ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೋಸೆಫ್‌ ಎಫ್‌. ರದರ್‌ಫರ್ಡ್‌ ಮತ್ತು ಇತರ ಸಹೋದರರು ಯೂರೋಪಿಗೆ ಭೇಟಿ ನೀಡಿದಾಗ

1920—ನೂರು ವರ್ಷಗಳ ಹಿಂದೆ

1920—ನೂರು ವರ್ಷಗಳ ಹಿಂದೆ

1920 ರ ಆರಂಭದಲ್ಲಿ ಯೆಹೋವನ ಜನರು ಸಾರುವ ಕೆಲ್ಸವನ್ನ ಮಾಡೋಕೆ ಸಿದ್ಧರಾದರು. “ನನ್ನ ಬಲವೂ ಕೀರ್ತನೆಯೂ ಕರ್ತನೇ” ಅನ್ನೋದು 1920 ರ ವರ್ಷವಚನವಾಗಿತ್ತು.—ಕೀರ್ತ. 118:14, ಕಿಂಗ್‌ ಜೇಮ್ಸ್‌ ವರ್ಷನ್‌.

ಈ ಹುರುಪಿನ ಪ್ರಚಾರಕರಿಗೆ ಯೆಹೋವನು ಬಲಕೊಟ್ಟನು. ಆ ವರ್ಷ ಕಾಲ್ಪೋರ್ಟರ್‌ಗಳ ಅಂದ್ರೆ ಪಯನೀಯರರ ಸಂಖ್ಯೆ 225 ರಿಂದ 350 ಕ್ಕೆ ಏರಿತು. ಅಷ್ಟೇ ಅಲ್ಲ, ಅದೇ ಮೊದಲ ಬಾರಿಗೆ 8,000 ಕ್ಲಾಸ್‌ವರ್ಕರ್‌ಗಳು ಅಂದ್ರೆ ಪ್ರಚಾರಕರು ಸೇವಾ ವರದಿಯನ್ನ ಮುಖ್ಯ ಕಾರ್ಯಾಲಯಕ್ಕೆ ಕಳುಹಿಸಿದ್ರು. ಯೆಹೋವನು ಅವ್ರು ಮಾಡಿದ ಪ್ರಯತ್ನವನ್ನ ತುಂಬ ಆಶೀರ್ವದಿಸಿದ್ನು.

ಹುರುಪಿನಿಂದ ಸೇವೆ ಮಾಡಿದ್ರು

ಬೈಬಲ್‌ ವಿದ್ಯಾರ್ಥಿಗಳ ಕೆಲ್ಸದ ಮುಂದಾಳತ್ವ ವಹಿಸಿದ್ದ ಸಹೋದರ ಜೋಸೆಫ್‌ ಎಫ್‌. ರದರ್‌ಫರ್ಡ್‌ರು 1920 ರ ಮಾರ್ಚ್‌ 21 ರಂದು “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ” ಅನ್ನೋ ವಿಷ್ಯದ ಬಗ್ಗೆ ಭಾಷಣ ನೀಡಿದ್ರು. ಈ ಕಾರ್ಯಕ್ರಮಕ್ಕೆ ಜನ್ರನ್ನ ಆಮಂತ್ರಿಸಲಿಕ್ಕಾಗಿ ಬೈಬಲ್‌ ವಿದ್ಯಾರ್ಥಿಗಳು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಅವ್ರು ನ್ಯೂಯಾರ್ಕ್‌ ಪಟ್ಟಣದಲ್ಲಿದ್ದ ಒಂದು ದೊಡ್ಡ ಸಭಾಂಗಣವನ್ನ ಬಾಡಿಗೆಗೆ ತಗೊಂಡ್ರು ಮತ್ತು 3,20,000 ಆಮಂತ್ರಣ ಪತ್ರಗಳನ್ನ ಜನರಿಗೆ ಹಂಚಿದ್ರು.

ನ್ಯೂಸ್‌ ಪೇಪರ್‌ನಲ್ಲಿ, “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ” ಭಾಷಣದ ಜಾಹೀರಾತು

ಈ ಕಾರ್ಯಕ್ರಮಕ್ಕೆ ಅವ್ರು ನೆನಸಿದ್ದಕ್ಕಿಂತ ಹೆಚ್ಚು ಜನ ಬಂದ್ರು. ಆ ಸಭಾಂಗಣ 5,000ಕ್ಕಿಂತ ಹೆಚ್ಚು ಜನ್ರಿಂದ ತುಂಬಿ ಹೋಗಿತ್ತು. ಇನ್ನು ಸ್ಥಳ ಇಲ್ಲದೆ ಹೋಗಿದ್ರಿಂದ 7,000ದಷ್ಟು ಜನ್ರನ್ನ ವಾಪಸ್‌ ಕಳಿಸಬೇಕಾಯ್ತು. “ಅಂತಾರಾಷ್ಟ್ರೀಯ ಬೈಬಲ್‌ ವಿದ್ಯಾರ್ಥಿಗಳು ಇಷ್ಟರ ತನಕ ನಡೆಸಿರೋ ಕೂಟಗಳಲ್ಲೇ ಹೆಚ್ಚು ಯಶಸ್ವಿಕರವಾಗಿ ನಡೆದ ಕೂಟ ಇದಾಗಿದೆ” ಅಂತ ಕಾವಲಿನಬುರುಜು ತಿಳಿಸಿತು.

“ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ” ಅನ್ನೋ ಸಂದೇಶವನ್ನ ಸಾರೋದರಲ್ಲಿ ಬೈಬಲ್‌ ವಿದ್ಯಾರ್ಥಿಗಳು ಪ್ರಸಿದ್ಧರಾದ್ರು. ಆ ಸಮ್ಯದಲ್ಲಿ ಅವ್ರಿಗೆ, ದೇವರ ರಾಜ್ಯದ ಸಂದೇಶ ಇನ್ನೂ ದೂರ ದೂರದ ಪ್ರದೇಶಗಳಿಗೆ ತಲುಪಬೇಕು ಅಂತ ಗೊತ್ತಿರಲಿಲ್ಲ. ಆದ್ರೂ ಅವ್ರು ಹುರುಪಿನಿಂದ ಸೇವೆ ಮಾಡಿದ್ರು. 1902 ರಲ್ಲಿ ಕೂಟಗಳಿಗೆ ಹಾಜರಾಗೋಕೆ ಶುರು ಮಾಡಿದ ಐಡಾ ಓಮ್‌ಸ್ಟೆಡ್‌ ಹೀಗೆ ಹೇಳಿದ್ದಾರೆ: “ಇಡೀ ಮಾನವಕುಲಕ್ಕೆ ಅದ್ಭುತ ಆಶೀರ್ವಾದಗಳು ಸಿಗುತ್ತೆ ಅಂತ ನಮ್ಗೆ ಗೊತ್ತಿತ್ತು ಮತ್ತು ನಾವದನ್ನ ಸೇವೆಯಲ್ಲಿ ಸಿಕ್ಕ ಎಲ್ಲರಿಗೂ ತಪ್ಪದೇ ಸಾರಿದ್ವಿ.”

ಮುದ್ರಣ ಕೆಲ್ಸದ ಆರಂಭ

ಜನ್ರಿಗೆ ಸತ್ಯದ ಜ್ಞಾನವನ್ನು ಸರಿಯಾದ ಸಮಯಕ್ಕೆ ತಲುಪಿಸಲಿಕ್ಕಾಗಿ ನ್ಯೂಯಾರ್ಕಿನ ಬ್ರೂಕ್ಲಿನ್‌ ಬೆತೆಲಿನಲ್ಲಿದ್ದ ಸಹೋದರರು ಕೆಲವು ಸಾಹಿತ್ಯಗಳನ್ನ ತಾವೇ ಮುದ್ರಿಸೋಕೆ ಶುರು ಮಾಡಿದ್ರು. ಇದಕ್ಕಾಗಿ ಅವ್ರು ಮುದ್ರಣ ಯಂತ್ರವನ್ನ ಖರೀದಿಸಿದ್ರು ಮತ್ತು ಬೆತೆಲಿಂದ ಸ್ವಲ್ಪನೇ ದೂರದಲ್ಲಿದ್ದ 35 ಮರ್ಟಲ್‌ ಅವೆನ್ಯೂವಿನ ಒಂದು ಕಟ್ಟಡವನ್ನ ಬಾಡಿಗೆಗೆ ತಗೊಂಡು ಅಲ್ಲಿ ಮುದ್ರಣವನ್ನ ಶುರು ಮಾಡಿದ್ರು.

ಲಿಯೋ ಪೆಲ್‌ ಮತ್ತು ವಾಲ್ಟರ್‌ ಕೆಸ್ಲರ್‌ ಅನ್ನೋ ಸಹೋದರರು 1920 ರ ಜನವರಿಯಲ್ಲಿ ಬೆತೆಲ್‌ ಸೇವೆ ಶುರು ಮಾಡಿದ್ರು. ಅಲ್ಲಿ ಹೋದಾಗ ಏನಾಯ್ತು ಅಂತ ಸಹೋದರ ವಾಲ್ಟರ್‌ ಹೀಗೆ ಹೇಳ್ತಾರೆ: “ನಾವಲ್ಲಿ ತಲುಪಿದ ತಕ್ಷಣ ಪ್ರಿಂಟರಿಯ ಮೇಲ್ವಿಚಾರಕರಾಗಿದ್ದ ಸಹೋದರ ನಮ್ಮ ಕಡೆ ನೋಡಿ, ‘ಊಟಕ್ಕೆ ಇನ್ನೂ ಒಂದುವರೆ ತಾಸಿದೆ’ ಅಂತ ಹೇಳಿದ್ರು ಮತ್ತು ನಮ್ಗೆ ಪುಸ್ತಕ ತುಂಬಿದ್ದ ಬಾಕ್ಸ್‌ಗಳನ್ನ ನೆಲಮಾಳಿಗೆಯಿಂದ ಮೇಲಕ್ಕೆ ತಗೊಂಡು ಹೋಗುವ ಕೆಲ್ಸ ಕೊಟ್ರು.”

