ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 13

ಸೇವೆಯಲ್ಲಿ ಅನುಕಂಪ ತೋರಿಸಿ

ಸೇವೆಯಲ್ಲಿ ಅನುಕಂಪ ತೋರಿಸಿ

“[ಯೇಸು] ಕನಿಕರಪಟ್ಟು ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದನು.”—ಮಾರ್ಕ 6:34.

ಗೀತೆ 96 ಯೋಗ್ಯರನ್ನು ಹುಡುಕಿ

ಕಿರುನೋಟ *

1. ಯೇಸುವಿನ ವ್ಯಕ್ತಿತ್ವದಲ್ಲಿ ನಮಗೆ ತುಂಬ ಹಿಡಿಸುವಂಥ ಒಂದು ವಿಷಯ ಯಾವುದು? ವಿವರಿಸಿ.

ಯೇಸುವಿನ ವ್ಯಕ್ತಿತ್ವದಲ್ಲಿ ನಮಗೆ ತುಂಬ ಹಿಡಿಸುವಂಥ ಒಂದು ವಿಷಯ ಯಾವುದು? ಅಪರಿಪೂರ್ಣ ಮಾನವರಾದ ನಾವು ಎದುರಿಸುವ ಸಮಸ್ಯೆಗಳನ್ನು ಆತನು ಅರ್ಥಮಾಡಿಕೊಳ್ಳುತ್ತಾನೆ. ಭೂಮಿಯಲ್ಲಿದ್ದಾಗ ಆತನು ‘ಆನಂದಿಸುವವರೊಂದಿಗೆ ಆನಂದಿಸಿದನು ಮತ್ತು ಅಳುವವರೊಂದಿಗೆ ಅತ್ತನು.’ (ರೋಮ. 12:15) ಉದಾಹರಣೆಗೆ, ತನ್ನ 70 ಶಿಷ್ಯರು ಸೇವೆಗೆ ಹೋಗಿ ಸಂತೋಷದಿಂದ ವಾಪಸ್‌ ಬಂದಾಗ ಯೇಸುವಿಗೆ “ಅತ್ಯಾನಂದ” ಆಯಿತು. (ಲೂಕ 10:17-21) ಲಾಜರನು ತೀರಿಕೊಂಡಾಗ ಅವನ ಬಂಧು-ಮಿತ್ರರು ಅಳುತ್ತಿರುವುದನ್ನು ನೋಡಿ ಯೇಸು “ತನ್ನ ಆಂತರ್ಯದಲ್ಲಿ ನೊಂದುಕೊಂಡು ಕಳವಳಪಟ್ಟನು.”—ಯೋಹಾ. 11:33.

2. ಯೇಸು ಜನರಿಗೆ ಅನುಕಂಪ ತೋರಿಸಲು ಕಾರಣ ಏನು?

2 ಪಾಪಿಗಳಾದ ಮಾನವರ ಜೊತೆ ಪರಿಪೂರ್ಣ ವ್ಯಕ್ತಿಯಾಗಿದ್ದ ಯೇಸು ಇಷ್ಟೊಂದು ದಯೆ-ದಾಕ್ಷಿಣ್ಯದಿಂದ ನಡಕೊಳ್ಳಲು ಕಾರಣ ಏನು? ಮೊದಲನೇದಾಗಿ, ಆತನಿಗೆ ಜನರ ಮೇಲೆ ಪ್ರೀತಿ ಇತ್ತು. ನಾವು ಹಿಂದಿನ ಲೇಖನದಲ್ಲಿ ನೋಡಿದಂತೆ, ಆತನಿಗೆ ಮನುಷ್ಯರೆಂದರೆ ಪಂಚಪ್ರಾಣ. (ಜ್ಞಾನೋ. 8:31) ಈ ಪ್ರೀತಿಯಿಂದಾಗಿ ಆತನು ಮನುಷ್ಯರು ಹೇಗೆ ಯೋಚಿಸುತ್ತಾರೆ ಎಂದು ಅರ್ಥಮಾಡಿಕೊಳ್ಳಲು ಬಯಸಿದನು. “ಮನುಷ್ಯನಲ್ಲಿ ಏನಿದೆ” ಅನ್ನುವುದು ಆತನಿಗೆ ಗೊತ್ತಿತ್ತೆಂದು ಅಪೊಸ್ತಲ ಯೋಹಾನನು ಹೇಳುತ್ತಾನೆ. (ಯೋಹಾ. 2:25) ಯೇಸು ಬೇರೆಯವರ ಭಾವನೆಗಳಿಗೆ ತುಂಬ ಬೆಲೆಕೊಡುತ್ತಿದ್ದನು. ಯೇಸು ತಮ್ಮನ್ನು ಪ್ರೀತಿಸುತ್ತಾನೆ ಅಂತ ಜನರಿಗೆ ಅರ್ಥ ಆಗುತ್ತಿತ್ತು ಮತ್ತು ಅವರು ಆತನ ಸಂದೇಶಕ್ಕೆ ಕಿವಿಗೊಟ್ಟರು. ನಾವು ಸಹ ಜನರ ಮೇಲೆ ಇಂಥ ಕೋಮಲ ಭಾವನೆಗಳನ್ನು ಬೆಳೆಸಿಕೊಳ್ಳುವಾಗ ಸಾರುವ ಕೆಲಸದಲ್ಲಿ ತುಂಬ ಯಶಸ್ಸನ್ನು ಪಡೆಯಲು ಸಾಧ್ಯ.—2 ತಿಮೊ. 4:5.

3-4. (ಎ) ನಮ್ಮಲ್ಲಿ ಅನುಕಂಪ ಇದ್ದರೆ ಸಾರುವ ಕೆಲಸವನ್ನು ಯಾವ ದೃಷ್ಟಿಯಿಂದ ನೋಡುತ್ತೇವೆ? (ಬಿ) ಈ ಲೇಖನದಲ್ಲಿ ಏನನ್ನು ಚರ್ಚೆ ಮಾಡಲಿದ್ದೇವೆ?

