ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 13

ಒಬ್ಬರನ್ನೊಬ್ಬರು ತುಂಬ ಪ್ರೀತಿಸಿ

ಒಬ್ಬರನ್ನೊಬ್ಬರು ತುಂಬ ಪ್ರೀತಿಸಿ

“ಹೃದಯದಾಳದಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ.”—1 ಪೇತ್ರ 1:22.

ಗೀತೆ 73 ಹೃದಯದಾಳದಿಂದ ಪ್ರೀತಿಸಿರಿ

ಕಿರುನೋಟ *

ಯೇಸು ಸಾಯುವ ಹಿಂದಿನ ರಾತ್ರಿ ತನ್ನ ಶಿಷ್ಯರಿಗೆ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬ ಆಜ್ಞೆ ಕೊಟ್ನು. (ಪ್ಯಾರ 1-2 ನೋಡಿ)

1. ಯೇಸು ತನ್ನ ಶಿಷ್ಯರಿಗೆ ಯಾವ ಆಜ್ಞೆ ಕೊಟ್ಟನು? (ಮುಖಪುಟ ಚಿತ್ರ ನೋಡಿ.)

ಯೇಸು ಸಾಯುವ ಹಿಂದಿನ ರಾತ್ರಿ ತನ್ನ ಶಿಷ್ಯರಿಗೆ ಒಂದು ಆಜ್ಞೆ ಕೊಟ್ಟನು. ಅದೇನೆಂದ್ರೆ, “ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.”—ಯೋಹಾ. 13:34, 35.

2. ಒಬ್ಬರನ್ನೊಬ್ರು ಪ್ರೀತಿಸೋದು ಯಾಕೆ ತುಂಬ ಪ್ರಾಮುಖ್ಯ?

2 ಯೇಸು ಶಿಷ್ಯರನ್ನು ಪ್ರೀತಿಸಿದಂತೆಯೇ ಅವರು ಸಹ ಒಬ್ಬರನ್ನೊಬ್ರು ಪ್ರೀತಿಸಿದರೆ ಮಾತ್ರ ಜನ ಅವರನ್ನು ಯೇಸುವಿನ ಶಿಷ್ಯರು ಅಂತ ಗುರುತಿಸ್ತಾರೆ ಎಂದು ಸ್ವತಃ ಆತನೇ ಹೇಳಿದನು. ಈ ಮಾತು ಒಂದನೇ ಶತಮಾನದವರಿಗೆ ಮಾತ್ರವಲ್ಲ, ಈಗಿನ ಶಿಷ್ಯರಿಗೂ ಅನ್ವಯಿಸುತ್ತೆ. ಹಾಗಾಗಿ ಕಷ್ಟ ಆದ್ರೂ ನಾವು ಒಬ್ಬರನ್ನೊಬ್ರು ಪ್ರೀತಿಸೋದು ತುಂಬನೇ ಪ್ರಾಮುಖ್ಯ!

3. ಈ ಲೇಖನದಲ್ಲಿ ಏನನ್ನು ನೋಡಲಿದ್ದೇವೆ?

3 ನಾವೆಲ್ಲರೂ ಅಪರಿಪೂರ್ಣರು. ಹಾಗಾಗಿ ಒಬ್ಬರನ್ನೊಬ್ರು ತುಂಬ ಪ್ರೀತಿಸೋಕೆ ಕಷ್ಟ ಆಗ್ಬಹುದು. ಹಾಗಿದ್ರೂ ನಾವು ಕ್ರಿಸ್ತನನ್ನು ಅನುಕರಿಸಬೇಕು. ಶಾಂತಿಯಿಂದ ಇರೋಕೆ, ಭೇದಭಾವ ಮಾಡದೆ ಇರೋಕೆ ಮತ್ತು ಅತಿಥಿಸತ್ಕಾರ ಮಾಡೋಕೆ ಪ್ರೀತಿ ಹೇಗೆ ಸಹಾಯ ಮಾಡುತ್ತೆ ಅನ್ನೋದನ್ನ ಈ ಲೇಖನದಲ್ಲಿ ನೋಡಲಿದ್ದೇವೆ. ನೀವಿದನ್ನು ಅಧ್ಯಯನ ಮಾಡ್ತಾ ಹೋದ ಹಾಗೆ ಈ ಪ್ರಶ್ನೆ ಕೇಳಿಕೊಳ್ಳಿ: ‘ಸವಾಲುಗಳ ಮಧ್ಯೆನೂ ಒಬ್ಬರಿಗೊಬ್ರು ಪ್ರೀತಿ ತೋರಿಸುತ್ತಾ ಇರುವಂಥ ಸಹೋದರ ಸಹೋದರಿಯರಿಂದ ಏನು ಕಲಿಯಬಹುದು?’

ಶಾಂತಿಯಿಂದ ಇರಿ

4. ಮತ್ತಾಯ 5:23, 24 ರ ಪ್ರಕಾರ ಒಬ್ಬ ಸಹೋದರನಿಗೆ ನಮ್ಮ ವಿರುದ್ಧ ಅಸಮಾಧಾನ ಇದ್ರೆ ನಾವ್ಯಾಕೆ ರಾಜಿಮಾಡಿಕೊಳ್ಬೇಕು?

4 ಒಬ್ಬ ಸಹೋದರನಿಗೆ ನಮ್ಮ ಬಗ್ಗೆ ಅಸಮಾಧಾನ ಇದ್ರೆ ನಾವು ಅವನೊಟ್ಟಿಗೆ ರಾಜಿಮಾಡಿಕೊಳ್ಳೋದು ಎಷ್ಟು ಪ್ರಾಮುಖ್ಯ ಅನ್ನೋದನ್ನ ಯೇಸು ಕಲಿಸಿದ್ದಾನೆ. (ಮತ್ತಾಯ 5:23, 24 ಓದಿ.) ನಾವು ದೇವರನ್ನ ಮೆಚ್ಚಿಸಬೇಕಂದ್ರೆ ಬೇರೆಯವರ ಜೊತೆ ಚೆನ್ನಾಗಿರಬೇಕು ಅಂತ ಆತನು ಒತ್ತಿಹೇಳಿದ್ದಾನೆ. ಸಹೋದರರೊಟ್ಟಿಗೆ ಶಾಂತಿಯಿಂದ ಇರೋಕೆ ನಮ್ಮಿಂದಾದಷ್ಟು ಪ್ರಯತ್ನಿಸುವಾಗ ಯೆಹೋವನಿಗೆ ತುಂಬ ಖುಷಿ ಆಗುತ್ತೆ. ಒಂದುವೇಳೆ ಯಾರ ಮೇಲಾದ್ರೂ ನಮಗೆ ಮನಸ್ತಾಪ ಇದ್ದು ಅವರ ಜೊತೆ ರಾಜಿಮಾಡಿಕೊಳ್ಳೋಕೆ ಯಾವುದೇ ರೀತಿಯ ಪ್ರಯತ್ನ ಹಾಕಿಲ್ಲ ಅಂದ್ರೆ ಯೆಹೋವನು ನಮ್ಮ ಆರಾಧನೆಯನ್ನು ಸ್ವೀಕರಿಸಲ್ಲ.—1 ಯೋಹಾ. 4:20.

