ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 12

ಬೇರೆಯವರ ಭಾವನೆಗಳಿಗೆ ಬೆಲೆಕೊಡಿ

ಬೇರೆಯವರ ಭಾವನೆಗಳಿಗೆ ಬೆಲೆಕೊಡಿ

‘ನೀವೆಲ್ಲರೂ ಅನುಕಂಪ ತೋರಿಸಿ.’—1 ಪೇತ್ರ 3:8.

ಗೀತೆ 121 ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ

ಕಿರುನೋಟ *

1. ಒಂದನೇ ಪೇತ್ರ 3:8​ರಲ್ಲಿ ಇರುವಂತೆ ನಮ್ಮ ಬಗ್ಗೆ ಚಿಂತೆ ಮಾಡುವ, ನಮ್ಮ ಭಾವನೆಗಳಿಗೆ ಬೆಲೆಕೊಡುವ ಜನರ ಜೊತೆ ಇರಲು ನಾವು ಇಷ್ಟಪಡುತ್ತೇವೆ. ಯಾಕೆ?

ನಮ್ಮ ಬಗ್ಗೆ ಚಿಂತೆ ಮಾಡುವ, ನಮ್ಮ ಭಾವನೆಗಳಿಗೆ ಬೆಲೆಕೊಡುವ ಜನರ ಜೊತೆ ಇರುವುದೆಂದರೆ ನಮ್ಮೆಲ್ಲರಿಗೂ ಇಷ್ಟ. ಯಾಕೆಂದರೆ ಇಂಥ ವ್ಯಕ್ತಿಗಳು ನಮ್ಮ ಜಾಗದಲ್ಲಿ ನಿಂತು ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ, ನಮ್ಮ ನೋವು-ನಲಿವು ಅವರಿಗೆ ಅರ್ಥವಾಗುತ್ತದೆ. ನಮಗೇನು ಬೇಕು ಅಂತ ಅರ್ಥಮಾಡಿಕೊಂಡು ನಾವು ಕೇಳಿಲ್ಲ ಅಂದ್ರೂ ಸಹಾಯ ಮಾಡಲು ಮುಂದೆ ಬರುತ್ತಾರೆ. ‘ಅನುಕಂಪ ತೋರಿಸುವ’ * ಜನರು ನಮಗೆ ತುಂಬ ಅಮೂಲ್ಯ.—1 ಪೇತ್ರ 3:8 ಓದಿ.

2. ಅನುಕಂಪ ತೋರಿಸಲು ನಾವು ಯಾಕೆ ಪ್ರಯತ್ನ ಮಾಡಬೇಕಾಗುತ್ತದೆ?

2 ಕ್ರೈಸ್ತರಾಗಿರುವುದರಿಂದ ನಾವೆಲ್ಲರೂ ಅನುಕಂಪ ತೋರಿಸಲು ಬಯಸುತ್ತೇವೆ. ಆದರೆ ಇದು ಹೇಳಿದಷ್ಟು ಸುಲಭ ಅಲ್ಲ. ಯಾಕೆ? ಒಂದು ಕಾರಣ ಏನೆಂದರೆ, ನಾವೆಲ್ಲರೂ ಅಪರಿಪೂರ್ಣರು. (ರೋಮ. 3:23) ಆದ್ದರಿಂದ ನಾವು ಬೇರೆಯವರಿಗಿಂತ ಹೆಚ್ಚಾಗಿ ನಮ್ಮ ಬಗ್ಗೆನೇ ಚಿಂತೆ ಮಾಡುತ್ತಾ ಇರುತ್ತೇವೆ. ಇನ್ನೊಂದು ಕಾರಣ ಏನೆಂದರೆ, ನಾವು ಬೆಳೆದುಬಂದ ರೀತಿ ಮತ್ತು ಜೀವನದಲ್ಲಾದ ಘಟನೆಗಳಿಂದಾಗಿಯೂ ಕೆಲವೊಮ್ಮೆ ಅನುಕಂಪ ತೋರಿಸಲು ಕಷ್ಟ ಆಗಬಹುದು. ನಾವು ಅನುಕಂಪ ತೋರಿಸದೇ ಇರಲು ಇನ್ನೊಂದು ಕಾರಣನೂ ಇದೆ. ನಮ್ಮ ಸುತ್ತಲೂ ಇರುವ ಜನ. ಈ ಕಡೇ ದಿವಸಗಳಲ್ಲಿ ತುಂಬ ಜನ ಬೇರೆಯವರ ಬಗ್ಗೆ ಚಿಂತೆ ಮಾಡುವುದಿಲ್ಲ, ತಮ್ಮನ್ನು ತಾವೇ ಪ್ರೀತಿಸುತ್ತಾರೆ. (2 ತಿಮೊ. 3:1, 2) ನಾವು ಜಾಗ್ರತೆ ವಹಿಸಿಲ್ಲ ಅಂದರೆ ನಾವೂ ಅವರ ತರಾನೇ ಆಗಿಬಿಡುತ್ತೇವೆ. ಈ ಸವಾಲುಗಳನ್ನು ನಾವು ಹೇಗೆ ಜಯಿಸಬಹುದು?

3. (ಎ) ನಾವೇನು ಮಾಡಿದರೆ ಅನುಕಂಪ ತೋರಿಸುವುದು ಸುಲಭ ಆಗುತ್ತದೆ? (ಬಿ) ಈ ಲೇಖನದಲ್ಲಿ ಏನನ್ನು ಕಲಿಯಲಿದ್ದೇವೆ?

