ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ವನಿಯಂತ್ರಣ—ಯೆಹೋವನ ಮೆಚ್ಚಿಸಲು ಬೇಕೀ ಗುಣ

ಸ್ವನಿಯಂತ್ರಣ—ಯೆಹೋವನ ಮೆಚ್ಚಿಸಲು ಬೇಕೀ ಗುಣ

“ನಮ್‌ ಚಿಕ್ಕಮ್ಮನ ಮಗ ನನ್ನ ಜೊತೆ ಜಗಳಕ್ಕೆ ಬಂದ. ಕೋಪದಲ್ಲಿ ಅವ್ನ ಕತ್ತನ್ನ ಹಿಸುಕಿದೆ, ಅವನನ್ನ ಸಾಯಿಸ್ಬೇಕು ಅಂತ ಅನಿಸ್ತು.”—ಪೌಲ್‌.

“ಮನೇಲಿ ಚಿಕ್‌ ಚಿಕ್ಕದಕ್ಕೆಲ್ಲ ರೇಗಾಡ್ತಿದ್ದೆ. ಟೇಬಲನ್ನ, ಚೇರನ್ನ, ಕೈಗೆ ಸಿಕ್ಕಿದನ್ನೆಲ್ಲ ಒಡೆದು ಹಾಕ್ತಿದ್ದೆ.”—ಮಾರ್ಕೋ.

ನಮ್ಗೆ ಇವರಷ್ಟು ಕೋಪ ಬರದೇ ಇರ್ಬಹುದು. ಆದ್ರೂ ಆಗಾಗ ನಮ್ಮನ್ನ ಕಂಟ್ರೋಲ್‌ ಮಾಡ್ಕೊಳ್ಳೋಕೆ ಕಷ್ಟ ಆಗುತ್ತೆ. ಇದಕ್ಕೆಲ್ಲ ಆದಾಮನಿಂದ ಬಂದಿರೋ ಪಾಪನೇ ಕಾರಣ. (ರೋಮ. 5:12) ಕೆಲವ್ರಿಗೆ ಪೌಲ್‌ ಮತ್ತು ಮಾರ್ಕೋ ಥರ ಕೋಪನ ನಿಯಂತ್ರಿಸೋಕೆ ಸ್ವಲ್ಪ ಕಷ್ಟ. ಇನ್ನು ಕೆಲವ್ರಿಗೆ ಆಲೋಚನೆಯನ್ನ ನಿಯಂತ್ರಿಸೋಕೆ ಕಷ್ಟ. ಅವ್ರು ಯಾವಾಗ್ಲೂ ಅವರಿಗಿರೋ ಭಯದ ಬಗ್ಗೆ, ಅವರನ್ನ ಕುಗ್ಗಿಸೋ ವಿಷ್ಯಗಳ ಬಗ್ಗೆ ಯೋಚ್ನೆ ಮಾಡ್ತಾ ಇರ್ತಾರೆ. ಇನ್ನು ಕೆಲವ್ರಿಗೆ ಲೈಂಗಿಕವಾಗಿ ಕೆಟ್ಟಕೆಲಸ ಮಾಡೋದನ್ನ, ಜಾಸ್ತಿ ಕುಡಿಯೋದನ್ನ, ಡ್ರಗ್ಸ್‌ ತಗೊಳೋದನ್ನ ನಿಲ್ಸೋಕೆ ಆಗಲ್ಲ.

