ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 11

ನೀವು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೀರಾ?

ನೀವು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೀರಾ?

“ದೀಕ್ಷಾಸ್ನಾನ . . . ನಿಮ್ಮನ್ನು ರಕ್ಷಿಸುತ್ತಿದೆ.”—1 ಪೇತ್ರ 3:21.

ಗೀತೆ 106 ಯೆಹೋವನ ಸ್ನೇಹವನ್ನು ಗಳಿಸುವುದು

ಕಿರುನೋಟ *

1. ಮನೆ ಕಟ್ಟೋ ಮುಂಚೆ ಒಬ್ಬ ವ್ಯಕ್ತಿ ಏನು ಮಾಡ್ಬೇಕು?

ಒಬ್ಬ ವ್ಯಕ್ತಿ ಮನೆ ಕಟ್ಬೇಕು ಅಂತ ಯೋಚಿಸಿದ್ದಾನೆ ಅಂತಿಟ್ಕೊಳ್ಳಿ. ಯಾವ ರೀತಿಯ ಮನೆ ಕಟ್ಬೇಕಂತನೂ ಅವನಿಗೆ ಗೊತ್ತು. ಹಾಗಂತ, ಕೂಡ್ಲೆ ಹೋಗಿ ಬೇಕಾದಂಥ ಸಾಮಗ್ರಿಗಳನ್ನು ತಂದು ಮನೆ ಕಟ್ಟೋಕೆ ಶುರು ಮಾಡ್ತಾನಾ? ಇಲ್ಲ. ಅವ್ನು ಮನೆ ಕಟ್ಟೋದಕ್ಕಿಂತ ಮುಂಚೆ ಒಂದು ಪ್ರಾಮುಖ್ಯವಾದ ಕೆಲ್ಸ ಮಾಡ್ಲೇಬೇಕು. ಮನೆ ಕಟ್ಟೋಕೆ ಎಷ್ಟು ಖರ್ಚಾಗುತ್ತೆ ಅನ್ನೋದನ್ನ ಲೆಕ್ಕಹಾಕ್ಬೇಕು. ಯಾಕೆ? ಯಾಕೆಂದ್ರೆ ಮನೆ ಕಟ್ಟಿ ಮುಗ್ಸೋಕೆ ಬೇಕಾದಷ್ಟು ಹಣ ಇದ್ಯಾ ಇಲ್ವಾ ಅನ್ನೋದು ಅವನಿಗೆ ಮೊದ್ಲೇ ಗೊತ್ತಿರ್ಬೇಕು. ಹಾಗೆ ಲೆಕ್ಕ ಹಾಕಿದ್ರೆ ಮಾತ್ರ ಹೊಸ ಮನೆಯನ್ನ ಕಟ್ಟಿಮುಗಿಸೋಕೆ ಸಾಧ್ಯ.

2. ಲೂಕ 14:27-30 ರ ಪ್ರಕಾರ ದೀಕ್ಷಾಸ್ನಾನಕ್ಕೂ ಮುಂಚೆ ಯಾವ ವಿಷಯದ ಬಗ್ಗೆ ಯೋಚಿಸ್ಬೇಕು?

2 ನೀವು ದೀಕ್ಷಾಸ್ನಾನ ತಗೊಬೇಕಂತ ಯೋಚಿಸೋಕೆ ಕಾರಣ ಯೆಹೋವನ ಮೇಲಿನ ಪ್ರೀತಿ ಮತ್ತು ಆತನು ನಿಮಗಾಗಿ ಮಾಡಿರೋ ವಿಷಯಗಳ ಕಡೆಗಿನ ಗಣ್ಯತೆನಾ? ಹಾಗಿದ್ರೆ, ಮನೆಯನ್ನು ಕಟ್ಬೇಕಂತಿದ್ದ ವ್ಯಕ್ತಿ ಏನು ಮಾಡ್ಬೇಕಿತ್ತೋ ಅದನ್ನೇ ನೀವೂ ಮಾಡ್ಬೇಕು. ಅದು ಹೇಗೆ? ಇದನ್ನ ಅರ್ಥಮಾಡ್ಕೊಳ್ಳೋಕೆ ಲೂಕ 14:27-30 ರಲ್ಲಿ ಯೇಸು ಏನು ಹೇಳಿದ ಅಂತ ಗಮನಿಸಿ. (ಓದಿ.) ತನ್ನ ಶಿಷ್ಯರಾಗಲು ಏನು ಮಾಡ್ಬೇಕು ಅನ್ನೋದನ್ನ ಯೇಸು ಇಲ್ಲಿ ಹೇಳಿದ್ದಾನೆ. ಮನೆ ಕಟ್ಟುವವನು ಹೇಗೆ ಖರ್ಚುಗಳಿಗೆ ಮೊದಲೇ ಸಿದ್ಧನಾಗಿರ್ಬೇಕೋ ಹಾಗೇ ನಾವು ಸಹ ಯೇಸುವಿನ ಹಿಂಬಾಲಕರಾಗ್ಬೇಕಂದ್ರೆ ಮುಂದೆ ಬರೋ ಯಾವ್ದೇ ಸಮಸ್ಯೆಗಳನ್ನ ಎದುರಿಸೋಕೆ ಮತ್ತು ತ್ಯಾಗಗಳನ್ನ ಮಾಡೋಕೆ ಸಿದ್ಧರಾಗಿರ್ಬೇಕು. (ಲೂಕ 9:23-26; 12:51-53) ಹಾಗಾಗಿ, ಯೇಸುವಿನ ಶಿಷ್ಯರಾದ್ರೆ ಏನೆಲ್ಲಾ ಅನುಭವಿಸ್ಬೇಕು ಅನ್ನೋದನ್ನ ದೀಕ್ಷಾಸ್ನಾನಕ್ಕೆ ಮೊದಲೇ ಯೋಚಿಸ್ಬೇಕು. ಹೀಗೆ ಮಾಡಿದ್ರೆ, ದೀಕ್ಷಾಸ್ನಾನ ಆದ ನಂತರನೂ ನಂಬಿಗಸ್ತರಾಗಿ ದೇವರ ಸೇವೆ ಮಾಡೋಕೆ ನಾವು ಸಿದ್ಧರಾಗಿರ್ತೇವೆ.

3. ಈ ಲೇಖನದಲ್ಲಿ ನಾವೇನನ್ನು ಚರ್ಚಿಸಲಿದ್ದೇವೆ?

