ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 23

“ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ”

“ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ”

“ಯೆಹೋವನೇ, ನಿನ್ನ ನಾಮವು ಶಾಶ್ವತವಾದದ್ದು.”—ಕೀರ್ತ. 135:13.

ಗೀತೆ 9 ನಮ್ಮ ದೇವರಾದ ಯೆಹೋವನನ್ನು ಸ್ತುತಿಸು!

ಕಿರುನೋಟ *

1-2. ನಾವು ಯಾವ ಎರಡು ವಿಷ್ಯಗಳು ನೆರವೇರೋದನ್ನ ನೋಡಲು ತವಕದಿಂದ ಕಾಯುತ್ತಿದ್ದೇವೆ?

ಯೆಹೋವನ ಜನ್ರಾಗಿರೋ ನಾವು ಎರಡು ವಿಷ್ಯಗಳು ನೆರವೇರೋದನ್ನ ನೋಡಲು ತವಕದಿಂದ ಕಾಯುತ್ತಿದ್ದೇವೆ. (1) ಯೆಹೋವನಿಗೆ ಮಾತ್ರ ಆಳುವ ಹಕ್ಕಿದೆ ಅನ್ನೋದನ್ನು ಎಲ್ರೂ ತಿಳ್ಕೋಬೇಕು. (2) ಆತನ ಹೆಸ್ರು ಪವಿತ್ರೀಕರಣ ಆಗಬೇಕು. ಈ ಎರಡು ವಿಷ್ಯಗಳು ನಮ್ಗೆ ತುಂಬ ಪ್ರಾಮುಖ್ಯ.

2 ನಾವು ಬೈಬಲ್‌ ಕಲ್ತಾಗ ಯೆಹೋವನ ಹೆಸ್ರಿಗೆ ಬಂದಿರೋ ಕಳಂಕ ಹೋಗ್ಬೇಕು ಅಂತ ತಿಳುಕೊಂಡ್ವಿ. ಅಷ್ಟೇ ಅಲ್ಲ, ಒಳ್ಳೇ ರೀತಿಯಲ್ಲಿ ಆಳ್ವಿಕೆ ಮಾಡೋಕಾಗೋದು ಯೆಹೋವನಿಗೆ ಮಾತ್ರ ಅನ್ನೋದು ರುಜುವಾಗ್ಬೇಕು ಅಂತನೂ ತಿಳುಕೊಂಡ್ವಿ. ಹಾಗಾದ್ರೆ, ಯೆಹೋವ ದೇವರಿಗಿರೋ ಆಳುವ ಹಕ್ಕು ಮತ್ತು ಆತನ ಹೆಸ್ರಿನ ಪವಿತ್ರೀಕರಣ ಇವೆರಡು ಬೇರೆ-ಬೇರೆ ವಿವಾದಾಂಶಗಳಾ? ಖಂಡಿತ ಇಲ್ಲ.

3. ಯೆಹೋವನ ಹೆಸ್ರಲ್ಲಿ ಏನೆಲ್ಲಾ ಸೇರಿದೆ?

3 ಯೆಹೋವ ಸರ್ವಶಕ್ತ ದೇವ್ರು, ವಿಶ್ವದ ರಾಜ. ಯೆಹೋವನ ಹೆಸ್ರಲ್ಲಿ ಆತನ ವ್ಯಕ್ತಿತ್ವ, ಗುಣಗಳಲ್ಲದೇ ಆಳ್ವಿಕೆಯ ರೀತಿನೂ ಸೇರಿದೆ. ಹಾಗಾಗಿ ಆತನ ಹೆಸ್ರಿಗೆ ಬಂದಿರೋ ಕಳಂಕ ಹೋಗಿಬಿಟ್ರೆ ಆತನ ಆಳ್ವಿಕೆಯೇ ಅತ್ಯುತ್ತಮ ಅನ್ನೋದು ರುಜುವಾಗುತ್ತೆ. ಅದ್ರಿಂದಲೇ, ಯೆಹೋವನ ಹೆಸ್ರಿಗೂ ಆತ ಆಳುವ ವಿಧಕ್ಕೂ ಸಂಬಂಧ ಇದೆ, ಇವೆರಡು ಬೇರೆ-ಬೇರೆ ವಿವಾದಾಂಶಗಳಲ್ಲ.—“ ವಿವಾದಾಂಶದಲ್ಲಿ ಸೇರಿರೋ ವಿಷ್ಯಗಳು” ಚೌಕ ನೋಡಿ.

4. (ಎ) ಕೀರ್ತನೆ 135:13 ದೇವ್ರ ಹೆಸ್ರಿನ ಬಗ್ಗೆ ಏನು ಹೇಳುತ್ತೆ? (ಬಿ) ಯಾವ ಪ್ರಶ್ನೆಗಳಿಗೆ ಉತ್ರ ತಿಳಿಯಲಿದ್ದೇವೆ?

4 ಯೆಹೋವನ ಹೆಸ್ರು ತುಂಬ ವಿಶೇಷವಾದದ್ದು. (ಕೀರ್ತನೆ 135:13 ಓದಿ.) ಯಾಕೆ ದೇವ್ರ ಹೆಸ್ರು ತುಂಬ ಮುಖ್ಯ? ಈ ಹೆಸ್ರಿಗೆ ಹೇಗೆ ಕಳಂಕ ಬಂತು? ಆ ಕಳಂಕವನ್ನ ದೇವ್ರು ಹೇಗೆ ತೆಗೆದುಹಾಕ್ತಾನೆ? ಆತನ ಹೆಸ್ರಿಗೆ ಬಂದಿರೋ ಕಳಂಕ ತೆಗೆದುಹಾಕೋದ್ರಲ್ಲಿ ನಮ್ಮ ಪಾತ್ರವೇನು? ಈ ಪ್ರಶ್ನೆಗಳಿಗೆ ನಾವೀಗ ಉತ್ರ ತಿಳಿಯೋಣ.

ಹೆಸ್ರು ಯಾಕೆ ಮುಖ್ಯ?

5. ಯೆಹೋವನ ಹೆಸ್ರನ್ನು ಪವಿತ್ರೀಕರಿಸಬೇಕು ಅಂತ ಕೇಳಿಸಿಕೊಂಡಾಗ ಕೆಲವ್ರು ಏನಂತ ಯೋಚಿಸಬಹುದು?

