ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

“ನಾವಿದ್ದೇವೆ! ನಮ್ಮನ್ನು ಕಳ್ಸಿ!”

“ನಾವಿದ್ದೇವೆ! ನಮ್ಮನ್ನು ಕಳ್ಸಿ!”

ಪ್ರಚಾರಕರ ಅಗತ್ಯ ಇರೋ ಸ್ಥಳಕ್ಕೆ ಅಥ್ವಾ ದೇಶಕ್ಕೆ ಹೋಗಿ ಸೇವೆ ಮಾಡ್ಬೇಕು ಅಂತ ಯೋಚಿಸ್ತಿದ್ದೀರಾ? ಹಾಗಿದ್ರೆ ಸಹೋದರ ಮತ್ತು ಸಹೋದರಿ ಬೇರ್‌ಗ್ಯಾಮ್‌ರ ಅನುಭವದಿಂದ ಸಾಕಷ್ಟು ಪ್ರಯೋಜನ ಪಡೆಯಲಿದ್ದೀರಿ.

ಜ್ಯಾಕ್‌ ಮತ್ತು ಮ್ಯಾರಿಲಿನ್‌ 1988 ರಿಂದ ಒಟ್ಟಾಗಿ ಪೂರ್ಣ ಸಮಯದ ಸೇವೆ ಮಾಡ್ತಾ ಇದ್ದಾರೆ. ಯಾವುದೇ ಸನ್ನಿವೇಶಕ್ಕೂ ಇವರು ಬೇಗ ಹೊಂದಿಕೊಂಡು ಬಿಡ್ತಾರೆ. ಈಗ ಫ್ರಾನ್ಸ್‌ ಶಾಖೆಯ ಮೇಲ್ವಿಚಾರಣೆಯ ಕೆಳಗಿರುವ ಗ್ವಾಡೆಲೂಪ್‌ ಮತ್ತು ಫ್ರೆಂಚ್‌ ಗಯಾನ ಕ್ಷೇತ್ರಗಳಲ್ಲಿ ಇವರು ಅನೇಕ ನೇಮಕಗಳನ್ನು ನಿರ್ವಹಿಸಿದ್ದಾರೆ. ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳೋಣ.

ಪೂರ್ಣ ಸಮಯದ ಸೇವೆಯನ್ನ ಮಾಡಲು ನಿಮ್ಮನ್ನು ಯಾವುದು ಪ್ರಚೋದಿಸಿತು?

ಮ್ಯಾರಿಲಿನ್‌: ನಾನು ಬೆಳೆದಿದ್ದು ಗ್ವಾಡೆಲೂಪ್‌ನಲ್ಲಿ. ಚಿಕ್ಕವಳಿದ್ದಾಗ ಅಮ್ಮನ ಜೊತೆ ಆಗಾಗ ಇಡೀ ದಿನ ಸೇವೆ ಮಾಡ್ತಾ ಇದ್ದೆ. ಅವ್ರು ತುಂಬ ಹುರುಪಿಂದ ಸೇವೆ ಮಾಡ್ತಿದ್ರು. ನಂಗೆ ಜನ್ರ ಮೇಲೆ ಪ್ರೀತಿ ಇದ್ದದರಿಂದ 1985 ರಲ್ಲಿ ನನ್ನ ಶಾಲೆ ಮುಗಿದ ತಕ್ಷಣನೇ ಪಯನೀಯರ್‌ ಸೇವೆ ಶುರು ಮಾಡ್ದೆ.

ಜ್ಯಾಕ್‌: ನಾನು ಹದಿವಯಸ್ಸಿನಲ್ಲಿದ್ದಾಗ ಪೂರ್ಣ ಸಮಯದ ಸೇವೆ ಮಾಡ್ತಿದ್ದವರ ಜೊತೆನೇ ಹೆಚ್ಚು ಸಮಯ ಕಳೀತಿದ್ದೆ. ಶಾಲೆಗೆ ರಜಾ ಇರುವಾಗೆಲ್ಲ ಸಹಾಯಕ ಪಯನೀಯರ್‌ ಸೇವೆ ಮಾಡ್ತಿದ್ದೆ. ವಾರಾಂತ್ಯಗಳಲ್ಲಿ ಕೆಲವೊಮ್ಮೆ ನಾವು ಪಯನೀಯರರ ಜೊತೆ ಇಡೀ ದಿನ ಸೇವೆ ಮಾಡ್ತಿದ್ವಿ, ಅದಕ್ಕೋಸ್ಕರ ಬಸ್‌ನಲ್ಲಿ ಪ್ರಯಾಣ ಮಾಡ್ತಿದ್ವಿ. ಸೇವೆ ಮುಗಿದ ಮೇಲೆ ಸಮುದ್ರ ತೀರಕ್ಕೆ ಹೋಗಿ ಸ್ವಲ್ಪ ಸಮಯ ಕಳೀತಿದ್ವಿ. ಆ ದಿನಗಳು ತುಂಬ ಚೆನ್ನಾಗಿದ್ವು!

1988 ರಲ್ಲಿ ಮ್ಯಾರಿಲಿನ್‌ನ ಮದುವೆಯಾದ ಸ್ವಲ್ಪ ಸಮಯದ ನಂತ್ರ ‘ನಮ್ಗೆ ಅಷ್ಟೇನು ಜವಾಬ್ದಾರಿಗಳಿಲ್ಲ, ನಾವ್ಯಾಕೆ ಸೇವೆಯನ್ನ ಹೆಚ್ಚು ಮಾಡಬಾರ್ದು?’ ಅಂತ ನಾನು ಯೋಚಿಸಿದೆ. ನಾನು ಸಹ ಪಯನೀಯರ್‌ ಸೇವೆಯನ್ನ ಶುರುಮಾಡ್ದೆ. ಒಂದು ವರ್ಷದ ನಂತ್ರ ಪಯನೀಯರ್‌ ಶಾಲೆಗೆ ಹಾಜರಾದ್ವಿ. ನಂತ್ರ ನಮ್ಮನ್ನು ವಿಶೇಷ ಪಯನೀಯರ್‌ ಆಗಿ ನೇಮಿಸಲಾಯಿತು. ಗ್ವಾಡೆಲೂಪ್‌ನಲ್ಲಿ ನಾವು ಅನೇಕ ನೇಮಕಗಳನ್ನು ಮಾಡಿದ್ವಿ. ನಂತ್ರ ಫ್ರೆಂಚ್‌ ಗಯಾನದಲ್ಲಿ ಸೇವೆ ಮಾಡುವ ನೇಮಕ ಸಿಕ್ತು.

