ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 17

“ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ”

“ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ”

“ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ, ಏಕೆಂದರೆ ತಂದೆಯಿಂದ ನಾನು ಕೇಳಿಸಿಕೊಂಡಿರುವ ಎಲ್ಲ ವಿಷಯಗಳನ್ನು ನಿಮಗೆ ತಿಳಿಯಪಡಿಸಿದ್ದೇನೆ.”—ಯೋಹಾ. 15:15.

ಗೀತೆ 5 ನಮಗೆ ಆದರ್ಶಪ್ರಾಯನಾದ ಕ್ರಿಸ್ತನು

ಕಿರುನೋಟ *

1. ಒಬ್ರನ್ನ ಆಪ್ತ ಸ್ನೇಹಿತರನ್ನಾಗಿ ಮಾಡ್ಕೊಳ್ಳೋದು ಹೇಗೆ?

ನೀವು ಭೇಟಿಯಾದ ಒಬ್ರನ್ನ ಆಪ್ತ ಸ್ನೇಹಿತರನ್ನಾಗಿ ಮಾಡ್ಕೋಬೇಕಂದ್ರೆ ಅವ್ರ ಜೊತೆ ಸಮ್ಯ ಕಳೀಬೇಕು. ಒಬ್ರಿಗೊಬ್ರು ಮಾತಾಡ್ತಾ ಅನಿಸಿಕೆಗಳನ್ನ, ಭಾವನೆಗಳನ್ನ ಹೇಳ್ಕೊಳ್ಳುವಾಗ ನೀವಿಬ್ರೂ ಸ್ನೇಹಿತರಾಗ್ತೀರಿ. ಆದ್ರೆ ಯೇಸುವನ್ನ ಸ್ನೇಹಿತನಾಗಿ ಮಾಡ್ಕೊಳ್ಳೋಕೆ ನಮ್ಗೆ ಕೆಲವು ಅಡ್ಡಿ-ತಡೆಗಳಿವೆ. ಆ ಅಡ್ಡಿ-ತಡೆಗಳು ಯಾವುವು?

2. ನಮಗಿರೋ ಮೊದಲ್ನೇ ಅಡ್ಡಿ ಯಾವ್ದು?

2 ನಮಗಿರೋ ಮೊದಲ್ನೇ ಅಡ್ಡಿ ಯಾವುದಂದ್ರೆ, ನಾವು ಯಾವತ್ತೂ ಯೇಸುವನ್ನ ಕಣ್ಣಾರೆ ನೋಡಿಲ್ಲ. ಒಂದನೇ ಶತಮಾನದಲ್ಲಿದ್ದ ಅನೇಕ ಕ್ರೈಸ್ತರು ಸಹ ಯೇಸುವನ್ನ ಕಣ್ಣಾರೆ ನೋಡಿರ್ಲಿಲ್ಲ. ಆದ್ರೂ ಅಪೊಸ್ತಲ ಪೇತ್ರನು ಅವ್ರಿಗೆ ಹೀಗೆ ಹೇಳಿದ್ನು: “ನೀವು ಎಂದೂ ಅವನನ್ನು ನೋಡಲಿಲ್ಲವಾದರೂ ಅವನನ್ನು ಪ್ರೀತಿಸುತ್ತೀರಿ; ಈಗ ನೀವು ಅವನನ್ನು ಕಾಣದಿರುವುದಾದರೂ ಅವನಲ್ಲಿ ನಂಬಿಕೆಯನ್ನು ಇಟ್ಟಿದ್ದೀರಿ.” (1 ಪೇತ್ರ 1:8) ಹಾಗಾಗಿ, ನಾವು ಸಹ ಯೇಸುವನ್ನು ಖುದ್ದಾಗಿ ಭೇಟಿಯಾಗದೇ ಇದ್ರೂ ಆತನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳೋಕೆ ಖಂಡಿತ ಆಗುತ್ತೆ.

3. ನಮಗಿರೋ ಎರಡ್ನೇ ಅಡ್ಡಿ ಯಾವ್ದು?

3 ನಮಗಿರೋ ಎರಡ್ನೇ ಅಡ್ಡಿ ಏನಂದ್ರೆ, ನಾವು ಯೇಸು ಹತ್ರ ಮಾತಾಡೋಕಾಗಲ್ಲ. ನಾವು ಯೇಸುವಿನ ಹೆಸ್ರಲ್ಲಿ ಪ್ರಾರ್ಥನೆ ಮಾಡೋದಾದ್ರೂ ಆಗ ನಾವು ಆತನ ಹತ್ರ ಮಾತಾಡಲ್ಲ, ಬದಲಿಗೆ ಯೆಹೋವನ ಹತ್ರ ಮಾತಾಡ್ತೇವೆ. ಯೇಸು ಕೂಡ ನಾವು ಆತನಿಗೆ ಪ್ರಾರ್ಥನೆ ಮಾಡ್ಬೇಕಂತ ಬಯಸಲ್ಲ. ಯಾಕೆ? ಯಾಕಂದ್ರೆ, ಪ್ರಾರ್ಥನೆ ಅನ್ನೋದು ಆರಾಧನೆಯ ಒಂದು ಭಾಗವಾಗಿದೆ ಮತ್ತು ಈ ಆರಾಧನೆ ಯೆಹೋವನಿಗೆ ಮಾತ್ರ ಸಲ್ಲಬೇಕು. (ಮತ್ತಾ. 4:10) ಹಾಗಿದ್ರೂ, ಯೇಸುವಿನ ಮೇಲಿರೋ ನಮ್ಮ ಪ್ರೀತಿಯನ್ನ ನಾವು ತೋರಿಸ್ಬಹುದು.

