ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 40

“ಕಡೇ ದಿವಸಗಳ” ಕೊನೆಯಲ್ಲಿರುವ ನಾವು ಏನು ಮಾಡಬೇಕು?

“ಕಡೇ ದಿವಸಗಳ” ಕೊನೆಯಲ್ಲಿರುವ ನಾವು ಏನು ಮಾಡಬೇಕು?

“ಸ್ಥಿರಚಿತ್ತರಾಗಿಯೂ, ನಿಶ್ಚಲರಾಗಿಯೂ ಇರಿ . . . ಕರ್ತನ ಕೆಲಸವನ್ನು ಯಾವಾಗಲೂ ಹೇರಳವಾಗಿ ಮಾಡುವವರಾಗಿರಿ.”—1 ಕೊರಿಂ. 15:58.

ಗೀತೆ 141 ಶಾಂತಿ ಪ್ರಿಯರ ಹುಡುಕಿ

ಕಿರುನೋಟ *

1. ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ ಎಂದು ನಮಗೆ ಹೇಗೆ ಗೊತ್ತು?

ನೀವು ಹುಟ್ಟಿದ್ದು 1914ರ ನಂತರನಾ? ಹಾಗಿದ್ದರೆ ನಿಮ್ಮ ಜೀವನವನ್ನು ಈ ಲೋಕದ “ಕಡೇ ದಿವಸಗಳಲ್ಲಿ” ಕಳೆಯುತ್ತಿದ್ದೀರಿ. (2 ತಿಮೊ. 3:1) ಈ ಸಮಯದಲ್ಲಿ ಯುದ್ಧ, ಆಹಾರದ ಕೊರತೆ, ಭೂಕಂಪ, ಅಂಟುರೋಗಗಳು ಇರುತ್ತದೆ, ಅನ್ಯಾಯ ಹೆಚ್ಚಾಗುತ್ತದೆ ಮತ್ತು ಯೆಹೋವನ ಜನರ ಮೇಲೆ ಹಿಂಸೆ ಬರುತ್ತದೆ ಎಂದು ಯೇಸು ಮುಂತಿಳಿಸಿದ್ದನು. ಇವುಗಳ ಬಗ್ಗೆ ನೀವು ಕೇಳಿಸಿಕೊಂಡಿರಬಹುದು. (ಮತ್ತಾ. 24:3, 7-9, 12; ಲೂಕ 21:10-12) ಅಷ್ಟುಮಾತ್ರವಲ್ಲ, ಜನರು ಹೇಗೆ ನಡಕೊಳ್ಳುತ್ತಾರೆಂದು ಅಪೊಸ್ತಲ ಪೌಲನು ತಿಳಿಸಿದ್ದನೋ ಅದೇ ರೀತಿ ಜನ ನಡಕೊಳ್ಳುವುದನ್ನು ನೀವು ನೋಡಿರಬಹುದು. (“ಈಗ ಇರುವ ಜನರು” ಎಂಬ ಚೌಕ ನೋಡಿ.) ಹಾಗಾಗಿ, ಯೆಹೋವನ ಸಾಕ್ಷಿಗಳಾದ ನಮಗಂತೂ ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ ಅನ್ನುವುದರಲ್ಲಿ ಸ್ವಲ್ಪನೂ ಸಂಶಯವಿಲ್ಲ.

2. ನಾವು ಯಾವ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲಿದ್ದೇವೆ?

1914ನೇ ಇಸವಿ ಕಳೆದು ತುಂಬ ವರ್ಷಗಳು ಆಗಿರುವುದರಿಂದ ನಾವೀಗ “ಕಡೇ ದಿವಸಗಳ” ಕೊನೆಯಲ್ಲಿ ಜೀವಿಸುತ್ತಿದ್ದೇವೆ ಅಂತ ಹೇಳಬಹುದು. ಅಂತ್ಯ ತುಂಬ ಹತ್ತಿರ ಇರುವುದರಿಂದ ಕೆಲವು ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ತಿಳುಕೊಳ್ಳಬೇಕು: “ಕಡೇ ದಿವಸಗಳ” ಕೊನೆ ಕ್ಷಣಗಳಲ್ಲಿ ಯಾವೆಲ್ಲಾ ಘಟನೆಗಳು ನಡೆಯುತ್ತವೆ? ಮತ್ತು ಅವುಗಳಿಗಾಗಿ ಕಾಯುತ್ತಿರುವ ನಾವು ಈಗ ಏನು ಮಾಡಬೇಕು ಅಂತ ಯೆಹೋವನು ಬಯಸುತ್ತಾನೆ?

“ಕಡೇ ದಿವಸಗಳ” ಕೊನೆ ಕ್ಷಣಗಳಲ್ಲಿ ಯಾವೆಲ್ಲಾ ಘಟನೆಗಳು ನಡೆಯುತ್ತವೆ?

3. ಒಂದನೇ ಥೆಸಲೊನೀಕ 5:1-3​ರಲ್ಲಿ ಹೇಳಿರುವ ಪ್ರವಾದನೆಗನುಸಾರ ಯಾವ ಘೋಷಣೆಯನ್ನು ರಾಜಕೀಯ ಮುಖಂಡರು ಮಾಡುತ್ತಾರೆ?

ಒಂದನೇ ಥೆಸಲೊನೀಕ 5:1-3 ಓದಿ. ಇಲ್ಲಿ ಪೌಲನು ‘ಯೆಹೋವನ ದಿನದ’ ಬಗ್ಗೆ ತಿಳಿಸಿದ್ದಾನೆ. “ಯೆಹೋವನ ದಿನವು” ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ “ಮಹಾ ಬಾಬೆಲ್‌” ಮೇಲೆ ಆಗುವ ಆಕ್ರಮಣದಿಂದ ಹಿಡಿದು ಅರ್ಮಗೆದ್ದೋನ್‌ ಯುದ್ಧದವರೆಗೂ ಇರುವ ಸಮಯಾವಧಿಯನ್ನು ಸೂಚಿಸುತ್ತದೆ. (ಪ್ರಕ. 16:14, 16; 17:5) ಆ “ದಿನ” ಬರುವುದಕ್ಕಿಂತ ಸ್ವಲ್ಪ ಮುಂಚೆ ರಾಜಕೀಯ ಮುಖಂಡರು “ಶಾಂತಿ ಮತ್ತು ಭದ್ರತೆ” ತಂದಿದ್ದೇವೆ ಎಂದು ಘೋಷಣೆ ಮಾಡುತ್ತಾರೆ. (ಇದನ್ನು “ಸಮಾಧಾನ, ಸುರಕ್ಷಿತ” ಎಂದೂ ಭಾಷಾಂತರಿಸಲಾಗಿದೆ.) ಈಗಲೂ ಲೋಕದ ಅಧಿಕಾರಿಗಳು ದೇಶ-ದೇಶಗಳ ಸಂಬಂಧಗಳನ್ನು ಬಲಪಡಿಸುವುದರ ಬಗ್ಗೆ ಮಾತಾಡುವಾಗೆಲ್ಲಾ ಶಾಂತಿ, ಭದ್ರತೆ ಎಂಬ ಪದಗಳನ್ನು ಉಪಯೋಗಿಸುತ್ತಾರೆ. * ಆದರೆ ಇದಕ್ಕೂ ಬೈಬಲ್‌ ತಿಳಿಸಿರುವ “ಶಾಂತಿ ಮತ್ತು ಭದ್ರತೆ” ಎಂಬ ಘೋಷಣೆಗೂ ವ್ಯತ್ಯಾಸ ಇದೆ. ಬೈಬಲ್‌ ತಿಳಿಸಿರುವ ಘೋಷಣೆಯಾದಾಗ ರಾಜಕೀಯ ಮುಖಂಡರು ನಿಜವಾಗಿಯೂ ಈ ಲೋಕಕ್ಕೆ ಶಾಂತಿ ಮತ್ತು ಭದ್ರತೆ ತಂದಿದ್ದಾರೆ ಅಂತ ಹೆಚ್ಚಿನ ಜನರು ನೆನಸುತ್ತಾರೆ. ಆದರೆ ನಡೆಯುವುದೇ ಬೇರೆ! ‘ಮಹಾ ಸಂಕಟದ’ ಸಮಯದಲ್ಲಿ ‘ನಾಶನವು ಫಕ್ಕನೆ ಬರುತ್ತದೆ.’—ಮತ್ತಾ. 24:21.

