ಸ್ಥಾನದಲ್ಲಿದ್ದವರು ಯೆಹೋವನಿಟ್ಟಿದ್ದ ನ್ಯಾಯದ ಮಟ್ಟಗಳನ್ನು ಗಾಳಿಗೆ ತೂರಿ ಅಧಿಕಾರವನ್ನು ದುರುಪಯೋಗಿಸಿದರು, ಬಡವ-ಬಲ್ಲಿದರ ಮೇಲೆ ದಬ್ಬಾಳಿಕೆ ನಡೆಸಿದರು. (ಯೆಹೆ. 34:1-4) ಆಸರೆ ಇಲ್ಲದೆ ಕಷ್ಟಪಡುತ್ತಿದ್ದ ಸ್ತ್ರೀಯರ ಮೇಲೆ ಮತ್ತು ಮಕ್ಕಳ ಮೇಲೆ ಯಾರು ದೌರ್ಜನ್ಯ ನಡೆಸಿದರೋ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತೇನೆ ಎಂದು ಯೆಹೋವನು ಇಸ್ರಾಯೇಲ್ಯರಿಗೆ ಎಚ್ಚರಿಕೆ ಕೊಟ್ಟನು. (ಧರ್ಮೋ. 10:17, 18; 27:19) ಆದರೆ ಜನ ನಿಷ್ಠೆಯಿಂದ ನಡಕೊಂಡಾಗ ಮತ್ತು ಒಬ್ಬರ ಜೊತೆ ಒಬ್ಬರು ನ್ಯಾಯವಾಗಿ ನಡಕೊಂಡಾಗ ಯೆಹೋವನು ಅವರನ್ನು ಆಶೀರ್ವದಿಸಿದನು.—1 ಅರ. 10:4-9.

ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ, ನಮಗಾಗುವ ಅನ್ಯಾಯವನ್ನು ನೋಡುತ್ತಾನೆ(ಪ್ಯಾರ 15 ನೋಡಿ)

15. ಯೆಹೋವನ ಬಗ್ಗೆ ನಾವು ಯಾವ ಪಾಠಗಳನ್ನು ಕಲಿಯಬಹುದು?

15 ಪಾಠ: ಯೆಹೋವನನ್ನು ಆರಾಧಿಸುತ್ತೇವೆಂದು ಹೇಳಿಕೊಳ್ಳುವವರು ಆತನ ಮಟ್ಟಗಳನ್ನು ಗಾಳಿಗೆ ತೂರಿ ದಬ್ಬಾಳಿಕೆ ನಡೆಸಿದಾಗ ನಾವು ಅದಕ್ಕೆ ಯೆಹೋವನೇ ಕಾರಣ ಎಂದು ಹೇಳಬಾರದು. ಆತನು ನಮ್ಮನ್ನು ಪ್ರೀತಿಸುತ್ತಾನೆ, ನಮಗೆ ಯಾರಾದರೂ ಅನ್ಯಾಯ ಮಾಡಿದರೆ ಆತನು ಅದನ್ನು ಕಂಡೂ ಕಾಣದಂತೆ ಇರುವುದಿಲ್ಲ. ಒಬ್ಬ ತಾಯಿ ತನ್ನ ಮಗುವಿನ ನೋವನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಯೆಹೋವನು ನಮ್ಮ ನೋವನ್ನು ಅರ್ಥಮಾಡಿಕೊಳ್ಳುತ್ತಾನೆ. (ಯೆಶಾ. 49:15) ಆತನು ತಕ್ಷಣ ಮಧ್ಯೆ ಬಂದು ವಿಷಯಗಳನ್ನು ಸರಿ ಮಾಡದೇ ಇರಬಹುದು. ಆದರೆ ತಪ್ಪು ಮಾಡಿ ತಿದ್ದಿಕೊಳ್ಳದವರಿಗೆ ಸಮಯ ಬಂದಾಗ ತಕ್ಕ ಶಿಕ್ಷೆ ಕೊಟ್ಟೇ ಕೊಡುತ್ತಾನೆ.

