ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 1

“ಹೋಗಿ, ಶಿಷ್ಯರನ್ನಾಗಿ ಮಾಡಿ”

“ಹೋಗಿ, ಶಿಷ್ಯರನ್ನಾಗಿ ಮಾಡಿ”

2020 ರ ವರ್ಷವಚನ: ‘ಹೋಗಿ, ಶಿಷ್ಯರನ್ನಾಗಿ ಮಾಡಿ ಮತ್ತು ದೀಕ್ಷಾಸ್ನಾನ ಮಾಡಿಸಿ.’—ಮತ್ತಾ. 28:19.

ಗೀತೆ 139 ದೃಢವಾಗಿ ನಿಲ್ಲಲು ಅವರಿಗೆ ಕಲಿಸಿ

ಕಿರುನೋಟ *

1-2. (ಎ) ದೇವದೂತನು ಯೇಸುವಿನ ಸಮಾಧಿ ಹತ್ತಿರ ಬಂದಿದ್ದ ಸ್ತ್ರೀಯರಿಗೆ ಏನು ಹೇಳಿದನು? (ಬಿ) ಆ ಸ್ತ್ರೀಯರಿಗೆ ಯೇಸು ಏನು ಹೇಳಿದನು?

ಅದು ಕ್ರಿ.ಶ. 33 ನೈಸಾನ್‌ 16. ಯೇಸುವಿನ ದೇಹವನ್ನ ಹೂಣಿಟ್ಟು ಎರಡು ದಿನ ಕಳೆದಿದೆ. ಆ ದಿನ ಮುಂಜಾನೆ ಕೆಲವು ದೇವಭಕ್ತ ಸ್ತ್ರೀಯರು ಸುಗಂಧದ್ರವ್ಯಗಳನ್ನು ತಗೊಂಡು ಯೇಸುವಿನ ದೇಹಕ್ಕೆ ಹಚ್ಚಲಿಕ್ಕೆ ಸಮಾಧಿ ಹತ್ತಿರ ಹೋದ್ರು. ಆದ್ರೆ ಅಲ್ಲಿ ಯೇಸುವಿನ ದೇಹ ಇಲ್ಲದೇ ಇರೋದನ್ನ ನೋಡಿ ಅವ್ರಿಗೆ ಗಾಬರಿಯಾಯಿತು. ಆಗ ದೇವದೂತನು ಅವ್ರಿಗೆ ಸತ್ತುಹೋಗಿದ್ದ ಯೇಸು ಪುನಃ ಜೀವಂತವಾಗಿ ಎಬ್ಬಿಸಲ್ಪಟ್ಟಿದ್ದಾನೆ, “ಅವನು ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗುತ್ತಿದ್ದಾನೆ. ಅಲ್ಲಿ ನೀವು ಅವನನ್ನು ಕಾಣುವಿರಿ” ಎಂದು ಹೇಳಿದನು.—ಮತ್ತಾ. 28:1-7; ಲೂಕ 23:56; 24:10.

2 ಆ ಸ್ತ್ರೀಯರು ಸಮಾಧಿಯಿಂದ ವಾಪಸ್‌ ಬರುವಾಗ ಯೇಸು ಬಂದು ಅವ್ರಿಗೆ, “ಹೋಗಿ, ನನ್ನ ಸಹೋದರರು ಗಲಿಲಾಯಕ್ಕೆ ಹೋಗುವಂತೆ ಅವರಿಗೆ ವರದಿಮಾಡಿರಿ; ಅಲ್ಲಿ ಅವರು ನನ್ನನ್ನು ಕಾಣುವರು” ಎಂದು ಹೇಳಿದನು. (ಮತ್ತಾ. 28:10) ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಕೆಲವೊಂದು ಪ್ರಾಮುಖ್ಯ ನಿರ್ದೇಶನಗಳನ್ನು ಕೊಡಬೇಕಿತ್ತು ಅಂತ ಅನಿಸುತ್ತೆ. ಅದಕ್ಕೇ ಆತನು ಪುನರುತ್ಥಾನ ಆದ ತಕ್ಷಣನೇ ತನ್ನ ಶಿಷ್ಯರನ್ನು ಭೇಟಿ ಮಾಡೋಕೆ ಏರ್ಪಾಡು ಮಾಡಿದನು.

ಯೇಸು ಈ ಆಜ್ಞೆಯನ್ನು ಯಾರಿಗೆ ಕೊಟ್ಟನು?

ಪುನರುತ್ಥಾನವಾದ ಮೇಲೆ ಯೇಸು ಗಲಿಲಾಯದಲ್ಲಿ ತನ್ನ ಅಪೊಸ್ತಲರನ್ನು ಮತ್ತು ಇತರರನ್ನು ಭೇಟಿಯಾಗಿ, ‘ಹೋಗಿ, ಶಿಷ್ಯರನ್ನಾಗಿ ಮಾಡಿ’ ಎಂದು ಆಜ್ಞಾಪಿಸಿದನು (ಪ್ಯಾರ 3-4 ನೋಡಿ)

3-4. ಮತ್ತಾಯ 28:19, 20 ರಲ್ಲಿರುವ ಆಜ್ಞೆಯನ್ನು ಯೇಸು ತನ್ನ ಅಪೊಸ್ತಲರಿಗೆ ಮಾತ್ರ ಕೊಡಲಿಲ್ಲ ಎಂದು ನಾವು ಹೇಗೆ ಹೇಳಬಹುದು? (ಮುಖಪುಟ ಚಿತ್ರ ನೋಡಿ.)

3 ಮತ್ತಾಯ 28:16-20 ಓದಿ. ಯೇಸು ಶಿಷ್ಯರನ್ನು ಭೇಟಿ ಮಾಡಿದಾಗ, ಅವ್ರು ಒಂದನೇ ಶತಮಾನದಲ್ಲಿ ಮಾಡಲಿದ್ದ ಒಂದು ಮುಖ್ಯ ಕೆಲಸದ ಬಗ್ಗೆ ಹೇಳಿದನು. ಅದೇ ಕೆಲಸವನ್ನು ಇವತ್ತು ನಾವು ಸಹ ಮಾಡುತ್ತಾ ಇದ್ದೇವೆ. ಯೇಸು ಅವ್ರಿಗೆ, “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ” ಎಂದು ಹೇಳಿದನು.

4 “ಶಿಷ್ಯರನ್ನಾಗಿ ಮಾಡಿ” ಎಂಬ ಆಜ್ಞೆಯನ್ನು ಯೇಸು ತನ್ನ 11 ಅಪೊಸ್ತಲರಿಗೆ ಮಾತ್ರ ಕೊಡಲಿಲ್ಲ. ತನ್ನನ್ನು ಹಿಂಬಾಲಿಸುವ ಎಲ್ಲರಿಗೂ ಕೊಟ್ಟಿದ್ದಾನೆ. ಯೇಸು ಗಲಿಲಾಯ ಬೆಟ್ಟದಲ್ಲಿ ಆ ಆಜ್ಞೆಯನ್ನು ಕೊಟ್ಟಾಗ ಅಪೊಸ್ತಲರು ಮಾತ್ರ ಅಲ್ಲ, ಬೇರೆ ಜನ್ರೂ ಬಂದಿದ್ದರು. ಅದು ನಮಗೆ ಹೇಗೆ ಗೊತ್ತು? ಆರಂಭದಲ್ಲಿ ತಿಳಿಸಲಾದ ದೇವಭಕ್ತ ಸ್ತ್ರೀಯರಿಗೆ ದೇವದೂತ ಏನು ಹೇಳಿದ ಅಂತ ನೆನಪಿಸಿಕೊಳ್ಳಿ. “ಅಲ್ಲಿ [ಗಲಿಲಾಯದಲ್ಲಿ] ನೀವು ಅವನನ್ನು ಕಾಣುವಿರಿ” ಅಂದನು. ಹಾಗಾದ್ರೆ, ಯೇಸು, “ಶಿಷ್ಯರನ್ನಾಗಿ ಮಾಡಿ” ಎಂಬ ಆಜ್ಞೆ ಕೊಡುವಾಗ ಈ ಸ್ತ್ರೀಯರು ಸಹ ಇದ್ದರು ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ, ಯೇಸು ಒಂದು ಸಮಯದಲ್ಲಿ “ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರಿಗೆ ಕಾಣಿಸಿಕೊಂಡನು” ಅಂತ ಅಪೊಸ್ತಲ ಪೌಲ ಹೇಳಿದ್ದಾನೆ. (1 ಕೊರಿಂ. 15:6) ಇಲ್ಲಿ ಪೌಲ ಯಾವ ಸಮಯದ ಬಗ್ಗೆ ಹೇಳುತ್ತಿದ್ದಾನೆ?