5. ರಾಜಿಮಾಡಿಕೊಳ್ಳೋಕೆ ಮಾರ್ಕ್‌ ಎಂಬ ಸಹೋದರನಿಗೆ ಯಾಕೆ ಕಷ್ಟ ಆಯ್ತು?

5 ನಮಗೆ ರಾಜಿಮಾಡಿಕೊಳ್ಳೋಕೆ, ಶಾಂತಿಯಿಂದ ಇರೋಕೆ ಕಷ್ಟ ಆಗ್ಬಹುದು. ಯಾಕೆ? ಮಾರ್ಕ್‌ * ಎಂಬ ಸಹೋದರನ ಉದಾಹರಣೆ ನೋಡಿ. ಒಬ್ಬ ಸಹೋದರ ಮಾರ್ಕ್‌ ಅನ್ನು ಟೀಕಿಸಿದ್ರು ಮತ್ತು ಸಭೆಯಲ್ಲಿರುವ ಬೇರೆಯವರ ಹತ್ರ ಅವನ ಬಗ್ಗೆ ಕೆಟ್ಟದಾಗಿ ಮಾತಾಡಿದ್ರು. ಆಗ ಮಾರ್ಕ್‌ ಏನು ಮಾಡಿದ್ನು? ಆ ಸಹೋದರನ ಹತ್ರ ಕೋಪದಿಂದ, ಒರಟಾಗಿ ಮಾತಾಡಿಬಿಟ್ನು. ಆದ್ರೆ ನಂತ್ರ ತಾನು ಆ ಸಹೋದರನ ಹತ್ರ ನಡಕೊಂಡ ರೀತಿ ಸರಿ ಇರ್ಲಿಲ್ಲ ಅಂತ ಮಾರ್ಕ್‌ಗೆ ಅನಿಸ್ತು. ಆ ಸಹೋದರನ ಹತ್ರ ಕ್ಷಮೆ ಕೇಳಿ ಅವರೊಟ್ಟಿಗೆ ರಾಜಿಮಾಡಿಕೊಳ್ಳೋಕೆ ಪ್ರಯತ್ನಿಸಿದ್ನು. ಆದ್ರೆ ಆ ಸಹೋದರ ರಾಜಿಯಾಗಕ್ಕೆ ಮನಸ್ಸೇ ಮಾಡ್ಲಿಲ್ಲ. ಆಗ ಮಾರ್ಕ್‌ಗೆ ‘ಅವರಿಗೇ ರಾಜಿಯಾಗಕ್ಕೆ ಮನ್ಸಿಲ್ಲ ಅಂದಮೇಲೆ ನಾನ್ಯಾಕೆ ರಾಜಿಮಾಡಿಕೊಳ್ಳೋಕೆ ಪ್ರಯತ್ನಿಸ್ಬೇಕು?’ ಅಂತ ಅನಿಸ್ತು. ಆದ್ರೆ ಸಂಚರಣ ಮೇಲ್ವಿಚಾರಕರು ಅವನು ಮಾಡ್ತಿದ್ದ ಪ್ರಯತ್ನವನ್ನು ಬಿಡದೇ ಮುಂದುವರಿಸೋದಕ್ಕೆ ಉತ್ತೇಜಿಸಿದ್ರು. ನಂತರ ಮಾರ್ಕ್‌ ಏನು ಮಾಡಿದ್ನು?

6. (ಎ) ರಾಜಿಮಾಡಿಕೊಳ್ಳೋಕೆ ಮಾರ್ಕ್‌ ಏನೆಲ್ಲಾ ಪ್ರಯತ್ನ ಮಾಡಿದನು? (ಬಿ) ಕೊಲೊಸ್ಸೆ 3: 13, 14 ನ್ನು ಮಾರ್ಕ್‌ ಹೇಗೆ ಅನ್ವಯಿಸಿದನು?

6 ಮಾರ್ಕ್‌ ತನ್ನನ್ನೇ ಪರೀಕ್ಷಿಸಿಕೊಂಡಾಗ ತನ್ನಲ್ಲಿ ದೀನತೆಯ ಕೊರತೆ ಇದೆ ಮತ್ತು ಬೇರೆಯವ್ರಿಗಿಂತ ತಾನೇ ಉತ್ತಮ ಅನ್ನೋ ಯೋಚನೆ ಇದೆ ಅಂತ ಅವನಿಗೆ ಅರ್ಥ ಆಯ್ತು. ತನ್ನ ಈ ಸ್ವಭಾವವನ್ನ ಬದಲಾಯಿಸಿಕೊಳ್ಬೇಕು ಅಂತ ಅವನು ನಿರ್ಣಯಿಸಿದ್ನು. (ಕೊಲೊ. 3:8, 9, 12) ಪುನಃ ಆ ಸಹೋದರನ ಹತ್ರ ಹೋಗಿ ದೀನತೆಯಿಂದ ತಪ್ಪಾಯ್ತು ಎಂದು ಕ್ಷಮೆ ಕೇಳಿದ್ನು. ಅಷ್ಟೇ ಅಲ್ಲ, ತಾನು ಮಾಡಿದ್ದು ಎಷ್ಟು ದೊಡ್ಡ ತಪ್ಪು, ಪುನಃ ಒಳ್ಳೇ ಸ್ನೇಹಿತರಾಗೋಣ ಅಂತ ಆ ಸಹೋದರನಿಗೆ ಒಂದು ಪತ್ರನೂ ಬರೆದ್ನು. ಆ ಸಹೋದರನಿಗೆ ಇಷ್ಟ ಆಗುವಂಥ ಒಂದು ಚಿಕ್ಕ ಉಡುಗೊರೆಯನ್ನೂ ಕೊಟ್ಟನು. ಆದ್ರೆ ಆ ಸಹೋದರ ಮಾರ್ಕ್‌ ಅನ್ನು ಕ್ಷಮಿಸಲೇ ಇಲ್ಲ, ಇನ್ನೂ ಅಸಮಾಧಾನದಲ್ಲೇ ಇದ್ರು. ಆದ್ರೂ ಮಾರ್ಕ್‌ ಪ್ರಯತ್ನ ಬಿಡ್ಲಿಲ್ಲ. ಸಹೋದರನನ್ನ ಪ್ರೀತಿಸ್ಬೇಕು ಮತ್ತು ಕ್ಷಮಿಸ್ಬೇಕು ಅಂತ ಯೇಸು ಕೊಟ್ಟ ಆಜ್ಞೆ ಪಾಲಿಸೋದನ್ನ ಮುಂದುವರಿಸಿದನು. (ಕೊಲೊಸ್ಸೆ 3:13, 14 ಓದಿ.) ನಾವು ಬೇರೆಯವರ ಜೊತೆ ರಾಜಿಮಾಡಿಕೊಳ್ಳೋಕೆ ಪ್ರಯತ್ನಿಸುವಾಗಲೂ ಅವರು ಸರಿಯಾಗಿ ಪ್ರತಿಕ್ರಿಯಿಸದಿದ್ರೆ ನಮಗೆ ಕಷ್ಟ ಆಗುತ್ತೆ. ಆದ್ರೆ ನಮ್ಮಲ್ಲಿ ಪ್ರೀತಿ ಇದ್ರೆ ನಾವು ಅವರ ಬಗ್ಗೆ ಏನೂ ಮನಸ್ತಾಪ ಇಟ್ಟುಕೊಳ್ಳಲ್ಲ, ಅವರನ್ನ ಕ್ಷಮಿಸ್ತೇವೆ ಮತ್ತು ಅವರ ಜೊತೆ ಪುನಃ ಒಳ್ಳೇ ಸಂಬಂಧ ಬೆಳೆಸಿಕೊಳ್ಳೋಕೆ ಸಹಾಯ ಮಾಡು ಅಂತ ಪ್ರಾರ್ಥನೆಯಲ್ಲಿ ಯೆಹೋವನ ಹತ್ರ ಕೇಳಿಕೊಳ್ಳುತ್ತಾ ಇರ್ತೇವೆ.—ಮತ್ತಾ. 18:21, 22; ಗಲಾ. 6:9.

