ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 35

ಯೆಹೋವನ ಸಭೆಯಲ್ಲಿರೋ ಪ್ರತಿಯೊಬ್ರ ಪಾತ್ರನ ಗೌರವಿಸಿ

ಯೆಹೋವನ ಸಭೆಯಲ್ಲಿರೋ ಪ್ರತಿಯೊಬ್ರ ಪಾತ್ರನ ಗೌರವಿಸಿ

“ಕಣ್ಣು ಕೈಗೆ, ‘ನೀನು ನನಗೆ ಅವಶ್ಯವಿಲ್ಲ’ ಎಂದಾಗಲಿ ತಲೆಯು ಪಾದಗಳಿಗೆ, ‘ನೀವು ನನಗೆ ಅವಶ್ಯವಿಲ್ಲ’ ಎಂದಾಗಲಿ ಹೇಳಲು ಸಾಧ್ಯವಿಲ್ಲ.”—1 ಕೊರಿಂ. 12:21.

ಗೀತೆ 63 ಸದಾ ನಿಷ್ಠರು

ಕಿರುನೋಟ *

1. ಯೆಹೋವ ಸಭೆಯಲ್ಲಿ ಪ್ರತಿಯೊಬ್ರಿಗೂ ಏನು ಕೊಟ್ಟಿದ್ದಾನೆ?

ಯೆಹೋವ ಸಭೆಯಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಪಾತ್ರ ಕೊಟ್ಟಿದ್ದಾನೆ. ನಮಗಿರೋ ಪಾತ್ರ ಬೇರೆಬೇರೆ ಆಗಿದ್ರೂ ನಾವೆಲ್ರೂ ಯೆಹೋವನಿಗೆ ಅಮೂಲ್ಯರೇ. ಅಷ್ಟೇ ಅಲ್ಲ, ನಮಗೆ ಒಬ್ಬರಿಗೊಬ್ಬರ ಸಹಾಯ ಬೇಕೇ ಬೇಕು. ಈ ಪ್ರಾಮುಖ್ಯ ವಿಷ್ಯ ಅರ್ಥಮಾಡ್ಕೊಳ್ಳೋಕೆ ನಮ್ಗೆ ಅಪೊಸ್ತಲ ಪೌಲನ ಮಾತು ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ.

2. ಎಫೆಸ 4:16 ರ ಪ್ರಕಾರ ನಾವ್ಯಾಕೆ ಒಬ್ಬರನ್ನೊಬ್ರು ಗೌರವಿಸಿ, ಒಟ್ಟಿಗೆ ಕೆಲ್ಸ ಮಾಡಬೇಕು?

2 ಈ ಲೇಖನದ ಮುಖ್ಯ ವಚನದಲ್ಲಿರೋ ತರ ನಾವ್ಯಾರೂ ನಮ್ಮ ಸಹೋದರ ಸಹೋದರಿಯರಿಗೆ ‘ನಿಮ್ಮ ಅವಶ್ಯಕತೆ ನನಗಿಲ್ಲ’ ಅಂತ ಹೇಳೋಕೆ ಸಾಧ್ಯವಿಲ್ಲ. ಯಾಕಂದ್ರೆ ಎಲ್ರೂ ಯೆಹೋವನ ಸೇವಕರೇ. (1 ಕೊರಿಂ. 12:21) ಸಭೆಯಲ್ಲಿ ಶಾಂತಿ, ಸಮಾಧಾನ ಇರಬೇಕಂದ್ರೆ ಒಬ್ಬರನ್ನೊಬ್ಬರು ಗೌರವಿಸಿ, ಒಟ್ಟಿಗೆ ಕೆಲ್ಸ ಮಾಡಬೇಕು. (ಎಫೆಸ 4:16 ಓದಿ.) ಹೀಗೆ ಒಗ್ಗಟ್ಟಿಂದ ಕೆಲ್ಸ ಮಾಡೋದಾದ್ರೆ ನಮ್ಮ ಮಧ್ಯೆ ಪ್ರೀತಿ ಇರುತ್ತೆ ಮತ್ತು ಸಭೆಯನ್ನು ಬಲಪಡಿಸೋಕೆ ಆಗುತ್ತೆ.

3. ಈ ಲೇಖನದಲ್ಲಿ ಏನನ್ನ ಚರ್ಚಿಸ್ತೀವಿ?

3 ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ನಾವು ಯಾವೆಲ್ಲ ವಿಧಗಳಲ್ಲಿ ಗೌರವ ತೋರಿಸ್ಬಹುದು? ಈ ಲೇಖನದಲ್ಲಿ ಮೊದ್ಲಿಗೆ, ಹಿರಿಯರು ಹೇಗೆ ಬೇರೆ ಹಿರಿಯರಿಗೆ ಗೌರವ ತೋರಿಸಬಹುದು ಅನ್ನೋದನ್ನು ಕಲಿತ್ತೇವೆ. ನಂತ್ರ ಸಭೆಯಲ್ಲಿರೋ ಅವಿವಾಹಿತ ಸಹೋದರ ಸಹೋದರಿಯರನ್ನು ನಾವು ಹೇಗೆ ಮಾನ್ಯ ಮಾಡ್ತಿವಿ ಅಂತ ತೋರಿಸಿಕೊಡ್ಬಹುದು ಅನ್ನೋದನ್ನು ಚರ್ಚಿಸ್ತೇವೆ. ಕೊನೆಗೆ ನಮ್ಮ ಭಾಷೆನ ಚೆನ್ನಾಗಿ ಮಾತಾಡಕ್ಕೆ ಬರದ ಸಹೋದರ ಸಹೋದರಿಯರಿಗೆ ಹೇಗೆ ಗೌರವ ತೋರಿಸ್ಬೇಕು ಅನ್ನೋದನ್ನು ನೋಡ್ತೇವೆ.

ಬೇರೆ ಹಿರಿಯರನ್ನ ಗೌರವಿಸಿ

4. ರೋಮನ್ನರಿಗೆ 12:10 ರಲ್ಲಿ ಪೌಲ ಕೊಟ್ಟಿರೋ ಯಾವ ಸಲಹೆನಾ ಹಿರಿಯರು ಪಾಲಿಸ್ಬೇಕು?

4 ಸಭೆಯಲ್ಲಿರೋ ಪ್ರತಿಯೊಬ್ಬ ಹಿರಿಯರನ್ನು ಯೆಹೋವನ ಪವಿತ್ರಾತ್ಮದಿಂದ ನೇಮಿಸಲಾಗುತ್ತೆ. ಹಾಗಿದ್ರೂ ಅವ್ರಲ್ಲಿ ಪ್ರತಿಯೊಬ್ರಿಗೂ ಬೇರೆಬೇರೆ ವರ, ಸಾಮರ್ಥ್ಯಗಳಿರುತ್ತವೆ. (1 ಕೊರಿಂ. 12:17, 18) ಅವ್ರಲ್ಲಿ ಕೆಲವ್ರು ಇತ್ತೀಚೆಗಷ್ಟೇ ಹಿರಿಯರಾಗಿರ್ತಾರೆ, ಹಾಗಾಗಿ ಬೇರೆ ಹಿರಿಯರಿಗೆ ಇರೋಷ್ಟು ಅನುಭವ ಇರಲ್ಲ. ಇನ್ನು ಕೆಲವ್ರಿಗೆ ವಯಸ್ಸಾಗಿರೋದ್ರಿಂದ ಅಥ್ವಾ ಕಾಯಿಲೆ ಇರೋದ್ರಿಂದ ಜಾಸ್ತಿ ಮಾಡಕ್ಕಾಗದೇ ಇರಬಹುದು. ಏನೇ ಆದ್ರೂ, ಯಾವ ಹಿರಿಯ ಸಹ ಬೇರೆ ಹಿರಿಯನ ಬಗ್ಗೆ ‘ಇವ್ರಿಂದ ಏನೂ ಪ್ರಯೋಜನ ಇಲ್ಲ’ ಅಂತ ಯೋಚಿಸ್ಬಾರ್ದು. ಬದ್ಲಿಗೆ ಪ್ರತಿಯೊಬ್ಬ ಹಿರಿಯ, ಪೌಲ ರೋಮನ್ನರಿಗೆ 12:10 ರಲ್ಲಿ ಕೊಟ್ಟಿರೋ ಸಲಹೆನಾ ಪಾಲಿಸ್ಬೇಕು. (ಓದಿ.)

ಹಿರಿಯರು ಬೇರೆ ಹಿರಿಯರು ಹೇಳೋದನ್ನು ಗಮನ ಕೊಟ್ಟು ಕೇಳಿ ಅವ್ರನ್ನು ಗೌರವಿಸ್ತಾರೆ (ಪ್ಯಾರ 5-6 ನೋಡಿ)

5. (ಎ) ಹಿರಿಯರು ಹೇಗೆ ಬೇರೆ ಹಿರಿಯರಿಗೆ ಗೌರವ ತೋರಿಸ್ಬಹುದು? (ಬಿ) ಇದು ಯಾಕೆ ಪ್ರಾಮುಖ್ಯ?

5 ಹಿರಿಯರು ಹೇಗೆ ಬೇರೆ ಹಿರಿಯರಿಗೆ ಗೌರವ ತೋರಿಸ್ಬಹುದು? ಹೇಗಂದ್ರೆ ಬೇರೆ ಹಿರಿಯರು ತಮ್ಮ ಅಭಿಪ್ರಾಯ ಹೇಳ್ವಾಗ ಗಮನಕೊಟ್ಟು ಕೇಳಿಸಿಕೊಳ್ಬೇಕು. ಇದನ್ನು ವಿಶೇಷವಾಗಿ ಹಿರಿಯರ ಕೂಟದಲ್ಲಿ ಗಂಭೀರ ವಿಷ್ಯಗಳನ್ನು ಚರ್ಚೆ ಮಾಡ್ವಾಗ ಪಾಲಿಸ್ಬೇಕು. ಯಾಕಂದ್ರೆ ಅಕ್ಟೋಬರ್‌ 1, 1988 ರ ಇಂಗ್ಲಿಷ್‌ ಕಾವಲಿನಬುರುಜು ಪತ್ರಿಕೆಯಲ್ಲಿ ಹೀಗಿದೆ: “ಒಂದು ಗಂಭೀರ ನಿರ್ಣಯವನ್ನು ಮಾಡಲು ಅಥ್ವಾ ಒಂದು ಸಮಸ್ಯೆಯನ್ನ ಬಗೆಹರಿಸಲು ಬೇಕಾದ ಬೈಬಲ್‌ ತತ್ವವನ್ನು ನೆನಪಿಗೆ ತರಲು ಯೇಸು ಕ್ರಿಸ್ತನು ಪವಿತ್ರಾತ್ಮದ ಮೂಲಕ ಹಿರಿಯರ ಮಂಡಲಿಯಲ್ಲಿರುವ ಯಾರನ್ನು ಬೇಕಾದ್ರೂ ಬಳಸ್ಬಹುದು ಅನ್ನೋದನ್ನು ಹಿರಿಯರು ಒಪ್ಪಿಕೊಳ್ಬೇಕು. (ಅ. ಕಾ. 15:6-15) ಪವಿತ್ರಾತ್ಮ ಒಬ್ಬ ಹಿರಿಯನಿಗಷ್ಟೇ ಅಲ್ಲ ಸಭೆಯಲ್ಲಿರೋ ಎಲ್ಲ ಹಿರಿಯರಿಗೂ ಸಹಾಯ ಮಾಡುತ್ತೆ ಅನ್ನೋದನ್ನು ಮರೀಬಾರ್ದು.”

6. (ಎ) ಹಿರಿಯರು ಹೇಗೆ ಒಗ್ಗಟ್ಟಿಂದ ಕೆಲ್ಸ ಮಾಡ್ಬಹುದು? (ಬಿ) ಇದ್ರಿಂದ ಸಭೆಗೆ ಯಾವ ಪ್ರಯೋಜನ ಸಿಗುತ್ತೆ?

6 ಬೇರೆ ಹಿರಿಯರ ಮೇಲೆ ಗೌರವ ಇರುವವನು ಹಿರಿಯರ ಕೂಟದಲ್ಲಿ ಯಾವಾಗ್ಲೂ ತಾನೇ ಮೊದ್ಲು ಮಾತಾಡೋಕೆ ಹೋಗಲ್ಲ. ಚರ್ಚೆ ನಡೀವಾಗ ಅವನೇ ಹೆಚ್ಚು ಮಾತಾಡಲ್ಲ. ತಾನು ಹೇಳಿದ್ದೇ ಸರಿಯಿರುತ್ತೆ ಅಂತನೂ ನೆನಸಲ್ಲ. ಬದ್ಲಿಗೆ ತನ್ನ ಅಭಿಪ್ರಾಯನ ದೀನತೆಯಿಂದ ತಿಳಿಸ್ತಾನೆ. ಬೇರೆಯವ್ರು ಮಾತಾಡ್ವಾಗ ಗಮನ ಕೊಟ್ಟು ಕೇಳ್ತಾನೆ. ಎಲ್ಲಕ್ಕಿಂತ ಹೆಚ್ಚಾಗಿ ಬೈಬಲ್‌ ತತ್ವಗಳನ್ನು ಚರ್ಚಿಸಿ, ಅದನ್ನು ಅನ್ವಯಿಸೋಕೆ ಮತ್ತು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಕೊಡೋ ಮಾರ್ಗದರ್ಶನವನ್ನು ಸ್ವೀಕರಿಸೋಕೂ ಸಿದ್ಧನಾಗಿರ್ತಾನೆ. (ಮತ್ತಾ. 24:45-47) ಹೀಗೆ ಹಿರಿಯರ ಕೂಟದಲ್ಲಿ ಒಬ್ಬರಿಗೊಬ್ಬರು ಪ್ರೀತಿ, ಗೌರವದಿಂದ ಮಾತಾಡಿದ್ರೆ ಪವಿತ್ರಾತ್ಮ ಕೆಲ್ಸ ಮಾಡುತ್ತೆ ಮತ್ತು ಸಭೆಯನ್ನು ಬಲಪಡಿಸುವಂಥ ನಿರ್ಣಯಗಳನ್ನು ಮಾಡೋಕೆ ಸಹಾಯ ಮಾಡುತ್ತೆ.—ಯಾಕೋ. 3:17, 18.

ಅವಿವಾಹಿತ ಕ್ರೈಸ್ತರನ್ನು ಗೌರವಿಸಿ

7. ಯೇಸುಗೆ ಅವಿವಾಹಿತರ ಬಗ್ಗೆ ಯಾವ ಅಭಿಪ್ರಾಯ ಇತ್ತು?

7 ಸಭೆಯಲ್ಲಿ ವಿವಾಹಿತರು, ಮಕ್ಕಳಿರೋರು ಇದ್ದಾರೆ. ಜೊತೆಗೆ ಅವಿವಾಹಿತ ಸಹೋದರ ಸಹೋದರಿಯರೂ ಇದ್ದಾರೆ. ಅವ್ರ ಬಗ್ಗೆ ನಮ್ಗೆ ಯಾವ ಅಭಿಪ್ರಾಯ ಇರಬೇಕು? ಯೇಸುಗೆ ಅವಿವಾಹಿತರ ಬಗ್ಗೆ ಯಾವ ಅಭಿಪ್ರಾಯ ಇತ್ತು ನೋಡಿ. ಯೇಸು ಭೂಮಿಯಲ್ಲಿದ್ದಾಗ ಮದುವೆ ಮಾಡಿಕೊಳ್ಳಲಿಲ್ಲ. ಅವನು ಅವಿವಾಹಿತನಾಗಿ ಉಳಿದ ಮತ್ತು ಯೆಹೋವನ ಸೇವೆ ಮಾಡೋದಕ್ಕೆ ಸಂಪೂರ್ಣ ಸಮಯ, ಗಮನ ಕೊಟ್ಟ. ಒಬ್ಬ ಕ್ರೈಸ್ತ ಮದುವೆಯಾಗ್ಲೇಬೇಕು ಅಂತನೋ ಅಥ್ವಾ ಮದುವೆ ಆಗಬಾರ್ದು ಅಂತನೋ ಯೇಸು ಯಾವತ್ತಿಗೂ ಹೇಳಲಿಲ್ಲ. ಯಾರಾದ್ರೂ ಮದುವೆ ಆಗೋದು ಬೇಡ ಅಂತ ನಿರ್ಧರಿಸಿದ್ರೆ ಅವರಿಷ್ಟದಂತೆನೇ ಇರಬಹುದು ಅಂತ ಹೇಳಿದ. (ಮತ್ತಾ. 19:11, 12) ಯೇಸು ಅವಿವಾಹಿತರನ್ನು ಗೌರವಿಸಿದ. ಅವ್ರನ್ನು ಯಾವತ್ತಿಗೂ ಕೀಳಾಗಿ ನೋಡಲಿಲ್ಲ ಅಥ್ವಾ ಮದುವೆಯಾದವ್ರ ಜೀವನದಲ್ಲಿ ಇರೋ ಸಂತೋಷ ಅವಿವಾಹಿತರ ಜೀವನದಲ್ಲಿ ಇರಲ್ಲ ಅಂತ ನೆನಸಲಿಲ್ಲ.

8. ಒಂದನೇ ಕೊರಿಂಥ 7:7-9 ರಲ್ಲಿ ಪೌಲ ಯಾವ ವಿಷ್ಯದ ಬಗ್ಗೆ ಯೋಚಿಸಲು ಉತ್ತೇಜಿಸಿದ?

8 ಯೇಸುವಿನಂತೆ ಅಪೊಸ್ತಲ ಪೌಲ ಸಹ ಅವಿವಾಹಿತನಾಗಿ ಉಳಿದು ಯೆಹೋವನ ಸೇವೆ ಮಾಡಿದ. ಕ್ರೈಸ್ತರು ಮದುವೆಯಾಗೋದು ತಪ್ಪು ಅಂತ ಪೌಲ ಯಾವತ್ತೂ ಹೇಳಲಿಲ್ಲ. ಅದು ಅವ್ರವ್ರಿಗೆ ಬಿಟ್ಟ ವಿಚಾರ ಅಂತ ಅವನು ಅರ್ಥಮಾಡ್ಕೊಂಡಿದ್ದ. ಆದ್ರೂ ಕ್ರೈಸ್ತರು ಅವಿವಾಹಿತರಾಗಿ ಉಳಿದು ಯೆಹೋವನ ಸೇವೆ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಪ್ರೋತ್ಸಾಹಿಸಿದ. (1 ಕೊರಿಂಥ 7:7-9 ಓದಿ.) ಪೌಲ ಯಾವತ್ತಿಗೂ ಅವಿವಾಹಿತರನ್ನು ಕೀಳಾಗಿ ನೋಡ್ಲಿಲ್ಲ. ನಿಜ ಹೇಳಬೇಕಂದ್ರೆ ಅವನು ಅವಿವಾಹಿತ ಸಹೋದರನಾಗಿದ್ದ ತಿಮೊಥಿಗೆ ಭಾರೀ ಜವಾಬ್ದಾರಿಗಳನ್ನು ವಹಿಸಿದ. * (ಫಿಲಿ. 2:19-22) ಆದ್ರಿಂದ ಒಬ್ಬ ಸಹೋದರ ಮದುವೆಯಾಗಲಿ, ಆಗದಿರಲಿ ಅದನ್ನು ಆಧಾರವಾಗಿಟ್ಟುಕೊಂಡು ಅವನು ಸಭೆಯ ಜವಾಬ್ದಾರಿಗಳನ್ನು ನಿರ್ವಹಿಸಲು ಅರ್ಹನಾಗಿದ್ದಾನಾ ಇಲ್ಲವಾ ಅಂತ ಯೋಚಿಸೋದು ತಪ್ಪು.—1 ಕೊರಿಂ. 7:32-35, 38.

9. ವಿವಾಹಿತ ಮತ್ತು ಅವಿವಾಹಿತ ಸ್ಥಿತಿ ಬಗ್ಗೆ ನಮ್ಗೆ ಯಾವ ಅಭಿಪ್ರಾಯ ಇರಬೇಕು?

9 ಯೇಸುವಾಗಲಿ, ಪೌಲನಾಗಲಿ ಕ್ರೈಸ್ತರು ಮದುವೆಯಾಗ್ಲೇಬೇಕು ಅಂತನೋ ಅಥ್ವಾ ಅವಿವಾಹಿತರಾಗಿಯೇ ಉಳೀಬೇಕು ಅಂತನೋ ಹೇಳಲಿಲ್ಲ. ಹಾಗಾದ್ರೆ ವಿವಾಹಿತ ಮತ್ತು ಅವಿವಾಹಿತ ಸ್ಥಿತಿಯ ಬಗ್ಗೆ ನಮ್ಗೆ ಯಾವ ಅಭಿಪ್ರಾಯ ಇರಬೇಕು? ಇದ್ರ ಬಗ್ಗೆ ಅಕ್ಟೋಬರ್‌ 1, 2012 ರ ಇಂಗ್ಲಿಷ್‌ ಕಾವಲಿನಬುರುಜು ಏನು ಹೇಳುತ್ತೆ ನೋಡಿ: “ನಿಜ ಹೇಳಬೇಕಂದ್ರೆ ವಿವಾಹಿತ ಮತ್ತು ಅವಿವಾಹಿತ ಸ್ಥಿತಿ ಇವೆರಡೂ ಯೆಹೋವನಿಂದ ಬಂದ ಉಡುಗೊರೆನೇ. ಅವಿವಾಹಿತರು ಮದುವೆ ಆಗದಿರೋದು ತಲೆತಗ್ಗಿಸೋ ವಿಷ್ಯ ಅಂತನೋ ಅಥ್ವಾ ದುಃಖದ ವಿಷ್ಯ ಅಂತನೋ ಯೆಹೋವ ಯಾವತ್ತಿಗೂ ನೆನಸಲ್ಲ.” ನಾವು ಇದನ್ನ ಚೆನ್ನಾಗಿ ಅರ್ಥಮಾಡ್ಕೊಂಡ್ರೆ ನಮ್ಮ ಸಭೆಯಲ್ಲಿರೋ ಅವಿವಾಹಿತ ಸಹೋದರ ಸಹೋದರಿಯರನ್ನು ಗೌರವಿಸಿ, ಅಮೂಲ್ಯರಾಗಿ ನೋಡ್ತೇವೆ.

ಒಂಟಿ ಸಹೋದರ ಸಹೋದರಿಯರನ್ನು ನಾವು ಗೌರವಿಸೋದಾದ್ರೆ ಏನು ಮಾಡಲ್ಲ? (ಪ್ಯಾರ 10 ನೋಡಿ)

10. ಒಂಟಿ ಸಹೋದರ ಸಹೋದರಿಯರನ್ನು ನಾವು ಗೌರವಿಸೋದಾದ್ರೆ ಏನು ಮಾಡಲ್ಲ?

10 ಒಂಟಿ ಸಹೋದರ ಸಹೋದರಿಯರ ಭಾವನೆಗಳನ್ನ, ಸನ್ನಿವೇಶಗಳನ್ನ ಅರ್ಥಮಾಡ್ಕೊಂಡು ಅವ್ರನ್ನು ಗೌರವಿಸ್ತೇವೆ ಅಂತ ನಾವು ಹೇಗೆ ತೋರಿಸ್ಬಹುದು? ಅವ್ರು ಬೇರೆಬೇರೆ ಕಾರಣದಿಂದ ಮದುವೆಯಾಗಿರಲ್ಲ. ಉದಾಹರಣೆಗೆ, ಕೆಲವು ಕ್ರೈಸ್ತರು ಮದುವೆ ಆಗಬಾರ್ದು ಅನ್ನೋ ನಿರ್ಧಾರ ಮಾಡಿರ್ತಾರೆ. ಇನ್ನು ಕೆಲವು ಕ್ರೈಸ್ತರಿಗೆ ಮದುವೆಯಾಗೋಕೆ ಇಷ್ಟ ಇರುತ್ತೆ, ಆದ್ರೆ ಸೂಕ್ತ ಸಂಗಾತಿ ಸಿಕ್ಕಿರಲ್ಲ. ಇನ್ನು ಕೆಲವ್ರ ಸಂಗಾತಿ ತೀರಿಹೋಗಿರುತ್ತಾರೆ, ಹಾಗಾಗಿ ಅವ್ರು ಒಂಟಿಯಾಗಿರ್ತಾರೆ. ಹೀಗೆ ಸನ್ನಿವೇಶ ಏನೇ ಇರಲಿ, ಅವ್ರ ಹತ್ರ ಹೋಗಿ “ನೀವ್ಯಾಕೆ ಇನ್ನೂ ಮದ್ವೆಯಾಗಿಲ್ಲ?” ಅಂತನೋ, “ನಿಮ್ಗೊಬ್ಬ ಒಬ್ಬ ಒಳ್ಳೇ ಹುಡುಗನ್ನ/ಹುಡುಗಿನ ನೋಡ್ಲಾ?” ಅಂತನೋ ಕೇಳೋದು ಎಷ್ಟು ಸರಿ? ಕೆಲವು ಕ್ರೈಸ್ತರು ಒಳ್ಳೇ ಸಂಗಾತಿ ಸಿಗೋಕೇ ಬೇರೆಯವ್ರ ಸಹಾಯ ಕೇಳ್ತಾರೆ ಅನ್ನೋದು ನಿಜಾನೇ. ಆದ್ರೆ ಸಹಾಯ ಕೇಳದವ್ರ ಹತ್ರ ಹೋಗಿ ‘ನಿಮ್ಗೊಬ್ಬ ಒಳ್ಳೇ ಹುಡುಗನ್ನ/ಹುಡುಗಿನ ಹುಡುಕ್ತೀನಿ’ ಅಂತ ಹೇಳೋದು ಸರಿ ಇರುತ್ತಾ? ನೀವೇ ಯೋಚ್ಸಿ. (1 ಥೆಸ. 4:11; 1 ತಿಮೊ. 5:13) ಇದ್ರ ಬಗ್ಗೆ ನಂಬಿಗಸ್ತಿಕೆಯಿಂದ ಸೇವೆ ಮಾಡ್ತೀರೋ ಒಂಟಿ ಸಹೋದರ ಸಹೋದರಿಯರು ಏನು ಹೇಳ್ತಾರೆ ಅಂತ ನೋಡೋಣ.

11-12. ಅವಿವಾಹಿತ ಸಹೋದರ ಸಹೋದರಿಯರಿಗೆ ನಮ್ಮಿಂದ ಹೇಗೆ ಬೇಜಾರಾಗ್ಬಹುದು?

11 ಒಬ್ಬ ಸಂಚರಣ ಮೇಲ್ವಿಚಾರಕರ ಅನುಭವ ನೋಡಿ. ಅವ್ರಿಗೆ ಮದ್ವೆಯಾಗಿಲ್ಲ, ತಮ್ಮ ನೇಮಕನ ಚೆನ್ನಾಗಿ ಮಾಡಿಕೊಂಡು ಹೋಗ್ತಿದ್ದಾರೆ. ಮದುವೆಯಾಗದೆ ಒಂಟಿಯಾಗಿ ಸೇವೆ ಮಾಡ್ತಿರೋದ್ರಿಂದ ತುಂಬ ಪ್ರಯೋಜನಗಳಾಗಿವೆ ಅಂತ ಅವ್ರು ಹೇಳ್ತಾರೆ. ಆದ್ರೆ ಅನೇಕ ಸಹೋದರ ಸಹೋದರಿಯರು “ನೀವ್ಯಾಕೆ ಇನ್ನೂ ಮದ್ವೆಯಾಗಿಲ್ಲ?” ಅಂತ ಕೇಳ್ದಾಗ ಅವ್ರಿಗೆ ಬೇಜಾರಾಗುತ್ತೆ. ನಿಜವಾದ ಕಾಳಜಿ ಇಟ್ಟುಕೊಂಡೇ ಅವ್ರೆಲ್ಲ ಹಾಗೆ ಕೇಳ್ಬಹುದು. ಆದ್ರೂ ಅಂಥ ಪ್ರಶ್ನೆ ಈ ಸಹೋದರನಿಗೆ ನಿರುತ್ತೇಜನ ತರುತ್ತೆ. ಬೆತೆಲ್‌ನಲ್ಲಿ ಸೇವೆ ಮಾಡ್ತಿರೋ ಅವಿವಾಹಿತ ಸಹೋದರನೊಬ್ಬ ಹೀಗೆ ಹೇಳ್ತಾನೆ: “ಕೆಲವೊಮ್ಮೆ ಸಹೋದರ ಸಹೋದರಿಯರು ಒಂಟಿಯಾಗಿರೋರನ್ನ ನೋಡಿ ‘ಅಯ್ಯೋ ಪಾಪ’ ಅಂತ ಅಂದುಕೊಳ್ತಾರೆ. ಆಗ ನಂಗೆ ಅವಿವಾಹಿತ ಸ್ಥಿತಿ ಒಂದು ಉಡುಗೊರೆ ಅಲ್ಲ, ಒಂದು ಹೊರೆ ಅನಿಸಿಬಿಡುತ್ತೆ.”

12 ಬೆತೆಲ್‌ನಲ್ಲಿ ಸೇವೆ ಮಾಡ್ತಿರೋ ಒಬ್ಬ ಅವಿವಾಹಿತ ಸಹೋದರಿ ಹೀಗೆ ಹೇಳ್ತಾಳೆ: “ಕೆಲವು ಪ್ರಚಾರಕರು, ಅವಿವಾಹಿತರೆಲ್ಲ ಒಳ್ಳೇ ಸಂಗಾತಿಗಾಗಿ ಹುಡುಕ್ತಿರ್ತಾರೆ ಅಂತ ಅಂದುಕೊಳ್ತಾರೆ. ಒಂದು ಕಡೆ ನಾಲ್ಕೈದು ಜನ ಸೇರಿದಾಗ ಅಲ್ಲಿ ಯಾರಾದ್ರೂ ತಮಗೆ ಸೂಕ್ತವಾಗಿರೋವ್ರು ಸಿಕ್ತಾರಾ ಅಂತ ಅವಿವಾಹಿತರು ಯೋಚಿಸ್ತಾರೆ ಅನ್ನೋದು ಕೆಲವ್ರ ಅನಿಸಿಕೆ. ಒಂದ್ಸಲ ನಾನು ಬೆತೆಲ್‌ ಕೆಲ್ಸದ ಮೇಲೆ ಬೇರೆ ಕಡೆ ಹೋಗಿದ್ದೆ. ಆ ದಿನ ಮೀಟಿಂಗ್‌ ಇತ್ತು. ನಾನ್ಯಾರ ಮನೇಲಿ ಉಳಿದುಕೊಂಡಿದ್ನೋ ಆ ಸಹೋದರಿ ನನ್ನತ್ರ, ‘ನಮ್ಮ ಸಭೇಲಿ ನಿನ್ನ ವಯಸ್ಸಿನ ಇಬ್ರು ಸಹೋದರರು ಇದ್ದಾರೆ. ಆದ್ರೆ ನಿಂಗೆ ತೋರಿಸಬೇಕು ಅಂತೇನು ಅವ್ರ ಬಗ್ಗೆ ಹೇಳ್ತಿಲ್ಲ’ ಅಂದ್ರು. ಆದ್ರೆ ನಾವು ರಾಜ್ಯ ಸಭಾಗೃಹದ ಒಳಗೆ ಹೋಗ್ತಿದ್ದಂಗೆ ಸಹೋದರಿ ನನ್ನನ್ನು ಆ ಇಬ್ರು ಸಹೋದರರ ಮುಂದೆ ನಿಲ್ಲಿಸಿಬಿಟ್ರು. ಆಗ ನಂಗೆ ಮತ್ತು ಆ ಸಹೋದರರಿಗೆ ತುಂಬ ಮುಜುಗುರ ಆಯ್ತು.”

13. ಒಬ್ಬ ಅವಿವಾಹಿತ ಸಹೋದರಿಗೆ ಯಾರ ಮಾದರಿಯಿಂದ ತುಂಬ ಪ್ರೋತ್ಸಾಹ ಸಿಕ್ತು?

13 ಬೆತೆಲ್‌ನಲ್ಲಿ ಸೇವೆ ಮಾಡ್ತಿರೋ ಇನ್ನೊಬ್ಬ ಅವಿವಾಹಿತ ಸಹೋದರಿ ಹೀಗೆ ಹೇಳ್ತಾಳೆ: “ಮದ್ವೆಯಾಗದೆ ತುಂಬ ಸಮ್ಯದಿಂದ ಪಯನೀಯರ್‌ಸೇವೆ ಮಾಡ್ತಿರೋ ಕೆಲವ್ರ ಪರಿಚಯ ನಂಗಿದೆ. ಅವ್ರು ಸತ್ಯದಲ್ಲಿ ತುಂಬ ದೃಢವಾಗಿದ್ದಾರೆ, ಸ್ಪಷ್ಟವಾದ ಗುರಿಗಳನ್ನ ಇಟ್ಟುಕೊಂಡಿದ್ದಾರೆ ಮತ್ತು ತುಂಬ ತ್ಯಾಗ ಮಾಡ್ತಾರೆ. ಅವ್ರು ಸೇವೆಯನ್ನ ಆನಂದಿಸ್ತಾರೆ ಮತ್ತು ಬೇರೆಯವ್ರಿಗೆ ಸಹಾಯ ಮಾಡೋಕೆ ಸಿದ್ಧರಾಗಿರ್ತಾರೆ. ಯಾವಾಗ್ಲೂ ಖುಷಿಯಾಗಿ ಇರ್ತಾರೆ. ಅವ್ರು ಅವಿವಾಹಿತರಾಗಿರೋ ಕಾರಣ ಬೇರೆಯವ್ರಿಗಿಂತ ತಾವು ಶ್ರೇಷ್ಠರು ಅಂತ ನೆನಸೋದಿಲ್ಲ ಅಥ್ವಾ ತಮಗೆ ಸಂಗಾತಿ, ಕುಟುಂಬ ಇಲ್ವಲ್ಲಾ ಅಂತ ಕೊರಗೋದೂ ಇಲ್ಲ.” ಸಭೆಯಲ್ಲಿ ಎಲ್ರೂ ಒಬ್ಬರಿಗೊಬ್ಬರು ಗೌರವ ತೋರಿಸಿದ್ರೆ, ಪ್ರತಿಯೊಬ್ರು ಅಮೂಲ್ಯರು ಅಂತ ನೆನ್ಸಿದ್ರೆ ಅವ್ರ ಮಧ್ಯ ಸಂತೋಷ ಇರುತ್ತೆ. ಅಷ್ಟೇ ಅಲ್ಲ,ಯಾರೂ ಯಾರ ಬಗ್ಗೆನೂ ‘ಅಯ್ಯೋ ಪಾಪ’ ಅಂತ ಅಂದುಕೊಳ್ಳಲ್ಲ,ಯಾರ ಬಗ್ಗೆನೂ ಹೊಟ್ಟೆಕಿಚ್ಚು ಪಡಲ್ಲ. ಯಾರನ್ನೂ ಕಡೆಗಣಿಸೋದೂ ಇಲ್ಲ ಅಥ್ವಾ ತಲೆ ಮೇಲೆ ಕೂರಿಸಿಕೊಂಡು ಮೆರೆಸೋದೂ ಇಲ್ಲ. ಸಭೆಯಲ್ಲಿರೋ ಎಲ್ರೂ ಎಲ್ರನ್ನೂ ಪ್ರೀತಿಸ್ತಾರೆ.

14. ಒಂಟಿ ಸಹೋದರ ಸಹೋದರಿಯರನ್ನು ಗೌರವಿಸ್ತೇವೆ ಅಂತ ಹೇಗೆ ತೋರಿಸ್ಬಹುದು?

14 ಅವಿವಾಹಿತ ಸಹೋದರ ಸಹೋದರಿಯಲ್ಲಿರೋ ಒಳ್ಳೇ ಗುಣಗಳನ್ನು ನೋಡಿ ನಾವು ಅವ್ರನ್ನು ಅಮೂಲ್ಯರಾಗಿ ನೆನಸಿದ್ರೆ ಅವ್ರಿಗೆ ತುಂಬ ಖುಷಿಯಾಗುತ್ತೆ. ಅವ್ರು ಮದುವೆಯಾಗದಿರೋ ಕಾರಣಕ್ಕೆ ನಮ್ಗೆ ಅವ್ರ ಬಗ್ಗೆ ‘ಅಯ್ಯೋ ಪಾಪ’ ಅಂತ ಅನಿಸಬಾರ್ದು. ಅವ್ರು ಯೆಹೋವನಿಗೆ ಎಷ್ಟು ನಂಬಿಗಸ್ತರಾಗಿದ್ದಾರೆ ಅನ್ನೋದನ್ನು ನಾವು ಗಮನಿಸ್ಬೇಕು. ಹೀಗೆ ಮಾಡಿದ್ರೆ, ‘ನಿಮ್ಮ ಅವಶ್ಯಕತೆ ನಮಗಿದೆ’ ಅಂತ ಹೇಳಿದಂತೆ ಇರುತ್ತೆ. (1 ಕೊರಿಂ. 12:21) ಅಷ್ಟೇ ಅಲ್ಲ,ನಾವು ಅವ್ರನ್ನು ಗೌರವಿಸ್ತೇವೆ, ಸಭೆಗೆ ಅಮೂಲ್ಯರಾಗಿದ್ದಾರೆ ಅಂತ ನೆನಸ್ತೇವೆ ಅನ್ನೋ ಭಾವನೆ ಅವ್ರಿಗೆ ಬರುತ್ತೆ.

ನಿಮ್ಮ ಭಾಷೆನ ಚೆನ್ನಾಗಿ ಮಾತಾಡಕ್ಕೆ ಬರದವರನ್ನು ಗೌರವಿಸಿ

15. ಹೆಚ್ಚು ಸೇವೆ ಮಾಡೋದಕ್ಕಾಗಿ ಕೆಲವ್ರು ಯಾವ ಹೊಂದಾಣಿಕೆ ಮಾಡಿದ್ದಾರೆ?

15 ಇತ್ತೀಚಿನ ವರ್ಷಗಳಲ್ಲಿ ಅನೇಕ ಪ್ರಚಾರಕರು ಹೆಚ್ಚು ಸೇವೆ ಮಾಡ್ಬೇಕಂತ ಬೇರೆ ಭಾಷೆ ಕಲಿಯೋ ಗುರಿ ಇಟ್ಟಿದ್ದಾರೆ. ಇದಕ್ಕಾಗಿ ಅವ್ರು ತುಂಬ ತ್ಯಾಗಗಳನ್ನ ಮಾಡಿದ್ದಾರೆ. ಈ ಸಹೋದರ ಸಹೋದರಿಯರು ತಮ್ಮ ಮಾತೃ ಭಾಷೆಯ ಸಭೆ ಬಿಟ್ಟು ಹೆಚ್ಚು ಪ್ರಚಾರಕರ ಅಗತ್ಯವಿರೋ ಬೇರೆ ಭಾಷೆಯ ಸಭೆಗೆ ಹೋಗಿ ಸೇವೆ ಮಾಡ್ತಿದ್ದಾರೆ. (ಅ. ಕಾ. 16:9) ಅವರಾಗಿಯೇ ಈ ನಿರ್ಧಾರ ಮಾಡಿದ್ದಾರೆ. ಹೊಸ ಭಾಷೆ ಕಲಿಯಲು ವರ್ಷಗಳೇ ಹಿಡಿದ್ರೂ ಅವ್ರಿಂದ ಸಭೆಗೆ ತುಂಬ ಪ್ರಯೋಜನ ಆಗ್ತಿದೆ ಅನ್ನೋದ್ರಲ್ಲಿ ಸಂಶಯನೇ ಇಲ್ಲ. ಅವ್ರ ಒಳ್ಳೇ ಗುಣಗಳು, ಮಾದರಿ ಮತ್ತು ಅನುಭವ ಸಭೆಯಲ್ಲಿರೋ ಸಹೋದರ ಸಹೋದರಿಯರನ್ನು ಬಲಪಡಿಸಿವೆ. ಇಂಥ ತ್ಯಾಗ ಮಾಡಿರೋ ಸಹೋದರ ಸಹೋದರಿಯರನ್ನು ನಾವು ಮಾನ್ಯ ಮಾಡ್ತೇವೆ.

16. ಯಾವ ಆಧಾರದ ಮೇಲೆ ಒಬ್ಬ ಸಹೋದರನನ್ನು ಹಿರಿಯನಾಗಿ ಅಥ್ವಾ ಸಹಾಯಕ ಸೇವಕನಾಗಿ ಶಿಫಾರಸ್ಸು ಮಾಡಲಾಗುತ್ತೆ?

16 ಒಬ್ಬ ಸಹೋದರನಿಗೆ ಸಭೆಯ ಭಾಷೆ ಚೆನ್ನಾಗಿ ಮಾತಾಡೋಕೆ ಬರದಿದ್ರೂ, ಅವನಲ್ಲಿ ಹಿರಿಯನಾಗುವ ಅಥ್ವಾ ಸಹಾಯಕ ಸೇವಕನಾಗುವ ಅರ್ಹತೆಗಳಿದ್ರೆ ಅವನನ್ನು ಹಿರಿಯ ಮಂಡಲಿ ಶಿಫಾರಸ್ಸು ಮಾಡಬೇಕು. ಹಿರಿಯ ಮಂಡಲಿ, ಅವನು ಹಿರಿಯನಾಗಲು ಅಥ್ವಾ ಸಹಾಯಕ ಸೇವಕನಾಗಲು ಬೈಬಲಿನಲ್ಲಿ ತಿಳಿಸಿರೋ ಅರ್ಹತೆಗಳು ಅವನಿಗೆ ಇದೆಯಾ ಅನ್ನೋದನ್ನು ನೋಡಬೇಕೇ ಹೊರತು ಅವನಿಗೆ ಸ್ಥಳೀಯ ಸಭೆಯ ಭಾಷೆ ಚೆನ್ನಾಗಿ ಬರುತ್ತಾ ಇಲ್ವಾ ಅನ್ನೋದನ್ನು ನೋಡಬಾರ್ದು.—1 ತಿಮೊ. 3:1-10, 12, 13; ತೀತ 1:5-9.

