ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 20

ಈಗ “ಉತ್ತರ ರಾಜ” ಯಾರು?

ಈಗ “ಉತ್ತರ ರಾಜ” ಯಾರು?

“ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯಮಾಡರು.”—ದಾನಿ. 11:45.

ಗೀತೆ 116 ಬೆಳಕು ಹೆಚ್ಚುತ್ತದೆ

ಕಿರುನೋಟ *

1-2. ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?

ನಾವು ಕಡೇ ದಿವಸಗಳ ಕೊನೇ ಕ್ಷಣಗಳಲ್ಲಿ ಜೀವಿಸ್ತಿದ್ದೇವೆ ಅನ್ನೋದಕ್ಕೆ ಹಿಂದೆಂದಿಗಿಂತ ಇಂದು ತುಂಬ ಆಧಾರಗಳಿವೆ. ದೇವರ ರಾಜ್ಯವನ್ನು ವಿರೋಧಿಸುವಂಥ ಎಲ್ಲಾ ಸರ್ಕಾರಗಳನ್ನು ಯೆಹೋವ ಮತ್ತು ಯೇಸು ಅತೀ ಶೀಘ್ರದಲ್ಲೇ ಸಂಪೂರ್ಣವಾಗಿ ನಾಶ ಮಾಡಲಿದ್ದಾರೆ. ಅದು ನಡೆಯೋ ಮುಂಚೆ ಉತ್ತರ ರಾಜ ಮತ್ತು ದಕ್ಷಿಣ ರಾಜ ಒಬ್ಬರೊಂದಿಗೊಬ್ರು ಹೋರಾಡುತ್ತಾರೆ ಮತ್ತು ದೇವಜನ್ರ ಮೇಲೂ ದಾಳಿ ಮಾಡ್ತಾರೆ.

2 ಈ ಲೇಖನದಲ್ಲಿ ನಾವು ದಾನಿಯೇಲ 11:40–12:1 ರಲ್ಲಿರುವ ಪ್ರವಾದನೆಯ ಬಗ್ಗೆ ನೋಡಲಿದ್ದೇವೆ. ಈಗ ಉತ್ತರ ರಾಜ ಯಾರು ಅಂತ ತಿಳುಕೊಳ್ಳಲಿದ್ದೇವೆ. ಏನೇ ಆದ್ರೂ ಯೆಹೋವನು ನಮ್ಮನ್ನು ಕಾಪಾಡೇ ಕಾಪಾಡ್ತಾನೆ ಅನ್ನೋ ದೃಢಭರವಸೆಯಿಂದ ಇರಬಹುದು ಅಂತನೂ ಚರ್ಚಿಸಲಿದ್ದೇವೆ.

ಹೊಸ ಉತ್ತರ ರಾಜ ಹುಟ್ಟಿಕೊಳ್ತಾನೆ

3-4. ಈಗ ಉತ್ತರ ರಾಜ ಯಾರು? ವಿವರಿಸಿ.

3 ಸೋವಿಯತ್‌ ಒಕ್ಕೂಟವು 1991 ರಲ್ಲಿ ಬಿದ್ದುಹೋದಾಗ ಅದರ ಆಳ್ವಿಕೆಯ ಕೆಳಗಿದ್ದ ದೇವಜನ್ರಿಗೆ ಸ್ವಲ್ಪ ಸಮ್ಯ ಯೆಹೋವನನ್ನು ಸ್ವತಂತ್ರವಾಗಿ ಆರಾಧಿಸೋಕೆ ಆಯ್ತು. ದಾನಿಯೇಲನು ಈ ಸ್ವಾತಂತ್ರ್ಯವನ್ನು “ಸ್ವಲ್ಪ ಸಹಾಯ” ಅಂತ ವರ್ಣಿಸಿದ್ದಾನೆ. (ದಾನಿ. 11:34) ಅವ್ರು ಸುವಾರ್ತೆ ಸಾರೋಕೆ ಸಾಧ್ಯವಾಯ್ತು. ಅಷ್ಟೇ ಅಲ್ಲ, ಈ ಹಿಂದೆ ಸೋವಿಯತ್‌ ಒಕ್ಕೂಟದ ಹಿಡಿತದಲ್ಲಿದ್ದ ಪ್ರದೇಶಗಳಲ್ಲಿ ಸಾವಿರಾರು ಮಂದಿ ಪ್ರಚಾರಕರಾದ್ರು. ಆದ್ರೆ ಸ್ವಲ್ಪ ಸಮಯದ ನಂತ್ರ ರಷ್ಯಾ ಮತ್ತು ಅದರ ಮಿತ್ರರಾಷ್ಟ್ರಗಳು ಉತ್ತರ ರಾಜ ಆದವು. ನಾವು ಹಿಂದಿನ ಲೇಖನದಲ್ಲಿ ಚರ್ಚಿಸಿದಂತೆ, ಒಂದು ಸರ್ಕಾರ ಮುಂದಿನ ಮೂರು ವಿಷ್ಯಗಳನ್ನು ಮಾಡೋದಾದ್ರೆ ಅದು ಉತ್ತರ ರಾಜ ಅಥ್ವಾ ದಕ್ಷಿಣ ರಾಜ ಆಗುತ್ತೆ. (1) ಆ ಸರ್ಕಾರ ದೇವಜನ್ರಿಗೆ ತೊಂದ್ರೆ ಕೊಡುತ್ತೆ, (2) ಯೆಹೋವ ಮತ್ತು ಆತನ ಜನ್ರ ಶತ್ರು ಅಂತ ಸ್ಪಷ್ಟವಾಗಿ ತೋರಿಸುತ್ತೆ ಮತ್ತು (3) ತನ್ನ ಎದುರಾಳಿ ರಾಜನ ವಿರುದ್ಧ ಹೋರಾಡುತ್ತೆ.

