ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 34

ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಿ

ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಿ

“ನಿಮ್ಮ ಈ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ ಮರೆಯುವುದಕ್ಕೆ ಆತನು ಅನೀತಿವಂತನಲ್ಲ.”—ಇಬ್ರಿ. 6:10.

ಗೀತೆ 60 ಆತನು ನಿನ್ನನ್ನು ಬಲಪಡಿಸುವನು

ಕಿರುನೋಟ *

1-3. ಯಾವೆಲ್ಲ ಕಾರಣಗಳಿಗಾಗಿ ಪೂರ್ಣ ಸಮಯದ ಸೇವಕರ ನೇಮಕದಲ್ಲಿ ಬದಲಾವಣೆ ಆಗಬಹುದು?

“ನಾವು ಮಿಷನರಿ ಸೇವೆ ಮಾಡ್ತಾ ಸಂತೋಷವಾಗಿ 21 ವರ್ಷಗಳನ್ನು ಕಳೆದ ನಂತರ ನಮ್ಮಿಬ್ಬರ ಹೆತ್ತವರಿಗೂ ಆರೋಗ್ಯ ಹಾಳಾಯ್ತು. ಅವರನ್ನು ನೋಡಿಕೊಳ್ಳೋಕೆ ನಮಗೇನೂ ಬೇಸರ ಇರಲಿಲ್ಲ. ಆದರೂ ನಮ್ಮೂರೇ ಆಗಿಬಿಟ್ಟಿದ್ದ ಆ ಸ್ಥಳ ಬಿಟ್ಟುಬರುವಾಗ ತುಂಬ ನೋವಾಯ್ತು” ಅನ್ನುತ್ತಾರೆ ರಾಬರ್ಟ್‌ ಮತ್ತು ಮೆರಿ ಜೋ.

2 “ನಮ್ಮ ಆರೋಗ್ಯ ಸಮಸ್ಯೆಯ ಕಾರಣ ನಮ್ಮ ನೇಮಕದಲ್ಲಿ ಮುಂದುವರಿಯಲು ಆಗಲ್ಲ ಅಂತ ಗೊತ್ತಾದಾಗ ನಾವು ಅತ್ತುಬಿಟ್ವಿ. ವಿದೇಶದಲ್ಲಿ ಸೇವೆ ಮಾಡುವ ನಮ್ಮ ನೇಮಕನ ತುಂಬ ಇಷ್ಟಪಡ್ತಿದ್ವಿ. ಆದ್ರೆ ಈಗ ಅದನ್ನ ಕಳಕೊಂಡುಬಿಟ್ವಿ” ಅನ್ನುತ್ತಾರೆ ವಿಲ್ಯಮ್‌ ಮತ್ತು ಟೆರ್ರಿ.

3 “ನಾನು ಸೇವೆ ಮಾಡುತ್ತಿದ್ದ ಶಾಖಾ ಕಛೇರಿಯನ್ನು ಸರಕಾರ ಮುಚ್ಚಬೇಕಂತಿದೆ ಅಂತ ಬೆತೆಲ್‌ನಲ್ಲಿದ್ದ ನಮಗೆಲ್ಲರಿಗೂ ಗೊತ್ತಿತ್ತು. ಆದರೂ ಅದನ್ನು ಮುಚ್ಚಿದಾಗ ನಮಗೆ ತುಂಬ ಆಘಾತ ಆಯ್ತು, ನಾವು ಅದನ್ನು ಬಿಟ್ಟು ಹೊರಗೆ ಬರಬೇಕಾಯಿತು” ಅನ್ನುತ್ತಾರೆ ಅಲ್ಯಿಕ್‌ಸೇ.

4. ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

4 ಇವರು ಮಾತ್ರ ಅಲ್ಲ, ಪೂರ್ಣ ಸಮಯ ಸೇವೆ ಮಾಡುವ ಮತ್ತು ಬೆತೆಲ್‌ನಲ್ಲಿ ಸೇವೆ ಮಾಡುವ ಅನೇಕರಿಗೆ ಬೇರೆ ನೇಮಕ ಸಿಕ್ಕಿದೆ. * ತಾವು ತುಂಬ ಇಷ್ಟಪಡುತ್ತಿದ್ದ ಆ ನೇಮಕಗಳನ್ನು ಬಿಟ್ಟು ಬರಲು ಅವರಿಗೆ ಕಷ್ಟ ಆಗಬಹುದು. ಈ ಬದಲಾವಣೆಗೆ ಹೊಂದಿಕೊಳ್ಳಲು ಅವರಿಗೆ ಯಾವುದು ಸಹಾಯ ಮಾಡುತ್ತದೆ? ಅವರಿಗೆ ನಾವು ಹೇಗೆ ಸಹಾಯ ಮಾಡಬಹುದು? ಈ ಪ್ರಶ್ನೆಗಳಿಗೆ ಉತ್ತರ ತಿಳಿದರೆ, ನಮ್ಮ ಜೀವನದಲ್ಲಿ ಬದಲಾವಣೆಗಳಾದಾಗ ಹೊಂದಿಕೊಳ್ಳಲು ಸಹಾಯವಾಗುತ್ತದೆ.

ಬದಲಾವಣೆಗೆ ಹೊಂದಿಕೊಳ್ಳುವುದು ಹೇಗೆ?

ಪೂರ್ಣ ಸಮಯ ಸೇವೆ ಮಾಡುತ್ತಿರುವವರಿಗೆ ತಮ್ಮ ನೇಮಕವನ್ನು ಬಿಡಬೇಕಾದಾಗ ಯಾಕೆ ಕಷ್ಟವಾಗುತ್ತದೆ? (ಪ್ಯಾರ 5 ನೋಡಿ) *

5. ನೇಮಕದಲ್ಲಿ ಬದಲಾವಣೆ ಆದಾಗ ಏನೆಲ್ಲಾ ಆಗಬಹುದು?

