ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 10

ನಾನ್ಯಾಕೆ ಇನ್ನೂ ದೀಕ್ಷಾಸ್ನಾನ ತಗೊಂಡಿಲ್ಲ?

ನಾನ್ಯಾಕೆ ಇನ್ನೂ ದೀಕ್ಷಾಸ್ನಾನ ತಗೊಂಡಿಲ್ಲ?

“ಫಿಲಿಪ್ಪನು ಕಂಚುಕಿಯು ಇಬ್ಬರೂ ನೀರಿನೊಳಕ್ಕೆ ಇಳಿದುಹೋದರು; ಮತ್ತು ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು.”—ಅ. ಕಾ. 8:38.

ಗೀತೆ 7 ಕ್ರೈಸ್ತ ಸಮರ್ಪಣೆ

ಕಿರುನೋಟ *

1. (ಎ) ಆದಾಮ-ಹವ್ವ ಯಾವ ತೀರ್ಮಾನ ತಗೊಂಡರು? (ಬಿ) ಇದರಿಂದ ಏನಾಯಿತು?

ಯಾವುದು ಸರಿ, ಯಾವುದು ತಪ್ಪು ಅಂತ ತೀರ್ಮಾನ ಮಾಡುವ ಹಕ್ಕು ಯಾರಿಗಿದೆ ಅಂತ ನೀವು ನೆನಸುತ್ತೀರಿ? ಆದಾಮ-ಹವ್ವ ಸರಿ ಮತ್ತು ತಪ್ಪಿನ ಜ್ಞಾನವನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನುವ ಮೂಲಕ ‘ನಮಗೆ ಯೆಹೋವನ ಮೇಲೆ ಮತ್ತು ಆತನ ಮಟ್ಟಗಳ ಮೇಲೆ ಭರವಸೆ ಇಲ್ಲ’ ಎಂದು ಸ್ಪಷ್ಟವಾಗಿ ತೋರಿಸಿಕೊಟ್ಟರು. ಇದು ‘ಸರಿ ಮತ್ತು ತಪ್ಪು ಯಾವುದೆಂದು ನಾವೇ ತೀರ್ಮಾನ ಮಾಡಿಕೊಳ್ಳುತ್ತೇವೆ’ ಅಂತ ಹೇಳುವ ರೀತಿ ಇತ್ತು. (ಆದಿ. 3:22) ಆದರೆ ಇದರಿಂದ ಏನೆಲ್ಲಾ ಕಳಕೊಂಡರು ಅಂತ ಯೋಚಿಸಿ. ಅವರು ಯೆಹೋವನ ಜೊತೆ ಇದ್ದ ಸ್ನೇಹವನ್ನು ಕಳಕೊಂಡರು. ಅನಂತಕಾಲ ಬದುಕುವ ಅವಕಾಶವನ್ನು ಕಳಕೊಂಡರು ಮತ್ತು ತಮ್ಮ ಮಕ್ಕಳಿಗೆ ಪಾಪ, ಮರಣವನ್ನು ದಾಟಿಸಿದರು. (ರೋಮ. 5:12) ಆದಾಮ-ಹವ್ವ ಮಾಡಿದ ನಿರ್ಧಾರದಿಂದ ಎಲ್ಲ ಮಣ್ಣುಪಾಲಾಯಿತು.

ಇಥಿಯೋಪ್ಯದ ಕಂಚುಕಿ ಯೇಸುವನ್ನು ಅಂಗೀಕರಿಸಿದ ಮೇಲೆ ದೀಕ್ಷಾಸ್ನಾನ ತಗೊಳ್ಳಲು ತಕ್ಷಣ ಮುಂದೆ ಬಂದನು (ಪ್ಯಾರ 2-3 ನೋಡಿ)

2-3. (ಎ) ಫಿಲಿಪ್ಪನು ಸಾರಿದಾಗ ಇಥಿಯೋಪ್ಯದ ಕಂಚುಕಿ ಏನು ಮಾಡಿದನು? (ಬಿ) ದೀಕ್ಷಾಸ್ನಾನ ತಗೊಂಡರೆ ನಮಗೆ ಯಾವ ಆಶೀರ್ವಾದಗಳು ಸಿಗುತ್ತವೆ? (ಸಿ) ನಾವು ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

2 ಆದಾಮ-ಹವ್ವ ನಡಕೊಂಡ ವಿಧಕ್ಕೂ ಫಿಲಿಪ್ಪನು ಸಾರಿದಾಗ ಇಥಿಯೋಪ್ಯದ ಕಂಚುಕಿ ನಡಕೊಂಡ ವಿಧಕ್ಕೂ ಇರುವ ವ್ಯತ್ಯಾಸ ನೋಡಿ. ಯೆಹೋವ ಮತ್ತು ಯೇಸು ತನಗಾಗಿ ಏನೆಲ್ಲಾ ಮಾಡಿದ್ದಾರೆ ಎಂದು ಅರ್ಥಮಾಡಿಕೊಂಡಾಗ ಆ ಕಂಚುಕಿ ತಕ್ಷಣ ದೀಕ್ಷಾಸ್ನಾನ ಪಡಕೊಂಡನು. (ಅ. ಕಾ. 8:34-38) ನಾವು ನಮ್ಮನ್ನೇ ದೇವರಿಗೆ ಸಮರ್ಪಣೆ ಮಾಡಿಕೊಂಡು ಆ ಕಂಚುಕಿ ತರ ದೀಕ್ಷಾಸ್ನಾನ ಪಡಕೊಳ್ಳುವಾಗ ಏನು ತೋರಿಸಿಕೊಡುತ್ತೇವೆ? ಯೆಹೋವ ಮತ್ತು ಯೇಸು ನಮಗೋಸ್ಕರ ಏನೆಲ್ಲಾ ಮಾಡಿದ್ದಾರೋ ಅದನ್ನು ನಾವು ಮಾನ್ಯಮಾಡುತ್ತೇವೆ ಎಂದು ಸ್ಪಷ್ಟವಾಗಿ ತೋರಿಸಿಕೊಡುತ್ತೇವೆ. ಅಷ್ಟೇ ಅಲ್ಲ, ನಮಗೆ ಯೆಹೋವನ ಮೇಲೆ ಭರವಸೆ ಇದೆ ಮತ್ತು ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನಿಸುವ ಹಕ್ಕು ಕೂಡ ಆತನಿಗೇ ಇದೆ ಎಂದು ಒಪ್ಪುತ್ತೇವೆಂದು ತೋರಿಸಿಕೊಡುತ್ತೇವೆ.