3 ಸಾರಲೇಬೇಕಾದ ಹೊಣೆ ತನ್ನ ಮೇಲೆ ಇದೆ ಎಂದು ಅಪೊಸ್ತಲ ಪೌಲನಿಗೆ ಗೊತ್ತಿತ್ತು. (1 ಕೊರಿಂ. 9:16) ಆ ಹೊಣೆ ನಮ್ಮ ಮೇಲೂ ಇದೆ. ಆದರೆ ನಮ್ಮಲ್ಲಿ ಅನುಕಂಪ ಇದ್ದರೆ ನಾವು ಸಾರುವ ಕೆಲಸವನ್ನು ಒಂದು ಹೊಣೆ ಅಂತ ಮಾತ್ರ ನೆನಸಿ ಮಾಡುವುದಿಲ್ಲ. ನಮಗೆ ಜನರ ಮೇಲೆ ಪ್ರೀತಿ ಇದೆ ಮತ್ತು ಅವರಿಗೆ ಸಹಾಯ ಮಾಡಲು ಬಯಸುವುದರಿಂದ ಸೇವೆ ಮಾಡುತ್ತೇವೆ ಎಂದು ತೋರಿಸಿಕೊಡುತ್ತೇವೆ. “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎಂದು ಬೈಬಲ್‌ ಹೇಳುತ್ತದೆ. (ಅ. ಕಾ. 20:35) ಈ ತತ್ವವನ್ನು ಮನಸ್ಸಲ್ಲಿಟ್ಟು ಸೇವೆ ಮಾಡುವಾಗ ನಾವು ತುಂಬ ಆನಂದಿಸುತ್ತೇವೆ.

4 ಈ ಲೇಖನದಲ್ಲಿ, ನಾವು ಸೇವೆಯಲ್ಲಿ ಹೇಗೆ ಅನುಕಂಪ ತೋರಿಸಬಹುದು ಎಂದು ನೋಡೋಣ. ಮೊದಲನೇದಾಗಿ, ಯೇಸುವಿಗೆ ಜನರ ಮೇಲಿದ್ದ ಭಾವನೆಗಳಿಂದ ಆತನ ಬಗ್ಗೆ ಏನು ಕಲಿಯಬಹುದೆಂದು ನೋಡೋಣ. ನಂತರ ಆತನ ಮಾದರಿಯನ್ನು ಯಾವ ನಾಲ್ಕು ವಿಧಗಳಲ್ಲಿ ಅನುಕರಿಸಬಹುದೆಂದು ಚರ್ಚಿಸೋಣ.—1 ಪೇತ್ರ 2:21.

ಯೇಸು ಸೇವೆಯಲ್ಲಿ ಅನುಕಂಪ ತೋರಿಸಿದನು

ಅನುಕಂಪ ಇದ್ದದರಿಂದ ಯೇಸು ಸಾಂತ್ವನದ ಸಂದೇಶವನ್ನು ಸಾರಿದನು (ಪ್ಯಾರ 5-6 ನೋಡಿ)

5-6. (ಎ) ಯೇಸು ಯಾರಿಗೆ ಅನುಕಂಪ ತೋರಿಸಿದನು? (ಬಿ) ಯೆಶಾಯ 61:1, 2​ರಲ್ಲಿ ಮುಂತಿಳಿಸಿದಂತೆ ಯೇಸು ಯಾರಿಗೆ ಸಾರಿದನೋ ಆ ಜನರ ಮೇಲೆ ಆತನಿಗೆ ಯಾಕೆ ಕನಿಕರ ಹುಟ್ಟಿತು?

5 ಯೇಸು ಅನುಕಂಪ ತೋರಿಸಿದ್ದಕ್ಕೆ ಒಂದು ಉದಾಹರಣೆ ನೋಡೋಣ. ಒಂದು ಸಂದರ್ಭದಲ್ಲಿ ಯೇಸು ಮತ್ತು ಆತನ ಶಿಷ್ಯರು ವಿರಾಮ ತಗೊಳ್ಳದೆ ತುಂಬ ಹೊತ್ತು ಸುವಾರ್ತೆ ಸಾರುತ್ತಾ ಇದ್ದರು. “ಅವರಿಗೆ ಊಟವನ್ನು ಮಾಡಲು ಸಹ ಸಮಯವಿರಲಿಲ್ಲ.” ಆದ್ದರಿಂದ ಅವರು ಸ್ವಲ್ಪ ವಿಶ್ರಾಂತಿ ಪಡೆಯಲಿಕ್ಕಾಗಿ ಯೇಸು ಅವರನ್ನು ಒಂದು ಏಕಾಂತ ಸ್ಥಳಕ್ಕೆ ಕರಕೊಂಡು ಹೋದನು. ಆದರೆ ಜನರ ದೊಡ್ಡ ಗುಂಪು ಯೇಸು ಮತ್ತು ಆತನ ಶಿಷ್ಯರು ಹೋಗುತ್ತಿದ್ದ ಸ್ಥಳಕ್ಕೆ ಅವರಿಗಿಂತ ಮುಂಚೆ ಓಡಿಬಂದು ಮುಟ್ಟಿತು. ಯೇಸು ಆ ಸ್ಥಳಕ್ಕೆ ಹೋಗಿ ಜನರ ಗುಂಪನ್ನು ನೋಡಿದಾಗ ‘ಇವರು ಕುರುಬನಿಲ್ಲದ ಕುರಿಗಳ ಹಾಗೆ ಇದ್ದಾರಲ್ಲ ಎಂದು ಕನಿಕರಪಟ್ಟು * ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲು ಆರಂಭಿಸಿದನು.’—ಮಾರ್ಕ 6:30-34.

6 ಯೇಸುವಿಗೆ ಜನರ ಮೇಲೆ ಯಾಕೆ ಕನಿಕರ ಹುಟ್ಟಿತು ಅಥವಾ ಅನುಕಂಪ ಬಂತು? ಜನರು ‘ಕುರುಬನಿಲ್ಲದ ಕುರಿಗಳ ಹಾಗೆ ಇದ್ದಾರೆ’ ಅನ್ನುವುದನ್ನು ಆತನು ನೋಡಿದನು. ಅವರಲ್ಲಿ ಕೆಲವರು ಬಡವರಾಗಿದ್ದರು ಮತ್ತು ಹೊಟ್ಟೆಪಾಡಿಗಾಗಿ ತುಂಬ ಹೊತ್ತು ದುಡಿಯಬೇಕಾಗಿತ್ತು ಅನ್ನುವುದಕ್ಕೆ ಯೇಸು ಗಮನ ಕೊಟ್ಟಿರಬೇಕು. ಅವರಲ್ಲಿ ಕೆಲವರು ಆಪ್ತರೊಬ್ಬರ ಮರಣದ ದುಃಖದಲ್ಲಿರುವುದನ್ನು ಯೇಸು ಗ್ರಹಿಸಿರಬೇಕು. ಹಾಗಾಗಿ ಯೇಸುವಿಗೆ ಆ ಜನರ ಪರಿಸ್ಥಿತಿ ಅರ್ಥವಾಯಿತು. ಹಿಂದಿನ ಲೇಖನದಲ್ಲಿ ನೋಡಿದಂತೆ, ಸ್ವತಃ ಯೇಸುವಿಗೇ ಈ ಸಮಸ್ಯೆಗಳು ಬಂದಿರಬಹುದು. ಯೇಸುವಿಗೆ ಜನರ ಮೇಲೆ ಕಾಳಜಿ ಇದ್ದದರಿಂದ ಆತನು ಅವರಿಗೆ ಸಾಂತ್ವನದ ಸಂದೇಶವನ್ನು ಸಾರಿದನು.—ಯೆಶಾಯ 61:1, 2 ಓದಿ.

