ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 46

ಧೈರ್ಯವಾಗಿರಿ, ಯೆಹೋವನ ಸಹಾಯ ನಿಮಗಿದೆ

ಧೈರ್ಯವಾಗಿರಿ, ಯೆಹೋವನ ಸಹಾಯ ನಿಮಗಿದೆ

“ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ.”—ಇಬ್ರಿ. 13:5.

ಗೀತೆ 33 ಅವರಿಗೆ ಹೆದರಬೇಡಿ!

ಕಿರುನೋಟ *

1. ನಾವು ಒಂಟಿ ಅಂತ ಅನಿಸಿದಾಗ ಅಥವಾ ಸಹಿಸೋಕೆ ಆಗದೇ ಇರೋ ಸಮಸ್ಯೆಗಳು ಬಂದಾಗ ಯಾವ ಮಾತಿನಿಂದ ಸಾಂತ್ವನ ಸಿಗುತ್ತೆ? (ಕೀರ್ತನೆ 118:5-7)

ನಿಮಗೆ ಒಂದು ಸಮಸ್ಯೆ ಬಂದಾಗ ‘ನಾನು ಒಂಟಿ, ನಂಗೆ ಯಾರ ಸಹಾಯನೂ ಇಲ್ಲ’ ಅಂತ ಅನಿಸಿದ್ಯಾ? ತುಂಬ ಜನ್ರಿಗೆ ಈ ತರ ಅನ್ಸಿದೆ. ಯೆಹೋವನ ನಂಬಿಗಸ್ತ ಸೇವಕರಿಗೂ ಈ ತರ ಅನಿಸಿತ್ತು. (1 ಅರ. 19:14) ನಿಮಗೆ ಈ ತರ ಅನ್ಸಿದ್ರೆ ಯೆಹೋವ ಕೊಟ್ಟಿರೋ ಮಾತನ್ನ ನೆನಪಿಸ್ಕೊಳ್ಳಿ. ಆತನು “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಅಂತ ಹೇಳಿದ್ದಾನೆ. ಹಾಗಾಗಿ, ನಾವು ದೃಢನಂಬಿಕೆಯಿಂದ, “ಯೆಹೋವನು ನನ್ನ ಸಹಾಯಕನು ನಾನು ಭಯಪಡೆನು” ಅಂತ ಹೇಳಬಹುದು. (ಇಬ್ರಿ. 13:5, 6) ಅಪೊಸ್ತಲ ಪೌಲನು ಈ ಮಾತುಗಳನ್ನು ಸುಮಾರು ಕ್ರಿ.ಶ. 61 ರಲ್ಲಿ ಯೂದಾಯದಲ್ಲಿದ್ದ ಕ್ರೈಸ್ತರಿಗೆ ಬರೆದನು. ಈ ತರದ ಮಾತುಗಳನ್ನೇ ಕೀರ್ತನೆ 118:5-7 ರಲ್ಲಿ ಕೀರ್ತನೆಗಾರನು ಸಹ ಬರೆದಿದ್ದಾನೆ.—ಓದಿ.

2. (ಎ) ಈ ಲೇಖನದಲ್ಲಿ ನಾವೇನನ್ನ ಕಲಿತೇವೆ? (ಬಿ) ಇದ್ರಿಂದ ನಮಗೇನು ಪ್ರಯೋಜನ?

2 ಕೀರ್ತನೆಗಾರನಿಗೆ ಸಹಾಯ ಮಾಡಿದಂತೆ ಪೌಲನಿಗೂ ಯೆಹೋವ ಅನೇಕ ಸಲ ಸಹಾಯ ಮಾಡಿದ್ದನು. ಹಾಗಾಗಿ ಪೌಲನಿಗೆ ಯೆಹೋವನ ಸಹಾಯ ತನಗಿದೆ ಅಂತ ಚೆನ್ನಾಗಿ ಗೊತ್ತಿತ್ತು. ಉದಾಹರಣೆಗೆ, ಅವನು ಇಬ್ರಿಯರಿಗೆ ಪತ್ರ ಬರೆಯೋ ಎರಡು ವರ್ಷಕ್ಕೂ ಮುಂಚೆ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದನು. ಅವನು ಹಡಗಿನಲ್ಲಿ ಪ್ರಯಾಣಿಸ್ತಿದ್ದಾಗ ಸಮುದ್ರದಲ್ಲಿ ದೊಡ್ಡ ಬಿರುಗಾಳಿ ಎದ್ದಿತ್ತು. (ಅ. ಕಾ. 27:4, 15, 20) ಆ ಪ್ರಯಾಣದುದ್ದಕ್ಕೂ ಮತ್ತು ಅದರ ಹಿಂದಿನ ಸಮಯದಲ್ಲೂ ಯೆಹೋವನು ಪೌಲನಿಗೆ ಅನೇಕ ವಿಧಗಳಲ್ಲಿ ಸಹಾಯ ಮಾಡಿದ್ದನು. ಅವುಗಳಲ್ಲಿ ಮೂರು ವಿಧಗಳನ್ನ ನಾವು ನೋಡೋಣ. (1) ಯೇಸು ಮತ್ತು ದೇವದೂತರ ಮೂಲಕ. (2) ಅಧಿಕಾರಿಗಳ ಮೂಲಕ ಮತ್ತು (3) ಸಹೋದರ ಸಹೋದರಿಯರ ಮೂಲಕ ಯೆಹೋವನು ಪೌಲನಿಗೆ ಸಹಾಯ ಮಾಡಿದನು. ಪೌಲನ ಜೀವನದಲ್ಲಿ ನಡೆದ ಈ ಘಟನೆಗಳ ಬಗ್ಗೆ ತಿಳುಕೊಂಡ್ರೆ, ‘ನಾನು ನಿನ್ನ ಕೈಬಿಡಲ್ಲ’ ಅಂತ ಯೆಹೋವ ಕೊಟ್ಟಿರೋ ಮಾತಿನ ಮೇಲೆ ನಮ್ಮ ನಂಬಿಕೆ ಇನ್ನೂ ಹೆಚ್ಚಾಗುತ್ತೆ.

ಯೇಸು ಮತ್ತು ದೇವದೂತರಿಂದ ಸಿಕ್ಕಿದ ಸಹಾಯ

3. ಪೌಲನಿಗೆ ಏನನಿಸಿರಬಹುದು? ಮತ್ತು ಯಾಕೆ?

3 ಸುಮಾರು ಕ್ರಿ.ಶ. 56 ರಲ್ಲಿ ಪೌಲನು ಯೆರೂಸಲೇಮಿನ ದೇವಾಲಯದಲ್ಲಿದ್ದಾಗ ಜನರ ಗುಂಪೊಂದು ಬಂದು ಅವನನ್ನು ಅಲ್ಲಿಂದ ಹೊರಗಡೆ ಎಳಕೊಂಡು ಬಂತು ಮತ್ತು ಕೊಲ್ಲಲಿಕ್ಕೆ ಪ್ರಯತ್ನಿಸಿತು. ಮಾರನೇ ದಿನ ಅವನನ್ನ ಹಿರೀ ಸಭೆಯ ಮುಂದೆ ತಂದು ನಿಲ್ಲಿಸಲಾಯ್ತು. ಅಲ್ಲಿ ಅವನ ಶತ್ರುಗಳು ಅವನನ್ನ ಎಳೆದಾಡಿ ತುಂಡುತುಂಡು ಮಾಡೋಕಿದ್ರು. (ಅ. ಕಾ. 21:30-32; 22:30; 23:6-10) ಆ ಸಮ್ಯದಲ್ಲಿ ಪೌಲನಿಗೆ ‘ಇನ್ನೆಷ್ಟು ಸಮ್ಯ ನಾನು ಈ ಹಿಂಸೆಯನ್ನ ಸಹಿಸ್ಕೊಬೇಕು?’ ಅಂತ ಅನಿಸಿರಬಹುದು. ನಿಜವಾಗ್ಲೂ ಪೌಲನಿಗೆ ಆಗ ಸಹಾಯದ ಅಗತ್ಯ ಇತ್ತು.

4. ಯೆಹೋವನು ಯೇಸು ಮೂಲಕ ಪೌಲನಿಗೆ ಹೇಗೆ ಸಹಾಯ ಮಾಡಿದನು?

4 ಪೌಲನಿಗೆ ಯೇಸು ಹೇಗೆ ಸಹಾಯ ಮಾಡಿದನು? ಪೌಲನು ಬಂಧನಕ್ಕೊಳಗಾದ ರಾತ್ರಿ “ಕರ್ತನು” ಅಂದ್ರೆ ಯೇಸು ಅವನ ಬಳಿಯಲ್ಲಿ ನಿಂತುಕೊಂಡು, “ಧೈರ್ಯದಿಂದಿರು, ನೀನು ಯೆರೂಸಲೇಮಿನಲ್ಲಿ ನನ್ನ ಕುರಿತು ಕೂಲಂಕಷವಾಗಿ ಸಾಕ್ಷಿಕೊಡುತ್ತಿರುವಂತೆ ರೋಮಿನಲ್ಲಿಯೂ ಸಾಕ್ಷಿ ಕೊಡಬೇಕು” ಅಂತ ಹೇಳಿದನು. (ಅ. ಕಾ. 23:11) ಪೌಲನು ಯೆರೂಸಲೇಮಿನಲ್ಲಿ ಚೆನ್ನಾಗಿ ಸಾಕ್ಷಿ ನೀಡಿದ್ದಾನೆ ಅಂತ ಯೇಸು ಅವನನ್ನ ಶ್ಲಾಘಿಸಿದನು. ಅಷ್ಟೇ ಅಲ್ಲ, ಅವನು ಸುರಕ್ಷಿತವಾಗಿ ರೋಮ್‌ ತಲುಪುತ್ತಾನೆ ಮತ್ತು ಅಲ್ಲಿಯೂ ಸುವಾರ್ತೆ ಸಾರುತ್ತಾನೆ ಅಂತ ಮಾತುಕೊಟ್ಟನು. ಈ ಮಾತಿನಿಂದ ಪೌಲನಿಗೆ ಪ್ರೋತ್ಸಾಹ ಮತ್ತು ಧೈರ್ಯ ಸಿಕ್ಕಿರುತ್ತೆ. ಅಪ್ಪನ ತೋಳಲ್ಲಿರೋ ಒಂದು ಮಗುವಿಗೆ ಹೇಗೆ ತಾನು ಸುರಕ್ಷಿತವಾಗಿದ್ದೇನೆ ಅಂತ ಅನಿಸುತ್ತೋ ಅದೇ ಅನಿಸಿಕೆ ಪೌಲನಿಗೂ ಆಗಿರುತ್ತೆ.

ಸಮುದ್ರದಲ್ಲಿ ದೊಡ್ಡ ಬಿರುಗಾಳಿ ಎದ್ದಾಗ ಒಬ್ಬ ದೇವದೂತ ಬಂದು, ಹಡಗಿನಲ್ಲಿರುವ ಎಲ್ಲ ಪ್ರಯಾಣಿಕರು ಈ ದುರಂತದಿಂದ ಬಚಾವಾಗ್ತಾರೆ ಅಂತ ಪೌಲನಿಗೆ ಹೇಳುತ್ತಾ ಧೈರ್ಯ ತುಂಬುತ್ತಿದ್ದಾನೆ (ಪ್ಯಾರ 5 ನೋಡಿ)

5. ಯೆಹೋವನು ದೇವದೂತನ ಮೂಲಕ ಪೌಲನಿಗೆ ಹೇಗೆ ಸಹಾಯ ಮಾಡಿದನು? (ಮುಖಪುಟ ಚಿತ್ರ ನೋಡಿ.)

5 ಪೌಲನಿಗೆ ಇನ್ನೂ ಯಾವ ಸಮಸ್ಯೆಗಳು ಬಂದವು? ಯೆರೂಸಲೇಮಿನಲ್ಲಿ ಈ ಘಟನೆಗಳೆಲ್ಲಾ ನಡೆದು ಎರಡು ವರ್ಷಗಳಾದ ನಂತರ ಪೌಲನು ಹಡಗಿನಲ್ಲಿ ಇಟಲಿಗೆ ಹೋಗುತ್ತಿದ್ದನು. ಆಗ ಸಮುದ್ರದಲ್ಲಿ ದೊಡ್ಡ ಬಿರುಗಾಳಿ ಎದ್ದಿತು. ಹಡಗಿನಲ್ಲಿದ್ದ ಪ್ರಯಾಣಿಕರು ಮತ್ತು ಅದರ ಚಾಲಕರು ತಾವು ಸತ್ತು ಹೋಗುತ್ತೇವೆ ಅಂತ ನೆನಸಿದರು. ಆದ್ರೆ ಪೌಲ ಭಯಪಡಲಿಲ್ಲ. ಅವನು ಹಡಗಿನಲ್ಲಿದ್ದವ್ರಿಗೆ ಹೀಗೆ ಹೇಳಿದನು: “ನಾನು ಯಾರಿಗೆ ಸೇರಿದ್ದೇನೋ ಮತ್ತು ಯಾರಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದೇನೋ ಆ ದೇವರ ದೂತನೊಬ್ಬನು ಕಳೆದ ರಾತ್ರಿ ನನ್ನ ಹತ್ತಿರ ಬಂದು ನಿಂತು, ‘ಪೌಲನೇ ಭಯಪಡಬೇಡ, ನೀನು ಕೈಸರನ ಮುಂದೆ ನಿಲ್ಲಬೇಕು. ನಿನ್ನೊಂದಿಗೆ ಪ್ರಯಾಣಿಸುತ್ತಿರುವವರೆಲ್ಲರ ಪ್ರಾಣವನ್ನು ದೇವರು ನಿನ್ನಿಂದಾಗಿಯೇ ಉಳಿಸಿದ್ದಾನೆ’ ಎಂದು ಹೇಳಿದನು.” ಈ ಹಿಂದೆ ಪೌಲನಿಗೆ ಯೇಸು ಹೇಳಿದ ಮಾತುಗಳನ್ನೇ ಪುನಃ ಇಲ್ಲಿ ದೇವದೂತನ ಮೂಲಕ ಯೆಹೋವನು ಹೇಳಿಸಿದನು. ನಂತರ ಯೆಹೋವ ಹೇಳಿದಂತೆಯೇ ಪೌಲನು ರೋಮಿಗೆ ತಲುಪಿದನು.—ಅ. ಕಾ. 27:20-25; 28:16.