ಧರ್ಮಶಾಸ್ತ್ರವನ್ನು ಹೇಗೆ ಅನ್ವಯಿಸಬೇಕಿತ್ತು?

16-18. (ಎ) ಮೋಶೆಯ ಧರ್ಮಶಾಸ್ತ್ರದಲ್ಲಿ ಯಾವುದಕ್ಕೆ ಸಂಬಂಧಪಟ್ಟ ನಿಯಮಗಳು ಇದ್ದವು? ಉದಾಹರಣೆ ಕೊಡಿ. (ಬಿ) ಇದರಿಂದ ನಾವು ಯಾವ ಪಾಠ ಕಲಿಯುತ್ತೇವೆ?

16 ಮೋಶೆಯ ಧರ್ಮಶಾಸ್ತ್ರದಲ್ಲಿ ಇಸ್ರಾಯೇಲ್ಯರ ಜೀವನಕ್ಕೆ ಸಂಬಂಧಪಟ್ಟ ಅನೇಕ ನಿಯಮಗಳು ಇದ್ದವು. ಆದ್ದರಿಂದ ನೇಮಿತ ಹಿರೀಪುರುಷರು ಯೆಹೋವನ ಜನರ ಮೇಲೆ ನ್ಯಾಯದಿಂದ ತೀರ್ಪು ಹೊರಡಿಸುವುದು ಪ್ರಾಮುಖ್ಯವಾಗಿತ್ತು. ಅವರು ಆಧ್ಯಾತ್ಮಿಕ ವಿಚಾರಗಳಲ್ಲಿ ಮಾತ್ರ ಅಲ್ಲ, ಜನರ ಮಧ್ಯೆ ಏನಾದರೂ ತಂಟೆ-ತಕರಾರು ಇದ್ದರೆ ಅಥವಾ ಅಪರಾಧಗಳು ನಡೆದರೆ ಅದನ್ನೂ ವಿಚಾರಿಸಿ ತೀರ್ಪು ಹೊರಡಿಸಬೇಕಿತ್ತು. ಮುಂದೆ ಕೆಲವು ಉದಾಹರಣೆಗಳಿವೆ ನೋಡಿ.

17 ಒಬ್ಬ ಇಸ್ರಾಯೇಲ್ಯನು ಯಾರನ್ನಾದರೂ ಕೊಂದುಬಿಟ್ಟರೆ ಅವನಿಗೆ ಹಿರಿಯರು ಸೀದಾ ಮರಣ ದಂಡನೆ ವಿಧಿಸುತ್ತಿರಲಿಲ್ಲ. ಆ ವ್ಯಕ್ತಿಯ ಊರಲ್ಲಿರುವ ಹಿರಿಯರು ಮೊದಲು ಏನು ನಡೆಯಿತು ಎಂದು ವಿಚಾರಣೆ ಮಾಡುತ್ತಿದ್ದರು. ಆಮೇಲೆ ಅವನಿಗೆ ಮರಣ ದಂಡನೆ ಕೊಡುವುದು ಸೂಕ್ತಾನಾ ಇಲ್ಲವಾ ಎಂದು ತೀರ್ಮಾನಿಸುತ್ತಿದ್ದರು. (ಧರ್ಮೋ. 19:2-7, 11-13) ಜನಜೀವನಕ್ಕೆ ಸಂಬಂಧಪಟ್ಟ ಬೇರೆ ವಿಷಯಗಳನ್ನೂ ಹಿರಿಯರು ವಿಚಾರಿಸಿ ತೀರ್ಪು ಹೊರಡಿಸುತ್ತಿದ್ದರು. ಅಂದರೆ ಆಸ್ತಿ ವಿವಾದ ಇದ್ದರೆ ಅಥವಾ ಗಂಡ-ಹೆಂಡತಿ ಮಧ್ಯೆ ಸಮಸ್ಯೆ ಇದ್ದರೆ ಅದನ್ನು ವಿಚಾರಿಸಿ ಬೇಕಾದ ಸಲಹೆ-ಸೂಚನೆಗಳನ್ನು ಕೊಡುತ್ತಿದ್ದರು. (ವಿಮೋ. 21:35; ಧರ್ಮೋ. 22:13-19) ಹಿರಿಯರು ನ್ಯಾಯದಿಂದ ನಡಕೊಂಡಾಗ ಮತ್ತು ಇಸ್ರಾಯೇಲ್ಯರು ಧರ್ಮಶಾಸ್ತ್ರವನ್ನು ಪಾಲಿಸಿದಾಗ ಎಲ್ಲರಿಗೂ ಪ್ರಯೋಜನ ಆಯಿತು. ಇದರಿಂದ ಯೆಹೋವನಿಗೆ ಮಹಿಮೆ ಸಿಕ್ಕಿತು.—ಯಾಜ. 20:7, 8; ಯೆಶಾ. 48:17, 18.

