ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 14

ಉತ್ತರ ದಿಕ್ಕಿನಿಂದ ದಾಳಿ!

ಉತ್ತರ ದಿಕ್ಕಿನಿಂದ ದಾಳಿ!

“ನನ್ನ ದೇಶದ ಮೇಲೆ ಅಸಂಖ್ಯಾತ ಪ್ರಬಲ ಸೈನ್ಯವು ಬಂದಿದೆ.”—ಯೋವೇ. 1:6.

ಗೀತೆ 116 ಬೆಳಕು ಹೆಚ್ಚುತ್ತದೆ

ಕಿರುನೋಟ *

1. (ಎ) ಬೈಬಲ್‌ ಸತ್ಯಗಳನ್ನು ತಿಳುಕೊಳ್ಳಲು ಸಹೋದರ ರಸಲ್‌ ಮತ್ತು ಅವರ ಜೊತೆ ಇದ್ದವರು ಯಾವ ವಿಧಾನ ಉಪಯೋಗಿಸಿದ್ರು? (ಬಿ) ಇದು ಒಳ್ಳೇ ವಿಧಾನವಾಗಿತ್ತು ಅಂತ ಯಾಕೆ ಹೇಳಬಹುದು?

ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಸಹೋದರ ಸಿ. ಟಿ. ರಸಲ್‌ ಮತ್ತು ಅವರ ಸಂಗಡಿಗರಿದ್ದ ಬೈಬಲ್‌ ವಿದ್ಯಾರ್ಥಿಗಳ ಚಿಕ್ಕ ಗುಂಪು ಒಂದು ಕಡೆ ಒಟ್ಟುಸೇರೋಕೆ ಆರಂಭಿಸಿತು. ಯಾಕೆಂದ್ರೆ, ಯೆಹೋವ ದೇವರು, ಯೇಸು ಕ್ರಿಸ್ತ, ವಿಮೋಚನಾ ಮೌಲ್ಯ ಮತ್ತು ಸತ್ತವರ ಸ್ಥಿತಿ ಮುಂತಾದ ವಿಷಯಗಳ ಬಗ್ಗೆ ಬೈಬಲ್‌ ನಿಜವಾಗಿಯೂ ಏನು ಕಲಿಸುತ್ತೆ ಅಂತ ತಿಳುಕೊಳ್ಳೋದೇ ಅವ್ರ ಉದ್ದೇಶವಾಗಿತ್ತು. ಇದನ್ನ ತಿಳುಕೊಳ್ಳೋಕೆ ಅವ್ರು ಬಳಸಿದ ವಿಧಾನ ತುಂಬ ಸರಳ ಆಗಿತ್ತು. ಅದೇನಂದ್ರೆ, ಆ ಗುಂಪಿನಲ್ಲಿ ಯಾರಾದ್ರು ಒಬ್ರು ಪ್ರಶ್ನೆಯನ್ನು ಕೇಳ್ತಿದ್ರು. ನಂತ್ರ ಗುಂಪಿನಲ್ಲಿರೋ ಎಲ್ರೂ ಆ ವಿಷ್ಯಕ್ಕೆ ಸಂಬಂಧಿಸಿದ ಎಲ್ಲಾ ವಚನಗಳನ್ನು ಹುಡುಕಿ ಪರೀಕ್ಷಿಸುತ್ತಿದ್ರು. ಕೊನೆಗೆ ಅವ್ರು ತಿಳುಕೊಂಡಿದ್ದನ್ನ ಒಂದು ಕಡೆ ಬರೆದಿಡ್ತಿದ್ರು. ಹೀಗೆ, ಯೆಹೋವನ ಆಶೀರ್ವಾದದಿಂದ ಅವ್ರು ಬೈಬಲಿನಲ್ಲಿರೋ ಅನೇಕ ಪ್ರಾಮುಖ್ಯ ಸತ್ಯಗಳನ್ನ ತಿಳುಕೊಂಡ್ರು. ಈ ಸತ್ಯಗಳು ಇವತ್ತಿಗೂ ತುಂಬ ಪ್ರಾಮುಖ್ಯವಾಗಿವೆ.

2. ನಾವು ಕೆಲವೊಮ್ಮೆ ಬೈಬಲ್‌ ಪ್ರವಾದನೆಯನ್ನ ಯಾಕೆ ತಪ್ಪಾಗಿ ಅರ್ಥಮಾಡ್ಕೊಳ್ಳೋ ಸಾಧ್ಯತೆ ಇದೆ?

2 ಬೈಬಲ್‌ ಪ್ರವಾದನೆಗಳನ್ನ ಅರ್ಥಮಾಡ್ಕೊಳ್ಳೋದು ಬೈಬಲಿನ ಮುಖ್ಯ ಬೋಧನೆಗಳನ್ನು ಅರ್ಥಮಾಡ್ಕೊಂಡಷ್ಟು ಸುಲಭ ಅಲ್ಲ ಅಂತ ಈ ಬೈಬಲ್‌ ವಿದ್ಯಾರ್ಥಿಗಳಿಗೆ ಸ್ವಲ್ಪದರಲ್ಲೇ ಗೊತ್ತಾಯಿತು. ಪ್ರವಾದನೆಗಳನ್ನ ಅರ್ಥಮಾಡ್ಕೊಳ್ಳೋಕೆ ಯಾಕೆ ಕಷ್ಟ ಆಗುತ್ತೆ? ಮೊದಲ್ನೇ ಕಾರಣ ಏನಂದ್ರೆ, ಒಂದು ಬೈಬಲ್‌ ಪ್ರವಾದನೆಯನ್ನು ಅದು ನೆರವೇರ್ತಿರುವಾಗ ಅಥವಾ ನೆರವೇರಿದ ನಂತ್ರನೇ ಚೆನ್ನಾಗಿ ಅರ್ಥಮಾಡ್ಕೊಳ್ಳಲು ಆಗುತ್ತೆ. ಅಷ್ಟೇ ಅಲ್ಲ, ಅದನ್ನು ಅರ್ಥಮಾಡ್ಕೋಬೇಕಂದ್ರೆ ಆ ಪ್ರವಾದನೆಯ ಹಿಂದಿನ ಮತ್ತು ಮುಂದಿನ ಕೆಲವು ವಚನಗಳಲ್ಲಿ ಏನೆಲ್ಲಾ ಕೊಡಲಾಗಿದೆ ಅಂತನೂ ತಿಳ್ಕೊಬೇಕು. ನಾವು ಬೇರೆಲ್ಲಾ ಅಂಶಗಳನ್ನ ಬಿಟ್ಟು ಪ್ರವಾದನೆಯ ಬರೀ ಒಂದೇ ಅಂಶವನ್ನ ತಿಳ್ಕೊಳ್ಳೋಕೆ ಪ್ರಯತ್ನಿಸೋದಾದ್ರೆ ಅದನ್ನ ತಪ್ಪಾಗಿ ಅರ್ಥಮಾಡ್ಕೊಳ್ತೇವೆ. ಯೋವೇಲ ಪುಸ್ತಕದಲ್ಲಿರುವ ಪ್ರವಾದನೆಯ ವಿಷ್ಯದಲ್ಲೂ ಇದೇ ಆಗಿದೆ. ಹಾಗಾಗಿ ನಾವು ಆ ಪ್ರವಾದನೆಯನ್ನು ಪರೀಕ್ಷಿಸುತ್ತಾ ಈಗಾಗಲೇ ನಮಗೆ ಕೊಡಲಾಗಿರುವ ಅರ್ಥವಿವರಣೆಯಲ್ಲಿ ಯಾಕೆ ಬದಲಾವಣೆ ಮಾಡ್ಬೇಕು ಅಂತ ಚರ್ಚಿಸೋಣ.