ಮರುದಿನ ಏನಾಯ್ತು ಅಂತ ಸಹೋದರ ಲಿಯೋ ಹೇಳ್ತಾರೆ: “ಆ ಕಟ್ಟಡದ ನೆಲ ಮಹಡಿಯ ಗೋಡೆಗಳನ್ನ ತೊಳೆಯೋ ಕೆಲ್ಸ ಕೊಟ್ರು. ನನ್ನ ಜೀವ್ನದಲ್ಲಿ ಯಾವತ್ತೂ ಇಷ್ಟು ಗಲೀಜಾಗಿದ್ದ ಗೋಡೆನಾ ಕ್ಲೀನ್‌ ಮಾಡೋ ಕೆಲ್ಸ ಮಾಡಿರಲಿಲ್ಲ. ಆದ್ರೂ ಅದು ದೇವರ ಕೆಲ್ಸ ಆಗಿದ್ರಿಂದ ನಾವದನ್ನ ಖುಷಿಖುಷಿಯಾಗಿ ಮಾಡಿದ್ವಿ.”

ಕಾವಲಿನಬುರುಜು ಪತ್ರಿಕೆಯನ್ನು ಮುದ್ರಿಸಲು ಉಪಯೋಗಿಸುತ್ತಿದ್ದ ಕೈಯಿಂದ ಚಲಾಯಿಸುವ ಮುದ್ರಣ ಯಂತ್ರ

ಕೆಲವೇ ವಾರಗಳಲ್ಲಿ ಹುರುಪಿನ ಸಹೋದರರು ಅಲ್ಲಿ ಕಾವಲಿನಬುರುಜು ಪತ್ರಿಕೆಯನ್ನ ಮುದ್ರಿಸೋಕೆ ಶುರು ಮಾಡಿದ್ರು. ಇದಕ್ಕಾಗಿ ಅವ್ರು ಕೈಯಿಂದ ಚಲಾಯಿಸುವ ಒಂದು ಮುದ್ರಣ ಯಂತ್ರವನ್ನ ತಂದು ಮೊದಲನೇ ಮಹಡಿಯಲ್ಲಿ ಇಟ್ರು. ಇದನ್ನ ಉಪಯೋಗಿಸಿ ಫೆಬ್ರವರಿ 1, 1920 ರ ಕಾವಲಿನಬುರುಜು ಪತ್ರಿಕೆಯ 60,000 ಪ್ರತಿಗಳನ್ನು ಮುದ್ರಿಸಿದರು. ಅಷ್ಟೇ ಅಲ್ಲ, ನೆಲಮಾಳಿಗೆಯಲ್ಲಿ ಇನ್ನೊಂದು ಮುದ್ರಣ ಯಂತ್ರವನ್ನ ಅಳವಡಿಸಿದ್ರು. ಅದನ್ನ ಬ್ಯಾಟಲ್‌ಶಿಪ್‌ ಅಂದ್ರೆ ಯುದ್ಧ ನೌಕೆ ಅಂತ ಕರೆದ್ರು. ಆಮೇಲೆ ಅವ್ರು ದ ಗೋಲ್ಡನ್‌ ಏಜ್‌ ಅಂದ್ರೆ ಈಗಿನ ಎಚ್ಚರ! ಪತ್ರಿಕೆಯನ್ನ ಮುದ್ರಿಸೋಕೆ ಶುರುಮಾಡಿದ್ರು. ಅವ್ರು ಮುದ್ರಿಸಿದ ಮೊದಲ ಸಂಚಿಕೆ 1920 ರ ಏಪ್ರಿಲ್‌ 14 ರ ಸಂಚಿಕೆಯಾಗಿತ್ತು. ಹೀಗೆ ಸಹೋದರರು ಪೂರ್ಣ ಮನಸ್ಸಿನಿಂದ ಕೆಲ್ಸ ಮಾಡಿದ್ರು ಮತ್ತು ಯೆಹೋವನು ಅವ್ರ ಪ್ರಯತ್ನವನ್ನ ಆಶೀರ್ವದಿಸಿದನು.

“ಅದು ದೇವರ ಕೆಲ್ಸ ಆಗಿದ್ರಿಂದ ನಾವದನ್ನ ಖುಷಿಖುಷಿಯಾಗಿ ಮಾಡಿದ್ವಿ.”

“ನಾವೆಲ್ರೂ ಐಕ್ಯರಾಗಿರೋಣ”

ಯೆಹೋವನ ನಿಷ್ಠಾವಂತ ಜನರು ಹುರುಪಿನಿಂದ ಕೆಲ್ಸ ಮಾಡ್ತಾ ಇದ್ರು ಮತ್ತು ಅವ್ರ ಮಧ್ಯೆ ಪ್ರೀತಿ, ಐಕ್ಯತೆ ಇತ್ತು. ಆದ್ರೆ 1917 ರಿಂದ 1919 ರ ಕಷ್ಟಕರ ಸಮಯದಲ್ಲಿ ಕೆಲವು ಬೈಬಲ್‌ ವಿದ್ಯಾರ್ಥಿಗಳು ಸಂಘಟನೆಯನ್ನ ಬಿಟ್ಟು ಹೋಗಿದ್ರು. ಅವ್ರನ್ನ ಪುನಃ ಸಂಘಟನೆಗೆ ವಾಪಸ್‌ ಕರೆತರೋಕೆ ಏನು ಮಾಡಲಾಯ್ತು ಅಂತ ಈಗ ನೋಡೋಣ.