4. (ಎ) ನಮಗಿರೋ ಮೂರನೇ ಅಡ್ಡಿ ಯಾವ್ದು? (ಬಿ) ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?

4 ನಮಗಿರೋ ಮೂರನೇ ಅಡ್ಡಿ ಏನಂದ್ರೆ, ಯೇಸು ಸ್ವರ್ಗದಲ್ಲಿದ್ದಾನೆ. ಹಾಗಾಗಿ, ಆತನ ಜೊತೆ ಸಮ್ಯ ಕಳೆಯೋಕಾಗಲ್ಲ. ಆತನು ನಮ್ಮ ಜೊತೆ ಇಲ್ದಿದ್ರೂ ಆತನ ಬಗ್ಗೆ ನಾವು ತುಂಬ ತಿಳ್ಕೋಬಹುದು. ಆತನ ಜೊತೆ ಆಪ್ತ ಸ್ನೇಹ ಬೆಳೆಸಿಕೊಳ್ಳೋಕೆ ಮತ್ತು ಆ ಸ್ನೇಹ ಕಾಪಾಡಿಕೊಳ್ಳೋಕೆ ಸಹಾಯ ಮಾಡೋ ನಾಲ್ಕು ವಿಷ್ಯಗಳನ್ನ ಈಗ ನೋಡೋಣ. ಅದಕ್ಕಿಂತ ಮುಂಚೆ ಯೇಸುವಿನ ಜೊತೆಗೆ ಸ್ನೇಹ ಬೆಳೆಸಿಕೊಳ್ಳೋದು ಯಾಕಷ್ಟು ಪ್ರಾಮುಖ್ಯ ಅಂತ ನೋಡೋಣ.

ನಾವ್ಯಾಕೆ ಯೇಸುವಿನ ಸ್ನೇಹಿತರಾಗಬೇಕು?

5. ನಾವ್ಯಾಕೆ ಯೇಸುವಿನ ಸ್ನೇಹಿತರಾಗ್ಬೇಕು? (“ ಯೇಸುವಿನ ಸ್ನೇಹ ಬೆಳೆಸಿ ಯೆಹೋವನಿಗೆ ಸ್ನೇಹಿತರಾಗಿ” ಮತ್ತು “ ಯೆಹೋವನಿಗಿಂತ ಹೆಚ್ಚಾಗಿ ಯೇಸುವನ್ನು ಪ್ರೀತಿಸ್ಬೇಕಾ?” ಎಂಬ ಚೌಕಗಳನ್ನು ಸಹ ನೋಡಿ.)

5 ನಾವು ಯೆಹೋವನಿಗೆ ಆಪ್ತರಾಗ್ಬೇಕಂದ್ರೆ ಯೇಸುವಿನ ಸ್ನೇಹಿತರಾಗ್ಬೇಕು. ಯಾಕೆ? ಎರಡು ಕಾರಣಗಳನ್ನು ನೋಡಿ. ಮೊದಲನೇದಾಗಿ, ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದ್ನು: ‘ನಿಮಗೆ ನನ್ನ ಮೇಲೆ ಮಮತೆ ಇರುವುದರಿಂದ ಸ್ವತಃ ತಂದೆಗೆ ನಿಮ್ಮ ಮೇಲೆ ಮಮತೆ ಇದೆ.’ (ಯೋಹಾ. 16:27) “ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ” ಅಂತನೂ ಆತನು ಹೇಳಿದ್ದಾನೆ. (ಯೋಹಾ. 14:6) ಯೇಸುವಿನ ಸ್ನೇಹ ಮಾಡ್ದೇ ನೇರವಾಗಿ ಯೆಹೋವನ ಸ್ನೇಹ ಮಾಡೋದು ಹೇಗಿರುತ್ತೆ ಅಂದ್ರೆ, ಒಂದು ಮನೆಗೆ ಬಾಗಿಲಿನ ಮೂಲಕ ಹೋಗದೇ ಬೇರೆ ಕಡೆಯಿಂದ ಹೋಗೋಕೆ ಪ್ರಯತ್ನಿಸೋ ತರ ಇರುತ್ತೆ. “ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ” ಅಂತ ಯೇಸು ಸಹ ಹೇಳಿದ್ದಾನೆ. (ಯೋಹಾ. 10:7) ಎರಡನೇದಾಗಿ, ಯೇಸು ತನ್ನ ತಂದೆಯ ಗುಣಗಳನ್ನ ಸಂಪೂರ್ಣವಾಗಿ ಅನುಕರಿಸಿದ್ನು. ಆತನು ತನ್ನ ಶಿಷ್ಯರಿಗೆ ಹೇಳಿದ್ದು: “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ.” (ಯೋಹಾ. 14:9) ಹಾಗಾಗಿ, ಯೆಹೋವನ ಬಗ್ಗೆ ನಾವು ಚೆನ್ನಾಗಿ ತಿಳ್ಕೊಳ್ಳೋ ಒಂದು ಪ್ರಾಮುಖ್ಯ ವಿಧ ಯಾವ್ದಂದ್ರೆ ಯೇಸುವಿನ ಜೀವನದ ಬಗ್ಗೆ ಕಲಿಯೋದೇ ಆಗಿದೆ. ನಾವು ಯೇಸು ಬಗ್ಗೆ ಕಲಿತಾ ಹೋದಂತೆ ಆತನ ಮೇಲೆ ನಮಗಿರೋ ಪ್ರೀತಿ ಹೆಚ್ಚಾಗ್ತಾ ಹೋಗುತ್ತೆ. ಯೇಸುವಿನ ಜೊತೆಗಿರೋ ಸ್ನೇಹ ಬಲವಾಗ್ತಾ ಹೋದಂತೆ ಆತನ ತಂದೆ ಮೇಲಿರೋ ಪ್ರೀತಿನೂ ಹೆಚ್ಚಾಗುತ್ತೆ.