3-4. ಯೋವೇಲ 2:7-9 ರಲ್ಲಿರುವ ಪ್ರವಾದನೆಯನ್ನು ಇಲ್ಲಿವರೆಗೆ ನಾವು ಹೇಗೆ ಅರ್ಥಮಾಡಿಕೊಂಡಿದ್ದೆವು?

3 ಯೋವೇಲ 2:7-9 ಓದಿ. ಮಿಡತೆಗಳ ದಾಳಿಯಿಂದಾಗಿ ಇಡೀ ಇಸ್ರಾಯೇಲ್‌ ದೇಶ ನಾಶ ಆಗುತ್ತದೆ ಎಂದು ಯೋವೇಲ ಮುಂತಿಳಿಸಿದನು. ಈ ಮಿಡತೆಗಳು ಸಿಂಹದಂಥ ಹಲ್ಲು ಮತ್ತು ಕೋರೆಗಳಿಂದ ಆ ದೇಶದಲ್ಲಿರುವ ಎಲ್ಲಾ ಸಸ್ಯಗಳನ್ನು ತಿಂದುಹಾಕಿಬಿಡುತ್ತವೆ ಎಂದು ತಿಳಿಸಿದನು. (ಯೋವೇ. 1:4, 6) ಈ ಪ್ರವಾದನೆ ಯೆಹೋವನ ಸಾಕ್ಷಿಗಳ ಸಾರುವ ಕೆಲಸವನ್ನ ಸೂಚಿಸುತ್ತದೆ ಅಂತ ಇಲ್ಲಿವರೆಗೆ ಅರ್ಥಮಾಡಿಕೊಂಡಿದ್ದೆವು. ಮಿಡತೆಗಳ ದಾಳಿಯನ್ನ ಹೇಗೆ ಯಾರಿಂದಲೂ ತಡೆಯೋಕಾಗಲ್ವೋ ಅದೇ ರೀತಿ ಸಾಕ್ಷಿಗಳ ಕೆಲಸವನ್ನು ಸಹ ಯಾರಿಂದಲೂ ತಡೆಯೋಕಾಗಲ್ಲ ಅಂದುಕೊಂಡಿದ್ವಿ. ಅಷ್ಟೇ ಅಲ್ಲ, ಈ ಸಾರುವ ಕೆಲಸ “ದೇಶದ” ಮೇಲೆ ಅಂದ್ರೆ ಧಾರ್ಮಿಕ ಮುಖಂಡರ ಕಪಿಮುಷ್ಠಿಯಲ್ಲಿರುವ ಜನರ ಮೇಲೆ ಭಾರೀ ದೊಡ್ಡ ಪರಿಣಾಮ ಬೀರುತ್ತೆ ಅಂತ ತಿಳುಕೊಂಡಿದ್ವಿ. *

4 ನಾವು ಬರೀ ಯೋವೇಲ 2:7-9 ನೇ ವಚನಗಳನ್ನು ನೋಡೋದಾದ್ರೆ ಈಗಾಗ್ಲೇ ಅರ್ಥಮಾಡಿಕೊಂಡಿರೋದು ಸರಿಯಾಗಿದೆ ಅಂತ ಅನ್ಸುತ್ತೆ. ಆದರೆ ಅದಕ್ಕೆ ಹಿಂದಿನ ಮತ್ತು ಮುಂದಿನ ಕೆಲವು ವಚನಗಳನ್ನು ನೋಡೋದಾದ್ರೆ ಅದ್ರ ಅರ್ಥವಿವರಣೆ ಬೇರೆಯಾಗಿದೆ ಅಂತ ಗೊತ್ತಾಗುತ್ತೆ. ಆ ಪ್ರವಾದನೆಯ ಅರ್ಥವಿವರಣೆ ಬೇರೆಯಾಗಿದೆ ಅನ್ನೋದಕ್ಕೆ ಇರುವ ನಾಲ್ಕು ಕಾರಣಗಳನ್ನು ಈಗ ನೋಡೋಣ.

ನಾಲ್ಕು ಕಾರಣಗಳು

5-6. (ಎ) ಯೋವೇಲ 2:20 ನ್ನು (ಬಿ) ಯೋವೇಲ 2:25 ನ್ನು ಗಮನಿಸುವಾಗ ಯಾವ ಪ್ರಶ್ನೆ ನಮ್ಮ ಮನಸ್ಸಿಗೆ ಬರಬಹುದು?

5 ಯೆಹೋವನು ಮಿಡತೆಗಳ ದಂಡಿನ ಬಗ್ಗೆ ಏನು ಹೇಳಿದ್ದನೆಂದು ಗಮನಿಸಿ. ‘ನಾನು ಬಡಗಣ ದಂಡನ್ನು [ಉತ್ತರ ದಿಕ್ಕಿನಿಂದ ಬಂದ ಮಿಡತೆಗಳ ದಂಡನ್ನು] ನಿಮ್ಮ ಕಡೆಯಿಂದ ದೂರ ತೊಲಗಿಸುವೆನು’ ಅಂತ ಹೇಳಿದ್ನು. (ಯೋವೇ. 2:20) ಒಂದುವೇಳೆ ಮಿಡತೆಗಳು, ಯೇಸು ಕೊಟ್ಟ ‘ಸಾರಿ ಮತ್ತು ಶಿಷ್ಯರನ್ನಾಗಿ ಮಾಡಿ’ ಎಂಬ ಆಜ್ಞೆಯನ್ನು ಪಾಲಿಸುತ್ತಿರುವ ಯೆಹೋವನ ಸಾಕ್ಷಿಗಳನ್ನು ಸೂಚಿಸೋದಾದ್ರೆ ಯೆಹೋವನು ಅವ್ರನ್ನ ದೂರ ತೊಲಗಿಸ್ತೇನೆ ಅಂತ ಯಾಕೆ ಮಾತು ಕೊಡ್ತಾನೆ? (ಯೆಹೆ. 33:7-9; ಮತ್ತಾ. 28:19, 20) ಹಾಗಾಗಿ ಯೆಹೋವನು ದೂರ ತೊಲಗಿಸ್ತೇನೆ ಅಂತ ಹೇಳಿರೋದು ತನ್ನ ನಂಬಿಗಸ್ತ ಸೇವಕರನ್ನಲ್ಲ, ಬದಲಿಗೆ ತನ್ನ ಜನರಿಗೆ ವಿರೋಧವಾಗಿರುವ ವಿಷಯಗಳನ್ನ ಅಥವಾ ಜನರನ್ನ ಅಂತ ಅರ್ಥಮಾಡ್ಕೊಬಹುದು.