ಏಪ್ರಿಲ್‌ 1, 1920 ರ ಕಾವಲಿನಜುರುಜುವಿನಲ್ಲಿ, “ನಾವೆಲ್ಲರೂ ಐಕ್ಯರಾಗಿರೋಣ” ಅನ್ನೋ ಲೇಖನವನ್ನ ಮುದ್ರಿಸಲಾಯಿತು. ಈ ಲೇಖನದಲ್ಲಿ ಸಂಘಟನೆಯನ್ನ ಬಿಟ್ಟು ಹೋದವ್ರಿಗೆ ಪ್ರೀತಿಯಿಂದ ಹೀಗೆ ತಿಳಿಸಲಾಯ್ತು: ‘ಕರ್ತನ ಆಜ್ಞೆಯನ್ನ ಪಾಲಿಸೋಕೆ ಇಷ್ಟಪಡೋರೆಲ್ಲರೂ ಹಿಂದಿನ ವಿಷಯಗಳನ್ನೆಲ್ಲಾ ಮರೆತುಬಿಟ್ಟು ವಾಪಸ್‌ ಕರ್ತನ ಹತ್ರ ಬರುತ್ತೀರಿ ಮತ್ತು ಆತನ ಕೆಲ್ಸ ಮಾಡ್ಲಿಕ್ಕಾಗಿ ಆತನ ಜನ್ರ ಜೊತೆ ಐಕ್ಯರಾಗ್ತೀರಿ ಅನ್ನೋ ಭರವಸೆ ನಮಗಿದೆ.’

ಅನೇಕರು ಈ ಮಾತಿಗೆ ಕಿವಿಗೊಟ್ಟು ಸಹೋದರರ ಜೊತೆ ಒಂದಾದ್ರು. ಒಬ್ಬ ದಂಪತಿ ಹೀಗೆ ಬರೆದ್ರು: “ಕಳೆದ ಒಂದು-ಒಂದುವರೆ ವರ್ಷ ನಾವು ಸಾರೋ ಕೆಲ್ಸನೇ ಮಾಡ್ಲಿಲ್ಲ. ಆದ್ರೆ ಅನೇಕ ಸಹೋದರರು ಈ ಕೆಲ್ಸವನ್ನ ತುಂಬ ಹುರುಪಿನಿಂದ ಮಾಡಿದ್ರು. ನಮ್ಮಿಂದ ದೊಡ್ಡ ತಪ್ಪಾಗಿದೆ ಅಂತ ನಾವು ಒಪ್ಪಿಕೊಳ್ತೇವೆ ಮತ್ತು ಈ ತಪ್ಪನ್ನ ನಾವು ಇನ್ಯಾವತ್ತೂ ಮಾಡಲ್ಲ.” ಇಂಥ ಮನೋಭಾವ ಇರೋ ಅನೇಕ ಸಹೋದರ ಸಹೋದರಿಯರು ವಾಪಸ್‌ ಬಂದು ಯೆಹೋವನ ಕೆಲ್ಸನ್ನ ಮಾಡ್ತಾ ಮುಂದುವರೆದ್ರು. ಯಾಕಂದ್ರೆ ಮಾಡೋಕೆ ಇನ್ನೂ ತುಂಬ ಕೆಲ್ಸ ಇತ್ತು.

ದ ಫಿನಿಷ್ಡ್‌ ಮಿಸ್ಟ್ರಿಯ ಹೊಸ ಆವೃತ್ತಿಯ ವಿತರಣೆ

1920 ರ ಜೂನ್‌ 21 ರಂದು ಬೈಬಲ್‌ ವಿದ್ಯಾರ್ಥಿಗಳು ದ ಫಿನಿಷ್ಡ್‌ ಮಿಸ್ಟ್ರಿ ಪುಸ್ತಕದ ತೆಳುವಾದ ಬೈಡಿಂಗ್‌ ಇರೋ ಆವೃತ್ತಿಯನ್ನ ವಿತರಿಸೋ ಅಭಿಯಾನವನ್ನ ಶುರುಮಾಡಿದ್ರು. ತುಂಬ ಉತ್ಸಾಹದಿಂದ ಜನ್ರಿಗೆ ಇದನ್ನ ವಿತರಿಸಿದ್ರು. ಇದಕ್ಕೂ ಎರಡು ವರ್ಷಗಳ ಹಿಂದೆ ಅಂದ್ರೆ 1918 ರಲ್ಲಿ ಈ ಪುಸ್ತಕದ ಮೇಲೆ ನಿಷೇಧ ಹಾಕಲಾಗಿತ್ತು. ಆಗ ಇದರ ಅನೇಕ ಪ್ರತಿಗಳನ್ನ ಸ್ಟೋರ್‌ ಮಾಡಲಾಗಿತ್ತು.

