ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 18

ಕ್ರೈಸ್ತ ಸಭೆಯಲ್ಲಿ ಪ್ರೀತಿ ಮತ್ತು ನ್ಯಾಯ

ಕ್ರೈಸ್ತ ಸಭೆಯಲ್ಲಿ ಪ್ರೀತಿ ಮತ್ತು ನ್ಯಾಯ

“ಒಬ್ಬರು ಇನ್ನೊಬ್ಬರ ಭಾರಗಳನ್ನು ಹೊತ್ತುಕೊಳ್ಳುತ್ತಾ ಇರಿ; ಹೀಗೆ ಕ್ರಿಸ್ತನ ನಿಯಮವನ್ನು ಪೂರೈಸಿರಿ.”—ಗಲಾ. 6:2.

ಗೀತೆ 112 ಮಹಾ ದೇವರಾದ ಯೆಹೋವನು

ಕಿರುನೋಟ *

1. ನಾವು ಯಾವ ಎರಡು ವಿಷಯಗಳ ಬಗ್ಗೆ ಭರವಸೆ ಇಡಬಹುದು?

ಯೆಹೋವ ದೇವರು ತನ್ನ ಆರಾಧಕರನ್ನು ಪ್ರೀತಿಸುತ್ತಾನೆ. ಹಿಂದೆನೂ ಪ್ರೀತಿಸಿದ್ದನು, ಮುಂದೆ ಕೂಡ ಪ್ರೀತಿಸುತ್ತಾ ಇರುತ್ತಾನೆ. ಆತನು ನ್ಯಾಯವನ್ನು ಕೂಡ ಪ್ರೀತಿಸುವ ದೇವರು. (ಕೀರ್ತ. 33:5) ಹಾಗಾಗಿ ನಾವು ಎರಡು ವಿಷಯಗಳ ಬಗ್ಗೆ ಭರವಸೆ ಇಡಬಹುದು: (1) ಯೆಹೋವನ ಸೇವಕರಾದ ನಮಗೆ ಯಾರಾದರೂ ಅನ್ಯಾಯ ಮಾಡಿದರೆ ಆತನಿಗೆ ನೋವಾಗುತ್ತದೆ. (2) ಯೆಹೋವನು ತನ್ನ ಜನರಿಗೆ ಅನ್ಯಾಯ ಆಗುತ್ತಿರುವುದನ್ನು ನೋಡಿ ಸುಮ್ಮನಿರಲ್ಲ, ಅನ್ಯಾಯ ಮಾಡಿದವರಿಗೆ ತಕ್ಕ ಶಿಕ್ಷೆ ಕೊಡುತ್ತಾನೆ. ಈ ಸರಣಿಯ ಮೊದಲನೇ ಲೇಖನದಲ್ಲಿ * ದೇವರು ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರ ಪ್ರೀತಿಯ ಮೇಲೆ ಆಧರಿತವಾಗಿತ್ತು ಎಂದು ಕಲಿತೆವು. ಅಷ್ಟೇ ಅಲ್ಲ, ಧರ್ಮಶಾಸ್ತ್ರ ನ್ಯಾಯವನ್ನು ಎತ್ತಿಹಿಡಿಯಿತು. ಅದು ಎಲ್ಲರಿಗೆ, ಮುಖ್ಯವಾಗಿ ತಮ್ಮನ್ನು ತಾವೇ ಸಂರಕ್ಷಿಸಿಕೊಳ್ಳಲು ಆಗದಿದ್ದ ಜನರಿಗೆ ನ್ಯಾಯ ಸಿಗುವಂತೆ ಮಾಡಿತ್ತು. (ಧರ್ಮೋ. 10:18) ಹೀಗೆ ತನ್ನ ಆರಾಧಕರ ಮೇಲೆ ಯೆಹೋವನಿಗೆ ತುಂಬ ಕಾಳಜಿ ಇದೆ ಎಂದು ಧರ್ಮಶಾಸ್ತ್ರ ತೋರಿಸಿಕೊಟ್ಟಿತು.

2. ನಾವು ಯಾವ ಪ್ರಶ್ನೆಗಳ ಬಗ್ಗೆ ಚರ್ಚಿಸಲಿದ್ದೇವೆ?

2 ಕ್ರಿ.ಶ. 33​ರಲ್ಲಿ ಕ್ರೈಸ್ತ ಸಭೆ ಸ್ಥಾಪನೆ ಆದಾಗ ಮೋಶೆಯ ಧರ್ಮಶಾಸ್ತ್ರ ಕೊನೆ ಆಯಿತು. ಧರ್ಮಶಾಸ್ತ್ರ ಇಲ್ಲದೆ ಹೋದದ್ದರಿಂದ ಆಗಿನ ಕ್ರೈಸ್ತರಿಗೆ ಪ್ರೀತಿ, ನ್ಯಾಯ ಸಿಗದೆ ಹೋಯಿತಾ? ಇಲ್ಲ, ಸಿಕ್ಕಿತು. ಕ್ರೈಸ್ತರಿಗೆ ಹೊಸ ನಿಯಮ ಅಂದರೆ ಕ್ರಿಸ್ತನ ನಿಯಮ ಸಿಕ್ಕಿತು. ಅದರಿಂದ ಅವರು ಪ್ರಯೋಜನ ಪಡಕೊಂಡರು. ಈ ಲೇಖನದಲ್ಲಿ, ಕ್ರಿಸ್ತನ ನಿಯಮ ಅಂದರೇನು ಎಂದು ಮೊದಲು ಚರ್ಚಿಸಲಿದ್ದೇವೆ. ಆಮೇಲೆ ಮೂರು ಪ್ರಶ್ನೆಗಳಿಗೆ ಉತ್ತರ ನೋಡಲಿದ್ದೇವೆ: ಕ್ರಿಸ್ತನ ನಿಯಮ ಹೇಗೆ ಪ್ರೀತಿಯ ಮೇಲೆ ಆಧರಿತವಾಗಿದೆ? ಅದು ನ್ಯಾಯವನ್ನು ಎತ್ತಿಹಿಡಿಯುತ್ತದೆ ಎಂದು ಹೇಗೆ ಹೇಳಬಹುದು? ಆ ನಿಯಮದ ಪ್ರಕಾರ, ಅಧಿಕಾರ ಇರುವವರು ಬೇರೆಯವರ ಜೊತೆ ಹೇಗೆ ನಡಕೊಳ್ಳಬೇಕು?

“ಕ್ರಿಸ್ತನ ನಿಯಮ” ಅಂದರೇನು?

3. ಗಲಾತ್ಯ 6:2​ರಲ್ಲಿ ಹೇಳಿರುವ ‘ಕ್ರಿಸ್ತನ ನಿಯಮದಲ್ಲಿ’ ಏನೆಲ್ಲ ಸೇರಿದೆ?

3 ಗಲಾತ್ಯ 6:2 ಓದಿ. ಕ್ರೈಸ್ತರು ‘ಕ್ರಿಸ್ತನ ನಿಯಮದ’ ಕೆಳಗಿದ್ದಾರೆ. ಯೇಸು ತನ್ನ ಹಿಂಬಾಲಕರಿಗೆ ಧರ್ಮಶಾಸ್ತ್ರದಲ್ಲಿ ಇದ್ದಂತೆ ನಿಯಮಗಳ ಪಟ್ಟಿಯನ್ನು ಕೊಡಲಿಲ್ಲ. ಅದರ ಬದಲು ಅವರನ್ನು ಮಾರ್ಗದರ್ಶಿಸಲು ಕೆಲವು ನಿರ್ದೇಶನಗಳನ್ನು, ಆಜ್ಞೆಗಳನ್ನು ಮತ್ತು ತತ್ವಗಳನ್ನು ಕೊಟ್ಟನು. ‘ಕ್ರಿಸ್ತನ ನಿಯಮದಲ್ಲಿ’ ಯೇಸು ಕಲಿಸಿದ ಎಲ್ಲಾ ವಿಷಯ ಸೇರಿದೆ. ಮುಂದಿನ ಪ್ಯಾರಗಳು ಈ ನಿಯಮದ ಬಗ್ಗೆ ತಿಳುಕೊಳ್ಳಲು ಸಹಾಯ ಮಾಡುತ್ತವೆ.