17. ಒಂದು ಕುಟುಂಬ ಬೇರೆ ದೇಶಕ್ಕೆ ಹೋದಾಗ ಯಾವ ಪ್ರಶ್ನೆಗಳು ಎದುರಾಗುತ್ತೆ?

17 ಕೆಲವು ಕ್ರೈಸ್ತ ಕುಟುಂಬಗಳು ತಮ್ಮ ದೇಶದಲ್ಲಿರೋ ಕಷ್ಟದ ಪರಿಸ್ಥಿತಿಯಿಂದಾಗಿ ಅಥ್ವಾ ಕೆಲಸ ಹುಡುಕಿಕೊಂಡು ಬೇರೆ ದೇಶಗಳಿಗೆ ಹೋಗಿವೆ. ಇಂಥ ಸನ್ನಿವೇಶಗಳಲ್ಲಿ ಅವ್ರ ಮಕ್ಕಳು ಆ ದೇಶದ ಮುಖ್ಯ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡ್ಬೇಕಾಗುತ್ತೆ. ಹೆತ್ತವ್ರು ಸಹ ಉದ್ಯೋಗಕ್ಕಾಗಿ ಆ ದೇಶದ ಮುಖ್ಯ ಭಾಷೆಯನ್ನು ಕಲಿಬೇಕಾಗುತ್ತೆ. ಒಂದುವೇಳೆ ಆ ದೇಶದಲ್ಲಿ ಅವ್ರ ಮಾತೃ ಭಾಷೆಯ ಸಭೆ ಅಥ್ವಾ ಗುಂಪಿದ್ರೆ ಅವ್ರು ಏನು ಮಾಡ್ಬೇಕು? ಯಾವ ಭಾಷೆಯ ಸಭೆಗೆ ಆ ಕುಟುಂಬ ಹೋಗ್ಬೇಕು? ಆ ದೇಶದ ಮುಖ್ಯ ಭಾಷೆಯ ಸಭೆಗೆ ಹೋಗ್ಬೇಕಾ ಅಥ್ವಾ ಮಾತೃ ಭಾಷೆಯ ಸಭೆಗೆ ಹೋಗ್ಬೇಕಾ?

18. ಗಲಾತ್ಯ 6:5 ರ ಪ್ರಕಾರ ಕುಟುಂಬದ ಯಜಮಾನ ಮಾಡಿರೋ ನಿರ್ಧಾರದಲ್ಲಿ ನಾವು ಯಾಕೆ ತಲೆ ಹಾಕಬಾರ್ದು?

18 ಯಾವ ಭಾಷೆಯ ಸಭೆಗೆ ಹೋಗ್ಬೇಕು ಅನ್ನೋದನ್ನ ಕುಟುಂಬದ ಯಜಮಾನ ನಿರ್ಧರಿಸ್ಬೇಕು. ತನ್ನ ಕುಟುಂಬಕ್ಕೆ ಯಾವುದು ಒಳ್ಳೇದಿರುತ್ತೆ ಅನ್ನೋದನ್ನು ಯೋಚಿಸಿ ನಿರ್ಧರಿಸ್ಬೇಕು. (ಗಲಾತ್ಯ 6:5 ಓದಿ.) ಕುಟುಂಬದ ಯಜಮಾನ ಮಾಡಿರೋ ನಿರ್ಧಾರ ಅವ್ರ ವೈಯಕ್ತಿಕ ವಿಚಾರ ಆಗಿರೋದ್ರಿಂದ ಸಭೆಯವ್ರು ಅದರಲ್ಲಿ ತಲೆ ಹಾಕಬಾರ್ದು. ಬದ್ಲಿಗೆ ಅವ್ರು ಸಭೆಗೆ ಬಂದಾಗ ಪ್ರೀತಿ, ಗೌರವದಿಂದ ಸ್ವಾಗತಿಸ್ಬೇಕು.—ರೋಮ. 15:7.

19. ಕುಟುಂಬದ ಯಜಮಾನ ಪ್ರಾರ್ಥಿಸಿ ಯಾವ ನಿರ್ಧಾರ ಮಾಡ್ಬೇಕು?

19 ಹೆತ್ತವ್ರು ತಮ್ಮ ಮಾತೃಭಾಷೆಯ ಸಭೆಗೆ ಹೋಗ್ತಿರಬಹುದು, ಆದ್ರೆ ಆ ಭಾಷೆ ಅವ್ರ ಮಕ್ಕಳಿಗೆ ಚೆನ್ನಾಗಿ ಬರದಿರಬಹುದು. ಯಾಕಂದ್ರೆ ಅವ್ರು ಹೊಸ ದೇಶದ ಭಾಷೆಯ ಶಾಲೆಯಲ್ಲಿ ಓದೋದ್ರಿಂದ ಆ ಭಾಷೆ ಚೆನ್ನಾಗಿ ಗೊತ್ತಿರುತ್ತೆ. ಆದ್ರೆ ಮಾತೃ ಭಾಷೆ ಅಷ್ಟು ಚೆನ್ನಾಗಿ ಗೊತ್ತಿರಲಿಕ್ಕಿಲ್ಲ. ಹಾಗಾಗಿ ಹೆತ್ತವ್ರು ಮಕ್ಕಳನ್ನು ತಮ್ಮ ಮಾತೃ ಭಾಷೆಯ ಸಭೆಗೆ ಕರಕೊಂಡು ಹೋದ್ರೆ ಕೂಟಗಳಲ್ಲಿ ಕಲಿಸಿದ್ದು ಮಕ್ಕಳಿಗೆ ಚೆನ್ನಾಗಿ ಅರ್ಥ ಆಗದಿರಬಹುದು ಮತ್ತು ಯೆಹೋವನ ಜೊತೆ ಹೆಚ್ಚು ಆಪ್ತತೆ ಬೆಳೆಯದಿರಬಹುದು. ಹೀಗಿರುವಾಗ ಕುಟುಂಬದ ಯಜಮಾನ, ಯಾವ ಭಾಷೆಯ ಸಭೆಗೆ ಹೋದ್ರೆ ಮಕ್ಕಳು ಯೆಹೋವನಿಗೆ ಆಪ್ತರಾಗ್ತಾರೆ ಅನ್ನೋದನ್ನ ಪ್ರಾರ್ಥಿಸಿ ನಿರ್ಧರಿಸ್ಬೇಕು. ಒಂದೋ ಹೆತ್ತವ್ರು ತಮ್ಮ ಮಾತೃ ಭಾಷೆಯನ್ನು ಮಕ್ಕಳಿಗೆ ಚೆನ್ನಾಗಿ ಕಲಿಸಬೇಕು, ಇಲ್ಲ ಮಕ್ಕಳಿಗೆ ಚೆನ್ನಾಗಿ ಅರ್ಥ ಆಗೋ ಭಾಷೆಯ ಸಭೆಗೆ ಕರಕೊಂಡು ಹೋಗ್ಬೇಕು. ಕುಟುಂಬದ ಯಜಮಾನ ಮಾಡಿರೋ ನಿರ್ಧಾರದಿಂದ ಕುಟುಂಬದ ಎಲ್ರೂ ಪ್ರಯೋಜನ ಪಡೆಯೋ ತರ ಇರಬೇಕು. ಆಗ ಸಭೆಯಲ್ಲಿವ್ರು ಅವ್ರನ್ನು ಗೌರವಿಸಿ, ಅಮೂಲ್ಯರಾಗಿ ನೋಡ್ತಾರೆ.