ನಿಮ್ಮ ನೇಮಕದಲ್ಲಿ ಅನೇಕ ಬದಲಾವಣೆಗಳಾಗಿವೆ. ಹೊಸ-ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ನಿಮಗೆ ಯಾವುದು ಸಹಾಯ ಮಾಡಿದೆ?

ಮ್ಯಾರಿಲಿನ್‌: ನಮಗಿಷ್ಟವಾದ ವಚನ ಯೆಶಾಯ 6:8 ಎಂದು ಫ್ರೆಂಚ್‌ ಗಯಾನ ಬೆತೆಲ್‌ನಲ್ಲಿರುವ ಸಹೋದರರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಅವ್ರು ನಮ್ಗೆ ಫೋನ್‌ ಮಾಡಿ, “ನಿಮಗಿಷ್ಟವಾದ ವಚನ ನೆನಪಿದ್ಯಾ?” ಅಂತ ಕೇಳ್ತಾರೆ. ಆಗ್ಲೇ ನಮ್ಗೆ ನೇಮಕ ಬದಲಾಗಲಿದೆ ಅಂತ ಗೊತ್ತಾಗುತ್ತೆ. ಆಗ “ನಾವಿದ್ದೇವೆ! ನಮ್ಮನ್ನು ಕಳ್ಸಿ!” ಅಂತ ಹೇಳಿಬಿಡ್ತೇವೆ.

ಹಿಂದೆ ಇದ್ದ ನೇಮಕನ ಈಗ ಸಿಕ್ಕಿರೋ ನೇಮಕದ ಜೊತೆ ಹೋಲಿಸಿ ನೋಡಲ್ಲ. ಹಾಗೆ ಹೋಲಿಸಿ ನೋಡಿದ್ರೆ ಈಗಿರೋ ನೇಮಕವನ್ನ ಸಂತೋಷವಾಗಿ ಮಾಡ್ಲಿಕ್ಕೆ ಆಗೋದಿಲ್ಲ. ನಾವು ಹೊಸ ನೇಮಕಕ್ಕೆ ಹೋದಾಗ ಅಲ್ಲಿರೋ ಸಹೋದರ ಸಹೋದರಿಯರ ಪರಿಚಯ ಮಾಡಿಕೊಳ್ಳಲು ನಾವೇ ಮುಂದೆ ಹೋಗ್ತೇವೆ.

ಜ್ಯಾಕ್‌: ನಮ್ಮ ಕೆಲವು ಸಹೋದರ ಸಹೋದರಿಯರು ನಾವು ಅವ್ರ ಜೊತೆನೇ ಇರ್ಬೇಕಂತ ಇಷ್ಟಪಡ್ತಿದ್ರು. ಅದಕ್ಕೆ ಅವ್ರು “ಇಲ್ಲೇ ಇರಿ, ಯಾಕೆ ಬೇರೆ ಕಡೆ ಹೋಗ್ತೀರಾ?” ಅಂತ ಹೇಳ್ತಿದ್ರು. ಆದ್ರೆ ಒಬ್ಬ ಸಹೋದರ ನಾವು ಗ್ವಾಡೆಲೂಪ್‌ನಿಂದ ಹೋಗ್ವಾಗ ಮತ್ತಾಯ 13:38 ರಲ್ಲಿ ಯೇಸು ಹೇಳಿರುವ ಮಾತನ್ನು ನಮ್ಗೆ ನೆನಪಿಸಿದ್ರು. ಅದು ಹೇಳುತ್ತೆ: “ಹೊಲವೆಂದರೆ ಈ ಲೋಕ.” ನಮ್ಮ ನೇಮಕಗಳು ಬದಲಾಗುತ್ತಿದ್ದಾಗೆಲ್ಲಾ ನಾವು ಅದೇ ಹೊಲದಲ್ಲಿ ಕೆಲ್ಸ ಮಾಡ್ತಿರೋದು ಅನ್ನೋದು ನಮ್ಗೆ ಮನ್ಸಿಗೆ ಬರ್ತಿತ್ತು. ನಾವೆಲ್ಲಿ ಸೇವೆ ಮಾಡ್ತೇವೆ ಅನ್ನೋದಕ್ಕಿಂತ ಸೇವೆ ಮಾಡೋ ಜಾಗದಲ್ಲಿ ಜನ ಇರೋದು ನಮ್ಗೆ ಮುಖ್ಯ!

ನಾವು ಹೊಸ ಸ್ಥಳಕ್ಕೆ ಹೋದಾಗ ಅಲ್ಲಿನ ಜನ ಹೇಗೆ ಜೀವನ ಮಾಡ್ತಾರೆ ಅಂತ ನಾವು ಗಮನಿಸ್ತೇವೆ. ನಾವೂ ಅವರ ತರಾನೇ ಇರೋಕೆ ಪ್ರಯತ್ನಿಸ್ತೇವೆ. ಅವರ ಆಹಾರ ಪದ್ಧತಿ ವ್ಯತ್ಯಾಸ ಇದ್ರೂ ಅವರೇನು ತಿಂತಾರೋ ಅದನ್ನೇ ನಾವೂ ತಿಂತೇವೆ, ಅವರೇನು ಕುಡಿತಾರೋ ಅದನ್ನೇ ನಾವೂ ಕುಡಿತೇವೆ. ಆರೋಗ್ಯ ಹಾಳಾಗಬಾರ್ದು ಅಂತ ಕೆಲವೊಂದು ಮುನ್ನೆಚ್ಚರಿಕೆ ತಗೊಳ್ತೇವೆ. ನಮ್ಮ ಪ್ರತಿ ನೇಮಕದ ಬಗ್ಗೆ ಒಳ್ಳೇದನ್ನೇ ಮಾತಾಡೋಕೆ ನಾವು ಪ್ರಯತ್ನಿಸ್ತೇವೆ.

