ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 26

“ನನ್ನ ಬಳಿಗೆ ಮರಳಿ ಬನ್ನಿ”

“ನನ್ನ ಬಳಿಗೆ ಮರಳಿ ಬನ್ನಿ”

“ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು.”—ಮಲಾ. 3:7.

ಗೀತೆ 42 “ನೀವು ಬಲಹೀನರಿಗೆ ನೆರವು ನೀಡಬೇಕು”

ಕಿರುನೋಟ *

1. ನಿಷ್ಕ್ರಿಯರಾದವ್ರು ವಾಪಸ್‌ ಬಂದಾಗ ಯೆಹೋವನಿಗೆ ಹೇಗನಿಸುತ್ತೆ?

ನಾವು ಹಿಂದಿನ ಲೇಖನದಲ್ಲಿ ಚರ್ಚಿಸಿದಂತೆ ಯೆಹೋವನು ತನ್ನನ್ನು ಒಬ್ಬ ಒಳ್ಳೇ ಕುರುಬನಿಗೆ ಹೋಲ್ಸಿದ್ದಾನೆ. ತನ್ನ ಪ್ರತಿಯೊಂದು ಕುರಿಯನ್ನು ಕೋಮಲವಾಗಿ ನೋಡಿಕೊಳ್ತಾನೆ. ಒಂದು ಕುರಿ ಕಳೆದುಹೋದ್ರೂ ಅದನ್ನ ಹುಡುಕ್ತಾನೆ. ತನ್ನಿಂದ ದೂರ ಹೋದ ಇಸ್ರಾಯೇಲ್ಯರಿಗೆ ಯೆಹೋವನು, ‘ನನ್ನ ಬಳಿಗೆ ತಿರುಗಿ ಬನ್ನಿ, ಆಗ ನಾನು ನಿಮ್ಮ ಬಳಿಗೆ ಬರುವೆನು’ ಅಂತ ಹೇಳಿದ್ನು. ‘ಯೆಹೋವ ಈಗ್ಲೂ ಬದ್ಲಾಗಿಲ್ಲ.’ ಯಾರೆಲ್ಲಾ ದೂರ ಹೋಗಿದ್ದಾರೋ ಅವ್ರು ಪುನಃ ತನ್ನ ಬಳಿ ಬರ್ಬೇಕು ಅನ್ನೋದೇ ಆತನಾಸೆ. (ಮಲಾ. 3:6, 7) ನಿಷ್ಕ್ರಿಯರಾದವ್ರು ಪುನಃ ಸೇವೆ ಮಾಡೋದನ್ನ ಆರಂಭಿಸಿದ್ರೆ ಯೆಹೋವನಿಗೆ ಮತ್ತು ದೇವದೂತರಿಗೆ ತುಂಬ ಖುಷಿಯಾಗುತ್ತೆ ಅಂತ ಯೇಸು ಹೇಳಿದ್ದಾನೆ.—ಲೂಕ 15:10, 32.

2. ಈ ಲೇಖನದಲ್ಲಿ ನಾವೇನನ್ನು ಚರ್ಚಿಸಲಿದ್ದೇವೆ?

2 ನಾವೀಗ ಯೇಸು ತಿಳಿಸಿರೋ ಮೂರು ದೃಷ್ಟಾಂತಗಳ ಬಗ್ಗೆ ನೋಡೋಣ. ಯೆಹೋವನಿಂದ ದೂರ ಹೋದವ್ರಿಗೆ ಸಹಾಯ ಮಾಡೋ ವಿಷ್ಯದಲ್ಲಿ ಈ ದೃಷ್ಟಾಂತಗಳು ಯಾವ ಪಾಠ ಕಲ್ಸುತ್ತೆ ಅನ್ನೋದನ್ನ ನೋಡಲಿದ್ದೇವೆ. ಕಳೆದುಹೋದ ಕುರಿ ಪುನಃ ಯೆಹೋವನ ಬಳಿ ಬರೋಕೆ ಸಹಾಯ ಮಾಡಲು ನಮ್ಮಲ್ಲಿ ಇರಬೇಕಾದ ಕೆಲ್ವು ಗುಣಗಳ ಬಗ್ಗೆನೂ ನೋಡಲಿದ್ದೇವೆ. ನಿಷ್ಕ್ರಿಯರಾದವ್ರು ಪುನಃ ಯೆಹೋವನ ಸೇವೆ ಮಾಡೋಕೆ ಸಹಾಯ ಮಾಡೋದು ಯಾಕೆ ಸಾರ್ಥಕ ಅನ್ನೋದನ್ನೂ ತಿಳಿಯಲಿದ್ದೇವೆ.

ಕಳೆದುಹೋದ ನಾಣ್ಯ

3-4. ಲೂಕ 15:8-10 ರಲ್ಲಿ ತಿಳ್ಸಿರೋ ಸ್ತ್ರೀ ಕಳೆದು ಹೋದ ದ್ರಾಕ್ಮಾ ನಾಣ್ಯವನ್ನ ಯಾಕೆ ತುಂಬ ಜಾಗರೂಕತೆಯಿಂದ ಹುಡುಕ್ತಾಳೆ?

3 ಯೆಹೋವನ ಬಳಿ ವಾಪಸ್‌ ಬರಲು ಇಷ್ಟಪಡೋರನ್ನ ಹುಡುಕೋಕೆ ನಾವು ತುಂಬ ಶ್ರಮ ಹಾಕ್ಬೇಕು. ಇದ್ರ ಬಗ್ಗೆ ಲೂಕ ಪುಸ್ತಕದಲ್ಲಿ ಯೇಸು ಹೇಳಿರೋ ದೃಷ್ಟಾಂತದಿಂದ ಕಲೀಬಹುದು. ಅಲ್ಲಿ ಯೇಸು ದ್ರಾಕ್ಮಾ ನಾಣ್ಯವನ್ನು ಕಳಕೊಂಡ ಸ್ತ್ರೀ ಅದನ್ನ ಹೇಗೆ ಹುಡುಕ್ತಾಳೆ ಅನ್ನೋದನ್ನ ವಿವರಿಸಿದ್ದಾನೆ. ಆ ಸ್ತ್ರೀಗೆ ಆ ನಾಣ್ಯ ತುಂಬ ಅಮೂಲ್ಯವಾಗಿತ್ತು. ಅದನ್ನ ಹುಡುಕೋಕೆ ತುಂಬ ಪ್ರಯತ್ನ ಹಾಕಿದಳು.—ಲೂಕ 15:8-10 ಓದಿ.

