ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 39

ಸಹೋದರಿಯರಿಗೆ ಬೆಂಬಲ ಕೊಡಿ

ಸಹೋದರಿಯರಿಗೆ ಬೆಂಬಲ ಕೊಡಿ

“ಸುವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀ ಸಮೂಹವು ಎಷ್ಟೋ ದೊಡ್ಡದು.”—ಕೀರ್ತ. 68:11

ಗೀತೆ 86 ನಂಬಿಗಸ್ತೆಯರು, ಕ್ರೈಸ್ತ ಸೋದರಿಯರು

ಕಿರುನೋಟ *

ನಮ್ಮ ಹುರುಪಿನ ಸಹೋದರಿಯರು ಕೂಟಗಳಲ್ಲಿ ಭಾಗವಹಿಸ್ತಾ, ಸುವಾರ್ತೆ ಸಾರುತ್ತಾ, ರಾಜ್ಯ ಸಭಾಗೃಹಗಳ ದುರಸ್ತಿ ಕೆಲ್ಸದಲ್ಲಿ ಸಹಾಯಮಾಡ್ತಾ, ಜೊತೆ ವಿಶ್ವಾಸಿಗಳ ಕಾಳಜಿವಹಿಸ್ತಾ ಬಿಝಿಯಾಗಿದ್ದಾರೆ (ಪ್ಯಾರ 1 ನೋಡಿ)

1. (ಎ) ಸಹೋದರಿಯರು ಸಂಘಟನೆಗೆ ಹೇಗೆಲ್ಲಾ ಬೆಂಬಲ ಕೊಡ್ತಿದ್ದಾರೆ? (ಬಿ) ಆದ್ರೆ ಅವ್ರಲ್ಲಿ ಅನೇಕರಿಗೆ ಯಾವೆಲ್ಲಾ ಸಮಸ್ಯೆಗಳಿವೆ? (ಮುಖಪುಟ ಚಿತ್ರ ನೋಡಿ.)

ನಿಷ್ಠೆಯಿಂದ ಯೆಹೋವನ ಸೇವೆ ಮಾಡೋ ಸಹೋದರಿಯರು ಸಭೆಯಲ್ಲಿ ಇರೋದನ್ನ ನೋಡ್ವಾಗ ನಮ್ಗೆ ತುಂಬ ಸಂತೋಷ ಆಗುತ್ತೆ. ಅವ್ರು ಕೂಟಗಳಲ್ಲಿ ಭಾಗವಹಿಸ್ತಾರೆ, ಸೇವೆ ಮಾಡ್ತಾರೆ, ಕೆಲವ್ರು ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡ್ತಾರೆ ಮತ್ತು ಸಹೋದರ ಸಹೋದರಿಯರ ಬಗ್ಗೆ ಕಾಳಜಿ ತೋರಿಸ್ತಾರೆ. ಆದ್ರೆ ಅವ್ರಿಗೆ ಅನೇಕ ಸಮಸ್ಯೆಗಳು ಇರುತ್ತೆ. ಕೆಲವ್ರು ವೃದ್ಧ ಹೆತ್ತವರನ್ನ ನೋಡ್ಕೊಬೇಕಿರುತ್ತೆ. ಇನ್ನು ಕೆಲವ್ರು ಕುಟುಂಬದಿಂದ ವಿರೋಧವನ್ನ ಎದುರಿಸ್ತಾ ಇರ್ತಾರೆ. ಇನ್ನು ಕೆಲವ್ರು ಒಂಟಿ ಹೆತ್ತವರಾಗಿರ್ತಾರೆ, ಅವ್ರು ತಮ್ಮ ಮಕ್ಕಳ ಅಗತ್ಯಗಳನ್ನ ಪೂರೈಸ್ಲಿಕ್ಕಾಗಿ ತುಂಬಾ ಕಷ್ಟಪಟ್ಟು ಕೆಲ್ಸ ಮಾಡಬೇಕಿರುತ್ತೆ.

2. ನಾವು ಸಹೋದರಿಯರಿಗೆ ಯಾಕೆ ಬೆಂಬಲ ಕೊಡ್ಬೇಕು?

2 ನಾವು ಸಹೋದರಿಯರಿಗೆ ಯಾಕೆ ಬೆಂಬಲ ಕೊಡ್ಬೇಕು? ಯಾಕಂದ್ರೆ ಈ ಲೋಕದ ಜನ ಹೆಚ್ಚಾಗಿ ಸ್ತ್ರೀಯರಿಗೆ ಗೌರವ ಕೊಡ್ತಿಲ್ಲ. ಅಷ್ಟೇ ಅಲ್ಲ ನಾವು ಸ್ತ್ರೀಯರಿಗೆ ಬೆಂಬಲ ಕೊಡ್ಬೇಕಂತ ಬೈಬಲ್‌ ಉತ್ತೇಜಿಸುತ್ತೆ. ಉದಾಹರಣೆಗೆ, ಸಹೋದರಿ ಫೊಯಿಬೆಯನ್ನ ಸ್ವಾಗತಿಸುವಂತೆ ಮತ್ತು ಆಕೆಗೆ ‘ಅಗತ್ಯ ಇರೋ ಸಹಾಯವನ್ನು ಮಾಡುವಂತೆ’ ಅಪೊಸ್ತಲ ಪೌಲನು ರೋಮ್‌ ಸಭೆಯವ್ರಿಗೆ ಹೇಳಿದನು. (ರೋಮ. 16:1, 2) ಪೌಲ ಫರಿಸಾಯನಾಗಿದ್ದಾಗ ಆಗಿನ ಜನರ ತರಾನೇ ಅವನು ಸಹ ಸ್ತ್ರೀಯರನ್ನ ಕೀಳಾಗಿ ನೋಡಿರಬಹುದು. ಆದ್ರೆ ಕ್ರೈಸ್ತನಾದ ಮೇಲೆ ಅವ್ನು ಯೇಸುವನ್ನ ಅನುಕರಿಸ್ತಾ ಸ್ತ್ರೀಯರಿಗೆ ಗೌರವ ಮತ್ತು ಕರುಣೆ ತೋರಿಸಿದ್ನು.—1 ಕೊರಿಂ. 11:1.

3. (ಎ) ಯೇಸು ಸ್ತ್ರೀಯರ ಜೊತೆ ಹೇಗೆ ನಡ್ಕೊಂಡನು? (ಬಿ) ದೇವ್ರ ಇಷ್ಟದ ಪ್ರಕಾರ ನಡೆಯೋ ಸ್ತ್ರೀಯರನ್ನ ಯೇಸು ಹೇಗೆ ನೋಡಿದ್ನು?

3 ಯೇಸು ಎಲ್ಲಾ ಸ್ತ್ರೀಯರನ್ನ ಗೌರವಸ್ತಿದ್ದನು. (ಯೋಹಾ. 4:27) ಆಗಿನ ಕಾಲದ ಧಾರ್ಮಿಕ ಮುಖಂಡರು ಸ್ತ್ರೀಯರನ್ನ ಕೀಳಾಗಿ ನೋಡ್ತಿದ್ರು ಆದ್ರೆ ಯೇಸು ಆ ರೀತಿ ನೋಡ್ಲಿಲ್ಲ. ಬೈಬಲ್‌ ಬಗ್ಗೆ ಮಾಡಲಾದ ಒಂದು ಅಧ್ಯಯನ ಹೇಳೋ ಪ್ರಕಾರ, “ಯೇಸು ಯಾವತ್ತೂ ಸ್ತ್ರೀಯರಿಗೆ ಅವಮಾನ ಆಗೋ ತರ ಮಾತಾಡ್ಲಿಲ್ಲ.” ದೇವರ ಇಷ್ಟದ ಪ್ರಕಾರ ನಡೆಯೋ ಸ್ತ್ರೀಯರಂದ್ರೆ ಯೇಸುಗೆ ತುಂಬ ಗೌರವ ಇತ್ತು. ಅವ್ರನ್ನ ಆತನು ತನ್ನ ಅಕ್ಕ ತಂಗಿಯರ ತರ ನೋಡ್ತಿದ್ನು, ಯೇಸು ಪುರುಷರನ್ನ ಮತ್ತು ಸ್ತ್ರೀಯರನ್ನ ಸಮಾನವಾಗಿ ನೋಡಿದ್ನು. ಅವ್ರೆಲ್ಲರನ್ನತನ್ನ ಕುಟುಂಬದ ಭಾಗ ಅಂತ ಎಣಿಸಿದ್ನು.—ಮತ್ತಾ. 12:50.

