ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೈತಾನ ತೋಡಿರುವ ಗುಂಡಿಗೆ ಬೀಳಬೇಡಿ

ಸೈತಾನ ತೋಡಿರುವ ಗುಂಡಿಗೆ ಬೀಳಬೇಡಿ

ಇಸ್ರಾಯೇಲ್ಯರು ಇನ್ನೇನು ಯೊರ್ದನ್‌ ನದಿಯನ್ನು ದಾಟಿ ವಾಗ್ದತ್ತ ದೇಶಕ್ಕೆ ಕಾಲಿಡಬೇಕು. ಆಗ ಕೆಲವು ಅಪರಿಚಿತರು ಕಾಣಿಸಿಕೊಂಡರು. ಅವರು ಬೇರೆ ದೇಶದ ಸ್ತ್ರೀಯರಾಗಿದ್ದರು. ಇಸ್ರಾಯೇಲ್ಯ ಗಂಡಸರನ್ನು ತಮ್ಮ ದೇಶದಲ್ಲಿ ನಡೆಯುವ ಹಬ್ಬಕ್ಕೆ ಕರೆದರು. ಆ ಸ್ತ್ರೀಯರ ಮಾತು ಕೇಳಿಕೊಂಡು ‘ಇಂಥ ಅವಕಾಶ ಸಿಗುತ್ತಾ? ಅಲ್ಲಿ ಹೋದರೆ ಹೊಸ ಸ್ನೇಹಿತರು ಸಿಗುತ್ತಾರೆ, ಕುಣಿದಾಡಬಹುದು, ಒಳ್ಳೊಳ್ಳೇ ಊಟ ಮಾಡಬಹುದು’ ಅಂತ ಆ ಗಂಡಸರಿಗೆ ಅನಿಸಿರಬಹುದು. ಆದರೆ ಆ ಸ್ತ್ರೀಯರ ಆಚಾರಗಳು, ನೈತಿಕ ಮಟ್ಟ ಸರಿ ಇರಲಿಲ್ಲ. ಇಸ್ರಾಯೇಲ್ಯರಿಗೆ ದೇವರು ಕೊಟ್ಟ ನಿಯಮದ ಪ್ರಕಾರ ಆ ಜನರು ಇರಲಿಲ್ಲ. ಆದರೂ ಕೆಲವು ಗಂಡಸರು ‘ಯಾವುದು ಸರಿ ಯಾವುದು ತಪ್ಪು ಅಂತ ನಂಗೊತ್ತು, ನಾನು ನೋಡಿಕೊಳ್ತೇನೆ’ ಅಂತ ಯೋಚಿಸಿರಬೇಕು.

ಆಮೇಲೆ ಏನಾಯಿತು? ಇಸ್ರಾಯೇಲ್ಯರು ಮೋವಾಬ್‌ ಸ್ತ್ರೀಯರ ಜೊತೆ ಲೈಂಗಿಕ ಅನೈತಿಕತೆ ನಡೆಸಿದರು ಅಂತ ಬೈಬಲ್‌ ಹೇಳುತ್ತದೆ. ಇಸ್ರಾಯೇಲಿನ ಗಂಡಸರು ಸುಳ್ಳು ದೇವರುಗಳನ್ನು ಆರಾಧಿಸಬೇಕು ಅನ್ನುವುದೇ ಆ ಸ್ತ್ರೀಯರ ಉದ್ದೇಶ ಆಗಿತ್ತು. ಈ ಗಂಡಸರೂ ಅದನ್ನೇ ಮಾಡಿದರು. ಇದರಿಂದ ಯೆಹೋವನಿಗೆ ತುಂಬ ಕೋಪ ಬಂತು.—ಅರ. 25:1-3.

ಆ ಗಂಡಸರು ಧರ್ಮಶಾಸ್ತ್ರದ ಎರಡು ನಿಯಮವನ್ನು ಮುರಿದರು. ಒಂದು, ವಿಗ್ರಹಗಳನ್ನು ಆರಾಧಿಸಿದರು. ಎರಡು, ಲೈಂಗಿಕ ಅನೈತಿಕತೆ ನಡೆಸಿದರು. ಇದರಿಂದ ಸಾವಿರಾರು ಮಂದಿ ತಮ್ಮ ಪ್ರಾಣ ಕಳಕೊಂಡರು. (ವಿಮೋ. 20:4, 5, 14; ಧರ್ಮೋ. 13:6-9) ಅದೂ ಎಂಥ ಸಮಯದಲ್ಲಿ ಕಳಕೊಂಡರು? ಯೊರ್ದನ್‌ ನದಿ ದಾಟಿ ವಾಗ್ದತ್ತ ದೇಶಕ್ಕೆ ಹೋಗಬೇಕಿತ್ತಷ್ಟೇ. ತಪ್ಪು ಮಾಡಿರಲಿಲ್ಲ ಅಂದರೆ ಅವರೆಲ್ಲರೂ ವಾಗ್ದತ್ತ ದೇಶಕ್ಕೆ ಹೋಗಿರುತ್ತಿದ್ದರು.—ಅರ. 25:5, 9.