5 ನಾವು ಪ್ರಾರ್ಥಿಸ್ವಾಗ “ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ” ಅಂತ ದೇವ್ರ ಹೆಸ್ರರಿಗೋಸ್ಕರ ಮೊದ್ಲು ಕೇಳಿಕೊಳ್ಳಬೇಕು ಅಂತ ಯೇಸು ಹೇಳಿದ. (ಮತ್ತಾ. 6:9) ಆತನ ಮಾತಿನ ಅರ್ಥವೇನಾಗಿತ್ತು? ಪವಿತ್ರೀಕರಿಸಬೇಕು ಅನ್ನೋದ್ರ ಅರ್ಥ ಶುದ್ಧ ಮಾಡಬೇಕು ಅಂತ. ‘ಯೆಹೋವನ ಹೆಸ್ರು ಈಗಾಗ್ಲೇ ಪವಿತ್ರವಾಗಿದೆಯಲ್ವಾ! ಮತ್ತೆ ಅದನ್ನು ಯಾಕೆ ಪವಿತ್ರೀಕರಿಸಬೇಕು?’ ಅಂತ ಕೆಲವ್ರು ಯೋಚಿಸಬಹುದು. ಇದಕ್ಕೆ ಉತ್ರ ತಿಳುಕೊಳ್ಳಬೇಕಂದ್ರೆ ಒಂದು ಹೆಸ್ರಲ್ಲಿ ಏನೆಲ್ಲಾ ಸೇರಿರುತ್ತೆ ಅನ್ನೋದನ್ನು ತಿಳ್ಕೋಬೇಕು.

6. ಹೆಸ್ರಿಗೆ ಯಾಕೆ ತುಂಬ ಪ್ರಾಮುಖ್ಯತೆ ಇದೆ?

6 ಹೆಸ್ರು ಅನ್ನೋದು ಕೇವಲ ಪೇಪರ್‌ ಮೇಲೆ ಬರೆಯೋ ಅಕ್ಷರಗಳಲ್ಲ ಅಥವಾ ಉಚ್ಚಾರಣೆ ಮಾಡೋ ಪದಗಳಲ್ಲ. ಬೈಬಲ್‌ ಇದ್ರ ಬಗ್ಗೆ ಏನು ಹೇಳುತ್ತೆ ನೋಡಿ: “ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ.” (ಜ್ಞಾನೋ. 22:1; ಪ್ರಸಂ. 7:1) ಹಣ ಐಶ್ವರ್ಯಕ್ಕಿಂತ ಹೆಸ್ರಿಗೆ ಯಾಕಷ್ಟು ಪ್ರಾಮುಖ್ಯತೆ? ಯಾಕಂದ್ರೆ ಒಬ್ರ ಹೆಸ್ರು ಕಿವಿಗೆ ಬಿದ್ದ ತಕ್ಷಣ ಜನ ಆ ವ್ಯಕ್ತಿ ಬಗ್ಗೆ ಏನು ಯೋಚಿಸ್ತಾರೆ ಅನ್ನೋದು ಮನ್ಸಿಗೆ ಬರುತ್ತೆ. ಹಾಗಾಗಿ ಒಬ್ಬನ ಹೆಸ್ರು ಹೇಳೋಕೆ, ಬರೆಯೋಕೆ ಚೆನ್ನಾಗಿದೆ ಅನ್ನೋದು ಮುಖ್ಯ ಅಲ್ಲ. ಒಂದು ಹೆಸ್ರು ಕೇಳಿಸಿಕೊಂಡಾಗ ಆ ವ್ಯಕ್ತಿ ಬಗ್ಗೆ ಜನ್ರ ಮನ್ಸಿಗೆ ಏನು ಬರುತ್ತೆ ಅನ್ನೋದೇ ಮುಖ್ಯ.

7. ಜನ್ರು ಯೆಹೋವನ ಹೆಸ್ರಿಗೆ ಹೇಗೆ ಮಸಿ ಬಳೀತಾರೆ?

7 ಜನ್ರು ಯೆಹೋವನ ಬಗ್ಗೆ ಇಲ್ಲಸಲ್ಲದ ಸುಳ್ಳು ಹೇಳ್ವಾಗ ಅದನ್ನ ಕೇಳಿ ಕೆಲವ್ರು ಆತನ ಬಗ್ಗೆ ತಪ್ಪಾಗಿ ಯೋಚಿಸ್ತಾರೆ. ಹೀಗೆ ಆತನ ಹೆಸ್ರಿಗೆ ಮಸಿ ಬಳೀತಾರೆ. ಯೆಹೋವನ ಹೆಸ್ರಿಗೆ ಮೊದಲ ಬಾರಿಗೆ ಮಸಿ ಬಳಿಯೋ ಪ್ರಯತ್ನ ನಡೆದಿದ್ದು ಏದೆನ್‌ ತೋಟದಲ್ಲಿ. ಅದು ಹೇಗೆ ನಡೀತು ಮತ್ತು ಇದ್ರಿಂದ ನಾವೇನು ಕಲೀಬಹುದು ಅಂತ ನೋಡೋಣ.

ಯೆಹೋವನ ಹೆಸ್ರಿಗೆ ಕಳಂಕ ಹೇಗೆ ಬಂತು?

8. (ಎ) ಆದಾಮ ಹವ್ವಗೆ ಏನು ಗೊತ್ತಿತ್ತು? (ಬಿ) ಅವ್ರಿಬ್ಬರ ಬಗ್ಗೆ ಯಾವ ಪ್ರಶ್ನೆಗಳು ಬರುತ್ತವೆ?

8 ಆದಾಮ ಹವ್ವಗೆ ದೇವ್ರ ಹೆಸ್ರು ಯೆಹೋವ ಅಂತ ಗೊತ್ತಿತ್ತು. ಆತನೇ ಎಲ್ಲವನ್ನೂ ಸೃಷ್ಟಿ ಮಾಡಿದ್ದು, ಜೀವ ಕೊಟ್ಟಿದ್ದು, ಇರೋಕೆ ಸುಂದರ ಸ್ಥಳ ಕೊಟ್ಟಿದ್ದು, ಒಳ್ಳೇ ಸಂಗಾತಿ ಕೊಟ್ಟಿದ್ದು ಅಂತ ಅವ್ರಿಗೆ ಗೊತ್ತಿತ್ತು. (ಆದಿ. 1:26-28; 2:18) ಯೆಹೋವ ಮಾಡಿದ ಈ ಎಲ್ಲಾ ಉಪಕಾರಗಳನ್ನ ಅವ್ರಿಬ್ರು ನೆನಸಿಕೊಳ್ತಿದ್ರಾ? ಯೆಹೋವನಿಗೆ ಆಭಾರಿಗಳಾಗಿಯೇ ಉಳಿದ್ರಾ? ಇದಕ್ಕೆಲ್ಲಾ ಉತ್ತರ ತಿಳುಕೊಳ್ಳಲು ದೇವರ ವೈರಿಯಾದ ಸೈತಾನ ಅವ್ರನ್ನು ಪರೀಕ್ಷಿಸಿದಾಗ ಏನು ಮಾಡಿದ್ರು ಅಂತ ನೋಡೋಣ.