4. ನಾವು ಈ ಲೇಖನದಲ್ಲಿ ಏನನ್ನ ಚರ್ಚಿಸ್ತೇವೆ?

4 ದೇವ್ರ ಸೇವೆ ಮಾಡ್ತಿದ್ದ ಸ್ತ್ರೀಯರಿಗೆ ಸಹಾಯ ಮಾಡೋಕೆ ಯೇಸು ಯಾವಾಗ್ಲೂ ಸಿದ್ಧನಿದ್ನು. ಆತನು ಅವ್ರ ಜೊತೆ ಸಮ್ಯ ಕಳೆದ್ನು, ಅವ್ರನ್ನ ಪ್ರಶಂಸಿದ್ನು ಮತ್ತು ಅವ್ರ ಪರವಾಗಿ ಮಾತಾಡಿದ್ನು. ಯೇಸುವನ್ನ ನಾವು ಹೇಗೆ ಅನುಕರಿಸಬಹುದು ಅನ್ನೋದನ್ನ ಈಗ ಚರ್ಚಿಸೋಣ.

ಸಹೋದರಿಯರಿಗೆ ಸಮ್ಯ ಕೊಡಿ

5. ಕೆಲ್ವು ಸಹೋದರಿಯರಿಗೆ ಯಾಕೆ ಹೆಚ್ಚು ಕ್ರೈಸ್ತ ಸಹವಾಸ ಸಿಗದೆ ಹೋಗಬಹುದು?

5 ಎಲ್ಲಾ ಸಹೋದರ ಸಹೋದರಿಯರಿಗೂ ಒಳ್ಳೇ ಸಹವಾಸದ ಅಗತ್ಯವಿದೆ. ಆದ್ರೆ ಕೆಲವೊಮ್ಮೆ ಸಹೋದರಿಯರಿಗೆ ಇಂತಹ ಸಹವಾಸ ಸಿಗದೆ ಹೋಗಬಹುದು. ಯಾಕೆ? ಇದನ್ನ ತಿಳಿಯೋಕೆ ಈ ಕೆಳಗಿನ ಸಹೋದರಿಯರು ಏನು ಹೇಳ್ತಾರೆ ಅಂತ ಗಮನಿಸಿ. ಜೋರ್ಡನ್‌ * ಎಂಬ ಸಹೋದರಿ ಹೀಗೆ ಹೇಳ್ತಾಳೆ: “ನನ್ಗೆ ಮದುವೆ ಆಗ್ದೇ ಇರೋದ್ರಿಂದ ‘ಸಭೆಯಲ್ಲಿ ಯಾವ್ದೇ ಸ್ಥಾನ ಇಲ್ಲ, ನಾನು ನಿಜವಾಗಿಯೂ ಸಭೆಯ ಭಾಗ ಅಲ್ವೇನೊ’ ಅಂತ ನನ್ಗೆ ಅನ್ಸುತ್ತೆ.” ಸೇವೇನ ಹೆಚ್ಚು ಮಾಡ್ಲಿಕ್ಕೋಸ್ಕರ ಬೇರೆ ಸ್ಥಳಕ್ಕೆ ಹೋದ ಕ್ರಿಸ್ಟಿ ಅನ್ನೋ ಪಯನೀಯರ್‌ ಸಹೋದರಿ ಹೀಗೆ ಹೇಳ್ತಾಳೆ: “ನೀವು ಒಂದು ಹೊಸ ಸಭೆಗೆ ಹೋದಾಗ ನಿಮ್ಗೆ ಒಂಟಿ ಭಾವನೆ ಕಾಡಬಹುದು.” ಕುಟುಂಬದಲ್ಲಿ ಒಬ್ರೇ ಸತ್ಯದಲ್ಲಿರೋದಾದ್ರೆ ತಮ್ಮ ಕುಟುಂಬದಿಂದ ತಾವು ಬೇರೆ ಆಗಿದ್ದೇವೆ ಅನ್ನೋ ಭಾವನೆ ಬರಬಹುದು, ಮತ್ತು ಸಭೆಯವ್ರಿಂದ ಸಹ ತಾವು ದೂರ ಇದ್ದೇವೆ ಅಂತ ಅವ್ರಿಗೆ ಅನಿಸಬಹುದು. ಮನೆಯಿಂದ ಹೊರಹೋಗೋಕೆ ಆಗ್ದೇ ಇರೋವ್ರಿಗೆ ಮತ್ತು ಹುಷಾರಿಲ್ಲದ ಕುಟುಂಬ ಸದಸ್ಯರನ್ನ ನೋಡಿಕೊಳ್ತಾ ಇರುವವ್ರಿಗೆ ಒಂಟಿ ಭಾವನೆ ಕಾಡ್ಬಹುದು. ಅನಿತಾ ಅನ್ನೋವ್ರು ಹೀಗೆ ಹೇಳ್ತಾರೆ: “ನಾನು ಅಮ್ಮನನ್ನ ನೋಡಿಕೊಳ್ಬೇಕಾಗಿದ್ರಿಂದ ಯಾರಾದ್ರೂ ಅವ್ರ ಮನೆಗೆ ಕರೆದ್ರೂ ನನ್ಗೆ ಹೋಗೋಕೆ ಆಗ್ತಾ ಇರಲಿಲ್ಲ.’’

ಯೇಸುವಿನಂತೆ ನಾವು ನಂಬಿಗಸ್ತ ಸಹೋದರಿಯರಿಗೆ ಪ್ರೀತಿ, ಕಾಳಜಿ ತೋರಿಸಬಹುದು (ಪ್ಯಾರ 6-9 ನೋಡಿ) *

6. ಲೂಕ 10:38-42 ರಲ್ಲಿ ತಿಳಿಸಿರೋ ಪ್ರಕಾರ ಯೇಸು ಮಾರ್ಥ ಮತ್ತು ಮರಿಯಳಿಗೆ ಹೇಗೆ ಸಹಾಯ ಮಾಡಿದನು?

6 ದೇವ್ರ ಸೇವೆ ಮಾಡ್ತಿದ್ದ ಸಹೋದರಿಯರ ಜೊತೆ ಯೇಸು ಸಮ್ಯ ಕಳೆದ್ನು, ಆತನು ಅವ್ರಿಗೆ ಆಪ್ತ ಸ್ನೇಹಿತನಾಗಿದ್ದನು. ಮರಿಯ ಮತ್ತು ಮಾರ್ಥಳ ಜೊತೆ ಯೇಸುವಿಗಿದ್ದ ಸ್ನೇಹದ ಬಗ್ಗೆ ಯೋಚಿಸಿ. ಆ ಇಬ್ರು ಸ್ತ್ರೀಯರು ಬಹುಶಃ ಮದುವೆ ಆಗಿರಲಿಲ್ಲ. (ಲೂಕ 10:38-42 ಓದಿ.) ಯೇಸು ಅವ್ರ ಜೊತೆ ಚೆನ್ನಾಗಿ ನಡ್ಕೊಳ್ತಿದ್ದ, ಮಾತಾಡ್ತಿದ್ದ. ಅದಕ್ಕೇ ಅವ್ರಿಗೆ ಯೇಸು ಜೊತೆ ಇರೋಕೆ ಮಾತಾಡೋಕೆ ಮುಜುಗರ ಅನಿಸ್ಲಿಲ್ಲ. ಬೇರೆ ಶಿಷ್ಯರ ತರಾನೇ ಮರಿಯ ಕೂಡ ಯೇಸುವಿನ ಪಾದದ ಹತ್ರ ಕೂತುಕೊಳ್ಳೋಕೆ ಹಿಂಜರಿಲಿಲ್ಲ. * ಮರಿಯ ಸಹಾಯ ಮಾಡ್ದೇ ಇದ್ದಾಗ ಮಾರ್ಥ ತನಗನ್ಸಿದ್ದನ್ನ ಯೇಸು ಹತ್ರ ಹೇಳ್ಕೊಳ್ಳೋಕೆ ಹಿಂಜರಿಲಿಲ್ಲ. ಆ ಸಂದರ್ಭದಲ್ಲಿ ಯೇಸು ಇಬ್ರಿಗೂ ಒಂದು ಮುಖ್ಯ ಪಾಠ ಕಲಿಸಿದ್ನು. ಅವ್ರನ್ನ ಅನೇಕ ಸಲ ಭೇಟಿ ಮಾಡೋ ಮೂಲಕ ಆ ಇಬ್ರು ಸ್ತ್ರೀಯರ ಮೇಲೆ ಮತ್ತು ಅವ್ರ ಸಹೋದರ ಲಾಜರನ ಮೇಲೆ ಕಾಳಜಿ ಇದೆ ಅಂತ ಯೇಸು ತೋರಿಸಿಕೊಟ್ನು. (ಯೋಹಾ. 12:1-3) ಅದಕ್ಕೇ ಮಾರ್ಥ ಮತ್ತು ಮರಿಯ, ಲಾಜರನಿಗೆ ಕಾಯಿಲೆ ಬಂದಾಗ ಯೇಸುವಿನ ಸಹಾಯ ಕೇಳಿದ್ರು.—ಯೋಹಾ. 11:3, 5.