ಮ್ಯಾರಿಲಿನ್‌: ನಾವು ಸ್ಥಳೀಯ ಸಹೋದರ ಸಹೋದರಿಯರಿಂದಲೂ ಅನೇಕ ವಿಷ್ಯಗಳನ್ನು ಕಲಿತಿದ್ದೇವೆ. ನಾವು ಫ್ರೆಂಚ್‌ ಗಯಾನಕ್ಕೆ ಹೋದ ಹೊಸತರಲ್ಲಿ ಏನಾಯ್ತು ಅನ್ನೋದು ನಂಗಿನ್ನೂ ನೆನಪಿದೆ. ಒಂದಿನ ತುಂಬ ಮಳೆ ಬೀಳುತ್ತಿತ್ತು. ಮಳೆ ನಿಂತ ಮೇಲೆ ಸೇವೆಗೆ ಹೋಗೋಣ ಅಂತ ಅಂದುಕೊಂಡ್ವಿ. ಅಷ್ಟರಲ್ಲಿ ಒಬ್ಬ ಸಹೋದರಿ ನನ್ನತ್ರ “ಹೋಗೋಣ್ವಾ?” ಅಂತ ಕೇಳಿದ್ರು. ನಾನು ಆಶ್ಚರ್ಯದಿಂದ “ಹೇಗೆ ಹೋಗೋದು?” ಅಂತ ಕೇಳ್ದೆ. ಅದಕ್ಕೆ ಅವರು “ನಿಮ್ಮ ಛತ್ರಿ ತಗೊಳ್ಳಿ, ನಾವು ಸೈಕಲ್‌ನಲ್ಲಿ ಹೋಗೋಣ” ಅಂತ ಹೇಳಿದ್ರು. ಹಾಗಾಗಿ ಛತ್ರಿ ಹಿಡುಕೊಂಡು ಸೈಕಲ್‌ ಓಡಿಸೋದು ಹೇಗಂತ ಕಲಿತೆ. ಅದನ್ನು ಕಲಿದೇ ಇದ್ದಿದ್ರೆ ಮಳೆಗಾಲದಲ್ಲಿ ಸೇವೆ ಮಾಡೋಕೇ ಆಗ್ತಿರಲಿಲ್ಲ!

ನೀವು ಸುಮಾರು 15 ಸಲ ಬೇರೆ-ಬೇರೆ ಕಡೆಗೆ ಸ್ಥಳಾಂತರಿಸಿದ್ದೀರಿ. ಒಂದು ಕಡೆಯಿಂದ ಇನ್ನೊಂದು ಕಡೆ ಹೋಗುವವರಿಗೆ ನೀವೇನಾದ್ರೂ ಸಲಹೆ ಕೊಡೋಕೆ ಇಷ್ಟಪಡ್ತೀರಾ?

ಮ್ಯಾರಿಲಿನ್‌: ಬೇರೆ ಸ್ಥಳಕ್ಕೆ ಹೋಗೋದು, ಅಲ್ಲಿಗೆ ಹೊಂದಿಕೊಳ್ಳೋದು ಕಷ್ಟನೇ. ಆದ್ರೆ ಚಿಕ್ಕದಾಗಿದ್ರೂ ನಮಗೆ ಚೆನ್ನಾಗಿ ಅನಿಸುವಂಥ ಮನೆ ಇದ್ರೆ ನಾವು ಸೇವೆಯಿಂದ ಸುಸ್ತಾಗಿ ಬಂದಾಗ ವಿಶ್ರಾಂತಿ ತಗೊಳ್ಳೋಕೆ ಚೆನ್ನಾಗಿರುತ್ತೆ.

ಜ್ಯಾಕ್‌: ಹೋದ ಮನೆಗೆಲ್ಲಾ ಪೈಂಟ್‌ ಮಾಡೋ ಅಭ್ಯಾಸ ನನಗಿದೆ. ಆದ್ರೆ ಹೆಚ್ಚು ದಿನ ಅಲ್ಲಿ ಇರಲ್ಲ ಅಂತ ಗೊತ್ತಿದ್ರೆ ಶಾಖೆಯ ಸಹೋದರರು “ಬ್ರದರ್‌ ಈ ಸಲ ಪೈಂಟ್‌ ಮಾಡೋಕೆ ಹೋಗ್ಬೇಡಿ!” ಅಂತ ನಮಗೆ ಹೇಳ್ತಾರೆ.