3 ನಾವು ಯೆಹೋವ ದೇವರನ್ನು ಮತ್ತು ಆತನ ಮಗನಾದ ಯೇಸು ಕ್ರಿಸ್ತನನ್ನು ಅನುಕರಿಸುವಾಗ ಅನುಕಂಪ ತೋರಿಸುವುದು ಸುಲಭ ಆಗುತ್ತದೆ. ಯೆಹೋವನು ಪ್ರೀತಿಯುಳ್ಳ ದೇವರು. ಬೇರೆಯವರ ಬಗ್ಗೆ ಚಿಂತೆ ಮಾಡುವುದು ಹೇಗೆ ಅನ್ನುವುದನ್ನು ನಾವೆಲ್ಲರೂ ಆತನಿಂದ ಕಲಿಯಬೇಕು. (1 ಯೋಹಾ. 4:8) ಯೇಸುವಿನ ವ್ಯಕ್ತಿತ್ವ ಆತನ ತಂದೆಯಾದ ಯೆಹೋವನ ತರಾನೇ ಇತ್ತು. (ಯೋಹಾ. 14:9) ಯೇಸು ಭೂಮಿಯಲ್ಲಿದ್ದಾಗ, ಒಬ್ಬ ಮನುಷ್ಯನು ಕನಿಕರದಿಂದ ನಡಕೊಳ್ಳುವುದು ಹೇಗೆ ಎಂದು ತೋರಿಸಿಕೊಟ್ಟನು. ಈ ಲೇಖನದಲ್ಲಿ, ಯೆಹೋವ ಮತ್ತು ಯೇಸು ಬೇರೆಯವರ ಭಾವನೆಗಳಿಗೆ ಹೇಗೆ ಬೆಲೆಕೊಟ್ಟರು ಎಂದು ಕಲಿಯೋಣ. ನಂತರ ಅವರಿಬ್ಬರ ಉತ್ತಮ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು ಎಂದು ನೋಡೋಣ.

ಯೆಹೋವನು ಬೇರೆಯವರ ಭಾವನೆಗಳಿಗೆ ಬೆಲೆಕೊಡುತ್ತಾನೆ

4. ಯೆಹೋವನು ತನ್ನ ಸೇವಕರ ಭಾವನೆಗಳಿಗೆ ಬೆಲೆಕೊಡುತ್ತಾನೆ ಎಂದು ಯೆಶಾಯ 63:7-9​ರಿಂದ ಹೇಗೆ ಗೊತ್ತಾಗುತ್ತದೆ?

4 ಯೆಹೋವನು ತನ್ನ ಸೇವಕರ ಭಾವನೆಗಳಿಗೆ ಬೆಲೆಕೊಡುತ್ತಾನೆ ಎಂದು ನಮಗೆ ಬೈಬಲಿಂದ ಗೊತ್ತಾಗುತ್ತದೆ. ಉದಾಹರಣೆಗೆ, ಪ್ರಾಚೀನ ಇಸ್ರಾಯೇಲ್ಯರು ಕಷ್ಟಪಡುತ್ತಿದ್ದಾಗ ಆತನಿಗೂ ಕಷ್ಟ ಆಯಿತೆಂದು ದೇವರ ವಾಕ್ಯ ಹೇಳುತ್ತದೆ. (ಯೆಶಾಯ 63:7-9 ಓದಿ.) ತನ್ನ ಜನರಿಗೆ ಯಾರಾದರೂ ಕಷ್ಟ ಕೊಟ್ಟರೆ ಅದು ತನಗೇ ಕಷ್ಟ ಕೊಟ್ಟಂತೆ ಎಂದು ಸಹ ಯೆಹೋವನು ಹೇಳಿದ್ದಾನೆ. ‘ನಿಮ್ಮನ್ನು ತಾಕುವವನು ನನ್ನ ಕಣ್ಣನ್ನು ತಾಕುವವನಾಗಿದ್ದಾನೆ’ ಎಂದು ಹೇಳಿದನು. (ಜೆಕ. 2:8) ಯೆಹೋವನು ತನ್ನ ಜನರನ್ನು ಎಷ್ಟು ಅಮೂಲ್ಯವಾಗಿ ಕಾಣುತ್ತಾನೆ ಎಂದು ಇದರಿಂದ ಗೊತ್ತಾಗುತ್ತದೆ.

ಯೆಹೋವನು ಅನುಕಂಪದಿಂದ ಇಸ್ರಾಯೇಲ್ಯರನ್ನು ಐಗುಪ್ತದ ಬಂಧಿವಾಸದಿಂದ ಬಿಡಿಸಿದನು (ಪ್ಯಾರ 5 ನೋಡಿ)

5. ಕಷ್ಟಪಡುತ್ತಿರುವ ತನ್ನ ಸೇವಕರನ್ನು ಕಾಪಾಡಲು ಯೆಹೋವನು ಏನು ಮಾಡುತ್ತಾನೆ? ಉದಾಹರಣೆ ಕೊಡಿ.

