ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 44

ನಿಮ್ಮ ಮಕ್ಕಳು ದೊಡ್ಡವರಾದ ಮೇಲೆ ಯೆಹೋವನ ಸೇವೆ ಮಾಡ್ತಾರಾ?

ನಿಮ್ಮ ಮಕ್ಕಳು ದೊಡ್ಡವರಾದ ಮೇಲೆ ಯೆಹೋವನ ಸೇವೆ ಮಾಡ್ತಾರಾ?

“ಯೇಸು ವಿವೇಕದಲ್ಲಿಯೂ ಶಾರೀರಿಕ ಬೆಳವಣಿಗೆಯಲ್ಲಿಯೂ ದೇವರ ಮತ್ತು ಮನುಷ್ಯರ ಅನುಗ್ರಹದಲ್ಲಿಯೂ ಪ್ರಗತಿಹೊಂದುತ್ತಾ ಹೋದನು.”—ಲೂಕ 2:52.

ಗೀತೆ 88 ಮಕ್ಕಳು—ದೇವರು ಕೊಡುವ ಹೊಣೆಗಾರಿಕೆ

ಕಿರುನೋಟ *

1. ಹೆತ್ತವರಾಗ್ಲಿ, ಮಕ್ಕಳಾಗ್ಲಿ, ಬೇರೆ ಯಾರೇ ಆಗ್ಲಿ ಯಾವ ಒಳ್ಳೇ ನಿರ್ಣಯ ಮಾಡ್ಬಹುದು?

ಹೆತ್ತವ್ರು ಮಾಡೋ ನಿರ್ಣಯಗಳು ಕೆಲವೊಮ್ಮೆ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತೆ. ಹೆತ್ತವ್ರು ತಪ್ಪಾದ ನಿರ್ಣಯ ಮಾಡಿದ್ರೆ ಮಕ್ಕಳು ಮುಂದೆ ಕಷ್ಟ ಅನುಭವಿಸಬೇಕಾಗುತ್ತೆ. ಒಂದ್ವೇಳೆ, ಒಳ್ಳೇ ನಿರ್ಣಯ ಮಾಡಿದ್ರೆ ಮಕ್ಕಳು ಜೀವನದಲ್ಲಿ ಸಂತೋಷವಾಗಿ, ನೆಮ್ಮದಿಯಿಂದ ಇರ್ತಾರೆ. ಅಪ್ಪ-ಅಮ್ಮ ಮಾತ್ರ ಅಲ್ಲ, ಮಕ್ಕಳೂ ನಿರ್ಣಯಗಳನ್ನ ಮಾಡ್ಬೇಕಾಗುತ್ತೆ. ಹೆತ್ತವರಾಗ್ಲಿ, ಮಕ್ಕಳಾಗ್ಲಿ, ಬೇರೆ ಯಾರೇ ಆಗ್ಲಿ ಮಾಡಬಹುದಾದಂಥ ಒಂದು ಒಳ್ಳೇ ನಿರ್ಣಯ ಯಾವುದಂದ್ರೆ ನಮ್ಮ ಪ್ರೀತಿಯ ತಂದೆ ಯೆಹೋವನ ಸೇವೆ ಮಾಡೋ ನಿರ್ಣಯವೇ ಆಗಿದೆ.—ಕೀರ್ತ. 73:28.

2. ಯೇಸು ಮತ್ತು ಅವನ ಹೆತ್ತವ್ರು ಯಾವ ಒಳ್ಳೇ ನಿರ್ಣಯಗಳನ್ನು ಮಾಡಿದ್ರು?

2 ಯೇಸುವಿನ ಹೆತ್ತವರಾದ ಯೋಸೇಫ ಮತ್ತು ಮರಿಯ ತಮ್ಮ ಮಕ್ಕಳು ದೊಡ್ಡವರಾದ ಮೇಲೆ ಯೆಹೋವನ ಸೇವೆ ಮಾಡ್ಬೇಕು ಅಂತ ಬಯಸಿದ್ರು. ಅವ್ರು ಸಹ ತಮ್ಮ ಜೀವನದಲ್ಲಿ ಯೆಹೋವನ ಸೇವೆಗೆ ಪ್ರಾಮುಖ್ಯತೆ ಕೊಟ್ರು. ಇದು ಅವ್ರು ಮಾಡಿದ ನಿರ್ಣಯಗಳಲ್ಲಿ ಎದ್ದುಕಾಣುತ್ತಿತ್ತು. (ಲೂಕ 2:40, 41, 52) ಯೇಸು ಕೂಡ ಒಳ್ಳೇ ನಿರ್ಣಯಗಳನ್ನು ಮಾಡಿದ. ಹಾಗಾಗಿ ಯೆಹೋವ ದೇವ್ರು ಬಯಸಿದ್ದನ್ನು ಅವ್ನಿಂದ ಮಾಡಕ್ಕಾಯ್ತು. (ಮತ್ತಾ. 4:1-10) ಯೇಸು ದೊಡ್ಡವನಾಗ್ತಾ ಹೋದಂತೆ ಒಳ್ಳೇ ವ್ಯಕ್ತಿಯಾದ. ಬೇರೆಯವ್ರನ್ನ ಕಂಡ್ರೆ ಅವನಲ್ಲಿ ಅನುಕಂಪ ಇತ್ತು. ನಿಷ್ಠಾವಂತನಾಗಿದ್ದ ಮತ್ತು ಅವನಿಗೆ ತುಂಬ ಧೈರ್ಯವಿತ್ತು. ಯೆಹೋವನನ್ನು ಪ್ರೀತಿಸೋ ಪ್ರತಿಯೊಬ್ಬ ಹೆತ್ತವ್ರಿಗೂ ತಮ್ಮ ಮಕ್ಕಳು ಯೇಸು ತರ ಇದ್ರೆ ಹೆಮ್ಮೆ ಅನ್ಸುತ್ತೆ, ಖುಷಿಪಡ್ತಾರೆ.

3. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ತೇವೆ?

3 ಈ ಲೇಖನದಲ್ಲಿ ನಾವು ಕೆಲ್ವು ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ತೇವೆ: ಯೆಹೋವನು ಯೇಸುವಿನ ವಿಷ್ಯದಲ್ಲಿ ಯಾವ ಒಳ್ಳೇ ನಿರ್ಣಯಗಳನ್ನು ಮಾಡಿದ್ನು? ಯೋಸೇಫ ಮತ್ತು ಮರಿಯ ಮಾಡಿದ ನಿರ್ಣಯಗಳಿಂದ ಕ್ರೈಸ್ತ ಹೆತ್ತವ್ರು ಯಾವ ಪಾಠಗಳನ್ನ ಕಲಿಬಹುದು? ಕ್ರೈಸ್ತ ಯುವಜನ್ರು ಯೇಸು ಮಾಡಿದ ನಿರ್ಣಯಗಳಿಂದ ಯಾವ ಪಾಠ ಕಲಿಬಹುದು?

ಯೆಹೋವನಿಂದ ಕಲಿಯಿರಿ

4. ಯೆಹೋವನು ಯೇಸು ವಿಷ್ಯದಲ್ಲಿ ಮುಖ್ಯವಾಗಿ ಯಾವ ಒಳ್ಳೇ ನಿರ್ಣಯ ಮಾಡಿದ್ನು?