ಈ ವಿಷಯದ ಬಗ್ಗೆ ಅಪೊಸ್ತಲ ಪೌಲನು ಹೀಗೆ ಬರೆದನು: “ಈ ವಿಷಯಗಳು ಅವರಿಗೆ ಉದಾಹರಣೆಗಳಾಗಿ ಸಂಭವಿಸುತ್ತಾ ಹೋದವು ಮತ್ತು ವಿಷಯಗಳ ವ್ಯವಸ್ಥೆಗಳ ಅಂತ್ಯವನ್ನು ಸಮೀಪಿಸಿರುವ ನಮಗೆ ಇವು ಎಚ್ಚರಿಕೆ ನೀಡಲಿಕ್ಕಾಗಿ ಬರೆಯಲ್ಪಟ್ಟವು.” (1 ಕೊರಿಂ. 10:7-11) ಇಸ್ರಾಯೇಲ್ಯರು ಯೆಹೋವನ ವಿರುದ್ಧ ಗಂಭೀರ ಪಾಪ ಮಾಡಿದ್ದರಿಂದ ವಾಗ್ದತ್ತ ದೇಶಕ್ಕೆ ಹೋಗುವ ಅವಕಾಶ ಕಳಕೊಂಡಾಗ ಸೈತಾನನಿಗೆ ತುಂಬ ತುಂಬ ಖುಷಿ ಆಗಿರುತ್ತೆ. ಹಾಗಾಗಿ ನಮಗೂ ಇದೊಂದು ಎಚ್ಚರಿಕೆ ಆಗಿದೆ. ನಾವು ಕೂಡ ಹೊಸ ಲೋಕಕ್ಕೆ ಕಾಲಿಡದ ಹಾಗೆ ಮಾಡಲು ಸೈತಾನ ಏನು ಮಾಡುವುದಕ್ಕೂ ಹೇಸಲ್ಲ ಅಂತ ನೆನಪಲ್ಲಿಡಬೇಕು!

ಅಂತಿಂಥ ಗುಂಡಿಯಲ್ಲ!

ಇಂದು ಕ್ರೈಸ್ತರಿಗೆ ಹಾನಿಮಾಡಲು ಸೈತಾನ ಬಳಸುತ್ತಿರುವ ಕುತಂತ್ರಗಳು ಹೊಸದೇನಲ್ಲ. ಈಗಾಗಲೇ ಅನೇಕರು ಆ ಕುತಂತ್ರಗಳಿಗೆ ಬಲಿಯಾಗಿದ್ದಾರೆ. ಇಸ್ರಾಯೇಲ್ಯರಿಗೆ ತೋಡಿದ ಲೈಂಗಿಕ ಅನೈತಿಕತೆ ಅನ್ನೋ ಗುಂಡಿಯನ್ನೇ ಸೈತಾನ ಇವತ್ತು ಕ್ರೈಸ್ತರಿಗೂ ತೋಡುತ್ತಿದ್ದಾನೆ. ಈ ಗುಂಡಿ ತುಂಬ ಅಪಾಯಕಾರಿ. ಅನೇಕರು ಅಶ್ಲೀಲ ಚಿತ್ರಗಳು ಎಂಬ ದಾರಿಹಿಡಿದು ಲೈಂಗಿಕ ಅನೈತಿಕತೆ ಎಂಬ ಗುಂಡಿಗೆ ಬೀಳುತ್ತಿದ್ದಾರೆ.

ಇವತ್ತು ಜನರು ಯಾರಿಗೂ ಗೊತ್ತಾಗದ ಹಾಗೆ ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ. ಆದರೆ ಹಿಂದೆಲ್ಲ ಚಿತ್ರಮಂದಿರಕ್ಕೆ ಹೋಗಿನೇ ಅಶ್ಲೀಲ ಚಲನಚಿತ್ರವನ್ನು ನೋಡಬೇಕಿತ್ತು ಅಥವಾ ಅಶ್ಲೀಲ ವಿಷಯ ಇರುವ ಪುಸ್ತಕವನ್ನು ಕದ್ದುಮುಚ್ಚಿ ತಗೋಬೇಕಿತ್ತು. ಆದರೆ ಇದನ್ನು ಮಾಡಲು ಅನೇಕರು ಹಿಂಜರಿಯುತ್ತಿದ್ದರು. ಯಾಕೆಂದರೆ ಯಾರಾದರೂ ತಮ್ಮನ್ನು ನೋಡಿಬಿಟ್ಟರೆ ಅವಮಾನ ಆಗುತ್ತೆ ಅನ್ನುವ ಭಯ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಜನರು ಕೆಲಸದ ಸ್ಥಳದಲ್ಲಿ ಅಥವಾ ಕಾರಲ್ಲಿ ಕೂತುಕೊಂಡೇ ಇಂಟರ್‌ನೆಟ್‌ ಮೂಲಕ ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ. ಅನೇಕ ದೇಶಗಳಲ್ಲಿ ಅದನ್ನು ನೋಡಕ್ಕೆ ಗಂಡಸರು, ಹೆಂಗಸರು ಹೊರಗೆ ಹೋಗಬೇಕಾಗಿಲ್ಲ, ಮನೆಯಲ್ಲಿ ಕೂತುಕೊಂಡೇ ನೋಡುತ್ತಾರೆ.