5 ತನ್ನ ಜನರು ಕಷ್ಟಪಡುವಾಗ ಯೆಹೋವನಿಗೆ ಅವರ ಮೇಲೆ ಅನುಕಂಪ ಹುಟ್ಟುವುದು ಮಾತ್ರ ಅಲ್ಲ ಅದನ್ನು ಆತನು ತೋರಿಸುತ್ತಾನೆ ಕೂಡ. ಉದಾಹರಣೆಗೆ, ಇಸ್ರಾಯೇಲ್ಯರು ಐಗುಪ್ತದಲ್ಲಿ ಗುಲಾಮರಾಗಿ ಕಷ್ಟಪಡುತ್ತಿದ್ದಾಗ ಯೆಹೋವನು ಅವರ ನೋವನ್ನು ಅರ್ಥಮಾಡಿಕೊಂಡು ಅದನ್ನು ನಿವಾರಿಸಲು ಏನು ಮಾಡಬೇಕೋ ಅದನ್ನು ಮಾಡಿದನು. ಆತನು ಮೋಶೆಗೆ ಹೀಗಂದನು: ‘ನನ್ನ ಜನರ ದುರವಸ್ಥೆಯನ್ನು ಖಂಡಿತ ನೋಡಿದ್ದೇನೆ. ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನೆಲ್ಲಾ ನಾನು ಬಲ್ಲೆನು. ಆದಕಾರಣ ಅವರನ್ನು ಐಗುಪ್ತ್ಯರ ಕೈಯೊಳಗಿಂದ ತಪ್ಪಿಸುವದಕ್ಕೆ ಇಳಿದುಬಂದಿದ್ದೇನೆ.’ (ವಿಮೋ. 3:7, 8) ಯೆಹೋವನಿಗೆ ತನ್ನ ಜನರ ಮೇಲೆ ಅನುಕಂಪ ಹುಟ್ಟಿದ್ದರಿಂದ ಅವರನ್ನು ದಾಸತ್ವದಿಂದ ಬಿಡಿಸಿದನು. ಇದಾಗಿ ಶತಮಾನಗಳು ಕಳೆದ ಮೇಲೆ ಇಸ್ರಾಯೇಲ್ಯರು ವಾಗ್ದತ್ತ ದೇಶದಲ್ಲಿದ್ದಾಗ ವೈರಿಗಳು ಕಾಟ ಕೊಡಲು ಆರಂಭಿಸಿದರು. ಆಗ ಯೆಹೋವನು ಏನು ಮಾಡಿದನು? ‘ವೈರಿಗಳ ಹಿಂಸೆಯನ್ನು ತಾಳಲಾರದ ಇಸ್ರಾಯೇಲ್ಯರ ಗೋಳಾಟವನ್ನು ಯೆಹೋವನು ಕೇಳಿ ಕನಿಕರಪಟ್ಟನು.’ ಯೆಹೋವನಲ್ಲಿ ಅನುಕಂಪ ಇದ್ದದರಿಂದ ಆಗಲೂ ಆತನು ತನ್ನ ಜನರನ್ನು ಕಾಪಾಡಲು ಮುಂದೆ ಬಂದನು. ನ್ಯಾಯಸ್ಥಾಪಕರನ್ನು ಕಳುಹಿಸಿ ಇಸ್ರಾಯೇಲ್ಯರನ್ನು ಅವರ ವೈರಿಗಳಿಂದ ಕಾಪಾಡಿದನು.—ನ್ಯಾಯ. 2:16, 18.

6. ತಮ್ಮ ಯೋಚನೆ ಸರಿ ಇಲ್ಲದ ವ್ಯಕ್ತಿಗಳ ಭಾವನೆಯನ್ನೂ ಯೆಹೋವನು ಅರ್ಥಮಾಡಿಕೊಳ್ಳುತ್ತಾನಾ? ಉದಾಹರಣೆ ಕೊಡಿ.

6 ತನ್ನ ಜನರ ಯೋಚನೆ ಸರಿ ಇಲ್ಲದಿದ್ದಾಗಲೂ ಯೆಹೋವನು ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ನಡೆಯುತ್ತಾನೆ. ಯೋನನ ಉದಾಹರಣೆ ನೋಡಿ. ದೇವರು ಈ ಪ್ರವಾದಿಗೆ ನಿನೆವೆಗೆ ಹೋಗಿ ಒಂದು ನ್ಯಾಯತೀರ್ಪಿನ ಸಂದೇಶವನ್ನು ಸಾರುವಂತೆ ಹೇಳಿದನು. ಆ ಊರಿನ ಜನ ಪಶ್ಚಾತ್ತಾಪಪಟ್ಟಾಗ ಯೆಹೋವನು ಅವರನ್ನು ನಾಶಮಾಡಲಿಲ್ಲ. ಆದರೆ ದೇವರ ಈ ತೀರ್ಪು ಯೋನನಿಗೆ ಇಷ್ಟ ಆಗಲಿಲ್ಲ. ಆತನು ಸಾರಿದಂತೆ ನಿನೆವೆ ನಾಶ ಆಗಲಿಲ್ಲ ಎಂದು ನೆನಸಿ ಆತನಿಗೆ ‘ತುಂಬ ಕರಕರೆಯಾಯಿತು.’ ಆದರೆ ಯೆಹೋವನು ಯೋನನ ಜೊತೆ ತಾಳ್ಮೆಯಿಂದ ನಡಕೊಂಡನು. ಅವನ ಯೋಚನೆಯನ್ನು ಬದಲಾಯಿಸಲು ಸಹಾಯ ಮಾಡಿದನು. (ಯೋನ 3:10–4:11) ಸ್ವಲ್ಪ ಸಮಯ ಆದ ಮೇಲೆ ಯೋನನಿಗೆ ವಿಷಯ ಅರ್ಥ ಆಯಿತು. ಆಮೇಲೆ ಯೆಹೋವ ದೇವರು ನಡೆದ ಸಂಗತಿಯನ್ನು ಬರೆಯಲು ಯೋನನನ್ನೇ ಉಪಯೋಗಿಸಿದನು. ಯೋನನು ಬರೆದ ವೃತ್ತಾಂತದಿಂದ ನಮಗೆ ತುಂಬ ಪ್ರಯೋಜನ ಸಿಗುತ್ತದೆ.—ರೋಮ. 15:4. *

7. ಯೆಹೋವನು ತನ್ನ ಜನರ ಜೊತೆ ನಡಕೊಂಡ ವಿಧದಿಂದ ನಮಗೆ ಯಾವ ಆಶ್ವಾಸನೆ ಸಿಗುತ್ತದೆ?

7 ಯೆಹೋವನು ತನ್ನ ಜನರ ಜೊತೆ ನಡಕೊಂಡ ವಿಧದಿಂದ ಆತನಿಗೆ ತನ್ನ ಸೇವಕರ ಮೇಲೆ ಅನುಕಂಪ ಇದೆ ಎಂದು ಗೊತ್ತಾಗುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೂ ಅನುಭವಿಸುವ ನೋವು-ವೇದನೆ ಆತನಿಗೆ ಅರ್ಥವಾಗುತ್ತದೆ. ಯಾಕೆಂದರೆ ಯೆಹೋವನು ‘ಮನುಷ್ಯರ ಹೃದಯಗಳನ್ನು ಬಲ್ಲವನಾಗಿದ್ದಾನೆ.’ (2 ಪೂರ್ವ. 6:30) ಆತನಿಗೆ ನಮ್ಮ ಮನದಾಳದ ಭಾವನೆಗಳು ಮತ್ತು ಯೋಚನೆಗಳು ಅರ್ಥವಾಗುತ್ತವೆ. ನಮ್ಮ ಇತಿಮಿತಿಗಳನ್ನೂ ಅರ್ಥಮಾಡಿಕೊಳ್ಳುತ್ತಾನೆ. ಅಷ್ಟೇ ಅಲ್ಲ, ‘ನಾವು ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ಪ್ರಲೋಭಿಸಲ್ಪಡುವಂತೆ ಆತನು ಅನುಮತಿಸುವುದಿಲ್ಲ.’ (1 ಕೊರಿಂ. 10:13) ಈ ಮಾತಿನಿಂದ ನಮಗೆ ತುಂಬ ಆಶ್ವಾಸನೆ ಸಿಗುತ್ತದೆ.