6. ಯೇಸುವಿಗೆ ಆಪ್ತರಾಗ್ಬೇಕು ಅನ್ನೋದಕ್ಕೆ ಇನ್ಯಾವ ಕಾರಣ ಇದೆ? ವಿವರಿಸಿ.

6 ನಮ್ಮ ಪ್ರಾರ್ಥನೆಗಳಿಗೆ ಉತ್ರ ಸಿಗ್ಬೇಕಂದ್ರೆ ನಾವು ಯೇಸುವಿಗೆ ಆಪ್ತರಾಗ್ಬೇಕು. ಅದರರ್ಥ ನಮ್ಮ ಪ್ರಾರ್ಥನೆಯ ಕೊನೆಯಲ್ಲಿ “ಯೇಸುವಿನ ಹೆಸರಿನಲ್ಲಿ” ಅಂತ ಹೇಳಿದ್ರೆ ಮಾತ್ರ ಸಾಕಾಗಲ್ಲ. ಬದಲಿಗೆ, ನಮ್ಮ ಪ್ರಾರ್ಥನೆಗೆ ಯೆಹೋವನು ಯೇಸು ಮೂಲಕ ಹೇಗೆ ಉತ್ರ ಕೊಡ್ತಾನೆ ಅನ್ನೋದನ್ನೂ ಅರ್ಥಮಾಡ್ಕೊಂಡಿರಬೇಕು. ಯೇಸು ತನ್ನ ಅಪೊಸ್ತಲರಿಗೆ, “ನನ್ನ ಹೆಸರಿನಲ್ಲಿ ನೀವು ಏನನ್ನೇ ಬೇಡಿಕೊಂಡರೂ ಅದನ್ನು ನಾನು ಮಾಡುವೆನು” ಅಂತ ಹೇಳಿದ್ನು. (ಯೋಹಾ. 14:13) ನಮ್ಮ ಪ್ರಾರ್ಥನೆಯನ್ನ ಕೇಳಿ ಅದಕ್ಕುತ್ರ ಕೊಡೋದು ಯೆಹೋವನಾದ್ರೂ ಆತನು ತನ್ನ ನಿರ್ಣಯವನ್ನ ಜಾರಿಗೆ ತರೋ ಅಧಿಕಾರವನ್ನ ಯೇಸುವಿಗೆ ಕೊಟ್ಟಿದ್ದಾನೆ. (ಮತ್ತಾ. 28:18) ಅಷ್ಟೇ ಅಲ್ಲ, ದೇವ್ರು ನಮ್ಮ ಪ್ರಾರ್ಥನೆಗೆ ಉತ್ರ ಕೊಡೋ ಮುಂಚೆ ನಾವು ಯೇಸು ಕೊಟ್ಟಿರೋ ಸಲಹೆನ ಅನ್ವಯಿಸಿದ್ದೀವಾ ಇಲ್ವಾ ಅಂತನೂ ನೋಡ್ತಾನೆ. ಉದಾಹರಣೆಗೆ, ಯೇಸು ಹೀಗೆ ಹೇಳಿದ್ದಾನೆ: “ನೀವು ಜನರ ಅಪರಾಧಗಳನ್ನು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮನ್ನು ಕ್ಷಮಿಸುವನು; ಆದರೆ ನೀವು ಜನರ ಅಪರಾಧಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆಯು ಸಹ ನಿಮ್ಮ ಅಪರಾಧಗಳನ್ನು ಕ್ಷಮಿಸುವುದಿಲ್ಲ.” (ಮತ್ತಾ. 6:14, 15) ಯೆಹೋವ ಮತ್ತು ಯೇಸು ನಮ್ಮ ಜೊತೆ ಹೇಗೆ ದಯೆಯಿಂದ ನಡ್ಕೊತಾರೋ ಅದೇ ರೀತಿ ನಾವೂ ಬೇರೆಯವ್ರ ಜೊತೆ ದಯೆಯಿಂದ ನಡಕೊಳ್ಳೋದು ಎಷ್ಟು ಪ್ರಾಮುಖ್ಯ ಅಲ್ವಾ?

7. ಯೇಸುವಿನ ವಿಮೋಚನಾ ಯಜ್ಞದ ಪ್ರಯೋಜನವನ್ನ ಯಾರು ಪಡ್ಕೊಳ್ತಾರೆ?

7 ಯಾರು ಯೇಸುವಿಗೆ ಆಪ್ತರಾಗಿರ್ತಾರೋ ಅವ್ರು ಮಾತ್ರ ಆತನ ವಿಮೋಚನಾ ಮೌಲ್ಯದ ಸಂಪೂರ್ಣ ಪ್ರಯೋಜನವನ್ನ ಪಡ್ಕೊಳ್ತಾರೆ. ಇದು ನಮಗೆ ಹೇಗೆ ಗೊತ್ತು? ಯೇಸು ‘ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಡ್ತೇನೆ’ ಅಂತ ಹೇಳಿದ್ನು. (ಯೋಹಾ. 15:13) ಯೇಸು ಭೂಮಿಗೆ ಬರೋದಕ್ಕಿಂತ ಮುಂಚೆ ಇದ್ದ ಯೆಹೋವನ ನಂಬಿಗಸ್ತ ಜನ್ರು ಸಹ ಯೇಸು ಬಗ್ಗೆ ಕಲೀಬೇಕು, ಆತನನ್ನು ಪ್ರೀತಿಸ್ಬೇಕು. ಅಂಥ ನೀತಿವಂತ ಸೇವಕರಲ್ಲಿ ಕೆಲವ್ರು ಯಾರಂದ್ರೆ, ಅಬ್ರಹಾಮ, ಸಾರ, ಮೋಶೆ ಮತ್ತು ರಾಹಾಬ. ಇವ್ರಿಗೆ ಮುಂದೆ ಪುನರುತ್ಥಾನ ಆಗುತ್ತೆ. ಆದ್ರೆ ಇವ್ರು ಶಾಶ್ವತವಾದ ಜೀವ್ನ ಪಡ್ಕೋಬೇಕಂದ್ರೆ ಯೇಸುವಿಗೆ ಆಪ್ತ ಸ್ನೇಹಿತರಾಗ್ಬೇಕು.—ಯೋಹಾ. 17:3; ಅ. ಕಾ. 24:15; ಇಬ್ರಿ. 11:8-12, 24-26, 31.