ಪಯನೀಯರರನ್ನು ಮಾತ್ರವಲ್ಲ ಪ್ರಚಾರಕರನ್ನೂ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಆಮಂತ್ರಿಸಲಾಯ್ತು. “ದೀಕ್ಷಾಸ್ನಾನ ಪಡೆದ ಪ್ರತಿಯೊಬ್ರೂ ಈ ಅಭಿಯಾನದಲ್ಲಿ ಭಾಗವಹಿಸಬೇಕು, ಇದನ್ನ ಮಾಡೋಕೆ ಯಾರಿಂದ ಆಗುತ್ತೋ ಅವ್ರೆಲ್ಲರೂ ಸಂತೋಷದಿಂದ ಮಾಡ್ಬೇಕು. ಜನ್ರಿಗೆ ಈ ಪುಸ್ತಕವನ್ನ ಹೇಗಾದ್ರೂ ಮಾಡಿ ಕೊಟ್ಟೇ ಕೊಡ್ತೀನಿ ಅನ್ನೋ ದೃಢ ನಿಶ್ಚಯ ಮಾಡ್ಬೇಕು” ಅಂತ ಅವ್ರಿಗೆ ಹೇಳಲಾಯ್ತು. ಎಡ್‌ಮಂಡ್‌ ಹೂಪರ್‌ ಅನ್ನೋ ಸಹೋದರ ಕೂಡ ಈ ಅಭಿಯಾನದಲ್ಲಿ ಭಾಗವಹಿಸಿದ್ರು. ಈ ಅಭಿಯಾನದಲ್ಲಿ ಭಾಗವಹಿಸಿದ ಎಷ್ಟೋ ಜನ್ರು ಅದೇ ಮೊದಲ ಬಾರಿಗೆ ಮನೆಯಿಂದ ಮನೆಗೆ ಸಾರಿದ್ದು ಅಂತ ಅವ್ರು ನೆನಪಿಸಿಕೊಳ್ತಾರೆ. “ಈ ಕೆಲ್ಸ ಮಾಡಿದಾಗ್ಲೇ ಇನ್ನೂ ಎಷ್ಟು ಕೆಲ್ಸ ಮಾಡಕ್ಕಿದೆ ಅಂತ ಅರ್ಥ ಆಗಿದ್ದು. ಅದಕ್ಕಿಂತ ಮುಂಚೆ ಅದ್ರ ಬಗ್ಗೆ ಏನೂ ಗೊತ್ತೇ ಇರಲಿಲ್ಲ” ಅಂತ ಆ ಸಹೋದರ ಹೇಳ್ತಾರೆ.

ಯುರೋಪಿನಲ್ಲಿ ಸಾರೋ ಕೆಲ್ಸ ಮತ್ತೆ ಶುರುವಾಯ್ತು

ಮೊದಲನೇ ಮಹಾಯುದ್ಧದ ಸಮಯದಲ್ಲಿ ಯುರೋಪಿನ ಅನೇಕ ದೇಶಗಳಲ್ಲಿನ ಬೈಬಲ್‌ ವಿದ್ಯಾರ್ಥಿಗಳನ್ನ ಸಂಪರ್ಕಿಸೋಕೆ ಆಗಿರಲಿಲ್ಲ. ಆದ್ರಿಂದ ಸಹೋದರ ರದರ್‌ಫರ್ಡ್‌ ಅಲ್ಲಿನ ಸಹೋದರ ಸಹೋದರಿಯರಿಗೆ ಧೈರ್ಯ ತುಂಬಿಸಬೇಕು ಮತ್ತು ಅಲ್ಲಿ ಸಾರೋ ಕೆಲ್ಸವನ್ನ ಪುನಃ ಶುರು ಮಾಡಬೇಕು ಅಂತ ಬಯಸಿದ್ರು. ಇದಕ್ಕಾಗಿ ಸಹೋದರ ರದರ್‌ಫರ್ಡ್‌ ಮತ್ತು ಬೇರೆ ನಾಲ್ಕು ಸಹೋದರರು 1920 ರ ಆಗಸ್ಟ್‌ 12 ರಂದು ಹೊರಟು ಬ್ರಿಟನ್‌ ಮತ್ತು ಬೇರೆ ಅನೇಕ ದೇಶಗಳಿಗೆ ಭೇಟಿ ನೀಡಿದ್ರು.