4 ರಷ್ಯಾ ಮತ್ತದರ ಮಿತ್ರರಾಷ್ಟ್ರಗಳೇ ಈಗಿನ ಉತ್ತರ ರಾಜ ಅಂತ ಯಾಕೆ ಹೇಳ್ಬಹುದು ಅನ್ನೋದಕ್ಕೆ ಕಾರಣಗಳನ್ನು ಗಮನಿಸಿ. (1) ಆ ಸರ್ಕಾರಗಳು ಸಾರುವ ಕೆಲಸವನ್ನು ನಿಷೇಧಿಸಿವೆ ಮತ್ತು ತಮ್ಮ ಪ್ರದೇಶಗಳಲ್ಲಿರುವ ನಮ್ಮ ಸಾವಿರಾರು ಸಹೋದರ ಸಹೋದರಿಯರನ್ನು ತುಂಬ ಹಿಂಸಿಸಿವೆ. ಹೀಗೆ ಅವು ದೇವಜನ್ರ ಮೇಲೆ ದಾಳಿ ಮಾಡಿವೆ. (2) ಅವು ಯೆಹೋವನನ್ನು ಮತ್ತು ಆತನ ಜನ್ರನ್ನು ದ್ವೇಷಿಸುತ್ತವೆ ಅನ್ನೋದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ. (3) ದಕ್ಷಿಣ ರಾಜ ಆದ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಗಿಂತ ತಮ್ಮನ್ನು ಹೆಚ್ಚಿಸಿಕೊಳ್ಳೋಕೆ ಅವು ಪ್ರಯತ್ನಿಸುತ್ತಿವೆ. ಹಾಗಾದ್ರೆ ರಷ್ಯಾ ಮತ್ತು ಅದರ ಮಿತ್ರರಾಷ್ಟ್ರಗಳು ಏನೆಲ್ಲಾ ಮಾಡಿವೆ ಮತ್ತು ಇದ್ರಿಂದ ಅವುಗಳೇ ಉತ್ತರ ರಾಜ ಆಗಿವೆ ಅನ್ನೋದು ಹೇಗೆ ರುಜುವಾಗುತ್ತೆ ಅಂತ ನೋಡೋಣ.

ಉತ್ತರ ರಾಜ ಮತ್ತು ದಕ್ಷಿಣ ರಾಜನ ನಡುವಿನ ಪೈಪೋಟಿ ಮುಂದುವರಿಯುತ್ತೆ

5. ಯಾವ ಕಾಲದ ಬಗ್ಗೆ ದಾನಿಯೇಲ 11:40-43 ತಿಳಿಸುತ್ತೆ ಮತ್ತು ಆ ಸಮಯದಲ್ಲಿ ಏನು ನಡೆಯುತ್ತೆ?

5 ದಾನಿಯೇಲ 11:40-43 ಓದಿ. ಈ ವಚನದಲ್ಲಿರುವ ದಾನಿಯೇಲನ ಪ್ರವಾದನೆ ಅಂತ್ಯಕಾಲದಲ್ಲಿ ಏನು ನಡೆಯುತ್ತೆ ಅನ್ನೋದ್ರ ಕಿರುನೋಟ ಕೊಡುತ್ತೆ. ಉತ್ತರ ರಾಜ ಮತ್ತು ದಕ್ಷಿಣ ರಾಜ ಪರಸ್ಪರ ಹೇಗೆ ಹೋರಾಡ್ತಾರೆ ಅಂತ ಅದು ವಿವರಿಸುತ್ತೆ. ದಾನಿಯೇಲ ತಿಳಿಸಿದಂತೆ ಅಂತ್ಯಕಾಲದಲ್ಲಿ ದಕ್ಷಿಣ ರಾಜನು ಉತ್ತರ ರಾಜನ ಮೇಲೆ “ಬೀಳುವನು” ಅಥ್ವಾ ಅವ್ರಿಬ್ಬರು ಒಬ್ಬರಿಗೊಬ್ರು ಗುದ್ದಾಡುತ್ತಾರೆ.—ದಾನಿ. 11:40.

6. ಇಬ್ಬರೂ ರಾಜರು ಒಬ್ಬರಿಗೊಬ್ರು ಗುದ್ದಾಡ್ತಿದ್ದಾರೆ ಅನ್ನೋದಕ್ಕೆ ಯಾವ ಆಧಾರಗಳಿವೆ?