7. ನಾವು ಹೇಗೆ ಸಹೋದರಿಯರಿಗೆ ಕಾಳಜಿ ತೋರಿಸಬಹುದು?

7 ಕೆಲ್ವು ಸಹೋದರಿಯರಿಗೆ ಬೇರೆ ಸಹೋದರ ಸಹೋದರಿಯರ ಜೊತೆ ಬೆರೆಯೋಕೆ ಅವಕಾಶ ಸಿಗೋದು ಮುಖ್ಯವಾಗಿ ಕೂಟಕ್ಕೆ ಹೋದಾಗ್ಲೇ. ಹಾಗಾಗಿ ಅವ್ರು ಕೂಟಗಳಿಗೆ ಬಂದಾಗ ನಾವು ಸ್ವಾಗತಿಸಬೇಕು, ಅವ್ರ ಜೊತೆ ಮಾತಾಡ್ಬೇಕು ಮತ್ತು ಅವ್ರ ಬಗ್ಗೆ ನಮ್ಗೆ ಕಾಳಜಿ ಇದೆ ಅಂತ ತೋರಿಸಿಕೊಡ್ಬೇಕು. ಈ ಹಿಂದೆ ತಿಳಿಸಲಾದ ಸಹೋದರಿ ಜೋರ್ಡನ್‌ ಹೀಗೆ ಹೇಳ್ತಾಳೆ: “ಕೆಲವೊಮ್ಮೆ ಕೆಲವು ಸಹೋದರ ಸಹೋದರಿಯರು ನನ್ನ ಹತ್ರ ಬಂದು ಉತ್ರ ಚೆನ್ನಾಗಿತ್ತು ಅಂತ ಹೇಳ್ತಾರೆ, ಅವ್ರ ಜೊತೆ ಸೇವೆ ಮಾಡೋಕೆ ನನ್ನನ್ನ ಕರಿತಾರೆ ಮತ್ತು ಇನ್ನೂ ಬೇರೆ ರೀತಿಯಲ್ಲಿ ನನ್‌ ಬಗ್ಗೆ ಕಾಳಜಿ ತೋರಿಸ್ತಾರೆ. ಆಗ ನಂಗೆ ತುಂಬ ಖುಷಿ ಆಗುತ್ತೆ.’’ ಸಹೋದರಿಯರು ನಮ್ಗೆ ತುಂಬ ಪ್ರಾಮುಖ್ಯ ಅನ್ನೋದನ್ನ ನಾವು ತೋರಿಸಿಕೊಡ್ಬೇಕು. ಕಿಯಾ ಅನ್ನೋ ಸಹೋದರಿ ಹೀಗೆ ಹೇಳ್ತಾಳೆ: “ನಾನು ಕೂಟಕ್ಕೆ ಹೋಗದೆ ಇದ್ದಾಗ ಸಭೆಯಿಂದ ಯಾರಾದ್ರೊಬ್ರು ಮೆಸೇಜ್‌ ಮಾಡಿ ನಾನು ಹೇಗಿದ್ದೇನೆ ಅಂತ ವಿಚಾರಿಸ್ತಾರೆ. ಸಹೋದರ ಸಹೋದರಿಗೆ ನನ್ನ ಬಗ್ಗೆ ತುಂಬ ಕಾಳಜಿ ಇದೆ.”

8. ನಾವು ಯೇಸುವನ್ನ ಇನ್ಯಾವ ರೀತಿಯಲ್ಲಿ ಅನುಕರಿಸಬಹುದು?

8 ಯೇಸು ತರ ನಾವು ಸಹ ಸಹೋದರಿಯರ ಜೊತೆ ಸಮ್ಯ ಕಳೀಬೇಕು. ಅವ್ರನ್ನ ಒಂದು ಊಟಕ್ಕೋ ಆಟಕ್ಕೋ ಕರಿಬಹುದು. ಹಾಗೆ ಕರೆದಾಗ ಅವ್ರಿಗೆ ಉತ್ತೇಜನ ಸಿಗೋ ತರ ಮಾತಾಡ್ಬೇಕು. (ರೋಮ. 1:11, 12) ಹಿರಿಯರಿಗೆ ಸಹ ಅವಿವಾಹಿತರ ಬಗ್ಗೆ ಯೇಸುಗಿದ್ದ ಮನೋಭಾವನೇ ಇರಬೇಕು. ಮದ್ವೆ ಆಗ್ದೇ ಇರೋದು ಕೆಲವ್ರಿಗೆ ತುಂಬ ಕಷ್ಟ ಅಂತ ಯೇಸುಗೆ ಗೊತ್ತಿತ್ತು. ಆದ್ರೆ ಜೀವನದಲ್ಲಿ ಖುಷಿಯಾಗಿರಬೇಕಂದ್ರೆ ಮದ್ವೆ ಆಗಬೇಕು, ಮಕ್ಕಳು ಇರಬೇಕು ಅಂತೇನಿಲ್ಲ ಅಂತ ಆತನು ಸ್ಪಷ್ಟವಾಗಿ ಹೇಳಿದ್ನು. (ಲೂಕ 11:27, 28) ಯೆಹೋವನ ಸೇವೆಗೆ ಮೊದಲ್ನೇ ಸ್ಥಾನ ಕೊಡೋದ್ರಿಂದನೇ ಶಾಶ್ವತ ಸಂತೋಷ ಸಿಗುತ್ತೆ ಅಂತಾನೂ ಹೇಳಿದ್ನು.—ಮತ್ತಾ. 19:12.

9. ಸಹೋದರಿಯರಿಗೆ ಸಹಾಯ ಮಾಡಲು ಹಿರಿಯರು ಏನು ಮಾಡ್ಬಹುದು?

9 ಮುಖ್ಯವಾಗಿ ಹಿರಿಯರು ಸಹೋದರಿಯರನ್ನ ಅಕ್ಕ, ತಂಗಿ, ಅಮ್ಮನ ತರ ನೋಡ್ಬೇಕು. (1 ತಿಮೊ. 5:1, 2) ಕೂಟಗಳಿಗೆ ಮುಂಚೆ ಮತ್ತು ನಂತ್ರ ಅವ್ರ ಜೊತೆ ಮಾತಾಡೋಕೆ ಹಿರಿಯರು ಸಮ್ಯ ಮಾಡ್ಕೋಬೇಕು. ಕ್ರಿಸ್ಟಿ ಹೀಗೆ ಹೇಳ್ತಾಳೆ: “ನಾನು ಕೆಲ್ಸ ಮಾಡ್ತಾ ಪಯನೀಯರ್‌ ಸೇವೆ ಮಾಡ್ತಿದ್ದೆ. ಹಾಗಾಗಿ, ಯಾವಾಗ್ಲೂ ಬಿಝಿ ಆಗಿರುತ್ತಿದ್ದೆ. ನನ್ನನ್ನ ಗಮಸಿದ ಒಬ್ಬ ಹಿರಿಯ, ಎಲ್ಲ ವಿಷ್ಯನ ಚೆನ್ನಾಗಿ ಮಾಡ್ಕೊಂಡು ಹೋಗೋಕೆ ಆಗ್ತಾ ಇದ್ಯಾ ಅಂತ ವಿಚಾರಿಸಿದ್ರು. ಅವ್ರು ನನ್‌ ಬಗ್ಗೆ ಈ ರೀತಿ ಕಾಳಜಿ ತೋರಿಸಿದ್ರಿಂದ ನಂಗೆ ತುಂಬ ಖುಷಿ ಆಯ್ತು.” ಹಿರಿಯರು, ಸಹೋದರಿಯರು ಹೇಗಿದ್ದಾರೆ ಅಂತ ಯಾವಾಗ್ಲೂ ವಿಚಾರಿಸೋ ಮೂಲಕ ಅವ್ರ ಬಗ್ಗೆ ತಮ್ಗೆ ಕಾಳಜಿ ಇದೆ ಅಂತ ತೋರಿಸಿಕೊಡ್ತಾರೆ. * ಹಿರಿಯರ ಜೊತೆ ತಪ್ಪದೇ ಮಾತಾಡೋದ್ರಿಂದ ಸಿಗೋ ಒಂದು ಪ್ರಯೋಜನದ ಬಗ್ಗೆ ಅನಿತಾ ಹೀಗೆ ಹೇಳ್ತಾಳೆ: “ನಾನು ಅವ್ರನ್ನ ಚೆನ್ನಾಗಿ ತಿಳುಕೊಳ್ಳೋಕೆ ಆಗುತ್ತೆ ಮತ್ತು ಅವ್ರೂ ನನ್ನನ್ನ ಚೆನ್ನಾಗಿ ತಿಳ್ಕೊಳ್ತಾರೆ. ಹೀಗೆ ತಿಳ್ಕೊಳ್ಳೋದ್ರಿಂದ, ಜೀವನದಲ್ಲಿ ಸಮಸ್ಯೆ ಬಂದಾಗ ಅವ್ರ ಹತ್ರ ಹೋಗಿ ಸಹಾಯ ಕೇಳೋಕೆ ನಂಗೆ ಕಷ್ಟ ಆಗಲ್ಲ.”