9. (ಎ) ಆದಿಕಾಂಡ 2:16, 17 ಮತ್ತು 3:1-5 ರ ಪ್ರಕಾರ ಯೆಹೋವನು ಆದಾಮ ಹವ್ವಗೆ ಏನಂತ ಹೇಳಿದ್ದನು? (ಬಿ) ಯೆಹೋವ ಹೇಳಿದ್ದನ್ನು ಸೈತಾನ ಹೇಗೆ ತಿರುಚಿದನು?

9 ಆದಿಕಾಂಡ 2:16, 17 ಮತ್ತು 3:1-5 ಓದಿ. ಸೈತಾನ ಒಂದು ಸರ್ಪದ ಮೂಲಕ ಹವ್ವಳಿಗೆ ಈ ಪ್ರಶ್ನೆ ಕೇಳಿದ: “ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ?” ಹೀಗೆ ಕೇಳಿ ಅವನು ದೇವ್ರ ಬಗ್ಗೆ ಪರೋಕ್ಷವಾಗಿ ಸುಳ್ಳು ಹೇಳುತ್ತಿದ್ದ. ನಿಜ ಏನಂದ್ರೆ ಆ ತೋಟದ ಎಲ್ಲಾ ಮರದ ಹಣ್ಣನ್ನು ತಿನ್ನಬಹುದು, ಒಂದು ಮರದ ಹಣ್ಣನ್ನು ಮಾತ್ರ ತಿನ್ನಬಾರ್ದು ಅಂತ ದೇವ್ರು ಹೇಳಿದ್ದನು. ಆ ತೋಟದಲ್ಲಿ ಬೇರೆ ಬೇರೆ ತರದ ಹಣ್ಣಿನ ಮರಗಳಿದ್ದವು. (ಆದಿ. 2:9) ಯೆಹೋವನು ಅವ್ರಿಗೆ ಧಾರಾಳವಾಗಿ ಕೊಟ್ಟಿದ್ದನು. ಆದ್ರೆ ಸೈತಾನ ಕೇಳಿದ ಪ್ರಶ್ನೆ ಈ ಸತ್ಯವನ್ನು ತಿರುಚಿಬಿಟ್ಟಿತು. ‘ದೇವ್ರು ಉದಾರಿಯಲ್ಲ’ ಅಂತ ನೆನಸೋ ತರ ಮಾಡ್ಬಿಟ್ಟನು. ಹೀಗೆ ಹವ್ವಳಲ್ಲಿ ಸಂಶಯದ ಬೀಜ ಬಿತ್ತಿದ. ಅವಳು ಸಹ ‘ದೇವರು ನಮ್ಮಿಂದ ಒಳ್ಳೇದನ್ನು ಮರೆಮಾಚುತ್ತಿದ್ದಾನೆ’ ಅಂತ ಯೋಚಿಸಿರಬೇಕು.

10. (ಎ) ಸೈತಾನ ಹೇಗೆ ದೇವ್ರ ಹೆಸ್ರನ್ನು ನೇರವಾಗಿ ದೂಷಿಸಿದ? (ಬಿ) ಇದ್ರಿಂದ ಏನಾಯ್ತು?

10 ಸೈತಾನ ಈ ಪ್ರಶ್ನೆ ಕೇಳಿದಾಗ ಹವ್ವ ಯೆಹೋವನಿಗೆ ವಿಧೇಯಳಾಗೇ ಇದ್ದಳು. ಅವ್ಳು ಸೈತಾನನಿಗೆ ಉತ್ರ ಕೊಡ್ವಾಗ ದೇವ್ರು ಏನು ನಿರ್ದೇಶನ ಕೊಟ್ಟಿದ್ದನೋ ಅದನ್ನು ಹಾಗೆಯೇ ಹೇಳಿದಳು. ಅಷ್ಟೇ ಅಲ್ಲ, ‘ಆ ಮರದ ಹಣ್ಣನ್ನು ಮುಟ್ಟಲೂಬಾರದು’ ಅಂತ ಸೇರಿಸಿ ಹೇಳಿದಳು. ದೇವ್ರು ಕೊಟ್ಟ ಎಚ್ಚರಿಕೆನಾ ಪಾಲಿಸದೇ ಇದ್ರೆ ಸಾವು ಖಂಡಿತ ಅಂತ ಅವಳಿಗೆ ಗೊತ್ತಿತ್ತು. ಆದ್ರೆ ಸೈತಾನ “ನೀವು ಹೇಗೂ ಸಾಯುವದಿಲ್ಲ” ಅಂತ ಹೇಳ್ದ. (ಆದಿ. 3:2-4) ಇಲ್ಲಿ ಸೈತಾನ ನೇರವಾಗಿಯೇ ಸುಳ್ಳು ಹೇಳಿದ. ಯೆಹೋವ ಒಬ್ಬ ಸುಳ್ಳುಗಾರ ಅಂತ ಹವ್ವ ಯೋಚಿಸುವಂತೆ ಮಾಡಿಬಿಟ್ಟ. ಹೀಗೆ ಅವನು ಚಾಡಿಕೋರ ಆದ. ಹವ್ವ ಕೂಡ ಅವನು ಹೇಳಿದ್ದನ್ನು ನಂಬಿ ಚೆನ್ನಾಗಿ ಮೋಸಹೋದಳು. (1 ತಿಮೊ. 2:14) ಯೆಹೋವನಿಗಿಂತ ಸೈತಾನನ ಮೇಲೆ ಭರವಸೆ ಇಟ್ಟಳು. ಹೀಗೆ ದೊಡ್ಡ ತಪ್ಪು ಮಾಡಿಬಿಟ್ಟಳು. ಯೆಹೋವನಿಗೆ ಅವಿಧೇಯಳಾಗಿ ತಿನ್ನಬಾರದೆಂದು ಹೇಳಿದ್ದ ಹಣ್ಣನ್ನು ತಿಂದುಬಿಟ್ಟಳು. ಆಮೇಲೆ ಆದಾಮನಿಗೂ ಕೊಟ್ಟಳು.—ಆದಿ. 3:6.