7. ನಾವು ಯೇಸುವಿನ ಮಾದರಿಯನ್ನು ಹೇಗೆ ಅನುಕರಿಸಬಹುದು?

7 ನಮಗೆ ಯೇಸುವಿನ ಮಾದರಿಯಿಂದ ಏನು ಗೊತ್ತಾಗುತ್ತದೆ? ಯೇಸುವಿನ ಸುತ್ತಲೂ ಇದ್ದಂತೆ, ನಮ್ಮ ಸುತ್ತಲೂ ಇರುವ ಜನರು ಸಹ ‘ಕುರುಬನಿಲ್ಲದ ಕುರಿಗಳ ಹಾಗೆ ಇದ್ದಾರೆ.’ ಅವರಿಗೆ ಎಷ್ಟೋ ಸಮಸ್ಯೆಗಳಿವೆ. ಅವರಿಗೆ ಏನು ಬೇಕೋ ಅದು ನಮ್ಮ ಹತ್ತಿರ ಇದೆ—ಅದು ದೇವರ ರಾಜ್ಯದ ಸಂದೇಶ. (ಪ್ರಕ. 14:6) ಆದ್ದರಿಂದ ನಾವು ನಮ್ಮ ಗುರುವನ್ನು ಅನುಕರಿಸುತ್ತಾ ಸುವಾರ್ತೆ ಸಾರುತ್ತೇವೆ. ಯಾಕೆಂದರೆ ನಮಗೆ “ದೀನದರಿದ್ರರ ಮೇಲೆ ಕರುಣೆ” ಇದೆ. (ಕೀರ್ತ. 72:13) ನಮಗೆ ಜನರ ಮೇಲೆ ಅನುಕಂಪ ಇದೆ. ಅವರಿಗೆ ನಮ್ಮಿಂದಾದ ಸಹಾಯ ಮಾಡಲು ಬಯಸುತ್ತೇವೆ.

ನಾವು ಹೇಗೆ ಅನುಕಂಪ ತೋರಿಸಬಹುದು?

ಪ್ರತಿಯೊಬ್ಬರ ಅಗತ್ಯ ಏನೆಂದು ತಿಳುಕೊಳ್ಳಿ

(ಪ್ಯಾರ 8-9 ನೋಡಿ)

8. ನಾವು ಸೇವೆಯಲ್ಲಿ ಅನುಕಂಪ ತೋರಿಸುವ ಒಂದು ವಿಧ ಯಾವುದು? ಉದಾಹರಣೆ ಕೊಡಿ.

8 ನಾವು ಯಾರಿಗೆ ಸಾರುತ್ತೇವೋ ಆ ಜನರಿಗೆ ಅನುಕಂಪ ತೋರಿಸಲು ಯಾವುದು ಸಹಾಯ ಮಾಡುತ್ತದೆ? ನಮಗೆ ಸೇವೆಯಲ್ಲಿ ಸಿಗುವ ಜನರ ಪರಿಸ್ಥಿತಿಯಲ್ಲಿ ನಾವು ನಮ್ಮನ್ನೇ ಇಟ್ಟು ನೋಡಲು ಪ್ರಯತ್ನಿಸಬೇಕು. ಒಂದುವೇಳೆ ನಾವು ಅಂಥ ಪರಿಸ್ಥಿತಿಯಲ್ಲಿದ್ದರೆ ಬೇರೆಯವರು ನಮ್ಮ ಜೊತೆ ಹೇಗೆ ನಡಕೊಳ್ಳಬೇಕೆಂದು ಬಯಸುತ್ತೇವೋ ಆ ರೀತಿ ನಾವು ಅವರ ಜೊತೆ ನಡಕೊಳ್ಳಬೇಕು. * (ಮತ್ತಾ. 7:12) ಇದನ್ನು ಹೇಗೆ ಮಾಡಬಹುದು ಎಂಬುದಕ್ಕೆ ನಾಲ್ಕು ವಿಧಗಳನ್ನು ನೋಡೋಣ. ಮೊದಲನೇ ವಿಧ – ಬೇರೆಯವರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು. ನಾವು ಸುವಾರ್ತೆ ಸಾರುವಾಗ ಒಬ್ಬ ಡಾಕ್ಟರ್‌ ತರ ನಡಕೊಳ್ಳಬೇಕು. ಒಬ್ಬ ಒಳ್ಳೇ ಡಾಕ್ಟರ್‌ ಯಾವ ರೋಗಿಗೆ ಯಾವ ಔಷಧಿ ಕೊಡಬೇಕೆಂದು ಯೋಚಿಸುತ್ತಾನೆ. ರೋಗಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ ಮತ್ತು ಅವರು ತಮಗೆ ಏನಾಗುತ್ತಿದೆ ಅಂತ ಹೇಳುವಾಗ ಗಮನಕೊಟ್ಟು ಕೇಳುತ್ತಾನೆ. ಚೀಟಿ ತಗೊಂಡು ತನ್ನ ಮನಸ್ಸಿಗೆ ಮೊದಲು ಬಂದ ಔಷಧಿಯನ್ನು ತಕ್ಷಣ ಬರೆದು ಕೊಡಲ್ಲ. ರೋಗಿಯ ರೋಗಲಕ್ಷಣಗಳನ್ನು ಗಮನಿಸಲು ಸ್ವಲ್ಪ ಸಮಯ ತಗೊಳ್ಳುತ್ತಾನೆ. ಆಮೇಲೆ ಸರಿಯಾದ ಚಿಕಿತ್ಸೆ ಕೊಡುತ್ತಾನೆ. ಅದೇ ರೀತಿ ನಾವು ಸೇವೆಯಲ್ಲಿ ಎಲ್ಲರ ಹತ್ತಿರ ಒಂದೇ ತರ ಮಾತಾಡಲು ಪ್ರಯತ್ನಿಸಬಾರದು. ನಮಗೆ ಸಿಗುವ ಪ್ರತಿಯೊಬ್ಬ ವ್ಯಕ್ತಿಯ ಪರಿಸ್ಥಿತಿ ಏನು, ಅನಿಸಿಕೆಗಳು ಏನೆಂದು ಯೋಚಿಸಿ ಅದಕ್ಕೆ ತಕ್ಕ ಹಾಗೆ ಮಾತಾಡಬೇಕು.