ಯಾರಿಗಾದ್ರೂ ನಮ್ಮ ಬಗ್ಗೆ ಅಸಮಾಧಾನ ಇದ್ರೆ ಅವರ ಜೊತೆ ರಾಜಿಮಾಡಿಕೊಳ್ಳೋಕೆ ನಾವು ತುಂಬ ಸಲ ಪ್ರಯತ್ನಿಸಬೇಕು (ಪ್ಯಾರ 7-8 ನೋಡಿ) *

7. (ಎ) ನಾವೇನು ಮಾಡಬೇಕೆಂದು ಯೇಸು ಪ್ರೋತ್ಸಾಹಿಸಿದ್ದಾನೆ? (ಬಿ) ಒಬ್ಬ ಸಹೋದರಿಗೆ ಯಾವ ಸನ್ನಿವೇಶ ಎದುರಾಯಿತು?

7 ಬೇರೆಯವ್ರು ನಮ್ಮ ಜೊತೆ ಹೇಗೆ ನಡಕೊಳ್ಳಬೇಕು ಅಂತ ಬಯಸುತ್ತೇವೋ ಅದೇ ರೀತಿ ನಾವೂ ಅವ್ರ ಜೊತೆ ನಡಕೊಳ್ಳಬೇಕು ಅಂತ ಯೇಸು ಪ್ರೋತ್ಸಾಹಿಸಿದ್ದಾನೆ. ನಮ್ಮನ್ನ ಯಾರು ಪ್ರೀತಿ ಮಾಡ್ತಾರೋ ಅವರನ್ನಷ್ಟೇ ಅಲ್ಲ, ಬೇರೆಯವ್ರನ್ನೂ ಪ್ರೀತಿಸಬೇಕು ಅಂತನೂ ಆತನು ಹೇಳಿದ್ದಾನೆ. (ಲೂಕ 6:31-33) ಆದ್ರೆ ಸಭೆಯಲ್ಲಿರೋ ಒಬ್ರು ನಿಮ್ಗೆ ಒಂದು ನಮಸ್ತೆನೂ ಹೇಳದಿದ್ರೆ ಆಗೇನು ಮಾಡೋದು? ಇಂಥದ್ದೇ ಅನುಭವ ಲಾರಾ ಎಂಬ ಸಹೋದರಿಗೆ ಆಯ್ತು. ಆಕೆ ಹೀಗೆ ಹೇಳ್ತಾಳೆ: “ಒಬ್ಬ ಸಹೋದರಿ ನನ್ನನ್ನ ನೋಡಿದ್ರೂ ನೋಡದೆ ಇರೋ ತರ ಹೋಗ್ತಿದ್ರು. ಅವರು ಯಾಕೆ ಹೀಗೆ ಮಾಡ್ತಿದ್ದಾರೆ ಅಂತ ನಂಗೆ ಅರ್ಥನೇ ಆಗ್ತಿರಲಿಲ್ಲ. ನಂಗೆ ಅದರ ಬಗ್ಗೆ ಯೋಚ್ಸಿ ತುಂಬ ಚಿಂತೆ ಆಯ್ತು. ಮೀಟಿಂಗ್‌ ಹೋಗೋಕೆ ಮನಸ್ಸಾಗುತ್ತಿರಲಿಲ್ಲ.” ಮೊದಮೊದ್ಲು ಲಾರಾ ‘ನಾನೇನೂ ತಪ್ಪು ಮಾಡಿಲ್ಲ, ಸಭೆಯಲ್ಲಿ ಬೇರೆಯವ್ರ ಹತ್ರನೂ ಆ ಸಹೋದರಿ ಇದೇ ತರ ವಿಚಿತ್ರವಾಗಿ ನಡಕೊಳ್ತಾರೆ’ ಅಂತ ಯೋಚಿಸಿದಳು.

8. (ಎ) ರಾಜಿಮಾಡಿಕೊಳ್ಳೋಕೆ ಲಾರಾ ಏನು ಮಾಡಿದಳು? (ಬಿ) ಅವಳ ಉದಾಹರಣೆಯಿಂದ ನಾವೇನು ಕಲಿಯಬಹುದು?