11. (ಎ) ಆದಾಮ ಹವ್ವ ಇಬ್ರೂ ಏನು ಮಾಡಬಹುದಿತ್ತು? (ಬಿ) ಆದ್ರೆ ಅವ್ರಿಬ್ಬರು ಏನು ಮಾಡ್ಲಿಲ್ಲ?

11 ಒಂದುವೇಳೆ, ಹವ್ವಳು ಸೈತಾನನಿಗೆ ಹೀಗೆ ಹೇಳಿದ್ದಿದ್ರೆ ಹೇಗಿರುತ್ತಿತ್ತು ಯೋಚ್ಸಿ: “ನೀನ್ಯಾರು ಅಂತ ನನಗೆ ಗೊತ್ತಿಲ್ಲ, ನನ್ಗೆ ಯೆಹೋವ ಮಾತ್ರ ಗೊತ್ತು. ಅವ್ರು ನನ್ನಪ್ಪ, ನಾನು ಅವ್ರನ್ನು ತುಂಬ ಪ್ರೀತಿಸ್ತೀನಿ, ನಂಬ್ತೀನಿ. ನಮ್ಗೆ ಏನೆಲ್ಲಾ ಬೇಕೋ ಅದನ್ನ ಕೊಟ್ಟಿರೋದೂ ಅವ್ರೇ. ನಮ್ಮಪ್ಪ ಬಗ್ಗೆ ಮಾತಾಡೋಕೆ ನಿಂಗೆಷ್ಟು ಧೈರ್ಯ? ಮೊದ್ಲು ಇಲ್ಲಿಂದ ತೊಲಗು!” ಹೀಗೆ ಹವ್ವ ಹೇಳಿದ್ದಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ! ತನ್ನ ಮಗಳು ತನ್ನ ಪರ ಮಾತಾಡೋದನ್ನು ನೋಡಿ ಯೆಹೋವನಿಗೆ ಎಷ್ಟು ಖುಷಿಯಾಗ್ತಿತ್ತು! (ಜ್ಞಾನೋ. 27:11) ಆದ್ರೆ ಹವ್ವ ಯೆಹೋವನಿಗೆ ನಿಷ್ಠಳಾಗಿರಲಿಲ್ಲ. ಆದಾಮನಿಗೂ ನಿಷ್ಠೆ ಇರಲಿಲ್ಲ. ಅವ್ರಿಬ್ಬರಿಗೂ ಯೆಹೋವನ ಮೇಲೆ ಪ್ರೀತಿ ಇರಲಿಲ್ಲ. ಹಾಗಾಗಿ ಸೈತಾನನು ಯೆಹೋವನ ಹೆಸ್ರಿಗೆ ಕಳಂಕ ತಂದಾಗ ಅವ್ರಿಬ್ಬರು ಯೆಹೋವನ ಪರ ಮಾತಾಡ್ಲಿಲ್ಲ.

12. (ಎ) ಸೈತಾನನು ಹವ್ವಳ ಮನಸ್ಸಲ್ಲಿ ಹೇಗೆ ಸಂಶಯದ ಬೀಜ ಬಿತ್ತಿದ? (ಬಿ) ಆದಾಮ ಹವ್ವ ಏನು ಮಾಡಲಿಲ್ಲ?

12 ನಾವೀಗಾಗಲೇ ನೋಡಿದಂತೆ ಸೈತಾನ ಮೊದಲಿಗೆ ಹವ್ವಳ ಮನಸ್ಸಲ್ಲಿ ಸಂಶಯದ ಬೀಜ ಬಿತ್ತಿದ. ‘ಯೆಹೋವ ಒಳ್ಳೇ ಅಪ್ಪ ಅಲ್ಲ’ ಅಂತ ಹವ್ವ ಯೋಚಿಸೋ ತರ ಮಾಡ್ಬಿಟ್ಟ. ಹೀಗೆ ಅವನು ಯೆಹೋವನ ಹೆಸ್ರಿಗೆ ಕಳಂಕ ತಂದುಬಿಟ್ಟ. ಯೆಹೋವನ ಬಗ್ಗೆ ಅವನು ಸುಳ್ಳು ಹೇಳ್ದಾಗ ಆದಾಮ ಹವ್ವ ಯೆಹೋವನ ಪಕ್ಷ ವಹಿಸಲಿಲ್ಲ. ಬದ್ಲಿಗೆ ಸೈತಾನನ ಮಾತು ಕೇಳಿ ತಮ್ಮ ತಂದೆಯ ವಿರುದ್ಧವೇ ದಂಗೆ ಎದ್ದುಬಿಟ್ರು. ಇಂದು ಸಹ ಸೈತಾನ ಇಂಥದ್ದೇ ಕುತಂತ್ರಗಳನ್ನು ಬಳಸ್ತಾನೆ. ಯೆಹೋವನ ಬಗ್ಗೆ ಸುಳ್ಳು ಹೇಳಿ ಆತನಿಗೆ ಕೆಟ್ಟ ಹೆಸ್ರು ಬರುವಂತೆ ಮಾಡ್ತಾನೆ. ಸೈತಾನನ ಸುಳ್ಳನ್ನು ನಂಬುವ ಜನ್ರು ಯೆಹೋವನ ಆಳ್ವಿಕೆನಾ ತಿರಸ್ಕರಿಸ್ತಾರೆ.

ಯೆಹೋವ ತನ್ನ ಹೆಸ್ರನ್ನು ಹೇಗೆ ಪವಿತ್ರೀಕರಿಸ್ತಾನೆ?

13. ಯೆಹೆಜ್ಕೇಲ 36:23 ರ ಪ್ರಕಾರ ಬೈಬಲಿನ ಮುಖ್ಯ ಸಂದೇಶ ಏನಾಗಿದೆ?