3 ಯೆಹೋವನ ಸೇವೆ ಮಾಡುವಾಗ ನಮಗೆ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತವೆ ಎಂದು ಯೋಚಿಸಿ. ಆದಾಮ-ಹವ್ವ ಏನೆಲ್ಲಾ ಕಳಕೊಂಡರೋ ಅದನ್ನೆಲ್ಲಾ ಪಡಕೊಳ್ಳುತ್ತೇವೆ. ಇದರಲ್ಲಿ ನಿತ್ಯಜೀವನೂ ಸೇರಿದೆ. ನಾವು ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವುದರಿಂದ ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸಿ ಶುದ್ಧ ಮನಸ್ಸಾಕ್ಷಿಯನ್ನು ಕೊಡುತ್ತಾನೆ. (ಮತ್ತಾ. 20:28; ಅ. ಕಾ. 10:43) ಯೆಹೋವನ ಮೆಚ್ಚುಗೆ ಪಡೆದಿರುವ ಆತನ ಕುಟುಂಬದ ಸದಸ್ಯರಾಗುತ್ತೇವೆ. ನಮಗೊಂದು ಉಜ್ವಲವಾದ ಭವಿಷ್ಯ ಸಿಗುತ್ತದೆ. (ಯೋಹಾ. 10:14-16; ರೋಮ. 8:20, 21) ಇಷ್ಟೆಲ್ಲಾ ಆಶೀರ್ವಾದಗಳು ಸಿಗಲಿವೆಯಾದರೂ ಯೆಹೋವನ ಬಗ್ಗೆ ತಿಳುಕೊಂಡಿರುವ ಕೆಲವರು ಇಥಿಯೋಪ್ಯದ ಕಂಚುಕಿ ತರ ಹೆಜ್ಜೆ ತಗೊಳ್ಳದೆ ಹಿಂಜರಿಯುತ್ತಾರೆ. ದೀಕ್ಷಾಸ್ನಾನ ತಗೊಳ್ಳುವುದರಿಂದ ಅವರನ್ನು ಯಾವುದು ತಡೆಯುತ್ತಿರಬಹುದು? ಆ ಅಡ್ಡಿತಡೆಗಳನ್ನು ಅವರು ಹೇಗೆ ಜಯಿಸಬಹುದು?

ದೀಕ್ಷಾಸ್ನಾನಕ್ಕಿರುವ ಕೆಲವು ಅಡ್ಡಿತಡೆಗಳು

ದೀಕ್ಷಾಸ್ನಾನ ತಗೊಳ್ಳುವ ಮುಂಚೆ ಕೆಲವರಿಗೆ ಎದುರಾಗುವ ಅಡ್ಡಿತಡೆಗಳು

ಆತ್ಮವಿಶ್ವಾಸದ ಕೊರತೆ (ಪ್ಯಾರ 4-5 ನೋಡಿ) *

4-5. (ಎ) ಆ್ಯವರಿ ಎಂಬ ಹುಡುಗನಿಗೆ ಯಾವ ಸಮಸ್ಯೆ ಇತ್ತು? (ಬಿ) ಹ್ಯಾನ ಎಂಬ ಹುಡುಗಿಗೆ ಯಾವ ಸಮಸ್ಯೆ ಇತ್ತು?

4 ಆತ್ಮವಿಶ್ವಾಸದ ಕೊರತೆ. ಆ್ಯವರಿ ಎಂಬ ಹುಡುಗನ ಹೆತ್ತವರು ಯೆಹೋವನ ಸಾಕ್ಷಿಗಳು. ಅವನ ತಂದೆಗೆ ತುಂಬ ಒಳ್ಳೇ ಹೆಸರಿದೆ. ತಂದೆಯಾಗಿ ಮತ್ತು ಹಿರಿಯನಾಗಿ ಅವರು ತಮ್ಮ ಜವಾಬ್ದಾರಿಯನ್ನು ತುಂಬ ಚೆನ್ನಾಗಿ ನಿಭಾಯಿಸುತ್ತಾರೆ. ಆದರೂ ಆ್ಯವರಿ ದೀಕ್ಷಾಸ್ನಾನ ತಗೊಳ್ಳಲು ಹಿಂದೆ-ಮುಂದೆ ನೋಡುತ್ತಿದ್ದ. ಯಾಕೆ? “ಅಪ್ಪನ ತರ ಒಳ್ಳೇ ಹೆಸರು ಮಾಡಲು ನನ್ನಿಂದಾಗಲ್ಲ ಅಂತ ಅನಿಸಿತು” ಎಂದವನು ಹೇಳುತ್ತಾನೆ. ದೀಕ್ಷಾಸ್ನಾನ ಆದಮೇಲೆ ಸಿಗಲಿರುವ ಜವಾಬ್ದಾರಿಗಳನ್ನು ತನ್ನಿಂದ ಸರಿಯಾಗಿ ನಿಭಾಯಿಸಲು ಆಗಲ್ಲ ಎಂಬ ಭಾವನೆನೂ ಅವನಿಗಿತ್ತು. “ಬೇರೆಯವರ ಮುಂದೆ ಪ್ರಾರ್ಥನೆ ಮಾಡುವುದು, ಭಾಷಣ ಕೊಡುವುದು ಅಥವಾ ಗುಂಪನ್ನು ಸೇವೆಗೆ ಕರಕೊಂಡು ಹೋಗುವುದರ ಬಗ್ಗೆ ನೆನಸಿದರೇನೇ ಕೈಕಾಲೆಲ್ಲಾ ನಡುಗುತ್ತಿತ್ತು” ಎಂದು ಹೇಳುತ್ತಾನೆ.

5 ಹ್ಯಾನಾಗೆ 18 ವರ್ಷ. ಅವಳಿಗೂ ಆತ್ಮವಿಶ್ವಾಸದ ಕೊರತೆ ತುಂಬಾನೇ ಇತ್ತು. ಅವಳ ಹೆತ್ತವರು ಯೆಹೋವನ ಸಾಕ್ಷಿಗಳು. ಆದರೂ ಅವಳಿಗೆ ತಾನು ಯೆಹೋವನಿಗೆ ಇಷ್ಟ ಆಗುವ ತರ ನಡೆಯಕ್ಕಾಗಲ್ಲ ಎಂಬ ಭಾವನೆ ಇತ್ತು. ಯಾಕೆ? ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಎಂದವಳು ನೆನಸುತ್ತಿದ್ದಳು. ಕೆಲವೊಮ್ಮೆ ಅವಳ ಮನಸ್ಸು ಅವಳನ್ನು ಎಷ್ಟು ಹಂಗಿಸುತ್ತಿತ್ತೆಂದರೆ ಅವಳು ತನಗೆ ತಾನೇ ಗಾಯ ಮಾಡಿಕೊಳ್ಳುತ್ತಿದ್ದಳು. ಆಮೇಲೆ ಅದನ್ನು ನೆನಸಿ ಇನ್ನೂ ಬೇಜಾರು ಮಾಡಿಕೊಳ್ಳುತ್ತಿದ್ದಳು. “ನಾನು ಏನು ಮಾಡಿಕೊಂಡೆ ಅಂತ ಯಾರಿಗೂ ಹೇಳುತ್ತಿರಲಿಲ್ಲ. ನನ್ನ ಅಪ್ಪ-ಅಮ್ಮನ ಹತ್ತಿರನೂ ಹೇಳಿಕೊಳ್ಳುತ್ತಿರಲಿಲ್ಲ. ನನ್ನಂಥ ಹುಡುಗಿನಾ ಯೆಹೋವನು ಹತ್ತಿರಕ್ಕೂ ಸೇರಿಸಲ್ಲ ಅಂತ ಅಂದುಕೊಂಡಿದ್ದೆ, ಯಾಕೆಂದರೆ ನಾನು ಆತನಿಗೆ ಇಷ್ಟ ಆಗದಿರೋ ವಿಷಯ ಮಾಡುತ್ತಿದ್ದೆ” ಎಂದವಳು ಹೇಳುತ್ತಾಳೆ.