4 ಯೆಹೋವನು ಯೇಸುಗಾಗಿ ಒಳ್ಳೇ ಹೆತ್ತವ್ರನ್ನು ಆಯ್ಕೆ ಮಾಡಿದ್ದನು. (ಮತ್ತಾ. 1:18-23; ಲೂಕ 1:26-38) ಇದು ನಮ್ಗೆ ಹೇಗೆ ಗೊತ್ತು? ಮರಿಯಳು ಹೃದಯಾಳದಿಂದ ಹೇಳಿದ ಮಾತುಗಳು ಬೈಬಲಿನಲ್ಲಿವೆ. ಈ ಮಾತುಗಳಿಂದ ಅವಳಿಗೆ ಯೆಹೋವನ ಮೇಲೆ ಮತ್ತು ಆತನ ವಾಕ್ಯದ ಮೇಲೆ ತುಂಬ ಪ್ರೀತಿ ಇತ್ತು ಅಂತ ಗೊತ್ತಾಗುತ್ತೆ. (ಲೂಕ 1:46-55) ಯೋಸೇಫನು ಯೆಹೋವ ಹೇಳಿದಂತೆಯೇ ಮಾಡಿದ. ಇದ್ರಿಂದ ಅವನಿಗೆ ಯೆಹೋವನ ಮೇಲೆ ಎಷ್ಟು ಭಯಭಕ್ತಿ ಇತ್ತು, ಆತನನ್ನು ಮೆಚ್ಚಿಸೋ ಬಯಕೆ ಎಷ್ಟಿತ್ತು ಅನ್ನೋದು ಗೊತ್ತಾಗುತ್ತೆ.—ಮತ್ತಾ. 1:24.

5-6. ಯೆಹೋವನು ತನ್ನ ಮಗ ಯಾವ ಕಷ್ಟಗಳನ್ನು ಅನುಭವಿಸುವಂತೆ ಬಿಟ್ಟನು?

5 ಯೆಹೋವನು ಯೇಸುಗಾಗಿ ಶ್ರೀಮಂತ ಹೆತ್ತವ್ರನ್ನ ಆಯ್ಕೆ ಮಾಡ್ಲಿಲ್ಲ ಅನ್ನೋದು ಗಮನಿಸಬೇಕಾದ ವಿಷ್ಯ. ಯೋಸೇಫ ಮತ್ತು ಮರಿಯ ಬಡವರಾಗಿದ್ರು. ಯೇಸು ಹುಟ್ಟಿದ ಮೇಲೆ ಅವ್ರು ಅರ್ಪಿಸಿದ ಕಾಣಿಕೆಯಿಂದ ಅದು ನಮಗೆ ಗೊತ್ತಾಗುತ್ತೆ. (ಲೂಕ 2:24) ಯೋಸೇಫ ಮರಗೆಲಸ ಮಾಡ್ತಿದ್ದ. ಬಹುಶಃ ಅವ್ನು ನಜರೇತ್‌ ಪಟ್ಟಣದಲ್ಲಿದ್ದ ತನ್ನ ಮನೆ ಪಕ್ಕದಲ್ಲೇ ಒಂದು ಚಿಕ್ಕ ಅಂಗಡಿಯನ್ನು ಇಟ್ಟಿರಬಹುದು. ಅವರತ್ರ ಹೆಚ್ಚು ಹಣ-ಆಸ್ತಿ ಇರಲಿಲ್ಲ ಅಂತ ಕಾಣುತ್ತೆ. ಅವ್ರು ಸರಳ ಜೀವನ ನಡೆಸ್ತಿದ್ದಿರಬಹುದು. ಯಾಕಂದ್ರೆ ಅವ್ರಿಗೆ ಕಡಿಮೆ ಅಂದ್ರೂ ಏಳು ಮಕ್ಕಳು ಇದ್ರು.—ಮತ್ತಾ. 13:55, 56.

6 ಯೆಹೋವನು ಯೇಸುನಾ ಕೆಲ್ವು ಅಪಾಯಗಳಿಂದ ಕಾಪಾಡಿದ್ನು. ಆದ್ರೆ ಕೆಲ್ವು ಕಷ್ಟಗಳನ್ನು ಅನುಭವಿಸುವಂತೆಯೂ ಬಿಟ್ಟನು. (ಮತ್ತಾ. 2:13-15) ಉದಾಹರಣೆಗೆ, ಯೇಸುವಿನ ಸಂಬಂಧಿಕರು ಅವನ ಮೇಲೆ ನಂಬಿಕೆ ಇಡ್ಲಿಲ್ಲ. ಸ್ವಂತ ಕುಟುಂಬದವ್ರೇ ಅವನನ್ನ ಮೆಸ್ಸೀಯ ಅಂತ ಒಪ್ಪದೇ ಇದ್ದಾಗ ಅವನಿಗೆ ಎಷ್ಟು ಬೇಜಾರಾಗಿರಬಹುದಲ್ವಾ? (ಮಾರ್ಕ 3:21; ಯೋಹಾ. 7:5) ಬಹುಶಃ ಯೇಸು ಚಿಕ್ಕವನಿರುವಾಗ್ಲೇ ಅವನ ಸಾಕುತಂದೆ ಯೋಸೇಫ ತೀರಿಹೋಗಿರಬೇಕು. ಆಗ ಯೇಸು ತನ್ನ ತಂದೆಯ ಸಾವಿನ ನೋವನ್ನು ಅನುಭವಿಸೋದ್ರ ಜೊತೆಗೆ ತಂದೆಯ ವ್ಯಾಪಾರ-ವ್ಯವಹಾರವನ್ನೂ ನೋಡಿಕೊಳ್ಬೇಕಾಗಿ ಬಂದಿರಬಹುದು. ಯಾಕಂದ್ರೆ ಮನೆಗೆ ಅವನೇ ಹಿರೀಮಗನಾಗಿದ್ದ. (ಮಾರ್ಕ 6:3) ಯೇಸು ದೊಡ್ಡವನಾಗ್ತಾ ಹೋದಂತೆ ಕುಟುಂಬವನ್ನು ನೋಡಿಕೊಳ್ಳೋಕೆ ಮತ್ತು ಜವಾಬ್ದಾರಿಗಳನ್ನ ಚೆನ್ನಾಗಿ ನಿರ್ವಹಿಸೋಕೆ ಕಲಿತಿರುತ್ತಾನೆ. ಕುಟುಂಬದ ಎಲ್ಲ ಅಗತ್ಯಗಳನ್ನು ಪೂರೈಸೋಕೆ ಅವನು ಕಷ್ಟಪಟ್ಟು ಕೆಲ್ಸ ಮಾಡಿರುತ್ತಾನೆ. ಹಾಗಾಗಿ, ದಿನಪೂರ್ತಿ ಕೆಲ್ಸ ಮಾಡಿ ಬಂದಾಗ ಎಷ್ಟು ಸುಸ್ತಾಗುತ್ತೆ ಅನ್ನೋದು ಅವನಿಗೆ ಚೆನ್ನಾಗಿ ಗೊತ್ತಿತ್ತು.