9. (ಎ) ನಮಗೆ ಸೇವೆಯಲ್ಲಿ ಸಿಗುವ ಜನರ ಬಗ್ಗೆ ಏನು ಅಂದುಕೊಳ್ಳಬಾರದು? (ಬಿ) ಆದ್ದರಿಂದ ನಾವೇನು ಮಾಡಬೇಕು?

9 ನೀವು ಸೇವೆಯಲ್ಲಿ ಜನರನ್ನು ಭೇಟಿಮಾಡುವಾಗ, ಅವರನ್ನು ನೋಡಿದ ಕೂಡಲೆ ನಿಮಗೆ ಅವರ ಪರಿಸ್ಥಿತಿ ಏನು ಅಥವಾ ಅವರ ನಂಬಿಕೆಗಳು ಏನು ಎಂದು ಗೊತ್ತಾಗಿಬಿಡುತ್ತದೆ ಎಂದು ಅಂದುಕೊಳ್ಳಬೇಡಿ. (ಜ್ಞಾನೋ. 18:13) ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳಿ ಅವರ ಮನಸ್ಸಲ್ಲಿ ಏನಿದೆ ಎಂದು ತಿಳಿದುಕೊಳ್ಳಿ. (ಜ್ಞಾನೋ. 20:5) ಮನೆಯವರಿಗೆ ಅಭ್ಯಂತರ ಇಲ್ಲಾಂದ್ರೆ ಅವರ ಕೆಲಸ, ಕುಟುಂಬ, ಹಿನ್ನೆಲೆ, ಅನಿಸಿಕೆಗಳ ಬಗ್ಗೆ ಕೇಳಿ. ನಾವು ಬೇರೆಯವರ ಬಗ್ಗೆ ತಿಳುಕೊಳ್ಳಲು ಪ್ರಯತ್ನಿಸುವಾಗ, ಅವರಿಗೆ ಸುವಾರ್ತೆ ಯಾಕೆ ಬೇಕು ಎಂದು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಇದು ಅರ್ಥವಾದ ಮೇಲೆ ನಾವು ಆ ವ್ಯಕ್ತಿಗೆ ನಿರ್ದಿಷ್ಟವಾಗಿ ಬೇಕಾಗಿರುವ ಸಹಾಯವನ್ನು ಕೊಟ್ಟು ಯೇಸುವಿನಂತೆ ಅನುಕಂಪ ತೋರಿಸಬಹುದು.—1 ಕೊರಿಂಥ 9:19-23 ಹೋಲಿಸಿ.

ನೀವು ಯಾರಿಗೆ ಸಾರಲು ಬಯಸುತ್ತೀರೋ ಅವರ ಜೀವನ ಹೇಗಿರಬಹುದೆಂದು ಯೋಚಿಸಿ (ಪ್ಯಾರ 10-11 ನೋಡಿ)

10-11. ಎರಡನೇ ಕೊರಿಂಥ 4:7, 8 ಹೇಳುವಂತೆ ನಾವು ಅನುಕಂಪ ತೋರಿಸುವ ಎರಡನೇ ವಿಧ ಯಾವುದು? ಉದಾಹರಣೆ ಕೊಡಿ.

10 ಎರಡನೇ ವಿಧ – ಮನೆಯವರ ಜೀವನ ಹೇಗಿರಬಹುದೆಂದು ಯೋಚಿಸಿ. ಕೆಲವೊಮ್ಮೆ ನಮಗೆ ಅವರ ಕಷ್ಟ ಅರ್ಥ ಆಗುತ್ತದೆ. ಯಾಕೆಂದರೆ ನಾವೂ ಅಪರಿಪೂರ್ಣರು, ನಮಗೂ ಸಮಸ್ಯೆಗಳು ಎದುರಾಗುತ್ತವೆ. (1 ಕೊರಿಂ. 10:13) ಈ ಲೋಕದಲ್ಲಿ ಜೀವನ ಮಾಡುವುದು ತುಂಬ ಕಷ್ಟ ಅಂತ ನಮಗೆ ಗೊತ್ತು. ಯೆಹೋವನು ಕೊಡುವ ಸಹಾಯದಿಂದ ನಾವು ಸಮಸ್ಯೆಗಳನ್ನು ತಾಳಿಕೊಂಡು ಹೋಗುತ್ತಿದ್ದೇವೆ. (2 ಕೊರಿಂಥ 4:7, 8 ಓದಿ.) ಆದರೆ ಯೆಹೋವನ ಬಗ್ಗೆ ಗೊತ್ತಿಲ್ಲದೆ ಈ ಲೋಕದಲ್ಲಿ ಜೀವನ ಮಾಡಬೇಕಾದವರ ಪರಿಸ್ಥಿತಿ ಬಗ್ಗೆ ಯೋಚಿಸಿ. ಇಂಥವರನ್ನು ನೋಡಿದಾಗ ನಮಗೆ ಯೇಸುವಿನ ತರ ಅವರ ಮೇಲೆ ಕನಿಕರ ಹುಟ್ಟುತ್ತದೆ ಮತ್ತು ಅವರಿಗೆ ಸುವಾರ್ತೆಯನ್ನು ತಿಳಿಸಲು ಮನಸ್ಸಾಗುತ್ತದೆ.—ಯೆಶಾ. 52:7.