8-9. (ಎ) ಯೋಹಾನ 15:4, 5 ರಲ್ಲಿ ವಿವರಿಸಿದಂತೆ ನಮಗೆ ಯೇಸುವಿನ ಜೊತೆ ಆಪ್ತ ಸ್ನೇಹ ಇದ್ರೆ ನಾವೇನು ಮಾಡ್ತೇವೆ? (ಬಿ) ಯೇಸುವಿನ ಆಪ್ತ ಸ್ನೇಹಿತರಾಗೋದು ಯಾಕೆ ತುಂಬ ಪ್ರಾಮುಖ್ಯ?

8 ಯೇಸು ಜೊತೆ ಸೇರಿ ದೇವರ ರಾಜ್ಯದ ಸುವಾರ್ತೆ ಸಾರೋದು ಮತ್ತು ಕಲಿಸೋದು ನಮಗೆ ಸಿಕ್ಕಿರೋ ಸುಯೋಗ. ಯೇಸು ಭೂಮಿಯಲ್ಲಿದ್ದಾಗ ಬೋಧಕನಾಗಿದ್ದನು. ಆತನು ವಾಪಸ್‌ ಸ್ವರ್ಗಕ್ಕೆ ಹೋದಾಗಿಂದ ಸಭೆಗೆ ಶಿರಸ್ಸಾಗಿದ್ದಾನೆ ಮತ್ತು ಸಾರುವ, ಕಲಿಸುವ ಕೆಲಸಕ್ಕೆ ಬೇಕಾದ ನಿರ್ದೇಶನಗಳನ್ನ ಕೊಡ್ತಾ ಇದ್ದಾನೆ. ನಮ್ಮಿಂದ ಸಾಧ್ಯವಾದಷ್ಟು ಹೆಚ್ಚಿನ ಜನ್ರಿಗೆ ಆತನ ಬಗ್ಗೆ, ಆತನ ತಂದೆಯ ಬಗ್ಗೆ ತಿಳುಕೊಳ್ಳೋಕೆ ಸಹಾಯ ಮಾಡ್ವಾಗ ನಮ್ಮ ಪ್ರಯತ್ನವನ್ನು ಆತನು ನೋಡ್ತಾನೆ ಮತ್ತು ಅದನ್ನ ಅಮೂಲ್ಯವೆಂದು ನೆನಸ್ತಾನೆ. ನಿಜ ಏನಂದ್ರೆ, ಯೆಹೋವ ಮತ್ತು ಯೇಸುವಿನ ಸಹಾಯದಿಂದ್ಲೇ ನಾವು ಈ ಕೆಲ್ಸನ ಪೂರ್ತಿಯಾಗಿ ಮಾಡಿ ಮುಗ್ಸೋಕೆ ಸಾಧ್ಯ.—ಯೋಹಾನ 15:4, 5 ಓದಿ.

9 ಯೆಹೋವನು ನಮ್ಮನ್ನ ಮೆಚ್ಚಬೇಕಂದ್ರೆ ನಾವು ಯೇಸುವನ್ನು ಯಾವಾಗ್ಲೂ ಪ್ರೀತಿಸ್ಬೇಕಂತ ದೇವರ ವಾಕ್ಯ ಸ್ಪಷ್ಟವಾಗಿ ಹೇಳುತ್ತೆ. ನಾವು ಯಾವ ನಾಲ್ಕು ವಿಷ್ಯಗಳನ್ನ ಮಾಡಿದ್ರೆ ಯೇಸುವಿನ ಸ್ನೇಹಿತರಾಗ್ಬಹುದು ಅಂತ ಈಗ ನೋಡೋಣ.

ಯೇಸುವಿನ ಸ್ನೇಹಿತರಾಗೋಕೆ ನಾವೇನು ಮಾಡ್ಬೇಕು?

ನೀವು ಯೇಸುವಿನ ಸ್ನೇಹಿತರಾಗ್ಬೇಕಂದ್ರೆ (1) ಆತನ ಬಗ್ಗೆ ಚೆನ್ನಾಗಿ ತಿಳುಕೊಳ್ಬೇಕು, (2) ಆತನ ತರ ಯೋಚಿಸ್ಬೇಕು ಮತ್ತು ನಡಕೊಳ್ಬೇಕು, (3) ಕ್ರಿಸ್ತನ ಸಹೋದರರಿಗೆ ಬೆಂಬಲ ಕೊಡ್ಬೇಕು ಮತ್ತು (4) ಸಂಘಟನೆ ಮಾಡುವ ಏರ್ಪಾಡುಗಳಿಗೆ ಪೂರ್ತಿಯಾಗಿ ಸಹಕರಿಸ್ಬೇಕು (ಪ್ಯಾರ 10-14 ನೋಡಿ) *

10. ನಾವು ಯೇಸುವಿನ ಸ್ನೇಹಿತರಾಗೋಕೆ ಮೊದಲ್ನೇದಾಗಿ ಏನು ಮಾಡ್ಬೇಕು?