13 ಯೆಹೋವನ ಹೆಸ್ರಿಗೆ ಕಳಂಕ ಬಂದಾಗ ಆತ ಕೈಕಟ್ಟಿ ಸುಮ್ಮನೆ ಕೂತನಾ? ಇಲ್ಲ! ಏದೆನ್‌ ತೋಟದಲ್ಲಿ ತನ್ನ ಹೆಸ್ರಿಗೆ ಬಂದ ಕಳಂಕವನ್ನು ತೆಗೆದುಹಾಕೋಕೆ ಯೆಹೋವ ಏನೆಲ್ಲಾ ಮಾಡಿದ್ದಾನೆ ಅನ್ನೋದ್ರ ಬಗ್ಗೆ ಬೈಬಲ್‌ ತಿಳಿಸುತ್ತೆ. (ಆದಿ. 3:15) ನಿಜ ಏನಂದ್ರೆ, ಯೆಹೋವ ತನ್ನ ಮಗನ ಆಳ್ವಿಕೆ ಮೂಲಕ ತನ್ನ ಹೆಸ್ರಿಗೆ ಬಂದಿರೋ ಕಳಂಕನಾ ತೆಗೆದುಹಾಕ್ತಾನೆ ಮತ್ತು ಭೂಮಿಯಲ್ಲಿ ನೀತಿ, ಶಾಂತಿಯನ್ನು ಪುನಸ್ಥಾಪಿಸ್ತಾನೆ ಅನ್ನೋದೇ ಇಡೀ ಬೈಬಲಿನ ಸಾರಾಂಶ. ಯೆಹೋವ ತನ್ನ ಹೆಸ್ರನ್ನು ಹೇಗೆ ಪವಿತ್ರೀಕರಿಸುತ್ತಾನೆ ಅನ್ನೋದನ್ನು ಬೈಬಲ್‌ ಕೊಡುವ ಮಾಹಿತಿಯಿಂದ ನಾವು ತಿಳುಕೊಳ್ಳಬಹುದು.—ಯೆಹೆಜ್ಕೇಲ 36:23 ಓದಿ.

14. ಯೆಹೋವ ಏದೆನ್‌ನ ದಂಗೆಯನ್ನು ನಿಭಾಯಿಸಿದ ರೀತಿ ಆತನ ಹೆಸ್ರನ್ನು ಹೇಗೆ ಪವಿತ್ರೀಕರಿಸಿತು?

14 ಯೆಹೋವನ ಉದ್ದೇಶ ನೆರವೇರಬಾರದು ಅಂತ ಸೈತಾನ ಏನೇನೋ ಪ್ರಯತ್ನ ಮಾಡಿದ್ದಾನೆ. ಆದ್ರೆ ಪ್ರತಿ ಸಲ ಪ್ರಯತ್ನಿಸಿದಾಗ್ಲೂ ಅವು ಮಣ್ಣುಮುಕ್ಕಿವೆ. ಬೈಬಲಿನುದ್ದಕ್ಕೂ ಯೆಹೋವ ತನ್ನ ಉದ್ದೇಶ ನೆರವೇರಿಸೋಕೆ ಏನೆಲ್ಲಾ ಮಾಡಿದ್ದಾನೆ ಅಂತ ಇದೆ. ಯೆಹೋವ ಪ್ರೀತಿಯ ತಂದೆ, ಒಳ್ಳೇ ರಾಜ ಅನ್ನೋದಕ್ಕೆ ಇದು ರುಜುವಾತಾಗಿದೆ. ಸೈತಾನ ದಂಗೆ ಎದ್ದಿದ್ದು ಮತ್ತು ತುಂಬ ಜನ ಅವನ ಕಡೆಗೆ ಹೋಗಿದ್ದು ಯೆಹೋವನಿಗೆ ತುಂಬ ನೋವು ತಂದಿದೆ. (ಕೀರ್ತ. 78:40) ಆದ್ರೂ ತನ್ನ ಹೆಸ್ರಿಗೆ ಮಸಿಬಳಿಯಲು ಪ್ರಯತ್ನ ನಡೆದಾಗೆಲ್ಲಾ ಯೆಹೋವ ವಿವೇಕ, ತಾಳ್ಮೆ ಮತ್ತು ನ್ಯಾಯದಿಂದ ನಡಕೊಂಡಿದ್ದಾನೆ. ತನಗಿರೋ ಬಲಾಢ್ಯ ಶಕ್ತಿನಾ ಬೇರೆ ಬೇರೆ ವಿಧಗಳಲ್ಲಿ ತೋರಿಸಿದ್ದಾನೆ. ಎಲ್ಲಕ್ಕಿಂತ ಆತನು ಮಾಡೋ ಪ್ರತಿ ವಿಷ್ಯಗಳಲ್ಲೂ ಪ್ರೀತಿ ಎದ್ದು ಕಾಣುತ್ತೆ. (1 ಯೋಹಾ. 4:8) ತನ್ನ ಹೆಸ್ರನ್ನು ಪವಿತ್ರೀಕರಿಸೋಕೆ ಯೆಹೋವ ಅವಿರತವಾಗಿ ಕೆಲ್ಸ ಮಾಡ್ತಿದ್ದಾನೆ.

ಯೆಹೋವನ ಬಗ್ಗೆ ಸೈತಾನ ಹವ್ವಳ ಹತ್ರ ಸುಳ್ಳು ಹೇಳ್ದ, ಶತಮಾನಗಳುದ್ದಕ್ಕೂ ಇದನ್ನೇ ಮಾಡ್ತಿದ್ದಾನೆ (ಪ್ಯಾರ 9-10 ಮತ್ತು 15 ನೋಡಿ) *

15. (ಎ) ದೇವ್ರ ಹೆಸ್ರಿಗೆ ಇವತ್ತು ಸೈತಾನ ಹೇಗೆ ಕಳಂಕ ತರುತ್ತಿದ್ದಾನೆ? (ಬಿ) ಇದ್ರಿಂದ ಏನಾಗಿದೆ?