4 ಕಳೆದುಹೋದ ಆ ದ್ರಾಕ್ಮಾ ನಾಣ್ಯ ಸಿಕ್ಕಾಗ ಆ ಸ್ತ್ರೀಗೆ ಎಷ್ಟು ಖುಷಿಯಾಯ್ತು ಅನ್ನೋದನ್ನ ಯೇಸು ವಿವರಿಸಿದ್ದಾನೆ. ಆಗಿನ ಕಾಲದಲ್ಲಿ ಕೆಲ್ವು ಯೆಹೂದಿ ತಾಯಂದಿರು ತಮ್ಮ ಮಗಳಿಗೆ ಮದ್ವೆ ದಿನ ಹತ್ತು ದ್ರಾಕ್ಮಾ ನಾಣ್ಯ ಕೊಡ್ತಿದ್ರು. ಬಹುಶಃ ಈ ಸ್ತ್ರೀ ಅಂಥ ಹತ್ತು ನಾಣ್ಯಗಳಲ್ಲಿ ಒಂದನ್ನ ಕಳ್ಕೊಂಡಿರಬಹುದು. ಆ ನಾಣ್ಯ ನೆಲದಲ್ಲಿ ಬಿದ್ದುಹೋಗಿರಬಹುದು ಅಂತ ಅಂದ್ಕೊಳ್ತಾಳೆ. ಆದ್ರಿಂದ ದೀಪ ಹಚ್ಚಿ ಮನೆಯೆಲ್ಲಾ ಹುಡುಕ್ತಾಳೆ. ಆದ್ರೆ ಆ ನಾಣ್ಯ ಎಲ್ಲೂ ಕಾಣ್ಸಲ್ಲ. ಬಹುಶಃ ಆ ದೀಪದ ಬೆಳಕು ಕಡಿಮೆ ಇದ್ದಿರಬಹುದು. ಕೊನೆಗೆ ಇಡೀ ಮನೆಯನ್ನ ಜಾಗರೂಕತೆಯಿಂದ ಗುಡಿಸ್ತಾಳೆ. ಕಸದಲ್ಲಿ ಪಳಪಳ ಅಂತ ಹೊಳೆಯೋ ದ್ರಾಕ್ಮಾ ನಾಣ್ಯ ಸಿಗುತ್ತೆ. ಆಗ ಅವ್ಳಿಗೆ ತುಂಬ ಖುಷಿಯಾಗುತ್ತೆ. ಈ ಸಂತೋಷದ ವಿಷ್ಯ ತಿಳ್ಸೋಕೆ ಗೆಳತಿಯರನ್ನ, ಅಕ್ಕಪಕ್ಕದ ಮನೆಯವ್ರನ್ನ ಕರೀತಾಳೆ.

5. ನಿಷ್ಕ್ರಿಯರನ್ನ ಹುಡುಕೋಕೆ ಯಾಕೆ ತುಂಬ ಶ್ರಮ ಹಾಕ್ಬೇಕು?

5 ಕಳೆದು ಹೋದದ್ದನ್ನ ಹುಡುಕೋಕೆ ತುಂಬ ಪ್ರಯತ್ನ ಹಾಕ್ಬೇಕು ಅನ್ನೋದನ್ನ ಯೇಸು ಹೇಳಿದ ಕಥೆಯಿಂದ ಕಲಿತ್ವಿ. ನಿಷ್ಕ್ರಿಯರ ವಿಷ್ಯದಲ್ಲೂ ಇದು ನಿಜ. ಅವ್ರನ್ನ ಹುಡುಕೋಕೆ ತುಂಬ ಪ್ರಯತ್ನ ಹಾಕ್ಬೇಕು. ಅವ್ರು ಸಭೆಗೆ ಬರೋದನ್ನ ಬಿಟ್ಟು ವರ್ಷಗಳೇ ಆಗಿರಬಹುದು. ಬಹುಶಃ ಬೇರೆ ಸ್ಥಳಕ್ಕೆ ಹೋಗಿರ್ಬಹುದು. ಅಲ್ಲಿರೋ ಸಹೋದರರಿಗೆ ಅವ್ರ ಬಗ್ಗೆ ಗೊತ್ತಿಲ್ಲದೇ ಇರ್ಬಹುದು. ನಿಜ ಏನೆಂದ್ರೆ ನಿಷ್ಕ್ರಿಯರಲ್ಲಿ ಕೆಲವ್ರಿಗೆ ಈಗ್ಲೂ ಯೆಹೋವನ ಬಳಿ ವಾಪಸ್‌ ಬರೋಕೆ ತುಂಬ ಮನಸ್ಸಿದೆ. ಸಭೆಗೆ ಬಂದು ಯೆಹೋವನ ಆರಾಧನೆ ಮಾಡೋ ಆಸೆ ಇದೆ. ಆದ್ರೆ ಅವ್ರು ಇದನ್ನ ಮಾಡೋಕೆ ನಮ್ಮ ಸಹಾಯ ಬೇಕೇ ಬೇಕು.

6. ನಿಷ್ಕ್ರಿಯರನ್ನು ಹುಡುಕೋದ್ರಲ್ಲಿ ಸಭೆಯಲ್ಲಿರೋ ಎಲ್ರೂ ಹೇಗೆ ಕೈ ಜೋಡಿಸ್ಬಹುದು?

6 ನಿಷ್ಕ್ರಿಯರನ್ನ ಯಾರೆಲ್ಲಾ ಹುಡುಕ್ಬಹುದು? ಹಿರಿಯರು, ಪಯನೀಯರರು, ಕುಟುಂಬದವ್ರು ಮತ್ತು ಸಭೆಯಲ್ಲಿರೋ ಪ್ರಚಾರಕರು ಹೀಗೆ ಎಲ್ರೂ ಹುಡುಕ್ಬಹುದು. ನಿಮ್ಮ ಸ್ನೇಹಿತರೋ ಸಂಬಂಧಿಕರೋ ನಿಷ್ಕ್ರಿಯರಾಗಿದ್ದಾರಾ? ನೀವು ಮನೆಮನೆ ಸಾರುವಾಗ ಅಥ್ವಾ ಸಾರ್ವಜನಿಕ ಸಾಕ್ಷಿಕಾರ್ಯ ಮಾಡ್ವಾಗ ನಿಷ್ಕ್ರಿಯರು ಸಿಕ್ಕಿದ್ದಾರಾ? ಸಿಕ್ಕಿದ್ರೆ ಏನು ಮಾಡ್ಬಹುದು? ಅವ್ರಿಗೆ ಒಪ್ಪಿಗೆ ಇರುವಲ್ಲಿ ಅವ್ರ ಫೋನ್‌ ನಂಬರ್‌ ಅಥ್ವಾ ವಿಳಾಸವನ್ನ ಸಭಾಹಿರಿಯರಿಗೆ ಕೊಟ್ಟು ಭೇಟಿ ಮಾಡಲು ಏರ್ಪಾಡು ಮಾಡ್ತೀವಿ ಅಂತ ತಿಳ್ಸಿ.