ಯೋಚನೆಗಳನ್ನ, ಆಸೆಗಳನ್ನ, ನಡಕೊಳ್ಳೋ ರೀತಿಯನ್ನ ಕಂಟ್ರೋಲ್‌ ಮಾಡದಿರುವವರು ತಮ್ಮ ಜೀವ್ನನ ಕೈಯಾರೆ ಹಾಳು ಮಾಡ್ಕೊಳ್ತಾರೆ. ಆದ್ರೆ ನಮ್ಗೆ ಈ ಗತಿ ಬರ್ದಿರೋ ಹಾಗೆ ನೋಡ್ಕೋಬಹುದು. ಹೇಗೆ? ಸ್ವನಿಯಂತ್ರಣವನ್ನ ಬೆಳೆಸಿಕೊಳ್ಳೋ ಮೂಲಕ. ಇದ್ರ ಬಗ್ಗೆ ತಿಳುಕೊಳ್ಳೋಕೆ ನಾವೀಗ ಮೂರು ಪ್ರಶ್ನೆಗಳಿಗೆ ಉತ್ರ ನೋಡೋಣ. (1) ಸ್ವನಿಯಂತ್ರಣ ಅಂದ್ರೆ ಏನು? (2) ಸ್ವನಿಯಂತ್ರಣ ಯಾಕೆ ಇರಬೇಕು? (3) ‘ಪವಿತ್ರಾತ್ಮದಿಂದ ಉಂಟಾಗುವ ಗುಣಗಳಲ್ಲಿ’ ಒಂದಾಗಿರೋ ಈ ಸ್ವನಿಯಂತ್ರಣವನ್ನ ಬೆಳೆಸಿಕೊಳ್ಳೋದು ಹೇಗೆ? (ಗಲಾ. 5:22, 23) ಒಂದೊಂದು ಸಲ ಸ್ವನಿಯಂತ್ರಣ ತೋರ್ಸೋಕೆ ನಾವು ತಪ್ಪಿ ಹೋಗ್ತೇವೆ. ಆಗ ನಾವೇನು ಮಾಡ್ಬೇಕು ಅಂತ ಕೊನೆಯಲ್ಲಿ ನೋಡೋಣ.

ಸ್ವನಿಯಂತ್ರಣ ಅಂದ್ರೆ ಏನು?

ಸ್ವನಿಯಂತ್ರಣ ಇರೋ ವ್ಯಕ್ತಿ ಮನ್ಸಿಗೆ ಬಂದಂತೆ ಮಾಡೋಕೆ ಹೋಗಲ್ಲ. ಅಂದ್ರೆ ದೇವರಿಗೆ ಇಷ್ಟ ಆಗದ ರೀತಿಯಲ್ಲಿ ಮಾತಾಡೋ ಅಥವಾ ನಡ್ಕೊಳ್ಳೋ ಪರಿಸ್ಥಿತಿ ಬಂದ್ರೆ ಕಂಟ್ರೋಲ್‌ ಮಾಡ್ಕೊಳ್ತಾನೆ.

ಸ್ವನಿಯಂತ್ರಣ ತೋರಿಸೋದ್ರಲ್ಲಿ ಯೇಸು ಒಳ್ಳೇ ಮಾದರಿ

ಸ್ವನಿಯಂತ್ರಣ ಇರೋ ವ್ಯಕ್ತಿ ಹೇಗಿರ್ತಾನೆ ಅನ್ನೋದಕ್ಕೆ ಯೇಸುನೇ ಒಳ್ಳೇ ಮಾದರಿ. ಯೇಸು ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ಅವನನ್ನು ದೂಷಿಸುತ್ತಿದ್ದಾಗ ಅವನು ಪ್ರತಿಯಾಗಿ ದೂಷಿಸುತ್ತಿರಲಿಲ್ಲ. ಅವನು ಕಷ್ಟವನ್ನು ಅನುಭವಿಸುತ್ತಿದ್ದಾಗ ಯಾರನ್ನೂ ಬೆದರಿಸದೆ, ನೀತಿಯಿಂದ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿಕೊಡುತ್ತಾ ಇದ್ದನು.” (1 ಪೇತ್ರ 2:23) ಯೇಸು ಯಾತನಾಕಂಬದ ಮೇಲೆ ಇದ್ದಾಗ ವಿರೋಧಿಗಳು ತುಂಬ ಗೇಲಿ ಮಾಡಿದ್ರು. ಆದ್ರೂ ಯೇಸು ಸ್ವನಿಯಂತ್ರಣ ತೋರಿಸಿದ್ನು. (ಮತ್ತಾ. 27:39-44) ಇದಕ್ಕೂ ಮುಂಚೆ ಧರ್ಮ ಗುರುಗಳು ಯೇಸುವನ್ನು ಮಾತಿನಲ್ಲಿ ಸಿಕ್ಕಿಹಾಕಿಸೋಕೆ ಸಿಕ್ಕಾಪಟ್ಟೆ ಪ್ರಯತ್ನಿಸಿದ್ರು. ಆದ್ರೂ ಯೇಸು ಸ್ವನಿಯಂತ್ರಣ ಕಳೆದುಕೊಳ್ಳಲಿಲ್ಲ. (ಮತ್ತಾ. 22:15-22) ಅಷ್ಟೇ ಅಲ್ಲ ಕೋಪಿಷ್ಠ ಯೆಹೂದ್ಯರು ಕಲ್ಲೆತ್ತುಕೊಂಡು ಹೊಡೆಯೋಕೆ ಬಂದಾಗ ಯೇಸು ಸ್ವನಿಯಂತ್ರಣ ತೋರಿಸಿದ್ನು. ಅವರಿಗೆಲ್ಲ ಬುದ್ಧಿ ಕಲಿಸಬೇಕು ಅಂತ ಅಂದ್ಕೊಳ್ಳಲಿಲ್ಲ. ಬದ್ಲು “ಅಡಗಿಕೊಂಡು ದೇವಾಲಯದಿಂದ ಹೊರಟುಹೋದನು” ಅಂತ ಬೈಬಲ್‌ ಹೇಳುತ್ತೆ.—ಯೋಹಾ. 8:57-59.

ನಾವು ಕೂಡ ಯೇಸು ತರ ಸ್ವನಿಯಂತ್ರಣ ತೋರಿಸ್ಬಹುದಾ? ಸ್ವಲ್ಪಮಟ್ಟಿಗೆ ತೋರಿಸ್ಬಹುದು. ಅಪೊಸ್ತಲ ಪೇತ್ರ, “ಕ್ರಿಸ್ತನು ಸಹ ನಿಮಗೋಸ್ಕರ ಕಷ್ಟವನ್ನು ಅನುಭವಿಸಿ ನೀವು ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ನಿಮಗೋಸ್ಕರ ಮಾದರಿಯನ್ನು ತೋರಿಸಿ ಹೋದನು” ಅಂತ ಬರೆದ. (1 ಪೇತ್ರ 2:21) ಇದರಿಂದ ಏನು ಗೊತ್ತಾಗುತ್ತೆ ಅಂದ್ರೆ ನಾವು ಅಪರಿಪೂರ್ಣರಾದ್ರೂ ಸ್ವನಿಯಂತ್ರಣ ತೋರಿಸೋ ವಿಷಯದಲ್ಲಿ ಯೇಸುವಿನ ಮಾದರಿಯನ್ನ ನಿಕಟವಾಗಿ ಅನುಸರಿಸಬಹುದು. ಪ್ರಶ್ನೆ ಏನೆಂದರೆ ಈ ಗುಣ ನಮ್ಗೆ ಯಾಕೆ ಬೇಕು?

ಸ್ವನಿಯಂತ್ರಣ ಯಾಕೆ ಬೇಕು?

ಯೆಹೋವನನ್ನ ಮೆಚ್ಚಿಸಬೇಕೆಂದ್ರೆ ನಮ್ಮಲ್ಲಿ ಸ್ವನಿಯಂತ್ರಣ ಇರಲೇಬೇಕು. ನಾವು ಸುಮಾರು ವರ್ಷಗಳಿಂದ ನಂಬಿಗಸ್ತರಾಗಿ ಯೆಹೋವನ ಸೇವೆ ಮಾಡ್ತಿರಬಹುದು. ಆದ್ರೂ ಏನು ಹೇಳ್ತಿವೋ ಏನು ಮಾಡ್ತಿವೋ ಅನ್ನೋದ್ರ ಮೇಲೆ ನಿಯಂತ್ರಣ ಇಲ್ಲ ಅಂದ್ರೆ ಯೆಹೋವನೊಟ್ಟಿಗಿನ ನಮ್ಮ ಸ್ನೇಹವನ್ನ ಕಳಕೊಂಡು ಬಿಡ್ತೀವಿ.