ಸಹೋದರ ರದರ್‌ಫರ್ಡ್‌ ಈಜಿಪ್ಟ್‌ನಲ್ಲಿ

ಸಹೋದರ ರದರ್‌ಫರ್ಡ್‌ ಬ್ರಿಟನ್‌ಗೆ ಹೋದಾಗ ಅಲ್ಲಿ 3 ಅಧಿವೇಶನಗಳನ್ನ ಮತ್ತು 12 ಸಾರ್ವಜನಿಕ ಕೂಟಗಳನ್ನ ನಡೆಸಲಾಯ್ತು. ಈ ಅಧಿವೇಶನ ಮತ್ತು ಕೂಟಗಳಿಗೆ ಒಟ್ಟು 50,000 ಜನ್ರು ಹಾಜರಾದ್ರು. ಸಹೋದರರ ಈ ಭೇಟಿಯ ಬಗ್ಗೆ ಕಾವಲಿನಬುರುಜುವಿನಲ್ಲಿ ಹೀಗೆ ತಿಳಿಸಲಾಗಿದೆ: “ಈ ಭೇಟಿಯಿಂದ ಸಹೋದರ ಸಹೋದರಿಯರಿಗೆ ಧೈರ್ಯ, ಪ್ರೋತ್ಸಾಹ ಸಿಗ್ತು. ಅವ್ರ ಮಧ್ಯೆ ಇದ್ದ ಪ್ರೀತಿ, ಐಕ್ಯತೆ ಇನ್ನೂ ಬಲವಾಯ್ತು. ಅವ್ರೆಲ್ಲ ಸೇರಿ ಸಾರಿದ್ರು, ಇದ್ರಿಂದ ಅವ್ರಿಗೆ ತುಂಬ ಖುಷಿ ಸಿಗ್ತು.” ಸಹೋದರ ರದರ್‌ಫರ್ಡ್‌ ಪ್ಯಾರಿಸ್‌ಗೆ ಹೋದಾಗ ಅವ್ರು ಮತ್ತೊಮ್ಮೆ, “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ” ಅನ್ನೋ ಭಾಷಣವನ್ನ ಕೊಟ್ರು. ಆ ಭಾಷಣ ಕೇಳಲು ಎಷ್ಟು ಜನ ಬಂದಿದ್ರು ಅಂದ್ರೆ ಸಭಾಂಗಣ ಜನ್ರಿಂದ ತುಂಬಿ ಹೋಗಿತ್ತು. ಆ ದಿನ 300 ಜನ ‘ಇದ್ರ ಬಗ್ಗೆ ಇನ್ನೂ ಹೆಚ್ಚು ತಿಳ್ಕೊಳ್ಳೋಕೆ ಇಷ್ಟಪಡ್ತೇವೆ’ ಅಂತ ಕೇಳಿಕೊಂಡ್ರು.

ಲಂಡನ್‌ನ ರಾಯಲ್‌ ಆಲ್ಬರ್ಟ್‌ ಸಭಾಂಗಣದಲ್ಲಿ ಕೊಡಲಿದ್ದ ಭಾಷಣದ ಬಗ್ಗೆ ಜನರಿಗೆ ತಿಳಿಸಲಿಕ್ಕಾಗಿ ಮಾಡಲಾದ ಪೋಸ್ಟರ್‌

ಮುಂದಿನ ವಾರಗಳಲ್ಲಿ ಸಹೋದರ ರದರ್‌ಫರ್ಡ್‌ ಮತ್ತು ಅವರ ಸಂಗಡಿಗರು ಅಥೆನ್ಸ್‌, ಕೈರೋ ಮತ್ತು ಜೆರುಸಲೇಮ್‌ಗೆ ಭೇಟಿ ನೀಡಿದ್ರು. ಈ ಸ್ಥಳಗಳಲ್ಲಿನ ಆಸಕ್ತ ಜನರು ಸಾಹಿತ್ಯಗಳನ್ನ ಪಡಕೊಳ್ಳಲಿಕ್ಕಾಗಿ ಸಹೋದರ ರದರ್‌ಫರ್ಡ್‌ ಜೆರುಸಲೇಮಿನ ಹತ್ತಿರದಲ್ಲಿರುವ ರಮಲ್ಲಾ ಅನ್ನೋ ಪಟ್ಟಣದಲ್ಲಿ ಬ್ರಾಂಚ್‌ ಆಫೀಸನ್ನ ಸ್ಥಾಪಿಸಿದ್ರು. ನಂತ್ರ ಅವ್ರು ಯುರೋಪಿಗೆ ವಾಪಸ್‌ ಹೋದ್ರು ಮತ್ತು ಮಧ್ಯ ಯುರೋಪಿನಲ್ಲಿ ಒಂದು ಆಫೀಸ್‌ ಅನ್ನು ಸ್ಥಾಪಿಸಿದ್ರು. ಅಲ್ಲಿ ಸಾಹಿತ್ಯವನ್ನ ಮುದ್ರಿಸಲಿಕ್ಕೆ ಬೇಕಾದಂಥ ಏರ್ಪಾಡನ್ನೂ ಮಾಡಿದ್ರು.

ಅನ್ಯಾಯವನ್ನ ಬಯಲುಪಡಿಸಲಾಯ್ತು

1920 ರ ಸೆಪ್ಟೆಂಬರ್‌ನಲ್ಲಿ ಬೈಬಲ್‌ ವಿದ್ಯಾರ್ಥಿಗಳು ಗೋಲ್ಡನ್‌ ಏಜ್‌ ಪತ್ರಿಕೆಯ 27 ನೇ ಸಂಚಿಕೆಯನ್ನ ಬಿಡುಗಡೆ ಮಾಡಿದ್ರು. ಇದು ಒಂದು ವಿಶೇಷ ಆವೃತ್ತಿಯಾಗಿತ್ತು. 1918 ರಲ್ಲಿ ದೇವ ಜನ್ರು ಯಾವೆಲ್ಲಾ ಹಿಂಸೆಯನ್ನ ಅನುಭವಿಸಿದ್ರು ಅಂತ ಈ ಆವೃತ್ತಿಯಲ್ಲಿ ತಿಳಿಸಲಾಗಿತ್ತು. ಈ ಹಿಂದೆ ತಿಳಿಸಲಾದ ಬ್ಯಾಟಲ್‌ಶಿಪ್‌ ಮುದ್ರಣಾಲಯದಲ್ಲಿ ಸಹೋದರರು ಹಗಲೂ ರಾತ್ರಿ ಕೆಲ್ಸ ಮಾಡಿ 40 ಲಕ್ಷಕ್ಕೂ ಹೆಚ್ಚಿನ ಪ್ರತಿಗಳನ್ನ ಮುದ್ರಿಸಿದರು.