5. ಒಂದನೇ ಕೊರಿಂಥ 15:6 ರಿಂದ ನಮಗೇನು ಗೊತ್ತಾಗುತ್ತದೆ?

5 ಒಂದನೇ ಕೊರಿಂಥ 15:6 ರಲ್ಲಿ ಪೌಲನು ಗಲಿಲಾಯದಲ್ಲಿ ನಡೆದ ಆ ಕೂಟದ ಬಗ್ಗೆಯೇ ಮಾತಾಡುತ್ತಿದ್ದನು ಎಂದು ಹೇಳಲು ತುಂಬ ಕಾರಣಗಳಿವೆ. ಮೊದಲನೇದಾಗಿ, ಯೇಸುವಿನ ಶಿಷ್ಯರಲ್ಲಿ ಹೆಚ್ಚಿನವರು ಗಲಿಲಾಯದವರಾಗಿದ್ದರು. ಹಾಗಾಗಿ, ಇಷ್ಟೊಂದು ಹೆಚ್ಚು ಜನ್ರು ಸೇರಿಬರಲು ಯೆರೂಸಲೇಮಿನ ಯಾವುದೋ ಒಂದು ಮನೆಗಿಂತ ಗಲಿಲಾಯದ ಬೆಟ್ಟನೇ ಸೂಕ್ತವಾಗಿತ್ತು. ಎರಡನೇದಾಗಿ, ಪುನರುತ್ಥಾನವಾಗಿದ್ದ ಯೇಸು ಈಗಾಗಲೇ ಯೆರೂಸಲೇಮಿನ ಒಂದು ಮನೆಯಲ್ಲಿ ತನ್ನ ಅಪೊಸ್ತಲರನ್ನು ಭೇಟಿ ಮಾಡಿ ಮಾತಾಡಿದ್ದನು. “ಶಿಷ್ಯರನ್ನಾಗಿ ಮಾಡಿ” ಎಂಬ ಆಜ್ಞೆಯನ್ನು ಯೇಸು ತನ್ನ ಅಪೊಸ್ತಲರಿಗೆ ಮಾತ್ರ ಕೊಡಬೇಕಂತಿದ್ದರೆ ಆತನು ಆವಾಗಲೇ ಅದನ್ನು ಹೇಳಿಬಿಡುತ್ತಿದ್ದನು. ಅಪೊಸ್ತಲರನ್ನು, ಸ್ತ್ರೀಯರನ್ನು ಮತ್ತು ಬೇರೆ ಶಿಷ್ಯರನ್ನೆಲ್ಲಾ ಗಲಿಲಾಯಕ್ಕೆ ಕರೆದು ಹೇಳುವ ಅವಶ್ಯಕತೆ ಇರಲಿಲ್ಲ.—ಲೂಕ 24:33, 36.

6. (ಎ) ಶಿಷ್ಯರನ್ನಾಗಿ ಮಾಡಿ ಅನ್ನುವ ಆಜ್ಞೆ ಇವತ್ತಿಗೂ ಅನ್ವಯಿಸುತ್ತೆ ಅಂತ ಮತ್ತಾಯ 28:20 ರಿಂದ ಹೇಗೆ ಗೊತ್ತಾಗುತ್ತೆ? (ಬಿ) ಈ ಆಜ್ಞೆಯನ್ನು ಜನ್ರು ಇವತ್ತು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದಾರೆ?

6 ಮೂರನೇ ಕಾರಣ ನೋಡಿ. ಯೇಸು ಕ್ರಿಸ್ತನು “ಶಿಷ್ಯರನ್ನಾಗಿ ಮಾಡಿ” ಅಂತ ಒಂದನೇ ಶತಮಾನದ ಕ್ರೈಸ್ತರಿಗೆ ಮಾತ್ರ ಹೇಳಲಿಲ್ಲ. ಅದು ನಮಗೆ ಹೇಗೆ ಗೊತ್ತು? ಯೇಸು ನಿರ್ದೇಶನ ಕೊಟ್ಟ ಮೇಲೆ ಕೊನೆಯಲ್ಲಿ ತನ್ನ ಶಿಷ್ಯರಿಗೆ “ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಅಂತ ಹೇಳಿದನು. (ಮತ್ತಾ. 28:20) ಯೇಸು ಹೇಳಿದ ಹಾಗೆಯೇ ಇವತ್ತು ಶಿಷ್ಯರನ್ನಾಗಿ ಮಾಡುವ ಕೆಲ್ಸ ತುಂಬ ವೇಗವಾಗಿ ನಡೆಯುತ್ತಿದೆ. ಪ್ರತಿ ವರ್ಷ ಹತ್ತಿರತ್ತಿರ ಮೂರು ಲಕ್ಷ ಜನ್ರು ಯೇಸುವಿನ ಶಿಷ್ಯರಾಗಲು ಇಷ್ಟಪಟ್ಟು ದೀಕ್ಷಾಸ್ನಾನ ಪಡಕೊಂಡು ಯೆಹೋವನ ಸಾಕ್ಷಿಗಳಾಗುತ್ತಿದ್ದಾರೆ.

7. ನಾವೀಗ ಏನನ್ನು ಚರ್ಚಿಸಲಿದ್ದೇವೆ? ಮತ್ತು ಯಾಕೆ?

7 ನಮ್ಮ ಹತ್ರ ಬೈಬಲ್‌ ಕಲಿಯುವ ಅನೇಕರು ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಳ್ಳುತ್ತಾರೆ. ಆದ್ರೆ ಇನ್ನು ಕೆಲವ್ರು ಶಿಷ್ಯರಾಗೋಕೆ ಹಿಂದೇಟು ಹಾಕ್ತಾರೆ. ಅವ್ರು ಬೈಬಲ್‌ ಕಲಿಯೋಕೆ ಇಷ್ಟಪಡುತ್ತಾರೆ, ಆದ್ರೆ ದೀಕ್ಷಾಸ್ನಾನ ತಗೊಳ್ಳಲ್ಲ. ನೀವು ಸಹ ಯಾರಿಗಾದ್ರೂ ಬೈಬಲ್‌ ಕಲಿಸುತ್ತಿದ್ದೀರಾ? ಹಾಗಾದ್ರೆ ಅವರು ಕಲಿತ ವಿಷಯವನ್ನ ಅನ್ವಯಿಸಿ ಯೇಸುವಿನ ಶಿಷ್ಯರಾಗೋಕೆ ನಾವು ಸಹಾಯ ಮಾಡ್ಬೇಕು ಅಂತ ಅನಿಸುತ್ತಲ್ವಾ? ಹಾಗಾಗಿ ಈ ಲೇಖನದಲ್ಲಿ, ವಿದ್ಯಾರ್ಥಿ ಯೆಹೋವನನ್ನು ಪ್ರೀತಿಸೋಕೆ ಮತ್ತು ಆಧ್ಯಾತ್ಮಿಕ ಪ್ರಗತಿ ಮಾಡೋಕೆ ಅವ್ರಿಗೆ ಸಹಾಯ ಮಾಡೋದು ಹೇಗೆ ಅಂತ ಚರ್ಚಿಸಲಾಗುತ್ತೆ. ನಾವು ಈ ವಿಷಯಗಳ ಬಗ್ಗೆ ತಿಳುಕೊಳ್ಳೋದರಿಂದ ವಿದ್ಯಾರ್ಥಿ ಪ್ರಗತಿ ಮಾಡದೇ ಇದ್ದಾಗ ಬೈಬಲ್‌ ಕಲಿಸುವುದನ್ನು ನಿಲ್ಲಿಸಬೇಕಾ ಬೇಡ್ವಾ ಅಂತ ನಿರ್ಧರಿಸೋಕೆ ಸಹಾಯ ಆಗುತ್ತೆ.