ಯೇಸು ಸಹ ಬೇರೆಯವರ ಭಾವನೆಗಳಿಗೆ ಬೆಲೆಕೊಡುತ್ತಾನೆ

8-10. ಯಾವ ಕಾರಣಗಳಿಂದಾಗಿ ಯೇಸು ಬೇರೆಯವರಿಗೆ ಕಾಳಜಿ ತೋರಿಸುತ್ತಿದ್ದನು?

8 ಯೇಸು ಭೂಮಿಯಲ್ಲಿದ್ದಾಗ ಬೇರೆಯವರಿಗೆ ತುಂಬ ಕಾಳಜಿ ತೋರಿಸಿದನು. ಇದಕ್ಕೆ ಕಡಿಮೆಪಕ್ಷ ಮೂರು ಕಾರಣಗಳು ಇದ್ದವು. ಒಂದು, ನಾವು ಆಗಲೇ ನೋಡಿದಂತೆ, ಯೇಸುವಿನ ವ್ಯಕ್ತಿತ್ವ ತನ್ನ ಸ್ವರ್ಗೀಯ ತಂದೆಯಾದ ಯೆಹೋವನ ತರಾನೇ ಇತ್ತು. ತನ್ನ ತಂದೆಯಂತೆ ಆತನು ಸಹ ಜನರನ್ನು ಪ್ರೀತಿಸಿದನು. ಯೆಹೋವನ ಜೊತೆ ಸೇರಿ ಎಲ್ಲವನ್ನೂ ಸೃಷ್ಟಿಮಾಡಿದಾಗ ಆತನಿಗೆ ಖುಷಿ ಆಯಿತು. ಆದರೆ ಆ ಎಲ್ಲ ಸೃಷ್ಟಿಯಲ್ಲಿ ಮನುಷ್ಯರೆಂದರೆ ಆತನಿಗೆ ಪಂಚಪ್ರಾಣ. (ಜ್ಞಾನೋ. 8:31) ಜನರ ಮೇಲೆ ಪ್ರೀತಿ ಇದ್ದ ಕಾರಣ ಯೇಸು ಅವರ ಭಾವನೆಗಳಿಗೆ ಬೆಲೆಕೊಟ್ಟನು.

9 ಎರಡನೇ ಕಾರಣ ಏನೆಂದರೆ, ಯೆಹೋವನಂತೆ ಯೇಸುವಿಗೆ ಕೂಡ ನಮ್ಮ ಹೃದಯದಲ್ಲಿ ಮತ್ತು ಮನಸ್ಸಲ್ಲಿ ಏನಿದೆ ಅಂತ ನೋಡುವ ಸಾಮರ್ಥ್ಯ ಇತ್ತು. (ಮತ್ತಾ. 9:4; ಯೋಹಾ. 13:10, 11) ಹಾಗಾಗಿ ಜನರು ನೋವಲ್ಲಿದ್ದರೆ ಯೇಸುವಿಗೆ ಗೊತ್ತಾಗುತ್ತಿತ್ತು. ಇದು ಗೊತ್ತಾದ ಕೂಡಲೇ ಆತನು ಅವರಿಗೆ ಸಾಂತ್ವನ ನೀಡುತ್ತಿದ್ದನು.—ಯೆಶಾ. 61:1, 2; ಲೂಕ 4:17-21.

10 ಮೂರನೇ ಕಾರಣ, ಜನರು ಎದುರಿಸುತ್ತಿದ್ದ ಕೆಲವು ಕಷ್ಟಗಳನ್ನು ಯೇಸು ಸಹ ಎದುರಿಸಿದ್ದಾನೆ. ಉದಾಹರಣೆಗೆ, ಯೇಸು ಒಂದು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದನು. ತನ್ನ ಸಾಕು ತಂದೆಯಾದ ಯೋಸೇಫನ ಜೊತೆ ಕೆಲಸ ಮಾಡುವ ಮೂಲಕ ಕಷ್ಟಪಟ್ಟು ದುಡಿಯುವುದು ಹೇಗೆ ಎಂದು ಕಲಿತನು. (ಮತ್ತಾ. 13:55; ಮಾರ್ಕ 6:3) ಯೇಸು ತನ್ನ ಸೇವೆಯನ್ನು ಆರಂಭಿಸುವ ಮುಂಚೆನೇ ಯೋಸೇಫ ತೀರಿಕೊಂಡಿರಬೇಕು. ಹಾಗಾದರೆ ಯೇಸುವಿಗೆ ಸ್ವಂತ ಕುಟುಂಬದ ಒಬ್ಬ ವ್ಯಕ್ತಿ ತೀರಿಕೊಂಡಾಗ ಎಷ್ಟು ನೋವಾಗುತ್ತದೆ ಅನ್ನುವುದು ಗೊತ್ತು ಅಂತಾಯಿತು. ಬೇರೆಬೇರೆ ಧಾರ್ಮಿಕ ನಂಬಿಕೆ ಇರುವ ಕುಟುಂಬದ ಸದಸ್ಯರ ಮಧ್ಯೆ ಜೀವಿಸುವುದು ಹೇಗೆ ಅನ್ನುವುದು ಸಹ ಯೇಸುವಿಗೆ ಗೊತ್ತು. (ಯೋಹಾ. 7:5) ಇಂಥ ಸನ್ನಿವೇಶಗಳನ್ನು ಎದುರಿಸಿದ್ದರಿಂದ ಯೇಸುವಿಗೆ ಸಾಮಾನ್ಯ ಜನರು ಎದುರಿಸುವ ಸವಾಲುಗಳು ಅರ್ಥ ಆಗುತ್ತಿತ್ತು. ಆತನು ಅವರ ಭಾವನೆಗಳನ್ನು ಅರ್ಥಮಾಡಿಕೊಂಡನು.