“ಶಾಂತಿ ಮತ್ತು ಭದ್ರತೆ” ತಂದಿದ್ದೇವೆ ಎಂಬ ರಾಜಕೀಯ ಮುಖಂಡರ ಘೋಷಣೆ ಕೇಳಿ ಮೋಸಹೋಗಬೇಡಿ (ಪ್ಯಾರ 3-6 ನೋಡಿ) *

4. (ಎ) “ಶಾಂತಿ ಮತ್ತು ಭದ್ರತೆ” ಎಂಬ ಘೋಷಣೆಯ ಬಗ್ಗೆ ನಮಗಿನ್ನೂ ಯಾವ ವಿಷಯಗಳು ಗೊತ್ತಿಲ್ಲ? (ಬಿ) ಈ ಘೋಷಣೆ ಬಗ್ಗೆ ನಮಗೆ ಈಗಾಗಲೇ ಏನು ಗೊತ್ತಿದೆ?

“ಶಾಂತಿ ಮತ್ತು ಭದ್ರತೆ” ಎಂಬ ಘೋಷಣೆಯ ಬಗ್ಗೆ ನಮಗೆ ಕೆಲವು ವಿಷಯಗಳಷ್ಟೇ ಗೊತ್ತು. ಆದರೆ ಅಧಿಕಾರಿಗಳು ಈ ಘೋಷಣೆಯನ್ನು ಯಾಕೆ ಮಾಡುತ್ತಾರೆ ಮತ್ತು ಹೇಗೆ ಮಾಡುತ್ತಾರೆ ಎಂದು ನಮಗೆ ಗೊತ್ತಿಲ್ಲ. ಅಷ್ಟೇ ಅಲ್ಲ, ಈ ಘೋಷಣೆಯನ್ನು ಒಂದೇ ಸಲ ಮಾಡುತ್ತಾರಾ ಅಥವಾ ಅನೇಕ ಸಲ ಮಾಡುತ್ತಾರಾ ಅನ್ನುವುದೂ ಗೊತ್ತಿಲ್ಲ. ಆದರೆ ಲೋಕಕ್ಕೆ ಶಾಂತಿ ತರಲು ರಾಜಕೀಯ ಮುಖಂಡರಿಗೆ ಆಗಲ್ಲ ಅನ್ನುವುದಂತೂ ನಮಗೆ ಗೊತ್ತಿದೆ. ಹಾಗಾಗಿ ಅವರ ಘೋಷಣೆಗೆ ನಾವು ಮರುಳಾಗಬಾರದು. ಬದಲಿಗೆ ಈ ಘೋಷಣೆಯಾಗುವಾಗ ಅದನ್ನು ಗುರುತಿಸಲಿಕ್ಕಾಗಿ ಎಚ್ಚರವಾಗಿರಬೇಕು ಎಂದು ಬೈಬಲ್‌ ನಮಗೆ ಹೇಳುತ್ತದೆ. ಇದು “ಯೆಹೋವನ ದಿನ” ಶುರುವಾಗುತ್ತೆ ಅನ್ನುವುದಕ್ಕೆ ಸೂಚನೆಯಾಗಿದೆ.

5. ‘ಯೆಹೋವನ ದಿನಕ್ಕೆ’ ತಯಾರಾಗಲು 1 ಥೆಸಲೊನೀಕ 5:4-6 ನಮಗೆ ಹೇಗೆ ಸಹಾಯ ಮಾಡುತ್ತದೆ?

ಒಂದನೇ ಥೆಸಲೊನೀಕ 5:4-6 ಓದಿ. ‘ಯೆಹೋವನ ದಿನಕ್ಕೆ’ ನಾವು ತಯಾರಾಗುವುದು ಹೇಗೆ ಎಂದು ಪೌಲನು ಕೊಟ್ಟಿರುವ ಉತ್ತೇಜನದಿಂದ ಗೊತ್ತಾಗುತ್ತದೆ. “ಉಳಿದವರಂತೆ ನಾವು ನಿದ್ರೆಮಾಡದೆ ಎಚ್ಚರವಾಗಿ” ಇರಬೇಕು. ಉದಾಹರಣೆಗೆ, ನಾವು ಲೋಕದ ರಾಜಕೀಯ ವಿಷಯಗಳಲ್ಲಿ ಒಳಗೂಡದಂತೆ ಎಚ್ಚರವಹಿಸಬೇಕು. ಹೀಗೆ ದೇವರ ರಾಜ್ಯಕ್ಕೆ ನಿಷ್ಠೆ ತೋರಿಸಬೇಕು. ಒಂದು ವೇಳೆ, ನಾವು ರಾಜಕೀಯ ವಿಷಯದಲ್ಲಿ ಒಳಗೂಡಿದರೆ ಈ “ಲೋಕದ ಭಾಗವಾಗಿ” ಬಿಡುತ್ತೇವೆ.’ (ಯೋಹಾ. 15:19) ದೇವರ ರಾಜ್ಯ ಮಾತ್ರ ಲೋಕಕ್ಕೆ ನಿಜವಾದ ಶಾಂತಿ ಮತ್ತು ಭದ್ರತೆ ತರುತ್ತದೆ ಎಂದು ನಮಗೆ ಗೊತ್ತಿದೆ.

6. ನಾವು ಬೇರೆಯವರಿಗೆ ಯಾವ ಸಹಾಯ ಮಾಡಬೇಕು ಮತ್ತು ಯಾಕೆ?