ಮೋಶೆಯ ಉದಾಹರಣೆ ನೋಡಿ. ಆ ಸಮಯದಲ್ಲಿ ಅವನು ‘ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನಾಗಿದ್ದ.’ (ಅರ. 12:3) ಸುಮಾರು ವರ್ಷಗಳಿಂದ ಇಸ್ರಾಯೇಲ್ಯರ ದೂರುಗಳನ್ನ ತಾಳ್ಮೆಯಿಂದ ಸಹಿಸಿಕೊಂಡಿದ್ದ ಮೋಶೆ, ಒಂದಿನ ಸ್ವನಿಯಂತ್ರಣ ಕಳಕೊಂಡ. ‘ನೀರಿಲ್ಲ’ ಅಂತ ಇಸ್ರಾಯೇಲ್ಯರು ಪದೇ ಪದೇ ದೂರಿದಾಗ ಮೋಶೆಗೆ ಸಿಕ್ಕಾಪಟ್ಟೆ ಕೋಪ ಬಂತು. ಅವ್ನು ಜನ್ರಿಗೆ, ‘ದ್ರೋಹಿಗಳೇ, ನಾವು ಈ ಬಂಡೆಯೊಳಗಿಂದಲೇ ನಿಮಗೋಸ್ಕರ ನೀರನ್ನು ಬರಮಾಡಬೇಕಾ?’ ಅಂದ್ನು.—ಅರ. 20:2-11.

ಮೋಶೆಗೆ ತನ್ನನ್ನ ನಿಯಂತ್ರಿಸಿಕೊಳ್ಳೋಕೆ ಆಗ್ಲಿಲ್ಲ. ಅದ್ಭುತಕರವಾಗಿ ನೀರು ಕೊಟ್ಟಿದ್ದು ಯೆಹೋವನು, ಆದ್ರೆ ಮೋಶೆ ಆತನಿಗೆ ಮಹಿಮೆ ಸಲ್ಲಿಸಲಿಲ್ಲ. (ಕೀರ್ತ. 106:32, 33) ಅದಕ್ಕೆ ಯೆಹೋವ ದೇವರು ಮೋಶೆಗೆ ಕಾನಾನ್‌ ದೇಶಕ್ಕೆ ಹೋಗಲು ಬಿಡ್ಲಿಲ್ಲ. (ಅರ. 20:12) ಮೋಶೆ ಸಾಯೋವರೆಗೂ ‘ಯಾಕಪ್ಪಾ ನಾನು ಸ್ವನಿಯಂತ್ರಣ ಕಳಕೊಂಡೆ’ ಅಂತ ದುಃಖಪಟ್ಟಿರ್ತಾನೆ.—ಧರ್ಮೋ. 3:23-27.

ಇದರಿಂದ ನಮಗೇನು ಪಾಠ? ನಾವು ತುಂಬ ವರ್ಷಗಳಿಂದ ಸತ್ಯದಲ್ಲಿ ಇರಬಹುದು. ಹಾಗಂತ ಯಾರಾದ್ರೂ ನಮ್ಗೆ ಕಿರಿಕಿರಿ ಮಾಡ್ದಾಗ ಅಥವಾ ಯಾರನ್ನಾದರೂ ನಾವು ತಿದ್ದಬೇಕಾಗಿ ಬಂದಾಗ ಸ್ವನಿಯಂತ್ರಣ ಕಳಕೊಂಡು ಅಗೌರವದಿಂದ ಮಾತಾಡಬಾರದು. (ಎಫೆ. 4:32; ಕೊಲೊ. 3:12) ನಮ್ಗೆ ವಯಸ್ಸಾಗುತ್ತಾ ಹೋದಂತೆ ತಾಳ್ಮೆ ತೋರಿಸೋದು ಕಷ್ಟ ಆಗುತ್ತೆ. ಇಂಥ ಸಮ್ಯದಲ್ಲಿ ನಾವು ಮೋಶೆನ ನೆನಪು ಮಾಡ್ಕೋಬೇಕು. ಯಾಕೆಂದ್ರೆ ‘ಕಟ್ಟೋಕೆ ವರುಷ ಕೆಡವೋಕೆ ನಿಮಿಷ’ ಅನ್ನೋ ತರ ಒಂದು ಸಲ ಸ್ವನಿಯಂತ್ರಣ ಕಳಕೊಂಡ್ರೆ ವರ್ಷಗಳಿಂದ ಮಾಡ್ಕೊಂಡು ಬಂದ ನಂಬಿಗಸ್ತ ಸೇವೆಯಲ್ಲಾ ಹಾಳಾಗಿಬಿಡುತ್ತೆ. ಹಾಗಾದ್ರೆ ಈ ಗುಣನ ನಾವು ಹೇಗೆ ಬೆಳೆಸಿಕೊಳ್ಳಬಹುದು?

ಸ್ವನಿಯಂತ್ರಣವನ್ನ ಬೆಳೆಸಿಕೊಳ್ಳೋದು ಹೇಗೆ?

ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ. ಯಾಕೆ? ಯಾಕಂದ್ರೆ ಸ್ವನಿಯಂತ್ರಣ ಪವಿತ್ರಾತ್ಮದಿಂದ ಸಿಗುವಂಥ ಒಂದು ಗುಣ. ಯೆಹೋವ ದೇವರು ಇದನ್ನ ಕೇಳಿಕೊಳ್ಳೋ ಎಲ್ರಿಗೂ ಕೊಡ್ತಾನೆ. (ಲೂಕ 11:13) ಸ್ವನಿಯಂತ್ರಣ ತೋರಿಸಲು ಬೇಕಾದ ಶಕ್ತಿಯನ್ನು ಯೆಹೋವನು ಪವಿತ್ರಾತ್ಮದ ಮೂಲಕ ಕೊಡ್ತಾನೆ. (ಫಿಲಿ. 4:13) ಅಷ್ಟೇ ಅಲ್ಲ, ಪವಿತ್ರಾತ್ಮದಿಂದ ಸಿಗೋ ಬೇರೆ ಗುಣಗಳನ್ನ ಬೆಳೆಸಿಕೊಳ್ಳೋಕೂ ಸಹಾಯ ಮಾಡ್ತಾನೆ. ಇದಕ್ಕೊಂದು ಉದಾಹರಣೆ ಪ್ರೀತಿ. ಪ್ರೀತಿ ಇದ್ರೆ ಸ್ವನಿಯಂತ್ರಣ ತೋರಿಸೋದು ಸುಲಭ.—1 ಕೊರಿಂ. 13:5.

ಸ್ವನಿಯಂತ್ರಣ ಕಳ್ಕೊಳ್ಳುವಂತೆ ಮಾಡೋ ವಿಷ್ಯಗಳ ಬಗ್ಗೆ ಎಚ್ಚರವಹಿಸಿ

ಸ್ವನಿಯಂತ್ರಣ ಕಳ್ಕೊಳ್ಳುವಂತೆ ಮಾಡೋ ವಿಷ್ಯಗಳ ಬಗ್ಗೆ ಎಚ್ಚರವಹಿಸಿ. ಕೆಟ್ಟದ್ದನ್ನು ತೋರಿಸೋ ಇಂಟರ್‌ನೆಟ್‌ ವೆಬ್‌ಸೈಟುಗಳು ಮತ್ತು ಮನೋರಂಜನೆಯನ್ನ ನೋಡೋಕೇ ಹೋಗಬೇಡಿ. (ಎಫೆ. 5:3, 4) ಒಂದು ವಿಷ್ಯ ನಮ್ಮನ್ನು ತಪ್ಪು ಮಾಡೋಕೆ ಪ್ರೇರಿಸುತ್ತೆ ಅಂದ್ರೆ ಅದರ ತಂಟೆಗೇ ನಾವು ಹೋಗಬಾರದು. (ಜ್ಞಾನೋ. 22:3; 1 ಕೊರಿಂ. 6:12) ತಪ್ಪಾದ ಲೈಂಗಿಕ ಆಸೆಗಳಿಗೆ ಸುಲಭವಾಗಿ ಬಲಿಬೀಳೋ ವ್ಯಕ್ತಿ ಪ್ರೀತಿ ಪ್ರೇಮದ ಪುಸ್ತಕಗಳನ್ನ ಓದೋದಾಗಲಿ ಅಂಥ ಚಲನಚಿತ್ರಗಳನ್ನ ನೋಡೋದಾಗಲಿ ಮಾಡ್ಲೇಬಾರದು.

ಈ ಸಲಹೆನ ಪಾಲಿಸೋಕೆ ಕಷ್ಟ ಅಂತ ಅನಿಸಬಹುದು. ಆದ್ರೆ ಪ್ರಯತ್ನ ಮಾಡೋದಾದ್ರೆ ಸ್ವನಿಯಂತ್ರಣ ತೋರಿಸೋಕೆ ಬೇಕಾದ ಶಕ್ತಿಯನ್ನ ಯೆಹೋವ ಕೊಟ್ಟೇ ಕೊಡ್ತಾನೆ. (2 ಪೇತ್ರ 1:5-8) ನಮ್ಮ ಯೋಚನೆ, ಮಾತು ಮತ್ತು ನಡತೆಯನ್ನ ನಿಯಂತ್ರಣದಲ್ಲಿ ಇಡೋಕೆ ಯೆಹೋವ ಸಹಾಯ ಮಾಡ್ತಾನೆ. ಆತ ನಿಜವಾಗ್ಲೂ ಸಹಾಯ ಮಾಡ್ತಾನೆ ಅನ್ನೋದಕ್ಕೆ ಆರಂಭದಲ್ಲಿ ತಿಳಿಸಿದ ಪೌಲ್‌ ಮತ್ತು ಮಾರ್ಕೋ ಅವರ ಅನುಭವವೇ ಸಾಕ್ಷಿ. ಅವ್ರು ಕೋಪನ ಕಂಟ್ರೋಲ್‌ ಮಾಡೋಕೆ ಕಲಿತುಕೊಂಡರು. ಇನ್ನೊಬ್ಬ ಸಹೋದರ ಸಹ ಇವರ ಥರನೇ ಇದ್ರು. ಗಾಡಿ ಓಡಿಸ್ವಾಗ ಅವ್ರು ತಾಳ್ಮೆ ಕಳಕೊಳ್ತಿದ್ರು, ಜನ್ರ ಜೊತೆ ಜಗಳ ಮಾಡ್ತಿದ್ರು. ಇದನ್ನ ಸರಿ ಮಾಡಿಕೊಳ್ಳೋಕೆ ಏನು ಮಾಡಿದ್ರು? ಅವರು ಹೀಗೆ ಹೇಳ್ತಾರೆ: “ಪ್ರತಿದಿನ ಶ್ರದ್ಧೆಯಿಂದ ಪ್ರಾರ್ಥನೆ ಮಾಡ್ತಿದ್ದೆ. ಸ್ವನಿಯಂತ್ರಣದ ಬಗ್ಗೆ ಇರೋ ಲೇಖನಗಳನ್ನ ಓದ್ತಿದ್ದೆ. ನನಗೆ ಸಹಾಯ ಮಾಡುವಂಥ ಬೈಬಲ್‌ ವಚನಗಳನ್ನ ಜ್ಞಾಪಕ ಮಾಡಿಕೊಳ್ಳುತ್ತಿದ್ದೆ. ಇದನ್ನೆಲ್ಲ ನಾನು ಸುಮಾರು ವರ್ಷದಿಂದ ಮಾಡ್ತಾ ಇದ್ದೀನಿ. ಆದ್ರೆ ಇವತ್ತಿಗೂ, ನಾನು ಸಮಾಧಾನದಿಂದ ಇರಬೇಕು ಅಂತ ಪ್ರತಿದಿನ ಗುರಿ ಇಟ್ಟುಕೊಳ್ತೀನಿ. ಅಷ್ಟೇ ಅಲ್ಲ ಕೆಲಸಕ್ಕೆ ಹೋಗೋಕೆ ಸ್ವಲ್ಪ ಬೇಗನೇ ಮನೆಯಿಂದ ಹೊರಡ್ತೀನಿ, ಆಗ ಆರಾಮವಾಗಿ ಹೋಗೋಕೆ ಆಗುತ್ತೆ.”

ಸ್ವನಿಯಂತ್ರಣ ಕಳ್ಕೋಬಿಟ್ರೆ ಏನು ಮಾಡ್ಬೇಕು?