5 ನಾವು ಬೆತೆಲ್‌ನಲ್ಲಿಯಾಗಲಿ ಇನ್ನೇಲ್ಲೇ ಆಗಲಿ ಪೂರ್ಣ ಸಮಯ ಸೇವೆ ಮಾಡುವಾಗ ಆ ಸ್ಥಳದೊಂದಿಗೆ ಮತ್ತು ಅಲ್ಲಿನ ಜನರೊಂದಿಗೆ ನಮಗೆ ಬಲವಾದ ಬಂಧ ಬೆಳೆಯುತ್ತದೆ. ಆದ್ದರಿಂದ ಯಾವುದೋ ಕಾರಣಕ್ಕೆ ಅದನ್ನು ಬಿಟ್ಟುಬರಬೇಕಾದಾಗ ನಮ್ಮ ಹೃದಯ ಕಿತ್ತುಬಂದಂತಾಗುತ್ತದೆ. ಅಲ್ಲಿರುವವರನ್ನು ನಾವು ತುಂಬ ನೆನಪಿಸಿಕೊಳ್ಳುತ್ತೇವೆ ಮತ್ತು ಅವರು ಹೇಗಿದ್ದಾರೋ ಎಂದು ಯೋಚಿಸುತ್ತೇವೆ. ಒಂದುವೇಳೆ ಹಿಂಸೆಯಿಂದಾಗಿ ನೇಮಕ ಬಿಡಬೇಕಾಗಿ ಬಂದರೆ ಇಂಥ ಯೋಚನೆ ಇನ್ನೂ ಹೆಚ್ಚಿರುತ್ತದೆ. (ಮತ್ತಾ. 10:23; 2 ಕೊರಿಂ. 11:28, 29) ಅಷ್ಟೇ ಅಲ್ಲ, ಹೊಸ ನೇಮಕಕ್ಕೆ ಹೋದರೆ ಅಲ್ಲಿನ ಸಂಸ್ಕೃತಿಗೆ ಹೊಂದಿಕೊಳ್ಳುವುದು ಅಷ್ಟು ಸುಲಭ ಅಲ್ಲ. ಸ್ವಂತ ಊರಿಗೆ ವಾಪಸ್‌ ಹೋದರೂ ಹೀಗಾಗುವುದು ಸಹಜ. “ನಾವು ನಮ್ಮ ಸಂಸ್ಕೃತಿಯನ್ನು ಮತ್ತು ನಮ್ಮ ಭಾಷೆಯಲ್ಲಿ ಸಾರುವುದನ್ನು ಸಹ ಮರೆತು ಹೋಗಿದ್ವಿ. ನಾವು ಇಲ್ಲಿಯವರಲ್ಲವೇನೋ ಅಂತ ನಮಗನಿಸುತ್ತಿತ್ತು” ಅನ್ನುತ್ತಾರೆ ರಾಬರ್ಟ್‌ ಮತ್ತು ಮೆರಿ ಜೋ. ನೇಮಕ ಬದಲಾದ ಕೆಲವರಿಗೆ ಹಣಕಾಸಿನ ಸಮಸ್ಯೆ ಕೂಡ ಬರಬಹುದು. ‘ಯಾವಾಗ ಏನಾಗುತ್ತೋ’ ಅನ್ನುವ ಚಿಂತೆ, ಅಭದ್ರತೆ ಅವರಿಗೆ ಕಾಡಬಹುದು. ನಿರುತ್ಸಾಹನೂ ಆಗಬಹುದು. ಹೀಗಾಗದೇ ಇರಲು ಏನು ಮಾಡಬಹುದು?

ನಾವು ಯೆಹೋವನಿಗೆ ಆಪ್ತರಾಗುವುದು ಮತ್ತು ಆತನ ಮೇಲೆ ಭರವಸೆ ಇಡುವುದು ತುಂಬ ಮುಖ್ಯ (ಪ್ಯಾರ 6-7 ನೋಡಿ) *

6. ನಾವು ಯೆಹೋವನಿಗೆ ಹೇಗೆ ಆಪ್ತರಾಗಿರಬಹುದು?

6 ಯೆಹೋವನಿಗೆ ಆಪ್ತರಾಗಿರಿ. (ಯಾಕೋ. 4:8) ಹೇಗೆ ಆಪ್ತರಾಗಬಹುದು? ಆತನು ‘ಪ್ರಾರ್ಥನೆ ಕೇಳುತ್ತಾನೆ’ ಎಂದು ಭರವಸೆ ಇಡುವ ಮೂಲಕ. (ಕೀರ್ತ. 65:2) “ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ” ಅಂತ ಕೀರ್ತನೆ 62:8​ರಲ್ಲಿ ತಿಳಿಸಲಾಗಿದೆ. ಯೆಹೋವನು “ನಾವು ಬೇಡುವುದಕ್ಕಿಂತಲೂ ಗ್ರಹಿಸುವುದಕ್ಕಿಂತಲೂ ಎಷ್ಟೋ ಮಿಗಿಲಾದದ್ದನ್ನು ಅತ್ಯಧಿಕವಾಗಿ” ಮಾಡಬಲ್ಲನು. (ಎಫೆ. 3:20) ಆತನು ನಾವು ಪ್ರಾರ್ಥನೆಯಲ್ಲಿ ಏನನ್ನು ಕೇಳುತ್ತೇವೋ ಅದನ್ನು ಮಾತ್ರ ಕೊಟ್ಟು ಸುಮ್ಮನಿದ್ದುಬಿಡಲ್ಲ. ಅದಕ್ಕಿಂತಲೂ ಹೆಚ್ಚು ಕೊಡುತ್ತಾನೆ. ನಾವು ಕನಸು-ಮನಸಲ್ಲೂ ನೆನಸದೇ ಇರುವ ರೀತಿಯಲ್ಲಿ ಆತನು ನಮ್ಮ ಸಮಸ್ಯೆಗಳನ್ನು ಬಗೆಹರಿಸಬಹುದು.

7. (ಎ) ಯೆಹೋವನಿಗೆ ಆಪ್ತರಾಗಿ ಉಳಿಯಲು ನಮಗೆ ಯಾವುದು ಸಹಾಯ ಮಾಡುತ್ತದೆ? (ಬಿ) ಇಬ್ರಿಯ 6:10-12​ರ ಪ್ರಕಾರ ಯೆಹೋವನಿಗೆ ನಂಬಿಗಸ್ತರಾಗಿ ಸೇವೆ ಮಾಡುವುದನ್ನು ಮುಂದುವರಿಸಿದರೆ ಯೆಹೋವನು ಏನು ಮಾಡುತ್ತಾನೆ?