ಪೊಲೀಸ್‌ ರೆಕಾರ್ಡ್‌ನಲ್ಲಿ ಎಮ ಮಾರ್ಟಿನ್‌ರವರ ಫೋಟೋ

ಯಾರೆಲ್ಲಾ ಈ ಪತ್ರಿಕೆಯನ್ನ ಓದಿದ್ರೋ ಅವ್ರಿಗೆ ಸಹೋದರಿ ಎಮ ಮಾರ್ಟಿನ್‌ರವರ ಕೇಸ್‌ ಬಗ್ಗೆನೂ ಗೊತ್ತಾಯ್ತು. ಈ ಸಹೋದರಿ ಕ್ಯಾಲಿಫೋರ್ನಿಯದ ಸ್ಯಾನ್‌ ಬರ್ನಾರ್ಡಿನೋದಲ್ಲಿ ಪಯನೀಯರರಾಗಿದ್ರು. 1918 ರ ಮಾರ್ಚ್‌ 17 ರಂದು ಬೈಬಲ್‌ ವಿದ್ಯಾರ್ಥಿಗಳ ಒಂದು ಚಿಕ್ಕ ಕೂಟಕ್ಕೆ ಹಾಜರಾಗಿದ್ರು. ಅಲ್ಲಿ ಅವ್ರಲ್ಲದೇ ಇನ್ನೂ ಮೂರು ಸಹೋದರರು ಹಾಜರಾಗಿದ್ರು. ಅವರ ಹೆಸರು ಇ. ಹ್ಯಾಮ್‌, ಇ. ಜೆ. ಸೋನೆನ್‌ಬರ್ಗ್‌ ಮತ್ತು ಇ. ಎ. ಸ್ಟೀವನ್ಸ್‌.

ಈ ಕೂಟಕ್ಕೆ ಒಬ್ಬ ವ್ಯಕ್ತಿ ಬಂದಿದ್ದ. ಆದ್ರೆ ಅವ್ನ ಉದ್ದೇಶ ಬೈಬಲನ್ನ ಕಲಿಯೋದಾಗಿರಲಿಲ್ಲ. ಅದ್ರ ಬಗ್ಗೆ ಅವ್ನು ಆಮೇಲೆ ಹೀಗೆ ತಿಳಿಸಿದನು: ‘ಸರ್ಕಾರಿ ವಕೀಲರ ಆಫೀಸಿನ ಆದೇಶದ ಮೇರೆಗೆ ನಾನು ಅಲ್ಲಿಗೆ ಹೋದೆ. ಅಲ್ಲಿಂದ ಕೆಲವು ಸಾಕ್ಷ್ಯಾಧಾರಗಳನ್ನ ತಗೊಂಡು ಬರೋದಕ್ಕೆ ನನ್ನನ್ನು ಕಳಿಸಲಾಗಿತ್ತು.’ ಅವ್ನಿಗೆ ಬೇಕಿದ್ದ ಸಾಕ್ಷ್ಯಾಧಾರ ಅಲ್ಲಿ ಸಿಕ್ತು. ಅದೇನಂದ್ರೆ ದ ಫಿನಿಷ್ಡ್‌ ಮಿಸ್ಟ್ರಿ ಪುಸ್ತಕದ ಒಂದು ಪ್ರತಿ. ಕೆಲವು ದಿನಗಳ ನಂತ್ರ ಸಹೋದರಿ ಮಾರ್ಟಿನ್‌ ಮತ್ತು ಆ ಮೂರು ಸಹೋದರರನ್ನ ಬಂಧಿಸಲಾಯ್ತು. ನಿಷೇಧಿಸಲಾಗಿದ್ದ ಪುಸ್ತಕವನ್ನ ಜನ್ರಿಗೆ ವಿತರಿಸೋ ಮೂಲಕ ದೇಶದ ಕಾನೂನನ್ನ ಮುರಿದಿದ್ದಾರೆ ಅನ್ನೋ ಆರೋಪವನ್ನ ಅವ್ರ ಮೇಲೆ ಹಾಕಲಾಯ್ತು.

ಎಮ ಮತ್ತು ಮೂರು ಸಹೋದರರು ಅಪರಾಧಿಗಳು ಅಂತ ನಿರ್ಧರಿಸಿ ಅವ್ರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಯ್ತು. ಅನೇಕ ಬಾರಿ ಮೇಲ್ಮನವಿ ಮಾಡಿದ್ರೂ ಅವ್ರ ಮನವಿಯನ್ನ ತಿರಸ್ಕರಿಸಲಾಯ್ತು ಮತ್ತು 1920 ರ ಮೇ 17 ರಂದು ಜೈಲಿಗೆ ಹಾಕಲಾಯ್ತು. ಆದ್ರೆ ಪರಿಸ್ಥಿತಿ ಹೀಗೇ ಮುಂದುವರಿಲಿಲ್ಲ. ಸ್ವಲ್ಪದರಲ್ಲೇ ಒಂದು ಒಳ್ಳೇ ವಿಷ್ಯ ನಡೀತು.