ಯೆಹೋವನನ್ನು ಪ್ರೀತಿಸಲು ವಿದ್ಯಾರ್ಥಿಗೆ ಸಹಾಯ ಮಾಡಿ

8. ಯೆಹೋವನನ್ನು ಪ್ರೀತಿಸುವಂತೆ ಬೈಬಲ್‌ ವಿದ್ಯಾರ್ಥಿಗೆ ಸಹಾಯ ಮಾಡಲು ಕೆಲವೊಮ್ಮೆ ನಮ್ಗೆ ಯಾಕೆ ಕಷ್ಟವಾಗಬಹುದು?

8 ಜನ್ರು ತನ್ನನ್ನು ಪ್ರೀತಿಯಿಂದ ಆರಾಧಿಸಬೇಕು ಅಂತ ಯೆಹೋವನು ಬಯಸುತ್ತಾನೆ. ಆದ್ದರಿಂದ ನಮ್ಮ ವಿದ್ಯಾರ್ಥಿಗೆ ಯೆಹೋವನು ಅವ್ರ ಬಗ್ಗೆ ಎಷ್ಟು ಕಾಳಜಿವಹಿಸುತ್ತಾನೆ, ಅವ್ರನ್ನ ಎಷ್ಟು ಪ್ರೀತಿಸ್ತಾನೆ ಅಂತ ಅರ್ಥಮಾಡ್ಕೊಳ್ಳೋಕೆ ನಾವು ಸಹಾಯ ಮಾಡಬೇಕು. “ಯೆಹೋವನು ತಂದೆ ಇಲ್ಲದವರಿಗೆ ತಂದೆಯೂ ವಿಧವೆಯರಿಗೆ ರಕ್ಷಕನೂ ಆಗಿದ್ದಾನೆ” ಅಂತ ಅವ್ರು ತಿಳಿದುಕೊಳ್ಳಲು ಸಹಾಯ ಮಾಡಬೇಕು. (ಕೀರ್ತ. 68:5, ನೂತನ ಲೋಕ ಭಾಷಾಂತರ) ದೇವರು ತಮ್ಮನ್ನೆಷ್ಟು ಪ್ರೀತಿಸುತ್ತಾನೆ ಅಂತ ವಿದ್ಯಾರ್ಥಿ ಗ್ರಹಿಸಿದಾಗ ಅವ್ರಿಗೆ ಆತನ ಮೇಲಿರುವ ಪ್ರೀತಿ ಹೆಚ್ಚಾಗುತ್ತೆ. ಆದ್ರೆ, ಕೆಲವರಿಗೆ ಯೆಹೋವನನ್ನು ಪ್ರೀತಿಯ ತಂದೆ ಅಂತ ಒಪ್ಪಿಕೊಳ್ಳೋಕೆ ಕಷ್ಟ ಆಗುತ್ತೆ. ಯಾಕೆಂದ್ರೆ ಅವ್ರ ಸ್ವಂತ ತಂದೆನೇ ಅವರನ್ನು ಪ್ರೀತಿಸಿರಲ್ಲ. (2 ತಿಮೊ. 3:1, 3) ಹಾಗಾಗಿ, ನೀವು ಅಧ್ಯಯನ ಮಾಡುವಾಗ ಯೆಹೋವನ ಗುಣಗಳ ಬಗ್ಗೆ ಒತ್ತಿ ಹೇಳಬೇಕು. ಅವ್ರು ನಿತ್ಯಜೀವ ಪಡೆದುಕೊಳ್ಳಬೇಕೆಂದು ನಮ್ಮ ಪ್ರೀತಿಯ ತಂದೆ ಬಯಸುತ್ತಾನೆ ಮತ್ತು ಅದನ್ನು ಪಡೆದುಕೊಳ್ಳಲಿಕ್ಕೆ ಬೇಕಾದ ಸಹಾಯವನ್ನು ಕೊಡಲಿಕ್ಕೆ ಸಿದ್ಧನಿದ್ದಾನೆ ಅಂತ ಅರ್ಥ ಮಾಡಿಕೊಳ್ಳಲು ನೀವು ನಿಮ್ಮ ಬೈಬಲ್‌ ವಿದ್ಯಾರ್ಥಿಗೆ ಸಹಾಯ ಮಾಡಿ. ಇಷ್ಟೇ ಅಲ್ಲದೆ ಇನ್ನೇನು ಮಾಡಬಹುದು?

9-10. (ಎ) ಜನ್ರಿಗೆ ಬೈಬಲ್‌ ಕಲಿಸಲು ಯಾವ ಪುಸ್ತಕಗಳನ್ನು ಉಪಯೋಗಿಸಬೇಕು? (ಬಿ) ಯಾಕೆ ಅವುಗಳನ್ನೇ ಉಪಯೋಗಿಸಬೇಕು?

9 ಬೈಬಲ್‌ ನಮಗೆ ಏನು ಕಲಿಸುತ್ತದೆ?ಮತ್ತು ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ * ಪುಸ್ತಕಗಳನ್ನು ಉಪಯೋಗಿಸಿ. ಯೆಹೋವನನ್ನು ಪ್ರೀತಿಸುವಂತೆ ವಿದ್ಯಾರ್ಥಿಗೆ ನಾವು ಸಹಾಯ ಮಾಡಲಿಕ್ಕಾಗಿಯೇ ಈ ಪ್ರಕಾಶನಗಳನ್ನು ತಯಾರಿಸಲಾಗಿದೆ. ಉದಾಹರಣೆಗೆ, ಬೈಬಲ್‌ ಕಲಿಸುತ್ತದೆ ಪುಸ್ತಕದ ಒಂದನೇ ಅಧ್ಯಾಯದಿಂದ, ‘ದೇವರಿಗೆ ನಮ್ಮ ಬಗ್ಗೆ ಚಿಂತೆ ಇದೆಯಾ?, ನಮ್ಮ ಕಷ್ಟ ನೋಡುವಾಗ ದೇವರಿಗೆ ಹೇಗನಿಸುತ್ತದೆ?, ನಾವು ಯೆಹೋವನ ಸ್ನೇಹಿತರಾಗಲು ಸಾಧ್ಯನಾ?’ ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಬಹುದು. “ದೇವರ ಪ್ರೀತಿ” ಪುಸ್ತಕವು, ವಿದ್ಯಾರ್ಥಿ ಬೈಬಲ್‌ ತತ್ವಗಳನ್ನು ಅನ್ವಯಿಸುವುದರಿಂದ ಅವ್ರ ಜೀವನ ಹೇಗೆ ಒಳ್ಳೇದಾಗುತ್ತೆ ಮತ್ತು ಅವ್ರು ಯೆಹೋವನಿಗೆ ಹೇಗೆ ಹತ್ತಿರ ಆಗ್ತಾರೆ ಅಂತ ಅರ್ಥಮಾಡ್ಕೊಳ್ಳಲು ಸಹಾಯ ಮಾಡುತ್ತದೆ. ನೀವು ಈ ಪುಸ್ತಕಗಳನ್ನು ಉಪಯೋಗಿಸಿ ಈಗಾಗಲೇ ಅನೇಕ ಜನ್ರಿಗೆ ಬೈಬಲನ್ನು ಕಲಿಸಿರಬಹುದು. ಹಾಗಂತ, ಈಗ ಬೈಬಲ್‌ ಕಲಿಸಲು ಹೋಗುವಾಗ ತಯಾರಿ ಮಾಡದೇ ಹೋಗಬೇಡಿ. ಪ್ರತಿ ಸಾರಿ ಬೈಬಲ್‌ ಕಲಿಸಲು ಹೋಗುವ ಮುಂಚೆ ವಿದ್ಯಾರ್ಥಿಯ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟು ಚೆನ್ನಾಗಿ ತಯಾರಿ ಮಾಡಿ.