11 ಸರ್ಗೆ ಎಂಬ ಸಹೋದರನ ಉದಾಹರಣೆ ನೋಡಿ. ಸತ್ಯ ಕಲಿಯುವ ಮುಂಚೆ ಅವರಿಗೆ ತುಂಬ ನಾಚಿಕೆ ಸ್ವಭಾವ ಇತ್ತು. ಬೇರೆಯವರ ಜೊತೆ ಮಾತಾಡಲು ಅವರು ತುಂಬ ಕಷ್ಟಪಡುತ್ತಿದ್ದರು. ನಂತರ ಅವರು ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದರು. ಅವರು ಹೇಳುವುದು: “ನಾನು ಬೈಬಲ್‌ ಅಧ್ಯಯನ ತಗೊಳ್ಳುತ್ತಿದ್ದಾಗ, ಕ್ರೈಸ್ತರು ಬೇರೆಯವರ ಜೊತೆ ತಮ್ಮ ನಂಬಿಕೆಯ ಬಗ್ಗೆ ಮಾತಾಡಬೇಕೆಂದು ಗೊತ್ತಾಯಿತು. ನನ್ನಿಂದ ಅದನ್ನು ಖಂಡಿತ ಮಾಡಕ್ಕಾಗಲ್ಲ ಅಂದುಕೊಂಡೆ.” ಆದರೆ ಇದುವರೆಗೂ ಸತ್ಯ ಗೊತ್ತಿಲ್ಲದ ಜನರ ಬಗ್ಗೆ ಅವರು ಯೋಚಿಸಿದರು. ಯೆಹೋವನ ಬಗ್ಗೆ ಗೊತ್ತಿಲ್ಲದೆ ಆ ಜನರು ದಿನಾ ಕಣ್ಣೀರಲ್ಲಿ ಕೈ ತೊಳೆಯುತ್ತಿರಬಹುದು ಎಂದು ಅವರು ಅರ್ಥಮಾಡಿಕೊಂಡರು. “ನಾನು ಕಲಿಯುತ್ತಿದ್ದ ಹೊಸ ವಿಷಯಗಳಿಂದ ನನಗೆ ತುಂಬ ಸಂತೋಷವಾಯಿತು ಮತ್ತು ಮನಶ್ಶಾಂತಿ ಸಿಕ್ಕಿತು. ನಾನು ಕಲಿಯುತ್ತಿದ್ದ ವಿಷಯಗಳನ್ನು ಬೇರೆಯವರೂ ಕಲಿಯಬೇಕು ಎಂದು ನನಗೆ ಅರ್ಥ ಆಯಿತು” ಅನ್ನುತ್ತಾರೆ ಸರ್ಗೆ. ಅವರಿಗೆ ಬೇರೆಯವರ ಮೇಲೆ ಅನುಕಂಪ ಹೆಚ್ಚಾದಾಗ ಸಾರಲು ಬೇಕಾದ ಧೈರ್ಯನೂ ಹೆಚ್ಚಾಯಿತು. “ನನಗೇನು ಆಶ್ಚರ್ಯ ಆಯಿತೆಂದರೆ, ಬೈಬಲ್‌ ಬಗ್ಗೆ ಬೇರೆಯವರ ಜೊತೆ ಮಾತಾಡಿದಾಗ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು. ನಾನು ಕಲಿಯುತ್ತಿದ್ದ ವಿಷಯಗಳ ಬಗ್ಗೆ ಬೇರೆಯವರ ಜೊತೆ ಮಾತಾಡಿದಾಗ ನನ್ನ ನಂಬಿಕೆಯೂ ಹೆಚ್ಚಾಯಿತು” ಎಂದು ಸರ್ಗೆ ಹೇಳುತ್ತಾರೆ. *

ಕೆಲವರು ಪ್ರಗತಿ ಮಾಡಲು ಸಮಯ ಹಿಡಿಯುತ್ತದೆ

(ಪ್ಯಾರ 12-13 ನೋಡಿ)

12-13. ಸೇವೆಯಲ್ಲಿ ನಮಗೆ ಸಿಗುವ ಜನರ ವಿಷಯದಲ್ಲಿ ನಾವು ಯಾಕೆ ತಾಳ್ಮೆ ತೋರಿಸಬೇಕು? ಉದಾಹರಣೆ ಕೊಡಿ.

12 ಮೂರನೇ ವಿಧ – ನೀವು ಯಾರಿಗೆ ಕಲಿಸುತ್ತಿದ್ದೀರೋ ಅವರ ವಿಷಯದಲ್ಲಿ ತಾಳ್ಮೆ ತೋರಿಸಿ. ನಮಗೆ ತುಂಬ ಚೆನ್ನಾಗಿ ಗೊತ್ತಿರುವ ಕೆಲವು ಬೈಬಲ್‌ ಸತ್ಯಗಳು ಅವರಿಗೆ ಗೊತ್ತೇ ಇರಲ್ಲ. ಅನೇಕ ಜನರಿಗೆ ತಮ್ಮ ನಂಬಿಕೆಗಳೆಂದರೆ ತುಂಬ ಇಷ್ಟ. ಅವರ ಧಾರ್ಮಿಕ ನಂಬಿಕೆಗಳು ಅವರನ್ನು ತಮ್ಮ ಕುಟುಂಬ, ಸಂಸ್ಕೃತಿ ಮತ್ತು ಸಮಾಜದ ಜೊತೆ ಐಕ್ಯವಾಗಿರಲು ಸಹಾಯ ಮಾಡುತ್ತದೆ ಎಂದು ಅವರು ನಂಬುತ್ತಾರೆ. ನಾವು ಅವರಿಗೆ ಹೇಗೆ ಸಹಾಯ ಮಾಡಬಹುದು?

13 ಈ ಹೋಲಿಕೆ ನೋಡಿ. ಒಂದು ಹಳೇ ಸೇತುವೆ ಇನ್ನೇನು ಬಿದ್ದುಹೋಗುವ ಸ್ಥಿತಿಯಲ್ಲಿದ್ದರೆ ಏನು ಮಾಡುತ್ತಾರೆ? ಹಳೇ ಸೇತುವೆ ಉಪಯೋಗದಲ್ಲಿರುವಾಗಲೇ ಹೊಸ ಸೇತುವೆಯನ್ನು ಕಟ್ಟುತ್ತಾರೆ. ಹೊಸ ಸೇತುವೆ ಸಿದ್ಧವಾದ ಮೇಲೆ ಹಳೇ ಸೇತುವೆಯನ್ನು ತೆಗೆದುಹಾಕುತ್ತಾರೆ. ಅದೇ ರೀತಿ, ಜನರಿಗೆ ತುಂಬ ಇಷ್ಟವಾಗಿರುವ ಹಳೇ ನಂಬಿಕೆಗಳನ್ನು ಅವರು ಬಿಟ್ಟುಬಿಡಬೇಕೆಂದರೆ ಮೊದಲು ಹೊಸ ಸತ್ಯಗಳ ಮೇಲೆ ಮೆಚ್ಚುಗೆ ಬೆಳೆಸಿಕೊಳ್ಳಲು ನಾವು ಅವರಿಗೆ ಸಹಾಯ ಮಾಡಬೇಕು. ಆರಂಭದಲ್ಲಿ ಹೊಸ ಸತ್ಯಗಳ ಬಗ್ಗೆ ಅವರಿಗೆ ಗೊತ್ತಿರಲ್ಲ. ಈ ಸತ್ಯಗಳನ್ನು ಅರ್ಥಮಾಡಿಕೊಂಡ ಮೇಲೆ ಅವರು ಹಳೇ ನಂಬಿಕೆಗಳನ್ನು ಬಿಟ್ಟುಬಿಡಲು ಮನಸ್ಸು ಮಾಡುತ್ತಾರೆ. ಜನರಿಗೆ ಈ ಬದಲಾವಣೆಗಳನ್ನು ಮಾಡಿಕೊಳ್ಳಲು ಸಮಯ ಹಿಡಿಯಬಹುದು.—ರೋಮ. 12:2.