7 ಯೆಹೋವನಿಗೆ ಆಪ್ತರಾಗಿ ಉಳಿಯಲು ಪ್ರತಿದಿನ ಬೈಬಲ್‌ ಓದಿ ಮತ್ತು ಅದರ ಬಗ್ಗೆ ಧ್ಯಾನಿಸಿ. ಹಿಂದೆ ಮಿಷನರಿ ಆಗಿದ್ದ ಒಬ್ಬ ಸಹೋದರ ಹೀಗೆ ಹೇಳುತ್ತಾರೆ: “ನೀವು ಹಿಂದಿನ ನೇಮಕದಲ್ಲಿದ್ದಾಗ ಮಾಡುತ್ತಿದ್ದಂತೆಯೇ ಈಗಲೂ ತಪ್ಪದೇ ಕುಟುಂಬ ಆರಾಧನೆ ಮಾಡಿ, ಕೂಟಗಳಿಗೆ ತಯಾರಿಸಿ.” ಅಷ್ಟೇ ಅಲ್ಲ, ಹೊಸ ಸಭೆಯವರೊಂದಿಗೆ ಸೇರಿ ನಿಮ್ಮಿಂದಾಗುವಷ್ಟು ಹೆಚ್ಚು ಸೇವೆ ಮಾಡಿ. ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಾ ಇರುವವರನ್ನು ಯೆಹೋವನು ನೆನಪಿಡುತ್ತಾನೆ. ಮುಂಚಿನಷ್ಟು ಸೇವೆ ಮಾಡಲು ಆಗದಿದ್ದರೂ ಆತನು ಅವರನ್ನು ಮರೆಯಲ್ಲ.—ಇಬ್ರಿಯ 6:10-12 ಓದಿ.

8. ಒಂದನೇ ಯೋಹಾನ 2:15-17​ರಲ್ಲಿ ಹೇಳಿರುವ ಮಾತು ಸರಳ ಜೀವನ ಮಾಡಲು ಹೇಗೆ ಸಹಾಯ ಮಾಡುತ್ತದೆ?

8 ಸರಳ ಜೀವನ ನಡೆಸಿ. ಸೈತಾನನ ಈ ಲೋಕದಿಂದ ಬರುವ ಚಿಂತೆಗಳು ನಿಮ್ಮನ್ನು ಅದುಮಿಬಿಡಲು ಮತ್ತು ಯೆಹೋವನ ಸೇವೆಗೆ ತಡೆಯಾಗಲು ಬಿಡಬೇಡಿ. (ಮತ್ತಾ. 13:22) ಈ ಲೋಕ ಮತ್ತು ನಿಮ್ಮ ಒಳ್ಳೇದನ್ನೇ ಬಯಸುವ ಸ್ನೇಹಿತರು, ಸಂಬಂಧಿಕರು ಹಣ-ಆಸ್ತಿ ಮಾಡಿಕೊಂಡು ಚೆನ್ನಾಗಿರುವಂತೆ ನಿಮಗೆ ಒತ್ತಡ ಹಾಕಬಹುದು. ಆದರೆ ಅದರ ಹಿಂದೆ ಹೋಗಬೇಡಿ. (1 ಯೋಹಾನ 2:15-17 ಓದಿ.) ಯೆಹೋವನಲ್ಲಿ ಭರವಸೆ ಇಡಿ. ಆತನು ನಮಗೆ ಅಗತ್ಯವಿರುವುದನ್ನೆಲ್ಲಾ ಸರಿಯಾದ ಸಮಯದಲ್ಲಿ ಪೂರೈಸುತ್ತೇನೆ ಎಂದು ಮಾತುಕೊಟ್ಟಿದ್ದಾನೆ. ಆತನು ನಮ್ಮ ನಂಬಿಕೆ ಬಲವಾಗಿಡಲು, ಮನಸ್ಸು ಪ್ರಶಾಂತವಾಗಿರಲು ಸಹಾಯ ಮಾಡುತ್ತಾನೆ ಮತ್ತು ನಮಗೆ ಅಗತ್ಯವಿರುವ ವಸ್ತುಗಳನ್ನೂ ಒದಗಿಸುತ್ತಾನೆ.—ಇಬ್ರಿ. 4:16; 13:5, 6.

9. (ಎ) ಜ್ಞಾನೋಕ್ತಿ 22:3, 7​ರ ಪ್ರಕಾರ ಬೇಡದಿರೋದಕ್ಕೆಲ್ಲಾ ಸಾಲಮಾಡಬಾರದು ಯಾಕೆ? (ಬಿ) ವಿವೇಕದ ನಿರ್ಣಯಗಳನ್ನು ಮಾಡಲು ನಮಗೆ ಯಾವುದು ಸಹಾಯ ಮಾಡುತ್ತದೆ?

9 ಬೇಡದಿರೋದಕ್ಕೆಲ್ಲಾ ಸಾಲ ಮಾಡಬೇಡಿ. (ಜ್ಞಾನೋಕ್ತಿ 22:3, 7 ಓದಿ.) ಸ್ಥಳಾಂತರಿಸುವುದು ಅಷ್ಟು ಸುಲಭ ಅಲ್ಲ, ತುಂಬ ಖರ್ಚಿರುತ್ತದೆ. ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಅನ್ನುವ ಮಾತಿನಂತೆ ನಡಕೊಂಡರೆ ನಿಮಗೆ ಅಷ್ಟೇನು ಅಗತ್ಯವಿಲ್ಲದಿರುವ ವಸ್ತುಗಳು ತಗೊಂಡು ಸಾಲದಲ್ಲಿ ಮುಳುಗಿ ಹೋಗಬಹುದು. ಕಾಯಿಲೆ ಬಿದ್ದಿರುವ ನಿಮ್ಮ ಕುಟುಂಬದವರನ್ನು ನೋಡಿಕೊಳ್ಳುತ್ತಿರುವಾಗ ಅಥವಾ ಬೇರೆ ಕೆಲವು ಸನ್ನಿವೇಶಗಳಲ್ಲಿ ಸಾಲ ಮಾಡಲೇಬೇಕಾಗಿ ಬರಬಹುದು. ಅಂಥ ಸಂದರ್ಭದಲ್ಲಿ ಮನಸ್ಸಿನ ಮೇಲೆ ತುಂಬ ಒತ್ತಡ ಇದ್ದರೆ ಎಷ್ಟು ಸಾಲ ಮಾಡಬಹುದು ಎಂದು ನಿರ್ಧರಿಸಲು ಕಷ್ಟವಾಗಬಹುದು. ಆಗ ಸರಿಯಾದ ನಿರ್ಣಯ ಮಾಡಲು “ಪ್ರಾರ್ಥನೆ ಮತ್ತು ಯಾಚನೆ” ಸಹಾಯ ಮಾಡುತ್ತದೆ ಅನ್ನುವುದನ್ನು ನೆನಪಲ್ಲಿಡಿ. ನಿಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿ ಯೆಹೋವನು ಮನಶ್ಶಾಂತಿ ಮತ್ತು ಸಮಾಧಾನ ಕೊಟ್ಟು “ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ” ಕಾಯುತ್ತಾನೆ. ಇದರಿಂದ ಒತ್ತಡ ಇಲ್ಲದೆ ಆರಾಮಾಗಿ ಯೋಚಿಸಲು ಸಹಾಯವಾಗುತ್ತದೆ.—ಫಿಲಿ. 4:6, 7; 1 ಪೇತ್ರ 5:7.