3 ಇಷ್ಟೆಲ್ಲಾ ಕಷ್ಟಪಟ್ಟು ತ್ಯಾಗಗಳನ್ನ ಮಾಡಿ ನೀವು ಯೇಸುವಿನ ಶಿಷ್ಯರಾಗೋಕೆ ದೀಕ್ಷಾಸ್ನಾನ ತಗೊಳ್ಳೋದ್ರಿಂದ ಏನಾದ್ರೂ ಪ್ರಯೋಜನ ಇದ್ಯಾ? ಖಂಡಿತ. ದೀಕ್ಷಾಸ್ನಾನ ತಗೊಳ್ಳೋದ್ರಿಂದ ಈಗ ಮತ್ತು ಮುಂದಕ್ಕೆ ಅನೇಕ ಆಶೀರ್ವಾದಗಳನ್ನ ಪಡೆಯೋ ಅವಕಾಶ ನಮಗೆ ಸಿಗುತ್ತೆ. ಈಗ ನಾವು ದೀಕ್ಷಾಸ್ನಾನದ ಬಗ್ಗೆ ಇರೋ ಕೆಲವು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯೋಣ. ಇದು, ನೀವು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೀರಾ ಇಲ್ವಾ ಅಂತ ತಿಳುಕೊಳ್ಳೋಕೆ ಸಹಾಯ ಮಾಡುತ್ತೆ.

ಸಮರ್ಪಣೆ ಮತ್ತು ದೀಕ್ಷಾಸ್ನಾನದ ಬಗ್ಗೆ ನಿಮಗೆ ಏನೆಲ್ಲಾ ಗೊತ್ತಿರಬೇಕು?

4. (ಎ) ಸಮರ್ಪಣೆ ಅಂದರೇನು? (ಬಿ) ಮತ್ತಾಯ 16:24 ರ ಪ್ರಕಾರ ನಮ್ಮನ್ನು ‘ನಿರಾಕರಿಸುವುದರ’ ಅರ್ಥವೇನು?

4 ಸಮರ್ಪಣೆ ಅಂದರೇನು? ದೀಕ್ಷಾಸ್ನಾನ ಪಡೆಯೋಕೂ ಮುಂಚೆ ನೀವು ಸಮರ್ಪಣೆ ಮಾಡಿರಬೇಕು. ಯೆಹೋವನಿಗೆ ಮನಸಾರೆ ಪ್ರಾರ್ಥಿಸುತ್ತಾ ‘ನಾನು ಜೀವ ಇರುವವರೆಗೆ ನಿಮ್ಮ ಸೇವೆ ಮಾಡ್ತೀನಿ’ ಅಂತ ಮಾತು ಕೊಡುವುದೇ ಸಮರ್ಪಣೆ ಆಗಿದೆ. ದೇವರಿಗೆ ನೀವು ಸಮರ್ಪಣೆ ಮಾಡಿಕೊಂಡಿದ್ದೀರಿ ಅಂದ್ರೆ ನಿಮ್ಮನ್ನು ನೀವು ‘ನಿರಾಕರಿಸಿದ್ದೀರಿ’ ಅಂತ ಅರ್ಥ. (ಮತ್ತಾಯ 16:24 ಓದಿ.) ಹಾಗಾಗಿ ನೀವೀಗ ಯೆಹೋವನ ಸ್ವತ್ತಾಗಿದ್ದೀರಿ, ಇದೊಂದು ದೊಡ್ಡ ಸುಯೋಗವಾಗಿದೆ. (ರೋಮ. 14:8) ‘ಇಂದಿನಿಂದ ನನಗೆ ನನ್ನ ಇಷ್ಟವಲ್ಲ, ನಿನ್ನ ಇಷ್ಟ ಮಾಡುವುದೇ ಮುಖ್ಯ’ ಅಂತ ಪ್ರಾರ್ಥನೆಯಲ್ಲಿ ಹೇಳ್ತೀರಿ. ಸಮರ್ಪಣೆ ಅಂದ್ರೆ ಯೆಹೋವನಿಗೆ ನೀವು ಮಾತು ಕೊಡುವುದಾಗಿದೆ. ಇದು ತುಂಬ ಗಂಭೀರ ವಿಷಯ. ಈ ರೀತಿ ಮಾತು ಕೊಡಿ ಅಂತ ಯೆಹೋವನು ಯಾರನ್ನೂ ಬಲವಂತ ಮಾಡಲ್ಲ. ಆದ್ರೆ ಒಂದ್ಸಲ ನಾವು ಮಾತು ಕೊಟ್ರೆ ಅದ್ರ ಪ್ರಕಾರ ನಾವು ನಡ್ಕೋಬೇಕು ಅಂತ ಯೆಹೋವನು ಬಯಸ್ತಾನೆ.—ಕೀರ್ತ. 116:12, 14.

5. ಸಮರ್ಪಣೆಗೂ ದೀಕ್ಷಾಸ್ನಾನಕ್ಕೂ ಸಂಬಂಧವೇನು?

5 ಸಮರ್ಪಣೆಗೂ ದೀಕ್ಷಾಸ್ನಾನಕ್ಕೂ ಸಂಬಂಧವೇನು? ಸಮರ್ಪಣೆ ಮಾಡಿಕೊಂಡಿರುವುದು ನಿಮಗೆ ಮತ್ತು ಯೆಹೋವನಿಗೆ ಮಾತ್ರ ಗೊತ್ತಿರುತ್ತೆ. ಬೇರೆ ಯಾರಿಗೂ ಗೊತ್ತಿರಲ್ಲ. ಆದ್ರೆ ದೀಕ್ಷಾಸ್ನಾನ ಎಲ್ರಿಗೂ ಗೊತ್ತಾಗುತ್ತೆ. ಯಾಕಂದ್ರೆ ಸಮ್ಮೇಳನಗಳಲ್ಲೋ ಅಧಿವೇಶನಗಳಲ್ಲೋ ಎಲ್ಲರ ಮುಂದೆ ನೀವಿದನ್ನು ತಗೊಳ್ತೀರಿ. ದೀಕ್ಷಾಸ್ನಾನ ಪಡಕೊಳ್ಳುವಾಗ ನೀವು ಈಗಾಗ್ಲೇ ಯೆಹೋವನಿಗೆ ಸಮರ್ಪಣೆ ಮಾಡಿಕೊಂಡಿದ್ದೀರಿ ಅಂತ ಎಲ್ರಿಗೂ ತೋರಿಸಿಕೊಡ್ತೀರಿ. * ನೀವು ನಿಮ್ಮ ದೇವರಾದ ಯೆಹೋವನನ್ನ ಪೂರ್ಣ ಹೃದಯ, ಪ್ರಾಣ, ಮನಸ್ಸು ಮತ್ತು ಬಲದಿಂದ ಪ್ರೀತಿಸ್ತೀರಿ ಮತ್ತು ಕೊನೆವರೆಗೂ ಯೆಹೋವನ ಸೇವೆ ಮಾಡೋ ತೀರ್ಮಾನವನ್ನು ಮಾಡಿದ್ದೀರಿ ಅನ್ನೋದನ್ನ ದೀಕ್ಷಾಸ್ನಾನದ ಮೂಲಕ ಬೇರೆಯವರಿಗೆ ತೋರಿಸಿಕೊಡ್ತೀರಿ.—ಮಾರ್ಕ 12:30.

6-7. ಒಂದನೇ ಪೇತ್ರ 3:18-22 ರಲ್ಲಿ ಹೇಳಿರೋ ಪ್ರಕಾರ ಯಾವೆರಡು ಕಾರಣಗಳಿಗಾಗಿ ನಾವು ದೀಕ್ಷಾಸ್ನಾನ ತಗೊಳ್ಳಲೇಬೇಕು?

6 ದೀಕ್ಷಾಸ್ನಾನ ತಗೊಳ್ಳಲೇಬೇಕಾ? 1 ಪೇತ್ರ 3:18-22 ರಲ್ಲಿ ಏನು ಹೇಳಿದೆ ಅಂತ ನೋಡೋಣ. (ಓದಿ.) ನೋಹನಿಗೆ ಯೆಹೋವನ ಮೇಲೆ ನಂಬಿಕೆ ಇದೆ ಅಂತ ನಾವೆಯನ್ನು ನೋಡ್ದಾಗ ಜನ್ರಿಗೆ ಗೊತ್ತಾಯ್ತು. ಅದೇರೀತಿ, ನೀವು ಯೆಹೋವನಿಗೆ ಸಮರ್ಪಿಸಿಕೊಂಡಿದ್ದೀರಿ ಅನ್ನೋದು ನಿಮ್ಮ ದೀಕ್ಷಾಸ್ನಾನವನ್ನ ನೋಡ್ವಾಗ ಜನ್ರಿಗೆ ಗೊತ್ತಾಗುತ್ತೆ. ದೀಕ್ಷಾಸ್ನಾನ ತಗೊಳ್ಳಲೇಬೇಕಾ? ತಗೊಳ್ಳಲೇಬೇಕು. ಯಾಕೆ ಅಂತ ಪೇತ್ರನು ಹೇಳಿದ್ದಾನೆ. ಮೊದಲನೇ ಕಾರಣ, ದೀಕ್ಷಾಸ್ನಾನ ‘ನಿಮ್ಮನ್ನು ರಕ್ಷಿಸುತ್ತದೆ.’ ದೀಕ್ಷಾಸ್ನಾನದಿಂದ ನಮಗೆ ರಕ್ಷಣೆ ಸಿಗಬೇಕಂದ್ರೆ ಯೇಸುವಿನಲ್ಲಿ ನಮಗೆ ನಂಬಿಕೆ ಇದೆ ಅನ್ನೋದನ್ನ ಕ್ರಿಯೆಯಲ್ಲಿ ತೋರಿಸ್ಬೇಕು. ಅಂದ್ರೆ, ಯೇಸು ನಮಗೋಸ್ಕರ ಜೀವಕೊಟ್ನು ಮತ್ತು ಪುನರುತ್ಥಾನವಾಗಿ “ದೇವರ ಬಲಗಡೆಯಲ್ಲಿ ಇದ್ದಾನೆ” ಅನ್ನೋದನ್ನ ನಂಬ್ತೀವಂತ ತೋರಿಸ್ಕೊಡ್ಬೇಕು.

7 ಎರಡನೇ ಕಾರಣ, ದೀಕ್ಷಾಸ್ನಾನ ಪಡೆದರೆ ನಮಗೆ “ಒಳ್ಳೇ ಮನಸ್ಸಾಕ್ಷಿ” ಸಿಗುತ್ತೆ. ನಾವು ಯೆಹೋವನಿಗೆ ನಮ್ಮನ್ನೇ ಸಮರ್ಪಿಸಿ ದೀಕ್ಷಾಸ್ನಾನ ಪಡಕೊಳ್ಳುವಾಗ ಆತನ ಜೊತೆಗೆ ಒಳ್ಳೇ ಸಂಬಂಧ ಬೆಳೆಯುತ್ತೆ. ನಾವು ಮನದಾಳದಿಂದ ಪಶ್ಚಾತ್ತಾಪಪಟ್ಟು ಯೇಸುವಿನ ವಿಮೋಚನಾ ಮೌಲ್ಯದ ಮೇಲೆ ನಂಬಿಕೆ ಇಡೋದ್ರಿಂದ ಯೆಹೋವನು ನಮ್ಮ ಪಾಪಗಳನ್ನ ಕ್ಷಮಿಸ್ತಾನೆ. ಹೀಗೆ ನಮಗೆ ಒಳ್ಳೇ ಮನಸ್ಸಾಕ್ಷಿ ಸಿಗುತ್ತೆ.

8. ದೀಕ್ಷಾಸ್ನಾನ ತಗೊಳ್ಳಲು ಯಾವುದು ಮುಖ್ಯ ಕಾರಣವಾಗಿರಬೇಕು?

8 ದೀಕ್ಷಾಸ್ನಾನ ತಗೊಳ್ಳಲು ಕಾರಣ ಏನಾಗಿರಬೇಕು? ನೀವು ಬೈಬಲನ್ನು ಕಲಿತಾಗ ಯೆಹೋವನ ವ್ಯಕ್ತಿತ್ವದ ಬಗ್ಗೆ ಮತ್ತು ಆತನ ಕಾರ್ಯವಿಧಾನಗಳ ಬಗ್ಗೆ ಕಲಿತ್ರಿ. ಆತನ ಬಗ್ಗೆ ನೀವು ಕಲಿತ ವಿಷ್ಯ ಇಷ್ಟ ಆಗಿ ಆತನನ್ನು ತುಂಬ ಪ್ರೀತಿಸಿದ್ರಿ. ಯೆಹೋವನ ಮೇಲೆ ನಿಮಗಿರೋ ಪ್ರೀತಿನೇ ದೀಕ್ಷಾಸ್ನಾನ ತಗೊಳ್ಳೋಕೆ ಮುಖ್ಯ ಕಾರಣವಾಗಿರಬೇಕು.

9. ಮತ್ತಾಯ 28:19, 20 ರಲ್ಲಿ ಹೇಳಿರುವಂತೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಪಡಕೊಳ್ಳುವುದರ ಅರ್ಥವೇನು?

9 ದೀಕ್ಷಾಸ್ನಾನ ಪಡಕೊಳ್ಳಲು ಇನ್ನೊಂದು ಕಾರಣ ನೀವು ಬೈಬಲಲ್ಲಿರುವ ಸತ್ಯಗಳನ್ನು ಕಲಿತು ಅದನ್ನು ನಂಬಿರುವುದೇ ಆಗಿದೆ. ಯೇಸು “ಶಿಷ್ಯರನ್ನಾಗಿ ಮಾಡಿ” ಎಂಬ ಆಜ್ಞೆಯನ್ನು ಕೊಟ್ಟಾಗ ಏನು ಹೇಳಿದ್ನು ಅಂತ ನೋಡೋಣ. (ಮತ್ತಾಯ 28:19, 20 ಓದಿ.) ಯಾರೆಲ್ಲಾ ದೀಕ್ಷಾಸ್ನಾನ ಪಡಕೊಳ್ಳುತ್ತಾರೋ ಅವರೆಲ್ಲರೂ “ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ” ಪಡಕೊಳ್ಳಬೇಕು ಅಂತ ಯೇಸು ಹೇಳಿದ್ನು. ಈ ಮಾತಿನ ಅರ್ಥವೇನು? ಇದರರ್ಥ ನೀವು ಯೆಹೋವನ ಬಗ್ಗೆ, ಆತನ ಮಗ ಯೇಸುವಿನ ಬಗ್ಗೆ ಮತ್ತು ಪವಿತ್ರಾತ್ಮದ ಬಗ್ಗೆ ಬೈಬಲಲ್ಲಿ ಹೇಳಿರೋ ಸತ್ಯಗಳನ್ನ ನಂಬಬೇಕು, ಒಂಚೂರು ಸಂಶಯ ಇರಬಾರ್ದು. ಈ ಸತ್ಯಗಳಿಗೆ ಎಷ್ಟು ಶಕ್ತಿ ಇದೆ ಅಂದ್ರೆ ಅವು ನಿಮ್ಮ ಮನಸ್ಸನ್ನೇ ಬದಲಾಯಿಸುತ್ತವೆ. (ಇಬ್ರಿ. 4:12) ಅಂಥ ಕೆಲವು ಸತ್ಯಗಳನ್ನು ಈಗ ನೋಡೋಣ.

10-11. ತಂದೆಯ ಬಗ್ಗೆ ಇರೋ ಯಾವೆಲ್ಲಾ ಸತ್ಯಗಳನ್ನ ನೀವು ಕಲಿತು ನಂಬಿದ್ದೀರಿ?

10 “ತಂದೆಯ” ಬಗ್ಗೆ ಈ ಮುಂದಿನ ಸತ್ಯಗಳನ್ನು ಕಲಿತಾಗ ಹೇಗನಿಸಿತು ಅಂತ ಯೋಚಿಸಿ: ಆತನ ಹೆಸರು “ಯೆಹೋವ,” ಆತನು ‘ಭೂಲೋಕದಲ್ಲೆಲ್ಲಾ ಸರ್ವೋನ್ನತನು’ ಮತ್ತು ಆತನೊಬ್ಬನೇ “ಸತ್ಯದೇವರು.” (ಕೀರ್ತ. 83:18; ಯೆರೆ. 10:10) ಆತನು ನಮ್ಮ ಸೃಷ್ಟಿಕರ್ತ ಮತ್ತು ಆತನಿಂದಲೇ “ರಕ್ಷಣೆ” ಸಿಗುತ್ತೆ. (ಕೀರ್ತ. 3:8; 36:9) ನಮ್ಮನ್ನ ಪಾಪ ಮತ್ತು ಮರಣದಿಂದ ರಕ್ಷಿಸಲಿಕ್ಕೆ ಆತನು ಏರ್ಪಾಡನ್ನು ಮಾಡಿದ್ದಾನೆ ಮತ್ತು ನಮಗೆ ನಿತ್ಯಜೀವದ ನಿರೀಕ್ಷೆ ಕೊಟ್ಟಿದ್ದಾನೆ. (ಯೋಹಾ. 17:3) ನೀವು ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ತಗೊಂಡಾಗ ನಿಮ್ಮನ್ನು ಒಬ್ಬ ಯೆಹೋವನ ಸಾಕ್ಷಿ ಎಂದು ಗುರುತಿಸಲಾಗುತ್ತೆ. (ಯೆಶಾ. 43:10-12) ನೀವು ದೇವರ ಹೆಸರಿನಿಂದ ಕರೆಸಿಕೊಳ್ಳೋಕೆ ಹೆಮ್ಮೆಪಡುವ ಮತ್ತು ಆತನ ಬಗ್ಗೆ ಇತರರಿಗೆ ಸತ್ಯವನ್ನ ಕಲಿಸುವ ಆರಾಧಕರ ಲೋಕವ್ಯಾಪಕ ಕುಟುಂಬದ ಭಾಗವಾಗ್ತೀರಿ.—ಕೀರ್ತ. 86:12.

11 ಬೈಬಲಲ್ಲಿ ಯೆಹೋವನ ಬಗ್ಗೆ ಇರೋ ವಿಷ್ಯಗಳನ್ನು ತಿಳುಕೊಳ್ಳೋದು ನಮ್ಗೆ ಸಿಕ್ಕಿರೋ ದೊಡ್ಡ ಸುಯೋಗವಾಗಿದೆ! ಈ ಅಮೂಲ್ಯ ಸತ್ಯಗಳನ್ನ ನಂಬಿದಾಗ ನೀವಾಗಿಯೇ ಯೆಹೋವನಿಗೆ ಸಮರ್ಪಿಸಿ ದೀಕ್ಷಾಸ್ನಾನ ಪಡಕೊಳ್ಳಲು ಮುಂದಾಗುತ್ತೀರಿ.

12-13. ಮಗನ ಬಗ್ಗೆ ಯಾವೆಲ್ಲಾ ಸತ್ಯಗಳನ್ನ ನೀವು ಕಲಿತು ನಂಬಿದ್ದೀರಿ?

12 “ಮಗನ” ಬಗ್ಗೆ ಈ ಮುಂದೆ ಕೊಡಲಾದ ಸತ್ಯಗಳನ್ನ ಕಲಿತಾಗ ನಿಮ್ಗೆ ಹೇಗನಿಸಿತು? ಯೆಹೋವನನ್ನ ಬಿಟ್ರೆ ಯೇಸುವೇ ಇಡೀ ವಿಶ್ವದಲ್ಲಿ ಮುಖ್ಯ ವ್ಯಕ್ತಿಯಾಗಿದ್ದಾನೆ. ಆತನು ತನ್ನ ಜೀವವನ್ನ ಮನಸಾರೆ ನಮಗೋಸ್ಕರ ವಿಮೋಚನಾ ಮೌಲ್ಯವಾಗಿ ಕೊಟ್ಟನು. ಈ ವಿಮೋಚನಾ ಯಜ್ಞದ ಮೇಲೆ ನಂಬಿಕೆ ಇದೆ ಅಂತ ನಾವು ಕ್ರಿಯೆಯಲ್ಲಿ ತೋರಿಸೋದಾದ್ರೆ ದೇವರು ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ, ನಾವು ಆತನ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಆಗುತ್ತೆ ಮತ್ತು ನಮ್ಗೆ ನಿತ್ಯಜೀವನೂ ಸಿಗುತ್ತೆ. (ಯೋಹಾ. 3:16) ಯೇಸು ನಮ್ಮ ಮಹಾ ಯಾಜಕ ಆಗಿದ್ದಾನೆ. ವಿಮೋಚನಾ ಮೌಲ್ಯದಿಂದ ಪ್ರಯೋಜನ ಪಡಕೊಳ್ಳೋಕೆ ಮತ್ತು ದೇವರಿಗೆ ಆಪ್ತರಾಗೋಕೆ ನಮ್ಗೆ ಸಹಾಯ ಮಾಡಬೇಕಂತ ಯೇಸು ಬಯಸ್ತಾನೆ. (ಇಬ್ರಿ. 4:15; 7:24, 25) ಆತನು ದೇವರ ರಾಜ್ಯದ ರಾಜನಾಗಿದ್ದಾನೆ. ಹಾಗಾಗಿ ಯೆಹೋವನು ತನ್ನ ಹೆಸ್ರಿಗೆ ಬಂದ ಕಳಂಕವನ್ನು ಯೇಸು ಮೂಲಕನೇ ತೆಗೆದುಹಾಕಿ ದುಷ್ಟತನವನ್ನ ನಾಶಮಾಡ್ತಾನೆ ಮತ್ತು ಇಡೀ ಭೂಮಿಯನ್ನ ಪರದೈಸಾಗಿ ಮಾಡಿ ಶಾಶ್ವತವಾದ ಆಶೀರ್ವಾದಗಳನ್ನು ಕೊಡ್ತಾನೆ. (ಮತ್ತಾ. 6:9, 10; ಪ್ರಕ. 11:15) ಯೇಸು ನಮ್ಗೆ ಮಾದರಿಯಾಗಿದ್ದಾನೆ. (1 ಪೇತ್ರ 2:21) ದೇವರಿಗೆ ಇಷ್ಟವಾಗೋದನ್ನ ಮಾಡಕ್ಕೋಸ್ಕರ ನಮ್ಮ ಜೀವನನೇ ಕೊಡೋದು ಹೇಗೆ ಅಂತ ಆತನು ತೋರಿಸಿಕೊಟ್ಟಿದ್ದಾನೆ.—ಯೋಹಾ. 4:34.

13 ಯೇಸುವಿನ ಬಗ್ಗೆ ಬೈಬಲಿನಲ್ಲಿ ಇರುವಂಥ ಬೋಧನೆಗಳನ್ನ ನೀವು ನಂಬುವಾಗ ಆತನನ್ನ ಪ್ರೀತಿಸೋಕೆ ಶುರುಮಾಡ್ತೀರಿ. ಯೇಸುವಿನಂತೆ ನೀವು ಸಹ ದೇವರ ಚಿತ್ತ ಮಾಡೋಕೆ ನಿಮ್ಮ ಜೀವನವನ್ನೇ ಕೊಡಬೇಕಂತ ಈ ಪ್ರೀತಿ ಪ್ರಚೋದಿಸುತ್ತದೆ. ಆಗ ನೀವು ನಿಮ್ಮನ್ನೇ ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡಕೊಳ್ಳುತ್ತೀರಿ.

14-15. ಪವಿತ್ರಾತ್ಮದ ಬಗ್ಗೆ ನೀವು ಯಾವೆಲ್ಲಾ ಸತ್ಯಗಳನ್ನು ಕಲಿತು ನಂಬಿದ್ದೀರಿ?

14 “ಪವಿತ್ರಾತ್ಮದ” ಬಗ್ಗೆ ಈ ಮುಂದಿನ ಸತ್ಯಗಳನ್ನು ಕಲಿತಾಗ ನಿಮಗೆ ಹೇಗನಿಸಿತು? ಅದು ಒಬ್ಬ ವ್ಯಕ್ತಿಯಲ್ಲ, ಬದಲಿಗೆ ದೇವರ ಶಕ್ತಿಯಾಗಿದೆ. ಯೆಹೋವನು ಮಾನವರ ಕೈಯಲ್ಲಿ ಬೈಬಲನ್ನು ಬರೆಸಲಿಕ್ಕೆ ಪವಿತ್ರಾತ್ಮವನ್ನು ಉಪಯೋಗಿಸಿದ್ನು. ನಾವು ಬೈಬಲಿನಲ್ಲಿ ಓದಿದ ವಿಷ್ಯಗಳನ್ನ ಅರ್ಥಮಾಡಿಕೊಳ್ಳೋಕೆ ಮತ್ತು ಅನ್ವಯಿಸಿಕೊಳ್ಳೋಕೆ ಈ ಶಕ್ತಿ ಸಹಾಯ ಮಾಡುತ್ತೆ. (ಯೋಹಾ. 14:26; 2 ಪೇತ್ರ 1:21) ಪವಿತ್ರಾತ್ಮದ ಮೂಲಕ ಯೆಹೋವನು ನಮಗೆ ‘ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು’ ಕೊಡುತ್ತಾನೆ. (2 ಕೊರಿಂ. 4:7) ಸುವಾರ್ತೆಯನ್ನು ಸಾರೋಕೆ, ಅಪಕರ್ಷಣೆಗಳ ವಿರುದ್ಧ ಹೋರಾಡೋಕೆ, ನಿರುತ್ತೇಜನವನ್ನು ಎದುರಿಸೋಕೆ, ಪರೀಕ್ಷೆಗಳನ್ನು ಜಯಿಸೋಕೆ ಪವಿತ್ರಾತ್ಮ ನಮಗೆ ಬಲ ಕೊಡುತ್ತೆ. ‘ಪವಿತ್ರಾತ್ಮದಿಂದ ಉಂಟಾಗುವ ಫಲದಲ್ಲಿ’ ಇರುವ ಗುಣಗಳನ್ನು ತೋರಿಸೋಕೆ ಈ ಶಕ್ತಿ ಸಹಾಯ ಮಾಡುತ್ತೆ. (ಗಲಾ. 5:22) ಯೆಹೋವನು ತನ್ನ ಮೇಲೆ ಭರವಸೆ ಇಡುವವರಿಗೆ ಮತ್ತು ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳುವವರಿಗೆ ಅದನ್ನ ಉದಾರವಾಗಿ ಕೊಡ್ತಾನೆ.—ಲೂಕ 11:13.

15 ಹೀಗೆ ದೇವರ ಸೇವೆ ಮಾಡೋಕೆ ಯೆಹೋವನ ಆರಾಧಕರಿಗೆ ಪವಿತ್ರಾತ್ಮ ಸಹಾಯ ಮಾಡುತ್ತೆ. ಇದನ್ನು ತಿಳುಕೊಳ್ಳುವಾಗ ನಿಮಗೆ ಖುಷಿಯಾಗುತ್ತಲ್ವಾ! ಪವಿತ್ರಾತ್ಮದ ಬಗ್ಗೆ ಕಲಿತ ಈ ಸತ್ಯಗಳನ್ನು ನಂಬುವಾಗ ದೇವರಿಗೆ ನಿಮ್ಮನ್ನೇ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡಕೊಳ್ಳೋಕೆ ನಿಮಗೆ ಪ್ರಚೋದನೆ ಸಿಗುತ್ತೆ.

16. ಈ ಲೇಖನದಲ್ಲಿ ನಾವು ಇಲ್ಲಿಯವರೆಗೆ ಏನೆಲ್ಲಾ ಕಲಿತ್ವಿ?