ಸಹೋದರಿಯರನ್ನ ಪ್ರಶಂಸಿಸಿ

10. ಸಹೋದರಿಯರಿಗೆ ಯಾವ್ದು ಖುಷಿ ಕೊಡುತ್ತೆ?

10 ಪುರುಷರಿಗೇ ಆಗಲಿ ಸ್ತ್ರೀಯರಿಗೇ ಆಗಲಿ ಯಾರಾದ್ರು ಅವ್ರ ಸಾಮರ್ಥ್ಯನ ಗುರುತಿಸಿದ್ರೆ, ಅವ್ರು ಮಾಡಿರೋ ಕೆಲ್ಸದ ಬಗ್ಗೆ ಮೆಚ್ಚಿಕೊಂಡ್ರೆ ಖುಷಿ ಆಗುತ್ತೆ. ಆದ್ರೆ ಯಾರೂ ಅವ್ರ ಸಾಮರ್ಥ್ಯ, ಕೆಲ್ಸನ ಗುರುತಿಸದೇ ಹೋದ್ರೆ ನಿರುತ್ಸಾಹ ಆಗುತ್ತೆ. ಅಬಿಗೇಲ್‌ ಅನ್ನೋ ಅವಿವಾಹಿತ ಪಯನೀಯರ್‌ ಸಹೋದರಿ, ತನ್ನನ್ನ ಯಾರೂ ಲೆಕ್ಕಕ್ಕೆ ತಗೊಳ್ತಿಲ್ಲ ಅಂತ ಕೆಲವೊಮ್ಮೆ ಅನ್ಸುತ್ತೆ ಅಂತ ಹೇಳ್ತಾಳೆ. “ನನ್ನನ್ನ ಇಂಥವ್ರ ಅಕ್ಕ, ತಂಗಿ ಅಥವಾ ಇಂಥವ್ರ ಮಗಳು ಅಂತ ನೋಡ್ತಾರೆ. ಅದಕ್ಕೇ ‘ನಾನು ಲೆಕ್ಕಕ್ಕೇ ಇಲ್ವೇನೋ’ ಅಂತ ಅನ್ಸುತ್ತೆ” ಅಂತ ಆಕೆ ಹೇಳ್ತಾಳೆ. ಆದ್ರೆ ಪಿಂಕಿ ಅನ್ನೋ ಸಹೋದರಿ ಏನ್‌ ಹೇಳ್ತಾರೆ ಅಂತ ಗಮನಿಸಿ. ಅವ್ರು ಅವಿವಾಹಿತರಾಗಿದ್ದಾಗ ಅನೇಕ ವರ್ಷಗಳವರೆಗೆ ಮಿಷನರಿ ಸೇವೆ ಮಾಡಿದ್ರು. ಆಮೇಲೆ ತನ್ನ ಹೆತ್ತವರನ್ನ ನೋಡ್ಕೊಳ್ಳೋಕೆ ಮನೆಗೆ ವಾಪಸ್‌ ಹೋಗಬೇಕಾಯ್ತು. ಈಗ ಅವ್ರು 70 ರ ಪ್ರಾಯದಲ್ಲಿದ್ದಾರೆ, ಆದ್ರೂ ಪಯನೀಯರ್‌ ಸೇವೆ ಮಾಡ್ತಿದ್ದಾರೆ. “ನಾನು ಮಾಡಿದ ಸೇವೆಯನ್ನ ಬೇರೆಯವ್ರು ಮೆಚ್ಚಿಕೊಂಡಿದ್ರಿಂದಲೇ ಅದನ್ನ ಮುಂದುವರಿಸಿಕೊಂಡು ಹೋಗೋಕೆ ಸಾಧ್ಯ ಆಗಿದೆ” ಅಂತ ಪಿಂಕಿ ಹೇಳ್ತಾರೆ.

11. ಸೇವೆಯಲ್ಲಿ ತನ್ನ ಜೊತೆ ಇದ್ದು ಸಹಾಯ ಮಾಡಿದ ಸ್ತ್ರೀಯರಿಗೆ ತಾನು ಕೃತಜ್ಞನಾಗಿದ್ದೇನೆ ಎಂದು ಯೇಸು ಹೇಗೆ ತೋರಿಸಿಕೊಟ್ಟನು?

11 “ತಮ್ಮ ಸ್ವತ್ತುಗಳಿಂದ” ಉಪಚಾರ ಮಾಡಿದ ದೇವಭಕ್ತ ಸ್ತ್ರೀಯರ ಸಹಾಯವನ್ನ ಯೇಸು ಅಮೂಲ್ಯವಾಗಿ ಎಣಿಸಿದ್ನು. (ಲೂಕ 8:1-3) ಅವ್ರಿಗೆ ಉಪಚಾರ ಮಾಡಲು ಅವಕಾಶ ಕೊಟ್ಟಿದ್ದು ಮಾತ್ರವಲ್ಲ ದೇವ್ರ ಇಷ್ಟದ ಬಗ್ಗೆ ಪ್ರಾಮುಖ್ಯ ಸತ್ಯಗಳನ್ನು ತಿಳಿಸಿದ್ನು. ಉದಾಹರಣೆಗೆ, ತಾನು ಸಾಯಲಿದ್ದೇನೆ, ಮತ್ತೆ ಜೀವಂತ ಎದ್ದು ಬರುತ್ತೇನೆ ಅಂತ ತಿಳಿಸಿದ್ನು. (ಲೂಕ 24:5-8) ಮುಂದೆ ಬರಲಿದ್ದ ಪರೀಕ್ಷೆಗಳನ್ನ ಎದುರಿಸಲು ಅಪೊಸ್ತಲರನ್ನ ಸಿದ್ಧಗೊಳಿಸಿದ ತರನೇ ಈ ಸ್ತ್ರೀಯರನ್ನೂ ಸಿದ್ಧಗೊಳಿಸಿದ್ನು. (ಮಾರ್ಕ 9:30-32; 10:32-34) ಯೇಸುವನ್ನ ಬಂಧಿಸಿದಾಗ ಅಪೊಸ್ತಲರು ಓಡಿ ಹೋದ್ರು. ಆದ್ರೆ ಆತನಿಗೆ ಬೆಂಬಲ ಕೊಟ್ಟ ಕೆಲವು ಸ್ತ್ರೀಯರು ಯೇಸು ಯಾತನಾ ಕಂಬದಲ್ಲಿ ಸಾಯುವಾಗ ಅಲ್ಲೇ ನಿಂತಿದ್ರು.—ಮತ್ತಾ. 26:56; ಮಾರ್ಕ 15:40, 41.

12. ಯೇಸು ಸ್ತ್ರೀಯರಿಗೆ ಯಾವ ಕೆಲ್ಸ ಕೊಟ್ಟನು?