8 ಲಾರಾ ಆ ಸಹೋದರಿ ಜೊತೆ ರಾಜಿಮಾಡಿಕೊಳ್ಳೋಕೆ ಕೆಲವು ವಿಷಯಗಳನ್ನು ಮಾಡಿದಳು. ಯೆಹೋವನಿಗೆ ಪ್ರಾರ್ಥಿಸಿದಳು ಮತ್ತು ಆ ಸಹೋದರಿ ಜೊತೆ ಮಾತಾಡ್ಬೇಕು ಅಂತ ನಿರ್ಧರಿಸಿದಳು. ಅವರಿಬ್ಬರು ಸಮಸ್ಯೆ ಬಗ್ಗೆ ಮಾತಾಡಿದ್ರು, ಒಬ್ಬರನ್ನೊಬ್ರು ಅಪ್ಪಿಕೊಂಡರು, ಇಬ್ಬರೂ ಸರಿಹೋದ್ರು. ಎಲ್ಲಾ ಚೆನ್ನಾಗೇ ಇತ್ತು. “ಆದ್ರೆ ನಂತ್ರ ಆ ಸಹೋದರಿ ಮತ್ತೆ ನನ್ನತ್ರ ಅದೇ ತರ ನಡಕೊಳ್ಳೋಕೆ ಶುರುಮಾಡಿದ್ರು, ನಂಗೆ ತುಂಬನೇ ಬೇಜಾರಾಯ್ತು” ಅಂತ ಲಾರಾ ಹೇಳ್ತಾಳೆ. ಆ ಸಹೋದರಿನೇ ತನ್ನ ಸ್ವಭಾವ ಬದಲಾಯಿಸಿಕೊಳ್ಳಬೇಕು, ಆಗ್ಲೇ ತನಗೂ ಖುಷಿಯಾಗೋದು ಅಂತ ಲಾರಾ ಯೋಚಿಸಿದಳು. ಆದ್ರೆ ನಂತ್ರ ಆ ಸಹೋದರಿ ಹೇಗೇ ನಡಕೊಳ್ಳಲಿ, ಹೇಗೇ ಇರಲಿ ತಾನಂತೂ ಆಕೆಯನ್ನ ಪ್ರೀತಿಸ್ತಾ ಇರಬೇಕು ಮತ್ತು ‘ಉದಾರವಾಗಿ ಕ್ಷಮಿಸಬೇಕು’ ಅಂತ ಅರ್ಥಮಾಡಿಕೊಂಡಳು. (ಎಫೆ. 4:32–5:2) ಪ್ರೀತಿ “ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ. ಅದು ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ತಾಳಿಕೊಳ್ಳುತ್ತದೆ” ಅನ್ನೋದನ್ನ ಲಾರಾ ನೆನಪಿಸಿಕೊಂಡಳು. (1 ಕೊರಿಂ. 13:5, 7) ಲಾರಾ ಆ ಸಮಸ್ಯೆ ಬಗ್ಗೆ ಮತ್ತೆ ಚಿಂತೆ ಮಾಡೋಕೆ ಹೋಗಲಿಲ್ಲ. ಸ್ವಲ್ಪ ಸಮಯದ ನಂತ್ರ ಆ ಸಹೋದರಿ ಪುನಃ ಲಾರಾ ಹತ್ರ ಸ್ನೇಹದಿಂದ ನಡಕೊಂಡಳು. ಸಹೋದರ ಸಹೋದರಿಯರ ಜೊತೆ ನೀವು ರಾಜಿಮಾಡಿಕೊಳ್ಳೋಕೆ ಪ್ರಯತ್ನಿಸಿದರೆ, ಅವರನ್ನು ಪ್ರೀತಿಸೋದನ್ನ ಮುಂದುವರಿಸಿದರೆ ಖಂಡಿತವಾಗಿಯೂ “ಪ್ರೀತಿ ಮತ್ತು ಶಾಂತಿಯ ದೇವರು ನಿಮ್ಮೊಂದಿಗಿರುವನು.”—2 ಕೊರಿಂ. 13:11.

ಭೇದಭಾವ ಮಾಡಬೇಡಿ

9. ಅಪೊಸ್ತಲರ ಕಾರ್ಯಗಳು 10:34, 35 ರ ಪ್ರಕಾರ ನಾವ್ಯಾಕೆ ಭೇದಭಾವ ಮಾಡಬಾರದು?

9 ಯೆಹೋವನು ಪಕ್ಷಪಾತಿಯಲ್ಲ. (ಅಪೊಸ್ತಲರ ಕಾರ್ಯಗಳು 10:34, 35 ಓದಿ.) ನಾವು ಭೇದಭಾವ ಮಾಡದಿದ್ರೆ ಆತನ ಮಕ್ಕಳೆಂದು ತೋರಿಸಿಕೊಡ್ತೇವೆ, ನಮ್ಮಂತೆಯೇ ನಮ್ಮ ನೆರೆಯವರನ್ನು ಪ್ರೀತಿಸಬೇಕು ಎಂಬ ಆಜ್ಞೆಯನ್ನು ಪಾಲಿಸುತ್ತೇವೆ ಮತ್ತು ನಮ್ಮ ಸಹೋದರ ಸಹೋದರಿಯರ ಜೊತೆ ಶಾಂತಿಯಿಂದ ಇರ್ತೇವೆ.—ರೋಮ. 12:9, 10; ಯಾಕೋ. 2:8, 9.

10-11. ಒಬ್ಬ ಸಹೋದರಿ ತಪ್ಪಾದ ಯೋಚನೆಯಿಂದ ಹೇಗೆ ಹೊರಬಂದಳು?

10 ಕೆಲವರಿಗೆ ನಿಷ್ಪಕ್ಷಪಾತ ಗುಣ ತೋರಿಸೋಕೆ ಕಷ್ಟ ಆಗಬಹುದು. ಉದಾಹರಣೆಗೆ, ರೂತ್‌ ಎಂಬ ಸಹೋದರಿಗೆ ಏನಾಯಿತೆಂದು ನೋಡಿ. ಅವಳು ಚಿಕ್ಕವಳಿದ್ದಾಗ ಬೇರೆ ದೇಶದವರೊಬ್ರು ಅವಳಿಗೆ ನೋವಾಗೋ ತರ ನಡಕೊಂಡರು. ಇದು ಅವಳ ಮೇಲೆ ಯಾವ ಪ್ರಭಾವ ಬೀರಿತು? ಅವಳು ಹೇಳೋದು: “ಆ ದೇಶಕ್ಕೆ ಸಂಬಂಧಪಟ್ಟ ಎಲ್ಲವನ್ನೂ ನಾನು ದ್ವೇಷಿಸಿದೆ. ಅಲ್ಲಿರೋ ಜನ್ರುನೂ ಅದೇ ತರ ಇರ್ತಾರೆ, ಸಹೋದರ ಸಹೋದರಿಯರೂ ಹಾಗೇ ಇರ್ತಾರೆ ಅಂತ ಅಂದುಕೊಂಡೆ.” ಈ ತಪ್ಪಾದ ಯೋಚನೆಯಿಂದ ರೂತ್‌ ಹೇಗೆ ಹೊರಬಂದಳು?