ಮೊಬೈಲ್‌ ಇದ್ದರಂತೂ ಹೇಳುವುದೇ ಬೇಡ. ರಸ್ತೆಯಲ್ಲಿ ನಡಕೊಂಡು ಹೋಗುವಾಗ, ಬಸ್ಸಲ್ಲಿ-ರೈಲಲ್ಲಿ ಕೂತು ಪ್ರಯಾಣಿಸುವಾಗಲೂ ಜನರು ಅಶ್ಲೀಲ ಚಿತ್ರಗಳನ್ನು ಸುಲಭವಾಗಿ ನೋಡಬಹುದು.

ಇವತ್ತು ಅಶ್ಲೀಲ ಚಿತ್ರಗಳು ಬೆರಳ ತುದಿಯಲ್ಲೇ ಸಿಗುವುದರಿಂದ, ಯಾರಿಗೂ ಗೊತ್ತಾಗದೆ ನೋಡಕ್ಕೆ ಆಗುವುದರಿಂದ ಹೆಚ್ಚು ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಎಷ್ಟೋ ಜನರು ಇದರಿಂದಾಗಿ ತಮ್ಮ ಕೈಯಾರೆ ತಮ್ಮ ವಿವಾಹ ಬಾಂಧವ್ಯವನ್ನು ಹಾಳು ಮಾಡಿಕೊಂಡಿದ್ದಾರೆ, ಆತ್ಮಗೌರವ ಮತ್ತು ಒಳ್ಳೇ ಮನಸ್ಸಾಕ್ಷಿ ಕಳಕೊಂಡಿದ್ದಾರೆ. ಇದಕ್ಕಿಂತ ದೊಡ್ಡ ಹಾನಿ ಏನೆಂದರೆ ದೇವರ ಜೊತೆ ಇದ್ದ ಒಳ್ಳೇ ಸಂಬಂಧ ಮುರಿದುಕೊಂಡಿದ್ದಾರೆ. ಹಾಗಾದರೆ ಅಶ್ಲೀಲ ಚಿತ್ರಗಳನ್ನು ನೋಡುವುದರಿಂದ ತುಂಬ ಹಾನಿ ಆಗುತ್ತೆ ಅಂತ ಒಪ್ಪುತ್ತೀರಿ ಅಲ್ವಾ? ಅಶ್ಲೀಲ ಚಿತ್ರ ನೋಡಿ ಎಷ್ಟೋ ಜನರು ಜೀವನದಲ್ಲಿ ತುಂಬ ನೋವು ತಿಂತಿದ್ದಾರೆ. ಕೆಲವರಿಗೆ ಆ ನೋವು ತುಂಬ ವರ್ಷಗಳ ವರೆಗೆ ಕಾಡುತ್ತೆ. ಇನ್ನು ಕೆಲವರಿಗೆ ಆ ನೋವು ಹೋಗುವುದೇ ಇಲ್ಲ.

ಆದರೆ ಸೈತಾನನು ತೋಡಿರುವ ಈ ಗುಂಡಿಗೆ ಬೀಳದಿರಲು ಯೆಹೋವನು ನಮಗೆ ಸಹಾಯ ಮಾಡುತ್ತಾನೆ. ಅದನ್ನು ಅರ್ಥಮಾಡಿಕೊಳ್ಳಬೇಕೆಂದರೆ ನಾವು ಆ ಇಸ್ರಾಯೇಲ್ಯ ಗಂಡಸರು ಅವತ್ತು ಏನು ಮಾಡಲಿಲ್ಲವೋ ಅದನ್ನು ಮಾಡಬೇಕು. ಅದೇನೆಂದರೆ, ಯೆಹೋವನ ಮಾತನ್ನು ‘ಶ್ರದ್ಧೆಯಿಂದ ಕೇಳಬೇಕು.’ (ವಿಮೋ. 19:5) ನಾವು ಅಶ್ಲೀಲ ಚಿತ್ರಗಳನ್ನು ನೋಡಿದರೆ ಅದು ಯೆಹೋವನಿಗೆ ಸ್ವಲ್ಪನೂ ಇಷ್ಟ ಆಗಲ್ಲ. ಯಾಕೆ?

ಯೆಹೋವನು ದ್ವೇಷಿಸುತ್ತಾನೆ, ನೀವೂ ದ್ವೇಷಿಸಿ

ದೇವರು ಇಸ್ರಾಯೇಲ್ಯರಿಗೆ ಕೊಟ್ಟ ನಿಯಮಗಳ ಬಗ್ಗೆ ಸ್ವಲ್ಪ ಯೋಚಿಸಿ. ಬೇರೆ ಯಾವ ಜನಾಂಗಕ್ಕೂ ಅಂಥ ನಿಯಮಗಳು ಇರಲಿಲ್ಲ. ಬೇರೆ ಜನಾಂಗದವರ ಸಹವಾಸವನ್ನು ಮತ್ತು ಅವರು ಮಾಡುತ್ತಿದ್ದ ಕೆಟ್ಟ ವಿಷಯಗಳನ್ನು ಇಸ್ರಾಯೇಲ್ಯರು ಮಾಡದಂತೆ ಧರ್ಮಶಾಸ್ತ್ರ ತಡೆಯುತ್ತಿತ್ತು. (ಧರ್ಮೋ. 4:6-8) ಧರ್ಮಶಾಸ್ತ್ರದಿಂದ ಒಂದು ವಿಷಯ ಸ್ಪಷ್ಟವಾಗಿ ಗೊತ್ತಾಗುತ್ತದೆ: ಯೆಹೋವನು ಲೈಂಗಿಕ ಅನೈತಿಕತೆಯನ್ನು ತುಂಬ ದ್ವೇಷಿಸುತ್ತಾನೆ!