7. ಥಾಮಸ್‌ ಎಂಬ ಹಿರಿಯನಿಂದ ನಾವೇನು ಕಲೀಬಹುದು?

7 ಯೆಹೋವನ ಬಳಿಗೆ ವಾಪಸ್‌ ಬರಲು ಇಷ್ಟಪಡೋ ನಿಷ್ಕ್ರಿಯರನ್ನ ಹುಡುಕೋ ಮುಖ್ಯ ಜವಾಬ್ದಾರಿ ಹಿರಿಯರದ್ದಾಗಿದೆ. ಅವ್ರದನ್ನ ಹೇಗೆ ಮಾಡ್ಬಹುದು? ಸ್ಪೇನ್‌ನಲ್ಲಿರೋ ಥಾಮಸ್‌ * ಎಂಬ ಹಿರಿಯ 40ಕ್ಕಿಂತ ಹೆಚ್ಚು ನಿಷ್ಕ್ರಿಯ ಪ್ರಚಾರಕರಿಗೆ ಯೆಹೋವನ ಬಳಿ ಬರಲು ಸಹಾಯ ಮಾಡಿದ್ದಾರೆ. ಆ ಸಹೋದರ ಹೀಗೆ ಹೇಳ್ತಾರೆ: “ನಿಷ್ಕ್ರಿಯ ಪ್ರಚಾರಕರು ಈಗ ಎಲ್ಲಿದ್ದಾರೆ ಅನ್ನೋದು ಗೊತ್ತಾ ಅಂತ ಸಭೆಯವರ ಹತ್ರ ಕೇಳ್ತೇನೆ. ಅಥ್ವಾ ಈಗ ಕೂಟಗಳಿಗೆ ಬರೋದನ್ನ ನಿಲ್ಸಿರೋರು ಯಾರಾದ್ರೂ ನೆನಪಿದ್ದಾರಾ ಅಂತ ಕೇಳ್ತೇನೆ. ಸಭೆಯಲ್ಲಿರೋ ಅನೇಕ್ರು ಈ ವಿಷ್ಯದಲ್ಲಿ ಸಹಾಯ ಮಾಡೋಕೆ ಮುಂದೆ ಬರ್ತಾರೆ. ಯಾಕಂದ್ರೆ ನಿಷ್ಕ್ರಿಯರನ್ನ ಹುಡುಕೋದ್ರಲ್ಲಿ ಅವ್ರಿಗೂ ತುಂಬ ಹುರುಪಿರುತ್ತೆ. ನಂತ್ರ ನಿಷ್ಕ್ರಿಯ ಸಹೋದರ ಸಹೋದರಿಯನ್ನ ಭೇಟಿಮಾಡ್ದಾಗ ಅವ್ರ ಮಕ್ಳ ಬಗ್ಗೆ, ಸಂಬಂಧಿಕರ ಬಗ್ಗೆ ವಿಚಾರಿಸ್ತೇನೆ. ನಿಷ್ಕ್ರಿಯ ಪ್ರಚಾರಕರು ಹಿಂದೆ ತಮ್ಮ ಮಕ್ಳನ್ನೂ ಕೂಟಕ್ಕೆ ಕರಕೊಂಡು ಬಂದಿರ್ತಾರೆ ಮತ್ತು ಆ ಮಕ್ಳು ಒಂದ್‌ ಸಮಯದಲ್ಲಿ ಪ್ರಚಾರಕರಾಗಿ ಇದ್ದಿರಬಹುದು. ಮಕ್ಳ ಬಗ್ಗೆನೂ ನಾನು ವಿಚಾರಿಸೋದ್ರಿಂದ ಅವ್ರಿಗೂ ಯೆಹೋವನ ಬಳಿ ವಾಪಸ್‌ ಬರೋಕೆ ಆಗುತ್ತೆ.”

ಯೆಹೋವನತ್ರ ಮರಳಿ ಬರಲು ನಿಷ್ಕ್ರಿಯರಿಗೆ ಸಹಾಯ ಮಾಡಿ

8. ಲೂಕ 15:17-24 ರಲ್ಲಿರೋ ಕಥೆಯಲ್ಲಿ ಪಶ್ಚಾತ್ತಾಪಪಟ್ಟ ಮಗನ ಜೊತೆ ತಂದೆ ಹೇಗೆ ನಡ್ಕೊಂಡ?