11 ಆ ರೀತಿ ತಪ್ಪಾಗಿ ಯೋಚಿಸೋದನ್ನ ನಿಲ್ಲಿಸ್ಬೇಕು ಅಂತ ರೂತ್‌ ಅರ್ಥಮಾಡಿಕೊಂಡಳು. ಆ ದೇಶದ ಬಗ್ಗೆ ವರ್ಷಪುಸ್ತಕದಲ್ಲಿ ಬಂದ ಅನುಭವಗಳನ್ನು ಮತ್ತು ವರದಿಗಳನ್ನು ಓದಿದಳು. ಅವಳು ಹೇಳೋದು: “ಆ ದೇಶದ ಜನ್ರ ಬಗ್ಗೆ ಒಳ್ಳೇ ರೀತಿಯಲ್ಲಿ ಯೋಚಿಸೋಕೆ ನಾನು ಪ್ರಯತ್ನಿಸಿದೆ. ಅಲ್ಲಿನ ಸಹೋದರ ಸಹೋದರಿಯರಿಗೆ ಯೆಹೋವನ ಸೇವೆ ಮೇಲಿರೋ ಹುರುಪನ್ನು ನಾನು ಗಮನಿಸಿದೆ. ಅವರು ಸಹ ಲೋಕವ್ಯಾಪಕ ಸಹೋದರ ಬಳಗದ ಭಾಗವಾಗಿದ್ದಾರೆ ಅನ್ನೋದು ನಂಗೆ ಸ್ಪಷ್ಟವಾಯಿತು.” ಅವರ ಮೇಲೆ ತನಗೆ ಪ್ರೀತಿ ಇದೆ ಅನ್ನೋದನ್ನ ತೋರಿಸಿಕೊಡಬೇಕು ಅಂತ ರೂತ್‌ ಅರ್ಥಮಾಡಿಕೊಂಡಳು. ಅವಳು ಹೇಳೋದು: “ನಾನು ಆ ದೇಶದ ಸಹೋದರ ಸಹೋದರಿಯರನ್ನು ಭೇಟಿಮಾಡಿದಾಗೆಲ್ಲಾ ಅವರ ಜೊತೆ ಸ್ನೇಹದಿಂದ ಇರೋಕೆ ನನ್ನಿಂದಾದ ಎಲ್ಲಾ ಪ್ರಯತ್ನ ಮಾಡ್ದೆ. ಅವರ ಜೊತೆ ಮಾತಾಡ್ದೆ, ಅವರ ಬಗ್ಗೆ ಚೆನ್ನಾಗಿ ತಿಳುಕೊಂಡೆ.” ಇದ್ರಿಂದ ಏನಾಯ್ತು? ಸಮಯ ಕಳೆದಂತೆ ರೂತ್‌ ಆ ತಪ್ಪಾದ ಯೋಚನೆಯಿಂದ ಹೊರಬಂದಳು.

ನಮಗೆ ‘ಸಹೋದರರ ಇಡೀ ಬಳಗದ ಮೇಲೆ ಪ್ರೀತಿ’ ಇದ್ರೆ ನಾವು ಭೇದಭಾವ ಮಾಡಲ್ಲ (ಪ್ಯಾರ 12-13 ನೋಡಿ) *

12. ಸಾರಾ ಎಂಬ ಸಹೋದರಿಗೆ ಯಾವ ಸಮಸ್ಯೆ ಇತ್ತು?

12 ಕೆಲವರಿಗೆ ತಾವು ಭೇದಭಾವ ಮಾಡ್ತಿದ್ದೇವೆ ಅನ್ನೋದು ಗೊತ್ತೇ ಆಗಲ್ಲ. ಉದಾಹರಣೆಗೆ, ಸಾರಾ ಎಂಬ ಸಹೋದರಿ ತಾನು ಯಾರಿಗೂ ಭೇದಭಾವ ಮಾಡಲ್ಲ ಅಂತ ಯೋಚಿಸುತ್ತಿದ್ದಳು. ಯಾಕಂದ್ರೆ ಜನರ ದೇಶ-ಭಾಷೆ-ಬಣ್ಣ ನೋಡಿನೋ ಅವರಿಗಿರೋ ಹಣ ನೋಡಿನೋ ಅಥ್ವಾ ಸಭೆಯಲ್ಲಿ ಅವರಿಗಿರೋ ಜವಾಬ್ದಾರಿ, ಸುಯೋಗಗಳನ್ನು ನೋಡಿನೋ ಅವರನ್ನು ಅಳೆಯುತ್ತಿರಲಿಲ್ಲ. ಆದ್ರೆ ಅವಳು “ನನ್ನಲ್ಲೂ ಭೇದಭಾವ ಮಾಡೋ ಗುಣ ಇದೆ ಅಂತ ನಂಗೆ ಗೊತ್ತಾಯ್ತು” ಅಂತ ಹೇಳ್ತಾಳೆ. ಯಾವ ರೀತಿ ಭೇದಭಾವ ಮಾಡ್ತಿದ್ದಳು? ಸಾರಾ ಹೆಚ್ಚು ವಿದ್ಯಾಭ್ಯಾಸ ಇದ್ದಂಥ ಕುಟುಂಬದಿಂದ ಬಂದವಳು ಮತ್ತು ಅಂಥದ್ದೇ ಹಿನ್ನೆಲೆಯ ಜನ್ರ ಜೊತೆ ಬೆರೆಯಲಿಕ್ಕೆ ಇಷ್ಟಪಡ್ತಿದ್ದಳು. ತನ್ನ ಸ್ನೇಹಿತನಾಗಿದ್ದ ಒಬ್ಬ ಸಹೋದರನಿಗೆ ಒಂದ್ಸಲ ಹೀಗೆ ಹೇಳಿದಳು: “ಸಭೆಯಲ್ಲೂ ಯಾರು ಹೆಚ್ಚು ವಿದ್ಯಾಭ್ಯಾಸ ಮಾಡಿದ್ದಾರೋ ಅವ್ರ ಜೊತೆ ಇರೋಕೆ ನಾನು ಇಷ್ಟಪಡ್ತೀನಿ, ಬೇರೆಯವ್ರ ಜೊತೆ ಇರೋಕೆ ಇಷ್ಟಪಡಲ್ಲ.” ಸಾರಾ ತನ್ನ ಸ್ವಭಾವವನ್ನ ಬದಲಾಯಿಸಿಕೊಳ್ಳಬೇಕಿತ್ತು ಎಂದು ಇದ್ರಿಂದ ಸ್ಪಷ್ಟವಾಗುತ್ತೆ.

13. ಸಾರಾ ತನ್ನ ಸ್ವಭಾವವನ್ನ ಬದಲಾಯಿಸಿಕೊಂಡ ವಿಧದಿಂದ ನಮಗೇನು ಪಾಠ ಇದೆ?