6 ಎರಡನೇ ಕಾರಣವನ್ನು ತಿಳಿದುಕೊಳ್ಳಲು ಯೋವೇಲ 2:25 ರಲ್ಲಿ ಏನಿದೆ ಅಂತ ನೋಡೋಣ. ಅಲ್ಲಿ ಯೆಹೋವನು ಹೀಗೆ ಹೇಳಿದ್ದಾನೆ: “ಗುಂಪುಮಿಡತೆ, ಸಣ್ಣಮಿಡತೆ, ದೊಡ್ಡಮಿಡತೆ, ಚೂರಿಮಿಡತೆ, ಅಂತು ನಾನು ನಿಮ್ಮ ಮೇಲೆ ಕಳುಹಿಸಿದ ನನ್ನ ದೊಡ್ಡ ದಂಡು ತಿಂದುಬಿಟ್ಟ ವರುಷಗಳನ್ನು ನಾನು ನಿಮಗೆ ಕಟ್ಟಿಕೊಡುವೆನು” ಅಥವಾ ನಿಮ್ಮ ನಷ್ಟಭರ್ತಿ ಮಾಡುವೆನು. ಇಲ್ಲಿ ಯೆಹೋವನು ಮಿಡತೆಗಳಿಂದಾದ ನಷ್ಟವನ್ನ ಭರ್ತಿಮಾಡುವೆನು ಅಂತ ಮಾತುಕೊಟ್ಟಿರೋದನ್ನ ಗಮನಿಸಿ. ಒಂದುವೇಳೆ ಮಿಡತೆಗಳು, ಎಲ್ಲಾ ಯೆಹೋವನ ಸಾಕ್ಷಿಗಳನ್ನ ಸೂಚಿಸೋದಾದ್ರೆ ಅವರು ಸಾರುವ ಸಂದೇಶದಿಂದ ಹಾನಿಯಾಗುತ್ತೆ ಅನ್ನೋ ಅರ್ಥಬಂದುಬಿಡುತ್ತೆ. ಆದ್ರೆ ಈ ಸಂದೇಶ ಜನರ ಜೀವವನ್ನು ರಕ್ಷಿಸ್ತದೆ ಮತ್ತು ದುಷ್ಟರಿಗೆ ಒಳ್ಳೇ ದಾರಿ ಹಿಡಿಯೋಕೆ ಪ್ರಚೋದಿಸುತ್ತೆ. (ಯೆಹೆ. 33:8, 19) ಹಾಗಾಗಿ, ಈ ಸಂದೇಶ ಹಾನಿಯನ್ನಲ್ಲ ಒಳ್ಳೇದನ್ನೇ ಮಾಡುತ್ತೆ.

7. ಯೋವೇಲ 2:28, 29 ರಲ್ಲಿರುವ “ತರುವಾಯ” ಎಂಬ ಪದದಿಂದ ಏನನ್ನು ಅರ್ಥಮಾಡಿಕೊಳ್ಳಬಹುದು?

7 ಯೋವೇಲ 2:28, 29 ಓದಿ. ಈಗ ಮೂರನೇ ಕಾರಣ ತಿಳುಕೊಳ್ಳೋಣ. ಆ ಪ್ರವಾದನೆಯಲ್ಲಿ ಯಾವುದರ ನಂತ್ರ ಯಾವ ಘಟನೆ ನಡೆಯುತ್ತೆ ಅಂತ ಹೇಳಿರೋದನ್ನ ಗಮನಿಸಿ. ಯೆಹೋವನು “ತರುವಾಯ ನಾನು . . . ನನ್ನ ಆತ್ಮವನ್ನು ಸುರಿಸುವೆನು” ಅಂದ್ರೆ ಮಿಡತೆಗಳು ತಮ್ಮ ಕೆಲಸವನ್ನ ಮುಗಿಸಿದ ನಂತ್ರ ತನ್ನ ಪವಿತ್ರಾತ್ಮವನ್ನ ಸುರಿಸ್ತೇನೆ ಅಂತ ಹೇಳಿದನು. ಈ ಮಿಡತೆಗಳು ಯೆಹೋವನ ಸಾಕ್ಷಿಗಳನ್ನ ಸೂಚಿಸೋದಾದ್ರೆ ಅವರು ಸಾರುವ ಕೆಲಸ ಮುಗಿಸಿದ ನಂತ್ರ ಯಾಕೆ ಯೆಹೋವನು ಅವರ ಮೇಲೆ ಪವಿತ್ರಾತ್ಮವನ್ನ ಸುರಿಸ್ತಾನೆ? ನಿಜ ಏನಂದ್ರೆ ಯೆಹೋವನು ಈಗಾಗ್ಲೇ ಸಾಕ್ಷಿಗಳಿಗೆ ಪವಿತ್ರಾತ್ಮದ ಸಹಾಯ ಕೊಟ್ಟಿದ್ದಾನೆ. ಅದಕ್ಕೇ ಅವ್ರಿಗೆ ವಿರೋಧ, ನಿಷೇಧದ ಮಧ್ಯೆನೂ ಸಾರೋ ಕೆಲಸ ಮಾಡೋಕಾಗ್ತಿದೆ.

ಸಹೋದರ ಜೆ. ಎಫ್‌. ರದರ್‌ಫರ್ಡ್‌ ಮತ್ತು ಇತರ ಅಭಿಷಿಕ್ತ ಸಹೋದರರು ಈ ದುಷ್ಟ ವ್ಯವಸ್ಥೆಯ ವಿರುದ್ಧ ಜಾರಿಯಾಗಲಿರುವ ದೇವರ ನ್ಯಾಯತೀರ್ಪನ್ನು ಧೈರ್ಯವಾಗಿ ಸಾರೋದ್ರಲ್ಲಿ ಮುಂದಾಳತ್ವ ವಹಿಸಿದ್ರು (ಪ್ಯಾರ 8 ನೋಡಿ)

8. ಪ್ರಕಟನೆ 9:1-11 ರಲ್ಲಿ ತಿಳಿಸಲಾಗಿರುವ ಮಿಡತೆಗಳು ಯಾರನ್ನ ಸೂಚಿಸುತ್ತವೆ? (ಮುಖಪುಟ ಚಿತ್ರ ನೋಡಿ.)