8 ಯೆಹೋವನ ಬಳಿ ವಾಪಸ್‌ ಬರೋಕೆ ಬಯಸುವವ್ರಿಗೆ ಸಹಾಯ ಮಾಡ್ಬೇಕಂದ್ರೆ ನಮ್ಮಲ್ಲಿ ಯಾವ ಗುಣಗಳಿರಬೇಕು? ಇದ್ರ ಬಗ್ಗೆ ತಿಳ್ಕೊಳೋಕೆ ಯೇಸು ಹೇಳಿದ ಇನ್ನೊಂದು ಕಥೆ ನೋಡೋಣ. ಅದು ಮನೆ ಬಿಟ್ಟು ಹೋದ ಮಗನ ದೃಷ್ಟಾಂತ. (ಲೂಕ 15:17-24 ಓದಿ.) ಆ ಕಥೆಯಲ್ಲಿ ಮನೆ ಬಿಟ್ಟು ಓಡಿ ಹೋದ ಮಗನಿಗೆ ತನ್ನ ತಪ್ಪಿನ ಅರಿವಾಗುತ್ತೆ, ವಾಪಸ್‌ ಮನೆಗೆ ಬರ್ತಾನೆ. ಅವನಿನ್ನೂ ದೂರ ಇರ್ವಾಗ್ಲೇ ಅವನ ತಂದೆ ಓಡಿ ಹೋಗಿ ಅವ್ನನ್ನ ಪ್ರೀತಿಯಿಂದ ಅಪ್ಪಿಕೊಳ್ತಾನೆ. ಆಗ ಮಗನಿಗೆ, ತಾನು ಮಾಡಿದ್ದು ತುಂಬ ದೊಡ್ಡ ತಪ್ಪು, ಮಗ ಅಂತ ಕರೆಸಿಕೊಳ್ಳೋಕೆ ತಾನು ಯೋಗ್ಯನಲ್ಲ ಅಂತ ಅನ್ಸುತ್ತೆ. ಈ ವಿಷ್ಯವನ್ನ ತಂದೆ ಹತ್ರ ಹೇಳ್ಕೊಂಡಾಗ ತಂದೆಗೆ ಅನುಕಂಪ ಹುಟ್ಟುತ್ತೆ. ಮಗನ ನೋವು ಚೆನ್ನಾಗಿ ಅರ್ಥ ಆಗುತ್ತೆ. ಈಗ್ಲೂ ಮಗನನ್ನ ತುಂಬ ಪ್ರೀತಿಸುತ್ತಿದ್ದೇನೆ ಅಂತ ತೋರಿಸಿಕೊಡೋಕೆ ಕೆಲ್ವು ವಿಷ್ಯಗಳನ್ನ ಮಾಡ್ತಾನೆ. ಆ ಮಗನನ್ನ ಒಬ್ಬ ದಾಸನಂತೆ ಅಲ್ಲ ಪ್ರೀತಿಯ ಮಗನಂತೆ ಸಂತೋಷದಿಂದ ಬರಮಾಡಿಕೊಳ್ತಾನೆ. ಅವ್ನು ಬಂದ ಖುಷಿಗೆ ಹೊಸ ಬಟ್ಟೆ ತೊಡಿಸಿ ದೊಡ್ಡ ಔತಣವನ್ನೇ ಏರ್ಪಡಿಸ್ತಾನೆ.

9. ನಿಷ್ಕ್ರಿಯರಾದವ್ರು ಯೆಹೋವನ ಬಳಿ ವಾಪಸ್‌ ಬರೋಕೆ ಸಹಾಯ ಮಾಡ್ಬೇಕಂದ್ರೆ ನಮ್ಮಲ್ಲಿ ಯಾವ ಗುಣಗಳಿರಬೇಕು? (“ ಮರಳಿ ಬರಲು ಇಷ್ಟಪಡುವವ್ರಿಗೆ ಹೇಗೆ ಸಹಾಯ ಮಾಡ್ಬಹುದು?” ಚೌಕ ನೋಡಿ.)

9 ಆ ಕಥೆಯಲ್ಲಿ ತಿಳ್ಸಿದ ತಂದೆ ತರ ಯೆಹೋವ ಇದ್ದಾನೆ. ನಿಷ್ಕ್ರಿಯ ಸಹೋದರ ಸಹೋದರಿಯರನ್ನು ಆತ ಪ್ರೀತಿಸ್ತಾನೆ ಮತ್ತು ಪುನಃ ತನ್ನ ಬಳಿ ಬರೋದಕ್ಕೆ ಕಾಯ್ತಾನೆ. ಯೆಹೋವನ ತರ ನಾವೂ ನಿಷ್ಕ್ರಿಯರಾದವ್ರಿಗೆ ಸಹಾಯ ಮಾಡ್ಬೇಕು. ಅವ್ರ ಜೊತೆ ಪ್ರೀತಿ, ತಾಳ್ಮೆಯಿಂದ ನಡೆದು ಅನುಕಂಪ ತೋರಿಸ್ಬೇಕು. ನಾವ್ಯಾಕೆ ಈ ಗುಣಗಳನ್ನ ತೋರಿಸ್ಬೇಕು ಮತ್ತು ಹೇಗೆ ತೋರಿಸ್ಬಹುದು?

10. ನಿಷ್ಕ್ರಿಯರು ಯೆಹೋವನತ್ರ ವಾಪಸ್‌ ಬರೋಕೆ ನಾವ್ಯಾಕೆ ತಾಳ್ಮೆಯಿಂದ ಇರಬೇಕು?

10 ನಿಷ್ಕ್ರಿಯರಾದವ್ರು ಯೆಹೋವನತ್ರ ವಾಪಸ್‌ ಬರೋಕೆ ಸಮ್ಯ ಹಿಡಿಯುತ್ತೆ. ಹಾಗಾಗಿ ನಾವು ಅವ್ರ ಜೊತೆ ತಾಳ್ಮೆಯಿಂದ ನಡಕೊಳ್ಬೇಕು. ಹಿರಿಯರು ಮತ್ತು ಸಭೆಯಲ್ಲಿದ್ದ ಬೇರೆಯವ್ರು ಪದೇಪದೇ ಭೇಟಿ ಮಾಡಿದ್ರಿಂದ ಯೆಹೋವನತ್ರ ವಾಪಸ್‌ ಬರೋಕೆ ಮನಸ್ಸು ಮಾಡಿದ್ವಿ ಅಂತ ಹಿಂದೆ ನಿಷ್ಕ್ರಿಯರಾಗಿದ್ದ ಅನೇಕ ಸಹೋದರ ಸಹೋದರಿಯರು ಹೇಳ್ತಾರೆ. ಏಷ್ಯಾದಲ್ಲಿರೋ ಸಹೋದರಿ ನ್ಯಾನ್ಸಿ ಹೀಗೆ ಬರೀತಾಳೆ: “ಸಭೆಯಲ್ಲಿ ನಂಗೆ ಆಪ್ತ ಗೆಳತಿ ಇದ್ದಾರೆ. ಅವ್ರು ನಂಗೆ ಅಕ್ಕನ ತರ. ತುಂಬ ಸಹಾಯ ಮಾಡಿದ್ದಾರೆ. ನಾವು ಹಿಂದೆ ಒಟ್ಟಿಗೆ ಕಳೆದ ಸಂತೋಷದ ಕ್ಷಣಗಳನ್ನ ಅವ್ರು ನೆನಪು ಮಾಡ್ತಿದ್ರು. ನನ್ನ ಭಾವನೆಗಳನ್ನ ಹೇಳ್ಕೊಳ್ವಾಗ ತಾಳ್ಮೆಯಿಂದ ಕೇಳಿಸಿಕೊಳ್ತಿದ್ರು ಮತ್ತು ಒಳ್ಳೇ ಸಲಹೆಗಳನ್ನ ಕೊಡ್ತಿದ್ರು. ನಂಗೆ ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇರ್ತಿದ್ರು. ನಿಜವಾಗ್ಲೂ ಆಕೆ ಒಳ್ಳೇ ಸ್ನೇಹಿತೆ.”