13 ಸಾರಾ ತನ್ನ ಸ್ವಭಾವವನ್ನ ಬದಲಾಯಿಸಿಕೊಳ್ಳಲು ಒಬ್ಬ ಸಂಚರಣ ಮೇಲ್ವಿಚಾರಕ ಸಹಾಯ ಮಾಡಿದರು. ಸಾರಾ ಹೀಗೆ ಹೇಳ್ತಾಳೆ: “ಆ ಸಹೋದರ ನಾನು ಮಾಡ್ತಿದ್ದ ಸೇವೆ, ಕೂಟದಲ್ಲಿ ಕೊಡ್ತಿದ್ದ ಉತ್ತರಗಳು ಮತ್ತು ಬೈಬಲ್‌ ವಚನಗಳ ಬಗ್ಗೆ ನನಗಿದ್ದ ಜ್ಞಾನ ನೋಡಿ ನನ್ನನ್ನು ಶ್ಲಾಘಿಸಿದ್ರು. ನಂತ್ರ ನಮ್ಮ ಜ್ಞಾನ ಹೆಚ್ಚುತ್ತಾ ಹೋದಂತೆ ಕ್ರೈಸ್ತ ಗುಣಗಳಾದ ದೀನತೆ, ಕರುಣೆಯನ್ನ ಬೆಳೆಸಿಕೊಳ್ತಾ ಹೋಗ್ಬೇಕು ಮತ್ತು ನಮ್ಮ ಕೈಲೂ ಮಾಡಕಾಗ್ದೇ ಇರುವ ಕೆಲವು ವಿಷಯಗಳಿವೆ ಅನ್ನೋದನ್ನ ಒಪ್ಕೋಬೇಕು ಅಂತ ಅವರು ವಿವರಿಸಿದ್ರು.” ಸಂಚರಣ ಮೇಲ್ವಿಚಾರಕರು ಹೇಳಿದ ಮಾತುಗಳನ್ನ ಸಾರಾ ಅನ್ವಯಿಸಿದಳು. “ದಯೆ ಮತ್ತು ಪ್ರೀತಿಯಿಂದ ನಡಕೊಳ್ಳೋದೇ ತುಂಬ ಪ್ರಾಮುಖ್ಯ ಅಂತ ನಾನು ಅರ್ಥಮಾಡಿಕೊಂಡೆ” ಎಂದವಳು ಹೇಳ್ತಾಳೆ. ಅವಳು ಸಹೋದರ ಸಹೋದರಿಯರ ಬಗ್ಗೆ ಇದ್ದ ಅಭಿಪ್ರಾಯವನ್ನ ಬದಲಾಯಿಸಿಕೊಂಡಳು. “ಅವರಲ್ಲಿರೋ ಯಾವ ಗುಣಗಳನ್ನು ನೋಡಿ ಯೆಹೋವನು ಅವ್ರನ್ನು ಅಮೂಲ್ಯವಾಗಿ ನೋಡ್ತಾನೆ ಅಂತ ತಿಳುಕೊಳ್ಳೋಕೆ ನಾನು ಪ್ರಯತ್ನಿಸಿದೆ” ಎಂದು ಅವಳು ವಿವರಿಸ್ತಾಳೆ. ಇದ್ರಿಂದ ನಮಗೇನು ಪಾಠ? ನಾವು ಚೆನ್ನಾಗಿ ಓದಿದ ಮಾತ್ರಕ್ಕೆ ಬೇರೆಯವರಿಗಿಂತ ಉನ್ನತ ವ್ಯಕ್ತಿಗಳಾಗಿ ಬಿಡೋದಿಲ್ಲ. ನಮಗೆ ‘ಸಹೋದರರ ಇಡೀ ಬಳಗದ ಮೇಲೆ ಪ್ರೀತಿ’ ಇದ್ರೆ ನಾವು ಯಾರಿಗೂ ಭೇದಭಾವ ಮಾಡಲ್ಲ.—1 ಪೇತ್ರ 2:17.

ಅತಿಥಿಸತ್ಕಾರ ಮಾಡಿ

14. ಇಬ್ರಿಯ 13:16 ರ ಪ್ರಕಾರ ನಾವು ಅತಿಥಿಸತ್ಕಾರ ಮಾಡಿದಾಗ ಯೆಹೋವನಿಗೆ ಹೇಗನಿಸುತ್ತದೆ?

14 ನಾವು ಅತಿಥಿಸತ್ಕಾರ ಮಾಡಿದಾಗ ಯೆಹೋವನಿಗೆ ತುಂಬ ಖುಷಿ ಆಗುತ್ತೆ. (ಇಬ್ರಿಯ 13:16 ಓದಿ.) ಆತನು ಅತಿಥಿಸತ್ಕಾರವನ್ನು ಆರಾಧನೆಯ ಭಾಗವಾಗಿ ನೋಡ್ತಾನೆ. ಅದ್ರಲ್ಲೂ ನಾವು ಅಗತ್ಯದಲ್ಲಿರುವವರಿಗೆ ಸಹಾಯ ಮಾಡಿದಾಗ ಆತನಿಗೆ ಸಂತೋಷವಾಗುತ್ತೆ. (ಯಾಕೋ. 1:27; 2:14-17) ಹಾಗಾಗಿ “ಅತಿಥಿಸತ್ಕಾರದ ಪಥವನ್ನು ಅನುಸರಿಸಿರಿ” ಅಂತ ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ. (ರೋಮ. 12:13) ಅತಿಥಿಸತ್ಕಾರ ಮಾಡಿದಾಗ ಬೇರೆಯವರ ಮೇಲೆ ನಮಗೆ ತುಂಬ ಕಾಳಜಿ ಇದೆ, ಪ್ರೀತಿ ಇದೆ ಮತ್ತು ಅವರ ಸ್ನೇಹಿತರಾಗಲು ಬಯಸ್ತೇವೆ ಅನ್ನೋದನ್ನ ತೋರಿಸಿಕೊಡ್ತೇವೆ. ನಾವು ಬೇರೆಯವರ ಜೊತೆ ಟೀ-ಕಾಫಿನೋ ಊಟನೋ ಹಂಚಿಕೊಂಡರೆ ಅಥ್ವಾ ಸಮಯ ಕಳೆದ್ರೆ ಯೆಹೋವನಿಗೆ ತುಂಬ ಖುಷಿ ಆಗುತ್ತೆ. (1 ಪೇತ್ರ 4:8-10) ಆದ್ರೆ ಅತಿಥಿಸತ್ಕಾರ ಮಾಡದಂತೆ ಕೆಲವೊಂದು ವಿಷಯಗಳು ನಮ್ಮನ್ನು ತಡೆಯಬಹುದು.

ಮುಂಚೆ ನಂಗೆ ಅತಿಥಿಸತ್ಕಾರ ಮಾಡೋಕೆ ಇಷ್ಟ ಆಗ್ತಿರಲಿಲ್ಲ. ಆದ್ರೆ ಅದ್ರ ಬಗ್ಗೆ ನನಗಿದ್ದ ಯೋಚನೆ ಬದಲಾಯಿಸಿಕೊಂಡೆ, ಅದ್ರಿಂದ ನಂಗೆ ತುಂಬ ಸಂತೋಷ ಸಿಕ್ಕಿದೆ (ಪ್ಯಾರ 16 ನೋಡಿ) *

15-16. (ಎ) ಕೆಲವರು ಅತಿಥಿಸತ್ಕಾರ ಮಾಡೋದಕ್ಕೆ ಯಾಕೆ ಹಿಂಜರಿಯುತ್ತಾರೆ? (ಬಿ) ಅತಿಥಿಸತ್ಕಾರ ಮಾಡೋದಕ್ಕೆ ಹೆಲೆನ್‌ಗೆ ಯಾವುದು ಸಹಾಯ ಮಾಡಿತು?

15 ನಾವು ಹುಟ್ಟಿಬಂದಿರುವ ಹಿನ್ನೆಲೆ ಮತ್ತು ನಮ್ಮ ಸನ್ನಿವೇಶಗಳು ಅತಿಥಿಸತ್ಕಾರ ಮಾಡದಂತೆ ತಡೆಯಬಹುದು. ಹೆಲೆನ್‌ ಎಂಬ ವಿಧವೆಯ ಉದಾಹರಣೆ ನೋಡಿ. ಅವಳು ಸಾಕ್ಷಿಯಾಗೋ ಮುಂಚೆ ಬೇರೆಯವ್ರ ಜೊತೆ ಹೆಚ್ಚು ಬೆರೆಯುತ್ತಿರಲಿಲ್ಲ. “ಅತಿಥಿಸತ್ಕಾರ ಬೇರೆಯವ್ರ ಕೈಲಿ ಮಾಡಕ್ಕಾಗುತ್ತೇನೋ, ನನ್ನ ಕೈಲಾಗಲ್ಲ” ಅಂತ ಅಂದುಕೊಂಡಿದ್ದಳು.