ಇಸ್ರಾಯೇಲ್ಯರ ಸುತ್ತಮುತ್ತ ಇದ್ದ ಜನಾಂಗದವರು ಯಾವ ಯಾವ ಅನೈತಿಕ ವಿಷಯಗಳನ್ನು ಮಾಡುತ್ತಾರೆ ಅಂತ ತಿಳಿಸಿದ ನಂತರ ಯೆಹೋವನು ಹೇಳಿದ್ದು: ‘ನಾನು ನಿಮ್ಮನ್ನು ಬರಮಾಡುವ ಕಾನಾನ್‌ ದೇಶದ ಆಚರಣೆಗಳನ್ನು ನೀವು ಅನುಸರಿಸಬಾರದು. ಅವರ ದೇಶವು ಅಶುದ್ಧವಾಗಿ ಹೋದದರಿಂದ ಅವರ ಪಾಪಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಿದ್ದೇನೆ.’ ಕಾನಾನ್ಯರ ಕೆಟ್ಟ ಜೀವನರೀತಿಯನ್ನು ಪರಿಶುದ್ಧನಾಗಿರುವ ಯೆಹೋವನು ಎಷ್ಟು ದ್ವೇಷಿಸಿದನೆಂದರೆ ಅವರು ವಾಸಿಸುತ್ತಿದ್ದ ಪ್ರದೇಶವನ್ನು ಕೂಡ ಅಶುದ್ಧ ಅಂತ ಹೇಳಿದನು.—ಯಾಜ. 18:3, 25.

ಯೆಹೋವನು ಕಾನಾನ್ಯರಿಗೆ ಶಿಕ್ಷೆ ಕೊಟ್ಟರೂ ಸುತ್ತಮುತ್ತ ಇದ್ದ ಬೇರೆ ಜನರು ಬುದ್ಧಿ ಕಲಿಯದೆ ಅನೈತಿಕತೆಯನ್ನು ಮುಂದುವರಿಸಿದರು. 1,500 ವರ್ಷಗಳ ನಂತರ ಕ್ರೈಸ್ತರಿದ್ದ ದೇಶಗಳ ಜನರ ಬಗ್ಗೆ ಪೌಲನು ಅವರು ‘ಸಂಪೂರ್ಣ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡವರು’ ಎಂದು ಹೇಳಿದನು. “ಅವರು ಪ್ರತಿಯೊಂದು ರೀತಿಯ ಅಶುದ್ಧತೆಯನ್ನು ಅತ್ಯಾಶೆಯಿಂದ ನಡಿಸಲಿಕ್ಕಾಗಿ ತಮ್ಮನ್ನು ತಾವೇ ಸಡಿಲು ನಡತೆಗೆ ಒಪ್ಪಿಸಿಕೊಟ್ಟರು.” (ಎಫೆ. 4:17-19) ಇವತ್ತೂ ತುಂಬ ಜನರು ಇದೇ ರೀತಿ ಇದ್ದಾರೆ. ಕೆಟ್ಟ ಕೆಲಸ ಮಾಡಿದರೂ ನಾಚಿಕೆನೇ ಇಲ್ಲ. ಆದ್ದರಿಂದ ಈ ಲೋಕದ ಜನರು ನಡೆಸುವ ಅನೈತಿಕ ವಿಷಯಗಳನ್ನು ಸತ್ಯ ಕ್ರೈಸ್ತರು ನೋಡಬಾರದು.

ಅಶ್ಲೀಲ ಚಿತ್ರಗಳನ್ನು ನೋಡುವ ವ್ಯಕ್ತಿ ದೇವರ ಮೇಲೆ ತನಗೆ ಗೌರವ ಇಲ್ಲ ಅಂತ ತೋರಿಸಿಕೊಡುತ್ತಾನೆ. ಮನುಷ್ಯರನ್ನು ದೇವರು ತನ್ನ ಸ್ವರೂಪದಲ್ಲಿ ಸೃಷ್ಟಿಮಾಡಿದ್ದಾನೆ. ಹಾಗಾಗಿ ಇದು ತಪ್ಪು, ಇದು ಸರಿ ಅನ್ನೋ ಪ್ರಜ್ಞೆ ನಮ್ಮಲ್ಲೂ ಇದೆ. ಅಷ್ಟೇ ಅಲ್ಲ ಲೈಂಗಿಕ ಸಂಬಂಧದ ಬಗ್ಗೆನೂ ಕೆಲವು ನಿಯಮಗಳನ್ನು ದೇವರು ಮಾಡಿದ್ದಾನೆ. ಲೈಂಗಿಕ ಸಂಬಂಧ ಗಂಡ-ಹೆಂಡತಿ ಮಧ್ಯೆ ಮಾತ್ರ ಇರಬೇಕಾದ ವಿಷಯ ಅಂತ ಹೇಳಿದ್ದಾನೆ. (ಆದಿ. 1:26-28; ಜ್ಞಾನೋ. 5:18, 19) ಅಶ್ಲೀಲ ಚಿತ್ರಗಳನ್ನು ತಯಾರಿ ಮಾಡುವವರ ಬಗ್ಗೆ ಮತ್ತು ಅವುಗಳನ್ನು ಮಾರಾಟ ಮಾಡುವವರ ಬಗ್ಗೆ ಏನು ಹೇಳಬಹುದು? ಅವರು ಸಹ ದೇವರನ್ನು, ದೇವರ ನೈತಿಕ ಮಟ್ಟಗಳನ್ನು ಅಗೌರವಿಸುತ್ತಿದ್ದಾರೆ. ಇಂಥವರಿಗೆಲ್ಲ ದೇವರು ನ್ಯಾಯ ತೀರಿಸಲಿದ್ದಾನೆ.—ರೋಮ. 1:24-27.