8 ಪ್ರಕಟನೆ 9:1-11 ಓದಿ. ಈಗ ನಾವು ನಾಲ್ಕನೇ ಕಾರಣವನ್ನು ತಿಳುಕೊಳ್ಳೋಣ. ಯೋವೇಲ ತಿಳಿಸಿದ ಮಿಡತೆಗಳ ಪ್ರವಾದನೆಯು ಸಾರುವ ಕೆಲಸವನ್ನು ಸೂಚಿಸುತ್ತೆ ಅಂತ ಅರ್ಥಮಾಡ್ಕೊಳ್ಳೋಕೆ ಕಾರಣ ಪ್ರಕಟನೆ ಪುಸ್ತಕದಲ್ಲಿದ್ದ ಅದೇ ರೀತಿಯ ಇನ್ನೊಂದು ಪ್ರವಾದನೆ ಆಗಿತ್ತು. ಆ ಪ್ರವಾದನೆಯಲ್ಲಿ ಮನುಷ್ಯರ ಮುಖಗಳಿರುವ ಮಿಡತೆಗಳ ದಂಡುಗಳ ಬಗ್ಗೆ ತಿಳಿಸಲಾಗಿದೆ ಮತ್ತು ಅವುಗಳ ತಲೆ ಮೇಲೆ ‘ಚಿನ್ನದಂಥ ಕಿರೀಟಗಳ ಹಾಗೆ’ ಏನೋ ಇತ್ತು ಅಂತ ವರ್ಣಿಸಲಾಗಿದೆ. (ಪ್ರಕ. 9:7) ‘ತಮ್ಮ ಹಣೆಗಳ ಮೇಲೆ ದೇವರ ಮುದ್ರೆ ಇಲ್ಲದವರನ್ನು’ [ದೇವರ ವೈರಿಗಳನ್ನು] ಅವು ಐದು ತಿಂಗಳುಗಳವರೆಗೆ ಅಂದರೆ ಒಂದು ಮಿಡತೆ ಬದುಕುವಷ್ಟು ಕಾಲ ಪೀಡಿಸುತ್ತವೆ. (ಪ್ರಕ. 9:4, 5) ಈ ಪ್ರವಾದನೆಯು ಯೆಹೋವನ ಅಭಿಷಿಕ್ತ ಸೇವಕರನ್ನು ಸೂಚಿಸ್ತದೆ. ಅವರು ಈ ದುಷ್ಟಲೋಕದ ವಿರುದ್ಧ ಯೆಹೋವನ ನ್ಯಾಯತೀರ್ಪನ್ನ ಧೈರ್ಯದಿಂದ ಸಾರುತ್ತಾರೆ. ಇದರಿಂದಾಗಿ ಲೋಕಕ್ಕೆ ಬೆಂಬಲ ನೀಡುವವ್ರಿಗೆ ಕಷ್ಟವಾಗುತ್ತದೆ.

9. ಯೋವೇಲ ನೋಡಿದ ಮಿಡತೆಗಳಿಗೂ ಯೋಹಾನನು ವರ್ಣಿಸಿದ ಮಿಡತೆಗಳಿಗೂ ಯಾವ ಮುಖ್ಯ ವ್ಯತ್ಯಾಸಗಳಿವೆ?

9 ಪ್ರಕಟನೆಯಲ್ಲಿ ತಿಳಿಸಲಾಗಿರುವ ಪ್ರವಾದನೆಗೂ ಯೋವೇಲ ಬರೆದ ಪ್ರವಾದನೆಗೂ ಕೆಲವು ಹೋಲಿಕೆಗಳಿವೆ ಅನ್ನೋದು ನಿಜ. ಆದ್ರೂ ಇವುಗಳ ಮಧ್ಯ ಕೆಲವು ಪ್ರಾಮುಖ್ಯ ವ್ಯತ್ಯಾಸಗಳಿವೆ. ಉದಾಹರಣೆಗೆ, ಯೋವೇಲನ ಪ್ರವಾದನೆಯಲ್ಲಿ ತಿಳಿಸಲಾಗಿರೋ ಮಿಡತೆಗಳು ಸಸ್ಯಗಳನ್ನ ಸಂಪೂರ್ಣವಾಗಿ ನಾಶಮಾಡ್ತವೆ. (ಯೋವೇ. 1:4, 6, 7) ಆದ್ರೆ ಯೋಹಾನನ ದರ್ಶನದಲ್ಲಿ ಕಾಣಿಸಿದ ಮಿಡತೆಗಳಿಗೆ ಯಾವುದೇ ‘ಸಸ್ಯವನ್ನು ಕೆಡಿಸಬಾರದು’ ಅಂತ ಹೇಳಲಾಯಿತು. (ಪ್ರಕ. 9:4) ಯೋವೇಲ ನೋಡಿದ ಮಿಡತೆಗಳು ಉತ್ತರ ದಿಕ್ಕಿನಿಂದ ಬಂದಿದ್ದವು. (ಯೋವೇ. 2:20) ಆದ್ರೆ ಯೋಹಾನ ನೋಡಿದ ಮಿಡತೆಗಳು ಅಗಾಧ ಸ್ಥಳದಿಂದ ಬಂದಿದ್ದವು. (ಪ್ರಕ. 9:2, 3) ಯೋವೇಲ ತಿಳಿಸಿದ ಮಿಡತೆಗಳನ್ನು ದೂರ ತೊಲಗಿಸಲಾಯಿತು ಅಥವಾ ಓಡಿಸಲಾಯಿತು. ಆದ್ರೆ ಪ್ರಕಟನೆಯಲ್ಲಿ ತಿಳಿಸಲಾದ ಮಿಡತೆಗಳನ್ನ ಯೆಹೋವನು ಓಡಿಸಲಿಲ್ಲ, ಬದಲಿಗೆ ಅವು ತಮ್ಮ ಕೆಲಸವನ್ನ ಪೂರ್ತಿ ಮಾಡುವಂತೆ ಬಿಟ್ಟನು. ಈ ಮಿಡತೆಗಳ ಕೆಲಸ ಯೆಹೋವನಿಗೆ ಇಷ್ಟವಾಗ್ಲಿಲ್ಲ ಅಂತ ಬೈಬಲಲ್ಲೆಲ್ಲೂ ತಿಳಿಸ್ಲಾಗಿಲ್ಲ.—“ ಮಿಡತೆಗಳ ಪ್ರವಾದನೆಗಳು—ಅದರಲ್ಲಿರುವ ವ್ಯತ್ಯಾಸಗಳು” ಎಂಬ ಚೌಕ ನೋಡಿ.