11. ಯಾರಿಗಾದ್ರೂ ನೋವು ಆದಾಗ ಅವ್ರಿಗೆ ಸಹಾಯ ಮಾಡೋಕೆ ನಮ್ಮಲ್ಯಾಕೆ ಅನುಕಂಪ ಇರ್ಬೇಕು?

11 ಯಾರಿಗಾದ್ರೂ ತುಂಬ ನೋವಾದಾಗ ಮನಸ್ಸಿಗೆ ಗಾಯ ಆಗುತ್ತೆ. ಆ ಗಾಯಕ್ಕೆ ಒಳ್ಳೇ ಮುಲಾಮು ಅನುಕಂಪ ಆಗಿದೆ. ಸಭೆಯಲ್ಲಿ ಯಾರೋ ಒಬ್ರು ಬೇಜಾರು ಮಾಡಿದ್ದಕ್ಕೆ ಕೆಲವ್ರು ನಿಷ್ಕ್ರಿಯರಾಗಿರ್ಬಹುದು ಮತ್ತು ಈಗ್ಲೂ ಅವ್ರಿಗೆ ಆ ವಿಷ್ಯದ ಬಗ್ಗೆ ಕೋಪ ಇರ್ಬಹುದು. ಈ ಕೋಪ ಪುನಃ ಯೆಹೋವನತ್ರ ವಾಪಸ್‌ ಬರೋಕೆ ತಡೀತಿರಬಹುದು. ಇನ್ನು ಕೆಲವ್ರಿಗೆ ತಮ್ಗೆ ಅನ್ಯಾಯ ಆಗಿದೆ ಅಂತ ಅನ್ಸಿರಬಹುದು. ಅಂಥವ್ರಿಗೆ ತಮ್ಮ ನೋವನ್ನ ಹಂಚಿಕೊಳ್ಳುವಾಗ ಅದನ್ನ ಕೇಳ್ಸಿಕೊಳ್ಳೋವ್ರ, ಅರ್ಥಮಾಡಿಕೊಳ್ಳೋವ್ರ ಅಗತ್ಯವಿರುತ್ತೆ. (ಯಾಕೋ. 1:19) ಹಿಂದೆ ನಿಷ್ಕ್ರಿಯಳಾಗಿದ್ದ ಮರಿಯ ಎಂಬ ಸಹೋದರಿ ಹೀಗೆ ಹೇಳ್ತಾಳೆ: “ನಾನ್‌ ಹೇಳೋದನ್ನ ಕೇಳ್ಸಿಕೊಳ್ಳೋಕೆ, ಅಳುವಾಗ ಸಮಾಧಾನ ಮಾಡೋಕೆ ಮತ್ತು ನನ್ನ ಕೈ ಹಿಡಿದು ಸರಿಯಾದ ದಾರಿಯಲ್ಲಿ ನಡ್ಸೋಕೆ ಯಾರದಾದ್ರೂ ಸಹಾಯ ಬೇಕು ಅಂತ ನಂಗೆ ತುಂಬ ಅನಿಸ್ತಿತ್ತು.”

12. ಯೆಹೋವನ ಪ್ರೀತಿ ಹೇಗೆ ಹಗ್ಗದಂತಿದೆ? ಉದಾಹರಣೆ ಕೊಡಿ.

12 ಯೆಹೋವನ ಪ್ರೀತಿ ಹಗ್ಗದಂತಿದೆ ಅಂತ ಬೈಬಲ್‌ ವಿವರಿಸುತ್ತೆ. ಯಾವ ಅರ್ಥದಲ್ಲಿ ದೇವ್ರ ಪ್ರೀತಿ ಹಗ್ಗದಂತಿದೆ? ಈ ಉದಾಹರಣೆ ನೋಡಿ. ಸಮುದ್ರದಲ್ಲಿ ಬಿದ್ದುಬಿಟ್ಟಿದ್ದೀರ ಅಂತ ಊಹಿಸಿ. ಅಲೆಗಳು ಬಡೀತಾ ಇದೆ, ನೀರು ತಣ್ಣಗೆ ಕೊರೀತಿದೆ, ನೀವು ಮುಳುಗಿ ಹೋಗ್ತಿದ್ದೀರ. ಇದನ್ನು ಗಮನಿಸಿದ ದೋಣಿಯವ್ರು ನಿಮ್ಮ ಕಡೆಗೆ ಲೈಫ್‌ ಜಾಕೆಟ್‌ ಎಸೀತಾರೆ. ನೀವು ಅದನ್ನ ಹಾಕೊಂಡ ಮೇಲೆ ಮುಳುಗಲ್ಲ. ಆದ್ರೆ ನೀರು ಇನ್ನೂ ತಣ್ಣಗೆ ಕೊರೀತಿರೋದ್ರಿಂದ ಆ ನೀರಿನಿಂದ ಮೇಲೆ ಬರಬೇಕು ಅಂತ ಅನ್ಸುತ್ತೆ. ಆ ದೋಣಿಯವ್ರು ನಿಮ್‌ ಕಡೆ ಹಗ್ಗ ಎಸೆದ್ರೆನೇ ನೀವು ನೀರಿಂದ ಮೇಲೆ ಬಂದು ದೋಣಿ ಹತ್ತೋಕೆ ಸಾಧ್ಯ. ತನ್ನನ್ನ ಬಿಟ್ಟು ಹೋದ ಇಸ್ರಾಯೇಲ್ಯರಿಗೆ ಸಹಾಯ ಮಾಡೋಕೆ ಯೆಹೋವನು ಇದನ್ನೇ ಮಾಡಿದ್ನು. ಆತನು ಅವ್ರ ಬಗ್ಗೆ ಹೇಳಿದ್ದು: “ನಾನು ನನ್ನ ಜನರನ್ನು . . . ಮಮತೆಯ ಹಗ್ಗದಿಂದ ಸೆಳೆದುಕೊಂಡೆನು.” (ಹೋಶೇ. 11:4) ಇಂದು ಸಹ ತನ್ನ ಸೇವೆ ಮಾಡೋದನ್ನ ನಿಲ್ಸಿ ಬಿಟ್ಟಿರೋವ್ರ ಬಗ್ಗೆ, ಸಮಸ್ಯೆ ಚಿಂತೆಗಳಲ್ಲೇ ಮುಳುಗಿ ಹೋಗಿರೋವ್ರ ಬಗ್ಗೆ ಯೆಹೋವನಿಗೆ ಅದೇ ಭಾವನೆಗಳಿವೆ. ಅವ್ರನ್ನ ಈಗ್ಲೂ ತುಂಬ ಪ್ರೀತಿ ಮಾಡ್ತೇನೆ ಅನ್ನೋದನ್ನು ಅವ್ರು ಅರ್ಥ ಮಾಡ್ಕೊಳ್ಬೇಕು ಮತ್ತು ಅವ್ರು ತನ್ನತ್ರ ಬರಬೇಕು ಅಂತ ಬಯಸ್ತಾನೆ. ನಿಷ್ಕ್ರಿಯರಿಗೆ ಪ್ರೀತಿ ತೋರಿಸೋಕೆ ಯೆಹೋವನು ನಿಮ್ಮನ್ನೂ ಉಪಯೋಗಿಸಬಹುದು.