18 ಪಾಠ: ನಾವು ಜೀವನದಲ್ಲಿ ಮಾಡುವ ಚಿಕ್ಕ-ಪುಟ್ಟ ವಿಷಯಗಳೂ ಯೆಹೋವನಿಗೆ ತುಂಬ ಮುಖ್ಯ. ಬೇರೆಯವರ ಜೊತೆ ನಾವು ನ್ಯಾಯ ಮತ್ತು ಪ್ರೀತಿಯಿಂದ ನಡಕೊಳ್ಳಬೇಕೆಂದು ಆತನು ಇಷ್ಟಪಡುತ್ತಾನೆ. ನಾವು ಏನು ಹೇಳುತ್ತೇವೋ ಮತ್ತು ಮಾಡುತ್ತೇವೋ ಅದನ್ನು ಯೆಹೋವನು ಗಮನಿಸುತ್ತಾನೆ. ನಾವು ಮನೆಯಲ್ಲಿ ಒಬ್ಬರೇ ಇರುವಾಗ ಏನು ಮಾಡುತ್ತೇವೆ ಅನ್ನುವುದು ಸಹ ಆತನ ಗಮನಕ್ಕೆ ಬರದೆ ಇರಲ್ಲ.—ಇಬ್ರಿ. 4:13.

19-21. (ಎ) ಹಿರಿಯರು ಮತ್ತು ನ್ಯಾಯಾಧಿಪತಿಗಳು ಹೇಗೆ ನಡಕೊಳ್ಳಬೇಕಿತ್ತು? (ಬಿ) ತಪ್ಪು ಮಾಡದ ವ್ಯಕ್ತಿಗೆ ಶಿಕ್ಷೆಯಾಗದಿರಲು ಯೆಹೋವನು ಯಾವ ನಿಯಮಗಳನ್ನು ಇಟ್ಟಿದ್ದನು? (ಸಿ) ಇದರಿಂದ ನಾವು ಕಲಿಯುವ ಪಾಠಗಳೇನು?

19 ಯೆಹೋವನು ತನ್ನ ಜನರನ್ನು ಅಕ್ಕಪಕ್ಕದಲ್ಲಿದ್ದ ದೇಶಗಳ ಭ್ರಷ್ಟ ಪ್ರಭಾವದಿಂದ ಕಾಪಾಡಲು ಬಯಸಿದನು. ಆದ್ದರಿಂದ ಹಿರಿಯರು ಮತ್ತು ನ್ಯಾಯಾಧಿಪತಿಗಳು ಧರ್ಮಶಾಸ್ತ್ರವನ್ನು ಪಕ್ಷಪಾತವಿಲ್ಲದೆ ಅನ್ವಯಿಸಬೇಕೆಂದು ಹೇಳಿದನು. ಕಾನೂನನ್ನು ಅನ್ವಯಿಸಲು ಹೋಗಿ ಅವರು ಕ್ರೂರವಾಗಿ ವರ್ತಿಸಬಾರದಿತ್ತು. ಅವರು ನ್ಯಾಯವನ್ನು ಪ್ರೀತಿಸುವವರು ಎಂದು ತೋರಿಸಬೇಕಿತ್ತು.—ಧರ್ಮೋ. 1:13-17; 16:18-20.