4-5. (ಎ) ಜನರಿಗೆ ಯೇಸು ಯಾವ ವಿಧಗಳಲ್ಲಿ ಕಲಿಸಿದನು? (ಬಿ) ಯೇಸು ಯಾವಾಗ ಕಲಿಸಿದನು?

4 ಯೇಸು ಜನರಿಗೆ ಯಾವ ವಿಧಗಳಲ್ಲಿ ಕಲಿಸಿದನು? ಒಂದನೇದಾಗಿ, ತನ್ನ ಮಾತುಗಳ ಮೂಲಕ. ಆತನ ಮಾತುಗಳಿಗೆ ತುಂಬ ಶಕ್ತಿ ಇತ್ತು. ಯಾಕೆಂದರೆ ಆತನು ಮಾತಾಡಿದ್ದು ದೇವರ ಕುರಿತಾದ ಸತ್ಯದ ಬಗ್ಗೆ, ಜೀವನದ ನಿಜವಾದ ಅರ್ಥದ ಬಗ್ಗೆ ಮತ್ತು ಮನುಷ್ಯರ ಕಷ್ಟಗಳಿಗೆಲ್ಲ ದೇವರ ರಾಜ್ಯ ಮಾತ್ರವೇ ಪರಿಹಾರ ಅನ್ನುವುದರ ಬಗ್ಗೆ. (ಲೂಕ 24:19) ಯೇಸು ತನ್ನ ಮಾದರಿಯ ಮೂಲಕ ಕೂಡ ಕಲಿಸಿದನು. ತನ್ನ ಹಿಂಬಾಲಕರು ಯಾವ ರೀತಿ ಜೀವಿಸಬೇಕು ಎಂದು ತನ್ನ ಜೀವನ ರೀತಿಯಿಂದ ತೋರಿಸಿಕೊಟ್ಟನು.—ಯೋಹಾ. 13:15.

5 ಯೇಸು ಜನರಿಗೆ ಯಾವಾಗ ಕಲಿಸಿದನು? ಆತನು ಭೂಮಿಯಲ್ಲಿ ಸೇವೆ ಮಾಡುತ್ತಿದ್ದಾಗ ಕಲಿಸಿದನು. (ಮತ್ತಾ. 4:23) ಅಷ್ಟೇ ಅಲ್ಲ, ಪುನರುತ್ಥಾನ ಆಗಿ ಸ್ವಲ್ಪ ಸಮಯವಾದ ಮೇಲೆ ತನ್ನ ಹಿಂಬಾಲಕರಿಗೆ ಕಲಿಸಿದನು. ಉದಾಹರಣೆಗೆ, ಸುಮಾರು 500ಕ್ಕಿಂತ ಹೆಚ್ಚು ಹಿಂಬಾಲಕರಿಗೆ ಕಾಣಿಸಿಕೊಂಡಾಗ ಜನರನ್ನು “ಶಿಷ್ಯರನ್ನಾಗಿ ಮಾಡಿ” ಅನ್ನುವ ಆಜ್ಞೆ ಕೊಟ್ಟನು. (ಮತ್ತಾ. 28:19, 20; 1 ಕೊರಿಂ. 15:6) ಆತನು ಸ್ವರ್ಗಕ್ಕೆ ಹೋದ ಮೇಲೆ ಸಭೆಯ ಶಿರಸ್ಸಾಗಿ ತನ್ನ ಶಿಷ್ಯರಿಗೆ ನಿರ್ದೇಶನಗಳನ್ನು ಕೊಡುವುದನ್ನು ಮುಂದುವರಿಸಿದನು. ಉದಾಹರಣೆಗೆ, ಸುಮಾರು ಕ್ರಿ. ಶ. 96​ರಲ್ಲಿ ಅಪೊಸ್ತಲ ಯೋಹಾನನ ಮೂಲಕ ಅಭಿಷಿಕ್ತ ಕ್ರೈಸ್ತರಿಗೆ ಪ್ರೋತ್ಸಾಹ ಮತ್ತು ಬುದ್ಧಿವಾದ ಕೊಟ್ಟನು.—ಕೊಲೊ. 1:18; ಪ್ರಕ. 1:1.

6-7. (ಎ) ಯೇಸು ಕಲಿಸಿದ ವಿಷಯಗಳು ಬೈಬಲಲ್ಲಿ ಎಲ್ಲಿವೆ? (ಬಿ) ನಾವು ಕ್ರಿಸ್ತನ ನಿಯಮವನ್ನು ಪಾಲಿಸಬೇಕೆಂದರೆ ಏನು ಮಾಡಬೇಕು?

6 ಯೇಸು ಕಲಿಸಿದ ವಿಷಯಗಳು ಬೈಬಲಲ್ಲಿ ಎಲ್ಲಿವೆ? ಯೇಸು ಭೂಮಿಯಲ್ಲಿದ್ದಾಗ ಹೇಳಿದ ಮತ್ತು ಮಾಡಿದ ಅನೇಕ ವಿಷಯಗಳು ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ ಇವೆ. ಉಳಿದಿರುವ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳು ನಮಗೆ ಯೇಸು ಯೋಚಿಸುವ ರೀತಿಯನ್ನು ಅರ್ಥಮಾಡಿಕೊಳ್ಳಲು ಇನ್ನೂ ಹೆಚ್ಚು ಸಹಾಯ ಮಾಡುತ್ತವೆ. ಯಾಕೆಂದರೆ ಅವುಗಳನ್ನು ಬರೆದವರು ಪವಿತ್ರಾತ್ಮದಿಂದ ಪ್ರೇರಿತರಾಗಿ ಬರೆದರು ಮತ್ತು ಅವರು “ಕ್ರಿಸ್ತನ ಮನಸ್ಸನ್ನು” ಹೊಂದಿದ್ದರು.—1 ಕೊರಿಂ. 2:16.

7 ಪಾಠ: ಯೇಸು ಕಲಿಸಿದ ವಿಷಯಗಳು ನಮಗೆ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಸಹಾಯ ಮಾಡುತ್ತವೆ. ಅಂದರೆ ನಾವು ಮನೆಯಲ್ಲಿ, ಕೆಲಸದ ಜಾಗದಲ್ಲಿ, ಶಾಲೆಯಲ್ಲಿ ಮತ್ತು ಸಭೆಯಲ್ಲಿ ಏನು ಮಾಡುತ್ತೇವೋ ಅದೆಲ್ಲದರ ಮೇಲೆ ಕ್ರಿಸ್ತನ ನಿಯಮ ಪ್ರಭಾವ ಬೀರುತ್ತದೆ. ಕ್ರಿಸ್ತನ ನಿಯಮದ ಬಗ್ಗೆ ತಿಳುಕೊಳ್ಳಬೇಕೆಂದರೆ ನಾವು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳನ್ನು ಓದಿ ಧ್ಯಾನಿಸಬೇಕು. ಆ ನಿಯಮವನ್ನು ಪಾಲಿಸಬೇಕೆಂದರೆ ಆ ಶಾಸ್ತ್ರಗಳಲ್ಲಿ ಇರುವ ನಿರ್ದೇಶನಗಳನ್ನು, ಆಜ್ಞೆಗಳನ್ನು ಮತ್ತು ತತ್ವಗಳನ್ನು ನಮ್ಮ ಜೀವನದಲ್ಲಿ ಪಾಲಿಸಬೇಕು. ಅದನ್ನು ಪಾಲಿಸಿದರೆ ನಮ್ಮ ಪ್ರೀತಿಯ ದೇವರಾದ ಯೆಹೋವನ ಮಾತನ್ನು ಕೇಳಿದಂತೆ ಇರುತ್ತದೆ. ಯಾಕೆಂದರೆ ಆತನಿಂದ ಕಲಿತ ವಿಷಯಗಳನ್ನೇ ಯೇಸು ಜನರಿಗೆ ಕಲಿಸಿದನು.—ಯೋಹಾ. 8:28.