ಹೆತ್ತವ್ರೇ, ನಿಮ್ಮ ಮಕ್ಕಳಿಗೆ ಜೀವನದಲ್ಲಿ ಕಷ್ಟಗಳು ಬಂದಾಗ ಅವ್ರು ಬೈಬಲಿಂದ ಹೇಗೆ ಸಹಾಯ ಪಡ್ಕೊಬಹುದು ಅನ್ನೋದನ್ನ ಕಲಿಸಿ (ಪ್ಯಾರ 7 ನೋಡಿ) *

7. (ಎ) ಮಕ್ಕಳನ್ನ ಬೆಳೆಸೋ ವಿಷ್ಯದಲ್ಲಿ ದಂಪತಿಗಳು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಬೇಕು? (ಬಿ) ಜ್ಞಾನೋಕ್ತಿ 2:1-6 ರ ಪ್ರಕಾರ ಮಕ್ಕಳು ಏನು ಮಾಡೋಕೆ ಹೆತ್ತವ್ರು ಕಲಿಸಬೇಕು?

7 ನಿಮ್ಗೆ ಮದ್ವೆಯಾಗಿದ್ದು ಮಕ್ಕಳಾಗಬೇಕು ಅಂತ ಆಸೆ ಇದ್ರೆ, ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ: ‘ನಾವು ದೀನ ವ್ಯಕ್ತಿಗಳಾ? ಯೆಹೋವನನ್ನ ಪ್ರೀತಿಸ್ತೇವಾ? ಆತನ ವಾಕ್ಯ ಹೇಳೋ ತರ ನಡ್ಕೊಳ್ತೇವಾ? ನಮ್ಗೆ ಮಗುವಾದ್ರೆ ಅದನ್ನ ಒಳ್ಳೇ ರೀತಿಯಲ್ಲಿ ಬೆಳೆಸ್ತೇವೆ ಅಂತ ಯೆಹೋವ ನಮ್ಮ ಮೇಲೆ ಭರವಸೆ ಇಡೋಕಾಗುತ್ತಾ? ನಾವು ಆ ತರ ಇದ್ದೀವಾ?’ (ಕೀರ್ತ. 127:3, 4) ಒಂದ್ವೇಳೆ ನಿಮಗೆ ಮಕ್ಕಳಿರೋದಾದ್ರೆ ಈ ಪ್ರಶ್ನೆಗಳನ್ನು ಕೇಳ್ಕೊಳ್ಳಿ: ‘ಕಷ್ಟಪಟ್ಟು ದುಡಿಯೋದು ಯಾಕೆ ಒಳ್ಳೇದು ಅಂತ ಮಕ್ಕಳಿಗೆ ಕಲಿಸ್ತಿದ್ದೇನಾ? (ಪ್ರಸಂ. 3:12, 13) ಸೈತಾನನ ಲೋಕದಿಂದ ನನ್ನ ಮಕ್ಕಳನ್ನ ಕಾಪಾಡೋಕೆ ನನ್ನಿಂದಾದ ಪ್ರಯತ್ನ ಮಾಡ್ತಿದ್ದೇನಾ? ಅಂದ್ರೆ ಅವ್ರಿಗೆ ಎದುರಾಗೋ ದೌರ್ಜನ್ಯಗಳಿಂದ, ಸೈತಾನನ ಲೋಕದ ಕೆಟ್ಟ ಪ್ರಭಾವಗಳಿಂದ ಅವ್ರನ್ನ ಕಾಪಾಡ್ತಿದ್ದೀನಾ?’ (ಜ್ಞಾನೋ. 22:3) ನೀವು ಮಕ್ಕಳ ಹಿಂದೆನೇ ಇದ್ದು ಅವ್ರನ್ನು ಎಲ್ಲಾ ಸಮಸ್ಯೆಗಳಿಂದ ತಪ್ಪಿಸೋಕಾಗಲ್ಲ. ಆದ್ರೆ ಅವ್ರ ಜೀವನದಲ್ಲಿ ಕಷ್ಟಗಳು ಎದುರಾದಾಗ ಅವನ್ನು ಜಯಿಸೋಕೆ ಬೈಬಲಿಂದ ಹೇಗೆ ಸಹಾಯ ಪಡ್ಕೊಳ್ಳಬಹುದು ಅನ್ನೋದನ್ನು ಪ್ರೀತಿಯಿಂದ ಕಲಿಸ್ತಾ ಇರಿ. (ಜ್ಞಾನೋಕ್ತಿ 2:1-6 ಓದಿ.) ಉದಾಹರಣೆಗೆ, ಸಂಬಂಧಿಕರಲ್ಲಿ ಒಬ್ರು ಯೆಹೋವನ ಆರಾಧನೆಯನ್ನ ನಿಲ್ಲಿಸಿಬಿಟ್ರೆ ಆಗ ನಾವು ಯೆಹೋವನಿಗೆ ನಿಷ್ಠರಾಗಿ ಉಳಿಯೋದು ಯಾಕೆ ಒಳ್ಳೇದು ಅಂತ ಮಕ್ಕಳಿಗೆ ದೇವರ ವಾಕ್ಯದಿಂದ ಕಲಿಸಿ. (ಕೀರ್ತ. 31:23) ಅಥ್ವಾ ಕುಟುಂಬದಲ್ಲಿ ಒಬ್ರು ತೀರಿಹೋದ್ರೆ ಆ ದುಃಖವನ್ನು ಸಹಿಸಿಕೊಳ್ಳೋಕೆ, ಸಮಾಧಾನ ಮಾಡ್ಕೊಳ್ಳೋಕೆ ಸಹಾಯ ಮಾಡೋ ಬೈಬಲ್‌ ವಚನಗಳನ್ನ ಮಕ್ಕಳಿಗೆ ತೋರಿಸಿ.—2 ಕೊರಿಂ. 1:3, 4; 2 ತಿಮೊ. 3:16.

ಯೋಸೇಫ ಮತ್ತು ಮರಿಯಳಿಂದ ಕಲಿಯಿರಿ

8. ಧರ್ಮೋಪದೇಶಕಾಂಡ 6:6, 7 ರಲ್ಲಿರೋ ಯಾವ ಸಲಹೆಯನ್ನು ಯೋಸೇಫ ಮತ್ತು ಮರಿಯ ಪಾಲಿಸಿದ್ರು?

8 ಮಕ್ಕಳನ್ನು ಹೇಗೆ ಬೆಳೆಸ್ಬೇಕು ಅಂತ ಯೆಹೋವನು ಹೆತ್ತವ್ರಿಗೆ ಕೊಟ್ಟ ಸಲಹೆ ಪ್ರಕಾರನೇ ಯೋಸೇಫ ಮತ್ತು ಮರಿಯ ಯೇಸುವನ್ನು ಬೆಳೆಸಿದ್ರು. ಹಾಗಾಗಿ ಯೇಸು ದೊಡ್ಡವನಾದ ಮೇಲೆ ಯೆಹೋವ ಮೆಚ್ಚುವಂಥ ವ್ಯಕ್ತಿಯಾದ. (ಧರ್ಮೋಪದೇಶಕಾಂಡ 6:6, 7 ಓದಿ.) ಯೋಸೇಫ ಮತ್ತು ಮರಿಯಳಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಅದೇ ಪ್ರೀತಿಯನ್ನ ತಮ್ಮ ಮಕ್ಕಳ ಹೃದಯದಲ್ಲೂ ಬೆಳೆಸಲು ಅವ್ರಿಬ್ರೂ ಪೂರ್ಣ ಪ್ರಯತ್ನ ಮಾಡಿದ್ರು.