ಸ್ನೇಹಿತರ ಪ್ರಭಾವ(ಪ್ಯಾರ 6 ನೋಡಿ) *

6. ವನೆಸ ದೀಕ್ಷಾಸ್ನಾನ ಪಡೆಯಲು ಯಾವುದು ತಡೆಯಾಗಿತ್ತು?

6 ಸ್ನೇಹಿತರ ಪ್ರಭಾವ. ವನೆಸ ಎಂಬ 22 ವಯಸ್ಸಿನ ಹುಡುಗಿ ಹೇಳುವುದು: “ನನಗೊಬ್ಬ ಒಳ್ಳೇ ಸ್ನೇಹಿತೆ ಇದ್ದಳು. ನಾನೂ ಅವಳೂ ಸುಮಾರು ಹತ್ತು ವರ್ಷ ಫ್ರೆಂಡ್ಸ್‌ ಆಗಿದ್ವಿ.” ಆದರೆ ವನೆಸ ದೀಕ್ಷಾಸ್ನಾನ ಪಡೆಯಲು ಅವಳ ಸ್ನೇಹಿತೆ ತಡೆಯಾಗಿದ್ದಳು. ಇದರಿಂದ ವನೆಸಗೆ ತುಂಬ ಕಷ್ಟ ಆಯಿತು. “ನಾನು ಯಾರನ್ನೂ ಬೇಗ ಫ್ರೆಂಡ್‌ ಮಾಡ್ಕೊಳ್ಳಲ್ಲ. ಈ ಫ್ರೆಂಡೂ ಇಲ್ಲ ಅಂತಾದ್ರೆ ನನ್ನ ಪರಿಸ್ಥಿತಿ ಏನು ಅಂತ ಯೋಚಿಸಿದೆ” ಅನ್ನುತ್ತಾಳೆ ವನೆಸ.

ತಪ್ಪು ಮಾಡಿಬಿಡುತ್ತೇನೆ ಅನ್ನುವ ಭಯ (ಪ್ಯಾರ 7 ನೋಡಿ) *

7. ಮಕೇಲ ಎಂಬ ಹುಡುಗಿಗೆ ಯಾವ ಭಯ ಇತ್ತು? ಯಾಕೆ?

7 ತಪ್ಪು ಮಾಡಿಬಿಡುತ್ತೇನೆ ಅನ್ನುವ ಭಯ. ಮಕೇಲ ಎಂಬ ಹುಡುಗಿಗೆ ಐದು ವರ್ಷ ಇದ್ದಾಗ ಅವಳ ಅಣ್ಣನಿಗೆ ಬಹಿಷ್ಕಾರ ಆಯಿತು. ತನ್ನ ಅಣ್ಣ ಮಾಡಿದ ತಪ್ಪಿಂದ ಅಪ್ಪ-ಅಮ್ಮ ಎಷ್ಟು ನೋವು ತಿಂತಾ ಇದ್ದರು ಅಂತ ಮಕೇಲ ಚಿಕ್ಕ ವಯಸ್ಸಿಂದ ನೋಡುತ್ತಾ ಬಂದಳು. “ನಾನು ದೀಕ್ಷಾಸ್ನಾನ ತಗೊಂಡು ಆಮೇಲೆ ಏನಾದರೂ ತಪ್ಪು ಮಾಡಿ ನನಗೂ ಬಹಿಷ್ಕಾರ ಆಗಿಬಿಟ್ಟರೆ ಅಪ್ಪ-ಅಮ್ಮಂಗೆ ಅದನ್ನು ತಡ್ಕೊಳ್ಳಲು ಆಗಲ್ಲ ಅನ್ನುವ ಭಯ ಇತ್ತು” ಎನ್ನುತ್ತಾಳೆ ಮಕೇಲ.

ವಿರೋಧ ಬರುತ್ತದೆ ಅನ್ನುವ ಭಯ (ಪ್ಯಾರ 8 ನೋಡಿ)) *

8. ಮೈಲ್ಸ್‌ ಎಂಬ ಹುಡುಗನಿಗೆ ಯಾವ ಭಯ ಇತ್ತು?

8 ವಿರೋಧ ಬರುತ್ತೆ ಅನ್ನುವ ಭಯ. ಮೈಲ್ಸ್‌ ಎಂಬ ಹುಡುಗನ ಅಪ್ಪ ಮತ್ತು ಮಲತಾಯಿ ಯೆಹೋವನ ಆರಾಧಕರು. ಆದರೆ ಮೈಲ್ಸ್‌ನ ಸ್ವಂತ ತಾಯಿ ಸಾಕ್ಷಿ ಅಲ್ಲ. “ನಾನು ನನ್ನ ಅಮ್ಮನ ಜೊತೆ 18 ವರ್ಷ ಇದ್ದೆ. ನಾನು ದೀಕ್ಷಾಸ್ನಾನ ತಗೊಳ್ಳಲು ಇಷ್ಟಪಡುತ್ತೇನೆ ಅಂತ ಅಮ್ಮನಿಗೆ ಹೇಳಲು ಭಯ ಆಗುತ್ತಿತ್ತು. ಅಪ್ಪ ಸಾಕ್ಷಿಯಾದಾಗ ಅಮ್ಮಂಗೆ ಅದು ಇಷ್ಟಾನೇ ಆಗಿರಲಿಲ್ಲ. ನನಗೂ ಅವರು ತೊಂದರೆ ಕೊಡಬಹುದು ಅಂತ ಭಯ ಇತ್ತು” ಅನ್ನುತ್ತಾನೆ ಮೈಲ್ಸ್‌.

ಅಡ್ಡಿತಡೆಗಳನ್ನು ಜಯಿಸುವುದು ಹೇಗೆ?

9. ಯೆಹೋವನು ಎಷ್ಟು ತಾಳ್ಮೆ ಮತ್ತು ಪ್ರೀತಿ ತೋರಿಸುತ್ತಾನೆ ಎಂದು ನೀವು ಕಲಿಯುತ್ತಾ ಹೋದರೆ ಏನಾಗುತ್ತದೆ?