ಮ್ಯಾರಿಲಿನ್‌ ಪ್ಯಾಕಿಂಗ್‌ ತುಂಬ ಚೆನ್ನಾಗಿ ಮಾಡ್ತಾಳೆ! ಸಾಮಾನುಗಳನ್ನೆಲ್ಲಾ ಬಾಕ್ಸ್‌ಗಳಲ್ಲಿ ತುಂಬಿಸಿ ಪ್ರತಿಯೊಂದು ಬಾಕ್ಸಿಗೂ ಒಂದೊಂದು ಹೆಸ್ರು ಬರೆದಿಟ್ಟಿರುತ್ತಾಳೆ. ಉದಾಹರಣೆಗೆ, “ಬಾತ್‌ರೂಮ್‌,” “ಬೆಡ್‌ರೂಮ್‌,” “ಕಿಚನ್‌” ಅಂತ. ಇದರಿಂದಾಗಿ, ನಾವು ಹೊಸ ಮನೆಗೆ ಹೋದಾಗ ಯಾವ್ಯಾವ ರೂಮಲ್ಲಿ ಯಾವ್ಯಾವ ಬಾಕ್ಸ್‌ ಇಡ್ಬೇಕಂತ ಗೊತ್ತಾಗುತ್ತೆ. ಪ್ರತಿಯೊಂದು ಬಾಕ್ಸಲ್ಲೂ ಏನೆಲ್ಲಾ ಇದೆ ಅಂತ ಅವಳು ಬರೆದಿರುತ್ತಾಳೆ. ಹೀಗೆ ನಮಗೆ ಬೇಕಾಗಿರೋ ವಸ್ತುನ ಬೇಗನೇ ತಗೊಳ್ಳೋಕೆ ಸಹಾಯ ಆಗುತ್ತೆ.

ಮ್ಯಾರಿಲಿನ್‌: ವ್ಯವಸ್ಥಿತವಾಗಿ ಹೇಗಿರೋದು ಅನ್ನೋದನ್ನ ನಾವು ಕಲಿತಿರೋದರಿಂದ ಹೊಸ ಸ್ಥಳಕ್ಕೆ ಹೋದಾಗ ತಕ್ಷಣನೇ ಸೇವೆ ಮಾಡೋಕೆ ನಮ್ಗೆ ಸುಲಭ ಆಗುತ್ತೆ.

‘ಸೇವೆಯನ್ನು ಪೂರ್ಣವಾಗಿ ನೆರವೇರಿಸಲಿಕ್ಕೆ’ ನೀವು ಹೇಗೆ ಸಮ್ಯ ಮಾಡಿಕೊಂಡಿದ್ದೀರಾ?—2 ತಿಮೊ. 4:5.

ಮ್ಯಾರಿಲಿನ್‌: ಸೋಮವಾರ ನಾವು ವಿಶ್ರಾಂತಿ ತಗೊಳ್ತೇವೆ, ಕೂಟಗಳಿಗೆ ತಯಾರಾಗ್ತೇವೆ. ಮಂಗಳವಾರದಿಂದ ಸೇವೆಗೆ ಹೋಗ್ತೇವೆ.

ಜ್ಯಾಕ್‌: ಪ್ರತಿ ತಿಂಗಳು ಇಂತಿಷ್ಟು ತಾಸು ಮಾಡ್ಬೇಕು ಅಂತಿದ್ರೂ ನಾವು ಅದ್ರ ಕಡೆಗೆ ಗಮನ ಕೊಡ್ಲಿಕ್ಕೇ ಹೋಗಲ್ಲ. ಸೇವೆ ಮಾಡೋದೇ ನಮ್ಗೆ ತುಂಬ ಮುಖ್ಯ. ಮನೆಯಿಂದ ಹೊರಟಾಗಿಂದ ಹಿಡಿದು ವಾಪಸ್‌ ಬರೋ ತನಕ ನಮ್ಗೆ ಸಿಗುವಂಥ ಎಲ್ಲರ ಹತ್ರನೂ ಮಾತಾಡೋಕೆ ನಾವು ಪ್ರಯತ್ನಿಸ್ತೇವೆ.

ಮ್ಯಾರಿಲಿನ್‌: ಉದಾಹರಣೆಗೆ ಪಿಕ್‌ನಿಕ್‌ ಹೋದಾಗ್ಲೂ, ನಾನು ಕರಪತ್ರಗಳನ್ನು ಇಟ್ಟುಕೊಳ್ತೇನೆ. ನಾವು ಯೆಹೋವನ ಸಾಕ್ಷಿಗಳು ಅಂತ ಹೇಳಿಕೊಳ್ಳದಿದ್ರೂ ಕೆಲವು ಜನ ನಮ್ಮತ್ರ ಬಂದು ನಮ್ಮ ಪ್ರಕಾಶನಗಳನ್ನು ಕೇಳ್ತಾರೆ. ಆದ್ರಿಂದ ಬಟ್ಟೆ ಮತ್ತು ನಾವು ನಡಕೊಳ್ಳುವ ವಿಷ್ಯದಲ್ಲಿ ಸಭ್ಯವಾಗಿ ಇರ್ತೇವೆ. ಇದನ್ನೆಲ್ಲಾ ಜನ ಗಮನಿಸ್ತಾರೆ.

ಜ್ಯಾಕ್‌: ಅಕ್ಕಪಕ್ಕದವರಿಗೆ ಸಹಾಯ ಮಾಡೋ ಮೂಲಕನೂ ಸಾಕ್ಷಿ ಕೊಡ್ತೇವೆ. ನಾನು ಕಾಗದ, ಕಸ ಏನಾದ್ರೂ ಬಿದ್ದಿದ್ರೆ ಕಸದ ತೊಟ್ಟಿಗೆ ಹಾಕ್ತೇನೆ, ಕಸದ ತೊಟ್ಟಿನ ಕ್ಲೀನ್‌ ಮಾಡ್ತೇನೆ, ಮನೆ ಸುತ್ತ-ಮುತ್ತ ಬಿದ್ದಿರೋ ಒಣಎಲೆಗಳನ್ನು ಗುಡಿಸ್ತೇನೆ. ಇದನ್ನೆಲ್ಲಾ ಅಕ್ಕಪಕ್ಕದ ಮನೆಯವ್ರು ಗಮನಿಸ್ತಾರೆ. ಕೆಲವೊಮ್ಮೆ “ನನಗೊಂದು ಬೈಬಲ್‌ ಕೊಡ್ತೀರಾ?” ಅಂತ ಕೇಳ್ತಾರೆ.