13. ಸಹೋದರ ಪ್ರೀತಿಗೆ ಎಷ್ಟು ಶಕ್ತಿ ಇದೆ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.

13 ‘ಯೆಹೋವನು ಈಗ್ಲೂ ನಿಮ್ಮನ್ನ ಪ್ರೀತಿಸ್ತಾನೆ’ ಅಂತ ನಿಷ್ಕ್ರಿಯರಿಗೆ ಆಗಾಗ ಹೇಳಬೇಕು. ನಾವೂ ಅವ್ರನ್ನು ಪ್ರೀತಿಸ್ತೀವಿ ಅಂತ ತೋರಿಸಿಕೊಡ್ಬೇಕು. ಹಿಂದಿನ ಲೇಖನದಲ್ಲಿ ತಿಳ್ಸಿದ ಸಹೋದರ ಪಾಬ್ಲೋ ಸುಮಾರು 30 ವರ್ಷ ನಿಷ್ಕ್ರಿಯರಾಗಿದ್ರು. ಅವ್ರು ಹೇಳೋದು: “ಒಂದಿನ ಬೆಳಗ್ಗೆ ನಾನು ಮನೆಯಿಂದ ಹೊರಟಾಗ ಒಬ್ಬ ವೃದ್ಧ ಸಹೋದರಿ ಸಿಕ್ಕಿದ್ರು. ಅವ್ರು ನನ್ನತ್ರ ತುಂಬ ಪ್ರೀತಿಯಿಂದ ಮಾತಾಡಿದ್ರು. ನಾನು ಮಗು ತರ ಅತ್ತುಬಿಟ್ಟೆ. ‘ನನ್ನತ್ರ ಮಾತಾಡೋಕೆ ಯೆಹೋವನೇ ನಿಮ್ಮನ್ನ ಕಳ್ಸಿದ್ದಾನೆ’ ಅಂತ ಅವ್ರಿಗೆ ಹೇಳ್ದೆ. ಯೆಹೋವನ ಹತ್ರ ವಾಪಸ್‌ ಬರಬೇಕು ಅಂತ ಆ ಕ್ಷಣನೇ ತೀರ್ಮಾನ ಮಾಡ್ಬಿಟ್ಟೆ.”

ಪ್ರೀತಿಯಿಂದ ಸಹಾಯ ಮಾಡಿ

14. ಲೂಕ 15:4, 5 ರಲ್ಲಿ ತಿಳ್ಸಿರೋ ದೃಷ್ಟಾಂತದ ಪ್ರಕಾರ ಕಳೆದುಹೋದ ಕುರಿ ಸಿಕ್ಕ ಮೇಲೆ ಕುರುಬ ಏನು ಮಾಡ್ದ?

14 ನಿಷ್ಕ್ರಿಯರಿಗೆ ನಮ್ಮ ಸಹಾಯ ಯಾವಾಗ್ಲೂ ಬೇಕಿರುತ್ತೆ. ಯೇಸು ಹೇಳಿದ ಮನೆ ಬಿಟ್ಟು ಹೋದ ಮಗನ ಕಥೆಯಲ್ಲಿದ್ದಂತೆ ಅವ್ರು ಭಾವನಾತ್ಮಕವಾಗಿ ತುಂಬ ನೊಂದಿರ್ತಾರೆ. ಅದು ವಾಸಿಯಾಗೋಕೆ ತುಂಬ ಸಮ್ಯ ಬೇಕು. ಅಷ್ಟೇ ಅಲ್ಲ ಅವ್ರು ಸೈತಾನನ ಲೋಕದಲ್ಲಿ ಇದ್ದಿದ್ರಿಂದ ಮುಂಚಿನಷ್ಟು ಈಗ ಯೆಹೋವನಿಗೆ ಆಪ್ತರಾಗಿರಲ್ಲ. ಅವ್ರು ಆತನ ಮೇಲೆ ಪುನಃ ನಂಬಿಕೆ ಬೆಳೆಸ್ಕೊಳ್ಳೋಕೆ ನಾವು ಸಹಾಯ ಮಾಡ್ಬೇಕು. ಈಗ ಯೇಸು ಹೇಳಿದ ಕಳೆದು ಹೋದ ಕುರಿಯ ಕಥೆ ನೋಡೋಣ. ಅಲ್ಲಿ ಕಳೆದುಹೋದ ಕುರಿ ಸಿಕ್ಕಾಗ ಕುರುಬನು ತನ್ನ ಹೆಗಲ ಮೇಲೆ ಅದನ್ನ ಹೊತ್ತುಕೊಂಡು ವಾಪಸ್‌ ಮಂದೆಗೆ ಕರಕೊಂಡು ಬರೋದ್ರ ಬಗ್ಗೆ ಯೇಸು ವಿವರಿಸಿದ್ದಾನೆ. ಆ ಕುರಿಯನ್ನ ಹುಡುಕೋಕೆ ಕುರುಬ ಈಗಾಗ್ಲೇ ಸಮ್ಯ ಶಕ್ತಿ ಕಳೆದಿರ್ತಾನೆ. ಆದ್ರೆ ಅದಕ್ಕೆ ಇನ್ನೂ ಸಹಾಯದ ಅಗತ್ಯ ಇದೆ ಅಂತ ಅವ್ನಿಗೆ ಗೊತ್ತಾಗುತ್ತೆ. ಮಂದೆಗೆ ಹಿಂತಿರುಗಿ ಬರುವಷ್ಟು ಶಕ್ತಿ ಇಲ್ಲದೇ ಇರೋ ಕಾರಣ ಅದನ್ನ ತನ್ನ ಹೆಗಲ ಮೇಲೆ ಹೊತ್ಕೋತಾನೆ.—ಲೂಕ 15:4, 5 ಓದಿ.