ಕ್ರಿಸ್ತನ ನಿಯಮ ಪ್ರೀತಿಯ ಮೇಲೆ ಆಧರಿತವಾಗಿದೆ

8. ಕ್ರಿಸ್ತನ ನಿಯಮ ಯಾವುದರ ಮೇಲೆ ಆಧರಿತವಾಗಿದೆ?

8 ದೃಢವಾದ ತಳಪಾಯ ಹಾಕಿದ ಮನೆಯಲ್ಲಿ ವಾಸಿಸುವ ಜನರು ಮನೆ ಬಿದ್ದುಹೋಗುತ್ತೆ ಅನ್ನುವ ಭಯ ಇಲ್ಲದೆ ಜೀವಿಸುತ್ತಾರೆ. ಅದೇ ರೀತಿ ಒಳ್ಳೇ ತಳಪಾಯದ ಮೇಲೆ ಆಧರಿತವಾಗಿರುವ ನಿಯಮಗಳನ್ನು ಪಾಲಿಸುವ ಜನರಿಗೆ ಸುರಕ್ಷಿತ ಭಾವನೆ ಇರುತ್ತದೆ. ಕ್ರಿಸ್ತನ ನಿಯಮವನ್ನು ಪ್ರೀತಿ ಎಂಬ ಅತ್ಯುತ್ತಮ ತಳಪಾಯದ ಮೇಲೆ ರಚಿಸಲಾಗಿದೆ. ಹೇಗೆ ಹೇಳಬಹುದು? ಇದಕ್ಕಿರುವ ಕಾರಣಗಳನ್ನು ನೋಡೋಣ.

ನಾವು ಬೇರೆಯವರ ಜೊತೆ ಪ್ರೀತಿಯಿಂದ ನಡಕೊಂಡರೆ “ಕ್ರಿಸ್ತನ ನಿಯಮವನ್ನು” ಪಾಲಿಸಿದಂತೆ ಆಗುತ್ತದೆ (ಪ್ಯಾರ 9-14 ನೋಡಿ) *

9-10. (ಎ) ಯೇಸುವಿಗೆ ಜನರ ಮೇಲೆ ಪ್ರೀತಿ ಇತ್ತು ಅನ್ನುವುದಕ್ಕೆ ಉದಾಹರಣೆ ಕೊಡಿ. (ಬಿ) ನಾವು ಹೇಗೆ ಆತನನ್ನು ಅನುಕರಿಸಬಹುದು?

9 ಒಂದನೇ ಕಾರಣ, ಯೇಸು ಏನೇ ಮಾಡಿದರೂ ಅದನ್ನು ಪ್ರೀತಿಯಿಂದ ಪ್ರಚೋದಿತನಾಗಿ ಮಾಡಿದನು. ಪ್ರೀತಿ ಅನ್ನುವ ಗಿಡದಲ್ಲಿ ಅರಳುವ ಒಂದು ಹೂವು ಕನಿಕರ. ಯೇಸುವಿಗೆ ಜನರ ಮೇಲೆ ಕನಿಕರ ಇತ್ತು. ಆದ್ದರಿಂದಲೇ ಅವರಿಗೆ ಕಲಿಸಿದನು, ರೋಗಿಗಳನ್ನು ವಾಸಿಮಾಡಿದನು, ಹಸಿದವರಿಗೆ ಊಟ ಕೊಟ್ಟನು ಮತ್ತು ಸತ್ತವರಿಗೆ ಜೀವ ಕೊಟ್ಟನು. (ಮತ್ತಾ. 14:14; 15:32-38; ಮಾರ್ಕ 6:34; ಲೂಕ 7:11-15) ಇದಕ್ಕೆಲ್ಲ ಆತನು ತುಂಬ ಸಮಯ, ಶಕ್ತಿ ವ್ಯಯಿಸಬೇಕಾಗಿತ್ತು. ಹಾಗಿದ್ದರೂ ಆತನಿಗೆ ತನ್ನ ಅಗತ್ಯಕ್ಕಿಂತ ಬೇರೆಯವರ ಅಗತ್ಯಗಳೇ ಮುಖ್ಯವಾಗಿ ಇದ್ದದರಿಂದ ಅದನ್ನೆಲ್ಲ ಮಾಡಿದನು. ಇದೆಲ್ಲಕ್ಕಿಂತ ಮುಖ್ಯವಾಗಿ ತನ್ನ ಜೀವವನ್ನೇ ತ್ಯಾಗಮಾಡಿ ಜನರ ಮೇಲೆ ತನಗೆಷ್ಟು ಪ್ರೀತಿ ಇದೆ ಎಂದು ತೋರಿಸಿಕೊಟ್ಟನು.—ಯೋಹಾ. 15:13.

10 ಪಾಠ: ಯೇಸುವಿನ ಹಾಗೆ ನಾವು ಕೂಡ ನಮ್ಮ ಅಗತ್ಯಕ್ಕಿಂತ ಬೇರೆಯವರ ಅಗತ್ಯವನ್ನು ಪೂರೈಸುವುದಕ್ಕೆ ಪ್ರಾಮುಖ್ಯತೆ ಕೊಡಬೇಕು. ನಮ್ಮ ಸೇವಾಕ್ಷೇತ್ರದ ಜನರ ಮೇಲೆ ಕನಿಕರ ಬೆಳೆಸಿಕೊಳ್ಳುವ ಮೂಲಕ ಆತನನ್ನು ಅನುಕರಿಸಬಹುದು. ಜನರ ಮೇಲೆ ಕನಿಕರಪಟ್ಟು ಸುವಾರ್ತೆ ಸಾರಿದರೆ ಮತ್ತು ಅವರಿಗೆ ಸತ್ಯ ಕಲಿಸಿದರೆ ನಾವು ಕ್ರಿಸ್ತನ ನಿಯಮವನ್ನು ಪಾಲಿಸುತ್ತೇವೆ ಎಂದರ್ಥ.

11-12. (ಎ) ಯೆಹೋವನು ನಮ್ಮ ಬಗ್ಗೆ ತುಂಬ ಕಾಳಜಿ ವಹಿಸುತ್ತಾನೆ ಎಂದು ಹೇಗೆ ಗೊತ್ತಾಗುತ್ತದೆ? (ಬಿ) ನಾವು ಯೆಹೋವನಂತೆ ಬೇರೆಯವರಿಗೆ ಹೇಗೆ ಪ್ರೀತಿ ತೋರಿಸಬಹುದು?