16 ದೇವರಿಗೆ ನಿಮ್ಮನ್ನೇ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಳ್ಳುವ ನಿರ್ಣಯ ತುಂಬ ಮುಖ್ಯವಾದ ನಿರ್ಣಯವಾಗಿದೆ. ಈಗಾಗ್ಲೇ ಕಲಿತಂತೆ, ಮನೆಕಟ್ಟುವವನು ಹೇಗೆ ಖರ್ಚುಗಳಿಗೆ ಸಿದ್ಧನಾಗಬೇಕೋ ಹಾಗೇ ನಾವು ಸಹ ದೀಕ್ಷಾಸ್ನಾನದ ನಂತ್ರ ಬರೋ ಯಾವುದೇ ಸಮಸ್ಯೆಗಳನ್ನು ಎದುರಿಸೋಕೆ, ತ್ಯಾಗಗಳನ್ನು ಮಾಡೋಕೆ ಸಿದ್ಧರಾಗಿರಬೇಕು. ಆದ್ರೆ ನಾವು ಮಾಡೋ ತ್ಯಾಗಗಳಿಗೆ ಹೋಲಿಸುವಾಗ ಸಿಗೋ ಆಶೀರ್ವಾದಗಳು ಎಷ್ಟೋ ಹೆಚ್ಚು. ದೀಕ್ಷಾಸ್ನಾನದಿಂದ ರಕ್ಷಣೆಯ ದಾರಿ ತೆರೆಯುತ್ತೆ, ಅಷ್ಟೇ ಅಲ್ಲ ಒಳ್ಳೇ ಮನಸ್ಸಾಕ್ಷಿನೂ ಸಿಗುತ್ತೆ. ಆದ್ರೆ ನೀವು ದೀಕ್ಷಾಸ್ನಾನ ತಗೊಳ್ಳೋಕೆ ಮುಖ್ಯ ಕಾರಣ ಯೆಹೋವ ದೇವರ ಮೇಲೆ ನಿಮಗಿರೋ ಪ್ರೀತಿನೇ ಆಗಿರಬೇಕು. ತಂದೆ, ಮಗ ಮತ್ತು ಪವಿತ್ರಾತ್ಮದ ಬಗ್ಗೆ ನೀವು ಕಲಿತ ಸತ್ಯಗಳನ್ನು ನಂಬಬೇಕು, ಒಂಚೂರು ಸಂಶಯ ಪಡಬಾರ್ದು. ಈ ಲೇಖನದಲ್ಲಿ ಇಲ್ಲಿವರೆಗೆ ಕಲಿತ ವಿಷ್ಯಗಳ ಬಗ್ಗೆ ಯೋಚಿಸಿದ ನಂತ್ರ ನೀವು ಈ ಪ್ರಶ್ನೆಗೆ ಏನಂತ ಉತ್ರ ಕೊಡ್ತೀರಾ: “ನಾನು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೇನಾ?”

ದೀಕ್ಷಾಸ್ನಾನಕ್ಕೆ ಮುಂಚೆ ಏನು ಮಾಡ್ಬೇಕು?

17. ಒಬ್ಬ ವ್ಯಕ್ತಿ ದೀಕ್ಷಾಸ್ನಾನ ತಗೊಳ್ಳುವ ಮುಂಚೆ ಏನೆಲ್ಲಾ ಮಾಡ್ಬೇಕು?

17 ನೀವು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೀರಿ ಅಂತ ನಿಮಗನಿಸುತ್ತಾ? ಹಾಗಾದ್ರೆ ಯೆಹೋವನಿಗೆ ಆಪ್ತರಾಗೋಕೆ ನೀವು ಅನೇಕ ವಿಷ್ಯಗಳನ್ನು ಮಾಡಿದ್ದೀರಿ ಅನ್ನೋದ್ರಲ್ಲಿ ಸಂಶಯ ಇಲ್ಲ. * ತಪ್ಪದೇ ಬೈಬಲನ್ನು ಕಲಿಯೋ ಮೂಲಕ ನೀವು ಯೆಹೋವ ಮತ್ತು ಯೇಸುವಿನ ಬಗ್ಗೆ ಅನೇಕ ವಿಷ್ಯಗಳನ್ನು ತಿಳುಕೊಂಡಿದ್ದೀರಿ. ಹೀಗೆ ನಂಬಿಕೆಯನ್ನು ಬೆಳೆಸಿಕೊಂಡಿದ್ದೀರಿ. (ಇಬ್ರಿ. 11:6) ಯೆಹೋವನು ಏನೆಲ್ಲಾ ಮಾಡ್ತೀನಿ ಅಂತ ಬೈಬಲಲ್ಲಿ ಹೇಳಿದ್ದಾನೋ ಅದನ್ನೆಲ್ಲಾ ಮಾಡ್ತಾನೆ ಅಂತ ನೀವು ಪೂರ್ತಿ ನಂಬಿದ್ದೀರಿ ಮತ್ತು ಯೇಸುವಿನ ವಿಮೋಚನಾ ಯಜ್ಞದಲ್ಲಿ ನಂಬಿಕೆಯಿಟ್ಟರೆ ಮಾತ್ರ ಪಾಪ ಮತ್ತು ಮರಣದಿಂದ ಬಿಡುಗಡೆ ಸಿಗುತ್ತೆ ಅಂತ ನೀವು ಅರ್ಥಮಾಡಿಕೊಂಡಿದ್ದೀರಿ. ಹಾಗಾಗಿ ನಿಮ್ಮ ಪಾಪಗಳಿಗೆ ಅಂದ್ರೆ ನೀವು ಮಾಡಿರೋ ತಪ್ಪುಗಳಿಗೆ ಪಶ್ಚಾತ್ತಾಪಪಟ್ಟಿದ್ದೀರಿ ಮತ್ತು ಯೆಹೋವನ ಹತ್ರ ಕ್ಷಮಿಸು ಅಂತ ಕೇಳಿಕೊಂಡಿದ್ದೀರಿ. ನಿಮ್ಮ ಜೀವನವನ್ನೇ ಪೂರ್ತಿ ಬದಲಾಯಿಸಿಕೊಂಡಿದ್ದೀರಿ ಅಂದ್ರೆ ಜೀವನದಲ್ಲಿ ಹಿಂದೆ ಮಾಡ್ತಿದ್ದ ಕೆಟ್ಟ ವಿಷ್ಯಗಳನ್ನೆಲ್ಲಾ ಬಿಟ್ಟುಬಿಟ್ಟು ದೇವ್ರಿಗೆ ಇಷ್ಟ ಆಗೋ ರೀತಿಯಲ್ಲಿ ಜೀವಿಸೋಕೆ ಶುರುಮಾಡಿದ್ದೀರಿ. (ಅ. ಕಾ. 3:19) ನಿಮ್ಮ ನಂಬಿಕೆ ಬಗ್ಗೆ ಬೇರೆಯವ್ರಿಗೆ ಹೇಳೋ ಅವಕಾಶಕ್ಕಾಗಿ ಯಾವಾಗಲೂ ಎದುರುನೋಡುತ್ತೀರಿ. ನೀವು ಈಗಾಗ್ಲೇ ದೀಕ್ಷಾಸ್ನಾನವಾಗಿಲ್ಲದ ಪ್ರಚಾರಕರಾಗಿ ಸಭೆಯವರ ಜೊತೆ ಸಾರೋಕೆ ಶುರುಮಾಡಿದ್ದೀರಿ. (ಮತ್ತಾ. 24:14) ಈ ಎಲ್ಲಾ ವಿಷ್ಯಗಳನ್ನ ನೀವು ಮಾಡೋದನ್ನ ನೋಡ್ವಾಗ ಯೆಹೋವನಿಗೆ ನಿಮ್ಮ ಬಗ್ಗೆ ಹೆಮ್ಮೆ ಅನ್ಸುತ್ತೆ. ಅಷ್ಟೇ ಅಲ್ಲ, ಆತನಿಗೆ ತುಂಬ ಖುಷಿಯಾಗುತ್ತೆ.—ಜ್ಞಾನೋ. 27:11.