14-15. ಪರದೈಸ್‌ ಭೂಮಿಯಲ್ಲಿ ನಿತ್ಯಜೀವ ಸಿಗುವ ನಿರೀಕ್ಷೆಯ ಬಗ್ಗೆ ಸ್ವಲ್ಪನೇ ಗೊತ್ತಿರುವ ಅಥವಾ ಏನೂ ಗೊತ್ತಿಲ್ಲದ ಜನರಿಗೆ ಹೇಗೆ ಸಹಾಯ ಮಾಡಬಹುದು? ಉದಾಹರಣೆ ಕೊಡಿ.

14 ನಾವು ಸೇವೆಗೆ ಹೋದಾಗ ಜನರ ವಿಷಯದಲ್ಲಿ ತಾಳ್ಮೆ ತೋರಿಸಬೇಕು. ಆಗ ಒಂದು ಬೈಬಲ್‌ ಸತ್ಯವನ್ನು ಮೊದಲನೇ ಸಲ ಕೇಳಿಸಿಕೊಂಡ ಕೂಡಲೆ ಜನರು ಅದನ್ನು ಅರ್ಥಮಾಡಿಕೊಂಡು ಸ್ವೀಕರಿಸಬೇಕು ಎಂದು ನಾವು ನೆನಸುವುದಿಲ್ಲ. ಬೈಬಲ್‌ ಏನು ಹೇಳುತ್ತದೆ ಎಂದು ಅವರು ಅರ್ಥಮಾಡಿಕೊಳ್ಳಲು ಅವರಿಗೆ ಸಮಯ ಕೊಡುತ್ತೇವೆ, ಅನುಕಂಪದಿಂದ ಸಹಾಯ ಮಾಡುತ್ತೇವೆ. ಉದಾಹರಣೆಗೆ, ಪರದೈಸ್‌ ಭೂಮಿಯಲ್ಲಿ ನಿತ್ಯಜೀವ ಸಿಗುವ ನಿರೀಕ್ಷೆಯ ಬಗ್ಗೆ ಒಬ್ಬರ ಜೊತೆ ಹೇಗೆ ಮಾತಾಡಬಹುದು ಎಂದು ಯೋಚಿಸಿ. ಎಷ್ಟೋ ಜನರಿಗೆ ಇದರ ಬಗ್ಗೆ ಏನೂ ಗೊತ್ತಿರಲ್ಲ. ಸತ್ತ ಮೇಲೆ ಇನ್ನು ಎಲ್ಲ ಮುಗಿದುಹೋಯಿತು ಅಂತ ಅಂದುಕೊಂಡಿರಬಹುದು. ಅಥವಾ ಒಳ್ಳೇ ಜನರೆಲ್ಲಾ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಅಂದುಕೊಂಡಿರಬಹುದು. ನಾವು ಅವರಿಗೆ ಹೇಗೆ ಸಹಾಯ ಮಾಡಬಹುದು?

15 ಒಬ್ಬ ಸಹೋದರ ಯಾವ ವಿಧಾನ ಬಳಸುತ್ತಾರೆ ಎಂದು ನೋಡಿ. ಮೊದಲು ಅವರು ಆದಿಕಾಂಡ 1:28 ಓದುತ್ತಾರೆ. ನಂತರ ಅವರು ಮನೆಯವರಿಗೆ, ಮಾನವರು ಎಲ್ಲಿ, ಎಂಥ ಪರಿಸ್ಥಿತಿಯಲ್ಲಿ ಜೀವಿಸಬೇಕೆಂದು ದೇವರು ಬಯಸಿದನು ಎಂದು ಕೇಳುತ್ತಾರೆ. ಹೆಚ್ಚಿನ ಜನರು, “ಭೂಮಿಯಲ್ಲಿ, ಒಳ್ಳೇ ಪರಿಸ್ಥಿತಿಯಲ್ಲಿ ಜೀವಿಸಬೇಕೆಂದು ದೇವರು ಬಯಸಿದನು” ಎಂದು ಉತ್ತರ ಕೊಡುತ್ತಾರೆ. ಅವರು ಉತ್ತರ ಕೊಟ್ಟ ಮೇಲೆ ಆ ಸಹೋದರ ಯೆಶಾಯ 55:11 ಓದುತ್ತಾರೆ ಮತ್ತು ದೇವರ ಉದ್ದೇಶ ಬದಲಾಗಿದೆಯಾ ಎಂದು ಕೇಳುತ್ತಾರೆ. ಹೆಚ್ಚಾಗಿ ಜನರು “ಇಲ್ಲ” ಎಂದು ಉತ್ತರ ಕೊಡುತ್ತಾರೆ. ಕೊನೆಗೆ ಆ ಸಹೋದರ ಕೀರ್ತನೆ 37:10, 11 ಓದುತ್ತಾರೆ ಮತ್ತು ಮಾನವರಿಗೆ ಎಂಥ ಭವಿಷ್ಯ ಸಿಗಲಿದೆ ಎಂದು ಕೇಳುತ್ತಾರೆ. ಈ ರೀತಿಯಲ್ಲಿ ವಚನಗಳನ್ನು ಉಪಯೋಗಿಸಿ ಮಾತಾಡುವ ಮೂಲಕ ಅವರು ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಇದರಿಂದ ಒಳ್ಳೇ ಜನರು ಪರದೈಸ್‌ ಭೂಮಿಯಲ್ಲಿ ಸದಾಕಾಲ ಬದುಕಬೇಕೆಂದು ದೇವರು ಬಯಸುತ್ತಾನೆ ಎಂದು ಜನರು ಅರ್ಥಮಾಡಿಕೊಂಡಿದ್ದಾರೆ.

ಪ್ರೀತಿಯಿಂದ ಮಾಡುವ ಒಂದು ಚಿಕ್ಕ ವಿಷಯದಿಂದಲೂ ಒಳ್ಳೇ ಫಲಿತಾಂಶ ಸಿಗುತ್ತೆ; ಉದಾ: ಪತ್ರ ಕಳುಹಿಸಬಹುದು (ಪ್ಯಾರ 16-17 ನೋಡಿ)

16-17. ಜ್ಞಾನೋಕ್ತಿ 3:27​ನ್ನು ಮನಸ್ಸಲ್ಲಿಟ್ಟರೆ ನಾವು ಜನರ ಬಗ್ಗೆ ಚಿಂತೆ ಮಾಡುತ್ತೇವೆ, ಅವರ ಪರಿಸ್ಥಿತಿ ಅರ್ಥಮಾಡಿಕೊಳ್ಳುತ್ತೇವೆ ಎಂದು ಹೇಗೆ ತೋರಿಸಬಹುದು? ಉದಾಹರಣೆ ಕೊಡಿ.