11 ಎರಡನೇ ಕಾರಣ, ತನ್ನ ತಂದೆಗೆ ಜನರ ಮೇಲೆ ಎಷ್ಟು ಪ್ರೀತಿ ಇದೆ ಎಂದು ಯೇಸು ತೋರಿಸಿಕೊಟ್ಟನು. ಯೆಹೋವನು ತನ್ನ ಆರಾಧಕರ ಬಗ್ಗೆ ತುಂಬ ಕಾಳಜಿ ವಹಿಸುತ್ತಾನೆ ಎಂದು ಯೇಸು ಭೂಮಿಯಲ್ಲಿದ್ದಾಗ ಕಲಿಸಿದನು. ಉದಾಹರಣೆಗೆ, ನಮ್ಮಲ್ಲಿ ಪ್ರತಿಯೊಬ್ಬರೂ ತಂದೆಯಾದ ಯೆಹೋವನಿಗೆ ತುಂಬ ಅಮೂಲ್ಯ ಎಂದು ಕಲಿಸಿದನು. (ಮತ್ತಾ. 10:31) ಕಳೆದುಹೋದ ಕುರಿಯಂತೆ ಇರುವ ವ್ಯಕ್ತಿಗಳು ಪಶ್ಚಾತ್ತಾಪಪಟ್ಟು ಸಭೆಗೆ ವಾಪಸ್ಸು ಬರುವಾಗ ಕೈದೆರೆದು ಸ್ವಾಗತಿಸಲು ಯೆಹೋವನು ಕಾಯುತ್ತಾ ಇರುತ್ತಾನೆ ಎಂದೂ ಹೇಳಿಕೊಟ್ಟನು. (ಲೂಕ 15:7, 10) ಆತನು ತನ್ನ ಮಗನನ್ನು ನಮಗೋಸ್ಕರ ವಿಮೋಚನಾ ಮೌಲ್ಯವಾಗಿ ಕೊಟ್ಟು ತನ್ನ ಪ್ರೀತಿಯನ್ನು ತೋರಿಸಿದನು.—ಯೋಹಾ. 3:16.

12 ಪಾಠ: ಯೆಹೋವನಂತೆ ನಾವು ಬೇರೆಯವರಿಗೆ ಪ್ರೀತಿ ತೋರಿಸಬೇಕು. (ಎಫೆ. 5:1, 2) ನಮ್ಮ ಸಹೋದರ-ಸಹೋದರಿಯರಲ್ಲಿ ಪ್ರತಿಯೊಬ್ಬರನ್ನೂ ಅಮೂಲ್ಯರಾಗಿ ನೋಡಬೇಕು. “ತಪ್ಪಿಹೋದ ಕುರಿಯಂತೆ” ಇದ್ದವರು ಯೆಹೋವನ ಹತ್ತಿರ ವಾಪಸ್ಸು ಬರುವಾಗ ನಾವು ಅವರನ್ನು ಸಂತೋಷದಿಂದ ಸೇರಿಸಿಕೊಳ್ಳಬೇಕು. (ಕೀರ್ತ. 119:176) ನಮ್ಮ ಸಹೋದರ-ಸಹೋದರಿಯರಿಗೆ ಸಹಾಯ ಬೇಕಾದಾಗ ನಮ್ಮ ಶಕ್ತಿ-ಸಾಮರ್ಥ್ಯವನ್ನು ಧಾರೆಯೆರೆದು ಸಹಾಯ ಮಾಡುವ ಮೂಲಕ ನಮ್ಮ ಪ್ರೀತಿಯನ್ನು ತೋರಿಸಬೇಕು. (1 ಯೋಹಾ. 3:17) ಹೀಗೆ ನಾವು ಬೇರೆಯವರ ಜೊತೆ ಪ್ರೀತಿಯಿಂದ ನಡಕೊಳ್ಳುವಾಗ ಕ್ರಿಸ್ತನ ನಿಯಮವನ್ನು ಪಾಲಿಸುತ್ತೇವೆ.

13-14. (ಎ) ಯೋಹಾನ 13:34, 35​ರಲ್ಲಿ ಯೇಸು ತನ್ನ ಹಿಂಬಾಲಕರಿಗೆ ಯಾವ ಆಜ್ಞೆ ಕೊಟ್ಟಿದ್ದಾನೆ? (ಬಿ) ಈ ಆಜ್ಞೆ ಯಾಕೆ ಹೊಸ ಆಜ್ಞೆಯಾಗಿದೆ? (ಸಿ) ಈ ಹೊಸ ಆಜ್ಞೆಯನ್ನು ಪಾಲಿಸಲು ನಾವು ಏನು ಮಾಡಬೇಕು?

13 ಮೂರನೇ ಕಾರಣ, ಸ್ವತ್ಯಾಗದ ಪ್ರೀತಿಯನ್ನು ತೋರಿಸಬೇಕು ಎಂದು ಯೇಸು ತನ್ನ ಹಿಂಬಾಲಕರಿಗೆ ಆಜ್ಞೆ ಕೊಟ್ಟನು. (ಯೋಹಾನ 13:34, 35 ಓದಿ.) ಯಾವ ರೀತಿಯ ಪ್ರೀತಿ ತೋರಿಸಬೇಕು ಅನ್ನುವ ವಿಷಯದಲ್ಲಿ ಯೇಸು ಕೊಟ್ಟ ಆಜ್ಞೆಗೂ ಧರ್ಮಶಾಸ್ತ್ರದಲ್ಲಿದ್ದ ನಿಯಮಕ್ಕೂ ವ್ಯತ್ಯಾಸವಿತ್ತು. ಯೇಸು ನಮ್ಮನ್ನು ಹೇಗೆ ಪ್ರೀತಿಸಿದನೋ ಹಾಗೆಯೇ ನಾವು ನಮ್ಮ ಸಹೋದರ-ಸಹೋದರಿಯರನ್ನು ಪ್ರೀತಿಸಬೇಕು ಎಂದು ಆತನು ಹೇಳಿದನು. ಹಾಗಾಗಿ ಇದು ಒಂದು ಹೊಸ ಆಜ್ಞೆಯಾಗಿತ್ತು. ಇದಕ್ಕೆ ಸ್ವತ್ಯಾಗದ ಪ್ರೀತಿ ಅಗತ್ಯ. * ನಮಗಿಂತ ಹೆಚ್ಚಾಗಿ ನಮ್ಮ ಸಹೋದರ-ಸಹೋದರಿಯರನ್ನು ನಾವು ಪ್ರೀತಿಸಬೇಕು. ಯೇಸು ಮಾಡಿದಂತೆ ನಾವು ಪ್ರಾಣ ಕೊಡುವುದಕ್ಕೂ ಹಿಂಜರಿಯಬಾರದು.

14 ಪಾಠ: ಈ ಹೊಸ ಆಜ್ಞೆಯನ್ನು ಪಾಲಿಸಲು ನಾವು ಏನು ಮಾಡಬೇಕು? ಚುಟುಕಾಗಿ ಹೇಳುವುದಾದರೆ, ನಮ್ಮ ಸಹೋದರ-ಸಹೋದರಿಯರಿಗಾಗಿ ತ್ಯಾಗ ಮಾಡಬೇಕು. ಅವರಿಗೋಸ್ಕರ ನಾವು ಪ್ರಾಣವನ್ನೇ ಕೊಡಲು ಸಿದ್ಧರಿದ್ದೇವೆ ನಿಜ. ಆದರೆ ಚಿಕ್ಕಪುಟ್ಟ ತ್ಯಾಗಗಳನ್ನು ಮಾಡಲು ಕೂಡ ಸಿದ್ಧರಿರಬೇಕು. ಉದಾಹರಣೆಗೆ, ವಯಸ್ಸಾದ ಒಬ್ಬ ಸಹೋದರನನ್ನು ನಾವು ಪ್ರತಿವಾರ ಕೂಟಕ್ಕೆ ಕರಕೊಂಡು ಬರಬಹುದು, ನಮ್ಮ ಆಪ್ತರೊಬ್ಬರನ್ನು ಸಂತೋಷಪಡಿಸಲಿಕ್ಕಾಗಿ ನಮ್ಮ ಸಂತೋಷವನ್ನು ಬಿಟ್ಟುಕೊಡಬಹುದು ಅಥವಾ ಕೆಲಸಕ್ಕೆ ರಜೆ ಹಾಕಿ ವಿಪತ್ತು ಪರಿಹಾರಕಾರ್ಯದಲ್ಲಿ ಭಾಗವಹಿಸಬಹುದು. ಇದರ ಮೂಲಕ ನಾವು ಕ್ರಿಸ್ತನ ನಿಯಮವನ್ನು ಪಾಲಿಸುತ್ತೇವೆ ಎಂದು ತೋರಿಸಿಕೊಡುತ್ತೇವೆ. ಇದರಿಂದ ಸಭೆಯಲ್ಲಿ ಇರುವ ಎಲ್ಲರಿಗೂ ‘ನಮ್ಮನ್ನು ಪ್ರೀತಿಸುವ ಜನರಿದ್ದಾರೆ, ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ’ ಅನ್ನುವ ಭಾವನೆ ಇರುತ್ತದೆ.