ಯೇಸು ಒಬ್ಬ ಕಿವುಡನಿಗೆ ಕಾಳಜಿ ತೋರಿಸುತ್ತಾ ಜನರ ಗುಂಪಿನಿಂದ ಅವನನ್ನು ದೂರ ಕರಕೊಂಡು ಹೋಗಿ ವಾಸಿಮಾಡುತ್ತಾನೆ (ಪ್ಯಾರ 11 ನೋಡಿ)

11. ಯೇಸುವಿಗೆ ಜನರ ಮೇಲೆ ತುಂಬ ಕಾಳಜಿ ಇದೆ ಎಂದು ಯಾವಾಗ ಗೊತ್ತಾಗುತ್ತಿತ್ತು? ವಿವರಿಸಿ. (ಮುಖಪುಟ ಚಿತ್ರ ನೋಡಿ.)

11 ಯೇಸು ಅದ್ಭುತಗಳನ್ನು ಮಾಡಿದಾಗ ಆತನಲ್ಲಿ ಎಷ್ಟು ಕಾಳಜಿ ಇದೆ ಎಂದು ಗೊತ್ತಾಗುತ್ತಿತ್ತು. ಯೇಸು ಅದ್ಭುತಗಳನ್ನು ಏನೋ ಮಾಡಬೇಕು ಅಂತ ಮಾಡಲಿಲ್ಲ. ಕಷ್ಟದಲ್ಲಿರುವವರನ್ನು ನೋಡಿದರೆ ಆತನ ಕರುಳು ಚುರ್‌ ಅಂತಿತ್ತು. (ಮತ್ತಾ. 20:29-34; ಮಾರ್ಕ 1:40-42) ಒಬ್ಬ ಕಿವುಡನನ್ನು ಜನರ ಗುಂಪಿನಿಂದ ದೂರ ಕರಕೊಂಡು ಹೋಗಿ ವಾಸಿಮಾಡಿದಾಗ ಮತ್ತು ಒಬ್ಬ ವಿಧವೆಯ ಒಬ್ಬನೇ ಮಗನನ್ನು ಪುನರುತ್ಥಾನ ಮಾಡಿದಾಗ ಆತನಲ್ಲಿ ಎಂಥ ಭಾವನೆಗಳು ಉಕ್ಕಿ ಬಂದಿರಬೇಕೆಂದು ಯೋಚಿಸಿ. (ಮಾರ್ಕ 7:32-35; ಲೂಕ 7:12-15) ಯೇಸು ಅವರ ನೋವನ್ನು ಅರ್ಥಮಾಡಿಕೊಂಡನು ಮತ್ತು ಸಹಾಯ ಮಾಡಲು ಮುಂದೆ ಬಂದನು.

12. ಮಾರ್ಥ ಮತ್ತು ಮರಿಯಳಿಗೆ ಯೇಸು ಅನುಕಂಪ ತೋರಿಸಿದನು ಎಂದು ಯೋಹಾನ 11:32-35​ರಿಂದ ಹೇಗೆ ಗೊತ್ತಾಗುತ್ತದೆ?

12 ಮಾರ್ಥ ಮತ್ತು ಮರಿಯಳಿಗೆ ಯೇಸು ಕ್ರಿಸ್ತ ಅನುಕಂಪ ತೋರಿಸಿದನು. ಅವರು ತಮ್ಮ ತಮ್ಮನಾದ ಲಾಜರ ತೀರಿಕೊಂಡ ದುಃಖದಲ್ಲಿದ್ದರು. ಅದನ್ನು ನೋಡಿದಾಗ “ಯೇಸು ಕಣ್ಣೀರು ಸುರಿಸಿದನು.” (ಯೋಹಾನ 11:32-35 ಓದಿ.) ಒಬ್ಬ ಒಳ್ಳೇ ಸ್ನೇಹಿತನನ್ನು ಕಳಕೊಂಡೆ ಎಂದು ಆತನು ಅಳಲಿಲ್ಲ. ಯಾಕೆಂದರೆ ಲಾಜರನನ್ನು ಸ್ವಲ್ಪ ಹೊತ್ತಲ್ಲಿ ಪುನರುತ್ಥಾನ ಮಾಡಲಿದ್ದೇನೆ ಎಂದು ಆತನಿಗೆ ಗೊತ್ತಿತ್ತು. ಲಾಜರ ತೀರಿಕೊಂಡದ್ದರಿಂದ ತನ್ನ ಸ್ನೇಹಿತರು ನೋವಿನಲ್ಲಿರುವುದನ್ನು ನೋಡಿ ಅವರ ಭಾವನೆಗಳಿಗೆ ಸ್ಪಂದಿಸುತ್ತಾ ಅತ್ತನು.

13. ಯೇಸು ಜನರಿಗೆ ಅನುಕಂಪ ತೋರಿಸುತ್ತಿದ್ದನು ಅನ್ನುವ ವಿಷಯ ಕೇಳಿ ನಮಗೆ ಯಾಕೆ ಸಂತೋಷ ಆಗುತ್ತದೆ?