ತಪ್ಪು ಅಂತ ಗೊತ್ತಿದ್ದರೂ ಅಶ್ಲೀಲ ಚಿತ್ರಗಳನ್ನು ನೋಡುವವರ ಬಗ್ಗೆ ಏನು ಹೇಳಬಹುದು? ಇದರಿಂದ ಯಾವ ಹಾನಿಯೂ ಆಗಲ್ಲ ಅಂತ ಕೆಲವರು ನೆನಸುತ್ತಾರೆ. ಆದರೆ ನಿಜ ಏನೆಂದರೆ, ಯೆಹೋವನ ನೈತಿಕ ಮಟ್ಟಗಳಿಗೆ ಸ್ವಲ್ಪನೂ ಬೆಲೆ ಕೊಡದ ಜನರಿಗೆ ಇವರು ಬೆಂಬಲ ಕೊಡುತ್ತಿದ್ದಾರೆ. ಈ ಉದ್ದೇಶದಿಂದ ಒಬ್ಬ ವ್ಯಕ್ತಿ ಅಶ್ಲೀಲ ಚಿತ್ರಗಳನ್ನು ನೋಡಲು ಶುರುಮಾಡಿರಲಿಕ್ಕಿಲ್ಲ. ಅದೇನೇ ಇದ್ದರೂ ಸತ್ಯ ದೇವರ ಆರಾಧಕರು ಅದನ್ನು ದ್ವೇಷಿಸಲೇಬೇಕು. “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ” ಅಂತ ಬೈಬಲ್‌ ಹೇಳುತ್ತದೆ.—ಕೀರ್ತ. 97:10.

ಕೆಲವರಿಗೆ ಅಶ್ಲೀಲ ಚಿತ್ರಗಳನ್ನು ನೋಡಬಾರದು ಅಂತಿದ್ದರೂ ಅದನ್ನು ನೋಡದೇ ಇರಲು ಕಷ್ಟ ಆಗುತ್ತದೆ. ನಾವು ಅಪರಿಪೂರ್ಣರು ಆಗಿರುವುದರಿಂದ ಕೆಟ್ಟ ಲೈಂಗಿಕ ಆಸೆಗಳ ವಿರುದ್ಧ ಹೋರಾಡಬೇಕಾಗುತ್ತದೆ. ಅಷ್ಟೇ ಅಲ್ಲ, ನಮ್ಮ ಹೃದಯ ಕೂಡ ನಮ್ಮನ್ನು ವಂಚಿಸುತ್ತದೆ. ಅಶ್ಲೀಲ ಚಿತ್ರಗಳನ್ನು ನೋಡುವುದರಲ್ಲಿ ಯಾವ ತಪ್ಪೂ ಇಲ್ಲ ಅಂತ ಅದು ನಮ್ಮನ್ನು ವಂಚಿಸಬಹುದು. (ಯೆರೆ. 17:9) ಆದರೂ ಅನೇಕರು ಸತ್ಯ ಕಲಿತ ಮೇಲೆ ಈ ಹೋರಾಟದಲ್ಲಿ ಗೆದ್ದಿದ್ದಾರೆ. ನಿಮಗೂ ಈ ಹೋರಾಟ ಇರುವುದಾದರೆ ನಿಮ್ಮಿಂದಲೂ ಇದನ್ನು ಗೆಲ್ಲಲು ಸಾಧ್ಯ. ಇದಕ್ಕೆ ದೇವರ ವಾಕ್ಯ ಹೇಗೆ ಸಹಾಯ ಮಾಡುತ್ತದೆ ಅಂತ ಮುಂದೆ ನೋಡಿ.

ಅದನ್ನೇ ಯೋಚಿಸುತ್ತಾ ಇರಬೇಡಿ!

ಆ ಇಸ್ರಾಯೇಲ್ಯ ಗಂಡಸರು ತಮ್ಮಲ್ಲಿ ಕೆಟ್ಟ ಆಸೆ ಹುಟ್ಟಿದಾಗ ಅದನ್ನು ಕಿತ್ತುಹಾಕುವ ಬದಲು ಬೆಳೆಯಲು ಬಿಟ್ಟರು. ಇದರಿಂದ ಪ್ರಾಣವನ್ನೇ ಕಳಕೊಂಡರು. ನಾವು ಎಚ್ಚರವಹಿಸದೆ ಹೋದರೆ ನಮಗೂ ಇದೇ ಗತಿ ಆಗುತ್ತದೆ. ಯೇಸುವಿನ ತಮ್ಮನಾದ ಯಾಕೋಬನು ಈ ಅಪಾಯದ ಬಗ್ಗೆ ಹೀಗೆ ಹೇಳಿದ್ದಾನೆ: ‘ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಡುತ್ತಾನೆ. ಬಳಿಕ ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ.’ (ಯಾಕೋ. 1:14, 15) ಒಬ್ಬ ವ್ಯಕ್ತಿಯ ಮನಸ್ಸಲ್ಲಿ ಒಂದು ಕೆಟ್ಟ ಆಸೆ ಬೆಳೆದು ಬಲವಾದರೆ ಹೆಚ್ಚಾಗಿ ಅದು ಪಾಪಕ್ಕೆ ನಡೆಸಿಬಿಡುತ್ತದೆ. ಆದ್ದರಿಂದ ಅನೈತಿಕ ಯೋಚನೆಗಳ ಬಗ್ಗೆ ಯೋಚಿಸುತ್ತಾ ಇರಬಾರದು. ಅದನ್ನು ಮನಸ್ಸಿಂದ ಬೇರುಸಮೇತ ಕಿತ್ತುಹಾಕಬೇಕು.