20 ಯೆಹೋವನಿಗೆ ತನ್ನ ಜನರ ಮೇಲೆ ಅನುಕಂಪ ಇತ್ತು. ಆದ್ದರಿಂದ ಅವರಿಗೆ ಅನ್ಯಾಯ ಆಗದ ಹಾಗೆ ಕೆಲವು ನಿಯಮಗಳನ್ನು ಹೊರಡಿಸಿದ್ದನು. ಉದಾಹರಣೆಗೆ, ತಪ್ಪು ಮಾಡದ ವ್ಯಕ್ತಿಗೆ ಶಿಕ್ಷೆಯಾಗುವುದನ್ನು ತಡೆಯಲು ಕೆಲವು ನಿಯಮಗಳಿದ್ದವು. ಯಾರ ಮೇಲೆ ಆರೋಪ ಹಾಕಲಾಗಿದೆಯೋ ಆ ವ್ಯಕ್ತಿಗೆ ತನ್ನ ಮೇಲೆ ಯಾರು ಆರೋಪ ಹಾಕುತ್ತಿದ್ದಾರೆ ಎಂದು ತಿಳುಕೊಳ್ಳುವ ಹಕ್ಕಿತ್ತು. (ಧರ್ಮೋ. 19:16-19; 25:1) ಆರೋಪ ನಿಜ ಎಂದು ಸಾಬೀತುಪಡಿಸಲು ಇಬ್ಬರು ಸಾಕ್ಷಿಗಳಾದರೂ ಬೇಕಿತ್ತು. (ಧರ್ಮೋ. 17:6; 19:15) ಆದರೆ ಒಬ್ಬ ಇಸ್ರಾಯೇಲ್ಯನು ಮಾಡಿದ ತಪ್ಪಿಗೆ ಒಬ್ಬ ಸಾಕ್ಷಿ ಮಾತ್ರ ಇದ್ದರೆ ಆಗೇನು? ತಾನು ದಂಡನೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಅಪರಾಧಿ ನೆನಸಲು ಸಾಧ್ಯವಿರಲಿಲ್ಲ. ಯಾಕೆಂದರೆ ಯೆಹೋವನು ಎಲ್ಲವನ್ನೂ ನೋಡುತ್ತಿದ್ದನು. ಕುಟುಂಬದಲ್ಲಿ ತಂದೆಗಳಿಗೆ ಅಧಿಕಾರ ಇತ್ತು. ಆದರೆ ಈ ಅಧಿಕಾರಕ್ಕೆ ಮಿತಿ ಇತ್ತು. ಕುಟುಂಬದಲ್ಲಿ ಏಳಬಹುದಾದ ಕೆಲವು ಸಮಸ್ಯೆಗಳಲ್ಲಿ ಊರಿನ ಹಿರಿಯರು ಮಧ್ಯಸ್ಥಿಕೆ ವಹಿಸಿ ತೀರ್ಪು ಕೊಡುತ್ತಿದ್ದರು.—ಧರ್ಮೋ. 21:18-21.