13 ಯೇಸು ಜನರಿಗೆ ಅನುಕಂಪ ತೋರಿಸುತ್ತಿದ್ದನು ಅನ್ನುವ ವಿಷಯ ಕೇಳಿ ನಮಗೆ ಸಂತೋಷವಾಗುತ್ತದೆ. ನಾವು ಆತನಂತೆ ಪರಿಪೂರ್ಣರಲ್ಲ. ಆದರೂ ಆತನು ಬೇರೆಯವರ ಜೊತೆ ನಡಕೊಳ್ಳುತ್ತಿದ್ದ ರೀತಿ ನೋಡಿ ನಮಗೆ ಆತನ ಮೇಲೆ ಪ್ರೀತಿ ಹೆಚ್ಚಾಗುತ್ತದೆ. (1 ಪೇತ್ರ 1:8) ಆತನು ಈಗ ದೇವರ ರಾಜ್ಯದ ರಾಜನಾಗಿ ಆಳುತ್ತಿದ್ದಾನೆ ಅಂತ ತಿಳಿದು ತುಂಬ ಸಂತೋಷ ಆಗುತ್ತದೆ. ಯೇಸು ಕೂಡ ಒಂದು ಕಾಲದಲ್ಲಿ ಮಾನವನಾಗಿ ಇದ್ದು ಎಲ್ಲ ರೀತಿ ಕಷ್ಟಪಟ್ಟಿದ್ದರಿಂದ ನಮ್ಮ ನೋವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ. ಸೈತಾನನ ಆಳ್ವಿಕೆಯ ಕೆಳಗೆ ನಾವು ಅನುಭವಿಸಿದ್ದ ಎಲ್ಲಾ ನೋವನ್ನು ಬೇಗ ತೆಗೆದುಹಾಕುತ್ತಾನೆ. ನಮ್ಮ ಬಲಹೀನತೆಗಳನ್ನು ಅರ್ಥಮಾಡಿಕೊಂಡು ನಡೆಯುವ ಒಬ್ಬ ನಾಯಕ ನಮಗೆ ಸಿಕ್ಕಿರುವುದು ಒಂದು ದೊಡ್ಡ ಆಶೀರ್ವಾದ ಅಲ್ವಾ?—ಇಬ್ರಿ. 2:17, 18; 4:15, 16.

ಯೆಹೋವ ಮತ್ತು ಯೇಸುವಿನಂತೆ ಬೇರೆಯವರ ಭಾವನೆಗಳಿಗೆ ಬೆಲೆಕೊಡಿ

14. ಎಫೆಸ 5:1, 2 ಹೇಳುವಂತೆ ನಮಗೆ ಏನು ಮಾಡಲು ಮನಸ್ಸಾಗುತ್ತದೆ?

14 ಯೆಹೋವ ಮತ್ತು ಯೇಸು ಇಟ್ಟಿರುವ ಮಾದರಿಯನ್ನು ನೋಡುವಾಗ ನಮಗೂ ಸಹ ಹೆಚ್ಚು ಅನುಕಂಪ ತೋರಿಸಲು ಮನಸ್ಸಾಗುತ್ತದೆ. (ಎಫೆಸ 5:1, 2 ಓದಿ.) ಯೆಹೋವ ಮತ್ತು ಯೇಸು ತರ ನಮಗೆ ಬೇರೆಯವರ ಮನಸ್ಸಲ್ಲಿ ಏನಿದೆ ಎಂದು ಗೊತ್ತಾಗಲ್ಲ. ಆದರೂ ನಾವು ಬೇರೆಯವರ ಭಾವನೆಗಳು ಮತ್ತು ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು. (2 ಕೊರಿಂ. 11:29) ನಮ್ಮ ಸುತ್ತಲೂ ಇರುವ ಸ್ವಾರ್ಥ ಜನರಂತೆ ನಾವಿಲ್ಲ. ‘ನಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುತ್ತೇವೆ.’—ಫಿಲಿ. 2:4.

(ಪ್ಯಾರ 15-19 ನೋಡಿ) *

15. ಮುಖ್ಯವಾಗಿ ಯಾರು ಅನುಕಂಪ ತೋರಿಸಬೇಕು?

15 ಮುಖ್ಯವಾಗಿ ಸಭಾ ಹಿರಿಯರು ಅನುಕಂಪ ತೋರಿಸಬೇಕು. ಯೆಹೋವನು ಅವರ ವಶಕ್ಕೆ ಕೊಟ್ಟಿರುವ ಮಂದೆಯನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ. (ಇಬ್ರಿ. 13:17) ಸಹೋದರ-ಸಹೋದರಿಯರಿಗೆ ಸಹಾಯ ಮಾಡಬೇಕಾದರೆ ಹಿರಿಯರು ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಸಭೆಯಲ್ಲಿರುವ ಹಿರಿಯರು ಹೇಗೆ ಅನುಕಂಪ ತೋರಿಸಬಹುದು?

16. (ಎ) ಅನುಕಂಪ ಇರುವ ಒಬ್ಬ ಹಿರಿಯನು ಏನು ಮಾಡುತ್ತಾನೆ? (ಬಿ) ಇದು ಯಾಕೆ ಪ್ರಾಮುಖ್ಯ?

16 ಅನುಕಂಪ ಇರುವ ಒಬ್ಬ ಹಿರಿಯನು ಸಹೋದರ-ಸಹೋದರಿಯರ ಜೊತೆ ಸಮಯ ಕಳೆಯುತ್ತಾನೆ. ಅವರ ಬಗ್ಗೆ ವಿಚಾರಿಸುತ್ತಾನೆ ಮತ್ತು ಅವರು ಮಾತಾಡುವಾಗ ತಾಳ್ಮೆಯಿಂದ ಕಿವಿಗೊಡುತ್ತಾನೆ. ಇದು ಯಾಕೆ ಮುಖ್ಯ? ಕೆಲವರು ತಮ್ಮ ಮನದಾಳದಲ್ಲಿರುವ ಭಾವನೆಗಳನ್ನು ಮತ್ತು ಅನಿಸಿಕೆಗಳನ್ನು ಹಂಚಿಕೊಳ್ಳಲು ಬಯಸುವುದಾದರೂ ಅದನ್ನು ಹೇಗೆ ಹೇಳಬೇಕೆಂದು ಗೊತ್ತಾಗದೆ ಕಷ್ಟಪಡುತ್ತಾರೆ. ಒಬ್ಬ ಹಿರಿಯನು ಅನುಕಂಪದಿಂದ ಕಿವಿಗೊಡುವಾಗ ಇಂಥವರಿಗೆ ಮಾತಾಡಲು ಸುಲಭ ಆಗುತ್ತದೆ. (ಜ್ಞಾನೋ. 20:5) ಹಿರಿಯರು ಸಹೋದರ-ಸಹೋದರಿಯರಿಗೆ ಸಂತೋಷದಿಂದ ಸಮಯ ಕೊಡುವಾಗ ನಂಬಿಕೆ, ಸ್ನೇಹ ಮತ್ತು ಪ್ರೀತಿ ಬೆಳೆಯುತ್ತದೆ.—ಅ. ಕಾ. 20:37.