15. ಯೆಹೋವನ ಬಳಿ ವಾಪಸ್‌ ಬರೋಕೆ ಇಷ್ಟಪಡೋರಿಗೆ ನಾವು ಹೇಗೆ ಸಹಾಯ ಮಾಡ್ಬಹುದು? (“ ಒಂದು ಅಮೂಲ್ಯ ಉಡುಗೊರೆ” ಚೌಕ ನೋಡಿ.)

15 ನಿಷ್ಕ್ರಿಯರಾದವ್ರಿಗೆ ಸಹಾಯ ಮಾಡೋಕೆ ನಮ್ಮ ಹೆಚ್ಚಿನ ಸಮ್ಯ, ಶಕ್ತಿ ಕೊಡ್ಬೇಕಾಗಿ ಬರಬಹುದು. ಯಾಕೆಂದ್ರೆ ಯೆಹೋವನ ಸೇವೆ ಮಾಡೋಕೆ ತಡೀತಾ ಇರೋ ಕೆಲ್ವು ಸಮಸ್ಯೆಗಳನ್ನ ಅವ್ರು ಎದುರಿಸ್ತಿರಬಹುದು. ಆದ್ರೆ ಯೆಹೋವನ ಪವಿತ್ರಾತ್ಮದ ಸಹಾಯದಿಂದ, ಬೈಬಲ್‌ ಮತ್ತು ಪ್ರಕಾಶನಗಳನ್ನು ಉಪಯೋಗಿಸಿ ಅವ್ರು ಪುನಃ ಯೆಹೋವನ ಜೊತೆ ಆಪ್ತರಾಗೋಕೆ ನಾವು ಸಹಾಯ ಮಾಡ್ಬಹುದು. (ರೋಮ. 15:1) ಹೇಗೆ? ಒಬ್ಬ ಅನುಭವಸ್ಥ ಹಿರಿಯ ಹೀಗೆ ಹೇಳ್ತಾರೆ: “ಯೆಹೋವನ ಸೇವೆ ಮಾಡ್ಬೇಕಂತ ನಿರ್ಧಾರ ಮಾಡಿರೋ ನಿಷ್ಕ್ರಿಯರಿಗೆ ಪುನಃ ಬೈಬಲ್‌ ಸ್ಟಡಿ ಮಾಡೋ ಅವಶ್ಯಕತೆ ಇರುತ್ತೆ.” * ಹಾಗಾಗಿ ನಿಮ್ಮ ಸಭೆಯ ಹಿರಿಯರು ನಿಷ್ಕ್ರಿಯ ಪ್ರಚಾರಕರಿಗೆ ಬೈಬಲ್‌ ಸ್ಟಡಿ ಮಾಡ್ಬೇಕೆಂದು ನಿಮ್ಮನ್ನ ಕೇಳ್ಕೊಂಡ್ರೆ ದಯವಿಟ್ಟು ಆ ಸುಯೋಗವನ್ನ ಒಪ್ಕೊಳ್ಳಿ. ಆ ಸಹೋದರ ಕೊಟ್ಟ ಇನ್ನೊಂದು ಕಿವಿಮಾತು: “ನಿಷ್ಕ್ರಿಯರಾದವ್ರಿಗೆ ಬೈಬಲ್‌ ಸ್ಟಡಿ ಮಾಡೋ ಪ್ರಚಾರಕರು ತಾಳ್ಮೆಯಿಂದ ಕೇಳಿಸಿಕೊಳ್ಳೋವ್ರು ಆಗಿರ್ಬೇಕು ಮತ್ತು ಭರವಸೆ ಇಡೋ ಒಳ್ಳೆ ಸ್ನೇಹಿತರಾಗಿರ್ಬೇಕು.”

ಸ್ವರ್ಗದಲ್ಲೂ ಭೂಮಿಯಲ್ಲೂ ಸಂತೋಷ

16. ನಿಷ್ಕ್ರಿಯರನ್ನ ಹುಡುಕೋದ್ರಲ್ಲಿ ದೇವದೂತರು ನಮ್ಗೆ ಹೇಗೆ ಸಹಾಯ ಮಾಡ್ತಾರೆ?

16 ಯೆಹೋವನ ಬಳಿಗೆ ಬರೋಕೆ ಹಾತೊರೆಯುತ್ತಿರೋ ಜನ್ರನ್ನು ಹುಡುಕೋದ್ರಲ್ಲಿ ದೇವದೂತರು ನಮ್ಗೆ ಸಹಾಯ ಮಾಡ್ತಾರೆ ಅಂತ ಅನೇಕ ಅನುಭವಗಳಿಂದ ತಿಳಿದುಬಂದಿದೆ. (ಪ್ರಕ. 14:6) ಈಕ್ವೆಡಾರ್‌ನಲ್ಲಿರೋ ಸಿಲ್ವಿಯೋ ಎಂಬ ಸಹೋದರನ ಉದಾಹರಣೆ ನೋಡಿ. ಅವ್ನು ಯೆಹೋವನತ್ರ ವಾಪಸ್‌ ಬರೋಕೆ ತುಂಬ ಹಂಬಲಿಸುತ್ತಿದ್ದ. ಅಂಗಲಾಚಿ ಬೇಡ್ಕೊಂಡ. ಅವ್ನು ಪ್ರಾರ್ಥನೆ ಮಾಡ್ತಿರುವಾಗ್ಲೇ ಯಾರೋ ಮನೆ ಬಾಗಿಲನ್ನ ತಟ್ಟಿದ್ರು. ನೋಡಿದ್ರೆ ಬಾಗಿಲಲ್ಲಿ ಇಬ್ರು ಹಿರಿಯರು ನಿಂತಿದ್ರು! ಆ ಭೇಟಿಯಲ್ಲೇ ಅವ್ನಿಗೆ ಬೇಕಾದ ಸಹಾಯ ಮಾಡಿದ್ರು.

17. ನಿಷ್ಕ್ರಿಯರಿಗೆ ಸಹಾಯ ಮಾಡ್ದಾಗ ನಮ್ಗೆ ಹೇಗನಿಸುತ್ತೆ?