15 ಸೈತಾನ ಇವತ್ತು ಸಹ ದೇವ್ರ ಹೆಸ್ರಿಗೆ ಕಳಂಕ ತರುತ್ತಿದ್ದಾನೆ. ‘ದೇವ್ರು ಅನ್ಯಾಯ ಮಾಡ್ತಾನೆ, ಆತನಿಗೆ ಶಕ್ತಿ ಇಲ್ಲ, ವಿವೇಕ ಇಲ್ಲ, ಪ್ರೀತಿಯಿಲ್ಲ’ ಅಂತ ಜನ ಯೋಚಿಸುವಂತೆ ಸೈತಾನ ಮಾಡ್ತಿದ್ದಾನೆ. ಉದಾಹರಣೆಗೆ, ಯೆಹೋವನು ಸೃಷ್ಟಿಕರ್ತನೇ ಅಲ್ಲ ಅಂತ ಜನ ನಂಬಬೇಕೆಂದು ಸೈತಾನ ತುಂಬ ಪ್ರಯತ್ನ ಮಾಡ್ತಾನೆ. ಒಂದುವೇಳೆ ಜನ ದೇವ್ರಿದ್ದಾನೆಂದು ನಂಬುವುದಾದ್ರೆ, ದೇವ್ರು ತುಂಬ ಕಟ್ಟುನಿಟ್ಟು, ಆತ ಮಾಡೋದೆಲ್ಲಾ ಅನ್ಯಾಯ ಅಂತ ಯೋಚಿಸುವಂತೆ ಮಾಡಿಬಿಡುತ್ತಾನೆ. ಅಷ್ಟೇ ಅಲ್ಲ, ಯೆಹೋವ ತುಂಬ ಕ್ರೂರಿ, ಜನ್ರನ್ನು ನರಕದಲ್ಲಿ ಹಾಕಿ ಸುಡ್ತಾನೆ ಅಂತನೂ ಸೈತಾನ ಕಲಿಸ್ತಾನೆ. ಇದನ್ನೆಲ್ಲಾ ನಂಬೋ ಜನ್ರು ಯೆಹೋವನನ್ನು ತಿರಸ್ಕರಿಸ್ತಾರೆ. ಎಷ್ಟರ ತನಕ ಯೆಹೋವನು ಸೈತಾನನನ್ನು ನಾಶ ಮಾಡಲ್ವೋ ಅಷ್ಟರ ತನಕ ಸೈತಾನ ಯೆಹೋವನ ಬಗ್ಗೆ ಅಪಪ್ರಚಾರ ಮಾಡೋದನ್ನು ನಿಲ್ಸಲ್ಲ. ನೀವೂ ಯೆಹೋವನನ್ನು ತಿರಸ್ಕರಿಸಬೇಕು ಅನ್ನೋದೇ ಅವನ ಗುರಿ. ಆ ಗುರಿನಾ ಅವನು ಸಾಧಿಸೋಕೆ ಆಗುತ್ತಾ?

ಈ ವಿವಾದಾಂಶದಲ್ಲಿ ನಿಮ್ಮ ಪಾತ್ರವೇನು?

16. ಆದಾಮ ಹವ್ವ ಮಾಡದ ಯಾವ ವಿಷ್ಯನಾ ನೀವು ಮಾಡ್ಬಹುದು?

16 ಯೆಹೋವನು ತನ್ನ ಹೆಸ್ರನ್ನು ಪವಿತ್ರೀಕರಿಸೋದ್ರಲ್ಲಿ ಧೂಳಿಯಾದ ನಮ್ಗೂ ಒಂದು ಪಾಲನ್ನು ಕೊಟ್ಟಿದ್ದಾನೆ. ಆದಾಮ ಹವ್ವ ಮಾಡೋಕೆ ತಪ್ಪಿ ಹೋದದ್ದನ್ನು ನೀವು ಮಾಡ್ಬಹುದು. ಈ ಲೋಕದ ತುಂಬ ಯೆಹೋವನ ಹೆಸ್ರನ್ನು ದೂಷಿಸೋ ಜನ್ರೇ ತುಂಬಿಕೊಂಡಿದ್ದಾರೆ. ಅಂಥವ್ರಿಗೆ ಯೆಹೋವ ಒಳ್ಳೇ ದೇವ್ರು ಅಂತ ಹೇಳೋ ಅವಕಾಶ ನಿಮಗಿದೆ. ಆತನು ಪರಿಶುದ್ಧ, ನೀತಿವಂತ, ಒಳ್ಳೆಯ ಮತ್ತು ಪ್ರೀತಿಯ ದೇವ್ರು ಅಂತ ನೀವು ಅವ್ರಿಗೆ ತಿಳಿಸಬಹುದು. (ಯೆಶಾ. 29:23) ಆತನ ಆಡಳಿತವನ್ನ ಬೆಂಬಲಿಸ್ತೀರಿ ಅಂತ ತೋರಿಸಿಕೊಡ್ಬಹುದು. ಆತನ ಆಳ್ವಿಕೆನೇ ಅತ್ಯುತ್ತಮವಾದದ್ದು ಮತ್ತು ಆತನ ಆಳ್ವಿಕೆಯಲ್ಲಿ ಮಾತ್ರ ಶಾಂತಿ-ಸಂತೋಷ ಇರುತ್ತೆ ಅಂತ ಜನ್ರಿಗೆ ಹೇಳ್ಬಹುದು.—ಕೀರ್ತ. 37:9, 37; 146:5, 6, 10.

17. ಯೇಸು ಹೇಗೆ ತನ್ನ ತಂದೆಯ ಹೆಸ್ರನ್ನು ಪ್ರಸಿದ್ಧಿಪಡಿಸಿದನು?

17 ನಾವು ಯೆಹೋವನ ಹೆಸ್ರನ್ನು ಸಮರ್ಥಿಸಿದಾಗ ಯೇಸುವಿನ ಮಾದರಿಯನ್ನು ಅನುಕರಿಸ್ತೇವೆ. (ಯೋಹಾ. 17:26) ಯೇಸು ಜನ್ರಿಗೆ ತನ್ನ ತಂದೆ ಹೆಸ್ರನ್ನು ತಿಳಿಸಿದ್ದಲ್ಲದೇ ಅದಕ್ಕೆ ಮಹಿಮೆ ತಂದ. ಉದಾಹರಣೆಗೆ, ಫರಿಸಾಯರು ಯೆಹೋವನ ಬಗ್ಗೆ ಸುಳ್ಳನ್ನು ಕಲಿಸಿದಾಗ ಅದು ತಪ್ಪೆಂದು ತೋರಿಸಿದ. ಫರಿಸಾಯರು ದೇವ್ರು ಒಬ್ಬ ಕ್ರೂರಿ, ನಮ್ಮ ಸಾಮರ್ಥ್ಯಕ್ಕೆ ಮೀರಿದ್ದನ್ನು ಕೇಳ್ತಾನೆ, ತುಂಬ ದೂರ ಇದ್ದಾನೆ, ಆತನಿಗೆ ಕರುಣೆ ಇಲ್ಲ ಅಂತೆಲ್ಲಾ ಜನ್ರು ನೆನಸುವಂತೆ ಕಲಿಸುತ್ತಿದ್ದರು. ಆದ್ರೆ ಯೇಸು ಹಾಗೆ ಮಾಡ್ಲಿಲ್ಲ. ಯೆಹೋವ ನ್ಯಾಯವಂತನು, ತಾಳ್ಮೆ, ಪ್ರೀತಿ ಇರೋ ದೇವ್ರು ಮತ್ತು ತಪ್ಪುಗಳನ್ನು ಕ್ಷಮಿಸ್ತಾನೆ ಅಂತ ಕಲಿಸಿದ. ಅಷ್ಟೇ ಅಲ್ಲ, ತನ್ನ ಜೀವನದಲ್ಲೂ ಯೆಹೋವನ ಗುಣಗಳನ್ನು ಪರಿಪೂರ್ಣವಾಗಿ ತೋರಿಸಿದ. ಇದ್ರಿಂದನೂ ಜನ್ರಿಗೆ ಯೆಹೋವ ಎಷ್ಟು ಒಳ್ಳೇ ದೇವ್ರು ಅನ್ನೋದು ಗೊತ್ತಾಯ್ತು.—ಯೋಹಾ. 14:9.