10 (1) ಯೇಸು ಬಗ್ಗೆ ತಿಳುಕೊಳ್ಬೇಕು. ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನ ಪುಸ್ತಕಗಳನ್ನು ನಾವು ಓದುವಾಗ ಯೇಸು ಬಗ್ಗೆ ತಿಳುಕೊಳ್ತೇವೆ. ಯೇಸುವಿನ ಜೀವನದ ಬಗ್ಗೆ ಇರೋ ಬೈಬಲ್‌ ವೃತ್ತಾಂತಗಳನ್ನು ಧ್ಯಾನಿಸುವಾಗ ಆತನು ಜನ್ರ ಜೊತೆ ಹೇಗೆ ದಯೆಯಿಂದ ನಡಕೊಂಡನು ಅಂತ ಗೊತ್ತಾಗುತ್ತೆ. ಆಗ ಯೇಸುವಿನ ಮೇಲೆ ನಮಗೆ ಪ್ರೀತಿ, ಗೌರವ ಬರುತ್ತೆ. ಉದಾಹರಣೆಗೆ, ಆತನು ಶಿಷ್ಯರಿಗೆ ಯಜಮಾನನಾಗಿದ್ರೂ ಅವರನ್ನು ಯಾವತ್ತೂ ಆಳುಗಳಂತೆ ನೋಡ್ಲಿಲ್ಲ. ಬದಲಿಗೆ ತನ್ನ ಅನಿಸಿಕೆಗಳನ್ನ, ಭಾವನೆಗಳನ್ನ ಅವ್ರತ್ರ ಹೇಳ್ಕೊಳ್ತಿದ್ನು. (ಯೋಹಾ. 15:15) ಅವ್ರಿಗೆ ದುಃಖ ಆದಾಗ ಯೇಸುಗೂ ದುಃಖ ಆಯ್ತು, ಕಣ್ಣೀರಿಟ್ನು. (ಯೋಹಾ. 11:32-36) ಯಾರು ಯೇಸುವಿನ ಸಂದೇಶಕ್ಕೆ ಚೆನ್ನಾಗಿ ಪ್ರತಿಕ್ರಿಯಿಸಿದ್ರೋ ಅವ್ರು ಆತನ ಸ್ನೇಹಿತರು ಅಂತ ಆತನ ವಿರೋಧಿಗಳು ಸಹ ಒಪ್ಕೊಂಡ್ರು. (ಮತ್ತಾ. 11:19) ಯೇಸು ಹೇಗೆ ತನ್ನ ಶಿಷ್ಯರ ಜೊತೆ ನಡಕೊಂಡನೋ ಅದೇ ರೀತಿ ನಾವು ಬೇರೆಯವ್ರ ಜೊತೆ ನಡ್ಕೊಂಡ್ರೆ ಅವ್ರಿಗೆ ನಾವಿನ್ನೂ ಆಪ್ತರಾಗ್ತೇವೆ. ನಮಗೆ ತುಂಬ ಸಂತೋಷ, ಸಂತೃಪ್ತಿ ಸಿಗುತ್ತೆ ಮತ್ತು ಯೇಸುವಿನ ಮೇಲಿರೋ ಪ್ರೀತಿ, ಗೌರವ ಇನ್ನೂ ಹೆಚ್ಚಾಗುತ್ತೆ.

11. (ಎ) ನಾವು ಯೇಸುವಿನ ಸ್ನೇಹಿತರಾಗೋಕೆ ಎರಡ್ನೇದಾಗಿ ಏನು ಮಾಡ್ಬೇಕು? (ಬಿ) ಇದನ್ನು ಮಾಡೋದು ಯಾಕೆ ತುಂಬ ಪ್ರಾಮುಖ್ಯ?

11 (2) ಯೇಸು ತರ ಯೋಚಿಸ್ಬೇಕು ಮತ್ತು ನಡ್ಕೋಬೇಕು. ನಾವು ಎಷ್ಟು ಚೆನ್ನಾಗಿ ಯೇಸು ಬಗ್ಗೆ ತಿಳುಕೊಂಡು ಆತನ ತರ ಯೋಚಿಸ್ತೇವೋ ಅಷ್ಟು ನಾವಾತನಿಗೆ ಆಪ್ತರಾಗ್ತೇವೆ. (1 ಕೊರಿಂ. 2:16) ನಾವು ಹೇಗೆ ಯೇಸುವಿನ ತರ ಇರಬಹುದು? ಒಂದು ಉದಾಹರಣೆ ನೋಡಿ. ಯೇಸು ತನ್ನ ಸಂತೋಷಕ್ಕಿಂತ ಬೇರೆಯವ್ರಿಗೆ ಸಹಾಯ ಮಾಡೋದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟನು. (ಮತ್ತಾ. 20:28; ರೋಮ. 15:1-3) ಆತನು ಈ ರೀತಿ ಇದ್ದಿದ್ರಿಂದಲೇ ಸ್ವತ್ಯಾಗ ಮಾಡಿದ್ನು, ಬೇರೆಯವ್ರ ತಪ್ಪುಗಳನ್ನ ಕ್ಷಮಿಸಿದ್ನು. ಯಾರಾದ್ರೂ ಆತನ ಬಗ್ಗೆ ತಪ್ಪಾಗಿ ಮಾತಾಡಿದ್ರೆ ಆತನು ತಕ್ಷಣ ಕೋಪಮಾಡಿಕೊಳ್ತಿರಲಿಲ್ಲ. (ಯೋಹಾ. 1:46, 47) ಒಬ್ಬ ವ್ಯಕ್ತಿ ತುಂಬ ಹಿಂದೆ ಮಾಡಿದ ತಪ್ಪನ್ನು ಮನಸ್ಸಲ್ಲಿಟ್ಟು ‘ಅವನು ಸರಿ ಇಲ್ಲ ತುಂಬ ಕೆಟ್ಟವ್ನು’ ಅಂತ ಯೇಸು ಯೋಚಿಸ್ತಿರ್ಲಿಲ್ಲ. (1 ತಿಮೊ. 1:12-14) “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು” ಅಂತ ಯೇಸು ಹೇಳಿದ್ನು. (ಯೋಹಾ. 13:35) ಹಾಗಾದ್ರೆ ನೀವು, “ನಾನು ನಿಜವಾಗ್ಲೂ ಯೇಸುವಿನ ಮಾದರಿಯನ್ನ ಅನುಕರಿಸ್ತಿದ್ದೇನಾ? ಸಹೋದರ ಸಹೋದರಿಯರ ಜೊತೆ ಶಾಂತಿಯಿಂದ ಇರೋಕೆ ನನ್ನ ಕೈಲಾಗೋದನ್ನೆಲ್ಲಾ ಮಾಡ್ತಿದ್ದೇನಾ?” ಅಂತ ಕೇಳ್ಕೊಳ್ಳೋದು ಒಳ್ಳೇದು.