6 ವಿಶ್ವದಲ್ಲಿ ತಮ್ಮ ಸರ್ಕಾರನೇ ಮುಂಚೂಣಿಯಲ್ಲಿ ಇರಬೇಕು ಅನ್ನೋ ಪ್ರಯತ್ನದಲ್ಲಿ ಉತ್ತರ ರಾಜ ಮತ್ತು ದಕ್ಷಿಣ ರಾಜರ ನಡುವಿನ ಪೈಪೋಟಿ ಮುಂದುವರೆದಿದೆ. ಉದಾಹರಣೆಗೆ, ಎರಡನೇ ಮಹಾಯುದ್ಧ ನಡೆದ ಮೇಲೆ ಯುರೋಪ್‌ನ ಅತೀ ಹೆಚ್ಚು ಭಾಗ ಸೋವಿಯತ್‌ ಒಕ್ಕೂಟ ಮತ್ತು ಅದರ ಮಿತ್ರರಾಷ್ಟ್ರಗಳ ನಿಯಂತ್ರಣದ ಕೆಳಗೆ ಬಂತು. ಇದ್ರಿಂದಾಗಿ ದಕ್ಷಿಣ ರಾಜನು ಬೇರೆ ರಾಷ್ಟ್ರಗಳ ಜೊತೆ ಸೇರಿ ಒಂದು ಅಂತಾರಾಷ್ಟ್ರೀಯ ಮಿಲಿಟರಿ ಸಂಘಟನೆಯನ್ನು ರಚಿಸಿದನು. ಅದರ ಹೆಸ್ರು ನೇಟೊ (NATO-ನಾರ್ತ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಷನ್‌). ಉತ್ತರ ರಾಜ ಮತ್ತು ದಕ್ಷಿಣ ರಾಜ ಇಬ್ರೂ, ಯುದ್ಧಕ್ಕಾಗಿ ಬಳಸುವ ದುಬಾರಿ ಶಸ್ತ್ರಾಸ್ತ್ರಗಳನ್ನು ತಯಾರಿಸುವುದರಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಾರೆ. ಉತ್ತರ ರಾಜನು ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್‌ ಅಮೆರಿಕದಲ್ಲಿ ನಡೆದ ಯುದ್ಧಗಳಲ್ಲಿ ದಕ್ಷಿಣ ರಾಜನ ಶತ್ರುಗಳನ್ನು ಬೆಂಬಲಿಸುವ ಮೂಲಕ ದಕ್ಷಿಣ ರಾಜನ ವಿರುದ್ಧ ಹೋರಾಡಿದನು. ಇತ್ತೀಚಿನ ವರ್ಷಗಳಲ್ಲಿ ರಷ್ಯಾ ಮತ್ತದರ ಮಿತ್ರರಾಷ್ಟ್ರಗಳು ವಿಶ್ವದಲ್ಲಿ ಬಲಿಷ್ಠ ರಾಷ್ಟ್ರಗಳಾಗಿವೆ. ಅಷ್ಟೇ ಅಲ್ಲ, ಅವು ತಮ್ಮ ವೈರಿ ದಕ್ಷಿಣ ರಾಜನ ವಿರುದ್ಧ ಸೈಬರ್‌ ಸಮರವನ್ನೂ ನಡೆಸುತ್ತಿವೆ. ತಮ್ಮ ದೇಶದ ಆರ್ಥಿಕ ವ್ಯವಸ್ಥೆ, ರಾಜಕೀಯ ವ್ಯವಸ್ಥೆಯನ್ನು ಹಾನಿ ಮಾಡುವಂಥ ಕಂಪ್ಯೂಟರ್‌ ಪ್ರೋಗ್ರ್ಯಾಮ್‌ಗಳನ್ನು ತಯಾರಿಸುತ್ತಿವೆ ಅಂತ ಈ ಇಬ್ಬರೂ ರಾಜರು ಒಬ್ಬರ ಮೇಲೊಬ್ಬರು ಆರೋಪ ಹೊರಿಸಿದ್ದಾರೆ. ಅಷ್ಟೇ ಅಲ್ಲ, ದಾನಿಯೇಲನು ತಿಳಿಸಿದಂತೆ ಉತ್ತರ ರಾಜನು ದೇವಜನ್ರ ಮೇಲೆ ಆಕ್ರಮಣ ಮಾಡೋದನ್ನು ಮುಂದುವರಿಸಿದ್ದಾನೆ.—ದಾನಿ. 11:41.

ಉತ್ತರ ರಾಜ ‘ಅಂದಚಂದದ ದೇಶಕ್ಕೆ ನುಗ್ಗುವನು’

7. “ಅಂದಚಂದದ ದೇಶ” ಅಂದ್ರೆ ಏನು?

7 ಉತ್ತರ ರಾಜ ‘ಅಂದಚಂದದ ದೇಶಕ್ಕೆ ನುಗ್ಗುವನು’ ಅಂತ ದಾನಿಯೇಲ 11:41 ತಿಳಿಸುತ್ತೆ. ಆ ದೇಶ ಯಾವುದು? ಹಿಂದಿನ ಕಾಲದಲ್ಲಿ ಆ ದೇಶ ಇಸ್ರಾಯೇಲ್‌ ಆಗಿತ್ತು. ಯಾಕಂದ್ರೆ ಅದನ್ನು “ಸಕಲದೇಶ ಶಿರೋಮಣಿ” ಅಥ್ವಾ ಎಲ್ಲಾ ದೇಶಗಳಿಗಿಂತ ತುಂಬ ಸುಂದರ ದೇಶ ಎಂದು ಪರಿಗಣಿಸಲಾಗುತ್ತಿತ್ತು. (ಯೆಹೆ. 20:6) ಆ ದೇಶವನ್ನು ಹೆಚ್ಚು ಅಂದವಾಗಿಸಿದ ವಿಷ್ಯವೇನಂದ್ರೆ ಅಲ್ಲಿನ ಜನ್ರು ಯೆಹೋವನ ಆರಾಧನೆ ಮಾಡ್ತಿದ್ರು. ಆದ್ರೆ ಕ್ರಿಸ್ತ ಶಕ 33 ರ ಪಂಚಾಶತ್ತಮದಿಂದ ಆ ಅಂದಚಂದದ ದೇಶ ಒಂದು ನಿರ್ದಿಷ್ಟ ಸ್ಥಳವಲ್ಲ. ಯಾಕಂದ್ರೆ ಯೆಹೋವನನ್ನು ಆರಾಧಿಸುವ ಜನ್ರು ಭೂಮಿಯ ಎಲ್ಲಾ ಕಡೆ ಇದ್ದಾರೆ. ಇಂದು “ಅಂದಚಂದದ ದೇಶ” ಯೆಹೋವನ ಜನ್ರು ಮಾಡುತ್ತಿರೋ ಆರಾಧನಾ ಚಟುವಟಿಕೆಗಳನ್ನು ಸೂಚಿಸುತ್ತೆ. ಆ ಚಟುವಟಿಕೆಗಳು ಯಾವುವೆಂದ್ರೆ ಕೂಟಗಳಿಗಾಗಿ ಕೂಡಿಬರೋದು, ಸುವಾರ್ತೆ ಸಾರುವುದು ಮುಂತಾದ ಚಟುವಟಿಕೆಗಳೇ ಆಗಿವೆ.

8. ಉತ್ತರ ರಾಜನು ಹೇಗೆ ‘ಅಂದಚಂದದ ದೇಶಕ್ಕೆ’ ನುಗ್ಗಿದ್ದಾನೆ?