18. ಯೆಹೋವ ದೇವ್ರ ಬಗ್ಗೆ ಸೈತಾನ ಹೇಳಿರೋದೆಲ್ಲಾ ಸುಳ್ಳು ಅಂತ ನಾವು ಹೇಗೆ ತೋರಿಸಿಕೊಡ್ಬಹುದು?

18 ಯೇಸು ತರ ನಾವು ಸಹ ಯೆಹೋವ ದೇವ್ರು ಎಷ್ಟು ಒಳ್ಳೆಯವನು, ಆತ ನಮ್ಮನ್ನು ಎಷ್ಟು ಪ್ರೀತಿಸ್ತಾನೆ ಅಂತ ಜನ್ರಿಗೆ ಕಲಿಸಬಹುದು. ಹೀಗೆ ಮಾಡಿದಾಗ ಯೆಹೋವನ ಬಗ್ಗೆ ಸೈತಾನ ಹೇಳಿರೋದೆಲ್ಲಾ ಸುಳ್ಳು, ಅದನ್ನು ನಾವು ಒಪ್ಪಲ್ಲ ಅಂತ ತೋರಿಸಿಕೊಡ್ತೇವೆ. ಇದ್ರಿಂದ ಜನ್ರ ಹೃದಯದಲ್ಲಿ ಯೆಹೋವನ ಬಗ್ಗೆ ಗೌರವ ಬೆಳೆಯುತ್ತೆ. ಹೀಗೆ ನಾವು ಯೆಹೋವನ ಹೆಸ್ರನ್ನು ಪವಿತ್ರೀಕರಿಸುತ್ತೇವೆ. ಅಷ್ಟೇ ಅಲ್ಲ, ನಾವು ಅಪರಿಪೂರ್ಣರಾಗಿದ್ರೂ ಯೆಹೋವನನ್ನು ಅನುಕರಿಸೋಕೆ ನಮ್ಮ ಕೈಲಾಗುತ್ತೆ. (ಎಫೆ. 5:1, 2) ನಮ್ಮ ನಡೆ ನುಡಿಯಲ್ಲಿ ಯೆಹೋವನ ಗುಣಗಳನ್ನು ಅನುಕರಿಸಿದಾಗ ಆತ ಎಷ್ಟು ಒಳ್ಳೇ ದೇವ್ರು ಅಂತ ಜನ್ರಿಗೆ ಗೊತ್ತಾಗುತ್ತೆ. ಹೀಗೂ ನಾವು ಆತನ ಹೆಸ್ರನ್ನು ಪವಿತ್ರೀಕರಿಸ್ತೇವೆ. ಯೆಹೋವ ದೇವ್ರ ಕುರಿತ ಸತ್ಯವನ್ನ ಜನ್ರಿಗೆ ತಿಳಿಸಿದಾಗ ಅವ್ರಿಗೆ ಆತನ ಬಗ್ಗೆ ಇರೋ ತಪ್ಪು ಕಲ್ಪನೆಗಳನ್ನು ನಾವು ಕೆಡವಿಹಾಕ್ತೇವೆ. * ಅಪರಿಪೂರ್ಣರಾದ ನಾವು ಯೆಹೋವನಿಗೆ ನಿಯತ್ತಾಗಿ ಉಳಿಯೋ ಮೂಲಕವೂ ಆತನ ಹೆಸ್ರನ್ನು ಪವಿತ್ರೀಕರಿಸ್ಬಹುದು.—ಯೋಬ 27:5.

ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ಯೆಹೋವ ಎಷ್ಟು ಒಳ್ಳೆಯವನು, ಎಷ್ಟು ಪ್ರೀತಿಸ್ತಾನೆ ಅನ್ನೋದನ್ನು ಕಲಿಸ್ಬೇಕು (ಪ್ಯಾರ 18-19 ನೋಡಿ) *

19. ಜನ್ರಿಗೆ ಕಲಿಸ್ವಾಗ ನಮ್ಮ ಮುಖ್ಯ ಗುರಿ ಏನಾಗಿರಬೇಕು ಅಂತ ತಿಳುಕೊಳ್ಳೋಕೆ ಯೆಶಾಯ 63:7 ಹೇಗೆ ಸಹಾಯ ಮಾಡುತ್ತೆ?

19 ನಾವು ಇನ್ನೊಂದು ಅಮೂಲ್ಯ ಪಾಠವನ್ನೂ ಕಲೀಬಹುದು. ಬೇರೆಯವ್ರಿಗೆ ಬೈಬಲ್‌ ಸತ್ಯವನ್ನ ಕಲಿಸುವಾಗ ಇಡೀ ವಿಶ್ವವನ್ನು ಆಳುವ ಹಕ್ಕು ಯೆಹೋವನಿಗೆ ಮಾತ್ರ ಇದೆ, ಅದು ನೂರಕ್ಕೆ ನೂರು ಸತ್ಯ ಅನ್ನೋದನ್ನು ಒತ್ತಿಹೇಳ್ಬಹುದು. ಯೆಹೋವನ ನಿಯಮಗಳನ್ನು ಕಲಿಸೋದು ತುಂಬ ಪ್ರಾಮುಖ್ಯನೇ. ಆದ್ರೆ ನಮ್ಮ ಮುಖ್ಯ ಗುರಿ ಯೆಹೋವ ಎಷ್ಟು ಪ್ರೀತಿಸ್ತಾನೆ, ಆತನಿಗೆ ಹೇಗೆ ನಿಷ್ಠೆ ತೋರಿಸ್ಬೇಕು ಅಂತ ಜನ್ರಿಗೆ ಕಲಿಸೋದೇ ಆಗಿದೆ. ಇದಕ್ಕಾಗಿ ನಾವು ಯೆಹೋವನ ಅದ್ಭುತ ಗುಣಗಳ ಬಗ್ಗೆ, ಯೆಹೋವ ನಿಜವಾಗ್ಲೂ ಎಂಥವನಾಗಿದ್ದಾನೆ ಅನ್ನೋದನ್ನು ಒತ್ತಿಹೇಳ್ಬೇಕು. (ಯೆಶಾಯ 63:7 ಓದಿ.) ಆಗ ಜನ್ರು ಯೆಹೋವನನ್ನು ಪ್ರೀತಿಸ್ತಾರೆ ಮತ್ತು ಆತನಿಗೆ ನಿಷ್ಠರಾಗಿ ಉಳಿಯೋಕೆ ಪ್ರಯತ್ನಿಸ್ತಾರೆ.