ಹೆಚ್ಚು ಸೌಲಭ್ಯ ಇರದ ಸ್ಥಳಗಳಿಗೂ ಹೋಗಿ ನೀವು ಸೇವೆ ಮಾಡಿದ್ದೀರಿ. ಅಂಥ ಸ್ಥಳಗಳಿಗೆ ಹೋದಾಗ ಮರೆಯಲಾಗದ ಅನುಭವ ಆಗಿದ್ರೆ ತಿಳಿಸ್ತೀರಾ?

ಜ್ಯಾಕ್‌: ಗಯಾನದಲ್ಲಿ ಕೆಲವು ಸ್ಥಳಗಳಿಗೆ ಹೋಗೋಕೆ ತುಂಬ ಕಷ್ಟ ಆಗ್ತಿತ್ತು. ನಾವು ಒಂದು ವಾರದಲ್ಲಿ 600 ಕಿ.ಮೀ. ಪ್ರಯಾಣ ಮಾಡ್ತಿದ್ವಿ, ರಸ್ತೆಗಳಂತೂ ತುಂಬ ಹಾಳಾಗಿರ್ತಿದ್ವು. ಅಮೆಜಾ಼ನ್‌ ಕಾಡಿನಲ್ಲಿರೋ ಸೇಂಟ್‌ ಎಲೀ ಎಂಬ ಸ್ಥಳಕ್ಕೆ ಭೇಟಿ ನೀಡಿದ್ದನ್ನು ಮರೆಯೋಕೆ ಆಗಲ್ಲ. ಅಲ್ಲಿಗೆ ಹೋಗೋಕೆ ತುಂಬ ಸಮಯ ಹಿಡಿಯಿತು. ನಾವು ಆಫ್‌-ರೋಡ್‌ ಗಾಡಿ (ರಸ್ತೆ ಇಲ್ಲದ ಸ್ಥಳಗಳಲ್ಲಿ ಓಡಿಸಬಹುದಾದ ಗಾಡಿಗಳು) ಮತ್ತು ಮೋಟಾರ್‌ಬೋಟ್‌ ಮೂಲಕ ಅಲ್ಲಿಗೆ ಹೋದ್ವಿ. ಅಲ್ಲಿನ ಹೆಚ್ಚಿನ ಜನ ಚಿನ್ನದ ಗಣಿಯಲ್ಲಿ ಕೆಲಸ ಮಾಡ್ತಿದ್ರು. ನಮ್ಮ ಪ್ರಕಾಶನಗಳನ್ನು ಕೊಟ್ಟಾಗ ಅವರು ಕಾಣಿಕೆಯಾಗಿ ಚಿಕ್ಕ ಚಿನ್ನದ ಗಟ್ಟಿ ಕೊಟ್ರು! ಸಂಜೆ ಸಮಯದಲ್ಲಿ ನಮ್ಮ ಸಂಘಟನೆಯ ಒಂದು ವಿಡಿಯೋವನ್ನು ತೋರಿಸಿದ್ವಿ. ಅಲ್ಲಿನ ಅನೇಕ ಜನರು ಅದನ್ನು ನೋಡೋಕೆ ಬಂದಿದ್ರು.

ಮ್ಯಾರಿಲಿನ್‌: ಕೆಲವು ವರ್ಷಗಳ ಹಿಂದೆ ಜ್ಯಾಕ್‌ ಕ್ಯಮೊಪಿಯಲ್ಲಿ ಸ್ಮರಣೆಯ ಭಾಷಣ ಕೊಡಬೇಕಿತ್ತು. ಅಲ್ಲಿಗೆ ಹೋಗೋಕೆ ನಾವು ಒಯಪಾಕ್‌ ನದಿಯಲ್ಲಿ ನಾಲ್ಕು ತಾಸು ಮೋಟಾರ್‌ಬೋಟ್‌ನಲ್ಲಿ ಪ್ರಯಾಣ ಮಾಡಿದ್ವಿ. ಅದಂತೂ ಅದ್ಭುತ ಅನುಭವ!

ಜ್ಯಾಕ್‌: ನದಿಯಲ್ಲಿ ನೀರು ಕಡಿಮೆ ಇರುವಾಗ ದೋಣಿ ಬಂಡೆಗಳಿಗೆ ಡಿಕ್ಕಿ ಹೊಡೆಯೋ ಅಪಾಯ ಇರುತ್ತೆ. ಆದ್ರೂ ಬಂಡೆಗಳ ಮೇಲೆ ನೀರು ರಭಸವಾಗಿ ಹರಿಯೋದನ್ನ ನೋಡೋಕೆ ತುಂಬ ಚೆನ್ನಾಗಿರುತ್ತೆ. ದೋಣಿ ನಡೆಸುವವನಿಗೆ ಇಂಥ ಜಾಗದಲ್ಲಿ ದೋಣಿ ನಡೆಸೋಕೆ ಒಳ್ಳೇ ಅನುಭವ ಇರ್ಬೇಕು. ಈ ಪ್ರಯಾಣ ಮಾಡುವಾಗ ನಮಗೆ ಸ್ವಲ್ಪ ಭಯ ಆಯ್ತು, ಆದ್ರೂ ಅದೊಂದು ಒಳ್ಳೇ ಅನುಭವ ಆಗಿತ್ತು. ಅಲ್ಲಿ ಇದ್ದಿದ್ದು ಬರೀ 6 ಮಂದಿ ಸಾಕ್ಷಿಗಳಾದ್ರೂ ಸ್ಮರಣೆಗೆ 50 ಮಂದಿ ಹಾಜರಾದ್ರು! ಅದ್ರಲ್ಲಿ ಅಮೇರ್‌ಇಂಡಿಯನ್ಸ್‌ ಜನಾಂಗದವರೂ ಇದ್ರು.

ಮ್ಯಾರಿಲಿನ್‌: ಯೆಹೋವನ ಸೇವೆಯನ್ನ ಹೆಚ್ಚು ಮಾಡಬೇಕೆಂದು ಬಯಸುವ ಯುವಜನ್ರಿಗೆ ಇಂಥ ಅದ್ಭುತ ಅನುಭವಗಳು ಖಂಡಿತ ಸಿಗುತ್ತೆ. ಇಂಥ ಸನ್ನಿವೇಶಗಳಲ್ಲಿ ನೀವು ಯೆಹೋವನಲ್ಲಿ ನಂಬಿಕೆ ಇಡಬೇಕು. ಆಗ ನಿಮ್ಮ ನಂಬಿಕೆ ಬಲ ಆಗುತ್ತೆ. ಯೆಹೋವನು ಸಹಾಯ ಮಾಡೋದನ್ನು ಕಣ್ಣಾರೆ ನೋಡ್ತೇವೆ.

ನೀವು ತುಂಬ ಭಾಷೆಗಳನ್ನು ಕಲಿತಿದ್ದೀರಿ. ಭಾಷೆ ಕಲಿಯೋದು ಸುಲಭವಾಗಿತ್ತಾ?

ಜ್ಯಾಕ್‌: ಖಂಡಿತ ಇಲ್ಲ. ಬೇರೆ ದಾರಿ ಇಲ್ಲದ ಕಾರಣ ಭಾಷೆ ಕಲಿತೆ. ನಾನು ಸ್ರನನ್‌ಟನ್‌ಗೋ * ಭಾಷೆಯಲ್ಲಿ ಬೈಬಲ್‌ ಓದುವಿಕೆ ಮಾಡೋ ಮುಂಚೆನೇ ಕಾವಲಿನಬುರುಜು ಅಧ್ಯಯನ ನಡೆಸಬೇಕಿತ್ತು. ಅಧ್ಯಯನ ನಡೆಸಿದ ಮೇಲೆ ಒಬ್ಬ ಸಹೋದರನ ಹತ್ರ ‘ಹೇಗಿತ್ತು?’ ಅಂತ ಕೇಳ್ದೆ. ಅದಕ್ಕೆ ಅವರು “ಕೆಲವು ಪದಗಳನ್ನ ಅರ್ಥಮಾಡಿಕೊಳ್ಳೋಕೆ ನಮ್ಗೆ ಕಷ್ಟ ಆಯ್ತು, ಆದ್ರೆ ತುಂಬ ಚೆನ್ನಾಗಿತ್ತು” ಅಂತ ಹೇಳಿದ್ರು. ಮಕ್ಕಳು ನಂಗೆ ತುಂಬ ಸಹಾಯ ಮಾಡ್ತಿದ್ರು. ನಾನು ಏನಾದ್ರೂ ತಪ್ಪು ಹೇಳ್ದಾಗ ಅವರು ಸರಿಮಾಡ್ತಿದ್ರು. ಆದ್ರೆ ದೊಡ್ಡವರು ಏನೂ ಹೇಳ್ತಿರಲಿಲ್ಲ. ನಾನು ಚಿಕ್ಕ ಮಕ್ಕಳಿಂದ ತುಂಬ ಕಲ್ತಿದ್ದೇನೆ.

ಮ್ಯಾರಿಲಿನ್‌: ಒಂದು ಸ್ಥಳದಲ್ಲಿ ಫ್ರೆಂಚ್‌, ಪೋರ್ಚುಗೀಸ್‌, ಸ್ರನನ್‌ಟನ್‌ಗೋ ಭಾಷೆ ಮಾತಾಡುವ ಜನ್ರಿಗೆ ನಾನು ಬೈಬಲ್‌ ಕಲಿಸಬೇಕಿತ್ತು. ಒಬ್ಬ ಸಹೋದರಿ ನನಗೆ, “ಮೊದಲಿಗೆ ನಿಮ್ಗೆ ಕಷ್ಟ ಆಗೋ ಭಾಷೆ ಮಾತಾಡೋ ಜನ್ರಿಗೆ ಬೈಬಲ್‌ ಕಲ್ಸಿ, ಕೊನೆಯಲ್ಲಿ ಸುಲಭ ಇರೋ ಭಾಷೆ ಮಾತಾಡೋ ಜನ್ರಿಗೆ ಬೈಬಲ್‌ ಕಲ್ಸಿ” ಅಂತ ಸಲಹೆ ಕೊಟ್ರು. ಅದು ಒಳ್ಳೇ ಸಲಹೆ ಅಂತ ನಂಗೆ ತುಂಬ ಬೇಗ ಅರ್ಥ ಆಯ್ತು.

ಒಂದಿನ ನಾನು ಸ್ರನನ್‌ಟನ್‌ಗೋ ಭಾಷೆ ಮಾತಾಡುವವ್ರಿಗೆ ಮತ್ತು ಪೋರ್ಚುಗೀಸ್‌ ಭಾಷೆ ಮಾತಾಡುವವ್ರಿಗೆ ಬೈಬಲ್‌ ಕಲಿಸಬೇಕಿತ್ತು. ಸ್ರನನ್‌ಟನ್‌ಗೋ ಭಾಷೆಯಲ್ಲಿ ಚೆನ್ನಾಗಿ ಬೈಬಲ್‌ ಕಲಿಸಿ ಬಂದೆ. ನಂತರ ಪೋರ್ಚುಗೀಸ್‌ ಭಾಷೆಯಲ್ಲಿ ಬೈಬಲ್‌ ಕಲಿಸೋಕೆ ಶುರುಮಾಡಿದಾಗ ನನ್ನ ಜೊತೆ ಬಂದಿದ್ದ ಸಹೋದರಿ, “ಮ್ಯಾರಿಲಿನ್‌ ನೀವು ಬೇರೆ ಭಾಷೆಯಲ್ಲಿ ಮಾತಾಡ್ತಿದ್ದೀರಿ” ಅಂತ ಹೇಳಿದ್ರು. ನಾನು ಬ್ರೆಜಿ಼ಲ್‌ ಸ್ತ್ರೀಗೆ ಪೋರ್ಚುಗೀಸ್‌ ಭಾಷೆಯಲ್ಲಿ ಕಲ್ಸೋ ಬದ್ಲು ಸ್ರನನ್‌ಟನ್‌ಗೋ ಭಾಷೆಯಲ್ಲಿ ಕಲಿಸ್ತಿದ್ದೇನೆ ಅಂತ ನಂಗೆ ಆಗ ಅರ್ಥ ಆಯ್ತು!