12 ಯೇಸು ಸ್ತ್ರೀಯರಿಗೆ ಪ್ರಾಮುಖ್ಯ ಕೆಲ್ಸ ಕೊಟ್ಟನು. ಉದಾಹರಣೆಗೆ, ತಾನು ಮತ್ತೆ ಜೀವಂತವಾಗಿ ಎದ್ದು ಬಂದಾಗ ಮೊದಲು ಕಾಣಿಸಿಕೊಂಡಿದ್ದೇ ದೇವಭಕ್ತ ಸ್ತ್ರೀಯರಿಗೆ. ತಾನು ಜೀವಂತವಾಗಿ ಎದ್ದು ಬಂದಿದ್ದೇನೆ ಅಂತ ಅಪೊಸ್ತಲರಿಗೆ ತಿಳಿಸುವಂತೆ ಆ ಸ್ತ್ರೀಯರಿಗೆ ಹೇಳಿದ್ನು. (ಮತ್ತಾ. 28:5, 9, 10) ಕ್ರಿ.ಶ. 33 ರ ಪಂಚಾಶತ್ತಮದಲ್ಲಿ ಪವಿತ್ರಾತ್ಮ ಸುರಿಸಲ್ಪಟ್ಟಾಗ ಅಲ್ಲಿ ಸಹ ಸ್ತ್ರೀಯರು ಇದ್ದಿರಬಹುದು. ಒಂದು ವೇಳೆ ಇದ್ದಿದ್ರೆ ಅವ್ರು ಸಹ ಅದ್ಭುತಕರವಾಗಿ ಬೇರೆ ಬೇರೆ ಭಾಷೆಯಲ್ಲಿ ಮಾತಾಡುವ ಮತ್ತು “ದೇವರ ಮಹೋನ್ನತ ಕಾರ್ಯಗಳ” ಬಗ್ಗೆ ಇತರರಿಗೆ ತಿಳಿಸುವ ಸಾಮರ್ಥ್ಯವನ್ನ ಪಡೆದಿರ್ತಾರೆ.—ಅ. ಕಾ. 1:14; 2:2-4, 11.

13. (ಎ) ಸಹೋದರಿಯರು ಇವತ್ತು ಏನೆಲ್ಲಾ ಮಾಡ್ತಿದ್ದಾರೆ? (ಬಿ) ಅವ್ರು ಮಾಡೋ ವಿಷ್ಯಗಳಿಗೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?

13 ನಮ್ಮ ಸಹೋದರಿಯರು ಯೆಹೋವನ ಸೇವೆಯಲ್ಲಿ ಅನೇಕ ವಿಷಯಗಳನ್ನು ಮಾಡ್ತಾರೆ, ಇದಕ್ಕಾಗಿ ಪ್ರಶಂಸೆ ಪಡೆಯೋಕೆ ಅವ್ರು ಅರ್ಹರಾಗಿದ್ದಾರೆ. ನಿರ್ಮಾಣ ಕೆಲಸ, ಕಟ್ಟಡಗಳನ್ನ ಸುಸ್ಥಿತಿಯಲ್ಲಿಡೋ ಕೆಲ್ಸ ಮಾಡ್ತಾರೆ. ಬೇರೆ ಭಾಷೆಯ ಗುಂಪುಗಳನ್ನ ಬೆಂಬಲಿಸ್ತಾರೆ, ಬೆತೆಲಿಗೆ ಹೋಗಿ ಸ್ವಯಂ ಸೇವಕರಾಗಿ ಕೆಲ್ಸ ಮಾಡ್ತಾರೆ. ವಿಪತ್ತು ಪರಿಹಾರ ಕೆಲ್ಸದಲ್ಲಿ ಕೈಜೋಡಿಸ್ತಾರೆ, ಸಾಹಿತ್ಯಗಳನ್ನ ಭಾಷಾಂತರಿಸೋಕೆ ಸಹಾಯ ಮಾಡ್ತಾರೆ. ಅಷ್ಟೇ ಅಲ್ಲ ಪಯನೀಯರ್‌ ಮತ್ತು ಮಿಷನರಿಗಳಾಗಿಯೂ ಸೇವೆ ಮಾಡ್ತಾರೆ. ಸಹೋದರರಂತೆ ಸಹೋದರಿಯರೂ ಪಯನೀಯರ್‌ ಶಾಲೆ, ರಾಜ್ಯ ಪ್ರಚಾರಕರ ಶಾಲೆ ಮತ್ತು ಗಿಲ್ಯಡ್‌ ಶಾಲೆಗೆ ಹಾಜರಾಗ್ತಾರೆ. ಸಹೋದರರಿಗೆ ಸಭೆಯಲ್ಲಿ ಮತ್ತು ಸಂಘಟನೆಯಲ್ಲಿರುವ ಜವಾಬ್ದಾರಿಗಳನ್ನ ಪೂರೈಸಲು ಅವರ ಹೆಂಡತಿಯರು ಸಹಾಯ ಮಾಡ್ತಾರೆ. ಹೆಂಡತಿಯರ ಬೆಂಬಲ ಇಲ್ಲದೆ ಈ ಸಹೋದರರು ‘ಮನುಷ್ಯರಲ್ಲಿ ದಾನಗಳಾಗಿ’ ತಮಗಿರೋ ಜವಾಬ್ದಾರಿಗಳನ್ನ ಪೂರ್ತಿಯಾಗಿ ಮಾಡೋಕೆ ಸಾಧ್ಯವಾಗ್ತಾ ಇರಲಿಲ್ಲ. (ಎಫೆ. 4:8) ಹಾಗಾಗಿ ಇಂತಹ ಸಹೋದರಿಯರು ಮಾಡೋ ಕೆಲ್ಸಕ್ಕೆ ನಾವು ಬೆಂಬಲ ಕೊಡಬೇಕು. ಅದನ್ನ ಮಾಡೋದು ಹೇಗೆ?

14. ಕೀರ್ತನೆ 68:11 ರಲ್ಲಿರೋ ಮಾತನ್ನ ನೆನಪಲ್ಲಿಟ್ಟು ಹಿರಿಯರು ಏನು ಮಾಡ್ತಾರೆ?

14 ಸಿದ್ಧ ಮನಸ್ಸಿನಿಂದ ಕೆಲ್ಸ ಮಾಡೋ ‘ಸ್ತೀಸಮೂಹ ದೊಡ್ಡದು’ ಮತ್ತು ಅವ್ರು ಸುವಾರ್ತೆ ಸಾರೋದ್ರಲ್ಲಿ ಹೆಚ್ಚು ನಿಪುಣರಾಗಿದ್ದಾರೆ ಅಂತ ಹಿರಿಯರು ಅರ್ಥಮಾಡ್ಕೊಳ್ತಾರೆ. (ಕೀರ್ತನೆ 68:11 ಓದಿ.) ಹಾಗಾಗಿ ಸಹೋದರಿಯರ ಅನುಭವದಿಂದ ಕಲಿತುಕೊಳ್ಳಲು ಅವರು ಪ್ರಯತ್ನಿಸುತ್ತಾರೆ. ‘ಟೆರಿಟೊರಿಯಲ್ಲಿರೋ ಜನ್ರ ಹತ್ರ ಯಾವ ರೀತಿ ಸಂಭಾಷಣೆ ಮಾಡಿದ್ರೆ ಚೆನ್ನಾಗಿರುತ್ತೆ’ ಅಂತ ಸಹೋದರರು ತನ್ನನ್ನ ಕೇಳಿದಾಗ ಉತ್ತೇಜನ ಸಿಗುತ್ತೆ ಅಂತ ಈ ಹಿಂದೆ ತಿಳಿಸಲಾದ ಅಬಿಗೇಲ್‌ ಹೇಳ್ತಾಳೆ. “ಹೀಗೆ ಮಾಡ್ವಾಗ ಯೆಹೋವನ ಸಂಘಟನೆಯಲ್ಲಿ ನಂಗೂ ಒಂದು ಸ್ಥಾನ ಇದೆ ಅಂತ ಅನ್ಸುತ್ತೆ” ಅಂತ ಆಕೆ ಹೇಳ್ತಾಳೆ. ಯುವ ಸಹೋದರಿಯರಿಗೆ ಬರೋ ಸಮಸ್ಯೆಗಳನ್ನ ಎದುರಿಸಲು ನಂಬಿಗಸ್ತ ಪ್ರೌಢ ಸಹೋದರಿಯರು ಸಹಾಯ ಮಾಡ್ತಾರೆ ಅನ್ನೋದನ್ನ ಹಿರಿಯರು ಅರ್ಥಮಾಡ್ಕೊಳ್ತಾರೆ. (ತೀತ 2:3-5) ಇಂಥ ಸಹೋದರಿಯರು ಖಂಡಿತವಾಗಿಯೂ ನಮ್ಮ ಪ್ರಶಂಸೆಗೆ ಅರ್ಹರಾಗಿದ್ದಾರೆ.