1920 ರ ಜೂನ್‌ 20 ರಂದು ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆದ ಒಂದು ಅಧಿವೇಶನದಲ್ಲಿ ಸಹೋದರ ರದರ್‌ಫರ್ಡ್‌ರವರು ಸಹೋದರಿ ಎಮ ಮತ್ತು ಮೂವರು ಸಹೋದರರಿಗೆ ಏನಾಯ್ತು ಅನ್ನೋದ್ರ ಬಗ್ಗೆ ಹೇಳಿದ್ರು. ಅಧಿವೇಶನಕ್ಕೆ ಹಾಜರಾಗಿದ್ದ ಸಹೋದರ ಸಹೋದರಿಯರು ಇದನ್ನ ಕೇಳಿಸಿಕೊಂಡಾಗ ತುಂಬ ಬೇಜಾರು ಮಾಡಿಕೊಂಡ್ರು ಮತ್ತು ಅವ್ರು ಅಮೆರಿಕದ ಅಧ್ಯಕ್ಷರಿಗೆ ಒಂದು ಟೆಲಿಗ್ರಾಂ ಅನ್ನು ಕಳುಹಿಸಿದ್ರು. ಆ ಟೆಲಿಗ್ರಾಂನಲ್ಲಿ ಹೀಗೆ ಬರೆಯಲಾಗಿತ್ತು: “ಕಾನೂನಿನ ಹೆಸ್ರಲ್ಲಿ ಶ್ರೀಮತಿ ಎಮರವರಿಗೆ ವಿಧಿಸಲಾಗಿರುವ ಶಿಕ್ಷೆ ಸರ್ಕಾರ ಮಾಡಿರೋ ಅನ್ಯಾಯ ಅಂತ ಅನಿಸ್ತಿದೆ. ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕಾರವನ್ನ ತಪ್ಪಾದ ರೀತಿಯಲ್ಲಿ ಉಪಯೋಗಿಸಿ ಶ್ರೀಮತಿ ಮಾರ್ಟಿನ್‌ರವರನ್ನ ಸುಳ್ಳಾದ ಕೇಸ್‌ನಲ್ಲಿ ಸಿಕ್ಕಿಹಾಕಿಸಿ ಅವ್ರನ್ನ ಜೈಲಿಗೆ ಕಳ್ಸಿದ್ದಾರೆ. ಇದು ತುಂಬ ದೊಡ್ಡ ತಪ್ಪು.”

ಮರುದಿನನೇ ಅಮೆರಿಕದ ಅಧ್ಯಕ್ಷರಾದ ವುಡ್ರೋ ವಿಲ್ಸನ್‌ರು ಸಹೋದರಿ ಮಾರ್ಟಿನ್‌ ಮತ್ತು ಆ ಮೂವರು ಸಹೋದರರ ಶಿಕ್ಷೆಯನ್ನ ರದ್ದು ಮಾಡಿದ್ರು ಮತ್ತು ಅವ್ರನ್ನ ಜೈಲಿಂದ ಬಿಡುಗಡೆ ಮಾಡಲಾಯ್ತು. ಹೀಗೆ ಅವ್ರಿಗಾದ ಅನ್ಯಾಯದಿಂದ ಮುಕ್ತಿ ಸಿಕ್ತು.

1920 ರ ಕೊನೆಯಲ್ಲಿ ಆ ವರ್ಷವಿಡೀ ನಡೆದ ಘಟನೆಗಳನ್ನ ನೆನಸಿಕೊಳ್ಳುವಾಗ ಬೈಬಲ್‌ ವಿದ್ಯಾರ್ಥಿಗಳಿಗೆ ತುಂಬ ಖುಷಿ ಆಯ್ತು. ಮುಖ್ಯ ಕಾರ್ಯಾಲಯದಲ್ಲಿ ಕೆಲಸ ಹೆಚ್ಚಾಗ್ತಾ ಹೋಯ್ತು. ನಿಜ ಕ್ರೈಸ್ತರು ಮೊದ್ಲಿಗಿಂತ ಹೆಚ್ಚು ಹುರುಪಿನಿಂದ, ಎಲ್ಲಾ ಮನುಷ್ಯರ ಸಮಸ್ಯೆಗಳಿಗೆ ದೇವರ ರಾಜ್ಯವೇ ಪರಿಹಾರ ಅಂತ ತಿಳಿಸ್ತಾ ಹೋದ್ರು. (ಮತ್ತಾ. 24:14) ಮುಂದಿನ ವರ್ಷ ಅಂದ್ರೆ 1921 ರಲ್ಲಿ ದೇವರ ರಾಜ್ಯದ ಸಾರೋ ಕೆಲಸ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಿತು.