ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 31

‘ನಿಜವಾದ ಅಸ್ತಿವಾರಗಳಿರೋ ಪಟ್ಟಣವನ್ನು’ ಎದುರುನೋಡಿ

‘ನಿಜವಾದ ಅಸ್ತಿವಾರಗಳಿರೋ ಪಟ್ಟಣವನ್ನು’ ಎದುರುನೋಡಿ

“ಅವನು ನಿಜವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಕಟ್ಟಿದ ಮತ್ತು ಸೃಷ್ಟಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು.”—ಇಬ್ರಿ. 11:10.

ಗೀತೆ 136 ನಿನ್ನ ರಾಜ್ಯ ಬರಲಿ!

ಕಿರುನೋಟ *

1. (ಎ) ಇಂದು ಅನೇಕರು ಯಾವ ತ್ಯಾಗಗಳನ್ನು ಮಾಡಿದ್ದಾರೆ? (ಬಿ) ಯಾಕೆ ಮಾಡಿದ್ದಾರೆ?

ಇಂದಿನ ಲಕ್ಷಾಂತರ ದೇವಸೇವಕರು ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ತುಂಬ ಸಹೋದರ ಸಹೋದರಿಯರು ಮದುವೆ ಆಗದೇ ಇದ್ದಾರೆ. ದಂಪತಿಗಳು ಸದ್ಯಕ್ಕೆ ಮಕ್ಕಳು ಬೇಡ ಅಂತ ತೀರ್ಮಾನಿಸಿದ್ದಾರೆ. ಕುಟುಂಬಗಳು ಹೆಚ್ಚು ಹಣ, ಆಸ್ತಿ ಮಾಡದೆ ಸರಳಜೀವನ ನಡೆಸ್ತಿದ್ದಾರೆ. ಇವ್ರೆಲ್ಲ ಯೆಹೋವನ ಸೇವೆನ ಆದಷ್ಟು ಹೆಚ್ಚು ಮಾಡಲಿಕ್ಕಾಗಿ ಇಂಥ ಪ್ರಾಮುಖ್ಯ ನಿರ್ಧಾರ ಮಾಡಿದ್ದಾರೆ. ಇವ್ರು ಇರೋದ್ರಲ್ಲಿಯೇ ಸಂತೃಪ್ತರಾಗಿದ್ದಾರೆ ಮತ್ತು ತಮ್ಮನ್ನ, ತಮ್ಮ ಕುಟುಂಬವನ್ನು ಯೆಹೋವ ನೋಡಿಕೊಳ್ತಾನೆ ಅನ್ನೋ ಭರವಸೆ ಇಟ್ಟಿದ್ದಾರೆ. ಈ ಭರವಸೆ ಖಂಡಿತ ಸುಳ್ಳಾಗಲ್ಲ. ಯಾಕಂದ್ರೆ ಹಿಂದಿನ ಕಾಲದಲ್ಲಿದ್ದ ಸೇವಕರಿಗೂ ಯೆಹೋವನು ಅಗತ್ಯವಿದ್ದದನ್ನೆಲ್ಲಾ ಕೊಟ್ಟನು. ಉದಾಹರಣೆಗೆ, ‘ನಂಬಿಕೆಯಿರುವ ಎಲ್ಲರಿಗೆ ತಂದೆಯಾಗಿರೋ’ ಅಬ್ರಹಾಮನನ್ನು ಯೆಹೋವ ಆಶೀರ್ವದಿಸಿ ಚೆನ್ನಾಗಿ ನೋಡಿಕೊಂಡನು.—ರೋಮ. 4:11.

2. (ಎ) ಇಬ್ರಿಯ 11:8-10, 16 ರಲ್ಲಿ ಹೇಳಿರುವಂತೆ ಅಬ್ರಹಾಮ ಯಾಕೆ ಊರ್‌ ಪಟ್ಟಣ ಬಿಟ್ಟುಹೋದನು? (ಬಿ) ಈ ಲೇಖನದಲ್ಲಿ ನಾವೇನನ್ನು ಚರ್ಚಿಸಲಿದ್ದೇವೆ?

2 ಅಬ್ರಹಾಮ ಊರ್‌ ಪಟ್ಟಣದ ಸೊಗಸಾದ ಜೀವನವನ್ನು ಮನಃಪೂರ್ವಕವಾಗಿ ತ್ಯಾಗ ಮಾಡಿದ. ಯಾಕೆ? ಯಾಕಂದ್ರೆ ಅವನು ‘ನಿಜವಾದ ಅಸ್ತಿವಾರಗಳಿರೋ ಪಟ್ಟಣವನ್ನು’ ಎದುರುನೋಡ್ತಿದ್ದ. (ಇಬ್ರಿಯ 11:8-10, 16 ಓದಿ.) ಆ “ಪಟ್ಟಣ” ಯಾವುದು? ಆ ಪಟ್ಟಣಕ್ಕಾಗಿ ಎದುರುನೋಡ್ತಿದ್ದಾಗ ಅಬ್ರಹಾಮನಿಗೆ ಯಾವ ಸಮಸ್ಯೆಗಳು ಎದುರಾದ್ವು? ನಾವು ಹೇಗೆ ಅಬ್ರಹಾಮನಂತೆ ಮತ್ತು ಇಂದು ಅವನ ಮಾದರಿಯನ್ನು ಅನುಕರಿಸುತ್ತಿರೋ ದೇವಸೇವಕರಂತೆ ಇರಬಹುದು?

‘ನಿಜವಾದ ಅಸ್ತಿವಾರಗಳಿರೋ ಪಟ್ಟಣ’ ಅಂದ್ರೆ ಏನು?

3. ಅಬ್ರಹಾಮ ಎದುರುನೋಡ್ತಿದ್ದ “ಪಟ್ಟಣ” ಯಾವ್ದಾಗಿತ್ತು?

3 ಅಬ್ರಹಾಮ ಎದುರುನೋಡ್ತಿದ್ದ ಪಟ್ಟಣ ದೇವರ ರಾಜ್ಯವಾಗಿತ್ತು. ಇದು ಯೇಸು ಕ್ರಿಸ್ತ ಮತ್ತು 1,44,000 ಅಭಿಷಿಕ್ತ ಕ್ರೈಸ್ತರು ಆಳೋ ರಾಜ್ಯವಾಗಿದೆ. ಈ ರಾಜ್ಯವನ್ನು ಪೌಲ, “ಜೀವವುಳ್ಳ ದೇವರ ಪಟ್ಟಣವಾಗಿರುವ ಸ್ವರ್ಗೀಯ ಯೆರೂಸಲೇಮ್‌” ಅಂತ ಕರೆದ. (ಇಬ್ರಿ. 12:22; ಪ್ರಕ. 5:8-10; 14:1) ಯೇಸು ಸಹ ಈ ರಾಜ್ಯದ ಬಗ್ಗೆ ತಿಳಿಸಿದನು. ಅವನು ತನ್ನ ಶಿಷ್ಯರಿಗೆ, ಈ ರಾಜ್ಯ ಭೂಮಿಗೆ ಬರಲಿ ಮತ್ತು ಸ್ವರ್ಗದಲ್ಲಿ ದೇವರ ಚಿತ್ತ ನೆರವೇರುವಂತೆಯೇ ಭೂಮಿಯ ಮೇಲೂ ನೆರವೇರಲಿ ಅಂತ ಪ್ರಾರ್ಥಿಸಿ ಎಂದು ಉತ್ತೇಜಿಸಿದ.—ಮತ್ತಾ. 6:10.

4. ಆದಿಕಾಂಡ 17:1, 2 ಮತ್ತು 6 ರ ಪ್ರಕಾರ ದೇವರು ತರೋ ಪಟ್ಟಣ ಅಥ್ವಾ ರಾಜ್ಯದ ಬಗ್ಗೆ ಅಬ್ರಹಾಮನಿಗೆ ಎಷ್ಟು ಗೊತ್ತಿತ್ತು?

4 ದೇವರ ರಾಜ್ಯಕ್ಕೆ ಯಾರೆಲ್ಲ ರಾಜರಾಗಿರ್ತಾರೆ, ಅದು ಎಲ್ಲಿಂದ ಆಳ್ವಿಕೆ ಮಾಡುತ್ತೆ ಅನ್ನೋದೆಲ್ಲ ಅಬ್ರಹಾಮನಿಗೆ ಗೊತ್ತಿರಲಿಲ್ಲ. ಯಾಕಂದ್ರೆ ನೂರಾರು ವರ್ಷ ಇದನ್ನು ‘ಪವಿತ್ರ ರಹಸ್ಯವಾಗಿ’ ಇಡಲಾಗಿತ್ತು. (ಎಫೆ. 1:8-10; ಕೊಲೊ. 1:26, 27) ಆದ್ರೆ ತನ್ನ ವಂಶದಲ್ಲಿರೋ ಕೆಲವ್ರು ಈ ರಾಜ್ಯದ ರಾಜರಾಗ್ತಾರೆ ಅಂತ ಅಬ್ರಹಾಮನಿಗೆ ಗೊತ್ತಿತ್ತು. ಯಾಕಂದ್ರೆ ಆ ರೀತಿ ಮಾಡ್ತೀನಿ ಅಂತ ಸ್ವತಃ ಯೆಹೋವ ಅವನಿಗೆ ಮಾತುಕೊಟ್ಟಿದ್ದನು. (ಆದಿಕಾಂಡ 17:1, 2, 6 ಓದಿ.) ಅಬ್ರಹಾಮನಿಗೆ ದೇವ್ರು ಕೊಟ್ಟ ಮಾತಿನ ಮೇಲೆ ತುಂಬ ನಂಬಿಕೆಯಿತ್ತು. ಎಷ್ಟಂದ್ರೆ ದೇವರ ರಾಜ್ಯದ ರಾಜನಾಗಲಿದ್ದ ಮೆಸ್ಸೀಯನನ್ನು ಈಗಾಗಲೇ ನೋಡಿದ್ದೇನೆ ಅನ್ನುವಷ್ಟು ನಂಬಿಕೆ ಅವನಿಗಿತ್ತು. ಅಷ್ಟು ನಂಬಿಕೆ ಇದ್ದಿದ್ರಿಂದಲೇ ಯೇಸು ತನ್ನ ಕಾಲದ ಯೆಹೂದಿಗಳಿಗೆ, “ನಿಮ್ಮ ತಂದೆಯಾದ ಅಬ್ರಹಾಮನು ನನ್ನ ದಿನವನ್ನು ನೋಡುವ ಪ್ರತೀಕ್ಷೆಯಲ್ಲಿ ಬಹಳ ಆನಂದಿಸಿದನು ಮತ್ತು ಅದನ್ನು ಕಂಡು ಉಲ್ಲಾಸಪಟ್ಟನು” ಅಂತ ಹೇಳಿದನು. (ಯೋಹಾ. 8:56) ಒಟ್ನಲ್ಲಿ ಹೇಳೋದಾದ್ರೆ, ಅಬ್ರಹಾಮನಿಗೆ ತನ್ನ ವಂಶದಲ್ಲಿರೋ ಕೆಲವ್ರು ಯೆಹೋವ ಸ್ಥಾಪಿಸೋ ರಾಜ್ಯದ ಭಾಗವಾಗ್ತಾರೆ ಅನ್ನೋದು ಸ್ಪಷ್ಟವಾಗಿ ಗೊತ್ತಿತ್ತು ಮತ್ತು ಯೆಹೋವನ ಮಾತು ನೆರವೇರೋದಕ್ಕಾಗಿ ಕಾಯಲು ಸಿದ್ಧನಿದ್ದನು.

ಯೆಹೋವ ಕೊಟ್ಟ ಮಾತಲ್ಲಿ ನಂಬಿಕೆ ಇದೆ ಅಂತ ಅಬ್ರಹಾಮ ಹೇಗೆ ತೋರಿಸಿಕೊಟ್ಟ? (ಪ್ಯಾರ 5 ನೋಡಿ)

5. ದೇವರು ತರೋ ಪಟ್ಟಣಕ್ಕಾಗಿ ಅಬ್ರಹಾಮ ಕಾಯ್ತಿದ್ದ ಅಂತ ನಮ್ಗೆ ಹೇಗೆ ಗೊತ್ತು?

5 ದೇವರು ತರಲಿದ್ದ “ಪಟ್ಟಣ” ಅಥ್ವಾ ರಾಜ್ಯಕ್ಕಾಗಿ ತಾನು ಎದುರುನೋಡ್ತಿದ್ದೇನೆ ಅಂತ ಅಬ್ರಹಾಮ ಹೇಗೆ ತೋರಿಸಿಕೊಟ್ಟ? ಅವ್ನು ಭೂಮಿಯಲ್ಲಿದ್ದ ಯಾವ ಸರಕಾರದ ಪ್ರಜೆನೂ ಆಗಿರಲಿಲ್ಲ. ಯಾಕಂದ್ರೆ ಅವ್ನು ಅಲೆಮಾರಿಯಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗ್ತಿದ್ದ. ಯಾವ ಮಾನವ ರಾಜನಿಗೂ ತನ್ನ ಬೆಂಬಲ ಕೊಡ್ಲಿಲ್ಲ. ಅಷ್ಟೇ ಅಲ್ಲ, ಅಬ್ರಹಾಮ ಸ್ವಂತ ಸಾಮ್ರಾಜ್ಯ ಸಹ ಕಟ್ಟಿಕೊಳ್ಳಲಿಲ್ಲ. ಬದ್ಲಿಗೆ ಯೆಹೋವ ಹೇಳಿದಂತೆ ನಡಕೊಂಡ ಮತ್ತು ಯೆಹೋವ ಕೊಟ್ಟ ಮಾತು ನೆರವೇರೋದಕ್ಕಾಗಿ ಎದುರುನೋಡ್ತಿದ್ದ. ಹೀಗೆ ತನಗೆ ಯೆಹೋವನ ಮೇಲೆ ಅಚಲ ನಂಬಿಕೆ ಇದೆ ಅಂತ ತೋರಿಸಿಕೊಟ್ಟ. ಈಗ ನಾವು, ಅಬ್ರಹಾಮನಿಗೆ ಯಾವ ಸಮಸ್ಯೆಗಳು ಎದುರಾದ್ವು ಮತ್ತು ಅವನ ಮಾದರಿಯಿಂದ ನಾವೇನು ಕಲಿಬಹುದು ಅಂತ ನೋಡೋಣ.

ಅಬ್ರಹಾಮನಿಗೆ ಯಾವ ಸಮಸ್ಯೆಗಳು ಬಂದ್ವು?

6. ಊರ್‌ ಪಟ್ಟಣ ಹೇಗಿತ್ತು?

6 ಅಬ್ರಹಾಮ ಜೀವಿಸಿದ್ದ ಪಟ್ಟಣಕ್ಕೆ ತುಂಬ ಬಿಗಿಭದ್ರತೆ ಇತ್ತು. ಆ ಪಟ್ಟಣದ ಸುತ್ತ ಎತ್ತರದ ಗೋಡೆಗಳಿದ್ದವು. ಮೂರು ಕಡೆಯಲ್ಲಿ ಕಾಲುವೆಗಳು ಇದ್ವು. ಅಲ್ಲಿನ ಜನ ವಿದ್ಯಾವಂತರಾಗಿದ್ರು, ಶ್ರೀಮಂತರಾಗಿದ್ರು, ಆರಾಮ ಜೀವನ ನಡೆಸ್ತಿದ್ರು. ಅವ್ರು ಓದು-ಬರಹದಲ್ಲಿ ಮತ್ತು ಗಣಿತದಲ್ಲಿ ಪರಿಣಿತರಾಗಿದ್ರು. ಆ ಪಟ್ಟಣ ವ್ಯಾಪಾರ ಕೇಂದ್ರವಾಗಿತ್ತು ಅಂತ ಕಾಣುತ್ತೆ. ಯಾಕಂದ್ರೆ ಆ ಜಾಗವನ್ನು ಅಗೆದು ನೋಡಿದಾಗ ವ್ಯಾಪಾರ ವ್ಯವಹಾರಕ್ಕೆ ಸಂಬಂಧಪಟ್ಟಂಥ ಅನೇಕ ದಾಖಲೆಪತ್ರ ಸಿಕ್ಕಿವೆ. ಅಲ್ಲಿ ಮನೆಗಳನ್ನು ಇಟ್ಟಿಗೆಯಲ್ಲಿ ಕಟ್ತಿದ್ರು ಮತ್ತು ಸುಣ್ಣ ಬಳೀತಿದ್ರು. ಕೆಲವು ಮನೆಗಳಲ್ಲಂತೂ 13-14 ಕೋಣೆಗಳು ಇರುತ್ತಿದ್ವು. ಮನೆ ಮಧ್ಯದಲ್ಲಿ ಕಲ್ಲುಹಾಸಿನ ಅಂಗಳವಿರುತ್ತಿತ್ತು.

7. ಅಬ್ರಹಾಮನು ಯೆಹೋವ ತನ್ನನ್ನು, ತನ್ನ ಕುಟುಂಬವನ್ನು ಕಾಪಾಡ್ತಾನೆ ಅಂತ ಯಾಕೆ ನಂಬಬೇಕಿತ್ತು?

7 ಊರ್‌ ಪಟ್ಟಣ ಬಿಟ್ಟು ಬಂದ ಅಬ್ರಹಾಮನು ಯೆಹೋವ ತನ್ನನ್ನು, ತನ್ನ ಕುಟುಂಬವನ್ನು ಕಾಪಾಡ್ತಾನೆ ಅಂತ ನಂಬಬೇಕಿತ್ತು. ಯಾಕಂದ್ರೆ ಈಗ ಅವನು ಮತ್ತು ಪತ್ನಿ ಸಾರ ಕಾನಾನ್‌ ದೇಶದ ಬಯಲು ಪ್ರದೇಶದಲ್ಲಿ ಡೇರೆ ಹಾಕೊಂಡು ವಾಸಿಸಬೇಕಾಗಿತ್ತು. ಅಲ್ಲಿ ಊರ್‌ ಪಟ್ಟದಲ್ಲಿದ್ದ ಬಿಗಿಭದ್ರತೆ, ಸೌಕರ್ಯ, ಎತ್ತರದ ಗೋಡೆ, ಕಾಲುವೆ ಇದ್ಯಾವುದೂ ಇರಲಿಲ್ಲ. ಶತ್ರುಗಳು ಅವ್ರ ಮೇಲೆ ಆರಾಮಾಗಿ ದಾಳಿ ಮಾಡ್ಬಹುದಿತ್ತು.

8. ಒಂದ್ಸಲ ಅಬ್ರಹಾಮನಿಗೆ ಯಾವ ಸಮಸ್ಯೆ ಎದುರಾಯ್ತು?

8 ಅಬ್ರಹಾಮನು ದೇವರು ಹೇಳಿದಂತೆಯೇ ನಡಕೊಂಡ್ರೂ ಕೆಲವೊಂದು ಸಮಸ್ಯೆಗಳನ್ನು ಎದುರಿಸ್ಬೇಕಾಗಿ ಬಂತು. ಒಂದ್ಸಲ ಕುಟುಂಬಕ್ಕೆ ಬೇಕಾದಷ್ಟು ಆಹಾರ ಒದಗಿಸೋಕೆ ಅವ್ನಿಗೆ ಕಷ್ಟ ಆಯ್ತು. ಯಾಕಂದ್ರೆ ಯೆಹೋವ ಅವನನ್ನು ಕಳುಹಿಸಿದ ದೇಶದಲ್ಲಿ ಬರ ಬಂತು. ಬರ ಎಷ್ಟು ಘೋರವಾಗಿತ್ತೆಂದ್ರೆ ಅಬ್ರಹಾಮ ತನ್ನ ಕುಟುಂಬದ ಜೊತೆ ತಾತ್ಕಾಲಿಕವಾಗಿ ಈಜಿಪ್ಟಿಗೆ ಹೋಗಬೇಕಾಯ್ತು. ಈಜಿಪ್ಟಿನಲ್ಲಿ ಆ ದೇಶದ ರಾಜನಾಗಿದ್ದ ಫರೋಹನು ಅಬ್ರಹಾಮನ ಪತ್ನಿ ಸಾರಳನ್ನು ತನ್ನ ಅರಮನೆಗೆ ಕರೆಸಿಕೊಂಡ. ಆಗ ಅಬ್ರಹಾಮನಿಗೆ ಸಾರಳ ಬಗ್ಗೆ ಎಷ್ಟು ಚಿಂತೆ ಆಗಿರಬಹುದು ಊಹಿಸಿ. ಫರೋಹ ಸಾರಳನ್ನು ತನ್ನತ್ರ ವಾಪಸ್‌ ಕಳುಹಿಸುವಂತೆ ಯೆಹೋವ ಮಾಡಿದ ಮೇಲೆನೇ ಅಬ್ರಹಾಮನಿಗೆ ಸಮಾಧಾನ ಆಗಿರುತ್ತೆ.—ಆದಿ. 12:10-19.

9. ಅಬ್ರಹಾಮನ ಕುಟುಂಬದಲ್ಲಿ ಯಾವ ಸಮಸ್ಯೆಗಳಿದ್ವು?

9 ಅಬ್ರಹಾಮನ ಕುಟುಂಬದಲ್ಲೂ ಸಮಸ್ಯೆಗಳಿದ್ವು. ಅವನ ಪ್ರೀತಿಯ ಹೆಂಡತಿ ಸಾರಳಿಗೆ ಮಕ್ಕಳಿರಲಿಲ್ಲ. ಮಕ್ಕಳಿಲ್ಲದ ನೋವನ್ನ ಅನೇಕ ವರ್ಷಗಳವರೆಗೆ ಅವ್ರಿಬ್ರು ಅನುಭವಿಸಿದ್ರು. ನಂತ್ರ ಸಾರ ತನ್ನ ದಾಸಿ ಹಾಗರಳನ್ನು ಅಬ್ರಹಾಮನಿಗೆ ಹೆಂಡತಿಯಾಗಿ ಒಪ್ಪಿಸಿ ಅವಳ ಮೂಲಕವಾದ್ರು ಮಕ್ಕಳನ್ನ ಪಡೆಯೋಕೆ ಆಸೆಪಟ್ಟಳು. ಆದ್ರೆ ಹಾಗರ ಗರ್ಭಿಣಿಯಾದ ಮೇಲೆ ಸಾರಳನ್ನು ತಾತ್ಸಾರ ಮಾಡೋಕೆ ಶುರು ಮಾಡಿದಳು. ಪರಿಸ್ಥಿತಿ ಎಷ್ಟು ಬಿಗಡಾಯಿಸ್ತೆಂದ್ರೆ ಸಾರ ಹಾಗರಳನ್ನು ಮನೆಯಿಂದ ಓಡಿಸಿಬಿಟ್ಟಳು.—ಆದಿ. 16:1-6.

10. ಯಾವೆರಡು ಸಂದರ್ಭದಲ್ಲಿ ಅಬ್ರಹಾಮನಿಗೆ ಯೆಹೋವನ ಮೇಲೆ ದೃಢನಂಬಿಕೆ ಇಡಲು ಕಷ್ಟವಾಗಿರಬೇಕು? ವಿವರಿಸಿ.

10 ಕೊನೆಗೂ ಸಾರ ಗರ್ಭಿಣಿಯಾಗಿ ಗಂಡು ಮಗು ಹೆತ್ತಳು. ಅಬ್ರಹಾಮ ಆ ಮಗುವಿಗೆ ಇಸಾಕ ಅಂತ ಹೆಸರಿಟ್ಟ. ಅಬ್ರಹಾಮ ಇಸಾಕನನ್ನ ಮತ್ತು ಹಾಗರಳಲ್ಲಿ ಹುಟ್ಟಿದ್ದ ಇಷ್ಮಾಯೇಲ್‌ ಇಬ್ರನ್ನೂ ತುಂಬ ಪ್ರೀತಿಸ್ತಿದ್ದ. ಆದ್ರೆ ಇಷ್ಮಾಯೇಲ ಇಸಾಕನನ್ನು ಅಣಕಿಸಿ ತೊಂದ್ರೆ ಕೋಡೋಕೆ ಶುರುಮಾಡಿದಾಗ ಅವನನ್ನ ಮತ್ತು ಹಾಗರಳನ್ನ ಮನೆಯಿಂದ ಕಳುಹಿಸಿಬಿಡಬೇಕಾಯ್ತು. ಇದು ತುಂಬ ನೋವಿನ ವಿಷ್ಯವಾದ್ರು ಅಬ್ರಹಾಮನಿಗೆ ಬೇರೆ ದಾರಿಯಿರಲಿಲ್ಲ. (ಆದಿ. 21:9-14) ಅನೇಕ ವರ್ಷಗಳ ನಂತ್ರ ಇಸಾಕನನ್ನು ಯಜ್ಞವಾಗಿ ಅರ್ಪಿಸುವಂತೆ ಯೆಹೋವ ಹೇಳಿದ. (ಆದಿ. 22:1, 2; ಇಬ್ರಿ. 11:17-19) ಈ ಎರಡು ಸಂದರ್ಭಗಳಲ್ಲೂ ತನ್ನ ಮಕ್ಕಳ ಬಗ್ಗೆ ಯೆಹೋವ ಕೊಟ್ಟ ಮಾತು ಖಂಡಿತ ನೆರವೇರುತ್ತೆ ಅಂತ ಅಬ್ರಹಾಮ ದೃಢನಂಬಿಕೆ ಇಡಬೇಕಿತ್ತು.

11. ಅಬ್ರಹಾಮ ಯಾಕೆ ತಾಳ್ಮೆ ತೋರಿಸ್ಬೇಕಿತ್ತು?

11 ಈ ಎಲ್ಲ ಸಮ್ಯದಲ್ಲಿ ಅಬ್ರಹಾಮ ತಾಳ್ಮೆಯಿಂದ ಇದ್ದು ಯೆಹೋವ ಕೊಟ್ಟ ಮಾತು ನೆರವೇರೋದಕ್ಕಾಗಿ ಕಾದ. ಕುಟುಂಬದೊಟ್ಟಿಗೆ ಊರ್‌ ಪಟ್ಟಣದಿಂದ ಹೊರಟಾಗ ಅವನಿಗೆ ಸುಮಾರು 70 ವರ್ಷವಾಗಿತ್ತು. (ಆದಿ. 11:31–12:4) ನಂತ್ರ ಅವನು ಕಾನಾನ್‌ ದೇಶದಲ್ಲಿ ತಿರುಗಾಡ್ತಾ, ಡೇರೆಯಲ್ಲಿ ವಾಸಿಸ್ತಾ ನೂರು ವರ್ಷಗಳನ್ನು ಕಳೆದ. 175 ವರ್ಷವಾದಾಗ ತೀರಿಹೋದ. (ಆದಿ. 25:7) ಕಾನಾನ್‌ ದೇಶವನ್ನು ತನ್ನ ಸಂತತಿಯವ್ರಿಗೆ ಕೊಡ್ತೀನಿ ಅಂತ ಯೆಹೋವ ಹೇಳಿದ ಮಾತು ನೆರವೇರೋದನ್ನು ಅವನಿಗೆ ನೋಡೋಕಾಗಲಿಲ್ಲ. ಜೊತೆಗೆ ಅವನು ಎದುರುನೋಡ್ತಿದ್ದ ಪಟ್ಟಣವಾದ ದೇವರ ರಾಜ್ಯ ಸ್ಥಾಪನೆ ಆಗೋದನ್ನು ಸಹ ನೋಡೋಕಾಗಲಿಲ್ಲ. ಆದ್ರೂ ಅವನು “ಪೂರ್ಣಾಯುಷ್ಯದಿಂದ ದಿನತುಂಬಿದ ಮುದುಕನಾಗಿ” ಸಂತೃಪ್ತಿಯಿಂದ ಪ್ರಾಣ ಬಿಟ್ಟನು ಅಂತ ಬೈಬಲ್‌ ತಿಳ್ಸುತ್ತೆ. (ಆದಿ. 25:8) ಎಷ್ಟೇ ಕಷ್ಟ ಬಂದ್ರೂ ಅಬ್ರಹಾಮ ತನ್ನ ಅಚಲ ನಂಬಿಕೆ ಕಳಕೊಳ್ಳಲಿಲ್ಲ. ಕೊಟ್ಟ ಮಾತನ್ನು ಯೆಹೋವ ಖಂಡಿತ ನೆರವೇರಿಸ್ತಾನೆ ಅಂತ ತಾಳ್ಮೆಯಿಂದ ಕಾದ. ಕಷ್ಟಗಳನ್ನು ತಾಳಿಕೊಳ್ಳೋಕೆ ಯೆಹೋವ ಅವನಿಗೆ ಸಹಾಯ ಮಾಡಿದ್ನು. ಜೀವನದುದ್ದಕ್ಕೂ ಅವ್ನನ್ನು ಕಾಪಾಡಿ, ಆಪ್ತ ಸ್ನೇಹಿತನಂತೆ ನೋಡಿಕೊಂಡನು.—ಆದಿ. 15:1; ಯೆಶಾ. 41:8; ಯಾಕೋ. 2:22, 23.

ಅಬ್ರಹಾಮ ಮತ್ತು ಸಾರಳಂತೆ ದೇವಸೇವಕರು ಹೇಗೆ ನಂಬಿಕೆ ಮತ್ತು ತಾಳ್ಮೆ ತೋರಿಸ್ತಾರೆ? (ಪ್ಯಾರ 12 ನೋಡಿ) *

12. (ಎ) ನಾವು ಯಾವುದಕ್ಕಾಗಿ ಎದುರುನೋಡ್ತಿದ್ದೇವೆ? (ಬಿ) ಮುಂದಿನ ಪ್ಯಾರಗಳಲ್ಲಿ ಏನು ಚರ್ಚಿಸ್ತೀವಿ?

12 ಅಬ್ರಹಾಮನಂತೆ ನಾವು ಸಹ ನಿಜವಾದ ಅಸ್ತಿವಾರಗಳಿರೋ ಪಟ್ಟಣವನ್ನು ಎದುರುನೋಡ್ತಿದ್ದೇವೆ. ಆದ್ರೆ ಆ ರಾಜ್ಯ ಸ್ಥಾಪನೆಯಾಗೋಕೆ ನಾವೇನು ಕಾಯಬೇಕಾಗಿಲ್ಲ. 1914 ರಲ್ಲೇ ದೇವರ ರಾಜ್ಯದ ಸ್ಥಾಪನೆ ಆಗಿದೆ ಮತ್ತು ಸ್ವರ್ಗದಲ್ಲಿ ತನ್ನ ಆಳ್ವಿಕೆ ನಡೆಸ್ತಿದೆ. (ಪ್ರಕ. 12:7-10) ಆದ್ರೆ ಆ ರಾಜ್ಯದ ಆಳ್ವಿಕೆ ಭೂಮಿ ಮೇಲೆ ಬರೋದಕ್ಕೆ ನಾವು ಕಾಯ್ತಿದ್ದೇವೆ. ಹೀಗೆ ಕಾಯ್ತಿರುವಾಗ ಅಬ್ರಹಾಮ ಮತ್ತು ಸಾರಳಂತೆ ನಮ್ಗೂ ಅನೇಕ ಕಷ್ಟ ಬರಬಹುದು. ಈಗ್ಲೂ ಯೆಹೋವನ ಅನೇಕ ಸೇವಕರು ಅಬ್ರಹಾಮನ ಮಾದರಿ ಅನುಕರಿಸ್ತಿದ್ದಾರೆ. ಅಬ್ರಹಾಮ ಮತ್ತು ಸಾರಳಂತೆ ನಂಬಿಕೆ, ತಾಳ್ಮೆ ತೋರಿಸಿರುವ ಅನೇಕರ ಜೀವನಕಥೆಗಳು ಕಾವಲಿನಬುರುಜು ಪತ್ರಿಕೆಯಲ್ಲಿ ಮೂಡಿಬಂದಿವೆ. ಅವ್ರಲ್ಲಿ ಕೆಲವ್ರ ಜೀವನಕಥೆಗಳನ್ನ ಮತ್ತು ಅದ್ರಿಂದ ನಾವೇನು ಕಲಿಬಹುದು ಅನ್ನೋದನ್ನ ಈಗ ನೋಡೋಣ.

ಅಬ್ರಹಾಮನ ಮಾದರಿಯನ್ನು ಅನುಕರಿಸಿದವ್ರು

ತ್ಯಾಗ ಮಾಡಿ ಯೆಹೋವನ ಆಶೀರ್ವಾದ ಪಡೆದ ಬಿಲ್‌ ವಾಲ್ಡನ್‌

13. ಸಹೋದರ ವಾಲ್ಡನ್‌ರವ್ರ ಅನುಭವದಿಂದ ನೀವೇನು ಕಲಿತಿರಿ?

13 ತ್ಯಾಗ ಮಾಡಲು ಮುಂದಾಗಿ. ನಾವು ದೇವರ ಪಟ್ಟಣ ಅಥ್ವಾ ರಾಜ್ಯಕ್ಕೆ ನಮ್ಮ ಜೀವನದಲ್ಲಿ ಪ್ರಥಮ ಸ್ಥಾನ ಕೊಡಬೇಕಂದ್ರೆ ಅಬ್ರಹಾಮನಂತೆ ಯೆಹೋವನನ್ನು ಮೆಚ್ಚಿಸಲು ಅನೇಕ ತ್ಯಾಗಗಳನ್ನು ಮಾಡ್ಬೇಕು. (ಮತ್ತಾ. 6:33; ಮಾರ್ಕ 10:28-30) ಸಹೋದರ ಬಿಲ್‌ ವಾಲ್ಡನ್‌ರವ್ರ * ಉದಾಹರಣೆ ನೋಡಿ. ಅವ್ರು ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಆರ್ಕಿಟೆಕ್ಚರಲ್‌ ಎಂಜಿನಿಯರಿಂಗ್‌ ಓದ್ತಿದ್ರು. ಇಸವಿ 1942 ರಲ್ಲಿ ಕಾಲೇಜು ಇನ್ನೇನು ಮುಗಿಯೋ ಸಮ್ಯದಲ್ಲಿ ಯೆಹೋವನ ಸಾಕ್ಷಿಗಳ ಹತ್ರ ಬೈಬಲ್‌ ಕಲಿಯೋಕೆ ಆರಂಭಿಸಿದ್ರು. ಸಹೋದರ ಬಿಲ್‌ಗೆ ಪ್ರೊಫೆಸರ್‌ ಒಬ್ರು ಒಂದು ಕೆಲ್ಸ ಹುಡುಕಿಟ್ಟಿದ್ರು. ಆದ್ರೆ ಸಹೋದರ ಆ ಕೆಲ್ಸ ಬೇಡ ಅಂದ್ರು. ಕೆಲ್ಸಕ್ಕಿಂತ ದೇವ್ರ ಸೇವೆ ಮಾಡೋದೇ ತನಗೆ ಮುಖ್ಯ ಅಂತ ಅವ್ರಿಗೆ ವಿವರಿಸಿದ್ರು. ಸ್ವಲ್ಪ ಸಮಯದ ನಂತ್ರ ಮಿಲಿಟರಿಗೆ ಸೇರಬೇಕು ಅಂತ ಅವ್ರಿಗೆ ಸರಕಾರ ಆದೇಶ ನೀಡ್ತು. ಅದನ್ನವರು ಗೌರವಪೂರ್ವಕವಾಗಿ ನಿರಾಕರಿಸಿದ್ರು. ಇದ್ರಿಂದಾಗಿ ಭಾರೀ ಮೊತ್ತದ ದಂಡ ಕಟ್ಟಬೇಕಾಯ್ತು ಮತ್ತು ಅವ್ರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಯ್ತು. ಆದ್ರೆ ಮೂರು ವರ್ಷಗಳಾದ ಮೇಲೆ ಬಿಡುಗಡೆ ಆಯ್ತು. ನಂತ್ರ ಅವ್ರು ಗಿಲ್ಯಡ್‌ ಶಾಲೆಗೆ ಹೋದ್ರು ಮತ್ತು ಆಫ್ರಿಕದಲ್ಲಿ ಮಿಷನರಿ ಸೇವೆ ಮಾಡಿದ್ರು. ಈವಾ ಅನ್ನೋ ಸಹೋದರಿಯನ್ನು ಮದ್ವೆಯಾದ್ರು. ಅವ್ರಿಬ್ಬರು ಒಟ್ಟಿಗೆ ಆಫ್ರಿಕದಲ್ಲಿ ಸೇವೆ ಮಾಡ್ತಿದ್ರು. ಅಲ್ಲಿ ಕೂಡ ಅನೇಕ ತ್ಯಾಗ ಮಾಡಬೇಕಾಗಿ ಬಂತು. ಸುಮಾರು ವರ್ಷಗಳ ನಂತ್ರ ಬಿಲ್‌ರವ್ರ ತಾಯಿಯನ್ನು ನೋಡಿಕೊಳ್ಳಬೇಕಾಗಿ ಬಂತು. ಹಾಗಾಗಿ ಅವ್ರು ಅಮೆರಿಕಕ್ಕೆ ವಾಪಸ್‌ ಹೋದ್ರು. ಸಹೋದರ ತನ್ನ ಜೀವನದ ಬಗ್ಗೆ ಹೀಗೆ ಹೇಳ್ತಾರೆ: “70ಕ್ಕೂ ಹೆಚ್ಚು ವರ್ಷಗಳು ಯೆಹೋವ ನನ್ಗೆ ಅದ್ಭುತ ಸುಯೋಗಗಳನ್ನ ಕೊಟ್ಟು ಆಶೀರ್ವದಿಸಿದ್ದಾನೆ. ಅದನ್ನು ನೆನಸ್ವಾಗೆಲ್ಲ ನನ್ನ ಕಣ್ಣಲ್ಲಿ ಆನಂದಬಾಷ್ಪ ತುಂಬಿಬರುತ್ತೆ. ಯೆಹೋವನ ಸಹಾಯದಿಂದಲೇ ಆತನ ಸೇವೆನ ನನ್ನ ಜೀವನವೃತ್ತಿಯಾಗಿ ಮಾಡಿಕೊಳ್ಳೋಕಾಯ್ತು. ನಾನು ಆತನಿಗೆ ಚಿರಋಣಿ.” ನೀವು ಸಹ ಪೂರ್ಣ ಸಮಯದ ಸೇವೆನ ನಿಮ್ಮ ಜೀವನವೃತ್ತಿಯಾಗಿ ಆರಿಸಿಕೊಳ್ಳೋಕೆ ಆಗುತ್ತಾ?

ಯೆಹೋವನಿಂದ ಬಲ ಪಡೆದ ಎಲನೀ ಮತ್ತು ಅರೀಸ್ಟಾಟಲೀಸ್‌ ಅಪೊಸ್ಟೋಲೀಡೀಸ್‌

14-15. ಸಹೋದರ ಮತ್ತು ಸಹೋದರಿ ಅಪೊಸ್ಟೋಲೀಡೀಸ್‌ ಅನುಭವದಿಂದ ನೀವೇನು ಕಲಿತಿರಿ?

14 ಜೀವನದಲ್ಲಿ ಕಷ್ಟಗಳು ಬರಲ್ಲ ಅಂತ ಅಂದುಕೊಳ್ಬೇಡಿ. ಅಬ್ರಹಾಮನ ಉದಾಹರಣೆಯಲ್ಲಿ ನೋಡಿದಂತೆ ಯೆಹೋವನ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿ ಇಡೋರಿಗೂ ಜೀವನದಲ್ಲಿ ಕಷ್ಟ ಬಂದೇ ಬರುತ್ತೆ. (ಯಾಕೋ. 1:2; 1 ಪೇತ್ರ 5:9) ಸಹೋದರ ಅರೀಸ್ಟಾಟಲೀಸ್‌ ಅಪೊಸ್ಟೋಲೀಡೀಸ್‌ * ಅವ್ರ ಜೀವನದಲ್ಲಿ ಇದು ಸತ್ಯ ಆಯ್ತು. ಅವ್ರು 1946 ರಲ್ಲಿ ಗ್ರೀಸ್‌ನಲ್ಲಿ ದೀಕ್ಷಾಸ್ನಾನ ಪಡಕೊಂಡ್ರು. 1952 ರಲ್ಲಿ ಸಹೋದರಿ ಎಲನೀ ಜೊತೆ ನಿಶ್ಚಿತಾರ್ಥವಾಯ್ತು. ಅವ್ರಿಬ್ರು ಯೆಹೋವನ ಸೇವೆಯನ್ನ ಹೆಚ್ಚು ಮಾಡೋ ಗುರಿ ಇಟ್ಟಿದ್ರು. ಆದ್ರೆ ಸಹೋದರಿ ಎಲನೀಗೆ ಕಾಯಿಲೆ ಬಂತು, ಅವ್ರಿಗೆ ಬ್ರೈನ್‌ ಟ್ಯೂಮರ್‌ ಇತ್ತು. ಅದ್ರ ಆಪರೇಷನ್‌ ಆದ ನಂತ್ರ ಅವ್ರಿಬ್ಬರು ಮದ್ವೆಯಾದ್ರು. ಆದ್ರೆ ಸ್ವಲ್ಪ ವರ್ಷಗಳ ನಂತ್ರ ಮತ್ತೆ ಆ ಸಹೋದರಿಗೆ ಟ್ಯೂಮರ್‌ ಕಾಣಿಸಿಕೊಳ್ತು. ಡಾಕ್ಟರ್‌ ಮತ್ತೆ ಆಪರೇಷನ್‌ ಮಾಡಿದ್ರು, ಆದ್ರೆ ಈ ಸಲ ಸಹೋದರಿ ಎಲನೀಯವ್ರ ಅರ್ಧ ದೇಹ ಸ್ವಾಧೀನ ಕಳಕೊಳ್ತು ಮತ್ತು ಅವ್ರಿಗೆ ಸ್ಪಷ್ಟವಾಗಿ ಮಾತಾಡೋಕೆ ಆಗ್ತಿರಲಿಲ್ಲ. ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿದ್ರೂ, ಸರಕಾರದಿಂದ ಹಿಂಸೆ ಬಂದ್ರೂ ಸಹೋದರಿ ಸೇವೆಯಲ್ಲಿ ಹುರುಪನ್ನು ಕಳಕೊಳ್ಳಲಿಲ್ಲ.

15 ಸಹೋದರ ಅರೀಸ್ಟಾಟಲೀಸ್‌ ಸುಮಾರು 30 ವರ್ಷ ತಮ್ಮ ಪತ್ನಿನ ನೋಡಿಕೊಂಡ್ರು. ಆ ಸಮ್ಯದಲ್ಲಿ ಅವ್ರು ಹಿರಿಯರಾಗಿ ಸೇವೆ ಮಾಡಿದ್ರು, ಸಮ್ಮೇಳನ ಕಮಿಟಿಯ ಸದಸ್ಯರಾಗಿದ್ರು ಮತ್ತು ಒಂದು ಸಮ್ಮೇಳನ ಹಾಲ್‌ ಕಟ್ಟೋದಕ್ಕೆ ಸಹಾಯನೂ ಮಾಡಿದ್ರು. 1987 ರಲ್ಲಿ ಸಹೋದರಿ ಎಲನೀ ಸುವಾರ್ತೆ ಸಾರ್ತಿದ್ದಾಗ ಭಾರೀ ಗಾತ್ರದ ಕಬ್ಬಿಣದ ಬಾಗಿಲು ಅವರಿಗೆ ಬಡಿದು ತುಂಬ ಏಟಾಯ್ತು. ಅವ್ರು ಮೂರು ವರ್ಷ ಕೋಮಾದಲ್ಲಿದ್ರು. ನಂತ್ರ ತೀರಿಹೋದ್ರು. ಸಹೋದರ ಅರೀಸ್ಟಾಟಲೀಸ್‌ ಜೀವನದ ಅನುಭವಗಳ ಬಗ್ಗೆ ಹೇಳುತ್ತಾ ಹೀಗೆ ತಿಳ್ಸಿದ್ದಾರೆ: “ಈ ಎಲ್ಲಾ ವರ್ಷಗಳಲ್ಲಿ ಅನೇಕ ಸಮಸ್ಯೆಗಳು ಬಂದ್ವು. ಕೆಲ್ವು ದಿಢೀರಂತ ಬಂತು. ಆವಾಗ ಧೈರ್ಯ ತೋರಿಸೋಕೆ, ಕುಗ್ಗಿಹೋಗದೆ ಇರೋಕೆ ನಂಗೆ ಬಲ ಬೇಕಿತ್ತು. ಅದನ್ನ ಯೆಹೋವ ಕೊಟ್ನು.” (ಕೀರ್ತ. 94:18, 19) ಎಷ್ಟೇ ಸಮಸ್ಯೆ ಬಂದ್ರೂ ಈ ರೀತಿ ತಮ್ಮಿಂದಾದಷ್ಟು ಉತ್ತಮ ಸೇವೆ ಮಾಡುವವ್ರನ್ನು ಯೆಹೋವ ತುಂಬ ಪ್ರೀತಿಸ್ತಾನೆ.

ಭವಿಷ್ಯದ ಕಡೆಗೆ ಗಮನವಿಟ್ಟ ಆಡ್ರೀ ಹೈಡ್‌

16. ಸಹೋದರ ನಾರ್‌ ತಮ್ಮ ಪತ್ನಿಗೆ ಯಾವ ಸಲಹೆ ಕೊಟ್ರು?

16 ನಿಮ್ಮ ಗಮನ ಭವಿಷ್ಯದ ಮೇಲಿರಲಿ. ಅಬ್ರಹಾಮನು ಯೆಹೋವ ದೇವ್ರು ಕೊಡಲಿದ್ದ ಆಶೀರ್ವಾದಗಳ ಮೇಲೆ ಗಮನ ಇಟ್ಟ. ಹಾಗಾಗಿ ಸಮಸ್ಯೆಗಳನ್ನು ಜಯಿಸಲು ಸಾಧ್ಯವಾಯ್ತು. ಸಹೋದರಿ ಆಡ್ರೀ ಹೈಡ್‌ರವ್ರ ಉದಾಹರಣೆ ನೋಡಿ. ಅವ್ರ ಮೊದಲ ಪತಿ ನೇತನ್‌ ಹೆಚ್‌. ನಾರ್‌ ಕ್ಯಾನ್ಸರ್‌ನಿಂದ ತೀರಿಹೋದ್ರು. ಅವ್ರ ಎರಡನೇ ಪತಿ ಗ್ಲೆನ್‌ ಹೈಡ್‌ ಆಲ್ಜೈಮರ್‌ ಕಾಯಿಲೆಯಿಂದ ಬಳಲುತ್ತಿದ್ರು. * ಆದ್ರೂ ಸಹೋದರಿ ಕುಗ್ಗಿಹೋಗದೆ ತಮ್ಮ ಗಮನವನ್ನು ಭವಿಷ್ಯದ ಮೇಲಿಟ್ರು. ಸಹೋದರ ನಾರ್‌ ತೀರಿಹೋಗೋ ಕೆಲ್ವು ವಾರಗಳ ಮುಂಚೆ ತಮ್ಮ ಪತ್ನಿಗೆ ಒಳ್ಳೇ ಸಲಹೆ ನೀಡಿದ್ರು. ಅದ್ರಿಂದ ಸಹೋದರಿಗೆ ಮುಂದೆ ಬರಲಿದ್ದ ಕಷ್ಟಗಳನ್ನು ತಾಳಿಕೊಳ್ಳೋಕೆ ಸಾಧ್ಯವಾಯ್ತು. ಅವ್ರು ಏನು ಹೇಳಿದ್ರು ಅಂತ ಸಹೋದರಿಯ ಮಾತಲ್ಲೇ ಕೇಳಿ: “ನೇತನ್‌ ನಂಗೆ ಹೀಗೆ ಹೇಳಿದ್ರು: ‘ಮರಣದ ನಂತ್ರ ನಮ್ಮ ನಿರೀಕ್ಷೆ ಸುಳ್ಳಾಗಲ್ಲ. ಮುಂದೆ ನಾವು ನೋವು ಅನುಭವಿಸಬೇಕಾಗಿಲ್ಲ. ನೀನು ಭವಿಷ್ಯದ ಕಡೆ ನೋಡು, ಆಗ ನಿಂಗೆ ಪ್ರತಿಫಲ ಸಿಗುತ್ತೆ. ಸೇವೆಯನ್ನ ಆದಷ್ಟು ಜಾಸ್ತಿ ಮಾಡು. ನಿನ್ನಿಂದ ಬೇರೆಯವ್ರಿಗೆ ಏನು ಸಹಾಯ ಮಾಡಕ್ಕಾಗುತ್ತೋ ಅದನ್ನ ಮಾಡ್ತಿರು. ಇದ್ರಿಂದ ಜೀವನದಲ್ಲಿ ನಿಂಗೆ ಸಂತೋಷ ಇರುತ್ತೆ.’” ಈ ಸಲಹೆಯಿಂದ ನಮ್ಗೂ ಪ್ರಯೋಜನ ಸಿಗುತ್ತೆ. ನಾವು ಸಹ ಬೇರೆಯವ್ರಿಗೆ ನಮ್ಮಿಂದಾದಷ್ಟು ಒಳ್ಳೇದು ಮಾಡ್ತಾ “ನಿರೀಕ್ಷೆಯಲ್ಲಿ ಆನಂದಿಸೋಣ.”—ರೋಮ. 12:12.