20. ಮುಂದಿನ ಲೇಖನದಲ್ಲಿ ನಾವೇನನ್ನು ಚರ್ಚಿಸಲಿದ್ದೇವೆ?

20 ಯೆಹೋವನನ್ನು ಜನ್ರು ಮಹಿಮೆ ಪಡಿಸೋಕೆ ಮತ್ತು ಆತನಿಗೆ ಆಪ್ತರಾಗೋಕೆ ನಮ್ಮ ನಡೆನುಡಿ ಮತ್ತು ಬೋಧನೆಯಿಂದ ಹೇಗೆ ಕಲಿಸಬಹುದು? ಇದ್ರ ಬಗ್ಗೆ ಮುಂದಿನ ಲೇಖನದಲ್ಲಿ ನೋಡಲಿದ್ದೇವೆ.

ಗೀತೆ 138 ಯೆಹೋವ ನಿನ್ನ ನಾಮ

^ ಪ್ಯಾರ. 5 ಇಂದು ಯಾವ ವಿವಾದಾಂಶ ಇತ್ಯರ್ಥ ಆಗ್ಬೇಕಾಗಿದೆ? ಇದೊಂದು ದೊಡ್ಡ ವಿವಾದಾಂಶ ಆಗಿದೆ ಯಾಕೆ? ಇದ್ರಲ್ಲಿ ನಮ್ಮ ಪಾತ್ರವೇನು? ಈ ಪ್ರಶ್ನೆಗಳಿಗೆ ಮತ್ತು ಇದಕ್ಕೆ ಸಂಬಂಧಪಟ್ಟ ಬೇರೆ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳೋದ್ರಿಂದ ಯೆಹೋವನ ಜೊತೆಗಿರೋ ನಮ್ಮ ಸಂಬಂಧ ಇನ್ನಷ್ಟು ಬಲವಾಗುತ್ತೆ.

^ ಪ್ಯಾರ. 18 ಕೆಲವೊಮ್ಮೆ ನಮ್ಮ ಪ್ರಕಾಶನಗಳಲ್ಲಿ ಯೆಹೋವನ ಹೆಸ್ರಿನ ನಿರ್ದೋಷೀಕರಣ ಆಗುವ ಅಗತ್ಯವಿಲ್ಲ, ಯಾಕಂದ್ರೆ ದೇವ್ರಿಗೆ ಯೆಹೋವ ಅನ್ನೋ ಹೆಸ್ರು ಸೂಕ್ತ ಅಲ್ಲ ಅಂತ ಯಾರು ಯಾವತ್ತಿಗೂ ಹೇಳಿಲ್ಲ ಅಂತ ತಿಳಿಸಲಾಗಿದೆ. ಆದ್ರೆ ಇದ್ರ ಬಗ್ಗೆ ಸ್ವಲ್ಪ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕೆಂದು 2017 ರ ವಾರ್ಷಿಕ ಕೂಟದಲ್ಲಿ ವಿವರಿಸಲಾಯ್ತು. ಆ ಕೂಟದ ಅಧ್ಯಕ್ಷರು ಹೀಗೆ ಹೇಳಿದ್ರು: “ಸರಳವಾಗಿ ಹೇಳೋದಾದ್ರೆ, ಯೆಹೋವನ ನಾಮವು ನಿರ್ದೋಷಿಕರಿಸಲ್ಪಡಲಿ ಅಂತ ಪ್ರಾರ್ಥಿಸುವುದು ತಪ್ಪಲ್ಲ. ಯಾಕಂದ್ರೆ ಆತನ ನಾಮ ಕೂಡ ನಿರ್ದೋಷೀಕರಣ ಆಗುವ ಅಗತ್ಯವಿದೆ.”—jw.org® ವೆಬ್‌ಸೈಟ್‌ನಲ್ಲಿ ಜನವರಿ 2018 ರ ಕಾರ್ಯಕ್ರಮ ನೋಡಿ. ಇದಕ್ಕಾಗಿ ಲೈಬ್ರರಿ > JW ಪ್ರಸಾರ ವಿಭಾಗಕ್ಕೆ ಹೋಗಿ.

^ ಪ್ಯಾರ. 62 ಚಿತ್ರ ವಿವರಣೆ: ಸೈತಾನ ಹವ್ವಳ ಹತ್ರ ದೇವರೊಬ್ಬ ಸುಳ್ಳುಗಾರ ಅಂತ ಹೇಳಿ ಯೆಹೋವನ ಹೆಸ್ರಿಗೆ ಕಳಂಕ ತಂದ. ಶತಮಾನಗಳುದ್ದಕ್ಕೂ ದೇವರ ಬಗ್ಗೆ ಅಪಪ್ರಚಾರ ಮಾಡ್ತಾ ಬಂದಿದ್ದಾನೆ. ಉದಾಹರಣೆಗೆ ದೇವರು ಕ್ರೂರಿ, ಜನ್ರನ್ನು ನರಕದಲ್ಲಿ ಹಾಕಿ ಸುಡ್ತಾನೆ ಮತ್ತು ಆತ ಮನುಷ್ಯರನ್ನು ಸೃಷ್ಟಿ ಮಾಡಿಲ್ಲ, ಅವ್ರು ವಿಕಾಸವಾಗಿ ಬಂದಿದ್ದಾರೆ ಅನ್ನೋ ಸುಳ್ಳು ವಿಚಾರಗಳನ್ನು ಕಲಿಸುತ್ತಿದ್ದಾನೆ.

^ ಪ್ಯಾರ. 64 ಚಿತ್ರ ವಿವರಣೆ: ಒಬ್ಬ ಸಹೋದರ ಬೈಬಲ್‌ ಸ್ಟಡಿ ಮಾಡ್ವಾಗ ಯೆಹೋವನ ಗುಣಗಳ ಬಗ್ಗೆ ಒತ್ತಿಹೇಳ್ತಿದ್ದಾರೆ.