10 ವಿದ್ಯಾರ್ಥಿಯು ಬೋಧನಾ ಸಲಕರಣೆಗಳಲ್ಲಿ ಇಲ್ಲದ ಒಂದು ಪ್ರಕಾಶನದಲ್ಲಿರುವ ವಿಷ್ಯದ ಬಗ್ಗೆ ಆಸಕ್ತಿ ತೋರಿಸಿದ್ದಾರೆ ಅಂತ ಇಟ್ಟುಕೊಳ್ಳಿ. ಆಗ ನೀವು ಅವ್ರಿಗೆ ಬಿಡುವಿದ್ದಾಗ ಆ ಪ್ರಕಾಶನವನ್ನು ಓದುವಂತೆ ಉತ್ತೇಜಿಸಬಹುದು. ಹೀಗೆ ಮಾಡೋದ್ರಿಂದ ಮೇಲೆ ತಿಳಿಸಲಾದ ಎರಡು ಪುಸ್ತಕಗಳಲ್ಲಿ ಯಾವ ಪುಸ್ತಕದಿಂದ ನೀವು ಅಧ್ಯಯನ ಮಾಡುತ್ತಿದ್ರೋ ಅದನ್ನ ಮುಂದುವರಿಸಿಕೊಂಡು ಹೋಗ್ಲಿಕ್ಕೆ ಸಹಾಯ ಆಗುತ್ತೆ.

ಬೈಬಲ್‌ ಕಲಿಸೋದಕ್ಕಿಂತ ಮುಂಚೆ ಪ್ರಾರ್ಥಿಸಿ (ಪ್ಯಾರ 11 ನೋಡಿ)

11. (ಎ) ಬೈಬಲ್‌ ಕಲಿಸುವ ಮುಂಚೆ ಮತ್ತು ನಂತ್ರ ಪ್ರಾರ್ಥನೆ ಮಾಡುವುದನ್ನ ಯಾವಾಗ ಆರಂಭಿಸಬೇಕು? (ಬಿ) ಇದೆಷ್ಟು ಪ್ರಾಮುಖ್ಯ ಅಂತ ವಿದ್ಯಾರ್ಥಿಯ ಮನಸ್ಸಿಗೆ ಹೇಗೆ ನಾಟಿಸಬಹುದು?

11 ಬೈಬಲ್‌ ಕಲಿಸೋದಕ್ಕಿಂತ ಮುಂಚೆ ಪ್ರಾರ್ಥಿಸಿ. ಬೈಬಲ್‌ ಕಲಿಸುವ ಮುಂಚೆ ಮತ್ತು ನಂತ್ರ ಪ್ರಾರ್ಥನೆ ಮಾಡಿ. ಪ್ರತಿ ವಾರ ತಪ್ಪದೇ ಬೈಬಲ್‌ ಕಲಿಸಲು ಆರಂಭಿಸಿದ ಮೇಲೆ ಸಾಧ್ಯವಾದಷ್ಟು ಬೇಗ ಇದನ್ನು ಮಾಡಲು ಪ್ರಾರಂಭಿಸಿ. ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲು ಪವಿತ್ರಾತ್ಮ ಶಕ್ತಿ ಬೇಕು ಅನ್ನೋದನ್ನು ವಿದ್ಯಾರ್ಥಿಯ ಮನಸ್ಸಿಗೆ ನಾಟಿಸಬೇಕು. ಬೈಬಲ್‌ ಕಲಿಸೋ ಮುಂಚೆ ಯಾಕೆ ಪ್ರಾರ್ಥನೆ ಮಾಡ್ಬೇಕು ಅಂತ ತಿಳಿಸ್ಲಿಕ್ಕೆ ಕೆಲವ್ರು ಯಾಕೋಬ 1:5 ನೇ ವಚನವನ್ನು ಉಪಯೋಗಿಸುತ್ತಾರೆ. ಅಲ್ಲಿ, “ನಿಮ್ಮಲ್ಲಿ ಯಾವನಿಗಾದರೂ ವಿವೇಕದ ಕೊರತೆಯಿರುವಲ್ಲಿ ಅವನು ದೇವರನ್ನು ಕೇಳಿಕೊಳ್ಳುತ್ತಾ ಇರಲಿ” ಅಂತ ಹೇಳುತ್ತೆ. ಬೈಬಲ್‌ ಕಲಿಸುವವ್ರು ಆ ವಚನವನ್ನು ಓದಿದ ನಂತ್ರ ವಿದ್ಯಾರ್ಥಿಗೆ ಹೀಗೆ ಕೇಳುತ್ತಾರೆ: ‘ದೇವರ ಹತ್ರ ವಿವೇಕಕ್ಕಾಗಿ ಹೇಗೆ ಕೇಳ್ಕೊಬಹುದು?’ ಆಗ ವಿದ್ಯಾರ್ಥಿ ಸಾಮಾನ್ಯವಾಗಿ, ದೇವರಿಗೆ ಪ್ರಾರ್ಥನೆ ಮಾಡ್ಬೇಕು ಅಂತ ಹೇಳ್ತಾರೆ.

12. ವಿದ್ಯಾರ್ಥಿಯು ಪ್ರಾರ್ಥನೆ ಮಾಡುವಾಗ ಯೆಹೋವನಿಗೆ ಮನಸ್ಸುಬಿಚ್ಚಿ ಮಾತಾಡುವಂತೆ ಕಲಿಸಲು ಕೀರ್ತನೆ 139:2-4 ನ್ನು ಹೇಗೆ ಉಪಯೋಗಿಸುತ್ತೀರಿ?

12 ಪ್ರಾರ್ಥನೆ ಮಾಡುವುದು ಹೇಗೆಂದು ವಿದ್ಯಾರ್ಥಿಗೆ ಕಲಿಸಿ. ವಿದ್ಯಾರ್ಥಿಯು ಮನದಾಳದಿಂದ ಪ್ರಾರ್ಥನೆ ಮಾಡಬೇಕೆಂದು ಯೆಹೋವನು ಬಯಸ್ತಾನೆ ಅನ್ನೋದನ್ನ ಅವ್ರಿಗೆ ಅರ್ಥಮಾಡಿಸಿ. ನಾವು ಯೆಹೋವನಿಗೆ ನಮ್ಮ ಮನಸ್ಸಿನಲ್ಲಿ ಇರುವುದನ್ನೆಲ್ಲ ಹೇಳ್ಕೊಬಹುದು ಅಂದ್ರೆ ಬೇರೆ ಯಾರಿಗೂ ಹೇಳ್ದೇ ಇರುವ ಭಾವನೆಗಳನ್ನು ಕೂಡ ಹೇಳ್ಕೊಬಹುದು ಅಂತ ವಿದ್ಯಾರ್ಥಿಗೆ ವಿವರಿಸಿ. ಹೇಗಿದ್ದರೂ ಯೆಹೋವನಿಗೆ ನಮ್ಮ ಎಲ್ಲಾ ಆಲೋಚನೆಗಳು ಗೊತ್ತಿರುತ್ತವೆ. (ಕೀರ್ತನೆ 139:2-4 ಓದಿ.) ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಲು ಮತ್ತು ತಮ್ಮ ಯೋಚನಾ ರೀತಿಯನ್ನು ಬದಲಾಯಿಸಿಕೊಳ್ಳಲು ಸಹಾಯ ಮಾಡುವಂತೆ ದೇವರ ಹತ್ತಿರ ಪ್ರಾರ್ಥಿಸಲು ವಿದ್ಯಾರ್ಥಿಗೆ ಪ್ರೋತ್ಸಾಹಿಸಿ. ಸುಮಾರು ಸಮಯದಿಂದ ನಮ್ಮ ಹತ್ತಿರ ಬೈಬಲ್‌ ಕಲಿಯುತ್ತಿರುವ ಒಬ್ಬ ವಿದ್ಯಾರ್ಥಿಗೆ ಸುಳ್ಳು ಧರ್ಮಕ್ಕೆ ಸಂಬಂಧಿಸಿದ ಒಂದು ಹಬ್ಬ ತುಂಬ ಇಷ್ಟ ಅಂತ ನೆನಸಿ. ಅವರಿಗದು ತಪ್ಪಂತ ಗೊತ್ತಿದೆ, ಆದ್ರೆ ಆ ಹಬ್ಬದಲ್ಲಿ ಮಾಡುವ ಕೆಲವು ವಿಷಯಗಳು ಅವ್ರಿಗೆ ತುಂಬ ಇಷ್ಟ ಇರುತ್ತವೆ. ಹಾಗಿದ್ದರೆ, ಅವ್ರಿಗೆ ಅದ್ರ ಬಗ್ಗೆ ಹೇಗನಿಸುತ್ತದೆ ಅಂತ ಯೆಹೋವನ ಹತ್ತಿರ ಹೇಳಿಕೊಳ್ಳುವಂತೆ ಮತ್ತು ‘ನೀನು ಪ್ರೀತಿಸುವುದನ್ನೇ ಪ್ರೀತಿಸಲು ಸಹಾಯ ಮಾಡು’ ಅಂತ ಪ್ರಾರ್ಥಿಸುವಂತೆ ಉತ್ತೇಜಿಸಿ.—ಕೀರ್ತ. 97:10.