17. (ಎ) ಭವಿಷ್ಯದ ಕಡೆಗೆ ಈಗ ಜಾಸ್ತಿ ಗಮನ ಕೊಡ್ಬೇಕು ಯಾಕೆ? (ಬಿ) ಮುಂದೆ ಆಶೀರ್ವಾದಗಳು ಸಿಗಬೇಕಂದ್ರೆ ಮೀಕ 7:7 ರಲ್ಲಿ ಇರುವಂತೆ ನಾವೇನು ಮಾಡ್ಬೇಕು?

17 ಭವಿಷ್ಯದ ಕಡೆಗೆ ನಾವೀಗ ಜಾಸ್ತಿ ಗಮನ ಕೊಡ್ಬೇಕು. ಯಾಕೆಂದ್ರೆ ನಾವು ಕಡೇ ದಿವಸಗಳ ಕೊನೇ ಕ್ಷಣಗಳಲ್ಲಿ ಜೀವಿಸ್ತಿದ್ದೇವೆ. ಲೋಕದಲ್ಲಿ ನಡೆಯುತ್ತಿರೋ ಘಟನೆಗಳು ಅಂತ್ಯ ಹತ್ರ ಅಂತ ಸ್ಪಷ್ಟವಾಗಿ ತೋರಿಸ್ತಿವೆ. ಇನ್ನು ಸ್ವಲ್ಪದರಲ್ಲೇ ನಿಜವಾದ ಅಸ್ತಿವಾರಗಳಿರೋ ಪಟ್ಟಣ ಅಂದ್ರೆ ದೇವ್ರ ರಾಜ್ಯ ಇಡೀ ಭೂಮಿಯ ಮೇಲೆ ಆಳ್ವಿಕೆ ನಡೆಸಲಿದೆ. ಅಲ್ಲಿ ನಮ್ಗೆ ಅನೇಕ ಆಶೀರ್ವಾದ ಸಿಗುತ್ತೆ. ಅದರಲ್ಲೊಂದು ತೀರಿಹೋದ ನಮ್ಮ ಪ್ರೀತಿಪಾತ್ರರು ಪುನಃ ಜೀವಂತ ಎದ್ದುಬರೋದಾಗಿದೆ. ಆ ಸಮ್ಯದಲ್ಲಿ ಅಬ್ರಹಾಮ ಮತ್ತು ಅವನ ಕುಟುಂಬದವ್ರೂ ಎದ್ದುಬರ್ತಾರೆ. ಇದು ಅಬ್ರಹಾಮ ತೋರಿಸಿದ ನಂಬಿಕೆ ಮತ್ತು ತಾಳ್ಮೆ ಕಾರಣ ಯೆಹೋವ ಕೊಡುವ ಬಹುಮಾನ ಆಗಿದೆ. ಅವನನ್ನು ಸ್ವಾಗತಿಸಲು ನೀವಲ್ಲಿ ಇರ್ತೀರಾ? ಇರಬೇಕಂದ್ರೆ ನೀವೂ ಅಬ್ರಹಾಮನಂತೆ ಇರಬೇಕು. ದೇವರ ರಾಜ್ಯಕ್ಕಾಗಿ ತ್ಯಾಗಗಳನ್ನು ಮಾಡ್ಬೇಕು. ಸಮಸ್ಯೆ ಬಂದಾಗ ನಂಬಿಕೆ ಕಳಕೊಳ್ಳಬಾರ್ದು ಮತ್ತು ಯೆಹೋವ ಕೊಟ್ಟ ಮಾತು ನೆರವೇರೋದಕ್ಕಾಗಿ ತಾಳ್ಮೆಯಿಂದ ಕಾಯ್ಬೇಕು.—ಮೀಕ 7:7 ಓದಿ.

ಗೀತೆ 102 ರಾಜ್ಯ ಗೀತೆಯಲ್ಲಿ ಜೊತೆಗೂಡಿರಿ!

^ ಪ್ಯಾರ. 5 ಯೆಹೋವ ಕೊಟ್ಟಿರೋ ಮಾತು ನೆರವೇರೋದನ್ನು ಎದುರುನೋಡ್ತಿರ್ವಾಗ ಕೆಲವೊಮ್ಮೆ ನಾವು ತಾಳ್ಮೆಗೆಡಬಹುದು ಅಥ್ವಾ ನಂಬಿಕೆ ಕಳಕೋಬಹುದು. ಅಬ್ರಹಾಮನು ಯೆಹೋವ ಕೊಟ್ಟ ಮಾತು ಖಂಡಿತ ನೆರವೇರುತ್ತೆ ಅಂತ ತಾಳ್ಮೆಯಿಂದ ಕಾದನು. ಅವ್ನಿಂದ ನಾವ್ಯಾವ ಪಾಠ ಕಲಿಬಹುದು? ತಾಳ್ಮೆಯಿಂದ ಕಾಯೋ ವಿಷ್ಯದಲ್ಲಿ ಆಧುನಿಕ ದಿನದ ಯೆಹೋವನ ಸೇವಕರು ಯಾವ ಮಾದರಿಯಿಟ್ಟಿದ್ದಾರೆ?

^ ಪ್ಯಾರ. 56 ಚಿತ್ರ ವಿವರಣೆ: ವೃದ್ಧ ದಂಪತಿ ಸಮಸ್ಯೆಗಳ ಮಧ್ಯನೂ ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆ ಮಾಡ್ತಿದ್ದಾರೆ. ಯೆಹೋವ ಭವಿಷ್ಯದಲ್ಲಿ ಕೊಡಲಿರೋ ಆಶೀರ್ವಾದಗಳ ಬಗ್ಗೆ ಗಮನವಿಡೋ ಮೂಲಕ ತಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ತಿದ್ದಾರೆ.