8 ಅಂತ್ಯಕಾಲದ ಸಮಯದಲ್ಲಿ ಉತ್ತರ ರಾಜನು ‘ಅಂದಚಂದದ ದೇಶಕ್ಕೆ’ ಪುನಃ ಪುನಃ ನುಗ್ಗಿದ್ದಾನೆ. ಉದಾಹರಣೆಗೆ, ನಾಜಿ ಜರ್ಮನಿ ಉತ್ತರ ರಾಜನಾಗಿದ್ದಾಗ, ಎರಡನೇ ಮಹಾಯುದ್ಧದಲ್ಲಿ ದೇವಜನ್ರಿಗೆ ಹಿಂಸೆ ಕೊಡುವ ಮೂಲಕ ಮತ್ತು ಅವ್ರನ್ನು ಕೊಂದುಹಾಕುವ ಮೂಲಕ ‘ಅಂದಚಂದದ ದೇಶಕ್ಕೆ’ ನುಗ್ಗಿತು. ಎರಡನೇ ಮಹಾಯುದ್ಧದ ನಂತ್ರ ಸೋವಿಯತ್‌ ಒಕ್ಕೂಟವು ಉತ್ತರ ರಾಜನಾದಾಗ ದೇವಜನ್ರನ್ನು ಹಿಂಸಿಸಿತು ಮತ್ತು ಅವ್ರು ತಮ್ಮ ಮನೆಗಳನ್ನು ಬಿಟ್ಟು ತುಂಬ ದೂರದ ಪ್ರದೇಶಗಳಿಗೆ ಹೋಗುವಂತೆ ಗಡೀಪಾರು ಮಾಡಿತು. ಹೀಗೆ ಅದು ಸಹ ‘ಅಂದಚಂದದ ದೇಶಕ್ಕೆ’ ನುಗ್ಗಿತು.

9. ಇತ್ತೀಚಿನ ವರ್ಷಗಳಲ್ಲಿ ರಷ್ಯಾ ಮತ್ತು ಅದರ ಮಿತ್ರರಾಷ್ಟ್ರಗಳು ‘ಅಂದಚಂದದ ದೇಶದೊಳಕ್ಕೆ’ ಹೇಗೆ ನುಗ್ಗಿವೆ?

9 ಇತ್ತೀಚಿನ ವರ್ಷಗಳಲ್ಲಿ ರಷ್ಯಾ ಮತ್ತು ಅದರ ಮಿತ್ರರಾಷ್ಟ್ರಗಳು ‘ಅಂದಚಂದದ ದೇಶಕ್ಕೆ’ ನುಗ್ಗಿವೆ. ಹೇಗೆ? 2017 ರಲ್ಲಿ ರಷ್ಯಾ ಸರ್ಕಾರವು ಯೆಹೋವನ ಜನ್ರ ಕೆಲಸವನ್ನು ನಿಷೇಧಿಸಿತು ಮತ್ತು ನಮ್ಮ ಕೆಲವು ಸಹೋದರ ಸಹೋದರಿಯರನ್ನು ಜೈಲಿಗೆ ಹಾಕಿತು. ನೂತನ ಲೋಕ ಭಾಷಾಂತರ ಬೈಬಲ್‌ ಹಾಗೂ ನಮ್ಮ ಇತರ ಪ್ರಕಾಶನಗಳನ್ನು ಅದು ನಿಷೇಧಿಸಿತು. ಅಷ್ಟೇ ಅಲ್ಲ, ರಷ್ಯಾದ ಶಾಖಾ ಕಛೇರಿ, ರಾಜ್ಯ ಸಭಾಗೃಹಗಳು ಮತ್ತು ಸಮ್ಮೇಳನ ಹಾಲ್‌ಗಳನ್ನು ಅದು ಮುಟ್ಟುಗೋಲು ಹಾಕಿತು. ಇದೆಲ್ಲಾ ನಡೆದ ನಂತ್ರ 2018 ರಲ್ಲಿ, ಆಡಳಿತ ಮಂಡಲಿಯು ರಷ್ಯಾ ಮತ್ತು ಅದರ ಮಿತ್ರರಾಷ್ಟ್ರಗಳು ಉತ್ತರ ರಾಜ ಆಗಿವೆ ಎಂದು ಗುರುತಿಸಿತು. ಯೆಹೋವನ ಜನ್ರನ್ನು ಇಷ್ಟೊಂದು ಕ್ರೂರವಾಗಿ ಹಿಂಸಿಸಿದ್ರೂ ಅವ್ರು ಯಾವ್ದೇ ಸರ್ಕಾರದ ವಿರುದ್ಧ ಹೋರಾಡೋದಾಗಲಿ ಮುಷ್ಕರ ಮಾಡೋದಾಗಲಿ, ಆ ಸರ್ಕಾರಗಳನ್ನು ಬದಲಾಯಿಸೋಕೆ ಪ್ರಯತ್ನಿಸೋದಾಗಲಿ ಮಾಡಿಲ್ಲ. ಬದಲಿಗೆ ನಾವು “ಉನ್ನತ ಸ್ಥಾನದಲ್ಲಿರುವ” ಅಧಿಕಾರಿಗಳಿಗಾಗಿ ಪ್ರಾರ್ಥನೆ ಮಾಡಬೇಕು ಅಂತ ಬೈಬಲ್‌ ಕೊಡುವ ಸಲಹೆಯನ್ನು ಪಾಲಿಸುತ್ತೇವೆ, ನಮ್ಮ ಆರಾಧನೆಗೆ ಅಡ್ಡಪಡಿಸುವ ನಿರ್ಣಯಗಳನ್ನು ಅಂಥ ಸರ್ಕಾರಗಳು ಮಾಡ್ವಾಗಲೂ ನಾವಿದನ್ನು ಮಾಡ್ತೀವಿ.—1 ತಿಮೊ. 2:1, 2.

ಉತ್ತರ ರಾಜ ದಕ್ಷಿಣ ರಾಜನನ್ನು ನಾಶಮಾಡ್ತಾನಾ?

10. ಉತ್ತರ ರಾಜ ದಕ್ಷಿಣ ರಾಜನನ್ನು ನಾಶಮಾಡ್ತಾನಾ? ವಿವರಿಸಿ.