16 ಅವಳು ಸಾಕ್ಷಿಯಾದ ಮೇಲೆ ತನ್ನ ಯೋಚನಾರೀತಿಯಲ್ಲಿ ಬದಲಾವಣೆ ಮಾಡ್ಕೊಂಡಳು. ಅತಿಥಿಸತ್ಕಾರ ಮಾಡಬೇಕೆಂದು ನಿರ್ಣಯಿಸಿದಳು. ಅವಳು ಹೀಗೆ ಹೇಳ್ತಾಳೆ: “ನಮ್ಮ ಹೊಸ ರಾಜ್ಯಸಭಾಗೃಹವನ್ನು ಕಟ್ಟುತ್ತಿದ್ದಾಗ ಒಬ್ಬ ಹಿರಿಯ ನನ್ನತ್ರ ಬಂದು, ‘ಕಟ್ಟುವ ಕೆಲಸಕ್ಕಾಗಿ ಒಬ್ಬ ದಂಪತಿ ಬರ್ತಿದ್ದಾರೆ, ಎರಡು ವಾರ ನಿಮ್ಮ ಮನೇಲಿ ಅವ್ರನ್ನ ಉಳಿಸಿಕೊಳ್ಳೋಕೆ ಆಗುತ್ತಾ’ ಅಂತ ನನ್ನನ್ನ ಕೇಳಿದ್ರು. ಆಗ ನಂಗೆ ಚಾರೆಪ್ತದ ವಿಧವೆಯನ್ನ ಯೆಹೋವನು ಹೇಗೆ ಆಶೀರ್ವದಿಸಿದನು ಅನ್ನೋದು ನೆನಪಾಯ್ತು.” (1 ಅರ. 17:12-16) ಆ ದಂಪತಿ ತನ್ನ ಮನೇಲಿ ಉಳುಕೊಳ್ಳೋಕೆ ಹೆಲೆನ್‌ ಒಪ್ಪಿಕೊಂಡಳು. ಇದ್ರಿಂದ ಅವಳಿಗೆ ಆಶೀರ್ವಾದ ಸಿಕ್ತಾ? ಅವಳು ಹೇಳೋದು: “ಅವ್ರು ನನ್ನ ಜೊತೆ ಬರೀ ಎರಡು ವಾರ ಅಲ್ಲ ಎರಡು ತಿಂಗಳು ಇದ್ದದ್ದು ತುಂಬ ಖುಷಿಯಾಯ್ತು. ಆ ಸಮಯದಲ್ಲಿ ನಾವು ತುಂಬ ಆಪ್ತರಾದೆವು.” ಹೆಲೆನ್‌ಗೆ ಸಭೆಯಲ್ಲೂ ಆಪ್ತ ಸ್ನೇಹಿತರು ಸಿಕ್ಕಿದ್ರು. ಈಗ ಅವಳು ಪಯನೀಯರ್‌ ಸೇವೆ ಮಾಡ್ತಿದ್ದಾಳೆ. ತನ್ನ ಜೊತೆ ಸೇವೆ ಮಾಡುವವರನ್ನು ಮನೆಗೆ ಕರಕೊಂಡು ಹೋಗಿ ಅತಿಥಿಸತ್ಕಾರ ಮಾಡ್ತಾಳೆ. ಅವಳು ಹೇಳೋದು: “ಬೇರೆಯವ್ರಿಗೆ ಕೊಡೋದ್ರಿಂದ ನಂಗೆ ಸಂತೋಷ ಸಿಗುತ್ತೆ. ಅದ್ರಿಂದ ಯಾವತ್ತೂ ಏನೂ ಕಳಕೊಂಡಿಲ್ಲ, ಇನ್ನೂ ಹೆಚ್ಚು ಆಶೀರ್ವಾದಗಳನ್ನ ಪಡಕೊಂಡಿದ್ದೀನಿ.”—ಇಬ್ರಿ. 13:1, 2.

17. ಲೋಕೇಶ್‌ ಮತ್ತು ಅವನ ಪತ್ನಿಗೆ ಯಾವ ವಿಷ್ಯ ಅರ್ಥ ಆಯ್ತು?

17 ನಾವು ಈಗಾಗ್ಲೇ ಅತಿಥಿಸತ್ಕಾರ ಮಾಡ್ತಿರಬಹುದು. ಆದ್ರೆ ಈ ವಿಷ್ಯದಲ್ಲಿ ಬೇರೇನಾದ್ರೂ ಬದಲಾವಣೆ ಮಾಡಿಕೊಳ್ಳೋ ಅವಶ್ಯಕತೆ ಇದ್ಯಾ? ಅತಿಥಿಸತ್ಕಾರ ಮಾಡುತ್ತಿದ್ದ ಲೋಕೇಶ್‌ ಮತ್ತು ಅವನ ಪತ್ನಿಯ ಉದಾಹರಣೆ ನೋಡಿ. ಅವರು ಮನೆಗೆ ತಮ್ಮ ಹೆತ್ತವರನ್ನು, ಸಂಬಂಧಿಕರನ್ನು, ಆಪ್ತ ಸ್ನೇಹಿತರನ್ನು, ಸಂಚರಣ ಮೇಲ್ವಿಚಾರಕರು ಮತ್ತವರ ಪತ್ನಿಯರನ್ನು ಕರೆಯುತ್ತಿದ್ದರು. ಆದ್ರೆ “ನಾವು ಬರೀ ನಮ್ಗೆ ಆಪ್ತರಾಗಿದ್ದವರನ್ನ ಕರೆಯುತ್ತಿದ್ವಿ ಅನ್ನೋದು ನಮಗೆ ಅರ್ಥ ಆಯ್ತು” ಅಂತ ಲೋಕೇಶ್‌ ಹೇಳ್ತಾನೆ. ಅತಿಥಿಸತ್ಕಾರ ಮಾಡೋ ವಿಷ್ಯದಲ್ಲಿ ಲೋಕೇಶ್‌ ಮತ್ತು ಅವನ ಪತ್ನಿ ಇನ್ನೂ ಯಾವ ಬದಲಾವಣೆ ಮಾಡಿಕೊಂಡ್ರು?

18. ಅತಿಥಿಸತ್ಕಾರ ಮಾಡೋ ವಿಷ್ಯದಲ್ಲಿ ಲೋಕೇಶ್‌ ಮತ್ತವನ ಪತ್ನಿ ಇನ್ನೂ ಯಾವ ಬದಲಾವಣೆ ಮಾಡಿಕೊಂಡರು?

