ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸರ್ಕಾರನಾ ಬೆಂಬಲಿಸಿ

ದೇವರ ಸರ್ಕಾರನಾ ಬೆಂಬಲಿಸಿ

ನೀವಿರೋ ಜಾಗದಲ್ಲಿ ಒಂದು ದೊಡ್ಡ ಪ್ರವಾಹ ಬರಲಿದೆ ಅಂತ ನೆನಸಿ. ಆಗ ಸರ್ಕಾರ ನಿಮಗೆ: “ಬೇಗ ಜಾಗ ಖಾಲಿ ಮಾಡಿ! ನಿಮ್ಮ ಜೀವ ಉಳಿಸಿಕೊಳ್ಳಿ!” ಅಂತ ಎಚ್ಚರಿಕೆ ಕೊಡುತ್ತೆ. ಆಗ ನೀವು ಏನು ಮಾಡ್ತೀರಾ? ಸುರಕ್ಷಿತವಾದ ಜಾಗಕ್ಕೆ ಹೋಗುತ್ತೀರ ಅಲ್ವಾ?

ನಾವೆಲ್ಲ ಒಂದು ರೀತೀಲಿ ವಿನಾಶಕಾರಿ ಪ್ರವಾಹ ಬರೋ ಸಮಯದಲ್ಲೇ ಜೀವಿಸುತ್ತಿದ್ದೀವಿ. ಈ ಪ್ರವಾಹನೇ ಮುಂದೆ ಜನರು ಅನುಭವಿಸಲಿರುವ “ಮಹಾ ಸಂಕಟ.” ಈ ವಿನಾಶಕಾರಿ ಸಂಕಟ ಭೂಮೀಲಿರೋ ಪ್ರತಿಯೊಬ್ಬರ ಮೇಲೆ ಬರುತ್ತೆ ಅಂತ ಯೇಸು ತಿಳಿಸಿದ್ದಾನೆ. (ಮತ್ತಾಯ 24:21) ಈ ಪ್ರವಾಹ ಬರೋದನ್ನ ತಡೆಯೋಕಂತೂ ನಮ್ಮಿಂದ ಆಗಲ್ಲ. ಆದರೆ ಅದರಿಂದ ತಪ್ಪಿಸಿಕೊಳ್ಳಬಹುದು. ಹೇಗೆ?

ಯೇಸು ಕೊಟ್ಟ ಒಂದು ಸಲಹೆಯನ್ನು ನಾವು ಪಾಲಿಸಬೇಕು. “ಮೊದಲು [ದೇವರ] ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ” ಅಂತ ಯೇಸು ಹೇಳಿದ್ದಾನೆ. (ಮತ್ತಾಯ 6:33) ಯೇಸುವಿನ ಮಾತಿನ ಅರ್ಥ ಏನು?

ದೇವರ ರಾಜ್ಯನಾ ಮೊದಲು ಹುಡುಕಿ. ದೇವರ ರಾಜ್ಯನಾ (ಸರ್ಕಾರನಾ) ಮೊದಲು ಹುಡುಕಬೇಕು ಅಂದ್ರೆ ಬೇರೆ ಎಲ್ಲಾ ವಿಷಯಗಳಿಗಿಂತ ಜೀವನದಲ್ಲಿ ದೇವರ ಸರ್ಕಾರ ನಮಗೆ ತುಂಬ ಮುಖ್ಯ ಆಗಿರಬೇಕು ಅಂತ ಅರ್ಥ. (ಮತ್ತಾಯ 6:25, 32, 33) ಯಾಕೆ ಮುಖ್ಯ ಆಗಿರಬೇಕು? ಯಾಕಂದ್ರೆ ಬಲವಾಗಿ ಬೇರೂರಿರೋ ಮನುಷ್ಯರ ಕಷ್ಟ ಸಮಸ್ಯೆಗಳನ್ನ ಮಾನವರ ಕೈಯಲ್ಲಿ ಸರಿ ಮಾಡಕ್ಕಾಗಿಲ್ಲ. ದೇವರ ಸರ್ಕಾರದಿಂದ ಮಾತ್ರ ಅದನ್ನ ಕಿತ್ತೆಸೆಯೋಕೆ ಆಗುತ್ತೆ.