10 ದಾನಿಯೇಲ 11:40-45 ರಲ್ಲಿರೋ ಪ್ರವಾದನೆ ಮುಖ್ಯವಾಗಿ ಉತ್ತರ ರಾಜನ ಚಟುವಟಿಕೆಗಳ ಬಗ್ಗೆ ತಿಳಿಸುತ್ತೆ. ಇದರರ್ಥ ಅವನು ದಕ್ಷಿಣ ರಾಜನನ್ನು ಸೋಲಿಸುತ್ತಾನೆ ಅಂತನಾ? ಇಲ್ಲ. ಯಾಕಂದ್ರೆ, ಯೆಹೋವ ಮತ್ತು ಯೇಸು ಅರ್ಮಗೆದೋನ್‌ ಯುದ್ಧದಲ್ಲಿ ಎಲ್ಲಾ ಮಾನವ ಸರ್ಕಾರಗಳನ್ನು ನಾಶ ಮಾಡ್ವಾಗ ದಕ್ಷಿಣ ರಾಜ ಇನ್ನೂ ಅಸ್ತಿತ್ವದಲ್ಲಿ ಇರ್ತಾನೆ. (ಪ್ರಕ. 19:20) ಯಾಕೆ ಹಾಗೆ ಹೇಳ್ಬಹುದು? ದಾನಿಯೇಲ ಪುಸ್ತಕ ಮತ್ತು ಪ್ರಕಟನೆ ಪುಸ್ತಕದಲ್ಲಿರುವ ಪ್ರವಾದನೆಗಳನ್ನು ನೋಡಿದ್ರೆ ನಮ್ಗೆ ಗೊತ್ತಾಗುತ್ತೆ.

ಗುಂಡು ಬಂಡೆಗೆ ಹೋಲಿಸಲಾಗಿರುವ ದೇವರ ರಾಜ್ಯವು ಬೃಹತ್‌ ಪ್ರತಿಮೆಗೆ ಹೋಲಿಸಲಾಗಿರುವ ಮಾನವ ಆಳ್ವಿಕೆಯನ್ನು ಅರ್ಮಗೆದೋನ್‌ ಯುದ್ಧದಲ್ಲಿ ಸರ್ವನಾಶ ಮಾಡುತ್ತೆ (ಪ್ಯಾರ 11 ನೋಡಿ)

11. ದಾನಿಯೇಲ 2:43-45 ರಲ್ಲಿರೋ ಪ್ರವಾದನೆಯಿಂದ ನಾವೇನು ಅರ್ಥಮಾಡಿಕೊಳ್ಳಬಹುದು? (ಮುಖಪುಟ ಚಿತ್ರ ನೋಡಿ.)

11 ದಾನಿಯೇಲ 2:43-45 ಓದಿ. ಪ್ರವಾದಿ ದಾನಿಯೇಲನು ಒಂದು ಬೃಹತ್‌ ಪ್ರತಿಮೆಯ ಬಗ್ಗೆ ವಿವರಿಸಿದ್ದಾನೆ. ಅದರ ಅಂಗಗಳು ಬೇರೆ ಬೇರೆ ಲೋಹಗಳಿಂದ ಮಾಡಿದ್ದಾಗಿದ್ದವು. ಪ್ರತಿಯೊಂದು ಅಂಗವೂ ದೇವಜನ್ರಿದ್ದ ಪ್ರದೇಶಗಳನ್ನು ಆಳಿದ ಬೇರೆ ಬೇರೆ ಸರ್ಕಾರವನ್ನು ಸೂಚಿಸುತ್ತವೆ. ಆ ಸರ್ಕಾರಗಳು ಬೇರೆ ಬೇರೆ ಸಮ್ಯದಲ್ಲಿ ಆಳ್ವಿಕೆ ಮಾಡಿವೆ. ಆ ಪ್ರತಿಮೆಯ ಪಾದಗಳು ಕಬ್ಬಿಣ ಮತ್ತು ಜೇಡಿಮಣ್ಣಿನಿಂದ ಮಾಡಿದ್ದಾಗಿದ್ದವು. ಅವು ಕೊನೇ ಸರ್ಕಾರವಾದ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಯನ್ನು ಸೂಚಿಸುತ್ತಿದ್ದವು. ಹಾಗಾಗಿ ಆ ಪ್ರವಾದನೆಯ ಪ್ರಕಾರ ದೇವರ ರಾಜ್ಯವು ಮಾನವ ಸರ್ಕಾರಗಳನ್ನು ನಾಶ ಮಾಡುವ ಸಮ್ಯದಲ್ಲಿ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿ ಇನ್ನೂ ಆಳ್ವಿಕೆ ಮಾಡುತ್ತಿರುತ್ತದೆ.

12. ಕಾಡುಮೃಗದ ಏಳನೇ ತಲೆಯು ಏನನ್ನು ಸೂಚಿಸುತ್ತದೆ ಮತ್ತು ಇದು ಯಾಕೆ ಗಮನಾರ್ಹ ವಿಷ್ಯವಾಗಿದೆ?

12 ಯೆಹೋವನ ಜನ್ರ ಚಟುವಟಿಕೆಗಳಲ್ಲಿ ಮೂಗು ತೂರಿಸಿದ ಸರ್ಕಾರಗಳ ಬಗ್ಗೆ ಅಪೊಸ್ತಲ ಯೋಹಾನ ಸಹ ವರ್ಣಿಸಿದ್ದಾನೆ. ಯೋಹಾನ ತಿಳಿಸಿದ ಪ್ರವಾದನೆಯಲ್ಲಿ ಆ ಸರ್ಕಾರಗಳು ಏಳು ತಲೆಗಳಿದ್ದ ಕಾಡುಮೃಗವನ್ನು ಸೂಚಿಸುತ್ತವೆ. ಆ ಕಾಡುಮೃಗದ ಏಳನೇ ತಲೆ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಯನ್ನು ಪ್ರತಿನಿಧಿಸುತ್ತೆ. ಇದು ಗಮನಾರ್ಹ ವಿಷ್ಯವಾಗಿದೆ. ಯಾಕಂದ್ರೆ ಈ ತಲೆಯ ನಂತ್ರ ಇನ್ನೊಂದು ತಲೆ ಹುಟ್ಟಿಕೊಳ್ಳಲ್ಲ. ಆ ಏಳನೇ ತಲೆ ಆಳ್ವಿಕೆ ಮಾಡುವಾಗಲೇ ಕ್ರಿಸ್ತನು ಮತ್ತು ಸ್ವರ್ಗದಲ್ಲಿರುವ ಆತನ ಯುದ್ಧಪಡೆಯು ಆ ತಲೆಯ ಜೊತೆಗೆ ಇಡೀ ಕಾಡುಮೃಗವನ್ನೇ ನಾಶಮಾಡುತ್ತವೆ. *ಪ್ರಕ. 13:1, 2; 17:13, 14.