ಅನೈತಿಕ ಯೋಚನೆಗಳು ಪುನಃ ಪುನಃ ಬರುತ್ತಿರುವುದಾದರೆ ತಕ್ಷಣ ಒಂದು ಕೆಲಸ ಮಾಡಬೇಕು. “ನಿನ್ನ ಕೈಯಾಗಲಿ ನಿನ್ನ ಕಾಲಾಗಲಿ ನಿನ್ನನ್ನು ಎಡವಿಸುವುದಾದರೆ ಅದನ್ನು ಕತ್ತರಿಸಿ ಬಿಸಾಡು; . . . ನಿನ್ನ ಕಣ್ಣು ನಿನ್ನನ್ನು ಎಡವಿಸುವುದಾದರೆ ಅದನ್ನು ಕಿತ್ತುಬಿಸಾಡು” ಅಂತ ಯೇಸು ಹೇಳಿದನು. (ಮತ್ತಾ. 18:8, 9) ಅಂದರೆ ನೀವು ಕೈ-ಕಾಲನ್ನು ಕತ್ತರಿಸಿಕೋಬೇಕು ಅಥವಾ ಕಣ್ಣನ್ನು ಕಿತ್ತು ಹಾಕಬೇಕು ಅಂತ ಯೇಸು ಹೇಳಿದ್ದಲ್ಲ. ಯಾವುದು ನಿಮ್ಮನ್ನು ತಪ್ಪುದಾರಿಗೆ ನಡೆಸುತ್ತಿದೆಯೋ ಅದನ್ನು ಕಂಡುಹಿಡಿದು ಕೂಡಲೇ ಬದಲಾವಣೆ ಮಾಡಿಕೊಳ್ಳಬೇಕು ಅಂತ ಯೇಸು ಹೇಳುತ್ತಿದ್ದಾನೆ. ಹಾಗಾದರೆ ಅಶ್ಲೀಲ ಚಿತ್ರಗಳನ್ನು ನೋಡುವ ವಿಷಯದಲ್ಲಿ ಈ ಬುದ್ಧಿವಾದವನ್ನು ಹೇಗೆ ಅನ್ವಯಿಸಿಕೊಳ್ಳಬೇಕು?

ಅಶ್ಲೀಲ ಚಿತ್ರ ನಿಮ್ಮ ಕಣ್ಮುಂದೆ ಬಂದರೆ ‘ಅದನ್ನು ನೋಡಿದರೆ ನನಗೇನೂ ಆಗಲ್ಲ’ ಅಂತ ಅಂದುಕೊಂಡು ಅದನ್ನು ನೋಡಕ್ಕೆ ಹೋಗಬೇಡಿ. ತಕ್ಷಣ ಬೇರೆ ಕಡೆ ತಿರುಗಿ, ಟಿವಿಯನ್ನು ಆಫ್‌ ಮಾಡಿಬಿಡಿ, ಕಂಪ್ಯೂಟರೋ ಮೊಬೈಲೋ ಆಗಿದ್ದರೆ ಮುಚ್ಚಿಬಿಡಿ. ಒಳ್ಳೇದನ್ನು ನೋಡಿ. ಹೀಗೆ ಮಾಡಿದರೆ ನಿಮ್ಮ ಯೋಚನೆಯನ್ನು ನಿಯಂತ್ರಣದಲ್ಲಿ ಇಡಲು ನಿಮಗೆ ಸಹಾಯ ಆಗುತ್ತದೆ.

ನೆನಪಾದಾಗ ಏನು ಮಾಡಬೇಕು?