21 ಪಾಠ: ಯೆಹೋವನು ಈ ವಿಷಯದಲ್ಲಿ ಅತ್ಯುತ್ತಮ ಮಾದರಿ ಇಟ್ಟಿದ್ದಾನೆ. ಆತನೆಂದೂ ಅನ್ಯಾಯವಾಗಿ ನಡಕೊಳ್ಳಲ್ಲ. (ಕೀರ್ತ. 9:7) ತನ್ನ ಮಟ್ಟಗಳನ್ನು ಚಾಚೂತಪ್ಪದೆ ಪಾಲಿಸುವವರನ್ನು ಆತನು ಆಶೀರ್ವದಿಸುತ್ತಾನೆ. ಆದರೆ ಅಧಿಕಾರವನ್ನು ದುರುಪಯೋಗಿಸಿದರೆ ಶಿಕ್ಷೆ ಕೊಡುತ್ತಾನೆ. (2 ಸಮು. 22:21-23; ಯೆಹೆ. 9:9, 10) ಕೆಲವರು ತಪ್ಪು ಮಾಡಿ ತಪ್ಪಿಸಿಕೊಂಡಿದ್ದಾರೆ ಎಂದು ನಮಗನಿಸಬಹುದು. ಆದರೆ ಸರಿಯಾದ ಸಮಯಕ್ಕೆ ಯೆಹೋವನು ಅವರಿಗೆ ತಕ್ಕ ಶಿಸ್ತನ್ನು ಕೊಡುತ್ತಾನೆ. (ಜ್ಞಾನೋ. 28:13) ಆಗಲೂ ಅವರು ತಿದ್ದಿಕೊಂಡಿಲ್ಲ ಅಂದರೆ “ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವದು ಭಯಂಕರವಾದದ್ದು” ಎಂದವರು ಬೇಗ ಅರ್ಥಮಾಡಿಕೊಳ್ಳುತ್ತಾರೆ.—ಇಬ್ರಿ. 10:30, 31.

ಧರ್ಮಶಾಸ್ತ್ರದಿಂದ ಮುಖ್ಯವಾಗಿ ಯಾರಿಗೆ ಸಂರಕ್ಷಣೆ ಸಿಗುತ್ತಿತ್ತು?

ವಾದ-ವಿವಾದಗಳನ್ನು ನಿರ್ವಹಿಸುವಾಗ ಹಿರಿಯರು ಯೆಹೋವನಂತೆ ಜನರನ್ನು ಮತ್ತು ನ್ಯಾಯವನ್ನು ಪ್ರೀತಿಸುವವರೆಂದು ತೋರಿಸಬೇಕಿತ್ತು (ಪ್ಯಾರ 22 ನೋಡಿ) *

22-24. (ಎ) ಧರ್ಮಶಾಸ್ತ್ರ ಮುಖ್ಯವಾಗಿ ಯಾರನ್ನು ಸಂರಕ್ಷಿಸಿತು? (ಬಿ) ಇದರಿಂದ ಯೆಹೋವನ ಬಗ್ಗೆ ನಮಗೇನು ಗೊತ್ತಾಗುತ್ತದೆ? (ಸಿ) ವಿಮೋಚನಕಾಂಡ 22:22-24 ರಲ್ಲಿ ಯಾವ ಎಚ್ಚರಿಕೆ ಇದೆ?

22 ಧರ್ಮಶಾಸ್ತ್ರ ಮುಖ್ಯವಾಗಿ ಯಾರು ತಮ್ಮನ್ನು ತಾವೇ ಸಂರಕ್ಷಿಸಿಕೊಳ್ಳಲು ಸಾಧ್ಯವಿಲ್ಲವೋ ಅಂಥವರಿಗೆ ಸಂರಕ್ಷಣೆ ನೀಡಿತು. ಅಂದರೆ ಅನಾಥರಿಗೆ, ವಿಧವೆಯರಿಗೆ ಮತ್ತು ಪರದೇಶಿಯರಿಗೆ ಇದರಿಂದ ಸಂರಕ್ಷಣೆ ಸಿಕ್ಕಿತು. ಇಸ್ರಾಯೇಲಿನಲ್ಲಿದ್ದ ನ್ಯಾಯಾಧಿಪತಿಗಳಿಗೆ ಯೆಹೋವನು ಹೀಗೆ ಹೇಳಿದನು: “ನೀವು ಪರದೇಶಿಯ ಅಥವಾ ದಿಕ್ಕಿಲ್ಲದವನ ವ್ಯಾಜ್ಯವನ್ನು ವಿಚಾರಿಸುವಾಗ ನ್ಯಾಯವನ್ನು ಬಿಟ್ಟು ತೀರ್ಪು ಕೊಡಬಾರದು. ವಿಧವೆಯಿಂದ ಉಡುವ ಬಟ್ಟೆಯನ್ನು ಒತ್ತೆಯಿಡಿಸಿಕೊಳ್ಳಬಾರದು.” (ಧರ್ಮೋ. 24:17) ಸಮಾಜದಲ್ಲಿ ಪಾಪದವರು ಯಾರಿದ್ದರೋ ಅವರಿಗೆ ಯೆಹೋವನು ತುಂಬ ಆಸಕ್ತಿ ತೋರಿಸಿದನು. ಯಾರಾದರೂ ಇಂಥವರ ಮೇಲೆ ಶೋಷಣೆ ಮಾಡಲು ಬಂದರೆ ಅವರಿಗೆ ಶಿಕ್ಷೆ ಕೊಡುತ್ತಿದ್ದನು.—ವಿಮೋಚನಕಾಂಡ 22:22-24 ಓದಿ.