ಉತ್ತರ ರಾಜ ಮುಂದೆ ಏನು ಮಾಡಲಿದ್ದಾನೆ?

13-14. (ಎ) “ಮಾಗೋಗ್‌ ದೇಶದ ಗೋಗ” ಯಾರು? (ಬಿ) ಅವನು ಯಾಕೆ ದೇವಜನ್ರ ಮೇಲೆ ದಾಳಿ ಮಾಡೋಕೆ ಮುಂದಾಗುತ್ತಾನೆ?

13 ಉತ್ತರ ರಾಜ ಮತ್ತು ದಕ್ಷಿಣ ರಾಜ ನಾಶವಾಗೋ ಮುಂಚೆ ಏನೆಲ್ಲಾ ವಿಷ್ಯಗಳು ನಡೀಬಹುದು ಅನ್ನೋದನ್ನು ನಾವು ಯೆಹೆಜ್ಕೇಲನ ಪ್ರವಾದನೆಯಲ್ಲಿರೋ ವಿಷ್ಯಗಳಿಂದ ತಿಳ್ಕೋಬಹುದು. ಯೆಹೆಜ್ಕೇಲ 38:10-23; ದಾನಿಯೇಲ 2:43-45; 11:44–12:1 ಮತ್ತು ಪ್ರಕಟನೆ 16:13-16, 21 ರಲ್ಲಿರುವ ಪ್ರವಾದನೆಗಳು ಒಂದೇ ಸಮ್ಯ ಮತ್ತು ಘಟನೆ ಬಗ್ಗೆ ಮಾತಾಡುತ್ತಿವೆ ಅಂತ ಅನ್ಸುತ್ತೆ. ಒಂದುವೇಳೆ, ಅದು ನಿಜ ಆಗೋದಾದ್ರೆ ಮುಂದೆ ಈ ಕೆಳಗಿನ ವಿಷ್ಯಗಳು ಖಂಡಿತ ನಡೆಯುತ್ತವೆ.

14 ಮಹಾ ಸಂಕಟ ಶುರುವಾದ ನಂತ್ರ ಯಾವುದೋ ಒಂದು ಹಂತದಲ್ಲಿ ‘ಇಡೀ ನಿವಾಸಿತ ಭೂಮಿಯ ರಾಜರು’ ಒಟ್ಟುಗೂಡಿ ಒಂದು ಗುಂಪನ್ನು ಮಾಡಿಕೊಳ್ಳುತ್ತಾರೆ. (ಪ್ರಕ. 16:13, 14; 19:19) ಈ ಗುಂಪನ್ನು ಬೈಬಲ್‌ “ಮಾಗೋಗ್‌ ದೇಶದ ಗೋಗ” ಅಂತ ಕರೆದಿದೆ. (ಯೆಹೆ. 38:2) ಈ ಜನಾಂಗಗಳ ಗುಂಪು ದೇವಜನ್ರ ಮೇಲೆ ದಾಳಿ ಮಾಡುತ್ತವೆ ಮತ್ತು ಅವ್ರನ್ನು ಸಂಪೂರ್ಣವಾಗಿ ನಾಶಮಾಡಲು ಪ್ರಯತ್ನಿಸುತ್ತವೆ. ಯಾಕೆ ಆ ಗುಂಪು ದೇವಜನ್ರ ಮೇಲೆ ದಾಳಿ ಮಾಡುತ್ತೆ? ಈ ಸಮಯದ ಬಗ್ಗೆ ಇರುವ ಪ್ರವಾದನೆಯನ್ನು ವಿವರಿಸುತ್ತಾ ಅಪೊಸ್ತಲ ಯೋಹಾನನು ದೇವರ ವೈರಿಗಳ ಮೇಲೆ ದೊಡ್ಡ ದೊಡ್ಡ ಆಲಿಕಲ್ಲುಗಳು ಬೀಳುವವು ಎಂದು ಹೇಳಿದ್ದಾನೆ. ಈ ಆಲಿಕಲ್ಲುಗಳು ಯೆಹೋವನ ಜನ್ರು ಸಾರುವ ಪ್ರಬಲವಾದ ನ್ಯಾಯತೀರ್ಪಿನ ಸಂದೇಶವನ್ನು ಸೂಚಿಸುತ್ತವೆ. ಬಹುಶಃ ಈ ಸಂದೇಶವನ್ನು ಕೇಳಿ ಮಾಗೋಗ್‌ ದೇಶದ ಗೋಗ ಅಥ್ವಾ ಜನಾಂಗಗಳ ಗುಂಪು ದೇವಜನ್ರ ಮೇಲೆ ರೊಚ್ಚಿಗೆದ್ದು ಅವ್ರನ್ನು ಹೇಳಹೆಸರಿಲ್ಲದಂತೆ ನಾಶಮಾಡೋಕೆ ಮುಂದಾಗಬಹುದು.—ಪ್ರಕ. 16:21.

15-16. (ಎ) ದಾನಿಯೇಲ 11:44, 45 ಯಾವ ಘಟನೆಗಳನ್ನು ವಿವರಿಸುತ್ತಿರಬಹುದು? (ಬಿ) ಉತ್ತರ ರಾಜ ಮತ್ತು ಮಾಗೋಗಿನ ಗೋಗನ ಉಳಿದ ಭಾಗಕ್ಕೆ ಏನಾಗುತ್ತೆ?