12. (ಎ) ಯೇಸುವಿನ ಸ್ನೇಹಿತರಾಗೋಕೆ ಮೂರನೇದಾಗಿ ಏನು ಮಾಡ್ಬೇಕು? (ಬಿ) ಇದನ್ನು ಮಾಡೋದು ಹೇಗೆ?

12 (3) ಕ್ರಿಸ್ತನ ಸಹೋದರರಿಗೆ ಬೆಂಬಲ ಕೊಡ್ಬೇಕು. ನಾವು ಅಭಿಷಿಕ್ತ ಸಹೋದರರಿಗಾಗಿ ಏನೆಲ್ಲಾ ಮಾಡ್ತೇವೋ ಅದು ತನಗೇ ಮಾಡಿದಂತೆ ಅಂತ ಯೇಸು ನೆನಸ್ತಾನೆ. (ಮತ್ತಾ. 25:34-40) ನಾವು ಅಭಿಷಿಕ್ತ ಸಹೋದರರಿಗೆ ಬೆಂಬಲ ಕೊಡುವ ಮುಖ್ಯವಾದ ವಿಧ ಯಾವುದಂದ್ರೆ ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ ದೇವರ ರಾಜ್ಯದ ಸುವಾರ್ತೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ಭಾಗವಹಿಸೋದೇ ಆಗಿದೆ. (ಮತ್ತಾ. 28:19, 20; ಅ. ಕಾ. 10:42) “ಬೇರೆ ಕುರಿಗಳ” ಸಹಾಯದಿಂದನೇ ಇವತ್ತು ಕ್ರಿಸ್ತನ ಸಹೋದರರು ಇಷ್ಟು ವ್ಯಾಪಕವಾಗಿ ಸುವಾರ್ತೆ ಸಾರೋಕೆ ಸಾಧ್ಯವಾಗ್ತಿದೆ. (ಯೋಹಾ. 10:16) ನೀವೂ ಬೇರೆ ಕುರಿಗಳಲ್ಲಿ ಒಬ್ಬರಾಗಿದ್ರೆ, ಸುವಾರ್ತೆ ಸಾರಿದಾಗೆಲ್ಲಾ ಅಭಿಷಿಕ್ತ ಸಹೋದರರ ಮೇಲಷ್ಟೇ ಅಲ್ಲ, ಯೇಸು ಮೇಲೂ ಪ್ರೀತಿ ಇದೆ ಅಂತ ತೋರಿಸ್ಕೊಡ್ತೀರಿ.

13. ಲೂಕ 16:9 ರಲ್ಲಿರುವ ಯೇಸುವಿನ ಸಲಹೆಯನ್ನು ನಾವು ಹೇಗೆ ಅನ್ವಯಿಸ್ಬಹುದು?

13 ಯೆಹೋವ ಮತ್ತು ಯೇಸು ನಿರ್ದೇಶಿಸುತ್ತಿರೋ ಕೆಲಸಕ್ಕಾಗಿ ಉದಾರವಾಗಿ ಕಾಣಿಕೆ ಕೊಡೋ ಮೂಲಕವೂ ಅವ್ರ ಸ್ನೇಹಿತರಾಗ್ಬಹುದು. (ಲೂಕ 16:9 ಓದಿ.) ಉದಾಹರಣೆಗೆ, ನಾವು ಲೋಕವ್ಯಾಪಕ ಕೆಲಸಕ್ಕಾಗಿ ಉದಾರವಾಗಿ ಕಾಣಿಕೆ ಕೊಡಬಹುದು. ಈ ಕಾಣಿಕೆಯನ್ನು ದೂರ ದೂರದ ಕ್ಷೇತ್ರಗಳಲ್ಲಿ ಸುವಾರ್ತೆ ಸಾರಲು, ಸತ್ಯಾರಾಧನೆ ನಡೆಯುವಂಥ ಕಟ್ಟಡಗಳನ್ನು ಕಟ್ಟಲು ಮತ್ತು ಅವುಗಳನ್ನು ಸುಸ್ಥಿತಿಯಲ್ಲಿಡಲು ಹಾಗೂ ನೈಸರ್ಗಿಕ ವಿಪತ್ತು ಅಥವಾ ಬೇರೆ ಯಾವುದೋ ದುರಂತದಿಂದಾಗಿ ಎಲ್ಲಾ ಕಳೆದುಕೊಂಡವ್ರಿಗೆ ಸಹಾಯ ಮಾಡಲು ಉಪಯೋಗಿಸಲಾಗುತ್ತದೆ. ನಮ್ಮ ಸ್ವಂತ ಸಭೆಗೆ ತಗಲೋ ಎಲ್ಲಾ ಖರ್ಚನ್ನು ನೋಡಿಕೊಳ್ಳಲೂ ನಾವು ಕಾಣಿಕೆಗಳನ್ನ ಕೊಡ್ಬಹುದು. ನಮಗೆ ಗೊತ್ತಿರೋವ್ರು ಯಾರಾದ್ರೂ ಕಷ್ಟದಲ್ಲಿದ್ರೆ ಅವ್ರಿಗೂ ಸಹಾಯ ಮಾಡ್ಬಹುದು. (ಜ್ಞಾನೋ. 19:17) ಈ ಎಲ್ಲಾ ವಿಧಗಳಲ್ಲಿ ನಾವು ಕ್ರಿಸ್ತನ ಸಹೋದರರಿಗೆ ಬೆಂಬಲ ಕೊಡ್ತೇವೆ.