18. ದೀಕ್ಷಾಸ್ನಾನಕ್ಕೆ ಮುಂಚೆ ಇನ್ನೇನೆಲ್ಲಾ ಮಾಡ್ಬೇಕು?

18 ನೀವು ದೀಕ್ಷಾಸ್ನಾನದ ಮುಂಚೆ ಇನ್ನೂ ಕೆಲವು ವಿಷ್ಯಗಳನ್ನು ಮಾಡ್ಬೇಕು. ಈಗಾಗ್ಲೇ ಕಲಿತಂತೆ, ನೀವು ನಿಮ್ಮನ್ನೇ ಯೆಹೋವನಿಗೆ ಸಮರ್ಪಿಸಿಕೊಳ್ಳಬೇಕು. ನೀವು ಒಬ್ಬರೇ ಇರುವಾಗ ಆತನಿಗೆ ಪ್ರಾರ್ಥಿಸಿ ಆತನ ಇಷ್ಟವನ್ನ ಮಾಡೋಕೆ ನಿಮ್ಮ ಇಡೀ ಜೀವನವನ್ನ ಉಪಯೋಗಿಸ್ತೀರಿ ಅಂತ ಮಾತು ಕೊಡ್ಬೇಕು. (1 ಪೇತ್ರ 4:2) ನಂತ್ರ ನೀವು ದೀಕ್ಷಾಸ್ನಾನ ತಗೊಳ್ಳೋಕೆ ಇಷ್ಟಪಡ್ತೀರಿ ಅಂತ ಹಿರಿಯರ ಮಂಡಲಿಯ ಸಂಯೋಜಕನಿಗೆ ಹೇಳ್ಬೇಕು. ಅವರು ನಿಮ್ಮತ್ರ ಮಾತಾಡೋಕೆ ಇಬ್ರು ಹಿರಿಯರನ್ನ ನೇಮಿಸ್ತಾರೆ. ಆ ಹಿರಿಯರು ನಿಮ್ಮತ್ರ ಮಾತಾಡ್ತಾರೆ ಅಂತ ನೀವು ಭಯ ಪಡಬೇಕಾಗಿಲ್ಲ. ಯಾಕಂದ್ರೆ ಅವ್ರಿಗೆ ಈಗಾಗ್ಲೇ ನಿಮ್ಮ ಪರಿಚಯ ಇರುತ್ತೆ ಮತ್ತು ನಿಮ್ಮನ್ನ ತುಂಬ ಪ್ರೀತಿಸ್ತಾರೆ. ನಾವು ಈಗಾಗ್ಲೇ ಚರ್ಚಿಸಿದ ಬೈಬಲ್‌ ಬೋಧನೆಗಳು ನಿಮ್ಗೆ ಗೊತ್ತಿವೆಯಾ ಮತ್ತು ಸಮರ್ಪಣೆ, ದೀಕ್ಷಾಸ್ನಾನ ಎಷ್ಟು ಮುಖ್ಯ ಅನ್ನೋದು ನಿಮ್ಗೆ ಅರ್ಥ ಆಗಿದ್ಯಾ ಅಂತ ಅವರು ತಿಳುಕೊಳ್ಳುತ್ತಾರೆ. ನೀವು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೀರಿ ಅಂತ ಅವರಿಗೆ ಅನಿಸೋದಾದ್ರೆ ಮುಂದಿನ ಸಮ್ಮೇಳನ ಅಥ್ವಾ ಅಧಿವೇಶನದಲ್ಲಿ ದೀಕ್ಷಾಸ್ನಾನ ತಗೊಳ್ಳಬಹುದು ಅಂತ ಅವರು ನಿಮ್ಗೆ ಹೇಳ್ತಾರೆ.

ದೀಕ್ಷಾಸ್ನಾನದ ನಂತ್ರ ಏನು ಮಾಡ್ಬೇಕು?

19-20. (ಎ) ದೀಕ್ಷಾಸ್ನಾನದ ನಂತ್ರ ಏನು ಮಾಡ್ಬೇಕು? (ಬಿ) ಇದನ್ನ ಹೇಗೆ ಮಾಡ್ಬಹುದು?

19 ದೀಕ್ಷಾಸ್ನಾನದ ನಂತ್ರ ನೀವೇನು ಮಾಡ್ಬೇಕು? * ಯೆಹೋವನಿಗೆ ಮಾತು ಕೊಡೋದೇ ಸಮರ್ಪಣೆ ಆಗಿದೆ ಮತ್ತು ಆ ಮಾತನ್ನ ಉಳಿಸಿಕೊಳ್ಳಬೇಕು ಅಂತ ಯೆಹೋವನು ಬಯಸ್ತಾನೆ. ಹಾಗಾಗಿ ದೀಕ್ಷಾಸ್ನಾನದ ನಂತ್ರ ನೀವು ನಿಮ್ಮ ಸಮರ್ಪಣೆಗೆ ಅನುಸಾರ ಜೀವಿಸ್ಬೇಕು. ಇದನ್ನು ಮಾಡೋದು ಹೇಗೆ?