17 ನಿಷ್ಕ್ರಿಯರು ಯೆಹೋವನ ಬಳಿ ಪುನಃ ಬರೋಕೆ ನಾವು ಸಹಾಯ ಮಾಡ್ದಾಗ ನಮ್ಗೆ ಸಂತೋಷ ಆಗುತ್ತೆ. ನಿಷ್ಕ್ರಿಯರು ಯೆಹೋವನಿಗೆ ಪುನಃ ಆಪ್ತರಾಗೋಕೆ ತುಂಬ ಪ್ರಯತ್ನ ಮಾಡೋ ಒಬ್ಬ ಪಯನೀಯರ್‌ ಸಹೋದರ ಹೇಳೋದು: “ಯೆಹೋವನ ಬಳಿ ವಾಪಸ್‌ ಬಂದಿರೋವ್ರ ಬಗ್ಗೆ ಯೋಚಿಸ್ವಾಗ ನನ್ನ ಕಣ್ತುಂಬಿ ಬರುತ್ತೆ. ಯೆಹೋವ ತನ್ನ ಕುರಿಯನ್ನ ಸೈತಾನನ ಲೋಕದಿಂದ ಕಾಪಾಡಿ ತನ್ನ ಕಡೆಗೆ ಕರಕೊಂಡು ಬಂದಿದ್ದಾನೆ. ಈ ಕೆಲ್ಸದಲ್ಲಿ ಯೆಹೋವನ ಜೊತೆ ಕೈ ಜೋಡಿಸಿದ್ದು ನಂಗೆ ಸಿಕ್ಕಿರೋ ಸುಯೋಗವಾಗಿದೆ.”—ಅ. ಕಾ. 20:35.

18. ನೀವು ನಿಷ್ಕ್ರಿಯರಾಗಿದ್ರೆ ಯಾವ ವಿಷ್ಯದಲ್ಲಿ ಭರವಸೆ ಇಡ್ಬಹುದು?

18 ನೀವು ಯೆಹೋವನಿಂದ ದೂರ ಹೋಗಿದ್ದೀರಾ? ಆತ ಈಗ್ಲೂ ನಿಮ್ಮನ್ನು ತುಂಬ ಪ್ರೀತಿಸ್ತಾನೆ ಅನ್ನೋದನ್ನ ಮರೀಬೇಡಿ. ನೀವು ಪುನಃ ಬರಬೇಕು ಅನ್ನೋದೇ ಆತನಾಸೆ. ಆದ್ರೆ ಆತನತ್ರ ಬರೋಕೆ ನೀವು ಶ್ರಮ ಹಾಕ್ಲೇಬೇಕು. ಯೇಸು ಹೇಳಿದ ಕಥೆಯಲ್ಲಿದ್ದ ತಂದೆ ತರನೇ ಯೆಹೋವ ನೀವು ಬರೋದನ್ನೇ ತುಂಬ ಕಾತರದಿಂದ ಕಾಯ್ತಿದ್ದಾನೆ. ನೀವು ಬಂದಾಗ ತುಂಬ ಪ್ರೀತಿ ಸಂತೋಷದಿಂದ ಸ್ವಾಗತಿಸ್ತಾನೆ.

ಗೀತೆ 123 ಕುರಿಪಾಲರು—ಮನುಷ್ಯರಲ್ಲಿ ದಾನಗಳು

^ ಪ್ಯಾರ. 5 ಕೂಟಕ್ಕೆ ಬರೋದನ್ನ, ಸುವಾರ್ತೆ ಸಾರೋದನ್ನ ನಿಲ್ಲಿಸಿರೋರು ಪುನಃ ತನ್ನ ಬಳಿಗೆ ಬರ್ಬೇಕು ಅನ್ನೋದೇ ಯೆಹೋವನ ಆಸೆ. ಆತನು ಅವ್ರಿಗೆ “ನನ್ನ ಬಳಿಗೆ ಮರಳಿ ಬನ್ನಿ” ಅಂತ ಆಮಂತ್ರಿಸಿದ್ದಾನೆ. ಈ ಆಮಂತ್ರಣವನ್ನು ನಿಷ್ಕ್ರಿಯ ಪ್ರಚಾರಕರು ಸ್ವೀಕರಿಸೋಕೆ ನಾವು ಪ್ರೋತ್ಸಾಹಿಸಬೇಕು. ಅಂಥವ್ರು ಪುನಃ ಯೆಹೋವನ ಬಳಿ ಬರೋಕೆ ಹೇಗೆಲ್ಲಾ ಸಹಾಯ ಮಾಡ್ಬಹುದು ಅನ್ನೋದನ್ನ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

^ ಪ್ಯಾರ. 7 ಕೆಲ್ವು ಹೆಸ್ರುಗಳನ್ನ ಬದಲಾಯಿಸಲಾಗಿದೆ.

^ ಪ್ಯಾರ. 15 ಕೆಲ್ವು ನಿಷ್ಕ್ರಿಯರಿಗೆ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದಿಂದ ಸ್ಟಡಿ ಮಾಡ್ಬೇಕಾಗಬಹುದು. ಇನ್ನು ಕೆಲವ್ರಿಗೆ ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದಿಂದ ಸ್ಟಡಿ ಮಾಡ್ಬೇಕಾಗಬಹುದು. ನಿಷ್ಕ್ರಿಯರಿಗೆ ಯಾರು ಸ್ಟಡಿ ಮಾಡ್ಬೇಕು ಅನ್ನೋದನ್ನು ಸಭೆಯ ಸೇವಾ ಸಮಿತಿ ನಿರ್ಧಾರ ಮಾಡುತ್ತೆ.

^ ಪ್ಯಾರ. 68 ಚಿತ್ರ ವಿವರಣೆ: ಯೆಹೋವನ ಬಳಿ ಪುನಃ ಬರಬೇಕು ಅಂತ ಬಯಸ್ತಿರೋ ಒಬ್ಬ ಸಹೋದರನಿಗೆ ಮೂರು ಸಹೋದರರು ಸಹಾಯ ಮಾಡ್ತಿದ್ದಾರೆ. ಒಬ್ರು ಅವನಿಗೆ ಮೆಸೆಜ್‌ ಮಾಡ್ತಿದ್ದಾರೆ, ಇನ್ನೊಬ್ರು ಪ್ರೀತಿಯನ್ನು ಖುದ್ದಾಗಿ ತೋರಿಸ್ತಿದ್ದಾರೆ. ಮತ್ತೊಬ್ರು ಗಮ್ನ ಕೊಟ್ಟು ಕೇಳ್ಸಿಕೊಳ್ತಿದ್ದಾರೆ.