9. ಯೋಸೇಫ ಮತ್ತು ಮರಿಯ ಆರಾಧನೆಯ ವಿಷ್ಯದಲ್ಲಿ ಯಾವ ಮುಖ್ಯ ನಿರ್ಣಯ ಮಾಡಿದ್ರು?

9 ಯೋಸೇಫ ಮತ್ತು ಮರಿಯ ತಮ್ಮ ಮಕ್ಕಳ ಜೊತೆ ತಪ್ಪದೇ ಯೆಹೋವನ ಆರಾಧನೆ ಮಾಡ್ಬೇಕಂತ ನಿರ್ಣಯಿಸಿದ್ರು. ಪ್ರತಿವಾರ ಅವ್ರು ಮಕ್ಕಳನ್ನು ನಜರೇತಿನಲ್ಲಿದ್ದ ಸಭಾಮಂದಿರಕ್ಕೆ ಕರಕೊಂಡು ಹೋಗ್ತಿದ್ರು ಮತ್ತು ವರ್ಷದಲ್ಲಿ ಒಂದು ಸಲ ನಡಿತಿದ್ದ ಪಸ್ಕ ಹಬ್ಬವನ್ನು ಆಚರಿಸೋಕೆ ಯೆರೂಸಲೇಮಿಗೆ ಕರಕೊಂಡು ಹೋಗ್ತಿದ್ರು. (ಲೂಕ 2:41; 4:16) ಹೀಗೆ ಯೆರೂಸಲೇಮ್‌ಗೆ ಪ್ರಯಾಣ ಮಾಡ್ವಾಗ ಬಹುಶಃ ಅವ್ರು, ಹಿಂದೆ ಇದ್ದ ಯೆಹೋವನ ಜನ್ರಿಗೆ ಏನೆಲ್ಲಾ ಆಯ್ತು ಅಂತ ಯೇಸುಗೆ ಮತ್ತು ತಮ್ಮ ಉಳಿದ ಮಕ್ಕಳಿಗೆ ವಿವರಿಸಿರಬಹುದು. ದಾರಿ ಮಧ್ಯದಲ್ಲಿ ಒಂದ್ವೇಳೆ ಬೈಬಲಿನಲ್ಲಿ ತಿಳಿಸಿರೋ ಸ್ಥಳಗಳು ಸಿಕ್ಕರೆ ಅಲ್ಲಿಗೂ ಭೇಟಿ ನೀಡಿರಬಹುದು. ಅವ್ರ ಕುಟುಂಬ ದೊಡ್ಡದಾಗ್ತಾ ಹೋದಂತೆ ಈ ಒಳ್ಳೇ ರೂಢಿಗಳನ್ನ ಮುಂದುವರಿಸೋಕೆ ಕಷ್ಟ ಆಗಿರಬಹುದು. ಆದ್ರೂ ಅವ್ರದನ್ನು ಮಾಡಿದ್ರು. ಇದ್ರಿಂದ ಅವ್ರಿಗೆ ಒಳ್ಳೇ ಪ್ರತಿಫಲ ಸಿಕ್ತು. ಯೋಸೇಫ ಮತ್ತು ಮರಿಯ ಯೆಹೋವನ ಆರಾಧನೆಗೆ ಮೊದಲ ಸ್ಥಾನ ಕೊಟ್ಟಿದ್ರಿಂದ ಅವ್ರ ಮಕ್ಕಳು ಸಹ ಯೆಹೋವನಿಗೆ ಆಪ್ತರಾಗೋಕೆ ಸಾಧ್ಯವಾಯ್ತು.

10. ಹೆತ್ತವ್ರು ಯೋಸೇಫ ಮತ್ತು ಮರಿಯಳಿಂದ ಯಾವ ಪಾಠ ಕಲಿಬಹುದು?

10 ಯೆಹೋವನ ಮೇಲೆ ಭಯಭಕ್ತಿ ಇರೋ ಹೆತ್ತವ್ರು ಯೋಸೇಫ ಮತ್ತು ಮರಿಯಳಿಂದ ಯಾವ ಪಾಠ ಕಲಿಬಹುದು? ನೀವು ಯೆಹೋವನನ್ನು ತುಂಬ ಪ್ರೀತಿಸ್ತೀರಿ ಅನ್ನೋದನ್ನ ನಿಮ್ಮ ನಡೆನುಡಿಯಲ್ಲಿ ಮಕ್ಕಳಿಗೆ ತೋರಿಸಿ. ಇದು ತುಂಬ ಮುಖ್ಯ. ನೀವು ಅವ್ರಿಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆ ಯೆಹೋವನನ್ನು ಪ್ರೀತಿಸೋಕೆ ಅವ್ರಿಗೆ ಕಲಿಸೋದೇ ಆಗಿದೆ. ತಪ್ಪದೇ ಬೈಬಲ್‌ ಓದುವ, ಪ್ರಾರ್ಥನೆ ಮಾಡುವ, ಕೂಟಗಳಿಗೆ ಮತ್ತು ಸೇವೆಗೆ ಹೋಗುವಂಥ ಒಳ್ಳೇ ರೂಢಿಗಳನ್ನ ಅವ್ರಲ್ಲಿ ಬೆಳೆಸಿ. ಯಾಕಂದ್ರೆ ಮುಂದೆ ಅವುಗಳಿಂದಲೇ ಅವ್ರಿಗೆ ಪ್ರಯೋಜನ ಸಿಗುತ್ತೆ. (1 ತಿಮೊ. 6:6) ಆದ್ರೆ ಅದರರ್ಥ ನಿಮ್ಮ ಮಕ್ಕಳಿಗೆ ಹಣ ಅಥ್ವಾ ಅಗತ್ಯವಿರೋ ವಸ್ತುಗಳನ್ನ ಕೊಡಲೇಬಾರ್ದು ಅಂತಲ್ಲ. ಅವುಗಳ ಅಗತ್ಯನೂ ಇರುತ್ತೆ. (1 ತಿಮೊ. 5:8) ಆದ್ರೆ ಸೈತಾನನ ಈ ಲೋಕ ನಾಶ ಆಗ್ವಾಗ ಅದ್ರಿಂದ ತಪ್ಪಿಸಿಕೊಳ್ಳೋಕೆ ಮತ್ತು ದೇವರ ರಾಜ್ಯಕ್ಕೆ ಹೋಗೋಕೆ ನಿಮ್ಮ ಮಕ್ಕಳಿಗೆ ಸಹಾಯ ಮಾಡೋದು ಹಣ-ಆಸ್ತಿ ಅಲ್ಲ, ಯೆಹೋವನೊಟ್ಟಿಗಿರೋ ಆಪ್ತ ಸಂಬಂಧನೇ ಅನ್ನೋದನ್ನ ನೆನಪಿಡಿ. *ಯೆಹೆ. 7:19; 1 ತಿಮೊ. 4:8.

ಅನೇಕ ಕ್ರೈಸ್ತ ಹೆತ್ತವ್ರು ತಮ್ಮ ಮಕ್ಕಳಿಗಾಗಿ ಒಳ್ಳೇ ನಿರ್ಣಯಗಳನ್ನ ಮಾಡೋದು ನೋಡ್ವಾಗ ತುಂಬ ಖುಷಿಯಾಗುತ್ತೆ (ಪ್ಯಾರ 11 ನೋಡಿ) *

11. (ಎ) ಮಕ್ಕಳನ್ನು ಬೆಳೆಸೋ ವಿಷ್ಯದಲ್ಲಿ ಒಳ್ಳೇ ನಿರ್ಣಯಗಳನ್ನು ಮಾಡೋಕೆ ಹೆತ್ತವ್ರಿಗೆ 1 ತಿಮೊತಿ 6:17-19 ರಲ್ಲಿರೋ ಸಲಹೆ ಹೇಗೆ ಮಾಡುತ್ತೆ? (ಬಿ) ನಿಮ್ಮ ಕುಟುಂಬಕ್ಕಾಗಿ ನೀವು ಯಾವ ಗುರಿಗಳನ್ನು ಇಡ್ಬಹುದು ಮತ್ತು ಇದ್ರಿಂದ ನಿಮ್ಗೆ ಯಾವ ಆಶೀರ್ವಾದಗಳು ಸಿಗಬಹುದು? (“ ನೀವು ಯಾವ ಗುರಿಗಳನ್ನ ಮುಟ್ಟಬೇಕಂತಿದ್ದೀರಿ?” ಚೌಕ ನೋಡಿ.)

11 ಮಕ್ಕಳು ಯೆಹೋವನಿಗೆ ಆಪ್ತರಾಗಬೇಕಂತ ಅನೇಕ ಕ್ರೈಸ್ತ ಹೆತ್ತವ್ರು ಒಳ್ಳೇ ನಿರ್ಣಯಗಳನ್ನ ಮಾಡ್ತಾರೆ. ಇದನ್ನು ನೋಡ್ವಾಗ ತುಂಬ ಖುಷಿ ಆಗುತ್ತೆ! ಅವ್ರು ತಮ್ಮ ಮಕ್ಕಳ ಜೊತೆ ಸೇರಿ ಯೆಹೋವನ ಆರಾಧನೆಯನ್ನ ತಪ್ಪದೇ ಮಾಡ್ತಾರೆ. ಅವ್ರನ್ನ ಕೂಟಗಳಿಗೆ, ಅಧಿವೇಶನಗಳಿಗೆ ಕರಕೊಂಡು ಹೋಗ್ತಾರೆ. ಒಟ್ಟಿಗೆ ಸೇವೆ ಮಾಡ್ತಾರೆ. ಕೆಲವು ಹೆತ್ತವ್ರು ತಮ್ಮ ಮಕ್ಕಳ ಜೊತೆ ಹೆಚ್ಚು ಸೇವೆ ಮಾಡಿರದ ಟೆರಿಟೊರಿಗಳಿಗೆ ಹೋಗಿ ಸುವಾರ್ತೆ ಸಾರುತ್ತಾರೆ. ಇನ್ನು ಕೆಲವ್ರು ಬೆತೆಲ್‌ಗೆ ಭೇಟಿ ನೀಡ್ತಾರೆ ಅಥ್ವಾ ಯೆಹೋವನ ಸಂಘಟನೆಯಲ್ಲಿ ನಡೆಯೋ ನಿರ್ಮಾಣ ಕೆಲ್ಸಕ್ಕೆ ಕೈಜೋಡಿಸ್ತಾರೆ. ಇಂಥ ಚಟುವಟಿಕೆಗಳಲ್ಲಿ ಭಾಗವಹಿಸೋಕೆ ಅವ್ರು ಹಣ ಖರ್ಚು ಮಾಡ್ಬೇಕಾಗುತ್ತೆ ಮತ್ತು ಕೆಲವೊಂದು ಸಮಸ್ಯೆಗಳೂ ಎದುರಾಗಬಹುದು. ಆದ್ರೆ ಅವ್ರು ಇದಕ್ಕೋಸ್ಕರ ಮಾಡೋ ತ್ಯಾಗಗಳಿಗಿಂತ ಅವ್ರಿಗೆ ಯೆಹೋವನಿಂದ ಸಿಗೋ ಆಶೀರ್ವಾದಗಳೇ ಹೆಚ್ಚು ಅನ್ನೋದ್ರಲ್ಲಿ ಸಂಶಯವೇ ಇಲ್ಲ. (1 ತಿಮೊತಿ 6:17-19 ಓದಿ.) ಇಂಥ ಕುಟುಂಬದಲ್ಲಿ ಬೆಳೆಯೋ ಹೆಚ್ಚಿನ ಮಕ್ಕಳು ದೊಡ್ಡವರಾದ ಮೇಲೂ ಈ ಒಳ್ಳೇ ರೂಢಿಗಳನ್ನ ಮುಂದುವರಿಸಿಕೊಂಡು ಹೋಗ್ತಾರೆ ಮತ್ತು ತಮ್ಮ ಹೆತ್ತವ್ರು ಒಳ್ಳೇ ರೀತಿ ಬೆಳೆಸಿದ್ದಕ್ಕೆ ಖುಷಿಪಡ್ತಾರೆ! *ಜ್ಞಾನೋ. 10:22.

ಯೇಸುವಿನಿಂದ ಕಲಿಯಿರಿ

12. ಯೇಸು ದೊಡ್ಡವನಾದ ಮೇಲೆ ಏನು ಮಾಡ್ಬೇಕಿತ್ತು?

12 ಯೇಸುವಿನ ತಂದೆ ಯೆಹೋವ ಯಾವಾಗ್ಲೂ ಒಳ್ಳೇ ನಿರ್ಣಯಗಳನ್ನೇ ಮಾಡ್ತಾನೆ ಮತ್ತು ಭೂಮಿಯಲ್ಲಿದ್ದ ಯೇಸುವಿನ ಹೆತ್ತವರಾದ ಯೋಸೇಫ ಮತ್ತು ಮರಿಯ ಕೂಡ ಒಳ್ಳೇ ನಿರ್ಣಯಗಳನ್ನೇ ಮಾಡಿದ್ರು. ಹಾಗಿದ್ರೂ ಯೇಸು ದೊಡ್ಡವನಾದ ಮೇಲೆ ಅವನಾಗಿಯೇ ನಿರ್ಣಯಗಳನ್ನ ಮಾಡ್ಬೇಕಿತ್ತು. (ಗಲಾ. 6:5) ನಮ್ಮ ತರನೇ ಯೇಸುಗೂ ತನಗೇನು ಇಷ್ಟನೋ ಅದನ್ನೇ ಮಾಡೋ ಸ್ವಾತಂತ್ರ್ಯ ಇತ್ತು. ಅವನು ಬೇಕಿದ್ರೆ ತನ್ನ ಸ್ವಂತ ಇಷ್ಟದ ಪ್ರಕಾರ ನಡ್ಕೊಬಹುದಿತ್ತು. ಆದ್ರೆ ಹಾಗೆ ಮಾಡದೆ ಯೆಹೋವನು ಮೆಚ್ಚೋ ತರ ನಡಕೊಂಡ. ಯೆಹೋವನಿಗೆ ಯಾವಾಗ್ಲೂ ಆಪ್ತನಾಗಿರೋ ನಿರ್ಣಯ ಮಾಡಿದ. (ಯೋಹಾ. 8:29) ಯೇಸು ಯಾವ ನಿರ್ಣಯಗಳನ್ನ ಮಾಡಿದ ಮತ್ತು ಅದ್ರಿಂದ ಈಗಿನ ಯುವಜನ್ರು, ಮಕ್ಕಳು ಏನು ಕಲಿಬಹುದು ಅಂತ ನೋಡೋಣ.