6. ಯೇಸು ಕೊಟ್ಟ ಯಾವ ಮಾತು ನಮಗೆ ಧೈರ್ಯ ಕೊಡುತ್ತೆ? ಮತ್ತು ಯಾಕೆ?

6 ನಮಗೆ ಯೇಸು ಹೇಗೆ ಸಹಾಯ ಮಾಡ್ತಾನೆ? ಯೇಸು ಪೌಲನಿಗೆ ಸಹಾಯ ಮಾಡಿದಂತೆ ನಮಗೂ ಸಹಾಯ ಮಾಡ್ತಾನೆ. ಉದಾಹರಣೆಗೆ, ತನ್ನನ್ನು ಹಿಂಬಾಲಿಸುವವ್ರಿಗೆ ಯೇಸು ಹೀಗೆ ಮಾತು ಕೊಟ್ಟಿದ್ದಾನೆ: “ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾ. 28:20) ಯೇಸುವಿನ ಈ ಮಾತುಗಳು ನಮಗೆ ಧೈರ್ಯ ಕೊಡುತ್ತೆ. ನಮ್ಮ ಜೀವನದಲ್ಲಿ ಕೆಲವೊಮ್ಮೆ ಸಹಿಸೋಕೆ ಆಗದಂಥ ಸಮಸ್ಯೆಗಳು ಬರುತ್ತವೆ. ಉದಾಹರಣೆಗೆ, ನಾವು ತುಂಬ ಪ್ರೀತಿಸುವಂಥ ಯಾರಾದ್ರೂ ತೀರಿಹೋದಾಗ ಆ ನೋವು ಬರೀ ಕೆಲವು ದಿನಗಳಷ್ಟೇ ಅಲ್ಲ ವರ್ಷಾನುಗಟ್ಟಲೆ ಇರುತ್ತೆ. ಇನ್ನು ಕೆಲವ್ರಿಗೆ ವಯಸ್ಸಾಗಿರೋದ್ರಿಂದ ಸಮಸ್ಯೆಗಳು ಬರುತ್ತೆ. ಕೆಲವ್ರಿಗೆ ಖಿನ್ನತೆ ಇರುತ್ತೆ, ಒಂದೊಂದು ಕ್ಷಣ ಕಳೆಯೋಕೂ ತುಂಬ ಕಷ್ಟ ಆಗುತ್ತೆ. ಇಷ್ಟೆಲ್ಲಾ ಕಷ್ಟಗಳಿದ್ರೂ ನಾವು ಧೈರ್ಯವಾಗಿರಬಹುದು. ಯಾಕಂದ್ರೆ ಯೇಸು ‘ಎಲ್ಲಾ ದಿವಸ ನಿಮ್ಮ ಜೊತೆ ಇರ್ತೀನಿ’ ಅಂತ ನಮಗೆ ಮಾತು ಕೊಟ್ಟಿದ್ದಾನೆ. ಅಂದ್ರೆ ನಮ್ಮ ಜೀವನದ ಕಷ್ಟಕರ ಕ್ಷಣಗಳಲ್ಲೂ ಆತನು ನಮ್ಮ ಜೊತೆ ಇರ್ತಾನೆ.—ಮತ್ತಾ. 11:28-30.

ಸುವಾರ್ತೆ ಸಾರುವಾಗ ದೇವದೂತರು ನಮಗೆ ಮಾರ್ಗದರ್ಶನ ಮತ್ತು ಬೆಂಬಲ ಕೊಡ್ತಾರೆ (ಪ್ಯಾರ 7 ನೋಡಿ)

7. ಪ್ರಕಟನೆ 14:6 ರ ಪ್ರಕಾರ ಇವತ್ತು ಯೆಹೋವನು ನಮಗೆ ಹೇಗೆ ಸಹಾಯ ಮಾಡ್ತಾನೆ?

7 ಯೆಹೋವನು ತನ್ನ ದೂತರ ಮೂಲಕ ಸಹ ಸಹಾಯ ಮಾಡ್ತಾನೆ ಅಂತ ದೇವರ ವಾಕ್ಯವಾದ ಬೈಬಲ್‌ ನಮಗೆ ಆಶ್ವಾಸನೆ ಕೊಡುತ್ತೆ. (ಇಬ್ರಿ. 1:7, 14) ಉದಾಹರಣೆಗೆ, “ಸಕಲ ಕುಲ ಜನಾಂಗ ಭಾಷೆ ಮತ್ತು ಪ್ರಜೆಗಳಿಗೂ” ‘ರಾಜ್ಯದ ಸುವಾರ್ತೆ’ ಸಾರುವಾಗ ದೇವದೂತರು ನಮಗೆ ಮಾರ್ಗದರ್ಶನ ಮತ್ತು ಬೆಂಬಲ ಕೊಡ್ತಾರೆ.—ಪ್ರಕಟನೆ 14:6 ಓದಿ; ಮತ್ತಾ. 24:13, 14.

ಅಧಿಕಾರಿಗಳಿಂದ ಸಹಾಯ

8. ಯೆಹೋವನು ಒಬ್ಬ ಮಿಲಿಟರಿ ಕಮಾಂಡರ್‌ ಮೂಲಕ ಪೌಲನನ್ನು ಹೇಗೆ ಕಾಪಾಡಿದನು?

8 ಅಧಿಕಾರಿಗಳು ಹೇಗೆ ಪೌಲನಿಗೆ ಸಹಾಯ ಮಾಡಿದ್ರು? ಕ್ರಿ.ಶ. 56 ರಲ್ಲಿ ಯೇಸು ಪೌಲನಿಗೆ ‘ನೀನು ಸುರಕ್ಷಿತವಾಗಿ ರೋಮ್‌ ತಲುಪ್ತೀಯ’ ಅಂತ ಮಾತು ಕೊಟ್ಟಿದ್ದನು. ಆದ್ರೆ ಯೆರೂಸಲೇಮಿನಲ್ಲಿದ್ದ ಕೆಲವು ಯೆಹೂದಿಗಳು ಪೌಲನನ್ನು ಹಿಡಿದು ಕೊಲ್ಲಬೇಕು ಅಂತ ಒಳಸಂಚು ಮಾಡಿದ್ರು. ಇದ್ರ ಬಗ್ಗೆ ರೋಮನ್‌ ಸಹಸ್ರಾಧಿಪತಿ ಅಥವಾ ಮಿಲಿಟರಿ ಕಮಾಂಡರ್‌ ಆಗಿದ್ದ ಕ್ಲೌದ್ಯ ಲೂಸ್ಯನಿಗೆ ಗೊತ್ತಾದ ತಕ್ಷಣ ಅವನು ಪೌಲನ ಜೀವ ಕಾಪಾಡೋಕೆ ಮುಂದಾದನು. ಪೌಲನಿಗೆ ಕಾವಲಾಗಿ ಅನೇಕ ಸೈನಿಕರನ್ನು ನೇಮಿಸಿ ಕೈಸರೈಯಕ್ಕೆ ಕಳುಹಿಸಿದನು. ಯೆರೂಸಲೇಮಿನಿಂದ ಕೈಸರೈಯಕ್ಕೆ ಹೋಗೋ ದಾರಿ 105 ಕಿ.ಮೀ. ಇತ್ತು. ಕೈಸರೈಯದಲ್ಲಿ ರಾಜ್ಯಪಾಲ ಫೇಲಿಕ್ಸನು ಪೌಲನನ್ನು “ಹೆರೋದನ ಅಂಗರಕ್ಷಕ ದಳದ ಅರಮನೆಯಲ್ಲಿಟ್ಟು ಕಾಯುವಂತೆ ಆಜ್ಞಾಪಿಸಿದನು.” ಹೀಗೆ ಪೌಲ, ತನ್ನನ್ನು ಕೊಲ್ಲಲು ಹೊಂಚುಹಾಕುತ್ತಿದ್ದವರಿಂದ ತಪ್ಪಿಸಿಕೊಂಡನು.—ಅ. ಕಾ. 23:12-35.

9. ರಾಜ್ಯಪಾಲ ಫೆಸ್ತ ಪೌಲನಿಗೆ ಹೇಗೆ ಸಹಾಯ ಮಾಡಿದ?

9 ಎರಡು ವರ್ಷಗಳ ನಂತರ ಅಂದ್ರೆ ಕ್ರಿ.ಶ. 58 ರಲ್ಲಿ ಪೌಲ ಇನ್ನೂ ಕೈಸರೈಯದ ಜೈಲಿನಲ್ಲಿದ್ದನು. ಆಗ ಫೇಲಿಕ್ಸನ ಜಾಗದಲ್ಲಿ ಫೆಸ್ತನು ರಾಜ್ಯಪಾಲನಾಗಿದ್ದನು. ಯೆಹೂದಿಗಳು ಫೆಸ್ತನ ಹತ್ರ, ಪೌಲನನ್ನು ಯೆರೂಸಲೇಮಿಗೆ ಕಳುಹಿಸಿಕೊಡಬೇಕು, ಅಲ್ಲಿ ಅವನ ನ್ಯಾಯವಿಚಾರಣೆ ಆಗಬೇಕು ಅಂತ ಬೇಡಿಕೊಂಡ್ರು. ಆದ್ರೆ ಫೆಸ್ತನು ನಿರಾಕರಿಸಿದನು. ಯಾಕಂದ್ರೆ ‘ದಾರಿಯಲ್ಲಿಯೇ ಪೌಲನನ್ನು ಕೊಲ್ಲಲಿಕ್ಕಾಗಿ ಅವರು ಹೊಂಚುಹಾಕಿಕೊಂಡಿದ್ದಾರೆ’ ಅಂತ ಫೆಸ್ತನಿಗೆ ಗೊತ್ತಿತ್ತು.—ಅ. ಕಾ. 24:27–25:5.

10. ಪೌಲನು ತಾನು ಕೈಸರನಿಗೆ ಮನವಿ ಮಾಡಿಕೊಳ್ಳುತ್ತೇನೆ ಅಂದಾಗ ರಾಜ್ಯಪಾಲ ಫೆಸ್ತ ಏನು ಮಾಡಿದನು?

10 ನಂತರ ಕೈಸರೈಯದಲ್ಲಿ ಪೌಲನ ನ್ಯಾಯವಿಚಾರಣೆ ನಡೆಯಿತು. ಫೆಸ್ತನು ‘ಯೆಹೂದ್ಯರ ಮೆಚ್ಚುಗೆಯನ್ನು ಪಡೆಯಲು ಬಯಸುತ್ತಿದ್ದ ಕಾರಣ’ ಪೌಲನಿಗೆ, “ನೀನು ಯೆರೂಸಲೇಮಿಗೆ ಹೋಗಿ ಈ ವಿಷಯಗಳ ಕುರಿತು ನನ್ನ ಮುಂದೆ ನ್ಯಾಯವಿಚಾರಣೆಯಾಗುವಂತೆ ಬಯಸುತ್ತೀಯೊ?” ಅಂತ ಕೇಳಿದನು. ಯೆರೂಸಲೇಮಿಗೆ ಹೋದ್ರೆ ಅಲ್ಲಿ ಯೆಹೂದಿಗಳು ತನ್ನನ್ನ ಕೊಲ್ತಾರೆ ಅಂತ ಪೌಲನಿಗೆ ಗೊತ್ತಿತ್ತು. ಅಷ್ಟೇ ಅಲ್ಲ, ತನ್ನ ಜೀವ ಕಾಪಾಡಿಕೊಳ್ಳೋಕೆ, ರೋಮ್‌ಗೆ ಹೋಗಿ ಸೇವೆ ಮಾಡೋಕೆ ಏನು ಮಾಡಬೇಕು ಅಂತನೂ ಗೊತ್ತಿತ್ತು. ಹಾಗಾಗಿ ಪೌಲನು, “ನಾನು ಕೈಸರನಿಗೆ ಮನವಿಮಾಡಿಕೊಳ್ಳುತ್ತೇನೆ!” ಅಂತ ಹೇಳಿದನು. ನಂತರ ಫೆಸ್ತನು, ತನ್ನ ಸಲಹೆಗಾರರೊಂದಿಗೆ ಮಾತಾಡಿ ಪೌಲನಿಗೆ, “ನೀನು ಕೈಸರನಿಗೆ ಮನವಿಮಾಡಿಕೊಂಡಿದ್ದೀ. ನೀನು ಕೈಸರನ ಬಳಿಗೇ ಹೋಗುವಿ” ಅಂತ ಹೇಳಿದನು. ಫೆಸ್ತನು ಮಾಡಿದ ಈ ನಿರ್ಣಯದಿಂದ ಪೌಲನು ಶತ್ರುಗಳಿಂದ ತಪ್ಪಿಸಿಕೊಳ್ಳೋಕಾಯ್ತು. ತನ್ನನ್ನು ಕೊಲ್ಲಲು ಹೊಂಚುಹಾಕ್ತಿದ್ದ ಜನರು ತನಗೇನೂ ಮಾಡೋಕೆ ಆಗದೇ ಇರುವಷ್ಟು ದೂರದ ರೋಮ್‌ಗೆ ಪೌಲ ಹೋಗಲಿದ್ದನು.—ಅ. ಕಾ. 25:6-12.

11. ಯೆಶಾಯನು ಬರೆದ ಯಾವ ಮಾತುಗಳಿಂದ ಪೌಲನಿಗೆ ಬಲ ಸಿಕ್ಕಿರಬಹುದು?

11 ಪೌಲನು ರೋಮ್‌ಗೆ ಪ್ರಯಾಣ ಮಾಡ್ಲಿಕ್ಕಿದ್ದಾಗ ಅವನ ಮನ್ಸಿಗೆ ಪ್ರವಾದಿ ಯೆಶಾಯನು ಯೆಹೋವನನ್ನು ವಿರೋಧಿಸುವವ್ರಿಗೆ ಕೊಟ್ಟ ಎಚ್ಚರಿಕೆ ಬಂದಿರಬಹುದು. ಯೆಹೋವನಿಂದ ಪ್ರೇರಿತನಾಗಿ ಯೆಶಾಯನು ಹೀಗೆ ಬರೆದಿದ್ದನು: “ಆಲೋಚನೆ ಮಾಡಿಕೊಳ್ಳಿರಿ, ಅದು ಮುರಿದುಹೋಗುವದು, ಅಪ್ಪಣೆಮಾಡಿರಿ, ಅದು ನಿಲ್ಲದು, ದೇವರು ನಮ್ಮ ಕೂಡ ಇದ್ದಾನಷ್ಟೆ.” (ಯೆಶಾ. 8:10) ದೇವರು ತನಗೆ ಸಹಾಯ ಮಾಡ್ತಾನೆ ಅಂತ ಪೌಲನಿಗೆ ಗೊತ್ತಿತ್ತು. ಈ ನಂಬಿಕೆ ಅವನಿಗೆ ಮುಂದೆ ಬರಲಿದ್ದ ಕಷ್ಟಗಳನ್ನ ತಾಳಿಕೊಳ್ಳೋಕೆ ಬಲ ಕೊಡ್ತು.

ಹಿಂದಿನ ಕಾಲದಲ್ಲಿ ಮಾಡಿದಂತೆ ಯೆಹೋವನು ಇವತ್ತು ಸಹ ಅಧಿಕಾರಿಗಳ ಮೂಲಕ ತನ್ನ ಸೇವಕರನ್ನ ಕಾಪಾಡಬಲ್ಲನು (ಪ್ಯಾರ 12 ನೋಡಿ)

12. (ಎ) ಯೂಲ್ಯನು ಪೌಲನ ಜೊತೆ ಹೇಗೆ ನಡ್ಕೊಂಡನು? (ಬಿ) ಇದ್ರಿಂದ ಪೌಲನಿಗೆ ಯಾವ ವಿಷ್ಯ ಅರ್ಥ ಆಗಿರುತ್ತೆ?

12 ಪೌಲನು ಹಡಗಿನಲ್ಲಿ ಇಟಲಿಗೆ ಹೊರಟನು. ಅವನು ಒಬ್ಬ ಸೆರೆವಾಸಿ ಆಗಿದ್ದರಿಂದ ಅವನನ್ನು ರೋಮನ್‌ ಶತಾಧಿಪತಿ ಅಥವಾ ರೋಮನ್‌ ಅಧಿಕಾರಿ ಆಗಿದ್ದ ಯೂಲ್ಯನ ಕೈಗೆ ಒಪ್ಪಿಸಲಾಯ್ತು. ಯೂಲ್ಯ ಬೇಕಿದ್ರೆ ಪೌಲನಿಗೆ ಕಷ್ಟ ಕೊಡಬಹುದಿತ್ತು ಅಥವಾ ಚೆನ್ನಾಗೂ ನೋಡ್ಕೊಬಹುದಿತ್ತು. ಅವನು ತನ್ನ ಅಧಿಕಾರವನ್ನ ಹೇಗೆ ಉಪಯೋಗಿಸಿಕೊಂಡ? ಮಾರನೇ ದಿನ ಅವ್ರಿದ್ದ ಹಡಗು ಸೀದೋನಿಗೆ ಬಂದು ತಲಪಿದಾಗ ‘ಪೌಲನೊಂದಿಗೆ ಯೂಲ್ಯನು ಮಾನವ ದಯೆಯಿಂದ ವರ್ತಿಸಿದನು ಮತ್ತು ಪೌಲನಿಗೆ ತನ್ನ ಸ್ನೇಹಿತರ ಬಳಿ ಹೋಗೋಕೆ ಅನುಮತಿಸಿದನು.’ ನಂತರ ಯೂಲ್ಯನು ಪೌಲನ ಜೀವವನ್ನೂ ಕಾಪಾಡಿದನು. ಹೇಗೆ? ಅವರು ಪ್ರಯಾಣಿಸ್ತಿದ್ದ ಹಡಗು ಒಡೆದು ಹೋದಾಗ ಅದ್ರಲ್ಲಿರೋ ಯಾವ ಸೆರೆವಾಸಿನೂ ತಪ್ಪಿಸಿಕೊಳ್ಳಬಾರದು ಅಂತ ಸೈನಿಕರು ಅವ್ರನ್ನೆಲ್ಲಾ ಕೊಲ್ಲಬೇಕು ಅಂದುಕೊಂಡರು. ಆಗ ಯೂಲ್ಯನು ಅವರನ್ನ ತಡೆದನು. ಯಾಕೆ? ಯಾಕಂದ್ರೆ ಆ ‘ಶತಾಧಿಪತಿಯು ಪೌಲನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಬಯಸಿದನು.’ ಈ ಕರುಣಾಮಯಿ ಅಧಿಕಾರಿಯ ಮೂಲಕ ಯೆಹೋವನು ತನಗೆ ಸಹಾಯ ಮಾಡ್ತಿದ್ದಾನೆ, ತನ್ನನ್ನು ಕಾಪಾಡ್ತಿದ್ದಾನೆ ಅಂತ ಪೌಲನಿಗೆ ಅರ್ಥ ಆಗಿರುತ್ತೆ.—ಅ. ಕಾ. 27:1-3, 42-44.

ಪ್ಯಾರ 13 ನೋಡಿ

13. ಅಧಿಕಾರದಲ್ಲಿ ಇರುವವರನ್ನ ಯೆಹೋವನು ಹೇಗೆ ಉಪಯೋಗಿಸಬಹುದು?

13 ಅಧಿಕಾರಿಗಳು ನಮಗೆ ಹೇಗೆ ಸಹಾಯ ಮಾಡ್ತಾರೆ? ಕೆಲವೊಮ್ಮೆ ಯೆಹೋವನು ಅಧಿಕಾರಿಗಳ ಮೂಲಕ ನಮಗೆ ಸಹಾಯ ಮಾಡ್ತಾನೆ. ತನ್ನ ಉದ್ದೇಶ ನೆರವೇರಿಸ್ಲಿಕ್ಕಾಗಿ ಪವಿತ್ರಾತ್ಮ ಶಕ್ತಿಯನ್ನ ಉಪಯೋಗಿಸಿ ಅಧಿಕಾರಿಗಳ ಕೈಯಲ್ಲಿ ತನ್ನ ಇಷ್ಟವನ್ನ ಮಾಡಿಸಬಹುದು. ರಾಜ ಸೊಲೊಮೋನ ಏನು ಬರೆದಿದ್ದಾನೆ ಅಂತ ಗಮನಿಸಿ: “ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ನೀರಿನ ಕಾಲುವೆಗಳಂತೆ ಇವೆ; ತನಗೆ ಬೇಕಾದ ಕಡೆಗೆ ತಿರುಗಿಸುತ್ತಾನೆ.” (ಜ್ಞಾನೋ. 21:1) ಈ ಜ್ಞಾನೋಕ್ತಿಯ ಅರ್ಥವೇನು? ಕಾಲುವೆ ನೀರು ಹರಿಯೋ ದಿಕ್ಕನ್ನ ತಮಗೆ ಬೇಕಾದ ಕಡೆಗೆ ಬದಲಾಯಿಸಿಕೊಳ್ಳೋಕೆ ಮನುಷ್ಯರಿಗಾಗುತ್ತೆ. ಅದೇ ತರ ತನ್ನ ಉದ್ದೇಶಕ್ಕನುಸಾರ ಅಧಿಕಾರಿಗಳ ಯೋಚನೆಯ ದಿಕ್ಕನ್ನ ಬದಲಾಯಿಸೋಕೆ ಯೆಹೋವನಿಗಾಗುತ್ತೆ. ಇದನ್ನ ಮಾಡ್ಲಿಕ್ಕೆ ಯೆಹೋವ ತನ್ನ ಪವಿತ್ರಾತ್ಮವನ್ನ ಉಪಯೋಗಿಸ್ತಾನೆ. ಯೆಹೋವ ಇದನ್ನ ಮಾಡಿದಾಗ ಅಧಿಕಾರಿಗಳು ಆತನ ಜನರಿಗೆ ಪ್ರಯೋಜನವಾಗುವಂಥ ನಿರ್ಣಯಗಳನ್ನ ಮಾಡ್ತಾರೆ.—ಎಜ್ರ 7:21, 25, 26 ಹೋಲಿಸಿ.

14. ಅಪೊಸ್ತಲರ ಕಾರ್ಯಗಳು 12:5 ರ ಪ್ರಕಾರ ನಾವು ಯಾರಿಗೋಸ್ಕರ ಪ್ರಾರ್ಥನೆ ಮಾಡಬೇಕು?

14 ನಾವೇನು ಮಾಡಬೇಕು? ಕೆಲವೊಮ್ಮೆ ನಮ್ಮ ಸೇವೆ ಮತ್ತು ಕೂಟದ ವಿಷ್ಯದಲ್ಲಿ ‘ಅರಸುಗಳು ಮತ್ತು ಉನ್ನತ ಸ್ಥಾನದಲ್ಲಿರೋ ಜನರು’ ಕೆಲವು ನಿರ್ಣಯಗಳನ್ನು ಮಾಡೋ ಸಂದರ್ಭ ಬರುತ್ತೆ. ಆಗ ನಾವು ಅವರಿಗಾಗಿ ಪ್ರಾರ್ಥಿಸಬೇಕು. (1 ತಿಮೊ. 2:1, 2; ನೆಹೆ. 1:11) ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಂತೆ ನಾವು ಸಹ ಜೈಲಿನಲ್ಲಿರೋ ನಮ್ಮ ಸಹೋದರ ಸಹೋದರಿಯರಿಗಾಗಿ ಯಾವಾಗಲೂ ಪ್ರಾರ್ಥಿಸಬೇಕು. (ಅಪೊಸ್ತಲರ ಕಾರ್ಯಗಳು 12:5 ಓದಿ; ಇಬ್ರಿ. 13:3) ನಮ್ಮ ಸಹೋದರ ಸಹೋದರಿಯರು ಇರೋ ಜೈಲಿನ ಅಧಿಕಾರಿಗಳಿಗೋಸ್ಕರ ಸಹ ನಾವು ಪ್ರಾರ್ಥಿಸಬೇಕು. ಅಂಥ ಅಧಿಕಾರಿಗಳು ನಮ್ಮ ಸಹೋದರ ಸಹೋದರಿಯರ ಜೊತೆ ಯೂಲ್ಯನ ತರ ನಡಕೊಳ್ಳೋಕೆ ಮತ್ತು ಅವ್ರಿಗೆ ಮಾನವ ದಯೆ ತೋರಿಸೋಕೆ ಮನಸ್ಸು ಕೊಡಪ್ಪಾ ಅಂತ ಯೆಹೋವನ ಹತ್ರ ನಾವು ಬೇಡ್ಕೊಬಹುದು.

ಸಹೋದರ ಸಹೋದರಿಯರಿಂದ ಸಹಾಯ

15-16. ಅರಿಸ್ತಾರ್ಕ ಮತ್ತು ಲೂಕನ ಮೂಲಕ ಯೆಹೋವನು ಹೇಗೆ ಪೌಲನಿಗೆ ಸಹಾಯ ಮಾಡಿದನು?

15 ಸಹೋದರ ಸಹೋದರಿಯರು ಪೌಲನಿಗೆ ಹೇಗೆ ಸಹಾಯ ಮಾಡಿದ್ರು? ಪೌಲನು ರೋಮ್‌ಗೆ ಪ್ರಯಾಣ ಮಾಡ್ತಿದ್ದಾಗ ಯೆಹೋವನು ಸಹೋದರ ಸಹೋದರಿಯರ ಮೂಲಕನೂ ಅವನಿಗೆ ಸಹಾಯ ಮಾಡಿದನು. ಕೆಲವು ಉದಾಹರಣೆಗಳನ್ನು ಈಗ ನೋಡೋಣ.

16 ಪೌಲನ ಇಬ್ಬರು ಸ್ನೇಹಿತರಾದ ಅರಿಸ್ತಾರ್ಕ ಮತ್ತು ಲೂಕ ಅವನ ಜೊತೆ ರೋಮ್‌ಗೆ ಪ್ರಯಾಣ ಮಾಡೋಕೆ ಮುಂದೆ ಬಂದ್ರು. * ಅರಿಸ್ತಾರ್ಕನಿಗಾಗಲಿ ಲೂಕನಿಗಾಗಲಿ ಅವ್ರು ರೋಮ್‌ಗೆ ಸುರಕ್ಷಿತವಾಗಿ ತಲುಪ್ತಾರೆ ಅಂತ ಯೇಸು ಆಶ್ವಾಸನೆ ಕೊಟ್ಟಿರಲಿಲ್ಲ. ಆದ್ರೂ ಅವ್ರು ತಮ್ಮ ಜೀವವನ್ನ ಪಣಕ್ಕೊಡ್ಡಿ ಪೌಲನ ಜೊತೆ ಈ ಅಪಾಯಕಾರಿ ಪ್ರಯಾಣ ಮಾಡೋಕೆ ನಿರ್ಧರಿಸಿದ್ರು. ಆ ಪ್ರಯಾಣವನ್ನು ಶುರು ಮಾಡಿದ ನಂತ್ರನೇ ಅವ್ರಿಗೆ ತಮ್ಮ ಜೀವ ಉಳಿಯುತ್ತೆ ಅಂತ ಗೊತ್ತಾಗಿದ್ದು. ಹಾಗಾಗಿ ಅರಿಸ್ತಾರ್ಕ ಮತ್ತು ಲೂಕ ಕೈಸರೈಯದಲ್ಲಿ ಹಡಗನ್ನು ಹತ್ತಿದಾಗ ಅವರನ್ನ ನೋಡಿದ ಪೌಲನು ಇಂಥ ಧೈರ್ಯವಂತ ಸಹೋದರರನ್ನ ಕೊಟ್ಟಿದ್ದಕ್ಕಾಗಿ ಯೆಹೋವನಿಗೆ ಪ್ರಾರ್ಥನೆಯಲ್ಲಿ ಕೃತಜ್ಞತೆ ಹೇಳಿರುತ್ತಾನೆ.—ಅ. ಕಾ. 27:1, 2, 20-25.