ನಾವು ಎಚ್ಚರವಾಗಿರುವುದರ ಜೊತೆಗೆ ಬೇರೆಯವರೂ ಎಚ್ಚರಗೊಳ್ಳಲು ಸಹಾಯ ಮಾಡಬೇಕು. ಅಂದರೆ ಮುಂದೆ ಏನೆಲ್ಲಾ ನಡೆಯುತ್ತದೆಂದು ಬೈಬಲ್‌ ತಿಳಿಸಿದೆಯೋ ಅದನ್ನು ಬೇರೆಯವರೂ ತಿಳುಕೊಳ್ಳುವುದಕ್ಕೆ ಸಹಾಯ ಮಾಡಬೇಕು. ನಾವಿದನ್ನು ಈಗಲೇ ಮಾಡಬೇಕು. ಯಾಕೆಂದರೆ ಒಂದು ಸಲ ಮಹಾ ಸಂಕಟ ಶುರುವಾಯಿತೆಂದರೆ ಜನರಿಗೆ ಯೆಹೋವನ ಬಗ್ಗೆ ಕಲಿಯಲು ಅವಕಾಶ ಇರಲ್ಲ. ಹಾಗಾಗಿ ಈಗ ಸುವಾರ್ತೆ ಸಾರುವುದು ತುಂಬನೇ ಪ್ರಾಮುಖ್ಯ! *

ಸಮಯ ಇರೋದು ಸ್ವಲ್ಪನೇ, ಸಾರುತ್ತಾ ಇರಿ

ನಾವಿಂದು ಸಾರುವಾಗ, ದೇವರ ಸರಕಾರ ಮಾತ್ರ ಈ ಲೋಕಕ್ಕೆ ನಿಜ ಶಾಂತಿ ಮತ್ತು ಭದ್ರತೆ ತರುತ್ತದೆ ಎಂದು ಜನರಿಗೆ ತಿಳಿಸುತ್ತೇವೆ (ಪ್ಯಾರ 7-9 ನೋಡಿ)

7. ಈಗ ನಾವು ಏನು ಮಾಡಬೇಕು ಎಂದು ಯೆಹೋವನು ಬಯಸುತ್ತಾನೆ?

ಯೆಹೋವನ “ದಿನ” ಬರಲು ಸ್ವಲ್ಪನೇ ಸಮಯ ಇದೆ. ಹಾಗಾಗಿ ನಾವು ಸಾರುವುದರಲ್ಲಿ ನಿರತರಾಗಿರಬೇಕು ಎಂದು ಯೆಹೋವನು ಬಯಸುತ್ತಾನೆ. ನಾವು ‘ಕರ್ತನ ಕೆಲಸವನ್ನು ಹೇರಳವಾಗಿ ಮಾಡಬೇಕು.’ (1 ಕೊರಿಂ. 15:58) ನಾವೇನು ಮಾಡುತ್ತೇವೆ ಎಂದು ಯೇಸು ಮೊದಲೇ ತಿಳಿಸಿದ್ದಾನೆ. ಕಡೇ ದಿವಸಗಳಲ್ಲಿ ಆಗುವ ಪ್ರಾಮುಖ್ಯ ವಿಷಯಗಳ ಬಗ್ಗೆ ಮಾತಾಡುತ್ತಾ ಆತನು ಹೇಳಿದ್ದು: “ಇದಲ್ಲದೆ ಎಲ್ಲ ಜನಾಂಗಗಳಲ್ಲಿ ಸುವಾರ್ತೆಯು ಮೊದಲು ಸಾರಲ್ಪಡಬೇಕು.” (ಮಾರ್ಕ 13:4, 8, 10; ಮತ್ತಾ. 24:14) ನೀವು ಸೇವೆಗೆ ಹೋಗುವ ಪ್ರತಿ ಸಲನೂ ಈ ಬೈಬಲ್‌ ಪ್ರವಾದನೆ ನೆರವೇರಲು ಸಹಾಯ ಮಾಡುತ್ತೀರಿ! ಇದನ್ನು ಯೋಚಿಸುವಾಗ ನಿಮಗೆ ಹೇಗನಿಸುತ್ತದೆ?

8. ಸಾರುವ ಕೆಲಸ ಯಶಸ್ವಿಕರವಾಗಿ ನಡೆಯುತ್ತಿದೆ ಎಂದು ನಮಗೆ ಹೇಗೆ ಗೊತ್ತು?

ಸಾರುವ ಕೆಲಸ ಚೆನ್ನಾಗಿ ನಡೆಯುತ್ತಿದೆಯಾ? ದೇವರ ರಾಜ್ಯದ ಸುವಾರ್ತೆಗೆ ಒಳ್ಳೇದಾಗಿ ಪ್ರತಿಕ್ರಿಯಿಸುವವರ ಸಂಖ್ಯೆ ವರ್ಷ-ವರ್ಷಕ್ಕೂ ಹೆಚ್ಚಾಗುತ್ತಿದೆ. ಉದಾಹರಣೆಗೆ, ಕಡೇ ದಿವಸಗಳಲ್ಲಿ ಲೋಕವ್ಯಾಪಕವಾಗಿ ಇರುವ ಪ್ರಚಾರಕರ ಸಂಖ್ಯೆ ಎಷ್ಟು ಹೆಚ್ಚಾಗಿದೆ ಅಂತ ಯೋಚಿಸಿ ನೋಡಿ. 1914ರಲ್ಲಿ 43 ದೇಶಗಳಲ್ಲಿ 5,155 ಪ್ರಚಾರಕರಿದ್ದರು. ಇಂದು 240 ದೇಶಗಳಲ್ಲಿ ಬರೋಬ್ಬರಿ 85 ಲಕ್ಷ ಪ್ರಚಾರಕರಿದ್ದಾರೆ! ಆದರೂ ನಮ್ಮ ಕೆಲಸ ಇನ್ನೂ ಮುಗಿದಿಲ್ಲ. ಮಾನವಕುಲದ ಎಲ್ಲ ಸಮಸ್ಯೆಗಳಿಗೆ ದೇವರ ರಾಜ್ಯವೊಂದೇ ಪರಿಹಾರ ಅಂತ ಜನರಿಗೆ ಹೇಳುವುದನ್ನು ನಾವು ಮುಂದುವರಿಸಬೇಕು.—ಕೀರ್ತ. 145:11-13.

9. ನಾವು ಯಾಕೆ ಸುವಾರ್ತೆ ಸಾರುತ್ತಲೇ ಇರಬೇಕು?

ಯೆಹೋವನು ಸಾಕು ಅನ್ನುವವರೆಗೂ ನಾವು ಸಾರುವ ಕೆಲಸವನ್ನು ಮಾಡುತ್ತಲೇ ಇರಬೇಕು. ಯೆಹೋವ ದೇವರ ಬಗ್ಗೆ ಮತ್ತು ಯೇಸು ಕ್ರಿಸ್ತನ ಬಗ್ಗೆ ತಿಳುಕೊಳ್ಳಲು ಜನರಿಗೆ ಇನ್ನೆಷ್ಟು ಸಮಯ ಇದೆ? (ಯೋಹಾ. 17:3) ಅದು ನಮಗೆ ಗೊತ್ತಿಲ್ಲ. ಆದರೆ ಮಹಾ ಸಂಕಟ ಆರಂಭ ಆಗುವವರೆಗಂತೂ ‘ನಿತ್ಯ ಜೀವಕ್ಕಾಗಿ ಯೋಗ್ಯ ಮನೋಭಾವ ಇರುವವರಿಗೆ’ ಸುವಾರ್ತೆ ಕೇಳಿಸಿಕೊಂಡು ಯೆಹೋವನನ್ನು ಆರಾಧಿಸುವ ಅವಕಾಶ ಇರುತ್ತದೆ ಎಂದು ನಮಗೆ ಗೊತ್ತು. (ಅ. ಕಾ. 13:48) ಹಾಗಾಗಿ ನಾವು ಈ ಜನರಿಗೆ ಕಾಲ ಮಿಂಚಿ ಹೋಗುವ ಮುಂಚೆ ಹೇಗೆ ಸಹಾಯ ಮಾಡಬಹುದು?