ಕ್ರಿಸ್ತನ ನಿಯಮ ನ್ಯಾಯವನ್ನು ಎತ್ತಿಹಿಡಿಯುತ್ತದೆ

15-17. (ಎ) ನ್ಯಾಯ ಅಂದರೆ ತನ್ನ ದೃಷ್ಟಿಯಲ್ಲಿ ಏನು ಎಂದು ಯೇಸು ಹೇಗೆ ಕ್ರಿಯೆಗಳಲ್ಲಿ ತೋರಿಸಿಕೊಟ್ಟನು? (ಬಿ) ನಾವು ಹೇಗೆ ಯೇಸುವಿನಂತೆ ಇರಬಹುದು?

15 ಬೈಬಲಲ್ಲಿ ಹೆಚ್ಚಾಗಿ “ನ್ಯಾಯ” ಅನ್ನುವ ಪದವನ್ನು ದೇವರ ದೃಷ್ಟಿಯಲ್ಲಿ ಯಾವುದು ಸರಿ ಆಗಿದೆಯೋ ಅದನ್ನು ಮಾಡುವುದಕ್ಕೆ ಮತ್ತು ಅದನ್ನು ಭೇದಭಾವ ಇಲ್ಲದೆ ಮಾಡುವುದಕ್ಕೆ ಬಳಸಲಾಗಿದೆ. ಕ್ರಿಸ್ತನ ನಿಯಮ ನ್ಯಾಯವನ್ನು ಎತ್ತಿಹಿಡಿಯುತ್ತದೆ ಎಂದು ಹೇಗೆ ಹೇಳಬಹುದು? ಇದಕ್ಕಿರುವ ಕಾರಣಗಳನ್ನು ನೋಡೋಣ.

ಮಹಿಳೆಯರಿಗೆ, ಅದರಲ್ಲೂ ನಡತೆಗೆಟ್ಟವರು ಎಂದು ಹೆಸರು ಪಡೆದ ಹೆಂಗಸರಿಗೂ ಯೇಸು ಗೌರವ, ದಯೆ ತೋರಿಸಿದನು (ಪ್ಯಾರ 16 ನೋಡಿ) *

16 ಒಂದನೇ ಕಾರಣ, ನ್ಯಾಯ ಅಂದರೆ ತನ್ನ ದೃಷ್ಟಿಯಲ್ಲಿ ಏನು ಎಂದು ಯೇಸು ತನ್ನ ಕ್ರಿಯೆಗಳಲ್ಲಿ ತೋರಿಸಿಕೊಟ್ಟನು. ಯೇಸುವಿನ ಕಾಲದಲ್ಲಿ ಯೆಹೂದಿ ಧಾರ್ಮಿಕ ಮುಖಂಡರು ಯೆಹೂದ್ಯರಲ್ಲದ ಜನರನ್ನು ದ್ವೇಷಿಸುತ್ತಿದ್ದರು, ಯೆಹೂದಿ ಧರ್ಮದ ಬಗ್ಗೆ ಹೆಚ್ಚು ಶಿಕ್ಷಣ ಪಡೆಯದ ಸಾಮಾನ್ಯ ಜನರನ್ನು ತುಂಬ ಕೀಳಾಗಿ ನೋಡುತ್ತಿದ್ದರು ಮತ್ತು ಹೆಂಗಸರಿಗೆ ಗೌರವ ಕೊಡುತ್ತಿರಲಿಲ್ಲ. ಆದರೆ ಯೇಸು ಹಾಗಿರಲಿಲ್ಲ. ಆತನು ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದನು. ಭೇದಭಾವ ಮಾಡುತ್ತಿರಲಿಲ್ಲ. ಯೆಹೂದ್ಯರಲ್ಲದ ಜನರು ತನ್ನಲ್ಲಿ ನಂಬಿಕೆ ಇಟ್ಟು ತನ್ನ ಹಿಂಬಾಲಕರಾಗಲು ಬಯಸಿದರೆ ಅವರನ್ನು ಸ್ವೀಕರಿಸುತ್ತಿದ್ದನು. (ಮತ್ತಾ. 8:5-10, 13) ಶ್ರೀಮಂತ-ಬಡವ ಅನ್ನುವ ತಾರತಮ್ಯ ಇಲ್ಲದೆ ಎಲ್ಲರಿಗೂ ಸಾರಿದನು. (ಮತ್ತಾ. 11:5; ಲೂಕ 19:2, 9) ಮಹಿಳೆಯರ ಜೊತೆ ಯಾವತ್ತೂ ಒರಟಾಗಿ ನಡಕೊಳ್ಳಲಿಲ್ಲ, ಒರಟಾಗಿ ಮಾತಾಡಲಿಲ್ಲ. ಗೌರವ, ದಯೆ ತೋರಿಸಿದನು. ನಡತೆಗೆಟ್ಟವರು ಎಂದು ಸಮಾಜದಲ್ಲಿ ಹೆಸರು ಪಡಕೊಂಡ ಹೆಂಗಸರ ಜೊತೆ ಕೂಡ ಗೌರವದಿಂದ ನಡಕೊಂಡನು.—ಲೂಕ 7:37-39, 44-50.

17 ಪಾಠ: ನಾವು ಸಹ ಯೇಸುವಿನಂತೆ ಯಾರಿಗೂ ಭೇದಭಾವ ಮಾಡಲ್ಲ. ಒಬ್ಬ ವ್ಯಕ್ತಿ ಶ್ರೀಮಂತನಾ ಬಡವನಾ ಎಂದು ನೋಡದೆ ಸಾರುತ್ತೇವೆ. ಯಾವ ಧರ್ಮಕ್ಕೆ ಸೇರಿದವನಾಗಿದ್ದರೂ ಸುವಾರ್ತೆ ತಿಳಿಸುತ್ತೇವೆ. ನಮ್ಮಲ್ಲಿರುವ ಸಹೋದರರು ಯೇಸು ಕ್ರಿಸ್ತನಂತೆ ಮಹಿಳೆಯರನ್ನು ಗೌರವದಿಂದ ಕಾಣುತ್ತಾರೆ. ಹೀಗೆ ಮಾಡಿದರೆ ನಾವು ಕ್ರಿಸ್ತನ ನಿಯಮವನ್ನು ಪಾಲಿಸುತ್ತೇವೆ ಎಂದು ತೋರಿಸಿಕೊಡುತ್ತೇವೆ.

18-19. (ಎ) ಯೇಸು ನ್ಯಾಯದ ಬಗ್ಗೆ ಏನು ಕಲಿಸಿದನು? (ಬಿ) ಯೇಸು ಕಲಿಸಿದ ವಿಷಯದಿಂದ ನಾವು ಯಾವ ಪಾಠಗಳನ್ನು ಕಲಿಯುತ್ತೇವೆ?