23 ಧರ್ಮಶಾಸ್ತ್ರ ಒಂದೇ ಕುಟುಂಬದಲ್ಲಿದ್ದ ಸದಸ್ಯರನ್ನು ಸಹ ಸಂರಕ್ಷಿಸಿತು. ಹೇಗೆಂದರೆ ಹತ್ತಿರದ ಸಂಬಂಧಿಗಳ ಮಧ್ಯೆ ಲೈಂಗಿಕ ಸಂಬಂಧ ಇರಬಾರದೆಂದು ಕಡಾಖಂಡಿತವಾಗಿ ಹೇಳಿತ್ತು. (ಯಾಜ. 18:6-30) ಇಸ್ರಾಯೇಲಿನ ಸುತ್ತಮುತ್ತ ಇದ್ದ ದೇಶಗಳಲ್ಲಿ ಇಂಥ ಸಂಬಂಧಗಳು ಸರ್ವಸಾಮಾನ್ಯವಾಗಿತ್ತು. ಆದರೆ ಯೆಹೋವನ ಜನರು ಅದನ್ನು ಅಸಹ್ಯವಾಗಿ ಪರಿಗಣಿಸಬೇಕಿತ್ತು. ಯಾಕೆಂದರೆ ಯೆಹೋವನಿಗೆ ಅದು ಅಸಹ್ಯವಾಗಿತ್ತು.

24 ಪಾಠ: ಯೆಹೋವನು ಯಾರನ್ನು ಜವಾಬ್ದಾರಿಯ ಸ್ಥಾನದಲ್ಲಿಟ್ಟಿದ್ದಾನೋ ಅವರು ತಮ್ಮ ಉಸ್ತುವಾರಿಯ ಕೆಳಗಿರುವವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ. ಆತನು ಲೈಂಗಿಕ ಅಪರಾಧಗಳನ್ನು ದ್ವೇಷಿಸುತ್ತಾನೆ. ಎಲ್ಲರಿಗೂ ಬೇಕಾದ ಸಂರಕ್ಷಣೆ ಮತ್ತು ನ್ಯಾಯ ಸಿಗಬೇಕೆಂದು ಆತನು ಬಯಸುತ್ತಾನೆ. ಮುಖ್ಯವಾಗಿ ಅಮಾಯಕರ ಬಗ್ಗೆ ಆತನು ತುಂಬ ಕಾಳಜಿ ವಹಿಸುತ್ತಾನೆ.

ಧರ್ಮಶಾಸ್ತ್ರ “ಬರಲಿರುವ ಒಳ್ಳೆಯ ವಿಷಯಗಳ ಛಾಯೆಯಾಗಿದೆ”

25-26. (ಎ) ಪ್ರೀತಿ ಮತ್ತು ನ್ಯಾಯ ಜೀವ ಮತ್ತು ಶ್ವಾಸದಂತೆ ಇದೆ ಎಂದು ಯಾಕೆ ಹೇಳಬಹುದು? (ಬಿ) ಈ ಸರಣಿಯಲ್ಲಿ ಬರಲಿರುವ ಮುಂದಿನ ಲೇಖನದಲ್ಲಿ ನಾವು ಯಾವುದರ ಬಗ್ಗೆ ಮಾತಾಡಲಿದ್ದೇವೆ?