9 ಆದಾಮ-ಹವ್ವ ಯೆಹೋವನ ಮೇಲೆ ಆಳವಾದ ಪ್ರೀತಿಯನ್ನು ಬೆಳೆಸಿಕೊಳ್ಳದೇ ಹೋದದ್ದರಿಂದ ಯೆಹೋವನ ಸೇವಕರಾಗಲು ಮನಸ್ಸು ಮಾಡಲಿಲ್ಲ. ಆದರೂ ಅವರು ಸ್ವಲ್ಪಕಾಲ ಜೀವಿಸಲು ಯೆಹೋವನು ಅನುಮತಿಸಿದನು. ಇದರಿಂದ ಅವರು ಮಕ್ಕಳನ್ನು ಪಡೆಯಲು ಮತ್ತು ಅವರನ್ನು ಹೇಗೆ ಬೆಳೆಸಬೇಕೆಂದು ಸ್ವತಃ ತೀರ್ಮಾನಿಸಲು ಸಾಧ್ಯವಾಯಿತು. ಯೆಹೋವನ ಸಹಾಯ ಇಲ್ಲದೇ ಜೀವನ ನಡೆಸುವುದು ಎಷ್ಟು ಕಷ್ಟ ಎಂದು ಆದಾಮ-ಹವ್ವ ಬೇಗ ಅರ್ಥಮಾಡಿಕೊಂಡರು. ಅವರು ಮಾಡಿದ್ದು ಎಂಥ ಮೂರ್ಖತನ ಎಂದು ಅವರಿಗೆ ಅರ್ಥವಾಯಿತು. ಅವರ ದೊಡ್ಡ ಮಗ ಅಮಾಯಕನಾಗಿದ್ದ ತನ್ನ ಸ್ವಂತ ತಮ್ಮನನ್ನು ಕೊಂದುಹಾಕಿದ. ವರ್ಷಗಳು ಉರುಳಿದಂತೆ ಕ್ರೂರತೆ ಮತ್ತು ಸ್ವಾರ್ಥ ಎಲ್ಲಾ ಮನುಷ್ಯರಲ್ಲೂ ತುಂಬಿಕೊಂಡಿತು. (ಆದಿ. 4:8; 6:11-13) ಆದರೆ ಯೆಹೋವನು ಮಾನವರ ವಿಷಯದಲ್ಲಿ ಕೈತೊಳಕೊಂಡು ಬಿಡಲಿಲ್ಲ. ಆದಾಮ-ಹವ್ವರ ಮಕ್ಕಳಲ್ಲಿ ಯಾರಾದರೂ ಆತನ ಸೇವೆ ಮಾಡಲು ಬಯಸಿದರೆ ಅವರನ್ನು ರಕ್ಷಿಸಲು ಬೇಕಾದ ಏರ್ಪಾಡನ್ನು ಮಾಡಿದನು. (ಯೋಹಾ. 6:38-40, 57, 58) ಯೆಹೋವನು ಅದೆಷ್ಟು ತಾಳ್ಮೆ ಮತ್ತು ಪ್ರೀತಿ ತೋರಿಸುತ್ತಾನೆ ಅನ್ನುವುದರ ಬಗ್ಗೆ ನೀವು ಹೆಚ್ಚೆಚ್ಚು ಕಲಿತಾಗ ಆತನ ಮೇಲೆ ಪ್ರೀತಿ ಜಾಸ್ತಿ ಆಗುತ್ತದೆ. ಆದಾಮ-ಹವ್ವ ಹೋದ ದಾರಿಯಲ್ಲಿ ಹೋಗದೆ ನೀವು ಯೆಹೋವನಿಗೆ ನಿಮ್ಮನ್ನೇ ಸಮರ್ಪಿಸಿಕೊಳ್ಳುತ್ತೀರಿ.

ಈ ಅಡ್ಡಿತಡೆಗಳನ್ನು ಹೇಗೆ ಜಯಿಸಬಹುದು?

(ಪ್ಯಾರ 9-10 ನೋಡಿ) *

10. ಕೀರ್ತನೆ 19:7​ರಲ್ಲಿರುವ ಮಾತಿನ ಬಗ್ಗೆ ಧ್ಯಾನಿಸಿದರೆ ಯೆಹೋವನ ಸೇವೆ ಮಾಡಲು ಹೇಗೆ ಸಹಾಯ ಸಿಗುತ್ತದೆ?

10 ಯೆಹೋವನ ಬಗ್ಗೆ ಕಲಿಯುತ್ತಾ ಇರಿ. ಯೆಹೋವನ ಬಗ್ಗೆ ಹೆಚ್ಚೆಚ್ಚು ಕಲಿತಾಗ ಆತನ ಸೇವೆಯನ್ನು ಯಶಸ್ವಿಕರವಾಗಿ ಮಾಡಬಹುದು ಎಂಬ ಧೈರ್ಯ ಬಂದುಬಿಡುತ್ತದೆ. ಆಗಲೇ ತಿಳಿಸಿದ ಆ್ಯವರಿ ಹೇಳುವುದು: ಕೀರ್ತನೆ 19:7​ರಲ್ಲಿರುವ ಮಾತಿನ ಬಗ್ಗೆ ಓದಿ ಧ್ಯಾನಿಸಿದ್ದರಿಂದ ನನಗೆ ಧೈರ್ಯ ಬಂತು.” (ಓದಿ.) ಕೀರ್ತನೆ 19:7​ರಲ್ಲಿರುವ “ಬುದ್ಧಿಹೀನ” ಅನ್ನುವ ಪದವನ್ನು ನೂತನ ಲೋಕ ಭಾಷಾಂತರ “ಅನುಭವ ಇಲ್ಲದವ” ಎಂದು ಭಾಷಾಂತರಿಸುತ್ತದೆ. ಈ ವಚನದಲ್ಲಿ ಹೇಳಿದಂತೆ ಅನುಭವ ಇಲ್ಲದ ತನಗೆ ಯೆಹೋವನು ವಿವೇಕ ಕೊಡುವುದನ್ನು ಆ್ಯವರಿ ಗಮನಿಸಿದಾಗ ದೇವರ ಮೇಲೆ ಪ್ರೀತಿ ಹೆಚ್ಚಾಯಿತು. ಈ ಪ್ರೀತಿ ಆತ್ಮವಿಶ್ವಾಸ ಕೊಡುವುದು ಮಾತ್ರ ಅಲ್ಲ ಯೆಹೋವನಿಗೆ ಇಷ್ಟವಾಗದ ವಿಷಯಗಳನ್ನು ಬಿಟ್ಟುಬಿಟ್ಟು ಆತನ ಸೇವೆಗೆ ಗಮನ ಕೊಡಲು ಸಹ ಸಹಾಯ ಮಾಡುತ್ತದೆ. ಹಿಂದೆ ತಿಳಿಸಿದ ಹ್ಯಾನ ಹೇಳುವುದು: “ನಾನು ವೈಯಕ್ತಿಕವಾಗಿ ಬೈಬಲನ್ನು ಓದಿ ಅಧ್ಯಯನ ಮಾಡಿದಾಗ, ನಾನು ನನಗೇ ಗಾಯ ಮಾಡಿಕೊಂಡರೆ ಯೆಹೋವನಿಗೂ ನೋವು ಮಾಡುತ್ತೇನೆ ಎಂದು ಅರ್ಥವಾಯಿತು.” (1 ಪೇತ್ರ 5:7) ಹ್ಯಾನ ‘ದೇವರ ವಾಕ್ಯದ ಪ್ರಕಾರ ಮಾಡುವವಳಾದಳು.’ (ಯಾಕೋ. 1:22) ಇದರ ಫಲಿತಾಂಶ ಏನಾಯಿತು? “ಯೆಹೋವನ ಮಾತನ್ನು ಕೇಳಿ ನಡೆಯುವುದರಿಂದ ಯಾವ ಪ್ರಯೋಜನ ಸಿಗುತ್ತದೆ ಅಂತ ನೋಡಿದಾಗ ನನಗೆ ಆತನ ಮೇಲಿರುವ ಪ್ರೀತಿ ಹೆಚ್ಚಾಯಿತು. ನನಗೆ ಈಗ ಏನು ಮನವರಿಕೆ ಆಗಿದೆ ಅಂದರೆ, ನನಗೆ ಸಹಾಯ ಬೇಕಾದಾಗ ಯೆಹೋವನು ಖಂಡಿತ ಸಹಾಯ ಮಾಡುತ್ತಾನೆ” ಎಂದು ಹ್ಯಾನ ಹೇಳುತ್ತಾಳೆ. ಹ್ಯಾನ ತನಗೆ ತಾನೇ ಗಾಯ ಮಾಡಿಕೊಳ್ಳುವ ಅಭ್ಯಾಸವನ್ನು ಬಿಟ್ಟುಬಿಟ್ಟಳು. ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದಳು.