18 ಎರಡನೇ ಕಾರಣ, ನ್ಯಾಯದ ಬಗ್ಗೆ ಯೇಸು ಏನು ಕಲಿಸಿದನು ಎಂದು ನೋಡಿ. ಬೇರೆಯವರ ಜೊತೆ ನ್ಯಾಯವಾಗಿ ನಡಕೊಳ್ಳಲು ಸಹಾಯ ಮಾಡುವಂಥ ತತ್ವಗಳನ್ನು ಯೇಸು ತನ್ನ ಶಿಷ್ಯರಿಗೆ ಕಲಿಸಿದನು. ಉದಾಹರಣೆಗೆ, ಸುವರ್ಣ ನಿಯಮದ ಬಗ್ಗೆ ಯೋಚಿಸಿ. (ಮತ್ತಾ. 7:12) ಬೇರೆಯವರು ನಮ್ಮ ಜೊತೆ ನ್ಯಾಯವಾಗಿ ನಡಕೊಳ್ಳಬೇಕು ಅಂತ ನಮ್ಮಲ್ಲಿ ಯಾರು ತಾನೇ ಇಷ್ಟಪಡಲ್ಲ. ಎಲ್ಲರೂ ಇಷ್ಟಪಡುತ್ತೇವೆ. ಹಾಗಾಗಿ ನಾವು ಬೇರೆಯವರ ಜೊತೆ ನ್ಯಾಯವಾಗಿ ನಡಕೊಳ್ಳಬೇಕು. ಆಗ ಬೇರೆಯವರು ಕೂಡ ನಮ್ಮ ಜೊತೆ ಹಾಗೇ ನಡಕೊಳ್ಳುತ್ತಾರೆ. ಆದರೆ ಯಾರಾದರೂ ನಮ್ಮನ್ನು ಅನ್ಯಾಯವಾಗಿ ನಡೆಸಿಕೊಂಡರೆ ಏನು ಮಾಡಬೇಕು? ನ್ಯಾಯ ಬೇಕೆಂದು ‘ಹಗಲಿರುಳು ಮೊರೆಯಿಡುವವರಿಗೆ’ ಯೆಹೋವನು ಖಂಡಿತ ‘ನ್ಯಾಯ ದೊರಕಿಸಿಕೊಡುತ್ತಾನೆ’ ಎಂದು ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. (ಲೂಕ 18:6, 7) ಯೇಸುವಿನ ಮಾತುಗಳು ನಮ್ಮಲ್ಲಿ ಈ ಭರವಸೆ ತುಂಬುತ್ತವೆ: ಈ ಕಡೇ ದಿವಸಗಳಲ್ಲಿ ನಾವು ಅನುಭವಿಸುವ ಕಷ್ಟಗಳನ್ನು ನ್ಯಾಯವಂತನಾದ ನಮ್ಮ ದೇವರು ನೋಡುತ್ತಿದ್ದಾನೆ, ತಕ್ಕ ಸಮಯದಲ್ಲಿ ನಮಗೆ ನ್ಯಾಯ ಒದಗಿಸಿ ಕೊಡುತ್ತಾನೆ.—2 ಥೆಸ. 1:6.

19 ಪಾಠ: ಯೇಸು ಕಲಿಸಿದ ತತ್ವಗಳನ್ನು ನಾವು ಪಾಲಿಸಿದರೆ ಬೇರೆಯವರ ಜೊತೆ ನ್ಯಾಯವಾಗಿ ನಡಕೊಳ್ಳುತ್ತೇವೆ. ಸೈತಾನನ ಈ ಲೋಕದಲ್ಲಿ ನಮಗೆ ಏನಾದರೂ ಅನ್ಯಾಯ ಆಗಿ ನಾವು ಕಷ್ಟವನ್ನು ಅನುಭವಿಸುತ್ತಿದ್ದರೆ ಯೆಹೋವನು ಸರಿಯಾದ ಸಮಯದಲ್ಲಿ ನಮಗೆ ನ್ಯಾಯವನ್ನು ಕೊಟ್ಟೇ ಕೊಡುತ್ತಾನೆ ಅನ್ನುವ ವಿಷಯದಿಂದ ಸಾಂತ್ವನ ಪಡಕೊಳ್ಳಬೇಕು.

ಅಧಿಕಾರ ಇರುವವರು ಬೇರೆಯವರ ಜೊತೆ ಹೇಗೆ ನಡಕೊಳ್ಳಬೇಕು?

20-21. (ಎ) ಅಧಿಕಾರದಲ್ಲಿ ಇರುವವರು ಬೇರೆಯವರ ಜೊತೆ ಹೇಗೆ ನಡಕೊಳ್ಳಬೇಕು? (ಬಿ) ಗಂಡ ಸ್ವತ್ಯಾಗದ ಪ್ರೀತಿಯನ್ನು ಹೇಗೆ ತೋರಿಸಬಹುದು? (ಸಿ) ತಂದೆ ತನ್ನ ಮಕ್ಕಳ ಜೊತೆ ಹೇಗೆ ನಡಕೊಳ್ಳಬೇಕು?

20 ಕ್ರಿಸ್ತನ ನಿಯಮದ ಪ್ರಕಾರ, ಅಧಿಕಾರ ಇರುವವರು ಬೇರೆಯವರ ಜೊತೆ ಹೇಗೆ ನಡಕೊಳ್ಳಬೇಕು? ಕ್ರಿಸ್ತನ ನಿಯಮ ಪ್ರೀತಿಯ ಮೇಲೆ ಆಧರಿತವಾಗಿ ಇರುವುದರಿಂದ ಅಧಿಕಾರದಲ್ಲಿ ಇರುವವರು ತಮ್ಮ ಕೆಳಗೆ ಇರುವವರ ಜೊತೆ ಗೌರವದಿಂದ ಮತ್ತು ಪ್ರೀತಿಯಿಂದ ನಡಕೊಳ್ಳಬೇಕು. ತಾವು ಮಾಡುವ ಎಲ್ಲ ವಿಷಯದಲ್ಲೂ ಪ್ರೀತಿ ತೋರಿಸಬೇಕು ಎಂದು ಯೇಸು ಬಯಸುತ್ತಾನೆ ಅನ್ನುವುದನ್ನು ಅವರು ನೆನಪಲ್ಲಿಡಬೇಕು.

21 ಕುಟುಂಬದಲ್ಲಿ. ಕ್ರಿಸ್ತನು ಸಭೆಯನ್ನು ಹೇಗೆ ಪ್ರೀತಿಸುತ್ತಾನೋ ಹಾಗೇ ಗಂಡ ತನ್ನ ಹೆಂಡತಿಯನ್ನು ಪ್ರೀತಿಸಬೇಕು. (ಎಫೆ. 5:25, 28, 29) ಗಂಡನು ಯೇಸುವಿನಂತೆ ಸ್ವತ್ಯಾಗದ ಪ್ರೀತಿ ತೋರಿಸಬೇಕಾದರೆ ತನಗಿಂತ ಹೆಂಡತಿಯ ಅಗತ್ಯಗಳಿಗೆ, ಆಸೆಗಳಿಗೆ ಪ್ರಾಮುಖ್ಯತೆ ಕೊಡಬೇಕು. ಆದರೆ ಕೆಲವರಿಗೆ ಇಂಥ ಪ್ರೀತಿಯನ್ನು ತೋರಿಸಲು ಕಷ್ಟವಾಗಬಹುದು. ಯಾಕೆಂದರೆ ಬೇರೆಯವರ ಜೊತೆ ನ್ಯಾಯವಾಗಿ, ಪ್ರೀತಿಯಿಂದ ನಡಕೊಳ್ಳದೆ ಇರುವ ವಾತಾವರಣದಲ್ಲಿ ಅವರು ಬೆಳೆದು ಬಂದಿರಬಹುದು. ಇಂಥ ಸ್ವಭಾವಗಳನ್ನು ಬದಲಾಯಿಸಿಕೊಳ್ಳಲು ಕಷ್ಟವಾದರೂ ಕ್ರಿಸ್ತನ ನಿಯಮವನ್ನು ಪಾಲಿಸಬೇಕೆಂದರೆ ಅವರು ತಮ್ಮನ್ನು ಬದಲಾಯಿಸಿಕೊಳ್ಳಲೇ ಬೇಕು. ಗಂಡ ಸ್ವತ್ಯಾಗದ ಪ್ರೀತಿಯನ್ನು ತೋರಿಸಿದರೆ ಅವನ ಮೇಲೆ ಹೆಂಡತಿಗೆ ಗೌರವ ಹೆಚ್ಚಾಗುತ್ತದೆ. ತಂದೆಗೆ ಮಕ್ಕಳ ಮೇಲೆ ನಿಜವಾದ ಪ್ರೀತಿ ಇದ್ದರೆ ಅವನು ತನ್ನ ಮಾತಿನಿಂದಾಗಲಿ ಕ್ರಿಯೆಯಿಂದಾಗಲಿ ಮಕ್ಕಳಿಗೆ ನೋವು ಮಾಡಲ್ಲ. (ಎಫೆ. 4:31) ಅದರ ಬದಲು ತಾನು ಅವರನ್ನು ಪ್ರೀತಿಸುತ್ತೇನೆ, ಮೆಚ್ಚುತ್ತೇನೆ ಎಂದು ತೋರಿಸಿಕೊಡುವ ಮೂಲಕ ಮಕ್ಕಳಲ್ಲಿ ಸುರಕ್ಷಿತ ಭಾವನೆ ಮೂಡಿಸುತ್ತಾನೆ. ಮಕ್ಕಳಿಗೂ ಅಪ್ಪನ ಮೇಲೆ ಪ್ರೀತಿ, ನಂಬಿಕೆ ಹೆಚ್ಚಾಗುತ್ತದೆ.