10. ನಾವು ಹೇಗೆ ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದು?

10 ಒಳ್ಳೇ ಸ್ನೇಹಿತರನ್ನು ಮಾಡಿಕೊಂಡು, ಅವರಿಗೆ ಆಪ್ತರಾಗಿರಿ. ನಿಮಗೆ ಹೇಗನಿಸುತ್ತಿದೆ ಮತ್ತು ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಿದ್ದೀರಿ ಅಂತ ನಿಮಗೆ ತುಂಬ ಆಪ್ತರಾಗಿರುವ ಸ್ನೇಹಿತರ ಹತ್ತಿರ ಹೇಳಿ. ಅದರಲ್ಲೂ ನಿಮ್ಮಂಥ ಸನ್ನಿವೇಶವನ್ನು ಎದುರಿಸಿದವರ ಹತ್ತಿರ ಹೇಳಿಕೊಳ್ಳಿ. ಇದರಿಂದ ನಿಮಗೆ ಸ್ವಲ್ಪ ಸಮಾಧಾನ ಆಗಬಹುದು. (ಪ್ರಸಂ. 4:9, 10) ಹಿಂದಿನ ನೇಮಕದಲ್ಲಿದ್ದಾಗ ಇದ್ದ ಸ್ನೇಹಿತರು ಈಗಲೂ ಸ್ನೇಹಿತರಾಗಿರುತ್ತಾರೆ. ಆದರೂ ಈಗ ನೀವಿರುವ ಸ್ಥಳದಲ್ಲಿ ಸಹ ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ. ಯಾರಾದರೂ ನಿಮಗೆ ಸ್ನೇಹಿತರಾಗಬೇಕೆಂದರೆ ನೀವು ಅವರ ಜೊತೆ ಸ್ನೇಹದಿಂದ ನಡಕೊಳ್ಳಬೇಕು ಅನ್ನೋದನ್ನು ಮರೆಯಬೇಡಿ. ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಹೇಗೆ? ಯೆಹೋವನ ಸೇವೆಯಲ್ಲಿ ನಿಮಗೆ ಸಿಕ್ಕಿದ ಒಳ್ಳೇ ಅನುಭವಗಳನ್ನು ಹೇಳಿ. ಆಗ ಬೇರೆಯವರು ಯೆಹೋವನ ಸೇವೆಯಲ್ಲಿ ಎಷ್ಟು ಸಂತೋಷ ಸಿಗುತ್ತದೆ ಎಂದು ತಿಳುಕೊಳ್ಳುತ್ತಾರೆ. ಪೂರ್ಣ ಸಮಯದ ಸೇವೆಯನ್ನು ನೀವು ಯಾಕಷ್ಟು ಇಷ್ಟಪಡುತ್ತೀರೆಂದು ಸಭೆಯಲ್ಲಿರುವ ಕೆಲವರಿಗೆ ಅರ್ಥ ಆಗದಿರಬಹುದು. ಆದರೆ ಬೇರೆ ಕೆಲವರಾದರೂ ಅದರ ಬಗ್ಗೆ ತಿಳುಕೊಳ್ಳಲು ಇಷ್ಟಪಡುತ್ತಾರೆ ಮತ್ತು ನಿಮಗೆ ಒಳ್ಳೇ ಸ್ನೇಹಿತರಾಗುತ್ತಾರೆ. ಹಾಗಂತ ನಿಮ್ಮ ಬಗ್ಗೆ ಮತ್ತು ನೀವು ಮಾಡಿದ ಸೇವೆಯ ಬಗ್ಗೆಯೇ ಹೆಚ್ಚು ಹೇಳಿಕೊಳ್ಳಬೇಡಿ. ನಿಮಗಾದ ಬೇಜಾರಿನ ಬಗ್ಗೆನೂ ಹೇಳುತ್ತಾ ಇರಬೇಡಿ.

11. ನಿಮ್ಮ ವಿವಾಹ ಜೀವನ ಚೆನ್ನಾಗಿರಲು ನೀವೇನು ಮಾಡಬಹುದು?

11 ಸಂಗಾತಿಯ ಆರೋಗ್ಯ ಸಮಸ್ಯೆಯಿಂದಾಗಿ ನಿಮ್ಮ ನೇಮಕವನ್ನು ಬಿಡಬೇಕಾಗಿ ಬಂದಿದ್ದರೆ ಅವರನ್ನು ದೂರಬೇಡಿ. ಅಥವಾ ನಿಮ್ಮ ಆರೋಗ್ಯ ಸಮಸ್ಯೆಯಿಂದಾಗಿ ನೇಮಕ ಬಿಡಬೇಕಾಗಿ ಬಂದಿದ್ದರೆ ನಿಮ್ಮಿಂದಾಗಿ ನಿಮ್ಮ ಸಂಗಾತಿಯ ಪೂರ್ಣ ಸಮಯದ ಸೇವೆ ನಿಂತು ಹೋಯಿತಲ್ಲಾ ಅಂತ ಯೋಚಿಸಬೇಡಿ. ನೀವಿಬ್ಬರೂ “ಒಂದೇ ಶರೀರ” ಅನ್ನುವುದನ್ನು ನೆನಪಲ್ಲಿಡಿ. ಏನೇ ಆದರೂ ಕೊನೆವರೆಗೂ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತೇವೆ ಅಂತ ಯೆಹೋವನ ಮುಂದೆ ಮಾತುಕೊಟ್ಟಿದ್ದೀರಿ ಅನ್ನುವುದನ್ನೂ ಮರೆಯಬೇಡಿ. (ಮತ್ತಾ. 19:5, 6) ಕೆಲವೊಮ್ಮೆ ಮಕ್ಕಳು ಬೇಡ ಅಂತಿದ್ದರೂ ಮಗುವಾಗುವುದರಿಂದ ನೇಮಕ ಬಿಡಬೇಕಾಗಿ ಬರಬಹುದು. ಆಗ, ನೇಮಕಕ್ಕಿಂತ ಮಗು ನಿಮಗೆ ಮುಖ್ಯ ಅನ್ನುವುದನ್ನು ನಿಮ್ಮ ಮಗುವಿಗೆ ತೋರಿಸಿಕೊಡಿ. ನಿಮ್ಮ ಮಗು ನಿಮಗೆ ಯೆಹೋವನಿಂದ ಸಿಕ್ಕಿದ “ಬಹುಮಾನ” ಅಂತ ಆಗಾಗ ಮಗುವಿಗೆ ಹೇಳುತ್ತಾ ಇರಿ. (ಕೀರ್ತ. 127:3-5) ಜೊತೆಗೆ, ನಿಮ್ಮ ನೇಮಕದಲ್ಲಿ ಸಿಕ್ಕಿದ ಒಳ್ಳೇ ಅನುಭವಗಳ ಬಗ್ಗೆ ಮಗುವಿಗೆ ತಿಳಿಸಿ. ಇದರಿಂದ ನಿಮ್ಮಂತೆಯೇ ನಿಮ್ಮ ಮಗುವಿಗೆ ತನ್ನ ಜೀವನವನ್ನು ಯೆಹೋವನ ಸೇವೆಯಲ್ಲಿ ಕಳೆಯಲು ಉತ್ತೇಜನ ಸಿಗುತ್ತದೆ.