16 ನಾಲ್ಕನೇ ವಿಧ – ಜನರ ಬಗ್ಗೆ ಚಿಂತೆ ಮಾಡುತ್ತೇವೆ, ಅವರ ಪರಿಸ್ಥಿತಿ ಅರ್ಥಮಾಡಿಕೊಳ್ಳುತ್ತೇವೆ ಎಂದು ತೋರಿಸಿ. ಉದಾಹರಣೆಗೆ, ಮನೆಯವನಿಗೆ ಅನುಕೂಲ ಇಲ್ಲದ ಸಮಯದಲ್ಲಿ ನಾವು ಅವರ ಮನೆಗೆ ಹೋಗಿದ್ದೇವಾ? ನಾವು ಕ್ಷಮೆ ಕೇಳಿ ಬೇರೆ ಸಮಯದಲ್ಲಿ ಬರುತ್ತೇವೆ ಎಂದು ಹೇಳಬೇಕು. ಮನೆಯವರಿಗೆ ಏನೋ ಚಿಕ್ಕ ಕೆಲಸ ಮಾಡಲು ಸಹಾಯ ಬೇಕಿದ್ದರೆ ಏನು ಮಾಡಬಹುದು? ಆರೋಗ್ಯ ಸರಿ ಇಲ್ಲದ ಕಾರಣ ಅಥವಾ ವಯಸ್ಸಾಗಿರುವ ಕಾರಣ ಮನೆ ಬಿಟ್ಟು ಹೊರಗೆ ಹೋಗಲು ಸಾಧ್ಯವಿಲ್ಲದ ವ್ಯಕ್ತಿಗಳಿಗೆ ಏನಾದರೂ ಸಣ್ಣ ಸಹಾಯ ಬೇಕಿರಬಹುದು. ಅಂದರೆ ಅಂಗಡಿಯಿಂದ ಏನಾದರೂ ತಂದು ಕೊಡಬೇಕಾಗಿರಬಹುದು ಅಥವಾ ಪತ್ರ ಪೋಸ್ಟ್‌ ಮಾಡಬೇಕಾಗಿರಬಹುದು. ಇಂಥ ಸನ್ನಿವೇಶಗಳಲ್ಲಿ ನಾವು ಸಹಾಯ ಮಾಡಬಹುದು.—ಜ್ಞಾನೋಕ್ತಿ 3:27 ಓದಿ.

17 ಒಬ್ಬ ಸಹೋದರಿ ಒಂದು ಚಿಕ್ಕ ಸಹಾಯ ಮಾಡಿದ್ದರಿಂದ ಒಳ್ಳೇ ಫಲಿತಾಂಶಗಳು ಸಿಕ್ಕಿದವು. ಒಂದು ಮಗು ಹುಟ್ಟಿದ ದಿನಾನೇ ತೀರಿಕೊಂಡಿತು. ಆ ಮಗುವಿನ ಕುಟುಂಬಕ್ಕೆ ನಮ್ಮ ಸಹೋದರಿ ಅನುಕಂಪದಿಂದ ಒಂದು ಪತ್ರ ಬರೆದಳು. ಸಾಂತ್ವನ ಕೊಡುವ ಕೆಲವು ವಚನಗಳನ್ನು ಆ ಪತ್ರದಲ್ಲಿ ಬರೆದಿದ್ದಳು. ಆ ಕುಟುಂಬದವರು ಹೇಗೆ ಪ್ರತಿಕ್ರಿಯಿಸಿದರು? ಮಗುವನ್ನು ಕಳಕೊಂಡ ತಾಯಿ ಹೀಗೆ ಬರೆದಿದ್ದಳು: “ನಿನ್ನೆ ನನಗೆ ಜೀವನಾನೇ ಬೇಡ ಅನಿಸಿಬಿಟ್ಟಿತ್ತು. ಆದರೆ ನಿಮ್ಮ ಪತ್ರದಿಂದ ಎಷ್ಟು ಸಹಾಯ ಆಯಿತು ಅಂತ ನಿಮ್ಮಿಂದ ಊಹಿಸಲಿಕ್ಕೂ ಆಗಲ್ಲ. ನಾನು ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಅದರಿಂದ ತುಂಬ ಸಾಂತ್ವನ ಸಿಕ್ಕಿತು. ನಾನು ನಿನ್ನೆ ನಿಮ್ಮ ಪತ್ರವನ್ನು ಸುಮಾರು 20 ಸಲ ಓದಿರಬಹುದು. ಅದರಿಂದ ಎಷ್ಟೊಂದು ಪ್ರೀತಿ, ಕಾಳಜಿ, ಪ್ರೋತ್ಸಾಹ ಸಿಕ್ಕಿತು ಅಂತ ನಾನು ಮಾತಲ್ಲಿ ಹೇಳಕ್ಕಾಗಲ್ಲ. ನಿಮಗೆ ನಾವೆಲ್ಲರೂ ತುಂಬು-ಹೃದಯದಿಂದ ಕೃತಜ್ಞತೆ ಹೇಳುತ್ತೇವೆ.” ನಾವು ಜನರ ಪರಿಸ್ಥಿತಿ ಅರ್ಥಮಾಡಿಕೊಂಡು ನಮ್ಮಿಂದಾದ ಸಹಾಯ ಮಾಡುವಾಗ ಖಂಡಿತ ಒಳ್ಳೇ ಫಲಿತಾಂಶಗಳು ಸಿಗುತ್ತವೆ.

ನಿಮ್ಮಿಂದ ಆದದ್ದನ್ನು ಮಾಡಿ, ಉಳಿದದ್ದನ್ನು ದೇವರ ಕೈಯಲ್ಲಿ ಬಿಡಿ

18. ಒಂದನೇ ಕೊರಿಂಥ 3:6, 7 ಹೇಳುವಂತೆ, ನಾವು ನಮ್ಮ ಸೇವೆಯ ವಿಷಯದಲ್ಲಿ ಏನನ್ನು ಮನಸ್ಸಲ್ಲಿ ಇಟ್ಟುಕೊಳ್ಳಬೇಕು?