10. ಬೈಬಲಲ್ಲಿ ಕೆಲವೊಮ್ಮೆ ಒಂದು ವಿಷ್ಯವು ಬೇರೆ ಬೇರೆ ಸನ್ನಿವೇಶಗಳಲ್ಲಿ ಬೇರೆ ಬೇರೆ ವಿಷ್ಯವನ್ನ ಸೂಚಿಸುತ್ತೆ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.

10 ಈ ಎರಡು ಪ್ರವಾದನೆಗಳು ಒಂದಕ್ಕೊಂದು ಸಂಬಂಧಿಸಿಲ್ಲ ಅಂತ ಅವುಗಳ ಮಧ್ಯೆ ಇರೋ ಈ ಮುಖ್ಯ ವ್ಯತ್ಯಾಸದಿಂದ ಗೊತ್ತಾಗುತ್ತೆ. ಹಾಗಾದ್ರೆ ಯೋವೇಲನು ವರ್ಣಿಸಿದಂಥ ‘ಮಿಡತೆಗಳೂ’ ಪ್ರಕಟನೆ ಪುಸ್ತಕದಲ್ಲಿ ತಿಳಿಸಲಾದ ‘ಮಿಡತೆಗಳೂ’ ಒಂದೇ ಅಲ್ಲ ಅಂತ ಅರ್ಥನಾ? ಹೌದು. ಬೈಬಲಲ್ಲಿ ಕೆಲವೊಮ್ಮೆ ಒಂದು ವಿಷಯವು ಬೇರೆ ಬೇರೆ ಸನ್ನಿವೇಶಗಳಲ್ಲಿ ಬೇರೆ ಬೇರೆ ವಿಷಯಗಳನ್ನ ಸೂಚಿಸುತ್ತೆ. ಉದಾಹರಣೆಗೆ, ಪ್ರಕಟನೆ 5:5 ರಲ್ಲಿ ಯೇಸುವನ್ನು “ಯೆಹೂದ ಕುಲದ ಸಿಂಹ” ಅಂತ ಕರೆಯಲಾಗಿದೆ. ಆದ್ರೆ 1 ಪೇತ್ರ 5:8 ರಲ್ಲಿ ಪಿಶಾಚನನ್ನ “ಗರ್ಜಿಸುವ ಸಿಂಹ” ಅಂತ ವರ್ಣಿಸಲಾಗಿದೆ. ನಾವು ಈಗಾಗಲೇ ಚರ್ಚಿಸಿದ ನಾಲ್ಕು ಕಾರಣಗಳಿಂದ ಯೋವೇಲನ ಪ್ರವಾದನೆ ಬೇರೊಂದು ವಿಷಯವನ್ನು ಸೂಚಿಸುತ್ತದೆ ಎಂದು ಗೊತ್ತಾಗುತ್ತೆ. ಹಾಗಾದ್ರೆ ಆ ಪ್ರವಾದನೆ ಏನನ್ನ ಸೂಚಿಸುತ್ತೆ?

ಈ ಪ್ರವಾದನೆಯ ಅರ್ಥವೇನು?

11. ಮಿಡತೆಗಳು ಯಾರು ಅಂತ ತಿಳುಕೊಳ್ಳೋಕೆ ಯೋವೇಲ 1:6 ಮತ್ತು 2:1, 8, 11 ಹೇಗೆ ಸಹಾಯ ಮಾಡುತ್ತೆ?

11 ಯೋವೇಲನ ಪ್ರವಾದನೆಯಲ್ಲಿನ ಇತರ ವಚನಗಳನ್ನು ಪರೀಕ್ಷಿಸೋದಾದ್ರೆ ಈ ಪ್ರವಾದಿ, ಒಂದು ಸೈನ್ಯ ಮಾಡಲಿಕ್ಕಿದ್ದ ದಾಳಿಯ ಕುರಿತು ತಿಳಿಸ್ತಿದ್ದಾನೆ ಅಂತ ಗೊತ್ತಾಗುತ್ತೆ. (ಯೋವೇ. 1:6; 2:1, 8, 11) ಅವಿಧೇಯ ಇಸ್ರಾಯೇಲ್ಯರನ್ನ ಶಿಕ್ಷಿಸ್ಲಿಕ್ಕಾಗಿ ಯೆಹೋವನು ‘ದೊಡ್ಡ ದಂಡನ್ನ’ (ಬಾಬೆಲಿನ ಸೈನಿಕರನ್ನ) ಉಪಯೋಗಿಸ್ತೇನೆ ಅಂತ ಹೇಳಿದ್ನು. (ಯೋವೇ. 2:25) ದಾಳಿ ಮಾಡಲಿದ್ದ ಸೈನ್ಯವನ್ನ ‘ಬಡಗಣ ದಂಡು’ ಅಂತ ಕರೆದಿರೋದು ಸರಿಯಾಗಿಯೇ ಇದೆ. ಯಾಕೆಂದರೆ ಬಾಬೆಲಿನವರು ಇಸ್ರಾಯೇಲಿನ ಉತ್ತರದಿಂದ ಬಂದು ದಾಳಿ ಮಾಡ್ಲಿಕ್ಕಿದ್ರು. (ಯೋವೇ. 2:20) ಆ ಸೈನ್ಯವನ್ನ ವ್ಯವಸ್ಥಿತವಾದ ಮಿಡತೆಗಳ ದಂಡಿಗೆ ಹೋಲಿಸಲಾಗಿದೆ. ಆ ಸೈನ್ಯದ ಬಗ್ಗೆ ಯೋವೇಲನು ಹೀಗೆ ಹೇಳಿದ್ದಾನೆ: ಅವು (ಸೈನಿಕರು) “ತಮ್ಮ ತಮ್ಮ ಸಾಲುಗಳಲ್ಲಿಯೇ ನಡೆಯುತ್ತವೆ; . . . ಪಟ್ಟಣದಲ್ಲೆಲ್ಲಾ ತ್ವರೆಪಡುತ್ತವೆ, ಗೋಡೆಯ ಮೇಲೆ ಓಡಾಡುತ್ತವೆ, ಮನೆಗಳನ್ನು ಹತ್ತುತ್ತವೆ, ಕಿಟಕಿಗಳಲ್ಲಿ ಕಳ್ಳರಂತೆ ನುಗ್ಗುತ್ತವೆ.” (ಯೋವೇ. 2:8, 9) ನೀವು ಈ ಸನ್ನಿವೇಶವನ್ನ ಚಿತ್ರಿಸಿಕೊಳ್ಳೋಕಾಗುತ್ತಾ? ಬಾಬೆಲಿನ ಸೈನಿಕರು ಆ ದೇಶದ ಮೂಲೆ ಮೂಲೆಗೂ ಬಂದುಬಿಟ್ಟಿದ್ದರು. ಜನ್ರಿಗೆ ಬಚ್ಚಿಟ್ಟುಕೊಳ್ಳೋಕೆ ಯಾವ ಸ್ಥಳನೂ ಇರ್ಲಿಲ್ಲ. ಬಾಬೆಲಿನವರ ಕತ್ತಿಯಿಂದ ತಪ್ಪಿಸಿಕೊಳ್ಳೋಕೆ ಯಾರಿಂದನೂ ಸಾಧ್ಯ ಇರ್ಲಿಲ್ಲ.