ವಿದ್ಯಾರ್ಥಿಯನ್ನು ಕೂಟಗಳಿಗೆ ಕರೆಯಿರಿ (ಪ್ಯಾರ 13 ನೋಡಿ)

13. (ಎ) ವಿದ್ಯಾರ್ಥಿಯನ್ನು ಕೂಟಗಳಿಗೆ ಯಾಕೆ ಆದಷ್ಟು ಬೇಗ ಕರೆಯಬೇಕು? (ಬಿ) ಕೂಟಗಳಿಗೆ ಬರಲು ವಿದ್ಯಾರ್ಥಿಗೆ ಸಂಕೋಚ ಆಗಬಾರದೆಂದರೆ ನಾವೇನು ಮಾಡಬೇಕು?

13 ಆದಷ್ಟು ಬೇಗ ವಿದ್ಯಾರ್ಥಿಯನ್ನು ಕೂಟಗಳಿಗೆ ಕರೆಯಿರಿ. ಕೂಟಗಳಲ್ಲಿ ಕೇಳಿಸಿಕೊಳ್ಳುವ ಮತ್ತು ನೋಡುವ ವಿಷಯಗಳು ವಿದ್ಯಾರ್ಥಿಯ ಮನಸ್ಸಿನ ಮೇಲೆ ತುಂಬ ಪ್ರಭಾವ ಬೀರುತ್ತವೆ ಮತ್ತು ಪ್ರಗತಿ ಮಾಡಲು ಸಹಾಯ ಮಾಡುತ್ತವೆ. ಹಾಗಾಗಿ, ರಾಜ್ಯಸಭಾಗೃಹದಲ್ಲಿ ಏನು ನಡೆಯುತ್ತದೆ? ಎಂಬ ವಿಡಿಯೋವನ್ನು ತೋರಿಸಿ, ನಿಮ್ಮ ಜೊತೆ ಕೂಟಗಳಿಗೆ ಬರುವಂತೆ ಪ್ರೀತಿಯಿಂದ ಕರೆಯಿರಿ. ಸಾಧ್ಯ ಆಗೋದಾದ್ರೆ ಕೂಟಗಳಿಗೆ ಕರೆದುಕೊಂಡು ಹೋಗಲು ಏರ್ಪಾಡು ಮಾಡಿ. ಪ್ರತಿ ಸಾರಿ ಬೈಬಲ್‌ ಕಲಿಸಲಿಕ್ಕೆ ಹೋದಾಗ ಬೇರೆ-ಬೇರೆ ಪ್ರಚಾರಕರನ್ನು ಕರೆದುಕೊಂಡು ಹೋಗುವುದು ಒಳ್ಳೇದು. ಹೀಗೆ ಮಾಡೋದ್ರಿಂದ ವಿದ್ಯಾರ್ಥಿಗೆ ಸಭೆಯಲ್ಲಿರುವವರೆಲ್ಲರ ಪರಿಚಯ ಆಗುತ್ತದೆ ಮತ್ತು ಕೂಟಗಳಿಗೆ ಬರಲು ಸಂಕೋಚ ಆಗಲ್ಲ.

ವಿದ್ಯಾರ್ಥಿಗೆ ಪ್ರಗತಿ ಮಾಡಲು ಸಹಾಯ ಮಾಡಿ

14. ಬೇರೆಯವ್ರಿಗೆ ಸಹಾಯ ಮಾಡಲು ವಿದ್ಯಾರ್ಥಿಗೆ ಯಾವುದು ಪ್ರೇರೇಪಿಸುತ್ತದೆ?

14 ಪ್ರಗತಿ ಮಾಡಲು ವಿದ್ಯಾರ್ಥಿಗೆ ಸಹಾಯ ಮಾಡುವುದೇ ನಮ್ಮ ಗುರಿಯಾಗಿದೆ. (ಎಫೆ. 4:13) ಒಬ್ಬ ವ್ಯಕ್ತಿ ಬೈಬಲ್‌ ಕಲಿಯೋಕೆ ಆರಂಭಿಸಿದಾಗ ಅದ್ರಿಂದ ತನಗೇನು ಪ್ರಯೋಜನ ಆಗುತ್ತೆ ಅಂತ ತಿಳುಕೊಳ್ಳೋಕೆ ಹೆಚ್ಚು ಆಸಕ್ತಿ ತೋರಿಸಬಹುದು. ಆದ್ರೆ ಆತನಿಗೆ ಯೆಹೋವನ ಮೇಲೆ ಪ್ರೀತಿ ಹೆಚ್ಚಾದಂತೆ ಸಭೆಯಲ್ಲಿರುವವ್ರಿಗೆ ಮತ್ತು ಬೇರೆಯವ್ರಿಗೆ ತಾನು ಹೇಗೆ ಸಹಾಯ ಮಾಡಬಹುದು ಅಂತ ಯೋಚಿಸೋಕೆ ಶುರು ಮಾಡ್ತಾನೆ. (ಮತ್ತಾ. 22:37-39) ಲೋಕವ್ಯಾಪಕ ಕೆಲಸವನ್ನು ಬೆಂಬಲಿಸಲಿಕ್ಕಾಗಿ ಕಾಣಿಕೆಗಳನ್ನು ಕೊಡುವ ಅವಕಾಶದ ಬಗ್ಗೆ ವಿದ್ಯಾರ್ಥಿಗೆ ಸರಿಯಾದ ಸಮಯ ನೋಡಿ ಹೇಳಿ. ಇದನ್ನು ಮಾಡಲು ಹಿಂಜರಿಯಬೇಡಿ.

ಸಮಸ್ಯೆ ಬಂದಾಗ ಏನು ಮಾಡಬೇಕೆಂದು ವಿದ್ಯಾರ್ಥಿಗೆ ಕಲಿಸಿ (ಪ್ಯಾರ 15 ನೋಡಿ)

15. ಸಮಸ್ಯೆ ಬಂದಾಗ ಏನು ಮಾಡಬೇಕೆಂದು ನಾವು ವಿದ್ಯಾರ್ಥಿಗೆ ಹೇಗೆ ಕಲಿಸಬಹುದು?