(ಪ್ಯಾರ 11 ನೋಡಿ) *

11. (ಎ) ಒಳ್ಳೇ ಸ್ನೇಹಿತರು ಸಿಗಲಿಕ್ಕೋಸ್ಕರ ವನೆಸ ಏನು ಮಾಡಿದಳು? (ಬಿ) ಇದರಿಂದ ನಾವೇನು ಕಲಿಯಬಹುದು?

11 ಒಳ್ಳೇ ಸ್ನೇಹಿತರನ್ನು ಆರಿಸಿಕೊಳ್ಳಿ. ಈ ಹಿಂದೆ ತಿಳಿಸಿದ ವನೆಸಗೆ ಯೆಹೋವನ ಸೇವೆ ಮಾಡುವುದರಿಂದ ತನ್ನ ಸ್ನೇಹಿತೆ ತನ್ನನ್ನು ತಡೆಯುತ್ತಿದ್ದಾಳೆ ಎಂದು ಅರ್ಥವಾಯಿತು. ಹಾಗಾಗಿ ಅವಳು ಆ ಹುಡುಗಿಯ ಜೊತೆ ಇದ್ದ ಸ್ನೇಹವನ್ನು ಬಿಟ್ಟುಬಿಟ್ಟಳು. ಆದರೆ ವನೆಸ ಇಷ್ಟನ್ನು ಮಾಡಿ ಸುಮ್ಮನಾಗಲಿಲ್ಲ. ಸಭೆಯ ಒಳಗೆ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಶ್ರಮಿಸಿದಳು. ನೋಹ ಮತ್ತು ಅವನ ಕುಟುಂಬದವರು ಇಟ್ಟ ಮಾದರಿ ತನಗೆ ಸಹಾಯ ಮಾಡಿತೆಂದು ಆಕೆ ಹೇಳುತ್ತಾಳೆ. “ಅವರ ಸುತ್ತ ಇದ್ದ ಜನರಿಗೆ ಯೆಹೋವನ ಮೇಲೆ ಪ್ರೀತಿ ಇರಲಿಲ್ಲ. ಆದರೆ ಅವರ ಮಧ್ಯೆನೇ ಅವರು ಒಳ್ಳೇ ಸಹವಾಸದಲ್ಲಿ ಆನಂದಿಸಿದರು” ಎಂದು ವನೆಸ ಹೇಳುತ್ತಾಳೆ. ದೀಕ್ಷಾಸ್ನಾನ ಪಡಕೊಂಡ ಮೇಲೆ ಆಕೆ ಪಯನೀಯರ್‌ ಆದಳು. “ಇದರಿಂದ ನನಗೆ ನನ್ನ ಸಭೆಯಲ್ಲಿ ಮಾತ್ರ ಅಲ್ಲ ಬೇರೆ ಸಭೆಗಳಲ್ಲೂ ಒಳ್ಳೇ ಸ್ನೇಹಿತರು ಸಿಕ್ಕಿದ್ದಾರೆ” ಅಂತ ಹೇಳುತ್ತಾಳೆ. ಯೆಹೋವನು ಕೊಟ್ಟಿರುವ ಕೆಲಸದಲ್ಲಿ ತಲ್ಲೀನರಾದರೆ ನಿಮಗೂ ಒಳ್ಳೇ ಸ್ನೇಹಿತರು ಸಿಗುತ್ತಾರೆ.—ಮತ್ತಾ. 24:14.

(ಪ್ಯಾರ 12-15 ನೋಡಿ) *

12. (ಎ) ಆದಾಮ-ಹವ್ವಗೆ ಯಾವ ರೀತಿಯ ಭಯ ಇರಲಿಲ್ಲ? (ಬಿ) ಅದರ ಫಲಿತಾಂಶ ಏನಾಯಿತು?

12 ಯಾವ ರೀತಿಯ ಭಯ ಒಳ್ಳೇದೆಂದು ತಿಳುಕೊಳ್ಳಿ. ಕೆಲವು ರೀತಿಯ ಭಯ ಇರುವುದು ಒಳ್ಳೇದು. ಉದಾಹರಣೆಗೆ, ಯೆಹೋವನ ಮನಸ್ಸಿಗೆ ನೋವಾಗುವ ತರ ನಡಕೊಂಡುಬಿಡುತ್ತೇವೋ ಅನ್ನುವ ಭಯ ಇರುವುದು ಒಳ್ಳೇದು. (ಕೀರ್ತ. 111:10) ಆದಾಮ-ಹವ್ವ ಈ ರೀತಿಯ ಭಯವನ್ನು ಬೆಳೆಸಿಕೊಂಡಿದ್ದರೆ ಯೆಹೋವನ ವಿರುದ್ಧ ಹೋಗುತ್ತಿರಲಿಲ್ಲ. ಯೆಹೋವನ ವಿರುದ್ಧ ದಂಗೆ ಎದ್ದ ಮೇಲೆ ಅವರ ಕಣ್ಣು ತೆರೆಯಿತು. ಅಂದರೆ ತಾವು ಪಾಪಿಗಳಾದ್ವಿ ಅಂತ ಅವರಿಗೆ ಪೂರ್ತಿ ಅರ್ಥ ಆಯಿತು. ಅವರು ತಮ್ಮ ಮಕ್ಕಳಿಗೆ ಪಾಪ ಮತ್ತು ಮರಣವನ್ನು ಮಾತ್ರ ದಾಟಿಸಕ್ಕಾಯಿತು. ಅವರಿಗೆ ತಮ್ಮ ಪರಿಸ್ಥಿತಿ ಏನೆಂದು ಅರ್ಥವಾದದ್ದರಿಂದ ತಾವು ಬೆತ್ತಲೆ ಆಗಿದ್ದೇವೆಂದು ತಿಳಿದು ನಾಚಿಕೆಯಾಯಿತು ಮತ್ತು ಎಲೆಗಳನ್ನು ಹೊಲಿದು ಹಾಕಿಕೊಂಡರು.—ಆದಿ. 3:7, 21.

13-14. (ಎ) ಒಂದನೇ ಪೇತ್ರ 3:21ಕ್ಕನುಸಾರ ನಾವು ಯಾಕೆ ಸಾವನ್ನು ಕಂಡು ತುಂಬ ಹೆದರಬಾರದು? (ಬಿ) ಯೆಹೋವನನ್ನು ಪ್ರೀತಿಸಲು ನಮಗೆ ಯಾವ ಕಾರಣಗಳಿವೆ?