ಮಕ್ಕಳೇ, ನಿಮ್ಮ ಹೆತ್ತವ್ರಿಂದ ಕಲಿಯಿರಿ (ಪ್ಯಾರ 13 ನೋಡಿ) *

13. ಯೇಸು ಚಿಕ್ಕವನಿಂದ್ಲೇ ಏನು ಮಾಡಿದ?

13 ಯೇಸು ಚಿಕ್ಕವನಿದ್ದಾಗ ಅಪ್ಪ ಅಮ್ಮನ ಮಾತು ಕೇಳ್ತಿದ್ದ. ಅವ್ರ ಮಾತನ್ನು ಯಾವತ್ತೂ ಮೀರಿ ನಡೆಯಲಿಲ್ಲ. ಅವ್ರಿಗಿಂತ ತನಗೇ ಹೆಚ್ಚು ಗೊತ್ತು ಅಂತನೂ ನೆನಸಲಿಲ್ಲ. ಬದ್ಲಿಗೆ, “ಅವರಿಗೆ ಅಧೀನನಾಗಿ ಮುಂದುವರಿದನು.” (ಲೂಕ 2:51) ಅವನು ಮನೆಗೆ ಹಿರೀ ಮಗನಾಗಿದ್ರಿಂದ ಅವ್ನಿಗೆ ಕೆಲವು ಜವಾಬ್ದಾರಿಗಳಿದ್ದವು. ಅವನ್ನು ಖಂಡಿತ ಚೆನ್ನಾಗಿ ನಿರ್ವಹಿಸಿರ್ತಾನೆ. ಮನೆಯ ಖರ್ಚುವೆಚ್ಚಗಳಿಗಾಗಿ ತನ್ನ ಕೈಲಾದಷ್ಟು ಸಹಾಯ ಮಾಡಲು ಸಾಕುತಂದೆ ಯೋಸೇಫನಿಂದ ಮರಗೆಲಸ ಕಲಿತಿರುತ್ತಾನೆ. ಅದನ್ನ ಕಲಿಯೋಕೆ ತುಂಬ ಪ್ರಯಾಸಪಟ್ಟಿರ್ತಾನೆ.

14. ದೇವರ ವಾಕ್ಯವನ್ನು ಯೇಸು ಚೆನ್ನಾಗಿ ಅಧ್ಯಯನ ಮಾಡುತ್ತಿದ್ದ ಅಂತ ಯಾಕೆ ಹೇಳಬಹುದು?

14 ಯೇಸುವಿನ ಅಪ್ಪ ಅಮ್ಮ ಅವನ ಅದ್ಭುತ ಜನನದ ಬಗ್ಗೆ ಮತ್ತು ಅವನ ಕುರಿತು ದೇವದೂತರು, ನಂಬಿಗಸ್ತ ದೇವಸೇವಕರು ಹೇಳಿದ ವಿಷ್ಯಗಳ ಬಗ್ಗೆ ಅವ್ನಿಗೆ ತಿಳ್ಸಿರಬಹುದು. (ಲೂಕ 2:8-19, 25-38) ಯೇಸು ಅವ್ರು ತಿಳ್ಸಿದ ವಿಷ್ಯವನ್ನಷ್ಟೇ ಕೇಳಿ ಸುಮ್ಮನಾಗಲಿಲ್ಲ. ಸ್ವತಃ ಅವನು ಕೂಡ ದೇವರ ವಾಕ್ಯವನ್ನು ಚೆನ್ನಾಗಿ ಅಧ್ಯಯನ ಮಾಡಿದ. ಇದು ನಮಗೆ ಹೇಗೆ ಗೊತ್ತು? ಯೆರೂಸಲೇಮಿನ ದೇವಾಲಯಲ್ಲಿದ್ದ ಬೋಧಕರು ಯೇಸುವಿನ ‘ತಿಳುವಳಿಕೆಗೂ ಉತ್ತರಗಳಿಗೂ ಆಶ್ಚರ್ಯಪಟ್ಟರು.’ ಆಗ ಅವನಿಗೆ ಬರೀ 12 ವರ್ಷ! (ಲೂಕ 2:46, 47) ಯೇಸು ಅಷ್ಟು ಚಿಕ್ಕ ವಯಸ್ಸಲ್ಲೇ ದೇವರ ವಾಕ್ಯವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದ ಮತ್ತು ಯೆಹೋವನೇ ತನ್ನ ತಂದೆ ಅಂತ ಅರ್ಥಮಾಡಿಕೊಂಡಿದ್ದ.—ಲೂಕ 2:42, 43, 49.

15. ಯೇಸು ಯೆಹೋವನ ಇಷ್ಟವನ್ನೇ ಮಾಡಬೇಕನ್ನೋ ನಿರ್ಣಯ ಮಾಡಿದ್ದ ಅಂತ ನಮಗೆ ಹೇಗೆ ಗೊತ್ತು?

15 ಯೆಹೋವ ತನ್ನಿಂದ ಏನು ಬಯಸ್ತಾನೆ ಅನ್ನೋದನ್ನ ಯೇಸು ಅರ್ಥ ಮಾಡಿಕೊಂಡಾಗ ಆತನ ಇಷ್ಟವನ್ನೇ ಮಾಡಬೇಕು ಅಂತ ನಿರ್ಣಯಿಸಿದ. (ಯೋಹಾ. 6:38) ಯೆಹೋವನ ಇಷ್ಟದ ಪ್ರಕಾರ ನಡಕೊಂಡ್ರೆ ತುಂಬ ಜನ ತನ್ನನ್ನ ದ್ವೇಷಿಸ್ತಾರೆ, ಅವ್ರ ದ್ವೇಷ-ವಿರೋಧನ ಎದುರು ಹಾಕಿಕೊಳ್ಳೋದು ಅಷ್ಟು ಸುಲಭ ಅಲ್ಲ ಅಂತ ಯೇಸುಗೆ ಗೊತ್ತಿತ್ತು. ಆದ್ರೂ ಅವನು ಯೆಹೋವನ ಇಷ್ಟದಂತೆಯೇ ನಡಕೊಂಡ. ಕ್ರಿ.ಶ. 29 ರಲ್ಲಿ ಯೇಸು ದೀಕ್ಷಾಸ್ನಾನ ತಗೊಂಡಾಗ ಯೆಹೋವ ತನ್ನಿಂದ ಬಯಸುವುದನ್ನು ಮಾಡೋದೇ ಅವನ ಜೀವನದ ಮುಖ್ಯ ಉದ್ದೇಶವಾಗಿತ್ತು. (ಇಬ್ರಿ. 10:5-7) ಯಾತನಾ ಕಂಬದಲ್ಲಿ ನರಳುತ್ತಿರುವಾಗ್ಲೂ ತನ್ನ ತಂದೆಯ ಇಷ್ಟದ ಪ್ರಕಾರನೇ ನಡ್ಕೊಂಡ.—ಯೋಹಾ. 19:30.