17. ಅನೇಕ ಸಹೋದರ-ಸಹೋದರಿಯರು ಹಿರಿಯರಲ್ಲಿ ಯಾವ ಗುಣವನ್ನು ತುಂಬ ಮೆಚ್ಚುತ್ತಾರೆ? ಉದಾಹರಣೆ ಕೊಡಿ.

17 ಹಿರಿಯರಲ್ಲಿ ತಮಗೆ ತುಂಬ ಇಷ್ಟವಾಗುವ ಗುಣ ಅನುಕಂಪನೇ ಎಂದು ಅನೇಕ ಸಹೋದರ-ಸಹೋದರಿಯರು ಹೇಳಿದ್ದಾರೆ. ಅವರಿಗೆ ಯಾಕೆ ಈ ಗುಣ ಇಷ್ಟವಾಗುತ್ತದೆ? ಆ್ಯಡಲೇಡ್‌ ಎಂಬ ಸಹೋದರಿ ಹೇಳುವುದು: “ಅನುಕಂಪ ಇರುವ ಹಿರಿಯರ ಹತ್ತಿರ ಮಾತಾಡಲು ಸುಲಭ ಆಗುತ್ತದೆ. ಯಾಕೆಂದರೆ ಅವರು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ ಅಂತ ನಮಗೆ ಗೊತ್ತಿರುತ್ತದೆ. ನಾವು ಮಾತಾಡುವಾಗ ಅವರು ಅದಕ್ಕೆ ಪ್ರತಿಕ್ರಿಯಿಸುವ ವಿಧದಲ್ಲೇ ಅವರಲ್ಲಿ ಎಷ್ಟು ಅನುಕಂಪ ಇದೆ ಎಂದು ಗೊತ್ತಾಗುತ್ತದೆ.” ಒಬ್ಬ ಸಹೋದರ ಇದನ್ನೇ ಗಮನಿಸಿ ಮೆಚ್ಚಿಕೊಳ್ಳುತ್ತಾ ಹೇಳಿದ್ದು: “ನಾನು ಒಬ್ಬ ಹಿರಿಯನ ಹತ್ತಿರ ನನ್ನ ಕಷ್ಟ ಹೇಳಿಕೊಂಡಾಗ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತು. ಇದನ್ನ ನಾನು ಯಾವತ್ತೂ ಮರೆಯಲ್ಲ.”—ರೋಮ. 12:15.

18. ನಾವು ಬೇರೆಯವರಿಗೆ ಹೇಗೆ ಅನುಕಂಪ ತೋರಿಸಬಹುದು?

18 ಹಿರಿಯರು ಮಾತ್ರ ಅಲ್ಲ ನಾವೆಲ್ಲರೂ ಅನುಕಂಪ ತೋರಿಸಬೇಕು. ಹೇಗೆ? ನಿಮ್ಮ ಕುಟುಂಬ ಸದಸ್ಯರು ಮತ್ತು ಸಹೋದರ-ಸಹೋದರಿಯರಿಗೆ ಯಾವ ಕಷ್ಟ ಇದೆ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಸಭೆಯಲ್ಲಿರುವ ಯುವ ಪ್ರಾಯದ ಮಕ್ಕಳಿಗೆ, ಕಾಯಿಲೆ ಬಿದ್ದಿರುವವರಿಗೆ, ವಯಸ್ಸಾದವರಿಗೆ ಮತ್ತು ತಮ್ಮ ಆಪ್ತರ ಸಾವಿನ ನೋವಿನಲ್ಲಿರುವವರಿಗೆ ಆಸಕ್ತಿ ತೋರಿಸಿ. ಅವರು ಹೇಗಿದ್ದಾರೆಂದು ಕೇಳಿ. ಅವರು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವಾಗ ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವರಿಗಾಗುತ್ತಿರುವ ಕಷ್ಟವನ್ನು ನೀವು ನಿಜವಾಗಲೂ ಅರ್ಥಮಾಡಿಕೊಳ್ಳುತ್ತೀರಿ ಅನ್ನುವ ರೀತಿ ನಡಕೊಳ್ಳಿ. ಯಾವುದೇ ಸಹಾಯ ಬೇಕಿದ್ದರೂ ಮಾಡಲು ಸಿದ್ಧರಿದ್ದೀರೆಂದು ಹೇಳಿ. ಹೀಗೆ ಮಾಡುವಾಗ ನಾವು ಪ್ರೀತಿಯನ್ನು ಕ್ರಿಯೆಯಲ್ಲಿ ತೋರಿಸುತ್ತೇವೆ.—1 ಯೋಹಾ. 3:18.

19. ನಾವು ಬೇರೆಯವರಿಗೆ ಸಹಾಯ ಮಾಡುವಾಗ ಯಾಕೆ ಮಣಿಯಲು ಪ್ರಯತ್ನಿಸಬೇಕು?