15 ಸಮಸ್ಯೆ ಬಂದಾಗ ಏನು ಮಾಡಬೇಕೆಂದು ವಿದ್ಯಾರ್ಥಿಗೆ ಕಲಿಸಿ. ಉದಾಹರಣೆಗೆ, ದೀಕ್ಷಾಸ್ನಾನವಾಗಿರದ ಪ್ರಚಾರಕನಾಗಿರುವ ನಿಮ್ಮ ವಿದ್ಯಾರ್ಥಿ ನಿಮ್ಮ ಹತ್ರ ಬಂದು, ಸಭೆಯಲ್ಲಿ ಯಾರೋ ಒಬ್ಬರು ಅವನಿಗೆ ನೋವು ಮಾಡಿದ್ದಾರೆ ಅಂತ ಹೇಳಿದ ಎಂದು ನೆನಸಿ. ಆಗ ನೀವೇನು ಮಾಡ್ತೀರಿ? ನೀವು ಯಾರ ಪರನೂ ವಹಿಸದೆ ಈ ಸನ್ನಿವೇಶದಲ್ಲಿ ಏನು ಮಾಡಬೇಕಂತ ಬೈಬಲ್‌ ಹೇಳುತ್ತೆ ಅನ್ನೋದನ್ನ ವಿದ್ಯಾರ್ಥಿಗೆ ವಿವರಿಸಿ. ನೋವು ಮಾಡಿರುವ ಆ ಸಹೋದರನನ್ನ ವಿದ್ಯಾರ್ಥಿ ಕ್ಷಮಿಸಿ ಮರೆತುಬಿಡಬೇಕು. ಒಂದು ವೇಳೆ, ಮರೆತುಬಿಡೋಕೆ ಕಷ್ಟವಾದ್ರೆ ‘ಸಹೋದರನನ್ನ ಸಂಪಾದಿಸುವ’ ಉದ್ದೇಶದಿಂದ ಅವ್ರ ಹತ್ತಿರ ಹೋಗಿ ದಯೆ ಮತ್ತು ಪ್ರೀತಿಯಿಂದ ಮಾತಾಡಬೇಕು. (ಮತ್ತಾಯ 18:15 ಹೋಲಿಸಿ.) ಸಹೋದರನ ಹತ್ರ ಹೋಗಿ ಮಾತಾಡೋದಾದ್ರೆ ಅವ್ರ ಹತ್ರ ಏನು ಹೇಳಬೇಕು ಅನ್ನೋದನ್ನ ತಯಾರಿ ಮಾಡಲು ವಿದ್ಯಾರ್ಥಿಗೆ ಸಹಾಯ ಮಾಡಿ. ಈ ಸನ್ನಿವೇಶದಲ್ಲಿ ಏನೆಲ್ಲಾ ಮಾಡಬಹುದು ಎಂದು ಕಲಿಯಲಿಕ್ಕಾಗಿ JW ಲೈಬ್ರರಿ ಆ್ಯಪ್‌®, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ, jw.org® ವೆಬ್‌ಸೈಟನ್ನು ಹೇಗೆ ಉಪಯೋಗಿಸುವುದೆಂದು ವಿದ್ಯಾರ್ಥಿಗೆ ತೋರಿಸಿಕೊಡಿ. ಬೇರೆಯವ್ರ ಜೊತೆ ಮನಸ್ತಾಪವಾದಾಗ ಹೇಗೆ ಸರಿಮಾಡಿಕೊಳ್ಳಬೇಕು ಅಂತ ವಿದ್ಯಾರ್ಥಿಯು ದೀಕ್ಷಾಸ್ನಾನಕ್ಕೆ ಮುಂಚೆನೇ ಕಲಿತಿದ್ದರೆ ದೀಕ್ಷಾಸ್ನಾನ ಆದ ಮೇಲೂ ಸಭೆಯಲ್ಲಿರುವ ಬೇರೆಯವ್ರ ಜೊತೆ ಪ್ರೀತಿಯಿಂದ ಚೆನ್ನಾಗಿ ಇರುತ್ತಾರೆ.

16. ಬೈಬಲ್‌ ಕಲಿಸಲು ಹೋಗುವಾಗ ನಿಮ್ಮ ಜೊತೆಯಲ್ಲಿ ಪ್ರಚಾರಕರನ್ನು ಕರೆದುಕೊಂಡು ಹೋಗೋದ್ರಿಂದ ಏನು ಪ್ರಯೋಜನ?

16 ಬೈಬಲ್‌ ಕಲಿಸಲು ಹೋಗುವಾಗ ಜೊತೆಯಲ್ಲಿ ನಿಮ್ಮ ಸಭೆಯ ಪ್ರಚಾರಕರನ್ನು ಮತ್ತು ಸಂಚರಣ ಮೇಲ್ವಿಚಾರಕರನ್ನು ಕರೆದುಕೊಂಡು ಹೋಗಿ. ಹೀಗೆ ಮಾಡೋದ್ರಿಂದ ಮೇಲೆ ತಿಳಿಸಲಾದ ಪ್ರಯೋಜನಗಳಲ್ಲದೆ ಇನ್ನೂ ಅನೇಕ ಪ್ರಯೋಜನಗಳಿವೆ. ಕೆಲವು ವಿಷಯಗಳಲ್ಲಿ ನೀವು ವಿದ್ಯಾರ್ಥಿಗೆ ಅಷ್ಟೊಂದು ಸಹಾಯ ಮಾಡಲಿಕ್ಕಾಗದೇ ಇರಬಹುದು, ಆದ್ರೆ ನಿಮ್ಮ ಜೊತೆ ಬಂದ ಪ್ರಚಾರಕರಿಂದ ಅದನ್ನು ಮಾಡೋಕಾಗಬಹುದು. ಉದಾಹರಣೆಗೆ, ನಿಮ್ಮ ವಿದ್ಯಾರ್ಥಿಗೆ ಎಷ್ಟು ಪ್ರಯತ್ನಿಸಿದರೂ ಸಿಗರೇಟ್‌ ಸೇದುವ ಅಭ್ಯಾಸವನ್ನು ಬಿಟ್ಟುಬಿಡಲು ಆಗುತ್ತಿಲ್ಲ ಅಂತ ನೆನಸಿ. ಆಗ, ಇದೇ ರೀತಿ ಕಷ್ಟಪಟ್ಟು ಸಿಗರೇಟ್‌ ಸೇದುವ ಅಭ್ಯಾಸವನ್ನು ಬಿಟ್ಟುಬಿಟ್ಟಿರುವ ಒಬ್ಬ ಸಹೋದರನನ್ನು ನಿಮ್ಮ ಜೊತೆ ಕರೆದುಕೊಂಡು ಹೋಗಬಹುದು. ಆ ಸಹೋದರನು ತುಂಬ ಒಳ್ಳೇ ಸಲಹೆಗಳನ್ನು ಕೊಡಬಹುದು. ಇದ್ರಿಂದ ನಿಮ್ಮ ವಿದ್ಯಾರ್ಥಿಗೆ ಸಹಾಯವಾಗಬಹುದು. ಅನುಭವ ಇರುವ ಸಹೋದರನನ್ನು ನಿಮ್ಮ ಜೊತೆ ಕರೆದುಕೊಂಡು ಹೋದಾಗ ಅವರೆದುರು ಬೈಬಲನ್ನು ಕಲಿಸಲು ನಿಮಗೆ ಕಷ್ಟವಾಗುವುದಾದರೆ ಆ ಒಂದು ದಿನದ ಮಟ್ಟಿಗೆ ನಿಮ್ಮ ವಿದ್ಯಾರ್ಥಿಗೆ ಬೈಬಲ್‌ ಕಲಿಸುವಂತೆ ಆ ಸಹೋದರನಿಗೇ ಹೇಳಿ. ಹೀಗೆ ನೀವು ನಿಮ್ಮ ಜೊತೆಯಲ್ಲಿ ಬೇರೆ-ಬೇರೆ ಪ್ರಚಾರಕರನ್ನು ಕರಕೊಂಡು ಹೋಗೋದಾದ್ರೆ ಅವರ ಅನುಭವದಿಂದ ನಿಮ್ಮ ವಿದ್ಯಾರ್ಥಿಗೆ ಸಹಾಯವಾಗುತ್ತದೆ. ನಾವು ಇದನ್ನೆಲ್ಲಾ ಮಾಡುವುದು ನಮ್ಮ ವಿದ್ಯಾರ್ಥಿ ಪ್ರಗತಿ ಮಾಡಬೇಕೆಂಬ ಉದ್ದೇಶದಿಂದಲೇ ಅನ್ನೋದನ್ನ ಮರೆಯಬೇಡಿ.