15 ಈ ಪ್ರಬಲವಾದ ಸಂದೇಶ ಮತ್ತು ದೇವರ ವೈರಿಗಳು ಮಾಡುವ ಕೊನೆಯ ದಾಳಿಯೇ ದಾನಿಯೇಲ 11:44, 45 ರಲ್ಲಿರುವ ಘಟನೆಗಳನ್ನು ಸೂಚಿಸುತ್ತಿರಬಹುದು. (ಓದಿ.) ಅಲ್ಲಿ ದಾನಿಯೇಲನು “ಮೂಡಲಿಂದಲೂ [ಪೂರ್ವ] ಬಡಗಲಿಂದಲೂ [ಉತ್ತರ] ಬರುವ ಸುದ್ದಿ” ಉತ್ತರ ರಾಜನನ್ನು “ಬಾಧಿಸುವುದು” ಮತ್ತು ‘ಅವನು ರೋಷಗೊಳ್ಳುತ್ತಾನೆ’ ಅಥ್ವಾ ಕೋಪೋದ್ರಿಕ್ತನಾಗುತ್ತಾನೆ ಅಂತ ಹೇಳಿದ್ದಾನೆ. ಉತ್ತರ ರಾಜನು “ಬಹು ಜನರನ್ನು ಧ್ವಂಸಿಸಿ ನಿರ್ನಾಮಮಾಡುವದಕ್ಕೆ ಹೊರಡುವನು.” ಇಲ್ಲಿ ತಿಳಿಸಿರೋ ‘ಬಹು ಜನರು’ ಬಹುಶಃ ಯೆಹೋವನ ಜನರಾಗಿರಬಹುದು. * ದೇವಜನ್ರ ಮೇಲೆ ಕೊನೇದಾಗಿ ನಡೆಯುವ ದೌರ್ಜನ್ಯದ ಬಗ್ಗೆ ದಾನಿಯೇಲ ಇಲ್ಲಿ ವಿವರಿಸುತ್ತಿರಬಹುದು.

16 ಉತ್ತರ ರಾಜ ಮತ್ತು ಉಳಿದ ಎಲ್ಲಾ ಮಾನವ ಸರ್ಕಾರಗಳು ದೇವಜನ್ರ ಮೇಲೆ ದಾಳಿ ಮಾಡೋ ಮೂಲಕ ಸರ್ವಶಕ್ತ ದೇವರನ್ನು ಕೆಣಕಿ ಕೋಪ ಬರಿಸ್ತಾರೆ. ಆಗ ಅರ್ಮಗೆದೋನ್‌ ಯುದ್ಧ ಪ್ರಾರಂಭವಾಗುತ್ತೆ. (ಪ್ರಕ. 16:14, 16) ಆ ಸಮಯದಲ್ಲಿ ಮಾಗೋಗಿನ ಗೋಗನಂತೆ ಕೆಲ್ಸ ಮಾಡುವ ಉತ್ತರ ರಾಜ ಮತ್ತು ಇನ್ನುಳಿದ ದೇಶಗಳು ಸಂಪೂರ್ಣವಾಗಿ ನಾಶವಾಗುತ್ತವೆ ಮತ್ತು ಯಾರೂ ಅವರಿಗೆ “ಸಹಾಯ” ಮಾಡಲ್ಲ.—ದಾನಿ. 11:45.

ಅರ್ಮಗೆದೋನ್‌ ಯುದ್ಧದಲ್ಲಿ ಯೇಸು ಕ್ರಿಸ್ತ ಮತ್ತು ಸ್ವರ್ಗದಲ್ಲಿರುವ ಆತನ ಯುದ್ಧಪಡೆ ಸೈತಾನನ ದುಷ್ಟ ಲೋಕವನ್ನು ನಿರ್ನಾಮ ಮಾಡಿ ದೇವ ಜನ್ರನ್ನು ಕಾಪಾಡುತ್ತಾರೆ (ಪ್ಯಾರ 17 ನೋಡಿ)

17. (ಎ) ದಾನಿಯೇಲ 12:1 ರಲ್ಲಿ ತಿಳಿಸಿರುವ “ಮಹಾ ಪಾಲಕನಾದ” ಮೀಕಾಯೇಲ ಯಾರು? (ಬಿ) ಆತನು ಏನು ಮಾಡ್ತಾನೆ?

17 ದಾನಿಯೇಲನು ತಿಳಿಸಿರುವ ಆ ಪ್ರವಾದನೆಯ ನಂತರದ ವಚನವು ಉತ್ತರ ರಾಜ ಮತ್ತದರ ಮಿತ್ರರಾಷ್ಟ್ರಗಳು ನಾಶವಾಗುವುದ್ರ ಬಗ್ಗೆ ಹಾಗೂ ನಾವು ಹೇಗೆ ಪಾರಾಗುತ್ತೇವೆ ಅನ್ನೋದ್ರ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ಕೊಡುತ್ತೆ. (ದಾನಿಯೇಲ 12:1 ಓದಿ.) ಈ ವಚನದ ಅರ್ಥವೇನು? ಇಲ್ಲಿ ತಿಳಿಸಿರುವ ಮೀಕಾಯೇಲನು ನಮ್ಮನ್ನು ಆಳುತ್ತಿರುವ ಯೇಸು ಕ್ರಿಸ್ತನಾಗಿದ್ದಾನೆ. ಆತನು 1914 ರಲ್ಲಿ ಸ್ವರ್ಗದಲ್ಲಿ ದೇವರ ರಾಜ್ಯ ಸ್ಥಾಪನೆ ಆದಾಗಿಂದ ದೇವಜನ್ರ ‘ಪಕ್ಷದಲ್ಲಿ’ ಇದ್ದಾನೆ. ಇನ್ನು ಸ್ವಲ್ಪದರಲ್ಲೇ ಆತನು “ಏಳುವನು” ಅಂದ್ರೆ ಅರ್ಮಗೆದೋನ್‌ ಯುದ್ಧದಲ್ಲಿ ತನ್ನ ಶತ್ರುಗಳನ್ನು ನಾಶ ಮಾಡಲಿರುವನು. ಈ ಯುದ್ಧವನ್ನು ದಾನಿಯೇಲನು ಇತಿಹಾಸದಲ್ಲಿ ಎಂದೂ ಕಂಡುಕೇಳರಿಯದಂಥ “ಸಂಕಟ” ಅಂತ ವಿವರಿಸಿದ್ದಾನೆ. ಪ್ರವಾದಿ ಯೋಹಾನನು ಪ್ರಕಟನೆ ಪುಸ್ತಕದಲ್ಲಿ ಈ ಯುದ್ಧಕ್ಕೆ ನಡೆಸುವ ಸಮಯವನ್ನು “ಮಹಾ ಸಂಕಟ” ಅಂತ ಕರೆದಿದ್ದಾನೆ.—ಪ್ರಕ. 6:2; 7:14.