19 ನಾವು ಬೇರೆಯವರಿಗೆ ಸಹಾಯ ಮಾಡುವಾಗ ಮಣಿಯಲು ಪ್ರಯತ್ನಿಸಬೇಕು. ಯಾಕೆ? ಯಾಕೆಂದರೆ ಕಷ್ಟಗಳು ಬಂದಾಗ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುತ್ತಾರೆ. ಕೆಲವರು ತಮ್ಮ ಸಮಸ್ಯೆಗಳ ಬಗ್ಗೆ ಮಾತಾಡಲು ಇಷ್ಟಪಡುತ್ತಾರೆ, ಕೆಲವರು ಇಷ್ಟಪಡಲ್ಲ. ಆದ್ದರಿಂದ ನಾವು ಸಹಾಯ ಕೊಡಲು ಹೋದಾಗ ತುಂಬ ವೈಯಕ್ತಿಕವಾದ ಪ್ರಶ್ನೆಗಳನ್ನು ಕೇಳಬಾರದು. (1 ಥೆಸ. 4:11) ಕೆಲವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಾಗ ಅವರ ದೃಷ್ಟಿಕೋನ ಮತ್ತು ನಮ್ಮ ದೃಷ್ಟಿಕೋನ ಬೇರೆ ಬೇರೆ ಆಗಿರಬಹುದು. ಆದರೂ ಅದು ಅವರ ಅನಿಸಿಕೆ, ಅವರ ದೃಷ್ಟಿಕೋನ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಮಧ್ಯೆ-ಮಧ್ಯೆ ಬಾಯಿಹಾಕುವ ಬದಲು ಅವರು ಏನು ಹೇಳುತ್ತಾರೋ ಅದನ್ನು ಕೇಳಿಸಿಕೊಳ್ಳಲು ಸಿದ್ಧರಿರಬೇಕು.—ಮತ್ತಾ. 7:1; ಯಾಕೋ. 1:19.

20. ಮುಂದಿನ ಲೇಖನದಲ್ಲಿ ನಾವು ಯಾವ ವಿಷಯದ ಬಗ್ಗೆ ಮಾತಾಡಲಿದ್ದೇವೆ?

20 ನಾವು ಅನುಕಂಪ ಎಂಬ ಈ ಮನಮುಟ್ಟುವ ಗುಣವನ್ನು ಸಭೆಯಲ್ಲಿ ಮಾತ್ರ ಅಲ್ಲ ಸೇವೆಯಲ್ಲೂ ತೋರಿಸಬೇಕು. ಶಿಷ್ಯರನ್ನು ಮಾಡಲು ಹೋದಾಗ ನಾವು ಹೇಗೆ ಅನುಕಂಪ ತೋರಿಸಬಹುದು? ಈ ವಿಷಯದ ಬಗ್ಗೆ ಮುಂದಿನ ಲೇಖನದಲ್ಲಿ ಮಾತಾಡೋಣ.

ಗೀತೆ 77 ಕ್ಷಮಿಸುವವರಾಗಿರಿ

^ ಪ್ಯಾರ. 5 ಯೆಹೋವ ಮತ್ತು ಯೇಸು ಬೇರೆಯವರ ಭಾವನೆಗಳಿಗೆ ಬೆಲೆಕೊಡುತ್ತಾರೆ. ಅವರ ಮಾದರಿಯಿಂದ ನಾವೇನು ಕಲಿಯಬಹುದು ಎಂದು ಈ ಲೇಖನದಲ್ಲಿ ತಿಳುಕೊಳ್ಳೋಣ. ನಾವು ಯಾಕೆ ಅನುಕಂಪ ತೋರಿಸಬೇಕು ಮತ್ತು ಹೇಗೆ ತೋರಿಸಬೇಕು ಎಂದು ಸಹ ಚರ್ಚೆ ಮಾಡೋಣ.

^ ಪ್ಯಾರ. 1 ಪದ ವಿವರಣೆ: ‘ಅನುಕಂಪ ತೋರಿಸುವುದು’ ಅಂದರೆ ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಷ್ಟೇ ಅಲ್ಲ, ಅವರ ಸುಖ-ದುಃಖದಲ್ಲಿ ನಾವು ಭಾಗಿಗಳೂ ಆಗುತ್ತೇವೆ.—ರೋಮ. 12:15.

^ ಪ್ಯಾರ. 6 ನಿರುತ್ಸಾಹಗೊಂಡಿದ್ದ ಮತ್ತು ಭಯಪಡುತ್ತಿದ್ದ ತನ್ನ ನಂಬಿಗಸ್ತ ಸೇವಕರಿಗೂ ಯೆಹೋವನು ಕನಿಕರ ತೋರಿಸಿದ್ದಾನೆ. ಇವರಲ್ಲಿ ಕೆಲವರು ಹನ್ನ (1 ಸಮು. 1:10-20) ಎಲೀಯ (1 ಅರ. 19:1-18) ಮತ್ತು ಎಬೆದ್ಮೆಲೆಕ (ಯೆರೆ. 38:7-13; 39:15-18).

^ ಪ್ಯಾರ. 65 ಚಿತ್ರ ವಿವರಣೆ: ರಾಜ್ಯ ಸಭಾಗೃಹದಲ್ಲಿ ಕೂಡಿಬಂದಾಗ ಸಹವಾಸದಲ್ಲಿ ಆನಂದಿಸಲು ಅನೇಕ ಅವಕಾಶಗಳಿವೆ. ಚಿತ್ರದಲ್ಲಿ ನೋಡುವಂತೆ, (1) ಒಬ್ಬ ಪುಟ್ಟ ಪ್ರಚಾರಕ ಮತ್ತು ಅವನ ತಾಯಿಯ ಜೊತೆ ಒಬ್ಬ ಹಿರಿಯ ಮಾತಾಡುತ್ತಿದ್ದಾರೆ. (2) ಒಬ್ಬ ವೃದ್ಧ ಸಹೋದರಿ ಕಾರು ಹತ್ತಲು ಒಬ್ಬ ತಂದೆ ಮತ್ತು ಮಗಳು ಸಹಾಯ ಮಾಡುತ್ತಿದ್ದಾರೆ. (3) ಸಲಹೆ ಕೇಳುತ್ತಿರುವ ಒಬ್ಬ ಸಹೋದರಿಗೆ ಇಬ್ಬರು ಹಿರಿಯರು ತಾಳ್ಮೆಯಿಂದ ಕಿವಿಗೊಡುತ್ತಿದ್ದಾರೆ.