ಹೊಸ ಭಾಷೆ ಕಲಿಯುತ್ತಿರೋರನ್ನು ಮಾನ್ಯ ಮಾಡ್ತೀವಿ ಅಂತ ಹೇಗೆ ತೋರಿಸ್ಬಹುದು? (ಪ್ಯಾರ 20 ನೋಡಿ)

20. ಹೊಸ ಭಾಷೆ ಕಲಿಯುತ್ತಿರೋ ಸಹೋದರ ಸಹೋದರಿಯರನ್ನು ನಾವು ಹೇಗೆ ಗೌರವಿಸ್ಬಹುದು?

20 ನಾವು ಈಗಾಗ್ಲೇ ಚರ್ಚಿಸಿದಂತೆ ಅನೇಕ ಸಭೆಗಳಲ್ಲಿ ಹೊಸ ಭಾಷೆ ಕಲಿಯೋಕೆ ತುಂಬ ಶ್ರಮ ಹಾಕ್ತಿರೋ ಸಹೋದರ ಸಹೋದರಿಯರು ಇದ್ದಾರೆ. ಕೆಲವೊಮ್ಮೆ ಅವ್ರಿಗೆ ತಮ್ಮ ಭಾವನೆಗಳನ್ನು ಹೇಳಿಕೊಳ್ಳೋಕೂ ಕಷ್ಟ ಆಗುತ್ತೆ. ಅವ್ರಿಗೆ ಹೊಸ ಭಾಷೆ ಚೆನ್ನಾಗಿ ಬರದಿದ್ರೂ ಯೆಹೋವನ ಮೇಲೆ ಪ್ರೀತಿ ಇರುತ್ತೆ, ಆತನ ಸೇವೆಯನ್ನು ಹೆಚ್ಚು ಮಾಡ್ಬೇಕು ಅನ್ನೋ ಬಯಕೆ ಇರುತ್ತೆ. ನಾವು ಅವ್ರಲ್ಲಿರೋ ಒಳ್ಳೇ ಗುಣಗಳನ್ನು ನೋಡಿದ್ರೆ ಅವ್ರನ್ನು ತುಂಬ ಗೌರವಿಸ್ತೇವೆ ಮತ್ತು ಮಾನ್ಯ ಮಾಡ್ತೇವೆ. ಜೊತೆಗೆ ನಮ್ಮ ಭಾಷೆಯನ್ನು ಚೆನ್ನಾಗಿ ಮಾತಾಡೋಕೆ ಅವ್ರಿಗೆ ಬರದೆ ಇದ್ರೂ “ನೀವು ನಮ್ಗೆ ಅವಶ್ಯವಿಲ್ಲ” ಅಂತ ಯಾವತ್ತೂ ಹೇಳಲ್ಲ.

ನಾವೆಲ್ರೂ ಯೆಹೋವನಿಗೆ ಅಮೂಲ್ಯರು

21-22. ನಮ್ಗೆ ಯಾವ ಅಮೂಲ್ಯ ಸುಯೋಗ ಇದೆ?

21 ಯೆಹೋವನು ಸಭೆಯಲ್ಲಿ ನಮಗೆಲ್ರಿಗೂ ಒಂದೊಂದು ಪಾತ್ರ ಕೊಟ್ಟು ನಮ್ಮನ್ನು ಅಮೂಲ್ಯರಾಗಿ ನೋಡ್ತಿದ್ದಾನೆ. ನಾವು ಸ್ತ್ರೀ ಆಗಿರಲಿ ಪುರುಷರಾಗಿರಲಿ, ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ, ನಮ್ಗೆ ವಯಸ್ಸಾಗಿರಲಿ ನಾವು ಯುವಕರಾಗಿರಲಿ ಒಂದು ಭಾಷೆ ಚೆನ್ನಾಗಿ ಮಾತಾಡೋಕೆ ಬರಲಿ ಬರದಿರಲಿ ನಾವೆಲ್ರೂ ಯೆಹೋವನಿಗೆ ಮತ್ತು ಸಹೋದರ ಸಹೋದರಿಯರಿಗೆ ಅಮೂಲ್ಯರು.—ರೋಮ. 12:4, 5; ಕೊಲೊ. 3:10, 11.

22 ಮಾನವ ದೇಹದ ಬಗ್ಗೆ ಪೌಲ ತಿಳಿಸಿದ ಉದಾಹರಣೆಯಿಂದ ನಾವು ಅನೇಕ ಅಮೂಲ್ಯ ಪಾಠಗಳನ್ನು ಕಲಿತ್ವಿ. ಅದನ್ನು ನಮ್ಮ ಜೀವನದಲ್ಲಿ ಪಾಲಿಸ್ತಾ ಮುಂದುವರಿಯೋಣ. ಹೀಗೆ ಮಾಡೋದಾದ್ರೆ ನಮ್ಮ ಸಹೋದರ ಸಹೋದರಿಯರನ್ನು ಪ್ರೋತ್ಸಾಹಿಸೋಕೆ ನಮ್ಮಿಂದಾದ ಎಲ್ಲವನ್ನೂ ಮಾಡ್ತೇವೆ. ಜೊತೆಗೆ ಅವ್ರಿಗೆ ಪ್ರೀತಿ ಗೌರವ ತೋರಿಸ್ತೇವೆ.

ಗೀತೆ 121 ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ

^ ಪ್ಯಾರ. 5 ಯೆಹೋವನ ಸಭೆಯಲ್ಲಿ ಬೇರೆಬೇರೆ ಹಿನ್ನೆಲೆಯಿಂದ ಬಂದಿರೋ ಜನ್ರಿದ್ದಾರೆ. ಅವ್ರು ಬೇರೆಬೇರೆ ಪಾತ್ರಗಳನ್ನು ನಿರ್ವಹಿಸುತ್ತಾರೆ. ನಮ್ಮ ಸಭೆಯಲ್ಲಿರೋ ಪ್ರತಿಯೊಬ್ಬರನ್ನು ಗೌರವಿಸುವುದು ಯಾಕೆ ಪ್ರಾಮುಖ್ಯ ಅನ್ನೋದನ್ನು ಈ ಲೇಖನದಲ್ಲಿ ನೋಡ್ತೇವೆ.

^ ಪ್ಯಾರ. 8 ತಿಮೊಥಿ ಅವಿವಾಹಿತನಾಗಿಯೇ ಉಳಿದ ಅನ್ನೋದಕ್ಕೆ ಯಾವುದೇ ನಿಖರ ಮಾಹಿತಿ ಇಲ್ಲ.