ಸಹೋದರಿಯರ ಪರವಾಗಿ ಮಾತಾಡಿ

15. ಸಹೋದರಿಯರಿಗೆ ತಮ್ಮ ಪರವಾಗಿ ಮಾತಾಡಲು ಬೇರೆಯವ್ರ ಸಹಾಯ ಯಾವಾಗ ಬೇಕಾಗಬಹುದು?

15 ಸಹೋದರಿಯರು ಕೆಲವೊಂದು ಸಮಸ್ಯೆಗಳನ್ನ ಎದುರಿಸುವಾಗ ಅವ್ರ ಪರವಾಗಿ ಮಾತಾಡೋಕೆ ಯಾರಾದರೊಬ್ರು ಬೇಕಾಗಬಹುದು. (ಯೆಶಾ. 1:17) ಉದಾಹರಣೆಗೆ, ಒಬ್ಬ ವಿಧವೆ ಅಥವಾ ವಿಚ್ಛೇದನ ಪಡೆದ ಸಹೋದರಿಗೆ ಕೆಲವು ವಿಷ್ಯಗಳಲ್ಲಿ ತನ್ನ ಪರವಾಗಿ ಮಾತನಾಡಲು ಒಬ್ರು ಬೇಕಾಗಬಹುದು ಅಥವಾ ಈ ಹಿಂದೆ ಗಂಡ ಮಾಡ್ತಿದ್ದ ಕೆಲ್ವು ಕೆಲಸಗಳನ್ನ ಮಾಡಲು ಆಕೆಗೆ ಸಹಾಯ ಬೇಕಿರಬಹುದು. ಒಬ್ಬ ವೃದ್ಧ ಸಹೋದರಿಗೆ ವೈದ್ಯರ ಹತ್ರ ಮಾತಾಡೋಕೆ ಸಹಾಯ ಬೇಕಿರಬಹುದು. ಒಬ್ಬ ಪಯನೀಯರ್‌ ಸಹೋದರಿ ಸಂಘಟನೆಯಲ್ಲಿ ಬೇರೆ ಕೆಲ್ಸಗಳನ್ನ ಮಾಡ್ತಿರುವಾಗ ಆಕೆಗೆ ಇತರ ಪಯನೀಯರರಷ್ಟು ಸೇವೆ ಮಾಡೋಕಾಗದೇ ಇರಬಹುದು. ಆಗ ಯಾರಾದ್ರೂ ಆಕೆ ಸೇವೆಯಲ್ಲಿ ಹೆಚ್ಚು ಭಾಗವಹಿಸ್ತಾ ಇಲ್ಲ ಅಂತ ಹೇಳಿದ್ರೆ ನಾವು ಆಕೆಯ ಪರವಾಗಿ ಮಾತಾಡಬೇಕು. ನಮ್ಮ ಸಹೋದರಿಯರಿಗೆ ನಾವು ಇನ್ನೂ ಹೇಗೆಲ್ಲಾ ಸಹಾಯ ಮಾಡ್ಬಹುದು? ಇದಕ್ಕಾಗಿ ಪುನಃ ಒಮ್ಮೆ ಯೇಸುವಿನ ಮಾದರಿಯನ್ನ ನೋಡೋಣ.

16. ಮಾರ್ಕ 14:3-9 ರಲ್ಲಿ ತಿಳಿಸೋ ಪ್ರಕಾರ ಯೇಸು ಹೇಗೆ ಮರಿಯಳ ಪರವಾಗಿ ಮಾತಾಡಿದ್ನು?

16 ಯೆಹೋವನನ್ನ ಆರಾಧಿಸುತ್ತಿದ್ದ ಸಹೋದರಿಯರನ್ನ ತಪ್ಪಾಗಿ ಅರ್ಥ ಮಾಡಿಕೊಂಡಾಗ ಯೇಸು ತಕ್ಷಣ ಅವ್ರ ಪರವಾಗಿ ಮಾತಾಡಿದ್ನು. ಉದಾಹರಣೆಗೆ, ಮರಿಯಳ ಮೇಲೆ ಮಾರ್ಥ ತಪ್ಪು ಹೊರಿಸಿದಾಗ ಆತನು ಮರಿಯಳ ಪರವಾಗಿ ಮಾತಾಡಿದ್ನು. (ಲೂಕ 10:38-42) ಇನ್ನೊಮ್ಮೆ ಮರಿಯ ಮಾಡಿದ ನಿರ್ಣಯ ತಪ್ಪಾಗಿತ್ತು ಅಂತ ಬೇರೆಯವ್ರು ಹೇಳಿದಾಗ ಯೇಸು ಮರಿಯಳ ಪರವಾಗಿ ಮತಾಡಿದ್ನು. (ಮಾರ್ಕ 14:3-9 ಓದಿ.) ಯೇಸು ಮರಿಯಳ ಉದ್ದೇಶವನ್ನ ಅರ್ಥ ಮಾಡ್ಕೊಂಡ್ನು ಮತ್ತು “ಅವಳು ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ. . . . ಅವಳು ತನ್ನಿಂದಾದುದನ್ನು ಮಾಡಿದ್ದಾಳೆ” ಅಂತ ಹೇಳಿ ಅವಳನ್ನ ಪ್ರಶಂಸಿಸಿದ್ನು. ಅಷ್ಟೇ ಅಲ್ಲ “ಲೋಕದ ಸುತ್ತಲೂ ಎಲ್ಲೆಲ್ಲ ಸುವಾರ್ತೆಯು ಸಾರಲ್ಪಡುತ್ತದೋ” ಅಲ್ಲೆಲ್ಲ ಅವ್ಳು ಮಾಡಿದ ಈ ದಯೆಯ ಕೆಲ್ಸವನ್ನ ತಿಳಿಸಲಾಗುತ್ತೆ ಅಂತ ಪ್ರವಾದನೆಯನ್ನೂ ಹೇಳಿದ್ನು. ಮರಿಯ ನಿಸ್ವಾರ್ಥವಾಗಿ ಮಾಡಿದ ಕೆಲ್ಸದ ಬಗ್ಗೆ ಹೊಗಳಿದಾಲೇ ಯೇಸು ಸುವಾರ್ತೆಯು ಇಡೀ ಲೋಕದಲ್ಲಿ ಸಾರಲ್ಪಡುತ್ತೆ ಅಂದನು. ಬೇರೆಯವ್ರು ತನ್ನನ್ನ ತಪ್ಪಾಗಿ ಅರ್ಥ ಮಾಡಿಕೊಂಡಾಗ ಯೇಸು ಹೇಳಿದ ಈ ಮಾತುಗಳಿಂದ ಮರಿಯಳಿಗೆ ಎಷ್ಟು ಸಾಂತ್ವನ, ಧೈರ್ಯ ಸಿಕ್ಕಿರಬಹುದಲ್ವಾ!

17. ಯಾವ ಸನ್ನಿವೇಶದಲ್ಲಿ ನಾವು ಒಬ್ಬ ಸಹೋದರಿಯ ಪರವಾಗಿ ಮಾತಾಡಬಹುದು ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.