13 ನಮಗೆ ಯೆಹೋವನ ಮೇಲೆ ಭಯ ಇರಬೇಕಾದರೂ ಸಾವಿಗೆ ತುಂಬ ಹೆದರುವ ಅವಶ್ಯಕತೆ ಇಲ್ಲ. ಯಾಕೆಂದರೆ ನಾವು ನಿತ್ಯಜೀವ ಪಡೆಯಲು ಬೇಕಾದ ಏರ್ಪಾಡನ್ನು ಆತನು ಮಾಡಿದ್ದಾನೆ. ನಾವು ಒಂದು ತಪ್ಪು ಮಾಡಿ ನಿಜವಾದ ಪಶ್ಚಾತ್ತಾಪ ತೋರಿಸಿದರೆ ಆತನು ಕ್ಷಮಿಸುತ್ತಾನೆ. ಆತನು ನಮ್ಮನ್ನು ಕ್ಷಮಿಸಬೇಕಾದರೆ ನಾವು ಆತನ ಮಗನ ವಿಮೋಚನಾ ಮೌಲ್ಯದಲ್ಲಿ ನಂಬಿಕೆ ಇಡಬೇಕು. ನಮ್ಮಲ್ಲಿ ನಂಬಿಕೆ ಇದೆ ಎಂದು ತೋರಿಸುವ ಒಂದು ಅತಿ ಪ್ರಾಮುಖ್ಯ ವಿಧ ನಮ್ಮ ಜೀವನವನ್ನು ದೇವರಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯುವುದೇ ಆಗಿದೆ.—1 ಪೇತ್ರ 3:21 ಓದಿ.

14 ಯೆಹೋವನನ್ನು ಪ್ರೀತಿಸಲು ನಮಗೆ ಎಷ್ಟೋ ಕಾರಣಗಳಿವೆ. ನಾವು ದಿನಾ ಆನಂದಿಸುವ ಒಳ್ಳೇ ವಿಷಯಗಳನ್ನು ಕೊಡುವುದಷ್ಟೇ ಅಲ್ಲ ತನ್ನ ಕುರಿತ ಸತ್ಯಗಳನ್ನು ಕಲಿಸುತ್ತಾನೆ ಮತ್ತು ತನ್ನ ಉದ್ದೇಶಗಳ ಬಗ್ಗೆಯೂ ತಿಳಿಸುತ್ತಾನೆ. (ಯೋಹಾ. 8:31, 32) ನಮ್ಮನ್ನು ಮಾರ್ಗದರ್ಶಿಸಲು, ಬಲಪಡಿಸಲು ಆತನು ಕ್ರೈಸ್ತ ಸಭೆಯನ್ನೂ ಕೊಟ್ಟಿದ್ದಾನೆ. ನಮ್ಮ ಚಿಂತಾಭಾರವನ್ನು ಹೊತ್ತುಕೊಳ್ಳಲು ಸಿದ್ಧನಿದ್ದಾನೆ ಮತ್ತು ಹೊಸ ಲೋಕದಲ್ಲಿ ನಿತ್ಯಜೀವ ಪಡಕೊಳ್ಳುವ ಅವಕಾಶವನ್ನು ನಮ್ಮ ಮುಂದೆ ಇಟ್ಟಿದ್ದಾನೆ. (ಕೀರ್ತ. 68:19; ಪ್ರಕ. 21:3, 4) ನಮ್ಮ ಮೇಲಿರುವ ಪ್ರೀತಿಯಿಂದ ದೇವರು ನಮಗೋಸ್ಕರ ಏನೆಲ್ಲಾ ಮಾಡಿದ್ದಾನೆ ಅಂತ ಯೋಚಿಸುವಾಗ ನಾವು ಆತನಿಗೆ ಹತ್ತಿರ ಆಗುತ್ತೇವೆ. ಯೆಹೋವನ ಮೇಲೆ ಪ್ರೀತಿ ಹುಟ್ಟಿದಾಗ ನಮ್ಮಲ್ಲಿ ಸರಿಯಾದ ರೀತಿಯ ಭಯ ಹುಟ್ಟಿಕೊಳ್ಳುತ್ತದೆ. ನಾವು ಇಷ್ಟೊಂದು ಪ್ರೀತಿಸುವ ದೇವರಿಗೆ ಯಾವತ್ತೂ ನೋವಾಗುವ ತರ ನಡಕೊಳ್ಳಬಾರದು ಎಂದು ತೀರ್ಮಾನಿಸುತ್ತೇವೆ.

15. ತಪ್ಪು ಮಾಡಿಬಿಡುತ್ತೇನೆ ಅನ್ನುವ ಭಯವನ್ನು ಮಕೇಲ ಹೇಗೆ ಮೆಟ್ಟಿನಿಂತಳು?

15 ಹಿಂದೆ ತಿಳಿಸಿದ ಮಕೇಲಗೆ ತಾನೆಲ್ಲಿ ತಪ್ಪು ಮಾಡಿಬಿಡುತ್ತೇನೋ ಅನ್ನುವ ಭಯವನ್ನು ಮೆಟ್ಟಿನಿಲ್ಲಲು ಸಾಧ್ಯವಾಯಿತು. ಹೇಗೆ? ಯೆಹೋವನು ದಯಾಭಾವದಿಂದ ಕ್ಷಮಿಸುತ್ತಾನೆ ಎಂದವಳು ಅರ್ಥಮಾಡಿಕೊಂಡಳು. “ನಾವೆಲ್ಲರೂ ಅಪರಿಪೂರ್ಣರು, ಖಂಡಿತ ತಪ್ಪು ಮಾಡುತ್ತೇವೆ ಎಂದು ನಾನು ಅರ್ಥಮಾಡಿಕೊಂಡೆ. ಆದರೂ ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ವಿಮೋಚನಾ ಮೌಲ್ಯದ ಆಧಾರದ ಮೇಲೆ ನಮ್ಮನ್ನು ಕ್ಷಮಿಸುತ್ತಾನೆ ಎಂದು ಸಹ ನಾನು ಅರ್ಥಮಾಡಿಕೊಂಡೆ” ಎಂದು ಮಕೇಲ ಹೇಳುತ್ತಾಳೆ. ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಂಡಾಗ ಆಕೆ ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ಪಡೆದಳು.

(ಪ್ಯಾರ 16 ನೋಡಿ) *

16. ವಿರೋಧದಿಂದ ಬಂದ ಭಯವನ್ನು ಮೆಟ್ಟಿನಿಲ್ಲಲು ಮೈಲ್ಸ್‌ಗೆ ಯಾವುದು ಸಹಾಯ ಮಾಡಿತು?