ನೀವು ಅಶ್ಲೀಲ ಚಿತ್ರಗಳನ್ನು ನೋಡುವುದನ್ನು ಬಿಟ್ಟುಬಿಟ್ಟಿದ್ದೀರಿ, ಆದರೆ ಹಿಂದೆ ನೋಡಿದ ಚಿತ್ರಗಳು ನೆನಪಾಗಿ ನಿಮ್ಮನ್ನು ಕಾಡುತ್ತಿರುವುದಾದರೆ ಏನು ಮಾಡಬಹುದು? ಒಮ್ಮೆ ನೋಡಿದ ಅಶ್ಲೀಲ ಚಿತ್ರಗಳು ಮತ್ತು ಮನಸ್ಸಿಗೆ ಬಂದ ಕೆಟ್ಟ ಯೋಚನೆಗಳು ತುಂಬ ಸಮಯವಾದರೂ ಮನಸ್ಸಿಂದ ಹೋಗಲ್ಲ. ಇದ್ದಕ್ಕಿದ್ದ ಹಾಗೆ ಅವು ನೆನಪಿಗೆ ಬರಬಹುದು. ಆಗ ಕೆಲವರಿಗೆ ಹಸ್ತಮೈಥುನದಂಥ ಅಶುದ್ಧವಾದ ವಿಷಯವನ್ನು ಮಾಡಬೇಕೆಂದು ಅನಿಸುತ್ತದೆ. ಆದ್ದರಿಂದ ನಿಮಗೂ ಇಂಥ ಯೋಚನೆ ಬರಬಹುದು ಅನ್ನುವುದನ್ನು ಮನಸ್ಸಲ್ಲಿಟ್ಟು ಅದನ್ನು ಮೆಟ್ಟಿನಿಲ್ಲಲು ಏನು ಮಾಡಬೇಕು ಎಂದು ಯೋಚಿಸಿಡಿ.

ದೇವರು ಏನು ಇಷ್ಟಪಡುತ್ತಾನೋ ಅದನ್ನೇ ಯೋಚಿಸಲು ಮತ್ತು ಮಾಡಲು ದೃಢತೀರ್ಮಾನ ಮಾಡಿಕೊಳ್ಳಿ. ಅಪೊಸ್ತಲ ಪೌಲನಂತೆ “ದೇಹವನ್ನು ಜಜ್ಜಿ ಅದನ್ನು ದಾಸನಂತೆ” ಮಾಡಿಕೊಳ್ಳಿ. (1 ಕೊರಿಂ. 9:27) ಯಾವ ಕಾರಣಕ್ಕೂ ಕೆಟ್ಟ ಆಸೆಗಳಿಗೆ ದಾಸರಾಗಬೇಡಿ. “ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತವು ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳುವಂತೆ ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ.” (ರೋಮ. 12:2) ಹೃದಯ ಹೇಳುವುದನ್ನು ಕೇಳದೆ ದೇವರು ಹೇಳುವುದನ್ನು ಕೇಳಿದರೆ ತುಂಬ ಸಂತೋಷ-ಸಂತೃಪ್ತಿ ಸಿಗುತ್ತದೆ ಅನ್ನುವುದನ್ನು ನೆನಪಿಡಿ.

ಹೃದಯ ಹೇಳುವುದನ್ನು ಕೇಳದೆ ದೇವರು ಹೇಳುವುದನ್ನು ಕೇಳಿದರೆ ತುಂಬ ಸಂತೋಷ-ಸಂತೃಪ್ತಿ ಸಿಗುತ್ತದೆ

ಕೆಲವು ಬೈಬಲ್‌ ವಚನಗಳನ್ನು ಬಾಯಿಪಾಠ ಮಾಡಿ. ಕೆಟ್ಟ ಯೋಚನೆಗಳು ಬಂದಾಗೆಲ್ಲ ಆ ವಚನಗಳನ್ನು ನೆನಪಿಗೆ ತಂದುಕೊಳ್ಳಿ. ಉದಾಹರಣೆಗೆ, ಕೀರ್ತನೆ 119:37; ಯೆಶಾಯ 52:11; ಮತ್ತಾಯ 5:28; ಎಫೆಸ 5:3; ಕೊಲೊಸ್ಸೆ 3:5; 1 ಥೆಸಲೊನೀಕ 4:4-8 ನೋಡಿ. ಇಂಥ ವಚನಗಳನ್ನು ನೆನಪಿಸಿಕೊಂಡಾಗ ಯೆಹೋವನು ಅಶ್ಲೀಲ ಚಿತ್ರಗಳನ್ನು ದ್ವೇಷಿಸುತ್ತಾನೆ, ತನ್ನ ಹಾಗೆ ಬೇರೆಯವರೂ ಅದನ್ನು ದ್ವೇಷಿಸಬೇಕು ಅಂತ ಇಷ್ಟಪಡುತ್ತಾನೆ ಅನ್ನುವುದು ಮನಸ್ಸಿಗೆ ಬರುತ್ತೆ.