ಬೈಬಲ್‌ ಕಲಿಸುವುದನ್ನು ನಿಲ್ಲಿಸಬೇಕಾ?

17-18. ಬೈಬಲ್‌ ಕಲಿಸೋದನ್ನು ನಿಲ್ಲಿಸಬೇಕಾ ಬೇಡ್ವಾ ಅಂತ ನಿರ್ಣಯಿಸುವ ಮುಂಚೆ ಏನೆಲ್ಲಾ ಮಾಡಬೇಕು?

17 ನಿಮ್ಮ ವಿದ್ಯಾರ್ಥಿಯು ಜೀವನದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುತ್ತಾ ಇಲ್ಲ ಅಂತಾದ್ರೆ ಒಂದಲ್ಲ ಒಂದು ದಿನ ನೀವು ಅವ್ರಿಗೆ ಬೈಬಲ್‌ ಕಲಿಸುವುದನ್ನು ನಿಲ್ಲಿಸಬೇಕಾ ಅಂತ ನಿರ್ಣಯಿಸಬೇಕಾಗುತ್ತೆ. ಈ ನಿರ್ಣಯ ಮಾಡೋ ಮುಂಚೆ ನೀವು ನಿಮ್ಮ ವಿದ್ಯಾರ್ಥಿಗೆ ಎಷ್ಟು ಸಾಮರ್ಥ್ಯ ಇದೆ ಅನ್ನೋದನ್ನೂ ಯೋಚಿಸಬೇಕು. ಯಾಕೆಂದ್ರೆ, ಒಬ್ಬರು ಸ್ವಲ್ಪ ಬೇಗ ಪ್ರಗತಿ ಮಾಡಿದ್ರೆ ಇನ್ನೊಬ್ಬರು ಸ್ವಲ್ಪ ನಿಧಾನವಾಗಿ ಮಾಡ್ತಾರೆ. ಹಾಗಾಗಿ, ಹೀಗೆ ಕೇಳಿಕೊಳ್ಳಿ: ನನ್ನ ವಿದ್ಯಾರ್ಥಿ ತನ್ನಿಂದಾದಷ್ಟು ವೇಗವಾಗಿ ಪ್ರಗತಿ ಮಾಡುತ್ತಿದ್ದಾನಾ? ತಾನು ಕಲಿತ ವಿಷಯಗಳನ್ನು ಜೀವನದಲ್ಲಿ ‘ಪಾಲಿಸುತ್ತಾ’ ಇದ್ದಾನಾ? (ಮತ್ತಾ. 28:20) ಕೆಲವು ವಿದ್ಯಾರ್ಥಿಗಳು ಶಿಷ್ಯರಾಗಲಿಕ್ಕೆ ತುಂಬ ಸಮಯ ತೆಗೆದುಕೊಳ್ಳಬಹುದು. ಆದ್ರೆ ಅವ್ರು ನಿಧಾನವಾಗಿಯಾದರೂ ಪ್ರಗತಿ ಮಾಡುತ್ತಿರಬೇಕು.

18 ನಮ್ಮ ಜೊತೆ ಬೈಬಲ್‌ ಕಲಿಯುತ್ತಿರುವ ಯಾರಾದರೊಬ್ಬರು ಅದಕ್ಕೆ ಅಷ್ಟೇನೂ ಪ್ರಾಮುಖ್ಯತೆ ಕೊಡುತ್ತಾ ಇಲ್ಲ ಅಂದ್ರೆ ಏನು ಮಾಡಬೇಕು? ಉದಾಹರಣೆಗೆ, ನಿಮ್ಮ ವಿದ್ಯಾರ್ಥಿಯೊಬ್ಬರು ಈಗಾಗಲೇ ಬೈಬಲ್‌ ಕಲಿಸುತ್ತದೆ ಪುಸ್ತಕದಿಂದ ಕಲಿತು“ದೇವರ ಪ್ರೀತಿ” ಪುಸ್ತಕದಿಂದ ಕಲಿಯಲು ಆರಂಭಿಸಿದ್ದಾರೆ. ಆದ್ರೆ ಅವ್ರು ಒಂದು ಸಲನೂ ಕೂಟಕ್ಕೆ ಬಂದಿಲ್ಲ, ಸ್ಮರಣೆಗೆ ಸಹ ಬಂದಿಲ್ಲ ಅಂತ ನೆನಸಿ. ಅಷ್ಟೇ ಅಲ್ಲ, ಅವ್ರು ಆಗಾಗ ಚಿಕ್ಕಪುಟ್ಟ ಕಾರಣಗಳಿಗೂ ‘ಇವತ್ತು ಬೈಬಲ್‌ ಕಲಿಯೋದು ಬೇಡ’ ಅಂತ ಮುಂದೂಡುತ್ತಾರೆ. ಇಂಥ ಸನ್ನಿವೇಶದಲ್ಲಿ ನೀವು ನಿಮ್ಮ ವಿದ್ಯಾರ್ಥಿ ಜೊತೆ ನೇರವಾಗಿ ಈ ವಿಷಯದ ಬಗ್ಗೆ ಮಾತಾಡಬೇಕು. *

19. (ಎ) ನಮ್ಮ ಜೊತೆ ಬೈಬಲ್‌ ಕಲಿಯುತ್ತಿರುವ ಯಾರಾದರೊಬ್ಬರು ಅದಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಡ್ತಾ ಇಲ್ಲ ಅಂದ್ರೆ ಏನು ಹೇಳಬಹುದು? (ಬಿ) ಅವ್ರು ಕೊಡುವ ಉತ್ತರ ನಮಗೆ ನಿರ್ಣಯ ಮಾಡಲು ಹೇಗೆ ಸಹಾಯ ಮಾಡುತ್ತದೆ?

19 ನೀವು ನಿಮ್ಮ ಬೈಬಲ್‌ ವಿದ್ಯಾರ್ಥಿಗೆ, ‘ಯೆಹೋವನ ಸಾಕ್ಷಿಯಾಗಲು ನಿಮಗೇನಾದ್ರೂ ಅಡ್ಡಿ-ತಡೆಗಳಿದೆಯಾ?, ಯಾವುದಾದ್ರೂ ಬದಲಾವಣೆ ಮಾಡಿಕೊಳ್ಳೋಕೆ ಕಷ್ಟ ಆಗ್ತಿದೆಯಾ?’ ಅಂತ ಕೇಳಬಹುದು. ಆಗ ವಿದ್ಯಾರ್ಥಿ, ‘ನನಗೆ ಬೈಬಲ್‌ ಕಲಿಯೋಕಿಷ್ಟ, ಆದ್ರೆ ನಾನು ಯಾವತ್ತೂ ಯೆಹೋವನ ಸಾಕ್ಷಿ ಆಗಲ್ಲ’ ಅಂತ ಹೇಳಬಹುದು. ವಿದ್ಯಾರ್ಥಿ ಈ ರೀತಿ ಉತ್ತರಿಸೋದಾದ್ರೆ ಅವ್ರಿಗೆ ಬೈಬಲ್‌ ಕಲಿಸೋದನ್ನು ನಿಲ್ಲಿಸೋದು ಒಳ್ಳೇದು. ಮೇಲೆ ತಿಳಿಸಿದ ಪ್ರಶ್ನೆಯನ್ನು ಕೇಳಿದಾಗ ವಿದ್ಯಾರ್ಥಿ ಕೆಲವೊಮ್ಮೆ ಅವರಿಗೇನು ಸಮಸ್ಯೆ ಇದೆ ಅಂತನೂ ಹೇಳಬಹುದು. ಉದಾಹರಣೆಗೆ, ‘ಮನೆಯಿಂದ ಮನೆಗೆ ಹೋಗಿ ಸಾರೋಕಂತೂ ನನ್ನಿಂದ ಯಾವತ್ತೂ ಆಗಲ್ಲ ಅನ್ಸುತ್ತೆ’ ಅಂತ ಹೇಳಿದ್ರು ಅಂದ್ಕೊಳ್ಳಿ. ಈಗ ನಿಮಗೆ ಅವ್ರ ಸಮಸ್ಯೆ ಏನಂತ ಗೊತ್ತಿರೋದರಿಂದ ನೀವು ಅವ್ರಿಗೆ ಸಹಾಯ ಮಾಡೋಕೆ ಸಾಧ್ಯ ಆಗುತ್ತೆ.