12. ಮಿಡತೆಗಳ ಕುರಿತಾದ ಯೋವೇಲನ ಪ್ರವಾದನೆ ಹೇಗೆ ನೆರವೇರಿತು?

12 ಬಾಬೆಲಿನವರು (ಅಥವಾ ಕಸ್ದೀಯರು) ಮಿಡತೆಗಳಂತೆ ಕ್ರಿ.ಪೂ. 607 ರಲ್ಲಿ ಯೆರೂಸಲೇಮ್‌ ಪಟ್ಟಣವನ್ನು ದಾಳಿ ಮಾಡಿದ್ರು. ಅದ್ರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: ದೇವರು “ಎಲ್ಲರನ್ನೂ ಅವನ (ಕಸ್ದೀಯರ ಅರಸನ) ಕೈಗೆ ಒಪ್ಪಿಸಿದನು. ಅವನು ಅವರ ಯುವಭಟರನ್ನು . . . ಕತ್ತಿಯಿಂದ ಸಂಹರಿಸಿ ಯುವಕರನ್ನೂ ಕನ್ಯೆಯರನ್ನೂ ಮುದುಕರನ್ನೂ ಅತಿವೃದ್ಧರನ್ನೂ ಕನಿಕರಿಸದೆ ಎಲ್ಲರನ್ನೂ ಕೊಲ್ಲಿಸಿದನು. ಅವನ ಜನರು ಯೆರೂಸಲೇಮಿನ ಪೌಳಿಗೋಡೆಗಳನ್ನು ಕೆಡವಿ ಅದರ ಎಲ್ಲಾ ರಾಜಮಂದಿರಗಳನ್ನೂ ದೇವಾಲಯವನ್ನೂ ಸುಟ್ಟುಬಿಟ್ಟು ಅಮೂಲ್ಯವಸ್ತುಗಳನ್ನು ನಾಶಮಾಡಿದರು.” (2 ಪೂರ್ವ. 36:17, 19) ಬಾಬೆಲಿನವರು ನಾಶ ಮಾಡಿದ ಯೆರೂಸಲೇಮನ್ನ ನೋಡಿದವ್ರು ಈ ಪಟ್ಟಣ “ಜನಪಶುಗಳಿಲ್ಲದೆ ಹಾಳಾಗಿ ಕಸ್ದೀಯರ ಕೈವಶವಾಗಿದೆ” ಅಂತ ಅಂದುಕೊಳ್ತಿದ್ರು.—ಯೆರೆ. 32:43.

13. ಯೆರೆಮೀಯ 16:16, 18 ರಲ್ಲಿರುವ ಮಾತಿನ ಅರ್ಥವೇನು?

13 ಯೋವೇಲನು ಪ್ರವಾದಿಸಿದ 200 ವರ್ಷಗಳ ನಂತರ ಯೆಹೋವನು ಯೆರೆಮೀಯನ ಮೂಲಕ ಈ ದಾಳಿಯ ಬಗ್ಗೆ ಇನ್ನೂ ಕೆಲವು ಮಾಹಿತಿ ಕೊಟ್ಟನು. ಬಾಬೆಲಿನ ಸೈನ್ಯದವ್ರು ಕೆಟ್ಟ ಕೆಲಸಗಳನ್ನು ಮಾಡಿದ ಇಸ್ರಾಯೇಲ್ಯರಿಗಾಗಿ ಯೆರೂಸಲೇಮಿನ ಮೂಲೆ ಮೂಲೆಯಲ್ಲೂ ಹುಡುಕಿ ಅವರನ್ನು ಬಂಧಿಸ್ತಾರೆ ಅಂತ ಯೆಹೋವನು ಹೇಳಿದ್ನು. “ಇಗೋ, ನನ್ನ ಜನರನ್ನು ಹಿಡಿಯುವದಕ್ಕೆ ಬಹು ಮಂದಿ ಬೆಸ್ತರನ್ನು ಕರೆಯಿಸುವೆನು; ಆ ಮೇಲೆ ಎಲ್ಲಾ ಬೆಟ್ಟಗುಡ್ಡಗಳಿಂದಲೂ ಬಂಡೆಗಳ ಸಂದುಗೊಂದುಗಳಿಂದಲೂ ಅವರನ್ನು ಹೊರಡಿಸಿ ಬೇಟೆಯಾಡುವದಕ್ಕೆ ಬಹುಜನ ಬೇಡರನ್ನು ಕರೆಯಿಸುವೆನು. ಅವರ ಅಧರ್ಮಕ್ಕೂ ಪಾಪಕ್ಕೂ ಎರಡರಷ್ಟು ಶಿಕ್ಷೆಯನ್ನು . . . ಕೊಡುವೆನು” ಅಂತ ಆತನು ಹೇಳಿದ್ನು. ಪಶ್ಚಾತ್ತಾಪಪಡದಿದ್ದ ಇಸ್ರಾಯೇಲ್ಯರನ್ನ ಬಾಬೆಲಿನವರ ಕೈಯಿಂದ ಕಾಪಾಡಲು ಯಾರಿಂದನೂ ಸಾಧ್ಯ ಇರ್ಲಿಲ್ಲ. ಅವ್ರು ಸಮುದ್ರದಲ್ಲಿ ಅಥವಾ ದಟ್ಟ ಕಾಡಿನಲ್ಲಿ ಅಡಗಿಕೊಂಡ್ರೂ ಪ್ರಯೋಜನ ಆಗ್ತಿರ್ಲಿಲ್ಲ.—ಯೆರೆ. 16:16, 18.

ಪುನಃಸ್ಥಾಪನೆ

14. ಯೋವೇಲ 2:28, 29 ರಲ್ಲಿರುವ ಪ್ರವಾದನೆ ಯಾವಾಗ ನೆರವೇರಿತು?