17 ಸಹೋದರಿಯರಿಗೆ ಅಗತ್ಯವಿದ್ದಾಗ ಅವ್ರ ಪರವಾಗಿ ನೀವು ಮಾತಾಡ್ತೀರಾ? ಉದಾಹರಣೆಗೆ ಈ ಸನ್ನಿವೇಶ ಗಮನಿಸಿ. ಒಬ್ಬಳೇ ಸತ್ಯದಲ್ಲಿರುವ ಒಬ್ಬ ಸಹೋದರಿ ಕೂಟಗಳಿಗೆ ತಡವಾಗಿ ಬರ್ತಾಳೆ ಮತ್ತು ಕೂಟ ಆದ ಕೂಡ್ಲೇ ಹೋಗ್ತಾಳೆ. ಅಷ್ಟೇ ಅಲ್ಲ ಮಕ್ಕಳನ್ನೂ ಕೂಟಗಳಿಗೆ ಅಪರೂಪಕ್ಕೊಮ್ಮೆ ಕರಕೊಂಡು ಬರ್ತಾಳೆ. ಇದನ್ನು ಗಮನಿಸಿದ ಪ್ರಚಾರಕರು ಅವ್ಳು ತನ್ನ ಗಂಡನ ಹತ್ರ ಸ್ವಲ್ಪ ದೃಢವಾಗಿ ಯಾಕೆ ಮಾತಾಡ್ಬಾರ್ದು ಅಂತ ಪ್ರಶ್ನಿಸ್ತಾರೆ ಮತ್ತು ಅವ್ಳ ಮೇಲೆ ತಪ್ಪು ಹೊರಿಸ್ತಾರೆ. ಆದ್ರೆ ನಿಜ ವಿಷ್ಯ ಏನಂದ್ರೆ ಆ ಸಹೋದರಿಗೆ ತಾನು ಏನು ಮಾಡ್ಬೇಕು, ಏನ್‌ ಮಾಡ್ಬಾರ್ದು ಅಂತ ನಿರ್ಣಯಿಸೋ ಸ್ವಾತಂತ್ರ್ಯ ಇಲ್ಲ ಅಥ್ವಾ ಮಕ್ಕಳ ಬಗ್ಗೆನೂ ತೀರ್ಮಾನ ಮಾಡೋ ಸ್ವಾತಂತ್ರ್ಯ ಇಲ್ಲ. ಇದ್ರ ಮಧ್ಯದಲ್ಲೂ ಅವಳು ತನ್ನಿಂದ ಆಗೋದೆಲ್ಲಾ ಮಾಡ್ತಿದ್ದಾಳೆ. ಈ ಸನ್ನಿವೇಶದಲ್ಲಿ ನೀವು ಏನ್‌ ಮಾಡ್ಬಹುದು? ನೀವು ಆ ಸಹೋದರಿಯನ್ನ ಪ್ರಶಂಸಿಸಿ ಅವ್ಳು ತನ್ನಿಂದ ಆಗೋದನ್ನೆಲ್ಲಾ ಮಾಡ್ತಿದ್ದಾಳೆ ಅಂತ ಬೇರೆಯವ್ರಿಗೆ ಹೇಳೋದಾದ್ರೆ ಅವ್ಳ ಬಗ್ಗೆ ಬೇರೆಯವ್ರು ತಪ್ಪಾಗಿ ಮಾತಾಡದಂತೆ ತಡಿತೀರಿ.

18. ಸಹೋದರಿಯರಿಗೆ ಇನ್ನೂ ಯಾವೆಲ್ಲಾ ವಿಧಗಳಲ್ಲಿ ಸಹಾಯ ಮಾಡಬಹುದು?

18 ಸಹೋದರಿಯರಿಗೆ ಸಹಾಯ ಮಾಡೋ ಮೂಲಕ ನಾವು ಅವ್ರ ಬಗ್ಗೆ ನಮ್ಗೆ ಎಷ್ಟು ಕಾಳಜಿ ಇದೆ ಅಂತ ತೋರಿಸಿಕೊಡಬಹುದು. (1 ಯೊಹಾ. 3:18) ಅನಿತಾ ಹೀಗೆ ಹೇಳ್ತಾಳೆ: “ಕೆಲ್ವು ಸಹೋದರ ಸಹೋದರಿಯರು ನಮ್ಮ ಮನೆಗೆ ಬಂದು ಸ್ವಲ್ಪ ಸಮ್ಯ ಅಮ್ಮನನ್ನ ನೋಡ್ಕೊಳ್ತಿದ್ರು. ಇದ್ರಿಂದ ನಾನು ಹೊರಗೆ ಹೋಗೋಕೆ, ಬೇರೆ ಕೆಲ್ಸ ಮಾಡೋಕೆ ಆಗ್ತಿತ್ತು. ಅವ್ರು ಕೆಲವೊಮ್ಮೆ ಅಡಿಗೆ ಮಾಡಿ ತರುತ್ತಿದ್ರು. ಇದ್ರಿಂದ ನನ್ನನ್ನ ಅವ್ರು ಪ್ರೀತಿಸ್ತಾರೆ, ನಾನು ಸಭೆಯ ಭಾಗವಾಗಿದ್ದೇನೆ ಅಂತ ನಂಗೆ ಅನಿಸ್ತಿತ್ತು.” ಸಹೋದರಿ ಜೋರ್ಡನ್‌ಗೂ ಸಹಾಯ ಸಿಕ್ತು. ಕಾರನ್ನ ಸುಸ್ಥಿತಿಯಲ್ಲಿಡಲು ಕೆಲ್ವು ಸಲಹೆ-ಮಾರ್ಗದರ್ಶನಗಳನ್ನ ಒಬ್ಬ ಸಹೋದರ ಅವ್ಳಿಗೆ ಕೊಟ್ರು. ಆಕೆ ಹೀಗೆ ಹೇಳ್ತಾಳೆ: “ನನ್ನ ಸುರಕ್ಷತೆಯ ಬಗ್ಗೆ ಸಹೋದರ ಸಹೋದರಿಯರಿಗೆ ಎಷ್ಟು ಕಾಳಜಿ ಇದೆ ಅಂತ ನೋಡ್ವಾಗ ತುಂಬಾ ಸಂತೋಷ ಆಗುತ್ತೆ.”

19. ಇನ್ನೂ ಯಾವೆಲ್ಲಾ ವಿಧಗಳಲ್ಲಿ ಹಿರಿಯರು ಸಹೋದರಿಯರಿಗೆ ಸಹಾಯ ಮಾಡಬಹುದು?

19 ಹಿರಿಯರು ಸಹೋದರಿಯರಿಗೆ ಏನ್‌ ಅಗತ್ಯ ಇದೆ ಅಂತ ತಿಳ್ಕೊಂಡು ಸಹಾಯ ಮಾಡೋಕೆ ಪ್ರಯತ್ನಿಸ್ತಾರೆ. ಸಹೋದರಿಯರ ಜೊತೆ ಚೆನ್ನಾಗಿ ನಡ್ಕೋಬೇಕು ಅಂತ ಯೆಹೋವ ಬಯಸ್ತಾನೆ ಅನ್ನೋದು ಅವ್ರಿಗೆ ಗೊತ್ತಿದೆ. (ಯಾಕೋ. 1:27) ಹಾಗಾಗಿ ಹಿರಿಯರು ಸಹೋದರಿಯರಿಗೆ ನಿಯಮಗಳನ್ನ ಪಾಲಿಸಲೇಬೇಕು ಅಂತ ಕಟ್ಟುನಿಟ್ಟು ಮಾಡಲ್ಲ. ಅವ್ರ ಪರಿಸ್ಥಿತಿನ ಅರ್ಥಮಾಡ್ಕೊಂಡು ಅನುಕಂಪ ತೋರಿಸೋ ಮೂಲಕ ಹಿರಿಯರು ಯೇಸುವನ್ನ ಅನುಕರಿಸ್ತಾರೆ. (ಮತ್ತಾ. 15:22-28) ಹಿರಿಯರು ಮುಂದೆ ಬಂದು ಸಹೋದರಿಯರಿಗೆ ಬೇಕಾದ ಸಹಾಯ ಮಾಡ್ವಾಗ ಆ ಸಹೋದರಿಯರಿಗೆ ಯೆಹೋವನು ಮತ್ತು ಆತನ ಸಂಘಟನೆ ತಮ್ಮನ್ನ ಪ್ರೀತಿಸುತ್ತೆ ಅಂತ ಅನ್ಸುತ್ತೆ. ಕಿಯಾಳ ಗುಂಪು ಮೇಲ್ವಿಚಾರಕರು ಅವ್ಳು ಬೇರೆ ಮನೆಗೆ ಹೋಗಲಿದ್ದಾಳೆ ಅಂತ ತಿಳ್ಕೊಂಡ ತಕ್ಷಣ ಬೇಕಾದ ಸಹಾಯ ಮಾಡೋಕೆ ಏರ್ಪಾಡುಗಳನ್ನ ಮಾಡಿದ್ರು. “ಇದ್ರಿಂದ ನನ್‌ ಭಾರ ಎಷ್ಟೋ ಕಡಿಮೆ ಆಯ್ತು. ಅವ್ರು ನಂಗೆ ಉತ್ತೇಜನ ನೀಡಿದ್ರು ಮತ್ತು ಬೇಕಾದ ಸಹಾಯ ಮಾಡಿದ್ರು. ಇದ್ರಿಂದ ಸಭೆಯಲ್ಲಿ ನಂಗೂ ಒಂದು ಸ್ಥಾನ ಇದೆ ಮತ್ತು ಕಷ್ಟ ಬಂದಾಗ ನಾನು ಒಂಟಿಯಲ್ಲ, ನನ್‌ ಜೊತೆ ಎಲ್ರೂ ಇರ್ತಾರೆ ಅಂತ ನಂಗೆ ಸ್ಪಷ್ಟ ಆಯ್ತು” ಅಂತ ಕಿಯಾ ಹೇಳ್ತಾಳೆ.