16. ಮಕ್ಕಳು ಯೇಸುವಿನಿಂದ ಯಾವ ಪಾಠ ಕಲಿಬಹುದು?

16 ಅಪ್ಪ ಅಮ್ಮನ ಮಾತು ಕೇಳಿ. ಯೋಸೇಫ ಮತ್ತು ಮರಿಯಳ ತರ ನಿಮ್ಮ ಹೆತ್ತವರೂ ಅಪರಿಪೂರ್ಣರೇ. ಆದ್ರೂ ನಿಮ್ಮನ್ನು ಸಂರಕ್ಷಿಸೋಕೆ, ನಿಮಗೆ ಕಲಿಸೋಕೆ ಯೆಹೋವನು ಅವ್ರನ್ನ ನೇಮಿಸಿದ್ದಾನೆ. ಹಾಗಾಗಿ ನೀವು ಅವ್ರ ಮಾತನ್ನ ಕೇಳಿ, ಅವ್ರಿಗೆ ಗೌರವ ತೋರಿಸೋದಾದ್ರೆ ‘ನಿಮಗೆ ಮೇಲಾಗುತ್ತೆ.’—ಎಫೆ. 6:1-4.

17. ಯೆಹೋಶುವ 24:15 ರ ಪ್ರಕಾರ ಮಕ್ಕಳು ಮತ್ತು ಯುವಜನ್ರು ತಾವಾಗಿಯೇ ಯಾವ ನಿರ್ಣಯಗಳನ್ನು ಮಾಡ್ಬೇಕು?

17 ಯಾರ ಸೇವೆ ಮಾಡ್ಬೇಕು ಅಂತ ನೀವೇ ನಿರ್ಣಯಿಸಿ. ಯೆಹೋವನು ಯಾವ ರೀತಿಯ ದೇವ್ರು, ಆತನ ಉದ್ದೇಶ ಏನು, ಆತನ ಉದ್ದೇಶದ ಪ್ರಕಾರ ಜೀವಿಸೋದು ಹೇಗೆ ಅನ್ನೋದನ್ನ ನೀವಾಗಿಯೇ ದೇವರ ವಾಕ್ಯದ ಅಧ್ಯಯನ ಮಾಡಿ ತಿಳ್ಕೊಬೇಕು. (ರೋಮ. 12:2) ಆಗ ಯೆಹೋವನ ಸೇವೆ ಮಾಡ್ಬೇಕು ಅನ್ನೋ ಪ್ರಾಮುಖ್ಯ ನಿರ್ಣಯವನ್ನು ನೀವು ಮಾಡ್ತೀರಿ. (ಯೆಹೋಶುವ 24:15 ಓದಿ; ಪ್ರಸಂ. 12:1) ಪ್ರತಿದಿನ ತಪ್ಪದೇ ಬೈಬಲನ್ನು ಓದಿ ಅಧ್ಯಯನ ಮಾಡಿ. ಆಗ ನಿಮಗೆ ಯೆಹೋವನ ಮೇಲೆ ಪ್ರೀತಿ ಇನ್ನೂ ಹೆಚ್ಚಾಗುತ್ತೆ ಮತ್ತು ಆತನ ಮೇಲಿನ ಭರವಸೆ ಇನ್ನೂ ಬಲವಾಗುತ್ತೆ.

18. ಮಕ್ಕಳು ಮತ್ತು ಯುವಜನ್ರು ಮಾಡಬೇಕಾದ ನಿರ್ಧಾರ ಯಾವುದು? ಇದ್ರಿಂದ ಏನು ಪ್ರಯೋಜನ?

18 ನಿಮ್ಮ ಜೀವನದಲ್ಲಿ ಯೆಹೋವನ ಇಷ್ಟಕ್ಕೆ ಮೊದಲನೇ ಸ್ಥಾನ ಕೊಡೋ ನಿರ್ಧಾರ ಮಾಡಿ. ನಿಮ್ಮ ಕೌಶಲ, ಸಾಮರ್ಥ್ಯಗಳನ್ನ ಸ್ವಂತ ಪ್ರಯೋಜನಕ್ಕಾಗಿ ಬಳಸಿದ್ರೆ ಸಂತೋಷವಾಗಿರುತ್ತೀರಿ ಅಂತ ಸೈತಾನನ ಲೋಕ ಹೇಳುತ್ತೆ. ಆದ್ರೆ ಹಣ-ಆಸ್ತಿ ಮಾಡೋದ್ರ ಹಿಂದೆ ಹೋದವ್ರ ಗತಿ ಏನಾಗುತ್ತೆ ಅಂತ ನಮಗೆ ಗೊತ್ತು. ಅವ್ರು ‘ಎಲ್ಲ ಕಡೆಗಳಿಂದ ತಿವಿಸಿಕೊಳ್ಳುತ್ತಾರೆ.’ (1 ತಿಮೊ. 6:9, 10) ಹಾಗಾಗಿ ನೀವು ಯೆಹೋವನ ಮಾತು ಕೇಳಿ ಆತನ ಇಷ್ಟಕ್ಕೆ ಮೊದಲನೇ ಸ್ಥಾನ ಕೊಡಿ. ಆಗ ಜೀವನದಲ್ಲಿ ಸಂತೋಷವಾಗಿರುತ್ತೀರಿ ಮತ್ತು ಜಾಣರಾಗಿ ನಡ್ಕೊತೀರಿ.—ಯೆಹೋ. 1:8.

ನಿಮ್ಮ ನಿರ್ಣಯವೇನು?

19. ಹೆತ್ತವ್ರು ಯಾವ ವಿಷ್ಯವನ್ನು ಮರಿಬಾರ್ದು?

19 ಹೆತ್ತವ್ರೇ, ನಿಮ್ಮ ಮಕ್ಕಳು ಯೆಹೋವನ ಸೇವೆ ಮಾಡೋ ತರ ಬೆಳೆಸೋಕೆ ನಿಮ್ಮಿಂದಾಗೋ ಎಲ್ಲ ಪ್ರಯತ್ನ ಮಾಡಿ. ಯೆಹೋವನ ಮೇಲೆ ಭರವಸೆ ಇಡಿ. ಆತನ ಸಹಾಯದಿಂದ ನೀವು ಒಳ್ಳೇ ನಿರ್ಣಯಗಳನ್ನ ಮಾಡೋಕಾಗುತ್ತೆ. (ಜ್ಞಾನೋ. 3:5, 6) ನೀವು ಹೇಳೋ ವಿಷ್ಯಕ್ಕಿಂತ ನೀವು ಮಾಡೋ ವಿಷ್ಯಗಳು ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತೆ ಅನ್ನೋದನ್ನು ಮರಿಬೇಡಿ. ಹಾಗಾಗಿ ನಿಮ್ಮ ಮಕ್ಕಳಿಗೆ ಒಳ್ಳೇದಾಗುವಂಥ ಮತ್ತು ಅವ್ರು ಯೆಹೋವನ ಆಶೀರ್ವಾದಗಳನ್ನ ಪಡಕೊಳ್ಳುವಂಥ ನಿರ್ಣಯ ಮಾಡಿ.

20. ಮಕ್ಕಳು ಯೆಹೋವನ ಸೇವೆ ಮಾಡೋ ನಿರ್ಣಯ ಮಾಡಿದ್ರೆ ಯಾವ ಆಶೀರ್ವಾದಗಳನ್ನ ಪಡಕೊಳ್ತಾರೆ?

20 ಮಕ್ಕಳೇ, ನೀವು ಒಳ್ಳೇ ನಿರ್ಣಯಗಳನ್ನು ಮಾಡೋಕೆ ನಿಮ್ಮ ಹೆತ್ತವ್ರು ಸಹಾಯ ಮಾಡ್ತಾರೆ ಅನ್ನೋದು ನಿಜಾನೇ. ಆದ್ರೆ ಯೆಹೋವನ ಇಷ್ಟದಂತೆ ನಡ್ಕೊಬೇಕಾ ಬೇಡ್ವಾ ಅನ್ನೋ ನಿರ್ಣಯವನ್ನ ನೀವೇ ಮಾಡ್ಬೇಕು. ಹಾಗಾಗಿ ಯೇಸು ತರ ಯೆಹೋವನ ಸೇವೆ ಮಾಡೋ ನಿರ್ಧಾರ ಮಾಡಿ. ಹಾಗೆ ಮಾಡೋದಾದ್ರೆ ನೀವು ಈಗಲೂ ಸಂತೋಷದ ಜೀವನ ನಡೆಸ್ಬಹುದು ಮತ್ತು ಯೆಹೋವನ ಸೇವೆಯಲ್ಲಿ ಎಷ್ಟೋ ವಿಷ್ಯಗಳನ್ನು ಸಾಧಿಸ್ಬಹುದು. (1 ತಿಮೊ. 4:16) ದೇವರ ರಾಜ್ಯದಲ್ಲಂತೂ ನಿಮ್ಮ ಯೋಚನೆಗೂ ಮೀರಿದ ಒಳ್ಳೇ ಜೀವನ ನಡೆಸ್ತೀರಿ.

ಗೀತೆ 41 ಯೌವನದಲ್ಲಿ ಯೆಹೋವನನ್ನು ಆರಾಧಿಸು

^ ಪ್ಯಾರ. 5 ಕ್ರೈಸ್ತ ಹೆತ್ತವ್ರು ತಮ್ಮ ಮಕ್ಕಳು ಖುಷಿಯಾಗಿರ್ಬೇಕು ಮತ್ತು ದೊಡ್ಡವರಾದ ಮೇಲೆ ಯೆಹೋವನ ಸೇವೆ ಮಾಡ್ಬೇಕು ಅಂತ ಬಯಸ್ತಾರೆ. ಮಕ್ಕಳು ಆ ಗುರಿಯನ್ನ ಮುಟ್ಟಬೇಕಂದ್ರೆ ಹೆತ್ತವ್ರು ಯಾವ ನಿರ್ಣಯಗಳನ್ನ ಮಾಡ್ಬೇಕು? ಯುವಜನ್ರು ಜೀವನದಲ್ಲಿ ಯಶಸ್ಸು ಪಡೀಬೇಕಂದ್ರೆ ಯಾವ ನಿರ್ಣಯಗಳನ್ನು ಮಾಡ್ಬೇಕು? ಈ ಪ್ರಶ್ನೆಗಳಿಗೆ ಉತ್ತರವನ್ನ ಈ ಲೇಖನದಲ್ಲಿ ತಿಳ್ಕೋತೇವೆ.

^ ಪ್ಯಾರ. 11 2011 ರ ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! ಪತ್ರಿಕೆಯ ಪುಟ 20 ರಲ್ಲಿರೋ “ನನ್ನ ಅಪ್ಪಅಮ್ಮನಷ್ಟು ಒಳ್ಳೇ ಹೆತ್ತವರು ಸಿಗಲು ಸಾಧ್ಯವಿಲ್ಲ!” ಚೌಕ ನೋಡಿ ಮತ್ತು 1999 ರ ಏಪ್ರಿಲ್‌ 8, ಎಚ್ಚರ! ಪತ್ರಿಕೆಯ ಪುಟ 25 ರಲ್ಲಿರೋ “ತಮ್ಮ ಹೆತ್ತವರಿಗೆ ಒಂದು ವಿಶೇಷ ಪತ್ರ” ಲೇಖನ ನೋಡಿ.

^ ಪ್ಯಾರ. 66 ಚಿತ್ರ ವಿವರಣೆ: ಯೇಸು ಚಿಕ್ಕವನಿರುವಾಗ್ಲೇ ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳುವಂತೆ ಮರಿಯಳು ಅವ್ನಿಗೆ ಕಲಿಸಿರಬೇಕು. ಅದೇ ತರ ಇವತ್ತು ಮಕ್ಕಳು ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳೋಕೆ ಅವ್ರ ಅಮ್ಮಂದಿರು ಸಹಾಯ ಮಾಡ್ಬಹುದು.

^ ಪ್ಯಾರ. 68 ಚಿತ್ರ ವಿವರಣೆ: ತನ್ನ ಇಡೀ ಕುಟುಂಬವನ್ನ ಸಭಾಮಂದಿರಕ್ಕೆ ಕರಕೊಂಡು ಹೋಗೋದು ತುಂಬ ಮುಖ್ಯ ಅಂತ ಯೋಸೇಫನಿಗೆ ಗೊತ್ತಿತ್ತು. ಅದೇ ತರ ಇವತ್ತು ಸಹೋದರರು ತಮ್ಮ ಕುಟುಂಬವನ್ನ ತಪ್ಪದೇ ಕೂಟಕ್ಕೆ ಕರಕೊಂಡು ಹೋಗ್ಬೇಕು.

^ ಪ್ಯಾರ. 70 ಚಿತ್ರ ವಿವರಣೆ: ಯೇಸು ತನ್ನ ತಂದೆಯಿಂದ ಕೆಲ್ವು ಕೌಶಲಗಳನ್ನು ಕಲಿತ. ಅದೇ ತರ ಇವತ್ತು ಮಕ್ಕಳು ತಮ್ಮ ತಂದೆಯಿಂದ ಕೆಲ್ವು ಕೌಶಲಗಳನ್ನ ಕಲಿಬಹುದು.