ದೇವರ ನೀತಿಯನ್ನು ಹುಡುಕಿ. ದೇವರ ನೀತಿ ನಿಯಮಗಳನ್ನ ಪಾಲಿಸಲು ನಾವು ನಮ್ಮ ಕೈಯಲ್ಲಿ ಆಗಿದ್ದನೆಲ್ಲಾ ಮಾಡಬೇಕು. ಯಾಕೆ? ಯಾಕಂದ್ರೆ ಅವುಗಳನ್ನ ಪಾಲಿಸದೆ ನಮ್ಮಷ್ಟಕ್ಕೆ ನಾವೇ ಜೀವಿಸಿದರೆ ಸಮಸ್ಯೆಗಳಂತೂ ಕಟ್ಟಿಟ್ಟ ಬುತ್ತಿ. (ಜ್ಞಾನೋಕ್ತಿ 16:25) ನಾವು ದೇವರ ನೀತಿ ನಿಯಮಗಳನ್ನ ಪಾಲಿಸಿದ್ರೆ ದೇವರನ್ನ ಸಂತೋಷ ಪಡಿಸ್ತೀವಿ. ಅಷ್ಟೇ ಅಲ್ಲ ಇದರಿಂದ ನಮ್ಮ ಜೀವನನೂ ಚೆನ್ನಾಗಿರುತ್ತೆ.—ಯೆಶಾಯ 48:17, 18.

ದೇವರ ಸರ್ಕಾರ ಮತ್ತು ಆತನ ನೀತಿ ನಿಮ್ಮ ಜೀವನದಲ್ಲಿ ತುಂಬಾ ಪ್ರಾಮುಖ್ಯ ಅಂತ ತೋರಿಸುತ್ತಾ ಇರಿ. ಕೆಲವರು ಇದಕ್ಕೆ ಪ್ರಾಮುಖ್ಯತೆ ಕೊಡಲ್ಲ ಅಂತ ಯೇಸು ಎಚ್ಚರಿಸಿದ. ಯಾಕಂದ್ರೆ ಅವರು ‘ನಮ್ಮ ಹತ್ರ ಜಾಸ್ತಿ ದುಡ್ಡು ಇರೋದ್ರಿಂದ ನಾವು ಸುರಕ್ಷಿತವಾಗಿ ಇದ್ದೀವಿ’ ಅಂತ ನೆನಸುತ್ತಾರೆ. ಇನ್ನು ಕೆಲವರು ಜೀವನದ ಚಿಂತೆ-ಜಂಜಾಟಗಳಲ್ಲೇ ಮುಳುಗಿಹೋಗಿರುತ್ತಾರೆ. ಎಷ್ಟರ ಮಟ್ಟಿಗೆ ಅಂದ್ರೆ ದೇವರ ಕಡೆಗೆ ಗಮನ ಹರಿಸುವಷ್ಟು ಸಮಯನೂ ಅವರಿಗೆ ಇರಲ್ಲ.—ಮತ್ತಾಯ 6:19-21, 25-32.

ಆದರೆ ದೇವರ ಸರ್ಕಾರನಾ ಬೆಂಬಲಿಸೋ ಎಲ್ಲರಿಗೆ, ಈಗ ಜೀವಿಸೋಕೆ ಏನೇನು ಬೇಕೋ ಆ ಎಲ್ಲಾ ವಿಷಯಗಳ ಜೊತೆ ಭವಿಷ್ಯದಲ್ಲಿ ಅನೇಕ ಆಶೀರ್ವಾದಗಳೂ ಸಿಗುತ್ತೆ ಅಂತ ಯೇಸು ಮಾತು ಕೊಟ್ಟಿದ್ದಾನೆ.—ಮತ್ತಾಯ 6:33.

ಒಂದನೇ ಶತಮಾನದಲ್ಲಿದ್ದ ಯೇಸುವಿನ ಶಿಷ್ಯರು ಮೊದಲು ದೇವರ ಸರ್ಕಾರವನ್ನು ಅದರ ನೀತಿಯನ್ನು ಹುಡುಕಿದ್ರೂ ತಮ್ಮ ಜೀವಮಾನದಲ್ಲಿ ಕಷ್ಟ ಸಮಸ್ಯೆಗಳು ಅಂತ್ಯಗೊಳ್ಳೋದನ್ನು ನೋಡಲಿಲ್ಲ. ಆದ್ರೂ ಅವರಿಗೆ ಸಂರಕ್ಷಣೆ ಸಿಕ್ಕಿತು. ಹೇಗೆ?