ನೀವು ಎಲ್ಲೆಲ್ಲಾ ಸೇವೆ ಮಾಡಿದ್ದೀರೋ ಅಲ್ಲಿರೋ ಸಹೋದರ ಸಹೋದರಿಯರು ನಿಮ್ಮನ್ನು ತುಂಬ ಪ್ರೀತಿಸ್ತಾರೆ. ನೀವು ಅವರಿಗೆ ಆಪ್ತರಾಗೋಕೆ ಏನು ಮಾಡಿದ್ರಿ?

ಜ್ಯಾಕ್‌: ಜ್ಞಾನೋಕ್ತಿ 11:25 “ಉದಾರಿಯು ಪುಷ್ಟನಾಗುವನು” ಅಂತ ಹೇಳುತ್ತೆ. ನಾವು ಬೇರೆಯವ್ರಿಗೆ ಸಮಯ ಕೊಡೋಕೆ, ಅವ್ರಿಗೆ ಸಹಾಯ ಮಾಡೋಕೆ ಹಿಂಜರಿಯೋದಿಲ್ಲ. ರಾಜ್ಯ ಸಭಾಗೃಹ ಸುಸ್ಥಿತಿಯಲ್ಲಿಡೋ ಕೆಲ್ಸ ಇದ್ದಾಗ ಕೆಲವ್ರು “ಅದನ್ನು ಪ್ರಚಾರಕರು ಮಾಡ್ತಾರೆ” ಅಂತ ಹೇಳಿದ್ರು. ಆಗ “ನಾನೂ ಒಬ್ಬ ಪ್ರಚಾರಕ, ಏನಾದ್ರೂ ಕೆಲ್ಸ ಇದ್ರೆ ನಾನೂ ಬಂದು ಮಾಡ್ತೀನಿ” ಅಂತ ಹೇಳ್ದೆ. ನಮಗಾಗಿ ಸಮಯ ಮಾಡ್ಕೋಬೇಕಿದ್ರೂ ಅದಕ್ಕೋಸ್ಕರ ನಾವು ಬೇರೆಯವ್ರಿಗೆ ಸಮಯ ಕೊಡೋದನ್ನ, ಸಹಾಯ ಮಾಡೋದನ್ನ ತಪ್ಪಿಸೋದಿಲ್ಲ.

ಮ್ಯಾರಿಲಿನ್‌: ನಾವು ಸಹೋದರ ಸಹೋದರಿಯರಿಗೆ ಏನಾದ್ರೂ ಸಹಾಯ ಬೇಕಿದೆಯಾ ಅಂತ ತಿಳುಕೊಳ್ಳೋಕೆ ಪ್ರಯತ್ನಿಸ್ತಿದ್ವಿ. ಕೆಲವೊಮ್ಮೆ ಅವ್ರಿಗೆ ತಮ್ಮ ಮಕ್ಕಳನ್ನು ಶಾಲೆಯಿಂದ ಕರಕೊಂಡು ಬರೋಕೆ ಸಹಾಯ ಬೇಕಿರುತ್ತಿತ್ತು. ಆಗ ನಮ್ಮ ಶೆಡ್ಯೂಲಲ್ಲಿ ಹೊಂದಾಣಿಕೆ ಮಾಡಿ ಅವ್ರಿಗೆ ಸಹಾಯ ಮಾಡ್ತಿದ್ವಿ. ಹೀಗೆ ಅಗತ್ಯ ಇದ್ದಾಗೆಲ್ಲಾ ಸಹೋದರ ಸಹೋದರಿಯರಿಗೆ ಸಹಾಯ ಮಾಡೋ ಮೂಲಕ ಅವ್ರಿಗೆ ಆಪ್ತರಾದ್ವಿ.

ಅಗತ್ಯ ಇರೋ ಕಡೆ ಸೇವೆ ಮಾಡಿದ್ರಿಂದ ನಿಮ್ಗೆ ಯಾವ ಆಶೀರ್ವಾದಗಳು ಸಿಕ್ಕಿವೆ?

ಜ್ಯಾಕ್‌: ಪೂರ್ಣ ಸಮಯದ ಸೇವೆ ನಮ್ಗೆ ಅನೇಕ ಆಶೀರ್ವಾದ ತಂದಿದೆ. ನಾವು ಯೆಹೋವನ ಸೃಷ್ಟಿ ಕಾರ್ಯಗಳನ್ನು ಹತ್ತಿರದಿಂದ ನೋಡಿ ಆನಂದಿಸೋಕೆ ತುಂಬ ಅವಕಾಶ ಸಿಕ್ಕಿದೆ. ಅನೇಕ ಸವಾಲುಗಳಿದ್ರೂ ಮನಶ್ಶಾಂತಿ ಇದೆ. ಯಾಕಂದ್ರೆ ನಾವೆಲ್ಲೇ ಇದ್ರೂ ಯೆಹೋವನ ಆರಾಧಕರ ಬೆಂಬಲ ಸಿಕ್ಕಿದೆ.