25 ಪ್ರೀತಿ ಮತ್ತು ನ್ಯಾಯ ಜೀವ ಮತ್ತು ಶ್ವಾಸ ಇದ್ದಂತೆ. ಜೀವ ಇಲ್ಲದೆ ಶ್ವಾಸ ಇಲ್ಲ, ಶ್ವಾಸ ಇಲ್ಲದೆ ಜೀವ ಇಲ್ಲ. ಯೆಹೋವನು ನಮ್ಮ ಜೊತೆ ನ್ಯಾಯವಾಗಿ ನಡಕೊಳ್ಳುತ್ತಿದ್ದಾನೆ ಎಂದು ನಮಗೆ ಅರ್ಥವಾದಾಗ ಆತನ ಮೇಲಿರುವ ಪ್ರೀತಿ ಜಾಸ್ತಿ ಆಗುತ್ತದೆ. ನಾವು ಆತನನ್ನು ಪ್ರೀತಿಸುತ್ತಾ ಆತನ ನೀತಿಯ ಮಟ್ಟಗಳನ್ನೂ ಪ್ರೀತಿಸುವಾಗ ಬೇರೆಯವರನ್ನು ಪ್ರೀತಿಸುತ್ತೇವೆ ಮತ್ತು ಅವರ ಜೊತೆ ನ್ಯಾಯದಿಂದ ನಡಕೊಳ್ಳುತ್ತೇವೆ.

26 ಮೋಶೆಯ ಮೂಲಕ ಕೊಡಲಾದ ಧರ್ಮಶಾಸ್ತ್ರ ಯೆಹೋವ ಮತ್ತು ಇಸ್ರಾಯೇಲ್ಯರ ಮಧ್ಯೆ ಇದ್ದ ಸಂಬಂಧಕ್ಕೆ ಜೀವ ಕೊಟ್ಟಂತೆ ಇತ್ತು. ಆದರೆ ಯೇಸು ಧರ್ಮಶಾಸ್ತ್ರವನ್ನು ಪೂರೈಸಿದ ಮೇಲೆ ಅದನ್ನು ತೆಗೆದುಹಾಕಲಾಯಿತು. ಅದರ ಜಾಗದಲ್ಲಿ ಅದಕ್ಕಿಂತಲೂ ಉತ್ತಮವಾದ ಇನ್ನೊಂದು ನಿಯಮವನ್ನು ತರಲಾಯಿತು. (ರೋಮ. 10:4) ಆದ್ದರಿಂದ ಅಪೊಸ್ತಲ ಪೌಲನು ಧರ್ಮಶಾಸ್ತ್ರವನ್ನು “ಬರಲಿರುವ ಒಳ್ಳೆಯ ವಿಷಯಗಳ ಛಾಯೆ” ಎಂದು ಕರೆದನು. (ಇಬ್ರಿ. 10:1) ಈ ಸರಣಿಯ ಮುಂದಿನ ಲೇಖನದಲ್ಲಿ, ಆ ಒಳ್ಳೇ ವಿಷಯಗಳಲ್ಲಿ ಕೆಲವೊಂದನ್ನು ಚರ್ಚೆ ಮಾಡೋಣ. ಪ್ರೀತಿ ಮತ್ತು ನ್ಯಾಯವನ್ನು ಕ್ರೈಸ್ತ ಸಭೆಯಲ್ಲಿ ಹೇಗೆ ತೋರಿಸುವುದು ಎಂದು ಚರ್ಚಿಸೋಣ.