ಬೇರೆಯವರು ಹೇಗೆ ಸಹಾಯ ಮಾಡಬಹುದು?

12. (ಎ) ಪೂರ್ಣ ಸಮಯ ಸೇವೆ ಮಾಡುತ್ತಿರುವವರು ಅದನ್ನು ಮುಂದುವರಿಸಲು ನೀವು ಹೇಗೆ ಸಹಾಯ ಮಾಡಬಹುದು? (ಬಿ) ಬದಲಾವಣೆಗೆ ಹೊಂದಿಕೊಳ್ಳಲು ನೀವು ಅವರಿಗೆ ಹೇಗೆ ಸಹಾಯ ಮಾಡಬಹುದು?

12 ಪೂರ್ಣ ಸಮಯ ಸೇವೆ ಮಾಡುತ್ತಿರುವವರು ಆ ಸೇವೆಯಲ್ಲೇ ಮುಂದುವರಿಯಲು ಅನೇಕ ಸಭೆಗಳು ಮತ್ತು ಸಹೋದರ-ಸಹೋದರಿಯರು ಕೆಲವು ಸಹಾಯಗಳನ್ನು ಮಾಡುತ್ತಾರೆ. ಪೂರ್ಣ ಸಮಯ ಸೇವೆಯಲ್ಲೇ ಮುಂದುವರಿಯುವಂತೆ ಅವರನ್ನು ಉತ್ತೇಜಿಸುತ್ತಾರೆ, ಹಣಕಾಸಿನ ಅಥವಾ ಅಗತ್ಯವಿರುವ ಬೇರೆ ಸಹಾಯ ಮಾಡುತ್ತಾರೆ. ದೂರದ ಊರಿನಲ್ಲಿ ಪೂರ್ಣ ಸಮಯ ಸೇವೆ ಮಾಡುತ್ತಿರುವವರ ಕುಟುಂಬದವರು ತಮ್ಮ ಸಭೆಯಲ್ಲಿದ್ದರೆ ಅವರಿಗೆ ಬೇಕಾದ ಸಹಾಯ ಮಾಡುತ್ತಾರೆ. (ಗಲಾ. 6:2) ನೇಮಕ ಬದಲಾಗಿ ಯಾರಾದರೂ ನಿಮ್ಮ ಸಭೆಗೆ ಬಂದಿದ್ದರೆ ಅವರೇನೋ ತಪ್ಪು ಮಾಡಿದ್ದರಿಂದ ನೇಮಕ ಬದಲಾಗಿದೆ ಅಂತ ನೆನಸಬೇಡಿ. * ಈ ಬದಲಾವಣೆಗೆ ಹೊಂದಿಕೊಳ್ಳಲು ಅವರಿಗೆ ನಿಮ್ಮಿಂದಾಗುವ ಸಹಾಯ ಮಾಡಿ. ಅವರನ್ನು ಪ್ರೀತಿಯಿಂದ ಸ್ವಾಗತಿಸಿ ಮತ್ತು ಅವರು ಮಾಡಿದ ಸೇವೆಯ ಬಗ್ಗೆ ಹೇಳಿ ಶ್ಲಾಘಿಸಿ. ಆರೋಗ್ಯ ಸಮಸ್ಯೆಯಿಂದಾಗಿ ಅವರಿಂದ ಈಗ ಹೆಚ್ಚು ಮಾಡಲು ಆಗದಿದ್ದರೂ ಅವರನ್ನು ಮೆಚ್ಚಿಕೊಳ್ಳಿ. ಅವರಿಗೆ ಆಪ್ತರಾಗಲು ಪ್ರಯತ್ನಿಸಿ. ಅವರ ಜ್ಞಾನ, ಅವರಿಗೆ ಸಿಕ್ಕಿದ ತರಬೇತಿ ಮತ್ತು ಅನುಭವದಿಂದ ಕಲಿಯಿರಿ.

13. ನೇಮಕದಲ್ಲಿ ಬದಲಾವಣೆ ಆಗಿರುವವರಿಗೆ ನಾವು ಹೇಗೆ ಸಹಾಯ ಮಾಡಬಹುದು?

13 ಹೊಸ ನೇಮಕ ಪಡೆದವರಿಗೆ ಮನೆ ಹುಡುಕಲು, ಕೆಲಸ ಹುಡುಕಲು, ಸ್ಥಳಾಂತರಿಸಲು ಮತ್ತು ಇತರ ವಿಷಯಗಳನ್ನು ಮಾಡಲು ಸಹಾಯ ಬೇಕಿರುತ್ತದೆ. ಅಷ್ಟೇ ಅಲ್ಲ, ಬಿಲ್‌ ಅಥವಾ ತೆರಿಗೆ ಕಟ್ಟುವುದು ಮುಂತಾದ ಕೆಲಸಗಳನ್ನು ಸಹ ಹೇಗೆ ಮಾಡುವುದೆಂದು ಹೇಳಿಕೊಡಬೇಕಾಗುತ್ತದೆ. ನಾವು ಅವರನ್ನು ನೋಡಿ ‘ಅಯ್ಯೋ ಪಾಪ’ ಅಂದುಕೊಳ್ಳುವುದಕ್ಕಿಂತ ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅವರಿಗೆ ತಮ್ಮ ಆರೋಗ್ಯ ಅಥವಾ ತಮ್ಮ ಕುಟುಂಬದವರ ಆರೋಗ್ಯ ಸಮಸ್ಯೆಯಿಂದಾಗಿ ಕಷ್ಟವಾಗುತ್ತಿರಬಹುದು. ಅಥವಾ ಅವರ ಪ್ರಿಯರ ಸಾವಿನ ನೋವಿನಲ್ಲಿರಬಹುದು. * ಅವರು ಏನೂ ಹೇಳಿಕೊಳ್ಳದೇ ಇದ್ದರೂ ಒಬ್ಬರೇ ಇದ್ದಾಗ ಅವರಿಗೆ ತಮ್ಮ ಹಿಂದಿನ ನೇಮಕದಲ್ಲಿ ತಮ್ಮ ಜೊತೆಯಿದ್ದವರ ನೆನಪು ಕಾಡುತ್ತಿರಬಹುದು. ಇಂಥ ನೋವು ಮತ್ತು ಭಾವನಾತ್ಮಕ ಏರುಪೇರುಗಳಿಂದ ಹೊರಬರಲು ಸಮಯ ಹಿಡಿಯುತ್ತದೆ.

14. ಸಹೋದರಿಯೊಬ್ಬಳು ತನ್ನ ಹೊಸ ನೇಮಕಕ್ಕೆ ಹೊಂದಿಕೊಳ್ಳಲು ಸ್ಥಳೀಯ ಪ್ರಚಾರಕರು ಹೇಗೆ ಸಹಾಯ ಮಾಡಿದರು?

14 ನೀವು ಅವರ ಜೊತೆಯಲ್ಲಿ ಸೇವೆಗೆ ಹೋದರೆ ಮತ್ತು ನಿಮ್ಮ ಮಾದರಿಯ ಮೂಲಕ ಉತ್ತೇಜಿಸಿದರೆ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಅವರಿಗೆ ಸಹಾಯವಾಗುತ್ತದೆ. ಅನೇಕ ವರ್ಷಗಳ ವರೆಗೆ ಬೇರೆ ದೇಶದಲ್ಲಿ ಸೇವೆ ಮಾಡಿದ ಒಬ್ಬ ಸಹೋದರಿ ಹೀಗೆ ಹೇಳುತ್ತಾಳೆ: “ಹಿಂದಿನ ನೇಮಕದಲ್ಲಿ ನಾನು ತುಂಬ ಜನರಿಗೆ ಬೈಬಲ್‌ ಕಲಿಸುತ್ತಿದ್ದೆ. ಹೆಚ್ಚುಕಡಿಮೆ ಪ್ರತಿದಿನ ಕಲಿಸುತ್ತಿದ್ದೆ. ಈಗಿನ ಹೊಸ ನೇಮಕದಲ್ಲಿ ಸೇವೆಗೆ ಹೋದಾಗ ಬೈಬಲ್‌ ಅಥವಾ ವಿಡಿಯೋ ತೋರಿಸುವ ಅವಕಾಶ ಸಿಗುವುದೇ ಕಡಿಮೆ. ಆದರೆ ಸ್ಥಳೀಯ ಪ್ರಚಾರಕರು ತಮ್ಮ ಪುನರ್ಭೇಟಿ ಮತ್ತು ಅಧ್ಯಯನಗಳಿಗೆ ನನ್ನನ್ನು ಕರಕೊಂಡು ಹೋದರು. ಅವರು ಹುರುಪಿನಿಂದ, ಧೈರ್ಯದಿಂದ ಬೈಬಲ್‌ ಕಲಿಸುವುದನ್ನು ನೋಡುವಾಗ ಹೊಸ ಸೇವಾ ಕ್ಷೇತ್ರದ ಬಗ್ಗೆ ಒಳ್ಳೇ ರೀತಿ ಯೋಚಿಸಲು ಸಾಧ್ಯವಾಯಿತು. ನಾನು ಈ ಹೊಸ ಟೆರಿಟೊರಿಯಲ್ಲಿ ಹೇಗೆ ಸಂಭಾಷಣೆ ಆರಂಭಿಸಬೇಕಂತ ಕಲಿತೆ. ಇದೆಲ್ಲದರಿಂದ ನನಗೆ ಮತ್ತೆ ಸಂತೋಷ ಸಿಕ್ಕಿತು.”

ನಿಮ್ಮಿಂದಾಗುವುದೆಲ್ಲ ಮಾಡುತ್ತಾ ಇರಿ

ನೀವಿರುವ ಸಭೆಯ ಟೆರಿಟೊರಿಯಲ್ಲೇ ಹೇಗೆಲ್ಲಾ ಸೇವೆಯನ್ನು ಹೆಚ್ಚಿಸಬಹುದು ಎಂದು ನೋಡಿ (ಪ್ಯಾರ 15-16 ನೋಡಿ) *

15. ಹೊಸ ನೇಮಕದಲ್ಲೂ ಒಳ್ಳೇ ಪ್ರತಿಫಲ ಸಿಗಬೇಕೆಂದರೆ ಏನು ಮಾಡಬೇಕು?

15 ಹೊಸ ನೇಮಕದಲ್ಲೂ ನೀವು ಒಳ್ಳೇ ಪ್ರತಿಫಲ ಪಡೆಯಲು ಸಾಧ್ಯ. ನೇಮಕ ಬದಲಾದರೆ, ನೀವೇನೋ ತಪ್ಪು ಮಾಡಿದ್ದೀರಿ ಅಥವಾ ನಿಮಗೇನೂ ಬೆಲೆ ಇಲ್ಲ ಅಂತ ಎಣಿಸಬೇಡಿ. ಯೆಹೋವನು ಈಗಲೂ ನಿಮಗೆ ಹೇಗೆಲ್ಲಾ ಸಹಾಯ ಮಾಡುತ್ತಿದ್ದಾನೆಂದು ಯೋಚಿಸಿ. ಸಾರುವುದನ್ನು ಬಿಡಬೇಡಿ. ಒಂದನೇ ಶತಮಾನದಲ್ಲಿದ್ದ ನಂಬಿಗಸ್ತ ಕ್ರೈಸ್ತರ ಮಾದರಿಯನ್ನು ಅನುಕರಿಸಿ. ಅವರಲ್ಲಿ “ಚೆದರಿಹೋದವರು ದೇಶದಾದ್ಯಂತ ದೇವರ ವಾಕ್ಯದ ಸುವಾರ್ತೆಯನ್ನು ಸಾರುತ್ತಾ ಹೋದರು.” (ಅ. ಕಾ. 8:1, 4) ನೀವು ಬಿಡದೆ ಸಾರುತ್ತಿದ್ದರೆ ನಿಮಗೆ ಒಳ್ಳೇ ಪ್ರತಿಫಲ ಸಿಗಬಹುದು. ಕೆಲವು ಪಯನೀಯರರನ್ನು ಒಂದು ದೇಶದಿಂದ ಹೊರಹಾಕಲಾದಾಗ ಅವರೇನು ಮಾಡಿದರೆಂದು ನೋಡಿ. ಅವರು ತಮ್ಮ ಭಾಷೆಯ ಪ್ರಚಾರಕರ ಅಗತ್ಯವಿರುವ ಪಕ್ಕದ ದೇಶಕ್ಕೆ ಹೋಗಿ ಸಾರಿದರು. ಕೆಲವೇ ತಿಂಗಳುಗಳಲ್ಲಿ ಅಲ್ಲಿ ಆ ಭಾಷೆಯ ಹೊಸ ಗುಂಪುಗಳು ಶುರುವಾಗಿ ಪ್ರಗತಿಯಾಗುತ್ತಾ ಹೋಯಿತು.

16. ಹೊಸ ನೇಮಕದಲ್ಲೂ ಸಂತೋಷ ಪಡೆಯಲು ಏನು ಮಾಡಬೇಕು?

16 “ಯೆಹೋವನ ಆನಂದವೇ ನಿಮ್ಮ ಆಶ್ರಯ” ಅಥವಾ ಬಲ. (ನೆಹೆ. 8:10) ನಮ್ಮ ಸಂತೋಷ ಮುಖ್ಯವಾಗಿ ಯೆಹೋವನ ಜೊತೆ ನಮಗಿರುವ ಸಂಬಂಧದ ಮೇಲೆ ಹೊಂದಿಕೊಂಡಿರಬೇಕು. ನಮ್ಮ ನೇಮಕದ ಮೇಲಲ್ಲ. ಅದೆಷ್ಟೇ ಇಷ್ಟವಾಗಿದ್ದರೂ ಸರಿನೇ. ಆದ್ದರಿಂದ ಯೆಹೋವನಿಗೆ ಯಾವಾಗಲೂ ಆಪ್ತರಾಗಿರಿ. ವಿವೇಕ, ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಿ. ನೀವು ಜನರಿಗೆ ಸಹಾಯ ಮಾಡುವುದರ ಮೇಲೆ ಮನಸ್ಸಿಟ್ಟಿದ್ದರಿಂದ ನಿಮಗೆ ನಿಮ್ಮ ಹಿಂದಿನ ನೇಮಕ ಇಷ್ಟವಾಗಿರುತ್ತದೆ ಅನ್ನುವುದನ್ನು ನೆನಪಿನಲ್ಲಿಡಿ. ಅದರಂತೆಯೇ, ಈಗಿನ ನೇಮಕವನ್ನೂ ಪೂರ್ತಿ ಮನಸ್ಸಿಟ್ಟು ಮಾಡಿ. ಹೀಗೆ ಮಾಡಿದರೆ ಈ ನೇಮಕವನ್ನೂ ಪ್ರೀತಿಸಲು ಯೆಹೋವನು ನಿಮಗೆ ಖಂಡಿತ ಸಹಾಯ ಮಾಡುತ್ತಾನೆ.—ಪ್ರಸಂ. 7:10.

17. ನಮ್ಮ ನೇಮಕದ ಬಗ್ಗೆ ನಾವೇನನ್ನು ನೆನಪಲ್ಲಿಡಬೇಕು?

17 ಯೆಹೋವನ ಸೇವೆ ಶಾಶ್ವತ, ನಮ್ಮ ನೇಮಕ ಅಲ್ಲ ಅನ್ನುವುದನ್ನು ನೆನಪಲ್ಲಿಡಿ. ಹೊಸ ಲೋಕದಲ್ಲಿ ನಮ್ಮೆಲ್ಲರ ನೇಮಕ ಬದಲಾಗಬಹುದು. ಈಗ ತನ್ನ ನೇಮಕದಲ್ಲಾದ ಬದಲಾವಣೆಯು ಭವಿಷ್ಯದಲ್ಲಾಗುವ ಬದಲಾವಣೆಗಳಿಗೆ ಹೊಂದಿಕೊಳ್ಳುವಂತೆ ತನ್ನನ್ನು ಸಿದ್ಧಗೊಳಿಸುತ್ತಿದೆ ಎಂದು ಈ ಲೇಖನದ ಆರಂಭದಲ್ಲಿ ತಿಳಿಸಲಾದ ಅಲ್ಯಿಕ್‌ಸೇ ಹೇಳುತ್ತಾರೆ. “ಯೆಹೋವನು ನಿಜವಾಗಿಯೂ ಇದ್ದಾನೆ ಮತ್ತು ಹೊಸ ಲೋಕ ಬಂದೇ ಬರುತ್ತದೆ ಎಂದು ನನಗೆ ಗೊತ್ತಿತ್ತು. . . . ಆದರೆ ಈಗ ಯೆಹೋವನು ನನ್ನ ಕಣ್ಣೆದುರೇ ಇದ್ದಾನೆ ಮತ್ತು ಹೊಸ ಲೋಕ ತುಂಬ ಹತ್ತಿರದಲ್ಲಿದೆ ಅಂತ ಅನಿಸುತ್ತೆ” ಎಂದವರು ಹೇಳುತ್ತಾರೆ. (ಅ. ಕಾ. 2:25) ನಮಗೆ ಯಾವುದೇ ನೇಮಕವಿದ್ದರೂ ಯೆಹೋವನಿಗೆ ಹತ್ತಿರವಾಗಿರೋಣ. ಆತನು ಯಾವತ್ತೂ ನಮ್ಮ ಕೈಬಿಡಲ್ಲ. ಆತನ ಸೇವೆ ಎಲ್ಲೇ ಮಾಡುತ್ತಿದ್ದರೂ ನಮ್ಮಿಂದಾದಷ್ಟು ಪೂರ್ತಿಯಾಗಿ ಮಾಡೋಣ. ಆಗ ಆತನು ನಾವು ಸಂತೋಷ ಪಡಕೊಳ್ಳಲು ಸಹಾಯ ಮಾಡುತ್ತಾನೆ.—ಯೆಶಾ. 41:13.