16 ದೀಕ್ಷಾಸ್ನಾನ ತಗೊಳ್ಳಲು ಇಷ್ಟಪಡುತ್ತೇನೆ ಎಂದು ತನ್ನ ತಾಯಿಗೆ ಹೇಳಲು ಹೆದರುತ್ತಿದ್ದ ಮೈಲ್ಸ್‌ ಸಂಚರಣ ಮೇಲ್ವಿಚಾರಕರ ಸಹಾಯ ಕೇಳಿದ. ಮೈಲ್ಸ್‌ ಹೇಳುವುದು: “ನಮ್ಮ ಸಂಚರಣ ಮೇಲ್ವಿಚಾರಕರ ತಾಯಿ ಸಹ ಸತ್ಯದಲ್ಲಿ ಇರಲಿಲ್ಲ. ನಾನು ಅಮ್ಮನ ಹತ್ತಿರ ಹೇಗೆ ಮಾತಾಡಬೇಕೆಂದು ಅವರು ಹೇಳಿಕೊಟ್ಟರು. ಇದರಿಂದ ದೀಕ್ಷಾಸ್ನಾನ ತಗೊಳ್ಳುವುದು ನನ್ನ ನಿರ್ಧಾರ, ಅಪ್ಪ ನನ್ನ ಮೇಲೆ ಒತ್ತಡ ಹಾಕುತ್ತಿಲ್ಲ ಎಂದು ಅಮ್ಮಂಗೆ ಅರ್ಥವಾಗುತ್ತದೆ ಎಂದರು.” ಮೈಲ್ಸ್‌ ತಾಯಿಗೆ ವಿಷಯ ಕೇಳಿ ಖುಷಿಯಾಗಲಿಲ್ಲ. ಮೈಲ್ಸ್‌ ತನ್ನ ಮನೆಯನ್ನು ಬಿಡಬೇಕಾಗಿ ಬಂದರೂ ತಾನು ತೆಗೆದುಕೊಂಡ ತೀರ್ಮಾನವನ್ನು ಬಿಡಲಿಲ್ಲ. “ಯೆಹೋವನು ನನಗೋಸ್ಕರ ಮಾಡಿರುವ ಒಳ್ಳೇ ವಿಷಯಗಳ ಬಗ್ಗೆ ಯೋಚಿಸಿದಾಗ ನನ್ನ ಮನಸ್ಸು ಬದಲಾಯಿತು. ಯೇಸುವಿನ ವಿಮೋಚನಾ ಮೌಲ್ಯದ ಬಗ್ಗೆ ಯೋಚಿಸಿದಾಗ ಯೆಹೋವನು ನನ್ನನ್ನು ಎಷ್ಟು ಪ್ರೀತಿಸುತ್ತಾನೆ ಎಂದು ಅರ್ಥವಾಯಿತು. ಇದರಿಂದ ನಾನು ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ಪಡೆಯಲು ಮುಂದಾದೆ” ಎನ್ನುತ್ತಾನೆ ಮೈಲ್ಸ್‌.

ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡಿ

ದೇವರು ನಮಗೋಸ್ಕರ ಏನು ಮಾಡಿದ್ದಾನೋ ಅದನ್ನು ಮೆಚ್ಚುತ್ತೇವೆ ಎಂದು ನಾವು ತೋರಿಸಬೇಕು (ಪ್ಯಾರ 17 ನೋಡಿ)

17. ನಮ್ಮ ಮುಂದೆ ಯಾವ ಅವಕಾಶ ಇದೆ?

17 ಏದೆನಿನಲ್ಲಿ ಹವ್ವ ಆ ಮರದ ಹಣ್ಣನ್ನು ತಿಂದಾಗ ಅವಳು ತನ್ನ ಸ್ವರ್ಗೀಯ ತಂದೆಯ ಎದೆಗೆ ಒದ್ದಂತೆ ಇತ್ತು. ಆದಾಮ ಅವಳ ಜೊತೆ ಸೇರಿಕೊಂಡಾಗ, ಯೆಹೋವನು ಅವನಿಗಾಗಿ ಏನೆಲ್ಲಾ ಮಾಡಿದ್ದನೋ ಅದರ ಬಗ್ಗೆ ಅವನಿಗೆ ಸ್ವಲ್ಪನೂ ಗಣ್ಯತೆ ಇರಲಿಲ್ಲ ಎಂದು ಗೊತ್ತಾಯಿತು. ಆದಾಮ-ಹವ್ವ ಮಾಡಿದ್ದು ದೊಡ್ಡ ತಪ್ಪು ಎಂದು ತೋರಿಸುವ ಅವಕಾಶ ನಮ್ಮೆಲ್ಲರ ಮುಂದೆ ಇದೆ. ದೀಕ್ಷಾಸ್ನಾನ ಪಡಕೊಳ್ಳುವ ಮೂಲಕ ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನಿಸುವ ಹಕ್ಕು ಇರುವುದು ಯೆಹೋವನಿಗೆ ಮಾತ್ರ ಎಂದು ನಾವು ತೋರಿಸಿಕೊಡುತ್ತೇವೆ. ನಾವು ನಮ್ಮ ಸ್ವರ್ಗೀಯ ತಂದೆಯನ್ನು ಪ್ರೀತಿಸುತ್ತೇವೆ ಮತ್ತು ಆತನನ್ನು ನಂಬುತ್ತೇವೆ ಎಂದು ರುಜುಪಡಿಸುತ್ತೇವೆ.

18. ಯೆಹೋವನ ಸೇವೆಯನ್ನು ನೀವು ಹೇಗೆ ಚೆನ್ನಾಗಿ ಮಾಡಬಹುದು?

18 ದೀಕ್ಷಾಸ್ನಾನ ಪಡಕೊಂಡ ಮೇಲೆ ನಾವು ನಮಗೆ ಏನಿಷ್ಟಾನೋ ಅದನ್ನಲ್ಲ ಬದಲಿಗೆ ಯೆಹೋವನಿಗೆ ಏನಿಷ್ಟಾನೋ ಅದನ್ನು ಮಾಡಬೇಕು. ಲಕ್ಷಗಟ್ಟಲೆ ಸಹೋದರ-ಸಹೋದರಿಯರು ಈ ರೀತಿ ಜೀವಿಸುತ್ತಿದ್ದಾರೆ. ನೀವು ಸಹ ಅವರ ತರ ಇರಲು ಬಯಸುತ್ತೀರಾ? ಹಾಗಾದರೆ ದೇವರ ವಾಕ್ಯವಾದ ಬೈಬಲಿನ ಬಗ್ಗೆ ಹೆಚ್ಚು ಜ್ಞಾನ ಪಡೆಯಿರಿ, ಸಹೋದರ-ಸಹೋದರಿಯರ ಜೊತೆ ಸಹವಾಸ ಮಾಡಿ ಮತ್ತು ನಿಮ್ಮ ಪ್ರೀತಿಯ ಸ್ವರ್ಗೀಯ ತಂದೆಯ ಬಗ್ಗೆ ಏನು ಕಲಿಯುತ್ತಿದ್ದೀರೋ ಅದರ ಬಗ್ಗೆ ಬೇರೆಯವರ ಜೊತೆ ಉತ್ಸಾಹದಿಂದ ಮಾತಾಡಿ. (ಇಬ್ರಿ. 10:24, 25) ತೀರ್ಮಾನಗಳನ್ನು ಮಾಡಲಿಕ್ಕಿರುವಾಗ ಯೆಹೋವನು ತನ್ನ ವಾಕ್ಯ ಮತ್ತು ಸಂಘಟನೆ ಮೂಲಕ ಯಾವ ಸಲಹೆ ಕೊಡುತ್ತಾನೆ ಎಂದು ನೋಡಿ. (ಯೆಶಾ. 30:21) ಆಗ ನೀವು ಕೈಹಾಕಿದ ಕೆಲಸ ಸಫಲವಾಗುತ್ತದೆ.—ಜ್ಞಾನೋ. 16:3, 20.