18 ನಾವು ಸೇವೆಯಲ್ಲಿ ನಮ್ಮಿಂದ ಎಷ್ಟಾಗುತ್ತೋ ಅಷ್ಟನ್ನು ಮಾಡಿ ಬರಬೇಕು. ಜನರು ದೇವರ ಬಗ್ಗೆ ಕಲಿಯಲು ನಾವು ಸಹಾಯ ಮಾಡಬಹುದು. ಆದರೆ ಈ ಕೆಲಸದಲ್ಲಿ ನಮ್ಮದು ಮುಖ್ಯ ಭಾಗ ಅಲ್ಲ. (1 ಕೊರಿಂಥ 3:6, 7 ಓದಿ.) ಜನರನ್ನು ತನ್ನ ಹತ್ತಿರಕ್ಕೆ ಸೆಳೆಯುವುದು ಯೆಹೋವನೇ. (ಯೋಹಾ. 6:44) ಒಬ್ಬ ವ್ಯಕ್ತಿ ಸುವಾರ್ತೆಗೆ ಕಿವಿಗೊಡುತ್ತಾನಾ ಇಲ್ಲವಾ ಅನ್ನುವುದು ಅವನ ಹೃದಯದ ಸ್ಥಿತಿಯ ಮೇಲೆ ಹೊಂದಿಕೊಂಡಿದೆ. (ಮತ್ತಾ. 13:4-8) ಈ ಲೋಕದಲ್ಲಿ ಜೀವಿಸಿದ ಮಹಾ ಬೋಧಕ ಯೇಸು. ಆತನು ಸಾರಿದ ಸಂದೇಶಕ್ಕೇ ಹೆಚ್ಚಿನ ಜನ ಕಿವಿಗೊಡಲಿಲ್ಲ. ಆದ್ದರಿಂದ ನಮ್ಮ ಸಂದೇಶಕ್ಕೆ ಹೆಚ್ಚಿನ ಜನರು ಕಿವಿಗೊಡದಿದ್ದರೆ ನಾವು ನಿರುತ್ಸಾಹಗೊಳ್ಳಬಾರದು.

19. ಸೇವೆಯಲ್ಲಿ ಅನುಕಂಪ ತೋರಿಸುವಾಗ ಯಾವ ಪ್ರಯೋಜನಗಳು ಸಿಗುತ್ತವೆ?

19 ನಾವು ಸೇವೆಯಲ್ಲಿ ಅನುಕಂಪ ತೋರಿಸುವಾಗ ಒಳ್ಳೇ ಫಲಿತಾಂಶಗಳು ಸಿಕ್ಕೇ ಸಿಗುತ್ತವೆ. ಅನುಕಂಪ ತೋರಿಸಿದರೆ ನಾವು ಸಾರುವ ಕೆಲಸವನ್ನು ಆನಂದಿಸುತ್ತೇವೆ. ಆಗ ನಮಗೆ ಕೊಡುವುದರಿಂದ ಸಿಗುವ ಹೆಚ್ಚಿನ ಸಂತೋಷ ಸಿಗುತ್ತದೆ. “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ” ಇರುವ ಜನರು ಸುವಾರ್ತೆಗೆ ಕಿವಿಗೊಡಲು ನಾವು ತೋರಿಸುವ ಅನುಕಂಪ ಸಹಾಯ ಮಾಡುತ್ತದೆ. (ಅ. ಕಾ. 13:48) ಆದ್ದರಿಂದ “ಅನುಕೂಲಕರವಾದ ಸಮಯವು ಇರುವ ವರೆಗೆ ಎಲ್ಲರಿಗೂ ಒಳ್ಳೇದನ್ನು ಮಾಡೋಣ.” (ಗಲಾ. 6:10) ಆಗ ನಮ್ಮ ಸ್ವರ್ಗೀಯ ತಂದೆಗೆ ಗೌರವ ಕೊಡುವ ರೀತಿ ನಡಕೊಂಡೆವು ಎಂಬ ತೃಪ್ತಿ ನಮಗಿರುತ್ತದೆ.—ಮತ್ತಾ. 5:16.

ಗೀತೆ 44 ಕೊಯ್ಲಿನಲ್ಲಿ ಆನಂದಿಸುತ್ತಾ ಪಾಲಿಗರಾಗುವುದು

^ ಪ್ಯಾರ. 5 ನಾವು ಅನುಕಂಪ ತೋರಿಸುವಾಗ ನಮಗೆ ತುಂಬ ಸಂತೋಷ ಆಗುತ್ತದೆ ಮತ್ತು ಹೆಚ್ಚಿನ ಜನರು ಸುವಾರ್ತೆಗೆ ಕಿವಿಗೊಡಲು ಮನಸ್ಸು ಮಾಡುತ್ತಾರೆ. ಯಾಕೆ? ಈ ಲೇಖನದಲ್ಲಿ, ಯೇಸುವಿನ ಮಾದರಿಯಿಂದ ಏನು ಕಲಿಯಬಹುದು ಎಂದು ನೋಡೋಣ. ಸೇವೆಯಲ್ಲಿ ನಮಗೆ ಸಿಗುವ ಜನರಿಗೆ ಯಾವ ನಾಲ್ಕು ವಿಧಗಳಲ್ಲಿ ನಾವು ಅನುಕಂಪ ತೋರಿಸಬಹುದು ಎಂದು ಸಹ ಕಲಿಯೋಣ.

^ ಪ್ಯಾರ. 5 ಪದ ವಿವರಣೆ: ಇಲ್ಲಿ ಕನಿಕರ ಎಂಬ ಪದಕ್ಕೆ, ಕಷ್ಟದಲ್ಲಿರುವ ವ್ಯಕ್ತಿಗೆ ಅಥವಾ ಯಾರನ್ನು ಕ್ರೂರವಾಗಿ ನಡೆಸಲಾಗಿದೆಯೋ ಅಂಥ ವ್ಯಕ್ತಿಗೆ ಕೋಮಲ ಭಾವನೆಗಳನ್ನು ತೋರಿಸುವುದು ಎಂಬ ಅರ್ಥ ಇದೆ. ಇಂಥ ಭಾವನೆಗಳಿರುವವರು ಜನರಿಗೆ ತಮ್ಮಿಂದಾದ ಸಹಾಯವನ್ನು ಖಂಡಿತ ಮಾಡುತ್ತಾರೆ.

^ ಪ್ಯಾರ. 8 2014 ಮೇ 15​ರ ಕಾವಲಿನಬುರುಜುವಿನಲ್ಲಿ ಬಂದ “ಸೇವೆಯಲ್ಲಿ ಸುವರ್ಣ ನಿಯಮವನ್ನು ಪಾಲಿಸಿ” ಎಂಬ ಲೇಖನ ನೋಡಿ.

^ ಪ್ಯಾರ. 11 JW ಪ್ರಸಾರದಲ್ಲಿ “ಎಂದಿಗೂ ನಿರೀಕ್ಷೆ ಕಳೆದುಕೊಳ್ಳಬೇಡಿ!—ಸರ್ಗೆ ಬೊಟಾನ್ಕಿನ್‌” ಎಂಬ ವಿಡಿಯೋ ನೋಡಿ. (ಸಂದರ್ಶನಗಳು ಮತ್ತು ಅನುಭವಗಳು > ಸತ್ಯ ಜೀವನವನ್ನು ಬದಲಾಯಿಸಿತು)