‘ಜೀವಬಾಧ್ಯರ ಪಟ್ಟಿಯಲ್ಲಿ’ ನಿಮ್ಮ ಹೆಸ್ರು!

18. ಮುಂದೇನಾಗುತ್ತೋ ಅದ್ರ ಬಗ್ಗೆ ಭಯಪಡೋ ಅವಶ್ಯಕತೆ ಇಲ್ಲ ಯಾಕೆ?

18 ಯೆಹೋವ ಮತ್ತು ಯೇಸು ಮಹಾ ಸಂಕಟದ ಸಮಯದಲ್ಲಿ ತಮ್ಮನ್ನು ನಂಬಿದವರನ್ನು ಖಂಡಿತ ಕಾಪಾಡ್ತಾರೆ ಅಂತ ದಾನಿಯೇಲ ಮತ್ತು ಯೋಹಾನ ಇಬ್ರೂ ಹೇಳಿದ್ದಾರೆ. ಹಾಗಾಗಿ ಮುಂದೇನಾಗುತ್ತೋ ಅದ್ರ ಬಗ್ಗೆ ನಾವು ಭಯಪಡೋ ಅವಶ್ಯಕತೆ ಇಲ್ಲ. “ಯಾರ ಹೆಸರುಗಳು [ಜೀವಬಾಧ್ಯರ] ಪಟ್ಟಿಯಲ್ಲಿ” ಇವೆಯೋ ಅವರೆಲ್ಲರೂ ಪಾರಾಗುತ್ತಾರೆಂದು ದಾನಿಯೇಲ ಹೇಳಿದ್ದಾನೆ. (ದಾನಿ. 12:1) ನಮ್ಮ ಹೆಸರು ಆ ಪಟ್ಟಿಯಲ್ಲಿ ಇರಬೇಕಂದ್ರೆ ನಾವೇನು ಮಾಡ್ಬೇಕು? ದೇವರ ಕುರಿಮರಿಯಾಗಿರುವ ಯೇಸುವಿನಲ್ಲಿ ನಮಗೆ ನಂಬಿಕೆ ಇದೆ ಅಂತ ತೋರಿಸಿಕೊಡಬೇಕು. (ಯೋಹಾ. 1:29) ನಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಳ್ಳಬೇಕು. (1 ಪೇತ್ರ 3:21) ಮತ್ತು ಬೇರೆಯವ್ರಿಗೆ ಯೆಹೋವನ ಬಗ್ಗೆ ಕಲಿಸೋ ಮೂಲಕ ದೇವರ ರಾಜ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲ ಕೊಡ್ಬೇಕು.

19. ಈಗ ನಾವೇನು ಮಾಡ್ಬೇಕು ಮತ್ತು ಯಾಕೆ?

19 ಯೆಹೋವನ ಮೇಲೆ ಮತ್ತು ಆತನ ಸಂಘಟನೆಯ ಮೇಲೆ ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳೋಕೆ ಇದೇ ಸೂಕ್ತ ಸಮಯ. ನಾವೀಗಲೇ ದೇವರ ರಾಜ್ಯವನ್ನು ಸಂಪೂರ್ಣವಾಗಿ ಬೆಂಬಲಿಸಬೇಕು. ಹೀಗೆ ಮಾಡೋದಾದ್ರೆ ದೇವರ ರಾಜ್ಯ, ಉತ್ತರ ರಾಜ ಮತ್ತು ದಕ್ಷಿಣ ರಾಜನನ್ನು ನಾಶಮಾಡುವಾಗ ನಾವು ಬದುಕುಳಿಯುತ್ತೇವೆ.

ಗೀತೆ 132 ವಿಜಯ ಗೀತೆ

^ ಪ್ಯಾರ. 5 ಈಗ “ಉತ್ತರ ರಾಜ” ಯಾರು ಮತ್ತು ಅವನು ಹೇಗೆ ನಾಶವಾಗ್ತಾನೆ? ಈ ಪ್ರಶ್ನೆಗಳಿಗೆ ಉತ್ತರ ತಿಳುಕೊಳ್ಳೋದ್ರಿಂದ ನಮ್ಮ ನಂಬಿಕೆ ಬಲ ಆಗುತ್ತೆ ಮತ್ತು ಮುಂದೆ ಬರೋ ಕಷ್ಟಗಳನ್ನು ಎದುರಿಸೋಕೆ ನಾವು ಸಿದ್ಧರಾಗ್ತೇವೆ.

^ ಪ್ಯಾರ. 12 ದಾನಿಯೇಲ 2:36-45 ಮತ್ತು ಪ್ರಕಟನೆ 13:1, 2 ರ ಬಗ್ಗೆ ಇರುವ ಸಂಪೂರ್ಣ ಮಾಹಿತಿಗಾಗಿ 2012, ಜೂನ್‌ 15 ರ ಕಾವಲಿನಬುರುಜು ಪತ್ರಿಕೆಯ ಪುಟ 7-19 ನ್ನು ನೋಡಿ.

^ ಪ್ಯಾರ. 15 ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 2015, ಮೇ 15 ರ ಕಾವಲಿನಬುರುಜು ಪತ್ರಿಕೆಯ ಪುಟ 29-30 ನ್ನು ನೋಡಿ.