14. ಎಫೆಸ 4:15, 16 ಹೇಳೋ ಪ್ರಕಾರ ನಾವು ಯೇಸುವಿನ ಸ್ನೇಹಿತರಾಗೋಕೆ ನಾಲ್ಕನೇದಾಗಿ ಏನು ಮಾಡ್ಬೇಕು?

14 (4) ಯೆಹೋವನ ಸಂಘಟನೆ ಮಾಡಿರೋ ಏರ್ಪಾಡುಗಳನ್ನ ಬೆಂಬಲಿಸ್ಬೇಕು. ನಮ್ಮ ಸಭೆಯ ಶಿರಸ್ಸಾಗಿರೋ ಯೇಸುವಿಗೆ ನಾವು ಇನ್ನೂ ಆಪ್ತ ಸ್ನೇಹಿತರಾಗ್ಬೇಕಂದ್ರೆ, ಆತನು ನಮ್ಮನ್ನು ಪರಿಪಾಲಿಸ್ಲಿಕ್ಕಾಗಿ ಯಾರನ್ನ ನೇಮಿಸಿದ್ದಾನೋ ಅವ್ರಿಗೆ ಸಂಪೂರ್ಣವಾಗಿ ಸಹಕರಿಸ್ಬೇಕು. (ಎಫೆಸ 4:15, 16 ಓದಿ.) ಉದಾಹರಣೆಗೆ, ನಮ್ಮ ರಾಜ್ಯ ಸಭಾಗೃಹಗಳನ್ನು ಚೆನ್ನಾಗಿ ಉಪಯೋಗಿಸ್ಬೇಕಂತ ಒಂದು ಸಭೆಯನ್ನ ಬೇರೆ ಸಭೆಗಳ ಜೊತೆ ಸೇರಿಸಲಾಗಿದೆ ಮತ್ತು ಅದಕ್ಕೆ ತಕ್ಕಂತೆ ಸೇವಾ ಕ್ಷೇತ್ರಗಳನ್ನೂ ಹೊಂದಿಸಲಾಗಿದೆ. ಈ ಏರ್ಪಾಡಿನಿಂದ ಯೆಹೋವನ ಸಂಘಟನೆಗೆ ಬರ್ತಿರೋ ಕಾಣಿಕೆಯನ್ನ ಸರಿಯಾದ ರೀತಿಯಲ್ಲಿ ಉಪಯೋಗಿಸ್ಲಿಕ್ಕೆ ಆಗಿದೆ. ಆದ್ರೆ ಈ ಬದಲಾವಣೆಯಿಂದಾಗಿ ಅನೇಕ ಪ್ರಚಾರಕರು ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಬೇಕಾಯ್ತು. ಈ ನಂಬಿಗಸ್ತ ಪ್ರಚಾರಕರು ಅನೇಕ ವರ್ಷಗಳಿಂದ ಒಂದು ಸಭೆಯಲ್ಲಿದ್ದು ಅಲ್ಲಿನ ಸಹೋದರ ಸಹೋದರಿಯರಿಗೆ ತುಂಬ ಆಪ್ತರಾಗಿದ್ರು. ಆದ್ರೆ ಈಗ ಅವ್ರನ್ನ ಬೇರೆ ಸಭೆಗೆ ಹೋಗ್ಬೇಕಂತ ಹೇಳ್ದಾಗ ಅವ್ರು ಸಂಪೂರ್ಣವಾಗಿ ಸಹಕರಿಸಿದ್ರು. ಈ ಏರ್ಪಾಡಿಗೆ ಅವ್ರು ಈ ರೀತಿ ಸಹಕರಿಸಿದ್ದನ್ನ ನೋಡಿ ಯೇಸುಗೆ ತುಂಬ ಖುಷಿಯಾಗಿರುತ್ತೆ.

ಯೇಸುವಿನ ಶಾಶ್ವತ ಸ್ನೇಹ

15. ಮುಂದೆ ಹೇಗೆ ಯೇಸುವಿನ ಜೊತೆಗಿನ ಸ್ನೇಹ ಇನ್ನೂ ಬಲವಾಗ್ತಾ ಹೋಗುತ್ತೆ?