ಗೀತೆ 73 ಹೃದಯದಾಳದಿಂದ ಪ್ರೀತಿಸಿರಿ

^ ಪ್ಯಾರ. 5 ನಾಲ್ಕು ಲೇಖನಗಳು ಇರುವ ಒಂದು ಸರಣಿಯಲ್ಲಿ ಇದು ಮೊದಲನೇ ಲೇಖನ. ಯೆಹೋವನು ನಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ ಎಂಬ ಆಶ್ವಾಸನೆ ಈ ನಾಲ್ಕು ಲೇಖನಗಳಿಂದ ನಮಗೆ ಸಿಗುತ್ತದೆ. ಉಳಿದ ಮೂರು ಲೇಖನಗಳು 2019 ರ ಮೇ ತಿಂಗಳ ಕಾವಲಿನಬುರುಜುವಿನಲ್ಲಿ ಬರಲಿವೆ. ಆ ಲೇಖನಗಳಲ್ಲಿ, “ಕ್ರೈಸ್ತ ಸಭೆಯಲ್ಲಿ ಪ್ರೀತಿ ಮತ್ತು ನ್ಯಾಯವನ್ನು ಹೇಗೆ ತೋರಿಸಬೇಕು, “ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಈ ಗುಣಗಳನ್ನು ಹೇಗೆ ತೋರಿಸಬೇಕು ಮತ್ತು “ಇಂಥ ವ್ಯಕ್ತಿಗಳಿಗೆ ಹೇಗೆ ಸಾಂತ್ವನ ಕೊಡಬೇಕು ಅನ್ನುವುದರ ಬಗ್ಗೆ ಮಾಹಿತಿ ಇರುತ್ತದೆ.

^ ಪ್ಯಾರ. 2 ಪದ ವಿವರಣೆ: ಯೆಹೋವನು ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟ 600ಕ್ಕಿಂತ ಹೆಚ್ಚು ನಿಯಮಗಳನ್ನು “ಧರ್ಮಶಾಸ್ತ್ರ” “ಮೋಶೆಯ ಧರ್ಮಶಾಸ್ತ್ರ” “ಆಜ್ಞೆಗಳು” ಎಂದು ಕರೆಯಲಾಗಿದೆ. ಅಷ್ಟೇ ಅಲ್ಲ, ಬೈಬಲಲ್ಲಿರುವ ಮೊದಲ ಐದು ಪುಸ್ತಕಗಳನ್ನು (ಆದಿಕಾಂಡದಿಂದ ಧರ್ಮೋಪದೇಶಕಾಂಡ) ಸಹ ಅನೇಕ ಸಲ ಧರ್ಮಶಾಸ್ತ್ರ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಇಡೀ ಹೀಬ್ರು ಶಾಸ್ತ್ರಗ್ರಂಥವನ್ನು ಧರ್ಮಶಾಸ್ತ್ರ ಎಂದು ಕರೆಯಲಾಗಿದೆ.

^ ಪ್ಯಾರ. 60 ಚಿತ್ರ ವಿವರಣೆ: ಇಸ್ರಾಯೇಲಿನಲ್ಲಿ ಒಬ್ಬ ತಾಯಿ ಅಡಿಗೆ ಮಾಡುತ್ತಿರುವಾಗ ತನ್ನ ಹೆಣ್ಣುಮಕ್ಕಳೊಂದಿಗೆ ಲವಲವಿಕೆಯಿಂದ ಮಾತಾಡುತ್ತಿದ್ದಾಳೆ. ಹಿಂದೆ ಸ್ವಲ್ಪ ದೂರದಲ್ಲಿ, ತಂದೆ ತನ್ನ ಮಗನಿಗೆ ಕುರಿ ಕಾಯುವುದು ಹೇಗೆ ಎಂದು ಕಲಿಸುತ್ತಿದ್ದಾನೆ.

^ ಪ್ಯಾರ. 64 ಚಿತ್ರ ವಿವರಣೆ: ಊರ ಬಾಗಿಲಲ್ಲಿರುವ ಹಿರಿಯರು ಒಬ್ಬ ವ್ಯಾಪಾರಿಯಿಂದ ಅನ್ಯಾಯಕ್ಕೆ ಒಳಗಾಗಿರುವ ಒಬ್ಬ ವಿಧವೆ ಮತ್ತು ಅವಳ ಮಗನಿಗೆ ಪ್ರೀತಿಯಿಂದ ಸಹಾಯ ಮಾಡುತ್ತಿದ್ದಾರೆ.