18 ಅತಿಥಿಸತ್ಕಾರದ ವಿಷ್ಯದಲ್ಲಿ ಬದಲಾವಣೆ ಮಾಡಿಕೊಳ್ಳೋಕೆ ಲೋಕೇಶ್‌ ಮತ್ತು ಅವನ ಪತ್ನಿಗೆ ಯೇಸು ಹೇಳಿದ ಈ ಮಾತುಗಳು ಸಹಾಯ ಮಾಡಿದವು: “ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸುವುದಾದರೆ ನಿಮಗೆ ಯಾವ ಪ್ರತಿಫಲವಿದೆ?” (ಮತ್ತಾ. 5:45-47) ಯೆಹೋವನ ತರ ತಾವು ಸಹ ಎಲ್ರಿಗೂ ಉದಾರ ಮನೋಭಾವ ತೋರಿಸಬೇಕು ಅಂತ ಅವ್ರು ಅರ್ಥಮಾಡಿಕೊಂಡರು. ಹಾಗಾಗಿ ತಾವು ಈ ಮುಂಚೆ ಯಾರನ್ನ ಮನೆಗೆ ಕರೆದಿರಲಿಲ್ಲವೋ ಆ ಎಲ್ಲಾ ಸಹೋದರ ಸಹೋದರಿಯರನ್ನು ಕರೆಯೋಕೆ ನಿರ್ಧರಿಸಿದರು. ಲೋಕೇಶ್‌ ಹೀಗೆ ಹೇಳ್ತಾನೆ: “ಅವರನ್ನ ಮನೆಗೆ ಕರೆದದ್ದರಿಂದ ನಮಗೆ ತುಂಬ ಖುಷಿ ಆಯ್ತು. ನಾವು ಒಬ್ಬರಿಗೊಬ್ರು ಮತ್ತು ಯೆಹೋವನಿಗೆ ಇನ್ನೂ ಆಪ್ತರಾಗಲಿಕ್ಕೆ ಸಹಾಯವಾಯ್ತು.”

19. (ಎ) ನಾವು ಹೇಗೆ ಯೇಸುವಿನ ಶಿಷ್ಯರೆಂದು ತೋರಿಸಿಕೊಡಬಹುದು (ಬಿ) ನಿಮ್ಮ ದೃಢತೀರ್ಮಾನವೇನು?

19 ಶಾಂತಿಯಿಂದ ಇರೋಕೆ, ಭೇದಭಾವ ಮಾಡದೆ ಇರೋಕೆ ಮತ್ತು ಅತಿಥಿಸತ್ಕಾರ ಮಾಡೋಕೆ ಪ್ರೀತಿ ಹೇಗೆ ಸಹಾಯ ಮಾಡುತ್ತೆ ಅಂತ ನೋಡಿದ್ವಿ. ನಮ್ಮಲ್ಲಿ ಯಾವುದಾದರೂ ತಪ್ಪಾದ ಯೋಚನೆಗಳಿದ್ದರೆ ಅದ್ರಿಂದ ಹೊರ ಬರಬೇಕು ಮತ್ತು ನಮ್ಮ ಸಹೋದರ ಸಹೋದರಿಯರನ್ನ ಹೃದಯದಾಳದಿಂದ ಪ್ರೀತಿಸಬೇಕು. ಇದನ್ನೆಲ್ಲಾ ಮಾಡಿದ್ರೆ ನಾವು ಖುಷಿಯಾಗಿರ್ತೇವೆ ಮತ್ತು ಯೇಸುವಿನ ಶಿಷ್ಯರು ಅನ್ನೋದನ್ನ ತೋರಿಸಿಕೊಡ್ತೇವೆ.—ಯೋಹಾ. 13:17, 35.

ಗೀತೆ 69 ನಿನ್ನ ಮಾರ್ಗಗಳನ್ನು ನನಗೆ ತಿಳಿಸು

^ ಪ್ಯಾರ. 5 ಸತ್ಯ ಕ್ರೈಸ್ತರಿಗಿರುವ ನಿಜವಾದ ಗುರುತು ಪ್ರೀತಿಯೇ ಆಗಿದೆ ಎಂದು ಯೇಸು ಹೇಳಿದ್ದಾನೆ. ನಾವು ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸೋದಾದ್ರೆ ಶಾಂತಿಯಿಂದ ಇರ್ತೇವೆ, ಭೇದಭಾವ ಮಾಡಲ್ಲ ಮತ್ತು ಅತಿಥಿಸತ್ಕಾರ ಮಾಡುತ್ತೇವೆ. ಆದ್ರೆ ಇದನ್ನು ಮಾಡೋಕೆ ಕೆಲವೊಮ್ಮೆ ಕಷ್ಟ ಆಗ್ಬಹುದು. ನಾವು ಒಬ್ಬರನ್ನೊಬ್ಬರು ಹೃದಯದಾಳದಿಂದ ಪ್ರೀತಿಸೋದು ಹೇಗೆಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.

^ ಪ್ಯಾರ. 5 ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 57 ಚಿತ್ರ ವಿವರಣೆ: ಒಬ್ಬ ಸಹೋದರಿ ರಾಜಿಮಾಡಿಕೊಳ್ಳೋಕೆ ಎಷ್ಟೇ ಪ್ರಯತ್ನಿಸಿದರೂ ಏನೂ ಪ್ರಯೋಜನ ಆಗ್ಲಿಲ್ಲ. ಆದ್ರೆ ಅವಳು ತನ್ನ ಪ್ರಯತ್ನವನ್ನ ಬಿಟ್ಟುಬಿಡಲಿಲ್ಲ. ಪ್ರೀತಿ ತೋರಿಸೋದನ್ನ ಮುಂದುವರಿಸಿದ್ದರಿಂದ ಕೊನೆಗೂ ಸ್ನೇಹ ಗಳಿಸಿಕೊಂಡಳು.

^ ಪ್ಯಾರ. 59 ಚಿತ್ರ ವಿವರಣೆ: ಒಬ್ಬ ವೃದ್ಧ ಸಹೋದರ ಸಭೆಯಲ್ಲಿ ಯಾರೂ ತನ್ನನ್ನ ಸೇರಿಸಿಕೊಳ್ಳಲ್ಲ ಅಂತ ಯೋಚಿಸ್ತಿದ್ದಾರೆ.

^ ಪ್ಯಾರ. 61 ಚಿತ್ರ ವಿವರಣೆ: ಅತಿಥಿಸತ್ಕಾರ ಮಾಡೋಕೆ ಹಿಂಜರಿಯುತ್ತಿದ್ದ ಒಬ್ಬ ಸಹೋದರಿ ತನ್ನ ಸ್ವಭಾವ ಬದಲಾಯಿಸಿಕೊಂಡಿದ್ದಾಳೆ ಮತ್ತು ಇದ್ರಿಂದ ಅವಳು ಆಶೀರ್ವಾದವನ್ನು ಪಡಕೊಂಡಿದ್ದಾಳೆ.