22. ಒಂದನೇ ಪೇತ್ರ 5:1-3 ಹೇಳುವಂತೆ ‘ಕುರಿಗಳು’ ಯಾರಿಗೆ ಸೇರಿವೆ ಮತ್ತು ಅವುಗಳನ್ನು ಹೇಗೆ ನೋಡಿಕೊಳ್ಳಬೇಕು?

22 ಸಭೆಯಲ್ಲಿ. ಸಭೆಯ ಸದಸ್ಯರು ತಮ್ಮ ಸ್ವಂತ ಕುರಿಯಲ್ಲ ಎಂದು ಹಿರಿಯರು ನೆನಪಲ್ಲಿಡಬೇಕು. (ಯೋಹಾ. 10:16; 1 ಪೇತ್ರ 5:1-3 ಓದಿ.) ಈ ವಚನಗಳಲ್ಲಿ ಸಹೋದರ-ಸಹೋದರಿಯರನ್ನು “ದೇವರ ಮಂದೆ” ‘ದೇವರ ಸೊತ್ತು’ ಎಂದು ಕರೆಯಲಾಗಿದೆ. ಹಾಗಾಗಿ ಅವರು ದೇವರಿಗೆ ಸೇರಿದವರು ಅನ್ನುವುದನ್ನು ಇದು ನೆನಪಿಸುತ್ತದೆ. ಅವರನ್ನು ಪ್ರೀತಿಯಿಂದ, ಕೋಮಲವಾಗಿ ನೋಡಿಕೊಳ್ಳಬೇಕು ಎಂದು ಯೆಹೋವನು ಬಯಸುತ್ತಾನೆ. (1 ಥೆಸ. 2:7, 8) ಹಿರಿಯರು ಕುರುಬರಾಗಿ ತಮ್ಮ ಜವಾಬ್ದಾರಿಗಳನ್ನು ಪ್ರೀತಿಯಿಂದ ನಿರ್ವಹಿಸಿದರೆ ಯೆಹೋವನು ಅವರನ್ನು ಮೆಚ್ಚುತ್ತಾನೆ. ಅಷ್ಟೇ ಅಲ್ಲ, ಸಹೋದರ-ಸಹೋದರಿಯರು ಅವರ ಜೊತೆ ಪ್ರೀತಿ, ಗೌರವದಿಂದ ನಡಕೊಳ್ಳುತ್ತಾರೆ.

23-24. (ಎ) ಸಭೆಯಲ್ಲಿ ಯಾರಾದರೂ ಗಂಭೀರ ತಪ್ಪು ಮಾಡಿದಾಗ ಹಿರಿಯರಿಗೆ ಯಾವ ಜವಾಬ್ದಾರಿ ಇದೆ? (ಬಿ) ಹಿರಿಯರು ನ್ಯಾಯವಿಚಾರಣೆ ಮಾಡುವಾಗ ಯಾವ ವಿಷಯಗಳ ಬಗ್ಗೆ ಯೋಚಿಸುತ್ತಾರೆ?

23 ಸಭೆಯಲ್ಲಿ ಯಾರಾದರೂ ಗಂಭೀರ ತಪ್ಪು ಮಾಡಿದಾಗ ಹಿರಿಯರಿಗೆ ಯಾವ ಜವಾಬ್ದಾರಿ ಇದೆ? ಹಿಂದಿನ ಕಾಲದಲ್ಲಿ ಇಸ್ರಾಯೇಲಿನಲ್ಲಿದ್ದ ಹಿರಿಯರಿಗೆ ಮತ್ತು ನ್ಯಾಯಸ್ಥಾಪಕರಿಗೆ ಇದ್ದ ಜವಾಬ್ದಾರಿಗೂ ಇಂದಿನ ಹಿರಿಯರಿಗೆ ಇರುವ ಜವಾಬ್ದಾರಿಗೂ ವ್ಯತ್ಯಾಸ ಇದೆ. ಧರ್ಮಶಾಸ್ತ್ರದ ಪ್ರಕಾರ ನೇಮಿತ ಪುರುಷರು ಆಧ್ಯಾತ್ಮಿಕ ವಿಷಯಗಳನ್ನು ಮಾತ್ರವಲ್ಲ ಬೇರೆ ವಿಷಯಗಳ ಬಗ್ಗೆನೂ ನ್ಯಾಯವಿಚಾರಣೆ ಮಾಡಬೇಕಾಗಿತ್ತು. ಆದರೆ ಇಂದು ಕ್ರಿಸ್ತನ ನಿಯಮದ ಪ್ರಕಾರ ಹಿರಿಯರು ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಪಟ್ಟ ತಪ್ಪುಗಳನ್ನು ಮಾತ್ರ ನ್ಯಾಯವಿಚಾರಣೆ ಮಾಡುತ್ತಾರೆ. ಯಾಕೆಂದರೆ ಯೆಹೋವನು ಸಿವಿಲ್‌ ಮತ್ತು ಕ್ರಿಮಿನಲ್‌ ಕೇಸುಗಳಿಗೆ ಸಂಬಂಧಪಟ್ಟ ವಿಷಯಗಳನ್ನು ವಿಚಾರಿಸಲು ಅಧಿಕಾರಿಗಳನ್ನು ಇಟ್ಟಿದ್ದಾನೆ ಎಂದು ಹಿರಿಯರಿಗೆ ಗೊತ್ತು. ತಪ್ಪು ಮಾಡಿದವರಿಗೆ ದಂಡ ಹಾಕುವ ಅಥವಾ ಅವರನ್ನು ಜೈಲಿಗೆ ಹಾಕುವ ಅಧಿಕಾರವನ್ನೂ ದೇವರು ಅಧಿಕಾರಿಗಳಿಗೆ ಕೊಟ್ಟಿದ್ದಾನೆ.—ರೋಮ. 13:1-4.