14 ಯೋವೇಲ ಒಂದು ಸಿಹಿಸುದ್ದಿಯನ್ನು ಸಹ ಹೇಳಿದ್ನು. ಅದೇನಂದ್ರೆ ಯೆರೂಸಲೇಮಿನಲ್ಲಿ ಮತ್ತೆ ಚೆನ್ನಾಗಿ ಬೆಳೆ ಆಗಲಿತ್ತು. (ಯೋವೇ. 2:23-26) ಮತ್ತು ಮುಂದೊಂದು ಸಮ್ಯದಲ್ಲಿ ಅನೇಕ ಜನ್ರಿಗೆ ಸತ್ಯದ ಜ್ಞಾನ ಸಿಗಲಿತ್ತು. “ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; . . . ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು” ಎಂದು ಯೆಹೋವನು ಹೇಳಿದ್ನು. (ಯೋವೇ. 2:28, 29) ಇಸ್ರಾಯೇಲ್ಯರು ಬಾಬೆಲಿನ ಬಂದಿವಾಸದಿಂದ ಯೆರೂಸಲೇಮಿಗೆ ಹಿಂದಿರುಗಿದ ತಕ್ಷಣ ಈ ಪ್ರವಾದನೆ ನೆರವೇರ್ಲಿಲ್ಲ. ಬದಲಿಗೆ ಇದು ಸುಮಾರು ಆರ್ನೂರು ವರ್ಷಗಳ ನಂತರ ಅಂದ್ರೆ ಕ್ರಿ.ಶ. 33 ರ ಪಂಚಾಶತ್ತಮದಂದು ನೆರವೇರಿತು. ಇದು ನಮಗೆ ಹೇಗೆ ಗೊತ್ತು?

15. ಅಪೊಸ್ತಲರ ಕಾರ್ಯಗಳು 2:16, 17 ರ ಪ್ರಕಾರ ಪೇತ್ರನು ಯೋವೇಲ 2:28 ರಲ್ಲಿರೋ ಪ್ರವಾದನಾ ಮಾತುಗಳಲ್ಲಿ ಯಾವ ಬದಲಾವಣೆ ಮಾಡಿದ್ನು? ಮತ್ತು ಇದ್ರಿಂದ ಏನು ಗೊತ್ತಾಗುತ್ತೆ?

15 ಪಂಚಾಶತ್ತಮ ದಿನದಂದು ನಡೆದ ಘಟನೆ ಯೋವೇಲ 2:28, 29 ರಲ್ಲಿರೋ ಪ್ರವಾದನೆಯ ನೆರವೇರಿಕೆ ಅಂತ ಅಪೊಸ್ತಲ ಪೇತ್ರ ದೇವರ ಪ್ರೇರಣೆಯಿಂದ ಹೇಳಿದ್ನು. ಆ ದಿನ ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಗೆ ದೇವರು ಒಂದು ಅದ್ಭುತ ಮಾಡಿದ್ನು. ತನ್ನ ಜನರ ಮೇಲೆ ಪವಿತ್ರಾತ್ಮ ಸುರಿಸಿದಾಗ ಅವ್ರು ಬೇರೆ ಬೇರೆ ಭಾಷೆಗಳಲ್ಲಿ ‘ದೇವರ ಮಹೋನ್ನತ ಕಾರ್ಯಗಳ ವಿಷಯವಾಗಿ ಮಾತಾಡೋಕೆ ಶುರುಮಾಡಿದ್ರು.’ (ಅ. ಕಾ. 2:11) ದೇವರ ಪವಿತ್ರಾತ್ಮದ ಸಹಾಯದಿಂದ ಪೇತ್ರನು ಯೋವೇಲ ಹೇಳಿದ ಮಾತುಗಳನ್ನೇ ಇಲ್ಲಿ ಹೇಳಿದ್ನು. ಆದ್ರೆ ಅದ್ರಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ನು. ನೀವು ಆ ಬದಲಾವಣೆಯನ್ನ ಗಮನಿಸಿದ್ರಾ? (ಅಪೊಸ್ತಲರ ಕಾರ್ಯಗಳು 2:16, 17 ಓದಿ.) ಆತನು ಆರಂಭದಲ್ಲಿ “ತರುವಾಯ” ಅಂತ ಹೇಳೋ ಬದ್ಲಿಗೆ “ಕಡೇ ದಿವಸಗಳಲ್ಲಿ” ಅಂತ ಹೇಳಿದ್ದಾನೆ. ಇಲ್ಲಿ ಪೇತ್ರ ಹೇಳಿದ ‘ಕಡೇ ದಿವಸಗಳು’ ಯೆರೂಸಲೇಮ್‌ ಮತ್ತು ಅದ್ರ ದೇವಾಲಯ ನಾಶವಾಗೋದಕ್ಕೂ ಸ್ವಲ್ಪ ಮುಂಚಿನ ದಿನಗಳನ್ನ ಸೂಚಿಸ್ತದೆ. ಆ ಸಮ್ಯದಲ್ಲಿ ದೇವ್ರ ಪವಿತ್ರಾತ್ಮ ಎಲ್ಲಾ ಮನುಷ್ಯರ ಮೇಲೆ ಸುರಿಸಲ್ಪಡಲಿತ್ತು. ಯೋವೇಲನ ಪ್ರವಾದನೆ ತುಂಬ ಸಮಯ ಕಳೆದ ನಂತ್ರ ನೆರವೇರ್ತು ಅಂತ ಇದ್ರಿಂದ ಗೊತ್ತಾಗುತ್ತೆ.

16. (ಎ) ದೇವರ ಪವಿತ್ರಾತ್ಮದ ಸಹಾಯದಿಂದ ಒಂದನೇ ಶತಮಾನದಲ್ಲಿ ಸಾರುವ ಕೆಲಸ ಹೇಗೆ ನಡೆಯಿತು? (ಬಿ) ಈಗ ಹೇಗೆ ನಡೆಯುತ್ತಿದೆ?

16 ಒಂದನೇ ಶತಮಾನದ ಕ್ರೈಸ್ತರ ಮೇಲೆ ದೇವ್ರು ಪವಿತ್ರಾತ್ಮವನ್ನು ಸುರಿಸಿದ ನಂತ್ರನೇ ಅವ್ರು ಲೋಕದಾದ್ಯಂತ ಸಾರೋಕೆ ಶುರು ಮಾಡಿದ್ರು. ಈ ಸಾರುವ ಕೆಲಸವನ್ನ ಎಷ್ಟರಮಟ್ಟಿಗೆ ಮಾಡಲಾಯಿತೆಂದ್ರೆ ಅಪೊಸ್ತಲ ಪೌಲನು ಕೊಲೊಸ್ಸೆಯವ್ರಿಗೆ ಕ್ರಿ.ಶ. 61 ರಲ್ಲಿ ಪತ್ರ ಬರೆದಾಗ “ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೆ” ಸುವಾರ್ತೆ ಸಾರಲ್ಪಟ್ಟಿದೆ ಅಂತ ಹೇಳಿದ್ನು. (ಕೊಲೊ. 1:23) ಪೌಲನ ಕಾಲದಲ್ಲಿ ‘ಸರ್ವ ಸೃಷ್ಟಿ’ ಅಂದ್ರೆ ಪೌಲನು ಮತ್ತು ಯೇಸುವಿನ ಇತರ ಶಿಷ್ಯರು ಎಷ್ಟು ದೂರ ಪ್ರಯಾಣಿಸಿದ್ರೋ ಆ ಪ್ರದೇಶಗಳನ್ನು ಸೂಚಿಸುತ್ತಿತ್ತು. ಯೆಹೋವನ ಪವಿತ್ರಾತ್ಮದ ಸಹಾಯದಿಂದ ನಮ್ಮೀ ಕಾಲದಲ್ಲಿ ಸಾರುವ ಕೆಲ್ಸ ಇನ್ನೂ ವಿಸ್ತಾರವಾಗಿ ಅಂದ್ರೆ ಭೂಮಿಯ ಕಟ್ಟಕಡೆಯವರೆಗೆ ನಡೆಯುತ್ತಿದೆ.—ಅ. ಕಾ. 13:47; “ ನನ್ನ ಆತ್ಮವನ್ನು ಸುರಿಸುವೆನು” ಎಂಬ ಚೌಕ ನೋಡಿ.