10. ಜನರಿಗೆ ಸತ್ಯ ಕಲಿಸಲು ಯೆಹೋವನು ನಮಗೆ ಹೇಗೆ ಸಹಾಯ ಮಾಡುತ್ತಾನೆ?

10 ಜನರಿಗೆ ಸತ್ಯ ಕಲಿಸಲು ನಮಗೆ ಬೇಕಾದ ಎಲ್ಲವನ್ನೂ ಯೆಹೋವನು ತನ್ನ ಸಂಘಟನೆಯ ಮೂಲಕ ಕೊಡುತ್ತಿದ್ದಾನೆ. ಉದಾಹರಣೆಗೆ, ವಾರಮಧ್ಯದ ಕೂಟದಿಂದ ಪ್ರತಿ ವಾರ ನಮಗೆ ತರಬೇತಿ ಸಿಗುತ್ತಿದೆ. ಆರಂಭದ ಭೇಟಿಗಳಲ್ಲಿ ಮತ್ತು ಪುನರ್ಭೇಟಿಗಳಲ್ಲಿ ಹೇಗೆ ಮಾತಾಡಬೇಕು ಎಂದು ಈ ಕೂಟದಲ್ಲಿ ನಾವು ಕಲಿಯುತ್ತೇವೆ. ಅಷ್ಟೇ ಅಲ್ಲ, ಜನರಿಗೆ ಬೈಬಲ್‌ ಕಲಿಸುವುದು ಹೇಗೆಂದೂ ತರಬೇತಿ ಸಿಗುತ್ತದೆ. ಯೆಹೋವನ ಸಂಘಟನೆ ನಮಗೆ ಬೋಧನಾ ಸಲಕರಣೆಗಳನ್ನು ಕೊಟ್ಟಿದೆ. ಇವು . . .

  • ಸಂಭಾಷಣೆ ಆರಂಭಿಸಲು,

  • ಜನರಿಗೆ ಆಸಕ್ತಿ ಮೂಡುವ ರೀತಿಯಲ್ಲಿ ನಮ್ಮ ಸಂದೇಶವನ್ನು ತಿಳಿಸಲು,

  • ಬೈಬಲಿನ ಬಗ್ಗೆ ಇನ್ನೂ ಹೆಚ್ಚು ಕಲಿಯುವಂತೆ ಜನರನ್ನು ಉತ್ತೇಜಿಸಲು,

  • ಬೈಬಲ್‌ ಕಲಿಸುವಾಗ ಸತ್ಯವನ್ನು ಅರ್ಥಮಾಡಿಸಲು,

  • ನಮ್ಮ ವೆಬ್‌ಸೈಟ್‌ ಮತ್ತು ರಾಜ್ಯ ಸಭಾಗೃಹಗಳಿಗೆ ಭೇಟಿ ಮಾಡುವಂತೆ ಆಮಂತ್ರಿಸಲು ನಮಗೆ ಸಹಾಯ ಮಾಡುತ್ತವೆ.

ಈ ಸಲಕರಣೆಗಳು ನಮ್ಮ ಹತ್ತಿರ ಇದ್ದರೆ ಸಾಕಾಗಲ್ಲ, ಅವುಗಳನ್ನು ನಾವು ಉಪಯೋಗಿಸಬೇಕು. * ಉದಾಹರಣೆಗೆ, ನೀವು ಸುವಾರ್ತೆ ಸಾರಿದಾಗ ಒಬ್ಬರು ತುಂಬ ಆಸಕ್ತಿಯಿಂದ ಕೇಳಿದರು ಎಂದಿಟ್ಟುಕೊಳ್ಳಿ. ನೀವು ಅವರಿಗೆ ಒಂದು ಕರಪತ್ರವನ್ನೋ ಪತ್ರಿಕೆಯನ್ನೋ ಕೊಟ್ಟುಬಂದರೆ ಪುನಃ ಭೇಟಿ ಮಾಡುವ ತನಕ ಅವರು ಅವುಗಳನ್ನು ಓದಕ್ಕೆ ಸಾಧ್ಯವಾಗುತ್ತದೆ. ಪ್ರತಿ ತಿಂಗಳು ಸಾಧ್ಯವಾದಷ್ಟು ಹೆಚ್ಚು ಸೇವೆ ಮಾಡುವುದು ನಮ್ಮಲ್ಲಿ ಪ್ರತಿಯೊಬ್ಬರ ಜವಾಬ್ದಾರಿ.

11. ಆನ್‌ಲೈನ್‌ ಬೈಬಲ್‌ ಪಾಠಗಳು ಎಂಬ ವೈಶಿಷ್ಟ್ಯವನ್ನು ಯಾಕೆ ತಯಾರಿಸಲಾಗಿದೆ?

11 ಜನ ಸತ್ಯವನ್ನು ಕಲಿಯಲು ಯೆಹೋವನು ಇನ್ನೊಂದು ವಿಷಯವನ್ನೂ ಕೊಟ್ಟಿದ್ದಾನೆ. ಅದು jw.orgನಲ್ಲಿರುವ ಆನ್‌ಲೈನ್‌ ಬೈಬಲ್‌ ಪಾಠಗಳು ಆಗಿದೆ. * ಯಾಕೆ ಈ ವೈಶಿಷ್ಟ್ಯವನ್ನು ತಯಾರಿಸಲಾಗಿದೆ? ಬೈಬಲ್‌ನಲ್ಲಿರುವ ವಿಷಯಗಳನ್ನು ಕಲಿಯಲು ಲೋಕದ ಎಲ್ಲ ಕಡೆಯಿರುವ ಎಷ್ಟೋ ಸಾವಿರ ಜನರು ಇಂಟರ್‌ನೆಟ್‌ನಲ್ಲಿ ಬೇರೆ-ಬೇರೆ ವೆಬ್‌ಸೈಟ್‌ಗಳನ್ನು ನೋಡುತ್ತಾರೆ. ಇಂಥವರು ದೇವರ ವಾಕ್ಯದಲ್ಲಿರುವ ಸತ್ಯವನ್ನು ಕಲಿಯಲು ನಮ್ಮ ವೆಬ್‌ಸೈಟಿನಲ್ಲಿರುವ ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ. ಸೇವೆಯಲ್ಲಿ ಸಿಗುವ ಹೆಚ್ಚಿನ ಜನರಿಗೆ ನೀವು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಬೈಬಲ್‌ ಕಲಿಸುವುದು ಇಷ್ಟ ಆಗುವುದಿಲ್ಲ. ಇಂಥ ಸನ್ನಿವೇಶದಲ್ಲಿ ನಮ್ಮ ವೆಬ್‌ಸೈಟ್‌ನಿಂದ ಈ ವೈಶಿಷ್ಟ್ಯವನ್ನು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತೋರಿಸಬಹುದು ಅಥವಾ ಅದರ ಲಿಂಕನ್ನು ಅವರಿಗೆ ಕಳುಹಿಸಬಹುದು.

12. ಆನ್‌ಲೈನ್‌ ಬೈಬಲ್‌ ಪಾಠಗಳು ಎಂಬ ವೈಶಿಷ್ಟ್ಯದಿಂದ ಒಬ್ಬ ವ್ಯಕ್ತಿ ಏನನ್ನು ಕಲಿಯುತ್ತಾನೆ?

12 ಆನ್‌ಲೈನ್‌ ಬೈಬಲ್‌ ಪಾಠಗಳು ಎಂಬ ವೈಶಿಷ್ಟ್ಯದಲ್ಲಿ ಈ ಮುಖ್ಯ ವಿಷಯಗಳಿವೆ: “ಬೈಬಲ್‌ ಮತ್ತು ಸೃಷ್ಟಿಕರ್ತ,” “ಬೈಬಲ್‌ ವ್ಯಕ್ತಿಗಳ ಪರಿಚಯ,” “ಬೈಬಲ್‌ ಹೇಳೋ ಭವಿಷ್ಯ.” ಈ ಮುಖ್ಯ ವಿಷಯಗಳ ಕೆಳಗಿರುವ ಪಾಠಗಳಿಂದ ಈ ಮುಂದಿನ ಅಂಶಗಳನ್ನು ತಿಳುಕೊಳ್ಳಬಹುದು:

  • ನಮಗೆ ಬೈಬಲ್‌ ಹೇಗೆ ಸಹಾಯ ಮಾಡುತ್ತದೆ?

  • ಯೆಹೋವ, ಯೇಸು ಮತ್ತು ದೇವದೂತರು ಅಂದರೆ ಯಾರು?

  • ದೇವರು ಮನುಷ್ಯರನ್ನು ಯಾಕೆ ಸೃಷ್ಟಿ ಮಾಡಿದರು?

  • ಕಷ್ಟ-ತೊಂದರೆಗಳು ಯಾಕಿವೆ?

ಇದರಲ್ಲಿ ಈ ಕೆಳಗಿನ ವಿಷಯಗಳನ್ನೂ ತಿಳುಕೊಳ್ಳಬಹುದು. ಯೆಹೋವನು ಹೇಗೆ . . .

  • ಕಷ್ಟ ಮತ್ತು ಮರಣವನ್ನು ತೆಗೆದುಹಾಕುತ್ತಾನೆ?

  • ಸತ್ತವರಿಗೆ ಪುನಃ ಜೀವ ಕೊಡುತ್ತಾನೆ?

  • ಪ್ರಯೋಜನಕ್ಕೆ ಬಾರದ ಮಾನವ ಸರಕಾರಗಳನ್ನು ತೆಗೆದುಹಾಕಿ ತನ್ನ ಸರಕಾರವನ್ನು ತರುತ್ತಾನೆ?

13. ಒಬ್ಬ ವ್ಯಕ್ತಿ ಆನ್‌ಲೈನ್‌ನಲ್ಲಿ ಬೈಬಲ್‌ ಕಲಿತ ಮೇಲೆ ಅವನಿಗೆ ಒಬ್ಬ ಸಾಕ್ಷಿ ಬೈಬಲ್‌ ಕಲಿಸುವ ಅಗತ್ಯ ಇದೆಯಾ? ವಿವರಿಸಿ.

13 ಆನ್‌ಲೈನ್‌ನಲ್ಲಿ ಬೈಬಲ್‌ ಕಲಿಯುವ ಏರ್ಪಾಡು ವೈಯಕ್ತಿಕವಾಗಿ ಭೇಟಿ ಮಾಡಿ ಬೈಬಲ್‌ ಕಲಿಸುವುದಕ್ಕೆ ಬದಲಿಯಲ್ಲ. ಶಿಷ್ಯರನ್ನಾಗಿ ಮಾಡುವ ಸುಯೋಗವನ್ನು ಯೇಸು ನಮಗೆ ಕೊಟ್ಟಿದ್ದಾನೆ. ಈ ಬೈಬಲ್‌ ಪಾಠಗಳನ್ನು ವಿನ್ಯಾಸಿಸಿರುವುದೇ ಆಸಕ್ತಿ ಇರುವವರಿಗಾಗಿ. ಹಾಗಾಗಿ ತಾವು ಓದಿದ್ದನ್ನು ಅವರು ಇಷ್ಟಪಡುತ್ತಾರೆ ಮತ್ತು ಇನ್ನೂ ಹೆಚ್ಚು ಕಲಿಯಲು ಬಯಸುತ್ತಾರೆ. ಮುಂದಕ್ಕೆ ಅವರು ಒಬ್ಬ ಸಾಕ್ಷಿ ಹತ್ತಿರ ಬೈಬಲ್‌ ಕಲಿಯುವುದಕ್ಕೂ ಮನಸ್ಸು ಮಾಡಬಹುದು. ಯಾರಾದರೊಬ್ಬರು ತಮ್ಮನ್ನು ಭೇಟಿ ಮಾಡಿ ಬೈಬಲ್‌ ಕಲಿಸಬೇಕೆಂದು ಓದುಗರಿಗೆ ಇಷ್ಟವಿದ್ದರೆ ತಮ್ಮ ವಿನಂತಿಯನ್ನು ಕಳುಹಿಸಲಿಕ್ಕಾಗಿ ಪ್ರತಿ ಪಾಠದ ಕೊನೆಯಲ್ಲಿರುವ ಲಿಂಕನ್ನು ಒತ್ತಬಹುದು. ಬೈಬಲ್‌ ಕಲಿಯಬೇಕೆಂದು ಪ್ರತಿದಿನ ಲೋಕವ್ಯಾಪಕವಾಗಿ ಸುಮಾರು 230ರಷ್ಟು ವಿನಂತಿಗಳು ನಮ್ಮ ವೆಬ್‌ಸೈಟಿನ ಮೂಲಕ ಸಂಘಟನೆಗೆ ಬರುತ್ತಿವೆ. ವೈಯಕ್ತಿಕವಾಗಿ ಜನರನ್ನು ಭೇಟಿ ಮಾಡಿ ಬೈಬಲ್‌ ಕಲಿಸುವುದು ತುಂಬ ಪ್ರಾಮುಖ್ಯ!

ಜನರನ್ನು ಶಿಷ್ಯರನ್ನಾಗಿ ಮಾಡುವ ಪ್ರಯತ್ನ ಬಿಡಬೇಡಿ

14. ಮತ್ತಾಯ 28:19, 20​ರಲ್ಲಿ ಯೇಸು ಕ್ರಿಸ್ತನು ಕೊಟ್ಟ ನಿರ್ದೇಶನದ ಪ್ರಕಾರ ನಾವೇನು ಮಾಡಬೇಕು ಮತ್ತು ಯಾಕೆ?

14 ಮತ್ತಾಯ 28:19, 20 ಓದಿ. ನಾವು ಬೈಬಲ್‌ ಬಗ್ಗೆ ಜನರಿಗೆ ಕಲಿಸುವಾಗ ಅವರನ್ನು ‘ಶಿಷ್ಯರನ್ನಾಗಿ ಮಾಡಲು’ ನಮ್ಮಿಂದಾಗುವುದೆಲ್ಲ ಮಾಡಬೇಕು. ‘ಯೇಸು ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಬೇಕು.’ ಯೆಹೋವನನ್ನು ಆರಾಧಿಸುವುದು ಮತ್ತು ಆತನ ರಾಜ್ಯಕ್ಕೆ ಸಂಪೂರ್ಣ ಬೆಂಬಲ ಕೊಡುವುದು ಎಷ್ಟು ಪ್ರಾಮುಖ್ಯ ಎಂದು ಅರ್ಥಮಾಡಿಕೊಳ್ಳಲು ಜನರಿಗೆ ನಾವು ಸಹಾಯ ಮಾಡಬೇಕು. ಇದರರ್ಥ ಅವರೇನು ಕಲಿಯುತ್ತಾರೋ ಅದನ್ನು ಅನ್ವಯಿಸಲು, ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯಲು ನಾವು ಅವರಿಗೆ ಪ್ರೋತ್ಸಾಹಿಸಬೇಕು. ಹೀಗೆ ಮಾಡಿದರೆ ಮಾತ್ರ ಅವರು ಯೆಹೋವನ ದಿನದಲ್ಲಿ ಪಾರಾಗುತ್ತಾರೆ.—1 ಪೇತ್ರ 3:21.

15. ಯಾವ ವಿಷಯದಲ್ಲಿ ನಮ್ಮ ಸಮಯ ಹಾಳುಮಾಡಬಾರದು ಮತ್ತು ಯಾಕೆ?

15 ನಾವೀಗಾಗಲೇ ನೋಡಿದ ಹಾಗೆ ಸಮಯ ಬಹಳ ಕಡಿಮೆ ಇದೆ. ಈ ಲೋಕದ ನಾಶನ ಅತಿ ಬೇಗನೆ ಬರಲಿದೆ. ಹಾಗಾಗಿ, ಕ್ರಿಸ್ತನ ಶಿಷ್ಯರಾಗಲು ಇಷ್ಟವಿಲ್ಲದ ಜನರಿಗೆ ಬೈಬಲ್‌ ಕಲಿಸುವುದರಲ್ಲಿ ನಮ್ಮ ಸಮಯ ಹಾಳು ಮಾಡುವುದು ಬೇಡ. (1 ಕೊರಿಂ. 9:26) ನಮ್ಮ ಕೆಲಸ ತುರ್ತಿನದ್ದಾಗಿದೆ. ಎಷ್ಟೋ ಜನರಿಗೆ ಇನ್ನೂ ಸುವಾರ್ತೆ ತಲುಪಿಲ್ಲ. ಆದ್ದರಿಂದ ಅಂತ್ಯ ಬರುವುದಕ್ಕಿಂತ ಮುಂಚೆ ಅವರೆಲ್ಲರಿಗೆ ಸಾರಬೇಕಿದೆ.

ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಎಲ್ಲದರಿಂದಲೂ ದೂರವಿರಿ

16. ಪ್ರಕಟನೆ 18:2, 4, 5, 8​ರ ಪ್ರಕಾರ ನಾವೆಲ್ಲರೂ ಏನು ಮಾಡಬೇಕು? (ಪಾದಟಿಪ್ಪಣಿ ಸಹ ನೋಡಿ.)

16 ಪ್ರಕಟನೆ 18:2, 4, 5, 8 ಓದಿ. ತನ್ನ ಆರಾಧಕರು ಇನ್ನೊಂದು ಪ್ರಾಮುಖ್ಯ ವಿಷಯವನ್ನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ ಅಂತ ಈ ವಚನಗಳಿಂದ ಗೊತ್ತಾಗುತ್ತದೆ. ಸತ್ಯ ಕ್ರೈಸ್ತರೆಲ್ಲರೂ ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳಿಂದ ದೂರ ಇರಬೇಕು. ಒಬ್ಬ ಬೈಬಲ್‌ ವಿದ್ಯಾರ್ಥಿ ಸತ್ಯ ಕಲಿಯುವುದಕ್ಕಿಂತ ಮುಂಚೆ ಸುಳ್ಳು ಧರ್ಮದ ಸದಸ್ಯನಾಗಿರಬಹುದು. ಅವನು ಅದರ ಆರಾಧನಾ ಕಾರ್ಯಕ್ರಮಗಳಲ್ಲಿ ಅಥವಾ ಬೇರೆ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸಿರಬಹುದು. ಅಂಥ ಸಂಘಟನೆಗೆ ಹಣವನ್ನು ಕೊಟ್ಟಿರಬಹುದು. ಆದರೆ ಅವನು ಅಸ್ನಾತ ಪ್ರಚಾರಕನಾಗುವ ಮುಂಚೆ ಸುಳ್ಳು ಧರ್ಮದ ಜೊತೆಗಿರುವ ಎಲ್ಲಾ ಸಂಬಂಧವನ್ನು ಕಡಿದುಹಾಕಬೇಕು. ತಾನು ಹಿಂದೆ ಹೋಗುತ್ತಿದ್ದ ಚರ್ಚಿಗೆ ಅಥವಾ ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಯಾವುದೇ ಸಂಘಟನೆಗೆ ರಾಜೀನಾಮೆ ಪತ್ರ ಕೊಡಬೇಕು ಅಥವಾ ಅದರ ಸದಸ್ಯತ್ವದಿಂದ ತನ್ನ ಹೆಸರನ್ನು ತೆಗೆಸಬೇಕು. *

17. ಯಾವ ರೀತಿಯ ಉದ್ಯೋಗಗಳನ್ನು ಒಬ್ಬ ಕ್ರೈಸ್ತನು ಮಾಡಬಾರದು ಮತ್ತು ಯಾಕೆ?

17 ಸತ್ಯ ಕ್ರೈಸ್ತನು ಸುಳ್ಳು ಧರ್ಮಕ್ಕೆ ಸಂಬಂಧಿಸಿದ ಯಾವುದೇ ಉದ್ಯೋಗವನ್ನು ಮಾಡಬಾರದು. (2 ಕೊರಿಂ. 6:14-17) ಉದಾಹರಣೆಗೆ, ಅವನು ಚರ್ಚಿನಲ್ಲಿ ಕೆಲಸಕ್ಕೆ ಸೇರಬಾರದು. ಮಾತ್ರವಲ್ಲ, ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವವನು ಸಹ ಸುಳ್ಳು ಆರಾಧನೆ ಮಾಡುವಂಥ ಕಟ್ಟಡಗಳಲ್ಲಿ ಏನಾದರೂ ಕೆಲಸ ಇದ್ದರೆ ಅದನ್ನು ಮಾಡಬಾರದು. ಒಂದುವೇಳೆ ಒಬ್ಬನು ಸ್ವಂತವಾಗಿ ಒಂದು ವೃತ್ತಿ ಮಾಡುತ್ತಿದ್ದು ಅಥವಾ ಕಾಂಟ್ರ್ಯಾಕ್ಟ್‌ ನಡೆಸುತ್ತಿದ್ದು ಅವನನ್ನು ಸುಳ್ಳು ಆರಾಧನೆ ನಡೆಯುವಂಥ ಸ್ಥಳಗಳಲ್ಲಿ ಕೆಲಸಕ್ಕೆ ಕರೆದರೆ ಅವನು ಅದನ್ನು ಮಾಡಬಾರದು. ನಾವ್ಯಾಕೆ ಇಂಥ ದೃಢ ನಿಲುವನ್ನು ತೆಗೆದುಕೊಳ್ಳುತ್ತೇವೆ? ಯಾಕೆಂದರೆ ಯೆಹೋವನ ದೃಷ್ಟಿಯಲ್ಲಿ ಅಶುದ್ಧವಾಗಿರುವ ಧಾರ್ಮಿಕ ಸಂಘಟನೆಗಳ ಸುಳ್ಳು ಬೋಧನೆಗಳಲ್ಲಿ ಮತ್ತು ಪಾಪಗಳಲ್ಲಿ ಒಳಗೂಡಲು ನಾವು ಬಯಸುವುದಿಲ್ಲ.—ಯೆಶಾ. 52:11. *

18. ಒಬ್ಬ ಸಹೋದರನು ತನ್ನ ಕೆಲಸದಲ್ಲಿ ಹೇಗೆ ಬೈಬಲ್‌ ತತ್ವಗಳನ್ನು ಅನ್ವಯಿಸಿದನು?

18 ಸುಮಾರು ವರ್ಷಗಳ ಹಿಂದೆ ಸ್ವಂತವಾಗಿ ಬಡಗಿ (ಕಾರ್ಪೆಂಟರ್‌) ಕೆಲಸ ಮಾಡುತ್ತಿದ್ದ ಒಬ್ಬ ಹಿರಿಯನಿಗೆ ಅವನ ಊರಲ್ಲಿದ್ದ ಒಂದು ಚರ್ಚಿನ ಕೆಲಸವನ್ನು ಮಾಡಲು ಒಬ್ಬ ಕಾಂಟ್ರ್ಯಾಕ್ಟರ್‌ ಹೇಳಿದನು. ಚರ್ಚಿನಲ್ಲಿ ಕೆಲಸ ಮಾಡಲು ಆ ಸಹೋದರ ಯಾವತ್ತೂ ಒಪ್ಪಿಕೊಳ್ಳಲ್ಲ ಎಂದು ಕಾಂಟ್ರ್ಯಾಕ್ಟರ್‌ಗೆ ಗೊತ್ತಿತ್ತು. ಆದರೆ ಈ ಬಾರಿ ಅವನಿಗೆ ಆ ಕೆಲಸಕ್ಕಾಗಿ ಬೇರೆ ಯಾರೂ ಸಿಕ್ಕಿರಲಿಲ್ಲ ಮಾತ್ರವಲ್ಲ ಯಾರಾದರೊಬ್ಬರ ಅಗತ್ಯ ತುಂಬನೇ ಇತ್ತು. ಆ ಕಾರಣದಿಂದ ಕಾಂಟ್ರ್ಯಾಕ್ಟರ್‌ ಹಿರಿಯನ ಹತ್ತಿರ ಆ ಕೆಲಸ ಮಾಡುವಂತೆ ಪರಿಪರಿಯಾಗಿ ಬೇಡಿಕೊಂಡನು. ಆದರೂ ಸಹೋದರನು ಬೈಬಲ್‌ ತತ್ವಗಳನ್ನು ಬಿಟ್ಟುಕೊಡಲಿಲ್ಲ, ಆ ಕೆಲಸ ಮಾಡಲು ನಿರಾಕರಿಸಿದನು. ಮುಂದಿನ ವಾರ ಸ್ಥಳೀಯ ವಾರ್ತಾ ಪತ್ರಿಕೆಯಲ್ಲಿ ಒಬ್ಬ ಬಡಗಿಯು ಚರ್ಚಿಗೆ ಶಿಲುಬೆ ಅಳವಡಿಸುತ್ತಿರುವ ಚಿತ್ರವನ್ನು ಪ್ರಕಟಿಸಲಾಯಿತು. ಒಂದು ವೇಳೆ ನಮ್ಮ ಸಹೋದರನು ಆ ಕೆಲಸವನ್ನು ಒಪ್ಪಿಕೊಂಡಿದ್ದರೆ ಅವನ ಚಿತ್ರ ಪ್ರಕಟಿಸಲಾಗುತ್ತಿತ್ತು. ಹಾಗೇನಾದರೂ ಆಗಿದ್ದರೆ ಸಭೆಯಲ್ಲಿ ಅವನಿಗಿದ್ದ ಗೌರವ ಮಣ್ಣು ಪಾಲಾಗುತ್ತಿತ್ತು. ಯೆಹೋವನಿಗೂ ಎಷ್ಟು ನೋವಾಗುತ್ತಿತ್ತಲ್ವಾ?

ನಾವೇನು ಕಲಿತೆವು?

19-20. (ಎ) ಇದುವರೆಗೆ ನಾವೇನು ಕಲಿತೆವು? (ಬಿ) ಇನ್ನೂ ಏನನ್ನು ಕಲಿಯಲಿದ್ದೇವೆ?

19 ಬೈಬಲ್‌ ಪ್ರವಾದನೆಗಳ ಪ್ರಕಾರ ಮುಂದೆ ನಡೆಯಲಿರುವ ಮೊದಲನೇ ವಿಷಯ “ಶಾಂತಿ ಮತ್ತು ಭದ್ರತೆ” ಇದೆ ಎಂದು ರಾಜಕೀಯ ಮುಖಂಡರು ಮಾಡುವ ಘೋಷಣೆಯೇ ಆಗಿದೆ. ಇದು ಅತೀ ಶೀಘ್ರದಲ್ಲೇ ಆಗಲಿದೆ. ರಾಜಕೀಯ ಮುಖಂಡರಿಂದ ಎಂದಿಗೂ ನಿಜವಾದ ಶಾಂತಿ ಮತ್ತು ಭದ್ರತೆಯನ್ನು ತರಲು ಸಾಧ್ಯವಿಲ್ಲ ಎಂದು ಯೆಹೋವನು ನಮಗೆ ಕಲಿಸಿದ್ದಾನೆ. ಅದಕ್ಕಾಗಿ ನಾವು ಆತನಿಗೆ ಆಭಾರಿ. ಆ ಘಟನೆಗಳು ಸಂಭವಿಸುವ ಮತ್ತು “ಮಹಾ ಸಂಕಟ” ಬರುವ ಮುಂಚೆ ನಾವು ಏನು ಮಾಡಬೇಕು? ರಾಜ್ಯದ ಸಂದೇಶವನ್ನು ಎಲ್ಲರಿಗೂ ತಿಳಿಸುತ್ತಾ ಹೆಚ್ಚೆಚ್ಚು ಜನರನ್ನು ಶಿಷ್ಯರನ್ನಾಗಿ ಮಾಡಬೇಕೆಂದು ಯೆಹೋವನು ಬಯಸುತ್ತಾನೆ. ಅದೇ ಸಮಯದಲ್ಲಿ ಎಲ್ಲಾ ಸುಳ್ಳು ಧರ್ಮಗಳಿಂದ ನಾವು ದೂರವಿರಬೇಕು. ಅದರರ್ಥ ಯಾವುದೇ ಧಾರ್ಮಿಕ ಸಂಘ-ಸಂಸ್ಥೆಗಳ ಸದಸ್ಯರಾಗಬಾರದು ಮತ್ತು ಅವುಗಳಿಗೆ ಸಂಬಂಧಿಸಿದ ಯಾವುದೇ ಉದ್ಯೋಗವನ್ನೂ ಮಾಡಬಾರದು.

20 “ಕಡೇ ದಿವಸಗಳ” ಕೊನೆ ಕ್ಷಣಗಳಲ್ಲಿ ಇನ್ನೂ ಬೇರೆ ಘಟನೆಗಳು ನಡೆಯಲಿಕ್ಕಿವೆ. ನಾವು ಇನ್ನೂ ಕೆಲವು ವಿಷಯಗಳನ್ನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ. ಆ ಘಟನೆಗಳು ಮತ್ತು ವಿಷಯಗಳು ಯಾವುವು? ಮುಂದೆ ನಡೆಯಲಿಕ್ಕಿರುವ ಎಲ್ಲ ವಿಷಯಗಳಿಗಾಗಿ ನಾವು ಹೇಗೆ ತಯಾರಾಗಬಹುದು? ಈ ಪ್ರಶ್ನೆಗಳಿಗೆ ಮುಂದಿನ ಲೇಖನದಲ್ಲಿ ಉತ್ತರ ನೋಡಲಿದ್ದೇವೆ.

ಗೀತೆ 100 ನಾವು ಯೆಹೋವನ ಸೈನ್ಯ!

^ ಪ್ಯಾರ. 5 ಅತೀ ಬೇಗನೆ ರಾಜಕೀಯ ಮುಖಂಡರು “ಶಾಂತಿ ಮತ್ತು ಭದ್ರತೆ” ಸಾಧಿಸಿದ್ದೇವೆ ಎಂದು ಘೋಷಿಸುತ್ತಾರೆ. ಮಹಾಸಂಕಟ ಇನ್ನೇನು ಆರಂಭ ಆಗುತ್ತೆ ಅನ್ನುವುದಕ್ಕೆ ಇದು ಸೂಚನೆಯಾಗಿದೆ. ಆ ಘೋಷಣೆ ಆಗುವವರೆಗೆ ನಾವೇನು ಮಾಡಬೇಕು ಅಂತ ಯೆಹೋವನು ಬಯಸುತ್ತಾನೆ? ಇದರ ಉತ್ತರ ತಿಳಿಯಲು ಈ ಲೇಖನ ಸಹಾಯಮಾಡುತ್ತದೆ.

^ ಪ್ಯಾರ. 3 ಉದಾಹರಣೆಗೆ, ವಿಶ್ವಸಂಸ್ಥೆ ತನ್ನ ವೆಬ್‌ಸೈಟಲ್ಲಿ ‘ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲಾಗುತ್ತಿದೆ’ ಎಂದು ತಿಳಿಸಿದೆ.

^ ಪ್ಯಾರ. 23 ಬೋಧನಾ ಸಲಕರಣೆಗಳನ್ನು ಹೇಗೆ ಉಪಯೋಗಿಸುವುದು ಅಂತ ತಿಳಿಯಲು 2018, ಅಕ್ಟೋಬರ್‌ ತಿಂಗಳ ಕಾವಲಿನಬುರುಜು ಪತ್ರಿಕೆಯ “ಸತ್ಯವನ್ನು ಕಲಿಸಿ” ಎಂಬ ಲೇಖನ ನೋಡಿ.

^ ಪ್ಯಾರ. 11 ಇದು ಈಗ ಇಂಗ್ಲಿಷ್‌ ಮತ್ತು ಪೋರ್ಚುಗೀಸ್‌ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಮುಂದೆ ಬೇರೆ ಭಾಷೆಗಳಲ್ಲೂ ಬರುತ್ತದೆ.

^ ಪ್ಯಾರ. 16 ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಸಂಘಟನೆಗಳು ಯುವಜನರಿಗಾಗಿ ನಡೆಸುವ ಆಟೋಟ ಚಟುವಟಿಕೆಗಳಿಂದ ಅಥವಾ ಯುವಜನರ ಸಂಘಗಳಿಂದಲೂ ನಾವು ದೂರವಿರಬೇಕು. ಇವುಗಳನ್ನು ನಡೆಸುವವರು ತಮ್ಮ ಸಂಘಟನೆಯಲ್ಲಿ ಧರ್ಮಕ್ಕೆ ಸಂಬಂಧಪಟ್ಟ ಯಾವುದೇ ಚಟುವಟಿಕೆಯನ್ನು ನಡೆಸಲಾಗುವುದಿಲ್ಲ ಎಂದು ಹೇಳಿಕೊಳ್ಳಬಹುದು. ಆದರೂ ಅವುಗಳ ವಿಚಾರ ಮತ್ತು ಧ್ಯೇಯಗಳು ಧಾರ್ಮಿಕ ಮೂಲದಿಂದಲೇ ಬಂದಿರುತ್ತವೆ.

^ ಪ್ಯಾರ. 17 ಧಾರ್ಮಿಕ ಸಂಘಟನೆಗಳಿಗೆ ಸಂಬಂಧಿಸಿದ ಉದ್ಯೋಗಗಳನ್ನು ಮಾಡುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎಂದು ತಿಳಿಯಲು 1999, ಏಪ್ರಿಲ್‌ 15ರ ಕಾವಲಿನಬುರುಜು ಪತ್ರಿಕೆಯ “ವಾಚಕರಿಂದ ಪ್ರಶ್ನೆಗಳು” ನೋಡಿ.

^ ಪ್ಯಾರ. 83 ಚಿತ್ರ ವಿವರಣೆ: “ಶಾಂತಿ ಮತ್ತು ಭದ್ರತೆ” ತಂದಿದ್ದೇವೆ ಎಂಬ ಘೋಷಣೆ ಟಿವಿಯಲ್ಲಿ “ಬ್ರೇಕಿಂಗ್‌ ನ್ಯೂಸ್‌” ಆಗಿ ಬರುತ್ತಿರುವುದನ್ನು ಕಾಫಿ ಶಾಪ್‌ನಲ್ಲಿರುವವರು ಗಮನ ಕೊಟ್ಟು ನೋಡುತ್ತಿದ್ದಾರೆ. ಆದರೆ ಸೇವೆ ಮಾಡಿ ಕಾಫಿ ಶಾಪಿಗೆ ಬಂದಿರುವ ಯೆಹೋವನ ಸಾಕ್ಷಿ ದಂಪತಿ ಈ ವರದಿಯನ್ನು ಕೇಳಿ ಮೋಸಹೋಗುತ್ತಿಲ್ಲ.