ಒಂದೊಂದು ಸಲ ನಾವು ಸ್ವನಿಯಂತ್ರಣ ಕಳ್ಕೋಬಿಡ್ತೇವೆ. ಆ ತರ ಆದಾಗ ಪ್ರಾರ್ಥನೆಯಲ್ಲಿ ಯೆಹೋವನ ಹತ್ರ ಮಾತಾಡೋಕೆ ನಾಚಿಕೆ ಆಗುತ್ತೆ. ಆದ್ರೆ ನೆನಪಿಡಿ ಆಗ್ಲೇ ನಾವು ಹೆಚ್ಚು ಪ್ರಾರ್ಥನೆ ಮಾಡಬೇಕು. ಆದ್ರಿಂದ ತಕ್ಷಣ ಪ್ರಾರ್ಥನೆ ಮಾಡಿ. ‘ಕ್ಷಮಿಸು’ ಅಂತ ಕೇಳಿಕೊಳ್ಳಿ, ಸಹಾಯಕ್ಕಾಗಿ ಬೇಡಿಕೊಳ್ಳಿ, ಮತ್ತೆ ‘ಆ ತಪ್ಪನ್ನ ಮಾಡಲ್ಲ’ ಅಂತ ಗಟ್ಟಿ ಮನಸ್ಸು ಮಾಡಿಕೊಳ್ಳಿ. (ಕೀರ್ತ. 51:9-11) ‘ಕರುಣೆ ತೋರಿಸಪ್ಪಾ’ ಅಂತ ನಾವು ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡಿದ್ರೆ ಯೆಹೋವನು ಖಂಡಿತ ಕೇಳ್ತಾನೆ. (ಕೀರ್ತ. 102:17) “[ದೇವರ] ಮಗನಾದ ಯೇಸುವಿನ ರಕ್ತವು ನಮ್ಮನ್ನು ಎಲ್ಲ ಪಾಪದಿಂದ ಶುದ್ಧೀಕರಿಸುತ್ತದೆ” ಅಂತ ಅಪೊಸ್ತಲ ಯೋಹಾನ ಹೇಳಿದ್ದಾನೆ. (1 ಯೋಹಾ. 1:7; 2:1; ಕೀರ್ತ. 86:5) ‘ಒಬ್ಬರನ್ನೊಬ್ರು ಉದಾರವಾಗಿ ಕ್ಷಮಿಸಬೇಕು’ ಅಂತ ಯೆಹೋವನೇ ಎಷ್ಟೊಂದು ಸಲ ಹೇಳಿದ್ದಾನೆ. ಅಂದ್ಮೇಲೆ, ಆತ ನಮ್ಮನ್ನ ಕ್ಷಮಿಸದೇ ಇರ್ತಾನಾ?—ಮತ್ತಾ. 18:21, 22; ಕೊಲೊ. 3:13.

ಮೋಶೆ ಸ್ವನಿಯಂತ್ರಣ ಕಳಕೊಂಡಾಗ ಯೆಹೋವನಿಗೆ ಬೇಜಾರಾಯ್ತು. ಆದ್ರೂ ಅವನನ್ನ ಕ್ಷಮಿಸಿದನು. ಅದಕ್ಕೆ, ಮೋಶೆ ನಂಬಿಗಸ್ತರಿಗೆ ಮಾದರಿ ಅಂತ ಬೈಬಲ್‌ ಹೇಳುತ್ತೆ. (ಧರ್ಮೋ. 34:10; ಇಬ್ರಿ. 11:24-28) ಯೆಹೋವನು ಮೋಶೆನ ಕಾನಾನ್‌ ದೇಶಕ್ಕೆ ಹೋಗೋಕೆ ಬಿಡ್ಲಿಲ್ಲ. ಆದ್ರೆ ಹೊಸಲೋಕದಲ್ಲಿ ಮೋಶೆಯನ್ನ ಯೆಹೋವನು ಪ್ರೀತಿಯಿಂದ ಸ್ವಾಗತಿಸ್ತಾನೆ ಮತ್ತು ಅವನಿಗೆ ಶಾಶ್ವತವಾಗಿ ಜೀವಿಸುವ ಆಶೀರ್ವಾದ ಕೊಡ್ತಾನೆ. ಎಷ್ಟೇ ಕಷ್ಟ ಆಗೋದಾದ್ರೂ ಸ್ವನಿಯಂತ್ರಣ ಗುಣ ಬೆಳೆಸಿಕೊಳ್ಳೋಕೆ ನಾವು ಪ್ರಯತ್ನ ಹಾಕ್ಬೇಕು. ಆಗ ಶಾಶ್ವತವಾಗಿ ಜೀವಿಸುವ ಆಶೀರ್ವಾದ ನಮ್ಗೂ ಸಿಗುತ್ತೆ.—1 ಕೊರಿಂ. 9:25.