ಗೀತೆ 121 ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ

^ ಪ್ಯಾರ. 5 ಕೆಲವೊಮ್ಮೆ ಸಹೋದರ-ಸಹೋದರಿಯರು ಪೂರ್ಣ ಸಮಯದ ತಮ್ಮ ನೇಮಕವನ್ನು ನಿಲ್ಲಿಸಬೇಕಾಗಿ ಬರಬಹುದು ಅಥವಾ ಅವರ ನೇಮಕ ಬದಲಾಗಬಹುದು. ಆಗ ಅವರಿಗೆ ಯಾವ ಸವಾಲುಗಳು ಎದುರಾಗುತ್ತವೆ, ಅವರು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಯಾವುದು ಸಹಾಯ ಮಾಡುತ್ತೆ ಮತ್ತು ಅವರಿಗೆ ಬೇರೆಯವರು ಹೇಗೆ ಪ್ರೋತ್ಸಾಹ-ಸಹಾಯ ನೀಡಬಹುದು ಅನ್ನುವುದರ ಬಗ್ಗೆ ಈ ಲೇಖನದಲ್ಲಿ ಕಲಿಯಲಿದ್ದೇವೆ. ಜೊತೆಗೆ, ನಮ್ಮ ಜೀವನದಲ್ಲಿ ಪರಿಸ್ಥಿತಿ ಬದಲಾಗುವಾಗ ಬೈಬಲ್‌ ತತ್ವಗಳು ಹೇಗೆ ಸಹಾಯ ಮಾಡುತ್ತವೆ ಎಂದು ಸಹ ಕಲಿಯಲಿದ್ದೇವೆ.

^ ಪ್ಯಾರ. 4 ಜವಾಬ್ದಾರಿಯ ಸ್ಥಾನದಲ್ಲಿರುವ ಅನೇಕ ಸಹೋದರರು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದಾಗ ತಮ್ಮ ಜವಾಬ್ದಾರಿಗಳನ್ನು ಚಿಕ್ಕ ವಯಸ್ಸಿನ ಸಹೋದರರಿಗೆ ಬಿಟ್ಟುಕೊಡುತ್ತಾರೆ. 2018​ರ ಸೆಪ್ಟೆಂಬರ್‌ ತಿಂಗಳ ಕಾವಲಿನಬುರುಜುವಿನ “ವೃದ್ಧ ಕ್ರೈಸ್ತರೇ, ನಿಮ್ಮ ನಿಷ್ಠೆ ಯೆಹೋವನಿಗೆ ತುಂಬ ಇಷ್ಟ” ಎಂಬ ಲೇಖನ ಮತ್ತು 2018​ರ ಅಕ್ಟೋಬರ್‌ ತಿಂಗಳ ಕಾವಲಿನಬುರುಜುವಿನ “ಸನ್ನಿವೇಶ ಬದಲಾದರೂ ಸಮಾಧಾನವಾಗಿರಿ” ಎಂಬ ಲೇಖನ ನೋಡಿ.

^ ಪ್ಯಾರ. 12 ಅವರು ಹಿಂದೆ ಸೇವೆ ಮಾಡುತ್ತಿದ್ದ ಸಭೆಯ ಹಿರಿಯರು ಆದಷ್ಟು ಬೇಗನೆ ಅವರ ಬಗ್ಗೆ ಪರಿಚಯ ಪತ್ರ ಬರೆದು ಕಳುಹಿಸಬೇಕು. ಆಗ ಅವರು ಪಯನೀಯರರಾಗಿ, ಹಿರಿಯರಾಗಿ ಅಥವಾ ಸಹಾಯಕ ಸೇವಕರಾಗಿ ಮಾಡುತ್ತಿದ್ದ ಸೇವೆಯನ್ನು ಹೋದ ಕಡೆನೂ ಬೇಗನೆ ಶುರುಮಾಡಲು ಸಾಧ್ಯವಾಗುತ್ತದೆ.

^ ಪ್ಯಾರ. 13 2018​ರ ಎಚ್ಚರ! ನಂ. 3​ರಲ್ಲಿರುವ “ಸಾವಿನ ನೋವಿನಲ್ಲಿ ಇರುವವರಿಗೆ ಸಹಾಯ” ಎಂಬ ಸರಣಿ ಲೇಖನಗಳನ್ನು ನೋಡಿ.

^ ಪ್ಯಾರ. 57 ಚಿತ್ರ ವಿವರಣೆ: ಬೇರೆ ದೇಶದಲ್ಲಿ ಸೇವೆ ಮಾಡುತ್ತಿದ್ದ ಒಬ್ಬ ಮಿಷನರಿ ದಂಪತಿ ತಮ್ಮ ನೇಮಕವನ್ನು ಬಿಟ್ಟು ಹೋಗಬೇಕಾದಾಗ ದುಃಖದಿಂದ ತಮ್ಮ ಸಭೆಯವರಿಗೆ ವಿದಾಯ ಹೇಳುತ್ತಿದ್ದಾರೆ.

^ ಪ್ಯಾರ. 59 ಚಿತ್ರ ವಿವರಣೆ: ಅದೇ ದಂಪತಿ ತಮ್ಮ ದೇಶಕ್ಕೆ ವಾಪಸ್‌ ಬಂದಾಗ ಅಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಜಯಿಸಲು ಸಹಾಯ ಮಾಡುವಂತೆ ಯೆಹೋವನಿಗೆ ಬಿಡದೆ ಪ್ರಾರ್ಥಿಸುತ್ತಿದ್ದಾರೆ.

^ ಪ್ಯಾರ. 61 ಚಿತ್ರ ವಿವರಣೆ: ಯೆಹೋವನ ಸಹಾಯದಿಂದ ಆ ದಂಪತಿ ಮತ್ತೆ ಪೂರ್ಣ ಸಮಯದ ಸೇವೆ ಮಾಡುತ್ತಿದ್ದಾರೆ. ತಾವು ಮಿಷನರಿಗಳಾಗಿದ್ದಾಗ ಕಲಿತ ಭಾಷೆಯಲ್ಲಿ ತಮ್ಮ ಟೆರಿಟೊರಿಯಲ್ಲಿರುವ ಜನರಿಗೆ ಸಾರುತ್ತಿದ್ದಾರೆ.