ಯಾವ ಬದಲಾವಣೆ ಆಗಿದೆ?

17. ಮಿಡತೆಗಳ ಬಗ್ಗೆ ಯೋವೇಲನು ಹೇಳಿದ ಪ್ರವಾದನೆಯ ಅರ್ಥವಿವರಣೆಯಲ್ಲಿ ಯಾವ ಬದಲಾವಣೆ ಆಗಿದೆ?

17 ಯೋವೇಲ 2:7-9 ರಲ್ಲಿರುವ ಪ್ರವಾದನೆಯ ಅರ್ಥವಿವರಣೆಯಲ್ಲಿ ಯಾವ ಬದಲಾವಣೆ ಆಗಿದೆ? ನಾವೀಗ ಈ ಪ್ರವಾದನೆಯನ್ನ ಇನ್ನೂ ಚೆನ್ನಾಗಿ ಅರ್ಥಮಾಡ್ಕೊಂಡಿದ್ದೇವೆ. ಚುಟುಕಾಗಿ ಹೇಳೋದಾದ್ರೆ ಈ ವಚನಗಳು ನಾವು ಹುರುಪಿನಿಂದ ಮಾಡುವ ಸಾರುವ ಕೆಲಸವನ್ನು ಸೂಚಿಸಲ್ಲ. ಬದ್ಲಿಗೆ ಕ್ರಿ.ಪೂ. 607 ರಲ್ಲಿ ಬಾಬೆಲಿನ ಸೈನ್ಯ ಯೆರೂಸಲೇಮಿನ ಮೇಲೆ ದಾಳಿ ಮಾಡಿದ್ದನ್ನು ಸೂಚಿಸ್ತದೆ.

18. ಯಾವ ವಿಷ್ಯ ಬದಲಾಗಿಲ್ಲ?

18 ಯೋವೇಲನ ಪ್ರವಾದನೆಯ ಅರ್ಥವಿವರಣೆ ಬದಲಾಗಿದ್ರೂ ಒಂದು ವಿಷ್ಯ ಮಾತ್ರ ಬದಲಾಗಿಲ್ಲ. ಯೆಹೋವನ ಜನ್ರು ತಮ್ಮಿಂದ ಸಾಧ್ಯವಾಗುವ ಎಲ್ಲಾ ವಿಧಾನಗಳನ್ನ ಉಪಯೋಗಿಸ್ತಾ ಎಲ್ಲಾ ಕಡೆಗೆ ಸುವಾರ್ತೆಯನ್ನ ಸಾರೋದನ್ನ ಮುಂದುವರಿಸ್ತಿದ್ದಾರೆ. (ಮತ್ತಾ. 24:14) ಸರಕಾರದ ಯಾವುದೇ ನಿಷೇಧಗಳಿಂದ್ಲೂ ನಮ್ಮ ಸಾರೋ ಕೆಲ್ಸನ ನಿಲ್ಲಿಸೋಕಾಗಲ್ಲ. ಯೆಹೋವನ ಆಶೀರ್ವಾದದಿಂದ ನಾವು ದೇವರ ರಾಜ್ಯದ ಸುವಾರ್ತೆಯನ್ನ ಧೈರ್ಯದಿಂದ ಮತ್ತು ಹಿಂದೆಂದಿಗಿಂತ್ಲೂ ಹೆಚ್ಚಾಗಿ ಸಾರ್ತಿದ್ದೇವೆ. ಇನ್ನು ಮುಂದಕ್ಕೂ ನಾವು ಬೈಬಲ್‌ ಪ್ರವಾದನೆಯನ್ನ ಅರ್ಥಮಾಡ್ಕೊಳ್ಳೋಕೆ ಸಹಾಯಕ್ಕಾಗಿ ಯೆಹೋವನ ಮೇಲೆನೇ ಆತುಕೊಳ್ತೇವೆ. ಯಾಕಂದ್ರೆ, ಸರಿಯಾದ ಸಮಯದಲ್ಲಿ ಆತನು “ಸತ್ಯವನ್ನು ಪೂರ್ಣವಾಗಿ” ಅರ್ಥಮಾಡ್ಕೊಳ್ಳೋಕೆ ಸಹಾಯ ಮಾಡ್ತಾನೆ.—ಯೋಹಾ. 16:13.

ಗೀತೆ 115 ನಮ್ಮ ದಾರಿಯನ್ನು ಸಫಲಗೊಳಿಸುವುದು

^ ಪ್ಯಾರ. 5 ಯೋವೇಲ ಪುಸ್ತಕದ 1 ಮತ್ತು 2 ನೇ ಅಧ್ಯಾಯಗಳಲ್ಲಿರೋ ಪ್ರವಾದನೆಯು ನಮ್ಮೀ ದಿನಗಳಲ್ಲಿ ನಡೆಯುತ್ತಿರುವ ಸಾರುವ ಕೆಲಸವನ್ನು ಸೂಚಿಸುತ್ತದೆ ಎಂದು ನಾವು ಅನೇಕ ವರ್ಷಗಳಿಂದ ನಂಬಿದ್ದೇವೆ. ಆದ್ರೆ ನಾಲ್ಕು ಕಾರಣಗಳಿಂದಾಗಿ ಈ ಪ್ರವಾದನೆಯ ಅರ್ಥವಿವರಣೆಯಲ್ಲಿ ಹೊಂದಾಣಿಕೆ ಮಾಡ್ಬೇಕಾಗಿದೆ. ಆ ಕಾರಣಗಳು ಯಾವುವು?

^ ಪ್ಯಾರ. 3 ಉದಾಹರಣೆಗೆ, 2009 ಏಪ್ರಿಲ್‌ 15 ರ ಕಾವಲಿನಬುರುಜುವಿನಲ್ಲಿರುವ “ಸೃಷ್ಟಿಯಲ್ಲಿ ತೋರಿಬರುವ ಯೆಹೋವನ ವಿವೇಕ” ಎಂಬ ಲೇಖನದ ಪ್ಯಾರ 14-16 ನೋಡಿ.