ಪ್ರಗತಿ ಮಾಡದಿರುವವರಿಗೆ ಬೈಬಲ್‌ ಕಲಿಸುತ್ತಾ ಸಮಯ ಕಳೆಯಬೇಡಿ (ಪ್ಯಾರ 20 ನೋಡಿ)

20. ಯಾರಿಗೆ ಬೈಬಲ್‌ ಕಲಿಸಬೇಕು ಅನ್ನೋದನ್ನು ನಿರ್ಣಯಿಸಲು ಅಪೊಸ್ತಲರ ಕಾರ್ಯಗಳು 13:48 ಹೇಗೆ ಸಹಾಯ ಮಾಡುತ್ತದೆ?

20 ಕೆಲವು ವಿದ್ಯಾರ್ಥಿಗಳು ಯೆಹೆಜ್ಕೇಲನ ಸಮಯದಲ್ಲಿದ್ದ ಇಸ್ರಾಯೇಲ್ಯರಂತೆ ಇದ್ದಾರೆ. ಅವ್ರ ಬಗ್ಗೆ ಯೆಹೋವನು ಯೆಹೆಜ್ಕೇಲನಿಗೆ ಹೀಗೆ ಹೇಳಿದನು: “ಇಗೋ, ನಿನ್ನ ಮಾತು ಅವ್ರ ಎಣಿಕೆಯಲ್ಲಿ ಒಬ್ಬ ಸಂಗೀತಗಾರನು ವಾದ್ಯವನ್ನು ಜಾಣತನದಿಂದ ಬಾರಿಸಿ ಮಧುರಸ್ವರದಿಂದ ಹಾಡುವ ಪ್ರೇಮಗೀತಕ್ಕೆ ಸಮಾನವಾಗಿದೆ; ನಿನ್ನ ಮಾತುಗಳನ್ನು ಕೇಳುತ್ತಾರೆ, ಆದ್ರೆ ಕೈಕೊಳ್ಳುವದಿಲ್ಲ.” (ಯೆಹೆ. 33:32) ಇನ್ನು ಮುಂದೆ ಬೈಬಲ್‌ ಕಲಿಸುವುದಿಲ್ಲ ಅಂತ ವಿದ್ಯಾರ್ಥಿಗೆ ಹೇಳೋಕೆ ನಿಮಗೆ ತುಂಬ ಕಷ್ಟ ಆಗಬಹುದು. ಆದ್ರೆ, ನಮಗೆ “ಉಳಿದಿರುವ ಸಮಯವು ಕೊಂಚವೇ ಆಗಿದೆ.” (1 ಕೊರಿಂ. 7:29) ಹಾಗಾಗಿ, ಪ್ರಗತಿ ಮಾಡದೇ ಇರುವವ್ರಿಗೆ ಬೈಬಲ್‌ ಕಲಿಸೋದನ್ನು ನಿಲ್ಲಿಸೋದು ಒಳ್ಳೇದು. ಆ ಸಮಯವನ್ನು ನಾವು ‘ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವವಿರುವ’ ಜನರನ್ನು ಹುಡುಕಲಿಕ್ಕಾಗಿ ಉಪಯೋಗಿಸಬಹುದು.—ಅಪೊಸ್ತಲರ ಕಾರ್ಯಗಳು 13:48 ಓದಿ.

ಸಹಾಯಕ್ಕಾಗಿ ಪ್ರಾರ್ಥಿಸುತ್ತಿರುವ ಬೇರೆ ಯಾರಾದರೂ ನಿಮ್ಮ ಟೆರಿಟೊರಿಯಲ್ಲಿ ಇರಬಹುದು (ಪ್ಯಾರ 20 ನೋಡಿ)

21. (ಎ) 2020 ರ ವರ್ಷವಚನ ಏನು? (ಬಿ) ಈ ವಚನ ನಮಗೆ ಯಾವ ಸಹಾಯ ಮಾಡುತ್ತದೆ?

21 ನಾವು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಇನ್ನೂ ಉತ್ತಮವಾಗಿ ಹೇಗೆ ಮಾಡಬಹುದು ಎಂದು ಯೋಚಿಸಲು 2020 ರ ವರ್ಷವಚನವು ಸಹಾಯ ಮಾಡುತ್ತದೆ. ಯೇಸು ಗಲಿಲಾಯದ ಬೆಟ್ಟದ ಮೇಲೆ ತನ್ನ ಶಿಷ್ಯರ ಜೊತೆ ಸೇರಿಬಂದ ಸಮಯದಲ್ಲಿ ಹೇಳಿದ ಈ ಮಾತುಗಳೇ ನಮ್ಮ ವರ್ಷವಚನವಾಗಿದೆ: ‘ಹೋಗಿ, ಶಿಷ್ಯರನ್ನಾಗಿ ಮಾಡಿ ಮತ್ತು ದೀಕ್ಷಾಸ್ನಾನ ಮಾಡಿಸಿ.’ಮತ್ತಾ. 28:19.

ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಇನ್ನೂ ಉತ್ತಮವಾಗಿ ಮಾಡುವುದು ಮತ್ತು ದೀಕ್ಷಾಸ್ನಾನ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ನಮ್ಮ ದೃಢನಿರ್ಧಾರವಾಗಿರಲಿ (ಪ್ಯಾರ 21 ನೋಡಿ)

ಗೀತೆ 96 ಯೋಗ್ಯರನ್ನು ಹುಡುಕಿ

^ ಪ್ಯಾರ. 5 2020 ರ ವರ್ಷವಚನ ‘ಶಿಷ್ಯರನ್ನಾಗಿ ಮಾಡಿ’ ಅಂತ ನಮ್ಮನ್ನ ಪ್ರೋತ್ಸಾಹಿಸುತ್ತಿದೆ. ಯೆಹೋವನ ಸಾಕ್ಷಿಗಳಾದ ನಾವೆಲ್ಲರೂ ಇದನ್ನ ಮಾಡಬೇಕು. ಆದ್ರೆ ನಮ್ಮ ಬೈಬಲ್‌ ವಿದ್ಯಾರ್ಥಿಗಳು ಮನಸಾರೆ ಯೇಸುವಿನ ಶಿಷ್ಯರಾಗ್ಲಿಕ್ಕೆ ನಾವು ಹೇಗೆ ಅವ್ರನ್ನ ಪ್ರೇರಿಸಬಹುದು ಮತ್ತು ನಮ್ಮ ಬೈಬಲ್‌ ವಿದ್ಯಾರ್ಥಿಗಳು ಯೆಹೋವ ದೇವರಿಗೆ ಹತ್ತಿರ ಆಗೋದಕ್ಕೆ ನಾವು ಹೇಗೆ ಸಹಾಯ ಮಾಡಬಹುದು ಅಂತ ಈ ಲೇಖನದಲ್ಲಿ ನೋಡೋಣ. ಅದ್ರ ಜೊತೆಗೆ, ನಾವು ಒಬ್ಬ ವ್ಯಕ್ತಿಗೆ ಬೈಬಲ್‌ ಕಲಿಸೋದನ್ನ ಮುಂದುವರಿಸಬೇಕಾ ನಿಲ್ಲಿಸಬೇಕಾ ಅಂತ ಹೇಗೆ ನಿರ್ಣಯಿಸೋದು ಅಂತನೂ ನೋಡೋಣ.

^ ಪ್ಯಾರ. 9 ಈ ಪುಸ್ತಕದ ಸರಳೀಕೃತ ಆವೃತ್ತಿ ಕನ್ನಡದಲ್ಲಿ ಬಂದಾಗ ಅದನ್ನೇ ಉಪಯೋಗಿಸಬೇಕು.