ಎಲ್ಲಾ ಸಹೋದರಿಯರಿಗೂ ಬೆಂಬಲ ಬೇಕಿದೆ

20-21. ನಮ್ಮ ಎಲ್ಲಾ ಸಹೋದರಿಯರನ್ನ ನಾವು ಪ್ರೀತಿಸ್ತೇವೆ ಅಂತ ಹೇಗೆ ತೋರಿಸಿಕೊಡಬಹುದು?

20 ನಮ್ಮ ಸಭೆಗಳಲ್ಲಿ ತುಂಬಾ ಶ್ರಮವಹಿಸಿ ಕೆಲ್ಸ ಮಾಡ್ತಿರೋ ಅನೇಕ ಸಹೋದರಿಯರು ಇರ್ತಾರೆ, ಅವರೆಲ್ರೂ ನಮ್ಮ ಬೆಂಬಲವನ್ನ ಪಡೆಯೋಕೆ ಅರ್ಹರಾಗಿದ್ದಾರೆ. ಯೇಸುವಿನ ಮಾದರಿಯಿಂದ ನಾವು ಕಲಿತ ಹಾಗೆ ಸಹೋದರಿಯರ ಜೊತೆ ಸಮ್ಯ ಕಳೆಯೋ ಮೂಲಕ ಮತ್ತು ಅವ್ರ ಬಗ್ಗೆ ತಿಳ್ಕೊಳ್ಳೋ ಮೂಲಕ ಅವ್ರಿಗೆ ಸಹಾಯ ಮಾಡ್ಬಹುದು. ಅವ್ರು ಮಾಡುತ್ತಿರೋ ದೇವ್ರ ಸೇವೆಗಾಗಿ ಅವ್ರನ್ನ ಪ್ರಶಂಸಿಸಬಹುದು. ಅಗತ್ಯ ಇದ್ದಾಗ ನಾವು ಅವ್ರ ಪರವಾಗಿ ಮಾತಾಡಬಹುದು.

21 ರೋಮನ್ನರಿಗೆ ಬರೆದ ಪತ್ರದ ಕೊನೆಯಲ್ಲಿ ಅಪೊಸ್ತಲ ಪೌಲನು ಒಂಬತ್ತು ಸಹೋದರಿಯರ ಬಗ್ಗೆ ಬರೆದನು. (ರೋಮ. 16:1, 3, 6, 12, 13, 15) ಪೌಲನು ಕಳಿಸಿದ ವಂದನೆಗಳನ್ನ, ಪ್ರಶಂಸೆಯನ್ನ ಕೇಳಿಸಿಕೊಂಡಾಗ ಆ ಸಹೋದರಿಯರಿಗೆ ಖಂಡಿತ ಉತ್ತೇಜನ ಸಿಕ್ಕಿರುತ್ತೆ. ನಾವೂ ನಮ್ಮ ಸಭೆಯಲ್ಲಿರುವ ಎಲ್ಲಾ ಸಹೋದರಿಯರಿಗೆ ಬೆಂಬಲ ಕೊಡೋಣ. ಹೀಗೆ ನಾವು ಅವ್ರನ್ನ ನಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಸ್ತೇವೆ ಅಂತ ತೋರಿಸಿಕೊಡೋಣ.

ಗೀತೆ 85 ಯೆಹೋವನಿಂದ ದೊರೆಯುವ ಪೂರ್ಣ ಪ್ರತಿಫಲ

^ ಪ್ಯಾರ. 5 ಕ್ರೈಸ್ತ ಸಹೋದರಿಯರು ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ. ಯೇಸುವಿನ ಮಾದರಿಯನ್ನು ಅನುಕರಿಸುತ್ತಾ ನಾವು ಅವ್ರಿಗೆ ಹೇಗೆ ಬೆಂಬಲ ಕೊಡಬಹುದು ಅನ್ನೋದನ್ನ ಈ ಲೇಖನದಲ್ಲಿ ನೋಡ್ತೇವೆ. ಯೇಸು ಸ್ತ್ರೀಯರ ಜೊತೆ ನಡ್ಕೊಂಡ ರೀತಿ, ಅವ್ರನ್ನ ಪ್ರಶಂಸಿಸಿದ ವಿಧ ಮತ್ತು ಅವ್ರ ಪರವಾಗಿ ಮಾತಾಡಿದ ರೀತಿಯಿಂದ ನಾವು ಪಾಠಗಳನ್ನ ಕಲಿತೇವೆ.

^ ಪ್ಯಾರ. 5 ಕೆಲ್ವು ಹೆಸರುಗಳನ್ನ ಬದಲಾಯಿಸಲಾಗಿದೆ.

^ ಪ್ಯಾರ. 6 ಬೈಬಲ್‌ ಬಗ್ಗೆ ಇರೋ ಒಂದು ಪುಸ್ತಕದಲ್ಲಿ ಹೀಗೆ ಹೇಳಲಾಗಿದೆ: “ಶಿಷ್ಯರು ಬೋಧಕರ ಪಾದದ ಹತ್ರ ಕೂತ್ಕೊಳ್ತಿದ್ರು. ಇದು, ಅವ್ರು ಮುಂದೆ ಬೋಧಕರಾಗ್ತಾರೆ ಅಂತ ಸೂಚಿಸ್ತಿತ್ತು. ಆದ್ರೆ ಸ್ತ್ರೀಯರಿಗೆ ಬೋಧಕರಾಗಲು ಅನುಮತಿ ಇರಲಿಲ್ಲ. ಹಾಗಾಗಿ ಮರಿಯ ಯೇಸುವಿನ ಪಾದದ ಹತ್ರ ಕೂತು ಆಸಕ್ತಿಯಿಂದ ಕೇಳಿಸಿಕೊಳ್ತಿದ್ದಾಗ ಅದನ್ನ ನೋಡಿದ ಹೆಚ್ಚಿನ ಯೆಹೂದಿ ಪುರುಷರಿಗೆ ಆಶ್ಚರ್ಯವಾಗಿರುತ್ತೆ.’’

^ ಪ್ಯಾರ. 9 ಸಹೋದರಿಯರಿಗೆ ಸಹಾಯ ಮಾಡುವಾಗ ಹಿರಿಯರು ಜಾಗ್ರತೆ ವಹಿಸುತ್ತಾರೆ. ಉದಾಹರಣೆಗೆ ಒಬ್ಬ ಸಹೋದರಿಯನ್ನ ಭೇಟಿ ಮಾಡೋಕೆ ಒಬ್ರೇ ಹೋಗಲ್ಲ.

^ ಪ್ಯಾರ. 65 ಚಿತ್ರ ವಿವರಣೆ: ಮೂವರು ಸಹೋದರರು ಯೇಸು ತರನೇ ನಂಬಿಗಸ್ತ ಸಹೋದರಿಯರಿಗೆ ಸಹಾಯ ಮಾಡ್ತಿದ್ದಾರೆ. ಒಬ್ಬ ಸಹೋದರ ಸಹೋದರಿಯರ ಕಾರಿನ ಟಯರನ್ನ ಬದ್ಲಾಯಿಸ್ತಿದ್ದಾನೆ. ಇನ್ನೊಬ್ಬ ಸಹೋದರ ತುಂಬ ಹುಷಾರಿಲ್ಲದ ವೃದ್ಧ ಸಹೋದರಿಯನ್ನ ಭೇಟಿ ಮಾಡಿದ್ದಾನೆ. ಮತ್ತೊಬ್ಬ ಸಹೋದರ ತನ್ನ ಹೆಂಡತಿ ಜೊತೆ ಒಬ್ಬ ಸಹೋದರಿ ಮನೆಗೆ ಹೋಗಿ ಆಕೆ ಮತ್ತು ಆಕೆಯ ಮಗಳ ಜೊತೆ ಕುಟುಂಬ ಆರಾಧನೆ ಮಾಡ್ತಿದ್ದಾನೆ.