17. ಸಹೋದರ ಸಹೋದರಿಯರ ಮೂಲಕ ಯೆಹೋವನು ಪೌಲನಿಗೆ ಹೇಗೆ ಸಹಾಯ ಮಾಡಿದನು?

17 ಪೌಲನ ಪ್ರಯಾಣದುದ್ದಕ್ಕೂ ಅನೇಕ ಸಹೋದರ ಸಹೋದರಿಯರು ಅವನಿಗೆ ತುಂಬ ಸಹಾಯ ಮಾಡಿದ್ರು. ಉದಾಹರಣೆಗೆ, ಬಂದರು ಪಟ್ಟಣವಾಗಿದ್ದ ಸೀದೋನಿನಲ್ಲಿ ಹಡಗು ನಿಂತಾಗ ಯೂಲ್ಯನು ಪೌಲನಿಗೆ “ತನ್ನ ಸ್ನೇಹಿತರ ಬಳಿಗೆ ಹೋಗಿ ಅವರಿಂದ ಪರಾಮರಿಕೆಯನ್ನು ಪಡೆಯುವಂತೆ ಅನುಮತಿಸಿದನು.” ನಂತರ ಪೊತಿಯೋಲ ಪಟ್ಟಣದಲ್ಲಿ ಪೌಲ ಮತ್ತು ಅವನ ಜೊತೆ ಇದ್ದವರಿಗೆ ಸಹೋದರರು ಸಿಕ್ಕಿದರು ಮತ್ತು ಏಳು ದಿವಸ ತಮ್ಮೊಂದಿಗೆ ಉಳಿಯುವಂತೆ ಬೇಡಿಕೊಂಡರು. ಅಲ್ಲಿದ್ದ ಸಹೋದರ ಸಹೋದರಿಯರು ಪೌಲನ ಮತ್ತು ಅವನ ಜೊತೆ ಇದ್ದವ್ರ ಅಗತ್ಯಗಳನ್ನ ನೋಡಿಕೊಂಡ್ರು. ಪೌಲನು ಸಹ ತನ್ನ ಅನುಭವಗಳನ್ನ ಹಂಚಿಕೊಂಡನು. ಇದ್ರಿಂದ ಅವರಿಗೆ ಸಂತೋಷ, ಪ್ರೋತ್ಸಾಹ ಸಿಕ್ಕಿರುತ್ತೆ. (ಅ. ಕಾ. 15:2, 3 ಹೋಲಿಸಿ.) ಹೀಗೆ ಸಹೋದರರಿಂದ ಸಹಾಯ, ಪ್ರೋತ್ಸಾಹ ಪಡೆದ ನಂತ್ರ ಪೌಲ ಮತ್ತು ಅವನ ಜೊತೆ ಇದ್ದವ್ರು ಪ್ರಯಾಣವನ್ನು ಮುಂದುವರಿಸಿದ್ರು.—ಅ. ಕಾ. 27:3; 28:13, 14.

ಪೌಲನಂತೆ ನಮಗೂ ಯೆಹೋವನು ಸಹೋದರಿಯರ ಸಹೋದರಿಯರ ಮೂಲಕ ಸಹಾಯ ಮಾಡ್ತಾನೆ (ಪ್ಯಾರ 18 ನೋಡಿ)

18. ಪೌಲನು ದೇವರಿಗೆ ಕೃತಜ್ಞತೆ ಸಲ್ಲಿಸಿ ಧೈರ್ಯಗೊಳ್ಳಲು ಕಾರಣ ಏನಾಗಿತ್ತು?

18 ನಂತರ ಪೌಲ ಪೊತಿಯೋಲದಿಂದ ರೋಮ್‌ಗೆ ನಡಕೊಂಡು ಹೋದನು. ಆಗ ಅವನಿಗೆ ಮೂರು ವರ್ಷಗಳ ಹಿಂದೆ ರೋಮ್‌ ಸಭೆಗೆ ಬರೆದ ಈ ಮಾತುಗಳು ನೆನಪಾಗಿರಬಹುದು: “ಅನೇಕ ವರ್ಷಗಳಿಂದ ನಾನು ನಿಮ್ಮ ಬಳಿಗೆ ಬರಲು ಹಂಬಲಿಸುತ್ತಿದ್ದೇನೆ.” (ರೋಮ. 15:23) ಆದ್ರೆ ತಾನು ಒಬ್ಬ ಸೆರೆಯಾಳಾಗಿ ಅಲ್ಲಿಗೆ ಹೋಗ್ತೇನೆ ಅಂತ ಅವನು ನೆನಸಿರಲಿಲ್ಲ. ರೋಮ್‌ಗೆ ಹೋಗೋ ದಾರಿಯಲ್ಲೇ ಅಲ್ಲಿನ ಸಹೋದರರು ಅವನನ್ನು ಸಂಧಿಸಲಿಕ್ಕಾಗಿ ಕಾದು ನಿಂತಿರೋದನ್ನ ನೋಡಿದಾಗ ಪೌಲನಿಗೆ ಎಷ್ಟು ಪ್ರೋತ್ಸಾಹ ಸಿಕ್ಕಿರಬಹುದಲ್ವಾ? “ಅವರನ್ನು ನೋಡಿದಾಗ ಪೌಲನು ದೇವರಿಗೆ ಕೃತಜ್ಞತೆ ಸಲ್ಲಿಸಿ ಧೈರ್ಯಗೊಂಡನು.” (ಅ. ಕಾ. 28:15) ಸಹೋದರರನ್ನು ನೋಡಿದಾಗ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದನ್ನ ಗಮನಿಸಿ. ಸಹೋದರ ಸಹೋದರಿಯರ ಮೂಲಕ ಯೆಹೋವನು ತನಗೆ ಸಹಾಯ ಮಾಡ್ತಿದ್ದಾನೆ ಅಂತ ಪೌಲನು ಇಲ್ಲಿಯೂ ಅರ್ಥಮಾಡ್ಕೊಂಡನು.

ಪ್ಯಾರ 19 ನೋಡಿ

19. ಒಂದನೇ ಪೇತ್ರ 4:10 ರಲ್ಲಿ ಇರುವಂತೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಯೆಹೋವನು ನಮ್ಮನ್ನು ಹೇಗೆ ಉಪಯೋಗಿಸ್ತಾನೆ?