19. ನೀವು ಯಾವುದನ್ನು ಅರ್ಥಮಾಡಿಕೊಳ್ಳಬೇಕು? ಯಾಕೆ?

19 ಯೆಹೋವನ ಮಾತನ್ನು ಕೇಳಿ ನಡೆದರೆ ಎಷ್ಟೊಂದು ಪ್ರಯೋಜನ ಸಿಗುತ್ತದೆ ಎಂದು ನೀವು ಅರ್ಥಮಾಡಿಕೊಳ್ಳುವಾಗ ಆತನ ಮೇಲೆ ಪ್ರೀತಿ ಹೆಚ್ಚಾಗುತ್ತದೆ ಮತ್ತು ಆತನ ಮಟ್ಟಗಳು ಸಹ ನಿಮಗೆ ಇಷ್ಟವಾಗುತ್ತದೆ. ಆಗ ಸೈತಾನ ಹಾಕುವ ಗಾಳಕ್ಕೆ ನೀವು ಸಿಕ್ಕಿಹಾಕಿಕೊಳ್ಳುವುದಿಲ್ಲ. ಇವತ್ತಿಂದ ಒಂದು ಸಾವಿರ ವರ್ಷ ಆದ ಮೇಲೆ ನಿಮ್ಮ ಜೀವನ ಹೇಗಿರುತ್ತದೆ ಎಂದು ಯೋಚಿಸಿ. ದೀಕ್ಷಾಸ್ನಾನ ತಗೊಳ್ಳಬೇಕೆಂದು ನೀವು ತೆಗೆದುಕೊಂಡ ತೀರ್ಮಾನವೇ ಅತ್ಯುತ್ತಮ ತೀರ್ಮಾನ ಆಗಿತ್ತೆಂದು ಆಗ ನಿಮಗೆ ಖಂಡಿತ ಅನಿಸುವುದು.

ಗೀತೆ 106 ಯೆಹೋವನ ಸ್ನೇಹವನ್ನು ಗಳಿಸುವುದು

^ ಪ್ಯಾರ. 5 ದೀಕ್ಷಾಸ್ನಾನ ತಗೊಬೇಕಾ ಬೇಡವಾ? ಇದು ನೀವು ಜೀವನದಲ್ಲಿ ಮಾಡುವ ಅತಿ ಪ್ರಾಮುಖ್ಯ ನಿರ್ಧಾರ. ಈ ನಿರ್ಧಾರ ಯಾಕೆ ಅಷ್ಟು ಪ್ರಾಮುಖ್ಯ ಅನ್ನುವ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಇದೆ. ಅಷ್ಟೇ ಅಲ್ಲ, ಕೆಲವರಿಗೆ ದೀಕ್ಷಾಸ್ನಾನ ತಗೊಳ್ಳುವ ಮನಸ್ಸಿದೆ, ಆದರೆ ಅವರನ್ನು ಕೆಲವು ವಿಷಯಗಳು ತಡೆಯುತ್ತಾ ಇವೆ. ಇಂಥವರಿಗೆ ಈ ಲೇಖನದಲ್ಲಿ ಸಹಾಯ ಇದೆ.

^ ಪ್ಯಾರ. 56 ಚಿತ್ರ ವಿವರಣೆ: ಆತ್ಮವಿಶ್ವಾಸದ ಕೊರತೆ: ಒಬ್ಬ ಯುವಕ ಉತ್ತರ ಹೇಳಲು ಹೆದರುತ್ತಿದ್ದಾನೆ.

^ ಪ್ಯಾರ. 58 ಚಿತ್ರ ವಿವರಣೆ: ಸ್ನೇಹಿತರು: ಒಬ್ಬ ಯುವ ಸಾಕ್ಷಿ ತನ್ನ ಸ್ನೇಹಿತೆಯೊಂದಿಗೆ ಇರುವಾಗ ಸಹೋದರಿಯರನ್ನು ನೋಡಿ ಮುಜುಗರಪಡುತ್ತಾಳೆ.

^ ಪ್ಯಾರ. 60 ಚಿತ್ರ ವಿವರಣೆ: ತಪ್ಪು ಮಾಡಿಬಿಡುತ್ತೇನೆ ಅನ್ನುವ ಭಯ: ತನ್ನ ಅಣ್ಣನಿಗೆ ಬಹಿಷ್ಕಾರ ಆಗಿ ಅವನು ಮನೆ ಬಿಟ್ಟು ಹೋಗುವಾಗ, ತಾನು ಕೂಡ ಹಾಗೆ ಮಾಡಿಬಿಡಬಹುದಾ ಎಂದು ಒಬ್ಬ ಹುಡುಗಿ ಚಿಂತಿಸುತ್ತಾಳೆ.

^ ಪ್ಯಾರ. 62 ಚಿತ್ರ ವಿವರಣೆ: ವಿರೋಧ: ಒಬ್ಬ ಹುಡುಗ ಸತ್ಯದಲ್ಲಿ ಇಲ್ಲದ ತನ್ನ ತಾಯಿಯ ಮುಂದೆ ಪ್ರಾರ್ಥನೆ ಮಾಡಲು ಹೆದರುತ್ತಾನೆ.

^ ಪ್ಯಾರ. 65 ಚಿತ್ರ ವಿವರಣೆ: ಆತ್ಮವಿಶ್ವಾಸದ ಕೊರತೆ: ಒಬ್ಬ ಯುವಕ ವೈಯಕ್ತಿಕ ಅಧ್ಯಯನವನ್ನು ಹೆಚ್ಚಿಸುತ್ತಾನೆ.

^ ಪ್ಯಾರ. 67 ಚಿತ್ರ ವಿವರಣೆ: ಸ್ನೇಹಿತರು: ಒಬ್ಬ ಯುವ ಸಾಕ್ಷಿಯಾಗಿರುವುದಕ್ಕೆ ಹೆಮ್ಮೆಪಡಬೇಕೆಂದು ಅರ್ಥಮಾಡಿಕೊಳ್ಳುತ್ತಾಳೆ.

^ ಪ್ಯಾರ. 69 ಚಿತ್ರ ವಿವರಣೆ: ತಪ್ಪು ಮಾಡಿಬಿಡುತ್ತೇನೆ ಅನ್ನುವ ಭಯ: ಒಬ್ಬ ಹುಡುಗಿ ಸತ್ಯವನ್ನು ಸ್ವೀಕರಿಸಿ ದೀಕ್ಷಾಸ್ನಾನ ಪಡಕೊಳ್ಳುತ್ತಾಳೆ.

^ ಪ್ಯಾರ. 71 ಚಿತ್ರ ವಿವರಣೆ: ವಿರೋಧ: ಒಬ್ಬ ಹುಡುಗ ತನ್ನ ನಂಬಿಕೆಗಳ ಬಗ್ಗೆ ತನ್ನ ತಾಯಿಯ ಹತ್ತಿರ ಧೈರ್ಯದಿಂದ ಮಾತಾಡುತ್ತಾನೆ.