24 ಆಧ್ಯಾತ್ಮಿಕತೆಗೆ ಸಂಬಂಧಪಟ್ಟ ವಿಷಯದಲ್ಲಿ ಗಂಭೀರ ತಪ್ಪು ನಡೆದಾಗ ಹಿರಿಯರು ಏನು ಮಾಡುತ್ತಾರೆ? ಆ ತಪ್ಪಿನ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎಂದು ಪರೀಕ್ಷಿಸುತ್ತಾರೆ, ನಂತರ ತೀರ್ಮಾನ ತಗೊಳ್ಳುತ್ತಾರೆ. ಕ್ರಿಸ್ತನ ನಿಯಮ ಪ್ರೀತಿಯ ಮೇಲೆ ಆಧರಿತವಾಗಿದೆ ಅನ್ನುವುದನ್ನು ನೆನಪಲ್ಲಿಟ್ಟು ಕೆಲಸ ಮಾಡುತ್ತಾರೆ. ಆದ್ದರಿಂದ ಸಭೆಯಲ್ಲಿ ಒಬ್ಬರ ಮೇಲೆ ದೌರ್ಜನ್ಯ ನಡೆದರೆ ಅವರಿಗೆ ಹೇಗೆ ಸಹಾಯ ಮಾಡಬೇಕು ಎಂದು ಯೋಚಿಸುತ್ತಾರೆ. ತಪ್ಪು ಮಾಡಿದವನು ಪಶ್ಚಾತ್ತಾಪಪಟ್ಟಿದ್ದಾನಾ ಎಂದು ನೋಡುತ್ತಾರೆ. ಯೆಹೋವನ ಜೊತೆ ಆ ವ್ಯಕ್ತಿಯ ಸಂಬಂಧವನ್ನು ಸರಿಪಡಿಸಲು ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸುತ್ತಾರೆ.

25. ಮುಂದಿನ ಲೇಖನದಲ್ಲಿ ಯಾವುದರ ಬಗ್ಗೆ ಚರ್ಚಿಸಲಿದ್ದೇವೆ?

25 ನಾವು ಕ್ರಿಸ್ತನ ನಿಯಮದ ಕೆಳಗೆ ಇರುವುದಕ್ಕೆ ಯೆಹೋವ ದೇವರಿಗೆ ಆಭಾರಿ! ನಾವೆಲ್ಲರೂ ಕ್ರಿಸ್ತನ ನಿಯಮವನ್ನು ಪಾಲಿಸಿದರೆ ಸಭೆಯಲ್ಲಿ ಪ್ರತಿಯೊಬ್ಬರಿಗೂ ಸುರಕ್ಷಿತ ಭಾವನೆ ಇರುತ್ತದೆ. ಸಹೋದರ-ಸಹೋದರಿಯರು ತಮ್ಮನ್ನು ಪ್ರೀತಿಸುತ್ತಾರೆ, ಅಮೂಲ್ಯವಾಗಿ ನೋಡುತ್ತಾರೆ ಅನ್ನುವ ಭಾವನೆ ಸಹ ಅವರಿಗೆ ಇರುತ್ತದೆ. ಆದರೆ “ದುಷ್ಟರು” “ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ” ಹೋಗುತ್ತಾ ಇರುವ ಈ ಲೋಕದಲ್ಲಿ ನಾವು ಜೀವಿಸುತ್ತಾ ಇದ್ದೇವೆ. (2 ತಿಮೊ. 3:13) ಆದ್ದರಿಂದ ನಾವು ಎಚ್ಚರವಾಗಿರಬೇಕು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಸಭೆ ಹೇಗೆ ನ್ಯಾಯವನ್ನು ಎತ್ತಿಹಿಡಿಯಬೇಕು? ಮುಂದಿನ ಲೇಖನದಲ್ಲಿ ಇದಕ್ಕೆ ಉತ್ತರ ಇದೆ.

ಗೀತೆ 109 ಯೆಹೋವನ ಜ್ಯೇಷ್ಠ ಪುತ್ರನಿಗೆ ಜೈ!

^ ಪ್ಯಾರ. 5 ಸರಣಿ ಲೇಖನಗಳಲ್ಲಿ ಇದು ಎರಡನೇ ಲೇಖನ. ಈ ಲೇಖನ ಮತ್ತು ಈ ಸರಣಿಯ ಮೂರನೇ ಮತ್ತು ನಾಲ್ಕನೇ ಲೇಖನಗಳು ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ನಮ್ಮ ಜೊತೆ ನ್ಯಾಯದಿಂದ ನಡಕೊಳ್ಳುತ್ತಾನೆ ಅನ್ನುವುದಕ್ಕೆ ಕಾರಣಗಳನ್ನು ಕೊಡುತ್ತವೆ. ತನ್ನ ಜನರಿಗೆ ನ್ಯಾಯ ಸಿಗಬೇಕು ಎಂದು ದೇವರು ಬಯಸುತ್ತಾನೆ. ಈ ಕೆಟ್ಟ ಲೋಕದಲ್ಲಿ ಅನ್ಯಾಯಕ್ಕೆ ಒಳಗಾದವರನ್ನು ಆತನು ಸಂತೈಸುತ್ತಾನೆ.

^ ಪ್ಯಾರ. 1 ಫೆಬ್ರವರಿ, 2019​ರ ಕಾವಲಿನಬುರುಜು ಸಂಚಿಕೆಯಲ್ಲಿ “ಆ ಕಾಲದ ಇಸ್ರಾಯೇಲಿನಲ್ಲಿ ಪ್ರೀತಿ ಮತ್ತು ನ್ಯಾಯ” ಎಂಬ ಲೇಖನ ನೋಡಿ.

^ ಪ್ಯಾರ. 13 ಪದ ವಿವರಣೆ: ನಮ್ಮಲ್ಲಿ ಸ್ವತ್ಯಾಗದ ಪ್ರೀತಿ ಇದ್ದರೆ ನಮ್ಮ ಅಗತ್ಯ-ಆಸೆಗಿಂತ ನಮಗೆ ಬೇರೆಯವರ ಅಗತ್ಯ-ಆಸೆ ಮುಖ್ಯವಾಗಿರುತ್ತದೆ. ಬೇರೆಯವರಿಗೆ ಸಹಾಯ ಮಾಡಲು ಅಥವಾ ಪ್ರಯೋಜನ ಆಗಲು ನಮಗೇನು ಇಷ್ಟಾನೋ ಅದನ್ನು ಬಿಟ್ಟುಕೊಡುತ್ತೇವೆ, ತ್ಯಾಗ ಮಾಡುತ್ತೇವೆ.

^ ಪ್ಯಾರ. 61 ಚಿತ್ರ ವಿವರಣೆ: ವಿಧವೆಗೆ ಇದ್ದ ಒಬ್ಬನೇ ಒಬ್ಬ ಮಗ ತೀರಿಹೋಗಿರುವುದನ್ನು ಯೇಸು ಗಮನಿಸಿ ಕನಿಕರದಿಂದ ಆ ಯುವಕನನ್ನು ಪುನರುತ್ಥಾನ ಮಾಡುತ್ತಾನೆ.

^ ಪ್ಯಾರ. 63 ಚಿತ್ರ ವಿವರಣೆ: ಸೀಮೋನ ಎಂಬ ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಹೋಗಿದ್ದಾನೆ. ಅಲ್ಲಿ ಬಹುಶಃ ಒಬ್ಬ ವೇಶ್ಯೆ ತನ್ನ ಕಣ್ಣೀರಿಂದ ಯೇಸುವಿನ ಪಾದಗಳನ್ನು ತೇವಮಾಡಿ ತನ್ನ ಕೂದಲಿಂದ ಒರೆಸಿ ಎಣ್ಣೆ ಹಚ್ಚುತ್ತಾಳೆ. ಅದು ಸೀಮೋನನಿಗೆ ಇಷ್ಟವಾಗಲ್ಲ. ಆಗ ಯೇಸು ಅವಳ ಪರವಹಿಸಿ ಮಾತಾಡುತ್ತಾನೆ.