19 ನಾವೇನು ಮಾಡಬೇಕು? ನಿಮ್ಮ ಸಭೆಯಲ್ಲಿ ಯಾರಾದ್ರೂ ಆರೋಗ್ಯ ಸಮಸ್ಯೆಯಿಂದ ಅಥವಾ ಬೇರೆ ಸಮಸ್ಯೆಯಿಂದ ಕಷ್ಟಪಡ್ತಿದ್ದಾರಾ ಅಥವಾ ಅವರ ಪ್ರೀತಿ ಪಾತ್ರರು ತೀರಿಹೋಗಿದ್ದಾರಾ? ಯಾರಿಗಾದ್ರೂ ಸಹಾಯದ ಅಗತ್ಯ ಇದೆ ಅಂತ ನಿಮಗೆ ಗೊತ್ತಾದ್ರೆ ಅವ್ರ ಹತ್ರ ಪ್ರೀತಿಯಿಂದ ಮಾತಾಡೋಕೆ ಮತ್ತು ಅವರಿಗೋಸ್ಕರ ಏನಾದ್ರೂ ಮಾಡೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನ ಹತ್ರ ಬೇಡ್ಕೊಳ್ಳಿ. ನೀವಾಡೋ ಮಾತಿಂದ ಅಥವಾ ಕೊಡೋ ಸಹಾಯದಿಂದ ಅಗತ್ಯ ಇರೋ ಸಹೋದರ ಸಹೋದರಿಯರಿಗೆ ತುಂಬ ಉತ್ತೇಜನ ಸಿಗಬಹುದು. (1 ಪೇತ್ರ 4:10 ಓದಿ.) * ನೀವು ಅವ್ರಿಗೆ ಹೀಗೆ ಸಹಾಯ ಮಾಡಿದ್ರೆ ಅವ್ರು, “ನಾನು ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಅಂತ ಯೆಹೋವನು ಕೊಟ್ಟಿರೋ ಮಾತಿನ ಮೇಲೆ ಇನ್ನೂ ಹೆಚ್ಚು ನಂಬಿಕೆ ಬೆಳೆಸಿಕೊಳ್ತಾರೆ. ಇದನ್ನ ನೋಡುವಾಗ ನಿಮಗೂ ಖುಷಿಯಾಗುತ್ತಲ್ವಾ?

20. “ಯೆಹೋವನು ನನ್ನ ಸಹಾಯಕನು” ಅಂತ ಪೂರ್ಣ ಭರವಸೆಯಿಂದ ನಾವು ಯಾಕೆ ಹೇಳಬಹುದು?

20 ಪೌಲ ಮತ್ತು ಅವನ ಜೊತೆ ಇದ್ದವ್ರ ವಿಷಯದಲ್ಲಾದಂತೆ ನಾವು ಸಹ ಜೀವನ ಅನ್ನೋ ಪ್ರಯಾಣ ಮಾಡ್ತಿರುವಾಗ ಸಮಸ್ಯೆಗಳೆಂಬ ಬಿರುಗಾಳಿ ಎದ್ದೇಳಬಹುದು. ಆದ್ರೆ ಆಗ ನಾವು ಧೈರ್ಯದಿಂದ ಇರಬಹುದು. ಯಾಕಂದ್ರೆ ಯೆಹೋವ ನಮ್ಮ ಜೊತೆ ಇದ್ದಾನೆ. ಆತನು ಯೇಸು ಮತ್ತು ದೇವದೂತರ ಮೂಲಕ ನಮಗೆ ಸಹಾಯ ಮಾಡ್ತಾನೆ. ತನ್ನ ಉದ್ದೇಶವನ್ನ ನೆರವೇರಿಸ್ಲಿಕ್ಕಾಗಿ ಅಧಿಕಾರಿಗಳ ಮೂಲಕನೂ ನಮಗೆ ಸಹಾಯ ಮಾಡ್ತಾನೆ. ಅನೇಕ ಸಹೋದರ ಸಹೋದರಿಯರು ಕಷ್ಟದಲ್ಲಿರುವಾಗ ಅವ್ರಿಗೆ ತನ್ನ ಸೇವಕರು ಸಹಾಯ ಮಾಡುವಂತೆ ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಪ್ರೇರೇಪಿಸುತ್ತಾನೆ. ಇದು ನಮ್ಮ ಸ್ವಂತ ಅನುಭವನೂ ಆಗಿರಬಹುದು. ಹಾಗಾಗಿ, ಪೌಲನಂತೆ ನಾವು ಸಹ ಧೈರ್ಯವಾಗಿ ಹೀಗೆ ಹೇಳಬಹುದು: “ಯೆಹೋವನು ನನ್ನ ಸಹಾಯಕನು. ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು?”—ಇಬ್ರಿ. 13:6.

ಗೀತೆ 60 ಆತನು ನಿನ್ನನ್ನು ಬಲಪಡಿಸುವನು

^ ಪ್ಯಾರ. 5 ಅಪೊಸ್ತಲ ಪೌಲನಿಗೆ ಕಷ್ಟ-ಸಂಕಟಗಳು ಬಂದಾಗ ಯೆಹೋವ ದೇವರು ಯಾವ ಮೂರು ವಿಧಗಳಲ್ಲಿ ಸಹಾಯ ಮಾಡಿದನು ಅನ್ನೋದನ್ನ ನಾವು ಈ ಲೇಖನದಲ್ಲಿ ಕಲಿಯಲಿದ್ದೇವೆ. ಹಿಂದಿನ ಕಾಲದ ತನ್ನ ಸೇವಕರಿಗೆ ಯೆಹೋವನು ಹೇಗೆ ಸಹಾಯ ಮಾಡಿದನು ಅನ್ನೋದನ್ನ ನೋಡುವಾಗ ನಮಗೆ ಬರೋ ಕಷ್ಟ-ಸಂಕಟಗಳನ್ನ ಎದುರಿಸೋಕೆ ಯೆಹೋವ ಸಹಾಯ ಮಾಡ್ತಾನೆ ಅನ್ನೋ ಭರವಸೆ ಹೆಚ್ಚಾಗುತ್ತೆ.

^ ಪ್ಯಾರ. 16 ಅರಿಸ್ತಾರ್ಕ ಮತ್ತು ಲೂಕ ಮುಂಚಿನಿಂದಲೂ ಪೌಲನ ಜೊತೆ ಪ್ರಯಾಣಿಸ್ತಾ ಸೇವೆ ಮಾಡ್ತಿದ್ರು. ಈ ನಂಬಿಗಸ್ತ ಪುರುಷರು ಪೌಲನು ರೋಮ್‌ನಲ್ಲಿ ಜೈಲಿನಲ್ಲಿದ್ದಾಗಲೂ ಅವನ ಜೊತೆ ಇದ್ದರು.—ಅ. ಕಾ. 16:10-12; 20:4; ಕೊಲೊ. 4:10, 14.