ಅಶ್ಲೀಲ ಚಿತ್ರಗಳನ್ನು ನೋಡಲೇಬೇಕು ಅಂತ ಅನಿಸಿದಾಗ ಅಥವಾ ಅಶ್ಲೀಲ ವಿಷಯಗಳ ಬಗ್ಗೆ ಯೋಚಿಸದೆ ಇರಲು ಆಗಲ್ಲ ಅಂತ ಅನಿಸಿದಾಗ ಏನು ಮಾಡಬೇಕು? ಯೇಸುವಿನ ಮಾದರಿಯನ್ನು ಅನುಕರಿಸಬೇಕು. (1 ಪೇತ್ರ 2:21) ಯೇಸು ದೀಕ್ಷಾಸ್ನಾನ ಪಡಕೊಂಡ ಮೇಲೆ ಸೈತಾನ ಆತನ ನಿಷ್ಠೆಯನ್ನು ಮುರಿಯಲು ತುಂಬ ಪ್ರಯತ್ನ ಮಾಡಿದನು. ಆಗ ಯೇಸು ಏನು ಮಾಡಿದನು? ಸೈತಾನನ ಪ್ರಯತ್ನ ಮಣ್ಣುಮುಕ್ಕುವಂತೆ ಮಾಡಿದನು. ಒಂದೊಂದೇ ವಚನ ಉಪಯೋಗಿಸುತ್ತಾ ಸೈತಾನ ಒಡ್ಡಿದ ಆಮಿಷವನ್ನು ತಿರಸ್ಕರಿಸಿದನು. “ಸೈತಾನನೇ ತೊಲಗಿಹೋಗು!” ಅಂದನು. ಆಗ ಸೈತಾನ ಯೇಸುವನ್ನು ಬಿಟ್ಟುಹೋದನು. ಯೇಸು ಒಂದು ಸಾರಿ ಕೂಡ ಸೈತಾನನಿಗೆ ಅವಕಾಶ ಕೊಡದ ಹಾಗೆ ನಡಕೊಂಡನು. ನೀವು ಸಹ ಹಾಗೇ ನಡಕೋಬೇಕು. (ಮತ್ತಾ. 4:1-11) ಸೈತಾನ ಮತ್ತು ಅವನ ಲೋಕ ನಿಮ್ಮ ಮನಸ್ಸಲ್ಲಿ ಕೆಟ್ಟದ್ದನ್ನು ತುಂಬಿಸಲು ಪ್ರಯತ್ನಿಸುತ್ತಾ ಇರುತ್ತದೆ. ಆದರೆ ನಿಮ್ಮ ಮನಸ್ಸು ಹಾಳಾಗುವಂತೆ ಬಿಡಬೇಡಿ. ನೀವು ಗೆದ್ದೇ ಗೆಲ್ಲುತ್ತೀರಿ. ಯೆಹೋವನ ಸಹಾಯದಿಂದ ನಿಮ್ಮ ಶತ್ರುವನ್ನು ಸೋಲಿಸಿಬಿಡುತ್ತೀರಿ.

ಯೆಹೋವನಿಗೆ ಪ್ರಾರ್ಥಿಸಿ, ಆತನು ಹೇಳಿದಂತೆ ಮಾಡಿ

ಯೆಹೋವನಿಗೆ ಪ್ರಾರ್ಥನೆ ಮಾಡುತ್ತಾ ಇರಿ. ಯಾಕೆಂದರೆ “ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.” (ಫಿಲಿ. 4:6, 7) ತಪ್ಪು ಮಾಡದೇ ಇರಲು ದೇವರು ಕೊಡುವ ಶಾಂತಿ ನಿಮಗೆ ಸಹಾಯ ಮಾಡುತ್ತದೆ. ಆತನಿಗೆ ನೀವು ಹತ್ತಿರ ಆದಾಗ, ಆತನು ನಿಮ್ಮ ಹತ್ತಿರಕ್ಕೆ ಬರುತ್ತಾನೆ.—ಯಾಕೋ. 4:8.

ಇಡೀ ವಿಶ್ವದ ಒಡೆಯನಾದ ಯೆಹೋವನ ಜೊತೆ ಆಪ್ತ ಸಂಬಂಧ ಇಟ್ಟುಕೊಂಡರೆ ಸೈತಾನನ ಯಾವ ಗುಂಡಿಗೂ ನಾವು ಬೀಳಲ್ಲ. “ಈ ಲೋಕದ ಅಧಿಪತಿಯು [ಸೈತಾನನು] ಬರುತ್ತಿದ್ದಾನೆ. ಅವನಿಗೆ ನನ್ನ ಮೇಲೆ ಹಿಡಿತವಿಲ್ಲ” ಅಂತ ಯೇಸು ಹೇಳಿದನು. (ಯೋಹಾ. 14:30) ಇದಕ್ಕೆ ಕಾರಣ ಏನು? ಒಮ್ಮೆ ಯೇಸು ಹೀಗೆ ಹೇಳಿದ್ದನು: “ನನ್ನನ್ನು ಕಳುಹಿಸಿದಾತನು ನನ್ನೊಂದಿಗಿದ್ದಾನೆ. ನಾನು ಆತನಿಗೆ ಮೆಚ್ಚಿಕೆಯಾಗಿರುವುದನ್ನೇ ಯಾವಾಗಲೂ ಮಾಡುವುದರಿಂದ ಆತನು ನನ್ನನ್ನು ತೊರೆಯಲಿಲ್ಲ.” (ಯೋಹಾ. 8:29) ಯೆಹೋವನಿಗೆ ಏನು ಇಷ್ಟಾನೋ ಅದನ್ನೇ ನಾವು ಮಾಡುವಾಗ ಆತನು ನಮ್ಮನ್ನು ತೊರೆಯದೆ ಹತ್ತಿರ ಇರುತ್ತಾನೆ. ‘ರಾತ್ರಿ ಕಂಡ ಬಾವಿಗೆ (ಗುಂಡಿಗೆ) ಹಗಲಲ್ಲಿ ಬಿದ್ದರು’ ಅನ್ನೋ ಗಾದೆಯಂತೆ ಅಶ್ಲೀಲ ಚಿತ್ರ ಅನ್ನೋ ಗುಂಡಿಗೆ ತಿಳಿದೂ ತಿಳಿದು ಬೀಳದೆ ಇರೋಣ. ಆಗ ಸೈತಾನನಿಗೆ ನಮ್ಮನ್ನು ಏನೂ ಮಾಡಕ್ಕಾಗಲ್ಲ.