ಅವರು ದೇವರ ನೀತಿ-ನಿಯಮಕ್ಕನುಸಾರ ಜೀವಿಸಿದ್ರು. ಹಾಗಾಗಿ ಎಲ್ಲರಿಗೆ ಇದ್ದ ಕಷ್ಟಗಳು ಇವರಿಗೆ ಇದ್ರೂನೂ ಅದನ್ನ ಚೆನ್ನಾಗಿ ನಿಭಾಯಿಸಿದ್ರು. ದೇವರ ಸರ್ಕಾರ ಬಂದೇ ಬರುತ್ತೆ ಅನ್ನೋ ದೃಢ ಭರವಸೆ ಕಷ್ಟಗಳನ್ನು ಸಹಿಸಿಕೊಳ್ಳೋಕೆ ಅವರಿಗೆ ಸಹಾಯ ಮಾಡ್ತು. ಇದರ ಜೊತೆ ಸಮಸ್ಯೆಗಳನ್ನ ಎದುರಿಸೋಕೆ ದೇವರು ಅವರಿಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನ” ಕೊಟ್ಟನು.—2 ಕೊರಿಂಥ 4:7-9.

ನೀವೂ ದೇವರ ಸರ್ಕಾರನಾ ಮೊದಲು ಹುಡುಕುತ್ತೀರಾ?

ಒಂದನೇ ಶತಮಾನದ ಕ್ರೈಸ್ತರು ಯೇಸು ಹೇಳಿದ ಎಚ್ಚರಿಕೆಯ ಮಾತುಗಳನ್ನ ಚಾಚೂತಪ್ಪದೆ ಪಾಲಿಸಿದರು. ದೇವರ ಸರ್ಕಾರದ ಸಿಹಿಸುದ್ದಿನಾ ಆದಷ್ಟು ಹೆಚ್ಚು ಜನರಿಗೆ ತಿಳಿಸಲು ಸರ್ವ ಪ್ರಯತ್ನ ಮಾಡಿದರು. (ಕೊಲೊಸ್ಸೆ 1:23) ಇವತ್ತು ಈ ಸಿಹಿಸುದ್ದಿನಾ ಯಾರು ತಿಳಿಸುತ್ತಿದ್ದಾರೆ?

ಇಂದು ಯೆಹೋವನ ಸಾಕ್ಷಿಗಳು ಈ ಸಿಹಿಸುದ್ದಿನಾ ಎಲ್ಲರಿಗೂ ತಿಳಿಸುತ್ತಿದ್ದಾರೆ. “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು” ಅಂತ ಯೇಸು ಹೇಳಿದನು. (ಮತ್ತಾಯ 24:14) ಅಂತ್ಯ ಹತ್ರ ಇರೋದ್ರಿಂದ ಯೆಹೋವನ ಸಾಕ್ಷಿಗಳು ಈ ಆಜ್ಞೆನಾ ಪಾಲಿಸಲು ತಮ್ಮ ಕೈಲಾದದ್ದೆಲ್ಲಾ ಮಾಡುತ್ತಾ ಇದ್ದಾರೆ.

ಈ ಸಿಹಿಸುದ್ದಿನಾ ಕೇಳಿದ ಮೇಲೆ ಇದರ ಬಗ್ಗೆ ಇನ್ನು ಹೆಚ್ಚು ತಿಳುಕೊಳ್ಳಲು ಪ್ರಯತ್ನಿಸಿ. ಒಂದನೇ ಶತಮಾನದಲ್ಲಿದ್ದ ಬೆರೋಯದ ಜನರೂ ಇದನ್ನೇ ಮಾಡಿದರು. ಅವರು ದೇವರ ಸರ್ಕಾರದ ಸಿಹಿಸುದ್ದಿನಾ ಕೇಳಿದಾಗ ಅದನ್ನ “ಸಿದ್ಧಮನಸ್ಸಿನಿಂದ” ಸ್ವೀಕರಿಸಿದರು. ನಂತರ “ಈ ವಿಷಯಗಳು ಸರಿಯೋ ಎಂದು ನೋಡಲಿಕ್ಕಾಗಿ ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದರು” ಮತ್ತು ಅದನ್ನೇ ತಮ್ಮ ಜೀವನದಲ್ಲಿ ಪಾಲಿಸಿದ್ರು.—ಅಪೊಸ್ತಲರ ಕಾರ್ಯಗಳು 17:11, 12.

ನೀವೂ ಹೀಗೆ ಮಾಡಬಹುದು. ಮೊದಲು ದೇವರ ಸರ್ಕಾರವನ್ನು ಮತ್ತು ಆತನ ನೀತಿಯನ್ನು ಹುಡುಕಿ. ಆಗ ಈ ಕೆಟ್ಟ ಲೋಕದಲ್ಲೂ ಸಂರಕ್ಷಣೆ ಸಿಗುತ್ತೆ ಮತ್ತು ಭವಿಷ್ಯದಲ್ಲಿ ಶಾಂತಿ ಮತ್ತು ಭದ್ರತೆಯ ಜೀವನ ಆನಂದಿಸುತ್ತೀರ.