20 ನಿಮ್ಮ ಸಭೆಯವರಿಗೆ ಆಪ್ತರಾಗಿರಿ. ನಿಮ್ಗೆ ದೀಕ್ಷಾಸ್ನಾನ ಆಗಿರೋದ್ರಿಂದ ಈಗ ನೀವು ಲೋಕವ್ಯಾಪಕ ‘ಸಹೋದರ ಬಳಗದ’ ಭಾಗವಾಗಿದ್ದೀರಿ. (1 ಪೇತ್ರ 2:17) ನಿಮ್ಮ ಸಭೆಯ ಸಹೋದರ ಸಹೋದರಿಯರು ಈಗ ನಿಮ್ಮ ಕುಟುಂಬ ಆಗಿದ್ದಾರೆ. ಕೂಟಗಳಿಗೆ ತಪ್ಪದೇ ಹಾಜರಾಗಿ ನೀವು ಅವ್ರ ಜೊತೆ ನಿಮಗಿರೋ ಸ್ನೇಹವನ್ನು ಇನ್ನೂ ಬಲಪಡಿಸಿಕೊಳ್ಳಬಹುದು. ಪ್ರತಿದಿನ ದೇವರ ವಾಕ್ಯವನ್ನ ಓದಿ ಮತ್ತು ಧ್ಯಾನಿಸಿ. (ಕೀರ್ತ. 1:1, 2) ಬೈಬಲನ್ನು ಓದಿದ ನಂತ್ರ ಸ್ವಲ್ಪ ಸಮಯ ತಗೊಂಡು ಓದಿದ ವಿಷಯದ ಬಗ್ಗೆ ಯೋಚಿಸಿ. ಆಗ ಓದಿದ್ದು ಮನಸ್ಸಲ್ಲಿ ಉಳಿಯುತ್ತೆ. “ಪ್ರಾರ್ಥಿಸುತ್ತಾ ಇರಿ.” (ಮತ್ತಾ. 26:41) ನೀವು ಮನಸ್ಸುಬಿಚ್ಚಿ ಪ್ರಾರ್ಥಿಸಿದರೆ ಯೆಹೋವನಿಗೆ ಇನ್ನೂ ಆಪ್ತರಾಗುತ್ತೀರಿ. ‘ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ.’ (ಮತ್ತಾ. 6:33) ನಿಮ್ಮ ಜೀವನದಲ್ಲಿ ಸಾರೋ ಕೆಲ್ಸಕ್ಕೆ ಮುಖ್ಯ ಸ್ಥಾನ ಕೊಡೋ ಮೂಲಕ ಇದನ್ನು ಮಾಡ್ಬಹುದು. ತಪ್ಪದೇ ಸೇವೆ ಮಾಡೋದ್ರಿಂದ ನಿಮ್ಮ ನಂಬಿಕೆ ಬಲವಾಗಿರುತ್ತೆ ಮತ್ತು ನಿತ್ಯಜೀವದ ನಿರೀಕ್ಷೆ ಪಡಕೊಳ್ಳೋಕೆ ಬೇರೆಯವ್ರಿಗೆ ಸಹಾಯ ಮಾಡಕ್ಕಾಗುತ್ತೆ.—1 ತಿಮೊ. 4:16.

21. ದೀಕ್ಷಾಸ್ನಾನ ತಗೊಳ್ಳೋದ್ರಿಂದ ಯಾವ ಪ್ರಯೋಜನ ಸಿಗುತ್ತೆ?

21 ಯೆಹೋವನಿಗೆ ನಿಮ್ಮನ್ನೇ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಳ್ಳುವ ನಿರ್ಣಯ ನೀವು ಜೀವನದಲ್ಲೇ ಮಾಡೋ ಅತಿ ಮುಖ್ಯ ನಿರ್ಣಯ ಆಗಿದೆ. ಇದಕ್ಕೋಸ್ಕರ ನೀವು ಕಷ್ಟ, ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ, ತ್ಯಾಗಗಳನ್ನ ಮಾಡಬೇಕಾಗುತ್ತೆ. ಆದ್ರೆ ಇದೆಲ್ಲಾ ವ್ಯರ್ಥ ಅಲ್ಲ ಸಾರ್ಥಕ ಆಗಿದೆ. ಯಾಕಂದ್ರೆ ಈಗ ನೀವು ಪಡೋ ಎಲ್ಲಾ ಕಷ್ಟಗಳು “ಕ್ಷಣಮಾತ್ರದ್ದೂ ಹಗುರವಾದದ್ದೂ” ಆಗಿವೆ. (2 ಕೊರಿಂ. 4:17) ಆದ್ರೆ ದೀಕ್ಷಾಸ್ನಾನ ಪಡಕೊಳ್ಳೋದ್ರಿಂದ ಈಗ ಸಂತೋಷದ ಜೀವನ ಸಿಗುತ್ತೆ ಮತ್ತು ಮುಂದೆ “ವಾಸ್ತವವಾದ ಜೀವನ” ಸಹ ಸಿಗುತ್ತೆ. (1 ತಿಮೊ. 6:19) ಆದ್ರಿಂದ ದಯವಿಟ್ಟು “ನಾನು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೇನಾ?” ಅನ್ನೋ ಪ್ರಶ್ನೆಗೆ ನೀವು ಕೊಡೋ ಉತ್ತರದ ಬಗ್ಗೆ ಜಾಗ್ರತೆಯಿಂದ ಯೋಚಿಸಿ ಮತ್ತು ಪ್ರಾರ್ಥನೆ ಮಾಡಿ.

ಗೀತೆ 58 ಸಮರ್ಪಣೆಯ ಬಗ್ಗೆ ನನ್ನ ಪ್ರಾರ್ಥನೆ

^ ಪ್ಯಾರ. 5 ನೀವು ದೀಕ್ಷಾಸ್ನಾನ ತಗೊಳ್ಬೇಕಂತಿದ್ದೀರಾ? ಹಾಗಾದ್ರೆ, ಈ ಲೇಖನದಿಂದ ನಿಮಗೆ ತುಂಬ ಸಹಾಯ ಆಗುತ್ತೆ. ದೀಕ್ಷಾಸ್ನಾನದ ಬಗ್ಗೆ ಇರುವ ಕೆಲವು ಪ್ರಾಮುಖ್ಯ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ತಿಳಿಯಲಿದ್ದೇವೆ. ಆ ಪ್ರಶ್ನೆಗಳಿಗೆ ನೀವು ಕೊಡೋ ಉತ್ರ ನೀವು ದೀಕ್ಷಾಸ್ನಾನಕ್ಕೆ ತಯಾರಿಗಿದ್ದೀರಾ ಇಲ್ವಾ ಅಂತ ತಿಳ್ಕೊಳ್ಳೋಕೆ ಸಹಾಯ ಮಾಡುತ್ತೆ.

^ ಪ್ಯಾರ. 17 ಬೈಬಲ್‌ ನಮಗೆ ಏನು ಕಲಿಸುತ್ತದೆ? ಪುಸ್ತಕದ ಅಧ್ಯಾಯ 18 ನ್ನು ನೋಡಿ.

^ ಪ್ಯಾರ. 19 ಬೈಬಲ್‌ ನಮಗೆ ಏನು ಕಲಿಸುತ್ತದೆ? ಮತ್ತು ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿಎಂಬ ಎರಡು ಪುಸ್ತಕಗಳಿಂದ ಬೈಬಲನ್ನು ಕಲಿತು ಮುಗಿಸಿರದಿದ್ರೆ ಅದನ್ನು ಕಲಿತು ಮುಗಿಸ್ಬೇಕು.