15 ಪವಿತ್ರಾತ್ಮದಿಂದ ಅಭಿಷಿಕ್ತರಾದವ್ರು ಯೇಸುವಿನ ಜೊತೆ ಶಾಶ್ವತವಾಗಿ ಇರ್ತಾರೆ ಮತ್ತು ದೇವ್ರ ರಾಜ್ಯದಲ್ಲಿ ಆತನೊಂದಿಗೆ ಆಳ್ವಿಕೆ ಮಾಡ್ತಾರೆ. ಅವ್ರು ಯೇಸುವನ್ನ ನೋಡ್ತಾರೆ, ಆತನ ಜೊತೆ ಮಾತಾಡ್ತಾರೆ ಮತ್ತು ಸಮ್ಯವನ್ನೂ ಕಳೀತಾರೆ. (ಯೋಹಾ. 14:2, 3) ಭೂಮಿ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆ ಇರುವವ್ರಿಗೂ ಯೇಸುವಿನ ಪ್ರೀತಿ, ಕಾಳಜಿ ಸಿಗಲಿದೆ. ಅವ್ರು ಯೇಸುವನ್ನು ಕಣ್ಣಾರೆ ನೋಡದಿದ್ರೂ ಯೆಹೋವ ಮತ್ತು ಯೇಸುವಿನಿಂದ ಸಿಕ್ಕಿರೋ ಒಳ್ಳೇ ಜೀವನವನ್ನ ಆನಂದಿಸ್ತಾರೆ. ಇದರಿಂದಾಗಿ ಆತನ ಜೊತೆಗಿನ ಸ್ನೇಹ ಇನ್ನೂ ಬಲವಾಗ್ತಾ ಹೋಗುತ್ತೆ.—ಯೆಶಾ. 9:6, 7.

16. ಯೇಸುವಿನ ಸ್ನೇಹಿತರಾಗಿರೋದ್ರಿಂದ ನಮಗೆ ಯಾವೆಲ್ಲಾ ಆಶೀರ್ವಾದಗಳಿವೆ?

16 ಯೇಸು ನಮಗೆ, ‘ನನ್ನ ಸ್ನೇಹಿತರಾಗಿ’ ಅಂತ ಕೊಟ್ಟಿರೋ ಆಮಂತ್ರಣವನ್ನು ನಾವು ಸ್ವೀಕರಿಸಿದಾಗ ಅನೇಕ ಆಶೀರ್ವಾದಗಳನ್ನ ಪಡ್ಕೊಳ್ತೇವೆ. ಉದಾಹರಣೆಗೆ, ಈಗ ನಮಗೆ ಆತನ ಪ್ರೀತಿ ಮತ್ತು ಬೆಂಬಲ ಸಿಗುತ್ತೆ. ಶಾಶ್ವತವಾಗಿ ಜೀವಿಸೋ ಅವಕಾಶನೂ ನಮಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ಯೆಹೋವನಿಗೆ ಆಪ್ತರಾಗ್ತೇವೆ. ನಿಜವಾಗ್ಲೂ ಯೇಸುವಿನ ಸ್ನೇಹಿತರಾಗೋದು ನಮಗೆ ಸಿಕ್ಕಿರೋ ಗೌರವ ಅಂತನೇ ಹೇಳ್ಬಹುದು.

ಗೀತೆ 84 “ನನಗೆ ಮನಸ್ಸುಂಟು”

^ ಪ್ಯಾರ. 5 ಅಪೊಸ್ತಲರು ಯೇಸುವಿನ ಜೊತೆ ಮಾತಾಡ್ತಾ, ಕೆಲ್ಸ ಮಾಡ್ತಾ ಕೆಲವು ವರ್ಷಗಳಾದ್ರೂ ಸಮ್ಯ ಕಳೆದ್ರು. ಹಾಗಾಗಿ ಯೇಸುಗೆ ಅವ್ರು ಆಪ್ತ ಸ್ನೇಹಿತರಾದ್ರು. ನಾವು ಸಹ ಯೇಸುವಿನ ಶಿಷ್ಯರಾಗ್ಬೇಕೆಂದು ಸ್ವತಃ ಆತನೇ ಬಯಸ್ತಾನೆ. ಆದ್ರೆ ಅಪೊಸ್ತಲರಿಗೆ ಇರದಂಥ ಕೆಲವು ಅಡ್ಡಿ-ತಡೆಗಳು ನಮ್ಗಿವೆ. ಆ ಅಡ್ಡಿ-ತಡೆಗಳು ಯಾವುವು ಮತ್ತು ನಾವು ಹೇಗೆ ಯೇಸುವಿನ ಸ್ನೇಹ ಬೆಳೆಸ್ಕೊಂಡು ಅದನ್ನ ಕಾಪಾಡ್ಕೊಳ್ಳಬಹುದು ಅನ್ನೋದನ್ನ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

^ ಪ್ಯಾರ. 55 ಚಿತ್ರ ವಿವರಣೆ: (1) ಕುಟುಂಬ ಆರಾಧನೆಯಲ್ಲಿ ನಾವು ಯೇಸುವಿನ ಜೀವನ ಮತ್ತು ಆತನು ಮಾಡಿದ ಸೇವೆಯ ಬಗ್ಗೆ ಕಲಿಯಬಹುದು. (2) ಸಭೆಯಲ್ಲಿ ನಮ್ಮ ಸಹೋದರರೊಂದಿಗೆ ಶಾಂತಿಯಿಂದ ಇರೋಕೆ ನಮ್ಮಿಂದಾದಷ್ಟು ಪ್ರಯತ್ನಿಸ್ಬೇಕು. (3) ಸೇವೆಯನ್ನು ನಮ್ಮಿಂದಾದಷ್ಟು ಪೂರ್ಣವಾಗಿ ಮಾಡೋ ಮೂಲಕ ಕ್ರಿಸ್ತನ ಸಹೋದರರಿಗೆ ಬೆಂಬಲ ಕೊಡ್ಬಹುದು. (4) ಒಂದು ಸಭೆಯನ್ನು ಬೇರೆ ಸಭೆಗಳ ಜೊತೆ ಸೇರಿಸ್ದಾಗ ಹಿರಿಯರು ಮಾಡುವ ನಿರ್ಣಯಗಳಿಗೆ ನಾವು ಪೂರ್ಣವಾಗಿ ಸಹಕರಿಸ್ಬಹುದು.