ಯುವಪ್ರಾಯದಲ್ಲಿದ್ದಾಗ ಮಿಲಿಟರಿಗೆ ಸೇರದ ಕಾರಣ ನನ್ನನ್ನು ಫ್ರೆಂಚ್‌ ಗಯಾನದ ಜೈಲಿಗೆ ಹಾಕಲಾಯಿತು. ಮುಂದೆ ಒಂದಿನ ನಾನು ಅಲ್ಲಿ ಹೋಗಿ ಮಿಷನರಿ ಸೇವೆ ಮಾಡ್ತೇನೆ, ಆ ಜೈಲುಗಳಿಗೆ ಭೇಟಿ ಮಾಡಿ ಸುವಾರ್ತೆ ಸಾರುತ್ತೇನೆ ಅಂತ ಯಾವತ್ತಿಗೂ ಯೋಚಿಸಿರಲಿಲ್ಲ. ಯೆಹೋವನು ನಮ್ಮನ್ನು ನಿಜವಾಗ್ಲೂ ಆಶೀರ್ವದಿಸಿದ್ದಾನೆ. ಆತನು ಉದಾರವಾಗಿ ಕೊಡುವ ದೇವರು!

ಮ್ಯಾರಿಲಿನ್‌: ಬೇರೆಯವ್ರಿಗೆ ನನ್ನ ಕೈಲಾಗುವಷ್ಟು ಸಹಾಯ ಮಾಡೋದು ನಂಗೆ ತುಂಬ ಸಂತೋಷ ಕೊಟ್ಟಿದೆ. ಯೆಹೋವನ ಸೇವೆಯನ್ನ ಮಾಡ್ತಿರೋದ್ರಿಂದ ನಂಗೆ ತುಂಬ ಆನಂದ ಸಿಕ್ಕಿದೆ. ನಮ್ಮಿಬ್ಬರ ಬಂಧನೂ ಬಲವಾಗಿದೆ. ಕೆಲವೊಂದು ಸಲ ನಿರುತ್ಸಾಹದಿಂದ ಇರೋ ದಂಪತಿಯನ್ನ ನೋಡಿದ್ರೆ ಜ್ಯಾಕ್‌ ನನ್ನತ್ರ ಬಂದು “ಅವರನ್ನ ಊಟಕ್ಕೆ ಕರೆಯೋಣ್ವಾ?” ಅಂತ ಕೇಳ್ತಾರೆ. ನಾನಾಗ “ನಾನೂ ಅದನ್ನೇ ಯೋಚಿಸ್ತಿದ್ದೆ!” ಅಂತ ಹೇಳ್ತೇನೆ. ಕೆಲವೊಮ್ಮೆ ನಮ್ಮಿಬ್ಬರ ಯೋಚನೆನೂ ಒಂದೇ ತರ ಇರುತ್ತೆ.

ಜ್ಯಾಕ್‌: ಕೆಲವು ವರ್ಷಗಳ ಹಿಂದೆ ನಂಗೆ ಪ್ರೋಸ್ಟೇಟ್‌ ಕ್ಯಾನ್ಸರ್‌ ಬಂದಿದ್ದರಿಂದ ಅದಕ್ಕಾಗಿ ಚಿಕಿತ್ಸೆ ಪಡೆಯಬೇಕಾಯ್ತು. ಮ್ಯಾರಿಲಿನ್‌ಗೆ ನಾನು ಹೀಗೆ ಹೇಳ್ತಾ ಇರ್ತಿದ್ದೆ: “ಡಾರ್ಲಿಂಗ್‌ ನಂಗೇನೂ ಸಾಯುವಷ್ಟು ವಯಸ್ಸಾಗಿಲ್ಲ, ಆದ್ರೆ ನಾಳೆ ನಾನು ಸತ್ರೂ ಯೆಹೋವನ ಸೇವೆ ಮಾಡಿರೋದ್ರಿಂದ ನನ್ನ ಜೀವನಕ್ಕೊಂದು ಅರ್ಥ ಸಿಕ್ಕಿದೆ, ಇದೇ ನಂಗೆ ಸಂತೋಷ ಕೊಡುತ್ತೆ. ಇಷ್ಟೇ ಸಾಕು.” ಹೀಗೆ ನಾನು ಹೇಳುತ್ತಿದ್ದದ್ದು ಅವಳಿಗೆ ಇಷ್ಟ ಆಗ್ತಿರಲಿಲ್ಲ.—ಆದಿ. 25:8.

ಮ್ಯಾರಿಲಿನ್‌: ಯೆಹೋವನು ನಾವು ಕನಸುಮನಸ್ಸಲ್ಲೂ ನೆನಸಿರದಂಥ ಅನೇಕ ಸುಯೋಗಗಳನ್ನು ಕೊಟ್ಟು ಆಶೀರ್ವದಿಸಿದ್ದಾನೆ. ನಮ್ಮ ಜೀವನದಲ್ಲಿ ನಮ್ಗೆ ತುಂಬ ಆಶೀರ್ವಾದಗಳು ಸಿಕ್ಕಿವೆ. ಯೆಹೋವನ ಮೇಲೆ ನಮ್ಗೆ ಪೂರ್ಣ ಭರವಸೆ ಇರೋದ್ರಿಂದ ಆತನ ಸಂಘಟನೆ ಎಲ್ಲಿ ಹೋಗಿ ಸೇವೆ ಮಾಡೋಕೆ ಹೇಳಿದ್ರೂ ನಾವು ಅಲ್ಲಿಗೆ ಹೋಗೋಕೆ ಸಿದ್ಧರಾಗಿದ್ದೇವೆ!

^ ಪ್ಯಾರ. 32 ಸ್ರನನ್‌ಟನ್‌ಗೋ ಭಾಷೆ ಇಂಗ್ಲಿಷ್‌, ಡಚ್‌, ಪೋರ್ಚುಗೀಸ್‌ ಮತ್ತು ಆಫ್ರಿಕನ್‌ ಭಾಷೆಗಳ ಮಿಶ್ರ ಭಾಷೆ ಆಗಿದೆ. ಇದು ಗುಲಾಮರಿಂದ ಹುಟ್ಟಿಕೊಂಡ ಭಾಷೆಯಾಗಿದೆ.